ರಾಗ ಮೋಹನ ಅಷ್ಟತಾಳ
ಬಾ | ಭಾಮಿನಿ | ಪ್ರಿಯ | ಕಾಮಿನಿ | ಹಂಸ | ಗಾಮಿನಿ | ಮನ ಸ್ವಾಮಿನಿ || ಬಾ || ಪಲ್ಲ ||
ಬಾ ಮೋಹದರಸಿ ಬಾ ರಮಣಿ | ಪ್ರೇಮ | ಧಾಮಿನಿ ಮುದ್ದಿನ ಗಿಣಿ | ಸುಮ | ಕೋಮಲಗಾತ್ರ
ಗುಣಮಣಿ || ಇದೊ | ನಾಮೋದ ವಡುತಲಿ | ನೇಮದಿ ಬಂದಿಹೆ || ಸೋಮನಿಭಾನನೆ |
ತಾಮರಸೇಕ್ಷಣೆ || ಕಾಮನ ಕೂರ್ಗಣಿ | ನೀ ಮನವಿಡುತಿಲ್ಲಿ ಬಾ || ಭಾಮಿನಿ || ೧ ||
ಓ ಓ ಪ್ರಿಯ | ಹೃದಯಪ್ರಿಯ | ಸುಜ | ನ ಪ್ರಿಯ | ಇದೇ | ನ ಪ್ರಿಯ || ಓ | ಓ || ಪಲ್ಲ ||
ಏನಿದು ಪ್ರಿಯನೆ ಆಶ್ಚರ್ಯ | ಬರೆ | ನಾನೆಂದಾಗಾಡಿದ ಚರ್ಯ | ನೋಡೆ | ತಾನಿದೆಂಬೆನೆ
ಗೂಢಚರ್ಯ | ಅಭಿ | ಮಾನಿ ಮೇಣ್ಮಾನಸ | ತ್ರಾಣಿಯಮಾಯಕ || ಕ್ಷೋಣಿಕಾರ್ಯನೊತ್ತಿ |
ಮೇಣೆನ್ನಬೆಂಬತ್ತಿ || ನೀನಿಲ್ಲಿ ಬಹುದನು | ಮಾನವೆನಗೆ ಜೀಯ || ೨ ||
ಈಗಳರಿತ ಖಳನೆಲ್ಲ | ಬರ | ಲಾಗದೆಂದೊರೆದೆ ಸುಳ್ಳಲ್ಲ | ಬೇಗ ಸಾಗಿಸಿ ಬಂದಿಹೆನೆಲ್ಲ ||
ಮಧು | ವಾಗಮನವು ಜೊತೆ | | ಯಾಗಿ ಭೋಗಿಸಬಂದೆ || ನಾಗವೇಣಿಯೆ ತಡ |
ವಾಗಬಾರದು ಬಾರೆ || ಬೇಗದಿ ಮುತ್ತಿತ್ತು | ಈಗೆನ್ನನೆದೆಗೊತ್ತು || ಬಾ | ಭಾಮಿನಿ || ೩ ||
ರಾಗ ಹಿಂದೂಸ್ತಾನಿ ರೂಪಕತಾಳ
ಬಾಲೆಯಪ್ಪಿಚುಂಬಿಸುತ್ತ | ಲೇಳು ಪುರಕೆಯೆಂದಳು |
ಖೂಳನಂದನೇಳಲಾರೆ ಸೀಳ್ವಮದನನೀಗಳು || ೧ ||
ಆಗದಿಲ್ಲಿವನವು ಸಖಿಯ | ರೀಗ ಬರುವರೆಂದಳು |
ಸಾಗದಿಲ್ಲೆ ಬೆರೆವೆವೆಂದ | ತಾಗಿ ಖಳವಿರಹದೊಳು || ೨ ||
ತರಣಿ ಮುಳುಗುತಿರುವ ಸಮಯ | ಸರಿಯಿದಲ್ಲವೆಂದಳು |
ಬರಲಿ ಬಂದುದೆನುತಪಿಡಿತ | ದುರುಳನಮುಕಿ ಜವದೊಳು || ೩ ||
ಭಾಮಿನಿ
ಖೂಳಮಾಯಕವರಿಯದೊಪ್ಪಿದ |
ಬಾಲೆಯನು ಕೆಡಿಸಿದನು ದಾನವ |
ಪೇಳಲೇನಾ ಸಮಯಕಲ್ಲಿ ನೃಪಾಲನುಗ್ರಾಖ್ಯ ||
ಲೀಲೆಯಿಂದೈತಂದ ಬರವನು |
ಬಾಲಕಿಯರೊದರಿದರು ತಮ್ಮೊಳು |
ಕೇಳಿ ಖಳನೋಡಿದನು ವ್ಯಾಜದಿ ಕಾಳಕಿಟಿಯಾಗಿ ||
ವಾರ್ಧಿಕ
ಕಾಣುತದರನ್ನುಗ್ರಸೇನ ಬಾಣದಿ ಕೆಡೆದ |
ಪ್ರಾಣ ಸತಿಯೊಡಲ ಬೀಜಾಣುವಂ ಸೇರಿದುದು |
ದಾನವನ ತ್ರೈಭವಕೆ ತಾನಾಯ್ತು ನಾಂದಿಯಿದು | ಜಾಣೆಯತಿ ಸಂಶಯದೊಳು ||
ತಾನುಟ್ಟು ವಸನವಂ ಕ್ಷೀಣ ಮಾನಸದಿ ನೀ |
ತ್ರಾಣದಿಂ ಬಳಿಗೈದು ತಾನರೇಶ್ವರಗೆರಗಿ |
ನೀನಿಲ್ಲಿ ಬಂದಿಹೆ ನಿದಾನವೇನೆನೆ ಭೂಪ | ಮ್ಲಾನ ಮುಖಿಗಿಂತೆಂದನು ||
ರಾಗ ಕೇದಾರಗೌಳ ಅಷ್ಟತಾಳ
ಮಡಿದಿರನ್ನಳೆ ಕೇಳು ತಡವಾಯ್ತು ಬಹುದೆಂದು | ಹುಡುಕಿ ನಾನೈತಂದೆನು ||
ಜಡಜಾಪ್ತ ಪಡುವಣ ಕಡಲಿಗಿಳಿದ ಪೊರ | ಮಡಿರೆಲ್ಲ ಸದನಕಿನ್ನ || ೧ ||
ತಿಂದುತೇಗುತಲಿತ್ತು | ಹಂದಿ ಸುಂದರಿ ನಿನ್ನ | ಬಂದೆನಷ್ಟಕ್ಕೆ ಚದುರೆ |
ಕೊಂದು ಹಾಕಿದೆ ಪೀಡೆ | ಹೊಂದಿಹೋಯಿತು ನಡೆ | ಎಂದೆನೆ ಮಯ್ಯದುರೆ || ೨ ||
ಎಂದಾದರೊಂದಿನ | ಹೊಂದಿಹೋಗುವ ಜೀವ | ವಿಂದೆ ಹೋಗಿರೆಯೆನಗೆ ||
ಚಂದವಿತ್ತೆಂದೆಲ್ಲ | ರೊಂದಿಗೆ ಮುಂದಾಗಿ | ಬಂದು ಪೊಕ್ಕಳು ಮನೆಗೆ || ೩ ||
ಭಾಮಿನಿ
ಸಿಡುಕಿದೆಂದೆನುಗ್ರಸೈರಣೆ |
ವಡೆದ ಸತಿಯುಣತಿನದೆ ತಾಪದಿ |
ಹೊಡಕಿದಳು ಮಿಡುಕಿದಳು ವನದಲಿ ನಡೆದ ದುಷ್ಕೃತಿಗೆ ||
ಒಡಲೊಳಿಹಕೆಡು ಪಿಂಡವಿದು ಕಡು |
ದಡಿಗನಾಗಿ ಸ್ವಕೀಯನಿಂದಲಿ |
ಮಡಿಯೆಲೆನ್ನುತ ಶಪಿಸಿದಳು ಮೇಣ್ ಕುಡಿಯಳಿಯಲೆಂದು ||
ರಾಗ ನಾದನಾಮಕ್ರಿಯೆ ಅಷ್ಟತಾಳ
ನಿದ್ದೆಯಿಲ್ಲದೆ ಬೆಳತನಕರ | ಸತಿ ಒದ್ದಾಡಿದಳು ಮದ್ದಿಲ್ಲದ ತೆರ ||
ಎದ್ದುದಿಲ್ಲದಕೇಳಿ ಭೂವರ | ಬಂದು | ಮುದ್ದಿಸುತೆಂದನಿದೇಂತರ || ೧ ||
ಅನ್ನಪಾನವ ಬಿಟ್ಟು ಮಲಗಿದೆ | ಪ್ರಿಯೆ | ನಿನ್ನ ಮಯ್ಯಲಿ ಕಷ್ಟವೇನಿದೆ ||
ಎನ್ನುತೊಡಲ ಮುಟ್ಟಲೀಯದೆ | ಸತಿ | ಸನ್ನಿಯೊಳೇನೊಂದನರಿಯದೆ || ೨ ||
ಸತ್ತಿಹೆನೆಲವೊ ನಾ ನಿನ್ನೆಯೆ | ಮುಟ್ಟ | ದತ್ತ ಸಾಯೈ ಗಂಡು ಕುನ್ನಿಯೆ ||
ಮಿತ್ತು ನಿನಗೆ ತಂಗಿ ತಾಯಿಯೆ | ಹುಡು | ಕುತ್ತ ಕೆಡಿಸು ಬಡಪಾಯಿಯೆ || ೩ ||
ವಾರ್ಧಿಕ
ಒರೆದಿಂತು ಚೀರಿಡುತ ಧರೆಗುರುಳೆ ಭೂನಾಥ |
ತರುಣಿಗೇನಾಯ್ತೆನುತ ಕರಗಿಕಣ್ಣೀರಿಡುತ |
ಕರೆಸೆ ವೈದ್ಯರನಾತ ಕರಿಸುತಿರೆ ಭೇಷಜವ | ಗರಳವೆಂದುಗುಳುತಿರಲು ||
ಅರಿತು ಚಾತುರ್ಯದಿಂ ಸತಿಯರಿಂದೌಷಧವ |
ತರಳೆಗೂಡಿಸುತಿರ್ದನುರುಳಿದುದು ನವಮಾಸ |
ವಿರದಾವ ಸಂಸ್ಕಾರ ತರಳನಂ ಹೆತ್ತವಳು ಮರಳಿನಲೆ ತೊರೆದಳಸುವ ||
ಭಾಮಿನಿ
ಕ್ರೂರನಳುವಿನ ರವಕೆ ಮಧುರೆಯ |
ಸೂರು ನಡುಗಿತು ಪೌರಜನ ಹೌ |
ಹಾರಿದರು ಉತ್ಪಾತ ಶತ ಮೈದೋರಿತಾಕ್ಷಣದಿ ||
ಭೂರಮಣನೈತಂದು ಜನಿತ ಕು |
ಮಾರಕನನೀಕ್ಷಿಸುತ ಮಡಿದಿಹ |
ನಾರಿಯನು ಕಂಡುರುಳಿ ನುಡಿದನಪಾರ ಶೋಕದಲಿ ||
ರಾಗ ಸೋಹನಿ ರೂಪಕತಾಳ
ತರುಣಿರನ್ನಳೆಯೆನ್ನ | ತೊರೆದು ಪೋದೆಯ ನಿನ್ನ | ಮರೆದೆಂತು ಬಾಳ್ಪೆ ನಾಚಿನ್ನ |
ನೆರಳಿನಂದದಿ ಮುನ್ನ | ಮೆರೆದೆ ಸ್ನೇಹಗಳನ್ನ | ಮರಣವಾಗನೆಯೆಳೆ ಚಿಣ್ಣ || ೧ ||
ಹೊಂದಿದಂದಿನ ಮುನ್ನ | ಒಂದು ಕ್ಷಣವು ನಿನ್ನ | ನೆಂದಾದರಗಲಿಲ್ಲ ರನ್ನ ||
ಇಂದು ತೊರೆದೆಯೆನ್ನ | ಮುಂದೆ ಬಾಳಿಹೆನೆನಾ | ಚಂದದಿ ಬಿಡು ಒಮ್ಮೆ ಕಣ್ಣ || ೨ ||
ಒಂದರೆದಿನ ಜೊತೆ | ಬಂದಿಲ್ಲಕಿನಿಸಾಂತೆ | ಬಂದೆ ನಾನೋಡೋಡಿ ಮತ್ತೆ ||
ಮುಂದೆ ಭ್ರಾಂತಿಯನಾಂತೆ | ನೊಂದೆ ನಿಷ್ಟನು ಗೊತ್ತೆ | ಒಂದೇ ಲೋಪಕೆ ಜೀವ ತೆತ್ತೆ || ೩ ||
ಕಂದ
ವನಿತೆಯ ಗುಣಗಳ ನೆನೆ | ದಳುತಿಹ ನೃಪನಲ್ಲಿಗೆ ಮುನಿಪತಿ ಗರ್ಗ್ಯಂ ||
ಘನತವಕದಿ ಬಂದೆತ್ತುತ | ಜನಪನಕಣುನೀರೊರೆಸುತ ಕನಿಕರದಿಂದ || ೧ ||
ರಾಗ ಕೇದಾರಗೌಳ ಅಷ್ಟತಾಳ
ಜನನದೊಡನೆ ಮೃತ್ಯು | ವನು ಹೊತ್ತು ಬರುವವ | ವನಿಯ ಜೀವಿಗಳಾಲಿಸು ||
ಜನಪಾಲಾಗ್ರಣಿ ಶೋಕ | ಅನು ತ್ಯಜಿಸಾಕೆಯ | ಋಣವಿಷ್ಟೆಂಬುದ ಗ್ರಹಿಸು || ೧ ||
ನಾರಿಯೀದಿನ ನಾಳೆ | ಗುರು ಹೋಪರೊ ಜೀವ | ನೀರ ಮೇಲಿನ ಗುಳ್ಳೆಯು ||
ಧೀರ ನೀನರಿವೆ ವಿ | ಚಾರಿಸೆಮ್ಮದು ಬರಿ | ಮೂರು ದಿನದ ಬಾಳ್ವೆಯು || ೨ ||
ಮೃತಗೌರ್ಧ್ವದೈಹಿಕ ಕೃತಿಗಯ್ಯೆಂದೊಡಬಡಿ | ಸುತ ಕರ್ಮಂಗಳ ಮುಗಿಸಿ ||
ಸತಿಶೋಕನವ್ಯ ಯು | ವತಿವರೆಗನ್ಯಳ | ಪತಿಕರಿಸೆನೆಚಿಂತಿಸಿ || ೩ ||
ಭಾಮಿನಿ
ಸುದತಿಯೆನ್ನಯ ಹೃದಯ ಗುರುಮರು |
ಮದುವೆಬೇಡೆಂದುಳಿದ ಬಾಲನು |
ಹದಿಹರಯಕೇರಿದನು ಕಂಸಾಖ್ಯೆಯಲಿ ಮದಮುಖನು ||
ಒದಗಿ ಪೂರ್ವಸ್ಮೃತಿಸ್ವಧರ್ಮವ |
ನೊದೆದು ದನುಚಾಚಾರವಾಂತಿರ |
ಲದ ತಿಳಿದು ಸನ್ನಿಧಿಗೆ ಕರೆಸಿದ ಕುದಿಯುತುಗ್ರೇಂದ್ರ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಬಂದನಾಗಳು ಕಂಸ ತನ್ನಯ | ಮಂದಿಗಳ ಕೂಡುತ್ತ ದಿಮ್ಮನೆ ||
ನಿಂದುಕೇಳಿದ ಕರೆದುದೇನೈ || ತಂದೆಯೆನುತ || ೧ ||
ದನುಜರೆಮಗೆಂದೇನು ಮನುಜರ | ಜನುಮಹಗೆಗಳನಾಗರೀಕರು ||
ನಿನಗವರ ಸಹವಾಸಬೇಡೈ | ತನಯಕೇಳು || ೨ ||
ಮನುಜ ತನುವಿದು ಕೋಟಿ ಕೋಟಿಯ | ಜನಮಕೊದಗುವುದಾಗ ಭವ ಬಂ ||
ಧನವ ಹರಿವುದು ಧರ್ಮದಿಂದೆನ | ಲಣುಗನೆಂದ || ೩ ||
ರಾಗ ಕೇದಾರಗೌಳ ಝಂಪೆತಾಳ
ಸುಡುಸುಡೆಲೊ ನಿನ್ನ ಧರ್ಮ | ಮನದಂತೆ | ನಡೆಯುವುದೆ ಎನ್ನ ಕಾರ್ಯ ||
ಹಿಡಿಯಲ್ಯಾಕಿನಿತು ವರ್ಮ | ತನುಜನಲಿ | ಕೆಡುವೆ ನೋಡಿದುವೆ ಮರ್ಮ || ೧ ||
ಕೆಡಲಿಕೇನಿಹುದು ಮರುಳ | ನಿನಗಾಗಿ | ಮಿಡಿಯುತಿದೆ ತನುವು ತರಳ ||
ಕಡಿಯಬೇಡೆನ್ನ ಕೊರಳ | ಮನುಕುಲದ | ನಡತೆಯನ್ನು ಕೆಡಿಸಿ ದುರುಳ || ೨ ||
ದುರುಳ ನಾ ನೀನಪ್ಪನು | ಇರಲಿ ನಾಂ | ಕರಿಸಿರುವೆನೇನ್ತಪ್ಪನು ||
ಬರಿದೆ ಪೇಳಿದರೊಪ್ಪೆನು | ಮೇಣೆಲ್ಲ | ರಿರುವ ತೆರದೆಲೆ ಇಪ್ಪೆನು || ೩ ||
ರಾಗ ಕಾಂಭೋದಿ ಝಂಪೆತಾಳ
ಪಿಸುಣ ದನುಜರ ಕೂಟ | ಹಸಿಪಿಶಿಹೆಣನೂಟ | ನಿಶಿಚರಣೆ ಪರಸತಿಯರ್ಬೇಟ ||
ಅಸುರವರ್ಗದ ಮಾಟ | ನಿಶೆಯಡರಿಬಡಿದಾಟ | ವಸುಧೆಸುರರಿಗೆ ಕೊಡುವೆ ಕಾಟ || ೧ ||
ರಾಗ ಭೈರವಿ ಅಷ್ಟತಾಳ
ಯಾರವ ಕಂಡವನು | ಪೇಳಲಿ ಕರೆ | ಹಾರಿಪೆ ರುಂಡವನು ||
ಧೀರನೆನ್ನಿದಿರೊಳು | ಹೋರಾಡಿ ಗೆಲುವವ | ರಾರು ತ್ರೈಜಗದೊಳಿನ್ನು || ೧ ||
ಉಸುರದಿರಿದನು ಮತ್ತೆ | ಸುಜ್ಞಾನಾಂಧ | ಪಶುಗಳಿಗಿದು ನಡತೆ ||
ವಿಶದ ಬುದ್ಧಿಯ ಮನು | ವಿಸರದಿ ಜನಿಸಿ ನೀ | ನಸುರನೆಂತಾದಿ ಕತ್ತೆ || ೨ ||
ಎಂತಾದರೇನದಕೆ | ಬಂಧಿಪೆ ನಿನ್ನ | ನಿಂತ ಕಾಲಲ್ಲೆ ಜೋಕೆ ||
ಸಂತಸದಲಿಖಳ | ತಿಂಥಿಣಿಯೊಡನೆ ಭೂ | ಕಾಂತೆಯನಾಳಲಿಕೆ || ೩ ||
ರಾಗ ಮಾರವಿ ಏಕತಾಳ
ಎಲವೊ ಬಾಹಿರ ಕೊಲಿಸುವೆ ನಿಂತರೆ | ಸಲುಗೆಯ ನಿನಗಿನಿತು ||
ಕುಲ ಮಾರಿಯೆ ನೀ | ತೊಲಗೆಂದಾನೃಪ | ನಳಲುತ ಖತಿಯಾಂತು || ೧ ||
ಸೃಷ್ಟಿಪ ಗರ್ಜಿಸು | ತಿಷ್ಟಭಟರಿಗೆ | ಕಟ್ಟಾಜ್ಞೆಯ ಗೈದ ||
ಕಟ್ಟುತಿವನ ಹೊರ || ಗಟ್ಟರಿ ವದನವ ದಿಟ್ಟಿಸೆ ತಾನೆಂದ || ೨ ||
ಕೇಳುತ ಖಳ ತ | ನ್ನಾಳುಗಳೊಂದಿಗೆ | ಆಳಿದನನು ಪಿಡಿದು ||
ಬೀಳಿಸುತಲಿ ಕೈ | ಕಾಲ್ಗಳ ಬಂಧಿಸಿ | ಕೋಳಗಳನು ಝಡಿದು || ೩ ||
ಭಾಮಿನಿ
ಏರಿದನು ವಿಷ್ಟರವ ತಡೆದರ |
ಸೇರಿಸುತ ಸೆರೆಗಿಟ್ಟು ತಂದೆಯ |
ಭೂರಿ ಮದದಿಂ ಮೆರೆದ ಕಂಸನು ಧಾರಿಣಿಯೊಳಂದು ||
ಭಾರಿ ಭಯದಿಂದುಳಿದ ಯದುಗಳು |
ಪಾರುಪತ್ಯವನೊಪ್ಪಿದರು ಯಿದು |
ತೋರಿತೆರಡನೆ ಚೋದ್ಯವೆಂದನು ಆ ಋಷೀಶ್ವರನು ||
ಇತಿ ದ್ವಿತೀಯ ಪರ್ಯಾಯಃ
ಅಥ ತೃತೀಯ ಪರ್ಯಾಯಃ
ಭಾಮಿನಿ
ಮುಂದೆಕಂಸನ ನಾಡೊಳಸುರರ |
ವೃಂದ ಬೆಳೆಯಿತು ಸಪ್ತ ಋಷಿಗಳೆ |
ಸ್ಯಂದನದ ಹಯವಾದರಳಿದರು ಸಂದ ಸಜ್ಜನರು ||
ನಿಂದವೆಜ್ಞಾದಿಗಳು ಜಪತಪ |
ಕುಂದಿತಬಲಾಶೀಲ ಮನಗ |
ಳೊಂದುಳಿಯದಂತಾಯ್ತು ಕೊಲೆಕಳವೆಂದು ದಿನಬಿಡದೆ |||
ವಾರ್ಧಿಕ
ಮುಂದುವರಿಯಿತು ಭುವಿಯ ಮೊರೆಕೇಳಿ ಮಾರಮಣ |
ಬಂದು ದೇವಕಿಗುದಿಸಿ ನಂದಸುತ ನೆಂದೆನಿಸಿ |
ಬಂದ ಖಳರಂ ವಧಿಸಿ ಶ್ರೀಕೃಷ್ಣನಾಮದಿಂ ನಿಂದಿರ್ದನಾಕಂಸನು ||
ನಂದನಂದನನನ್ನು ಮಧುರೆಯೆಡೆಗೆಳೆತಂದು |
ಕೊಂದುಕಳೆಯುವೆಕುತ್ತನೆಂದಣೆಣಿಸಿದ ಮನದೊಳಗೆ |
ಗಾಂಧಿನಿಯ ಕುಂದನನು ಕರೆಸುತತಿ ಸ್ನೇಹದಿಂ ನುಡಿದನಕ್ರೂರಗಂದು ||
ರಾಗ ಶಂಕರಾಭರಣ ತ್ರಿವುಡೆತಾಳ
ಮಿತ್ರನೆಂದರೆ ನೀನೆ ಯಾದವ | ವೃತ್ತದೊಳಗೆ ಲಾಲಿಸು ||
ಬಿತ್ತರಿಪೆ ನಾನೊಂದನದಮನ | ವಿತ್ತು ನಡೆಸು || ೧ ||
ಅಳಿಯ ಬಲಕೃಷ್ಣರನು ಕಾಣುತ | ನಲಿವೆನೆಂಬ | ಆಸೆಯು ||
ಬಲಿತುದೆನ್ನಲಿ ನಂದಗೋಪನ | ನಿಲಯಕೈದಿ || ೨ ||
ನಾಳಿನೆಮ್ಮಯ ಬಿಲ್ಲಹಬ್ಬಕೆ | ಪೇಳುತವರ ರಥದಲಿ ||
ಮೇಳವಿಸಿ ಬಾರೆಲ್ಲಬಾಂಧವ | ಜಾಲಬಹುದು || ೩ ||
ಇಂದು ಸಂಜೆಗೆ ತಪ್ಪದಿಲ್ಲಿಗೆ | ಬಂದು ಸೇರ್ವುದೆಂದನು ||
ಸ್ಯಂದನವ ನಡರುತ್ತ ಗಾಂಧಿನಿ | ಕಂದ ಪೊರಟು || ೪ ||
ದುರುಳ ಭೇದವನೆಣ್ಣಿ ಸ್ನೇಹವ | ಹೊರಗೆ ನಟಿಪನಾದರು ||
ಹರಿಯಮೊದಲಿಗೆ ಕಾಂಬ ಭಾಗ್ಯವು | ದೊರಕಿತೆನಗೆ || ೫ ||
ವಾರ್ಧಿಕ
ಎನತೈದಿ ದಾಂಟುತ ಯಮುನೆಯ ವನಪಥದಿ ಸ್ಯಂ |
ದನ ಚಕ್ರಗದೆಶಂಖವನಜಧನುಷಾಂಕಿತದ |
ಚಿನುಮಯನ ಪದಚಿಹ್ನೆಯನು ಕಂಡು ಭಕ್ತಿಯಂ ಮಣಿದು ಪಣೆಗಾರೇಣುವ ||
ಘನಹರುಷದಿಂಧಿರಿಸಿ ಜನನ ಮರಣವಗೆಲ್ದ |
ತನು ಧನ್ಯಭಾವದಿಂ ಮನವುಬ್ಬುತಕ್ರೂರ |
ಮಣಿರಥದಿ ಬಂದು ನಂದನ ಗೃಹದ ಹಿಂದಿಳಿದು ಜನುಮಸಾರ್ಥಕವೆನ್ನುತ ||
ಭಾಮಿನಿ
ಎಂದು ಪುಲಕೋತ್ಸಹದಿ ಗಾಂದಿನಿ |
ಕಂದ ನಡೆದೈತಂದು ಪೀಠದಿ |
ನಂದನೊಡನಾಡುತಿಹ ಬಲ ಗೋವಿಂದರನು ನೋಡಿ ||
ಹೊಂದಿದತುಲಾನಂದಬಾಷ್ಪದಿ |
ಮಿಂದುರುಳಿದನು ಕಂಡು ಗೋವ್ರಜ |
ವಂದ್ಯನೆದ್ದುಪಚರಿಸುತಚ್ಚರಿಯಿಂದವನೊಳೆಂದ ||
ರಾಗ ಕೇದಾರಗೌಳ ಅಷ್ಟತಾಳ
ಬಂದೆಯ ಕಂಸನ | ದಂದುಗದಲಿ ಜೀವ | ದಿಂದ ಯಾದವರಿಹರೊ ||
ಬಂಧಿತವಸುದೇವ | ತಂದೆ ತಂಗಿಯರನು | ಕೊಂದನೊ ಬದುಕಿಹರೊ || ೧ ||
ರಾಯನ ಸೆರಯೆಸಿ | ದ್ಯಾಯಕೆ ಕೊನೆಯಾಯ್ತು | ಈತಲಿಲ್ಲಾವು ಮತ್ತೆ ||
ಪ್ರೀಯ ಸಚಿವ ನೀನಮಾಯನಿಲ್ಲಿಗೆ ಬಂದ | ಆಯವೇನೊರೆಯೀ ಹೊತ್ತೆ || ೨ ||
ಪಾವನಾಂಘ್ರಿಯು ದಯೆ | ಗೈವುದೆಂದರೆ ಬಡ | ಗೋವಾಳರೆಮ್ಮಲಿಗೆ ||
ಜೀವನಪಾವನ ಭಾವವೆಂದೆನಲೆಂದ | ಸಾವಧಾನದೊಳವಗೆ || ೩ ||
ರಾಗ ಮಧುಮಾಧವಿ ತ್ರಿವುಡೆತಾಳ
ನುಡಿದನಾ ಶ್ವಾಫಲ್ಕ ನಿನ್ನಯ | ಹುಡುಗರಿವರನು ಬಿಲ್ಲಹಬ್ಬಕೆ ||
ಒಡನೆಕರೆತರಲೆನ್ನನಟ್ಟಿಹ | ನೊಡೆಯ ಕಂಸ || ತಾಮಸ || ೧ ||
ಬಹುದು ನೀವೆಲ್ಲವರು ಜೊತೆಯಲಿ | ಅಹುದು ನಾಳೆ ಧನುಷ್ಯಯಾಗವು ||
ಇಹರು ಜೀವದೊಳೆಲ್ಲ ಮುಂದೆಂ | ತಹರೊ ಕಾಣೆ | ಪರಿಯನೆ || ೨ ||
ಸ್ನೇಹಕೆಂದಳಿಯದಿರ ಕರೆದಿಹ | ದ್ರೋಹಿಯುದರದೊಳೇನಿಹುದೊನಿ |
ರ್ವಾಹವಿಲ್ಲದೆ ಬಂದೆನೇಳಿರಿ || ಹೋಹಡೆಂದ | ನಲುಗಿದ || ೩ ||
ರಾಗ ಕಾಂಬೋಧಿ ಝಂಪೆತಾಳ
ಉಸುರಲಿಂತಕ್ರೂರ | ಬಿಸುಸುಯ್ದು ನಂದ ತಾ | ನೊಸರುಶತ್ರುಗಳ ಕಂಗಳಲಿ ||
ವಸುದೇವ ಸುತರಿವರ | ಅಸುವಿಡಿಯುತಿಂದಿನಲಿ | ಅಸುರನೆಡೆಗೆಂತಟ್ಟಿಕೊಲಲಿ || ೧ ||
ಕಳುಹದಿರಲಾ ಖಳನು | ಉಲಿಯಗೊಡನೆಮ್ಮವನು | ಕೊಲುವ ನಿಮ್ಮೆಲ್ಲ ಯದುಗಳನು ||
ತಲೆಗಳೆವ ತಂದೆಯನು | ಬಳಿಕನುಮೈದರನು | ತುಳಿದುಯಮಸದನಕಟ್ಟುವನು || ೨ ||
ಸುತರ ಕಳುಹಿಸಲಾರೆ | ವ್ಯಥೆಯ ಸೈರಿಸಲಾರೆ | ವಿತತ ಮೃತಿಯನು ತಾಳಲಾರೆ ||
ಖತಿಯನೆದುರಿಸಲಾರೆ | ಹಿತಶತ್ರುತನವಾರೆ | ಪೃಥಿವಿಯಲಿ ನಾ ಬದುಕಲಾರೆ || ೩ ||
ಭಾಮಿನಿ
ಎಂದು ಚಿಂತಿಸುತಿರೆ ಯಶೋದೆಯು |
ಬಂದಳಳುತಣುಗರನು ಮುದ್ದಿಸು |
ತೆಂದಳೆಂದಿಗು ಕಳುಹೆ ಮೋಹದ ಕಂದರಿವರುಗಳ ||
ಬಂದರವನೆ ಬರಲಿ ವಿಧಿ ಬರೆ |
ದಂದವಪ್ಪುದೆನಲ್ಕೆ ನಗುತಲಿ |
ತಂದೆ ತಾಯ್ಗಳ ಸಂತವಿಡುತ ಮುಕುಂದನಿಂತೆಂದ ||
ರಾಗ ಮಾರವಿ ಏಕತಾಳ
ತರಳರು ನಾವಹು | ದರಿಯೆ ನಿಮಿತ್ತವು | ದುರುಳನ ಕೊಲ್ಲುವುದು ||
ಚರಿಸಿದ ಕರ್ಮವು | ಮರುಗದೆಯಮ್ಮನು | ಹರಸುತ ಕಳುಹುವುದು || ೧ ||
ಹುಲುಖಳನಿವನಿರ | ಲಳುಕೆವು ಕೋಟಿಯ | ಕಲಿಗಳು ತಡೆದರೆಯು ||
ಕಲಹದೊಳೊಂದರೆ | ಕಲೆಯೊಳಗೆಲ್ಲರ | ತಲೆಗಳಚುವೆ ಖರೆಯು || ೨ ||
ಹೆತ್ತವರಿರೆ ಕಾರ್ಗತ್ತಲ ಸೆರೆಯಲಿ | ಪುತ್ರರು ನಾವಿಲ್ಲಿ ||
ನಿತ್ತರೆ ಬದುಕಿಯು | ಮತ್ತೇನ್ ಸಂಶಯ | ಸತ್ತವರೆಂಬಲ್ಲಿ || ೩ ||
ಭಾಮಿನಿ
ಬರುವುದೆಲ್ಲರು ನೀವು ಶಕಟದಿ |
ಭರಿತ ಹಾಲ್ಮೊಸರುಗಳ ತುಂಬಿಸಿ |
ತೆರಳುವೆವು ನಾವೆನುತ ಬಲನೊಡವೆರೆದು ರಥವೇರಿ ||
ಪೊರಟ ಸುದ್ದಿಯ ಕೇಳಿ ಗೋಪಿಕ |
ತರಳೆಯರು ಹರಿಯಗಲಿಕೆಗೆ ಮೈ |
ವೆರೆದು ಚೀರಿಡುತೈದಿ ತಡೆದರು ಹರಿವ ಸ್ಯಂದನವ ||
ರಾಗ ಕಲ್ಯಾಣಿ ಏಕತಾಳ
ಎಲ್ಲಿ ಪೋಪುದೆಮ್ಮ ಬಿಟ್ಟು || ಕೃಷ್ಣ ಕೃಷ್ಣ ||
ದಯದಿ ಸೊಲ್ಲಿಸಿಂದಿದೇನು ಸಿಟ್ಟು || ಕೃಷ್ಣ ಕೃಷ್ಣ ||
ಬಿಲ್ಲ ಹಬ್ಬಗೈವ ಕಂಸ | ಪೋಪೆನೀಗ ||
ನಾಳೆ | ಇಲ್ಲೇಹೆನು ಸಿಟ್ಟಿಗಲ್ಲ | ಪೋಪೆನೀಗ || ೧ ||
ಕೊಂದು ಕಳೆವನಯ್ಯೋ ದುಷ್ಟ || ಕೃಷ್ಣ ಕೃಷ್ಣ ||
ಎಮ್ಮ | ಕೊಂದೇ ಪೋಗು ಅದುವೆಯಿಷ್ಟ || ಕೃಷ್ಣ ಕೃಷ್ಣ ||
ಕಂದರಲ್ಲ ಕತ್ತಚಿವುಟೆ | ಪೋಪೆನೀಗ ||
ಖಳನ ಒಂದೇ ಹಿಡಿತದಲ್ಲೇ ಜಿಗುಟಿ || ಪೋಪೆನೀಗ || ೨ ||
ಪೋಪುದಾದರಾವೊ ಬಹೆವು || ಕೃಷ್ಣ ಕೃಷ್ಣ ||
ನಿನ್ನ ಕಾಪನುಳಿದು ಬದುಕಲರಿದು || ಕೃಷ್ಣ ಕೃಷ್ಣ ||
ಗೋಪರೊಡನೆಲ್ಲವರು ಕೂಡಿ | ಬಹುದು ನೀವು ||
ಮುಂದೆ | ಪೋಪೆವಾವು ಬಹುದು ಗಾಡಿ || ಬಹುದು ನೀವು || ೩ ||
ಭಾಮಿನಿ
ಎಂದೊಡೊಪ್ಪದೆಕೆಡೆದುದೊಪ್ಪನೆ |
ಸ್ಕಂದನವನಡ್ಡೈಸಿ ಮುಗಿದ |
ರಂದವರತೆಗೆದೆತ್ತಿ ಭರವಸೆಯಿಂದ ಸಂತೈಸಿ ||
ಮುಂದುವರಿದ್ಯಮುನೆಯಲಿ ಮೀಯುವೆ |
ವೆಂದಿಳಿಯುತ ಕ್ರೂರಗೆ ವಿರಾಟ್ ಘನ |
ಸಂದರುಶನವನಿತ್ತ ಕರುಣಾಸಿಂಧು ತಾನೊಲಿದು ||
ರಾಗ ಸಾವೇರಿ ಆದಿತಾಳ
ಕಂಡು ಪಾದದಿ ಕೆಡೆದ | ರೋಮಾಂಚನ | ಗೊಂಡು ಸನ್ನುತ ಮಾಡಿದ || ಪಲ್ಲ ||
ಪುಂಡರಿಕಾಕ್ಷ ಬ್ರಹ್ಮಾಂಡ ನಾಯಕನೆ ಮಾ | ರ್ತಾಂಡ ಕೋಟಿ ಪ್ರಭೆ |
ರುಂಡಮಾಲ ಪ್ರಿಯ || ಅ.ಪ. ||
ಅಣುರೇಣುತೃಣಕಾಷ್ಠವು | ಸುರಾಸುರ | ಮನುಜಾದಿ ಸರ್ವಸ್ವವ || ಎನುವ ಚರಾಚರಾ |
ವನಿತಯಾಗಿ ತೋರುವೆ | ಯನಿತೆಲ್ಲ ವೊಡಲೊಳ | ಗಡಗಿ ಮುಗುವೆ || ಕಂಡು || ೧ ||
ನೋಡಿ ನಿನ್ನಯ ಪಾದವ | ಓ ದೇವ | ಹೋಗಾಡಿದೆ ಭವಬಂಧವ || ನೋಡ ಸಿಕ್ಕದಕ್ಕಯ್ಯೋ |
ಳೋಡಿಪೆ ಜಗತಿಯ ಮೂಢರರಿಯದಂತೆ | ಮಾಡಿಹೆ ಮಾಧವ || ಕಂಡು || ೨ ||
Leave A Comment