ರಾಗ ಶೋಕವರಾಳಿ ಅಷ್ಟತಾಳ
ನೋಡಿ ಕೈಹೊಯ್ದು ನಗಾಡಿದ | ಮಿಸು | ಕಾಡದಿರಲು ಬಳಿಗೋಡಿದ ||
ಗಾಢದಿ ನೆಗೆದೆದೆ ತೀಡಿದ | ತುಟಿ | ಜೋಡಿಸುತುಸುರ ತಾ ನೀಡಿದ || ೧ ||
ಆಡದುಸುರ ಕಂಡು ತೀಡಿದ | ಬಿದ್ದು | ರೂಢಿಯೊಳ್ ತನುವ ನೀಡಾಡಿದ ||
ಕೇಡಾಯಿತೆಂದು ಗೋಳಾಡಿದ | ಮಾ | ತಾಡು ಪ್ರೀತಿಯೊಳೆಂದು ಬೇಡಿದ || ೨ ||
ನಿನಗಾಗಿ ಏನೆಲ್ಲ ಮಾಡಿದೆ || ದ್ರೋಹ | ವನು ಗೈದು ಸಖ್ಯ ಹೋಗಾಡಿದೆ ||
ತನುವಿನಾಸೆಯನು ಈಡಾಡಿದೆ | ಸತಿ | ಯೆನಗಾದೆಯೆಂದರ್ತಿಗೂಡಿದೆ || ೩ ||
ರಾಗ ಸೋಹನಿ ಆದಿತಾಳ
ಸುಂದರಿ ನೀನಸು ತೊರೆದೆಯ | ನಿನ್ನನು ಕೂಡಿ | ಮುಂದೆ ಬಾಳಿರುವಾಸೆ ಹುರಿದೆಯ ||
ತಂದ ಸ್ನೇಹದ ಬಸುರಿರಿದೆಯ | ಕೊಂದೆನ್ನಸು | ನಂದೆ ನಿನ್ನಯ ಛಲಮೆರೆದೆಯ || ೧ ||
ನೀದಯದೋರ್ವೆಯೆನುತ ತಂದೆ | ಬಿಟ್ಟೆನ್ನ ನೀ | ಹೋದರು ನಾ ಬೆನ್ನ ಬಿಡೆ ಬಂದೆ ||
ಕಾದಿ ನಾಳೆಗೆ ಸಾಯುವುದರಿಂದೆ | ನಿನ್ನೊಡಗೂಡಿ ಬೂದಿಯಾಗಿಯೆ ಬೆರೆವೆನುಯಿಂದೆ || ೨ ||
ಭಾಮಿನಿ
ಕರೆದು ಸಚಿವಂಗೆಂದನೆನಗೀ |
ಧರೆಯ ಋಣ ತೀರಿದುದು ಎನ್ನಯ |
ಕರುಳ ಕುಡಿಯನು ಸಲಹಿಕೊಳ್ಳೈ ತರಳ ನಿನಗೆಂದು ||
ತರುಣಿಯೆನ್ನಿಂದಳಿದಳಾನೊಡ |
ನುಡಿಯ ಪೊಕ್ಕೈದುವೆನು ಜೊತೆಯಲಿ |
ಬೆರೆಯದಿರೆ ಮರು ಜನುಮಕಾದರು ತರಿಸು ಚಿತೆಯೆಂದ ||
ರಾಗ ಪಂತುವರಾಳಿ ಅಷ್ಟತಾಳ
ಏನಿದು ನಿನಗವಿವೇಕವು | ಕಂಡು | ತಾನಗದುಳಿವುದೆ ಲೋಕವು ||
ಮಾನಿನಿರತುನವನೇಕವು | ಇರ | ಲೇನಿದನರ್ಥದ ಶೋಕವು || ೧ ||
ತೆತ್ತಳಾಣ್ಮನ ಸಾವಿಗಸುವನು | ಸತಿ | ಸತ್ತುದರಿಯೆ ಪತಿಯಳಿವನು ||
ಮತ್ತಿರೆ ನಿಸ್ಸತ್ವಗೊಳುವನು | ಗೆಲ | ವಿತ್ತಲಹುದು ತೋರು ಶವವನು || ೨ ||
ಕೂಡಲೆ ಶವವೆತ್ತಿ ಓಡಿದ | ವೈರಿ | ಬೀಡಿಯ ಬಿಸಾಡಿದ ||
ಕೂಡೆ ಸೇನೆಯ ಸಜ್ಜು ಮಾಡಿದ | ರವಿ | ನೋಡಲೆಂತಿದನೆಂದು ಮೂಡಿದ || ೩ ||
ಭಾಮಿನಿ
ಚರರು ಗುರುತಿಸಿ ಶವವ ರಾಯನ |
ಹೊರೆಗೆ ತಂದಿಳುಹಿದರು ಮರುಗುತ |
ಬರಸಿಡಿಲು ಹೊಡೆದಂತೆ ನೃಪ ತತ್ತರಿಸುತುರುಳಿದನು |
ಭರಿತ ಚಿಂತಾತುರದೊಳಿಖಿಲರು |
ಗರಹೊಡೆದ ಮೌನದಲಿ ಕುಳಿತರೆ |
ಧರಣಿಪತಿ ಚೇತರಿಸಿ ಹೊರಳುತಲೆರೆಯಳಂಗದಲಿ ||
ರಾಗ ನೀಲಾಂಬರಿ ರೂಪಕತಾಳ
ಯಾತಕೆ ಮೌನವನಾಂತಿಹೆ | ಪ್ರೀತೆ ಮುನಿದು ಕಣ್ಮುಚ್ಚಿಹೆ ||
ಪ್ರೀತಿಗೆ ನಾಕಾತರಿಸಿಹೆ | ಮಾತಾಡೊಲಿದು ಪ್ರಿಯೆ || ೧ ||
ದುರುಳನ ಕಪಟವನರಿಯದೆ | ಉರುತರ ಸ್ನೇಹದಿ ಮೆರೆಸಿದೆ ||
ಉರಗಗೆ ಕೆನೆಹಾಲುಣಿಸಿದ | ಗರಳದಿ ನೀನುರಿದೆ || ೨ ||
ಇನ್ನೇತಕೆ ತನು ಸಿರಿಸುಖ | ಇನ್ನೇಕಾಳ್ತನ ಸಾಯಕ ||
ಇನ್ನೇತಕೆ ಧುರಕಾಯಕ | ನಿನ್ನಗಲಿದ ಬಳಿಕ || ೩ ||
ಭಾಮಿನಿ
ಹಲವರಿದ್ದರದೇನು ಲೋಕದಿ |
ಲಲನೆ ನಿನಗೆಣೆಯಿಲ್ಲವೆನಗಾ |
ಗಳಿದೆ ನೀನದಕಾಗಿ ನಾನಸು ಸಲಿಪೆನೆನುತಿರಲು ||
ಉಲಿದುದಂಬರ ವಾಣಿ ಕಿತವದಿ |
ಖಳನು ನಿನ್ನಯ ಶಿರವ ತೋರಿದ |
ಚಲುವೆಯದನೀಕ್ಷಿಸಿದೊಡನೆ ತಾನುಳಿದಳಸುವೆನುತ ||
ರಾಗ ಭೈರವಿ ಅಷ್ಟತಾಳ
ಅಶರೀರ ನುಡಿಯ ಕೇಳಿ ಕೇಳಿ | ಕಾರ್ಬೊಗೆ ಕಣ್ಣೊ | ಳೊಸರೆ ಕೆಂಗಿಡಿಯುಗುಳಿ ||
ವಸುಧೀಶ ಗರ್ಜಿಸು | ತಸುರನ ಮರ್ದಿಸಿ | ಬಿಸಿರಕುತದ ಓಕುಲಿ || ೧ ||
ಆಡಿತಣಿಪೆನಿವಳ | ಮರುಳ್ಗಳ | ಕೂಡಿಪೆ ತನಿಗರುಳ | ಕೂಡೆ ದುರ್ಗಮುತ್ತಿ |
ಗಾಢ ಲಗ್ಗೆಯನಿಕ್ಕಿ | ಓಡದಂದದಿ ದುರುಳ || ೨ ||
ಎಂದಾಜ್ಞಾಪಿಸಿ ಪಡೆಗೆ | ಪ್ರೇತವಕಾಪಾ | ಡೆಂದು ನೇಮಿಸಿ ವೈದ್ಯಗೆ ||
ಮುಂದುವರಿಯೆ ಪಾದ | ದ್ವಂದ್ವದಿ ಪಣೆಯಿಟ್ಟು | ಕಂದನೆಂದನು ಪಿತಗೆ || ೩ ||
ರಾಗ ಭೈರವಿ ಏಕತಾಳ
ತಾತನೆ ಕೊಡು ವೀಳಯವ | ನಾ | ಘಾತಿಪೆನರಿ ಪಾಳಯವ ||
ಮಾತೆಯ ಕೊಂದನಗಳವ | ಕಡಿ | ದಾಂತರಿವೆನು ಖಲಕುಲವ || ೧ ||
ಜಾತನು ನಾನಿದ್ದೇನು | ಫಲ | ತಾತನ ಬಿಡೆ ರಣಕಿನ್ನು ||
ಭೀತಿಯ ತ್ಯಜಿಸೆನೆ ನೃಪನು | ಮುದ | ವಾಂತಪ್ಪಣೆ ನೀಡಿದನು || ೨ ||
ವಾರ್ಧಿಕ
ಹಡೆವನ ಬೀಳ್ಕೊಂಡು ಕಡುತರಾವೇಶದಿಂ |
ಗುಡುಗುಡಿಸಿ ಬಲಿದೊಡನೆ ನಡೆದು ಕೋಟೆಯ ಕೆಡಹಿ |
ಕಡಿದು ಕಾಲ್ಬಲವ ಮೇಣ್ ಮಡುಹಿ ಗಜ ಹಯದಳವ ಕಡುಗಿ ಕಲಿರುದ್ರಸೇನಂ ||
ಕಡೆದಿನದ ಮೃಡನಂತೆ ಕಿಡಿಗರೆವುತರಿನೃಪನ |
ಹುಡುಕುತಿರಲಡಹಾಯ್ದುನಿಡುಸರಳ ಮಳೆಗರೆದು |
ಹುಡುಗ ತಾನುರವಣಿಸಿ ದಡಿಗ ಚಂಡಾತ್ಮಭವ | ತಡೆದೆಂದ ಭದ್ರಸೇನ ||
ರಾಗ ಮಾರವಿ ಏಕತಾಳ
ಮೂಢನದಾರು ದ | ರೋಡೆಗೆ ಬಂದವ | ರೂಢಿಪ ನೀತಿಯಿದೇ ||
ಆಡದೆ ಸಂಧಿಯ ಗೋಡೆಯ ಕೆಡವಿಸ | ಗಾಢದಿ ಮುಂದರಿದೆ ||
ರಾಗ ಭೈರವಿ ಅಷ್ಟತಾಳ
ಉಂಡೆಡೆ ಮರೆತ ಘನ | ಕೃತಘ್ನಗೆ | ದಂಡನೆಯಿದುವೆ ಕಣಾ ||
ಭಂಡ ನೀನಾರು ಭೂ | ಮಂಡಲೇಶಾತ್ಮಜ | ಚಂಡನಾ ರುದ್ರಸೇನ ||
ರಾಗ ಮಾರವಿ ಏಕತಾಳ
ಚೋರನಿರಲಿ ಮಿಗೆ | ಜಾರನೆ ಇರಲಿ ವಿ | ಚಾರಿಸಿ ಶಿಕ್ಷಿಪರು ||
ಪೋರನೆ ಚಂಡಕು | ಮಾರಕ ಭದ್ರನು | ಸಾರಿದೆ ಸಾಯದಿರು ||
ರಾಗ ಭೈರವಿ ಅಷ್ಟತಾಳ
ಚೋರ ನಿನ್ನಯ ಪಿತನು | ಎನ್ನವ್ವೆಯ | ಹಾರಿಸಿಕೊಂಡಿಹನು |
ಭಾರಿ ದುರಾತ್ಮನ ತೋರಿಸು ರುಧಿರವ | ಹೀರಿ ನಾನಲಿಯುವೆನು ||
ರಾಗ ಮಾರವಿ ಏಕತಾಳ
ಕಂದನ ನೀ ಗೆಲಿ | ದಿಂದಿಗೆ ಎನ್ನಯ | ತಂದೆಯ ಮಾತೆಲವೊ |
ಕುಂದುಗೊರಳ ಬರ | ಲಿಂದಿಗೆ ಗಣಿಸೆನು | ಹಂದೆಗೆ ಗೆಲಲಳವೊ ||
ರಾಗ ಭೈರವಿ ಅಷ್ಟತಾಳ
ತ್ರಿಣಯನ ಗಣಿಸದವ | ಬಡುಯ್ನಗು | ವನು ಬರಿಪುದು ವಹವ ||
ರಣಗೈವುದಿರಲೊಮ್ಮೆ | ಕನಸಿಲಿ ಕಂಡರೆ | ತನುವ ನೀ ನೀಗುವವ ||
ಭಾಮಿನಿ
ಇನಿತು ಬಹುಪರಿಯಣಕವಾಡುತ |
ಕಣೆಯ ಹರಹಿನೊಳುಭಯವೀರರು |
ಸೆಣಸಿ ಕಡೆಯಲಿ ಭದ್ರ ಮಡಿದನು ಘನನಿಯುದ್ಧದಲಿ ||
ಕಣುಗಳಲಿ ಕಿಡಿಯುಗುಳಿ ಚಂಡಕ |
ರಣಕೆ ಬಂದಿದಿರಾಗೆ ಕಾಣುತ |
ಫಣಿಯನೆರಗುವ ತಾರ್ಕ್ಷ್ಯನೆನೆ ವಸು ಜನಪನಡಹಾಯ್ದು ||
ರಾಗ ದೇಶಿ ಅಷ್ಟತಾಳ
ಬಳಸಿ ಮೈತ್ರಿಯ | ಕಳವಿನೊಳೆನ್ನೆಯ ||
ಲಲನೆಯನು ಕದ್ದಳಿಸಿದೆಯ ಥೂ | ಹೊಲೆಯ ಮಿತ್ರ ದ್ರೋಹಿಂಯ || ೧ ||
ಕಳವು ಹಾದರಕಳುಕುವ ಭೀರುತ್ವ ||
ಸಲವುದದು ನಿ | ರ್ಬಲರಿಗಲ್ಲದೆ | ಕಲಿಗಳಿಂಗಲ್ಲೆಂದನು || ೨ ||
ಅರಿತೆನಾದರೆ | ಮೊದಲೀ ಕುತಂತ್ರವ ||
ಹಿರಿದು ಚರ್ಮವ | ನುರುಹುತಿರ್ದೆನು | ದುರುಳ ಜೀವದಿ ನಿನ್ನನು || ೩ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಕಂಡುದಿಲ್ಲವು ಮೊದಲು ನಿನ್ನಯ |
ಹೆಂಡತಿಯ ಕಂಡೊಡನೆ ತಂದೆನು |
ಗಂಡುಗಲಿ ತಾನಾದೆನೆಂದನು || ಭಂಡ ನಗುತ || ೧ ||
ಬೊಗುಳದಿರು ಕಲಿಯುಗದ ಕರ್ಮವ |
ಹೊಗಲರಿಯದದು ವರ್ತಮಾನದಿ |
ಉಗಿದಿ ನಾಯ್ ಪರರೆಡೆಯ ಜಿಹ್ನೆಯ | ಸಿಗಿವೆನೆಂದು || ೨ ||
ಹೊಡೆದನುರುಶರದಿಂದಲಾಖಳ |
ಪೊಡವಿಗುರುಳುತಲೆದ್ದು ರೌದ್ರದಿ |
ಕಿಡಿಗೆದರುತೆಚ್ಚನು ಮಹಾಸ್ತ್ರವ | ನುಡಿಯಲೇನು || ೩ ||
ಭಾಮಿನಿ
ಶರವ ಮಧ್ಯದಿ ಕಡಿದ ನರಸನು |
ಮುರಿದ ತುದಿ ನಾಂಟಿದುದು ಮರ್ಮಕೆ |
ಧರಣಿಗೊರಗಿದ ನೃಪತಿ ಸುರತರು ಹರಿದು ಬೀಳ್ವಂತೆ ||
ಪರಿಕಿಸುತ್ತದ ಚಂಡಸೇನನು |
ಭರಿತ ಹರುಷದೊಳುಬ್ಬಿ ಕುಣಿಯುತ |
ಉರುತರೋನ್ಮಾದದಲಿರಾಯನ ಜರೆಯುತಿಂತೆಂದ ||
ರಾಗ ನವರೋಜು ಏಕತಾಳ
ಭಳಿರೇ ಭೂಪ ಸಮರ್ಥ | ಕಡು | ಗಲಿ ನೀನೆಂಬುದು ಸಾರ್ಥ ||
ಕಲಹದಿ ನಿನ್ನನು | ಗೆಲುವವರಿಲ್ಲೆಂ | ಬೊಳಮನದಂದದಿ | ಫಲಿಸಿತು ಸ್ವಾರ್ಥ || ಭಳಿ || ೧ ||
ಮಡದಿಗೋಸುಗ ಬಂದು | ಛಲ | ವಿಡಿದು ಯುದ್ಧಕ್ಕೆ ನಿಂದು ||
ಮಡುಹಿದೆಯನ್ನನು | ಬಿಡಿಸಿದೆ ಸತಿಯನು | ಪೊಡುವೀಶಾಗ್ರಣಿ | ನುಡಿಯಹುದೆಂದು || ಭಳಿ || ೨ ||
ಜೋಡಿಲ್ಲ ದೇಶದೊಳು | ಹ | ದ್ದಾಡುವಲೈ ನಿಮಿಷದೊಳು ||
ಕೂಡಲೆ ಸತಿಯೊಡಗೂಡಿಪೆ ನೋಡೆಂ | ದಾಡುತ ಖಡುಗವ | ನಾಡಿಸಿ ಕರದೊಳು || ೩ ||
ಭಾಮಿನಿ
ಬಗೆವೆನುದರವನೆನುತಲಸಿಯನು |
ನಗೆಹಲಾನಿಮಿಷದಲಿ ಕೋಲ್ಮಿಂ |
ಜೊಗೆದ ತೆರನಡಹಾಯ್ದು ರುದ್ರಕನುಗಿದು ಖುಡುಗವನು ||
ಜಗತಿಗಿಳಿಸುತ ಖಳನ ಕರಗಳ |
ಬಿಗಿದು ಕಾಲ್ಗಳ ಭಟರಿಗೊಪ್ಪಿಸು |
ತೂಗುಮಿಗುವ ಶೋಕದಲಿ ತಂದೆಯ ಬಗೆಯನಾರೈದ ||
ರಾಗ ಕಾಂಬೋಧಿ ಝಂಪೆತಾಳ
ಸೃಷ್ಟಿಪತಿ ಸಿಡಿದೆದ್ದು | ದುಷ್ಟನ್ಯಾವೆಡೆಯೆಂದು | ಭ್ರಷ್ಟರವೆಲ್ಲವನು ನೋಡಿ ||
ಕುಟ್ಟಿ ಮುಸುಡಿಂಗೊದೆದು | ಹೃಷ್ಟಮಾನಸನಾಗಿ | ತುಷ್ಟಿಯಿಂ ಮಗನ ಮುದ್ದಾಡಿ || ೧ ||
ಪಡೆಯೊಡನೆ ಚಕ್ರಪತಿ | ದಡಿಗನಾಲಯಕೈದಿ | ತಡೆದವರ ಬಡಿದು ಸೆರೆಗಿಡಿಸಿ ||
ಒಡನೆ ಸಿಂಹಾಸನವ | ನಡರಿ ದ್ರೋಹಿಯ ತರಿಸಿ | ನುಡಿದ ಕಟುಕರನೆಡೆಗೆ ಕರೆಸಿ || ೨ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಬತ್ತಲೆಯ ಗೈದಿವನ ಶಿಶ್ನವ |
ಕತ್ತರಿಸಿ ನಾಸಿಕವ ಖಂಡಿಸಿ |
ಕತ್ತೆಯಲಿ ಮೆರಣಿಸಿ ಶೂಲಕೆ ಎತ್ತಿ ಬಿಸುಡಿ || ೧ ||
ಎನಲು ಕಿಡಿಕಿಡಿಯಾಗಿ ಮುಂದಿನ |
ಜನುಮಕಾದರು ನಿನ್ನ ಸತಿಯನು |
ಅನುಭವಿಸಿದರೆ ಶಪಥವೆಂದನು | ಕನಲಿ ಚಂಡ || ೨ ||
ಬಡಿದು ಮುಸುಡಿಗೆ ಕೆಡುಕರೊಯ್ಯುತ |
ನಡೆಸಿದರು ರಾಜಾಜ್ಞೆಯೆಲ್ಲವ |
ಮಡಿದನೊಂದನೆ ಭವವು ಕಳೆಯಿತು | ದಡಿಗನಿಂಗೆ || ೩ ||
ಭಾಮಿನಿ
ಆಡಳಿತಕೊಳ್ಳಿದರ ನೇಮಿಸಿ |
ರೂಢಿಪತಿ ಹೆಣದೊಡನೆ ನಗರಕೆ |
ಗಾಢದಿಂದೈತಂದು ವಿಧಿಯಲಿ ಮಾಡಿಸುತೆ ಚಿತೆಯ ||
ಮಾಡಿದನು ನಿಶ್ಚಯವ ಸತಿಯೇ |
ದಾಡಿದಳು ಎನಗಾಗಿ ತನುವನು |
ಕೂಡಿ ತೆರಳುವೆನೆನುತ ಮನದೊಳಗಾಡಿ ಸಚಿವಂಗೆ ||
ರಾಗ ಸೋಹನಿ ಝಂಪೆತಾಳ
ತಂದೆ ತಾಯಿಯು ನೀನೆ | ಬಂಧು ಬಳಗವು ನೀನೆ | ಮುಂದೆ ಸನ್ಮಂತ್ರಿ ಸಖ ನೀನೆ ||
ಕಂದನಾಳುವ ತಾನೆ | ಒಂದಾದರರಿತವನೆ | ಸಂದವಂಶಾಚಾರಗಳನೆ || ೧ ||
ಒರೆದು ಸಲಹಿಕೊ ಮುಂದೆ | ಪೊರೆದೆ ಪ್ರಜೆಗಳ ಹಿಂದೆ | ತರಳೆರೆನಗೆಂದೇ ನಾ ಕಂಡೆ ||
ಅರಸುತನವನು ಅಂದೇ | ತೊರೆದು ಕಳಿದಿಹೆನಿಂದೆ | ತೆರಳುತಿಹನೈ ಮುಂದೆ ಮುಂದೆ || ೨ ||
ತರುಣಿ ಹೋದಳು ಎನ್ನ | ಹರಣವೈದಿತು ಮುನ್ನ | ಇರಲಾರೆ ಹೆಣವಾಗಿ ನಿನ್ನ ||
ಕರದೊಳಿತ್ತಿಹೆ ಮಗನ | ಕರುಣದಿಂ ನೀನವನ | ಪೊರೆಯೋ ಮಂತ್ರಿ ಸುಧೀರನ್ನ || ೩ ||
ಭಾಮಿನಿ
ಎಂದಡಿದರೊಳವರಿಯದಾತನು |
ನಿಂತ ಮರುಗುತ ಬಂದು ನೃಪಜನ |
ಸಂದಣಿಯ ಮಧ್ಯದಲಿ ಕಂಡ ಮಹಾಂತದಳ್ಳುರಿಯ ||
ಹೊಂದಿ ಧಗಿಸುವ ಚಿತೆಯ ಹೊಕ್ಕ ಸು |
ನಂದೆಯೊಡಗೂಡಿದನು ಜನ ಹೋ |
ಯೆಂದು ಮೊರೆಯಿತು ಧರಣಿಗಿದು ಪೊಸತೆಂದನಾಮುನಿಪ ||
ಇತಿ ಪ್ರಥಮ ಪರ್ಯಾಯಃ
ಅಥ ದ್ವಿತೀಯ ಪರ್ಯಾಯಃ
ವಾರ್ಧಕ
ಭೂಮಿಪತಿ ಕೇಳ್ಕಾಲನೇಮಿಯಾದಿಗೆ ಚಂಡ |
ತಾ ಮುಡಿದು ಮುಂಭವದಿ ದ್ರುಮಿಲ ದಾನವನಾದ |
ಈ ಮಹಾದಂಪತಿಗಳುದಿಸಿ ಮರುಜನುಮದಲಿ ಗೋಮಿನಿಪನಾಹುಕಂತೆ ||
ತಾ ಮೊದಲ ಮಗನುಗ್ರಸೇನಕಂ ಶೃಂಗಾರ |
ರೋಮಸುತೆ ನಂದಿನಿಯರಾಗಿ ಸಮ್ಮಳಿಸಿ ಮಧು |
ರಾಮಹಿಯನಾಳುತಿಹ ಪ್ರೇಮದೊಲ್ಲಭನಡಿಗೆ ಶ್ರೀ ಮಡಿಯನಿರಿಸುತಬಲೆ ||
ರಾಗ ಸುರಟಿ ಏಕತಾಳ
ಲಾಲಿಸೆನ್ನ ರಾಜ | ಬಿನ್ನಹ | ಪಾಲಿಸು ರವಿತೇಜ || ಲೀಲೆಯೊಳ್ವನಸಿರಿ |
ಯಾಲೋಕಿಸಿ ಮುದ | ತಾಳುತ ಬಹೆವೆದ್ದೇಳೆದುರಾಜ || ೧||
ಇಂದೇ ಹೋಗುತ್ತ | ಸಖಿಯರ | ವೃಂದವ ಕೂಡುತ್ತ ||
ಸುಂದರಕೊಳದೊಳ | ಗೊಂದಾಗೀಜುತ | ನಂದದಿ ಮೆರೆಯುವ | ಬಂದ ವಸಂತ || ೨ ||
ಆಂತಿದೆ ಬೇಸರವು | ಪೊರಡ | ಭೃತ್ಯಂತರವೇಂತರವು | ಕಾಂತನೆ ತತ್ವಿಯ |
ಕಾಂತೆಯ ಸಂತಸ | ಕೆಂತೆನುತರೆದಿನ | ವಾಂತಿರು ತೆರವು || ೩ ||
ರಾಗ ಸಾರಂಗ ಅಷ್ಟತಾಳ
ಆಗದಾಗದು ಕೋಮಲೆ | ಈ ದಿನ ಬರ | ಲಾಗದೆನಗೆ ವಿಮಲೆ ||
ಸಾಗಿಪ ಕಾರ್ಯಗಳೀಗ ಬಹಳವಿದೆ | ಪೋಗುವ ಕೂಡಿ ನಾಳೆ || ಸುಶೀಲೆ || ೧ ||
ಕೂಡದೀಗಳೆ ಪೋಗುವ | ನಾನೆಲ್ಲವ | ಮಾಡಿಹೆ ಸನ್ನಹವ ||
ಆಡಲೇಕಡ್ಡಿಯ | ಜೋಡಿಗಾರ್ತಿಯರೆಲ್ಲ | ಛೇಡಿಪರೆನ್ನಿರವ | ಓ ದೇವ || ೨ ||
ತರತಹವನಿತಿರಲು | ನೀ ಹೋಗಿ ಬಾ | ವಹಿಲದಿ ನಾ ಬರಲು ||
ಇಹುದು ಕಾಲವು ಮತ್ತೆ | ಬಹೆ ಕೂಡಿ ಪೋಗುವ | ಗ್ರಹಿಸಬೇಡವೆ ಬದಲು | ಮನದೊಳು || ೩ ||
ರಾಗ ಮಧುಮಾಧವಿ ತ್ರಿವುಡೆತಾಳ
ಪ್ರಿಯ ಮನೋಹರನಗಲಿ ಪೋಗಲು | ಭಯವು ಜತೆಯಲೆ | ಬಯಕೆಯೆಳತವು ||
ಪ್ರಿಯೆಯ ಬಯಕೆಯ ಸಲಿಸು ಬಾಬಾ | ದಯದಿ ನೀನು || ಬೇಡ್ವೆವು || ೧ ||
ಭೀತಿಗೆಡೆಯೇನಿದೆ ಪರಸ್ಪರ | ಪ್ರೀತಿಯೇ ಕಾರಣವು ಜತನದಿ ||
ಪ್ರೀತೆ ನೀತಿರುಗಾಡಿ ಬರುವುದು | ಕಾತರಿಸದೆ || ತ್ವರತದೆ || ೨ ||
ಎನಲು ಗೆಲುವಾಂತಬಲೆ ಇನಿಯಗೆ | ಮಣಿದು ಪೊರಟಳು ವನವಿಹಾರಕೆ ||
ವನಿತೆಯರ ಸಮ್ಮೇಳದೊಂದಿಗೆ | ವನಜನಯನೆ || ಬೇಗನೆ || ೩ ||
ಭಾಮಿನಿ
ಘನತರಾನಂದದಲಿ ಬಂದುಪ |
ವನದ ಚೈತ್ರಾಗಮದ ಸೊಬಗನು |
ಕಣುದಣಿಯಲೀಕ್ಷಿಸುತ ನಂದಿನಿ ಮನದೊಳುಬ್ಬುತಲಿ ||
ವನಿತೆಯರ ಕಂಡೆಂದಳೇನಿದು |
ಮನಸಿಜನಗೇಹವೊ ವಸಂತನ |
ಜನುಮ ಭೂಮಿಯೊ ಸುರಪುರದ ನಂದನದ ವೈಭವವೊ ||
ವಾರ್ಧಿಕ
ಸಖಿಯರಿರ ನೋಡಿ ಮಾಮರಕಂಟಿ ಮಲ್ಲಿಗೆಯು |
ಸುಖದಿ ಬೀಗುತ್ತಿಹುದು ತತ್ಶಾಖೆಯಾಸರದಿ |
ಶುಕಪಿಕಾದಿ ಸಮಸ್ತ ಖಗಮಿಥುನಕೋಟಿಗಳ ನಿಕರ ಮಿಗಪಸುದ್ವಂದ್ವವು ||
ಪ್ರಕಟಿತನುರಾಗದಿಂ ಕಕುಲತೆಯೊಳಾಡುವವ |
ದಕೆ ಪೇಳ್ವುದಿನ್ನೊಂದನಾದರಿಸದಾವುದೊಂ |
ದಕು ಬದುಕಲರಿದೆಂದು ಪತಿಯಗಲಿ ಬಂದು ನಿಶ್ಶಕುತೆ ತಾ ನೀಗೆಂದಳು ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಎಂದು ವಿರಹದಿ ಬಂದು ಮಾನಿನಿ | ನಿಂದಿರಲು ಖಳ ದ್ರುಮಿಲನಲ್ಲಿಗೆ |
ಬಂದು ದೂರದಿ ನಿಂದು ಕಂಡೀ | ಸುಂದರಿಯರ || ೧ ||
ದಡಿಗನಂಗವ ತೆತ್ತುಕಾಮಗೆ | ನುಡಿದಸತಿಯರ ನಡುವೆ ತಾರಾ |
ಗಡಣ ಮಧ್ಯದ ಚಂದ್ರನಂದದ ಹುಡುಗಿಯಿವಳು || ೨ ||
ಯಾರೊ ತಿಳಿಯೆನು ಸೇರದುಳಿಯೆನು | ಮಾರನುರುಹುವನಕಟ ತನುವನು |
ನಾರಿಗೆಣೆ ಯಾರಿಲ್ಲವಹಹಾ | ಮೂರು ಜಗದಿ || ೩ ||
ಕೂಡಬೇಕೆಂತಾದರೆಯು ಮಾ | ತಾಡಿಸಿದಡೇನಹುದೊ ಪೂರ್ವದಿ ||
ನೋಡಿದಂತಿಹುದೆಂದು ಮನದಲಿ | ಖೋಡಿಯೆಣಿಸಿ || ೪ ||
ಎಂದ ಜಾತಿಸ್ಮರನು ಇವಳೆ ಸು | ನಂದೆಯಹಹಾದೊರೆತಳೆನ್ನುತ |
ನಿಂದ ಸಮಯವಿದೆಂದು ಮಾಯಕ | ದಿಂದಲಡಗಿ || ೫ ||
ರಾಗ ಬಿಲಹರಿ ಏಕತಾಳ
ಸುಂದರಾಂಗಿಯ ಕಾಣುತೆಂದಳೋರ್ವಳು ನೀನು | ನೊಂದು ಕೊಂಬುದೇನು |
ಇಂದೇ ಕಾಂತನನು || ಹೊಂದುವೆ ನಡೆಯಿನ್ನು | ಚಂದದಿ ಕೊಳವನ್ನು |
ಹೊಂದಿಯಾಡುವೆವನು | ವಿಂದ ಕೇಳಿಯನು || ೧ ||
ಸಾಕು ನಿಮ್ಮಯ ನುಡಿ | ಕಾಕಜುತನವ ಬಿಡಿ | ವ್ಯಾಕುಲವಿಕದೆ ನೋಡಿ |
ನಾ ಕೊಡೆ ಜೋಡಿ | ತಾಕಾಂತನಿರದಾಡಿ | ಯೂ ಕಾಣೆ ಫಲ ಸುಡಿ ||
ಯಾಕೆ ಗೈವಿರಿ ಮೋಡಿ | ಬೇಕಾದರೋಡಿ || ೨ ||
ಅಂತಿರಲೀಲತಾ | ಮಂಟಪಕೈದುತ | ಕಾಂತನ ನೆನೆಯುತ |
ಸಂತಸಗೊಳುತ || ಕುಂತಿರುಯೆನ್ನುತ | ತಾಂ ತೆರಳಿದರಿತ್ತ | ಭ್ರಾಂತನು ನಗುತ || ೩ ||
ರಾಗ ಮಾರವಿ ತ್ರಿವುಡೆತಾಳ
ಹರನೊಲಿದ ವಹ | ಶಪಥ ಫಲಿಸಿತು | ಎರಡನೆಯ ಭವ | ಕಾದರೆಯು ಸತಿ ||
ದೊರೆತಳೆದಾ ದ್ರುಮಿಲ ಘನತರ | ಹರುಷದಲಿ ಕೈ ಹೊಯ್ಯುತ || ೧ ||
ನೋಡಿಹೆನು ಮೊದ | ಲೊಮ್ಮೆಯೆನ್ನನು | ಕೂಡದಲೆ ಕಾ | ಡಿದಳು ತನುವೀ ||
ಡಾಡಿ ಕೇಡನು | ಗೈದಳೀದಿನ | ಮೋಡಿಯನು ನಾ | ಮಾಡಿ ವಹಿಲದಿ || ೨ ||
ಬೆರೆವೆನೆಂದೆನು | ತುಗ್ರಸೇನನ | ಭರಿತರೂಪದೊ | ಳಾಲತಾಮಂ ||
ದಿರವ ಹೊಕ್ಕನು ಸತಿಯನೊಳಯಕೆ | ಕರೆಯುತಲಿ ಕಡು | ಹರುಷದಿಂದಲಿ || ೩ ||
Leave A Comment