ಯಕ್ಷಗಾನ
ತ್ರಿಜನ್ಮ ಕಂಸ ಕೈವಲ್ಯ
ಶಾರ್ದೂಲವಿಕ್ರೀಡಿತವೃತ್ತ
ಶ್ರೀಶಂ ಶ್ರೀಕರಮಬ್ಜಜಾತಜನಕಂ ಈಶಾಪ್ತದುಗ್ಧಾರ್ಣವಾ |
ವಾಸಂ ಸಜ್ಜನಭೀಷ್ಟದಾತ ದುರಿತಾದ್ರಿಚ್ಛೇದ ವಜ್ರೋಪಮಂ ||
ಭಾಸಂ ಭಾಸ್ಕರಕೋಟಿ ವೇದಲತಿಕಾಮೂಲಂ ಮಹಾದುಷ್ಟನಿ
ಶ್ಯೇಷಂ ಮೂಜಗವಂದ್ಯಪಾದಕಮಲಂ ಶೇಷಾಚಲೇಶಂಭಜೇ || ೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಉತ್ತರಾಸುತಗೊಲದುಶುಕಮುನಿ | ಸತ್ತಮನು ಭಾಗವತ ಚರಿತವ |
ಬಿತ್ತರಿಸುತಿರಲೆರಿಗಿ ಯತಿಪಗೆ | ಪೃಥ್ವಿಪತಿಯು || ೧ ||
ಕೇಳಿಕೊಂಡನು ಕಾಲನೇಮಿಯು | ಖೂಳಚಂಡಕನಾಗಿ ಮೂಭವ |
ತಾಳಿಕಡೆಯಲಿ ಮುಕ್ತನಾದುದ | ಪೇಳಿ ಮರಳಿ || ೨ ||
ಸತ್ತುಮರುಜನುಮದಿ ಸುನಂದೆಯು | ಮತ್ತೆ ಸಿಲುಕಿದಳೆಂತು ದುರುಳಗೆ |
ಬಿತ್ತರದಿ ಮಗುಳೆನಲುಮುನಿ ಮುದ | ವೆತ್ತು ನುಡಿದ || ೩ ||
ವಾರ್ಧಿಕ
ಆ ಮಹಾತ್ರೇತೆಯಲಿ ರಾಮನಿಂದಳಿಯದಿಹ |
ಯಾಮಿನೀಚರನಿವಹ ತಾ ಮರಳಿದ್ವಾಪರದಿ |
ಭೂಮಿಗಿಳಿಯುತ ಕೆಟ್ಟ ತಾಮಸಿಕರಿರೆ ಕಾಲನೇಮಿ ಪೂರ್ವಗ್ರಹದಲಿ ||
ಹೋಮಿಸುವೆ ಹರಿಯನೆಂಬಾ ಮನದಿ ಪ್ರಥಮದೋಳ್ |
ಕಾಮನಗರೇಶ್ವರಗೆ ತಾ ಮೊದಲ ಸುತಚಂಡ |
ನಾಮದಿಂದುದಿಸಿ ವಸುಗೋಮಿನಿಪಗತ್ಯಂತ ಪೇಮಿಯೆನಿಸಿರಲಿಕಿತ್ತ || ೧ ||
ಭಾಮಿನಿ
ಓನರಾಧಿಪಕೇಳ್ ಪ್ರತಿಷ್ಠಾ |
ಮಾನಗರದೊಳಗೊಂದು ದಿನ ವಸು |
ಸೇನ ಚಕ್ರೇಶ್ವರನು ಘನ ಪಂಚಾನನಾಸನದಿ ||
ತಾನಲಂಕರಿಸುತ್ತ ಸಭಿಕರ |
ಮಾನಿಸುತ ನೃಪಭಾನುವಿಧುಕುಲ |
ಸೂನು ಕುಜನ ಕೃಶಾನು ಸಜ್ಜನಧೇನು ಸಚಿವರನು || ೧ ||
ರಾಗ ಕಾಂಬೋಧಿ ಝಂಪೆತಾಳ
ತಾ ಕೇಳ್ದನಾಲ್ಶರಧಿ | ಮೇಖಲೆಯರಾಷ್ಟ್ರವೆ | ಮ್ಮೇಕಾತಪತ್ರದಡಿಯಲ್ಲಿ ||
ಕಾಕಪೋಕರ ಬಾಧೆ | ವ್ಯಾಕುಲವನುಳಿದೆಲ್ಲ | ತಾಕುಶಲದಿಂದಿಹುದೆ ಪೇಳಿ || ೧ ||
ರಾಗ ಕೇದಾರಗೌಳ ಅಷ್ಟತಾಳ
ಒಕ್ಕಣಿಸೆನೆ ಮಂತ್ರಿ | ಮುಖ್ಯ ಸುಧೀರ ಭೂ | ಚಕ್ರದಾದ್ಯಂತವಾಗಿ ||
ಸಕ್ರಿಯ ಧರ್ಮವ | ತಿಕ್ರಮಿಸದ ಕರ್ಮ | ದೊಕ್ಕಲು ಸತ್ಯವಾಗಿ || ೧ ||
ಜಗದೊಳೆಲ್ಲರಿಗವ | ರಿಗೆ ತಕ್ಕಸಂಪದ | ಸೊಗವಿದೆ ನಿತ್ಯವಾಗಿ ||
ಸುಗುಣ ನಿನ್ನಾಡಳಿ | ತೆಗೆ ಸಾಟಿಯಿಲ್ಲೆಂದ | ನಗುತರಸನಿಗೆ ಬಾಗಿ || ೨ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಬಿತ್ತರಿಸಲಿದ ಕೇಳಿ ನೃಪಕುಲ | ಸತ್ತವನು ಸಂತೋಷದಿಂದಿರ |
ಲತ್ತ ಮದನಪುರೇಂದ್ರ ಚಂಡಕ | ನುತ್ಸಹದೊಳು || ೧ ||
ಒಂದು ದಿನ ಸಂಭ್ರಮದಿ ಸಭೆಯೊಳ | ಗೆಂದ ಮಂತ್ರಿ ಸುದರ್ಶನಾಖ್ಯಗೆ |
ಸ್ಯಂದನವನಣಿಗೊಳಿಸು ಕಾಪಿನ | ಮಂದಿ ಸಹಿತ || ೨ ||
ಬರಲಿ ಸಖ ವಸುಸೇನ ನೃಪಸಂ | ದರುಶನಕ್ಕೆ ಪೊರಡೆನುತಲಖಿಲರ |
ವೆರೆದು ತಾನೈದಿದ ಪ್ರತಿಷ್ಠಾ | ಪುರಕೆ ಮುದದಿ || ೩ ||
ಭಾಮಿನಿ
ಬಂದು ಪುರಬಾಹ್ಯದೊಳು ತನ್ನಯ |
ಮಂದಿಗಳ ಸಹಿತಿಳಿಯುತೊಸಗೆಯ |
ನಂದು ವಸುಸೇನಕಗೆ ಕಳುಹಿದ ಚಂಡಸೇನಾಖ್ಯ ||
ಬಂದ ಸಂದರ್ಶನಕೆ ಸ್ನೇಹಿತ |
ನೆಂದ ವಾರ್ತೆಯ ಕೇಳುತತುಲಾ |
ನಂದದಿಂದ ಸ್ವಾಗತಿಸಿ ನೃಪಕರೆತಂದನರಮನೆಗೆ || ೧ ||
ರಾಗ ಸುರುಟಿ ಏಕತಾಳ
ಬಂದೆಯ ಸನ್ಮಿತ್ರ | ಸ್ನೇಹದ | ಸಂದರ್ಶನಕಿತ್ತ ||
ಚಂದವೆ ಬಳಗಕೆ | ಎಂದೆನುತಪ್ಪುತ | ಹೊಂದಿಸಿ ಪೀಠವ | ನಂದ ಮಿಗಿಲು ತಾ || ೧ ||
ಹಾಲ್ಜೇನನು ಕುಡಿಸಿ | ಸೊಗಸಿನ | ವೀಳಯವನ್ನಿಡಿಸಿ ||
ಮೇಲುಪಚರಿಸುತ | ಲೋಲಗವನು ಬಿ | ಟ್ಟಾಲಯಕೈದ ನೃ | ಪಾಲ ಸಂಗಡಿಸಿ || ೨ ||
ಕಂದ
ಪಯಣಿಸಿ ನೃಪ ಭೋಜನ ಶಾ | ಲೆಯ ಸಖಸಹ ಪೊಗುತಲಿ ದೂತಿಯ ತಾಕರೆಯುತ್ತಂ ||
ಪ್ರಿಯ ಸಖಗುಣಬಡಿಸಲು ಸುನಂದೆಯ ಕರೆಯನಲದನೊರೆಯಲ್ಕವಳರಿಯುತ್ತಂ || ೧ ||
ರಾಗ ಆನಂದಭೈರವಿ ತ್ರಿವುಡೆತಾಳ
ಮಡದಿಬಂದಳು ಕಾಂತ | ನೆಡೆಗೆ ಬಾಗುತಲಿ | ಹಿಡಿದು ಸಟ್ಟುಗವನು ನಡುಬಳುಕುತಲಿ ||
ಪಿಡಿಟೊಂಕಕಳೆದು ಮೇ | ಲುಡೆಯ ಸುತ್ತುತಲಿ | ಕಡುನೀಳಕಾಳಹಿ | ಜಡೆಯದೂಡುತಲಿ ||
ಜಡಜಮುಖಿಯಾ | ರಡಿ ಗುರುಳ ಮೇ | ಗಡೆಗೆ ಸುರಿಸುತ | ಗಡಬಡಿಸಿ ಬರೆ ||
ನಡೆಗೆ ಹಂಸೆಗಳ್ | ನುಡಿಗೆ ಶುಕಗಳ | ಗಡಣನಾಚಿದು | ದೊಡನೆ ಪಂಗ್ರಿಗೆ | ಬಡಿಸೆ ನಿಂದಳು |
ಸಡಗರದಲಿ || ಮಡದಿ || ೧ ||
ಭಾಮಿನಿ
ಇಂತು ಜಗದಾದರ್ಶಸತಿಯಾ |
ಗಂತುಕಗೆ ಪ್ರಿಯಪತಿಗೆ ಮಿಗೆ ಜನ |
ತಿಂಥಿಣಿಗೆ ಬಡಿಸುತಿತೆ ನಗುತತ್ಯಂತ ಹರುಷದೊಳು |
ಕಂಡಿತಾಕೆಯ ರೂಪು ಹೃದಯಕೆ |
ಕಂತುಹತಿಯಲಿ ಚಂಡಸೇನನು |
ಸಂತಪಿಸಿ ಮಿಡುಕಿದನು ಖಳ ತನ್ನಂತರಂಗದೊಳು ||
ಕಂದ
ಮಡದಿಯೊಮಿವಳೆಂ ಮದನನು | ಕಡೆದಿಹ ಶಿಲ್ಪವೊಮಾತನ ದೃಢನಿಡುಸರಳೊ ||
ಸುಡುವಳು ಹೃದಯವ ನಮಮಾ | ತಡೆದಪೆನೆಂತೆನುತುಣುತಂ ಚಡಪಡಿಸುತ್ತಂ ||
ವಾರ್ಧಿಕ
ಒಮ್ಮೆಯಾಕೆಯ ಕಾಂಬ ನಿಮ್ಮ ಮಾನಸನು ಮ |
ತ್ತೊಮ್ಮೆರಾಯನ ಕಂಡು ಸುಮ್ಮಾನದಿಂ ನಗುವ |
ನೊಮ್ಮೆ ಸತಿಯಳ ನೋಡಿ ತನ್ಮಯದಿ ಕರಗಿ ಮಗುಳೊಮ್ಮೆ ನೃಪತಿಯನೀಕ್ಷಿಸಿ ||
ಹೆಮ್ಮೆಯಲಿ ಹರಟುವಂ ದುರ್ಮತಿಯು ತಿರುಗಿ ಮಗು |
ದೊಮ್ಮೆಯುವತಿಯವ ಕಾಣುತುಮ್ಮಳಿಸಿ ಹೊರಳಿ ಮೇ |
ಣೊಮ್ಮೆ ಮಿತ್ರನ ಜೋಡಿಗುಮ್ಮಹವ ಮೆರೆದೂಟವಂಮುಗಿಸುತಾ ದುರುಳನು ||
ರಾಗ ಕಾಪಿ ತ್ರಿವುಡೆತಾಳ
ಮಿತ್ರ ಸುದರ್ಶನ ಕೇಳು | ನಾನು | ಸತ್ತೆನಾ ಸತಿಯಳ ನೋಡಿ ಸತ್ಯದೊಳು || ಪ ||
ಮಿತ್ರೆಗ ಜೋಡಿಲ್ಲಿಳೆಯೊಳು || ಉರಿ | ಹೊತ್ತಿಸಿತುರದೊಳು ಕಾಮನ ಸರಳು ||
ಎತ್ತಣ ನೋಡ ಮಾಟಗಳು || ಲೋ | ಕೋತ್ತರ ಸೌಂದರ್ಯಕೂಟದಾಟಗಳು || ಮಿತ್ರ || ೧ ||
ಚೆಂದುಟಿ ಕಾಳಹಿವೇಣಿ | ಪೂರ್ಣ | ಚಂದಿರಮುಖಿ ಹರಿಕಟಿ ಶುಕವಾಣಿ ||
ಕಂದರ್ಪಧನುಭ್ರೂಯುಗಾನಿ | ಕುಚ | ದ್ವಂದ್ವ ಸ್ವರ್ಣದ ಕುಂಭ ಕಲಹಂಸ ಯಾನಿ || ಮಿತ್ರ || ೨ ||
ಸುರಸತಿಯರ ರೂಪು ಸುಳ್ಳು | ರತಿ | ಸರಸತಿ ರಮೆಯುಮೆಯರ ಸೊಂಪು ಟೊಳ್ಳು ||
ತರುಣಿಗೆ ಸರಿಯಿಲ್ಲವೆಲ್ಲು | ಎಂತೊ | ಬೆರೆಯದುಳಿಯೆ ನೀನು ಸಹಯಕೆ ನಿಲ್ಲು | ಮಿತ್ರ || ೩ ||
ರಾಗ ಕೇದಾರಗೌಳ ಅಷ್ಟತಾಳ
ಸಹಯವೆಂದರೆಯೇನೀ | ಇಹವನ್ನೆ ನಿನಗಾನು | ವಹಿಸಿಹೆ ಪೇಳ್ವುದೇನು ||
ಅಹಿವೇಣಿ ನಿನ್ನವ | ಳಹಳು ಸಂಶಯವಿಲ್ಲ | ಗ್ರಹಿಸಿಹೆ ಮೊದಲೆ ನಾನು || ೧ ||
ಭಳಿರೆಶಭಾಸು ಹೆಂ | ಗಳನರಿಯಲು ನೀನು ಬಲುಚತುರನು ಬಲ್ಲೆನು ||
ಹಲವರನೆನಗಣಿ | ಗೊಳಿಸಿಹೆಯೀಕೆಯು | ಸುಲಭಳೆ ಒಳವದೇನು || ೨ ||
ಬಡಿಸುವಾಗಾಚೀಚೆ | ನಡೆಯುವಾಗಲು ಕದ್ದು | ಮಡದಿಯೀಕ್ಷಿಪುದ ಕಂಡೆ ||
ಕಡುಹ ನಿನ್ನನು ಒಡ ಬಡುವಳಳುಹದಿರು | ನಡೆಪಯತ್ನಗಳ ಮುಂದೆ || ೩ ||
ಕಂದ
ಕಿಚ್ಚಿಗೆ ಘೃತವಾಯ್ತೀ ನುಡಿ | ಹುಚ್ಚೆದ್ದಪ್ಪಿದನಿವನನ್ನೆಚ್ಚರಿಸುತ್ತಂ ||
ಮುಚ್ಚಂಜೆಗೆ ಮನೆಗೈದುತ | ಮುಚ್ಚಿಡುತಿದ ನಿಶೆಗಳೆದಂ ಕೊಚ್ಚುವ ಮದದಿಂ || ೧ ||
ರಾಗ ಮಧ್ಯಮಾವತಿ ತ್ರಿವುಡೆತಾಳ
ಮರುದಿವಸದುದಯದಿ ಸುನಂದೆಯ | ಕರೆದು ಭೂವರನೆಂದ ಮಿತ್ರನ ||
ಬೆರೆದು ತೆರಳುವೆ ನಾನು ವನಸಂ | ಚರಣೆಗೀತ || ೧ ||
ತರುಣಿಮಣಿ ಮಧ್ಯಾಹ್ನ ಕಲ್ಲಿಯೆ | ತರುವದುಣಿಸ ವಿಹಾರ ಭವನಕೆ ||
ಮೆರೆವಗಾಯಕಿ ವಾದ್ಯ ನರ್ತಕಿ | ಯರು ಸಮೇತ || ೨ ||
ಪ್ರಾಣವಲ್ಲಭ ಲಾಲಿಸೂಟವ | ಬಾಣಸಿಗ ತರಬಹುದು ಜೊತೆಯಲೆ ||
ತಾನು ಬಹೆನೆಂದಳು ಸುನಂದಾ | ರಾಣಿನಗುತ || ೩ ||
ಭಾಮಿನಿ
ಸರಿಬರದು ಸನ್ಮಿತ್ರಗೂಟವ |
ವಿರಚಿಸಿಯೆ ನೀ ತರಲು ಬೇಕೆಂ |
ದರಸ ನುಡಿದನು ರಾಣಿಯೊಪ್ಪಿದಳರಿತನಿದ ಖಳನು ||
ಭರಿತ ಹರುಷದೊಳೈದಿ ಸಖನಿಂ |
ಗೊರೆದಗುಪಿತದಿ ಸತಿಯ ತಹೆ ನೀ |
ಪುರಪಥದಿ ರಥದೊಳಗೆ ಸಜ್ಜಾಗಿರುದೆನುತತ್ತ ||
ರಾಗ ಮಿಶ್ರತೋಡಿ ಏಕತಾಳ
ಅರಸಿಗಿಂತೆಂದು ಹೊರಗೆ ಬರುತ | ಮಿತಪರಿವಾರ | ವರೆದು ಉತ್ಸಾಹದೊಳುಬ್ಬುತ ||
ಕರೆಸಿ ಮಿತ್ರನನ್ನು ನಗುತ | ಒರೆದ ನಿಂತು ಪೃಥ್ವಿನಾಥ || ೧ ||
ಮಿತ್ರ ಬಾಬಾರೊಚಂಡಸೇನ | ನಿನ್ನಯ ಸಖ | ನೆತ್ತಲೀರ್ಪನು ಬರಹೇಳವನ ||
ಅರ್ತಿಯಿಂದ ವನವ ಸ್ತುತಿ | ವೆತ್ತು ಮುದವ ನಾವ್ ಬರೋಣ || ೨ ||
ಕೇಳಿಚಂಡನು ಭೂಪನಡಿಗೆ | ವಂದಿಸಿ ಮಿತ್ರ | ಗಾಲಸ್ಯವಂತೆ ಇರಲೀಯೆಡೆಗೆ ||
ಏಳು ಪೋಪೆವೆನಲು ಭೂಮಿ | ಪಾಲ ಸತ್ಯವೆಂದು ಕಡೆಗೆ || ೩ ||
ರಾಗ ಕಾಂಬೋಧಿ ಝಂಪೆತಾಳ
ಹಿತವಮಿತಬಲದೊಡನೆ | ಪೃಥಿವಿಪತಿ ಹಯವೇರು | ತತಿಹರುಷದಿಂ ತಲುಪಿವನಕೆ ||
ಗತಿಸುತಲ್ಲಿಹ ವೃಕ್ಷ | ಲತೆ ಸಾಕುಮಿಗ ಪಕ್ಷಿ | ವಿತತಿಗಳ ತೋರಿ ಸಂತಸಕೆ || ೧ ||
ಕುಳಿತಿರಲು ಸರಸದಿಂ | ಖಳನೆಂದನರೆಗಳಿಗೆ | ಯೊಳು ಬಹೆನೆನುತ ಪೊರಟುಬೇಗ ||
ಲಲನೆಯೈತಹ ಮಾರ್ಗ | ದೊಳಗವಿತುಕುಳ್ಳಿರ್ದು | ಇಳೆಯರಸನರ್ಧಾಂಗಿಯಾಗ || ೨ ||
ರಾಗ ಶಂಕರಾಭರಣ ತ್ರಿವುಡೆತಾಳ
ಮಾಡಿಸಿದ ಷಡ್ರಸದ ಭೋಜ್ಯದ | ಕೊಡೆ ನಾನಾಭಕ್ಷ್ಯವ ||
ಜೋಡಿಸುತ ಪರಮಾನ್ನಗಳ | ಯಾಡುತಿಹುದ || ೧ ||
ಗಂಧಕಸ್ತೂರಿ ತಂಬುಲಂಗಳ | ಹೊಂದಿಸುತಲಿ | ಮೋದದಿ ||
ವೃಂದ ನೃತ್ಯಕಿಯರನು ಕೂಡಿ ಸು | ನಂದೆಯಂದು || ೨ ||
ಕಾಂತನಾಯೆಡೆ ಕಾಯ್ವ ಸಮಯವು | ಸಂತು ಸನಿಹ | ಎನ್ನುತ ||
ತಾಂತನುವ ಸಿಂಗರಿಸಿ ಪೊರಟಳು | ಸಂತಸದೊಳು || ೩ ||
ವಾರ್ಧಿಕ
ತರುಣಿಮಣಿಯೀತೆರದೊಳುರು ಭಕ್ಷ್ಯ ಭೋಜ್ಯಗಳ |
ಹೊರಿಸಿಕೊಂಡಾ ಪಥದಿ ಬರುತಿರಲ್ ಶಿಬಿಕೆಯಲಿ |
ಉರಗಗೆರಗುವ ವಿಹಗನಿರದಿ ಪಿಡಿದಾ ಸತಿಯ ತುರುಬ ಹಿಡಿದಿಳೆಗೆ ಕೆಡಹಿ ||
ತರುಬಿದರ ಶಿರವರಿದು ಕರಚರಣಗಳ ಬಿಗಿದು |
ದುರುಳಹೊತ್ತೋಡಿದಂ ಪುರಕನಿಲವೇಗದಿಂ |
ತೆರಳುತಿರಲಾ ತರಳೆ ಯೊರಲಿದಳು ಭೀಕರದೊಳು ||
ರಾಗ ನೀಲಾಂಬರಿ ಏಕತಾಳ
ಸತ್ತೆನಯ್ಯಯ್ಯೋ ನಾನು | ದುಷ್ಟನು ಕದ್ದು | ಹೊತ್ತೆನ್ನನೊಯ್ಯುವನು ||
ಚಿತ್ತದೊಲ್ಲಭನೆ ನೀನು | ಕೊಂದೆನ್ನ ಬಿಡಿಸು | ಮಿತ್ರದ್ರೋಹದ ನಾಯನು || ೧ ||
ಅರಿಯೆ ನೀನೀ ಮೋಸವ | ನಾ ಬರುವೆನೆಂ | ದಿರುವೆ ಹೊಂದುತ ತೋಷವ ||
ದುರುಳನಾತ್ಮದ ವಿಷವ | ತಿಳಿದರಲ್ಲೆ | ಹರಿಸುತಲಿರ್ದೆದೋಷವ || ೨ ||
ಧರೆಚರಾಚರಗಳಿರ | ಸುರಸಿದ್ಧದಿ | ಗ್ವರ ನವಗ್ರಹಗಳಿರ ||
ಹರಿಹರ ವಿಧಿಗಳಿರ | ಸುತೆಯ ಬಂಧ | ಹರಸಿ ತಾಯ್ತೆಂದೆಗಳಿರ || ೩ ||
ಕಂದ
ಧರ್ಮಿನಿಯೊರಲಿಕೆಯಿದನು ಸು | ರಮ್ಯಾಟವಿಪತಿ ಸಿಂಹಾಸ್ಯಂ ಆಲಿಸುತಂ ||
ಘೂಮಿಸು ತಡ್ಡೈಸುತಲಿ ಕು | ಕರ್ಮಿಯ ಕೊಲದಿರೆನೆನುತಲಿ ಶರ್ಮದೊಳೆಂದಂ || ೧ ||
ರಾಗ ಭೈರವಿ ಅಷ್ಟತಾಳ
ಯಾರ್ಮ್ಯಾಂ ನರಾಧಮನು | ಯಣ್ಣನು ಕದ್ದು | ಅರುವೆಯೆಲ್ಲಿ ನೀನು ||
ತೋರ್ಮ್ಯಾಕಯ್ಯನುಕಾಳ | ನೂರಿಗೆ ಪೋಗತಿ | ಚೋರ ನೀ ಬಿಡು ತಾಯನು || ೧ ||
ಯಾರೆಲೊ ಕ್ರೂರ ನೀನು | ಸುಮ್ಮನೆ ಬಿಟ್ಟು | ಸಾರತ್ತ ದಾರಿಯನು ||
ಪಾರುಪತ್ಯವ ನಿನಗ್ಯಾರು ಕೊಟ್ಟರು ಮುಂದೆ | ಸಾರೆಂದ ಚಂಡಾಖ್ಯನು || ೨ ||
ನೀತಿತೆಪ್ಪಿದ ಮೂಳನೆ | ಕೇಣುವುದೋಟು | ಜಾತಿಯ ಅಕ್ಕ ನಿನ್ನ ||
ಯಾತಕು ಗಣಿಸೆ ನಾ | ಲ್ಯೂತಿಯಗಂಜೆನು | ಕ್ಯಾತ ಸಿಮ್ಮಾಸ್ಯ ಕನಾ || ೩ ||
ಸತಿಯಾರು ನಿನಗೆ ಮೂಢ | ತಂಗಿಯೊ ತಾಯೊ | ಮತಿಹೀನ ತೊಲಗು ಗಾಢ ||
ಪೃಥಿವಿಯೊಳತಿ ಬಲ | ಯುತ ಚಂಡಸೇನನ | ಖತಿಯ ನೀನರಿಯೆ ವ್ಯಾಧ || ೪ ||
ಎಣ್ಣೆನ್ನ ವಡತಿ ಕಣಾ | ಯನ್ನಲಿಯಿದ್ದ | ಯೆಣ್ಣಲಿ ಬಿಡು ಮುಕ್ಕಣ್ಣ ||
ಯನ್ನವ್ವನನು ಕದ್ದ | ಕುನ್ನಿಯನ್ನಯ ನಾಯಿ | ಗುಣಿಪೆ ನಿನ್ನನೆಣ || ೫ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ನುಡಿಗೆ ರೌದ್ರದಿ ಚಂಡಸೇನನು |
ಕಡುದುರುಳ ತಡೆಯೆನುತಲಸ್ತ್ರವ |
ಬಿಡಲದರ ಪುಡಿಗೈದ ಶಬರನು ಗುಡುಗುಡಿಸುತ || ೧ ||
ತೂರಿದನು ಶರಂಲೆಯನದ ಪುಡಿ |
ದೋರಿಸುತ ಚಂಡಾಖ್ಯ ಠಣ್ಣನೆ |
ಏರಿ ಖಡುಗದೊಳವನ ಶಿರವನು | ಹಾರಿಸುತಲಿ || ೨ ||
ಕ್ರೂರ ಖಳ ಮುಂದರಿದ ನಿತ್ತಲು |
ಚೀರಿಡುತಲಿ ಸುನಂದೆ ಸಖಿಯರು |
ಸಾರಿ ಭೂವರ ಗರುಹಿಗರು ಕಣ್ಣೀರಿನಿಂದ || ೩ ||
ರಾಗ ನೀಲಾಂಬರಿ ಅಷ್ಟತಾಳ
ಬಿತ್ತರಿಸುವೆವೇನ | ಸತ್ತೆವು ನಾವೆಲ್ಲ | ರಾಯಕೇಳು ||
ನಿನ್ನ | ಮಿತ್ರನೆಂಬಾಖಳ | ಹೊತ್ತೊಯ್ದನೊಡತಿಯ | ರಾಯ || ೧ ||
ಬರುವ ಮಾರ್ಗದೊಳೆಮ್ಮ | ತರುಬಿ ಮೇಣೆಯ ಚಲ್ಲಿ | ರಾಯ ಕೇಳು ||
ವ್ಯಾಘ್ರ | ಎರಳೆಗೆರಗುವಂತೆ | ತುರುಬಹಿಡಿದು ಖೂಳ | ರಯ ಕೇಳು || ೨ ||
ತರಿದು ಬೋಯಿಗಳನು | ಕರಚರಣವಕಟ್ಟಿ | ರಾಯ ಕೇಳು ||
ಹೊತ್ತು | ತೆರಳಿದ ಬವಣೆಯ | ಭರಿಪಳೆಂತಾದೇವಿ | ರಾಯ ಕೇಳು || ೩ ||
ಭಾಮಿನಿ
ಕೇಳಿ ದೊಪ್ಪನೆ ಕೆಡೆದು ಕಡುಗಿದ |
ಕಾಲನೊ ಕಲಾಂತ ರುದ್ರನೊ |
ಪೇಳಲರಿದೆನಲೆದ್ದು ರೌದ್ರದಿ ಮೂಲ ಬಲಸಹಿತ ||
ಖೂಳನಾಯುವ ತೊಡೆವೆ ನರೆ ಮು ||
ಕ್ಕಾಲು ಯಾಮದೊಳೆನುತ ಜವದಿ ನೃ |
ಪಾಲ ಮಣಿರಥವಡಿ ಪೊರಟನು ಗಾಳಿ ವೇಗದಲಿ || ೧ ||
ಭರಿತ ಸೇನಾಜಾಲದೊಂದಿಗೆ |
ತರಣಿಯಸ್ತಕೆ ತಲುಪಿ ಶಿಬಿರವ |
ವಿರಚಿಸುತ ತಂಗಿದನು ಮುತ್ತಿಗೆ ಮರುವುದಯಕೆಂದು ||
ಮರುಗುತಿರ್ದನು ಚಾರನೋರ್ವನು |
ಪರಕಿಸುತ ಗುಪಿತದೊಳಗೆಲ್ಲ |
ಅರಿತು ಭರದಿಂದೋಡಿ ಬಂದನು ದುರುಳನಿದ್ದೆಡೆಗೆ || ೨ ||
ರಾಗ ಕೊರವಿ ಏಕತಾಳ
ಸಲಾಮು ವಡೆಯ | ಗುಲಾಮನಯ್ಯ | ತಲಾಸು ನುಡಿಯ ಕೇಳಯ್ಯ ||
ಅಮ್ಯಾಗೆ ಒಸಿ | ಇಲಾಮು ಪುಡಿಯ ನೀಡಯ್ಯ || ಸಲಾಮು || ಪಲ್ಲ ||
ಪತಿತಾಪುರದವುಸೇನನಂತೆ | ಸತಿಯ ನೀವು ಕದ್ದೀರಂತೆ | ಅತಿಸಿ ನಿಮ್ಮ ಮೈಯ್ಯೋದೈತಂದೆ ||
ಅದಕಾಗಿಯವಳ | ಪತೀಯುಕೂಟ ಶೈನ್ಯಾ ಬಂದೈತೆ | ಸಲಾಮು || ೧ ||
ಕಾಳನ ಪಾಳೇವಿದ್ದಂಗೈತ | ನಾಳಿಗೆಯಿದ್ದಾಯೆಮ್ತಾಐತೆ | ಬಾಳೇವ್ ಕಸ್ಟಯೆಂದೇ ಕಾಣ್ತೈತೆ ||
ಆಯೆಣ್ಣೆಕೊಟ್ಟು | ಬಾಳಾದ್ವಾಶಿಯೆಂದೇ ತೋರ್ತೈತೆ || ಸಲಾಮು || ೨ ||
ರಾಗ ಕೇದಾರಗೌಳ ಅಷ್ಟತಾಳ
ನುಡಿಗೆ ಚಂಡನು ನಡ | ನಡುಗಿ ದೂತನ ಹೊರ | ಗಡೆಗಟ್ಟಿಯೋಚಿಸುತ ||
ಕಡುಬಲಾನ್ವಿತ ಭೂಪ | ನೊಡನೆ ಯುದ್ಧದಿ ನಾಳೆ | ನಡೆವುದೇನೋಯೆನುತ || ೧ ||
ಲಲನೆಯ ಮೈಮಾಟ | ಚೆಲುವಿಗೆ ಸೋತು ನಾ | ಕಳವಿಲಾದರು ತಂದಿಹೆ ||
ಹೊಳಲ ಸೇರುವೆನೆಂತೆಂ | ಬೊಳಮನ ಭೀತಿಯ | ಕಳೆದು ಗೃಹಕೆ ಬಂದಿಹೆ || ೨ ||
ಕೈಗೆ ಬಂದೀತುತ್ತ | ಬಾಯ್ಗಿಕ್ಕದೆಂದಿಗು | ಹಾಗೆಯೆ ಬಿಡಲರಿಯೆ ||
ನಾಗವೇಣಿಯನೊಮ್ಮೆ | ಭೋಗಿಪೆ ರಣದೊಳೆಂ | ತಾಗಲೆನಗೆ ಸರಿಯೆ || ೩ ||
ರಾಗ ಕಾಂಬೋಧಿ ಝಂಪೆತಾಳ
ಎಂದೆನುತ ನಿಶ್ಚಯಿಸು | ತಂದು ತನುಸಿಂಗರಿಸಿ | ಗಂಧಕಸ್ತೂರಿ ವೀಳ್ಯವಗಿದು ||
ಬಂದಾಸುನಂದೆಯೆಡೆ | ನಿಂದು ನಸುನಗೆಯಿಂದ | ಲೆಂದನಾಕೆಗೆ ಕಯ್ಯ ಮುಗಿದು || ೧ ||
ಏಸುಮಂಗಲೆ ರೂಪ | ರಾಶಿಗಳುಕಿದೆ ನಾನು | ಮೋಸ ಮಾಡಿದೆ ನಿನಗೆ ಪತಿಗೆ ||
ಓ ಸುಗುಣೆ ಕ್ಷಮಿಸಿ ಮನ | ದಾಸೆಯನನುಗ್ರಹಿಸಿ | ನೀಸಲಹಬೇಕೆಂದ ಸತಿಗೆ || ೨ ||
ರಾಗ ಬೇಹಾಗ್ ಏಕತಾಳ
ಅಣ್ಣನೆಂದೇ ಬಗೆದು ಹಾಲು | ಹಣ್ಣನುಣಿಸಿತ್ತೆ ||
ನಿನ್ನ ಮನದೊಳನಿತೆ ನೆನೆವು | ತೆನ್ನಕಳುಹೀ ಹೊತ್ತೆ || ೧ ||
ಅಣ್ಣನಲ್ಲ ಇನಿಯನೆಂದು | ನಿನ್ನ ಮನವ ತಿದ್ದು ||
ಎನ್ನ ಬದುಕಿದೆಲ್ಲ ನಿನಗೆ | ನನ್ನಿಯಿಂದ ಹೋಯ್ತು || ೨ ||
ಕೆನ್ನೆಗೊಂದು ಭವಕೆ ಗಂಡ | ನೆನ್ನುವಾತನೊಬ್ಬ ||
ಅನ್ಯಯರಪ್ಪರಣ್ಣ ತಮ್ಮ | ಚಿಣ್ಣರ್ತ್ಯಜಿಸೀಮಬ್ಬ || ೩ ||
ರಾಗ ಸುರಟಿ ಏಕತಾಳ
ಏನೆಂತಿರಲಿ ಬಿಡು | ಒಮ್ಮೆಗೆ | ನೀನೆನ್ನನು ಕೂಡು ||
ನಾನು ಕಡೆಗೆ ನಿನ್ನಾಣತಿಯಂತಿಹೆ | ಪ್ರಾಣಗಳೆವಸ್ಮರ | ಜಾಣೆಯೆ ದಯವಿಡು || ೧ ||
ಖೂಳನಿನಗೆ ಹುಚ್ಚು | ನಾನೇನ್ | ಸೂಳೆಯೆ ಬಾಯ್ಮುಚ್ಚು ||
ಕೇಳಿದೊಡನೆ ಬಂ | ದಾಳಿದನುರವನು | ಸೀಳುತಲಿಡುವ ನಿ | ವಾಳಿಗೆ ಕಿಚ್ಚು || ೨ ||
ಭಾಮಿನಿ
ಖೂಳ ಚಿಂತಿಸಿ ಮನದಿ ಪತಿಯಿರೆ |
ಬಾಲೆಯೊಲಿಯಳು ಕಾದಲಸದಳ |
ಮೇಲೆನಿಪ ಕೈತವದಿ ಹೊಂದುವೆ ಲೋಲೆಯಳನೆನುತ ||
ಕಾಲುದೆಗೆದನು ಸದನಕಿತ್ತಲು |
ಶೀಲೆಹಮ್ಮೈಸುತ್ತಲಿಳೆಯೊಳು |
ಮೇಲೆಮೇಲಾವರಿಪದುಃಖ ಜ್ವಾಲೆಯಲಿ ಬೆಂದು ||
ರಾಗ ಸೋಹನಿ ರೂಪಕತಾಳ
ವಹಿಸಿಹುದೆಂತೀ ಬವಣೆಯ | ಸಹಿಪೆನೆ ಖಳನಂಗವಣೆಯ ||
ವಹಿಲದಿ ಬಂದೆನ್ನಿನಿಯ | ದಹಿಸನೆ ಯಾತನೆಯ || ೧ ||
ಹಿಂದಿನ ಜನುಮದೊಳಾರನು | ಸಂದಗಳಚಿ ಸಾಧ್ವಿಯರನು ||
ತಂದೀ ಪರಿ ಸೆರೆಮನೆಯನು | ಹೊಂದಿಸಿದೆನೊ ನಾನು || ೨ ||
ಪಾತಕಿ ಜನಿಸಿದೆನೇತಕೆ | ಘಾತಕಿಯಾದೆನು ದ್ವಿಕುಲಕೆ ||
ನಾಥನ ಕಾಂಬೆನೆ ಮುಂದಕೆ | ಪ್ರೀತಿಯ ಮೆರೆಯಲಿಕೆ || ೩ ||
ಭಾಮಿನಿ
ಅಸುರಮಾಯದಿಗೈದು ಶೋಣಿತ |
ಒಸರುವ ಸುಸೇನಕನ ರುಂಡವ |
ಬಿಸುಡುತೀಕೆಯ ಎದುರು ಇನ್ನೋಲೈಸು ನೀನೆಂದ ||
ಮಿಸುಪರದನದ ಬಸಿವ ರುಧಿರದ |
ಮಸುಳಿದಾಸ್ಯವ ಕಂಡು ಹಾಯೆಂ |
ದಸುವ ತೊರೆದುರುಳಿದಳು ಮಾಸತಿ ವಸುಧೆಯೊಡಲೊಳಗೆ ||
Leave A Comment