ಕಥಾಸಾರ

ಕಾಲನೇಮಿಯು ಮದನಪುರದಲ್ಲಿ ಚಂಡಸೇನನೆಂಬ ಹೆಸರಿನಲ್ಲಿ ಹುಟ್ಟಿಕೊಂಡಿದ್ದಾನೆ. ಅವನ ಸ್ನೇಹಿತ ಪ್ರತಿಷ್ಠಾನಗರದ ವಸುಸೇನ. ಪ್ರತಿಷ್ಠಾನಗರದಲ್ಲಿ ವಸುಸೇನನು ಓಲಗಗೊಟ್ಟಿರುವಾಗ ಮಿತ್ರನಾದ ಚಂಡಸೇನನು ಅಲ್ಲಿಗೆ ಆಗಮಿಸುತ್ತಾನೆ. ಅವನನ್ನು ಮಿತ್ರನಾದ ವಸುಸೇನನು ಆಧರಿಸಿ ಊಟಕ್ಕೆ ಕರೆದೊಯ್ಯಲು ಊಟವನ್ನು ಬಡಿಸುವ ಸುನಂದೆಯ ರೂಪಕ್ಕೆ ಚಂಡಸೇನ ಮರುಳಾಗುತ್ತಾನೆ. ತನ್ನ ಮಿತ್ರನಾದ ಸುದರ್ಶನನಲ್ಲಿ ಅವಳ ರೂಪವನ್ನು ವರ್ಣಿಸಿದಾಗ ಅವನು ಇವನನ್ನು ಪ್ರೋತ್ಸಾಹಿಸುತ್ತಾನೆ. ಮಾರನೆಯ ದಿವಸ ವಸುಸೇನ – ಚಂಡಸೇನರು ವನಸಂಚರಣೆಗೆ ತೆರಳುವಾಗ ಸುನಂದೆಗೆ ಊಟ ತರುವಂತೆ ವಸುಸೇನ ಹೇಳುತ್ತಾನೆ. ಅವಳು ಊಟವನ್ನು ತರುವಾಗ ದಾರಿಯಲ್ಲಿ ಚಂಡಸೇನನು ಅವಳನ್ನು ಅಪಹರಿಸಿಕೊಂಡು ಹೋಗುತ್ತಾನೆ. ಅವಳ ಮೊರೆಯನ್ನು ಕೇಳಿ ಸುರಮ್ಯಾಟವಿಯ ಒಡೆಯ ಸಿಂಹಾಸ್ಯನು ತಡೆದು ಯುದ್ಧದಲ್ಲಿ ಸಾಯುತ್ತಾನೆ. ಇತ್ತ ಸುನಂದೆಯ ಸಖಿಯರು ವಸುಸೇನನಿಗೆ ಈ ಸುದ್ಧಿಯನ್ನು ತಿಳಿಸುತ್ತಾರೆ. ಅವನು ಸೇನಾ ಸಮೇತನಾಗಿ ಯುದ್ಧಕ್ಕೆ ಹೊರಡುತ್ತಾನೆ. ಈ ಸುದ್ಧಿಯನ್ನು ತಿಳಿದ ಚಂಡನು ನಾಳೆ ಯುದ್ಧದಲ್ಲಿ ಏನಾದೀತೋ ಏನೋ ಇಂದೇ ಈ ಸುಂದರಿಯನ್ನು ಭೋಗಿಸುವೆನೆಂದು ನಿಶ್ಚಯಿಸಿ ಅವಳಲ್ಲಿ ಕಾಮಯಾಚನೆ ಮಾಡುತ್ತಾನೆ. ಅವಳು ಒಪ್ಪದಿರಲು ತಂತ್ರದಿಂದ ಕೂಡಬೇಕೆಂದು ನಿಶ್ಚಯಿಸಿ ರಕ್ತ ಒಸರುವ ವಸುಸೇನನ ರುಂಡವನ್ನು ನಿರ್ಮಿಸಿ ಅವಳ ಎದುರಿಗೆ ತಂದು ಹಾಕುತ್ತಾನೆ. ಅದನ್ನು ಕಂಡೊಡನೆ ಸುನಂದೆಯು ಸಾಯುತ್ತಾಳೆ. ಚಂಡಸೇನನು ಅವಳೊಂದಿಗೆ ತಾನು ಚಿತೆಯನ್ನೇರುವ ವಿಚಾರವನ್ನು ಮಾಡಿದಾಗ ಸಚಿವನು ತಡೆದು ಅವಳ ಶವವನ್ನು ಗಂಡನೆದುರಿಗೆ ಎಸೆಯಲು ಸೂಚಿಸುತ್ತಾನೆ. ವಸುಸೇನನು ದುಃಖಿಸುತ್ತಿರುವಾಗ ಅಶರೀರವಾಣಿಯು ನಡೆದ ಸಂಗತಿಯನ್ನು ತಿಳಿಸುತ್ತದೆ. ವಸುಸೇನ ಕೆರಳಿ ಯುದ್ಧಕ್ಕಣಿಯಾಗುತ್ತಾನೆ. ಅವನ ಮಗನಾದ ರುದ್ರಸೇನ ಯುದ್ಧಕ್ಕೆ ಮುನ್ನುಗುತ್ತಾನೆ. ಚಂಡಸೇನನ ಮಗನಾದ ಭದ್ರಸೇನ ಎದುರಾಗುತ್ತಾನೆ. ಭದ್ರಸೇನ ಯುದ್ಧದಲ್ಲಿ ಮಡಿಯುತ್ತಾನೆ. ವಸುಸೇನ – ಚಂಡಸೇನರ ನಡುವೆ ಯುದ್ಧ ನಡೆದು ಚಂಡಸೇನ ಸೆರೆ ಸಿಗುತ್ತಾನೆ. ಅವರ ಶಿಶ್ನವನ್ನು ಕತ್ತರಿಸಿ ಬೆತ್ತಲೆಯಾಗಿ ಮೆರವಣಿಗೆ ಮಾಡಿ ಗಲ್ಲಿಗೇರಿಸಲಾಗುತ್ತದೆ. ಈ ಜನ್ಮದಲ್ಲಿ ಆಗದಿದ್ದರೂ ಮುಂದಿನ ಜನ್ಮದಲ್ಲಿಯಾದರೂ ಸುನಂದೆಯನ್ನು ಭೋಗಿಸದೆ ಬಿಡೆನೆಂದು ಪ್ರತಿಜ್ಞೆ ಮಾಡಿ ಸಾಯುತ್ತಾನೆ. ವಸುಸೇನನು ಸುನಂದೆಗೆ ಸಂಸ್ಕಾರವನ್ನು ಮಾಡಿ ಮಗನನ್ನು ಪಟ್ಟಕ್ಕೇರಿಸಿ ಸತಿಯೊಡನೆ ಚಿತೆಯನ್ನೇರುತ್ತಾನೆ.

ಚಂಡಸೇನ ಮುಂದಿನ ಭವದಲ್ಲಿ ಧ್ರುಮಿಲ ದಾನವನಾಗಿ ಹುಟ್ಟುತ್ತಾನೆ. ವಸುಸೇನನು ಉಗ್ರಸೇನನಾಗಿ ಸುನಂದೆಯು ನಂದಿನಿಯಾಗಿ ಜನ್ಮತಾಳಿ ಸತಿಪತಿಯರಾಗಿರುತ್ತಾರೆ. ಒಂದು ದಿನ ನಂದಿನಿಯು ವನವಿಹಾರಕ್ಕೆ ಹೋಗೋಣವೆಂದು ಪತಿಯನ್ನು ಕೇಳುತ್ತಾಳೆ. ಉಗ್ರಸೇನನು ‘ರಾಜಕಾರ್ಯದ ಭರದಿಂದ ಇಂದು ಬರಲಾರೆ, ನೀನು ಹೋಗಿ ಬಾ’ ಎಂದು ಕಳಿಸುತ್ತಾನೆ. ನಂದಿನಿಯು ವನಸಂಚಾರ ಗಯ್ಯುತಿರುವುದನ್ನು ದ್ರುಮಿಲ ನೋಡುತ್ತಾನೆ. ಇವಳು ಸುನಂದೆಯೆಂಬುದು ಅರಿವಾಗುತ್ತದೆ. ಸಖಿಯರು ದೂರ ಹೋದ ಸಮಯದಲ್ಲಿ ಉಗ್ರಸೇನನ ರೂಪವನ್ನು ಧರಿಸಿ ಬಂದು ಅವಳನ್ನು ಕೂಡುತ್ತಾನೆ. ಅಷ್ಟುಹೊತ್ತಿಗೆ ಉಗ್ರಸೇನನು ಅಲ್ಲಿಗೆ ಬಂದನೆಂಬುದನ್ನು ಸಖಿಯರು ಕೂಗುತ್ತಿರಲು ತಕ್ಷಣದಲ್ಲಿ ಕಾಡುಹಂದಿಯ ರೂಪು ತಳೆದು ಓಡುತ್ತಾನೆ. ಉಗ್ರಸೇನನ ಶರದಘಾತದಿಂದ ಮಡಿಯುತ್ತಾನೆ. ಅವನ ಪ್ರಾಣ ಸತಿಯ ಒಡಲನ್ನು ಸೇರುತ್ತದೆ. ಅದು ಮೂರನೆಯದಾದ ಕಂಸರೂಪಕ್ಕೆ ನಾಂದಿ. ಉಗ್ರಸೇನನಿಗೆ ಇದೊಂದು ಗೊತ್ತಿಲ್ಲ. ಕಾಡುಹಂದಿಯ ದಾಳಿಯಿಂದ ಸತಿಯು ಕಂಗೆಟ್ಟಿದ್ದಾಳೆಂದು ತಿಳಿಯುತ್ತಾನೆ. ನಂದಿನಿ ತಾಪದಿಂದ ಬೆಂದು ತನ್ನೊಳಗಿನ ಪಿಂಡವು ತನ್ನವರಿಂದಲೇ ಮಡಿಯಲೆಂದು ಶಪಿಸುತ್ತಾಳೆ. ಅವಳು ಅನ್ನಾಹಾರಗಳನ್ನು ತೊರೆದು ಪ್ರಾಣವನ್ನು ತೊರೆಯಲು ನಿಶ್ಚಯಿಸುತ್ತಾಳೆ. ಉಪಾಯದಿಂದ ಔಷಧಿಗಳನ್ನು ಕುಡಿಸುತ್ತಾರೆ. ಅವಳು ಮಗುವಿಗೆ ಜನ್ಮಕೊಟ್ಟು ಮಡಿಯುತ್ತಾಳೆ. ರಾಜ ಶೋಕಿಸುತ್ತಾನೆ. ಕಂಸ ಬೆಳೆಯುತ್ತಾನೆ. ದುಷ್ಟಕೂಟವನ್ನು ಬೆಳೆಸುತ್ತಾನೆ. ತಂದೆಯು ಅದನ್ನು ಕೇಳಿ ಅವನನ್ನು ವಿಚಾರಿಸಲು ಹೊರಟಾಗ ತಂದೆಯನ್ನೇ ಸೆರೆಯಲ್ಲಿಟ್ಟು ತಾನೇ ರಾಜನಾಗಿ ಮೆರೆಯುತ್ತಾನೆ. ಅವನ ದೌರ್ಜನ್ಯ ಹೆಚ್ಚುತ್ತದೆ.

ಒಂದು ದಿನ ಕಂಸನು ಅಕ್ರೂರನನ್ನು ಕರೆದು ಅಳಿಯಂದಿರಾದ ಬಲರಾಮ-ಕೃಷ್ಣರನ್ನು ಬಿಲ್ಲಹಬ್ಬಕ್ಕಾಗಿ ಕರೆತರಲು ಹೇಳುತ್ತಾನೆ. ಅಕ್ರೂರ ನಂದಗೋಕುಲಕ್ಕೆ ಹೋಗಿ ಈ ವಿಷಯವನ್ನು ತಿಳಿಸಿ ಅವರನ್ನು ಕರೆತರುತ್ತಾನೆ. ದಾರಿಯನ್ನು ಅವನಿಗೆ ಕೃಷ್ಣನ ಮೂಲಸ್ವರೂಪದರ್ಶನವಾಗುತ್ತದೆ. ಮಥುರೆಯಲ್ಲಿ ರಜಕನು ಬಲರಾಮ-ಕೃಷ್ಣರಿಂದ ಹತನಾಗುತ್ತಾನೆ. ಕುಬ್ಜೆಯ ಕುರೂಪ ತೊಲಗುತ್ತದೆ. ಕುವಲಯಾಪೀಡವು ಸಾಯುತ್ತದೆ. ಚಾಣೂರ-ಮುಷ್ಟಿಕರು ಕುಸ್ತಿಯಲ್ಲಿ ಸಾಯುತ್ತಾರೆ. ಕಂಸನು ಸ್ವಪ್ನದಿಂದ ಕಂಗೆಡುತ್ತಾನೆ. ಕಂಸ-ಕೃಷ್ಣರಲ್ಲಿ ಯುದ್ಧ ನಡೆದು ಕಂಸನ ವಧೆಯಾಗುತ್ತದೆ. ಉಗ್ರಸೇನ ಪುನಃ ಪಟ್ಟವನ್ನೇರುತ್ತಾನೆ.