ವಾರ್ಧಿಕ
ಎದ್ದು ನೋಡಿದರೆ ಬಲಭದ್ರಕೃಷ್ಣರು ರಥದೊಳಿ
ದ್ದುದಂ ಪರಕಿಸುತ ನಿಜ ತಿಳಿದಂತವರ |
ಹೊದ್ದಿ ಗೃಹಕೈದಿ ತಾನಿದ್ದು ಜಾಗೃತದಿ ಕಾ | ದಿದ್ದನವರನ್ನು ದಯದಿ |
ಕ್ರುದ್ಧಕಂಸಾಸುರಂ ಬದ್ಧವೈರಿಯ ಕೊಲೆಗೆ |
ಸಿದ್ಧನಾಗಿರುತಿರಲ್ ತಿದ್ದಿತಿಲಕವ ಪಣೆಗೆ |
ಶುದ್ಧಪೀತಾಂಬರಂ ಮೆದ್ದಗ್ರಜನ ಕೂಡಿ ಗರ್ದಿನಿಂದೈತರುತಿರೇ ||
ರಾಗ ಮಾರವಿ ಏಕತಾಳ
ಅಗಸನು ಕಂಸನ | ಒಗೆದೊಸನಂಗಳ | ಬಿಗಿದಿಹ ಮೂಟೆಯನು ||
ಹೆಗಲಿಂಗೇರಿಸಿ ಲಗುಬಗೆಯಿಂದೆದು | ರಿಗೆ ಬರೆ ಕಂಡದನು || ೧ ||
ಥಟ್ಟನವನ ನಡಗಟ್ಟುತ ಕೃಷ್ಣನು | ಮೂಟೆಯಿದೇನೆಲವೊ ||
ಉಟ್ಟ ಜರದ ಮಡಿ | ಕೊಟ್ಟುದೊ ಬಿಟ್ಟುದೊ | ಸಟ್ಟನುಸುರ ಕಳವೊ || ೨ ||
ಯಾರೆಲೆ ಪೋರ ಯಿ | ಚಾರಿಸಲೆನ್ನನು | ಮಾರಾಯರ ರಜಕ ||
ಆರಿಪೆನಲ್ಗಳ ದಾರಿಯ ಬಿಡದಿರೆ | ಸಾರೆಲೆ ಮತಿವೋಕ || ೩ ||
ರಾಜಂಗಳಿಯರು | ರಾಜಿಯೊಳಿದಕೂಡು | ಸಾಜದೊಳೆಮ್ಮಾಳು ||
ಗೋಜಿಗೆ ಬಂದರೆ | ಆಜಿಯೆನುತ ಬಲ | ಭಾಜಿಸಿದನು ಹಲ್ಲು || ೪ ||
ಅಳಿವರು ನೀವಿಂದುಳಿದರೆ ನಾಳೆಗೆ | ಸಲಿಸುವೆ ನಿಮಗೆಂದ ||
ಮುಳಿದೊಂದೇಟನು | ಇಳಿಸುತ ಕೃಷ್ಣನು ಘಳಿಲನವನ ಕೊಂದ || ೫ ||
ಭಾಮಿನಿ
ವಾಸವದ ತಗೆದುಟ್ಟು ತರಳರು |
ಸೂಸಿ ನಡೆದರು ರಾಜತೇಜದಿ |
ಪೂಸುಗಂಧವ ಹಿಡಿದು ಬಂದಳು ದಾಸಿ ಮೂವಕ್ರಿ ||
ವಾಸುದೇವನು ತಡೆದುಕೊಡು ತನ |
ಗಾಸೆಯೆಂದನು ನುಡಿದಳಾಕೆಯು |
ಮೀಸಲಿದು ಕಂಸಂಗೆ ತಪ್ಪೆಗತಾಸು ತಾನೆಂದು ||
ರಾಗ ಸುರುಟಿ ಏಕತಾಳ
ಕಂಸನು ಇನ್ನಿಲ್ಲ | ಸಜ್ಜನ | ಹಿಂಸೆಯುಳಿಯವುದಿಲ್ಲ ||
ಸಂಶಯ ಬಿಡು ಬಕ | ನ್ಯಾಸ ಗಮನೆ ಕೊಡು | ಧ್ವಂಸಿಪೆ ನಾ ಸತ್ಯಾಂಶವಿದೆಲ್ಲ || ೧ ||
ಎಳಚಿಣ್ಣನು ನೀನು | ದಡಿಗನ | ಕೊಲುವೆಯೆಂದರೇನು ||
ಕೊಲಿಸೆನು ನಾನೇ | ಅಳಿದಪೆ ಕೊಂಡಿದ | ಘಳಿಲನೆ ಹಿನ್ನಡೆ | ನಿಲಯಕೆ ಸೂನು || ೨ ||
ಕೊಡೆ ಗಂಧವಕೊಂಡು | ಪದಗಳ | ದೃಢದಿ ಮೆಟ್ಟಿಕೊಂಡು ||
ಹಿಡಿಯುತ ಗಲ್ಲವ | ಬಿಡದೆತ್ತಿದಡವ | ಳ್ಹುಡಗಿಯೆ ಆಗುತ | ಲೊಡನದ ಕಂಡು || ೩ ||
ರಾಗ ಮಧ್ಯಮಾವತಿ ತ್ರಿವುಡೆತಾಳ
ಗಾಢಭಯ ಭಕ್ತಿಯಲಿ ತನುವೀ | ಡಾಡಿ ದೇವರ ದೇವ ಕುಬ್ಜೆಯ |
ಮಾಡಿದೆಯ ಸುರ ಸುಂದರಿಯನೆಂ | ದಾಡಿ ಪೊಗಳಿ || ೧ ||
ಮಗುಳೆರಗುತಪ್ಪೆಣೆಯನಾಂತಾ | ಮುಗುದೆ ತೆರಳಿದಳಿತ್ತ ಬಲಸಹ |
ನಗಧರನು ಮುಂದರಿದ ಖಳಚರ | ರುಗಳು ಬಂದು || ೨ ||
ಕೇಡಿ ಕಂಸಂಗರುಹೆ ಕುವಲಯ | ಪೀಡವೆಂಬ ಮಹಾಗಜಕೆ ಮ |
ತ್ತೂಡಿಸುತಲೋಡಿಸಿದ ಹಗೆಯ ವಿ | ಭಾಡಿಸಲಿಕೆ || ೩ ||
ಭಾಮಿನಿ
ಘೀಳಿಡುತ ಸಾಹಸ್ರಗಜದಾ |
ಭೀಳಶಕ್ತಿಯ ಮತ್ತಕರೆಇ ಮೈ |
ಮೇರೆ ಬರೆ ಹರಿಯದರ ಸೊಂಡಿಲ ಲೀಲೆಯಲಿ ಪಿಡಿದು ||
ಏಳು ಸುತ್ತನು ತಿರುಹಿ ಬಡಿದನು |
ಕಾಲವಶವಾಗುರುಳಿತದು ಖಳ |
ಕೇಳಿ ಚಾಣುರ ಮುಷ್ಟಿಕಾಖ್ಯರ ಕಾಳಗಕೆ ಬಿಟ್ಟ ||
ರಾಗ ಪಂತುವರಾಳಿ ಮಟ್ಟೆತಾಳ
ದಿಂಡರೊಂದೊಂದು ದೊಡ್ಡ | ಬಂಡೆಯಂದದಿ | ಭಂಡ ಧೈರ್ಯದಿಂದಲಿವರ |
ಕಂಡು ಮೋದದಿ || ಕಂಡರಿವರು ತೋರ್ಪರೆಳೆಯ | ಪಿಂಡದಂದದಿ |
ದಂಡಿಯೆಂದು ಬಂದುದಿಲ್ಲಿ | ದಂಡಸಹಜದಿ || ೧ ||
ಸಾರಿ ಸನಿಹ ಕರೆದು ಜಾ | ಣೂರ ಕೃಷ್ಣಗೆ || ಪೋರ ಸಾಯಲೇಕೆ
ಮರೆಯ ಸೇರಿ ಕಂಸಗೆ || ಸೇರ್ವುದಲ್ಲ ಖಗಜನೂರ |
ಸೇರಿಸುವೆಮಿಗೆ | ಸಾರು ಸಾರ್ದೆನೆದುರು ಬರಲಿ | ಕ್ರೂರನಾಡಗೆ || ೨ ||
ಚೋಟುಗಾತ್ರ ಹೀಚು ಬಾಯ | ಘೂಟಿದೇನಲ | ಚೂಟಿ ತೆಗೆವೆನೆನುತಲಿಟ್ಟ |
ನೇಟನಾಖಳ || ಕೋಟಲೆಯನು ಹರಿವೆನೆನುತ |
ದೇಟ ಮುರಿದು ಕಳೆದನಾನಿ | ಶಾಟಿರಸುಗಳ || ೩ ||
ರಾಗ ಭೈರವಿ ಅಷ್ಟತಾಳ
ದಡಿಗನಳಿವ ಕಾಣುತ | ಮುಷ್ಟಿಕ ನೌಡು | ಗಡಿದು ಸಂಗರಕಾನುತ ||
ತುಡುಕ ಬರಲು ಬಲ | ನಡಹಾಯ್ದು ರೋಷದಿ | ನುಡಿದನು ಗರ್ಜಿಸುತ || ೧ ||
ಎಲವೊ ಖಳಾಧಮನೆ | ಎಮ್ಮೊಡನಸು | ಗಳೆಯಲ್ಯಾತಕೊ ಸುಮ್ಮನೆ
ಕಳುಹು ದುರಾತ್ಮಕ | ನಳಿಯಲಿ ತಿಂದುಂಡು | ಬೆಳೆದಿಹ ಕಾಳ್ಕೋಣನೆ || ೨ ||
ಕೋಣನೆಂಬೆಯ ದುರುಳ | ಮುರಿವೆ ನಿನ್ನ | ಗೋಣನೆಲವೊ ತರಳ ||
ತ್ರಾಣವನೋಡೆಂದ | ದಾನವನನು ಹೊಯ್ದು | ಪ್ರಾಣವಗೊಂಡ ಬಲ || ೩ ||
ಭಾಮಿನಿ
ಪೇಳಿದರು ಚರರೈದಿ ಕಂಸನು |
ಕೇಳಿ ಕುದಿದು ಮಹಾಂತ ರೌದ್ರದಿ |
ಖೂಳರಾಯುವ ತೊಡೆವೆ ನಾಳೆಗೆನುತ ಶಯನಿಸಲು ||
ಸಾಲುಗಟ್ಟಿದ ಸ್ವಪ್ನಸೂಡಿಯ |
ದಾಳಿಯಲಿ ಕಂಗೆಟ್ಟು ಕೂಗುತ |
ತಾಳಿದನು ದುಡುಡವನು ನೆನೆವುತ ಕಂಡ ಕನಸುಗಳ ||
ರಾಗ ಸೋಹನಿ ರೂಪಕತಾಳ
ಏನಿದು ಭೀಕರ ಸ್ವಪ್ನವು | ತಾನೆದ್ದೊಡೆಯುವುದಾತ್ಮವು ||
ಹಾನಿಗಳಖಿಲವ ತೋರುವು | ದೇನೆನ್ನಯ ಇರವು || ೧ ||
ನೆತ್ತಿಗೆ ತೈಲವ ಪೂಸಿದೆ | ರಕ್ತಾಂಬರಗಳ ಧರಿಸಿದೆ ||
ಕತ್ತೆಯ ನಾನೆಗದೇರಿದೆ | ಮೃತ್ಯುದೆಸೆಗೆ ಪೋದೆ || ೨ ||
ಕಡುಹಗೆಯೆನ್ನನು ತಡೆದನು | ಕಡುಹ ಚತುರ್ಭುಜನಾತನು ||
ಪಿಡಿದಿಹ ಚಕ್ರಾದಿಗಳನು ತುಡುಕಿದದೆನ್ನುವನು || ೩ ||
ಕೊಳುಗುಳಕವನೊಡನಾಂತೆನು | ಗಳವನು ಹಿಸುಕಿದನಾತನು ||
ಬಳಿಕೇನೊಂದುವರಿಯೆನು | ನೆಲನೊಳಗುರುಳಿದೆನು || ೪ ||
ನಡುಗುವುದೊಡಲೆದೆ ಯಾರಿತು | ದಡಿಗನ ಕೊಲೆ ಕೈ ಮೀರಿತು ||
ಪೊಡವಿಯೊಳಿಹ ಋಣ ತೀರಿತು || ಕಡೆಗಾಲವು ಬಂತು || ೫ ||
ಭಾಮಿನಿ
ಖಳನಿನಿತು ಹಂಬಲಿಸುತಿರುಳನು |
ಕಳೆದು ಸಾವರಿಸುತ್ತ ಹಗೆಯನು |
ಕೊಲುವ ಖತಿಯಲಿ ಮುಂದರಿದು ತಾ ಪೊರಡೆ ಶೀಘ್ರದಲಿ ||
ಅಳಿಯನಾನೇ ಬಂದೆ ಮಾವನ |
ಬಳಿಗೆ ನೀನೋಡೆನುತ ನಗೆಯಲಿ |
ನಳಿನನಾಭನು ಮುಂದೆ ನಿಲ್ಲಲು ಕೆರಳಿ ಗರ್ಜಿಸುತ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ನೀನಳಿಯನೆನಗಾಗಿಯುಭಯರ | ಸ್ಥಾನಮಾನವನರಿಯದೆನ್ನಯ |
ಸೈನಿಕರ ಕೊಲಲ್ಯಾಕೆ ಬಗುಳೆಲೊ | ಶ್ವಾನಜವದಿ || ೧ ||
ಆತೃಣಾವರ್ತಕ ಬಕಾಸುರ | ಪೂತನಿಯ ವೃಕಶಕಟಧೇನುಕ
ಖ್ಯಾತನಘನ ಪ್ರಲಂಬ ಮುಖ್ಯರ | ಘಾತಿಸಿದೆಲಾ || ೨ ||
ಗುಂಡಿಗೆಯ ಹಿರಿದೆನ್ನಮಿತ್ರರ | ಹಿಂಡ ತಣಿಸುವೆನೆದೆಯ ರುಧಿರವ |
ನುಂಡು ಕೋಪಾನಲನ ತಣಿಸುವೆ ಭಂಡ ನಿನ್ನ || ೩ ||
ರಾಗ ಸಾರಂಗ ಅಷ್ಟತಾಳ
ಬರಿ ಹುಡುಗಾಡಿಕೆಯು | ಮಾವಯ್ಯ ನಿ | ಷ್ಠುರವೇತಕಾಟಿಕೆಯು |
ದುರುಳರಾದರು ಯಮ ಗರಿಯದಾವುದು ಕೋಪ | ವಿರಿಸಲೇಕೀ ಪಾಟಿಯು || ೧ ||
ರಾಗ ದೇಶಿ ಅಷ್ಟತಾಳ
ನುಡಿಯೆ ಜಿಹ್ವೆಯನು | ಕಡಿವೆ ಚಾಣೂರಕ | ಕಡುಹ ಮುಷ್ಟಿಕ |
ನಿಡುಮಹಾಗಜ | ಹುಡುಗರಾಟಿಕೆಯಾದವೆ || ೧ ||
ಅಗಸನಾಯುವ ಮುಗಿಸಿದೈನಂದಿನ || ಸಿಗುವ ಮಡಿವಸನಗಳ
ಕಸಿದುದು | ಮಗುವಿನಾಟವೆ ಬಗುಳೆಲೊ || ೨ ||
ಚರಣದಾಸಿಯ ಮರುಳುಗೊಳಿಸಿ ನಿತ್ಯ ||
ಬರುವ ಗಂಧವ ದುರುಳಕೊಂಡೆಯು ಶಿರವ ಚೂರ್ಣಿಪೆನೆಂದನು || ೩ ||
ರಾಗ ಭೈರವಿ ಅಷ್ಟತಾಳ
ದಡಿಗ ಖಳಾಧಮನೆ | ತೀರಿತು ಬಿಡು | ಒಡಲಾಸೆಯನು ಘಮ್ಮನೆ ||
ಹಡೆದ ತಂದೆಯ ಮೇಣು | ಒಡಹುಟ್ಟಿದಳ ಸೆರೆ | ಗಿಡಿಸಿದ ಪಾಪಾತ್ಮನೆ || ೧ ||
ಕುಲಧರ್ಮಗಳ ನೀಗಿಹೆ | ಹೆಣದಿನಿಗಳ | ಗ್ಗಳ ದುಷ್ಟ ನೀನಾಗಿಹೆ ||
ಬಳಗದ ಯದುಗಳ ಗಳಕುರುಳಾಗಿಹೆ | ಖಳ ಕೊಲ ಬಂದಿಹೆ || ೨ ||
ಇಳಿಯಲಿ ಪೀಠವನು | ಎನ್ನುತಜಿಗಿ | ದೆಳೆದಿಳೆಗಿಡುಕಿ ತಾನು ||
ಘಳಿಲನೆದೆಯ ಮೆಟ್ಟಿ | ತುಳಿದು ಚೂರ್ಣಿಸಿ ಹರಿ | ಖಳನಸುವನು ಕೊಂಡನು || ೩ ||
ಭಾಮಿನಿ
ಅನಿಮಿಷರು ಜಯವೆಂದರಜ್ಜನ |
ಜನನಿ ಜನಕರನಖಿಲ ಬಂಧುಗ |
ಳನು ಬಿಡಿಸಿ ಸೆರೆಯಿಂದ ಯಾದವ ಜನವ ಸಮ್ಮಿಳಿಸಿ ||
ಜನಪತಿತ್ವವನುಗ್ರಸೇನೆಗೆ |
ಘನವಿಭವದಿಂದಿತ್ತನಿಲ್ಲಿಗೆ |
ಜನುಮವಸರಂಗಾಯ್ತು ಮೂರೆಂದನು ಮುನೀಶ್ವರನು ||
ರಾಗ ಕೇದಾರಗೌಳ ಅಷ್ಟತಾಳ
ಶುಕಮುನಿ ಧರಣಿ ಪಾಲಕ ಪರೀಕ್ಷಿತನಿಂಗೆ | ಕಕುಲತೆಯಲಿ ಪೇಳಿದ ||
ಲಕುಮೀಶಚರಿತೆಯ ಪ್ರಕಟಿತದೆಕ್ಷಗಾ | ಬದಲಿಸಿದೆನಿದ || ೧ ||
ಶಾ. ಶಕ ಸಾವಿರದೊಂಬೈನೂರೈದರ | ವರ್ಷದುಂದುಭಿಗಿದನು |
ಮಾಸಶ್ರಾವಣ ಬಹು | ಳಾಷ್ಟಮಿ ಗುರುವಾರ | ನಾ ಸಂಪೂರ್ಣವ ಗೈದೆನು || ೨ ||
ಭೂಸುರ ವಿಠಲ ಲಕ್ಷ್ಮೀಸುತ ಗಣಪತಿ | ವಾಸುದೂರ್ಬೆಳಸಲಿಗೆ ||
ಈ ಸುಮ ಹನ್ನೊಂದೋ | ಲೈಸುವ ರಿಷ್ಟವ | ವಾಸುದೇವನು ಕೊಡುಗೆ || ೩ ||
ಮಂಗಲಪದ
ರಾಗ ಢವಳಾರ ಏಕತಾಳ
ಮಂಗಲಂ | ಜಯ ಮಂಗಲಂ | ನಿತ್ಯ ಮಂಗಲಂ || ಪಲ್ಲ ||
ಮಂಗಲ ಬಾಲ ಸಿರೀಶನಿಗೆ | ಮಂಗಲ ಕಂಸವಿನಾಶನಿಗೆ ||
ಮಂಗಲ ಶೇಷಗಿರೀಶನಿಗೆ ಜಯ | ಮಂಗಲಕಪಿಲ ಪುರೇಶನಿಗೆ ಮಂಗಲಂ || ೧ ||
|| ಸಂಪೂರ್ಣಂ ||
Leave A Comment