ಇಂದ್ರ: ಸಚಿವ ಕುಲಶಿರೋರನ್ನ ರಂಭಾದಿನಾರಿಯರು ನೃತ್ಯಾದಿ ಗಾನವನ್ನು ಮಾಡಬಹು ದಾಗಿರುವುದೂ.
ಮಂತ್ರಿ: ಹೇ ರಂಭಾ ವೂರ್ವಶಿಯರೆ – ನೀವು ನೃತ್ಯಾದಿಗಾನವನ್ನು ಮಾಡಿ ಯೀ ಸಭಿಕರಂ ಆನಂದಿಸಬಹುದಾಗಿರುವದು.
ಪದ
ನಾಥನಾ ಮನಸಿನ ರೀತಿಯ ನೋಡಿದೆಯ
ಯಾತರ ಮಾತಿದು ಸಹಜಾತೆ ॥
ಸ್ಮರಶರ ತಾಪದಿ ಮತಿಯಾದೆ ತವ
ಸ್ಮರಿಸುತಲಿರುತಿಹೆ ಗುಣಮಣಿಯೇ ॥
ಮರೆತನೊ ಯನ್ನಯ ಸರಸಕೆ ಬಾರದೆ
ವರಿಸಿದನೀ ಮಂಜುಭಾಷಿಣಿಯ ॥
ಊರ್ವಶಿ: ಹೇ ಅಗ್ರಜರೂಪಳೆ, ಕಾಂತನು ಯನ್ನ ಮೇಲೆ ನಿನ್ನೆ ದಿನಾ ಸಿಟ್ಟು ಮಾಡಿ ನಮ್ಮ ಗೃಹಕ್ಕೆ ಬಾರದೆ ಯಿರುವ ಕಾರಣವೇನೊ ತಿಳಿಯದು ಯನಗೆ ತಿಳಿಸಬೇಕಮ್ಮಾ ಅಗ್ರಜಳೆ.
ಪದ
ಬಾರದ ಪುರುಷರು ಸೇರಾರು ಯನ್ನುತ
ಘೋರಪಡುವದಿದು ಸರಿಯೇನೆ
ನಾರೀಮಣಿಯೆ ನಿನ್ನ ವೂರ್ವಶಿ ಯನ್ನುತ
ತೋರದೆ ಬಾರದೊಲಿರುತಿಹನೆ ॥
ರಂಭಾ: ಅಮ್ಮಾ ತಂಗಿ, ತತ್ಕಾಲದ ಭ್ರಮೆಗೆ ಮನಸ್ಸು ಚಂಚಲ ಮಾಡಿಕೊಂಡು ಪುರುಷನು ಮನೆಗೆ ಬಾರನೆಂದು ಚಿಂತೆ ಮಾಡುವದು ಸರಿಯಲ್ಲಾ. ಆದರೆ ವಂದನುಮಾನವಿದೇ ಹೇಳಲೂಬಹುದು ಹೇಳಲಾಗಿರುವುದಲ್ಲಮ್ಮಾ ತಂಗಿ ಮಂಗಳಾಂಗಿ.
ಪದ
ಯನ್ನೊಳು ಪೇಳದೆ ಯಿನ್ಯಾರಿಗುಸುರುವೆ
ನನ್ನಿಯಿಂ ಪೇಳಮ್ಮಾ ಅಗ್ರಜಳೆ
ಸನ್ನೆ ತೆಗೆಯುಬ್ಯಾಡಾ ಬನ್ನ ಬಿಡುವೆ ನಾನು
ನಿನ್ನಾಣೆ ತಿಳುಹಮ್ಮಾ ಅಕ್ಕಯ್ಯ ॥
ವೂರ್ವಶಿ: ಅಮ್ಮಾ ಅಗ್ರಜಳೆ ಲಾಲಿಸು. ಅಂಥ ಮರ್ಮದ ಮಾತು, ಯೇನು ತಾನೆ ಯಿರುವದು ಯನ್ನೊಂದಿಗೆ ಪೇಳದೆ. ಯಿನ್ಯಾರ ಸಂಗಡ ಪೇಳುವೆ ಮನದೊಳು ಮರೆಮಾಜದೆ ಯನ್ನ ಸಂಗಡ ಪೇಳಮ್ಮಾ ರಂಭಾ ಬಟುಕುಚದ ಕುಂಭಾ.
ಪದ
ನನ್ನಿಯಿಂ ಪೇಳುವೆ – ಕನ್ನೆಯೆ ಕೇಳಮ್ಮಾ
ಸನ್ನೆ ಸೈಗೆಯ ಕಾಣೆ ನಿನ್ನಾಣೆ ॥
ಪನ್ನಗವೇಣಿಯೆ ಲಾಲಿಸೂ ಪೇಳುವೆ
ಗನ್ನ ಘಾತಕವಲ್ಲ ತಿಳಿ ನೀನು ॥
ರಂಭಾ: ಅಮ್ಮಾ ತಂಗಿ ನಿನ್ನ ನಿಜನಾಮ ವೂರ್ವಶಿಯಂದರೆ ಸೋಜಿಗ ಪೆಸರಾಗುವುದು. ಗುಣ ವಿಶೇಷವಿದ್ದಲ್ಲಿ ಸೂಕ್ಷ್ಮವೇ ಸರಿ ತಿಳಿಯಬಹುದಾಗಿತ್ತು ಗುಣದಲ್ಲಿ ಅಲ್ಪ ಭಾವಳಾಗಿದಿಯೋ ಹ್ಯಾಂಗೊ. ನೆನ್ನೆದಿನ ವಿಟರಾಯನು ಬರಲಿಲ್ಲವೇನೊ, ಪುರುಷರ ಮರ್ಮ ಹ್ಯಾಂಗೆ ತಿಳಿಯುವದಮ್ಮಾ ತಂಗಿ ನಿಜದರ್ಧಾಂಗಿ.
ಪದ
ಪೊಸರಕೇಳಿಗೆ ವಾಸವ ಬಾರದೇ ಬ್ಯಾಸರ
ಉಕ್ಕುತಿರುವುದೇನೆ ॥ಹೇ ಸಖಿ
ಹ್ಯಾಂಗಿರಲಿ ವಾಸವಸುತಶ್ರೀ ಭೀಮೇಶನಿ
ಗಾದರು ಘನವೆನಿಸೀ॥ ॥
(ರಾಕ್ಷಸರ ಧಾಳಿ)
ಆದಿತಾಳ
ಹಿಡಿಹಿಡಿಯಲೊ ಮಕರಾಕ್ಷನೆ ಬೇಗದಿ
ಜಡಜಗಂಧಿಯರಂನ್ನೂ ಯಿವರನ್ನೂ ॥
ತುಡುಕಿದೆ ಇಂದ್ರನೆಂಬುವನ ಹೆಡಗುಡಿ ಬಿಗಿದು
ಬಂಧಿಸಿ ಯಳತಾರೊ ನೀ ಬಾರೊ ॥
ದ್ರುಡತರದಿಂದೈರಾವತ ಸಿರಿಯನು ॥
ನಡಿಸೊ ನಮ್ಮಯ ಪುರಿಗೆ ವೂರಿಗೇ ॥
ತಾರಕಾಕ್ಷ: ಭಲೆ ತಮ್ಮಾ ಮಕರಾಕ್ಷ, ಯೀ ಜಡದೇಹಿಯಾದ ಬಿಡೌಜನ ಮಡದಿಯರಾದ ಜಡಜಾಂಬಕಿಯರ ವರಮುಡಿ ಜಡೆಯಂ ಪಿಡಿದು ಹೆಡಗುಡಿಯಂ ಬಿಗಿದು ನಿಡು ಸರಳೆಂಬ ಕೋಲಾಹಲ ಖಡ್ಗದಿಂದ ಅಡ್ಡ ಬಂದವರ ಹಮ್ಮು ಮುರಿದು ಖಡ್ಗದಿಂ ಕಡಿದು ಬಾಧೆಗೊಳಿಸಿ ಗೆದ್ದುತಂದು ನಿಲ್ಲಿಸೈ ವಿದ್ಯುನ್ಮಾಲಿ ಪರಾಕ್ರಮಶಾಲಿ.
ರಂಭಾ ಊರ್ವಶಿ: ಶಿವಶಿವಾ ಪ್ರಾಣನಾಥ ನಮ್ಮ ಪ್ರಾಣಗಳೂ ಧಾವರಿಂದುಳಿದಾವೊ ಸ್ವಾಮೀ ಸದಾಶಿವಾ.
ಮುಖಾರಿ ॥ಅಟತಾಳ
ದಿಕ್ಕಿಲ್ಲಾದೋಯಿತಲ್ಲಾ ಯಮ್ಮಯ
ಸೆರೆ ಬಿಡಿಸೂವಾರ್ಯಾರಿಲ್ಲಾವೈ ರಕ್ಕಾಸರ
ಬಾಧೆಗೆ ಸಿಕ್ಕಿದೆವಲ್ಲಮ್ಮಾ ವುಕ್ಕುಕ್ಕಿ ಬಿಡುವಾರೇ ॥
ರಂಭಾ: ಹೇ ಸದಾಶಿವಾ ಯೀ ವ್ಯಾಳೆ ನಮಗೆ ದಿಕ್ಕಿಲ್ಲದ ಹಾಗಾಯಿತಲ್ಲೋ ಪರಶಿವನೇ. ಯೀ ದುಷ್ಠಾ ದಾನವರು ಯಲ್ಲಿಂದ ಬಂದರೋ ತಿಳಿಯದೇ, ಯೀ ವ್ಯಾಳೆಯಲ್ಲಿ ನಮ್ಮ ಸೆರೆಯನ್ನು ಬಿಡಿಸೊ ಗಂಗಾಧರಾ ಹೇ ಮೃತ್ಯುಂಜಯಾ.
ಪದ
ರಕ್ಕಸಾರೆಮ್ಮಾನೀಗಾ ಕೇಳೆಲೊ
ಕಾಂತಾ ಸಿಕ್ಕಿದಂತಾಡುವರೊ
ಅಕ್ಕಾರವಳಿದೆಂಮ್ಮಾ ಕಕ್ಕಾಸದಿಂದಾಲಿ
ಘಕ್ಕಾನೆ ಯಳೆವಾರಲ್ಲೊ ॥
ಊರ್ವಶಿ: ಹೇ ಪ್ರಾಣಕಾಂತಾ, ನೀವಿದ್ದು ನಮ್ಮನ್ನು ಯೀ ಪಾಪಿಗಳು ಹಿಡಿದೆಳೆಯುವರು ಕಂಣ್ಣಾರ ನೋಡಿ ಸುಮ್ಮನೆ ಯಿರುವರೇನೈ ಕಾಂತ ನಮ್ಮಂಥ ಅಬಲೆಯರ ಗತಿಯೇನು ಧಾರ ಕೂಡೆ ಪೇಳಿಕೊಳ್ಳೋಣ ಯೀ ಪಾಪಿಗಳ ಬಾಧೆ ತಪ್ಪಿಸೊ ಪ್ರಾಣನಾಥಾ.
ಪದ
ಯಲೆಯಲೆ ಧನುಜನೆ ಕೇಳೊ ನಿಲ
ಯವ ಹೊಗದಿರು ತಾಳೊ ತಲೆಗಳ
ಕಡಿಯುವೆ ಹೊಲೆಯನೆ ಅಬಲೆಯ
ಸನಿಹಕೆ ಹೊಗದಿರು ತಾಳೋ ॥
ಇಂದ್ರ: ಯಲಾ ದನುಜಾಧಮ, ವಿಚಾರವಿಲ್ಲದೆ ಕ್ರೂರತನದಿಂದ ಶಚೀಧವನೆಂದು ತಿಳಿಯದೇ ಅಚಾತುರ್ಯದಿಂದ ನಗರವಂ ಪೊಕ್ಕು ಅಚಲಾನಂದದೈಶ್ವರ್ಯಕ್ಕೆ ಮನವಳಿಸಿ ಸಚರಾಚರಕ್ಕೂ ಪ್ರಚುರವಾದ ನಿಲಿಂಪಾದಿಗಳ ಕಂಡು ಕುಚೇಷ್ಠೆಯಂ ಮಾಡಿ ಸಭಾನಿಚಯದೊಳ್ ಬಂದು ರುಜಗ್ಬೋದನ ಮಾಡಲಿಕ್ಕೆ ನೀನೆಷ್ಟರವನೋ ಭಂಡಾ. ಯಲಾ ದಾನವನೇ, ನಿರ್ಜರಾದಿಗಳ ತಂಟೆಯನ್ನು ಮಾಡಿದರೆ ಯನ್ನ ವಜ್ರಾಯುಧದಿಂದ ಜರ್ಝರಿತ ಮಾಡುವೆ ದೂರಾ ನಿಲ್ಲುವಂಥವನಾಗೋ ದಾನವಾಧಮಾ.
ಪದ
ಗುದ್ದುವೆನೆಲೆ ದೇವೆಂದ್ರಾ ಅದ್ದುವೆ
ನರಕದಿ ಯಿಂದ್ರ ಬದ್ಧ ಘರ್ವವು
ಯಾತಕೆ ನಿನಗೆ ನಿರ್ಜರಗೈಯ್ಯುವೆ ಪುರವಾ ॥
ಮುದ್ದಿನ ಮೋಹಿನಿಯರನು
ಸಿದ್ದದಿ ಸಾಧಿಪೆ ನೋಡೊ ಯನ್ನರ್ಧಾಂಗನೆಯರ
ಬದ್ಧದಿ ದಾಸಿಯ ಮಾಡುವೆನೊ ಯಿಂದ್ರಾ ॥
ತಾರಕಾಸುರ: ಭಲೆ ಯನ್ನ ತಮ್ಮನಾದ ಮಕರಾಕ್ಷನೇ ಕೇಳು. ಯೀ ಯಿಂದ್ರನೆಂಬ ಅಧಮನನ್ನು ಸದೆಬಡಿದು ಮುಂದೆ ಯಡೆಗುಡಿಯಂ ಕಟ್ಟಿ ಬಾ. ಯಲೈ ವಿದ್ಯುನ್ಮಾಲಿಯೇ ಲಾಲಿಸು. ಯೀ ಅಂಗನಾ ಮಣಿಯರನ್ನು ಮುಂದಕ್ಕೆ ಬಿಡಬ್ಯಾಡ ನಿಲ್ಲಿಸು. ಯಲಾ ಅಶುದ್ಧ ಬದ್ಧನಾದ ದೇವೇಂದ್ರ ಛೀ ಛೀ ಅಧಮಾ ದುರ್ಧರ ಮೂಕಗಿರಿಯಂ ಹೊದ್ದಿ ಮರಳಿಸುವ ಕ್ರುದ್ಭಟ-ತಾರಕಾಗ್ರಣಿ ಯಂದರಿಯದೆ ಬಾಯಿಗೆ ಬಂದಂತೆ ಬೊಗಳುವೆಯಾ ಭ್ರಷ್ಠಾ, ಯಿಕೋ ಬಂಧನವ ಮಾಡಿಸುವೆ ನಿಮ್ಮಪ್ಪಗೆ ನೀನು ಮಗನಾದರೆ ಬಿಡಿಸಿಕೊ ಯನ್ನದಟನೆಣಿೆಸದೇ ಕೆಣಕುವೆಯೇನೋ ಮೂಢ ದೇವೇಂದ್ರಾ.
ಭಲೆ ತಮ್ಮಗಳಿರಾ, ಯಿನ್ನು ತಡವನ್ನು ಮಾಡದೆ ನಿಮ್ಮ ಶೌರ್ಯ ಸಾಮರ್ಥ್ಯದಿಂದ ಯಿವರೆಲ್ಲರಂ ಬಂಧಿಸಿ ನಮ್ಮ ಪುರಕ್ಕೆ ಹೊರಡಿಸಿರೈಯ್ಯ ಅನುಜರೇ.
ಭೈರವಿ ॥ಅಟತಾಳ
ಪ್ರಾಣದೊಲ್ಲಭ ಲಾಲಿಸೊ ॥ಯಮ್ಮಯ
ಮಾನ ಪ್ರಾಣವಾ ನೀ ರಕ್ಷಿಸೊ
ನೋಡಿದಾರಿವರಚ್ಚರಿಯ ಖೂಳರು ಬಂದು
ಕಾಡುವರೀ ಪರಿಯೊ ಮೂಢ ದಾನವರಡಿ
ಗಡಿಗೆ ಕೈ ಮಾಡಿ ಯಡೆಗೂಡಿ
ಬಿಗಿವೆವೆಂಬುವರೂ ॥ಕೇಡಿಗರ ಮುಖ
ನೋಡಿದರೆ ಭಯಗೂಡಿ ನಿಮ್ಮನು
ಬೇಡಿಕೊಂಬೆವು ॥ಪ್ರಾಣದೊಲ್ಲಭ ಲಾಲಿಸೊ ॥
ರಂಭಾ: ಪ್ರಾಣಕಾಂತನಾದ ದೇವೇಂದ್ರನೆ ಲಾಲಿಸು. ನಮಗೆ ಏನುಗತಿ. ಯೀ ಕಡುಪಾಪಿಗಳು ಮಾಡುವ- ನೀಚ ಕೃತ್ಯಗಳನ್ನು ನೋಡಿದೆಯಾ. ನಮ್ಮನ್ನು ಯೀ ಕಡುಪಾಪಿಗಳ ಕೈವಶ ಮಾಡಿ ನಮ್ಮನ್ನ ಮಾನಭಂಗ ಮಾಡುವಂಥದ್ದು ಕಣ್ಣಿನಿಂದ ನೋಡಬೇಕೆಂಬ ಯಿಚ್ಚೆ ಯೆಷ್ಠು ದಿನದಿಂದ ನಿನ್ನ ಮನಸ್ಸಿನಲ್ಲಿ ಯೋಚನೆಯನ್ನು ಮಾಡಿದ್ದೆ. ನಂಬಿದ ನಾರಿಯರನ್ನು ವ್ಯಥೆಪಡಿಸಬಾರದೆಂದು ಲೇಶಮಾತ್ರವು ಬೇಡವೇ, ಅಯ್ಯೋ ದೈವವೇ ನಿಮ್ಮ ಮಾನಾ ನೀವು ವುಳಿಸಿಕೊಳ್ಳಬೇಕೆಂಬ ಭಾವಾ ನಿಮಗೆ ಯೆಳ್ಳಷ್ಠಾದರೂ ಯಿಲ್ಲದೋಯಿತು. ಯಿನ್ಯಾರ ಕೂಡ ನಮ್ಮ ದುಃಖವನ್ನು ಹೇಳಿಕೊಳ್ಳೋಣ, ನಮಗೆ ಬಂದಿರುವ ಹಿಂಸೆಯನ್ನು ಅಳಿಸೋ ಪ್ರಾಣನಾಥ ನಮ್ಮ ಮನೋಪ್ರೀತ.
ಇಂದ್ರ: ಹೇ ಕಾಂತೆಯರೆ – ನಾನೇ ಯೀ ದೈತ್ಯರ ಕೈಗೆ ಸಿಕ್ಕಿ ಶ್ರಮಪಡುವಂತಾಯಿತು. ಹರಿಹರಾದಿಗಳಿಗೆ ಕರುಣ ಪುಟ್ಟಿ ನಮ್ಮ ಕಷ್ಠವಂ ಪರಿಹರಿಸಬೇಕಲ್ಲದೆ ಮಿಕ್ಕವರೇನು ಮಾಡಬಲ್ಲರು. ಯೀಗ ನಾನೇನು ಮಾಡಲಿ ನನ್ನ ಯತ್ನವಿಲ್ಲದಂತಾಯಿತು ಶಿವಶಿವಾ. ಯೇನೂ ತೋಚದಂತಾಯಿತೇ ಗಂಗಾಧರ ಮೃತ್ಯುಂಜಯಾ ನೀನೇ ಪಾಲಿಸಬೇಕೊ ಪಾರ್ವತೀಶಾ.
ರೇಗುಪ್ತಿ ॥ಆದಿತಾಳ
ಹಿಡಿಹಿಡಿ ಹಿಡಿಹಿಡಿ ತಡಬಡ ಮಾಡದೆ
ಬೇಗದಿ ಯಿವರನು ಸಡಗರ
ಸಡಗರದಿಂದಲಿ – ಮೃಡನೆಂಬ ಮೂಢನು
ಗಡಗಡಗಡನೆಂದು ನಡುಗುವಂತೆ ಮಾಡು ॥
ತಾರಕಾಕ್ಷ: ಆಹೋ ತಮ್ಮಾ ಮಕರಾಕ್ಷ, ಗಂಡನೆದುರಿಗೆ ಯೀ ರಂಡೆಯರೇನೇನೊ ಗೊಣಗುಟ್ಟುತಾರೆ ಥಟ್ಟನೆ ಯೀ ಕೆಟ್ಟ ಕನ್ನೆಯರನ್ನು ಗಟ್ಟಿಯಾಗಿ ಪೆಟ್ಟನ್ನಿಟ್ಟು ತಟ್ಟನೆ ಯಿವರ ಕರಂಗಳಂ ಕಟ್ಟಿ ಮುಟ್ಟಿ ಯೀ ಸೃಷ್ಠಿಯ ಮ್ಯಾಲಿಟ್ಟು ಅಟ್ಟಹಾಸದಿಂದಟ್ಟಿ ಬಾ ದೇವತಾ ನಿಕರ ಅಡ್ಡ ಬಂದರೆ ಕಡ್ಡಿಗೆ ಸಮಾನ ಮಾಡಿ ಅವರ ಹೆಂಡತಿಯರನ್ನು ಗಡಗಡನೆ ನಡಗುವಂತೆ ಮಾಡಿರೋ ತಮ್ಮಗಳಿರಾ.
ಮಕರಾಕ್ಷ: ಯಲೆ ಯಿಂದ್ರ ನಾಯಕಿಯರೇ, ಮೃಢನೆಂಬ ಅಧಮನನ್ನು ವುದ್ದಂಡನೆಂದು ಯಾತಕ್ಕೆ ಬೊಗಳುವಿರಿ. ಆ ಮೃಢನಿಗೆ ಬದಲಾಗಿ ದ್ರುಢವಾಗಿ ನಿಂತಿರುವ ನಮ್ಮಣ್ಣನಾದ ತಾರಕಾಕ್ಷನನ್ನು ನೋಡಿರಿ. ನಮ್ಮ ಭಯಕ್ಕಂಜಿ ಅಳುಕಿ ಬೆದರಿ ಗಡಗಡನೆ ನಿಂತಿರುವ ನಿಮ್ಮ ಗಂಡನಾದ ಯೀ ಭಂಡ ಯಿಂದ್ರನಿಗೇನು ಹೇಳುವಿರಿ ಜಾಗ್ರತೆಯಿಂದ ನಮ್ಮ ಪಟ್ಟಣಕ್ಕೆ ಹೊರಡಿರಿ ಕೆಟ್ಟ ನಾರಿಯರೆ.
ಕಂದ
ಅಹೋ ಚಿತ್ತ ಸಂತಾಪಮಂ ಸೈರಿಸೆ
ಯೀ ದುಷ್ಟರೀಪರಿ ಕಾಡುತಿರ್ಪರೈ ॥
ಸದಾಶಿವನೆ ಯನ್ನ ಕಾಯೊ ನೀಂ ಸತತಂ ॥
ಗತಿಯೇನು ಕಾಣೆ ವುಳಿವುದಕೀಗ ನಾಂ ॥
ಬೇಗದಿ ಬಂದು ಪಾಲಿಸೊ – ಶ್ರೀ ಭೀಮೇಶನೇ ॥
ದಾನವ ಲಾಲಿಸೊ ಯಮ್ಮಯ ಮಾನವು
ಕಳೆವುದು ನಿನಿಗೆ ಯಿದು ಸರಿಯೇನೈ
ಪಾವನ ಮಾಡುವುದ್ಯಾವ ಜ್ಞಾನವ
ಕೆಟ್ಟೆಮ್ಮ ನುಡಿವೆ ಹೀನನೆ ಪೋಗೈ ॥
ಊರ್ವಶಿ: ಹೇ ಸದಾಶಿವ ಮೃತ್ಯುಂಜಯ ಗಂಗಾಧರ ಪರಶಿವ ಪರಮಾತ್ಮ, ಯೀ ವ್ಯಾಳೆಯಲ್ಲಿ ಯೇನು ತೋಚದಂಗಾಯಿತಲೈ ಸ್ವಾಮಿ ನಮ್ಮ ಪ್ರಾಣ ಮಾನಾ ರಕ್ಷಿಸಬೇಕೈ ಪಾರ್ವತೀಶ.
ತಾರಕಾಕ್ಷ: ಯಲೈ ಸಾರಥಿ, ಹಾಕಿವರ ಬಾಯಿಗೆ ಬೀಗ ನೂಕೆನ್ನ ಮುಂದೀಗ. ಭಲೆ ತಮ್ಮಗಳಿರಾ ಥಟ್ಟನೆ ಯಿವರ ನೆತ್ತಿಯಮ್ಯಾಲೆ ಸಿಟ್ಟಿನಿಂದ ಘಟ್ಟಿಯಾಗಿ ಪೆಟ್ಟನ್ನಿಟ್ಟು ಅಟ್ಟಹಾಸದಿಂದ ಯಿವರ ರೆಟ್ಟೆಯಿಡಿದು ಕುಟ್ಟಿ ಕೆಡಹಿ ಮತ್ತೆ ಸಿಟ್ಟಿನಿಂದ ಕೆಟ್ಟ ದೇವೇಂದ್ರನು ಬಂದರೆ ಗಟ್ಟಿಸಿ ಹಿಂಗಟ್ಟು ಕಟ್ಟಿ ಯೀ ಸೃಷ್ಠಿಯ ಮ್ಯಾಲೆ ಕೆಡಹಿ ಯಿವರ ನಾಲಿಗೆಯನ್ನು ಸೀಳಿರೊ ತಮ್ಮಗಳಿರಾ.
ಪದ
ಮಾನವಾ ಕಳೆವಾರಲ್ಲೊ ದಾನವರಲ್ಲಿ
ವೇಣಿಯಾರೆಳೆವಾರಲ್ಲೊ ಮಾನ
ನಿಧಿಯೆ ಕೇಳೂ ಸೂಕ್ಷ್ಮ ಗುಣಸಂಧಾನಾ
ಯಿವರಲ್ಲಿ ಕಾಣಾಲಿಲ್ಲಾ ಯೇನು
ಮಾಡಲಿ ಯಿಂನ್ನು ಖಳರಾಧೀನ
ವಾದೆವೊ ಸಾಂಬಶಿವಾಶಿವಾ ॥
ರಂಭಾ: ಆಹಾ ದೈವವೆ – ಸೂಕ್ಷ್ಮಗುಣ ಯುವತಿಯರಾದ ನಮ್ಮ ಪ್ರಾಣಗಳನ್ನ ಯೀ ದುಷ್ಟರು ವುಳಿಸುವರೋ ಕಳಿಸುವರೋ ತಿಳಿಯದಲ್ಲ. ಹೇ ಜಗದೀಶ್ವರಾ ನಮ್ಮನ್ನು ಕಡೆಹಾಯಿಸೊ ಚಂದ್ರಶೇಖರಾ.
ಪದ
ವಾಸವರಾಯ ಕೇಳೊ ನಮ್ಮಯ
ಪ್ರಾಣ ಘಾಸಿಯ ಮಾಳ್ಪರಲ್ಲೊ
ರೋಷಾಭೀಷಣದೈತ್ಯರು ಸಂತೋಷದಲಿ
ಮಾಡಿದೆಯಾ ಯಮ್ಮನೂ ಕ್ಲೇಶ ಘನ
ಹರಿ ಭೀಮೇಶ ಗತಿ ॥
ಮಕರಾಕ್ಷ: ಭಲೇ ತಮ್ಮನಾದ ವಿದ್ಯುನ್ಮಾಲಿಯೇ ಕೇಳು. ಯೀ ದುಷ್ಟ ನಾರಿಯರು ಖೂಳರೆಂದು ಮೂಳ ಮಾತುಗಳಾಡುವುದ ನಾ ಕೇಳಲಾರೆ. ಯಿವಳ ನಾಲಿಗೆಯನ್ನ ಸೀಳಿ ಹೋಳುಗಳಾಗಿ ಮಾಡುವಂಥವನಾಗೋ ಅನುಜಾ. ಯಲೋ ಭಂಡ ದೇವೇಂದ್ರ ಯೀಗ ನೋಡು ನಿನ್ನ ಪ್ರಾಣ ನಾಯಕಿಯರು ಪಡುವ ಅವಸ್ಥೆಯ ಕಣ್ಣು ತೆರೆದು ನೋಡೋ ಭಂಡ. ನಿನ್ನ ಕೊಬ್ಬಿದ ನಾಲಿಗೆ ಕೀಳಿಸುತ್ತೇನೆ ಮಾತಾಡು. ಭಲೇ ತಮ್ಮಾ ವಿದ್ಯುನ್ಮಾಲಿ ಹಿಡಿ ಯಿವಳ ಮುಂಡಾ ಕಡಿಯವಳ ಖಂಡ. ಯೀ ಮಡದಿಯರನ್ನು ಕಂಡು ಮಿಡಕುವ ಭಂಡ ಯಿಂದ್ರನನ್ನು ನಿನ್ನ ವುದ್ದಂಡ ಪರಾಕ್ರಮದಿಂದ ಗುದ್ದಿ ಕೆಡಹೊ ವಿದ್ಯುನ್ಮಾಲಿ ಪ್ರತಾಪಶಾಲಿ.
ರೇಗುಪ್ತಿ ॥ಆದಿತಾಳ
ಬಿಡುನುಡಿ ಯಾತಕೆ ನಡಿನಡಿ ನಿನ್ನಾಯ
ವದನವ ಕಡಿಯುವೆನೂ ಬಿಡೆ ನಾನೂ ॥
ಚಟುಲಾಧಮ ನಿನ್ನ ಖಟಕಟಿಸುವೆ ಪ್ರಾಣ
ದಿಟ್ಟ ಭೀಮೇಶ ಬರಲಿ ನಿಲ್ಲಾಲೀ ॥
ಇಂದ್ರ: ಯಲಾ ಪಾಪಿ ದಾನವನೆ, ದೂರ ನಿಂತರೇ ಸಮನಾಯಿತು. ಯಿಲ್ಲವಾಯಿತೆ ಯಿಗೋ ನೋಡು ಯನ್ನ ಕರಾಗ್ರದಲ್ಲಿರುವ ವಜ್ರಾಯುಧದಿಂದ ನಿನ್ನ ಕೊಬ್ಬಿದ ತಲೆಯನ್ನು ಯರಡು ಭಾಗವಾಗಿ ಸೀಳಿ ಆಹುತಿಯನ್ನು ಕೊಡುತ್ತೇನೆ. ಯಲಾ ತಬ್ಬಲಿ ದಾನವಾ ಯಿಷ್ಠರಲ್ಲೇ ನಿನಗೆ ವದಗುವದೊ ಮರಣಾ ಕತ್ತರಿಸುವೆ ನಿನ್ನ ಕರ ಚರಣಾ,
ತಾರಕಾಕ್ಷ: ಯಲಾ ಭಂಡ ದೇವೇಂದ್ರಾ, ದುಂಡುತನದಿಂದಾ ನೀನು ತಿಂದೂ ತಿಂದೂ ಖಂಡಗಳು ಬೆಳೆಸಿದ ಹಾಗಲ್ಲಾ ವುದ್ದಂಡ ಪರಾಕ್ರಮ ನುಡಿಯಲೆ ಭಂಡ ದೇವೇಂದ್ರಾ, ಭಲೈ ಅನುಜಾತರೆ ನೀವು ಜಾಗ್ರತೆಯಿಂದ ಯೀ ಭಂಡ ನಾರಿಯರನ್ನು ವೂರಿಂದಾ ಹೊರಡಿಸಿ ನಮ್ಮ ರಾಣಿವಾಸಕ್ಕೆ ದಾಸಿಯರನ್ನಾಗಿ ಮಾಡಿರೈಯ್ಯ ಅನುಜಾತರೇ.
ಅಠಾಣ – ಅಟತಾಳ
ಖಳನಾ ನೋಡಿವನಾ ಮುಡಿಯಿ
ಡಿದೆಳೆಯುವನಾ ಅಯ್ಯೋ ಕಾಂತಾ ॥
ಕರುಣಿ ಅರಿಯನು ಬಾಯಿ ದೆರದು
ಬೇಡಿದರಿವ ಕರವೆತ್ತಿ ಹೊಡಿಯಲು
ಬರುವಾ ಸೆರಗನು ಪಿಡಿದಿರುವಾ ॥
ರಂಭಾ: ಅಮ್ಮಾ ತಾಯಿಗಳಿರಾ – ಯೀ ಖಳನು ದೇವತಾ ಸ್ತ್ರೀಯರಾದ ನಮ್ಮನ್ನು ಹಿಡಿದು ಯಳೆಯಲಿಕ್ಕೆ ಬರುವನು. ಸೆರೆಯನ್ನು ಬಿಡು ಯಂದರೆ – ಸೆರಗನ್ನು ಪಿಡಿದಿರುವನು. ನಾನ್ಯಾಂಗೆ ಮಾಡಲಿ. ಯಲಾ ಪಾಪಿ ದಾನವ ನನ್ನ ಶಾಪದಿಂದ ನೀನು ಹಾಳಾಗಿ ಹೋಗುವಿ. ಯನ್ನ ತಂಟೆಗೆ ಬಾರದೆ ದೂರಾ ನಿಲ್ಲುವಂಥವನಾಗೊ ಮೂಢಾ ಬಿಡು ಯನ್ನ ಗಾಢಾ.
ಪದ
ಘುಡಿಘುಡಿಸುತವೆನ್ನ ಕಡುಬಾಧೆ
ಪಡಿಸೂವ ಬಿಡಿಸಿರೆ ಯನ್ನಯ
ಸೆರೆಯಾ ಪುಣ್ಯವಂತರೆ ಬರಿಯಾ ॥
ವೂರ್ವಶಿ: ಅಮ್ಮಾ ತಾಯಿಗಳಿರಾ ಅಪ್ಪಾ ತಂದೆಗಳಿರಾ, ಯೀ ದುರ್ಮಾರ್ಗರಿಗೆ ಧರ್ಮಾತ್ಮರ ಗೋಷ್ಠಿ ಬ್ಯಾಡವೆಂದು ಪುಣ್ಯಾತ್ಮರುಗಳಾದ ನೀವಾದರು ಬುದ್ಧಿಯನ್ನು ಪೇಳಿ ನಿರ್ಜರಾಂಗನೆಯರಾದ ನಮ್ಮ ಸೆರೆಯನ್ನು ಬಿಡಿಸಿರಪ್ಪಾ ತಂದೆ ತಾಯಿಗಳಿರಾ.
ಪದ
ಲೋಲ ಭೀಮೇಶಾನೆ ಪಾಲಿಸೊ
ಯಮ್ಮನು ಗೋಳಾಡಿದರು ಬಿಡನಮ್ಮಾ
ಯೇನು ಹೇಳಾಲಿ ಕರ್ಮ ॥
ರಂಭಾ: ಹೇ ಸಾರಸಾಕ್ಷ – ಹೇ ಭೀಮೇಶಾ – ಹೇ ನಾರಾಯಣಾ – ನಿನ್ನ ಪುತ್ರಿಯರಾದ – ನಮ್ಮನ್ನು – ಯೀ ಪಾಪಿ ಗೋಳಾಡಿಸುತ್ತಿರುವನು – ಯೀ ದುರ್ಮಾರ್ಗ ದಾನವನು ಮಾಡುವ ಚರ್ಯಕ್ಕೆ ನೀವಾದರೂ ನಮ್ಮ ದುಃಖ ಪರಿಹರಿಸಬಾರದೇ ನಾರಾಯಣಾ ವೇದ ಪಾರಾಯಣ.
ಮಕರಾಕ್ಷ: ಯಲೆ ರಂಭಾ, ತಬ್ಬಲಿ ದುರ್ಮಾರ್ಗನೆಂದು ಬೊಗಳುತ್ತೀಯಾ ಛೇ ಭ್ರಷ್ಠಳೆ. ಯಲೈ ತಮ್ಮಾ ಯೀ ಭ್ರಷ್ಟಳಾದ ರಂಭೆಯೆಂಬುವಳು ವುಬ್ಬಿ ವುಬ್ಬಿ ರೋಷಾಹಿತಳಾಗಿ ನಮ್ಮನ್ನು ಬೈಯ್ಯುತ್ತಾಳೆ. ಯಿವಳು ದುರ್ಭರದಿಂದಾಡುವ ನಿಬ್ಬರದ ನಾಲಿಗೆ ಕಿತ್ತು – ಯರಡು ಭಾಗವಾಗಿ ಸೀಳಿ ನಿನ್ನ ಕರಗಳಿಂದ ಯಿವಳ ರುಧಿರವನ್ನು ಯೀ ಪಟ್ಟಣಕ್ಕೆ ಬಲಿಯನ್ನು ಚಲ್ಲುವಂಥವನಾಗೋ ತಮ್ಮಾ ನಮ್ಮ ಕುಲದ ಧರ್ಮ.
ಜಂಜೂಟಿ ॥ಆದಿತಾಳ
ಬೇಡಿಕೊಂಬೆ ನಿಮ್ಮಾ ಜೋಡಿಸಿ ಕೈಯ್ಯ ॥
ಪತಿತ ಪಾವಾನ ಗತಿ ಯಾರೆನಗೆ
ಹಿತದಿಂದ ಸಲಹಿರಿ ಮತಿವಂತರೆ ನೀವೂ ॥
ದುಷ್ಠ ರಕ್ಕಾಸನಿವ ॥ದಟ್ಟಿಸಿ ನುಡಿವಾ
ಸೃಷ್ಠಿಯೊಳೆನ್ನಾ ಸೆರೆಯಾ ಬಿಡಿಸಿರೇನೈಯ್ಯ ॥
ಸಂತಾಪಪಡದಿರುವೊ ಸರ್ವಾರು ಕೇಳಿರಿ
ಮಂಥಾನದೊಳೂ ಯನ್ನಾ ಚಿಂತೆಯ ಹರಿಸೀ ॥
ಕಂದ
ಬೇಡುವೆ ಲಾಲಿಸಿ ನಿಮ್ಮನು ॥ಕಾಡುತ
ಲಿರ್ಪನು ॥ಯೀ ಕಡುದುಷ್ಠಾನು ಯನ್ನಂ
ನೋಡುವ ಪರಿ ನಾನೋಡಿರೆ
ರೂಢಿಯೊಳು ಪುಲಿಯು ಗೋವನು
ನೋಡುವ ಪರಿಯಾ ॥
ತಾರಕಾಕ್ಷ: ಯಿಂದ್ರನ ರಾಣಿಯರಿರಾ, ಯಾತಕ್ಕೆ ಯೀ ಸಭೆಯವರಿಗೆ ಮೊರೆಯಿಟ್ಟು ಗೋಳಾಡುತ್ತೀರಿ. ಯಾತಕ್ಕೆ ಕಣ್ಣೀರು ಸುರಿಸಿ ಹೇಳಿಕೊಳ್ಳುವಿರಿ. ಭಲೆ ಯೀ ಅಷ್ಠದಿಕ್ಪಾಲಕರಾದಿಯಾಗಿ ಭುವನ ಬ್ರಂಹ್ಮಾಂಡಕ್ಕು ಗಂಡ ಗಂಡುಗಲಿಯಾದ ಭಾಪುರೇ ಭೇರುಂಡ ತಾರಕಾಕ್ಷಗೆ ಯದುರು ಬಂದು ನಿನ್ನ ಧಾರು ಬಿಡಿಸಿಕೊಂಡು ಪೋಗುವರೇ ತಬ್ಬಲಿ ರಂಡೆ. ಹಾಗಾದರೆ ಯೀಗ ನೋಡಿ ಯಲಾ ಸಾರಥಿ, ಯೀ ಅಮರಾವತಿಗೆ ಯಮನೋಪಾದಿಯಾಗಿ ಯೀ ಸ್ವರ್ಗಮೆಂಬ ದುರ್ಗಕ್ಕೆ ತಾರಕಾಕ್ಷನೇ ರಾಜನೆಂದು ಜಯಭೇರಿಯನ್ನು ಹೊಡೆಯುವಂಥವನಾಗೋ ಸಾರಥಿ. ಯಲೈ ಮಕರಾಕ್ಷ ಯಲೆ ರಂಭಾ ವೂರ್ವಶಿಯರಿರಾ ಮರ್ತ್ಯದ ದಾರಿಯಿಡಿದು ತೆರಳಿರೇ ದುಷ್ಠನಾರಿಗಳಿರಾ.
ಆದಿತಾಳ
ಯಾತಕೆ ಬಿಡುನುಡಿ ನುಡಿಯುವೆ ಮೂಢಾ
ರೀತಿಯೆ ಯನ್ನನು ಮುಟ್ಟಲೆ ಬ್ಯಾಡಾ ॥
ಲಲನಾಮಣಿಯಳ ಬಳಲಿಸುವದು
ಮಲಹರನಾಣೆ ಕೇಡು ಬರ್ಪುದು ನೋಡು ॥
ಜಲಜಾಕ್ಷಿಯರನು ತರುಹಲು ನಿನಗೆ
ಕೊಡುವೆನು ಶಾಪವ ಹಿಡಿಹಿಡಿ ನೀನೂ ॥
ಊರ್ವಶಿ: ಯಲಾ ಮಕರಾಕ್ಷ, ಮಕರಧ್ವಜನ ರಾಣಿಯರನ್ನು ಮುಟ್ಟಬ್ಯಾಡಾ ದೂರ ನಿಂತು ಮಾತನಾಡು. ನಿರ್ಜರಾಂಗನೆಯರಾದ ನಮ್ಮ ನಿಟ್ಟುಸಿರು ನಿನಗೆ ತಾಕಿದರೆ ಭಸ್ಮವಾಗುವೆಯೋ ಪಾಪಿ.
ಮಕರಾಕ್ಷ: ಯಲೆ ಅಂಗನಾಮಣಿ, ನಿಮ್ಮನ್ನ ನಮ್ಮ ಪಟ್ಟಣಕ್ಕೆ ಹೋದ ತರುವಾಯಾ ನಮಗೆ ಕೇಡು ಮಾಡುವರನ್ನು ಯಾರಾದರು ಬರಲಿ ನೋಡಿಕೊಂಬೆ. ಹೆಜ್ಜೆಯೆತ್ತಿ ನಡಿಯೇ ರಂಭೆ ಪುತ್ಥಳಿಯ ಬೊಂಬೆ.
ರಂಭಾ: ಯಲಾ ರಾಕ್ಷಸನೆ, ಯನ್ನ ಕೈಯಂ ಬಿಡು ಹಿಡಿಯಬ್ಯಾಡಾ ಶ್ರೀಹರಿಕರ್ತನು ನಿನ್ನ ಕುಲವೈರಿ ನಿಮ್ಮ ದುರ್ಗುಣಗಳನ್ನು ಸಹಿಸುವನಲ್ಲಾ ಯೀ ಭಾವ ತಿಳಿದು ದೂರ ನಿಲ್ಲುವಂಥವನಾಗೋ ಮೂಢರಾಕ್ಷಸ.
ಮಕರಾಕ್ಷ: ಯಲೆ ಕಾಮಿನಿಯೇ ಕೇಳುವಂಥವಳಾಗು. ಶ್ರೀ ಹರಿಯೇ ರಕ್ಷಿಸುವನೆಂದು ಬೊಗಳುವೆಯಲ್ಲಾ, ಯೀಗ ಬಂದು ಯಾತಕ್ಕೆ ಬಿಡಿಸಬಾರದು. ನಮ್ಮ ಕುಲವೈರಿಯಾದ ಆ ಕಳ್ಳಸುಳ್ಳನಾದ ನಾರಾಯಣನನ್ನ ಯನ್ನೆದುರಿಗೆ ಬಾರಿ ಬಾರಿಗು ಹೊಗಳಬ್ಯಾಡಾ ವೃಥಾ ನನ್ನ ಖಡ್ಗಕ್ಕೆ ಗುರಿಯಾಗಬ್ಯಾಡವೆ ಭ್ರಷ್ಟ ನಾರಿಯೇ.
ತಾರಕಾಕ್ಷ: ಭಲೇ ತಮ್ಮಗಳಿರಾ, ಯೀ ರಂಭಾ ವೂರ್ವಶಿಯೆಂಬುವರು ನಮ್ಮ ಕುಲವೈರಿಯಾದ ಕೃಷ್ಣನನ್ನು ಸ್ತುತಿ ಮಾಡುವದು ನೋಡಿದೆಯೋ, ಯಲೆ ರಂಭಾ ನಿಮ್ಮ ದೇವರನ್ನು ಯನಗೆ ತೋರಿಸಿದ ತಕ್ಷಣಾ ಅಚ್ಚುತನೆಂಬುವನ ವದ್ದು ಕ್ಷೀರಾಬ್ದಿಯೊಳು ಗುದ್ದಿ ಗುದ್ದಿ ಗೋಪಿಚಂದನದ ಮಟ್ಟಿಯೋಳ್ ಹೂಳಿಟ್ಟು ಬರುವೆ. ಯಿದಕ್ಕೆ ಅಡ್ಡಲಾಗಿ ಗಿರಿಜೇಶ ಬಂದರೆ ಬೆತ್ತಲೆ ಮಾಡಿ ಎತ್ತನೇರಿಸಿ ಯಮನ ಪಟ್ಟಣಕ್ಕೆ ಕಳುಹಿಸುವೆ. ಭಳಿರೇ ನನ್ನ ಪರಾಕ್ರಮಕ್ಕೆ ಯಿವರೆಲ್ಲಾ ಯೀಡೇ ಜೋಡೆ. ಮಕರಾಕ್ಷ ವಿದ್ಯುನ್ಮಾಲಿಗಳಿರಾ ಯೀ ಅಮರ ಲೋಕದ ಸರ್ವಸ್ವವು ನಮ್ಮ ಪುರಿಗೆ ಶಕಟೋಷ್ಟ್ಯವಗಳಿಂದ ತುಂಬಿ ಸಾಗಿಸಿರಪ್ಪಾ ಅನುಜಾತರೆ.
ಭಾಗವತರ ವಚನ: ಯಿಂತು ತಾರಕಾಪುತ್ರರು ಯಿಂದ್ರ ಲೋಕಮಂ ಸೂರೆಗೊಂಡು ಅಗ್ನಿ, ಯಮ, ವರುಣ, ವಾಯುವ್ಯ, ಕುಭೇರ ಯೀಶಾನ್ಯಾದಿ ಅಷ್ಟದಿಕ್ಪಾಲಕರ ಪುರಂಗಳಂ ಸೂರೆಗೊಂಡು ಯೈಶ್ವರ್ಯಮಂ ತ್ರಿಪುರಕ್ಕೆ ತುಂಬಿ ಅಮೃತಾದ್ಯಖಿಳ ವೈಭವಂಗಳು ಬೇರೆ ಬೇರೆ ಯಿರಿಸಿ ಸಾಧುಸತ್ಪುರುಷರು ಮರ್ತ್ಯರಂ ನುಂಗುತ್ತಾ ತ್ರಿಪುರಂಗಳಂನ್ನು ತಿರುಗಿಸುತ್ತಾ ರುಷಿಸಿದ್ದ ಸಾಧ್ಯರು ಮಾಡುವ ತಪಸ್ಸುಗಳಂ ಭಂಗಗೊಳಿಸುತ್ತಾ ಚತುರ್ವಾಣಿ ನಿಜಾಚಾರಗಳಂ ಖಂಡ್ರಿಸುತ್ತಾ ರಾಕ್ಷಸಾಚರಣೆಯಂ ಪ್ರಚುರ ಮಾಡುತ್ತಾ ತ್ರಿಪುರ ದಾನವರಿಗೆ ಸಮಾನವಿಲ್ಲವೆಂಬಂತೆ ಮಹಾದೇವತೆಗಳನ್ನು ಕಾರಾಗೃಹವಂ ಸೇರಿಸಿ ದುರ್ಘಟ ಸಾಧಿಸುತ್ತ ಯಿರಲಿತ್ತ, ಹರಿಹರಾದಿಗಳು ಬ್ರಹ್ಮನ ಸಭೆಗೆ ಮಿಕ್ಕ ದೇವತೆಗಳು ಕೂಡಿ ನಾರದರು ಬಂದು ದೂರಲಿವರ ಕಥೆಯನ್ನು ಕೇಳೆಂದು ಶೌನಕಾದಿಗಳಿಗೆ ಸೂತ ಪೌರಾಣಿಕ ಪೇಳ್ವ ರೀತಿಯಂತೆಂದಡೆ.
Leave A Comment