ವರಾಳಿ ॥॥ಆದಿತಾಳ
ಯಿಂದು ನಿನ್ನಾ ಹೊಂದಿದೆನೋ
ನಂದಾಕಂದನೆ ಬಂದೂ ಯನ್ನಾ
ಮಂದಿರಾದಿ ಹೊಂದು ಬೇಗಾನೆ ॥
ನಾರೀಮಣಿಯರೊಳೂ ವಿರಸಾ
ಮಾಡಾಬ್ಯಾಡೋ ಕೂಡೂ ನಿನ್ನಾ
ದಯದಿ ಯನ್ನೊಳ್ ಕಾಮಕೇಳಿಯೊಳೂ ॥
ಕುಸುಮಳರ ಕೇಳಿಗೆ ವದಗಿ
ಸುಖವ ಪಾಲಿಸೊ ಶ್ರೀಶಾ ಭೀಮೇಶಾ
ನಿನ್ನಾ ದಯದಿ ಪಾಲಿಸೊ ॥
ಮಾಲಿನಿ: ಕಾಂತನೆ ಕೇಳೈ ಪೇಳ್ವೆವು ಭ್ರಾಂತಾವೊ ನಿಮ್ಮ ಮ್ಯಾಲೆ ಯೀರ್ವರು ಯೀಗಳ್ ಯಂತಾದಡಾಗಲೆಮ್ಮನು ಸ್ವಾಂತದಿ ವಡಗೊಂಡು ನಡಿಯೊ ಕೇಶವ ಕೃಷ್ಣಾ.
ಮಾಲಿನಿ: ಶ್ರೀ ಕೃಷ್ಣಾ ಗೋವಿಂದ ನಾರಾಯಣಾ ನಿನ್ನ ಪಾದದರುಶನದಿಂದಾ ಯಿಚ್ಚಾಶಕ್ತಿ ಕಾಮ್ಯಶಕ್ತಿ ಕ್ರಿಯಾಶಕ್ತಿ ವಾಣಿಶಕ್ತಿ ಜ್ಞಾನಶಕ್ತಿ ಯೀ ಪಂಚಶಕ್ತಿಯರು ತೃಪ್ತರಾಗಲು ಪ್ರಾಣ ಮಾನ ಧನವು ತೃಣ ಸಮಾನ. ಯೀ ಪಂಚಪ್ರಾಣಗಳಿಗೆ ನೀನೇ ಪತಿಯೆನಿಸಿ ಅನ್ನಮಯ ಪ್ರಾಣಮಯ ಜ್ಞಾನಮಯ ಆನಂದಮಯ ವಿಜ್ಞಾನಮಯ ಯೀ ಪಂಚಕೋಶಂಗಳು ಸ್ವೀಕರಿಸಿದ ವೇದಾಂತಂಗಳು ನೀನೇ ನಿನ್ನನ್ನು ವರ್ಣಿಸಿ ಪೇಳಲು ನಂಮಿಂದಾ ಸಾಧ್ಯವೇ? ಹೇ ಸ್ವ್ವಾಮಿ ಜನನ ಮರಣಾದಿಗಳಿಗೆ ದೂರನಾಗಿರುವೆ ಯೆಂಬುವ ನಂಬಿಕೆಯು ಸರ್ವ ಸಾಕ್ಷಿಯಾಗಿರುವುದು. ಯೀ ದೈತ್ಯನ ವಶಕ್ಕೆ ನಮ್ಮನ್ನು ಕೊಡದೆ ವಡಗೊಂಡು ನಡಿಯೋ ಪ್ರಾಣದೊಲ್ಲಭಾ ನಿನ್ನ ವಿನಹ ಮುಕ್ತಿ ದುರ್ಲಭಾ.
ಬೇಹಾಗ್ ॥ರೂಪಕ
ಒಲ್ಲೆನೇಳೆ ನಾರಿ ವೈಯ್ಯರಿ ಬಲ್ಲೆನೇಳೆ ನಾರಿ ॥
ಪುಲ್ಲನಯನೆ ನಿಂಮ್ಮಾ ಯಲ್ಲ ಮರ್ಮವನ್ನೂ ॥
ಮದನಕದನಕೆನ್ನಾ ಮುನ್ನಾ ವದಗಿರೆಂಬಿರೆನ್ನಾ
ಸುರತಸುಖವು ನಿಮ್ಮಾ ಕೂಡೆ ಸರ್ವಥಾ ನಾನೊಲ್ಲೆ ನಿಮ್ಮಾ ॥
ಪೊಡವಿಗೊಡೆಯ ರಾಜ ಘಟ್ಟದೊಡೆಯನಾಣೆ
ಹೆಣ್ಣೆ ದ್ರುಡದಿ ನಿಮ್ಮ ನಂಬಲಾರೆ ಬಿಡಿರೆ ಯನ್ನ ಕೂಡೆ ಸರಸಾ ॥
ಬೌದ್ಧ: ಹೇ ನಾರಿಯರಿರಾ, ಯಿಂತಾ ತತ್ವರಹಸ್ಯದ ಮಾತುಗಳನ್ನರುಹುವರು ಹದಿನಾರು ಸಹಸ್ರ ನಾರಿಯರಿರುವರು. ಕೇಳಿ ಕೇಳಿ ಬೇಸರಪಟ್ಟು ಬಂದಿರುವೆ. ನಿಮ್ಮ ಮಾತುಗಳು ಯನ್ನಲ್ಲಿ ವುಸರಬ್ಯಾಡಿರೇ ನಾರೀಮಣಿಗಳಿರಾ.
ಮಾಲಿನಿ: ಹೇ ಮಹಾನುಭಾವಾ, ನೀವು ಯಿಷ್ಟು ವಿಧವಾಗಿ ಭೇದಿಸುವದು ನಮಗೆ ಕ್ಷೇಮವೆ ಸರಿ ಯೆಷ್ಟು ಮಾತ್ರಕ್ಕೂ ನಿಮ್ಮನ್ನು ಬಿಡುವರಲ್ಲ ಆ ಗಂಡಂದಿರನ್ನ ಯಿಂದಿನ ದಿನವೆ ಚೂರ್ಣ ಮಾಡಿ ಭಸ್ಮಕರಿಸು. ನಿಮ್ಮ ಚರಣ ದರುಶನವಾದಮ್ಯಾಲೆ ಆ ಪಾಪಿ ದಾನವರ ದರುಶನವನ್ನು ನಾವು ಮಾಡುವರಲ್ಲಾ ಸುಮ್ಮನೇ ಸಂಕಟವನ್ನಿಡಬ್ಯಾಡಾ ಕೃಷ್ಣಮೂರ್ತಿ ನಡೆಸು ನಿನ್ನಯ ಕೀರುತಿ.
ಕಂದ
ಮೆಚ್ಚಿದೆ ನಿಮ್ಮನು ಮನದಲಿ ನಾಂ ಅಚ್ಚುತಪದ
ಭಕ್ತರೆಂದು ಯಿಚ್ಚೆಯು ಯೀವುದೇ
ಸ್ವಚ್ಚದರಾಗಿ ಯೀರ್ವರು ಮಚ್ಚಾಕ್ಷಿಯರೆ
ಹೊರಡಿರೈ ವೈಕುಂಠಕೀಗಲೆ ಬೇಗಂ ॥
ವಿಷ್ಣು: ಹೇ ಸಖಿಯರಿರಾ, ನಿಮ್ಮ ನಿಜತ್ವವು ಗೊತ್ತಾಯಿತು ಚಿಂತಿಸಬ್ಯಾಡ ಸೌಖ್ಯಾನಂದ ಬ್ರಹ್ಮಾನಂದದಿಂದ ಆನಂದಪದತ್ವಕ್ಕೆ ನೀವು ಸೇರತಕ್ಕವರು. ಆದ್ದರಿಂದ ವೈಕುಂಠಕ್ಕೆ ಪೋಗೋಣ ಬನ್ನಿರೆ ನಾರೀಮಣಿಗಳಿರಾ.
ಮಾಲಿನಿ–ಸುಮಾಲಿನಿ: ತಮ್ಮ ಆಜ್ಞೆ ಪ್ರಕಾರ ಬರುತ್ತಾ ಯಿದ್ದೇವೆ ದಯಮಾಡಿಸಬಹುದೈ ಸ್ವಾಮಿ ಭಕ್ತಜನ ಪ್ರೇಮಿ.
ಮಾಲಿನಿ – ಸುಮಾಲಿನಿ: ಹೇ ತಂಗಿ ದರಿದ್ರರಿಗೆ ಧನ ಸಿಕ್ಕಿದಂತೆ ಒಣಗಿದ ಪೈರು ಚಿಗುರಿದಂತ್ತೆ ಅಂಧಕನಿಗೆ ಕಣ್ಣು ಬಂದಂತೆ, ನಮ್ಮ ಪುಣ್ಯ ಪ್ರಭಾವದಿಂದ ಸ್ವಾಮಿ ಕರುಣಿಸಿದ್ದರಿಂದ ಯಿಂದಿಗೆ ನಾವು ಧನ್ಯರಾದೆವು ತಂಗಿ ಮಂಗಳಾಂಗಿ.
ಅಕ್ಕಾ, ನಮ್ಮ ಭಾಗ್ಯವೆಷ್ಟೆಂದು ಪೇಳೋಣ. ಬ್ರಹ್ಮರುದ್ರಾದಿಗಳಿಗು ಅಸಾಧ್ಯವಾದ ಬೌದ್ಧ ನಾರಾಯಣನ ಕೃಪೆವುಂಟಾಗಿ ನಮ್ಮ ದುಷ್ಟದೈತ್ಯರ ಬಾಧೆ ಹರಿದು ಧನ್ಯರಾದೆವಮ್ಮಾ ಅಕ್ಕಾ. ಅಪ್ಪಾ ಸಾರಥಿ ಯಿಂದಿಗೆ ಶ್ರೀ ಗುರು ಕರುಣದಿಂದ ಧನ್ಯರಾದೆವೋ ಕಂದ.
ಸಂಧಿ ॥ವಚನ
ಯಿಂತು ತ್ರಿಪುರದ ದಾನವರು ವಿಪುಲ ಬಲಾಹವನೊಡ್ಡಿ
ನೊಳು ನಗರತ್ರಯಮಂ ತಿರುಗಿಸುತ ತರುಣಿಯರ ವ್ರತ
ಮಂಕಾಗಿರಲು ಮಾಲಿನಿ ಸುಮಾಲಿನಿಯರು ಶ್ರೀಹರಿ ವ್ರತ
ದೊಳ್ ಸಿಲ್ಕಿ ಕರೆದೊಯ್ಯಲಾ ಮಪ್ಪುರಗಳು ಗಕ್ಕನೆ ನಿಂತಿತಾಕ್ಷಣಂ ॥
ಕಂದ
ಚಿತ್ತದಿ ತಿಳಿಯದೆ ಮೂಢರು ವುತ್ತಮಜರೋಳ್
ವೈರ ಬೆಳೆಸುತಲಿಪ್ಪರ್ ಚಿತ್ತಜನೈಯನು ಮಾಡಿದ ಪರಿ
ಗೊತ್ತಿಲ್ಲದೆ ಮರೆತು ಯಿದ್ದರು ದನುಜರ್ ॥
ರೂಪಕತಾಳ
ಕೇಳಿದೆಯಾ ಮಕರಾಕ್ಷಾ ತಾಳದೆ
ದಿಕ್ಪಾಲಕರಾ ಧಾಳಿ ಮಾಡಿದೆಯಾ ॥ಸಂಪದವಾ ॥
ತಾರಕಾಕ್ಷ: ಭಲೆ ತಮ್ಮಾ ಮಕರಾಕ್ಷ ವಿದ್ಯುನ್ಮಾಲಿಗಳಿರಾ, ದಿಕ್ಪಾಲಕರಂ ಸೆರೆಯಿಡಿದು ಮುನಿಗಳು ಮಾಡುವ ತಪೋ ಯಜ್ಞಾದಿಗಳಂ ಭಂಗ ಮಾಡಿದಿರಾ ನಿಮ್ಮ ಭುಜಭಲ ಶೌರ್ಯಗಳನ್ನು ವರ್ಣಿಸಿರೈಯ್ಯ ಅನುಜರೇ.
ಪದ
ದ್ರುಡಬಲ ಅಗ್ರಜ ನೀನು ನುಡಿ ಕೇಳೆನ್ನಯ
ಹದನಾ ಜಡಮತಿ ವಾಸವನಾ
ಸೆರೆ ಹಿಡಿದೂ ನಾ ಹಿಡಿದೂ ॥
ಪಡದವನಾ ಮಡದಿಯರ ತಂದಿಟ್ಟೆನೊ
ಸೆರೆಮನೆಯಾ ಜಡದಿಯ
ಹದನೊಕ್ಕು ಕುಡಿತೆಯಲೀ ಶೌರ್ಯದಲಿ ॥
ಮಕರಾಕ್ಷ: ಭಲೈ ಅಗ್ರಜ. ಸ್ವರ್ಗಮಂ ಪೊಕ್ಕು ಅಲ್ಲಿದ್ದ ಚಂದ್ರ ಸೂರ್ಯಾದಿಗಳ ದಾರಿಗಟ್ಟಿ , ನಕ್ಷತ್ರಮಂಡಲವಂ ಭೇದಿಸಿದೆನು. ಚತುರ್ದಶ ಭುವನ ಭವಾಂಡ ಮಂಡಲಗಳೋಳ್ ನನಗೆ ಸರಿಯಾದ ಭುಜಬಲಶೌರಿಗಳು ಎಲ್ಲಿಯೂ ಯಿಲ್ಲಾ. ಯಿಂದಿನ ದಿನ ಸ್ವರ್ಗಲೋಕಕ್ಕೆ ಸಾಮ್ರಾಜ್ಯದ ರಾಜನೆಂದು ಜಯಭೇರಿ ಹೊಡಿಸೋ ಅಣೈಯ್ಯ.
ಪದ
ಕೆಣಕಿ ದಿವಿಜಾದಿಗಳಾ ವಡೆದು ತಂದೆನೊ
ಅವರಾ ಸೆರೆಮನೆಯೊಳಗಿಟ್ಟಿಹೆನೊ
ಅಣ್ಣಾ ಕೇಳಣ್ಣಾ ॥
ಮುನಿಗಳ ತಪವನು ಕೆಡಿಸಿ ದೇವತೆಗಳನಳವಡಿಸಿ
ಭೀಮೇಶನೆಂಬುವ ನನಗೆ ಸಿಕ್ಕಿಲ್ಲವಂಣ್ಣಾ ಕೇಳಂಣ್ಣಾ ॥
ವಿದ್ಯುನ್ಮಾಲಿ: ಅಹೋ ಅಂಣೈಯ್ಯ, ನಿನ್ನಾಜ್ಞೆ ಪ್ರಕಾರ ಪೋಗಿ ಗಾಂಧರ್ವ ನಾಯಕಿಯರನ್ನು ಬಂಧಿಸಿದೆ, ಮುನಿಗಳ ತಪೋಭಂಗವಂ ಮಾಡಿದೆ, ತದ್ವನಿತಾಮಣಿಯರಂ ಗೋಳಾಡಿಸಿದೆ ಮುನಿವಟುಗಳಂ ಓಡಿಸಿದೆ. ಯಿಂತಪ್ಪ ಕಾರ್ಯಗಳು ಅನೇಕವಾಗಿ ಮಾಡಿದೆ. ಭೀಮೇಶನೆಂಬುವನ ಯೆಲ್ಲಿ ವುಡುಕಿದರೂ ಸಿಕ್ಕಲಿಲ್ಲಾ. ಅವನು ಸಿಕ್ಕಿದರೆ ಕಾರಾಗೃಹದಲ್ಲಿರಿಸಬೇಕು ತರುವಾಯ ತಮಗೆ ಯಾವ ಭಯವೂ ಯಿಲ್ಲವೋ ಅಣ್ಣಾ ದನುಜಾಗ್ರಗಣ್ಯ.
ಸಂಧಿ ವಚನ ॥ರಾಗ
ಅದ್ಭುತ ಭೂರಥವೇರಿ ಮೇರುಧನುವಿಗೆ ನಾರಾಯಣಾಸ್ತ್ರಮಂ ಹೂಡಿ ಪುರತ್ರಯಗಳ ವುರುಳಿಸಬೇಕೆನುತ ದ್ರಿಷ್ಟಿಯಿಟ್ಟರು. ಯೀಶನ ದ್ರಿಷ್ಟಿಗೆ ಮುಪ್ಪುರಂಗಳು ಕಾಣದೆ ತಿರುಗುತ್ತಲಿದ್ದವು ದಿಕ್ಕು ದಿಕ್ಕುಗಳಂ ದಿವ್ಯ ಸಹಾಸ್ರಾಬ್ದವಾದುದು. ಯೀಶನಕ್ಷಿಗಳಿಂದ ಬಂದ ಬಿಂದುಗಳು ರುದ್ರಾಕ್ಷಿಗಳಾದವು ಮೇರು ಧನು ಬಿಗಿದು ಬಿಲ್ವವೃಕ್ಷವೆನಿತು ಮಹಾಲಿಂಗ ಪೂಜೆಗಿದು ಯೋಗ್ಯಮಾದುದು ಯೆನುತಾ ಮುದದಿಂದ ಸದಾಶಿವನೆನಲ್ ಯಿತ್ತ ತ್ರಿಪುರ ದಾನವರ ಬಳಿಗೆ ಬ್ರಹ್ಮ ಚಾರಂ ಬಂದನೂ.
(ನಾರದರು ತ್ರಿಪುರಕ್ಕೆ ಬರುವರು)
ದೂರ್ಜಟಿಯ ತೆರನಂತೆ ಜಡೆಗಳೆಲ್ಲವ ಕೆದರಿ ತ್ರಿಜಗವ ಪಾವನ ಭಸಿತ ಶರೀರವೆಲ್ಲವು ಪೂಸಿ ನಾಗಬೆತ್ತವು ಕರದಿ ಯೋಗದಂಡವನು ಕರದೊಳಗೆ ರುದ್ರಾಕ್ಷಿ ಜಪಮಾಲೆಸರವೂ ಹಣೆಯೊಳು ಕ್ರಿಷ್ಣಾಂಜನವ ತಾನು ಧರಿಸಿ ಮಹದೇವ ಧ್ಯಾನವನು ಮನದಿ ಮಾಡುತ್ತಾ ನಾರದ ಮಹಾಋಷಿ ನಲಿಯುತ್ತ ಬಂದಂ.
ನಾರದ: ಯಲಾ ಪಾಪಿಗಳಿರಾ ಯಿಷ್ಟು ಅಹಂಕಾರ ಬಂತೆ. ಒಳಿತಾಯಿತು. ಧಾವಲೋಕದಲ್ಲಿಯೂ ಯಿಷ್ಟು ಅನಾದರಣೆ ಯಿಲ್ಲವಲ್ಲಾ. ಕೆಡುವ ಕಾಲಕ್ಕೆ ಕೆಟ್ಟಬುದ್ಧಿಯೆಂಬ ಗಾದೆ ಸರಿಯಾಗಿದೆ. ಆಗಲಿ ನಾನೇ ಮಾತನಾಡಿಸುತ್ತೆನೆ. ಯಲಾ ಅಪ್ಪಯ್ಯ ಸಾರಥಿ ನೀನು ಮಾತ್ರ ತುಂಬಾ ಅನುಭವದಾರ ಚನ್ನಾಗಿ ತಿಳಿದಿರಲಿ ನಂತರಾ ನಿನಗೆ ತಿಳಿಸಿಹೋಗುತ್ತೇನೆ ನೆಪ್ಪಿರಲಿ.
ಅಪ್ಪಾ ದಾನವರಾಜ- ತಾರಕಾಕ್ಷ ಯಲ್ಲಾ ಕ್ಷೇಮವೇ, ನಿಮ್ಮ ಪುರತ್ರಯಂಗಳು ಕ್ಷೇಮವಾಗಿರು ವುದೇನೈಯ್ಯ – ಮಹಾರಾಜನೇ,
ತಾರಕಾಕ್ಷ: ಹೇ ಸ್ವಾಮಿ ನಾರದರೆ, ದಿಗ್ವಿಜಯ ಮಾಡಿದಿರಾ ಬನ್ನಿ ನಿಮ್ಮ ಅನುಗ್ರಹದಿಂದ ಯಾವತ್ತೂ ಕ್ಷೇಮವಿದ್ದು ನಿರ್ಭಯನಾಗಿ ಲೋಕಪಾಲಕನಾಗಿರುವೆ. ನನ್ನ ಪಟ್ಟಣದ ಸುದ್ದಿ ನವೀನ ವರ್ತಮಾನವೇನಾದರು ಯಿದ್ದರೆ ಪೇಳಬೇಕೊ ಸ್ವಾಮಿ ನಾರದರೇ.
ಅಟತಾಳ
ಏನಾ ಪೇಳಾಲೊ ನಾನು ದಾನವಾಗ್ರಣಿಯೆ
ಕೇಳ್ ನಿನ್ನ ಸಮ ಭುವಿಯೊಳಗಿಲ್ಲಾ ಯಾರಿಲ್ಲಾ ॥
ನಾರದ: ಅಯ್ಯ ತಾರಕಾಕ್ಷ ಭೂಪಾಲಾ, ಯೀರೇಳು ಲೋಕದೊಳಗಾಗಿ ನಿನ್ನ ಸಮಾನ ದಾರನ್ನು ಕಾಣಲಿಲ್ಲಾ. ಆದರೆ ಯೀಗ ವೊಂದು ವಿಚಾರ ವುಟ್ಟಿದೆ ಹೇಳಲೂಬಹುದು ಹೇಳಲೂಬಾರದು. ಕಂಡ ಮಾತೇಳಿದರೆ ಕಷ್ಟ ಹೇಳದೆ ಇದ್ದರೆ ನಷ್ಟಾ. ತಾಳ್ಮೆಯಿಂದಾ ಕೇಳಿದರೆ ಬಿತ್ತರಿಸುವೆನೋ ರಾಜ.
ತಾರಕಾಕ್ಷ: ಅಂಥ ಕಷ್ಟನಷ್ಟಗಳು ಯೇನೇನಿರುವವು. ಭಲೆ ತಮ್ಮಗಳಿರಾ ಕೇಳಿದಿರಾ ಜಾಗ್ರತೆ ಪೇಳೈ ನಾರದರುಷಿಯೇ.
ನಾರದ: ಅಪ್ಪಾ ತಾರಕಾಕ್ಷ, ಗಾಬರಿಪಡಬ್ಯಾಡಾ ನಿಧಾನಿಸು. ನನ್ನ ಮಾತನ್ನು ಮನಸಿಟ್ಟು ಕೇಳು ಮಿಟ್ಟು ಬೀಳಬ್ಯಾಡ ಲಾಲಿಸೂ.
ಪದ
ಅಟ್ಟಹಾಸವಿದೆಂದೂ ಮಿಟ್ಟಾ ಬೀಳಲಿ ಬ್ಯಾಡಾ
ಸೃಷ್ಟಿಯೊಳವಮಾನ ಬಂತೊ ನಿನಿಗೆ ಸಂತೊ ॥
ತಟ್ಟಿಸಿ ನೀನೀಗ ಥಟ್ಟಿಸಿ ಅಳಲಿ
ಬ್ಯಾಡಾ ದಿಟ್ಟಾನೆ ಯೋಚಿಸು ಮನದಿ ನಿನ್ನ ಮನದೀ ॥
ನಾರದ: ಅಪ್ಪಾ ತಾರಕಾಕ್ಷ ಬ್ಯಾಸರಬ್ಯಾಡಾ. ಲಾಲಿಸು. ಪರಾಕ್ರಮಶಾಲಿಯಾದ ನಿನಗೆ ಧಾವ ಭಯವೇನಿರುವುದೂ. ಆದರೆ ಈಗ ನಿನಗೊಂದವಮಾನ ಬಂದಿದೇ ಪೇಳುವೆನು ಕೇಳು. ಕೋಪ ಮಾಡಬ್ಯಾಡಾ ತಾಳ್ಮೆ ತಂದು ಮನದಲ್ಲಿ ಯೋಚಿಸೋ ದಾನವ ಭೂಪಾಲ.
ಪದ
ಅರಸನಾ ಸತಿಗಾಳಾದರ ಮಾಡಿದರೆಂದು
ಭೂಮಿಯೊಳವಮಾನಾ ನಿನಗೆ ಬಂತೊ ಕೊನೆಗೆ ॥
ಅಂತರ್ಧಾನದೊಳಿಹಾ ಮುಪ್ಪುರಿಯೊ ಪತಿ
ವ್ರತೆಯರಾ ಭೀಮೇಶಾ ಬಂತೊ ನಾಶಾ ॥
ನಾರದ: ಅಪ್ಪಾ ದಾನವೇಂದ್ರಾ ನಿನ್ನ ಪಂಥ ಕೆಟ್ಟಿತಲ್ಲೊ ಗುಣಸಾಂದ್ರಾ ತಾರಕಾಕ್ಷ ಕೇಳೂ. ನೆನ್ನೆ ದಿವಸಾ ನಿಮ್ಮ ಪುರತ್ರಯಕ್ಕೆ ವಿಷ್ಣುವೆಂಬುವನು ಬಂದು ಕಳ್ಳತನದಿಂದ ವಳವೊಕ್ಕು ನಿಮ್ಮ ಹಾಳು ಮಾಡಿದನಲ್ಲಪ್ಪಾ ಮಗನೆ ಕೋಪಮಾಡಬ್ಯಾಡ ನಿಧಾನಿಸೊ. ಆ ನಾರಾಯಣನು ನಿನ್ನ ಸತಿಯರ ವ್ರತಭಂಗ ಮಾಡಿ ಯಿಬ್ಬರನ್ನು ಕೈಯಿಡಿದುಕೊಂಡು ಹೋಗುತ್ತಿದ್ದಾ. ಈ ನಾರಿಯರ್ಯಾರೆಂದು ನಾನು ಕೇಳಿದೆ, ಆ ಗೋಪಾಲನೆಂಬುವನು ಪೇಳಿದಾ ನಾನೇನೆಂದು ಪೇಳಲೊ ತಾರಕಾಕ್ಷ. ಯಿವರು ತ್ರಿಪುರ ನಾರಿಯರು ಗಂಡನ್ನ ವಲ್ಲೆವೆಂದು ಸಂತೋಷದಿಂದ ನನ್ನೊಡನೆ ಬರುತ್ತಿದ್ದಾರೆ. ನಾನೇನು ಹೇಳಲಿ ನನ್ನ ಹೊಟ್ಟೆ ಯಲ್ಲಾ ವುರಿಯುತ್ತೆ. ಅವನ ಧೈರ್ಯ ಯೆಷ್ಟೆಂದು ವರ್ಣಿಸಲಿ, ನಾನು ನೋಡಲಾರೆ. ಕೇಳಲಾರೆ ಯೇನು ಮಾಡಲಿ ನೀನು ಬುದ್ದಿವಂತನಾಗಿದ್ದರೆ ಮೊದಲೇ ತ್ರಿಮೂರ್ತಿಗಳೆಂಬುವರನ್ನು ಬಂಧಿಸಬೇಕಾಗಿತ್ತು. ಆ ವನಿತಾಮಣಿಯರ ಪತಿವ್ರತಾಭಾವದಿಂದ ತ್ರಿಪುರಂಗಳು ಚಕ್ರಪ್ರದವಾಗಿ ತಿರುಗುತ್ತಾ ಯಿದ್ದವು. ಇಂಥಾ ಐಶ್ವರ್ಯ ಕಳಕೊಂಡಿರಾ ಮಕ್ಕಳಿರಾ, ಮೂರು ಮೂರ್ತಿಗಳನ್ನು ಜೀವದಿಂದ್ಯಾಕೆ ಬಿಟ್ಟಿರಿ ಗಾಬರಿಪಡಬ್ಯಾಡಿರೀ ನಿಧಾನವಾಗಿ ಲಾಲಿಸಿ.
ಪದ
ಭೂಪಾ ಕೋಪಿಸಬ್ಯಾಡಾ ನೀ ಪರೀಕ್ಷಿಸೊ
ರಾಜಾ ತಾಪಸೋತ್ತಮರ ವಾಕ್ಯವನೂ ॥ಕೇಳು ನೀನೂ ॥
ಯೀ ಪರಿ ಮಾತಿದು ಸುಳ್ಳೊ ನಿಜವೆಂಬುದ
ನಿರ್ಧರಿಸಿ ನೋಡೈಯ್ಯ ಭೂಪಾ ಬಿಡು ಕೋಪಾ ॥
ನಾರದ: ಅಪ್ಪಾ ದಾನವರಾಜಾ ಕೋಪಮಾಡಿ ಪ್ರಯೋಜನವಿಲ್ಲ. ಕಾರ್ಯಭಾಗದಲ್ಲಿ ಕೋಪವಿರಬಾರದೆಂದು ಪ್ರಮಾಣವಿದೆ. ನಾನು ಹೇಳಿದ ಮಾತು ಸುಳ್ಳೊ ನಿಜವೊ ನಿರ್ಧರಿಸಿ ನೋಡಿ ತಕ್ಕ ಯೋಚನೆ ಮಾಡಿ ಕಾರ್ಯಕ್ಕೆ ಅಣಿಹೂಡಿ ನೀನು ನಿನ್ನನುಜರು ಕೂಡಿ ಹಿಂದಿನಂತೆ ಕಾರ್ಯಗಳು ಮಾಡಿ ಲೋಕ ಪ್ರಖ್ಯಾತಿಪಡಿ. ಯೀಗ ಯಾತಕ್ಕೆ ಬರೇ ಮಾತನಾಡುವುದು.
ಪದಾ
ಸುರರು ಮಾಡುವಂತಾ ಪರಿಯಾ
ಪೇಳುವೆ ಕೇಳು ಭೂಮಿಯೆ
ರಥಮಾಡಿ ಬರುವಾ ಭೀಮೇಶಾ ಲೋಕೇಶಾ ॥
ತಕ್ಕ ಯೋಚನೆಯನು ಘಕ್ಕಾನೆ ಮಾಡಿಕೊ
ಠಕ್ಕಿನ ಮಾತಲ್ಲಾ ಅಕ್ಕರದಿ ಪೇಳ್ವೆ ನಾ ಪೇಳ್ವೆ ॥
ನಾರದ: ಅಪ್ಪಾ ತಾರಕಾಕ್ಷ. ದೇವೇಂದ್ರನ್ನ ನೀವು ಸೆರೆಯಾಗಿ ತಂದ ಮ್ಯಾಲೆ ದೇವತೆಗಳೆಲ್ಲಾ ತ್ರಿಮೂರ್ತಿಗಳ ಬಳಿಗೆ ಪೋಗಿ ಅವರಿಗೆ ನೀವು ಕೊಟ್ಟ ಕಷ್ಟಗಳೆಲ್ಲಾ ಹೇಳಿದ್ದರ ಮ್ಯಾಲೆ ಮೃಢನೆಂಬುವನು ಕರುಣಿಸಿ ಬ್ರಹ್ಮನ ಕರೆಸಿ ನಿಮ್ಮ ವರಗಳ ಸಂದರ್ಭವೆಲ್ಲ ವಿಚಾರಿಸಿ ಕೃಷ್ಣನಂ ಕರೆದು ತ್ರಿಪುರ ಸಂಹಾರಕ್ಕೆ ಯೇನು ಯೋಚನೆ ಪೇಳುತ್ತೀಯಾ ಎನಲೂ, ಅದಕ್ಕೆ ಆ ಪಾಪಿ ಕೃಷ್ಣನು ಪೇಳಿದ ಮಾತು ಏನಂಥ ಹೇಳಲೈ ತಾರಕಾಕ್ಷ. ಅವನ ಅಟ್ಟಹಾಸ ಎಷ್ಟೆಂದು ಹೇಳಲಪ್ಪಾ ಮಕ್ಕಳಿರಾ ಅಯ್ಯೋ ನನ್ನ ಹೊಟ್ಟೆವುರಿಯುವದೇ. ಆದರೂ ಆಗಲಿ ಅವರ ಸಂದರ್ಭವೆಲ್ಲಾ ಬಿತ್ತರಿಸುವೆನು. ನೀವು ನಮ್ಮವರು ಕೇಳಿರಿ. ಭೂಮಿಯೆ ರಥ ಮೇರುವೆ ಧನುಸ್ಸು ನಾರಾಯಣವೇ ನಾರಾಚ ಶಸ್ತ್ರ ಸೂರ್ಯ ಚಂದ್ರರೇ ಗಾಲಿಗಳು. ಮಿಕ್ಕಾದ ನಿರ್ಜರ ನಿಕರವೆಲ್ಲಾ ಯಿದಕ್ಕೆ ಅಂಗಗಳು. ಯೀ ರೀತಿ ಮಾಡಿ ಬೌದ್ಧ ದೇವರನ್ನ ಕಳುಹಿಸಿ ನಿನ್ನ ಸತಿಗಳ ವ್ರತಭಂಗಾ ಮಾಡಿಸಿರುತ್ತಾರೆ. ಯೆಷ್ಟಾದರೂ ನೀವು ಹುಡುಗರು ತಿಳಿಯದು. ನಾರದರು ಯಿದ್ದೂ ತಿಳಿಸದೆ ಹೋದರೆಂಬ ಅಪವಾದ ಮಾಡುವರೆಂದು ತಿಳಿಸಿದ್ದೇನೆ. ಯಿದಕ್ಕೆ ತಕ್ಕ ಯೋಚನೆಯೇನೋ ಜಾಗ್ರತೆ ಮಾಡುವುದೊಳ್ಳೆಯದು.
ವರಾಳಿ ॥ರೂಪಕ
ಮೋಸವಾಯಿತೈಯ್ಯ ತಮ್ಮಾ ಸೂಸುವಾದೇನುಂಟು ಯಿನ್ನು
ನಾಯಕಿಯರ ಪಾಪಿ ಮೋಸದಿಂದ ಕದ್ದಯ್ಯಲೇ ॥
ಮೋಸಮಾಡಿದನು ನಮಗೆ ವಾಸುದೇವನೆಂಬುವನು
ಘಾಸಿ ಬಂದಂತೆ ತೋರ್ಪುದು ಸೂಸುವಾದೆನೆಂದು ನಾನೂ ॥
ದಿಟ್ಟದಿಂದ ರಾಜಘಟ್ಟ ದೊಡೆಯ ಭೀಮೇಶನು ನಮ್ಮಾ
ಅಟ್ಟಾಹಾಸ ನೋಡದೆ ತಾ ಮಟ್ಟು ಮೀರಿ ಕೊಂಡೊಯ್ದನಂತೆ ॥
ತಾರಕಾಕ್ಷ: ಹರಹರಾ ಶಿವಶಿವಾ ಯೇನು ಮೋಸವಾಯಿತೊ ತಮ್ಮಗಳಿರಾ, ಇಂಥ ವರ್ತಮಾನ ಯಿನ್ಯಾರಾದರೂ ನಮಗೆ ತಿಳಿಸಾರೋ ಹೇಳಿ. ಯಲೈ ತಮ್ಮಗಳಿರಾ ನಾವು ಯೀ ಪುರಂಗಳು ಬಿಟ್ಟು ನಮ್ಮ ಮನೋಮಾಯದಿಂದ ಸೂಕರಿಸಿ ಕುಂಭಿಣಿ ಶಕ್ತಿಯಂ ಪೂಜಿಸಿ ವಶಕರಿಸಿದರೇ ತ್ರಿಮೂರ್ತಿಗಳನ್ನು ವೊಂದೇ ಕ್ಷಣದಲ್ಲಿ ಗೆಲ್ಲುತ್ತೇವೆ. ಯಲಯಲಾ ವಿಷ್ಣುವೆಂಬ ಅಧಮನು ಬಂದು ನಮ್ಮ ಸತಿಗಳನ್ನು ಮೋಸಮಾಡಿ ಕರದುಕೊಂಡು ಹೋದನಂತೆ. ಅಯ್ಯೋ ಆ ವ್ಯಾಳೆಯಲ್ಲಿ ನಮ್ಮ ಕೈಗೆ ಸಿಕ್ಕಿದ್ದರೆ ರಣರಂಗದ ನೆರಳಲ್ಲಿ ಮಲಗಿಸುತ್ತಾ ಯಿದ್ದೆ ಆದಾಗ್ಯೂ ಚಿಂತೆಯಿಲ್ಲಾ ತಪ್ಪಿದ ಮ್ಯಾಲೆ ಮಾಡುವದೇನು ಆಗಲಿ.
ಆದಿತಾಳ
ಅಗ್ರಜನೆ ಲಾಲಿಸೀಗ ಚಿಂತೆ ಮಾಡ
ಬ್ಯಾಡ ನೀನು ವಿಷ್ಣು ಯಂಬೊ ಅಧ
ಮನನ್ನು ಕುಟ್ಟಿ ಕೆಡಹುವೆನೊ ॥
ಯಿದ್ದಿದ್ದೂ ಚಿಂತೆಯೂ ನೀನು ಮಾಡ
ಬಹುದೆ ನಮ್ಮ ಮುಂದೆ ವದ್ದು ಗುದ್ದಿ
ಬರುವೆ ನಾನು ಬದ್ದದಿಂದಲಿ॥ ॥
ವಿದ್ಯುನ್ಮಾಲಿ: ಭಲೆ ಅಗ್ರಜಾ, ಯಿದು ಧಾವ ಘನವಾದ ಕಾರ್ಯವೆಂದು ಯೋಚಿಸುತ್ತಾ ಇದ್ದಿ. ವಿಷ್ಣು ಅಂದರೇನು ಗಿಷ್ಣು ಅಂದರೇನು ಭಲೆ ಧಿಗ್ಬಲೆ ಛೆ ಬಿಡು ಯೀ ಕ್ಷಣವೆ ಹೋಗಿ ಅಧಮನಾದ ವಿಷ್ಣುವನ್ನು ಹಿಡಿದು ಯಡೆಮುರಿಗಟ್ಟಿ ಎಳತರುತ್ತೇನೆ. ಶೀಘ್ರದಿಂದ ನೇಮವನ್ನು ಕೊಟ್ಟು ಕಳುಹಿಸೋ ಅಂಣೈಯ್ಯ.
ಮಕರಾಕ್ಷ: ಭಲೆ ಅಣೈಯ್ಯ ಮದ್ದು ಮುಂಡೇವಾದ ಮೂರು ಮೂರ್ತಿಗಳಿಗೆ ಬದ್ಧವಾದ ನಿನ್ನಂಥ ಶುದ್ಧಪರಾಕ್ರಮಿ ಚಿಂತೆ ಮಾಡುವರೇ, ಯೀ ಕ್ಷಣಾ ಹತಗೈದು ಬರುವೆ. ಯಲೈ ಸೇನಾಧ್ಯಕ್ಷನೆ ಸೈನ್ಯದೊಡನೆ ಸಿಂಹನಾದ ಮಾಡಿಸು ಜಾಗ್ರತೆ – ಜಾಗ್ರತೆ.
ಗೌಳ ॥ರೂಪಕ
ತಮ್ಮಗಳಿರ ಕೇಳಿರೋ ಯನ್ನ ಮಾತನೂ
ಭೂಮ್ಯಾಂತರಿಕ್ಷ ಯರಡು ಭಾಗ ಮಾಡಿರೋ ॥
ಬ್ರಹ್ಮನೆಂಬ ಅಧಮನನ್ನು ಕುಟ್ಟಿ ಕೆಡಹಿರೋ
ಮೃಢನು ಎಂಬ ಜಡಮತಿಯನು ಒದ್ದು ಕೆಡಹಿರೊ ॥
ತಾರಕಾಕ್ಷ: ಯಲೈ ಅನುಜರೆ, ಮೃಢನೆಂಬ ಅಧಮನನ್ನು ಒಡೆಯನೆಂದಿದ್ದರೆ ನಮಗೆ ಶತೃತ್ವವಂ ಧರಿಸಬಹುದೆ. ಯಡೆಬಿಡದೆ ಅವನ ಹಿಡಿದು ತಡಬಡವಿಲ್ಲದೆ ಕಡಿದು ಬನ್ನಿರೋ ತಮ್ಮಗಳಿರಾ.
ಯಲೈ ತಮ್ಮಾ ಮಕರಾಕ್ಷ ಯಲೈ ವಿದ್ಯುನ್ಮಾಲಿ, ಯೀ ವ್ಯಾಳೆಯಲ್ಲಿ ನೋಡಿದರೆ ಕಾರ್ಯಭಾಗದಲ್ಲಿ ಮೋಸ ಬಂದ ಹಾಗೆ ಕಾಣುತ್ತದಾದ್ದರಿಂದ ನಮ್ಮ ಯಿಚ್ಛೆ ಬಂದ ಸ್ಥಳಕ್ಕೆ ಹೋಗಿ ಕುಂಭಿಣೀಶಕ್ತಿಯನ್ನು ಪೂಜಿಸಿ ವರವನ್ನು ಪಡೆದು ಬರೋಣ ನಡಿಯಿರಪ್ಪಾ ತಮ್ಮಗಳಿರಾ.
ನಾರದ: ಅಪ್ಪಾ ತಾರಕಾಕ್ಷ ಬಿತ್ತರಿಸುತ್ತೇನೆ ಲಾಲಿಸುವಂಥವರಾಗಿರಿ.
ನಾರದರ ॥ಪದ
ಚಿಂತೆಯ ಮಾಡದಿರು ದಾನವೇಂದ್ರನೆ
ಕೇಳು ಪೇಳುವೆನಿದರಾ ಸಂಗತಿಯಾ ಸಂಗತಿಯಾ ॥
ಪೊಡವಿಗೊಡೆಯನಾದ ಭೀಮೇಶನೆಂಬುವನಾ
ಗೆಲ್ಲುವದೇನು ಅಬ್ಬರವೊ ನಿಬ್ಬರವೋ ॥
ನಾರದ: ಅಪ್ಪಾ ತಾರಕಾಕ್ಷ, ಯೀ ತ್ರಿಪುರಂಗಳು ಬಿಟ್ಟು ನೀವು ಯೆಲ್ಲಿಯೂ ಹೋಗಬ್ಯಾಡಿ. ಯೀ ವ್ಯಾಳೆಯಲ್ಲಿ ತ್ರಿಮೂರ್ತಿಗಳ ಜಯಿಸುವ ವುಪಾಯವಂ ಹೇಳಿ ಕೊಡುತ್ತೇನೆ. ನನ್ನ ಮಾತು ನಿಮಗೆ ನಂಬಿಕೆಯಿದ್ದರೆ ಕೇಳಿ. ಅಪ್ಪಾ ತಾರಕಾಕ್ಷ ನಿಮ್ಮ ಸಾಮರ್ಥ್ಯ ಯೀಶನಲ್ಲಿ ವರ್ಣಿಸಲೂ ಮೂರು ದಿನಾ ಸಾವಕಾಶ ಮಾಡಿ ಪೇಳುತ್ತೇನೆ. ಯೀ ಮೂರು ದಿನದ ಒಳಗಾಗಿ ನಿಮ್ಮ ಕುಂಭಿಣಿದೇವಿಯನ್ನು ಒಲಿಸಿಕೊಂಡು ವರವನ್ನೂ ಪಡೆದುಕೊಳ್ಳಿರಿ. ನಂತರಾ ಭೀಮೇಶನ ಗೆಲ್ಲುವುದು ಯೇನೂ ತಡವಿಲ್ಲಾ ಯಿಲ್ಲೇ ತ್ರಿಪುರದಲ್ಲಿದ್ದುಕೊಂಡು ಜಾಗ್ರತೆ ವರವನ್ನು ಪಡೆಯಿರಿ ಮಕ್ಕಳಿರಾ.
ತಾರಕಾಕ್ಷ: ಅಪ್ಪಣೆ ಸ್ವಾಮಿ ನಾರದರೇ, ನಿಮ್ಮ ವಿನಹ ನಾನು ಮತ್ಯಾರನ್ನು ನಂಬಲಿಲ್ಲ. ನಿಮ್ಮನ್ನೆ ನಂಬಿರುವೆನೋ ಸ್ವಾಮಿ ಋಷಿವರ್ಯನೆ.
ನಾರದ: ಏನಪ್ಪಾ ಸಾರಥಿ ಮೊದಲು ನಾನು ಬಂದಾಗ ಮಾತೇ ಆಡದೆ ಮರಿಯಾದೆ ಮಾಡಿದ ಮುಂಡೇಗಂಡ ಯಿವನು ಯಿನ್ನೆಷ್ಟು ಮಟ್ಟಗೆ ನಾನು ಸಹಾಯ ಮಾಡಬೇಕು. ಯಿವನಿಗೆ ನೀನಾದರು ಹೇಳು.
ನಾರದ: ನಮೋನ್ನಮೋ ಯೀಶಾ ಸಕಲ ಲೋಕೇಶಾ.
ಈಶ್ವರ: ಸುಖೀಭವಾ ಸುಖೀಭವಾ ಬನ್ನಿರೈ ನಾರದ ಮಹಾರುಷಿಗಳೇ.
ನಾರದ: ಹೇ ಪಾರ್ವತಿನಾಥಾ ಹೇ ನಾರಾಯಣಾ ತ್ರಿಪುರಾಸುರರ ಬಳಿಗೆ ಹೋಗಿದ್ದೆ. ಅವರ ಸಂದರ್ಭವೆಲ್ಲ ತಿಳಿದು ಬಂದಿರುವೆನು. ಆ ದುಷ್ಟರಿಗೆ ಮೂರು ದಿನದ ಮಟ್ಟಿಗೆ ವಾಯಿದೆ ಮಾಡಿ ಬಂದಿರುವೆನು. ಹ್ಯಾಗಂದರೆ ಕೇಳಿ ವಿವರಿಸುತ್ತೇನೆ. ಈ ಮೂರು ದಿನಾ ಅದೇ ಪುರಗಳಲ್ಲಿ ಇದ್ದುಕೊಂಡು ನಿಮ್ಮ ಕುಲಾಚಾರ ರೀತಿ ಕುಂಭಿಣಿ ಶಕ್ತಿಯನ್ನು ಪೂಜಿಸಿ ವರವನ್ನು ಪಡೆಯಿರಿ ಎಂದು ನಿರ್ಧರಿಸಿ ಬಂದಿರುತ್ತೇನೆ. ಆ ಪಾಪಿಗಳು ಶಕ್ತಿ ವರವನ್ನು ಪಡೆದ ಮ್ಯಾಲೆ ನಿಮ್ಮಂಥ ತ್ರಿಮೂರ್ತಿಗಳು ತೊಂಬತ್ತಾರು ಬಂದರೂ ಅವರನ್ನು ಜೈಸುವದಕ್ಕಾಗುವದಿಲ್ಲಾ. ಆದ್ದರಿಂದ ಈಗ ಅವರಿಗೆ ಬ್ರಹ್ಮ ಕೊಟ್ಟ ವರವೆ ನಮ್ಮನ್ನೆಲ್ಲಾ ಸಾಕು ಸಾಕು ಮಾಡಿಸುತ್ತದೆ. ಆಲಸ್ಯ ಮಾಡದೆ ಜಾಗ್ರತೆ ತ್ರಿಪುರಕ್ಕೆ ಮುತ್ತಿಗೆ ಹಾಕಬೇಕೋ ದೇವಾ ಮಹಾನುಭಾವಾ.
ಈಶ್ವರ: ಯಲೈ ನಾರದಮಹಾರುಷಿಗಳೆ ಬಹಳ ಸಂತೋಷ. ತ್ರಿಪುರ ಸಂಹಾರ ಮಾಡಿ ಭಕ್ತರ ಸಂತಾಪ ನಿವಾರಣೆಗೈಸುವೆ ಜಗದುತ್ಪತ್ತಿ ಸಂತೋಷಸಾಗರಕ್ಕೆ ಶಿವಪ್ರತಾಪ ಪ್ರಭಾವ ಚಂದ್ರಾದಂಡಮಂ ನೀಡುವೆ ಮುನೀಂದ್ರ ಸದ್ಗುಣ ಸಾಂದ್ರ.
ಸಂಧಿ ॥ವಚನಾ
ಇಂತು ತ್ರಿಪುರದಿಂದ ನಾರದರು ಬಂದು ಮಹಾದೇವನೊಳು ಪೇಳಲೂ ಸದಾಶಿವನು ಯುದ್ಧಕ್ಕೆ ಸನ್ನದ್ಧನಾದ ಪರಿಯಂತೆಂದರೆ ॥
(ಯುದ್ಧ ಪ್ರಾರಂಭ)
ಚಾಪ್ ॥ರೂಪಕ ತಾಳ
ನಿಲ್ಲೊ ನಿಲ್ಲೊ ನಿಲ್ಲೊ ನಿಲ್ಲೊ ಯುದ್ಧಕೀಗ
ನಾಂ ಬಂದಿರುವೇ ನೊಡೊ ರಕ್ಕಸ ಬದ್ದವಾಗಿ ನಾಂ ॥
ಕೇಡು ದಾನವ ಯನ್ನ ಕೂಡೆ ಮಾಡು ಯುದ್ಧವಂ
ಪೊಡವಿಯೊಳಗೆ ನಿನ್ನ ಹೂಳಿಟ್ಟು ಪೋಗುವೇ ॥
ಬೇಗದಿಂದ ಬಾರೊ ಪಾಪಿ ನಿಲ್ಲದೀಗ ನೀಂ
ಸಾರಿಬಂದರೀಗ ನಿನ್ನ ಮರಣಗೈಸುವೆಂ ॥
ಈಶ್ವರ: ಯಲೈ ಸುರ ಯಕ್ಷ ಸಿದ್ದಸಾದ್ಯ ಗರುಡ ಗಂಧರ್ವ ಪ್ರಮಥಗಣಾದಿಗಳಿರಾ ಬಿತ್ತರದ ತ್ರಿಪುರದ ಸುತ್ತ ಮುತ್ತಿಗೆ ಹಾಕಿರಿ. ನಿಮ್ಮ ನಿಮ್ಮ ಭುಜಬಲಾಟೋಪದಿಂದ ಧನುವಿನೊಳ್ ಬಾಣಗಳಂ ಸೇರಿಸಿ ಅರ್ತಿ ಪ್ರಯೋಗವಂ ಮಾಡಿರಿ. ಯುದ್ಧಕ್ಕೆ ನಾನೇ ಬರುತ್ತೇನೆ. ಸದ್ಯಕ್ಕೆ ಬ್ರಹ್ಮನ ವರವಂ ನಂಬಿ ನಿರ್ಜರರ ಧಾಳಿ ಮಾಡುವ ಮೂಢರ್ಯಾರ್ಯಾರೊ ಬನ್ನಿರೋ ಭ್ರಷ್ಟರೇ. ನಿಮ್ಮಗಳ ಕಡಿಯುವ ಕಾರಣಕ್ಕೆ ನಾನೇ ಬಂದಿರುವೆನು. ಆಯುಧಪಾಣಿಗಳಾಗಿ ಬನ್ನಿರೊ ರಾಕ್ಷಸಾಧಮರೆ.
ಕಂದ
ಧಡ ಧಡ ಯನ್ನುತ ಬಡ ಬಡ ಬಡನೆಂದು
ರಥವು ಬರುತಿದೆ ನೋಡೈ ಹಿಡಿಯಿರೊ
ಅವರಂ ಬಿಡದಲೆ ಕಡಿದಿಡಿರೋ ಮೃಢ
ನೆಂಬೊ ಜಡಮತಿ ಬಂದಿರುವಂ ॥
ತಾರಕಾಕ್ಷ: ಯಲೈ ಅನುಜರೇ, ಅಧಮ ಮೃಡನು ಯೆಂಬುವನನ್ನ ಜಡದೇಹಿಯೆಂದು ತಿಳವಿತ್ತು ನಮ್ಮೊಡನೆ ತುಡುಕಲು ಪರಿವಾರದೊಡನೆ ದ್ರುಡಚಾಪ ಧರಿಸಿ ಧರಣಿರಥವೇರಿ ತೊಡೆತಟ್ಟಿ ಜಡೆ ಮುಡಿಗಟ್ಟಿ ಧಡಧಡನೆ ಬಂದಿರುವ ಮೃಢನೆಂದು ಭಾವಿಸದೆ ಅತಿ ಸಡಗರದಿಂದ ಹೆಡಮುಡಿಯಂ ಬಿಗಿದು ಕಡಿದಿಡಿರೊ ಜಡಮತಿ ತಮ್ಮಗಳಿರಾ.
ತಾರಕಾಕ್ಷನ ॥ಪದಾ
ಬಾರೊ ಬಾರೊ ಬಾರೊ ಬಾರೊ ಬಾರೊ
ಬೇಗನೆ ಕ್ರೂರ ಮಾರಹರನೆ ಪಾರು ಮಾಡುವೆ ಬಾರೊ ॥
ಯಿಷ್ಟು ದಿವಸ ನಿನ್ನ ನಾನು ವುಡುಕುತಿದ್ದೆನೋ
ಸೃಷ್ಟಿಯಲ್ಲಿ ಹುಡುಕಿದರು ಸಿಕ್ಕದೊಡೆಯಾ ॥
ಸಾರಿಬಂದರೀಗ ನಿನ್ನ ಮೀರಿ ಕೊಲ್ಲುವೆ
ಪಾರುಮಾಡಿಬಿಡುವೆ ಬಾರೊ ತಿರುಕ ಖೂಳನೇ ॥
ತಾರಕಾಕ್ಷ: ಯಲಾ ಮೂಢಶಿಖಾಮಣಿ, ಮೃಢನೆಂಬ ಜಡಮತಿಯೆ ನನ್ನ ಸಾಮಾನ್ಯನಾಗಿ ಕಂಡು ಬಂದೆಯಾ ನಿನ್ನ ಖಂಡಗಳಂ ತುಂಡು ತುಂಡುಗಳಾಗಿ ಮಾಡುವಂಥ ಅಂತಕಾಸ್ತ್ರ ವ್ಯಾಘ್ರ ಚಾಯಸ್ತ್ರ ಯೋಗಾಸ್ತ್ರ ತಟಿತಾಸ್ತ್ರ ಶೈಲಾಸ್ತ್ರ ವಾರುಣಾಸ್ತ್ರ ಏಕಕಾಲದಲ್ಲಿ ಮುಂಗಾರಿನ ಮಳೆಯಂತೆ ಸುರಿಸುತ್ತೇವೆ. ಯಲೈ ಮಹಾದೇವಾ ನಿನ್ನ ಬಿಡದೇ ಪೊಡವಿಗಪ್ಪಳಿಸಿ ಜಡೆಯೊಳಗಿರ್ಪ ಗಂಗೆಯಂ ಕಡೆಗೆ ನಿಲ್ಲಿಸುತ್ತೇವೆ ನೋಡೊ ಅಧಮ ಮೃಡನೆ.
ಪದ
ಯಿಂತು ರಕ್ಕಸರು ಮಹಾದೇವ ಸಹಿತ ಯುದ್ಧವಂ ಮಾಡುತ್ತಿರಲು ॥
ಭೂರಥ ರಸಾತಳಕ್ಕಿಳಿಯಲೂ ಮಹಾದೇವನಿಂತೆಂದನೂ ॥
Leave A Comment