(ತ್ರಿಮೂರ್ತಿಗಳ ಸಭೆ)

(ನಾರದರ ಆಗಮನ)

ನಾರದ: ಯಲೈ ಗುಣೋಜ್ವಲನೀತನೆ ಮಧುರಾನಂದ ವಚನದಿಂದ ಸುಂದರ ಕಂದಳಿತ ಗೋವಿಂದನ ಚರಣಾರವಿಂದ ಸಾಂದ್ರತರ ಸಭಾಮಂದಿರದಲ್ಲಿ ನಿಂದು ಧಾರೆಂದು, ವಂದನೆ ಮಾಡಿ ಕೇಳುವ ಮಾನವ ಶಿರೋಮಣಿಯೇ – ನೀನು ಧಾರು ನಿನ್ನ ನಾಮಾಂಕಿತವೇನು – ಪೇಳೊ ಮನುಜಾಗ್ರಣ್ಯ- ನಿನ್ನ ಲಾವಣ್ಯ. ಯಲಾ ಮಾನುಷ್ಯನೆ – ನಮ್ಮ ನಾಮಾಂಕಿತವನ್ನು ಪೇಳುತ್ತೇನೆ ಕೇಳುವಂಥವನಾಗೋ ಮನುಷ್ಯನೇ. ಯಲೈ ಮಾನುಷ್ಯನೆ ಶ್ರೀ ಮದ್ರಮಾರಮಣನ ಮುಖಮಯೂಖ ಚಂದ್ರ ಚಂದ್ರಿತಡಂಚ ಚಕೋರಾಯಮಾನ ಆದಿನಾರಾಯಣನ ವಕ್ಷಸ್ಥಳದೋಳ್ ಪುಟ್ಟಿ ಬಂದ ಬ್ರಂಹ್ಮಾ ಅಂಥ ಬ್ರಹ್ಮನ ಮಾನಸದಿಂ ಜನಿಸಿ ಬಂದ ವಿದ್ಯಾವಿನೋದ ಗಾನವಿದ್ಯಾ ವಿಶಾರದ ಚತುರ್ದಶಭುವನ ಸಂಚಾರ ತಾರಕ ಬ್ರಹ್ಮತತ್ವಮಯಸಾರ ಶಾರದಾನಂದನ ನಾರದ ಮುನೀಂದ್ರನೆಂದು ತಿಳಿಯಲೈ ಸೂತಾ ಲೋಕವಿಖ್ಯಾತಾ. ಯೀ ಸಭಾ ಮಧ್ಯ ರಂಗಸ್ಥಳಕ್ಕೆ ಬಂದ ಹದನೇನೆಂದರೆ ಹಿಂದಕ್ಕೆ ತಾರಕಾಸುರನೆಂಬ ರಾಕ್ಷಸನ ವುಪದ್ರಕ್ಕೆ ಸಂಕಟವಾಗಿತ್ತಲ್ಲ ಅದು ನಿನಗೆ, ತಿಳಿದಿರಬಹುದು. ಅವನಂ ಬಗೆಬಗೆಯಿಂದ ಹಲವು ಯತ್ನ ಮಾಡಿ ಕೊಲ್ಲಿಸಿದೆವು. ತರುವಾಯ ಅವನ ಮಕ್ಕಳು ತಾರಕಾಕ್ಷ ಮಕರಾಕ್ಷ ವಿದ್ಯುನ್ಮಾಲಿ ಯೀ ಮಹಾ ಪ್ರಚಂಡರು ಮಯ ಬ್ರಹ್ಮನಿಂದ ವರವಂ ಪಡೆದು ಮಾಯಾ ನಿರ್ಮಿತವಾದ ತ್ರಿಪುರಂಗಳೊಳ್ ವಾಸಮಾಗೀ ಅಷ್ಟದಿಕ್ಪಾಲಕರಂ ಹಿಡಿದು ಹೆಡಮುಡಿಯಂ ಬಿಗಿದು ಸಮಸ್ತ ಲೋಕಗಳನ್ನು ಹಾಳು ಮಾಡುವದು ನೋಡಲಾರದೆ, ತ್ರಿಮೂರ್ತಿಗಳಿಗೆ ತಿಳಿಸಿ ಅನುಮತಿ ಸಮ್ಮತದಿಂದಾ ಆ ದುಷ್ಟ ರಾಕ್ಷಸರಂ ನಾಶಪಡಿಸಬೇಕೆಂಬ ಯಿಚ್ಛೆಯಿಂದ ಬಾಹೋಣವಾಯಿತು. ಮೊದಲು ಬ್ರಹ್ಮ ದೇವನ ಸಂದರುಶನಾರ್ಥಕ್ಕಾಗಿ ಬಂದಿರುತ್ತೇನೆ. ಬ್ರಹ್ಮನನ್ನು ತೋರಿಸುವಂಥವನಾಗೋ ದೂತಾ ಮುನಿಮಾನಸ ಪ್ರಖ್ಯಾತಾ.

ನಾರದ: ನಮೋನ್ನಮೋ ತಾತೈಯ್ಯನವರೇ ॥

ಬ್ರಹ್ಮ: ಸುಖೀಭವಾ ಸುಖೀಭವಾ  ಬಾರೈಯ್ಯ ಪುತ್ರ ಶಿಖಾಮಣಿ ॥

ರಾಗ ಮಿಶ್ರಜಾತಿ ಅಟತಾಳ

ಲಾಲಿಸುವದು ಯನ್ನಾ  ಬಿನ್ನಪಾ ನೀನೀಗ ॥
ಲೋಲಾಚತುರ್ವದನಾ  ಕೇಳು ನೀ ಬೇಗಾ ॥

ಹಾಳಾಯಿತು ಸುರ  ಪಾಳ್ಯಾದವರ್ಗಾ
ತಾರಕನೆಂಬುವನ ಮಕ್ಕಾಳಿಂದೀಗಾ ॥

ನಾರದ: ಹೇ ತಾತಾ, ಹಿಂದಕ್ಕೆ ಜಗತ್ತೆಲ್ಲ ಬಂಧನಕ್ಕೊಳಗು ಮಾಡಿದ ದೈತ್ಯನಾದ ತಾರಕಾಸುರನನ್ನು ಷಣ್ಮುಖದೇವರು ಸಂಹಾರ ಮಾಡಿದರೆಂದು ಸಂತೋಷಪಟ್ಟು ಭೂ ಭಾರ ನಿವಾರಣೆಯಾಯಿತೆಂದು ತಿಳಿದಿದ್ದಿರಿ. ಈಗ ಚತುರ್ಭುವನಕ್ಕು ದಿಕ್ಕಿಲ್ಲದ ಹಾಗಾಯಿತು. ತಾರಕಾಸುರನ ಮಕ್ಕಳು ತಾರಕಾಕ್ಷ ಮಕರಾಕ್ಷ ವಿದ್ಯುನ್ಮಾಲಿಯೆಂಬ ಖೂಳ ಧನುಜರು ಯಿಂದ್ರಾದ್ಯಖಿಳ ಅಷ್ಟದಿಕ್ಪಾಲಕರ ಪುರಂಗಳಂ ಸದೆ ಬಡಿದು ರುಷಿಗಳು ಮಾಡುವ ಕ್ರತುಗಳಂ ಕೆಡಿಸಿ ತಾಪಸರು ಮಾಡುವ ತಪಸ್ಸು ಭಂಗ ಮಾಡುತ್ತಾ ಮರ್ತ್ಯಲೋಕಕ್ಕೆ ದಾಳಿಯಿಟ್ಟು ವೈರತ್ವವಂ ಮಾಡಿ ಯಿರುವರೂ. ಯಿದಕ್ಕೆ ಗತಿಯೇನು ಚತುರ್ವದನಾ. ರಜೋಗುಣ ಸದನಾ.

ಬ್ರಂಹ್ಮಾ: ಹೇ ಪುತ್ರ ಶಿರೋಮಣಿಯೇ ಲಾಲಿಸು. ಯನ್ನನ್ನು ಕುರಿತು ಧಾರು ತಪಸ್ಸು ಮಾಡಲಿ ಅವರವರು ಬೇಡುವ ವರವ ಕೊಡುವದು ನಾ ಬಲ್ಲೆನಲ್ಲದೆ ಮತ್ಯಾವ ಕಾರ‌್ಯವು ನನ್ನಿಂದಾಗದಪ್ಪಾ ಪುತ್ರ ಸಕಲ ವಿದ್ಯುನ್ಮಾತ್ರ.

ನಾರದ: ಜನನೀ ಜನಕರಿಗೆ ಪೇಳಿಕೊಳ್ಳಲು ಬಂದರೆ ಯಿವರು ಮಾತನಾಡುವುದು ನೋಡಿದರೆ ಮಕ್ಕಳೆಂಬ ಭ್ರಾಂತು ಹೀಗೇನೊ ಒಳ್ಳೆ ತಾಯಿ ತಂದೆಗಳು. ಯಿನ್ಯಾರ ಕೂಡೆ ಪೇಳಲಿ ನೀವಾದರು ತಿಳಿಸಿರಮ್ಮಾ ತಾಯೇ.

ಆದಿತಾಳ

ನಿಪುಣಾನೆ ಸುತ ಬಿನ್ನಪ ಮಾಡಿದರತಿ
ಕರುಣಬಾರದು ನಿಮಗೆ  ಕೊನೆಗೆ  ಕಪಟ
ರಾಕ್ಷಸರ  ಶಪಥದಿ ಕೊಲ್ಲಲು  ಸಫಲ
ವಹುದು ಕರುಣಾಭರಣಾ  ॥

ಸರಸ್ವತಿ: ಹೇ ಕಾಂತಾ, ಲೋಕೋಪಕಾರಿಯಾದ ಯಮ್ಮಯ ಪುತ್ರನ ಬಿನ್ನಪಕ್ಕೆ ಮನಸ್ಸು ಪುಟ್ಟದೇ ಯಿರುವ ಕಾರಣವೇನು. ದುರ್ಮಾರ್ಗರಾದ ರಕ್ಕಸರು ಮಾಡಿದ ತಪಸ್ಸಿಗೆ ಮೆಚ್ಚಿ ವರವನ್ನು ಕೊಟ್ಟಿರಲ್ಲಾ, ದೇವತೆಗಳ ಸಂಕಟಕ್ಕಾಗಿ ನಿಮ್ಮ ಮನಸ್ಸು ಕನಿಕರಕ್ಕೆ ಬರಲೇ ಇಲ್ಲವಲ್ಲಾ. ಸೃಷ್ಠಿ ಮಾಡುವುದರಲ್ಲಾದರೂ ದುಷ್ಟನಿಗ್ರಹಕ್ಕೆ ಸೃಷ್ಟಿಪಾಲಿನ ಸಂಗತಿಯಾದರು ತಿಳಿಸಿ, ಯೀ ನಾರದರಿಗೆ ಸಮಾಧಾನವಾದರೂ ಮಾಡಿ ಕಳುಹಿಸಬಾರದೇ ಸ್ವಾಮಿ ಭೃತ್ಯಜನ ಪ್ರೇಮೀ.

ಭೈರವಿ ಆದಿತಾಳ

ತರುಣಿಮಣಿ ಲಾಲಿಸೀಗ  ಯನ್ನ ಮಾತಾ
ದುರುಳಾರು ಮಾಡುವರಖಿಳ  ಕೇಳು ಮಾತಾ ॥

ಕರುಣಾದಿ ವರ ಕೊಡುವುದು ಬಲ್ಲೆ  ಯಲೆ ಕಾಂತೇ
ಕೊಟ್ಟ ವರವಾ ತೆಗೆವೊದರಿಯೇ  ಯಲೆ ಕಾಂತೆ ॥

ಪೊಡವಿ ರಾಜಘಟ್ಟದೊಡೆಯಾಗೆ  ಯಲೆ ಕಾಂತೆ
ದ್ರುಡದಿ ನಾರದ ಅರುಹುವುದು  ಚಿತವೆ ಯಲೆ ಕಾಂತೆ ॥

ಬ್ರಹ್ಮ: ಹೇ ನಾರೀಮಣಿ, ನೀನು ಪೇಳುವ ಮಾತು ಧಿಟವೇ ಸರಿ. ಯೀ ನಾರದರ ಮಾತೂ ಸರಿ. ರಾಕ್ಷಸರಾಗಲಿ ದೇವತೆಗಳಾಗಲಿ ಯನ್ನನ್ನ ಕುರಿತು ತಪಸ್ಸು ಮಾಡಿದರೆ ತಕ್ಕಾ ವರವು ಕೊಡುವದು ಬಲ್ಲೆ. ಅಲ್ಲದೆ ಕೊಟ್ಟ ವರವು – ತೆಗೆಯುವದು ದುಷ್ಟರನ್ನು ಕೊಲ್ಲುವದು ಯಿಂದಿರಾ ರಮಣನಿಗಲ್ಲದೆ ಮಿಕ್ಕಾದವರಿಗೆ ಸ್ವತಂತ್ರವಿಲ್ಲಾ. ಆದ ಕಾರಣ ಯೀ ನಾರದರು ಶ್ರೀ ಹರಿಸರ್ವೋತ್ತಮನಲ್ಲಿಗೆ ಹೋಗಿ ನಯದಿಂದ ತಿಳಿಸಿದರೆ ಯೀ ಕಾರ‌್ಯ ಅಚ್ಯುತನಿಂದಾಗಬಹುದೇ ನಾರೀಮಣಿ ಆದ್ಯಂತಕ್ಕೂ ನೀನೇ ಧಣಿ.

ಅಟತಾಳ

ಮುನಿವರ‌್ಯ ಲಾಲಿಸೊ  ಯನ್ನಾ ಮಾತನು
ಭಾರಾಕರ್ತನು  ಯನ್ನೊಳ್ ಪೇಳಿದ
ಮಾತಾನು  ಪಾರಮಾರ್ಥಕ ನೀನು
ಪ್ರೇಮದಿಂದಲಿ ಕೇಳ್ ಮುನಿಪ ॥

ಸಾರಸಾಕ್ಷನೊಳು  ಪೇಳಲು ಮಾತನು ಮುನಿವರ‌್ಯಾ
ಭಾರಕರ್ತನು ಪೊರೆವನು ಈಗ ಪೋಗು ಬೇಗದಿ ॥

ದಿಟ್ಟದಿಂದಲಿ ರಾಜ  ಘಟ್ಟದೊಡೆಯ ಭೀಮೇಶನಲ್ಲಿಗೆ ಪೋಗಿ
ಪ್ರೀತಿಯಿಂದರುಹೊ  ಮುನಿವರ‌್ಯಾ ಲಾಲಿಸು ಯನ್ನಾ ಮಾತನು ॥

ಸರಸ್ವತಿ: ಅಪ್ಪಾ ಕಂದ ನಾರದನೆ, ನಾರಾಯಣನಲ್ಲಿಗೆ ಹೋಗಿ ಪೇಳಬೇಕೆಂದು ನಿನ್ನ ಜನಕ ಪೇಳುತ್ತಾರೆ. ಸರ್ವಕಾರಣಕರ್ತನು ನಾರಾಯಣನೆ ಆಗಿರುವಲ್ಲಿ ಧಾರ ಯತ್ನವೇನು ಯಿಲ್ಲಾ. ಆತನಲ್ಲಿಗೆ ಹೋಗಿ ನೀನು ತಿಳಿಸಿದರೆ ನಿನ್ನ ಮನಸ್ಸಿನಲ್ಲಿರುವ ಕೋರಿಕೆ ನೆರವೇರುತ್ತೆ. ನಾರಾಯಣನಲ್ಲಿಗೆ ಪೋಗಪ್ಪಾ ಕಂದಾ ನಿನ್ನ ಮಾತೆ ಬಹುಚಂದಾ.

ದರುವೂ ಆದಿತಾಳ

ನಾರಾಯಣಾ ಹರಿ – ಹರಿ ನಾರಾಯಣಾ
ನಾರಾಯಣಾ ವೇದ ಪಾರಾಯಣಾ
ನಾರಾಯಣ ಶ್ರೀಮನ್ನಾರಾಯಣಾ ॥ ॥

ಭುವನೋಲ್ಲಾಸನೆ ನಿಮ್ಮನು  ಲ್ಲಾಸದಿಂದಲಿ
ಮನಸಾನಂದದಿಂ ಭಜಿಪೆ  ॥

ದಿಟ್ಟದಿಂದಲಿ ರಾಜಘಟ್ಟದೊಡೆಯ
ಶ್ರೀ ಭೀಮೇಶಾನ ನೆನಿಮನವೆ  ಮುಟ್ಟಿ
ಪೂಜಿಪೆ ದೇವಾ  ನಾರಾಯಣಾ ॥

ಮಾತು: ನಮೋನ್ನಮೋ ಹೇ ನಾರಾಯಣಾ.

ವಿಷ್ಣು: ಅಪ್ಪಾ ಮೊಮ್ಮಗನೇ, ಬ್ರಹ್ಮಾನಂದನಾಗಿ ಬಾರೈ ಸದ್ಗುಣ ಸದನಾ. ಧಾವ ಧಾವ ಲೋಕಕ್ಕೆ ಪೋಗಿ ಬಾಹೋಣವಾಯಿತು. ಧಾವ ಧಾವ ಲೋಕದಲ್ಲಿ ಯೇಸು ಸಮಾಚಾರ ಯಾವ ದೊರೆಗಳ ಸಂಸ್ಥಾನಕ್ಕೆ ಸವಾರಿ ದಯಮಾಡಿಸಿತ್ತು. ಯಾವ ಯಾವ ಲೋಕದಲ್ಲಿ ಯೇನೇನು ಚಾಡಿಯೇಳಿ ಬರೋಣವಾಯಿತು. ಜಗಳ ಬಿಡಿಸುವುದಕ್ಕೆ ಯಾರ‌್ಯಾರು ಬರಬೇಕಾಗಿದೆ. ನಮಿಗೆ ಯೇನು ವುರುಲು ತಂದು ವೊಡ್ಡಿರುವೆಯೊ. ಯಿದ್ಧ ಮಾತು ಯತಾರ್ಥವಾಗಿ ತಿಳಿಸಪ್ಪಾ ನಾರದ ಮಹಾರುಷಿಗಳೇ ತಾವು ತರುವುದೇ ರಗಳೇ.

ನಾರದ: ಯಾತಕ್ಕೆ ತಾತಾ ಯೇನೇನೊ ಪೇಳುವಿರಲ್ಲಾ ॥

ವಿಷ್ಣು: ಯೇನು ಯಿಲ್ಲಪ್ಪ ಅವರಿವರಿಗೆ ಕಲಹಾ ತಂದಿಟ್ಟು ತಮಾಷೆ ನೋಡುವುದಕ್ಕೆ ಯೇನು ಪುಣ್ಯಾತ್ಮನೋ.

ನಾರದ: ಹರಹರಾ ಯೆಂದೆಂದಿಗು ನಿಮ್ಮ ಮೊಮ್ಮಗನು ಅಂಥವನಲ್ಲಾ ಅನ್ಯಾಯದ ಮಾತುಗಳು ನುಡಿಯಬ್ಯಾಡಿ ತಾತಾ.

ವಿಷ್ಣು: ಓಹೊ ನೀವಂಥ ಕೆಲಸಕ್ಕೆ ಹೋಗುವರೇ ಅಲ್ಲ, ನೀವಿಟ್ಟ ಅಗ್ನಿ ಯೆಂದಿಗೂ ಆರುವುದೇ ಯಿಲ್ಲಾ.

ನಾರದ: ತಾತಾ ನಿನಗಂಥ ಕೆಲಸವೇನು ಮಾಡಿದ್ದೆನು ತಾತಾ – ಪೇಳು ನಾರಾಯಣಾ.

ವಿಷ್ಣು: ನೋಡಿದೆಯಾ ರುಕ್ಮಿಣಿ, ಯೀ ನಾರದರು ವೊಂದು ಪಾರಿಜಾತದ ಹೂವು ತಂದು ಕೊಟ್ಟು ನಿನಗೂ – ನನಗೂ – ಸತ್ಯಭಾಮೆಗೂ – ತಂದಿಟ್ಟ ಕಲಹಾ – ಯೀ ನಾರದರದೊ ನನ್ನದೋ ಪೇಳು – ತಾರಕಾಕ್ಷನ ಸೆರೆ ಬಿದ್ದು ಯಿಂದ್ರಾದಿಗಳಂ ಕೊಲ್ಲಲಾರದೆ ಮೋಸ ಬುದ್ಧಿಯಂ ಹೇಳಿ ಮನ್ಮಥನನ್ನು ಯೀಶ್ವರನಿಗೀಡು ಮಾಡಿದವನು. ಯೀ ನಾರದನೊ ನಾನೋ ಪೇಳೆ ರುಕ್ಮಿಣಿ ಯಿನ್ನೇನೋ ಮಾಡುವದಕ್ಕೆ ಯೀಗ ಸವಾರಿ ಚಿತ್ತೈಸಿರುವದು ನಾ ತಿಳಿಯೆ, ಅಪ್ಪಣೆ ಆಗಲಿ ಮಹಾರುಷಿಗಳೇ.

ರುಕ್ಮಿಣಿ: ಹೇ ಕಂದಾ, ನೀ ಬಂದಿರುವ ಹದನೇನೂ ಮಾಜದೆ ಪೇಳಮ್ಮಾ ಕಂದಾ ನಿನ್ನ ಮಾತೆ ಬಹು ಚಂದಾ.

ನಾರದ: ಹೇ ನಾರಾಯಣಾ ಆದದ್ದೇನೊ ಆಯಿತು. ಯೀಗ ಸದ್ಯಕ್ಕೆ ಜಗತ್ತೇ ಮುಳುಗುವ ಕಾಲ ಬಂದಿದೆ. ಬಿತ್ತರಿಸುತ್ತೇನೆ ಚಿತ್ತವಿಟ್ಟು ಲಾಲಿಸಬೇಕೊ ಸ್ವಾಮಿ.

ವಿಷ್ಣು: ಆಹಾ ನನ್ನಯ್ಯ, ಬಂಗಾರದಂಥ ನುಡಿ ನಿಮ್ಮ ಮಾತು ಲವಂಗದ ಹೇರಿಗೆ ಸಂಚಕಾರ ಕೊಟ್ಟಂತೆ ಕಾಣೋ ನನ್ನಪ್ಪಾ.

ನಾರದ: ತಾತಾ ಯಾವ ಮಾತನಾಡುವದಕ್ಕೂ ನೀನು ಸ್ವತಂತ್ರನೇ ಸರಿ. ಆದರೆ ಬಿತ್ತರಿಸುತ್ತೇನೆ ಚಿತ್ತವಿಟ್ಟು ಲಾಲಿಸಬೇಕೊ ದೇವಾ ಮಹಾನುಭಾವಾ.

ಅಟತಾಳ

ಯನ್ನಾ ಬಿನ್ನಪ ಕೇಳೂ  ರುಕ್ಮಿಣಿಲೋಲಾ
ಸನ್ನುತಭಕ್ತಾರ  ಮನ ಪರಿಪಾಲಾ ॥

ದುರುಳ ತಾರಕನ ಸುತರು ಬಂದು ಸುರಲೋಕಾ
ವೈಭವ ತಂದು  ವೈದಾರೊ ದೇವ ದೇವಾ ॥

ನಾರದ: ಹೇ ತಾತಾ, ತಾರಕಾಸುರನ ಮಕ್ಕಳು ತಾರಾಕಾಕ್ಷ ಮಕರಾಕ್ಷ ವಿದ್ಯುನ್ಮಾಲಿ ಬ್ರಹ್ಮನ ವರದಿಂದ ಮದೋನ್ಮತ್ತರಾಗಿ ಮಯನಿರ್ಮಾಣಾಪುರತ್ರಯದೊಳ್ ಸುರ ಯಕ್ಷ ಕಿನ್ನರ ಅಷ್ಟದಿಕ್ಪಾಲಕರ ಸೆರೆಯಿಡಿದು ವನಿತಾಮಣಿಯರ ಭಂಗಗೊಳಿಸಿ ಲೋಕದಲ್ಲಿ ನಾವೇ ತ್ರಿಮೂರ್ತಿಗಳೆಂದು ಬ್ರಹ್ಮ ವಿಷ್ಣು ರುದ್ರಾದಿಗಳಿಗೆ ನಾವೇ ಗಂಡಂದಿರೆಂದು ಹರಹರಾ, ದೇವತಾಸ್ತ್ರೀಯರನ್ನು ಪರಿಪರಿ ವಿಧವಾಗಿ ಮಾನಗೆಡಿಸುವುದನ್ನು ಕಣ್ಣಾರೆ ನೋಡಿದೆನು. ಯೀ ಸಮಯದಲ್ಲಿ ನೀವು ಸುಮ್ಮನೆ ಯಿದ್ದರೆ ಜಗತ್ತು ವುಳಿಯುವುದ ಕಾಣೆನು. ಯಿಷ್ಟರ ಮ್ಯಾಲೆ ತಮ್ಮ ಚಿತ್ತ. ಸಕಲವು ತಿಳಿದಂಥವರಿಗೆ ಹೇಳಲು ಶಕ್ತನಲ್ಲಾ ನಾರಾಯಣ.

ತ್ರಿವುಡೆ

ಖುಲ್ಲ ತ್ರಿಪುರಾಸುರ ಸಮೂಹವ
ಕೊಲ್ಲುವದು ಯನ್ನಿಂದ ಸಾಧ್ಯವೇ  ನಿಲ್ಲದ
ಲೆ ಕೈಲಾಸ ವಾಸಿಯ  ಬಳಿಗೆ ನೀ ಹೋಗೈ ॥

ಮಲ್ಲಮರ್ದನ ಶಂಭು ಮೂರುತಿ
ಅಲ್ಲಿ ನೀ ಪೇಳಿದರೆ ಬೇಗದಿ  ಚಲ್ಲಿ
ಬಿಡದೀ ಜಗವ ಪಾಲಿಪ  ಭಯವು ಬೇಡಿದಕೇ ॥

ಪೊಡವಿಯೊಳು ರಾಜಘಟ್ಟದೊಡೆಯಗೆ
ದ್ರುಡದಿ ನೀನು ಪೋಗಿ ಪೇಳ್ದರೆ  ಮೃಡನು ನಿಮ್ಮಯ
ಮಾತಿನಂತೆ  ಪೊರೆವ ಪೋಗೈ ॥

ವಿಷ್ಣು: ಅಪ್ಪಾ ನಾರದನೆ ಲಾಲಿಸು. ತ್ರಿಪುರಾಸುರರಂ ಕೊಲ್ಲುವುದಕ್ಕೆ ನನ್ನಿಂದ ಸಾಧ್ಯವಿಲ್ಲ.
ಹೇಮಕೂಟಾಚಲಕ್ಕೆ ಪ್ರೇಮದಿಂದ ಪೋಗಿ ಸ್ವಾಮಿಯಾದ ವಿರೂಪಾಕ್ಷನ ಚರಣ ಕಮಲಮಂ ಪಿಡಿದು ವಂದನೆಯಂ ಮಾಡಿ ಸಮ್ಮತದಿಂದ ಯೀ ಸಂಗತಿಯನ್ನು ತಿಳಿಸಿದರೆ ರಾಕ್ಷಸರಂ ಸಂಹರಿಸಿ ಭುವನದಭಯವಂ ಸಾಂಬನು ಪರಿಹರಿಸುವನಾದ್ದರಿಂದ ರಜತಾದ್ರಿವಾಸನಿಗೆ ತಿಳಿಸೈಯ್ಯ ನಾರದ.

ಕಂದ

ಜನನಿಯೆ ಲಾಲಿಸು ಪೇಳುವೆ  ಅನುನ
ಯದಿಂ ಸ್ವಾಮಿ ಪೇಳ್ದ  ಮಾತಿದು ಸರಿಯೇ
ತನುಮನಕೇನಾದರು ಕಷ್ಟವೊ  ವಿನಯದಿ
ಪೇಳಮ್ಮ ನಿಮಗೆ  ತೋಚಿದ ವಾಕ್ಯವಂ ॥

ನಾರದ : ಅಮ್ಮಾ ಜನನಿ ಯಿಂದಿರಾದೇವಿಯೆ ಲಾಲಿಸು. ನಾನು ಕೇಳಿದ್ದಕ್ಕು ಸ್ವಾಮಿ ಹೇಳಿದ್ದಕ್ಕು ಸರಿಯೊ – ಸರಿಯಲ್ಲವೋ – ನೀವೇ ತಿಳಿಯಬೇಕಮ್ಮಾ ತಾಯೇ. ಆದರೆ ನಿಮ್ಮ ಆರ‌್ಯಭಕ್ತರ ಭಕ್ತಿಗೆ ಮೆಚ್ಚಿ ಬಂದಿರುವ ಕಂಟಕಮಂ ಪರಿಹರಿಸುವಂಥ ಜಗದೊಡೆಯನೆಂದು ಬಿತ್ತರಿಸುತ್ತಾ ಯಿದ್ದೆ. ನಿರ್ಜರರಿಗೆ ಬಂದ ಭವ ಹರಿಸೆಂದರೆ ಯೀವೂರಿಂದ ಆವೂರಿಗೆ ಆವೂರಿಂದ ಈವೂರಿಗೆ ಹೋಗೆನ್ನುವುದು ನಿಮಗೆ ಸರಿಯಾಗಿದೆಯೇನಮ್ಮಾ ತಾಯೆ, ನಾನೇನು ಬಾಡಿಗೆ ಮನುಷ್ಯನೋ – ಹ್ಯಾಗೆ ನೀವೇ ತಿಳಿಯಬೇಕಮ್ಮಾ ಜನನೀ.

ಲಕ್ಷ್ಮಿ: ಅಪ್ಪಾ ನಾರದರೆ, ಸ್ವಾಮಿ ಹೇಳಿದ ಮಾತು ನನ್ನ ಮನಸ್ಸಿಗೂ ಸಮ್ಮತವಿಲ್ಲ ಬ್ಯಾಸರಪಡಬ್ಯಾಡ ನಾನೇ ವಿಚಾರಿಸಿ ನಿನಗೆ ಅರುಹುತ್ತೇನೆ ನಿಧಾನಿಸಪ್ಪಾ ತಾಪಸೋತ್ತಮನೇ.

ಕಾಂಭೋದಿ ಅಟತಾಳ

ತಾಪಾಸವರ‌್ಯನ ಮಾತ ಲಾಲಿಸೊ
ದೇವಾ ಪಾಲಿಪುದಾರ‌್ಯನೆ  ನಿರ್ಜರಾ ಪದವಾ ॥

ಸೂರೆ ಹೋಯಿತು ನಾಥ
ಲೋಕವು ಅವನಿ ಪಾರುಗಾಣಿಸು
ಸುರ ನಿಕರವನೂ ॥

ಸಾಸಿರಾಕ್ಷನಿಗಿಂತು ಮೋಸಾ ಬಂದಮ್ಯಾಲೆ
ಸೂಸೂವಾದೇನು ಭೀಮೇಶಾ ನೀ ನೋಡೈ ॥

ಲಕ್ಷ್ಮಿ: ಹೇ ರಮಣಾ ನಾರಾಯಣಾ, ಯೀ ರುಷಿವರ‌್ಯ ಪೇಳುವ ಮಾತನ್ನು ನೀವು ಲಾಲಿಸಿ ಪಾಲಿಸುವುದಕ್ಕಾಗುವದಿಲ್ಲವೆ. ಯೀತನ ಮಾತಿನಲ್ಲಿ ನಿಮಗೆ ದಯ ಪುಟ್ಟದ ಕಾರಣವೇನು ಸ್ವಾಮಿ ಶ್ರೀಹರಿಯೆ ಯಂದು ಬಂದು ಬೇಡಿ ಕೇಳುವ ಪುತ್ರಬಾಂಧವ ಭಕ್ತಗುರುಗಳನ್ನು ಹೀಯಾಳಿಸಿ ಹಿಂದಕ್ಕೆ ಕಳುಹಿಸುವದು ತಮಗೆ ನ್ಯಾಯವಲ್ಲಾ. ಭಕ್ತರ ಮನೋಭಾವವಂ ತಿಳಿಯದೆ ಭಕ್ತಿಗೆ ಮನಕೊಡದೆ ಇರುವುದು ಸರ್ವಥಾ ನಿಮಗೆ ಸರಿಯಲ್ಲಾ. ಯೀ ನಮ್ಮ ಪ್ರೇಮಪುತ್ರನಾದ ನಾರದರುಷಿಯ ಮಾತು ಲಾಲಿಸಬೇಕೋ ಸ್ವಾಮಿ ಭಕ್ತಮನೋಪ್ರೇಮಿ.

ರೂಪಕ

ದೈತ್ಯರನ್ನು ಕೊಲ್ಲುವದಕ್ಕೆ  ಚಿತ್ರ
ವಲ್ಲವೆ  ಮುಕ್ತಿ ವಿಜಯ ಶೈವರೂ ಭೃತ್ಯರಲ್ಲವೆ ॥

ರಕ್ಕಸರೊಳಧಮರನ್ನು  ಕೊಲ್ಲುವರಲ್ಲದೆ
ವಿರೂಪಾಕ್ಷನ ಪಾಲಿಗೆ ಬಿಟ್ಟು ಯಿರುವೆ ಬಾಲೆ ಕೇಳೆಲೆ ॥

ವಿಷ್ಣು: ಹೇ ಕಾಂತೆ, ಕ್ರೂರಬಲರಾದ ತಾರಕಾಕ್ಷನ ಸುತರು ಅತಿ ಕ್ರೂರ ಬಲಶಾಲಿಗಳು ಅಲ್ಲದೆ ದುರಾಚಾರರು. ನನ್ನ ಕೈಯಿಂದ ಕೊಲ್ಲತಕ್ಕ ಯೋಗ್ಯರಲ್ಲವಾದ ಕಾರಣ ಅವರಿಗನುವಾದಂಥ ವುಪವಾಸಿಗಳಾಗಿರತಕ್ಕ ಭಾಗ್ಯ ರುದ್ರ ದೇವರಿಗಲ್ಲದೆ ಯಿನ್ಯಾರಿಗೂ ಸಲ್ಲತಕ್ಕದಲ್ಲ. ಯೀಶನೇ ಆ ದುಷ್ಟರನ್ನು ಕೊಲ್ಲಬೇಕೇ ಹೊರತು ನನ್ನಿಂದ ಸಾಧ್ಯವಲ್ಲ. ಪರಮೇಶ್ವರನ ಬಳಿಗೆ ಯೀ ನಾರದರು ಹೋಗಿ ತಿಳಿಸಿದರೆ ನಾರದರ ವಾಕ್ಯಕ್ಕೆ ವುಮಾಪತಿಯು ಕರುಣಿಸುವನು. ಅದಕ್ಕೆ ನಾವೂ ಸಹಾಯಕರಾಗಬೇಕಾಗುತ್ತೆ. ಆ ದುಷ್ಟರನ್ನು ಸಂಹಾರ ಮಾಡುತ್ತೇವೆ.ಯೀ ಪರಿಯಾಗಿ ನಾರದರಿಗೆ ಸಮಾಧಾನ ಹೇಳಿ ಈಶ್ವರನ ಬಳಿಗೆ ಕೈಲಾಸಪಟ್ಟಣಕ್ಕೆ ಕಳುಹಿಸಿ ಬಾರೆ ನಾರೀಮಣಿ.

ಲಕ್ಷ್ಮಿ: ಅಪ್ಪಾ ಮಗುವೆ ತಾಪಸವರ‌್ಯನೇ ಲಾಲಿಸೂ, ನಿಮ್ಮ ತಾತನಾದ ನಾರಾಯಣನ ಮೇಲೆ ಕೋಪ ಮಾಡುವದು ಸರಿಯಲ್ಲಾ. ಯಾವ ಯಾವ ಕಾರ‌್ಯಕ್ಕೆ ಹ್ಯಾಗೆ ನಡೆಯಬೇಕೋ ಆ ರೀತಿ ನಡೆಸಬೇಕಲ್ಲದೆ ಬ್ಯಾಸರಪಡಬ್ಯಾಡ. ದಾತನಾದ ಈಶ್ವರನಲ್ಲಿಗೆ ಹೋಗಿ ತಿಳಿಸು. ಯೀ ಕಾರ‌್ಯಕ್ಕೆ ಆತನೇ ಅಧ್ಯಕ್ಷನು. ನಾವು ಸಹಾಯವಾಗಬೇಕಾಗುತ್ತದೆಂದು ನಾರಾಯಣನು ಪೇಳಿದ ವಾಕ್ಯ ನೀನು ಕೇಳಿದೆಯಲ್ಲಾ . ತೀವ್ರದಿಂದ ಕೈಲಾಸಕ್ಕೆ ತೆರಳಿ ಪೋಗಪ್ಪಾ ಬಾಲಾ ಸದ್ಗುಣಶೀಲಾ.

(ನಾರದವಿಷ್ಣುಬ್ರಹ್ಮರು ಕೈಲಾಸಕ್ಕೆ ಬರುವುದು)

ಆದಿತಾಳ

ಸಾಂಬ ಸದಾಶಿವ  ಸಾಂಬ  ಹರಾಹರಾ
ಸಾಂಬಾ  ಅಂಬುಜಸಖನೆ  ಯಿಂಬಾಗಿ
ಜಗವಾ ಪೊರೆವಾ  ಕಂಬುಕಂದರ
ಶಿವನೆ  ಬೆಂಬಿಡದೆ ಭಜಿಪೆ ನಿಮ್ಮಾ ॥

ಕೈಲಾಸವಾಸನೆ ಕಾಲಸಂಹಾರ ಶಂಭೊ
ಪಾಲಿಸು ಯನ್ನನು  ಪರಮಪುರುಷ ಶಿವಶಿವ ॥

ಕರುಣದಿ ಭಕ್ತರ  ಕಾಯ್ದಿವರುಗಳಾ ನೀವು
ವುರಗಾಭೂಷಣ ಭೀಮೇಶಾನೆ ಪಾಲಿಸೋ ॥

ನಾರದ: ನಮೋನ್ನಮೋ ಯೀಶ  ಸಕಲ ಲೋಕೇಶ॥

ಈಶ್ವರ: ಸುಖೀಭವಾ  ಸುಖೀಭವಾ

ವಿಷ್ಣು: ನಮೋನ್ನಮೋ ಹೇ ಮಹಾದೇವಾ.

ಈಶ್ವರ: ಸುಖೀಭವಾ  ಸುಖೀಭವಾ ಸರಸಿಜಾಕ್ಷನಾದ ನಾರಾಯಣ ಸದಾ ನಿನ್ನ ಪಾರಾಯಣಾ. ಶುಭಮಸ್ತು ಬ್ರಹ್ಮಾ ಯೀ ಸಿಂಹ ಪೀಠದಲ್ಲಿ ಕೂಡುವಂಥವರಾಗಿರಿ.

ಗೌಳ ಆದಿತಾಳ

ವನಜಸಂಭವ  ಯೇನು ಯೀ ವಾರ್ತೆ
ನಾರದ ಪೇಳ್ವ ಸಂದರ್ಭವೇನೈಯ್ಯ ॥

ಧಾವ ಲೋಕಕೆ ಯೀಗ  ಯಡರು ಪುಟ್ಟಿತು
ಬೇಗದಿಂದಲಿ ಯನ್ನೊಳ್  ಅರುಹಬೇಕೈಯ್ಯ ॥

ಯೇನು ಕಾರಣ ಯಿಲ್ಲಿ  ನೀವು ಯೀರ‌್ವರೂ
ತಾಪಸಾರ‌್ಯನ ಹಿಂದೆ  ಬಂದು ಇರುವಿರೈ ॥

ಈಶ್ವರ: ಹೇ ಹಂಸವಾಹನಾ, ಯೀ ನಾರದರು ಬಹಳ ಶ್ರದ್ಧೆಯಿಂದ ಮೂರುಲೋಕಂಗಳೂ ತಿರುಗಿ ಶ್ರಮಪಟ್ಟ ಕಾರಣವೇನು ತಿಳುಹೈ ವನಜಾಸನಾ.

ಪದ

ಲಾಲಿಸೈ ಪ್ರಭೂ  ಪಾರ್ವತಿನಾಥಾ  ತ್ರಿಪುರಾ
ಸುರರಾ  ಹಾವಳಿ  ಹೆಚ್ಚಿತಂತೈಯ್ಯಿ ॥

ಯೀ ಪರಿಮಾತಾ  ಪೇಳುವದಕೆ
ಧಾತ ನಾರದ  ತಿರುಗಿದಾನೈಯ್ಯ ॥

ಬ್ರಹ್ಮ: ಹೇ ದೇವಾದಿದೇವನಾದ ಸಾಂಬನೇ ಕೇಳೂ, ತ್ರಿಪುರದ ತಾರಕಾಕ್ಷನ ಮಕ್ಕಳಾದ ತಾರಕಾಕ್ಷ, ಮಕರಾಕ್ಷ, ವಿದ್ಯುನ್ಮಾಲಿಯೆಂಬ ದೈತ್ಯರ ಧಾಳಿ ನಿರ್ಜರರಿಗೆಲ್ಲಾ ಬಹಳ ಸಂಕಟವಾಗಿಹುದು ಸಹಜ. ಆ ದುಷ್ಟರು ಸಜ್ಜನರನ್ನು ದುಃಖಪಡಿಸುತ್ತಾ ಯಿಂದ್ರಾದ್ಯಖಿಳ ದೇವತೆಗಳನ್ನು ಪಿಡಿದು ಬಡಿದು ಸೆರೆಮಾಡಿಹರಂತೆ ರುಷಿಗಳ ತಪಸ್ಸು ಭಂಗ ಮಾಡುತ್ತಾರಂತೆ ಸ್ವಾಮಿ ಮುನಿಜನಪ್ರೇಮೀ.

ಈಶ್ವರ: ಹೇ ನಾರಾಯಣಾ, ಚತುರಾನನ ಪೇಳಿದ ವಾಕ್ಯವಿದೆಲ್ಲವು ನಿಶ್ಚಯವಾಗಿರುವುದೆ ಪೇಳು.

ಆದಿತಾಳ

ತಳಮಳಗೊಂಡಿತು ಲೋಕಾ  ಬಾಯ
ಬಿಡುವಾರು ಶೋಕಾ  ನಿನ್ನನ್ನೆ ಸ್ಮರಿಸುವರೊ
ಶಂಭೊ  ಶಿವಶಂಭೊ ॥

ತ್ವರಿತದಿ ತ್ರಿಪುರಾಸುರರು  ಕೊಲೆಗೈ
ದರು ನಿರ್ಜರರಾ  ವುಳುಹಿಸುವುದೆ ಕರ್ತಾ
ನಹುದೊ  ನೀನಹುದೊ ॥

ರಾಜಘಟ್ಟದೊಡೆಯಾನೆ ಯಿಷ್ಟದಿಂ ಪಾಲಿಸಬೇಕೊ
ಶಿವನೆ ಭವಹರನೇ ॥

ವಿಷ್ಣು: ಹೇ ಮಹಾದೇವಾ. ಬ್ರಹ್ಮನಾಡಿದ ಮಾತುಗಳೆಲ್ಲಾ ನಿಜವಾಗಿರುವದಲ್ಲದೆ ಸುಳ್ಳಲ್ಲಾ ಮತ್ತು ತ್ರಿಮೂರ್ತಿಗಳು ಅವರಲ್ಲಾ ನಾವೇ ತ್ರಿಮೂರ್ತಿಗಳೆಂದು ಪೇಳುತ್ತಾರಂತೆ. ಯಿದಕ್ಕಾವ ಆಲೋಚನೆಯೋ ಯೋಚಿಸಬೇಕೋ ದೇವಾ ಮಹಾನುಭಾವ.

ಈಶ್ವರ: ಹೇ ನಾರಾಯಣ ಯಲೈ ಚತುರಾನನ, ದುಷ್ಟರಕ್ಕಸರ ಬಾಧೆಗಾಗಿ ಅಮರಾದಿಗಳು ಯೆಷ್ಟು ದುಃಖಪಟ್ಟರೋ ತಿಳಿಯದಲ್ಲಾ.  ಶಿವಶಿವಾ ಲೋಕದಲ್ಲಿರ್ಪ ರುಷ್ಯಾದಿಗಳು ಯೆಷ್ಠು ನೊಂದರೊ ಅರಿಯೆನೆ, ಅಪ್ಪಾ ವಿರಿಂಚಿಯೇ ಆ ದುಷ್ಟರಾಕ್ಷಸರಿಗೆ ಯೇನೆಂದು ವರಗಳು ಕೊಟ್ಟಿರುವೆಯೊ ವಿವರಿಸು.

ಬ್ರಹ್ಮ: ಹೇ ಸದಾಶಿವ ಲಾಲಿಸು. ರಾಕ್ಷಸರ ಪ್ರಾಣಾಪಹಾರಕ್ಕೆ ನನ್ನ ವರವಿರುವುದಲ್ಲದೆ ಹೆಚ್ಚಿನ ಸಂಪದವೇನೂ ಯಿಲ್ಲಾ. ನಮಗಿಂತಾ ಅವರು ಆಕಾರದಲ್ಲಿ ಬಲವಾಗಿರುವರಲ್ಲದೆ ನಿರ್ಜರ ತಪಸ್ಸು ಅವರು ಮಾಡಲೂ ಯಿಲ್ಲಾ, ನಿರ್ಜರ ವರವು ನಾನು ಅವರಿಗೆ ಕೊಡಲೂ ಯಿಲ್ಲಾ . ಆದರೆ ತ್ರಿಪುರ ಸಂಹಾರಕ್ಕೆ ತಿಳಿದಮಟ್ಟಿಗೆ – ವಂದು ವುಪಾಯಮಂ ಪೇಳುವೆನು ಲಾಲಿಸಬೇಕು ಮಹಾದೇವಾ. ಭೂಮಿಯೆ ರಥ ಚಂದ್ರಸೂರ‌್ಯರೆ ಗಾಲಿಗಳು. ಆದಿಶೇಷನೇ ಹಗ್ಗ, ಮೇರುವೆ ಧನುರ್ನಾರಾಚವು, ದೇವತಾಶಕ್ತಿ ಸಮಸ್ತ ಮಾತೃಕಾದಿ ದೇವಾಂಶವೆ ಪಂಚಶಕ್ತಿಗಳು ರಥದ ಕೀಲಚ್ಚುಗಳು, ವುಪನಿಷತ್ಪುರಾಣ ತದ್ವಭಿಜ್ಞಾನ ಸತ್ಪ್ರಾಣ ಉಕ್ತಿಗಳೆ ಧ್ವಜಪತಾಕೆಗಳು, ಅಂತರಿಕ್ಷವೆ ಮೇಲ್ ಮುಚ್ಚಳ, ಅಷ್ಟದಿಕ್ಪಾಲಕರೆ ಅಂಗಗಳು ವಿಷ್ಣುವೆ ಮಹಾವತಾರ ಅಷ್ಟವಸುಗಳೆ ಯೆಂಟು ಕಂಬಗಳು ಯೀ ಮಧ್ಯ ರಥದಲ್ಲಿ ನೀನೇ ರಾಜನಾಗಿ ನನ್ನನ್ನೆ ಸಾರಥಿ ಮಾಡಿಕೊಂಡು ನಾರಾಯಣನನ್ನೇ ಅಸ್ತ್ರಮಾಡಿ ನಾರಾಯಣಾಸ್ತ್ರ ಪ್ರಯೋಗಿಸುವಲ್ಲಿ ಯೀ ನಾರಾಯಣನು ಬೇರೆ ಅವತಾರನಾಗಿ ಪತಿವ್ರತಾಭಂಗ ಮಾಡಿದರೆ ಆಗ ತ್ರಿಪುರ ನಿಲ್ಲುವುದು. ನಮ್ಮೀ ಕಾರ‌್ಯಗಳು ನಿನ್ನ ಕೃಪೆಯಿಂದಾ ನೆರವೇರಬೇಕೋ ಸಾಂಬ ಭಕ್ತ ಕದಂಬಾ.