ಈಶ್ವರ: ಹೇ ನಾರಾಯಣಾ ಅಹೋ ಬ್ರಹ್ಮಾ ಯಿನ್ನು ಸೈರಿಸಬಾರದು. ಮೂರು ಮೂರ್ತಿಗಳಿಗಿಂತಾ ಆ ದುರ್ವಿಚಾರ ರಕ್ಕಸರು ಮಿಂಚಿದವರೇನು ತ್ರಿಪುರ ಸಂಹಾರ ಮಾಡುವದೇ ನಿಜ. ಹೇ ಪಾರ್ವತಿ ಹೇ ಗಂಗಾ ತ್ರಿಪುರ ಸಂಹಾರಕ್ಕೆ ಜಯವೀಳ್ಯವಂ ಕೊಡಿರೇ ಶುಭಾಂಗನೆಯರಾದ ನಾರೀಮಣಿಗಳಿರಾ.

ಬ್ರಹ್ಮ: ಹೇ ಶಾರದಾ, ತ್ರಿಪುರಸಂಹಾರಕ್ಕೆ ಸದಾಶಿವನ ಅಪ್ಪಣೆ ಆಯಿತು. ಆರತಿ ಎತ್ತೆ ಸರಸ್ವತಿ ಲೋಕವಿಖ್ಯಾತೆ.

ವಿಷ್ಣು: ಹೇ ಲಕ್ಷ್ಮಿ ತ್ರಿಪುರ ಸಂಹಾರಕ್ಕೆ ಈಶ್ವರನಪ್ಪಣೆ ಆಯಿತು. ಕರ್ಪೂರದಾರತಿಯೆತ್ತಿ ಜಯ ವೀಳ್ಯವಂ ಕೊಟ್ಟು ಕಳುಹೇ ನಿತ್ಯ ಶುಭಾಂಗಿ ಮಂಗಳಾಂಗಿ.

ಮಂಗಳಾರತಿ

ರಾಗ ಆದಿತಾಳ

ಮಂಗಳಂ ಜಯಾ ಮಂಗಳಂ  ಮಹದೇವಗೆ ॥
ಮಾನಿನಿಯರೆಲ್ಲಾ  ಮುದದಿಂ ತಂದೆತ್ತಿದಾರೂ ॥

ಕಪ್ಪುಗೊರಳಾನಿಗೆ  ಮುಪ್ಪುರಿ ಗೆಲುವಾಗೆ
ಕರ್ಪೂರದಾರತಿ  ಒಪ್ಪಾದಿಂ ತಂದೆತ್ತಿದಾರೂ  ॥ಮಂಗಳಂ ॥ ॥

ಧಿಟ್ಟ ಭೀಮೇಶನಿಗೆ ಪುಟ್ಟ ನಾರಿಯರೆಲ್ಲಾ  ಯಿಷ್ಟಾದಿಂ ತಂದೆತ್ತಿದಾರು
ಅಷ್ಟಾವಿಧಾರ್ಚನೆ ಮಾಡಿ  ಮಂಗಳಂ ಜಯ ಮಂಗಳಂ ॥

(ಮಾಲಿನಿಸುಮಾಲಿನಿಯರ ಪೂಜೆ)

ದ್ವಿಪದೆ ಧನ್ಯಾಸಿ

ಶ್ರೀ ಮಾನಿನಿ ಮಣಿ  ಪರಮಪತಿವ್ರತೆ
ಮಾಲಿನಿ ತಾನು  ಸುಮಾಲಿನಿಯೆಂಬನುಜೆ
ಯಿಂದೊಡಗೂಡಿ  ಮನದೊಳಗೆ ಗಮನಿ
ಸುತ  ಮಹದೇವನಂ ಭಜಿಸಿ ಯಿರುತಿರಲು
ಪರಿಪರಿಯ ವಾರ್ತೆಯಂ ಕೇಳಿ  ವೂರಸತಿಯರು
ಯಲ್ಲ ಸಾರಿ ಅಶ್ವತ್ಥವನು  ಕೋರಿ ಪೂಜಿಸುವ
ರೀತಿಯನು ತಿಳಿದು  ಪ್ರೀತಿಯಿಂದಲಿ
ತಾವು  ಖ್ಯಾತಿಯಿಂದೊಡಗೂಡಿ  ಚಂದ್ರಗಾವಿಯ
ಶೀರೆ ಚಂದದಿಂದುಟ್ಟು  ಪಟ್ಟಿನಾ ರವಿಕೆಯಂ
ಪ್ರೀತಿಯಿಂದಿಟ್ಟು  ವಜ್ರದಾ ವಾಲೆಯಂ
ವಲುಮೆಯಿಂ ಧರಿಸಿ  ನಡುವಿನೊಡ್ಯಾಣವನು
ನಾಣ್ಯದಿಂದಿಟ್ಟು  ಮುಖಮಜ್ಜನವ
ಮಾಡಿ ಅರಿಶಿನವ ಪೂಸಿ  ನಾರಾಯಣಾರ್ಚನೆ
ನೆನೆಯುತ್ತ ತಾವು  ಗಮನಿಸಿ ಬಂದರು ಗಾಂಧರ್ವರಂತೆ ॥

ತೋಡಿ ಆದಿಮಟ್ಟು

ಸರಸಿಜಾಕ್ಷಿ  ಸಾರಸಾಕ್ಷಿ  ಬಾರೆ ಬೇಗಾ ॥
ಪೋಗಿಬರುವಾ ॥ನೀರೆ ಬೇಗ ॥ಬಾರೇ ತಂಗಿ ॥
ತಾಳಲಾರೆನಮ್ಮಾ  ತಾಳಲಾರೆನೆ ॥

ಕಾಂತಾರಿ  ಸಮಯಾದಲ್ಲಿ  ಕಾಣ್ಬಾರೇನೆ
ಬೇಗ ಬರುವಾ  ಸಾಗಿ ಬಾರೇ ಸರಸಜಾಕ್ಷಿ
ಯೇ  ಯೇಯೇ ನಾ  ತಾಳಲಾರೆನೇ ॥

ಧೀರ ಭೀಮೇಶನ ದಯದಿ
ಅಶ್ವತ್ಥ ನೋಡಿ ಕೋರಿಪೂಜೆ  ಮಾಡಿ
ಬರುವ  ಬಾರೆ ನಾ  ತಾಳಲಾರೆನೆ ॥

ಮಾಲಿನಿ: ಅಮ್ಮಾ ತಂಗಿ, ಯಿಲ್ಲಿ ಯೆಂದಿಗೂ ಯೀ ಅಶ್ವತ್ಥವಿರಲಿಲ್ಲವಲ್ಲಾ ಯಿಂದಿ ನದಿನಾ ಯೀ ಅಮೋಘವಾದ ವೃಕ್ಷವಿರಬೇಕಾಗಿದ್ದರೆ ಯಿದು ನಮ್ಮ ಪುಣ್ಯಪ್ರಭಾವವೊ ಅಲ್ಲದೆ ಮಹಾದೇವನ ಕರುಣವೋ ಮಹಾಗೌರಿ ಕಟಾಕ್ಷವೋ ಯಾವ ಸಂಗತಿಯೂ ತಿಳಿಯದ ಹಾಗಾಯಿತಲ್ಲಮ್ಮಾ ತಂಗಿ ಬೇಗ ಪೂಜಿಸಿ ಹೋಗೋಣ ಬಾರಮ್ಮಾ ಅನುಜೆ.

ಘಂಟಾ ಆದಿತಾಳ

ಸುಂದರವದನೆ  ಕರುಣಾಕರಸಿ  ಅಂಚೆಗಮನೆ
ಯಿವಾ ಮಿಂಚಿದ ಪುರುಷನೆ  ಅಂಜಿಕೆಯಲಿ
ಬಂದ ಚಂಚಲನಯನೇ ॥

ಮಾಲಿನಿ: ಹೇ ತಂಗಿ ಸುಮಾಲಿನಿ, ಪುರತ್ರಯಂಗಳು ಕಾಲಚಕ್ರಕ್ಕೂ ವೇಗವಾಗಿ ತಿರುಗುತ್ತಿರುವವೂ, ಯಿಂಥ ಅಸಾಧ್ಯಮಾದ ಅಂತರಿಕ್ಷದಲ್ಲಿ ಬ್ರಹ್ಮ ಭೇದದಿಂದಿರ್ಪ ನಮ್ಮ ಪಟ್ಟಣದ ಮಣಿ ಮಂದಿರಕ್ಕೆ ತಳತಳಿಸುವ ಮುಂಗಾರಿನ ಮಿಂಚಿನಂತೆ ಜಗವಂ ಜೈಸಿದ ಜಗನ್ಮೋಹನಾ  ಕಾಮಕೋಟಿ ರೂಪಿನಂತೆ  ನಮ್ಮುಭಯರ ಮದ್ಯದಲ್ಲಿ ಬಂದು ನಿಂದು ನಮ್ಮ ಮನೋದ್ರುಡಮಂ ತನ್ನ ವಶಕ್ಕೆ ಸೆಳೆಯುತ್ತಿರುವ ಯೀ ಮಹಾ ಪುರುಷನು ಧಾರಾಗಿರಬಹುದೂ. ತಿಳಿಯದಲ್ಲಮ್ಮಾ ಮಾನಿನೀಮಣಿ ನಾರಿಯರೊಳ್ ನೀ ಶಿರೋಮಣಿ.

ಪದ

ಸಾರಸಮುಖಿ ದಯ  ದೋರಿದ ಪು
ರುಷಾನೆ  ಮೀರಿದ ಪತಿವ್ರತಾ  ಸೂರೆ
ಮಾಡುವೆ ನೀನೂ॥ ॥

ಸುಮಾಲಿನಿ: ಹೇ ಅಗ್ರಜಳಾದ ಅಕ್ಕಯ್ಯನೆ ಲಾಲಿಸೂ, ನನ್ನ ಮನಸು ಯಾಕೋ ಚಂಚಲವಾಗಿ ತೋರುವದಲ್ಲಾ. ಮನ್ ಮನೋಹಂಸ ಯೀತನ ಮ್ಯಾಲೆ ನನ್ನ ಮನಸ್ಸು – ಸೂರೆ ವೋಯಿತಲ್ಲಂಮ್ಮಾ ಅಕ್ಕಯ್ಯ ಯೀ ಲೊಕದಲ್ಲಿ ಸ್ತ್ರೀಗಳ ಭ್ರಮೆ  ಪುರುಷರ ಮ್ಯಾಲೆ ಸಲ್ಲದು ಯಿದು ಯೇನು ನನ್ನ ಮನಸು ಕೂಡಾ ಹೀಗಾಯಿತಲ್ಲಮ್ಮ ಅಕ್ಕಾ.

ಪದ

ವಾಸವನುತ  ಶ್ರೀ ಭೀಮೇಶನ ಮನ  ಬ್ಯಾ
ಸರಿಕಾಗಿ ಯೀ ರೀತಿ ಮಾಡಿದಾನೊ ॥

ಮಾಲಿನಿ: ಲಾಲಿಸಂಮ್ಮಾ ತಂಗಿ ಮತ್ಪತಿವ್ರತಾ ಕೆಟ್ಟಿತೆಂದು ಶ್ರೀವರ ಭೀಮೇಶ ಮುನಿದರೂ ಚಿಂತೆಯಿಲ್ಲಾ ನನ್ನ ಮನಸ್ಸು ಹ್ಯಾಗಿರುವದೆಂದರೆ ಬಿತ್ತರಿಸುತ್ತೇನೆ ಕೇಳೂ, ಯೀ ಮಹಾದೇವ ನಮ್ಮನ್ನು ಏಕಾಂತಭವನಕ್ಕೆ ಕರದೊಯ್ದು  ಯೀತನ ಚರಣಕಮಲಂಗಳು ಮನ್ಮಥ-ಸ್ಥಳದೊಳಗಿಟ್ಟು ಸನ್ಮನಸಿನಲ್ಲಿ ಮೂರ್ತಿಯನ್ನಿಟ್ಟು ನಮ್ಮ ಜೀವ ಯೀತನ ಸ್ವತಂತ್ರಕ್ಕೆ ಕೊಟ್ಟು ಮುಕ್ತರಾಗಿ ಸುಖಪಡುವದು ನಮ್ಮ ಪುಣ್ಯಫಲ ಲಾಭವಾಯಿತೆಂದು ಮನಸ್ಸು ಆನಂದವಾಯಿತಲ್ಲಮ್ಮಾ ತಂಗಿ ಮಂಗಳಾಂಗಿ.

ಸುಮಾಲಿನಿ: ಅಕ್ಕಾ ಲಾಲಿಸುವಂಥವಳಾಗು. ಯೀ ಮಹಾಪುರುಷನು ನಮ್ಮಲ್ಲಿ ಹ್ಯಾಗೆ ಮಾತನಾಡ್ಯಾನು ಹ್ಯಾಗೆ ನಮ್ಮಲ್ಲಿ ವಡಗೂಡ್ಯಾನು ಏಕಾಏಕಿ ಮಾತನಾಡಿಸುವದಕ್ಕಾಗದಲ್ಲಾ. ಯಾವ ಪರಿಗು ಸಂದು ತಿಳಿಯದಲ್ಲಮ್ಮಾ ಅಕ್ಕಾ.

ಮಾಲಿನಿ: ಅಮ್ಮಾ ತಂಗಿ, ಯೀ ಪುರುಷನನ್ನು ನೋಡಿ ನಾನು ಸೈರಿಸಲಾರೆ ನಾನೇನ್ಹೇಳಲಿ ಅಪ್ಪಾ ಸಾರಥಿ, ಈ ಪುರುಷನನ್ನ ನಾನು ಹ್ಯಾಗೆ ಮಾತನಾಡಿಸಲಿ. ನಾನು ಮಾತನಾಡಿದಾಕ್ಷಣಕ್ಕೆ ಯನ್ನ ತಬ್ಬಿ ತಕ್ಕೈಸುವನೊ ಇಲ್ಲವೊ, ನಿಂಬೆಫಲದಂತಿರುವ ಯನ್ನ ಕುಚಗಳನ್ನು ತನ್ನ ಕರದಿಂದ ಪಿಡಿದಾನೋ ಇಲ್ಲವೋ ಯೀ ಕಾಮಜ್ವರಮಂ ಸೈರಿಸಲಾರೆ. ಯಿದನ್ನು ತಾಮಸ ಮಾಡ್ಯಾನೊ ಯಿಲ್ಲವೋ ತಿಳಿಯದು ಇಂಥ ಕೋಟಿ ಲಾವಣ್ಯ ಉಳ್ಳಂಥ ಸುಂದರನು ನಮ್ಮಂಥ ಪಾಪಿಷ್ಠರಿಗೆ ಲಭಿಸುವನೋ ಲಭಿಸಲಾರನೊ ನನ್ನ ಸಂಗಡ ಮಾತನಾಡ್ಯಾನೇನಪ್ಪಾ ಸಾರಥಿ. ಆಹಾ ಯೀತನ ಮನಸ್ಸು ಹ್ಯಾಂಗಿರುವದೊ ಅರಿಯನೇ ಮಹಾಕಾಳಿ ಜಗದಾಂಬೆ ಆದಿಶಕ್ತಿಯೆ ಸಹಾಸ್ರಾಕ್ಷಿಯೆ ಮಹಾತಾಯೇ ಈ ಪುರುಷನನ್ನ ಯನ್ನ ಮೋಹಾನಂದಕ್ಕೆ ವಲಿಸಿ ಅಂಗಸಂಗಕ್ಕೆ ಒಲಿಸುವಂತೆ ಪಾಲಿಸಬೇಕಮ್ಮಾ ಮಹಾ ತಾಯೇ. ಯೇನಾದರೂ ಆಗಲಿ ಮಾತನಾಡಿಸುತ್ತೇನೆ.

ಅಠಾಣ ರೂಪಕ

ಯಾರೊ ಸುಂದರಾ  ನೀ ಮಾತನಾಡೆಲೋ
ನೀನ್ಯಾರೊ ಸುಂದರಾ  ನೀ ಮಾತನಾಡೆಲೋ ॥
ಮಾತನಾಡೊ ನೀನು ಬೇಗ  ಆತುರಳಾದೆನ್ನ ಕೂಡೆ
ಸೋತು ಬಂದಳೆಂದು ತಿಳಿದು  ರೀತಿ ಯನ್ನೊಳ್ ತಿಳುಹು ನೀನು     ॥

ಮದನಜ್ವರದಿ ತಪ್ತಳಾಗಿ  ಬೆದರಿ ಬಾಯ
ಬಿಡುವೆ ನಾನು  ಪದುಮನಾಭನಂತೆ
ಬಂದು  ಮುದದಿ ನಿಂತ ಕಾರಣವೇನು ॥

ಮಾಲಿನಿ: ಅಪ್ಪಾ ಸಾರಥಿ ಎಷ್ಟು ವಿಧದಿಂದ ಮಾತನಾಡಿಸಿದರು ಯೀ ಪುಣ್ಯಾತ್ಮನು ಮಾತನಾಡದೆ ಮೌನದಿಂದಿರುತ್ತಾನೆ. ನಾನ್ಯಾಗೆ ಮಾಡಲಿ. ಅಮ್ಮಾ ತಂಗಿ ಯಿದಕ್ಕೆ ಧಾವ ಆಲೋಚನೆ ಪೇಳುವಿಯೋ ತಿಳಿಸಮ್ಮಾ ತಂಗಿ ಮಂಗಳಸುಭಾಂಗಿ.

ಸುಮಾಲಿನಿ: ಅಕ್ಕಾ ನಾನೇನೇಳಲಿ ಇಗೋ ವಂದು ಮಾತಿದೆ. ಈ ಕಾಂತನು ಧಾರ ಕೂಡೆ ಮೊದಲು ಮಾತನಾಡಿದರೆ ಅವರದೇ ಎಂದು ನಿರ್ಧರಿಸು. ಈಗ ನಾನೇ ಮಾತನಾಡಿಸಲೋ ಅಥವಾ ನೀನೇ ಮಾತನಾಡಿಸುತ್ತೀಯೋ ಹ್ಯಾಗೆ ಹೇಳು.

ದೇಶಿ ಅಟತಾಳ

ಮಾತನಾಡೆಲೊ ನಲ್ಲಾ  ಆತುರಳಾದೆನ್ನೊಳ್
ರೀತಿಯಾ ತಿಳಿದು ನೀ  ಪ್ರೀತಿಯಿಂದಲಿ ಒಂದೂ ॥
ಮಾತನಾಡೆಲೊ ನಲ್ಲಾ  ॥

ದಿಟ್ಟದಿಂದಲಿ ರಾಜಘಟ್ಟದೊಡೆಯನೋ
ಗುಟ್ಟು ನಾನರಿಯೆನು ॥ಸಿಟ್ಟು ಮಾಡದೆ ಒಂದು ಮಾತಾ ॥

ಮಾಲಿನಿ: ಹೇ ಪ್ರಾಣನಾಥಾ ಮಹಾ ಪುರುಷನೆ, ರೀತಿಯನ್ನರಿಯದಬಲೆಯಾದೆನ್ನೊಳು ಮುನಿಸಾದವರಂತೆ ಮಾತನಾಡದಿರುವ ಕಾರಣವೇನು. ಸೋತು ಬಂದ ನಾರಿಯರೆಂದು ಪ್ರೀತಿಯಿಂದಾ ಒಂದು ಮಾತನ್ನಾದರೂ ಆಡಬಾರದೇನೋ ಕಾಂತಾ ನಿನ್ನ ವರಿಸಬೇಕೆಂಬುವುದೆ ನಮ್ಮ ಪಂಥ.

ರೂಪಕ
ನಾರಿಮಣಿ ಕೇಳೆ ಪೇಳುವೆ – ಯನ್ನ
ಮಾತನೂ  ನಿಂಮಂತೆ ಹದಿನಾರು ಸಾವಿರ
ಸತಿಯರಿರುವರೇ ॥

ನಾರಿಮಣಿಯೆ ॥ನಾರಿಯರೊಳು ಬೇಸರಪಟ್ಟು
ಸಾರಿ ಬಂದಿಹೆನೇ  ಅವರಿಗಿಂತ ಅಧಿಕಮಾಗಿ
ಯಿಲ್ಲಿ ಕಂಡೆನೇ ॥

ಸಾಕು ಸಾಕು ಯನಗೆ ನಾರಿಯ  ಸಂಗ ಬ್ಯಾಡವೇ
ಜೋಕು ಮಾತನಾಡಬ್ಯಾಡ  ಕೇಳಲೊಲ್ಲೆನೇ ॥

ಸೃಷ್ಠಿ ರಾಜಘಟ್ಟದೊಡೆಯ  ಭೀಮೇಶನಾಣೆಯು
ದಿಟ್ಟೆ ನಿಮ್ಮ ನಾನು ಕಣ್ಣಲಿ  ದ್ರಿಷ್ಟಿಸಿ ನೋಡೆನೇ ॥

ಬೌದ್ಧ: ಹೇ ಕಾಂತೆಯರಿರಾ, ನಿಮ್ಮ ಸಂಗಡ ನನಗೆ ಸರಸವ್ಯಾತಕ್ಕೆ. ನಿಮ್ಮಂಥವರು ನನಗೆ ಅಷ್ಟಿಷ್ಟೆನ್ನದೆ ಹದಿನಾರು ಸಾವಿರ ಸತಿಯರಿರುವರು. ಅವರ ವುಪದ್ರವ ತಾಳಲಾರದೆ ಯಿಲ್ಲಾದರೂ ಕೊಂಚಕಾಲ ನಿಶ್ಚಿಂತೆಯಾಗಿದ್ದು ಹೋಗೋಣವೆಂದರೆ ನನ್ನ ಪುಣ್ಯಕ್ಕೆ ಯಿಲ್ಲಿಯು ಸ್ತ್ರೀ ಭಾಗ್ಯವೆ ವರೆಗಟ್ಟಿ ವೊತ್ತುಕೊಂಡು ಹೋದಾಗಾಯಿತು. ಹಾಗೆ ನೋಡಿದರೆ ನಿಮ್ಮಾ ನಮ್ಮಾ ಪ್ರಾರಬ್ಧ ಫಲವೆನ್ನಬೇಕಾಗಿದೆ ನಾರಿಗಳಿರಾ ತಿಳಿರೇ ಪುಷ್ಪವೇಣಿಗಳಿರಾ.

ಮಾಲಿನಿ: ಮಹಾಪುರುಷನೆ ಬ್ರಹ್ಮ ಸಂಕಲ್ಪ ಹ್ಯಾಗಿರುವದೊ ಹಾಗೆ ಹೋದರೆ ನ್ಯಾಯ. ನೀನು ಯೆಲ್ಲಿ ನಾವು ಯೆಲ್ಲಿ ದೈವ ಕೃಪೆ ವದಗಿ ಬಂದಲ್ಲಿ ಧಾರ ಯತ್ನವೇನಿರುವದೂ. ನಿನ್ನ ಕರುಣ ಕಟಾಕ್ಷವಿಟ್ಟು ಯನ್ನ ಮಂದಿರಕ್ಕೆ ಚಂದದಿಂದ ನೀ ಬಂದು ಮಂಚವನ್ನೇರಿ ಅಂಚೆಗಮನೆಯಾದ ಯನ್ನಂ ಬೆರೆತೂ ನಿನ್ನಂಗ ಸಂಗಸುಖ ಸುಗ್ಗಿಯಲ್ಲಿ ಯನ್ನ ದಹಿಸೈ ಮೋಹನಾಂಗಾ. ಆದರೆ ಪರಪುರುಷರ ಮುಖವಂ ಕಾಣದೆ ಯಿದ್ದ ಸತಿಯರು ನಾವು. ನಮ್ಮನ್ನು ಪೂರ್ಣ ಸುಖಭಾವದೊಳ್ ಕೂಡಿ ಸುಖಿಸೈ ರಮಣಾ ಸದ್ಗುಣಾಭರಣಾ.

ಕಂದ

ಸತಿಯರೆ ಕೇಳಿರಿ ನಿಮ್ಮಯ  ಪತಿಗಳು
ಬಲವಂತರೆಂದು ಪೇಳುವರೆಲ್ಲರ್  ಅತಿ
ಕ್ರೂರರು ಅವರಾಗಿರೆ  ಹಿತದಿಂದಲಿ ನಿಮ್ಮ
ನಾನು ಕೂಡುವುದ್ಯಾಂಗೆ ॥

ಬೌದ್ಧ: ಹೇ ಕಾಂತೆಯರೆ, ನಿಮ್ಮ ಗಂಡಂದಿರು ಮಹಾಬಲವಂತರು. ನಿಮ್ಮ ಪತಿವ್ರತಾಭಾವದಿಂದಲೆ ಅವರ ಪ್ರಾಣವಿರುವದು ನಿಮ್ಮ ವ್ರತ ನಿಷ್ಪಲವಾದರೆ ಅವರು ಸಾಯುವರು. ನಮ್ಮ ಸಂಗಡ ಖತಿಗೊಂಡು ಬಂದಾರು ವೃಥಾ ನಿಮ್ಮ ಗಂಡಂದಿರ ಪ್ರಾಣಕ್ಕೆ ನೀವೇ ಮೃತ್ಯುವಾದರೆ ನಿಮ್ಮಥ ಕಾಮಿನಿಯರನ್ನು ಹ್ಯಾಗೆ ನಂಬಬಹುದೊ ನೀವೆ ಪೇಳಿರೇ ನಾರಿಯರಿರಾ.

ಕಂದ

ಸ್ವಾಮಿಯೆ ನಿಮ್ಮಯ ದರುಶನ  ಪ್ರೇಮ
ದಿಂದೆಮಗಾದ ಮ್ಯಾಲೆ ಬಯಸೆವು ಇತರಂ
ಕಾಮಿಸಿದೆವು ನಿಮ್ಮನು ನಾವ್  ಪ್ರೇಮ
ದಿಂದಲಿ ಯಮ್ಮ ರಮಿಸೆಲೊ ದೇವಾ ॥

ಬೇಹಾಗ್ ರೂಪಕ

ಬಿಡಬ್ಯಾಡವೆಮ್ಮ ಜಾಣ  ದ್ರುಡವಿದು ಕೇಳೂ
ರಮಣಾ  ಅತಿ ಮೋಹದಿಂದ ನಿನ್ನಾ
ಜೊತೆಗೂಡಬೇಕೊ ಮುನ್ನಾ  ಗತಿ ನೀನೆ
ಕಾಯೊ ಯನ್ನಾ  ಮಾತಾಲಿಸೊ ಸುಪ್ರಸನ್ನ ॥

ಬಾರೊ ಯನ್ನ ಗೃಹಕೆ  ಸೇರೊ ಯನ್ನ ಶಯನಕೆ
ಮಾರತಾಪ ಮೋಹಕೆ  ಯಾರಿಗೇಳಲಿಗಿದಕೇ ॥

ಅತಿಮೋಹದಿಂದ ಕೂಡಿ  ರತಿಕೇಳಿಯನ್ನೆ
ಮಾಡಿ  ಸತತ ಮಾತನಾಡಿ  ಭೀಮೇಶನೇ ಕೃಪೆ ಮಾಡಿ ॥

ಮಾಲಿನಿ: ಹೇ ಪರಮ ಪುರುಷ, ಸತಿಯೆನ್ನುವಳು ಪತಿಸೇವೆಯಲ್ಲಿದ್ದು ಪರಪುರುಷನಂ ಯಿಚ್ಛೆ ಮಾಡಿದರೆ ಆ ತಕ್ಷಣದಲ್ಲಿಯೆ ಪತಿವ್ರತಾ ಭಂಗವಾಯಿತು. ಈ ಮಾತಿನಲ್ಲಿ ಒಂದು ವಿಧಾನವುಂಟು ಲಾಲಿಸು, ಏನೆಂದರೆ ನರಮನುಷ್ಯರು ದೇವತೆಗಳನ್ನು ಅಪೇಕ್ಷೆ ಮಾಡಿದರೆ ಪತಿವ್ರತಕ್ಕೆ ಭಂಗ ಬಾರದೂ ದೈತ್ಯರು ದೇವಾಂಶರೊಳು ವುತ್ತಮ ಪುರುಷರೊಳು ಕೂಡಿ ಮುಕ್ತಿ ಸಾಯುಜ್ಯವಂ ಪಡೆದರೆ ಪತಿವ್ರತಕ್ಕೆ ಭಂಗವೆಲ್ಲಿಂದಾ ಬಂತು. ನೀನು ಸಾಮಾನ್ಯ ಪುರುಷನಲ್ಲ ದೇವಾಂಶನಾಗಿ ಕಾಣುತ್ತಲಿದ್ದಿ ನಿನ್ನ ದರುಶನವಾದದ್ದೆ ನಮಗೆ ಮಹಾದುರ್ಲಭ. ನಿನ್ನ ಪಾದ ಮಹಿಮಾವಲಂಬನ ಪುಣ್ಯ ಲೋಕವಿತ್ತರೆ ಬ್ರಹ್ಮಕೋಟಿಕಲ್ಪಗಳಾದರು ನಿನ್ನ ಸಾಯುಜ್ಯ ನಮಗೆ ಸ್ಥಿರವೆಂದು ಭಕ್ತಿ ಮನೋಸಂಕಲ್ಪದಿಂದ ಸಿದ್ಧಮಾಡಿಕೊಂಡಿರುವೆವೂ ನಿನ್ನಂಗದ ಸಂಗವಾಯಿತೆಂದರೆ ಸಾಕು. ನಮ್ಮ ಗಂಡಂದಿರ ಸುದ್ದಿ ನಮಗೇನು ಬೇಕು. ನೀನು ಒಲಿಯದ ಭಾಗ್ಯವಿದ್ದೇನು ಫಲಾ. ನೀನು ಧಾರು ನಿನ್ನ ಪೆಸರೇನೂ ಅರುಹಬೇಕೈ ದೇವಾ ದಿವ್ಯ ಪ್ರಭಾವಾ.

ಭೈರವಿ ಆದಿತಾಳ

ಸಲ್ಲದಿಂತಾ ಮಾತು ನಮ್ಮೊಳೂ
ಸರಸಿಜಾಕ್ಷಿ  ವಲ್ಲೆ ನಿಮ್ಮಾ  ಸಂಗಸುಖಗಾಳೂ ॥

ಖುಲ್ಲ ಧನುಜಾ  ಸತಿಯರೂ ನೀವೂ
ನಾರಿಗಳಿರಾ  ಬಲ್ಲೆನಿಂತ ಮಾತುಗಳ ನಾನೂ ॥

ದಿಟ್ಟ ಭೀಮೇಶನ ಆಣೆಗೂ  ನಾನೊಲ್ಲೆನೀಗಾ
ಮುಟ್ಟಲಾರೆ ನಿಮ್ಮ ತನುವನೂ ॥

ಬೌದ್ಧ: ಕಾಂತೆಯರಿರಾ, ಯನ್ನ ಪೆಸರು ಬಿತ್ತರಿಸುತ್ತೇನೆ ಕೇಳಿ. ಬ್ರಹ್ಮಾದಿ ದೇವತೆಗಳಿಂದ ವಂದಿತನಾದ ದ್ವಾರಕಿವಾಸ ಶ್ರೀನಿವಾಸ ಶ್ರೀಕೃಷ್ಣ ಬೌದ್ಧ ದೇವನೆಂದು ನನ್ನ ಹೆಸರು. ನಿಮ್ಮ ಅಂಗ ಸಂಗ ಸುಖ ನಮಗೇನು ಬೇಕಿಲ್ಲಾ. ನೀವು ರಾಕ್ಷಸಾಂಗನೆಯರು ನಿಮ್ಮ ಮನಸ್ಸೇ ಕಠಿಣವು ನಿಮ್ಮನ್ನು ನಂಬುವದುಂಟೆ ನಾನು ಸರ್ವಥ ನಿಮ್ಮನ್ನು ನಂಬೆನು. ಅಂಬುಜಾಕ್ಷಿಗಳಿರಾ ನಿಮ್ಮನ್ನು ನಾನೊಲ್ಲೆ ಸುಮ್ಮನೆ ನೀವು ಬಂದ ಕಾರ‌್ಯವೇನೋ ನೆರವೇರಿಸಿಕೊಂಡು  ತೆರಳಿರೇ ನಾರೀಮಣಿಗಳಿರಾ.

ಕಂದ

ಒಲ್ಲೆನು ನಾನೆಂದರೇ  ಸಲ್ಲಲಿತದಿ ಬಲ್ಲ
ಬುದ್ದಿವಂತರು ಯಿಳೆಯೋಳ್  ಪಲ್ಲವಪಾಣಿ
ಗಳೆಮ್ಮನು  ವಲ್ಲೆ ನಾನೆಂದು ನುಡಿವದಿದು ಸರಿಯಲ್ಲೈ ॥

ಗೌಳಅಟತಾಳ

ವಲ್ಲೆನೆಂಬುವರೇನೊ ಯಲೊ ಜಾಣ ॥
ಸೈ ಸೈ ಯಲೊ ಜಾಣ  ಯಿಲ್ಲಾದೋಯಿತೆ
ಕರುಣಾ  ಕೇಳೋ ರಮಣಾ ॥

ರಕ್ಕಸರ ಕನ್ನೆಯರೆಂದೆಮ್ಮಾ ಜರಿವೋದು  ತಕ್ಕದ್ದಲ್ಲವೊ
ನಿಮಗೆ ದೇವಾನೆ  ಸಿಕ್ಕಿದೆವೆಂದೂ
ಕೂಡೊ  ಮೋಹಾವಿಡೋ ॥

ಸುಮಾಲಿನಿ: ಹೇ ಕೃಷ್ಣಾ ಹೇ ಮುಕುಂದಾ ನಿಮ್ಮ ನಿಜತ್ವ ಕಂಡೆವು. ನಮ್ಮಂಥ ಮೂಢರಿಗೆ ಮುಕ್ತಿ ಸಾಯುಜ್ಯ ಕೊಡಲಿಕ್ಕೆ ಯಿದ್ದಲ್ಲಿಗೆ ಬಂದ ಭಕ್ತರಕ್ಷಾಮಣಿ, ದೈತ್ಯರ ಮೋಹವಶದಲ್ಲಿರ್ಪ ನಮ್ಮ ದುರಿತಮಂ ದೂರಪಡಿಸಿ ಮುಗ್ಧರಾದ ನಮ್ಮನ್ನು ಪಾಲಿಸಬೇಕೈ ಸ್ವಾಮಿ. ಹದಿನಾರು ಸಾವಿರ ಸ್ತ್ರೀಯರನ್ನು ದಯದಿಂದ ಪರಿಪಾಲನೆ ಮಾಡತಕ್ಕ ಸರ್ವೇಶನಾದ ನಿನಗೆ ನಮ್ಮನ್ನು ಪೊರೆವುದು ಅಗಾಧವಾಗಿಲ್ಲವೋ ಸ್ವಾಮಿ ನಮ್ಮ ಪೂರ್ವಸುಕೃತಕ್ಕಾಗಿಯೆ ಯಿಲ್ಲಿಗೆ ದಯ ಮಾಡಿದೆ ಪುನಹ ನಮ್ಮನ್ನು ಯೀ ಭವಕೂಪಕ್ಕೆ ದಬ್ಬಿ ಹೋಗುವಂಥದ್ದು ನಿಮಗೆ ನ್ಯಾಯವಲ್ಲವೊ ಶೌರಿ ಮುರಾರಿ.

ಪದ

ನಿನ್ನಾ ರೂಪನು ನೋಡಿ  ಖಿನ್ನರಾದೆವು
ನಾವು  ಮನ್ನಿಸೊ ಮಹಾನುಭಾವ
ಕನ್ನೆಯರಾ ಬಿಡಬ್ಯಾಡೊ  ಬೇಗಾ ಕೂಡೋ ॥

ಸುಮಾಲಿನಿ: ಹೇ ಶ್ರೀಧರಾ, ಈ ಮಾಲಿನಿ ಭಕ್ತಿ ಸಾಮಾನ್ಯವೇನು ಅದು ಹಾಗಿರಲಿ ಜಗತ್ತಿನಲ್ಲಿ ನೀನು ದೊರಕದ ಕಾಲದಲ್ಲಿ ಪುಣ್ಯಪಾಪಗಳಿಗೆ ಭಾಗಿಗಳಾದ ಈ ಸ್ಥೂಲತರಕ್ಕೆ ಸಂಸಾರೀಕ ಪತಿಗಳಪೇಕ್ಷೆ ಮಾಡುವರು. ಮೂಢಚಿತ್ತರಲ್ಲದೆ ನಿನ್ನ ಸನ್ನಿಧಿಯನ್ನು ಹೊಂದಿದ ಮ್ಯಾಲೆ ಹೆಂಡರ‌್ಯಾರು ಗಂಡನ್ಯಾರು ಆತ್ಮ ಪ್ರಕಾಶಕ್ಕೆ ಹೊಂದುವುದಿಲ್ಲಾ. ಮಾಯಕಾಂತರು ಜುಣುಗಬೇಕೆಂಬುವದೇ ಪ್ರಸಿದ್ದ. ನಿನ್ನ ಪ್ರಭಾವವನ್ನು ತೋರಿದ ಮೇಲೆ ಸಂಶಯವೆ ಯಿಲ್ಲಾ ಅಂಗಜನ ಕೇಳಿಗೆ ಬಾರೈ ಲಕ್ಷ್ಮೀವಲ್ಲಭಾ.

ಪದ

ಸಂನ್ನೂತ ಭೀಮೇಶಾ  ನೆನ್ನೂತಾ
ಮನದಲ್ಲಿ  ಪನ್ನಾಗಧರನಾಣೆ ನಂಬಿಹೆವೊ
ಮನ್ನಿಸಿ ಯಂಮ್ಮಾ ಕೂಡೋ  ಬಿಡಬ್ಯಾಡೋ ॥

ಮಾಲಿನಿ: ಹೇ ನಗಧರಾ, ಯನ್ನನುಜೆಯ ಮಾತಿಗೆ ಮರುಗದಿರುವೆ. ಆದರೂ ಚಿಂತೆಯಿಲ್ಲಾ ಯನ್ನೊಳ್ ನಿರ್ದಯ ಮಾಡಬ್ಯಾಡ. ಆದರೆ ನಾವು ಪತಿವ್ರತೆಯರೆಂಬುವರೆ ಹೊರತಾಗಿ ಸಾಧಾರಣ ಸ್ತ್ರೀಯರಂತೆ ನಾವಲ್ಲಾ, ನಿನ್ನಂತರಂಗದಿಂದ ನೋಡು ಯಮ್ಮಲ್ಲಿ ನಿನ್ನ ಕೃಪೆ ಮಾಡು ನಮ್ಮನ್ನು ಕೂಡೊ  ಹಿತದಿಂದ ಮಾತಾಡು ಸುಮ್ಮನೇ ಕಾಡಬ್ಯಾಡ ಕೃಪಾಕರ – ದಿವ್ಯ ಪ್ರಭಾಕರಾ.

ಬೌದ್ಧ: ಹೇ ಅಂಗನಾಮಣಿಯರೆ, ನಿಮ್ಮ ಅಂಗಸಂಗಕ್ಕೆ ಹಿಂಗದೆ ಯೋಚಿಸಿದರೆ ನಿನ್ನ ಸಂಗಸುಖ ಕೇಳಿದರೆ ಹೀಯಾಳಿಸದೆ ನಿನ್ನ ಮೆಚ್ಚುವಳೆ ಯಿದು ಸರಿಯಲ್ಲಾ ನಿಮ್ಮೊಳು ದಯಬಾರದು ಸುಮ್ಮನೆ ಯಾತಕ್ಕೆ ವೇಧಿಸುವಿರೇ ನಾರೀಮಣಿಗಳಿರಾ.

ಅಟತಾಳ

ಲಾಲಿಸೊ ಲಲಿತಾಂಗಾ  ಭವ ಭಂಗಾ ॥
ಮಾತುಗಳ್ಯಾಕೋ ರಂಗಾ  ಕೂಡೊ ಸಂಗಾ
ಮೋಹಿಸಿದೆವೊ ನಿಮ್ಮಾ  ಕೂಡೊ ಯಮ್ಮಾ ॥
ಕಾಮಿನಿಯರೊಳ್ ರೂಪಾ  ತಿಳೀ ಭೂಪಾ ॥
ಪತಿವ್ರತೆಯರೊ ಕಾಂತಾ ದಯಾವಂತಾ ॥
ದಾನವರಲ್ಲೋ ದೇವಾ  ಪ್ರಭಾವಾ ॥
ವರ್ಣಿಸಿ ನೋಡೋ ನೀನೂ  ಯಲ್ಲವನ್ನೂ ॥
ಅಕ್ಕರವಿಡೊ ಕಾಂತಾ ಭಗವಂತಾ ॥

ಸುಮಾಲಿನಿ: ಹೇ ನಾರಾಯಣ, ಅಬಲೆಯರಾದ ನಮ್ಮ ಮಾತು ಲಾಲಿಸು. ದಾನವ ಕನ್ನೆಯರೆಂದೆನಬ್ಯಾಡಾ ಪತಿವ್ರತಾ ಭಾವಾ ದಾನವರಿಗೆಲ್ಲಿಹದೂ ಮನು ಬ್ರಹ್ಮರ್ಷಿ ಪುತ್ರಿಯರು ನಾವು. ಬ್ರಹ್ಮ ಸಂತತಿ ಅಲ್ಲದಿದ್ದರೆ ಪತಿವ್ರತಾಭಾವ ನಮಗೊಪ್ಪಿಸಲಾರದಾದ ಕಾರಣ ನಿನ್ನ ಕರುಣವಿಟ್ಟು ಕಾಯಬೇಕೊ ನಾರಾಯಣಾ ಸದಾ ನಿನ್ನ ಪಾರಾಯಣಾ.

ಕಂದಾ

ಮಾನಿನಿಮಣಿಯರೆ ಲಾಲಿಸಿ  ಜ್ಞಾನದಿ ನೋಡಿರಿ
ನಿಮ್ಮಯ ಸ್ಥಿತಿಗಳ್  ಪಾನವ ಮಾಡುತ ಮದ್ಯವ
ದಾನವ ಕೂಡಿದ ಸತಿಗಳ ಸಂಗ ಸಲ್ಲದು ಯನಗೆ ॥

ಬೌದ್ಧ: ಹೇ ನಾರೀಮಣಿಗಳಿರಾ, ನೀವು ಯೆಷ್ಟು ವಿಧದಿಂದ ಪೇಳಿದಾಗ್ಯೂ ಪ್ರಯೋಜನವೇನು ದುಷ್ಟ ರಕ್ಕಸರ ಸಂಗದಲ್ಲಿದ್ದವರಲ್ಲದೆ ದೇವಾಂಶ ಸಂಭೂತರಲ್ಲವಾದ ಕಾರಣ ನನ್ನ ಮನಸ್ಸು ನಿಮ್ಮ ಮ್ಯಾಲೆ ಮಮಕರಿಸುವುದಿಲ್ಲಾ ಸುಮ್ಮನೆ ಕಾಡಬ್ಯಾಡಿರಿ ನಾರಿಗಳಿರಾ.

ಧನ್ಯಾಸಿ ಅಟತಾಳ

ಸ್ಮರತಾಪಕೆ ಯನ್ನ  ಮರೆಹೊಕ್ಕ
ರುವರೆಂಭೊ  ಕರುಣಾವಿಲ್ಯಾಕೊ
ಸದೃಶ ಚಂದ್ರಬಿಂಬಾ ॥

ಅರಿತು ಯಿರುವ ನಾರಿಯರು ಯೆಂಬಾ
ಭಾವಾವೂ  ಯಿರವೂ ತಿಳಿಯದಂತಾ
ಡುವರೆ ದಮ್ಮಯ್ಯ ॥

ದಿಟ್ಟದಿಂದಲಿ ರಾಜಘಟ್ಟಾದೊಡೆಯನಾಣೆ
ಸೃಷ್ಟೀಶ ನಿಮ್ಮನು ಬಿಟ್ಟು ಪೋಗುವರಲ್ಲಾ ॥

ಸುಮಾಲಿನಿ: ಹೇ ಮಹಾನುಭಾವ ಅತ್ಯಧಿಕ ದೇವ, ನಿನ್ನ ಪಾದ ಸಂದರುಶನವಾದ ಮ್ಯಾಲೆ ಧಾರಿಗಾದರೂ ಸಂಶಯವೆಂದರೇನೂ ಸುಮ್ಮನೆ ಕಾಡಬ್ಯಾಡಾ ನಿನ್ನ ಚರಣಕಮಲವೆಂಬ ಭಕ್ತಿಯೆಂಬ ತತ್ವವಿರತಿಯೆಂಬ ಆಯುಧಪಾಣಿಗಳಾಗಿ ತತ್ವವಿರತಿಯೆಂಬ ತುರಂಗವೇರಿ ಕೃಷ್ಣ ನಾಮಾಮೃತವಂ ಸಾರಿ ಸತ್ಯಲೋಕವಂ ಸೂರೆ ಮಾಡುತ್ತೇವೆ. ನಿನ್ನ ಸರಸಕ್ಕೆ ಯಮ್ಮನ್ನು ಕರೆದು ಅರ್ತಿಯಿಂದೊಂದುಗೂಡಿ ವಿರತಿ ಮದನಾತುರವಂ ತೀರಿಸೋ ಸ್ವಾಮೀ ಸೇವ್ಯಜನ ಪ್ರೇಮೀ.

ಬೌದ್ಧ: ಹೇ ನಾರೀಮಣಿಯರೆ. ಲೋಕದಲ್ಲಿ ಅತ್ತಿ ಹೂವನ್ನು ಕಂಡವರು ಧಾರು ಯಿಲ್ಲಾ. ಅಂಥ ಅತ್ತಿ ಹೂವನ್ನು ಕಾಣಬಹುದು. ನೂರು ಬಿಳಿ ಕಾಗೆಗಳನ್ನಾದರೂ ನೋಡಬಹುದು. ನೀರಿನಲ್ಲಿರುವ ಮೀನಿನ ಹೆಜ್ಜೆಯನ್ನಾದರು ನೋಡಬಹುದು. ಹೆಂಗಸಿನ ಮರ್ಮ ತಿಳಿಯಲು ಧಾರಿಂದಲೂ ಆಗದೆಂಬ ನೀತಿಶಾಸ್ತ್ರವಿರುವದಾದ್ದರಿಂದಾ ನಿಮ್ಮ ಮಾತಿಗೆ ನನ್ನ ಮನಸ್ಸು ಮಮಕರಿಸುವದಿಲ್ಲವಾದ ಕಾರಣ ಸುಮ್ಮನೇ ಕಾಡಬ್ಯಾಡಿರೇ ನಾರಿಯರಿರಾ.