ಈಶ್ವರ: ಆಹಾ ಬ್ರಹ್ಮಾ  ಏನುಕಾರಣ ರಥವ ನಡೆಸುವುದಕ್ಕೆ  ಅಟಂಕ ಮಾಡಿಸಿ  ಅಂತರಿಕ್ಷಕ್ಕೆ ಬರುವ ರಥವು  ಭೂಮಿಗಿಳಿಯಲು ಕಾರಣವೇನು ಚತುರಾನನಾ ॥

ಬ್ರಹ್ಮ: ಹೇ ಸದಾಶಿವ, ಚತುರ್ವೇದ ಸ್ಯಂದನಂ ವುದ್ಘೋಷಮಂ ಮಾಡುತ್ತಾ ಯಿಗರಂಗಳಂ ಬೀರುತ್ತಾ ಅಂತರಿಕ್ಷಕ್ಕೆ  ಹಾರಿದ ರಥವು ಮುಂದಕ್ಕೆ ಕದಲದೆ ನಿಂತು ಯಿರುವುದು. ಯಿದಕ್ಕಾಗಿ ಬಂದ ವಿಘ್ನ ದಾವುದೊ ತಿಳಿಯಲಿಲ್ಲಾ ಮಹಾದೇವಾ ಸುಜನ ಸಂಜೀವಾ.

ಈಶ್ವರ: ಯಲೈ ಚತುರಾನನಾ ಅಂತರಿಕ್ಷದಲ್ಲಿ ಧಾರಾದರು ಇರುವರೇನೂ ನೋಡು ನೋಡು ವಿಷ್ಣುನಂದನಾ.

ಬ್ರಹ್ಮ: ಹೇ ಮಹಾದೇವಾ, ನಿನ್ನ ಹಿರಿಮಗ ಶುಂಡದೋರ್ದಂಡಮಂ ಎತ್ತಿ ಝೇಂಕಾರ ಮಾಡುತ್ತಾ ಕ್ರೂರ ಮಾನಸನಾಗಿ ನಿಂತಹಾಗೆ ತೋರುತ್ತದೆ. ವಿಘ್ನರಾಜನೆ ವಿಘ್ನ ಮಾಡಿದ ಹಾಗೆ ನನಗೆ ತೋರುತ್ತಾ ಇದೆ ಸಾಂಬಶಿವಾ.

ಈಶ್ವರ: ಅಪ್ಪಾ ನಂದನಾಗ್ರಣಿ ಇಲ್ಲಿ ಯಾತಕ್ಕೆ ನಿಂತಿರುವಿ. ನಮ್ಮ ರಥ ಅಂತರಿಕ್ಷಕ್ಕೆ ಏನು ಕಾರಣಾ ಏರಲೊಲ್ಲದು. ತ್ರಿಪುರ ಸಂಹಾರ ಕಾಲದಲ್ಲಿ ವಿಘ್ನ ಧಾರಿಂದಾಯಿತು ವಿಘ್ನರಾಜಾ ನನ್ನ ಮೋಹದ ತನುಜಾ.

ಆದಿ ಅರ್ಧ ಚಂದ್ರಿಕೆ

ಗರ್ವಾ ನಿನಿಗ್ಯಾಕೆ ಬಂತೊ ಮಹಾದೇವಾ
ವೂರ್ವಿಗೆ ನೀನೆ ಶ್ರೇಷ್ಟಾ  ಮಹಾದೇವಾ      ॥

ಮೊದಲು ನಿನ್ನ ವಾಕ್ಯದಂತೆ ಮಹದೇವಾ
ಮುದದಿ ಯನ್ನಾ ಪೂಜಿಸಲಿಲ್ಲಾ  ಮಹದೇವಾ ॥

ವಿಘ್ನ ಮಾಡಿ ಬಂದೂ ನಿಂದೆ  ಮಹಾದೇವಾ
ನಿರ್ವಿಘ್ನಾ ಭೀಮೇಶನೆ ಬಲ್ಲಾ ಮಹಾದೇವಾ ॥

ವಿಘ್ನೇಶ್ವರ: ಹೇ ಧೂರ್ಜಟಿ, ನೀನೇ ತಾನೆಂದು ಗರ್ವಪಟ್ಟು  ಸರ್ವಸ್ವತಂತ್ರಕ್ಕು ದೇವತಾ ಪ್ರಭುವೆನಿಸಿ ಪ್ರಳಯರುದ್ರ ಪ್ರೀತಿಯಿಂದ ಯನ್ನ ಮರೆತು ರಥವೇರಿ ತ್ರಿಪುರ ಭಂಗ ಮಾಡುವೆನೆಂದು ನಿಂತಿರುವಿ ನಿನ್ನ ಸತ್ವವುಂಟಾದರೆ ನೀನೆ ಕೂತುಕೊ. ಆದಿ ಮೂರುತಿಯಾದ ಬ್ರಹ್ಮನೆ ಈ ರಥವನ್ನು ನಡೆಸಲಿ ನೋಡೋಣ. ಯಲೈ ದೇವನೆ ಮೊದಲು ನೀನು ನನಗೆ ಏನೆಂದು ವರವಂ ಕೊಟ್ಟಿರುವೆ. ಜ್ಞಾಪಕ ಯಿರುವುದೊ ಯಿಲ್ಲವೊ ಧಾವ ಕಾರ‌್ಯಕ್ಕು ಮೊದಲು ವಿಘ್ನೇಶನ ಪೂಜೆ ಮಾಡಿದರೆ ಕಾರ‌್ಯ ಸಾಗಲಿ ಇಲ್ಲದಿದ್ದರೆ ವಿಘ್ನವಾಗಲಿ ಯೆಂದು ವರವನ್ನು ಕೊಟ್ಟು ಯೀಗ ನೀನು ಏನು ಕಾರಣ ಪೂಜೆ ಮಾಡಲಿಲ್ಲ ಹೇಳು ನಿನ್ನ ವಾಕ್ಯದ ಪರಿಮಾಣ ಎಲ್ಲಿ ಹೋಯಿತು. ಮಹಾದೇವಾ ಎಲ್ಲವು ನಿನ್ನ ಪ್ರಭಾವಾ.

ರೂಪಕ

ಬಾರೊ – ಬಾರೊ – ನಂದನಾ  ವೊಪ್ಪಿ
ಯಿರುವೆ ನಿನ್ನ ನಾ  ತಪ್ಪದಂತೆ ಪೂಜೆಯನ್ನು
ವಪ್ಪದಿಂದ ಮಾಡ್ವೆ ನಾ ॥

ಮುದ್ದು ಮೋಹದ ಕಂದನೆ  ಸಿದ್ಧಿ ವಿದ್ಯಾಧರನೆ
ಗದ್ದುಗೆ ಮಾಡಿರ್ಪೆ ಬಾರೋ  ಸಿದ್ದಿ ಸೌಖ್ಯದಾಯಕಾ ॥

ತಪ್ಪಿತೈಯ್ಯ ಕಾರ‌್ಯವು  ಸರ್ಪಬಂಧನ ಬೇಗ ಬಾ
ಒಪ್ಪದಿಂದ ನಿನ್ನ ಪೂಜೆ  ತಪ್ಪದಂತೆ ಮಾಡ್ವೆ ನಾ ॥

ಈಶ್ವರ: ಹೇ ನಂದನಾಗ್ರಣಿ ಮೊದಲು ನಿನ್ನ ಪೂಜಿಸದೆ ಇದ್ದದ್ದು ನಮ್ಮದು ತಪ್ಪಾಯಿತು. ನೀನು ಕೋಪವನ್ನು ಮಾಡಬೇಡಾ ನಮಗೆ ಸಿಟ್ಟು ಬಾರದು. ಈ ಕಾರ‌್ಯಕ್ಕೆ ವಿಘ್ನಮಂ ತೋರಿದೆಯಲ್ಲಾ. ನಿನ್ನ ಕೋಪವಂ ಸಾಕು ಮಾಡಿ ರಥವನ್ನು ಸಾಗಿಸಿಕೊಟ್ಟು ಕೀರ್ತಿಯನ್ನು ಪಡೆಯುವಂಥವನಾಗಪ್ಪ ಕಂದಾ ಪಂಥವನ್ನು ಹಿಡಿಯಬ್ಯಾಡಪ್ಪಾ ನಂದನಾ.

ವಿಘ್ನೇಶ್ವರ: ಹೇ ಸದಾಶಿವಾ ಸರಿಯಾಗಿ ದೇವತಾ ನಿಕರಗೂಡಿ ನನಗೆ ಮೋದಕಂಗಳಂ ಮಾಡಿ  ಭಕ್ಷ್ಯಪಾಯಸಂಗಳೆದುರಿಟ್ಟು ಅರ್ಪಿತ ಮಾಡುವವರೆವಿಗೂ ನಿಮ್ಮ ರಥವನ್ನು ನಾನು ಮುಂದಕ್ಕೆ ಬಿಡುವದಿಲ್ಲವೈ ಸಾಂಬಸದಾಶಿವಾ.

ಈಶ್ವರ: ಅಪ್ಪಾ ನಂದನಾ ನೀನು ಪೇಳಿದ ಮೇರೆಗೇ ನಡೆಸುವೆನು ಸಿಟ್ಟು ಮಾಡಬ್ಯಾಡಾ.

ಯಲಾ ಸಾರಥಿ ಮಂಗಳದ್ರವ್ಯಗಳಿಂದಲಂಕರಿಸಿ ಫಲಭಕ್ಷ್ಯ ತಾಂಬೂಲಮಂ ಸಮರ್ಪಿಸಿ ಧೂಪ-ದೀಪ-ಸಾಂಬ್ರಾಣಿಯ ಸಮರ್ಪಿಸಿ ಸಮಸ್ತ ವುಪಚಾರದಿಂದ – ಪೂಜಿಸಿರೈ ಸಾರಥಿ. ಹೇ ಶ್ರೀ ಗಣನಾಥ ಈಗ ತೃಪ್ತಿಪಟ್ಟು ಮುಂದಕ್ಕೆ ರಥವಂ ನಡೆಸಿ ಕೀರ್ತಿ ವಹಿಸಪ್ಪಾ ನಂದನಾಗ್ರಣಿ ನನ್ನ ಬಾಲಶಿರೋಮಣಿ.

ವಿಘ್ನೇಶ್ವರ: ಹೇ ಸಾಂಬ, ನಿನ್ನ ವಾಹನನಾದ ವೃಷಭರಾಜನನ್ನ ಕರೆಸಿ ಭೂಮಿಗಿಳಿದ ರಥವನ್ನು ಎತ್ತೆಂದು ಹೇಳು. ಇನ್ನು ಮ್ಯಾಲೆ ಎತ್ತೆಂಬುವದು ಲೋಕದಲ್ಲಿ ಪ್ರಸಿದ್ದವಾಗಲಿ ದೇವಾ ಮಹಾನುಭಾವಾ.

ರೂಪಕ

ಎತ್ತು ಬಾರೊ ವೃಷಭರಾಜ  ಚಿತ್ತರಾದ
ರಥವನೀಗ  ಎತ್ತು ಎತ್ತು ಎತ್ತು ಎತ್ತು
ಎತ್ತು ಎತ್ತೆಲೋ ॥

ಅತಳಕಿಳಿದ ರಥವ ನೀನು ॥ಮರ್ತ್ಯಲೋಕಕೆ ಎತ್ತೆಲೊ
ಪೃಥ್ವಿರಥವ ಪ್ರೀತಿಯಿಂದ ಬಿತ್ತರಾದಿಂದೆತ್ತು ಬಾ

ಯೆತ್ತು ಬಾರೊ ವೃಷಭರಾಜ ॥ ॥

ಸದಾಶಿವ: ಹೇ ವೃಷಭ ರಾಜನೆ, ವಿಘ್ನೇಶ್ವರನ ವಾಕ್ಯದಂತೆ ನೀನು ಈ ಪೃಥ್ವೀರಥವಂ ಎತ್ತಿದ ಮಾತ್ರದಿಂದಲೆ ತ್ರಿಪುರ ಸಂಹಾರವನ್ನು ಮಾಡುವೆನು. ಈ ಹದಿನಾಲ್ಕು ಲೋಕಕ್ಕೆ ನಿನ್ನ ನಾಮ ಪ್ರಭಾವ ಪ್ರಖ್ಯಾತವಾಗುವುದಲ್ಲದೆ ನಿರ್ಜರ ರಕ್ಷಣೆಯಾಗುವದು. ಈ ಕುಂಭಿಣೀ ರಥಕೆ ನಿನ್ನ ಭುಜಮಂ ಕೊಟ್ಟು ಎತ್ತಿದಲ್ಲಿ ನಾನು ಸಾಂಬನು ನೀನು ಎರಡನೆಯ ಶಂಭುವಾಗಪ್ಪಾ ವೃಷಭರಾಜಾ. ಸರ್ವಕಾಲವು ನಿನ್ನ ರೂಪವನ್ನು ಮರ್ತ್ಯಲೋಕದಲ್ಲಿ ಶಿಲೆಯಿಂದಾಗಲಿ ಸ್ವರ್ಣದಿಂದಾಗಲಿ ರಜತದಿಂದಾಗಲಿ ನಿರ್ಮಿಸಿ ಪೂಜೆಯನ್ನು ಮಾಡಲಿ ಅಂಥಾ ಭಕ್ತರಿಗೆ ಇಷ್ಟಾರ್ಥಸಿದ್ದಿಯಾಗಲಿ ಎತ್ತು ಬಾರಪ್ಪಾ ವೃಷಭರಾಜನೆ  ಮುಂದೆ ಕಲಿಯುಗದಲ್ಲಿ ಶಿಲಾದ ರುಷಿಗೆ ಪುತ್ರನಾಗಿ ತದ್ರುಷಿಯ ವಂಶ ಶಿವಭಕ್ತಿ ರಹಸ್ಯ ಮೂಲಮಂ ಕಂಠದಲ್ಲಿ ಧರಿಸಿ ವುತ್ತಮ ವೀರಶೈವ ಆಚಾರಮಂ ಸ್ಥಾಪನೆ ಮಾಡಿ ಜೈನಕುಲ ಮುರಿದೂ ಕುಂಚಪರುಷಿ ಹಸ್ತನಾಗಿ ಜಂಗಮಲಿಂಗಕ್ಕೆ ಆಧಾರ ದೇಹಿಯಾಗಿ ಬಿಜ್ಜಳಾಂಕನಲ್ಲಿ ಪ್ರಧಾನ ಪಟ್ಟವಂ ಕಟ್ಟಿಕೊಂಡು ಶಿವಭಕ್ತಿ ಗುರುಭಕ್ತಿ ದೈವಭಕ್ತಿ ಹೀನರ ಹಲ್ಲು ಮುರಿದು, ಜಗವನ್ನುದ್ದರಿಸುತ್ತಾ ನಿತ್ಯ ಲಕ್ಷ ತೊಂಬತ್ತಾರು ಸಾವಿರ ಗಣಾಧೀಶ್ವರರಿಗೆ ಅರ್ಚನೆಯನ್ನು ಮಾಡಿ ನಿತ್ಯ ಅನೇಕ ಪವಾಡಗಳನ್ನುಂಟು ಮಾಡುತ್ತೇನೆ. ನೀನಿರುವ ಕಾಲದಲ್ಲಿ ಈ ನಾರದರೆ ಕೊಂಡಿ ಮಂಚಣ್ಣನವರು. ವೀರಭದ್ರನೇ ಮಡಿಾಳಿ ಮಾಚಿದೇವರು. ಭೃಂಗೀಶ್ವರನೇ ಮಧುವರಸನವತಾರ. ಕುಮಾರದೇವನೆ ಹರಳೈಯ್ಯ ವಿಷ್ಣುವೆ ಚನ್ನಬಸವಣ್ಣನವತಾರ. ಬ್ರಹ್ಮನೆ ಸಿದ್ಧರಾಮನವತಾರಾ. ನನ್ನ ಮೂಲಪ್ರಣವ ಕೋಟಿಯೆ ಅನಂತಲಿಂಗ ಜಂಗಮವತಾರಾ, ಜಂಗಮಕ್ಕೆ ಅರ್ಚನೆ ಮಾಡುವ ಮನೆಗೆ ನೀನೇ ದ್ವಾರಪಾಲಕನಾಗಿ ಈ ಗೌರಿಯೆ ನಿಜ ಶಕ್ತಿ ನನ್ನ ಮೂರ್ಧನಿಯವೆ ನಿನ್ನ ನಿಜರೂಪು ಬಸವೇಶ್ವರನರ್ಧಾಂಗಿಯೆ ಗಂಗಾಂಬಿಕೆ ಅವತಾರ, ಕೆಲವು ಕಾಲದ ಮ್ಯಾಲೆ ಚಾಮುಂಡಿ ಶಕ್ತಿ ನೀಲಾಂಬಿಕೆ ಅವತಾರಳಾಗಿ ನಿನ್ನ ಕೂಡುವಳು. ಇದರಂತೆ ನಡಿ ನಮ್ಮ ಆಜ್ಞಾಭರಿತನಾಗಿ ಭೀಮೇಶ್ವರನಿಗೆ ಪ್ರೀತನಾಗಿ ಕಲ್ಯಾಣ ನಗರವಂ ಪಾಲಿಸುತ್ತಾ ಕೆಲವು ಕಾಲದ ಮೇಲೆ ಬೌದ್ಧಮತಾಭಿಮಾನಿ ಬಿಜ್ಜಳಗೆ ಗರ್ವ ಬಂದು ಶಿವನ ರೂಪು ಜಂಗಮಕ್ಕೆ ವಿರೋಧವಾಗಿ ನಟಿಸುವ ಕಾಲದಲ್ಲಿ, ಜಂಗಮ ಹೃದಯದೋಳ್ ದುಃಖಬಂದು ನಟಿಸುವರ ನೋಡಬ್ಯಾಡಾ. ಅವನ ಗರ್ವಮುರಿಸಿ ಪ್ರಾಣ ಕಳಿಸಿ ಕಲಿಯುಗಾಂತವರೆವಿಗೂ ಶಿವಮೂಲ ಪ್ರಣವ ವೇದ ಪ್ರಾಣವಸ್ತುಮಾದ ಉಳುವಿ ಮಹಾಮನೆಯಲ್ಲಿ ನಮ್ಮ ಭಕ್ತರ ಚರಿತವಂ ಓದಿ ಕೇಳುತ್ತ ಶಿವದೀಕ್ಷೆಯಂ ವಹಿಸಿ ಅಲ್ಲಿದ್ದ ಮುಗ್ಧ ಸಂಗೈಯ್ಯಗಳು ಮೊದಲಾದ ವಿರಕ್ತ ಶಿವಮೂರ್ತಿಗಳಂ ಅರ್ಚಿಸುತ್ತಾ ಗೋಕರ್ಣಾದಿ ಸ್ಥಳಂಗಳಂ ಸಂಚರಿಸುತ್ತಿರುವ ಭಕ್ತರ ಶಿವನಾಮ ಪಾರಾಯಣ ಪಾಲಿಸುತ್ತಾ ಇರು. ಕೆಲವು ಕಾಲದಲ್ಲಿ ಆ ಉಳುವಿ ಮನೆಯಲ್ಲಿ ನಿನ್ನ ಬಿಟ್ಟು  ಕೈಲಾಸಮಂ ತ್ಯಜಿಸಿ ಹ್ಯಾಂಗಿರಲೆಂದು ಮನವೆರಡನ್ನು ಮಾಡಬ್ಯಾಡಾ. ಆ ಮಹಾಸ್ಥಳವೇ ನಿನಗೆ ಎರಡನೆಯ ಕೈಲಾಸ. ಗೋಕರ್ಣ ಲಿಂಗವೆ ನಿನ್ನ ಪ್ರಾಣಲಿಂಗವಾಗಿರುತ್ತೇನೆ. ಉಳುವಿ ಮನೆ ಸ್ಥಳದಲ್ಲಿ ಸಂಚರಿಸುವ ಶಿವದೀಕ್ಷ ಮಹಾ  ವಿರಕ್ತಿ ಮೂರ್ತಿಗಳು ನಿನ್ನ ಪ್ರತಿಮಾರೂಪವೆಂದು ಭಾವಿಸುತ್ತ ಕಲಿ ಯುಗಾಂತರ ವರೆವಿಗು ನೀನಿದ್ದ ಸ್ಥಳದಲ್ಲಿ ನಾನಿರುವೆ. ತರುವಾಯ ಕೃತಯುಗ ಪೂರ್ವದೋಳ್ ಸಮಸ್ತರನ್ನು ಒಡಗೊಂಡು ಪ್ರಮಥಾದಿಗಳು ಪುರಾತನರು ನವ ಮುಗ್ಧರೂ ಸಹಾ ಕೈಲಾಸಕ್ಕೆ ಬರಬೇಕಪ್ಪಾ ಬಸವೇಶ್ವರಾ, ಭೂತ ಭವಿಷ್ಯ ಕಥಾಂತರಕ್ಕೆ ನೀನು ಕರ್ತನಾಗಿರು. ಸದ್ಯಕ್ಕೆ ತ್ರಿಪುರಾಸುರ ಸಂಹಾರ ಕಾಲದಲ್ಲಿ ರಸಾತಳಕ್ಕೆ ಯಿಳಿದ ಪೃಥ್ವೀರಥಮಂ ಮೇಲಕ್ಕೆ ಎತ್ತಿ ನಿಲ್ಲಿಸೈಯ್ಯ ನಂದೀಶ್ವರಾ ಸಕಲ ಲೋಕೇಶ್ವರಾ.

ನಂದೀಶ್ವರ: ಹೇ ಸದಾಶಿವ, ನಿನ್ನ ಕರುಣ ಕಟಾಕ್ಷದಿಂದ ಈ ಕ್ಷಣದೋಳ್ ನಾಲ್ಕು ಪಾದಂಗಳೂ ಊರಿ ಕೂರ್ಮನ ಬೆನ್ನಿನ ಮ್ಯಾಲೆ ನಿಂತುದುದ್ಭುಜಮಂ ಕೊಟ್ಟು ಎತ್ತುವೆ. ಈ ಅದ್ಭುತ ಭೂ ರಥವೇರಿ ಪುರತ್ರಯದಸುರರ ನಾಶ ಮಾಡಿ ಭೂ ಭಾರಮಂ ನಿವಾರಿಸೈ ಸ್ವಾಮಿ ಪಾರ್ವರ ಮನೋಪ್ರೇಮೀ.

ಮಧ್ಯಮಾವತಿ ಆದಿತಾಳ

ರೂಪಕ

ಜಡಮತಿ ಮೃಢನೆ ನಿನ್ನ  ಕಡಿದು
ಬಿಡುವೆನೋ  ದ್ರುಡದಿ ನಿಂತು ಒಡನೆ
ಯುದ್ಧಮಾಡು ಬಾರೆಲೋ॥ ॥

ಮಕರಾಕ್ಷ: ಯಲಾ ಜಡಮತಿ ಮೃಢನೇ, ಮೂಢತನದಿಂದ ನನ್ನ ಮುಂದೆ ನೀನು ಯುದ್ಧಕ್ಕೆ ನಿಂತದ್ದು ಕಾಡುಕೋಣ ಬಂದ ಹಾಗಾಯಿತು. ನನ್ನ ಕೈಲಿ ಕಡಿಸಿಕೊಳ್ಳುವುದಕ್ಕೆ ಬಂದೆಯೇನೋ ಮೂಢ ಮೃಢನೇ. ॥

ಪದ

ನಾನು ಜಡನು ಅಲ್ಲ ಕೇಳು ದಾನವಾ
ಧಮಾ  ಭಾನುವಾಗಿ ಬಂದಿಹೆ ನಿನ್ನ  ಹನನ ಮಾಡುವೇ॥ ॥

ಮಹಾದೇವ: ಯಲಾ ಪಾಪಿ ರಕ್ಕಸ. ಈಗ ಬಿಡಿಸುವೆ ನಿನ್ನ ಕಕ್ಕಸಾ. ಮೂಢನು ನಾನಲ್ಲಾ ರೂಢಿಗೆ ನಿನ್ನ ಬಲಿಗೊಡುವ ನಿನ್ನ ಪಾಲಿನ ಕಾಡ್ಗಿಚ್ಚೆಂದು ತಿಳಿಯೊ ದಾನವಾಧಮಾ ನಾ ಬಲ್ಲೆ ನಿನ್ನ ಮರ್ಮಾ.

ಪದ

ಬುದ್ಧಿಯಿದೆಯೊ ಯಿಲ್ಲವೊ ಯನ್ನ
ಸುದ್ದಿಯೆತ್ತಲೂ  ಒದ್ದು ನಿನ್ನ ಕೆಡಹು
ವೆನು ಯುದ್ಧ ಮಾಡೆಲೋ ॥

ಮಕರಾಕ್ಷ: ಯಲಾ ಬುದ್ಧಿಯಿಲ್ಲದ ಮುದ್ದು ಮಾನ್ಯನೆ, ಯನ್ನ ಸುದ್ದಿ ಎತ್ತಲೂ ಬುದ್ಧಿ ಇದೆಯೊ  ಇಲ್ಲವೊ ಇಗೋ ನೋಡು. ಈ ಖಡ್ಗಕ್ಕೆ ಈಗಲೆ ನಿನ್ನ ಯೀಡು ಮಾಡುತ್ತೇನೆ. ಧಾರು ಬಂದು ಬಿಡಿಸುತ್ತಾರೋ ನೋಡೋಣ ಮೂಢ ಮಾನ್ಯನೇ.

ಪದ

ಬುದ್ಧಿ ನಿನಗೆ ಇಲ್ಲದೆ ಎದ್ದಿದ್ದು ಕೆಣ
ಕುವೆ  ಮದ್ದುಗುಡಿಕ ದನುಜ ನಿನ್ನ
ಮರಣಗೈಸುವೇ॥ ॥

ಈಶ್ವರ: ಯಲಾ ಬುದ್ಧಿಯಿಲ್ಲದ ಮೊದ್ದು ದಾನವಾ, ಯುದ್ಧದಿಂದ ಓಡಿ ಹೋಗದೆ ಬದ್ಧನಾಗಿ ನಿಲ್ಲು. ಈ ಧರಣಿಯ ಮೇಲೆ ಬೀಳುವಂತೆ ಒದ್ದು ಈ ಕುಂಭಿಣಿಗೆ ನಿನ್ನ ಬಲಿಯಾಗಿ ಚಲ್ಲುತ್ತೇನೆ ನೋಡೊ ಖುಲ್ಲ ದಾನವಾ.

ಪದ

ಇಷ್ಟು ದಿನವು ನಿನ್ನ ನಾನು ಹುಡುಕು
ತಿದ್ದೆನೋ  ದಿಟ್ಟ ರಾಜಘಟ್ಟದೊಡೆಯ
ಬಂದೆ ಏನೆಲೋ ॥

ಮಕರಾಕ್ಷ: ಯಲಾ ದುಷ್ಟ ಭೀಮೇಶನೇ, ನಿನಗಾಗಿಯೆ ನಾನು ಯೀರೇಳು ದೇಶಮಂ ತಿರುಗಿ ಹುಡುಕಿ ತಡಕಿ ಸಾಕಾದೆ. ಷಹಬ್ಬಾಷ್ ನೀನಾಗಿ ಬಂದೆ. ಯಿಗೋ ನೋಡು ವೊಂದಾಯುಧಕ್ಕೆ ಬಲಿಗೊಂಬೆ ನೋಡು ನಿಂತು ಯುದ್ಧಾ ಮಾಡು.

ವಿದ್ಯುನ್ಮಾಲಿ: ಯಲಾ ಮೃಡನೆ, ಯನ್ನ ನಿಡು ಸರಳ್ಗಳ ಬಿಡುಗಡೆಗೆ ಮನಮಾಡಿ ಧಡಧಡನೆ ಒಡನೊಡನೆ ದೃಢದಿಂದ ಪಡಿಬಲದೊಡನೆ ಕೆಡುವುದಕ್ಕಾಗಿ ಬಂದಿರುವೆ, ದೃಢವಾಗಿ ನಿಲ್ಲು ಓಡಿ ಹೋಗಬ್ಯಾಡಾ ಮೂಢ ಮೃಢನೇ.

ಈಶ್ವರ: ಛಿ ಪಾಪಿ ದೈತ್ಯಾಧಮರಿರಾ, ಇನ್ನು ನನ್ನ ಮುಂದೆ ಬಂದು ನಿಲ್ಲುವಿರಾ ದ್ರೋಹಿಗಳಿರಾ ಯುದ್ಧಕ್ಕೆ ನಿಲ್ಲಿರೋ ಭ್ರಷ್ಟರಕ್ಕಸರೇ. ಛೀ ಪಾಪಿ ದನುಜರೇ ನಿಮ್ಮ ಪೌರುಷಗಳು ದೇವತೆಗಳ ಮ್ಯಾಲೆ ತೋರಿಸಲು ಯತ್ನ ಮಾಡಿದಿರಾ ಪಾಪಿಗಳಿರಾ, ಮುನಿಗಳು ಬ್ರಹ್ಮಜ್ಞಾನಿಗಳು. ಇಂಥವರನ್ನಾ ನೋಯಿಸಲು ಯತ್ನ ಮಾಡಿದಿರಾ, ದುಷ್ಟ ದಾನವರೇ ಅದಕ್ಕಾಗಿಯೇ ಸಜ್ಜನರ ನಿಟ್ಟುಸಿರು ಬಂದು ನಿಮ್ಮ ತಲೆಗಳು ಕಡಿಯುತ್ತಲಿದ್ದಾವೆ ನೋಡುವಂಥವರಾಗಿರೊ ಪಾಪಿಗಳಿರಾ.

(ತ್ರಿಪುರಾಸುರರ ಮರಣ)

ಈಶ್ವರ: ಈ ಪಾಪಿಗಳನ್ನು ಹತಗೊಳಿಸಿದ್ದಾಯಿತು. ಇನ್ನು ಕಾರಾಗೃಹದಲ್ಲಿರುವರನ್ನು ಬಿಡುಗಡೆ ಮಾಡಬೇಕು.

ಭಾಗವತರ ವಚನ: ಇಂತು ಮಹಾ ಘೋರಯುದ್ಧದಲ್ಲಿ ತ್ರಿಪುರದ ದುಷ್ಟದಾನವರು ಹತಮಾಗೆ ಸುರರು ಗಗನ ಮಂಡಲದಿ ದುಂದುಭಿ ಮೊಳಗಿಸಿ ಶಿವನ ಶಿರಮುಡಿಯ ಮ್ಯಾಲೆ ಪೂವು ಮಳೆ ಸುರಿಯೇ ಬಂಧಿಸಿದ ದೇವತೆಗಳಿಗೆಲ್ಲಾ ಶುಭ ಸೂಚನೆಗಳಾಗೆ ದೇವಾಧಿದೇವನಾದ ಮೃಢನು ಮತ್ತಿಂತೆಂದನು.

ಈಶ್ವರ: ಯಲಾ ಸಾರಥಿ, ಯನ್ನ ನಯನಾಗ್ನಿಗೆ ಈ ದುಷ್ಟ ತ್ರಿಪುರದಸುರರ ಆಹುತಿಯಾಯಿತು. ಯನ್ನ ಮನ ತೃಪ್ತಿಯಾಯಿತು. ಈ ಪಾಪಿಗಳ ಸೆರೆಮನೆಯಲ್ಲಿರುವ ನಿರ್ಜರ ಸಂಕುಲ ಎಲ್ಲರನ್ನು  ಸೆರೆಬಿಡಿಸಿ ಯನ್ನೆದುರಿಗೆ ಕರದುಕೊಂಡು ಬಾರೋ ಸಾರಥಿ ಸುಜನ ಪ್ರೀತಿ.

ದೇವೇಂದ್ರ: ನಮೋನ್ನಮೋ ಫಾಲನೇತ್ರಾ ಪರಮೇಶ್ವರಾ.

ಈಶ್ವರ: ದೀರ್ಘಾಯುಷ್ಯಮಸ್ತು ಬಾರಪ್ಪಾ ದೇವೇಂದ್ರಾ ಘನಗುಣ ಇಂದ್ರಾ

ನಾರಾಯಣ: ಅಹೋ ಮಹದೇವಾ ನಮೋನ್ನಮಃ. ತ್ರಿಪುರ ಸಂಹಾರ ಮಾಡಿ ದಾನವರ ಸಂಹರಿಸಿ ದಿವಿಜೋದ್ಧಾರ ಮಾಡಿದೆ ಸಾಂಬ ಸೌಭಾಗ್ಯ ಕದಂಬ.

ಬ್ರಹ್ಮ: ಹೇ ತ್ರಿಪುರಾದಿ ದುರುಳ ರಕ್ಕಸರನ್ನೊಕ್ಕಲಿಕ್ಕೆ ತ್ರಿಪುರಾಂತಕನೆಂಬ ಪೆಸರಾಂತೆ ಸ್ವಾಮಿ ಸಜ್ಜನ ಪ್ರೇಮೀ.

ಭಾಗವತರ ವಚನ: ಈ ಪ್ರಕಾರ ಸರ್ವಲೋಕದ ಜೀವಜಾಲವೆಲ್ಲಾ ಸಂತೋಷಪಟ್ಟು ಇಂದಿನ ದಿನವೇ ಶುಭಕಾಲವೆಂದು ಶಿವನಂ ಕುರಿತು ರಂಭಾ ವೂರ್ವಶಿಯರು ಸಹಮಾಗಿ ಪಾರ್ವತಿ ಲಕ್ಷ್ಮಿ  ಸರಸ್ವತಿಯರಾದಿಯಾಗಿ ಪರಮೇಶ್ವರಂಗೆ ಮಂಗಳವಂ ಪಾಡಿದರದೆಂತೆನೇ.

ಮಂಗಳಾರತಿ ಅಟತಾಳ

ಮಂಗಳಾಂ – ಮಂಗಾಳಂ  ಸದಾಶಿವಾ
ಮಂಗಾಳಂ – ಮಂಗಾಳಂ  ವರದಾ ಭೀಮೇಶನೆ,
ವಸುಧೆಯ ಪೊರೆವಾನೆ ॥
ಅಸಮ ಸಾಹಸ ಶಂಭೊ ಶಶಿಧರಾನೆ
ಕುಸುಮಶರನ ಸುಟ್ಟು  ಶಿಷ್ಟರಾ ಪೊರೆದವನೆ
ವಸುಧೆಗಾಧಾರಾನೆ  ಬಿಸಜಾಕ್ಷಸಖನೇ ॥

ತುಂಗ ವಿಕ್ರಮ ಲಿಂಗ ಸಂಗಾನಿನಾದನೇ
ಗಂಗಾ ಮನೋಸ್ಸಂಗಾ ರಂಗಶುಭಾಂಗ  ಅಂಗನಾ
ಮಣಿಯರ ಹಿಂಗಾದೆ ಸಲಹಿದೆ  ಭಂಗ
ವಿಲ್ಲದಾ ಲಿಂಗ ಮೂರುತಿಯೆ ॥ಮಂಗಾಳಂ ॥

ದಿಟ್ಟಾದಿಂದಲಿ ರಾಜಘಟ್ಟದೊಡೆಯ ಶಂಭೊ
ಇಷ್ಟಾದಿಂ ಪೊರೆಯೋ ಶಿಷ್ಟಾರನೂ
ಕೃಷ್ಣಸಖನೆ ನಿನ್ನಾ  ಭಜಿಸೂವೊ ದಾಸರ
ಭೀಷ್ಟಾವಾ ಪಾಲಿಸೋ ಇಷ್ಟಾಲಿಂಗೇಶಾ ಮಂಗಾಳಂ ॥