ಕವಿ: ವೀರಶೈವ ಸಮುದಾಯಕ್ಕೆ ಸೇರಿದ ಚನ್ನಬಸವಯ್ಯನವರ
ಕುಮಾರ ಜಿ. ಕೆಂಪಣ್ಣ ಎಂಬುವರು ಪ್ರತಿ ಮಾಡಿದ್ದು.

ಕಾಲ: 11-10-1935

ಯುವ ಸಂವತ್ಸರ ಕಾರ್ತೀಕ ಶುದ್ಧ ಸೋಮವಾರ

 

ಗಣಸ್ತುತಿ

ಆರಭಿ ರೂಪಕ

ಶ್ರೀ ಶಾಂಭವಿ ಸುಕುಮಾರಾ ॥ಶ್ರುತಜನಾ ಮಂದಾರಾ
ಪಾಶಾಂಕುಶಧರ ಧೀರಾ ಪಾಪಸಂಹಾರಾ ವಂದಿಸುವೆ ಗಣನಾಥಾ   ॥

ಸುಂದರಗಜಮುಖ ದಾತಾ
ನಂದಿವಾಹನ ಗೌರಿ  ಜಾತಾ ಸಂಪ್ರೀತಾ ॥

ಕರುಣಾಕರ ಗುಣಸಾಂದ್ರಾ
ಚರಣಾನುತ ದೇವೇಂದ್ರಾ  ಶರಣು
ಮಾಡುವೆ ಶಿವನಾ  ಮೋಹದಾನಂದಾ ॥

ಕ್ರುತಿಮತಿ ವಿದ್ಯಾ ಸಾರಾ  ಶ್ರಿತ ಭೀಮೇಶ ಕುಮಾರಾ
ನುತಶಿವಕವಿ ಸಾಧಾರಾ  ನಾಗಾಹಿಧರಾ ॥

ದ್ವಿಪದೆ

ಶ್ರೀ ಗೌರಿ ವರಪುತ್ರ ಶ್ರುತಜನ ಮಂದಾರ
ಕಾರಣ ಭವದೂರ ಕಲುಷ ಸಂಹಾರ
ಪ್ರಕಟಿತ ಚಾರಿತ್ರ  ಪರಿಪೂರ್ಣಗಾತ್ರ
ಮೋದಕಹಸ್ತನು ಮೂಷಿಕೋತ್ತಮನು
ಸಭೆಗೆ ತಾ ಬಂದ ಸೊಬಗು ಪೇಳುವೆನು
ಅಪರಂಜಿ ಬಿಲ್ಲೆಗಳು ಹರುಷದಿಂದಿಟ್ಟು
ಮಲ್ಲ ಪೊಡ್ಯಾಣಗಳು  ಬಿರುದು ಪೆಂಡೆಗಳು
ವುಲ್ಲಾರಘಂಟೆಗಳು ವ್ರತ್ರಜಿಂದೆಗಳು
ತಾಳಿಬಿಲ್ಲೆಗಳು  ಜಿರಾಸರ ಪಣೆಗಳಿಂದ
ಮಲ್ಲೆಮಲ್ಲಿಗೆ ಜಾಜಿ ಸುರಗಿ ಶಾವಂತಿಗೆಯು
ಘನದಿಂದ ತಾ ಧರಿಸಿ ಗಣಪತೀಶ್ವರನು
ಸಿದ್ದ ವಿದ್ಯಾಧರ ಯಪ್ಸರದಿಂದ
ದಿಟ್ಟದಿಂದಲಿ ರಾಜಘಟ್ಟದೊಡೆಯನ ಪುತ್ರ
ವಿಘ್ನೇಶ್ವರನು ಬಂದು ರಂಗಸ್ಥಳದೊಳು ನಿಂದಾ ॥

ಪದಾ ಶಂಕರಾಭರಣ ಅಟತಾಳ

ಶರಣು ಶ್ರೀ ಪರಮೇಶನಂದನಾ
ಕರಿರಾಜವದನಾ ॥ಪ ॥
ಕರುಣದಿಂದಲಿ ಯನ್ನನು ಪೊರೆಯುವಂಥ ಬಿರುದು ನಿನ್ನದು
ಯೆಂದು ಮನದೊಳು  ಭಜಿಸುವೆನು
ಭಕ್ತರನು ಕಾಯೊ ದೇವದೇವನೆ ॥ಶರಣು ॥ ॥

ಮೂಷಿಕ ವಾಹನನೆ ಬಾರೋ  ಮೋದಕಹಸ್ತಾ
ಪಾಶಾಂಕುಶವನು ಪಿಡಿದವನೆ
ದಿಟ್ಟದಿಂದಲಿ ರಾಜಘಟ್ಟದ
ವಾಸ ಪಾರ್ವತೀತನಯ ಬೇಗ ನೀ
ಭಾಗವತನಾದೆನ್ನ ಜಿಹ್ವೆಯೊಳು
ಬೇಗ ಸುಮತಿಯನಿತ್ತು ಸಲಹೊ ॥
ಶರಣು ಶ್ರೀ ಪರಮೇಶ್ವರನಂದನಾ ॥

ಶಾರದಾ ಸ್ತುತಿ ಕಲ್ಯಾಣಿ

ಶ್ರೀ ಶಾರದೆ ಸರಸ್ವತಿ ಸುಜನ ಗಾತ್ರೆ
ಪರಮ ಕಲ್ಯಾಣಿ ಪದ್ಮಜನ ರಾಣಿ
ಕಾರುಣ್ಯಗುಣಮಣಿ  ಕಲ್ಯಾಣಿ ವಾಣಿ
ಭಾರತಿ ವಾಗ್ದೇವಿ ಪಾಪನಾಶಿನಿ
ಭಜಿಸುವೆನಮ್ಮ ನಿನ್ನ ಭಕ್ತದಾಯಿನಿಯೆ
ಬಾಲನು ನಾ ಪೇಳ್ವ ಭಕ್ತಿ ಚರಿತೆಯಲಿ
ಲೀಲೆಯಿಂ ನಿಮ್ಮ ಕರುಣವಿಟ್ಟು ಪಾಲಿಪುದು ॥
ಬಾಲನು ನಾ ಪೇಳ್ವ ಶಿವಕವಿತ ಲೀಲೆಯಲಿ
ಯತಿಗುಣ ಪ್ರಾಸಕೆಯು  ಯಲ್ಲ ನೀ ನಿಂತು
ಸುಮತಿಯನಿತ್ತು  ನೀ ಕಾಯೆ ಸರಸ್ವತಿಯೇ
ದಿಟ್ಟದಿಂದಲಿ ರಾಜಘಟ್ಟದೊಡೆಯನ ರಾಣಿ
ಯಿಷ್ಟದಿಂದೆನ್ನ ಪಾಲಿಸೆ ಪರಮ ಕಲ್ಯಾಣಿ ॥

ಶಂಕರಾಭರಣ ಅಟತಾಳ

ಶ್ರೀ ಶಾರದೆ  ಕರುಣಿಸೆ ತಾಯೆ  ವಾಣಿ
ಪನ್ನಗವೇಣಿ  ಶ್ರುತಮಹಾರಾಣಿ  ವೇಣಿ
ಪುಸ್ತಕ ಪಾಣಿ  ವಾಣಿ ಕಲ್ಯಾಣಿ ॥

ಭಗವತಿ ಭಾರತಿ ಜಗನೊರೆದಾತೆ,
ಸುಗುಣವಿರಾಜಿತೆ ಸುರಭೂತೆ ನಾಥೆ ॥

ಶೀಲ ಭೀಮೇಶನಾ  ಬಾಲೆ
ವಿಶಾಲೇ  ಲೀಲಾದಯಾಗುಣ  ಬಾಲೇ ಸುಶೀಲೆ ॥ ॥

ಸಂಧಿ ವಚನ: ಯೀ ಪ್ರಕಾರದಿಂ ಬ್ರಾಹ್ಮಣಿಯಂ ವಂದಿಸಿ ಮುಂದಿನ ಕಥಾ ವಿಸ್ತಾರದೊಳು. ಯತಿಗಣ ಪ್ರಾಸ ವಿಶೇಷಮನ್ನರಿಯದ ನಿಮ್ಮ ಕಂದನ ಸಲಹುತ್ತ ಬರುವುದೆಂದು ಗುರುಗಳ ಪಾದಕ್ಕೆ ವಂದನೆಯ ಮಾಡಿ ಪೂರ್ವಕವಿಗಳಿಗೆ ಶಿರವಂ ಬಾಗಿ ಭೀಮೇಶಾಂಕಿತಮಾದ ಶಿವಚರಿತೆ ಲಾಲಿಪುದು ಸುಜನರಿದರೋಳ್ ತಪ್ಪುಗಳಂ ಪೇಳ್ದರೆ ತಿದ್ದಿ ಬುದ್ಧಿಗಲಿಸುವದಲ್ಲದೇ ನಿಮ್ಮ ಕಂದನ ನೀವು ಬೈದರೆ ನಿಮಗೆ ಮೋಕ್ಷಮಿಲ್ಲಾ  ಹಿರಿಯರೇ.

ಕಥಾ ಪ್ರಸಂಗ ತ್ರಿವುಡೆ

ಶ್ರೀ ಮದಮರಾಧೀಶ ಸನ್ನುತ  ಹೇಮಕೂ
ಟನಘಾಲಯಂಚಿತ  ಸ್ವಾಮಿ ಪಂಪಾರಮಣ
ಮೂರ್ತಿಯ  ಕಂಡು ವಂದಿಸುವೇ ॥
ಕಾಮಮದ ಗರ್ವಾಪಹಾರನೆ  ಶ್ರೀಮನೋಹರ ಗೌರೀಶ
ಸುಧಾಮಯೂರ ಚಕೋರ ಸನ್ನುತ ಪಾಲಿಸನವರತಾ ॥

ಶಿವನಸುತ ತಾರಕನ ಜೈಸಲು  ಶಿವನ ತನಯರು ಮುವ್ವರಿರುತಿಹ
ರವಿಸಭಾರಕ ತಾರಕಾಕ್ಷನು  ಮಕರನೇತ್ರಕನೂ ॥
ಜವನ ಗೆಲುವತಿರೋಷ ಬಲಮದ ವಿವಿಧ
ವಿದ್ಯಾನ್ಮಾಲಿಯೆಂಬುವ  ರವರು ಮಯನನು – ಭಜಿಸಿ ವರವನು
ಪಡೆದು ತ್ರೈಜಗವಾ ॥

ಮೂರುಪುರವನು ಕಟ್ಟಿ ಬಾಧಿಸೀ  ಆರು ಕಾಯುವರೆಮ್ಮನೆನುತಲಿ
ಧೀರಸುರರು ಹಿರಣ್ಯ ಗರ್ಭಗೆ  ಬಂದು ಮೊರೆಯಿಡಲೂ
ಕಾರಣಾತ್ಮಕ ಬ್ರಹ್ಮ ದಿವಿಜರ  ಘೋರ ಪರಿಯ ಕಂಡು ಮನ್ನಿಸೀ
ಶ್ರೀ ವುಮಾಪತಿ ಕಡೆಗೆ ವಂದಿಸಿ ಕೇಳಿದನು ಸುಖವಾ  ॥

ಧೀರ ದನುಜರು ಮಯನ ಮೆಚ್ಚಿಸಿ
ಚಾರುವರಿಯಲ್ಕವರಿಗೊರಗಳ
ಧಾರುಣಿಯೊಳಂದೆನಿಸುವಂದದಿ  ಕೊಟ್ಟನಿದು
ಸಹಜಾ  ಭೂರಮಣ ಕೇಳಿದೆಯ ತ್ರಿಜಗವ
ಗಾರುಮಾಡಿದರಂತೆ ಮುಂದಿನ  ವುಳುಹ
ಗಾಂಬುವ ಬಗೆಗೆ ದನುಜರ  ಕೊಲ್ಲಬೇಕೆಂದಾ ॥

ಕೊಲ್ಲುವುದ ನಾನರಿಯೆನೆಂದನು
ಸಲ್ಲಲಿತ ಪಾರ್ವತಿಯ ವಲ್ಲಭ  ನಲ್ಲಿಗೈತಂದನು
ವಿಧಾತನು  ದಿವಿಜರೊಡಗೂಡಿ  ಮಲ್ಲ
ಮರ್ಧನ ಸಾಂಬಮೂರ್ತಿಗೆ ತಲ್ಲಣಿಪ ನಿರ್ಜರರ ತೋರಿಸಿ
ಖುಲ್ಲ ತ್ರಿಪುರಾಸುರರ ಸಂಹಾರ ಮಾಡಬೇಕೆಂದಾ ॥

ಸಾಂಬ ವಿಷ್ಣು ಬ್ರಂಹಗು ಮನಸು  ಇಂಬುಗೆಡದೆ ಸಭಾಸಿತ
ಕಂಬುಜಾಸುರ ಬಂದ ಬೇಗನೆ  ಗಂಗೆಯನು ಕಂಡೂ ॥
ಅಂಬೆ ನಿನಸರಿಜಗದಿನಹನಹೀ  ಕಂಬುಕಂದರ ನಿಗಮವೇದಿತ
ಸಾಂಬಮೂರ್ತಿಯ ಸಮ್ಮುಖದಿ ಪಿರಿದೆನುತ ವಾದಿಸಲೂ ॥

ದೇವ ದೇವರ ದೇವನು ಬಯಲ  ಭಾವ ವಚನದಿ ಮನ್ನಿಸುತ ಶಿರಿ
ದೇವ ಪಂಪಾರಮಣ ದಿವಿಜರಿಗಭಯವನು ನೀಡೆ
ದೇವಕೀಸುತನಾಜ್ಞೆಯಂದದಲಿ  ಸಾವಧಾನದಿ ಯಿಳಿಯೆ ರಥವನು
ಪಾವಶಿಂಜಿನಿಗೆಂದು ಬ್ರಹ್ಮನ  ಸಾರಥಿಯ ಮಾಡೀ ॥

ರಥಚಕ್ರ ಹಿಮಾಂಶುಗಳ್ ಶ್ರುತಿ  ಚವುಷಷ್ಠಿಯೆ ಹಯ
ಗಳೆನಿಸಿ  ಶೃತಿರಮಣ ಶ್ರೀಹರಿಯೆ ಬಾಣ
ಹಿಮಾದ್ರಿ ಧನುವಾಗೇ ॥ಕ್ಷಿತಿ ಮಹಾರಥದೊ
ಳಗೆ ಪಾರ್ವತಿ  ಪತಿಯೆ ನಿಂದಾ ತ್ರಿಪುರ
ದಹನವ  ಬಲವ ಭಸ್ಮವನು ಮಾಡಲು  ಸತಿಯೆ ಭೀಮೇಶಾ ॥

ತಾರಕಾಕ್ಷ: ಯಲೈ ಪಟುಭಟೋದ್ಗಟ ಸ್ಪುಟದುತ್ಕಟ ಜ್ವಾಜ್ವಲ್ಯಮಾನದಿಂದ ಪಟುತರ ಸಭಾ ಮಂಟಪಕ್ಕೆ ಬಂದ ಚಟುಲ ಪಟು ಪರಾಕ್ರಮ ವೀರಧೀರನಾದ ಯನ್ನ ಧಾರೆಂದು ಕೇಳುವ ನರಾಧಮ, ನೀನು ಧಾರು ನಿನ್ನ ನಾಮಾಂಕಿತವೇನು ತೀವ್ರದಿಂದ ಪೇಳೋ ನರ ಹುಳುವೇ. ಯಲೈ ಸಾರಥಿ, ಯೀ ಧರಾಮಂಡಲದೋಳ್, ಚರಾಚರ ಜೀವ ಜಾಲಂಗಳಿಗೆ ಸೂತ್ರಧಾರ ಪರಬ್ರಹ್ಮಮೂರ್ತಿ ವೀರಶೈವ ಪ್ರಭಾವಸ್ಪೂರ್ತಿ ಮಹೇಂದ್ರ ನಗರಕ್ಕೆ ಚಕ್ರವರ್ತಿ ಧೂರ್ತಬಲ ತಾರಕಾಸುರನ ಪುತ್ರ ತಾರಕಾಕ್ಷನಾಗಿ ಭುಜಬಲದೋರ್ದಂಡಟ್ಟಹಾಸ ಯಂಥಾದ್ದೆಂದು ಕೇಳಿಬಲ್ಲೆ. ಯೀ ನವಖಂಡಪೃಥ್ವಿಯಂ ಯಿಡಿದೆತ್ತುವಂಥ ಸಾಮರ್ಥ್ಯವೂ ಅಲ್ಲದೆ ಯನ್ನ ಕೈಯೊಳಗಿರುವ ಖಡ್ಗದಿಂದಾ ಭೂಮಿಯನ್ನು ತಿವಿದರೇ ಯೆಂಟು ಗಜಗಳು ಕಿರ‌್ರನೆ ಕಿರಿಚಿ ತಾವುಗಳನ್ನು ತಪ್ಪಿ ಹೋಗುವಂತೆ ಮಾಡಬಲ್ಲನೆಂಬ ತಾರಕಾಕ್ಷ ಮಹಾರಾಜ ಬಂದಿರ್ಪರೆಂದು ಕಿತಾಪ್ ಮಾಡುವಂಥವನಾಗೋ ದೂತಾ ರಾಜಸಂಪ್ರೀತಾ.

ಯಲಾ ಸಾರಥಿ, ಯೀ ಸಭಾ ರಂಗಸ್ಥಳಕ್ಕೆ ಯೇನು ಕಾರಣ ಬಾಹೋಣವಾಯಿತೆಂದರೆ ಆಕುಚಿತನಾದ ಬ್ರಹ್ಮನು ಹೀನ ದಿವಿಜನಾದ ಯಿಂದ್ರನು ನೆನ್ನೆ ದಿನಾ ಯೇನೋ ದುರಾಲೋಚನೆ ಮಾಡಿ ನನ್ನ ಹೀನವಾಗಿ ನುಡಿದಿರುವರಂತೆ. ತತ್‌ಪ್ರಯುಕ್ತ ಅವರನ್ನ ಶಿಕ್ಷಿಸಿ ಯಮ್ಮ ಕಾರಾಗೃಹದಲ್ಲಿರಿಸಬೇಕೆಂದು ಇಲ್ಲಿ ಬಂದಿರುವೆ. ಆದ ಕಾರಣ ಯನ್ನನುಜರಾದ ಮಕರಾಕ್ಷ ವಿದ್ಯುನ್ಮಾಲಿಯರನ್ನು ಜಾಗ್ರತೆ ಆಗಮಿಸುವಂಥವನಾಗೋ ದೂತಾ ರಾಜಸಂಪ್ರೀತಾ.

ಮಕರಾಕ್ಷ: ಯಲೈ ಘುಡಿಘುಡಿಸುವ ಕಾರ್ಬೊಗೆಯನಿಡುತೆ ತಡಬಡಿಸದೆ ಬಿಡಚಾದಿಗಳಿಗೆ ಯಡತಲೆ ಮೃತ್ಯುವಿನೊಡೆಯ – ಝಣಕಿಸುವ ಕಾಲು ಭಾಪುರಿಯ ತೊಡರಿ ನಡುಕಟ್ಟು ಘಂಟಾರವದ ಶೃಂಗಾರದ ಬಂಗಾರದ ತನ್ಮಣಿ ಗಣಾಲಂಕೃತ ಹಾರಾದ್ಯಲಂಕಾರದಿಂ ಸಭಾ ಭದ್ರಾಸನಕ್ಕೆ ವಿಭಾಡಿಸುತ್ತ ಬಂದ ವಿದ್ಯಾದ್ವೀರನನ್ನು ಧಾರೆಂದು ಕೇಳುವ ಮಾನವ, ನೀ ಧಾರು ನಿನ್ನ ಪೆಸರೇನು ಬೇಗದಿಂದುಸುರೋ ದೂತಾ ದೂತ ಪ್ರಖ್ಯಾತಾ. ಯಲೈ ಸಾರಥಿಯೇ ಕೇಳು. ಭಳಿರೆ ಯೀ ಸ್ವರ್ಗ ಮರ್ತ್ಯ ಪಾತಾಳ ತ್ರೈಲೋಕದಲ್ಲಿರ್ಪ, ವೀರಾಧಿವೀರರನ್ನೆಲ್ಲಾ ಗಂಡುಗಲಿ ಚಂಡಪ್ರಚಂಡರಪ್ಪನಿಲಂಪಾದಿಗಳ ಗಂಡ ದುಂಡಿಗಳ ಹಿತಮಂಡಲಕ್ಕಿದೆ ಶೂಲ ದಾನವಕುಲಾಗ್ರೇಸರ ಚಕ್ರವರ್ತಿ ತಾರಕಾಸುರನ ಪುತ್ರ, ಧಾರೆಂದು ಕೇಳಿಬಲ್ಲೆ. ಭಲೆ ಸಾರಥಿ ಅಂಥ ತಾರಕಾಕ್ಷನನುಜನಾದ ಮಕರಾಕ್ಷ ಮಹಾರಾಜರು ಬಂದಿದ್ದಾರೆಂದು- ಭೇರಿ ವಾದ್ಯದೊಡನೆ ಕಿತಾಪ್ ಮಾಡಿಸುವಂಥವನಾಗೊ ದೂತಾ ರಾಜ ಸಂಪ್ರೀತಾ. ಯಲೈ ಸಾರಥಿ ಯಮ್ಮಗ್ರಜನಾದ ತಾರಕಾಕ್ಷ ಭೂಪಾಲನಾಜ್ಞಾನಾನುಸಾರವಾಗಿ ಬಾಹೋಣವಾಯಿತು. ಜಾಗ್ರತೆಯಾಗಿ ಯಮ್ಮಣ್ಣನನ್ನು ಭೇಟಿ ಮಾಡಿಸುವಂಥವನಾಗೋ ಸಾರಥಿ.

ಮಕರಾಕ್ಷ: ನಮೋನ್ನಮೋ ಅಣೈಯ್ಯ.

ತಾರಕಾಕ್ಷ: ಸುಖೀಭವ – ಸುಖೀಭವ ಬಾರಪ್ಪಾ ತಮ್ಮಾ ಮಕರಾಕ್ಷ ಭೂಪಾಲ.

ವಿದ್ಯುನ್ಮಾಲಿ: ಯಲಾ ದಡ್ಡ, ಜೀಮೂತ ದೊಡ್ಡಮಣಿಯಂತೆ ಭೇದಿಸಿ ಕುಲಾಚಲ ಶಿಖಾಗ್ರ ಭಾಗಮಂ ಅಡರಿ ರಸಾತಳಮಂ ಭೇದಿಸುವ ವಜ್ರನಿರ್ಘೋಷದಂತೆ ಸಿಂಹ ಬೊಬ್ಬೆಯಂನಿಡುತ್ತಾ ಸಭಾ ಭದ್ರಾಸನಕ್ಕೆ ಬಂದ ಮರುತರ ವೀರಾಧಿವೀರನಂ ಧಾರೆಂದು ಕೇಳುವ ಮಾನವ, ನೀ ಧಾರು ನಿನ್ನ ಪೆಸರೇನು ರೀತಿಯಿಂದ ತಿಳಿದು ಪ್ರೀತಿಯಿಂದರುಹೊ ಮಾನವ ತಿಳಿಯಿತು ನಿನ್ನ ಸ್ವಭಾವಾ. ಯಲಾ ಸಾರಥಿ ಯಮ್ಮ ಸಮ್ಮುಖದಲ್ಲಿ ಬಂದು ಯಮ್ಮನ್ನು ಧಾರೆಂದು ಕೇಳುವೆ. ಆದರೆ – ಯಮ್ಮ ವಿದ್ಯಮಾನವನ್ನು ಬಿತ್ತರಿಸುತ್ತೇನೆ. ಚಿತ್ತವಿಟ್ಟು ಕೇಳೋ ಸಾರಥಿ. ಯಲಾ ಸಾರಥಿ, ಯೀ ತ್ರೈಜಗದ್ಭೀಷಣಾಖ್ಯಾತ ರೋಷ ಅಟ್ಟಹಾಸ ಸ್ವರ್ಗವೆಂಬ ದುರ್ಗಮಂ ಮತ್ಕೋಪಾಗ್ನಿಯಿಂ ಚೂರ್ಣಮಾಡಿ ಪ್ರಭಾಕರನಂ ವಿಭಾಡಿಸಿ ಸೋಮಾದಿ ನವಗ್ರಹಗಳಂ ಅಂತರಾಳಕ್ಕೆ ತೂರಿ ಮಿಕ್ಕುಳಿದ ಸಪ್ತರ್ಷಿಗಳ ಘರ್ವಮಂ ಚಪ್ಪರಿಸಿ ದುಪ್ಪನೆ ಅಪ್ಪಳಿಸಿ ಬ್ರಹ್ಮಾಂಡಕರ‌್ಪರಗಳಂ ಪಿಡಿದು ಕೈತಾಳನಿಕ್ಕುವ ಸಾಮರ್ಥ್ಯನಪ್ಪ ತ್ರಿಜಗದ್ಗಂಡುಗಲಿ ರಾಕ್ಷಸಕುಲಾಗ್ರಣಿ ತಾರಕಾಸುರನ ಮೂರನೆಯ ಕುಮಾರ ವಿದ್ಯುನ್ಮಾಲಿ ಯಂದು ಕಿತಾಪ್ ಮಾಡಿಸೊ ದೂತಾ – ರಾಜ ಸಂಪ್ರೀತ. ಯಲಾ ಸಾರಥಿ – ಯಮ್ಮಗ್ರಜನಾದ ತಾರಕಾಕ್ಷ ಭೂಪಾಲನ ಸಂದರುಶನಾರ್ಥವಾಗಿ ಬಂದಿರುವೆ. ಯಮ್ಮಣೈಯ್ಯನವರ ಭೇಟಿಯನ್ನು ಮಾಡಿಸೊ ದೂತಾ ರಾಜ ಸಂಪ್ರೀತಾ.

ವಿದ್ಯುನ್ಮಾಲಿ: ನಮೋನ್ನಮೋ ಅಗ್ರಜ ಭೂಪಾಲ ॥

ತಾರಕಾಕ್ಷ: ಸುಖೀಭವಾ ಸುಖೀಭವಾ ಬಾರಪ್ಪಾ ತಮ್ಮಾ – ವಿದ್ಯುನ್ಮಾಲಿ ಪರಾಕ್ರಮಶಾಲಿ.

ಗೌಳ ರೂಪಕ

ಅನುಜರೆ ಕೇಳಿರೈ – ನಾ ಪೇಳುವ
ನುಡಿಗಳನೂ – ಬಿಡು ನುಡಿ
ನುಡಿದಾನಂತೆ ಬ್ರಹ್ಮಾನೆಂಬುವನೂ ॥

ದಿನದಿನಾ ಹೆಡಗುಡಿಯಾ
ಬಂಧಿಸಿರೊ  ನೀವವನಾ
ಮಡದಿ ಸರಸ್ವತಿಯಾ  ಸೆರೆ
ಹಿಡಿಯಿರೋ ತಮ್ಮಾ ಕೇಳ್ ತಂಮಾ ॥

ತಾರಕಾಕ್ಷ: ಯಲೈ ಅನುಜರಾದ ಮಕರಾಕ್ಷ – ವಿದ್ಯುನ್ಮಾಲಿಗಳಿರಾ. ನಮ್ಮ ಶೌರ‌್ಯಂಗಳ ನಾವೇ ಸುಮ್ಮನೆ ಹೇಳಿ ಪ್ರಯೋಜನವಿಲ್ಲ. ಯಲೈ ಸಹಜಾತರೆ ಯಿಂದಿನ ದಿನ ಸ್ವರ್ಗಕ್ಕೆ ಧಾಳಿಯಿಟ್ಟು  ಅಮರಾದಿಗಳಂ ಹಣಿದು ಯಿಂದ್ರನಂ ಸೆರೆಯಿಡಿದು ರಂಭಾದ್ಯಖಿಳ ದೇವಾಂಗನೆಯರಂ ತಂದು  ಯಮ್ಮ ಕಾರಾಗೃಹದಲ್ಲಿ ಬಂಧಿಸಬೇಕೆಂಬ ಮನಸ್ಸು ಮಾಡಿರ್ಪೆ. ಯೀ ಸುದ್ದಿಯಂ ಕೇಳಿದ ವಿರಿಂಚಿಯೆಂಬಧಮಾಧಮ ನಮ್ಮ ಸುದ್ದಿಯಂ ಕೇಳಿ ಯೇನೊ ಬಿಡು ನುಡಿಗಳು ನುಡಿದನಂತೆ. ಆದರಾಗಲಿ. ಆ ಬ್ರಹ್ಮನು ಮೊದಲು ಭಾಗದಲ್ಲಿ ನಮ್ಮ ತಪಸ್ಸಿಗೆ ಮೆಚ್ಚಿ ವರವನ್ನು ಕೊಟ್ಟ ಮೇಲೆ, ಮಕ್ಕಳೆಂಬಭಿಮಾನವಿಲ್ಲದೆ ವಿಷ್ಣುರುದ್ರಾದಿಗಳ ಮಾತು ಕೇಳಿ ನಮ್ಮೊಳು ವೈರತ್ವ ಸಾಧಿಸಿದ ಮೇಲೆ ಯೀ ಗೋವಿಂದ ನಂದನನಂ ಭೇದಿಸಿ ಅವನ ರಾಣಿಯಾದ ಶಾರದೆಯನ್ನು, ಸೆರೆಯಿಡಿದು ನನ್ನ ಮುಂದೆ ನಿಲ್ಲಿಸುವಂಥ ಶೌರ‌್ಯ ನಿಮ್ಮಲ್ಲಿ ಧಾರಿಗಿರುವುದೊ ಪೇಳಿರೈಯ್ಯ ಸಹಜಾತರೇ.

ಪದ

ಅಗ್ರಜನೇ ನೀ ಕೇಳೋ ಶೀಘ್ರಾದಿಂದಲಿ ಪೇಳ್ವೆ
ವುಗ್ರ ಕೋಪಗಳ್ಯಾಕೊ ನಿಗ್ರಹಿಸಿ ಬರುವೇ
ನಾ ಬರುವೆ॥ಮನದೊಳು ಚಿಂತೆಯು
ಘನವಲ್ಲಾ ಕೇಳಂಣ್ಣಾ ನಿನ್ನನುಜನ
ಪೋಗೀ ಯಿಡಿತರುವೆನೊ ಸೆರೆಯಾ॥

ಮಕರಾಕ್ಷ: ಭಲೆ ಅಗ್ರಜಾ ನೀ ಪೇಳಿದ ಮಾತೆ ಸಹಜಾ. ತಮ್ಮನಾದ ವಿದ್ಯನ್ಮಾಲಿಯೆ ಲಾಲಿಸು. ರಕ್ಕಸಕುಲಪಯೋನಿಧಿಗೆ ನಾಯಕನಂತೊಪ್ಪುವಾ ಅಣ್ಣ ದನುಜಾಗ್ರಗಣ್ಯ ಸತ್ಯಲೋಕಕ್ಕೆ ಬೆಂಕಿಯಂ ಹಚ್ಚಿ ನಾರದಾದಿಗಳ ಮೂತಿಯಂ ತಿವಿದು ಆಂಗೀರಸ ದೂರ್ವಾಸ ಭಾರದ್ವಾಜ ಕಣ್ವ ಶುಕ ಸನಕ ಸನಾತನದಿ ಅವನ ಮಕ್ಕಳಂನೆಲ್ಲ ವಕ್ಕಲಿಕ್ಕಿ, ಜಾಂಬುವನಂ ಕೊಂದು ಅವನ ಚರ‌್ಮವಂ ತಂದು ನಿನ್ನ ಸನ್ನಿಧಿಯಲ್ಲಿಡದಿದ್ದರೆ ನಿನ್ನನುಜರಾದದ್ದಕ್ಕೆ ಸಾರ್ಥಕವೇನೊ ಅಣ್ಣಾ ದನುಜಾಗ್ರಗಣ್ಯಾ.

ಪದ

ಕೇಳೈಯ್ಯ ಯಲೊ ತಂಮ್ಮಾ  ಪೇಳು
ವೆನು ನಾನೀಗಾ  ನಿಷ್ಯಾರಣ ಬೈದನಂತೆ
ಬ್ರಹ್ಮಾನು ನಮ್ಮಾ ಕೇಳೊ ತಮ್ಮಾ॥

ತಾರಕ: ಭಲೆ ತಮ್ಮಾ ವಿದ್ಯನ್ಮಾಲಿ, ನಿಷ್ಕಾರಣವಾಗಿ ಆ ವಿರಿಂಚಿ ನಮ್ಮನ್ನು ಬೈಯ್ಯುವುದಕ್ಕೆ ಕಾರಣವೇನು. ಅಥವಾ ನಾವು ದಿಕ್ಪಾಲಕರನ್ನು ಯಿಡಿದು ತಂದರೆ ಯಿವನಿಗೆ ದುಃಖವ್ಯಾಕೆ. ಅತುಳವಿಕ್ರಮ ಶಕ್ರಾದ್ಯಖಿಳ ಮುತ್ತುಗದ ಗಂಡಭೇರುಂಡ ತಾರಕಾಕ್ಷ ವಿಜಯಲಕ್ಷ್ಮನೆಂದು, ಕಾಣನೊ ಹ್ಯಾಗೆ ಆಗಲಿ. ಯಲೈ ತಮ್ಮಾ ಯಿದಕ್ಕೆ ಯೋಚನೆ ಯೇನು ಪೇಳುತ್ತೀಯೊ ತಮ್ಮಾ ರಾಕ್ಷಸ ಕುಲಕ್ಕೆ ಯಿದು ಧರ್ಮಾ.

ಪದ

ಅಣ್ಣಾನೆ ಲಾಲಿಸೊ  ಪೇಳೂವೆ ನಾನೀಗಾ
ಸಂಣ್ಣಾವರಂತೆ ನುಡಿವಾರೆ ಅಣ್ಣಾ ॥

ಬ್ರಹ್ಮಾನೆಂಬುವನನ್ನೂ  ಹೆಡಗೂಡಿ ಬಂಧಿಸಿ
ಬಿಡದೆ ನಾನೆಳತರುವೇ  ನಾ ತರುವೇ ॥

ವಿದ್ಯುನ್ಮಾಲಿ: ಭಲೆ ಅಣೈಯ್ಯ, ಆ ಬ್ರಹ್ಮನು ಯಾವ ಘನವಂತನೆಂದು ಯೋಚನೆ ಮಾಡುತ್ತಾ  ಯಿದ್ದಿ. ಮಾನಗೇಡು ಆಗುವುದಕ್ಕೆ ಪೆತ್ತ ಮಗಳನ್ನು ಮದುವೆ ಮಾಡಿಕೊಂಡು ಅಧಮನಾಗಲಿಕ್ಕೆ ಶಿವನಿಗೊಂದು ಶಿರವಂ ಕೊಟ್ಟು ಅವನ ಹಿತವನ್ನೆ ಬಯಸುತ್ತಿರುವವನು. ಅವನು ಯಾವುದರಲ್ಲಿ ನಮ್ಮ ಸಮಾನನಾಗುವನು. ನಿಂನಂತೆ ಅವನು ಪೂಜ್ಯನೇನು ಪೇಳು. ತಾನು ಬ್ರಹ್ಮತ್ವವಂ ಬಿಟ್ಟು ಮಂಕುತನದಿಂದ ಜಡನಾಗಿ ನಿನ್ನ ಬೈದರೆ ನಿನಗೇನು ಕುಂದಕಾ, ಆನೆಯ ಮ್ಯಾಲೇರಿ ಹೋಗುವನಿಗೆ ಶ್ವಾನನು ಬೊಗಳಿದರೆ ಭಯವೇನು. ಅದರಂತೆ ಅಲ್ಲದೆ ನಮಗೆ ಆ ಬ್ರಹ್ಮನು ಯೀಡೆ ಜೋಡೆ ನಮ್ಮ ಸರಿಸಮಾನನೆ ಯೇನೆಂದು ಭಾವಿಸಿ ಚಿಂತೆ ಮಾಡುತ್ತಿ . ಭಲೆ ಅಣ್ಣ ಆ ಬ್ರಹ್ಮನನ್ನು ಹಿಡಿತರುವದು ಯಾವ ಘನಕಾರ‌್ಯ. ಅಪ್ಪಣೆ ಕೊಟ್ಟಿದ್ದೇ ಆದರೆ ಯೀ ತಕ್ಷಣವೇ ತಂದು ನಿಮ್ಮ ಪಾದಕ್ಕೆ ವೊಪ್ಪಿಸುತ್ತೇನೆ. ಯೆಷ್ಠು ಮಾತ್ರಕ್ಕೂ ಚಿಂತೆಯನ್ನು ಮಾಡದೆ ಧೈರ‌್ಯದಿಂದಿರುವಂಥವನಾಗೋ ಅಂಣೈಯ್ಯ  ದನುಜಾಗ್ರಣ್ಯಾ.

ಪದ

ಮಗನು ಯೆಂದು ವಹಿಸಿ ಬರುವ
ವಿಗಡ ಕೃಷ್ಣನ  ಬಗೆದು ಕರುಳ ಗಗನ
ತಳಕೆ ವಗೆಯದೆ ಬಿಡೆ ನಾ॥ ॥

ಅಂಬುಜಾಕ್ಷ ಸಖನು ಯೆಂಬ  ಸಾಂಬ
ನೇ ಬರಲಿ  ಕಾಂಬೆನು ಭೀಮೇಶನೆಂಬ
ಅಧಮನು ಬರಲೀ॥ ॥

ತಾರಕಾಸುರ: ಯಲೈ ತಮ್ಮನಾದ ವಿದ್ಯುನ್ಮಾಲಿಯೆ ಕೇಳೂ, ಸತ್ಯಲೋಕದಲ್ಲಿರ್ಪ ಬ್ರಹ್ಮನಂ ಬಂಧಿಸಿ ಯಡಮುರಿಗಟ್ಟಿ ಯನ್ನ ಕೈಯಿಂದಾ ಗುದ್ದಿ ದುಃಖ ಸಾಗರದೊಳದ್ದಿ ಅವನಂ ಗೋಳಿಡಿಸಿದರೆ ಅವನ ತಂದೆಯಾದ ನಾರಾಯಣನು ಅವನಿಗೆ ಸಹಾಯವಾಗಿ ಬರುವನೂ. ಅವನನ್ನು ಯಿಡಿದು ಸುರತರಂಗಿಣಿ ಕೆಳಕ್ಕೆ ವಗೆಯುವದು ನಿಶ್ಚಯಾ. ಯಲೈ ವಿದ್ಯುನ್ಮಾಲಿ ಲಾಲಿಸು. ಆ ನಾರಾಯಣನಿಗೆ ಸಹಾಯವಾಗಿ ಸದಾಶಿವನು ಬಂದರೆ ಅವನನ್ನು ಹಿಡಿದು ಅವನ ರಾಣಿಯಾದ ಪಾರ್ವತಿಯನ್ನು ಸೆರೆ ಹಿಡಿದುಕೊಂಡು ಬಂಧಿಸಿ ಎಳೆದುಕೊಂಡು ಬರಬೇಕು. ಯಿದು ಹಾಗಿರಲಿ ಮೊದಲು ಅಮರಲೋಕಕ್ಕೆ ದಾಳಿಯಿಟ್ಟು ಯಮ್ಮಯ ನಾರಿಯರಿಗೆ ದಾಸಿಯರನ್ನಾಗಿ ಮಾಡಬೇಕು ಜಾಗ್ರತೆಯಾಗಿ ಯಿಂದ್ರ ಲೋಕಕ್ಕೆ ಸೇನಾಸಮೇತ ತೆರಳಿರೈಯ್ಯ ಅನುಜರೇ.

(ಇಂದ್ರನ ಸಭೆ)

ಪದರೂಪಕ

ಮಂತ್ರಿವರ‌್ಯಾ ಲಾಲಿಸೀಗ ಯನ್ನ
ಮಾತನೂ  ನೀನು  ಸ್ವಸ್ತದಿಂದ
ಯಿಹರೆ ಪೇಳು  ಸಕಲ ಪ್ರಜೆಗಳೂ
ವಸ್ತಿ ಯಿವುದೆ ಯಲ್ಲಜನಕೆ ಯುಕ್ತಿ
ಕೋವಿದಾನೆ ಪೇಳು ॥ಮಂತ್ರಿ  ॥

ಕಾಲಕಾಲಕೆ ಮಳೆಗಳಾಗಿ  ಬೆಳೆಯು
ತಿರ್ಪವೆ ಪೈರುಗಳ್  ಸಮಂತಾದಿ
ಸಕಲ ಪ್ರಜೆಗಳ್  ಸ್ವಾಮಿಧ್ಯಾನ
ಮಾಳ್ಪರೆ ಪೇಳ್ ॥

ದಿಟ್ಟದಿಂದೀ ರಾಜಘಟ್ಟ
ದೊಡೆಯನಾ ಕರುಣಾದಿ ಯೀಗ
ವೊಪ್ಪಿಕೊಂಡ ರಾಜರೆಲ್ಲಾ
ಕಪ್ಪ ಕಾಣಿಕೆ ವೊಪ್ಪಿಸುವರೇ ॥

ಯಿಂದ್ರ: ಹೇ ಸಚಿವ ಕುಲಶಿರೋಮಣಿಯೆ, ಯಮ್ಮ ಆಳ್ವಿಕೆಯಲ್ಲಿ ಕಾಲಕಾಲಕ್ಕೆ ಸರಿಯಾಗಿ ಮಳೆಸೂಸಿ ಬೆಳೆಗಳಾಗಿ ರಾಜ್ಯವೆಲ್ಲಾ ಸುಖವಾಗಿರ್ಪರೊ ಹ್ಯಾಗೆ ಮತ್ತು ಪ್ರಜೆಗಳು ಹಿತದಿಂದ ಶಿವಧ್ಯಾನ ತತ್ಪರರಾಗಿ ಯಿರುವರೋ ಹ್ಯಾಗೆ ಯೀ ಆದ್ಯಂತ ವರ್ತಮಾನವನ್ನು ವಿಂಗಡಿಸಿ ಬಿತ್ತರಿಸೈಯ್ಯ ಮಂತ್ರಿ ಯನ್ನ ಕಾರ್ಯಕ್ಕೆ ಸ್ವತಂತ್ರಿ.

ಕಂದ

ರಾಜನೆ ಲಾಲಿಸು ಪೇಳುವೆ  ಮೂಜಗದೊಳ
ಗೆಲ್ಲ ಮಳೆ ಬೆೆಳೆಗಳಾಗಿಹವೈ  ರಾಜಿಯಲಿ ಸಕಲಪ್ರಜೆಗಳು
ಸೋಜಿಗ ಶಿವಧ್ಯಾನದೊಳಿಹರೈ ॥

ಆದಿ ತಾಳ
ರಾಜನೆ ಲಾಲಿಸೊ  ಸೋಜಿಗವ
ಪೇಳುವೆ  ಮಹಾರಾಜನೆ ಲಾಲಿಸು ॥
ಮೂಜಗದೊಳಗೆಲ್ಲ ಪ್ರಜೆಗಳು
ರಾಜಿಯಿಂದಲಿ ಬಾಳುತಿರ್ಪರು ॥

ಕಾಲಕಾಲಕ್ಕೆ ವರ್ಷಪ್ರದದಿಂ  ಸಸ್ಯಗಳ್
ಬೆಳೆಯುತಿರ್ಪವು  ಸೋಜಿಗವೊ
ಅಂತೆ ಶಿವಧ್ಯಾನ ಮಾಳ್ಪರು ಯಲ್ಲ ಪ್ರಜೆಗಳು ॥

ದಿಕ್ಕು ದಿಕ್ಕಿನ ರಾಜರೆಲ್ಲಾ
ವೊಪ್ಪಿಕೊಂಡ ಕಪ್ಪಕಾಣಿಕೆ
ತಪ್ಪದಂತೆ ವೊಪ್ಪಿಸುವರೂ
ಸರ್ಪ ಭೂಷಣಮಿತ್ರ ಕೇಳೂ ॥

ಮಂತ್ರಿ: ಮಹಾರಾಜನೆ ಲಾಲಿಸು. ಧೀರವೀರ ಶೂರ ಪ್ರತಾಪಾನ್ವಿತ ಪುಂಜರಂಜಿತ ಜಂಜಾಯ ಮಾನಮಾಗಿರ್ಪ ಮತ್ತು  ಸಕಲ ಸಾಮ್ರಾಜ್ಯದಿಂದ ಶೋಭಾಯಮಾನವಾಗಿರಲ್ಪಟ್ಟ ನಿಮ್ಮ ಆಜ್ಞೆಯಲ್ಲಿ ಧಾವ ಅನುಕೂಲಕ್ಕೆ ತಾನೇ ಕಡಿಮೆಯಾಗಿರುವುದೊ ರಾಜಾ. ಯಿದೂ ಅಲ್ಲದೆ ದೇಶದೊಳ್ ನಿರಾಶಬದ್ಧರಾಗಿ ಸರ್ವರಾದಿಯಾಗಿ ಸ್ವಾಮಿಕಾರ್ಯದಲ್ಲಿ ದುರಂಧರರಾಗಿಯೇ ಯಿರುವರು. ಅಲ್ಲದೆ ಚಪ್ಪನೈವತ್ತಾರು ದೇಶದ ರಾಜರೆಲ್ಲ ತಮ್ಮ ಆಜ್ಞಾನುಸಾರವಾಗಿ ಅನುವರ್ತಿಸಿರುವರಲ್ಲದೇ ವುಲ್ಲಂಘದಿಂದ ನಡೆದವರನ್ನು ಧಾರನ್ನೂ ಕಾಣಲಿಲ್ಲಾ ಮತ್ಯಾವದಕ್ಕೂ ಯೇನೂ ಚಿಂತಿಯಿಲ್ಲಾ.