ತ್ರಿವೇಣಿಯವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಮೂವತ್ತೈದನೆಯ ವಯಸ್ಸಿಗೇ ತೀರಿಕೊಂಡ ತ್ರಿವೇಣಿ ಅವರ ಕಾಲ ೧೯೨೮-೧೯೬೩ ತ್ರಿವೇಣಿಯವರು ಬಿ.ಎ ಪದವಿಯನ್ನು ಪಡೆದಿದ್ದರು. ಕನ್ನಡ ಕಾದಂಬರಿ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದ ತ್ರಿವೇಣಿಯವರು ಸ್ತ್ರೀಯರು ಹೆಚ್ಚಾಗಿ ಬರೆಯದೇ ಇದ್ದ ಕಾಲದಲ್ಲಿ ಬರೆಯಲು ಪ್ರಾರಂಬಿಸಿ ಕೆಲವೇ ವರ್ಷಗಳಲ್ಲಿ ಅಸಾಧಾರಣ ಜನಪ್ರಿಯತೆಯನ್ನು ಗಳಿಸಿದರು. ಬಹುಚಿಕ್ಕ ವಯಸ್ಸಿನಲ್ಲಿ ತೀರಿಕೊಂಡಿದ್ದರಿಂದ ಅವರು ಓದುಗರ ಮಮತೆಯನ್ನು ಪಡೆದರು. ೧೯೫೩ ರಲ್ಲಿ ತ್ರಿವೇಣಿಯವರ ಮೊದಲನೆಯ ಕಾದಂಬರಿ ಪ್ರಕಟವಾಯಿತು. ಹತ್ತು ವರ್ಷಗಳಲ್ಲಿ ಇಪ್ಪತ್ತು ಕಾದಂಬರಿಗಳನ್ನು ಪ್ರಕಟಿಸಿದರು.

‘ಶರಪಂಜರ, ‘ಬೆಳ್ಳಿಮೋಡ, ‘ಕೀಲುಗೊಂಬೆ, ‘ಹೃದಯ ಗೀತೆ, ‘ಬೆಕ್ಕಿನಕಣ್ಣು, ‘ಬಾಳುಬೆಳಗಿತು, ‘ಅವಳ ಮನೆ, ‘ಕಾಶೀಯಾತ್ರೆ, ‘ಹಣ್ಣೆಲೆ ಚಿಗುರಿದಾಗ, ಇವು ಇವರ ಉತ್ತಮ ಕಾದಂಬರಿಗಳಾಗಿವೆ. ‘ಎರಡು ಮನಸ್ಸು, ‘ಸಮಸ್ಯೆಯ ಮಗು, ಇವು ಇವರ ಕಥಾಸಂಕಲನಗಳಾಗಿವೆ. ಇವರಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕಾರ ದೊರೆತಿದೆ.

ತ್ರಿವೇಣಿ ಕಾದಂಬರಿಯ ಸೃಷ್ಟಿಯಲ್ಲಿ ಮನಶ್ಯಾಸ್ತ್ರದ ತಿಳುವಳಿಕೆಯನ್ನು ಉದ್ದೇಶಪೂರ್ವಕವಾಗಿ ಬಳಸಲು ಪ್ರಯತ್ನಿಸಿದ್ದಾರೆ. ಮನಶಾಸ್ತ್ರ ಮನುಷ್ಯನ ಅಧ್ಯಯನದ ವಿಶಿಷ್ಟ ಕ್ಷೇತ್ರವಾಗುವ ಮುನ್ನವೇ ತ್ರಿವೇಣಿಯವರು ಮನುಷ್ಯನ ಮನಸ್ಸನ್ನು ಅರ್ಥಮಾಡಿಕೊಂಡುತಮ್ಮ ಕಾದಂಬರಿಯಲ್ಲಿ ಪಾತ್ರಗಳ ಸ್ವಭಾವ ನಡೆ ನುಡಿಗಯಲ್ಲಿ ಜೀವನವನ್ನು ಎದುರಿಸುವ ಅಥವಾ ಎದುರಿಸಲು ಹಿಂಜರಿಯುವ ರೀತಿಯಲ್ಲಿ ಪಾತ್ರಗಳನ್ನು ತಮ್ಮ ಕಾದಂಬರಿಯಲ್ಲಿ ಸೃಷ್ಟಿಸಿದರು. ತ್ರಿವೇಣಿಯವರ ‘ಬೆಕ್ಕಿನ ಕಣ್ಣು, ಮತ್ತು ‘ಶರಪಂಜರ, ಎರಡು ಮುಖ್ಯವಾದ ಮನೋವೈಜ್ಞಾನಿಕ ಕಾದಂಬರಿಯಾಗಿವೆ. ಮುಖ್ಯವಾಗಿ ಗಂಡು ಹೆಣ್ಣಿನ ಸಹಜೀವನದ ಶ್ರೀಮಂತಿಕೆಯನ್ನು ಮತ್ತೆಮತ್ತೆ ಚಿತ್ರಿಸುತ್ತಾರೆ. ಪುರುಷನ ಪೇಮ, ತಾಯ್ತನದಹಿಗ್ಗು, ಇವನ್ನು ಹೆಣ್ಣು ಎಷ್ಟರ ಮಟ್ಟಿಗೆ ಬಯಸುತ್ತಾಳೆ ಎಂಬುದನ್ನು ಹೆಣ್ಣಿನ ದೃಷ್ಟಿಯಿಂದ ನಿರೂಪಿಸುತ್ತಾರೆ.

೧೯೬೩ ರಲ್ಲಿ ಪ್ರಕಟವಾದ ‘ಹಣ್ಣೆಲೆ ಚಿಗುರಿದಾಗ, ಕಾದಂಬರಿ ಮಾನವ ಸ್ವಾಭಾವದಲ್ಲಿ ಅವರ ಆಸಕ್ತಿ ಗಾಡವಾಗುತ್ತಿದ್ದುದನ್ನು ಸೂಚಿಸುತ್ತದೆ. ಇಲ್ಲಿನ ವೃದ್ದರಾಯರು ಕನ್ನಡ ಕಾದಂಬರಿಯಲ್ಲಿ ಅಪೂರ್ವ ವ್ಯಕ್ತಿ. ತ್ರಿವೇಣಿಯವರ ಸೃಜನ ಶಕ್ತಿ ಎತ್ತರಕ್ಕೇರುತ್ತಿದ್ದಾಗ ಅವರು ತೀರಿಕೊಂಡರು ಎಂದು ಕಾಣುತ್ತದೆ.

ತ್ರಿವೇಣಿಯವರು ತಮ್ಮ ಕಾದಂಬರಿಗಳಲ್ಲಿ ಮನೋವಿಜ್ಞಾನವನ್ನು ಬಳಸಿದುದರಿಂದ ಅವರು ಹೊಸ ಹಾದಿಯಲ್ಲಿ ನಡೆದರು. ಎಂದು ತೋರಿದರೂ ಅವರ ಕಾದಂಬರಿಗಳ ಮೌಲ್ಯಗಳು ಅಂದಿನವರೆಗೆ ಕಂಡು ಬಂದಿದ್ದ ಮೌಲ್ಯಗಳಿಂದ ಬಿನ್ನವಾಗಿರಲಿಲ್ಲ ಕನ್ನಡ ಕಾದಂಬರಿ, ಕಥೆಗಳ ಚರಿತ್ರೆಯಲ್ಲಿ ಮಹಿಳೆಯರ ಉತ್ಸಾಹದ ಅಧ್ಯಾಯವನ್ನೇ ಅವರು ತೆರೆದರು ಎನ್ನಬೇಕು. ಸಾಮಾನ್ಯವಾಗಿ ಕೌಟುಂಬಿಕ ಜೀವನ ಇವರ ಕಥಾವಸ್ತು. ಹೃದಯದ ಶ್ರೀಮಂತಿಕೆ ಇವರ ವಸ್ತು.