ನಮ್ಮ ದೇಹದ ಹೊರ ಆವರಣವೇ ತ್ವಚೆ (ಚರ್ಮ). ತ್ವಚೆಯ ವರ್ಣದಿಂದಾಗಿಯೇ ಬಿಳಿಯರು, ಕರಿಯರು, ಬೂದು ಬಣ್ಣದವರು ಇತ್ಯಾದಿಯಾಗಿ ಜಗತ್ತಿನ ವಿವಿಧ ಜನಾಂಗಗಳನ್ನು ಗುರುತಿಸುವದುಂಟು.

ದೇಹದ ಆಂತರಿಕ ಅಂಗಾಂಗಗಳನ್ನು ಬಾಹ್ಯಪರಿಸರದ ಅಪಾಯಗಳಿಂದ ರಕ್ಷಿಸುವದು ತ್ವಚೆಯ ಪ್ರಮುಖ ಕಾರ್ಯ. ಅದು ಇನ್ನೂ ಹಲವು ಅತ್ಯವಶ್ಯಕ ಕಾರ್ಯಗಳನ್ನೂ ನೆರವೇರಿಸುತ್ತದೆ. ತ್ವಚೆಯ ರಚನೆಯನ್ನು ಅರಿತಾಗ ಅದು ತನ್ನ ಕಾರ್ಯಗಳನ್ನು ಹೇಗೆ ಮಾಡುತ್ತದೆ ಎಂದು ತಿಳಿಯಲು ಸುಲಭ.

ದೇಹದ ಎಲ್ಲ ಅಂಗಗಳಲ್ಲಿ ತ್ವಚೆ ಅತ್ಯಂತ ದೊಡ್ಡ ಗಾತ್ರ ಹೊಂದಿದೆ. ತ್ವಚೆಯು ಎರಡು ಸ್ತರಗಳ ರಚನೆ ಪಡೆದಿದೆ. ನಮ್ಮ ಬರಿಗಣ್ಣಿಗೆ ಗೋಚರಿಸುವ ತ್ವಚೆ ಬಾಹ್ಯ ತ್ವಚೆಯಾಗಿದೆ. ತ್ವಚೆಯ ಅಡಿಯಲ್ಲಿ ಕೊಬ್ಬು ಸಂಗ್ರಹವಾಗಿರುತ್ತದೆ. ಚಿತ್ರ ೧ ಮತ್ತು ೨ ನೋಡಿರಿ. ಸೂಕ್ಷ್ಮದರ್ಶಕದಲ್ಲಿ ತ್ವಚೆಯನ್ನು ವೀಕ್ಷಿಸಿದಾಗ ಅದು ಎರಡು ಸ್ತರಗಳ ರಚನೆ ಎಂದು ಕಾಣಬಹುದು. (೧) ಬಾಹ್ಯ ತ್ವಚೆ (೨) ಒಳ ತ್ವಚೆ ಎಂದು ಅವುಗಳನ್ನು ಗುರುತಿಸಿದ್ದಾಗಿದೆ. ಒಳ ತ್ವಚೆಯ ಮೇಲೆ ಬಾಹ್ಯ ತ್ವಚೆ ಸ್ಥಾಪಿತವಾಗಿದೆ.

ಚಿತ್ರ ೨ ರಲ್ಲಿ ತೋರಿಸಿದಂತೆ ಬಾಹ್ಯ ತ್ವಚೆಯು ಭಿನ್ನ ರೂಪದ ಜೀವಕೋಶಗಳನ್ನು  ಹೊಂದಿದ್ದು ಅವು ನಾಲ್ಕು ಸ್ತರಗಳಲ್ಲಿ ಒಂದರ ಮೇಲೊಂದು ಇವೆ. ಇಲ್ಲಿ ತಳಭಾಗದಲ್ಲಿರುವ ಜೀವಕೋಶಗಳು ಸದಾ ಪುನರುತ್ಪತ್ತಿ ಮಾಡುತ್ತಿರುತ್ತವೆ. ಕೆಲವು ದಿನಗಳ ನಂತರ ಈ ಜೀವಕೋಶಗಳು ತಮ್ಮ ಆಕಾರ ಬದಲಿಸಿ ಮೆಲ್ಲನೇ ಮೇಲಿನ ಸ್ತರದತ್ತ ಸಾಗುತ್ತವೆ. ಇಲ್ಲಿ ಮತ್ತೆ ಹಲವಾರು ಮಾರ್ಪಾಟುಗಳಾಗಿ ಅವು  ತಮ್ಮ ರೂಪ ಬದಲಿಸಿ ಮೇಲಿನ ಸ್ತರಕ್ಕೆ ಸಾಗುತ್ತವೆ. ಇವು ಚಪ್ಪಟೆ ಆಕಾರ ಪಡೆಯುತ್ತವೆ. ಈ ಜೀವಕೋಶಗಳು ಕೊನೆಗೆ ತಮ್ಮ ಆಂತರಿಕ ರಚನೆಯಲ್ಲಿ ಬದಲಾವಣೆಯಾಗಿ, ಅತಿ ಚಪ್ಪಟೆಯಾಗಿದ್ದು ಅವು ನಿರ್ಜೀವವಾಗಿವೆ. ಈ ಸ್ವರೂಪ ಪಡೆದಾಗ ಅವುಗಳಲ್ಲಿ ಕಿರ್‍ಯಾಟಿನ್ (keratin) ಎಂಬ ಗಡುಸು ರಾಸಾಯನಿಕ ಘಟಕದ ಶೇಖರಣೆಯಾಗಿರುತ್ತದೆ. ಕಿರ್‍ಯಾಟಿನ್ ಭರಿತ ಈ ನಿರ್ಜೀವಕೋಶಗಳು ತಳಸ್ತರದ ಜೀವಕೋಶಗಳಿಗಿಂತ ತೀರ ಭಿನ್ನವಾಗಿ ತೋರುತ್ತವೆ. ಇವು ಒಂದಕ್ಕೊಂದು ಗಟ್ಟಿಯಾಗಿ ಅಂಟಿಕೊಂಡಿದ್ದು ದೇಹದಲ್ಲಿನ ನೀರಿನಂಶ ಹೊರಗೆ ಹೋಗದಂತೆ ತಡೆಹಿಡಿಯುತ್ತವೆ. ನಮ್ಮ ಅನುಭವಕ್ಕೆ ಬರದಿದ್ದರೂ ಕೂಡ ಈ ನಿರ್ಜೀವ ಜೀವಕೋಶಗಳು ತ್ವಚೆಯಿಂದ ಯಾವಾಗಲೂ ಉದುರಿ ಬೀಳುತ್ತಿರುತ್ತವೆ.

ಹೀಗೆ ತಳ ಸ್ತರದ ಜೀವಕೋಶಗಳು ಮೇಲಕ್ಕೆ ಸಾಗುತ್ತ ನಿರ್ಜೀವವಾಗಲು ಸುಮಾರು ೩೦ – ೬೦ ದಿನಗಳು ಬೇಕು. ಬಾಹ್ಯ ತ್ವಚೆಯಲ್ಲಿ ರಕ್ತನಾಳಗಳಿಲ್ಲ, ಸಂವೇದನೆಯನ್ನು ಹೊರಡಿಸುವ ಜ್ಞಾನತಂತುಗಳ ಅಗ್ರಗಳಿಲ್ಲ. ಬಾಹ್ಯ ತ್ವಚೆಯ ದಪ್ಪಳತೆ ದೇಹದ ವಿವಿಧ ಭಾಗಗಳಲ್ಲಿ ಭಿನ್ನವಾಗಿದೆ. ಅದು ೦. ೧ – ೧ ಮಿಲಿಮೀಟರ್ ದಪ್ಪಳತೆ ಹೊಂದಿದ್ದು ಕಣ್ಣಾಲಿಗಳಲ್ಲಿ ಅತ್ಯಂತ ತೆಳುವಾಗಿದ್ದು ಅಂಗೈ ಮತ್ತು ಅಂಗಾಲುಗಳಲ್ಲಿ ಹೆಚ್ಚಿಗೆ ದಪ್ಪವಾಗಿದೆ.

ಹೊರಸ್ತರದ ಮರಣಿಸಿದ ಜೀವಕೋಶಗಳು ಯಾವಾಗಲೂ ಉದುರುತ್ತಲೇ ಇದ್ದರೂ ಕೂಡ, ತ್ವಚೆಯ ದಪ್ಪಳತೆಯನ್ನು ನಿಯಮಿತವಾಗಿರಿಸುವಂತೆ ಮಾಡಲು ತಳಸ್ತರದ ಜೀವಕೋಶಗಳು ಪುನರುತ್ಪತ್ತಿ ಮಾಡುತ್ತವೆ. ಸೆರಮೈಡ್, (ceramide) ಕೊಲೆಸ್ಟೆರಾಲ್ (cholesterol), ಫ್ಯಾಟಿಆಮ್ಲಗಳು (fatty acids) ಈ ಸ್ತರಗಳಲ್ಲಿದ್ದು ಬಾಹ್ಯಪರಿಸರದ ಅಪಾಯಕಾರಿ ಘಟಕಗಳು ತ್ವಚೆಯನ್ನು ಸೇರದಂತೆ ನಿರೋಧಿಸಲು ಪ್ರಯತ್ನಿಸುತ್ತವೆ. ಈ ಪ್ರವೇಶ ನಿರ್ಬಂಧಕ ಕ್ರಿಯೆ ನಮ್ಮ ಅಸ್ತಿತ್ವಕ್ಕೆ ಅವಶ್ಯ.

ಹೊರ ತ್ವಚೆಯಲ್ಲಿ ೨-ಡೈಹೈಡ್ರೊಕೊಲೆಸ್ಟೆರಾಲ್ ಎಂಬ ರಾಸಾಯನಿಕವಿದ್ದು ಅದು ಸೂರ್ಯಪ್ರಕಾಶದಲ್ಲಿನ ನೇರಿಳಾತೀತ (ultraviolet) ಕಿರಣಗಳಿಂದ ಉತ್ತೇಜಿತವಾಗಿ ಬೇರೆ ರೂಪದಲ್ಲಿ ಪರಿವರ್ತಿತವಾಗುವದು. ಆಮೇಲೆ ಮೂತ್ರಪಿಂಡಗಳಲ್ಲಿ ಮತ್ತು ಯಕೃತ್ತಿನಲ್ಲಿ ಹೆಚ್ಚಿನ ಕ್ರಿಯೆಗೊಳಗಾಗಿ ಕ್ರಿಯಾಶೀಲ ಡಿ – ಜೀವಸತ್ವವನ್ನು ದೇಹಕ್ಕೆ ಒದಗಿಸುತ್ತದೆ. ಮೂಳೆಗಳಲ್ಲಿ ಮತ್ತು ಎಲ್ಲ ಅಂಗಾಂಶಗಳ ಜೀವಕೋಶಗಳ ಸಮರ್ಪಕ ಕಾರ್ಯಕ್ಕೆ ಬೇಕಿರುವ ಕ್ಯಾಲ್ಸಿಯಂ (calcium) ಧಾತುವಿನ ಚಯಾಪಚಯಕ್ಕೆ ಡಿ ಜೀವಸತ್ವ ಅವಶ್ಯವಾಗಿದೆ.

ಬಾಹ್ಯ ತ್ವಚೆಯಲ್ಲಿ ಮರ್ಕೆಲ್ ಜೀವಕೋಶಗಳು, ಲ್ಯಾಂಗರ್‌ಹ್ಯಾನ್ಸ್  ಜೀವಕೋಶಗಳು ಎಂಬ ಹೆಸರಿನ ವಿಶಿಷ್ಟ ಕಾರ್ಯ ನೆರವೇರಿಸುವ (ಉದಾ: ಸ್ಥಾನಿಕವಾದ ಅಲರ್ಜಿ, ಜೀವಾಣು ನಿರೋಧ ಇತ್ಯಾದಿ) ಜೀವಕೋಶಗಳಿವೆ. ಬಾಹ್ಯತ್ವಚೆಯ ತಳಸ್ತರದ ಜೀವಕೋಶಗಳ ಮಧ್ಯಕ್ಕೆ ಅಲ್ಲಲ್ಲಿ ವರ್ಣ ತಯಾರಿಸುವ ಜೀವಕೋಶಗಳು ಸ್ಥಾಪಿತವಾಗಿವೆ. ಇವುಗಳಿಗೆ ಮೆಲ್ಯಾನೋಸೈಟ್ (melanocyte) ಎಂದು ಹೆಸರು. ಈ ಜೀವಕೋಶಗಳಲ್ಲಿ ಮೆಲ್ಯಾನಿನ್ ಎಂಬ ಬಣ್ಣದ ರಾಸಾಯನಿಕ ತಯಾರಾಗುತ್ತದೆ. ಇದರಿಂದಲೇ ನಮ್ಮ ತ್ವಚೆಗೆ ಕರಿ, ಕಂದು ಬಣ್ಣಗಳು ಬರುವದು. ಈ ಜೀವಕೋಶಗಳ ಸಂಖ್ಯೆಯಲ್ಲಿ ಹೆಚ್ಚಳವಿರದಿದ್ದರೂ, ಈ ಜೀವಕೋಶಗಳು ಹೆಚ್ಚಿನ ಪ್ರಮಾಣದಲ್ಲಿ ಮೆಲ್ಯಾನಿನ್ ಘಟಕವನ್ನು ಉತ್ಪಾದಿಸುವವರ ತ್ವಚೆ ಹೆಚ್ಚು ಕಪ್ಪು ಬಣ್ಣ ಪಡೆಯುವದು.

ಒಳತ್ವಚೆಯಲ್ಲಿನ ಕೆಲವು ರಚನೆಗಳು ಬಾಹ್ಯ ತ್ವಚೆಯಲ್ಲಿ ಹಾಯ್ದು ನಮ್ಮ ಬರಿಗಣ್ಣಿಗೆ ಗೋಚರಿಸುವಂತೆ ಹೊರಕ್ಕೆ ಬರುತ್ತವೆ. ಕೂದಲಿನ  ಬೇರು ಒಳತ್ವಚೆಯಲ್ಲಿ ಇದೆ. ಬೆವರಿನ ಗ್ರಂಥಿಯ ನಾಳ, ಉಗುರುಗಳು ಬಾಹ್ಯ ತ್ವಚೆಯಲ್ಲಿ ಕಾಣಿಸಿಕೊಳ್ಳುತ್ತವೆ.

ಚಿತ್ರ ೧ ರಲ್ಲಿ ತೋರಿಸಿದಂತೆ ಬಾಹ್ಯ ತ್ವಚೆಯ ಕೆಳಕ್ಕೆ ಒಳತ್ವಚೆ (dermis) ಇದೆ. ಹೊರ ತ್ವಚೆಯ ತಳದಲ್ಲಿ ಮತ್ತು ಒಳ ತ್ವಚೆಯ ಮೇಲ್ಭಾಗದಲ್ಲಿ ಗೂಟಗಳಂತಿರುವ ಅತ್ಯಂತ ಸೂಕ್ಷ್ಮ ರಚನೆಗಳಿದ್ದು ಈ ಎರಡು ಪದರುಗಳನ್ನು ಭದ್ರವಾಗಿ ಬಂಧಿಸಲು ಮತ್ತು ಒಂದರ ಮೇಲೊಂದು ಜರೆದು ಹೋಗದಂತೆ ಸ್ಥಾಪಿತವಾಗಿರಲು ಇಂಥ ರಚನೆ  ಸಹಾಯವಾಗುತ್ತದೆ. ಒಳ ತ್ವಚೆಯು ಬಾಹ್ಯ ತ್ವಚೆಗೆ ಅಧಾರವಾಗಿದೆ. ಒಳತ್ವಚೆಯಲ್ಲಿ ಹರಿದಾಡುವ ರಕ್ತದಿಂದಲೇ ಬಾಹ್ಯ ತ್ವಚೆಯ ತಳಭಾಗದ ಜೀವಕೋಶಗಳಿಗೆ ಪೋಷಣೆಯಾಗುತ್ತದೆ.

ನರಸಂವೇದನೆಗಳನ್ನು ಉತ್ಪಾದಿಸುವ ನರತಂತುಗಳ ಅಗ್ರಗಳು ಒಳ ತ್ವಚೆಯಲ್ಲಿವೆ. ಫೈಬ್ರೋಬ್ಲಾಸ್ಟ್ (fibroblast), ಲಿಂಫೋಸೈಟ್ (lymphocyte) ಮುಂತಾದ ವಿವಿಧ ಪ್ರಕಾರದ ಜೀವಕೋಶಗಳು ಒಳ ತ್ವಚೆಯಲ್ಲಿವೆ. ಫೈಬ್ರೋಬ್ಲಾಸ್ಟ್ ಜೀವಕೋಶಗಳು ಕೊಲೇಜೆನ್ (collagen) ಮತ್ತು ಇಲ್ಯಾಸ್ಟಿನ್ (elastin) ಎಂಬ ಪದಾರ್ಥಗಳ ತಂತುಗಳನ್ನು (fibres) ತಯಾರಿಸುತ್ತವೆ. ಕೊಲೇಜೆನ್ ತಂತುಗಳು ತ್ವಚೆಯು ಹರಿಯದಂತೆ ತಡೆಹಿಡಿಯುತ್ತವೆ. ನೀವು ಹೆಬ್ಬೆರಳು ಮತ್ತು ತುದಿಬೆರಳಿನಿಂದ ತ್ವಚೆಯನ್ನು ಚಿವುಕಿ ಸ್ವಲ್ಪ ಎಳೆಯಲು ಸಾಧ್ಯ. ಹೀಗೆ ಬೆರಳಿನಲ್ಲಿ ಹಿಡಿದು ಎಳೆದಾಗ ಹೀಚಿದ ತ್ವಚೆಯನ್ನು ಬೆರಳಿನ ಹಿಡಿತದಿಂದ ಬಿಟ್ಟಾಗ ಆ ತ್ವಚೆಯು ತನ್ನ ಮೊದಲಿನ ಸ್ಥಾನದಲ್ಲಿ ಮೊದಲಿನಂತೆ ಇರಲು ಕುಗ್ಗುತ್ತದೆ. ಇದು ತ್ವಚೆಯ ಸ್ಥಿತಿಸ್ಥಾಪಕ ಗುಣವಾಗಿದೆ. ಈ ಸ್ಥಿತಿಸ್ಥಾಪಕ ಗುಣ (elasticity) ತ್ವಚೆಗೆ ಇಲ್ಯಾಸ್ಟಿನ್ ತಂತುಗಳಿಂದ  ಬರುತ್ತದೆ. ಅತ್ಯಂತ ವಿರಳವಾಗಿ ಕೆಲವರಲ್ಲಿ ಕೊಲೇಜೆನ್ ಮತ್ತು ಇಲ್ಯಾಸ್ಟಿನ್ ತಂತುಗಳ ರಚನೆ ಮತ್ತು ಕಾರ್ಯಗಳಲ್ಲಿನ ನ್ಯೂನತೆಗಳಿಂದಾಗಿ ತ್ವಚೆಯಲ್ಲಿ ರೋಗಗಳು ಕಾಣಿಸಿಕೊಳ್ಳಬಹುದಾಗಿದೆ.

ಚಿತ್ರದಲ್ಲಿ ತೋರಿಸಿದಂತೆ ಕೂದಲಿನ ಬೇರು ಒಳತ್ವಚೆಯಲ್ಲಿ ಸ್ಥಾಪಿತವಾಗಿದೆ. ರೋಮಚೀಲದಿಂದ (follicle) ಹುಟ್ಟಿದ ಕೂದಲು ಬೆಳೆದು ಉದ್ದವಾಗಿ ಅದರ ಕಾಂಡವು ಮೇಲಕ್ಕೆ ಸಾಗಿದೆ.  ಆಮೇಲೆ ಬಾಹ್ಯತ್ವಚೆಯಲ್ಲಿ ಹಾಯ್ದು ಹೊರಬಂದು ತ್ವಚೆಯಮೇಲೆ ನಮಗರಿವಿರದಂತೆ ಇರುತ್ತದೆ. ಕೂದಲಿನ ಕಾಂಡಕ್ಕೆ ಸೂಕ್ಷ್ಮ ಗಾತ್ರದ (ಬರಿಗಣ್ಣಿಗೆ ಕಾಣದಷ್ಟು ಚಿಕ್ಕದು) ಸ್ನಾಯು ಅಂಟಿಕೊಂಡಿದ್ದು ಅದರ ಇನ್ನೊಂದು ತುದಿ ತ್ವಚೆಯಲ್ಲಿ ಅಂಟಿದೆ. ನಮಗೆ ಚಳಿಯಾದಾಗ ಇಲ್ಲವೇ ಹರ್ಷಾತಿರೇಕವಾದಾಗ ಈ ಸ್ನಾಯು ಆಕುಂಚನಗೊಳ್ಳುತ್ತದೆ. ಹೀಗೆ ಆಕುಂಚನಗೊಂಡ ಸ್ನಾಯು ಕೂದಲಿನ ಕಾಂಡವನ್ನು ಎಳೆಯುವದರಿಂದ ಈ ವರೆಗೆ ತ್ವಚೆಯ ಮೇಲೆ ಓರೆಯಾಗಿ ನಿಂತಿದ್ದ ಕೂದಲು ಸೆಟೆದು ನೇರವಾಗಿ ನಿಲ್ಲುತ್ತದೆ. ಹವೆಯು ಉಷ್ಣತೆಯ ಮಂದವಾಹಕ. ನೇರಕ್ಕೆ ಸೆಟೆದು ನಿಂತ ಕೂದಲುಗಳ ಮಧ್ಯದಲ್ಲಿ ಹವೆಯು ಈಗ ಒಂದು ಅವ್ಯಕ್ತ ಮಂದವಾಹಕ ಹೊದಿಕೆಯಂತೆ ತ್ವಚೆಯ ಮೇಲೆ ತಾತ್ಕಾಲಿಕವಾಗಿ ಸ್ಥಾಪಿತವಾಗಿದ್ದು ಉಷ್ಣತೆಯು ದೇಹದಿಂದ ವಾತಾವರಣಕ್ಕೆ ಹೋಗುವದನ್ನು ನಿರ್ಬಂಧಿಸಲು ಪ್ರಯತ್ನಿಸುತ್ತದೆ. ಚಳಿಯಿಂದ ರಕ್ಷಿಸಿಕೊಂಡು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಈ ರೀತಿ ಪ್ರತಿಕ್ರಿಯಿಸಲು ನೈಸರ್ಗಿಕ ವಿಕಾಸವಾಗಿದೆ.

ತ್ವಚೆಯಲ್ಲಿನ ನರತಂತುಗಳ ತುದಿಗಳು ಪ್ರಚೋದನೆಗೊಂಡಾಗ ಅಲ್ಲಿ ವಿದ್ಯುತ್‍ಸಂವೇದನೆಗಳು ಉತ್ಪಾದಿತವಾಗುತ್ತವೆ. ಈ ವಿದ್ಯುತ್‍ಸಂವೇದನೆಗಳು ನರತಂತುಗಳಲ್ಲಿ  ಪ್ರವಹಿಸಿ, ನರಮಂಡಲದ ವಿವಿಧ ಭಾಗಗಳಲ್ಲಿ ಚಲಿಸಿ, ತಲೆಬುರುಡೆಯಲ್ಲಿರುವ ಮಿದುಳನ್ನು (brain) ತಲಪುತ್ತವೆ. ಮಿದುಳು ಈ ನರಸಂವೇದನೆಗಳನ್ನು ಅರ್ಥೈಸಿದಾಗ ನಮಗೆ ಸ್ಪರ್ಶಜ್ಞಾನ, ಶೀತ, ಉಷ್ಣ, ನೋವು ತುರಿತಗಳ ಅನುಭವವಾಗುತ್ತದೆ.

ಬೆವರಿನ ಗ್ರಂಥಿಗಳು ಒಳತ್ವಚೆಯಲ್ಲಿವೆ. ಅವುಗಳಲ್ಲಿ ಉತ್ಪಾದಿತ ಬೆವರು ಗ್ರಂಥಿಯ ನಾಳದಿಂದ ಹೊರಕ್ಕೆ ಹರಿಯುತ್ತದೆ. ತ್ವಚೆಯ ಹೊರಕ್ಕೆ ಇರುವ ಬೆವರು ತ್ವಚೆಯಲ್ಲಿನ ರಕ್ತನಾಳಗಳಲ್ಲಿನ ಬಿಸಿರಕ್ತದಿಂದ ಉಷ್ಣತೆ ಪಡೆದು ಆವಿಯಾಗಿ ವಾತಾವರಣ ಸೇರುತ್ತದೆ. ತ್ವಚೆಯ ಈ ಕ್ರಿಯೆಯಿಂದ ದೇಹದ ಉಷ್ಣತೆ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಬಾಹ್ಯತ್ವಚೆಯ ತಳಭಾಗದಲ್ಲಿರುವ ಮೆಲ್ಯಾನೋಸೈಟ್ (melanocyte) ಜೀವಕೋಶಗಳು ತಯಾರಿಸುವ ಬಣ್ಣವು ನಮ್ಮ ನೈಸರ್ಗಿಕ ಬಣ್ಣವಾಗಿದೆ. ಆದರೆ ಕೆಲವು ಸಲ ಅಧಿಕ ಪ್ರಮಾಣದ ಚೋದನಿಕಗಳ (hormone) ಸ್ರವಿಸುವಿಕೆಯಿಂದಾಗಿ ಮೆಲ್ಯಾನೋಸೈಟ್ ಜೀವಕೋಶಗಳು ಹೆಚ್ಚಿನ ಪ್ರಮಾಣದಲ್ಲಿ ಬಣ್ಣವನ್ನು ತಯಾರಿಸುತ್ತವೆ. ಇದು ಕೆಲವೊಮ್ಮೆ ಬೇರೆ ರೋಗದ ಲಕ್ಷಣವಾಗಿರುತ್ತದೆ. ಗರ್ಭಿಣಿಯರಲ್ಲಿ ಕೆಲವೊಮ್ಮೆ ತ್ವಚೆಯಲ್ಲಿನ ಮೆಲ್ಯಾನೋಸೈಟ್ ಜೀವಕೋಶಗಳು ಚೋದನಿಕಗಳ ಪ್ರಭಾವದಿಂದ ಹೆಚ್ಚಿನ ಪ್ರಮಾಣದಲ್ಲಿ ಬಣ್ಣದ ಕಣಗಳನ್ನು ತಯಾರಿಸಿದಾಗ ಅದು ಅವರ ಮುಖ (ಹಣೆ, ಕಪೋಲಗಳು) ಸ್ವಲ್ಪ ಕಂದು ಕಪ್ಪಗೆ ಆಗಿರುವಂತೆ ಮತ್ತು ಹೊಕ್ಕಳಿನಿಂದ ನೇರವಾಗಿ ಕೆಳಕ್ಕೆ ಕಿಬ್ಬೊಟ್ಟೆಯ ಮೇಲೆ ಪಟ್ಟಿಯಾಗಿ ಕಪ್ಪಗೆ ಕಾಣುವಂತೆ ಮತ್ತು ಅವರ ಸ್ತನಗಳ ಬಣ್ಣ ಕಪ್ಪು ಬಣ್ಣ ಪಡೆಯುವಂತೆ ಬದಲಾವಣೆ ಆಗುವದು. ಇದು ತಾತ್ಕಾಲಿಕ ಸ್ಥಿತಿ.  ಇದು ರೋಗವಲ್ಲ.  ಹೆರಿಗೆಯ ನಂತರ ತ್ವಚೆಯ ಬಣ್ಣ ಮೊದಲಿನಂತೆ ಆಗುತ್ತದೆ.

ಮೆಲ್ಯಾನೋಸೈಟ್ ಜೀವಕೋಶಗಳು ಧಕ್ಕೆಹೊಂದಿದಾಗ ಅವು ಬಣ್ಣದ ಕಣಗಳನ್ನು ತಯಾರಿಸಲು ಅಸಮರ್ಥವಾಗುತ್ತವೆ. ಆ ಭಾಗದಲ್ಲಿನ ತ್ವಚೆಯು ಸುತ್ತಲಿನ ಭಾಗದ ತ್ವಚೆಗಿಂತ ಬಿಳುಪಾಗುತ್ತದೆ. ಇದೇ ತೊನ್ನು ರೋಗ. ಬಿಳಿಕಲೆ, ಬಿಳಿ ಮಚ್ಚೆ ಎಂತಲೂ ಕರೆಯುತ್ತಾರೆ.(vitiligo, leucoderma) ಇದನ್ನು ಗುಣಪಡಿಸಲು ಸದ್ಯಕ್ಕೆ ಚಿಕಿತ್ಸೆ ಇಲ್ಲ. ಇದು ಅಪಾಯಕಾರಿಯಲ್ಲ. ಕೆಲವರು ಮರೆಮಾಚುವ ಅಲಂಕಾರ ಮಾಡಿಕೊಳ್ಳುವದು ಅವಶ್ಯವಾಗಬಹುದು. ಇನ್ನು ಕೆಲವರಲ್ಲಿ ಅನುವಂಶಿಕ ರೋಗದಿಂದಾಗಿ ಎಲ್ಲ ತ್ವಚೆಯ ಮೆಲ್ಯಾನೋಸೈಟ್ ಜೀವಕೋಶಗಳು ಬಣ್ಣದ ಕಣ ಉತ್ಪಾದಿಸಲು ಸಂಪೂರ್ಣವಾಗಿ ಅಸಮರ್ಥವಾಗುತ್ತವೆ. ಇವರು ತ್ವಚೆ, ಕಣ್ಣು ರೆಪ್ಪೆ, ಹುಬ್ಬು ಕೂದಲಿನಲ್ಲಿ ಬಣ್ಣರಹಿತವಾಗುವದರಿಂದ ಬಿಳಿಚಿಕೆ (albinism) ಎಂಬ ವಿರಳ ರೋಗಕ್ಕೆ ಬಲಿಯಾಗುತ್ತಾರೆ.

ತ್ವಚೆಯಲ್ಲಿ ಕೆಲವು ವಿಶಿಷ್ಟ ಗ್ರಂಥಿಗಳಿದ್ದು ಅವುಗಳಲ್ಲಿ ಎಣ್ಣೆಯಂಥ ಪ್ರದಾರ್ಥ ಉತ್ಪಾದಿತವಾಗುತ್ತದೆ. ಈ ಸ್ನಿಗ್ಧ ಪದಾರ್ಥವೇ ಮೈಜಿಡ್ಡು (sebum).  ಈ ಸ್ನಿಗ್ಧ ಗ್ರಂಥಿಗಳು ಒಳತ್ವಚೆಯಲ್ಲಿದ್ದು ಅವುಗಳ ನಾಳದ ಬಾಯಿ ಕೂದಲಿನ ಕಾಂಡಕ್ಕೆ ಒಸರುವಂತೆ ಹತ್ತಿಕೊಂಡಿದೆ. ಸ್ನಿಗ್ಧವು ಕೂದಲಿನ ಕಾಂಡವನ್ನೇರಿ ಬಾಹ್ಯತ್ವಚೆಯಮೇಲೆ ತೆಳುವಾಗಿ ಪಸರಿಸುತ್ತದೆ. ಈ ಪದಾರ್ಥವು ರೋಗಾಣುಗಳು ದೇಹ ಪ್ರವೇಶಿಸದಂತೆ ತಡೆಹಿಡಿಯಲು ಸಹಾಯವಾಗುತ್ತದೆ. ಇದು ತ್ವಚೆಗೆ ಕಾಂತಿಯನ್ನು, ನುಣುಪು ಸೌಂದರ್ಯಗಳನ್ನು ಕೊಡುತ್ತದೆ. ಕೆಲವರಲ್ಲಿ ಇದರ ಪ್ರಮಾಣ ಹೆಚ್ಚಿಗೆ ಆದಾಗ ತ್ವಚೆಯು ಸ್ನಿಗ್ಧಮಯವಾಗಿ ತೋರುತ್ತದೆ. ಸ್ನಿಗ್ಧ ಗ್ರಂಥಿಗಳು ಚೋದನಿಕಗಳ ಪ್ರಭಾವದಿಂದ ಹೆಚ್ಚು ಪ್ರಮಾಣದಲ್ಲಿ ಈ ಸ್ನಿಗ್ಧವನ್ನುತ್ಪಾದಿಸುವದು ಮತ್ತು ಕೆಲವು ಬಗೆಯ ರೋಗಾಣುಗಳು ಗ್ರಂಥಿನಾಳಗಳಲ್ಲಿ ವಲಸೆಯಾಗಿರುವದು ಮತ್ತು ಈ ಗ್ರಂಥಿಗಳ ಉರಿಯೂತಗಳು ಮೊಡವೆಗಳಿಗೆ ಕಾರಣವಾಗುವದೆಂದು ತಜ್ಞರು ಹೇಳುತ್ತಾರೆ. ಕಪೋಲ, ಹಣೆ, ಕುತ್ತಿಗೆ, ಎದೆಗಳಲ್ಲಿನ ತ್ವಚೆಯಲ್ಲಿ ಈ ಗ್ರಂಥಿಗಳು ಹೆಚ್ಚಿಗೆ ಇದ್ದುದರಿಂದ ಮೊಡವೆಗಳು ಈ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ತ್ವಚೆಯ ಗಾಯಗಳು ವಾಸಿಯಾಗಲು ಕೆಲವೊಮ್ಮೆ ವ್ಯತ್ಯಯವಾಗಬಹುದು. ಮತ್ತೆ ಕೆಲವು ಸಂದರ್ಭಗಳಲ್ಲಿ (ಉದಾ: ಸುಟ್ಟ ಗಾಯಗಳು) ವಾಸಿಯಾಗಲು ತೊಂದರೆಯಾದಾಗ ವೈದ್ಯರು ಅದೇ ವ್ಯಕ್ತಿಯ ದೇಹದ ಇತರ ಭಾಗದಿಂದ ತ್ವಚೆಯನ್ನು ಕತ್ತರಿಸಿಕೊಂಡು ಅವಶ್ಯವಿದ್ದ ಸ್ಥಾನದಲ್ಲಿ ಕಸಿಮಾಡುತ್ತಾರೆ.

ಒಳತ್ವಚೆಯ ಕೆಳಕ್ಕೆ ಕೊಬ್ಬಿನ ಸಂಗ್ರಹವಾಗುತ್ತದೆ. ಅಡಿಪೋಸೈಟ್ (adipocyte) ಎಂಬ ಜೀವಕೋಶಗಳು ದೇಹದಲ್ಲೆಲ್ಲ ಸ್ಥಾಪಿತವಾಗಿದ್ದು ಅವುಗಳ ಸಂಖ್ಯೆ ತ್ವಚೆಯಡಿಯಲ್ಲಿ ಹೆಚ್ಚಿಗೆ ಇದೆ. ಅದರಲ್ಲೂ ಹೊಟ್ಟೆಯ ತ್ವಚೆ, ಸ್ತನಗಳು, ತೊಡೆ, ಬಾಹುಗಳ ತ್ವಚೆಯಡಿಯಲ್ಲಿ ಹೆಚ್ಚಿಗೆ ಇರುವದು. ನಮ್ಮ ದೇಹಕ್ಕೆ ಬೇಕಿರುವ ಕ್ಯಾಲೊರಿಗಳಿಗಿಂತ ಹೆಚ್ಚು ಆಹಾರ ಸೇವಿಸಿದಾಗ ಅದು ಕೊಬ್ಬಿನ ರೂಪದಲ್ಲಿ ಪರಿವರ್ತಿತವಾಗಿ ತ್ವಚೆಯಡಿಯಲ್ಲಿ (ಮತ್ತಿತರ ಆಂತರಿಕ ಅಂಗಾಂಗಗಳಲ್ಲಿ ಕೂಡ) ಇರುವ ಅಡಿಪೋಸೈಟ್ ಜೀವಕೋಶಗಳಲ್ಲಿ ಶೇಖರಣೆಯಾಗುವದು. ಇದು ಹೆಚ್ಚಿದಾಗ ಬೊಜ್ಜು ಉಂಟಾಗುವದು.

ವಯಸ್ಸು ಹೆಚ್ಚಿದಂತೆ ಮತ್ತು ಸೂರ್ಯಪ್ರಕಾಶದ ಪರಿಣಾಮದಿಂದಾಗಿ (ಸೂರ್ಯಪ್ರಕಾಶದಲ್ಲಿನ ನೇರಿಲಾತೀತ ಕಿರಣಗಳ ಪ್ರಭಾವ) ಒಳತ್ವಚೆಯಲ್ಲಿನ ಇಲ್ಯಾಸ್ಟಿನ್ ತಂತುಗಳು ಧಕ್ಕೆಗೊಳ್ಳುತ್ತವೆ. ಇದರಿಂದಾಗಿ ತ್ವಚೆಯು ತನ್ನ ಸ್ಥಿತಿಸ್ಥಾಪಕತ್ವವನ್ನು ಕ್ರಮೇಣ ಕಳೆದುಕೊಳ್ಳುತ್ತದೆ. ಇದರಿಂದ ತ್ವಚೆಯಲ್ಲಿ ನೆರಿಗೆಗಳು ಕಂಡುಬರುತ್ತವೆ.

ಹೀಗೆ ತ್ವಚೆಯು ನಮ್ಮ ಅಸ್ತಿತ್ವಕ್ಕೆ ಅತ್ಯವಶ್ಯ. ಅದು ಬಾಹ್ಯ ಪರಿಸರದ ಅಪಾಯಕಾರಿ ಘಟಕಗಳು (ರೋಗಾಣುಗಳು, ವಿಷಕಾರಿಗಳು) ದೇಹ ಪ್ರವೇಶಿಸದಂತೆ ತಡೆಹಿಡಿಯುವದಲ್ಲದೇ ನೀರಿನಂಶದ ಸಮತೋಲನ, ಉಷ್ಣತೆಯ ಸಮತೋಲನ, ಸ್ಪರ್ಶಜ್ಞಾನ, ನರಸಂವೇದನೆಗಳ ಉಗಮ, ವ್ಯಕ್ತಿಯ ಸೌಂದರ್ಯ ಆಕರ್ಷಕತೆಗಳಿಗೆ, ಡಿ ಜೀವಸತ್ವ ಉತ್ಪಾದನೆಗೆ ನೆರವಾಗುತ್ತದೆ. ತ್ವಚೆಯಲ್ಲಿರುವ ವರ್ಣಕಣಗಳು ಸೂರ್ಯಪ್ರಕಾಶದಲ್ಲಿನ ಅಪಾಯಕಾರಿ ತರಂಗಾಂತರದಲ್ಲಿನ ನೇರಿಲಾತೀತ ಕಿರಣಗಳಿಂದ ರಕ್ಷಿಸುತ್ತದೆ.