ಶಿರಸಿಯ ಈ ಜೇನುಕೃಷಿಕ ಬಯಲುಸೀಮೆಯಿಂದ ತಂದು ಅಭಿವೃದ್ಧಿಪಡಿಸುತ್ತಾ ಬಂದ ನಸು ಕೆಂಬಣ್ಣದ ಜೇನ್ನೊಣ ಜಾತಿ ಥಾಯ್‌ಸ್ಯಾಕ್‌ಬ್ರೂಡ್ ರೋಗನಿರೋಧಕ ಅನ್ನುವಂತಿಲ್ಲ. ಆದರೆ ರೋಗಸಹಿಷ್ಣು ಎಂಬುದು ಸಾಬೀತಾಗಿದೆ. ಘಟ್ಟದ ಮೇಲೂ, ಕರಾವಳಿಗೂ ಹೊಂದಿಕೊಳ್ಳುವ ಈ ಜಾತಿ ಒಳ್ಳೆ ನಿರ್ವಹಣೆಯಡಿ ಊರ ತುಡುವೆಗಿಂತ ಹೆಚ್ಚು ಜೇನು ತಯಾರಿಸುತ್ತದೆ.

ಮಶಿಗದ್ದೆಯ ಧರ್ಮೇಂದ್ರ ಹೆಗಡೆ(೩೭) ಜೇನು ಕೃಷಿಕ. ಜೇನು ಸಾಕಣೆ ಬಾಲ್ಯದ ನಂಟು. “ನಾಲ್ಕನೇ ಕ್ಲಾಸಿನಲ್ಲಿದ್ದಾಗಲೇ ಮೊದಲ ಜೇನುಕುಟುಂಬ ಹಿಡಿದೆ. ಮತ್ತದನ್ನು ಬಿಡಲೇ ಇಲ್ಲ.’’ ಎರಡು ವರ್ಷ ಹಿಂದೆ ತೀರಿಕೊಂಡ ದೊಡ್ಡಪ್ಪ ಸುಬ್ರಾಯ ವೆಂಕಟ್ರಮಣ ಹೆಗಡೆಯವರ ಪ್ರಭಾವ. ಈ ಹುಚ್ಚು ಹತ್ತಿಸಿದ್ದು ಅವರ ಒಡನಾಟ. ಈ ಹುಚ್ಚು ಹೈಸ್ಕೂಲಿನಿಂದ ಮುಂದೆ ಓದಲು ಬಿಡಲಿಲ್ಲ.

ಹತ್ತು ಗುಂಟೆ ಅಡಿಕೆ ತೋಟ. ಇದರ ಆದಾಯ ವೆಚ್ಚ ಸರಿಸಮ. ಜೇನೇ ಬದುಕಿಗಾಧಾರ. ಶಿರಸಿ ಭಾಗದಲ್ಲಿ ಜೇನುಕೃಷಿಯನ್ನೇ ವೃತ್ತಿಯಾಗಿಸಿಕೊಂಡವರು ಬಹುಶಃ ಬೇರಿಲ್ಲ.

೧೯೯೩. ಜೇನುಕುಟುಂಬಗಳಿಗೆ ಮಾರಕ ಥಾಯ್‌ಸಾಕ್‌ಬ್ರೂಡ್ (ಖಿSಃ) ಕಾಯಿಲೆ ಆರಂಭ. ಇವರ ಜೇನು ಸಂಸಾರವೂ ಕ್ಷೀಣಿಸಿತ್ತು. ಎಲ್ಲವೂ ನಾಶವಾಗುತ್ತವೆ ಎಂಬ ಆತಂಕ. ತುಡವಿ ಜೇನು ಹುಳುಗಳನ್ನು ಅರಸುತ್ತಾ ಕಾಡುಮೇಡು ಅಲೆದಾಟ. ಪತ್ತೆಯಾದ ಕುಟುಂಬಗಳನ್ನು ತಂದು ಸಾಕಣೆ. ಸಂಸಾರ ತುಂಬುವ ಪ್ರಯತ್ನ. ತಂದ ಹೊಸ ಹುಳುಗಳೂ ಹೆಚ್ಚು ಕಾಲ ಬದುಕಲಿಲ್ಲ. ರೋಗದಿಂದ ಸತ್ತುಹೋದುವು. ಮುಂದೇನು ದಾರಿ? ಪ್ರಶ್ನೆಗೆ ಉತ್ತರ ಸಿಕ್ಕದ ದಿನಗಳವು.

ಆಗ ಜೇನುಗೂಡುಗಳನ್ನು ಹುಡುಕುತ್ತಾ ಶಿರಸಿಗೆ ಬಂದ ಒಂದು ತಂಡ ಮಶಿಗದ್ದೆಗೂ ಭೇಟಿ ಕೊಟ್ಟಿತ್ತು. ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಎಸ್.ಟಿ.ಪ್ರಭು ಅವರ ಸೂಚನೆ ಮೇರೆಗೆ ಬಂದವರು ಇವರು. ತಂಡದಲ್ಲಿದ್ದ ಕೇಂದ್ರದ ಸಹಾಯಕ ಬಸವರಾಜ ಗತ್ತಿ ಇಲ್ಲಿನ ಜೇನುಹುಳಗಳನ್ನು ನೋಡಿ ಆಶ್ಚರ್ಯಪಟ್ಟು, ‘ಇದೇನು ಕಪ್ಪು ಹುಳ. ಇದು ಜೇನುಹುಳ ಹೌದೋ, ಅಲ್ಲವೋ’ ಎಂಬ ಸಂಶಯ ವ್ಯಕ್ತಪಡಿಸಿದರು. ‘ನಮ್ಮಲ್ಲಿರುವುದು ಕೆಂಪು ಹುಳ’ ಅಂತಲೂ ಉದ್ಗರಿಸಿದರು.

ಧರ್ಮೇಂದ್ರರಿಗೆ ಇಷ್ಟು ಮಾಹಿತಿ ಸಿಕ್ಕಿದ್ದೇ ತಡ, ಕೆಂಪು ಜೇನು ಹುಳ ತಲೆಯಲ್ಲಿ ಸುತ್ತಲಾರಂಭಿಸಿತು! ಥಾಯ್‌ಸಾಕ್‌ಬ್ರೂಡ್‌ನಿಂದ ಸ್ಥಳೀಯ ಕಪ್ಪು ತುಡುವೆ ನಾಶವಾಗುತ್ತಿತ್ತು. ಇದ್ದ ಒಂದೆರಡು ಪೆಟ್ಟಿಗೆ ಉಳಿಸುವುದಕ್ಕೂ ಹರಸಾಹಸ ಪಟ್ಟಿದ್ದರು. ಆದರೂ ಕಷ್ಟ ಎಂದು ಅನಿಸುತ್ತಿತ್ತು. ಹಗಲುರಾತ್ರಿ ಪರ್ಯಾಯವೇನು ಎಂಬ ಚಿಂತೆ.

ಬಯಲುಸೀಮೆಗೆ ಲಗ್ಗೆ

ಅಂದು ಜೇನು ಹುಡುಕಾಟಕ್ಕೆ ತಂಡ ಅಟ್ಟಿದ ಕೀಟಶಾಸ್ತ್ರಜ್ಞ ಡಾ.ಎಸ್.ಟಿ.ಪ್ರಭು ಕೆಲಕಾಲ ನಂತರ ಶಿರಸಿ ಕೃಷಿ ಸಂಶೋಧನಾ ಕೇಂದ್ರಕ್ಕೆ ಬಂದರು. ಆಗ, ಕೆಂಪು ಜೇನುಹುಳ ಧರ್ಮೇಂದ್ರರ ಮನಸ್ಸಿನಲ್ಲಿ ಮತ್ತೆ ಗೂಡು ಕಟ್ಟಲು ಆರಂಭಿಸಿತು. ಕೊನೆಗೂ ಪ್ರಭು ಅವರ ಸಹಕಾರದಿಂದ ಹನುಮನಮಟ್ಟಿ ಕೇಂದ್ರದಲ್ಲಿದ್ದ ಒಂದು ಜೇನು ಸಂಸಾರ ಮತ್ತು ಅಲ್ಲಿನ ಬಾವಿಯಲ್ಲಿದ್ದ ಮತ್ತೊಂದು – ಹೀಗೆ ಎರಡು ಕೆಂಪು ಜೇನು ಸಂಸಾರಗಳನ್ನು ತಂದರು. ಪ್ರಯೋಗಾರ್ಥವಾಗಿ.

ಹೊಸ ಕುಟುಂಬಗಳನ್ನು ‘ಬದುಕಿದರೆ ಬದುಕಲಿ’ ಅಂದುಕೊಳ್ಳುತ್ತಾ ಸಾವುಬದುಕಿನ ಹೋರಾಟದಲ್ಲಿದ್ದ ಎರಡು ಜೇನುಸಂಸಾರಗಳೊಂದಿಗೇ ಇಟ್ಟರು. ಒಂದಷ್ಟು ದಿನ ವಿಷಯವೇ ಮರೆತುಹೋಯಿತು. ಏಕೆಂದರೆ ಕಪ್ಪು ತುಡುವೆಗಳ ಸಾವಿನ ಬೇಸರ ಮನದಿಂದ ಮಾಸಿರಲಿಲ್ಲ.

ಹದಿನೈದು ದಿವಸ ಕಳೆದಿರಬಹುದು, ಒಮ್ಮೆಲೇ ನೆನಪಾಗಿ ಕುತೂಹಲದಿಂದ ಪೆಟ್ಟಿಗೆ ನೋಡುತ್ತಾರೆ, ಕಪ್ಪು ತುಡುವೆ ಹುಳಗಳ ಆಕ್ರಮಣಕ್ಕೆ ಒಂದು ಹೊಸ ಸಂಸಾರ ನೆಲ ಕಚ್ಚಿತ್ತು! ಮತ್ತೊಂದು ಮಾತ್ರ ಕೆಲಸದಲ್ಲಿ ತೊಡಗಿತ್ತು.

ಸುಮಾರು ಆರು ತಿಂಗಳು ಈ ಹುಳಗಳ ಚಲನವಲನಗಳನ್ನು ಪರೀಕ್ಷಿಸಿದರು. ಆಶ್ಚರ್ಯ! ಇವಕ್ಕೆ ರೋಗ ಬರಲಿಲ್ಲ. ‘ಶಿರಸಿ ವಾತಾವರಣಕ್ಕೆ ಇವು ಹೊಂದಿಕೊಳ್ಳಬಲ್ಲವು. ಇವು ರೋಗಸಹಿಷ್ಣು’ ಇರಬಹುದೇ ಎಂಬ ನಿರೀಕ್ಷೆ. ಇನ್ನು ಜೇನು ಸಂಸಾರ ವೃದ್ಧಿಗೆ ರಾಣಿಬೆನ್ನೂರು ಕಡೆಯ ಹುಳಗಳೇ ಆಶಾಕಿರಣ ಅನಿಸಿತು.

ಶಿರಸಿಯಿಂದ ರಾಣಿಬೆನ್ನೂರಿಗೆ ಸುಮಾರು ೯೦ ಕಿಲೋಮಿಟರ್ ದೂರ. ವಾರ್ಷಿಕ ೬೦೦ ಮಿಮೀ ಮಳೆ ಬೀಳುವ ಬಯಲುಸೀಮೆ. “ರಾಣಿಬೆನ್ನೂರು ಸುತ್ತಮುತ್ತ ಜೇನು ಸಾಕಣೆ ವಿರಳ. ಅಲ್ಲಿ ಹಾಳುಬಾವಿಗಳು ಬೇಕಾದಷ್ಟಿವೆ. ಬಾವಿಯ ಸಂದುಗಳಲ್ಲಿ ಚಿಕ್ಕ ಚಿಕ್ಕ ಜೇನುಸಂಸಾರಗಳು. ಪರಾಗದ ಅಲಭ್ಯತೆಯಿಂದಾಗಿ ಜೇನು ಉತ್ಪಾದನೆ ಕಡಿಮೆ. ಜನರಲ್ಲಿ ಜೇನಿನ ಬಳಕೆಯೇ ಇಲ್ಲ. ಪೆಟ್ಟಿಗೆಯಲ್ಲಿಟ್ಟು ಸಾಕಬಹುದು ಎಂಬ ಅರಿವು ಕಡಿಮೆ. ಉತ್ತರ ಕನ್ನಡದಲ್ಲಿ ಜೇನಿನ ಉಪಯೋಗ ಒಂದು ಸಂಪ್ರದಾಯ” ಎನ್ನುತ್ತಾರೆ ಡಾ.ಎಸ್.ಟಿ.ಪ್ರಭು.

ಜೇನುಕುಟುಂಬ ಹಿಡಿಯುವುದರಲ್ಲಿ ನಿಪುಣ ಧರ್ಮೇಂದ್ರ, ಈ ಜೇನುಸಂಸಾರಗಳನ್ನು ರಾಣಿಬೆನ್ನೂರಿನಿಂದ ಪ್ಲೈವುಡ್ ಬಾಕ್ಸ್‌ಗಳಲ್ಲಿ ತುಂಬಿ ಹಿಡಿದು ತಂದಿದ್ದರು. ಉಳಿದ ಏಕೈಕ ಸಂಸಾರ ಮಶಿಗದ್ದೆಯಲ್ಲಿ ಅಭಿವೃದ್ಧಿಯಾಯಿತು. ಈಗ ಈ ಜಾತಿಯಿಂದ ಇವರು ಅಭಿವೃದ್ಧಿಪಡಿಸಿದ ನೂರಾರು ಕುಟುಂಬಗಳು ಜಿಲ್ಲೆಯಲ್ಲಿ ವ್ಯಾಪಿಸಿವೆ. ಮಾತ್ರವಲ್ಲ, ಥಾಯ್‌ಸ್ಯಾಕ್‌ಬ್ರೂಡ್ ವೈರಸ್ ಕಾಯಿಲೆಗೆ ಬೆಚ್ಚದೆ ಒಳ್ಳೆ ರೀತಿಯಲ್ಲಿ ಜೇನು ಉತ್ಪಾದಿಸುತ್ತಿವೆ. ಗುಣ ಮನದಟ್ಟಾದ ಮೇಲೆ ಅವರು ಬಯಲುಸೀಮೆಯ ಬೇರೆಬೇರೆಡೆಯಿಂದ ಆಗಾಗ ‘ಕೆಂಪು ಜಾತಿಯ’ ಕುಟುಂಬಗಳನ್ನು ತಂದು ಅಭಿವೃದ್ಧಿಪಡಿಸುತ್ತಲೇ ಇದ್ದಾರೆ.

ಏನು ವಿಶೇಷ?

ಇದೂ ಕೂಡಾ ತುಡುವೆ ಜೇನೇ. ಆದರೆ ಇವು ಬಾಳಿ ಬೆಳೆದದ್ದು ನಮ್ಮ ಕಡಿಮೆ ಮಳೆಯ ಬಯಲುಸೀಮೆಯಲ್ಲಿ. ಧರ್ಮೇಂದ್ರ ಹೇಳುತ್ತಾರೆ, “ಹುಳುಗಳ ಬಣ್ಣ ಕೆಂಪು. ಕಪ್ಪು ಮಿಶ್ರಿತ ಕೆಂಪು ವರ್ಣದವೂ ಇವೆ.  ಕೆಲಸ ಮತ್ತು ಗಾತ್ರ ಒಂದೇ ರೀತಿ. ಕಚ್ಚುವುದು ಕಡಿಮೆ. ಪಕ್ಕದ ಗೂಡಿಗೆ ಆಕ್ರಮಣವಿಲ್ಲ. ಪರಾಗ ಸಂಗ್ರಹ ಸಾಮರ್ಥ್ಯ ಜಾಸ್ತಿ. ಪ್ರತಿ ಹೂವಿಗೆ ಹಾರುತ್ತವೆ. ಪರಾಗ ಹೊತ್ತುಕೊಂಡು ಬರುವ ಅವುಗಳ ಚಂದ ನೋಡಬೇಕು, ದೊಡ್ಡ ಬೈಹುಲ್ಲು ಲಾರಿಯ ಹಾಗೆ! ನಾನು ಗಮನಿಸಿದಂತೆ ಇವುಗಳಿಗೆ ರೋಗವೇ ಇಲ್ಲವೆಂದಲ್ಲ. ಕಪ್ಪು ತುಡುವೆಗೆ ಹೋಲಿಸಿದರೆ ಶೇ.೮೦ ಕಡಿಮೆ. ಓಡಿ ಹೋಗುವ ಗುಣವಿಲ್ಲ.

ಜೇನು ಉತ್ಪಾದನೆ ಸ್ಥಳೀಯ ಕಪ್ಪು ತುಡುವೆಗಿಂತ ಶೇ.೪೦ ಹೆಚ್ಚು. ಒಂದು ಪೆಟ್ಟಿಗೆ ನಲುವತ್ತು ಕಿಲೋದ ವರೆಗೂ ಕೊಟ್ಟದ್ದೂ ಇದೆ! ಸರಾಸರಿ ೧೫ ರಿಂದ ೧೭ ಕಿಲೋ. ಊರ ತುಡುವೆ ೧೦-೧೨ ಕಿಲೋ. ನೀಡಬಹುದು. ಆಕ್ರಮಣ ಪ್ರವೃತ್ತಿ ಇಲ್ಲದಿರುವುದರಿಂದ ಜೇನು ತೆಗೆಯಲೂ ಸುಲಭ. ಸ್ಥಳೀಯ ತುಡುವೆಯದಾದರೆ ದಿವಸಕ್ಕೆ ಹತ್ತು ಪೆಟ್ಟಿಗೆಯಿಂದ ಮಾತ್ರ ಜೇನು ತೆಗೆಯಲು ಆಗುತ್ತದೆ. ಇದರದು ಮೂವತ್ತು ಪೆಟ್ಟಿಗೆ ಜೇನು ತೆಗೆಯಬಹುದು.”

ವರುಷಕ್ಕೆ ಹದಿನೈದರಿಂದ ಇಪ್ಪತ್ತು ಕ್ವಿಂಟಾಲ್ ಜೇನುತುಪ್ಪ ಉತ್ಪಾದನೆ. ‘ಮಶಿಗದ್ದೆ ಜೇನು’ ಎಂದೇ ಖ್ಯಾತಿ. ‘ಕಲಬೆರಕೆ ಇಲ್ಲ. ಯಂತ್ರದಲ್ಲಿ ಜೇನು ತೆಗೆಯುವುದರಿಂದ ಕಶ್ಮಲ ಇಲ್ಲ. ಹಾಗಾಗಿ ಕಿಲೋಗೆ ೧೩೦ ರೂಪಾಯಿ ಆದರೂ ಜನ ಒಯ್ಯುತ್ತಾರೆ’ ಎನ್ನುತ್ತಾರೆ ಅವರ ನಿಕಟವರ್ತಿಗಳು. ಏಕಗಂಟಿನಲ್ಲಿ ಇನ್ನೂರು ಕಿಲೋದ ವರೆಗೂ ಒಯ್ಯುವ ದೊಡ್ಡ ಗಿರಾಕಿ ಇದ್ದಾರೆ! ಈ ವರುಷ ಯಥೇಷ್ಟ ಹೂಗಳಾಗಿರುವುದರಿಂದ ಶೇ.೨೦ ಉತ್ಪಾದನೆ ಜಾಸ್ತಿಯಾಗುವ ಹಾರೈಕೆ.

ಕಳೆದ ಏಳೆಂಟು ವರುಷಗಳಲ್ಲಿ ಬಿಜಾಪುರ, ಬೆಂಗಳೂರು, ಮಹಾರಾಷ್ಟ್ರ ಮೊದಲಾದೆಡೆಗಳಿಗೆ ಇವರಿಂದ ಏನಿಲ್ಲವೆಂದರೂ ಒಂದು ಸಾವಿರಕ್ಕೂ ಮಿಕ್ಕಿ ಜೇನುಕುಟುಂಬಗಳನ್ನು ಒಯ್ದಿರಬಹುದು. ‘ಐನೂರು ಖಂಡಿತ ಮೀರಬಹುದು, ಸಾವಿರ ಆಗುತ್ತೋ ಇಲ್ವೋ’ ಎನ್ನುತ್ತಾರೆ ಹೆಗಡೆ. ಇರಲಿ, ಇಷ್ಟು ದೂರದ ಜನರಿಗೆ ಈ ಮಾಹಿತಿ ಹೇಗೆ  ಸಿಕ್ಕಿತು?

“ಇಲ್ಲಿಗೆ ಕೆಂಪುಹುಳ ಬರಲು ಕಾರಣರಾದ ಡಾ.ಪ್ರಭು ತಮ್ಮ ಸಂಶೋಧನಾ ಕೇಂದ್ರಕ್ಕೆ ಬರುವ ಜೇನುಕೃಷಿಕರಿಗೆ ತಿಳಿಸುತ್ತಾರೆ. ಅವರ ಸೂಚನೆಯಂತೆ ಇಲ್ಲಿಗೆ ಬಂದು ಜನ ಪೆಟ್ಟಿಗೆಯೊಳಗೆಕೂಡಿ ಕೊಡುವ ಸಂಸಾರಗಳನ್ನು ಒಯ್ಯುತ್ತಾರೆ. ಶಿರಸಿಯ ‘ಪ್ರಕೃತಿ’ ಸಂಸ್ಥೆ ಜೇನಿನ ಕುರಿತು ವಿಶೇಷ ಆಸಕ್ತಿ ಹೊಂದಿದೆ. ಅವರೂ ಸಾಕಷ್ಟು ಮಂದಿಗೆ ಈ ವಿಚಾರ ತಿಳಿಸಿ, ಮಶಿಗದ್ದೆ ಜೇನುಕುಟುಂಬ ಹೆಚ್ಚು ಊರುಗಳಿಗೆ ಹೋಗುವಲ್ಲಿ ಸಹಕರಿಸಿದ್ದಾರೆ” ಎನ್ನುತ್ತಾರೆ.

ವರ್ಷವೊಂದಕ್ಕೆ ಸುಮಾರು ನೂರು ಕುಟುಂಬಗಳ ಆಭಿವೃದ್ಧಿ. ‘ಹೆಚ್ಚು ಜೇನು ಉತ್ಪಾದನೆ ಮತ್ತು ಕಚ್ಚುವ ಅಭ್ಯಾಸ ಕಡಿಮೆ ಎಂಬ ಕಾರಣಕ್ಕಾಗಿ ಹುಡುಕಿ ಬರುತ್ತಾರೆ. ಇವು ಸಾತ್ವಿಕ ಕೆಂಪು ಹುಳಗಳು. ಒಮ್ಮೆ ಇದಕ್ಕೆ ಯಜಮಾನನ ಪರಿಚಯವಾದರೆ ಸಾಕು, ಅವು ಕಡಿಯುವುದಿಲ್ಲ. ಕಪ್ಪು ಹುಳುಗಳಾದರೆ ಪರಸ್ಪರ ಹೊಯ್ದಾಡಿಕೊಂಡು ಪಾಲಾಗಿ ಹೋಗುವುದೇ ಹೆಚ್ಚು.” ಒಂದು ಪೆಟ್ಟಿಗೆಯಿಂದ ವರುಷಕ್ಕೆ ೨ – ೩ ಕುಟುಂಬ ವಿಭಾಗ. ಕುಟುಂಬಸಮೇತ ಪೆಟ್ಟಿಗೆಯೊಂದಕ್ಕೆ ಸದ್ಯದ ಬೆಲೆ ೧,೫೦೦ ರೂಪಾಯಿ. ‘ಮರ, ಕೂಲಿ ಹೆಚ್ಚಿರುವುದರಿಂದ ಮುಂದೆ ಹೆಚ್ಚಿಸಬೇಕಾದೀತು.’

ಸಾತ್ವಿಕಹುಳಗಳು

ಕೆಂಪು-ಕಪ್ಪು ಜೇನುಹುಳಗಳ ಸ್ವಭಾವವ್ಯತ್ಯಾಸ ಎಷ್ಟಿದೆಯೆಂದರೆ, ಧರ್ಮೇಂದ್ರ ಚಟಾಕಿ ಹಾರಿಸುತ್ತಾರೆ, “ನಿಮಗೆ ಕಚ್ಚುವ ಹುಳದ ಪೆಟ್ಟಿಗೆ ತೆರೆದು ತೋರಿಸಲೋ ಅಥವಾ ಸಾಧುಗಳದೋ’’ ಅಂತ. ಇವರಿಂದಲೇ ಪೆಟ್ಟಿಗೆ ಒಯ್ದು ಜೇನುಕೃಷಿ ಮಾಡುತ್ತಿರುವ ಹಲವರು ಈ ಜೇನ್ನೊಣಗಳ ಬಗೆಗಿನ ಧರ್ಮೇಂದ್ರರ ಅಭಿಪ್ರಾಯಕ್ಕೆ ದನಿಗೂಡಿಸುತ್ತಾರೆ.

ಮಾವಿನಕೊಪ್ಪದ ಶ್ರೀಪತಿ ಭಟ್ಟರ ಅನುಭವ ಭಿನ್ನವಲ್ಲ. ‘‘ಮೂವತ್ತೈದು ವರುಷದಿಂದ ಜೇನಿನ ಸಹವಾಸ ನಮ್ಮದು. ಈಗ ೨೫ ಪೆಟ್ಟಿಗೆಗಳಿವೆ. ಮಶಿಗದ್ದೆಯಿಂದ ತಂದವುಗಳೇ. ಕಪ್ಪು ತುಡುವೆ ಪೆಟ್ಟಿಗೆಯ ಮುಚ್ಚಳ ತೆಗೆದರೆ ಸಾಕು, ಹುಳಗಳು ಗಾಬರಿಯಾಗುತ್ತವೆ. ಇವುಗಳಲ್ಲಿ ಹಾಗಲ್ಲ, ತಮ್ಮ  ಪಾಡಿಗೆ ಇರುತ್ತವೆ. ಕಪ್ಪು ಹುಳಗಳಿಗಿಂತ ಕೆಂಪು ಹುಳಗಳ ಜೇನಿನ ಉತ್ಪಾದನೆ ಡಬಲ್.’’

“ಪೆಟ್ಟಿಗೆಯ ಮುಚ್ಚಳ ತೆಗೆದರೆ ಸಾಕು, ಕಪ್ಪು ತಳಿಯವು ಹೆದರಿ ಹೊರಗೆ ಬಂದು ಕುಳಿತುಕೊಳ್ಳುತ್ತವೆ”, ದಿನೇಶ್ ಹೆಗಡೆ ಶಶಿಮನೆ ಬೊಟ್ಟುಮಾಡುತ್ತಾರೆ, “ಅದೇ ಕೆಂಪು ಜಾತಿಯವು ರೊಟ್ಟು (ಎರಿ) ಬಿಟ್ಟು ಹೋಗೋದಿಲ್ಲ”.

‘ಕೆಂಪು ಜಾತಿ ಜೇನ್ನೊಣ ಈಗ ಇಲ್ಲಿನ ಪರಿಸರಕ್ಕೆ ಪೂರ್ತಿ ಒಗ್ಗಿಕೊಂಡಿದೆ. ಅಲ್ಲದೆ ಇಲ್ಲಿ ಯಥೇಷ್ಟ ಹೂಗಳಿರುವುದರಿಂದ ಅವಕ್ಕಿಲ್ಲಿ ಸುಗ್ರಾಸ!’ ಎನ್ನುವ ಧರ್ಮೇಂದ್ರ. ಮಶಿಗದ್ದೆಯಲ್ಲಿ ಈಗ ೮೦ ಜೇನು ಸಂಸಾರಗಳಿವೆ. ಸ್ಥಳಾಂತರ ಪದ್ಧತಿಯ ಕೃಷಿ. ಮೂರು ಕಿಲೋಮೀಟರ್ ಸುತ್ತಳತೆಯಲ್ಲಿ ಪೆಟ್ಟಿಗೆಗಳನ್ನು ಇಡುತ್ತಾರೆ.

‘ಸುತ್ತಲಿನ ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಇದೇ ಕೆಂಪು ಹುಳ ಮರಗಳಲ್ಲಿ ಗೂಡು ಕಟ್ಟಿರುವುದನ್ನು ಗಮನಿಸಿದ್ದೇನೆ. ಇವು ಪೆಟ್ಟಿಗೆಯಿಂದ ಪಾಲಾದ ಹುಳಗಳು.’ ಎನ್ನುತ್ತಾರೆ ಧರ್ಮೇಂದ್ರ. ಡಾ.ಪ್ರಭು, ‘ಇತ್ತೀಚೆಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಜೇನಿನ ಕುರಿತು ಅಧ್ಯಯನ ಮಾಡಿದಾಗ, ಕೆಂಪು ಹುಳಗಳು ಕಾಡಿನಲ್ಲಿ ಅಭಿವೃದ್ಧಿಯಾಗುತ್ತಿರುವುದನ್ನು ಗಮನಿಸಿದ್ದೇನೆ’ ಎಂದು ಈ ಬೆಳವಣಿಗೆಯನ್ನು ದೃಢೀಕರಿಸುತ್ತಾರೆ.

ಝಂಡಾ ಊರಿದ ಕೆಂಪು ಜಾತಿ

“ಈಗ ಇಲ್ಲಿ ಸುತ್ತುಮುತ್ತಲಲ್ಲಿ ನಿಸರ್ಗದಿಂದ ಹತ್ತು ಕುಟುಂಬಗಳನ್ನು ಹಿಡಿದವರಿಗೆ ಮೂರು-ನಾಲ್ಕು ಕೆಂಪು ಜಾತಿ ಸಿಗುತ್ತಿದೆ. ಈ ಬೆಳವಣಿಗೆ ಕಳೆದ ನಾಲ್ಕು ವರ್ಷದಿಂದ ಜಾಸ್ತಿ. ನನ್ನಲ್ಲಿ ೫೦ ಗೂಡು ಆಗುವ ವರೆಗೆ ಭಾರೀ ಎಚ್ಚರ ವಹಿಸಿ ಅವು ಪಾಲಾಗಿ ಹೊರಹೋಗದಂತೆ ನೋಡಿಕೊಳ್ಳುತ್ತಿದ್ದೆ. ಅನಂತರ ಈ ಎಚ್ಚರ ಕಡಿಮೆಯಾಯಿತು. ಪೆಟ್ಟಿಗೆ ಇಟ್ಟಲ್ಲಿಗೆ ಹೋಗುವುದು ತಡವಾಗಿ ಒಂದಷ್ಟು ಕೆಂಪುಕುಟುಂಬಗಳಿಂದ ಪಾಲಾಗಿ ಹೊರಹೋಗಿರಬೇಕು. ಈಗಂತೂ ಇವು ಸುತ್ತಲಿನ ಪ್ರಕೃತಿಯಲ್ಲಿ ಸೇರಿಕೊಂಡಿವೆ”, ಧರ್ಮೇಂದ್ರ ವಿವರಿಸುತ್ತಾರೆ.

ಶಶಿಮನೆ ದಿನೇಶ ಹೆಗಡೆ ಮಶಿಗದ್ದೆಯಿಂದ ಮೂರು ಕಿಲೋಮೀಟರ್ ದೂರದ ಅವರ ಅಕ್ಕನಮನೆಯ ಬಳಿ ಒಂದು ಕೆಂಪು ಕುಟುಂಬ ಹಿಡಿದಿದ್ದರು. ಈಗ ಅದನ್ನೇ ಅಭಿವೃದ್ಧಿ ಮಾಡಿ ನಾಲ್ಕಾಗಿಸಿದ್ದಾರೆ. “ಈಗ ಕೆಂಪು ತಳಿ ಆರಾಮಾಗಿ ಪ್ರಕೃತಿಯಲ್ಲಿ ಸಿಗ್ತಿದೆ. ಮರಗಳಲ್ಲೇ ಸೇರಿಕೊಂಡಿದೆ. ಕೆಲವರು ಅಲ್ಲಿಂದ ಹಿಡಿದು ಪೆಟ್ಟಿಗೆಯಲ್ಲಿ ಕೂರಿಸುವವರಿಗೆ ಇದು ಕೆಂಪು ತಳಿ ಅಂತ ತಿಳಿದಿರುವುದಿಲ್ಲ”, ಬಾಲಚಂದ್ರ ಹೆಗಡೆ ಜೋಗನಮನೆ ಬೆಳಕು ಚೆಲ್ಲುತ್ತಾರೆ.

ಬಾಲಚಂದ್ರ ಹೆಗಡೆಯವರಲ್ಲಿ ೨೨ ಜೇನುಕುಟುಂಬಗಳಿವೆ. ಕಪ್ಪು ೪; ಉಳಿದದ್ದು ಕೆಂಪು. ಕಳೆದ ಋತುವಿನಲ್ಲಿ ಅಕ್ಕಪಕ್ಕದಲ್ಲೇ ಇಟ್ಟಿದ್ದ ಪೆಟ್ಟಿಗೆಗಳಲ್ಲಿ ಕಪ್ಪಿಗೆ ಕಾಯಿಲೆ ಬಂದರೂ ಕೆಂಪು ಸಂಸಾರಕ್ಕೆ ತೊಂದರೆ ಆಗಲಿಲ್ಲವಂತೆ. “ಇದು ನನಗೆ ಹೆಚ್ಚಿನ ಧೈರ್ಯ ಕೊಟ್ಟಿದೆ” ಎನ್ನುತ್ತಾರೆ. ಇವರ ಅನುಭವದಲ್ಲಿ ಕೆಂಪು ತಳಿಗೆ ಚಿಟ್ಟೆಹುಳದ ಕಾಟಾ ಕಡಿಮೆ. ಇವರ ಅಡಿಕೆ ಮರದಲ್ಲಿ ನಾಲ್ಕು ವರ್ಷದಿಂದ ಸತತವಾಗಿ ವಾಸವಾಗಿರುವ ಕೆಂಪು ಕುಟುಂಬವನ್ನು ಅವರು ಉದಾಹರಣೆಯಾಗಿ ಕೊಡುತ್ತಾರೆ. ‘ಕಪ್ಪಾದರೆ ವರ್ಷಕ್ಕೊಮ್ಮೆ ಖಂಡಿತ ಹಾರಿಹೋಗುತ್ತಿತ್ತು.’

ಆರು ವರ್ಷ ಹಿಂದೆ ತಂದ ತನ್ನ ಒಂದು ಕೆಂಪಿನ ಗೂಡಿನಿಂದಲೇ ಇಷ್ಟರೊಳಗೆ ಐವತ್ತು ಜೇನುಕುಟುಂಬವಾದರೂ ಆಗಿರಬಹುದು ಎನ್ನುತ್ತಾರೆ ಬಾಲಚಂದ್ರ. ಇವರ ಬಳಿಯೇ ಆ ಮೂಲದಿಂದ ಅಭಿವೃದ್ಧಿ ಮಾಡಿದ ೨೦ ಕುಟುಬಗಳು ಈಗ ಇವೆ.

ಪಾಲು ಮಾಡುವುದರಲ್ಲಿ ಪ್ರವೀಣ            

‘ಪ್ರಕೃತಿ’ಯ ಕಾರ್ಯಕ್ರಮ ಸಂಯೋಜಕ ಮಹಾಬಲೇಶ್ವರ ಹೆಗಡೆ ಮಂಜುಳ್ಳಿ ವಿಶ್ಲೇಷಿಸುತ್ತಾರೆ, “ಜೇನುಕೃಷಿಯ ಅಗತ್ಯಗಳ ಬಗ್ಗೆ ಧರ್ಮೇಂದ್ರ್ರ ಎಲ್ಲಿಗೆ ಬೇಕಾದ್ರೂ ಓಡಾಡುತ್ತಾರೆ. ಅಡವಿಗಳಲ್ಲೇ ಕಾಲಕಳೆಯುವುದು, ಬೇಕಿದ್ದರೆ ಅಲ್ಲೇ ಮಲಗುವುದೂ ಅವರಿಗೆ  ರೂಢಿಯಾಗಿದೆ. ಇದಕ್ಕೆ ಬೇಕಾದ ದೈಹಿಕ ಮತ್ತು?? ಮಾನಸಿಕ ಕ್ಷಮತೆ ಅವರಲ್ಲಿದೆ. ಒಮ್ಮೆ ಇವರಿಗೆ ಪಂಜಾಬಿನಲ್ಲಿ ಜೇನು ಹಿಂಡುವಾಗ ಹಾಕುವ ಒಳ್ಳೆ ಮುಖವಾಡ (ಮಾಸ್ಕ್) ಸಿಗುತ್ತದೆ ಎಂದು ತಿಳಿಯಿತು. ಇಲ್ಲೇ ಯಾವುದೋ ಧಾಬಾದಲ್ಲಿದ್ದ ಸರ್ದಾರ್ಜಿಯನ್ನು ಹಿಡಿದರು. ಅವರು ವರ್ಷಕ್ಕೆರಡು ಬಾರಿ ಊರಿಗೆ ಹೋಗುತ್ತಾರೆ. ಅವರ ಕಡೆಯಿಂದ ಇದನ್ನು ತರಿಸಿಕೊಂಡರು. ಈಗಲೂ ಹೊಸ ಜೇನುಕೃಷಿಕರಿಗೆ ಬೇಕಾಗುವ ಇದನ್ನು ಹೇಳಿದವರಿಗೆ ತರಿಸಿಕೊಡುವುದಿದೆ.”

ಮಹಾಬಲೇಶ್ವರ ಈ ವರೆಗೆ ಇವರಿಂದ ೧೨೫ ಕೆಂಪುಜಾತಿಯ ಜೇನುಕುಟುಂಬಗಳನ್ನು ಬೇರೆಬೇರೆಡೆಯ ಕೃಷಿಕರಿಗೆ ಕೊಡಿಸಿದ್ದಾರೆ. ಈ ಪೈಕಿ ಗೋವಾಕ್ಕೆ ೧೦೦ ಪೆಟ್ಟಿಗೆ ಒಯ್ದಿದ್ದು ಅವು ಹೆಚ್ಚಿನವೂ ಚೆನ್ನಾಗಿಯೇ ಕೆಲಸಮಾಡುತ್ತಿವೆಯಂತೆ. “ನಾವು ಆದೇಶ ಕೊಟ್ಟು ಆರು ತಿಂಗಳಲ್ಲಿ ಅವರು ೧೦೦ ಕುಟುಂಬ ಒದಗಿಸಿದ್ದಾರೆ – ಹಂತಹಂತವಾಗಿ. ಅಕ್ಟೋಬರಿನಿಂದ ಆರಂಭಿಸಿ ಮಾರ್ಚ್ ಹೊತ್ತಿಗೆ ಕೊಟ್ಟು ಮುಗಿಸಿದ್ದಾರೆ. ಅವರಲ್ಲಿ ಕುಟುಂಬ ವಿಭಾಗ ಮಾಡುವ ವಿಶೇಷ ಕೌಶಲ ಇದೆ. ಹಾಗೆಂದು ಈ ಕೆಲಸವನ್ನು ಆಯ್ದ, ಒಳ್ಳೆ ಜೇನುತ್ಪಾದನೆ ಮಾಡುವ ಕುಟುಂಬಗಳಲ್ಲೇ ಮಾಡುತ್ತಾರೆ. ಕೊಡುವ ಕುಟುಂಬಗಳಲ್ಲಿ ಕನಿಷ್ಠ ಐದು ಫರೇಮಿನಷ್ಟು ಹುಳ ಇರುತ್ತದೆ.”

ಕರಾವಳಿಗೂ ಸೈ

ಗೋವಾ ಕರಾವಳಿಯ ಪ್ರದೇಶ. ಇಲ್ಲಿ ಉಷ್ಣತೆ ಶಿರಸಿ eಜಿಲ್ಲೆಗಿಂತ ಜಾಸ್ತಿ. ಎರಡು ವರ್ಷ ಹಿಂದೆ ೧೦ ಪೆಟ್ಟಿಗೆ ಕೆಂಪು ಜಾತಿ ಜೇನುಕುಟುಂಬ ತರಿಸಿಕೊಂಡ ಕೃಷಿಕ ಅಭಿಜಿತ್ ಸಾವೈಕರ್ ಈ ಬಗ್ಗೆ ಒಳ್ಳೆ ಅಭಿಪ್ರಾಯವಿದೆ. ಅವರು ಮನೆಯ ಬಳಿ ೫, ೭೦ ಕಿ.ಮೀ ದೂರದ ಇನ್ನೊಂದು ಜಮೀನಿನ ಬಳಿ ೫ ಪೆಟ್ಟಿಗೆ ಇರಿಸಿದ್ದಾರೆ. ಮಳೆಗಾಲದಲ್ಲಿ ಆಹಾರ, ಚಿಟ್ಟೆಹುಳಗಳ ಬಗ್ಗೆ ನಿಗಾ ಹೀಗೆ ಒಳ್ಳೆ ಎಚ್ಚರ ವಹಿಸುತ್ತಾರೆ. ಸರಾಸರಿ ಕುಟುಂಬವೊಂದರಿಂದ ೮ ಕಿಲೋ ಜೇನು ಸಿಗುತ್ತಿದೆ. ರೋಗಬಾಧೆ ಕಾಣಿಸಿಲ್ಲ ಎನ್ನುತ್ತಾರೆ.

ಅಭಿಜಿತ್‌ಗೆ ಜೇನುಕುಟುಂಬ ಒದಗಿಸಿದ್ದೇ ಗೋವಾದ ಅರುಣ್ ಮಡಗಾಂವ್‌ಕರ್. ಇವರು ಒಟ್ಟು ೫೦ ಪೆಟ್ಟಿಗೆ ತರಿಸಿ ಅಭಿಜಿತ್‌ಗೆ ೧೦ ಕೊಟ್ಟಿದ್ದರು. ಇವರಿಗೆ ಕಳೆದ ವರ್ಷ ಅಷ್ಟು ಒಳ್ಳೆ ಪ್ರಮಾಣzಲ್ಲಿ ಜೇನು ಸಿಗಲಿಲ್ಲವಂತೆ. ಆದರೆ ಟೀಎಸ್‌ಬಿಯ ಹಾವಳಿ ಇಲ್ಲ. “ನಾನು ಜೇನಿಗಿಂತಲೂ ಪರಾಗಸ್ಪರ್ಶದ ಉದ್ದೇಶಕ್ಕೆ ಜೇನುಸಾಕಣೆ ಮಾಡುತ್ತಿದ್ದೇನೆ. ತಜ್ಞರು ಗೋಡಂಬಿ ಬೆಳೆಯಲ್ಲಿ ಜೇನ್ನೊಣಗಳಿಂದ  ಪರಾಗಸ್ಪರ್ಶ ಆಗುವುದಿಲ್ಲ ಎನ್ನುತ್ತಾರೆ.ಆದರೆ ಯಾವ ವರ್ಷ ನಾನು ಜೇನುಪೆಟ್ಟಿಗೆ ಇರಿಸಿದ್ದೆನೆ, ಆಗಲೆಲ್ಲಾ ನನಗೆ ಹೆಚ್ಚು ಬೆಳೆ ಸಿಕ್ಕಿದೆ” ಎನ್ನುವುದು ಅರುಣ್ ಅನಿಸಿಕೆ.

ಧರ್ಮೇಂದ್ರ ಈ ವರೆಗೆ ಶಿರಸಿ ತಾಲೂಕು ಮಾತ್ರವಲ್ಲದೆ ಜಿಲ್ಲೆಯ ಸಿದ್ದಾಪುರ, ಯಲ್ಲಾಪುರ, ಕುಮಟಾ, ಅಂಕೋಲಾ, ಮುಂಡಗೋದ, ಜೋಯಿಡಾ ತಾಲೂಕುಗಳಿಗೂ ಕೆಂಪು ಜಾತಿಯ ಜೇನುಕುಟುಂಬ ಒದಗಿಸಿದ್ದಾರೆ. ತನ್ನಿಂದ ಉ.ಕ.ಜಿಲ್ಲೆಯವರು ಒಯ್ದ ೩೫೦ ಜೇನು ಕುಟುಂಬಗಳ ಲೆಕ್ಕ ಅವರಿಗೆ ನೆನಪಿನಲ್ಲೇ ಸಿಗುತ್ತದೆ. “೫೦೦ ಕ್ಕೂ ಹೆಚ್ಚು ಇರಬಹುದು.ಕನಿಷ್ಠ ೫೦ ಮಂದಿ ಕೃಷಿಕರು ಕೆಂಪು ತಳಿಯ ಸಾಕಣೆ ಮಾಡುತ್ತಿದ್ದಾರೆ” ಎಂದು ಅಂದಾಜಿಸುತ್ತಾರೆ. ಇವರ ಅರಿವಿಗೆ ಬಾರದವು ಇನ್ನಷ್ಟು ಇರಬಹುದು.

ಅಭಿನಂದನೀಯ ಸಾಧನೆ

೯೦ರಲ್ಲಿ ದಕ್ಷಿಣ ಕನ್ನಡದ ಕೊಯ್ನಾಡಿನಲ್ಲಿ ರಾಜ್ಯದಲ್ಲೇ ಮೊತ್ತಮೊದಲು ಥಾಯ್ ಕಾಯಿಲೆ ಕಾಣಿಸಿಕೊಂಡಾಗ ಇಲ್ಲೇ ಇದ್ದ ಡೆನ್ಮಾರ್ಕಿನ ಜೇನುಕೃಷಿ ತಜ್ಞ ಯಾನ್ ಓಲ್ಸನ್ “ಹೊರಗಿನಿಂದ ತರುವ ಮೆಲ್ಲಿಫರಾ ಅಥವಾ ಬೇರೆ ತಳಿಯ ಬಗ್ಗೆ ಮೋಹ ಇಟ್ಟುಕೊಳ್ಳುವ ಬದಲು ಇಲ್ಲಿನ ತುಡುವೆ ಜಾತಿಯಲ್ಲೇ ನಿರೋಧಕ ತಳಿಯ ಗುರುತಿಸಿ ಅಭಿವೃದ್ಧಿಪಡಿಸುವ ಕೆಲಸಕ್ಕೆ ಒತ್ತು ಕೊಡಬೇಕು”ಎಂದಿದ್ದರು. ಒಂದೂವರೆ ದಶಕದ ನಂತರವಾದರೂ ಈ ನಿಟ್ಟಿನಲ್ಲೊಂದು ಫಲಿತಾಂಶ, ಅದೂ ಒಬ್ಬ ರೈತವಿಜ್ಞಾನಿಯಿಂದಲೇ ಹೊರಹೊಮ್ಮಿರುವುದು ಗಮನಾರ್ಹ, ಅಭಿನಂದನೀಯ.

ಡಾ. ಎಸ್.ಟಿ. ಪ್ರಭು ಇವರ ಅರ್ಪಣಾಭಾವವನ್ನು ಗುರುತಿಸಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.“ಧರ್ಮೇಂದ್ರರಿಗೆ  ಜೇನುಸಾಕಣೆ ಒಂದು ವೃತ್ತಿ ಮಾತ್ರವಲ್ಲ. ಅವರು ತನ್ನ ಬದುಕನ್ನೇ ಅದಕ್ಕಾಗಿ ಮೀಸಲಿಟ್ಟಿದ್ದಾರೆ. ಯಾರು ಯಾವ ಹೊತ್ತಿನಲ್ಲಿ ಸಂಶಯ ಕೇಳಿದರೂ ತುಂಬಾ ಸಂತೋಷದಿಂದ ಹೇಳಿಕೊಡುತ್ತಾರೆ. ಜೇನುಪೆಟ್ಟಿಗೆಯ ಒಳಗಿನ ಆಗುಹೋಗುಗಳು ಸ್ಪಷ್ಟವಾಗಿ ಗೊತ್ತಿದ್ದರೆ ಮಾತ್ರ ಈ ವೃತ್ತಿಯಲ್ಲಿ ಯಶ ಪಡೆಯಬಹುದು. ಒಂದು ಕುಟುಂಬಕ್ಕಿಂತ ಇನ್ನೊಂದಕ್ಕೆ ಸ್ವಭಾವದಲ್ಲಿ ವ್ಯತ್ಯಾಸವಿರುತ್ತದೆ. ಹೆಗಡೆ ಅದನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಿಪುಣರಿದ್ದಾರೆ. ಚೆನ್ನಾಗಿ ಕೆಲಸ ಮಾಡದ ಸಂಸಾರವನ್ನು ಅಭಿವೃದ್ದಿಗೆ ಆಯುವುದಿಲ್ಲ. ಪ್ರತಿಯೊಂದು ಸೂಕ್ಷ ವಿಚಾರದ ಬಗ್ಗೂ ತರ್ಕ ಮಾಡಿ ತಿಳಕೊಳ್ಳುತ್ತಾರೆ. ಹಾಗೆಯೇ ಒಪ್ಪಿಕೊಳ್ಳುವುದಿಲ್ಲ. ಗೊತ್ತಿಲ್ಲದ್ದನ್ನು ಕೇಳಿ ತಿಳಕೊಳ್ಳುತ್ತಾರೆ. ತಳಿಯ ಆಯ್ಕೆಯ ಪ್ರಕ್ರಿಯೆಯನ್ನು ವಿಜ್ಞಾನಿಗಳ ಥರಾನೇ??ಮಾಡುತ್ತಾ ಬಂದಿದ್ದಾರೆ” ಎಂದು ಶ್ಲಾಘಿಸುತ್ತಾರೆ.

“ಒಂದು ಹೊಸ ಬೆಳವಣಿಗೆ ತಿಳಿಸಿದರೆ ಓಡಿ ಬಂದು ಅದರ ಫೋಟೋ, ವಿಡಿಯೋ ತೆಗೆಯುತ್ತಾರೆ. ನೀವು ನಿಮ್ಮ ಅನುಭವವನ್ನು ದಾಖಲಾತಿ ಮಾಡುತ್ತಾ ಇರಬೇಕು. ನಿಮಗದು ನೆನಪಿದೆ??ಆದರೆ ಉಳಿದವರಿಗೆ ತುಂಬಾ ಪ್ರಯೋಜನ ಆಗಬಹುದು ಎನ್ನುತ್ತಲೇ ಇರುತ್ತಾರೆ.”ಇದು ಧರ್ಮೇಂದ್ರ ಹೆಗಡೆ ಪ್ರಭು ಅವರ ಬಗ್ಗೆ ಹೇಳುವ ಮಾತು.

ಒಟ್ಟಿನಲ್ಲಿ ವಿಜ್ಞಾನಿ ಮುತ್ತು ರೈತರು ಪರಸ್ಪರರಿಗೆ ಗೌರವ ಕೊಟ್ಟು ಒಂದೇ ಲಕ್ಷ್ಯವಿಟ್ಟು ಕೆಲಸ ಮಾಡಿದರೆ ರೈತಪರ ಫಲಿತಾಂಶ ಸಿಗಬಹುದೆನ್ನುವುದು ಇವರಿಬ್ಬರ ಸಹಯೋಗದ ಈ ತಳಿ ಅಭಿವೃದ್ಧಿಯ ಸದ್ದಿಲ್ಲದ ಕೆಲಸ ಮತ್ತೊಮ್ಮೆ ತೋರಿಸಿದೆ.

ಮಲೆನಾಡು ಮತ್ತು ಕರಾವಳಿಯ ಜೇನು ಕೃಷಿಯ ಆಸಕ್ತರು ಈ ಕೆಂಪು ತಳಿಯನ್ನು ಪ್ರಾಯೋಗಿಕವಾಗಿ ಸಾಕಿ ನೋಡಬಹುದು. ಯಾರಿಗೆ ಗೊತ್ತು, ಒಳ್ಳೆಯ ನಿರ್ವಹಣೆ ಇದ್ದರೆ ಈ ಕೆಂಪು ತಳಿ ಬೇರೆ ಊರುಗಳಲ್ಲೂ ಜೇನುಸಾಕಣೆಯ ಹೊಸ ಅಧ್ಯಾಯ ಬರೆಯಲೂಬಹುದು.

ಧರ್ಮೇಂದ್ರ ಹೆಗಡೆ, ಮಶಿಗದ್ದೆ, ಅಂಚೆ ಕಾನಗೋಡು, ಶಿರಸಿ ತಾಲೂಕು ೦೮೩೮೪-೨೭೨ ೫೭೨  ಮೊ: ೯೪೪೯೯ ೭೮೭೨೨