ದಂಟು ಅತ್ಯಂತ ಸುಲಭದ ಬೆಳೆ. ಸೊಪ್ಪು ತರಕಾರಿಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಇದರ ಬೇಸಾಯ ಮತ್ತು ಬಳಕೆಗಳು ಭಾರತ, ಶ್ರೀಲಂಕಾ, ಬರ್ಮಾ ದೇಶಗಳಲ್ಲಿ ಪ್ರಮುಖವಾಗಿದೆ. ಬಹು ಬೇಗ ಕೊಯ್ಲಿಗೆ ಬರುತ್ತದೆ. ದಂಟು ಎಳೆಯವಿದ್ದಾಗ ಅದರ ಮೃದುವಾದ ಕಾಂಡ, ಎಲೆ ಅಥವಾ ಸೊಪ್ಪು ಹಾಗೂ ಬೇರುಗಳು ತರಕಾರಿಯಾಗಿ ಉಪಯುಕ್ತವಿರುತ್ತವೆ. ಇದರಲ್ಲಿ ಹಲವಾರು ಬಗೆಗಳು. ಹಸುರು, ಕೆಂಪು, ಎತ್ತರಕ್ಕೆ ಬೆಳೆಯುವಂತಾದ್ದು, ಗಿಡ್ಡನಾಗಿರುವಂತಾದ್ದು, ದಪ್ಪ ದಂಟು, ಸಣಕಲು. ಇದು ಒಂದನ್ನೇ ಬಿತ್ತಿ ಬೆಳೆದರೆ ವರ್ಷದಲ್ಲಿ ಹಲವಾರು ಬೆಳೆಗಳು ಸಾಧ್ಯ. ಆಲೂಗೆಡ್ಡೆ, ಬೀಟ್‌ರೂಟ್, ನವಿಲುಕೋಸು ಮುಂತಾದುವುಗಳಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುವುದುಂಟು.

ಪೌಷ್ಟಿಕ ಗುಣಗಳು: ದಂಟು ಉತ್ತಮ ಪೌಷ್ಟಿಕ ಸೊಪ್ಪು ತರಕಾರಿ. ಇದರಲ್ಲಿ ಅಧಿಕ ಪ್ರಮಾಣದ ಶರ್ಕರಪಿಷ್ಟ, ಪ್ರೋಟೀನ್, ಖನಿಜ ಪದಾರ್ಥ ಮತ್ತು ಜೀವಸತ್ವಗಳಿರುತ್ತವೆ. ಅತ್ಯಧಿಕ ಪ್ರಮಾಣದ ’ಎ’ ಜೀವಸತ್ವ ಇದರಿಂದ ಲಭ್ಯ.

೧೦೦ ಗ್ರಾಂ ದಂಟುಸೊಪ್ಪಿನಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ ೮೫.೭ ಗ್ರಾಂ
ಶರ್ಕರಪಿಷ್ಟ ೬.೩ ಗ್ರಾಂ
ಪ್ರೊಟೀನ್ ೪.೦ ಗ್ರಾಂ
ಕೊಬ್ಬು ೦.೫ ಗ್ರಾಂ
ಒಟ್ಟು ಖನಿಜ ಪದಾರ್ಥ ೨.೭ ಗ್ರಾಂ
ರಂಜಕ ೮೩ ಮಿ.ಗ್ರಾಂ
ಕ್ಯಾಲ್ಸಿಯಂ ೩೯೭ ಮಿ.ಗ್ರಾಂ
ಕಬ್ಬಿಣ ೨೫.೫ ಮಿ.ಗ್ರಾಂ
’ಎ’ ಜೀವಸತ್ವ ೨೩೦೦೦-೫೪೧೧೦ ಐಯು
ರೈಬೋಪ್ಲೇವಿನ್ ೦.೧೦ ಮಿ.ಗ್ರಾಂ
ಥಯಮಿನ್ ೦.೦೫ ಮಿ.ಗ್ರಾಂ
’ಸಿ’ ಜೀವಸತ್ವ ೯೯ ಮಿ.ಗ್ರಾಂ
ಕ್ಯಾಲೋರಿಗಳು ೪೭ ಮಿ.ಗ್ರಾಂ
ಪೊಟ್ಯಾಷಿಯಂ ೩೪೧ ಮಿ.ಗ್ರಾಂ

ಔಷಧೀಯ ಗುಣಗಳು : ದಂಟುಸೊಪ್ಪು ಶರ್ಕರಪಿಷ್ಟ, ಪ್ರೊಟೀನ್, ಖನಿಜ ಪದಾರ್ಥ ಮತ್ತು ಜೀವಸತ್ವಗಳ ಒಳ್ಳೆಯ ಮೂಲ. ಅದರಿಂದಾಗಿ ಶರೀರದಲ್ಲಿ ಹೆಚ್ಚಿನ ಪ್ರಮಾಣದ ಶುದ್ಧ ರಕ್ತ ಉತ್ಪತ್ತಿಯಾಗುವುದಲ್ಲದೆ ರೋಗ ನಿರೋಧಕ ಸಾಮರ್ಥ್ಯ ಸಹ ಹೆಚ್ಚುತ್ತದೆ. ಇದರಲ್ಲಿ ’ಎ’ ಜೀವಸತ್ವ ಹೆಚ್ಚಾಗಿ ಇರುವ ಕಾರಣ ಕಣ್ಣುಗಳ ದೃಷ್ಟಿ ಸುಧಾರಿಸುತ್ತದೆ. ಇದನ್ನು ಪ್ರತಿನಿತ್ಯ ಸೇವಿಸುತ್ತಿದ್ದಲ್ಲಿ ಮಲಬದ್ಧತೆ ದೂರಗೊಳ್ಳುತ್ತದೆ.

ಉಗಮ ಮತ್ತು ಹಂಚಿಕೆ : ಕೆಲವು ಪ್ರಭೇದಗಳ ತವರೂರು ಭಾರತ ಹಾಗೂ ಭಾರತ-ಚೀನಾಗಳ ನಡುವಣ ಪ್ರದೇಶ. ಜಗತ್ತಿನ ಹಲವಾರು ದೇಶಗಳಲ್ಲಿ ಇದರ ಬೇಸಾಯ ಮತ್ತು ಬಳಕೆಗಳು ಇವೆ.

ಸಸ್ಯ ವರ್ಣನೆ : ದಂಟು ಸೊಪ್ಪು ಅಮರಾಂಥೇಸೀ ಕುಟುಂಬಕ್ಕೆ ಸೇರಿದ ಸಸ್ಯಮೂಲಿಕೆ. ಸೊಪ್ಪು ಅಥವಾ ಬೀಜಕ್ಕಾಗಿ ಬೆಳೆದಾಗ ಅದು ವಾರ್ಷಿಕ ಸಸ್ಯ. ಹಿಮಾಲಯ ಪರ್ವತಗಳ ತಪ್ಪಲು ಪ್ರದೇಶದಲ್ಲಿ ಇದರ ಕಾಳನ್ನು ಹುರಿದು ತಿನ್ನುವ ರೂಢಿ ೧೯ನೇ ಶತಮಾನದಿಂದಲೂ ಇವೆ. ಅದೇ ರೀತಿ ನೇಪಾಳ, ಚೀನಾ, ಮಂಚೂರಿಯಾ, ಉಗಾಂಡ ಮುಂತಾದ ದೇಶಗಳಲ್ಲಿ ಸಹ ಇದರ ಬೀಜ ಸ್ವಾದಿಷ್ಟ ತಿನಿಸಾಗಿದೆ.

ದಂಟು ಮೃದು ಕಾಂಡದಿಂದ ಕೂಡಿದ ಮೂಲಿಕೆ. ಕೆಲವೊಂದರಲ್ಲಿ ಕವಲುಗಳಿರುತ್ತವೆ. ಕಾಂಡ ಮತ್ತು ಎಲೆಗಳ ಬಣ್ಣದಲ್ಲಿ ವ್ಯತ್ಯಾಸವಿರುತ್ತದೆ. ಅದೇ ರೀತಿ ಗಾತ್ರದಲ್ಲಿ ಸಹ ವ್ಯತ್ಯಾಸ ಕಂಡುಬರುತ್ತದೆ. ಹಸುರು ಮತ್ತು ಕೆಂಪು ಬಣ್ಣಗಳು ಸಾಮಾನ್ಯ. ದೊಡ್ಡ ದಂಟು ಹಸುರು ಬಣ್ಣದ್ದಿರುತ್ತದೆ. ಎಲೆಗಳು ದೊಡ್ಡವು. ಎತ್ತರಕ್ಕೆ ಬೆಳೆಯುತ್ತದೆ. ಹೂತೆನೆ ಹೊಳಪು ಹಳದಿ ಇದ್ದು, ಕವಲುಗಳಿಂದ ಕೂಡಿರುತ್ತದೆ. ಭಾರಕ್ಕೆ ನೆಲದ ಕಡೆ ಬಾಗಿರುತ್ತದೆ. ಬೀಜ ಕಪ್ಪು ಹೊಳಪು. ಕೆಂಪು ದಂಟಿನಲ್ಲಿ ಹಾಗಲ್ಲ; ಅದರ ಕಾಂಡ ಬಲಹೀನವಾಗಿದ್ದು ಕೆಂಪು ಬಣ್ಣದ್ದಿರುತ್ತವೆ. ಬೀಜದ ದಂಟು ಎತ್ತರವಾಗಿ, ದಢತ್ತಾಗಿ ಬೆಳೆದು ಬಿಳಿಯ ಬಣ್ಣದ ಬೀಜವನ್ನು ಉತ್ಪಾದಿಸುತ್ತದೆ. ತಾಯಿ ಬೇರು ಆಳವಾಗಿ ಇಳಿದಿರುತ್ತದೆ. ತೇವ ಸಾಕಷ್ಟಿಲ್ಲದಿದ್ದರೆ ಗಿಡಗಳು ಬಹುಬೇಗ ಬಾಡುತ್ತವೆ. ಹೂವು ಉದ್ದದ ತೆನೆಗಳಲ್ಲಿ ಮೂಡಿದ್ದು ನೋಡಲು ಚೆನ್ನಾಗಿರುತ್ತವೆ. ಹೂವು ದ್ವಿಲಿಂಗಿಗಳು, ಪರಕೀಯ ಪರಾಗಸ್ಪರ್ಶ. ಬೀಜ ಸಣ್ಣವಿದ್ದು, ಹೊಳಪು ಕಪ್ಪು ಮುಂತಾಗಿ ಇರುತ್ತವೆ. ಇದರಲ್ಲಿ ಪರಾಗ ಧೂಳಿನಂತಿದ್ದು ಗಾಳಿಯ ನೆರವಿನಿಂದ ಪರಾಗಸ್ಪರ್ಶವೇರ್ಪಡುತ್ತದೆ.

ಹವಾಗುಣ : ಇದನ್ನು ಏಷ್ಯಾದ್ಯಂತ ಬೆಳೆಯಬಹುದು. ಇದರ ಬೇಸಾಯಕ್ಕೆ ಬೆಚ್ಚಗಿನ ಹವಾಗುಣ ಬಹುವಾಗಿ ಹಿಡಿಸುತ್ದೆ. ವಾಸ್ತವವಾಗಿ ಇದು ಉಷ್ಣವಲಯದ ಬೆಳೆ. ಮಳೆಗಾಲದ ಬೆಳೆ ಹುಲುಸಾಗಿ, ಸೊಂಪಾಗಿ ಫಲಿಸುತ್ತದೆ. ಶೈತ್ಯಹವೆಯಲ್ಲಿ ಅಷ್ಟೊಂದು ಚೆನ್ನಾಗಿ ಫಲಿಸುವುದಿಲ್ಲ. ನಮ್ಮ ರಾಜ್ಯದಲ್ಲಿ ಮಾ‌ರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ಬಹು ಚೆನ್ನಾಗಿ ಫಲಿಸುತ್ತದೆ.

ಭೂಗುಣಈ ಬೆಳೆಗೆ ಯಾವುದೇ ಮಣ್ಣಿನ ಭೂಮಿಯಾದರೂ ಸರಿಯೇ. ನೀರು ನಿಲ್ಲದೆ ಬಸಿದು ಹೋಗಬೇಕು. ಮಣ್ಣು ಸಾರವತ್ತಾಗಿದ್ದರೆ ಉತ್ತಮ. ಮರಳು ಮಿಶ್ರಿತ ಗೋಡು ಮಣ್ಣಾದಲ್ಲಿ ಅತ್ಯುತ್ತಮ. ಜೌಗಿನಿಂದ ಕೂಡಿದ ಹಾಗೂ ತಗ್ಗು ಪ್ರದೇಶಗಳನ್ನು ಆರಿಸಿಕೊಳ್ಳಬಾರದು. ಮಣ್ಣಿನ ರಸಸಾರ ೫.೫ ರಿಂದ ೭.೫ ಇದ್ದಲ್ಲಿ ಸೂಕ್ತ. ಮಣ್ಣು ಆಳವಾಗಿರಬೇಕಾಗಿಲ್ಲ.

ತಳಿಗಳು : ಈ ಬೆಳೆಯಲ್ಲಿ ತಳಿ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿಲ್ಲ. ಹಲವಾರು ಕಡೆ ತಳಿ ಸಂಗ್ರಹಣೆ ಕಾರ್ಯನಡೆದಿದೆಯಾದರೂ ಹೊಸತಳಿಗಳ ಉತ್ಪತ್ತಿ ಅಷ್ಟಾಗಿ ನಡೆದಿಲ್ಲ. ಉತ್ತಮ ಗುಣಗಳಿಂದ ಕೂಡಿದ ತಳಿ ಹಾಗೂ ಮಿಶ್ರತಳಿಗಳ ಉತ್ಪಾದನೆಗೆ ವಿಫುಲ ಅವಕಾಶವಿದೆ. ಹೊಸದೆಹಲಿಯಲ್ಲಿನ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ’ಬಡೀಚೌಲಾ’ ಮತ್ತು ’ಚೋಟಿ ಚೌಲಾ’ ತಳಿಗಳನ್ನು ಉತ್ಪಾದಿಸಿ ಬೇಸಾಯಕ್ಕೆ ಒದಗಿಸಿದೆ. ಅದೇ ರೀತಿ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯವೂ ಸಹ ಕೆಲವು ತಳಿಗಳನ್ನು ಅಭಿವೃದ್ಧಿ ಪಡಿಸಿದೆ.

. ಬಡೀಚೌಲಾ : ದಂಟು ದಪ್ಪನಾಗಿ, ಎತ್ತರಕ್ಕೆ ಬೆಳೆದಿರುತ್ತದೆ; ಬಲು ಮೃದು. ಎಲೆಗಳು ದೊಡ್ಡವು. ಅವುಗಳಿಗೆ ಉದ್ದನಾದ ತೊಟ್ಟು ಇರುತ್ತದೆ. ಇದು ಬೇಸಿಗೆಗೆ ಬಹುವಾಗಿ ಒಪ್ಪುವ ತಳಿ. ಬೆಳೆಯ ಅವಧಿಯಲ್ಲಿ ಹಲವಾರು ಕೊಯ್ಲುಗಳಿರುತ್ತವೆ.

. ಚೋಟಿ ಚೌಲಾ (ಸಣ್ಣ ದಂಟು): ಗಿಡಗಳು ನೆಟ್ಟಗಿದ್ದು, ಗಿಡ್ಡನಾಗಿರುತ್ತವೆ ದಂಟು ಮತ್ತು ಎಲೆಗಳು ಗಾತ್ರದಲ್ಲಿ ಸಣ್ಣವಿರುತ್ತವೆ. ಎಲೆಗಳ ಬಣ್ಣ ಹಸುರು. ಬಹುಬೇಗ ಹೂತೆನೆಗಳು ಕಾಣಿಸಿಕೊಳ್ಳುವ ಕಾರಣ ಮಳೆಗಾಲಕ್ಕೆ ಇದು ಸೂಕ್ತವಿರುವುದಿಲ್ಲ; ಆದರೆ ಬೇಸಿಗೆಯ ಪ್ರಾರಂಭದಲ್ಲಿ ಬಿತ್ತಬಹುದು. ಇದರಲ್ಲಿಯೂ ಸಹ ಹಲವಾರು ಕೊಯ್ಲುಗಳಿರುತ್ತವೆ.

. ಪೂಸಾಚೌಲಾಯ್ : ದಂಟು ಸಾಧಾರಣ ದಪ್ಪವಿದ್ದು, ಮೃದುವಾಗಿರುತ್ತದೆ. ಎಲೆಗಳು ಗಾತ್ರದಲ್ಲಿ ಸಾಧಾರಣದಿಂದ ದೊಡ್ಡವಿರುತ್ತವೆ.

. ಕೊ: ಇದು ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ ಕೊಡುಗೆಯಾಗಿದೆ; ದಂಟು ಹಸುರುಬಣ್ಣದ್ದಿದ್ದು ಹುಲುಸಾಗಿ ಬೆಳೆಯುತ್ತದೆ. ಬೇಗ ಕೊಯ್ಲಿಗೆ ಬರುವ ಹಾಗೂ ಅಧಿಕ ಇಳುವರಿ ಕೊಡುವ ತಳಿ.

. ಕೊ: ಇದೂ ಸಹ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ ಕೊಡುಗೆಯೇ ಆಗಿದೆ. ಅಲ್ಪಾವಧಿ ತಳಿ; ಹೆಚ್ಚು ಫಸಲು ಸಾಧ್ಯ.

. ಕೊ: ತಮಿಳು ಕೃಷಿ ವಿಶ್ವವಿದ್ಯಾನಿಲಯದ ತಳಿ; ಬೇಗ ಕೊಯ್ಲಿಗೆ ಬರುತ್ತದೆ.

. ಕೆಂಪುದಂಟು : ಅಷ್ಟೊಂದು ಜನಪ್ರಿಯವಾಗಿಲ್ಲ. ಕರ್ನಾಟಕದ ದಕ್ಷಿಣ ಕನ್ನಡ ಮುಂತಾದ ಜಿಲ್ಲೆಗಳಲ್ಲಿ ಸ್ವಲ್ಪಮಟ್ಟಿಗೆ ಬೆಳೆಯುತ್ತಾರೆ. ಇದರಕಡಿಮೆ ಜನಪ್ರಿಯತೆಗೆ ದಂಟು ಮತ್ತು ಸೊಪ್ಪುಗಳು ಕೆಂಪು ಬಣ್ಣವಿರುವುದೇ ಕಾರಣವಿರಬಹುದು. ದಂಟು ಬಲಹೀನ ಆದರೆ ಇಳುವರಿ ಅಧಿಕ. ಇದರಲ್ಲಿ ಲ್ಯಾನ್ಸಿಯೊಲೇಟಸ್, ಲಿವಿಡಸ್, ಪಾಲಿಗ್ಯಾಮಸ್ ಮತ್ತು ಟ್ರಿಸ್ಟಿನ್ ಎಂಬ ಬಗೆಗಳಿವೆ. ಇದರ ಹೂತೆನೆಗಳು  ಸಣ್ಣವಿದ್ದು ಬಹುಬೇಗ ಬೀಜ ಕಚ್ಚುತ್ತವೆ.

ಇವುಗಳೇ ಅಲ್ಲದೆ ಬೆಂಗಳೂರಿನ ಹೆಸರಘಟ್ಟದಲ್ಲಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಸಹ ದೊಡ್ಡ ದಂಟು ಮತ್ತು ಎಲೆಗಳಿಂದ ಕೂಡಿದ ತಳಿಯೊಂದನ್ನು ಅಭಿವೃದ್ಧಿಪಡಿಸಿದೆ.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ಭೂಮಿಯನ್ನು ಒಂದೆರಡು ಸಾರಿ ಉಳುಮೆ ಮಾಡಿ ಸಮಮಾಡಬೇಕು. ಅನಂತರ ಇಡೀ ಬಯಲನ್ನು ಸಮತಾಕುಗಳಾಗಿ ಮಾಡಿ ನೀರು ಹಾಯಿಸಲು ನೀರುಗಾಲುವೆಗಳನ್ನು ಸಿದ್ಧಗೊಳಿಸಬೇಕು. ತಾಕುಗಳು ೩ ಮೀಟರ್ ಉದ್ದ, ೧.೮ ಮೀಟರ್ ಅಗಲ ಇದ್ದು ಸಮತಟ್ಟಾಗಿದ್ದರೆ ಅನುಕೂಲ. ಅನಂತರ ಪೂರ್ಣಪ್ರಮಾಣದ ತಿಪ್ಪೆಗೊಬ್ಬರ, ಅರ್ಧಭಾಗ ಸಾರಜನಕ ಮತ್ತು ಪೂರ್ಣಪ್ರಮಾಣದ ರಂಜಕ ಹಾಗು ಪೊಟ್ಯಾಷ್ ಸತ್ವಗಳನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಬೆರೆಸಬೇಕು. ಕೆಲವರು ಬೀಜವನ್ನು ಸಮನಾಗಿ ಹರಡಿ ಚೆಲ್ಲುವುದುಂಟು. ಅದರ ಬದಲಾಗಿ ೧೫ ಸೆಂ.ಮೀ. ಅಂತರದ ತೆಳ್ಳನೆಯ ಗೀರು ಸಾಲುಗಳನ್ನು ಮಾಡಿ, ಅವುಗಳಲ್ಲಿ ಬೀಜವನ್ನು ಬಿತ್ತುವುದು ಒಳ್ಳೆಯದು. ಬೀಜ ಒಂದೇ ತೆರನಾಗಿ, ಸಮನಾಗಿ ಬೀಳುವಂತೆ ಮಾಡಲು ಅವುಗಳ ಸುಮಾರು ಹತ್ತು ಪಟ್ಟು ನಯವಾದ ಮರಳು ಇಲ್ಲವೇ ಪುಡಿಗೊಬ್ಬರ ಬೆರೆಸಬೇಕು. ಮಣ್ಣು ಹಸಿಯಾಗಿಲ್ಲದಿದ್ದರೆ, ನೀರು ಹನಿಸುವ ಡಬ್ಬಿಯ ನೆರವಿನಿಂದ ನೀರು ಕೊಡಬೇಕು. ಸುಮಾರು ೪-೫ ದಿನಗಳಲ್ಲಿ ಮೊಳೆಯುತ್ತವೆ. ಉತ್ತರ ಭಾರತದಲ್ಲಿ ಫೆಬ್ರುವರಿ-ಮಾರ್ಚ್ ಹಾಗೂ ಜೂನ್-ಜುಲೈ ಸೂಕ್ತವಿದ್ದರೆ ಮೈದಾನ ಪ್ರದೇಶಗಳಲ್ಲಿ ಮಾರ್ಚ್ ಬಿತ್ತನೆಗೆ ಸರಿಯಾದ ಕಾಲ. ಹೆಕ್ಟೇರಿಗೆ ೨.೫ ಕಿ.ಗ್ರಾಂ ಬೀಜ ಬೇಕಾಗುತ್ತವೆ.

ಗೊಬ್ಬರ : ಹೆಕ್ಟೇರಿಗೆ ೧೨.೫ ಟನ್ ತಿಪ್ಪೆಗೊಬ್ಬರ, ೧೦೦ ಕಿ.ಗ್ರಾಂ ಸಾರಜನಕ, ೫೦ ಕಿ.ಗ್ರಾಂ ರಂಜಕ ಮತ್ತು ೫೦ ಕಿ.ಗ್ರಾಂ ಪೊಟ್ಯಾಷ್ ಸತ್ವಗಳನ್ನು ಒದಗಿಸಬೇಕಾಗುತ್ತದೆ.

ನೀರಾವರಿ : ಬೀಜ ಮೊಳೆಯುವ ತನಕ ಪ್ರತಿದಿನ ನೀರು ಕೊಡಬೇಕು. ಅನಂತರ ೩-೪ ದಿನಗಳಿಗೊಮ್ಮೆ ನೀರು ಕೊಡಬೇಕು.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಅಂತರ ಬೇಸಾಯ ಬೇಕಾಗಿಲ್ಲ. ಸಾಲುಗಳ ನಡುವೆ ಒಂದೆರಡು ಸಾರಿ ಕೈಯ್ಯಾಡಿಸಿ ಉಳಿದ ಅರ್ಧಭಾಗ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು. ಸಾಲುಗಳಲ್ಲಿ ಒತ್ತಾಗಿರುವ ಸಸಿಗಳನ್ನು ಕಿತ್ತು ತೆಗೆದು, ತೆಳುಗೊಳಿಸಬೇಕು. ಹೀಗೆ ಮಾಡಿದಲ್ಲಿ ಉಳಿದ ಸಸಿಗಳು ಸೊಂಪಾಗಿ ಬೆಳೆಯುತ್ತವೆ. ಸಸಿಗಳ ನಡುವೆ ೧೫ ಸೆಂ.ಮೀ. ಅಂತರ ಇದ್ದರೆ ಸಾಕು. ಮೇಲುಗೊಬ್ಬರವನ್ನು ಬಿತ್ತನೆಯಾದ ಸುಮಾರು ೨೦ ದಿನಗಳ ನಂತರ ಕೊಡುವುದು ಸೂಕ್ತ. ಕಳೆಗಳನ್ನು ಕಿತ್ತು ತೆಗೆಯಬೇಕು.

ಕೊಯ್ಲು ಮತ್ತು ಇಳುವರಿ : ದಂಟು ಸೊಪ್ಪನ್ನು ಬೇರು ಸಮೇತ ಕಿತ್ತು ಬಳಸುವುದು ಸಾಮಾನ್ಯ. ಪ್ರಾರಂಭದಲ್ಲಿ ಒಮ್ಮೆ ಹೀಗೆ ಮಾಡಿ ಅನಂತರ ಉಳಿದವುಗಳನ್ನು ನೆಲಮಟ್ಟಕ್ಕೆ ಕತ್ತರಿಸಿ ತೆಗೆದರೆ ಕೂಳೆ ಭಾಗಗಳಿಂದ ಪುಟಿಯುವ ಚಿಗುರು ಮೋಸುಗಳು ಮತ್ತೆ ಬೆಳೆದು ಸೊಪ್ಪನ್ನು ಒದಗಿಸಬಲ್ಲವು. ಪ್ರತಿ ಕೊಯ್ಲಿನ ನಂತರ ಹೆಕ್ಟೇರಿನ ೫೦ ಕಿ.ಗ್ರಾಂ ಸಾರಜನಕ ಕೊಟ್ಟು ಸಾಲು ಎಳೆಯಬೇಕು. ಬಿತ್ತನೆಯಾದ ೩೦-೪೦ ದಿನಗಳಲ್ಲಿ ಸೊಪ್ಪು ಕೊಯ್ಲಿಗೆ ಸಿದ್ಧವಿರುತ್ತದೆ. ಆ ಸಮಯಕ್ಕೆ ದಂಟು ಸುಮಾರು ೩೦-೪೫ ಸೆಂ.ಮೀ. ಎತ್ತರಕ್ಕೆ ಬೆಳೆದಿರುತ್ತವೆ. ಹೂತೆನೆಗಳು ಮೂಡುವ ಮೊದಲೇ, ಸೊಪ್ಪನ್ನು ಕೊಯ್ಲು ಮಾಡಿ ಮಾರಾಟ ಮಾಡಬೇಕು. ಒಂದು ವೇಳೆ ಬೇರು ಸಮೇತ ಕಿತ್ತು ತೆಗೆದದ್ದೇ ಆದರೆ ಬೇರುಗಳಿಗೆ ಅಂಟಿಕೊಂಡಿರುವ ಮಣ್ಣನ್ನು ಚೆನ್ನಾಗಿ ತೊಳೆದು, ಕಂತೆಗಳಾಗಿ ಕಟ್ಟಿ ಮಾರುಕಟ್ಟೆಗೆ ಸಾಗಿಸಬೇಕು. ಹೆಕ್ಟೇರಿಗೆ ೨೦ ಟನ್ನುಗಳಷ್ಟು ಇಳುವರಿ ಸಾಧ್ಯ.

ಕೀಟ ಮತ್ತು ರೋಗಗಳು :

. ಸಸ್ಯಹೇನು : ಈ ಕೀಟಗಳು ಗುಂಪು ಗುಂಪಾಗಿ ಎಲೆಗಳ ತಳಭಾಗದಲ್ಲಿ ಇದ್ದು, ಕಚ್ಚಿ ರಸಹೀರುತ್ತವೆ. ಅಂತಹ ಎಲೆಗಳು ಬಾಡಿ ಸೊರಗಿ, ವಿಕಾರಗೊಳ್ಳುತ್ತವೆ.

. ಎಲೆ ತಿನ್ನುವ ಕಂಬಳಿ ಹುಳು : ಇವು ಮೃದು ಶರೀರದ ಸಣ್ಣ ಕಂಬಳಿ ಹುಳುಗಳು. ಎಲೆಗಳಲ್ಲಿನ ಹಸಿರು ಭಾಗವನ್ನೆಲ್ಲಾ ಕೆರೆದು ತಿಂದು ಹಾಕುತ್ತವೆ.

ಈ ಎರಡೂ ಕೀಟಗಳ ಹತೋಟಿಗೆ ೧೦ ಲೀಟರ್ ನೀರಿಗೆ ೨೦ ಮಿ.ಲೀ. ಮ್ಯಾಲಾಥಿಯಾನ್ ಇಲ್ಲವೇ ೪೦ ಗ್ರಾಂ ಕಾರ್ಬರಿಲ್ ಬೆರೆಸಿ ಸಿಂಪಡಿಸಬೇಕು. ಹೆಕ್ಟೇರಿಗೆ ಸುಮಾರು ೨೫೦ ಲೀಟರ್ ದ್ರಾವಣ ಬೇಕಾಗುತ್ದೆ.

. ಬಿಳಿ ತುಕ್ಕು : ಈ ರೋಗ ಶಿಲೀಂಧ್ರದಿಂದ ಉಂಟಾಗುತ್ತದೆ. ಎಲೆಗಳ ತಳಭಾಗದಲ್ಲಿ ಸಣ್ಣ ಸಣ್ಣ ಬಿಳಿಯ ದದ್ದುಗಳಿದ್ದು, ನೋಡಲು ಅಸಹ್ಯವಾಗಿರುತ್ತವೆ. ಅಂತಹ ಸರಕಿಗೆ ಸರಿಯಾದ ಬೆಲೆ ಸಿಗಲಾರದು. ಇದರ ಹತೋಟಿಗೆ ೧೦ ಲೀಟರ್ ನೀರಿಗೆ ೨೦ ಗ್ರಾಂ ಕ್ಯಾಪಫಾಲ್ ಬೆರೆಸಿ ಬೆಳೆಯ ಮೇಲೆ ಸಿಂಪಡಿಸಬೇಕು. ಇತರ ಬೆಳೆಗಳೊಂದಿಗೆ ಪರಿವರ್ತಿಸುವುದು ಒಳ್ಳೆಯ ಪದ್ಧತಿ.

ಬೀಜೋತ್ಪಾದನೆ : ಇದು ಪರಕೀಯ ಸ್ಪರ್ಶದ ಬೆಳೆ. ಯಾವುದೇ ಎರಡು ತಳಿಗಳ ನಡುವೆ ಕಡೇ ಪಕ್ಷ ೪೦೦ ಮೀಟರ್ ಅಂತರ ಇರುವುದು ಅಗತ್ಯ. ಬಿತ್ತನೆ ಮಾಡಿದ ಸುಮಾರು ೧೦-೧೨ ವಾರಗಳಲ್ಲಿ ಬೀಜ ಬಲಿತು ಕೊಯ್ಲಿಗೆ ಸಿದ್ದಗೊಳ್ಳುತ್ತವೆ. ಹೆಕ್ಟೇರಿಗೆ ೨೦೦ ಕಿ.ಗ್ರಾಂ ವರೆಗೆ ಬೀಜ ಸಿಗುತ್ತವೆ.

* * *