ಕಡಲ ಕುರಿತು ನಡೆವ ಗಂಗೆ, ಇಲ್ಲೆ ತಾಯ ದೇಗುಲ
ನಿನ್ನ ಪಾದಸ್ಪರ್ಶದಿಂದ ಪುಲಕಗೊಂಡ ಅಂಗಳ.
ಅಂದಿನಂತೆ ಇಂದು ಕೂಡ ಪೂಜೆಗೊಳ್ವ ಮೂರುತಿ
ನಿನ್ನ ವಿಮಲ ನೆನಹಿಗದೋ ಸದಾ ಮಂಗಳಾರತಿ.

ಮಾಕಾಳಿಯ ಮಲ್ಲಸಾಲೆ, ಇಲ್ಲೆ ನಿನ್ನ ಸಾಧನೆ,
ಅದೋ ಅಲ್ಲೆ ನಿನ್ನ ಕೊಠಡಿ, ಅಲ್ಲಿ ನಿನ್ನ ಬೋಧನೆ.
ಅಮರ ಮಧುರ ಗೀತಗಳಿಗೆ ನಿರ್ವಿಕಲ್ಪ ಮೌನಕೆ
ನಮಿಸುತಿರುವೆ ಅಂದು ಬಂದ ಭಕ್ತ ಜನರ ಪುಣ್ಯಕೆ.

ನಿಂದುದಿಲ್ಲಿ, ಬಂದುದಿಲ್ಲಿ, ನಡೆದುದಿಲ್ಲಿ ಈ ಕಡೆ,
ನುಡಿದುದಿಲ್ಲ್ಲಿ, ಕಂಡುದಿಲ್ಲಿ, ಪಡೆದುದಿಲ್ಲಿ ಬಿಡುಗಡೆ.
ಮುಟ್ಟಿದೆಲ್ಲ ತೀರ್ಥವಾಯ್ತು, ಮೆಟ್ಟಿದಲ್ಲೆ ದೇಗುಲ
ಇಂದು ಬಂದು ಕಂಡ ನಮಗೆ ಪುಲಕ ಬಾಷ್ಪ ವ್ಯಾಕುಲ.

ನೂರು ತಾರೆಯೊಡನೆ ಚಂದ್ರ ಬಿಜಯಗೈದ ನಭದೊಲು
ನಿನ್ನ ಲೀಲೆ ರಮ್ಯವಾಯ್ತು ಅಂದು ಇದೇ ನೆಲದೊಳು.
ಬಂದವರನು ಕರೆದುಕೊಂಡು ಬೆಳ್ಳಿ ಹಡಗು ನಡೆಯಲು
ಮಬ್ಬು ಕವಿದ ಬಂದರಿನೊಳು ಅರಸುತಿಹೆವು ಬೆಳಕನು !