೧೩. ಪಿಲಿಕುಲ ನಿಸರ್ಗಧಾಮ

ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ: ೧೮ ಕಿ.ಮೀ

ಪಿಲಿಕುಲ ಅಂದರೆ ತುಳುವಿನಲ್ಲಿ ಹುಲಿಗಳು ಆಟವಾಡುತ್ತಿದ್ದ ಕೊಳ. ಈ ನಿಸರ್ಗಧಾಮವು ಮೂಡುಶೆಡ್ಡೆ ಗ್ರಾಮದಿಂದ ೩ ಕಿ.ಮೀ ಹಾಗೂ ಮಂಗಳೂರು ನಗರದಿಂದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ, ಮಾನಸ ವಾಟರ್ ಪಾರ್ಕ್‌ ಪ್ರಮುಖ ಆಕರ್ಷಣೆಗಳಾಗಿವೆ. ಪ್ರವಾಸಿಗರಿಗೆ ಬೋಟಿಂಗ್‌ ವ್ಯವಸ್ಥೆ ಕೂಡಾ ಇದೆ. ಗಾಲ್ಫ್‌ ಕ್ರೀಡಾಂಗಣ ಮತ್ತು ಸಾಂಪ್ರದಾಯಿಕ ಹಾಗೂ ಪಾರಂಪರಿಕವಾದ ಪ್ರಾಚ್ಯ ವಸ್ತು ಸಂಗ್ರಹಾಲಯ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ.

ಮಂಗಳೂರಿನಿಂದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ.

 

೧೪. ಬಜ್ಪೆ ವಿಮಾನ ನಿಲ್ದಾಣ

ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ: ೨೦ ಕಿ.ಮೀ

ಬಜ್ಪೆ ಸಮೀಪದಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಗರ ಕೇಂದ್ರದಿಂದ ಈಶಾನ್ಯಕ್ಕೆ ೨೦ ಕಿ.ಮೀ ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನಗಳನ್ನು ನಡೆಸುವ ಕರ್ನಾಟಕದ ಎರಡನೇ ವಿಮಾನ ನಿಲ್ದಾಣವಾಗಿದೆ. ದಿನಕ್ಕೆ ಸರಾಸರಿ ೨೦ಕ್ಕಿಂತಲೂ ಹೆಚ್ಚು ವಿಮಾನಗಳು, ವಾರಕ್ಕೆ ೭೪೯೪ ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ.

ಸ್ವಾಭಾವಿಕವಾಗಿ ರೂಪುಗೊಂಡಿರುವ ವಿಮಾನ ನಿಲ್ದಾಣವು ಕರಾವಳಿ ಪ್ರದೇಶದ ಹೆಮ್ಮೆಯ ಗರಿಯಾಗಿ ಮೂಡಿಬಂದಿದೆ. ಗಲ್ಫ್‌ ರಾಷ್ಟ್ರಗಳಿಗೆ ನೇರ ಸಂಪರ್ಕ ಸಾಧಿಸುವ ಕರ್ನಾಟಕದ ಏಕೈಕ ವಿಮಾನ ನಿಲ್ದಾಣ ಇದಾಗಿದೆ. ಇತ್ತೀಚಿಗೆ ಅತ್ಯಾಧುನಿಕವಾಗಿ ನವನಿರ್ಮಾಣಗೊಂಡಿದ್ದು ಜೆಟ್‌ ವಿಮಾನಗಳನ್ನು ಇಳಿಸುವ ಸಾಮರ್ಥ್ಯವನ್ನು ಪಡೆಯುವ ತಯಾರಿಯಲ್ಲಿದೆ.

 

೧೫. ನವ ಮಂಗಳೂರು ಬಂದರು

ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ: ೯ ಕಿ.ಮೀ

ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ರಲ್ಲಿ ಉದ್ಗಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ.

ಕಚ್ಛಾತೈಲ, ನೈಸರ್ಗಿಕ ಅನಿಲ, ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್‌ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳುವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ. ಮಂಗಳೂರು ರೇವು ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, ನವ ಮಂಗಳೂರು ಬಂದರು ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. ಪೆಟ್ರೋಲಿಯಂ ಆಯಿಲ್‌ ಲುಬರಿಕೆಂಟ್ಸ್‌, ಕಚ್ಚಾ ಉತ್ಪನ್ನಗಳು ಹಾಗೂ ಎಲ್‌.ಪಿ.ಜಿ ಧಾರಕಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು ತಟ ರಕ್ಷಣಾ ಪಡೆಯ ನೆಲೆಯೂ ಆಗಿದೆ. ಈ ಕೃತಕ ಬಂದರು ಸರಕು ನಿರ್ವಹಣೆಯಲ್ಲಿ ಭಾರತದ ೯ನೇ ಅತಿ ದೊಡ್ಡ ರೇವಾಗಿದ್ದು, ಕರ್ನಾಟಕದ ಏಕಮಾತ್ರ ಬೃಹತ್‌ ಬಂದರಾಗಿದೆ.

 

೧೬.  ಒಡಿಯೂರು

ದೂರ : ತಾಲೂಕು ಕೇಂದ್ರ ೩೧ ಕಿ.ಮೀ. ಜಿಲ್ಲಾ ಕೇಂದ್ರ ೫೪ ಕಿ.ಮೀ.
ಮಾರ್ಗ: ಬಿ.ಸಿ. ರೋಡ್ – ವಿಟ್ಲ – ಕನ್ಯಾನ

ಕರ್ನಾಟಕ ಮತ್ತು ಕೇರಳ ಗಡಿ ಭಾಗದಲ್ಲಿರುವ ಬಂಟ್ವಾಳ ತಾಲೂಕಿನ ಅತ್ಯಂತ ಗ್ರಾಮೀಣ ಭಾಗದ ಒಡಿಯೂರು ಎಂಬಲ್ಲಿ ಪ್ರಕೃತಿಮಾತೆಯ ನಯನ ಮನೋಹರ ದೃಶ್ಯ ಸಮೂಹದ ನಡುವೆ ಧಾಮಿಕ ಸಾಮಾಜಿಕ, ನೈತಿಕ, ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಕ್ಷೇತ್ರವೇ ಒಡಿಯೂರು.

ದಕ್ಷಿಣ ಭಾರತದ ಗಾಣಗಪುರ, ದತ್ತಪೀಠ ಎಂದೇ ಖ್ಯಾತವಾಗಿರುವ ಶ್ರೀಕ್ಷೇತ್ರ ಒಡಿಯೂರು. ಧಾಮಿಕ ಸಾಂಸ್ಕೃತಿಕ ಸಾಮಾಜಿಕ ಸೇವಾಕೇಂದ್ರವಾಗಿ ಪ್ರಖ್ಯಾತವಾಗಿದೆ. ಇಲ್ಲಿನ ವೈವಿಧ್ಯಮಯ ಕಲಾತ್ಮಕ ಕೆತ್ತನೆಗಳು, ಆಕರ್ಷಕ ಚಿತ್ರಗಳು ಎಲ್ಲರನ್ನು ಮುದಗೊಳಿಸುತ್ತದೆ. ಇಲ್ಲಿನ ಗುಹೆಯೊಳಗಿನ ಧ್ಯಾನಮಂದಿರವು ಅಧ್ಬುತ ಕಲ್ಪನೆಯಾಗಿದ್ದು ಎಂಥವರನ್ನು ಮಂತ್ರಮುಗ್ದರನ್ನಾಗಿಸುತ್ತದೆ.

ಆಕರ್ಷಕ ಪ್ರಶಾಂತ ಪರಿಸರವು ಇಲ್ಲಿನ ವೈಶಿಷ್ಟ್ಯವಾಗಿದೆ. ಒಡಿಯೂರು ಕ್ಷೇತ್ರದಲ್ಲಿರುವ ಹನುಮಂತನ ಮೂರ್ತಿ ಹಾಗೂ ಇತರ ಮೂರ್ತಿಗಳು ಬಲು ಕಲಾತ್ಮಕವಾಗಿದ್ದು, ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ.

 

೧೭. ಕಾರಿಂಜ

ದೂರ : ತಾಲೂಕು ಕೇಂದ್ರ ೧೫ ಕಿ.ಮೀ., ಜಿಲ್ಲಾ ಕೇಂದ್ರ ೩೮ ಕಿ.ಮೀ.
ಮಾರ್ಗ: ಮಂಗಳೂರು – ಧರ್ಮಸ್ಥಳ

ಅದ್ಭುತ ಪ್ರಕೃತಿ ಸೌಂದರ್ಯಕ್ಕೆ ಮತ್ತೊಂದು ಹೆಸರೇ ಕಾರಿಂಜ. ಸಮುದ್ರಮಟ್ಟಕ್ಕಿಂತ ೧೦೦೦ ಅಡಿ ಎತ್ತರದಲ್ಲಿರುವ ಈ ತಾಣದ ಹಚ್ಚಹಸುರಿನ ಪರಿಸರ, ಬೃಹದಾಕಾರದ ಹೆಬ್ಬಂಡೆಗಳು, ತಿಳಿನೀರ ಕೊಳ ಏರು-ತಗ್ಗುಗಲ ನಡುವಿನ ನಡೆದಾಟ ಇವೆಲ್ಲವೂ ರೋಮಾಂಚನ ಅನುಭವ ನೀಡುತ್ತದೆ. ಧಾರ್ಮಿಕವಾಗಿ ನಾಲ್ಕು ಯುಗಗಳಲ್ಲಿ ವಿವಿಧ ಹೆಸರುಗಳಿಂದ ಅಸ್ತಿತ್ವದಲ್ಲಿದ್ದು ಭೂ ಕೈಲಾಸ ಎಂಬ ಪ್ರತೀತಿಯನ್ನು ಹೊಂದಿದೆ. ಕೊಡ್ಯಮಲೆ ಅರಣ್ಯ ತಪ್ಪಲಿನಲ್ಲಿರುವ ಈ ಪ್ರದೇಶದಲ್ಲಿರುವ ಗದಾತೀರ್ಥ, ಪಾರ್ವತಿ ಕ್ಷೇತ್ರದ ಸನಿಹ ಏಕಶಿಲಾ ಗಣಪತಿ ಕ್ಷೇತ್ರದ ಎದುರಿಗಿರುವ ಉಗ್ರಾಣಿ ಗುಹೆಗಳು, ಉಕ್ಕುಡದ ಬಾಗಿಲು, ಉಂಗುಷ್ಟ ಮತ್ತು ಮೊಣಕಾಲು ತೀರ್ಥ, ಮಹಾಭಾರತದ ಅರ್ಜುನ ಹಂದಿಗೆ ಬಾಣಬಿಟ್ಟು ಹೋದ ಲಂಬರೇಖೆ ನೋಡಲೇಬೇಕಾದ ಪ್ರಾಕೃತಿಕ ವಿಸ್ಮಯಗಳು. ಕಾರಿಂಜ ಬೆಟ್ಟದ ತುತ್ತತುದಿಯಲ್ಲಿರುವ ಪರಮೇಶ್ವರನ ಸನ್ನಿಧಿ, ಸತ್ಯ ಪ್ರಮಾಣದ ಕಲ್ಲು, ಪ್ರತಿಧ್ವನಿ ನೀಡುವ ಕಲ್ಲು, ವಾನರರಿಗೆ ಅನ್ನ ನೀಡುವ ಕ್ರಮಗಳು ಬಹುಶಃ ಬಹು ಅಪರೂಪದ ಸನ್ನಿವೇಶಗಳಾಗಿವೆ.

 

೧೮. ಕುದುರೆಮುಖ ಕಬ್ಬಿಣದ ಅದಿರು ಕಾರ್ಖಾನೆ

ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ: ೮ ಕಿ.ಮೀ

ಕೇಂದ್ರ ಸರಕಾರದ ಸ್ವಾಮ್ಯದಲ್ಲಿ ೧೯೭೬ ರಲ್ಲಿ ಸ್ಥಾಪಿಸಲ್ಪಟ್ಟ ಈ ಕಂಪನಿಯು ಏಷ್ಯಾದ ದೊಡ್ಡ ಕಬ್ಬಿಣದ ಅದಿರು ಸಂಸ್ಕರಣ ಘಟಕವಾಗಿದೆ. ಮಂಗಳೂರು ಕರಾವಳಿಯ ಕೂಳೂರಿನಲ್ಲಿ ಸ್ಥಾಪಿತವಾಗಿರುವ ಈ ಕಂಪನಿಯು ವಾಷಿಕ ೭.೫ ಮಿಲಿಯನ್‌ ಟನ್‌ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿ ಕುದುರೆಮುಖ ಗಣಿಯಿಂದ ಪಡೆದ ಹೆಮಟೈಟ್‌ ಕಬ್ಬಿಣದ ಅದಿರಿನ ಸಾರವರ್ಧನೆ ಮತ್ತು ಸಂಸ್ಕರಣೆ ಪ್ರಕ್ರಿಯೆ ನಡೆಯಸುತ್ತದೆ. ಸಂಸ್ಕರಿಸಿದ ಅದಿರು ಜಪಾನ್‌ನಂತಹ ವಿದೇಶಗಳಿಗೆ ರಫ್ತಾಗುತ್ತದೆ.

ಇತ್ತೀಚಿಗೆ ಈ ಕಂಪನಿಯ ಬೀಡು ಕಬ್ಬಿಣ ತಯಾರಿ ಘಟಕವು ಪಕ್ಕದಲ್ಲೇ ಸ್ಥಾಪನೆಗೊಂಡಿದ್ದು, ಉತ್ತಮ ನಿರ್ವಹಣೆಯನ್ನು ಹೊಂದಿದೆ.

 

೧೯. ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ

ದೂರ: ತಾಲೂಕು ಕೇಂದ್ರದಿಂದ : ೫ ಕಿ.ಮೀ
ಜಿಲ್ಲಾ ಕೇಂದ್ರ : ೩೦ ಕಿ.ಮೀ.
ಮಾರ್ಗ: ಮಂಗಳೂರು – ಬೆಂಗಳೂರು

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಲೂಕು ಕೇಂದ್ರದಿಂದ ೫ ಕಿ.ಮೀ ದೂರದ ಗ್ರಾಮೀಣ ಪ್ರದೇಶವಾದ ಕಲ್ಲಡ್ಕ ಎಂಬಲ್ಲಿ ಪ್ರಶಾಂತ ವಾತಾವರಣದಲ್ಲಿ ರಾಷ್ಟ್ರೀಯ ಚಿಂತನೆಯ ಸಂಸ್ಕಾರ ನೀಡುವ, ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆಯನ್ನು ನೆನಪಿಸುವ ಶಿಕ್ಷಣ ಸಂಸ್ಥೆಯ ಶ್ರೀರಾಮ ವಿದ್ಯಾಕೇಂದ್ರ.

೧೯೮೮ರಲ್ಲಿ ಸ್ಥಾಪನೆಯಾಗಿ ಪ್ರಸ್ತುತ ಶಿಶುಮಂದಿರದಿಂದ ಪ್ರಾರಂಭಿಸಿ ಪದವಿ ಕಾಲೇಜಿನ ತನಕ ವಿದ್ಯಾರ್ಜನೆಗೆ ಅವಕಾಶ ನೈತಿಕ ಶಿಕ್ಷಣ, ಶಾರೀರಿಕ ಶಿಕ್ಷಣ ರಾಷ್ಟ್ರೀಯ ದೃಷ್ಟಿಕೋನ ಒಂದೆಡೆಯಾದರೆ ಇದಕ್ಕೆ ಇನ್ನಷ್ಟು ಬಲಕೊಡುವ ದೃಷ್ಟಿಯಿಂದ ಭೌತಿಕ ವಾತಾವರಣವೂ ಬಹಳ ಪರಿಣಾಮಕಾರಿ ಎಂಬ ಭಾವನೆಯಿಂದ ತರಗತಿಗಳು ಗುರುಕುಲ ಮಾದರಿಯಲ್ಲಿ ಹುಲ್ಲಿನ ಕುಟೀರಗಳು (ತರಗತಿ ಕೊಠಡಿ) ಆನಂದ ನೀಡಲು ಸೂಕ್ತ ಮರಗಿಡಗಳು ಸುತ್ತ ಹಸಿರು ಪರಿಸರ, ತನಗೊಬ್ಬನಿಗೆ ಬದುಕುವ ಹಕ್ಕಲ್ಲ ಪ್ರಾಣಿಪಕ್ಷಿಗಳಿಗೂ ಇದೆ ಎಂಬ ಭಾವನೆಯ ಉದ್ದೀಪನಕ್ಕಾಗಿ ಪ್ರಾಣಿ ಪಕ್ಷಿಗಳ ಒಡನಾಟದೊಡನೆಯೆ ಒಡಾಟ. ಪ್ರತಿ ವರ್ಷ ಇಲ್ಲಿ ಜರಗುವ ಹೊನಲು ಬೆಳಕಿನ ಕ್ರೀಡಾಕೂಟ ಇಡೀ ರಾಜ್ಯದಲ್ಲಿ ವೈಶಿಷ್ಟ ಪೂರ್ಣವಾಗಿದೆ.

 

20. ಹಂಚಿನ ಕಾರ್ಖಾನೆ – ಕಲ್ಲಡ್ಕ

ದೂರ: ತಾಲೂಕು ಕೇಂದ್ರದಿಂದ ೫ ಕಿ.ಮೀ
ಜಿಲ್ಲಾ ಕೇಂದ್ರ ೩೦ ಕಿ.ಮೀ.
ಮಾರ್ಗ: ಮಂಗಳೂರು – ಬೆಂಗಳೂರು

ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಲೂಕು ಕೇಂದ್ರದಿಂದ 5 ಕಿ.ಮಿ. ದೂರದಲ್ಲಿ ಯಂತ್ರ ಜಗತ್ತಿನ ಕಾರ್ಯವೈಖರಿಯನ್ನು ಸವಿಯಲು, ಪ್ರಕೃತಿಯ ಕೊಡುಗೆಯಾದ ಮಣ್ಣಿನಿಂದ ಸೂರು ನಿರ್ಮಾಣಕ್ಕೆ ಅಗತ್ಯವಾದ ಹಂಚು, ಇಟ್ಟಿಗೆ ತಯಾರಿಕ ಕಾರ್ಖಾನೆಯೇ ಶ್ರೀಕೃಷ್ಣ ಹಂಚಿನ ಕಾರ್ಖಾನೆ ಕಲ್ಲಡ್ಕ.

ಮಂಗಳೂರು ಮಾದರಿಯ ಹಂಚು ತಯಾರಿಕೆಯ ಪ್ರತಿಷ್ಠಿತ ಅಪರೂಪದ ಹಂಚಿನ ಕಾರ್ಖಾನೆ ಇದಾಗಿದೆ. ಕಾಂಕ್ರೀಟಿಕರಣದ ಈ ಯುಗದಲ್ಲಿ ವೈವಿಧ್ಯಮಯ ಹಂಚುಗಳನ್ನು ಮತ್ತು ಕಾರ್ಖಾನೆ ಇಟ್ಟಿಗೆಗಳನ್ನು ತಯಾರಿಸುವುದು ಇದರ ವೈಶಿಷ್ಟ. ಮಣ್ಣು ಹದಗೊಳಿಸುವಿಕೆ, ಸೂಕ್ತವಾದ ಆಕಾರ ನೀಡುಕೆ, ಮಣ್ಣು ಕಾಯಿಸುವಿಕೆ ಯಂತ್ರೋಪಕರಣಗಳ ಕಾರ್ಯವೈಖರಿ ನೋಡುಗರಿಗೆ ಬೆರಗು ಹುಟ್ಟಿಸುತ್ತದೆ ಹಾಗೂ ಹೊಸ ಅನುಭವ ನೀಡುತ್ತದೆ.

 

21. ಕಿಂಡಿ ಆಣೆಕಟ್ಟು – ತುಂಬೆ

ದೂರ: ತಾಲೂಕು ಕೇಂದ್ರದಿಂದ ೫ ಕಿ.ಮೀ
ಜಿಲ್ಲಾ ಕೇಂದ್ರ ೧೮ ಕಿ.ಮೀ.
ಮಾರ್ಗ: ಬಿ.ಸಿ. ರೋಡ್ – ಮಂಗಳೂರು

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಲ್ಲಾ ಕೇಂದ್ರದಿಂದ ಸುಮಾರು 20 ಕಿ.ಮೀ. ದೂರವಿರುವ ತುಂಬೆ ಸಮೀಪದ ಬ್ರಹ್ಮರಕೂಟ್ಲು ಎಂಬಲ್ಲಿ ನೇತ್ರಾವತಿಗೆ ಅಡ್ಡವಾಗಿ ಕಟ್ಟಿರುವ ಕಿಂಡಿ ಅಣೆಕಟ್ಟು ಬಂಟ್ವಾಳ ತಾಲೂಕಿನಲ್ಲಿ ನೋಡಲೇಬೇಕಾದ ಸ್ಥಳ. ದ.ಕ. ಜಿಲ್ಲೆಯ ಪ್ರಮುಖ ಕಿಂಡಿ ಅಣೆಕಟ್ಟ ಇದಾಗಿದೆ. ನೇತ್ರಾವತಿ ನದಿ ನೀರು ಅರಬ್ಬಿ ಸಮುದ್ರ ಸೇರಿ ಪೋಲಾಗುವುದನ್ನು ತಪ್ಪಿಸಲು ತುಂಬೆ ಬಳಿ ಈ ಕಿಂಡಿ ಅಣೆಕಟ್ಟು ಕಟ್ಟಲಾಗಿದೆ. ಮಂಗಳೂರು ನಗರಕ್ಕೆ ನಿರಂತರ ನೀರಿನ ಪೂರೈಕೆ ಮಾಡುವಲ್ಲಿ ಈ ಅಣೆಕಟ್ಟು ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೆ ಅಂತರ್ ಜಲ ಅಭಿವೃದ್ಧಿಗೂ ಪೂರಕವಾಗಿದೆ.

ಇದರ ಸುತ್ತಮುತ್ತಲಿನ ಹಚ್ಚಹಸುರಿನ ದೃಶ್ಯ ಸದಾ ನೀರಿನ ಜುಳಜುಳು ನಾದವು ಅತ್ಯಂತ ಮನಮೋಹಕವಾಗಿದೆ. ಅಣೆಕಟ್ಟಿನ ಕಾರ್ಯ ವಿಧಾನವು ಮಕ್ಕಳ ಕಲಿಕೆಗೆ ಪೂರಕವಾಗಿದೆ.

 

22. ಅಜಿಲಮೊಗರು ಜುಮ್ಮಾ ಮಸೀದಿ

ದೂರ: ತಾಲೂಕು ಕೇಂದ್ರದಿಂದ ೧೧೮ ಕಿ.ಮೀ
ಜಿಲ್ಲಾ ಕೇಂದ್ರ ೪೩ ಕಿ.ಮೀ.
ಮಾರ್ಗ: ಬಂಟ್ವಾಳ – ಮಣಿ ಹಳ್ಳ

ದ.ಕ. ಜಿಲ್ಲೆಯ ಮೊತ್ತ ಮೊದಲ ಐತಿಹಾಸಿಕ ಮಸೀದಿಯಾಗಿ ಅಜಿಲಮೊಗರು ಜುಮ್ಮಾ ಮಸೀದಿಯನ್ನು ಮಾನ್ಯ ಮಾಡಲಾಗಿದೆ. ಮುಸ್ಲಿಂ ಮಹಾಸಂತ ಹಝ್ರತ್ ಸೈಯದ್ ಬಾಬಾ ಫಕ್ರುದ್ದೀನ್ ಜಾಲಿಯಾ ಅವರು ಹಿಜರಿ 7ನೇ ಶತಮಾನದಲ್ಲಿ ಇದನ್ನು ಸ್ಥಾಪಿಸಿದ್ದಾಗಿ ತಿಳಿದು ಬರುತ್ತದೆ. ತಾಲೂಕು ಕೇಂದ್ರ ಬಿ.ಸಿ.ರೋಡಿನಿಂದ 18 ಕಿ.ಮೀ. ದೂರ ಬಂಟ್ವಾಳ ಮಣಿಹಳ್ಳ ಮಾರ್ಗವಾಗಿ ಅಜಿಲಮೊಗರು ತಲುಪಬಹುದು. ಕಡೇಶಿವಾಲಯ ಮೂಲಕ ಬರುವವರು ನೇತ್ರಾವತಿ ನದಿದಾಟಿ ಬರಬೇಕಾಗುತ್ತದೆ.

ಅಜಿಲಮೊಗರು ಮಾಲಿದ (ಊರಸ್) ಹೆಚ್ಚಿನ ಜನಾಕರ್ಷಣೆ ಹೊಂದಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಇಲ್ಲಿಗೆ ಜನರು ಬರುತ್ತಾರೆ. ನೇತ್ರಾವತಿ ನದಿಯು ವಿಹಂಗಮ ದೃಶ್ಯ, ದೋಣಿ ಪ್ರಯಾಣ ಅತ್ಯಂತ ರೋಮಾಂಚನಕಾರಿಯಾಗಿದೆ. ಪಕ್ಕದಲ್ಲಿಯೇ ಇತಿಹಾಸ ಪ್ರಸಿದ್ಧ ಕಡೇಶಿವಾಲಯ ದೇವಸ್ಥಾನ ಇದೆ.