33. ಬಿಸಿನೀರಿನ ಚಿಲುಮೆ ಬಂದಾರು

ದೂರ: ಮಂಗಳೂರಿನಿಂದ : ೬೦ ಕಿ.ಮೀ.
ಬೆಳ್ತಂಗಡಿಯಿಂದ : ೨೩ ಕಿ.ಮೀ

ನೇತ್ರಾವತಿ ನದಿ ದಡದಲ್ಲಿ ಬಂದಾರು ಸಮೀಪ ಅಂತರಕಲ್ಲು ಎಂಬಲ್ಲಿ ಈ ಬಿಸಿನೀರಿನ ಚಿಲುಮೆ ಇದೆ.

ಸುಮಾರು 500 ವರ್ಷಗಳಷ್ಟು ಹಿಂದಿನದು ಎಂದು ಅಂದಾಜಿಸಲಾಗಿದೆ. ದಕ್ಷಿಣ ಭಾರತದ ಎರಡನೇ ಬಿಸಿನೀರ ಚಿಲುಮೆ ಇದಾಗಿದೆ. ಈ ಚಿಲುಮೆಯು 10 ರಿಂದ 12 ಅಡಿ ಉದ್ದ, 7 ಅಡಿ ಅಗಲ,  5 ಅಡಿ ಆಳವಿದೆ. ಆಯತಾಕಾರದಲ್ಲಿ ಕಲ್ಲುಗಳನ್ನು ಜೋಡಿಸಿ ಕೆರೆಯ ಸ್ವರೂಪವನ್ನು ನೀಡಲಾಗಿದೆ..

ಸದಾ ಹರಿಯುತ್ತಿರುವ ಇಲ್ಲಿನ ನೀರಿನ ಉಷ್ಣಾಂಶವು  40 ಡಿಗ್ರಿಗಿಂತ ಕಡಿಮೆಯಾಗುವುದಿಲ್ಲ. ನೀರಿನಲ್ಲಿ ಗಂಧಕಾಂಶವಿರುವುದರಿಂದ ಚರ್ಮ ವ್ಯಾಧಿಯವರಿಗೆ ಈ ನೀರಿನ ಸ್ನಾನ ಒಳ್ಳೆಯದೆಂಬ ಭಾವನೆಯಿದೆ.

ಹಲವಾರು ಸಂಶೋದಕರು, ವಿಜ್ಞಾನಿಗಳು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಪ್ರಕೃತಿಯ ವಿಚಿತ್ರಕ್ಕೆ ಬೆರಗಾಗಿದ್ದಾರೆ.

 

34. ಕುಕ್ಕೆ ಸುಬ್ರಹ್ಮಣ್ಯ

ಜಿಲ್ಲಾ ಕೇಂದ್ರದಿಂದ : ೧೦೪ ಕಿ.ಮೀ.
ತಾಲೂಕು ಕೇಂದ್ರದಿಂದ : ೪೦ ಕಿ.ಮೀ

ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ. ಈ ಕ್ಷೇತ್ರದ ಎರಡು ಭಾಗಗಳಲ್ಲಿ ಪಶ್ಚಿಮ ಘಟ್ಟದ ಕುಮಾರ ಪರ್ವತದ ಸಾಲುಗಳಿದ್ದರೆ ಒಂದು ಭಾಗದಲ್ಲಿ ಕುಮಾರಧಾರ ನದಿ ಹರಿಯುತ್ತದೆ. ಪ್ರಕೃತಿ ರಮಣೀಯ ಸೌಂದರ್ಯದ ಮಧ್ಯೆ ಈ ಕ್ಷೇತ್ರ ಇದೆ. ಭಾರತದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದ ಸಾವಿರಾರು ಭಕ್ತಾಧಿಗಳು ಪ್ರತಿನಿತ್ಯ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಪುರಾಣ ಪ್ರಸಿದ್ಧ ಈ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವಲ್ಲದೆ ಹಲವು ಲಿಂಗಗಳಿರುವ ಕುಕ್ಕೆಲಿಂಗ ಕಪಾಲೇಶ್ವರ ಎಂದೆ ಹೆಸರು ಪಡೆದ ಬೈರವ ದೇವಸ್ಥಾನ, ಗರ್ಭಗೃಹದ ಈಶಾನ್ಯಕ್ಕೆ ಉಮಾಮಹೇಶ್ವರ, ಆಗ್ನೇಯಕ್ಕೆ ಪ್ರಸಿದ್ಧವಾದ ವೇದಾವ್ಯಾಸ ಸಂಪುಟ ನರಸಿಂಹ ಮಠ, ಇತಿಹಾಸವನ್ನು ಸಾದರಪಡಿಸುವ ಬಲ್ಲಾಳರಾಯನ ವಿಗ್ರಹ, ಈಶಾನ್ಯ ದಿಕ್ಕಿನಲ್ಲಿ ಶೃಂಗೇರಿ ಮಠ ಶಾಖೆ, ತುಳುನಾಡಿನಲ್ಲಿ ಅಪೂರ್ವವಾಗಿ ಕಂಡುಬರುವ ಹೊಸಳಿಗಮ್ಮ ಮತ್ತು ಪುರುಷರಾಯ ದೈವಸ್ಥಾನವಿದೆ. ದಶಂಬರ ತಿಂಗಳಲ್ಲಿ ನಡೆಯುವ ಇಲ್ಲಿನ ಚಂಪಾ ಷಷ್ಠಿ ಮಹೋತ್ಸವ ಇತಿಹಾಸ ಪ್ರಸಿದ್ಧವಾಗಿದೆ. ನಾಗಾರಾಧನೆಗೆ ಈ ಕ್ಷೇತ್ರದಲ್ಲಿ ವಿಶೇಷ ಮಹತ್ವವಿದೆ.

 

35. ಕೋಟೆ ಚೆನ್ನಯ ಗರಡಿ

ದೂರ: ಮಂಗಳೂರಿನಿಂದ : ೯೦ಕಿ.ಮೀ.
ಬೆಳ್ತಂಗಡಿಯಿಂದ : ೨೫ ಕಿ.ಮೀ

ಕೋಟೆ ಚೆನ್ನಯರು ತುಳು ನಾಡಿನ ಪ್ರಸಿದ್ಧ ಐತಿಹಾಸಿಕ ಹಾಗೂ ಕಾರಣಿಕ ಪುರುಷರು. ಪಡುಮಲೆಯಲ್ಲಿ ಹುಟ್ಟಿ ಸುಳ್ಯ ತಾಲೂಕಿನ ಎಣ್ಮೂರು-ಪಂಜ ಈ ಭಾಗಗಳ ತಮ್ಮ ಪ್ರತಾಪವನ್ನು ಮೆರೆದು ವೀರ ಮರಣವನ್ನು ಅಪ್ಪಿದ ಸಮಾಧಿ ಸ್ಥಳವೇ ಎಣ್ಮೂರು ಈ ವೀರ ಪುರುಷರ ಗರಡಿ. ಸುಮಾರು 16ನೇ ಶತಮಾನದಲ್ಲಿ ಎಣ್ಮೂರು ಬಲ್ಲಾಳನ ಆಶ್ರಯದಲ್ಲಿ ಈ ವೀರ ಪುರುಷರು ಬಾಳಿದರೆಂಬ ಬಗ್ಗೆ ತುಳುನಾಡಿನಲ್ಲಿ ಬಹಳಷ್ಟು ಮೌಖಿಕ ಹಾಗೂ ಐತಿಹ್ಯ ದಾಖಲೆಗಳು ಸಿಗುತ್ತವೆ. ಅನ್ಯಾಯದ ವಿರುದ್ಧ ಮತ್ತು ಸಮಾನತೆಯ ಆಶ್ರಯದಲ್ಲಿ ಹೋರಾಡಿದ ಈ ವೀರ ಪುರುಷರು ಕೊನೆಗೆ ತನ್ನ ಮೂಲ ಆಶ್ರಯದಾತನಾದ ಪಡುಮಲೆ ಬಲ್ಲಾಳನ ಕೈಯಿಂದ ಹತ್ಯೆಗೊಂಡರು. ಈ ಅವಳಿ ವೀರರ ಸಮಾಧಿ ಇಂದು ಐತಿಹಾಸಿಕ ದಾಖಲೆಯಾಗಿ ನಮ್ಮ ಮುಂದಿದೆ. ಈ ಗರಡಿಯನ್ನು ಮೂಲ ಗರಡಿ ಎಂದು ಕರೆಯುತ್ತಾರೆ.

ಈ ಗರಡಿಯ ಪಕ್ಕದಲ್ಲಿ ಕೋಟಿ-ಚೆನ್ನಯರು ಆರಾಧಿಸುತ್ತಿದ್ದ ನಾಗಬ್ರಹ್ಮನ ಗುಡಿ ಇದೆ. ಇದು ಸುಳ್ಯ ತಾಲೂಕಿನ ಎಣ್ಮೂರು ಗ್ರಾಮದ ವ್ಯಾಪ್ತಿಯಲ್ಲಿ ಬರುತ್ತದೆ. ಪುತ್ತೂರು-ಸುಬ್ರಹ್ಮಣ್ಯ ಮಾರ್ಗವಾಗಿ ಅಥವಾ ಸುಳ್ಯ-ಬೆಳ್ಳಾರೆ-ಸುಬ್ರಹ್ಮಣ್ಯ ಮಾರ್ಗವಾಗಿ ಇಲ್ಲಿಗೆ ಸಂಪರ್ಕ ಪಡೆಯಬಹುದು.

 

36. ಚೆನ್ನಕೇಶವ ದೇವಸ್ಥಾನ ಸುಳ್ಯ

ಜಿಲ್ಲಾ ಕೇಂದ್ರದಿಂದ ದೂರ : ೯೬ ಕಿ.ಮೀ.
ತಾಲೂಕು ಕೇಂದ್ರದಿಂದ : ೦.೫ ಕಿ.ಮೀ

ಸುಳ್ಯ ತಾಲೂಕು ಕೇಂದ್ರದಲ್ಲಿರುವ ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀ ಚೆನ್ನಕೇಶವ ದೇವಸ್ಥಾನ. ಜೈನ ಬಲ್ಲಾಳರ ಕಾಲದಲ್ಲಿ ನಿರ್ಮಾಣಗೊಂಡಿತು ಎಂದು ಹೇಳಲಾಗುವ ಈ ದೇವಸ್ಥಾನದ ಇತಿಹಾಸದ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ. ದೇವಸ್ಥಾನಗಳ ಚರಿತ್ರೆಯಲ್ಲಿ ಅಪೂರ್ವವಾಗಿ ಕಂಡುಬರುವ ಪಶ್ಚಿಮಾಭಿಮುಖ ಇಲ್ಲಿಯ ವಿಶೇಷತೆ. ಚೆನ್ನಕೇಶವ ಮೂರ್ತಿ ಪಶ್ಚಿಮಕ್ಕೆ ಮುಖಮಾಡಿ ಪ್ರತಿಷ್ಠಾಪಿಸಲ್ಪಟ್ಟಿದೆ. ಸುಳ್ಯ ಸೀಮೆಯ ಈ ಪ್ರಮುಖ ದೇವಾಲಯವನ್ನು ಇದೀಗ ನವೀಕರಿಸಿ ದಕ್ಷಿಣ ಭಾರತದ ಶೈಲಿಯ ಸುಂದರ ರಾಜ ಗೋಪುರವನ್ನು ಮತ್ತು ವಿಸ್ತಾರವಾದ ಸಭಾಂಗಣವನ್ನು ನಿರ್ಮಿಸಲಾಗಿದೆ. ಸುಳ್ಯ ತಾಲೂಕು ಕೇಂದ್ರದಿಂದ ಕೇವಲ 1/2 ಕಿ.ಮೀ. ದೂರದಲ್ಲಿರುವ ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ಪನ್ನೆ ಬೀಡಿನ ನಾಲ್ಕು ಸ್ಥಾನ ಚಾವಡಿ, ಪನ್ನೆ ಬೀಡಿನ ಭಗವತಿ ಸ್ನಾನ, ವಿಶಿಷ್ಠ ದೈವವಾದ ಕಾಡೆತಿ ದೈವದ ಕಟ್ಟೆ ಇಲ್ಲಿ. ಜನವರಿ ತಿಂಗಳಲ್ಲಿ ನಡೆಯುವ ಜಾತ್ರೋತ್ಸವಕ್ಕೆ ಸೀಮೆಯ ನಾಲ್ಕು ಭಾಗಗಳಿಂದ “ಭಂಡಾರ” ಬಂದು ಸೇರುವುದೇ ಇಲ್ಲಿಯ ವಿಶೇಷತೆ ಕಾಣಬಹುದು.

 

37. ತ್ರಿಶೂಲಿನ ದೇವಸ್ಥಾನ ಬಳ್ಪ

ಜಿಲ್ಲಾ ಕೇಂದ್ರದಿಂದ ದೂರ : ೯೬ ಕಿ.ಮೀ.
ತಾಲೂಕು ಕೇಂದ್ರದಿಂದ : ೪೦ ಕಿ.ಮೀ

ದಕ್ಷಿಣ ಭಾರತದ ಅತೀ ಪುರಾತನ ದೇವಾಲಯಗಳಲ್ಲಿ ಬಳ್ಪದ ತ್ರಿಶೂಲಿನ ದೇವಸ್ಥಾನ ಮುಖ್ಯವಾದುದು. ಈ ದೇವಾಲಯವನ್ನು 7ನೇ ಶತಮಾನಕ್ಕೂ ಪೂರ್ವದಲ್ಲಿ ಸ್ಥಾಪಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಶ್ರೀ ದುರ್ಗಾಪರಮೇಶ್ವರಿ ದೇವಾಲಯವೆಂದಿದ್ದು, ತ್ರಿಶೂಲವು ಸ್ಥಿರವಾಗಿ ಪಾಣಿಪೀಠದಲ್ಲಿರುವುದರಿಂದ ತ್ರಿಶೂಲಿನಿದೇವಿ ಎಂದು ಕರೆಯಲಾಗುತ್ತಿದೆ. ಉತ್ಸವ ಮೂರ್ತಿ ಪಂಚಲೋಹದಾಗಿದ್ದು, ಚರ್ತುರ್ಭುಜೆಯಾಗಿ ಪದ್ಮಪೀಠದ ಮೇಲೆ ನಿಂತ ಭಂಗಿಯಲ್ಲಿದೆ. ಪೂರ್ಣ ಶಿಲಾಮಯವಾಗಿರುವ ಈ ದೇವಾಲಯವು ದ್ರಾವಿಡ ಶೈಲಿಯಲ್ಲಿ ರಚನೆಗೊಂಡಿದೆ. ದೇವಾಲಯದ ಮೇಲ್ಚಾವಣಿ ಹಾಗೂ ಕಲ್ಲಿನ ಕಂಬಗಳಲ್ಲಿ ಕೆತ್ತನೆ ಕಾಣಬಹುದು. ಗರ್ಭಗುಡಿಯ ಮುಂಭಾಗದಲ್ಲಿ ಮೀನಿನ ಲಾಂಛನವೊಂದಿದೆ. ದೇವಾಲಯದ ಮುಂಭಾಗದಲ್ಲಿ ಉತ್ಸವ ಬಲಿ ನಡೆಯುವ ರಾಜಬೀದಿ ಇದೆ. ಈ ಪ್ರದೇಶದಲ್ಲಿ ಅತ್ಯಂತ ವಿಜೃಂಭಣೆಯ ಜಾತ್ರೋತ್ಸವ ನಡೆಯುತ್ತಿತ್ತು ಎಂಬುದನ್ನು ಸಾಕ್ಷಿಕರಿಸುವಂತೆ ಬೀದಿಗುಡ್ಡೆ ಹೆಸರಿನ ಸ್ಥಳವಿದೆ. ಈ ದೇವಸ್ಥಾನವನ್ನು ನೋಡುವ ಮುನ್ನ ಇದೇ ಗ್ರಾಮದಲ್ಲಿ ಬೋಗಾಯನಕೆರೆ ಎಂಬ ವಿಶಾಲ ಕೆರೆಯೊಂದನ್ನು ಕಾಣಬಹುದು. ಇಂದು ನವೀಕೃತಗೊಳ್ಳುತ್ತಿರುವ ದೇವಸ್ಥಾನ ತನ್ನ ಹಳೆಯ ವೈಭವವನ್ನು ಇನ್ನು ಉಳಿಸಿಕೊಂಡಿದೆ.

 

38. ಕುರಂಜಿ ಭಾಗ್

ಜಿಲ್ಲಾ ಕೇಂದ್ರದಿಂದ ದೂರ : ೯೭ ಕಿ.ಮೀ.
ತಾಲೂಕು ಕೇಂದ್ರದಿಂದ : ೧ ಕಿ.ಮೀ

ಹಿಂದುಳಿದಿದ್ದ ತಾಲೂಕನ್ನು ರಾಜ್ಯದಲ್ಲೇ ಗುರುತಿಸುವಂತೆ ಮಾಡಿದ ಅಂಶಗಳಲ್ಲಿ ಸುಳ್ಯದ ಶೈಕ್ಷಣಿಕ ಪ್ರಗತಿಯೂ ಒಂದು. 1976ರಲ್ಲಿ ಡಾ| ಕುರುಂಜಿ ವೆಂಕಟ್ರಮಣ ಗೌಡರಿಂದ ಸ್ಥಾಪನೆಗೊಂಡ ಅಕಾಡೆಮಿ ಆಫ್ ಲಿಬರಲ್ ಏಜ್ಯುಕೇಶನ್ (ರಿ)ನ ಮೂಲಕ ಅನೇಕ ಶಿಕ್ಷಣ ಸಂಸ್ಥೆಗಳು ಸುಳ್ಯದ ಕುರುಂಜಿ ಭಾಗ್ನಲ್ಲಿ ಸ್ಥಾಪನೆಗೊಂಡಿವೆ. ದೇಶ-ವಿದೇಶದ ಸಾವಿರಾರು ವಿದ್ಯಾರ್ಥಿಗಳು ಇಂದು ಈ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಜನೆಗೈಯುತ್ತಿದ್ದಾರೆ. ಸೂಪರ್ ಸ್ಪೆಶಾಲಿಟಿ ಮೆಡಿಕಲ್ ಕಾಲೇಜ್, ಡೆಂಟಲ್ ಕಾಲೇಜ್, ಆಯುರ್ವೇದಿಕ್ ಕಾಲೇಜ್, ನರ್ಸಿಂಗ್ ಕಾಲೇಜ್, ತಾಂತ್ರಿಕ ವಿಭಾಗದಲ್ಲಿ ಇಂಜಿನಿಯರಿಂಗ್ ಕಾಲೇಜ್, ಪಾಲಿಟೆಕ್ನಿಕ್, ಐಟಿಐ ಹಾಗೂ ಸ್ನಾತ್ತಕೋತ್ತರ ಪದವಿಗಳು ಅಲ್ಲದೇ ನೆಹರು ಮೆಮೊರಿಯಲ್ ಪದವಿ ಮತ್ತು ಪದವಿ ಪೂರ್ವ ಕಾಲೇಜ್, ಕಾನೂನು ಕಾಲೇಜ್ ಹೀಗೆ ಬಹುತೇಕ ಎಲ್ಲಾ ಪದವಿಗಳನ್ನು ಕುರುಂಜಿ ಭಾಗ್ನಲ್ಲಿ ಪಡೆಯಬಹುದಾಗಿದೆ. ಉತ್ಕೃಷ್ಟ ಕಟ್ಟಡಗಳು, ಆಧುನಿಕ ಸೌಲಭ್ಯಗಳು, ತಾಂತ್ರಿಕ ವ್ಯವಸ್ಥೆಗಳು, ವಿಶಾಲ ಕ್ರೀಡಾಂಗಣ ಹಾಗೂ ಮನಮೋಹಕ ದೃಶ್ಯಗಳನ್ನು ಕುರುಂಜಿಭಾಗ್ ಹೊಂದಿದೆ.

 

39. ಓಡಬಾಯಿ ತೂಗುಸೇತುವೆ

ಜಿಲ್ಲಾ ಕೇಂದ್ರದಿಂದ ದೂರ : ೯೩ ಕಿ.ಮೀ.
ತಾಲೂಕು ಕೇಂದ್ರದಿಂದ : ೩ ಕಿ.ಮೀ

ಸುಳ್ಯ-ಪುತ್ತೂರು ರಾಜ್ಯ ಹೆದ್ದಾರಿಯ ಬದಿ ಓಡಬಾಯಿ ಎಂಬಲ್ಲಿ, ಪಯಸ್ವಿನಿ ಹೊಳೆಗೆ 2005ರಲ್ಲಿ ನಿರ್ಮಿಸಲಾದ ತೂಗು ಸೇತುವೆ ಇಂದು ಅನೇಕ ಪ್ರವಾಸಿಗರ ಮನ ಸೆಳೆಯುತ್ತಿದೆ. ಸುಳ್ಯದ ರೋಟರಿ ಸಂಸ್ಥೆ ಹಾಗೂ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯು ಸುಮಾರು 23 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ತೂಗುಸೇತುವೆ ಇದಾಗಿದೆ. 160 ಮೀ. ಉದ್ದ, 40 ಅಡಿ ಎತ್ತರವಿರುಗ ಈ ತೂಗು ಸೇತುವೆಯನ್ನು ಆಯಶ್ಯಿಲ್ಪ ಸಂಸ್ಥೆ ನಿರ್ಮಿಸಿದೆ. ಇದು ತಾಲೂಕಿನ ಅತ್ಯಂತ ಎತ್ತರದ ಹಾಗೂ ರಾಜ್ಯದಲ್ಲೇ ಸ್ವಯಂ ಸೇವಾ ಸಂಸ್ಥೆಯೊಂದರ ಮೂಲಕ ನಿರ್ಮಿಸಲಾದ ಪ್ರಥಮ ತೂಗುಸೇತುವೆಯಾಗಿದೆ. ಇದಲ್ಲದೇ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಪರಪ್ಪೆ ಎಂಬಲ್ಲಿ, ಆಲೆಟ್ಟಿ ಗ್ರಾಮದ ಅರಂಬೂರು ಎಂಬಲ್ಲಿ, ಅರಂತೋಡು ಗ್ರಾಮದ ಅಮಚೂರು ಎಂಬಲ್ಲಿ ಪಯಶ್ವಿನಿ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಕಾಸರಗೋಡು-ಸುಳ್ಯ ಹೆದ್ದಾರಿಯ ಮಧ್ಯೆ ಪರಪ್ಪೆ ತೂಗುಸೇತುವೆ ಕಾಣ ಸಿಕ್ಕರೆ ಉಳಿದೆಲ್ಲವು ಮಂಗಳೂರು-ಮಡಿಕೇರಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಕಾಣಬಹುದು.

 

40. ತೊಡಿಕಾನ ದೇವರ ಜಲಪಾತ

ಜಿಲ್ಲಾ ಕೇಂದ್ರದಿಂದ ದೂರ : ೧೧೩ ಕಿ.ಮೀ.
ತಾಲೂಕು ಕೇಂದ್ರದಿಂದ : ೨೦ ಕಿ.ಮೀ

ಸುಳ್ಯ ಮಡಿಕೇರಿ ರಸ್ತೆಯಲ್ಲಿ ಸಿಗುವ ಅರಂತೋಡು ಗ್ರಾಮದಿಂದ ತೊಡಿಕಾನ ರಸ್ತೆಯಲ್ಲಿ 8 ಕಿ.ಮೀ ಮುಂದಕ್ಕೆ ಹೋದಾಗ ಪುರಾಣ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸಿಗುತ್ತದೆ. ತೊಡಿಕಾನ ದೇವಾಲಯದ ಪಕ್ಕದಲ್ಲಿ ಹರಿಯುವ ಹೊಳೆ ಮತ್ಸ್ಯಗಳಿಗೆ ಆಶ್ರಯವಾಗಿದೆ. ದೇವರ ಮೀನು ಎಂದು ಪ್ರತೀತಿ ಇರುವ “ಮಹಾಶಿರ” ಮೀನು ಇಲ್ಲಿ ನೋಡುಗರ ಕಣ್ಮನ ಸೆಳೆಯುತ್ತದೆ. ಬೃಹತ್ ಗಾತ್ರದ ಈ ಮೀನುಗಳು ಯಾತ್ರಾರ್ಥಿಗಳ ವೀಕ್ಷಣೆಗೆ ಬೇಸಿಗೆಯಲ್ಲಿ ಹೆಚ್ಚು ಲಭ್ಯವಾಗುತ್ತವೆ. ತೊಡಿಕಾನ ದೇವಸ್ಥಾನದಿಂದ ಭಾಗಮಂಡಲಕ್ಕೆ ಸಾಗುವ ರಸ್ತೆಯಲ್ಲಿ ಒಂದೂವರೆ ಕಿ.ಮೀ. ದೂರದಲ್ಲಿ ಮೈಪುಳಕಗೊಳಿಸುವ ಜಲಪಾತವೊಂದು ಧುಮುಕುತ್ತದೆ. ಸುಮಾರು 50 ಅಡಿ ಎತ್ತರದಿಂದ ಬಳುಕುತ್ತಾ ಕೆಳಕ್ಕೆ ಬೀಳುವ ಈ ಜಲಪಾತ ಮನಸ್ಸಿಗೆ ಮುದವನ್ನು ನೀಡುತ್ತದೆ. ಪ್ರಕೃತಿ ರಮಣೀಯ ಜೀರುಂಡೆಗಳ ಝೇಂಕಾರ, ಕಾಡುಸುಮಗಳ ಪರಿಮಳ, ನೀರಿನ ಜುಳುಜುಳು ನಿನಾದ ಎಂಥವರ ಗಮನವನ್ನು ಒಮ್ಮೆ ಸೆಳೆಯದೆ ಇರಲಾರದು. ಮಳೆಗಾಲ ಮುಗಿದು ಸೆಪ್ಟೆಂಬರ್ನಿಂದ ದಶಂಬರ ತಿಂಗಳ ಅವಧಿಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವುದು ಸೂಕ್ತ.

 

41. ಲೈನ್ಕಜೆ ಜಲಪಾತ

ಜಿಲ್ಲಾ ಕೇಂದ್ರದಿಂದ ದೂರ : ೧೨೫ ಕಿ.ಮೀ.
ತಾಲೂಕು ಕೇಂದ್ರದಿಂದ : ೩೦ ಕಿ.ಮೀ

ಸುಳ್ಯ ಮಡಿಕೇರಿ ರಸ್ತೆಯಲ್ಲಿ ಸಂಜಾಜೆ ಅರಣ್ಯ ಗೇಟು ಬಳಿಯ ಗಡಿಕಲ್ಲು ಪೇಟೆಯಿಂದ ಅರೆಕಲ್ಲು ರಸ್ತೆಯಲ್ಲಿ ಮುಂದುವರಿದರೆ ಡಾಂಬರು ರಸ್ತೆ ಮುಗಿಯುವಲ್ಲಿ ರಬ್ಬರ್ ತೋಟ ಸಿಗುತ್ತದೆ. ಮುಂದೆ ಮಣ್ಣು ರಸ್ತೆಯಲ್ಲಿ ಸಾಗಿದಾಗ ಲೈನ್ಕಜೆ ಎಂಬ ಪ್ರದೇಶವಿದೆ. ಲೈನ್ಕಜೆಯ ಖಾಸಗಿ ಮನೆಗಳನ್ನು ದಾಟಿ ಮುಂದಿರುವ ಅಭಯರಣ್ಯಕ್ಕೆ ಕಾಲಿಟ್ಟಾಗ ಅತ್ಯಂತ ಸುಂದರವಾದ ಜಲಪಾತವೊಂದು ಧುಮ್ಮುಕ್ಕುತ್ತಿರುವುದನ್ನು ಕಾಣಬಹುದು. ಲೈನ್ಕಜೆ ಅಬ್ಬಿಗಳಿಗೆ ಅದರದೆ ಆದ ಸೌಂದರ್ಯವಿದೆ. ವರ್ಷಪೂರ್ತಿ ತನ್ನ ಶೋಭೆ ಕಳೆದುಕೊಳ್ಳದ ಈ ಜಲಪಾತ ನೋಡುಗರ ಆಸೆ ತಣಿಸುತ್ತದೆ. ಇನ್ನೂ ಹಳ್ಳದ ಮೂಲವೇ ಸಾಗಿದಾಗ ಎರಡನೇ ಜಲಪಾತ ಸಿಗುತ್ತದೆ. ಅದರ ಸೌಂದರ್ಯ ಸವಿದು ಮುಂದಕ್ಕೆ ಸಾಗಿದಾಗ ಮತ್ತೊಂದು ಅಬ್ಬಿ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ದಾರಿಗಳ ನಡುವೆ ಹುಲಿಪಾರೆ ಬಂಡೆಯನ್ನು ಹತ್ತಿ ಸುತ್ತಲಿನ ಸೊಬಗನ್ನು ಸವಿಯಬಹುದು (ಇದಲ್ಲದೇ ಸುಳ್ಯ ತಾಲೂಕಿನ ಹೊಸಗದ್ದೆ, ಜಾಕೆ, ಬಳ್ಳಕ್ಕ, ಚಾಮಡ್ಕ, ಮೂಕಮಲೆ, ಉರುಂಬಿ, ಬಿಳಿಮಲೆಗಳಲ್ಲಿ ಇನ್ನಷ್ಟು ಜಲಪಾತಗಳನ್ನು ಕಾಣಬಹುದು.)

 

42. ಹನ್ನೆರಡು ಕವಲು

ಜಿಲ್ಲಾ ಕೇಂದ್ರದಿಂದ ದೂರ : ೩೮ ಕಿ.ಮೀ.
ತಾಲೂಕು ಕೇಂದ್ರದಿಂದ : ೩ ಕಿ.ಮೀ

ಕೋಡಂಗಲ್ಲಿನಿಂದ ದಕ್ಷಿಣ ದಿಕ್ಕಿಗೆ 1 ಕಿ.ಮೀ. ಪ್ರಯಾಣಿಸಿದಾಗ ಹನ್ನೆರಡು ಕವಲು ಸಿಗುತ್ತದೆ. ಇಲ್ಲಿ ಒಂದು ಈಶ್ವರ ದೇವಾಲಯವಿದೆ. ಇಲ್ಲಿಗೆ ಜನರು ಏಳ್ಳಮವಾಸ್ಯೆದಿನ ತೀರ್ಥಸ್ನಾನ ಮಾಡಲು ಬರುತ್ತಾರೆ. ಇಲ್ಲಿ ನದಿಯು 12 ಕವಲುಗಳಾಗಿ ಹರಿದು ಮಹಾ ತೀರ್ಥಕ್ಷೇತ್ರವೆನಿಸಿದೆ.

ಈ ನದಿಗೆ ಇತ್ತೀಚೆಗೆ ಅಣೆಕಟ್ಟನ್ನು ನಿರ್ಮಿಸಿದ್ದಾರೆ. ಇದು ಪ್ರಗತಿಯ ಹಂತದಲ್ಲಿದೆ. ಈ ಅಣೆಕಟ್ಟಿನಿಂದ ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಯ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.