43. ಹನುಮಂತ ದೇವಸ್ಥಾನ

ಜಿಲ್ಲಾ ಕೇಂದ್ರದಿಂದ ದೂರ : ೩೫ ಕಿ.ಮೀ.
ತಾಲೂಕು ಕೇಂದ್ರದಿಂದ : ೧ ಕಿ.ಮೀ

ಮೂಡಬಿದ್ರೆಯಲ್ಲಿ ಪ್ರಸಿದ್ಧವಾದ ಆಂಜನೇಯ ದೇವಾಲಯ ನಗರ ಮಧ್ಯದಲ್ಲಿದೆ. ಇಲ್ಲಿನ ಆಂಜನೇಯ ಮೂರ್ತಿಯನ್ನು ಕ್ರಿ.ಶ. 1314ರಲ್ಲಿ ಚೌಟರಸ ಭೋಜರಾಯರು ವಿಜಯ ನಗರದಿಂದ ಬಿರುದು ಬಾವಲಿಗಳೊಂದಿಗೆ ಪಲ್ಲಕ್ಕಿ ಹೊತ್ತು ಬಂದ ಬೋವಿಗಳೊಂದಿಗೆ ತಂದರು ಎನ್ನಲಾಗಿದೆ. ಗೌಡಸಾರಸ್ವತ ಬ್ರಾಹ್ಮಣರಲ್ಲಿ ಅರಮನೆಯ ಪೂಜೆ ಮಾಡುತ್ತಿದ್ದ, ಶ್ರೀನಿವಾಸ ಮಲ್ಯ ಎಂಬವರು ಅರಸರಿಂದ ಈ ಮೂರ್ತಿಯನ್ನು ಪಡೆದು ಪ್ರತಿಷ್ಠೆ ಮಾಡಿಸಿದುದೆನ್ನಲಾಗಿದೆ. ಇಲ್ಲಿಯ ಆಂಜನೇಯನಿಗೆ ಸಾವಿರಾರು ಭಕ್ತರಿಂದ ದಿನ ನಿತ್ಯ ಸೀಯಾಳ ಅಭಿಷೇಕ ನಡೆಯುತ್ತಿದ್ದು, ಆತನನ್ನು ಪೂರ್ಣ ತಂಪುಗೊಳಿಸಿ ಲೋಕಕ್ಷೇಮ ಸಾಧನೆಯ ಕಾರ್ಯ ನಡೆಯುತ್ತಿದೆ. ಇಲ್ಲಿಗೆ ಸಮೀಪದಲ್ಲಿ ವೆಂಕಟ್ರಮಣ ಸ್ವಾಮಿಯ ವೆಂಕಟ್ರಮಣ ದೇವಾಲಯವು ಪ್ರಸಿದ್ಧವೆನಿಸಿದೆ. ಈ ದೇವಾಲಯದ ಜಾತ್ರೆಯ ವಿಶೇಷತೆ ಎಂದರೆ ಜಾತ್ರೆಯ ಎಲ್ಲಾ ಕಸುಬುಗಳು ಉತ್ಸಾಹಿತ ಗೌರ ಸಾರಸ್ವತ ಬ್ರಾಹ್ಮಣ ಭಕ್ತರಿಂದ ಸೇವಾ ರೂಪದಲ್ಲಿ ನಡೆಯುತ್ತಿದೆ.

 

44. ಕೊಡ್ಯಡ್ಕ ದೇವಸ್ಥಾನ

ಜಿಲ್ಲಾ ಕೇಂದ್ರದಿಂದ ದೂರ : ೩೫ ಕಿ.ಮೀ.
ತಾಲೂಕು ಕೇಂದ್ರದಿಂದ : ೮ ಕಿ.ಮೀ

ಪ್ರಶಾಂತ ಸನ್ನಿವೇಶದಲ್ಲಿರುವ ಈ ದೇವಾಲಯವು ರಸ್ತೆ ಬದಿಯಲ್ಲಿ ಎಲ್ಲಾ ಸೌಕರ್ಯ ಹೊಂದಿರುವ ದೇವಾಲಯವಾಗಿದೆ. ಭಕ್ತನಿಗೆ ಬೇಕಾದ ದೈವಿಕ ಸಾನಿಧ್ಯ, ಮನಃಶಾಂತಿಗೆ ಬೇಕಾದ ಪ್ರಾರ್ಥನಾ ಮಂದಿರ, ನಿತ್ಯ ಅನ್ನ ಸಂತರ್ಪಣೆ, ಸಂದರ್ಶಕರಿಗೆ ಬೇಕಾದ ಕೆತ್ತನೆ ಕೆಲಸದ ಮೂರ್ತಿಗಳು, ಶಿಲಾ ಪ್ರತಿಮೆಗಳು ರಸಿಕರಿಗೆ ಬೇಕಾದ ನವಿಲು, ಮೊಲ, ಪಾರಿವಾಳ ಇತ್ಯಾದಿಗಳು ಓದುಗರಿಗೆ ಬೇಕಾದ ಗ್ರಂಥಭಂಡಾರ, ದೇಶ ವಿದೇಶಗಳ ಕರೆನ್ಸಿ, ನಾಣ್ಯ, ನೋಟುಗಳು, ಭಾವಚಿತ್ರಗಳು, ಮಕ್ಕಳ ರಂಜನೆಗೆ ಬೇಕಾದ ಆನೆ, ಕುದುರೆ, ರಥ ಪಲ್ಲಕ್ಕಿ, ಒಂದೇ, ಎರಡೇ ಇಲ್ಲಿ ಎಲ್ಲವೂ ಇದೆ. ಇಲ್ಲಿನ ಅನ್ನಪೂರ್ಣೆಶ್ವರೀ ದೇವಿಯು 51/2 ಕ್ವಿಂಟಾಲು ತೂಕದ ಪಂಚಲೋಹದ ಮೂರ್ತಿಯಾಗಿದ್ದು, ಒಂದು ಕೈಯಲ್ಲಿ ಅನ್ನ ಪಾತ್ರೆ ಇನ್ನೊಂದರಲ್ಲಿ ಸೌಉ ಹಿಡಿದು ಭಕ್ತರಿಗೆ ವರಗಳನ್ನು ಅನ್ನದ ರೂಪದಲ್ಲಿ ಸದಾ ಉಣಬಡಿಸುವಂತೆ ಭಾಸವಾಗುತ್ತದೆ. ಇದರ ಎದುರು ಭಾಗದಲ್ಲಿ 250 ಜನ ಕುಳಿತು ಪ್ರಾರ್ಥನೆ ಸಲ್ಲಿಸಬಹುದಾದ ಪ್ರಾರ್ಥನಾ ಮಂದಿರವಿದೆ. ಹೊರಾಂಗಣದಲ್ಲಿ ದಕ್ಷಿಣ ಬದಿಯಲ್ಲಿ ಅನ್ನಪೂರ್ಣೆಶ್ವರಿ ಅನ್ನಛತ್ರವಿದೆ.

 

45. ಪುರಾತನ ಸ್ಮಾರಕಗಳು (ನಿಷಿಧಿಗಳು)

ಜಿಲ್ಲಾ ಕೇಂದ್ರದಿಂದ ದೂರ : ೩೬ ಕಿ.ಮೀ.
ತಾಲೂಕು ಕೇಂದ್ರದಿಂದ : ೧ ಕಿ.ಮೀ

ಜೈನರ ಸ್ಮಾರಕಗಳಲ್ಲಿ ಅತ್ಯಂತ ಅಪರೂಪವಾಗಿ ಕಾಣಸಿಗುವ ಸ್ಮಾರಕಗಳು ನಿಷಿಧಿಗಳು. ಸಾಮಾನ್ಯವಾಗಿ ಜೈನರು ಮರಣ ಹೊಂದಿದವರಿಗೆ ಸ್ಮಾರಕಗಳನ್ನು ಕಟ್ಟುವುದಿಲ್ಲ. ಆದರೂ ಯಾರಾದರೂ ಜೈನ ಸನ್ಯಾಸಿಗಳು ವೃತ ಮತ್ತು ಉಪವಾಸದಿಂದ ಮರಣ ಹೊಂದಿದರೆ ಅವರ ತ್ಯಾಗದ ಸ್ಮರಣಾರ್ಥವಾಗಿ “ನಿಷಿಧಿ”ಯನ್ನು ಕಟ್ಟುತ್ತಾರೆ. ಉಪವಾಸ ಆಚರಿಸಿದ ಪವಿತ್ರ ಸ್ಥಳದ ಹತ್ತಿರದಲ್ಲಿ ನಿಷಿಧಿಗಳನ್ನು ಕಲ್ಲಿನಿಂದ ಕಟ್ಟುತ್ತಾರೆ. ಆದರೆ ಈಗ ಈ ಪದ್ಧತಿಯು ಅನುಷ್ಠಾನದಲ್ಲಿಲ್ಲ.

ಮೂಡಬಿದ್ರೆಯಲ್ಲಿರುವ ಸ್ಮಾರಕ ಭಟ್ಟಾರಕ ಸ್ವಾಮೀಜಿಯವರ ಸ್ಮರಣಾರ್ಥವಾಗಿ ಕಟ್ಟಿದ್ದಾರೆ. ಇದರ ಸಮೀಪದಲ್ಲೇ ಇರುವ ಪುರಾತನ ಕೊಳವು 18 ಶೈಲಿಯು ಹರಪ್ಪ ನಾಗರೀಕತೆಯ ಶೈಲಿಯನ್ನು ಹೊಂದಿದೆ.

 

46. ಕೋಡಂಗಲ್ಲು

ಜಿಲ್ಲಾ ಕೇಂದ್ರದಿಂದ ದೂರ : ೩೭ ಕಿ.ಮೀ.
ತಾಲೂಕು ಕೇಂದ್ರದಿಂದ : ೨ ಕಿ.ಮೀ

ಮೂಡಬಿದ್ರೆಯಿಂದ 2 ಕಿ.ಮೀ. ಪೂರ್ವದಲ್ಲಿ ಕೋಡಂಗಲ್ಲು ಸ್ಥಳವಿದೆ. ಇಲ್ಲಿ ವಿಶಾಲವಾಗಿ ಹರಡಿರುವ ಪಾದೆ ಕಲ್ಲಿನ ಮೇಲೆ ಒಂದು ಕೋಡು ಬಂಡೆಕಲ್ಲು ಮೊಟ್ಟೆಯಾಕಾರದಲ್ಲಿ ಎತ್ತಿ ನಿಲ್ಲಿಸಿದಂತೆ ಇದೆ. ಇದು ಸಾವಿರಾರು ವರ್ಷಗಳಿಂದಲೂ ಇದೇ ರೀತಿ ಇದೆ. ಇದರ ಅಡಿಯಲ್ಲಿ ಬಟ್ಟೆ ನೂಲೆಳೆಯನ್ನು ಹಾಯಿಸಬಹುದಾದಷ್ಟು ಜಾಗವಿದೆ. ಅಂದರೆ ಈ ಕಲ್ಲನ್ನು ಬಂಡೆಯ ಮೇಲೆ ನಿಲ್ಲಿಸಿದುದೆಂದು ಸ್ಪಷ್ಟವಾಗುತ್ತದೆ. ಇದರ ಸಮೀಪದಲ್ಲಿ ಕಲ್ಲಿನ ಮೇಲೆ ನ್ಯಾಯ ಬಸದಿ, ಊರ ಜನರು ಅನ್ನುವಂತೆ ನಾಯಿ ಬಸ್ತಿ ಎನ್ನುವ ಕಲ್ಲು ಮಂಟಪವಿದೆ. ಮೂಕ ಪ್ರಾಣಿಯ ಪ್ರಾಮಾಣಿಕ ವರ್ತನೆಯ ಕತೆಯನ್ನು ಇದು ನೆನಪಿಗೆ ತರುತ್ತದೆ. ಇಲ್ಲೇ ಸಮೀಪ ಕಾಲೇಜು ತಾಂತ್ರಿಕ ಕಾಲೇಜು, ಕೈಗಾರಿಕಾ ತರಬೇತಿ ಕಾಲೇಜು, ದೈಹಿಕ ಶಿಕ್ಷಣ ಕಾಲೇಜುಗಳು ಇವೆ. ಇಲ್ಲಿಗೆ ಸಮೀಪದ ಹನ್ನೆರಡು ಕವಲು (ಪದ್ರಾಡ್ ಕವಲ್) ಎಂಬಲ್ಲಿ ಈಶ್ವರ ದೇವಾಲಯವಿದೆ. ಇಲ್ಲಿ ನದಿಯು 12 ಕವಲುಗಳಾಗಿ ಹರಿದು ಮಹಾತೀರ್ಥ ಕ್ಷೇತ್ರವೆನಿಸಿದೆ.

 

47. ಸಾವಿರ ಕಂಬದ ಜೈನಬಸದಿ

ಜಿಲ್ಲಾ ಕೇಂದ್ರದಿಂದ ದೂರ : ೩೫ ಕಿ.ಮೀ.
ತಾಲೂಕು ಕೇಂದ್ರದಿಂದ : ೧ ಕಿ.ಮೀ

ಮೂಡಬಿದಿರೆಯು 18 ಬಸದಿ, 18 ದೇವಾಲಯ, 18 ಕೆರೆಗಳಿದ್ದ ಜೈನದರ್ಮದ ಮಹಾಕ್ಷೇತ್ರವಾಗಿದ್ದು, ಜೈನ ಕಾಶಿ ಎಂಬ ಖ್ಯಾತಿ ಪಡೆದ ಮಹಾಕ್ಷೇತ್ರವೆನಿಸಿದೆ. ಮೂಡಬಿದಿರೆಯಲ್ಲಿ ತುಳುನಾಡಿನ ಚೌಟರಸರ ಅರಮನೆ ಈಗಲೂ ಇದೆ. ವಿಶ್ವ ವಿಖ್ಯಾತವಾದ ಒಂದು ಸಾವಿರ ಕಂಬಗಳಿಂದ ನಿರ್ಮಾಣಗೊಂಡ ನವನಾರಿ ಕುಂಜರ, ಪಂಚನಾರಿ ತುರಗ, ಗಂಢಬೇರುಂಡ, ವಿಚಿತ್ರ ಪ್ರಾಣಿ ಪಕ್ಷಿಗಳ ಪೌರಾಣಿಕ ದೃಶ್ಯಗಳು, ಪ್ರಖ್ಯಾತ ಶಿಲಾ ಕೆತ್ತನೆಯ ತ್ರಿಭುವನ ತಿಲಕ ಚುಡಾಮಣಿ ಬಸದಿ ಇದೆ. ಇಲ್ಲಿನ ಹದಿನಾಲ್ಕು ಅಡಿ ಎತ್ತರದ ಪಂಚಲೋಹದ ನವರತ್ನ ಮಣಿ ಖಚಿತವಾದ ಚಂದ್ರನಾಥ ಸ್ವಾಮಿಯು ಭವ್ಯ ಮೂರ್ತಿಯು ಭಕ್ತಿಯನ್ನು ಸಾರುವ ಸಂಕೇತವೆನಿಸಿದೆ. ಪೂರ್ವ ಮುಖದ್ವಾರದಲ್ಲಿ ಅದ್ಬುತವಾದ ಏಕ ಶಿಲಾ ಸ್ತಂಭವು, ಮಾನಸ ಸ್ತಂಭವೆಂಬ ಹೆಸರಿನಲ್ಲಿ ಇದೆ. ಸನಿಹದಲ್ಲಿರುವ ಮಠದಲ್ಲಿ 12 ಮತ್ತು 13ನೇ ಶತಮಾನಕ್ಕೆ ಸೇರಿದ ತಾಳೆಗರಿ ಗ್ರಂಥಗಳಿವೆ.  11ನೇ ಶತಮಾನದ ಜೈನ ತತ್ವ ನಿರೂಪಣೆಯುಳ್ಳ ದವಳ ಮಹಾಗ್ರಂಥವು ಅರ್ಥಮಾಗದ ಭಾಷೆಯಲ್ಲಿ ಕನ್ನಡ ಹಾಸನ ಲಿಪಿಯಲ್ಲಿದೆ. ಮೂಡಬಿದ್ರೆಯವರಾದ ಸುಪ್ರಸಿದ್ಧ ಮಹಾಕವಿ ರತ್ನಾಕರ ವರ್ಣಿಯವರ ರಚಿಸಿದ ಭರತೇಶ ವೈಭವವೂ ಇಲ್ಲಿದೆ.

 

48. ಜೈನಕಾಶಿಯಲ್ಲೊಂದು – ಸಸ್ಯರಾಶಿ ಶೋಭಾವನ

ಜಿಲ್ಲಾ ಕೇಂದ್ರದಿಂದ ದೂರ : ೪೦ ಕಿ.ಮೀ.
ತಾಲೂಕು ಕೇಂದ್ರದಿಂದ : ೫ ಕಿ.ಮೀ

ಶೋಭಾವನದ ರುವಾರಿಗಳಾದ ಶ್ರೀಮಾನ್ ಡಾ|| ಎಂ. ಮೋಹನ ಆಳ್ವ ಅವರ ವಿಶಿಷ್ಟ ಪರಿಕಲ್ಪನೆಗಳಾಗಿರುವ ಔಷಧಿ ಸಸ್ಯಗಳ ಪರಿಚಯ ಸಂರಕ್ಷಣೆ, ಬೆಳೆಸುವಿಕೆ ಹಾಗೂ ಅಳಿವಿನ ಅಂಚಿನಲ್ಲಿರುವ ಪ್ರಮುಖ ಸಸ್ಯಗಳನ್ನೂ ನೆಟ್ಟು ಬೆಳೆಸುವ ಮತ್ತು ವಂಶಾಭಿವೃದ್ಧಿ ಪಡಿಸುವ ವಿಧಾನವಲ್ಲದೆ, ಉಪಯೋಗಿಸಿ ವಿವಿಧ ರೀತಿಯ ಔಷಧಿಗಳನ್ನು ತಯಾರಿಸುವ ಭಾರತೀಯ ವಿಶಿಷ್ಟ ಸಂಸ್ಕೃತಿಯಾದ ಭಾರತೀಯ ಔಷಧಿ ಪದ್ಧತಿಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿ ತಿಳಿಯ ಪಡಿಸುವ ಉದ್ದೇಶ ಶೋಭಾವನದ ಮೂಲಕ ಸಾಕಾರಗೊಳ್ಳುತ್ತಿದೆ. ದಕ್ಷಿಣ ಭಾರತದಲ್ಲಿ ಪಶ್ಚಿಮಘಟ್ಟದ ಅತ್ಯಂತ ಸೂಕ್ಷ್ಮ ವೈವಿಧ್ಯಗಳನ್ನು ಪ್ರಚಾರಪಡಿಸುವ ಸುಮಾರು 64 ವಿವಿಧ ವನಗಳನ್ನು ನಿರ್ಮಿಸಲಾಗಿದೆ. ಸುಮಾರು 15 ಎಕರೆ ವಿಶಾಲವಾದ ಈ ವನದಲ್ಲಿ ಸುಮಾರು 500ಕ್ಕೂ ಮೇಲ್ಪಟ್ಟು ವಿವಿಧ ಪ್ರಬೇಧದ 10,000 ಅಧಿಕ ಗಿಡಗಳಿಂದ ಈ ವನವು ಕಂಗೊಳಿಸುತ್ತಿದೆ. ಪರಂಪರೆ, ವೈಚಾರಿಕತೆ, ವೈಜ್ಞಾನಿಕತೆ ಇವೆಲ್ಲವುಗಳ ಸಂಗಮವೇ ಈ ಶೋಭಾವನವೆಂದರೆ ತಪ್ಪಾಗಲಾರದು. ಹಲವು ಭವಿಷ್ಯದ ಯೋಜನೆಯನ್ನು ಹಮ್ಮಿಕೊಂಡಿರುವ ಈ ಶೋಭಾವನ ಪ್ರಶಂಸನೀಯ.

 

49. ಸೋನ್ಸ್ ಫಾರ್ಮ್

ಜಿಲ್ಲಾ ಕೇಂದ್ರದಿಂದ ದೂರ : ೪೦ ಕಿ.ಮೀ.
ತಾಲೂಕು ಕೇಂದ್ರದಿಂದ : ೫ ಕಿ.ಮೀ

ಮೂಡಬಿದ್ರೆಯಿಂದ 5 ಕಿ.ಮೀ ದೂರದಲ್ಲಿರುವ ಬನ್ನಡ್ಕ ಎಂಬಲ್ಲಿ 1826ರಲ್ಲಿ ಬಾಸೆಲ್ ವಿಶನ್ ಅವರಿಂದ ಸ್ಥಾಪಿಸಲ್ಪಟ್ಟ ಈ “ಸೋನ್ಸ್ ಫಾರ್ಮ್” ತಮ್ಮ ವ್ಯಾಪಾರ ಸಂಪರ್ಕದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದೆ. 1928ರಲ್ಲಿ ಆಲ್ಫ್ರೆಡ್ ಸೋನ್ಸ್ರ ಮುಂದಾಳತ್ವದಲ್ಲಿ ನಡೆಸಲ್ಪಟ್ಟ ಸೋನ್ಸ್ ಫಾರ್ಮ್ ಈಗ 100 ಎಕರೆ ಪ್ರದೇಶದಲ್ಲಿ ವಿಸ್ತರಿಸಿ ಕೃಷಿ ಕ್ಷೇತ್ರದಲ್ಲೇ ದೊಡ್ಡ ಕ್ರಾಂತಿಯನ್ನು ಮಾಡಿದೆ. ಇಲ್ಲಿ ಸಂಪ್ರಾದಾಯಿಕ ಕೃಷಿಯನ್ನು ಕಡೆಗಣಿಸದೆ ನವೀನ ರೀತಿಯ ಕೃಷಿ ವಿಧಾನಗಳನ್ನು ಅನುಸರಿಸಿ ವಿದೇಶಿ ವ್ಯವಹಾರದಲ್ಲಿ ಈ ಸಂಸ್ಥೆ ಇಂದು ಮುಂಚೂಣಿಯಲ್ಲಿದೆ.

ಇಲ್ಲಿ ಸ್ವದೇಶಿ ಹಣ್ಣುಗಳಲ್ಲದೆ, ವಿದೇಶಿ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಇಲ್ಲಿಯ ಮುಖ್ಯ ಬೆಳೆ ಅನಾನಾಸು ಇದು ಇಲ್ಲಿಂದ ರಫ್ತಾಗಿ ವಿದೇಶಿ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಒತ್ತಿದೆ. ಇಲ್ಲಿ ಬಾಳೆಹಣ್ಣು, ಸಾಂಬಾರ ಪದಾರ್ಥಗಳು, ವಿವಿಧ ರೀತಿಯ ಹೂಗಿಡಗಳು, ವಿವಿಧ ಹಣ್ಣಿನ ಗಿಡಗಳು, ವಿದೇಶಿ ಹಣ್ಣುಗಳು, ದನಗಳ ಮೇವು (ಹುಲ್ಲುಗಾವಲು) ಇವಲ್ಲದೆ ಕೃಷಿ ಉಪಕರಣಗಳ ಸಂಗ್ರಹಾಲಯವೂ ಇಲ್ಲಿದೆ. ಇವೆಲ್ಲಾ ಕಾರಣಗಳಿಂದ ಇಲ್ಲಿನ ಸಸ್ಯ ಸಂಗ್ರಹವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

 

50. ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು

ದೂರ : ಮಂಗಳೂರಿನಿಂದ : ೫೫ ಕಿ.ಮೀ.

ಸುಮಾರು 900 ವರ್ಷಗಳ ಇತಿಹಾಸವಿರುವ ಈ ದೇವಸ್ಥಾನ ಪುತ್ತೂರಿನ ತಾಲೂಕು ಕೇಂದ್ರದ ಹೃದಯಭಾಗದಲ್ಲಿದೆ. ಮೂಲಸ್ಥಾನ ದೇವತೆಯಾದ ಸದಾಶಿವ ಲಿಂಗವನ್ನು ಹೊಂದಿರುವ ಈ ದೇವಸ್ಥಾನದ ಮುಂದೆ ಅತಿ ಪುರಾತನವಾದ ಕೆರೆಯೊಂದಿದೆ. ಈ ಕೆರೆಯ ಕಾರಣದಿಂದಲೇ ಪುತ್ತೂರಿಗೆ ಪುತ್ತೂರು ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.

ಸುಮಾರು ನಾಲ್ಕು ಎಕರೆಗಳಷ್ಟು ವಿಸ್ತಾರವಾದ ಜಾತ್ರಾಗದ್ದೆಯನ್ನು ಹೊಂದಿರುವ ಈ ದೇವಸ್ಥಾನದ ರಥೋತ್ಸವವು ಪ್ರಸಿದ್ಧವೂ, ಪ್ರಾಚೀನವೂ ಆಗಿದೆ. ಇತ್ತೀಚೆಗೆ ಶ್ರೀ ದೇವರಿಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯದ್ಭುತವಾದ ರಥದ ನಿರ್ಮಾಣ ಕಾರ್ಯವು ನಡೆಯುತ್ತಿದೆ. ಅಲ್ಲದೇ ಒಂದು ಕೋಟಿ ರೂ. ವೆಚ್ಚದಲ್ಲಿ ರಥಬೀದಿಯ ರಚನಾಕಾರ್ಯವು ಪ್ರಗತಿಯಲ್ಲಿದೆ. ಪ್ರತಿದಿನವೂ ಸಾವಿರಾರು ಭಕ್ತರು ದರ್ಶನ ನೀಡುವ ಈ ಕ್ಷೇತ್ರವು ಭಕ್ತರ ಬೇಡಿಕೆಯನ್ನು ಈಡೇರಿಸುವ ಪುಣ್ಯತಾಣವಾಗಿದೆ. ಇಲ್ಲಿ ನಿರ್ಮಿತವಾಗಿರುವ ಧ್ಯಾನಮೂರ್ತಿ ಶಿವನ ವಿಗ್ರಹವು ದಕ್ಷಿಣ ಭಾರತದಲ್ಲಿ 3ನೇಯದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

51. ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ

ದೂರ : ಮಂಗಳೂರಿನಿಂದ : ೪೮ ಕಿ.ಮೀ.

“ದಕ್ಷಿಣ ಕಾಶಿ” ಎಂದೇ ಪ್ರಸಿದ್ಧವಾಗಿರುವ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನವು ಪುತ್ತೂರಿನಿಂದ 10 ಕಿ.ಮೀ. ದೂರದ ಉಪ್ಪನಂಗಡಿ ಎಂಬಲ್ಲಿದೆ. ನೇತ್ರಾವತಿ ಹಾಗೂ ಕುಮಾರಧಾರ ಈ ಎರಡು ನದಿಗಳ ಸಂಗಮ ಸ್ಥಳದಲ್ಲಿ ನೆಲೆಸಿರುವ ಈ ದೇವಸ್ಥಾನವು ಮಖೆ ಜಾತ್ರೆಗೆ ಪ್ರಸಿದ್ಧವಾಗಿದೆ.

ಕುಮಾರಧಾರ ಮತ್ತು ನೇತ್ರಾವತಿ ನದಿಗಳ ಸಂಗಮವಾದ ಈ ದೇವಸ್ಥಾನದ ಗರ್ಭಗುಡಿಯವರೆಗೆ ನೀರು ಬಂದು ದೇವರ ಪಾದ ತೊಳೆಯುತ್ತದೆ ಎಂಬುದು ಇಂದಿಗೂ ಇರುವ ಸತ್ಯ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಸಂಗಮ ಸ್ನಾನ ಮಾಡುತ್ತಾರೆ. ಸತ್ತವರ ಕ್ರಿಯಾವಿಧಿಗಳಿಗೆ ಈ ದೇವಸ್ಥಾನ ಪ್ರಸಿದ್ಧವಾಗಿದೆ. ಈ ದೇವಸ್ಥಾನದ ಪಕ್ಕದಲ್ಲಿ ಹೊಳೆಯ ನಡುವೆ ಎರಡು ಉದ್ಭವಲಿಂಗವಿದೆ. ಬೇಸಿಗೆ ಕಾಲದಲ್ಲಿ ನೀರು ಕಡಿಮೆಯಾದಾಗ ಈ ಲಿಂಗಗಳಿಗೆ ಪೂಜೆಯನ್ನು ಮಾಡಲಾಗುತ್ತದೆ. ಸುತ್ತಲೂ ಕಂಗು-ತೆಂಗುಗಳಿಂದ ಕಂಗೊಳಿಸುತ್ತಿರುವ ಈ ಪ್ರದೇಶ ಪ್ರಕೃತಿ ರಮಣೀಯವಾಗಿದೆ.