52. ಬಾಲವನ

ದೂರ : ಮಂಗಳೂರಿನಿಂದ : ೫೮ ಕಿ.ಮೀ.

ಪುತ್ತೂರಿನಿಂದ ಸುಮಾರು 3 ಕಿ.ಮೀ. ದೂರದಲ್ಲಿ ಪರ್ಲಡ್ಯ ಎಂಬಲ್ಲಿ ಸಿಗುವುದೇ ಶಿಕ್ಷಣತಜ್ಞ, ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಶಿವರಾಮ ಕಾರಂತರ ತಪೋಭೂಮಿ ಬಾಲವನ. ಸುಮಾರು 4 ಎಕರೆಗಳಷ್ಟು ಸ್ವಾಭಾವಿಕ ಮರಗಿಡಗಳಿಂದ ಕೂಡಿರುವ ಇಲ್ಲಿ ಕಾರಂತರ ಇಷ್ಟದಂತೆ ಮಕ್ಕಳ ಚಟುವಟಿಕೆಗಳು ನಡೆಯುತ್ತಿವೆ. ಮಕ್ಕಳಿಗೋಸ್ಕರ ವಿವಿಧ ಆಟಿಕೆಗಳು, ಈಜುಕೊಳ, ತಿರುಗಾಡುವುದಕ್ಕೆ ವಿಸ್ತಾರವಾದ ಪ್ರದೇಶಗಳು ಇಲ್ಲಿದ್ದು, ಮಕ್ಕಳ ಆಕರ್ಷಣೀಯ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡಿದೆ. ನಾಲ್ಕು ದಶಕಗಳ ಕಾಲ ಡಾ| ಶಿವರಾಮ ಕಾರಂತರು ಇಲ್ಲಿ ನೆಲೆಸಿ, ಸಾಹಿತ್ಯ ಮತ್ತು ಕಲಾರಂಗದಲ್ಲಿ ವಿವಿಧ ಪ್ರಯೋಗಗಳನ್ನು ಮಾಡಿದ್ದಾರೆ. ಕರ್ನಾಟಕ ಸರಕಾರದ ಆಸ್ತಿಯಾಗಿರುವ ಇಲ್ಲಿ ಕಾರಂತರ ಜ್ಞಾನಪೀಠ ಪ್ರಶಸ್ತಿ ಫಲಕ, ಗ್ರಂಥ ಭಂಡಾರ, ಕಾರಂತರ ಸವಿನೆನಪಿನ ಭಾವಚಿತ್ರಗಳ ಸಂಗ್ರಹ ಇಲ್ಲಿದೆ. ಇಲ್ಲಿ ಪ್ರತೀ ಆದಿತ್ಯವಾರ ತಾಲೂಕಿನ ಬೇರೆ ಬೇರೆ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಕ್ಕಳು ಅಡಿ ನಲಿಯುವುದಕ್ಕೆ ಯೋಗ್ಯವಾದ ಸ್ಥಳವಾಗಿದೆ.

 

53. ಪಡುಮಲೆ

ದೂರ : ಮಂಗಳೂರಿನಿಂದ : ೮೦ ಕಿ.ಮೀ.

ತುಳುವ ನಾಡು ಎಂದೇ ಪ್ರಸಿದ್ಧವಾಗಿರುವ ನಮ್ಮ ಜಿಲ್ಲೆಯ ಕೇಂದ್ರ ಭಾಗವಾದ ಪುತ್ತೂರು ತಾಲೂಕು ಕೇಂದ್ರದಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಪ್ರಕೃತಿ ರಮಣೀಯವಾದ ಸ್ಥಳವೇ ಪಡುಮಲೆ. “ಪರ್ಮಲೆ” ಎಂಬ ಮೂಲ ಶಬ್ದದಿಂದ ಉಂಟಾದ ಈ ಊರು ಇತಿಹಾಸ ಪ್ರಸಿದ್ಧವಾದ ಕೋಟಿ-ಚೆನ್ನಯರು ಜನ್ಮವೆತ್ತಿದ ನಾಡು.

ತುಳುನಾಡಿನ ಅರಸೊತ್ತಿಗೆಗಳು ಬೀಡಿನ ಬಿಲ್ಲಾಳರ ಕೇಂದ್ರ ಸ್ಥಳವಾಗಿದ್ದು, ಇಲ್ಲಿ ಕೋಟಿ-ಚೆನ್ನಯರ ತಾಯಿ ದೇಯಿ ಬೈದಿತಿ ವಾಸವಾಗಿದ್ದ ಹುಲ್ಲಿನ ಮನೆ, ಕೋಟಿ-ಚೆನ್ನಯರ ಗರಡಿ, ಪೆರುಮಳ ಬಲ್ಲಾಳರ ಅರಮನೆ, ಕೋಟಿ-ಚೆನ್ನಯರು ಸಿಟ್ಟಿನಿಂದ ಇಳಿದು ಹೋದಾಗ ಜರಿದು ಬಿದ್ದ ಕಟ್ಟೆಯ ಕುರುಹುಗಳು ಇಲ್ಲಿವೆ. ಇದೇ ಸ್ಥಳದಲ್ಲಿ ಪಾಂಡವರು ಕೂಡಾ ವಾಸವಾಗಿದ್ದರು ಎಂಬ ಪ್ರತೀತಿ ಇದೆ. ಪಾಂಡವರ ಬಾವಿ, ಪಾಂಡವರು ಅನ್ನ ಬೇಯಿಸಿದ ಒಲೆ ಇತ್ಯಾದಿ ಕುರುಹುಗಳು ಇಲ್ಲಿವೆ. ಸುತ್ತಮುತ್ತಲೂ ಬೆಟ್ಟಗುಡ್ಡಗಳಿಂದ ಆವೃತ್ತವಾಗಿರುವ ಅಡಿಕೆ ತೋಟ, ಗದ್ದೆಗಳಿಂದ ಕಂಗೊಳಿಸುತ್ತಿರುವ ಪಡುಮಲೆ ಪ್ರಕೃತಿ ರಮಣೀಯತೆಗೆ ಇನ್ನೊಂದು ಉದಾಹರಣೆ.

 

54. ಸವಣೂರು

ದೂರ : ಮಂಗಳೂರಿನಿಂದ : ೭೮ ಕಿ.ಮೀ.

ಸುವರ್ಣದ ಊರು ಅಂದರೆ ಚಿನ್ನದ ಊರು ಎಂದೇ ಪ್ರಸಿದ್ಧವಾಗಿರುವ ಸವಣೂರು ಐತಿಹಾಸಿಕ ಸ್ಥಳ. ಪುತ್ತೂರು ನಗರದಿಂದ 13 ಕಿ.ಮೀ. ದೂರದಲ್ಲಿರುವ ಸವಣೂರು ಹಿಂದೆ ಶ್ರಾವಕರ ನೆಲೆವೀಡಾಗಿತ್ತು ಎಂದು ಇತಿಹಾಸ ಹೇಳುತ್ತದೆ. ಪುಷ್ಪಪುರ ಎಂದು ಕರೆಯಲ್ಪಡುವ ಇಲ್ಲಿ ಅನೇಕ ಜೈನ ಬಸದಿಗಳಿವೆ. ಹತ್ತಿರದ ಕಾಣಿಯೂರಿನ ಬೈತಡ್ಕ ಎಂಬಲ್ಲಿ ಹಿಂದೂ-ಮುಸ್ಲಿಂ ಧರ್ಮ ಸಮನ್ವಯದ ಬೈತಡ್ಕ ಜುಮ್ಮಾ ಮಸೀದಿ ಇದೆ. ಅಲ್ಲದೇ ಪಕ್ಕದಲ್ಲೇ ವಿವಿಧ ರೀತಿಯ ಮರಗಿಡಗಳ ಅಶ್ವಿನಿ ಫಾರ್ಮ್ಸ್ ಮತ್ತು ಸ್ವಾಭಾವಿಕವಾಗಿ ಬೆಳೆಸುವ ವಿವಿಧ ತಳಿಗಳ ಗೋ ಶಾಲೆ ಇದೆ. ಇಲ್ಲಿ ಯಾವುದೇ ಕೃತಕ ಗೊಬ್ಬರಗಳನ್ನು ಹಾಕದೇ ಬೆಳೆಸಿದ ಕಂಗಿನ ತೋಟವಿದೆ. ಈ ತೋಟದೊಳಗೆ ಗೋವುಗಳನ್ನು ಅವುಗಳಷ್ಟಕ್ಕೇ ಬಿಡಲಾಗುತ್ತದೆ. ಇಲ್ಲಿ ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ವಿದ್ಯಾರಶ್ಮಿ ವಿದ್ಯಾಸಂಸ್ಥೆ ಇದೆ.

 

55. ಬೆಂದ್ರ್ತೀರ್ಥ

ದೂರ : ಮಂಗಳೂರಿನಿಂದ : ೭೮ ಕಿ.ಮೀ.

ಪುತ್ತೂರಿನಿಂದ ಸುಮಾರು 17 ಕಿ.ಮೀ. ದೂರದಲ್ಲಿರುವ ಪ್ರಕೃತಿ ವೈಚಿತ್ರವಾದ ಭೌಗೋಳಿಕ ವಿಸ್ಮಯವೇ ಬೆಂದ್ರ್ತೀರ್ಥ. ಇರ್ದೆ ಗ್ರಾಮದ ಇರ್ದೆ ಎಂಬಲ್ಲಿ ಸೀರೆಹೊಳೆಗೆ ಅಂಟಿಕೊಂಡು ಈ ಬೆಂದ್ರ್ತೀರ್ಥದ ಕೆರೆ ಇದೆ. ಸುಮಾರು 100 ಡಿಗ್ರಿಯವರೆಗೂ ಬಿಸಿಯಿರುವ ನೀರಿನ ಬುಗ್ಗೆಗಳು ಇಲ್ಲಿ ಎದ್ದು ಬರುತ್ತದೆ. ಹಿಂದೆ ಇದು ದಕ್ಷಿಣ ಭಾರತದಲ್ಲೇ ಏಕೈಕ ಬಿಸಿನೀರಿನ ಬುಗ್ಗೆ ಎಂಬ ಕೀರ್ತಿಗೆ ಪಾತ್ರವಾಗಿತ್ತು. ವಿಜ್ಞಾನದ ಪ್ರಕಾರ ಗಂಧಕದ ಅಂಶ ನೀರಿನೊಂದಿಗೆ ಸಮ್ಮಿಳಿತಗೊಳ್ಳುವುದೇ ಬಿಸಿನೀರಿನ ಬುಗ್ಗೆ ಉಂಟಾಗುವುದಕ್ಕೆ ಕಾರಣ ಎನ್ನುತ್ತಾರೆ. ಆಟಿ ಅಮವಾಸ್ಯೆ ತೀರ್ಥಸ್ನಾನ ಇಲ್ಲಿಯ ವಿಶೇಷತೆ. ಒಂದು ಕಾಲದಲ್ಲಿ ಸಾವಿರಾರು ಭಕ್ತರು ತೀರ್ಥಸ್ನಾನಕ್ಕಾಗಿ ಆಗಮಿಸುತ್ತಿದ್ದರು. ಇಲ್ಲಿ ಸ್ನಾನ ಮಾಡಿದರೆ ಯಾವುದೇ ರೀತಿಯ ಚರ್ಮರೋಗಗಳು ವಾಸಿಯಾಗುತ್ತಿದುದಕ್ಕೆ ನಿದರ್ಶನಗಳಿವೆ. ಈ ಕೆರೆಯ ಪಕ್ಕದಲ್ಲೇ ಶ್ರೀ ಗೋಪಾಲಕೃಷ್ಣ ಕ್ಷೇತ್ರವೂ, ಹಿಂದೂ ಮುಸ್ಲಿಂ ಧರ್ಮ ಸಮನ್ವಯದ ಪಳ್ಳಿತ್ತಡ್ಕ ದರ್ಗಾ ಇದೆ. ವರ್ಷಕ್ಕೊಮ್ಮೆ ಈ ಹೊಳೆಯಲ್ಲಿ ನಡೆಯುವ ಪಳ್ಳಿತ್ತಡ್ಕ ಉರೂಸ್ ನಾಡಿನಾದ್ಯಂತ ಪ್ರಸಿದ್ಧವಾಗಿದೆ. ಹತ್ತಿರದಲ್ಲೇ ತನ್ನದೇ ಮಹತ್ವವನ್ನು ಪಡೆದುಕೊಂಡಿದೆ.

 

56. ಕ್ಯಾಂಪ್ಕೋ ಚಾಕಲೇಟು ಫ್ಯಾಕ್ಟರಿ

ದೂರ : ಮಂಗಳೂರಿನಿಂದ : ೫೮ ಕಿ.ಮೀ.

ಏಷ್ಯಾ ಖಂಡದಲ್ಲೇ ಅತ್ಯಾಧುನಿಕವಾಗಿರುವ ಕ್ಯಾಂಪ್ಕೋ ಸಹಕಾರಿ ಸಂಸ್ಥೆ ಚಾಕಲೇಟು ಕಾರ್ಖಾನೆ ಪುತ್ತೂರಿನಿಂದ ಸುಮಾರು 5 ಕಿ.ಮೀ. ದೂರದ ಮರೀಲ್ ಎಂಬಲ್ಲಿದೆ. ಕೊಕ್ಕೊ ಬೆಳೆಯಿಂದ ಚಾಕಲೇಟು ತಯಾರಿಸುತ್ತಿದ್ದ ಕಾರ್ಖಾನೆ ಬೇರೆ ಬೇರೆ ಚಾಕಲೇಟು ಕಂಪೆನಿಗಳಿಗೆ ವಿಭಿನ್ನ ರೀತಿಯ ಚಾಕಲೇಟುಗಳನ್ನು ತಯಾರಿಸಿ ಕೊಡುತ್ತಿದೆ. ಅತ್ಯಾಧುನಿಕ ರೀತಿಯಲ್ಲಿ ವಿಶಿಷ್ಟ ವೈಜ್ಞಾನಿಕ ಯಂತ್ರಗಳ ಮೂಲಕ ಇಲ್ಲಿ ಚಾಕಲೇಟು ತಯಾರಿಸಲಾಗುತ್ತಿದೆ. ಮಿಶ್ರಣ ಮಾಡುವುದರಿಂದ ಹಿಡಿದು ಪ್ಯಾಕಿಂಗ್ ತನಕವೂ ಇಲ್ಲಿ ಯಂತ್ರಗಳ ಮೂಲಕವೇ ನಡೆಯುತ್ತಿದೆ.

 

57. ಕೆ.ಸಿ. ಫಾರ್ಮ್ ಕ್ಯೊಲು

ದೂರ : ಮಂಗಳೂರಿನಿಂದ : ೫೨ ಕಿ.ಮೀ.

ಪುತ್ತೂರು ಪಟ್ಟಣದಿಂದ ಸುಮಾರು 17 ಕಿ.ಮೀ. ದೂರದಲ್ಲಿ ಪ್ರಕೃತಿ ರಮಣೀಯವಾಗಿ ಕಾಣುವ ಸುಂದರ ಭೂ ದೃಶ್ಯವೇ ಕೆ.ಸಿ. ಫಾರ್ಮ್ ಕ್ಯೊಲು. ಕ್ಯೊಲು ಎನ್ನುವುದು ಈ ಸ್ಥಳದ ಹೆಸರು. 900 ಎಕರೆಗಳಷ್ಟು ವಿಸ್ತಾರವಾದ ಈ ಪ್ರದೇಶದಲ್ಲಿ ಕರ್ನಾಟಕ ಸರಕಾರ ಪಶು ಸಂಗೋಪನಾ ಫಾರ್ಮ್ ಒಂದನ್ನು ನಿರ್ಮಿಸಿದೆ. ಇಲ್ಲಿ ವಿವಿಧ ರೀತಿಯ ಪ್ರಾಣಿ ತಳಿಗಳನ್ನು ಸಾಕಲಾಗುತ್ತದೆ. ಅಂತೇ ವಿಸ್ತಾರವಾದ ಭೂ ಪ್ರದೇಶದಲ್ಲಿ ಪಶು ಆಹಾರಗಳನ್ನು ಬೆಳೆಸಲಾಗುತ್ತಿದೆ. ಅತ್ಯಾಧುನಿಕ ರೀತಿಯ ಹೈನುಗಾರಿಕೆ ವ್ಯವಸ್ಥೆ ಇಲ್ಲಿದೆ. ಇಲ್ಲಿ ಬೇರೆ ಬೇರೆ ಕಡೆಗಳಿಂದ ಬರುವ ಹೈನುಗಾರಿಕೆಯವರಿಗೆ ತರಬೇತಿಯನ್ನು ನೀಡುವ ವ್ಯವಸ್ಥೆಯೂ ಇದೆ. ವಿಧ ವಿಧವಾದ ಭೂ ಪ್ರದೇಶಗಳಿಂದ ಕೂಡಿದ ಈ ಪ್ರದೇಶ ನೋಡಿ ಆನಂದಿಸುವುದಕ್ಕೂ ಯೋಗ್ಯವಾಗಿದೆ.

 

58. ತ್ಯಾಜ್ಯ ವಿಲೇವಾರಿ ಘಟಕ ಬನ್ನೂರು

ದೂರ : ಮಂಗಳೂರಿನಿಂದ : ೫೫ ಕಿ.ಮೀ.

ಪುತ್ತೂರು ಪುರಸಭೆಯಿಂದ ನಿರ್ಮಾಣಗೊಂಡಿರುವ Land Fill sight ಎಂಬ ವಿಶೇಷ ತ್ಯಾಜ್ಯ ವಿಲೇವಾರಿ ಘಟಕವು ಪುತ್ತೂರಿನಿಂದ 4 ಕಿ.ಮೀ. ದೂರದ ಬನ್ನೂರು ಎಂಬಲ್ಲಿದೆ. ಮಾಲಿನ್ಯ ರಹಿತವಾಗಿ ಕಸಗಳನ್ನು ವಿಲೇವಾರಿ ಮಾಡುವ ವಿಶೇಷ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ. ಹೊರರಾಜ್ಯಗಳಿಂದಲೂ ಇಲ್ಲಿನ ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸಲು ಬರುತ್ತಿರುವುದು ಗಮನಾರ್ಹವಾಗಿದೆ. ಕಸಗಳನ್ನು ಬೇರ್ಪಡಿಸಿ ಅವುಗಳನ್ನು ಬೇರೆ ಬೇರೆ ಕಡೆ ಸಂಗ್ರಹಿಸಿ ಅದರ ಮೇಲೆ ಮಣ್ಣು ತುಂಬಿಸಿ ನಂತರದಲ್ಲಿ ಅವುಗಳ ತ್ಯಾಜ್ಯವು ಮಣ್ಣಿಗೆ ಸೇರುವಂತೆ ಮಾಡುವ ವಿಶಿಷ್ಟ ರೀತಿಯ ತಂತ್ರಜ್ಞಾನ ಇಲ್ಲಿದೆ.

 

59. ಪುತ್ತೂರು ಬಿರುಮಲೆ ಬೆಟ್ಟ

ದೂರ : ಮಂಗಳೂರಿನಿಂದ : ೫೮ ಕಿ.ಮೀ.

ಪುತ್ತೂರು ಪೇಟೆಯಿಂದ ಮೂರು ಕಿ.ಮೀ. ದೂರದಲ್ಲಿರುವ ದರ್ಬೆ-ಬೈಪಾಸ್ ರಸ್ತೆಯಲ್ಲಿ ಇರುವ ಎತ್ತರವಾದ ಬೆಟ್ಟವೇ ಬಿರುಮಲೆ ಬೆಟ್ಟ. ಮಕ್ಕಳ ಚಾರಣಕ್ಕೆ ಬಹಳ ಪ್ರಸ್ತುತವಾದ ಈ ಸ್ಥಳ ಸುಮಾರು 400 ಮೀಟರ್ ಗಳಷ್ಟು ಎತ್ತರದಲ್ಲಿದೆ. ಈ ಬೆಟ್ಟದಲ್ಲಿ ಮಕ್ಕಳ ಆಟದ ಉದ್ಯಾನವನ, ಆಟದ ಕಾರಂಜಿ, ಸಾರ್ವಜನಿಕ ಗ್ರಂಥಾಲಯ ಹಾಗೂ ದೂರದರ್ಶನ ಮರುಪ್ರಸಾರ ಕೇಂದ್ರಗಳು ಇವೆ. ಸುತ್ತಮುತ್ತ ಹಸಿರಿನಿಂದ ತುಂಬಿರುವ ಈ ಎತ್ತರ ಪ್ರದೇಶದಲ್ಲಿ ನಿಂತರೆ ಇಡಿಯ ಪುತ್ತೂರು ಪಟ್ಟಣದ ದರ್ಶನವಾಗುತ್ತದೆ. ಸಂಜೆ ಹೊತ್ತಲ್ಲಿ ಕಾಲ ಕಳೆಯಲು ಬಹಳ ಪ್ರಶಸ್ತವಾಗಿರುವ ಈ ಪ್ರದೇಶಕ್ಕೆ ಬೇರೆ ಕಡೆಗಳಿಂದ ಜನರು ಆಗಮಿಸುತ್ತಾರೆ. ಹಸಿರು ಮರಗಳ ನಡುವೆ ನಿಶ್ಯಬ್ದ ವಾತಾವರಣದೊಂದಿಗೆ ಕುಣಿದು ಕುಪ್ಪಳಿಸಲು ಈ ಬೆಟ್ಟ ಬಹಳ ಯೋಗ್ಯವಾಗಿದೆ.