23. ನರಹರಿ ಪರ್ವತ
ದೂರ: ತಾಲೂಕು ಕೇಂದ್ರದಿಂದ ೫ ಕಿ.ಮೀ
ಜಿಲ್ಲಾ ಕೇಂದ್ರ ೩೦ ಕಿ.ಮೀ.
ಮಾರ್ಗ: ಮಂಗಳೂರು – ಬೆಂಗಳೂರು
ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಲೂಕು ಕೇಂದ್ರದಿಂದ 5 ಕಿ.ಮೀ. ದೂರದಲ್ಲಿ ಪ್ರಕೃತಿ ವಿಸ್ಮಯ ಮೂಡಿಸುವ ತಾಣವೇ ನರಹರಿ ಪರ್ವತ ಸೂರ್ಯೋದಯ ಹಾಗೂ ಸೂರ್ಯಾಸ್ತದ ದೃಶ್ಯ ಸೊಬಗನ್ನು ಸವಿಯಲು ಪ್ರಕೃತಿಯ ಕೊಡುಗೆಯಾದ ಈ ಪರ್ವತ ಏರಿದರೆ ಆಕಾಶ ಮುಟ್ಟಿದ ಅನುಭವ.
ಚಾರಣ ಪ್ರಿಯರ ಸ್ವರ್ಗ-ಎಂದೇ ಕರೆಯಲ್ಪಡುವ ಕ್ಷೇತ್ರವೇ ನರಹರಿ ಪರ್ವತ. ಸೂರ್ಯೋದಯದ ಹೊಂಬೆಳಕು, ಆಕರ್ಷಕ ಗ್ರಾಮೀಣ ದೃಶ್ಯಗಳು, ನಿರ್ಮಲ ಪರಿಸರ, ಇವೆಲ್ಲ ಬೇಕಿದ್ದರೆ ನೋಡಬೇಕು ನರಹರಿ ಪರ್ವತ. ಪುರಾಣ ಕತೆಯ ಪ್ರಕಾರ ನೈಸರ್ಗಿಕವಾಗಿ ನಿರ್ಮಿತವಾದ ಶಂಖ, ಚಕ್ರ, ಗದಾ, ಪದ್ಮಗಳೆಂಬ ಆಕಾರವುಳ್ಳ ನಾಲ್ಕು ತೀರ್ಥಬಾವಿಗಳು, ನಾಗದೇವರು, ಮಹಾಗಣಪತಿ, ಶಿವಮೂರ್ತಿ ಇತ್ಯಾದಿಗಳು ಇಲ್ಲಿನ ಜನಾಕರ್ಷಣೆಯ ಕೇಂದ್ರಬಿಂದುಗಳು. ಧಾರ್ಮಿಕ ಕ್ಷೇತ್ರವಾಗಿ, ಚಾರಣ ಕ್ಷೇತ್ರವಾಗಿ, ವನವಿಹಾರ ಕ್ಷೇತ್ರವಾಗಿ ನರಹರಿ ಪರ್ವತವು ಪ್ರಖ್ಯಾತವಾಗಿದೆ.
24. ಸಿ.ಪಿ.ಸಿ.ಆರ್.ಐ. ವಿಟ್ಲ
ದೂರ: ತಾಲೂಕು ಕೇಂದ್ರದಿಂದ ೨೦ ಕಿ.ಮೀ
ಜಿಲ್ಲಾ ಕೇಂದ್ರ ೪೩ ಕಿ.ಮೀ.
ಮಾರ್ಗ: ವಿಟ್ಲ – ಪುತ್ತೂರು
ಕೃಷಿಯೇ ಬೆನ್ನೆಲುಬಾಗಿರುವ ನಮ್ಮ ದೇಶದಲ್ಲಿ ಇತ್ತೀಚೆಗೆ ಕೃಷಿ ಕ್ಷೇತ್ರದಲ್ಲಿ ಆಗಿರುವ ವೈಜ್ಞಾನಿಕ ಸಂಶೋಧನೆಗಳು ಆಶ್ಚರ್ಯ ಮೂಡಿಸುತ್ತದೆ. ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶದ ಚಂದಳಿಕೆ ಎಂಬಲ್ಲಿರುವ ಕೇಂದ್ರೀಯ ತೋಟಗಾರಿಕ ಬೆಳೆಗಳ ಸಂಶೋಧನ ಕೇಂದ್ರ (ಸಿ.ಪಿ.ಸಿ.ಆರ್.ಐ) ವಿಟ್ಲ ಪುತ್ತೂರು ರಸ್ತೆಯಲ್ಲಿ ಸಿಗುವ ಬಲು ಅಪರೂಪ, ನೋಡಲೇಬೇಕಾದ ಸಂಸ್ಥೆ.
ಇದು ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾಗಿದ್ದು, ಇಲ್ಲಿ ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ, ಕೊಕ್ಕೊ, ಗೇರು ಇತ್ಯಾದಿ ತಳಿಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ, ಪ್ರಯೋಗಗಳು ನಡೆಯುತ್ತಿವೆ. ಈ ಸಂಸ್ಥೆಯು ಕೃಷಿಕರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ ಪರಿಹಾರೋಪಾಯಗಳನ್ನು ಸೂಚಿಸುತ್ತದೆ ಮಾತ್ರವಲ್ಲದೆ ಭೇಟಿ ನೀಡುವ ಆಸಕ್ತರಿಗೆ ಕೃಷಿ ಪ್ರಯೋಗಾಲಯದ ಬಗ್ಗೆ ಸೂಕ್ತ ಮಾಹಿತಿ ನೀಡಲು ಕೃಷಿ ವಿಜ್ಞಾನಿಗಳು ಲಭ್ಯರಿಸುತ್ತಾರೆ.
25. ಅಗ್ರಾರ್ ಚರ್ಚ್
ದೂರ: ತಾಲೂಕು ಕೇಂದ್ರದಿಂದ ೫ ಕಿ.ಮೀ
ಜಿಲ್ಲಾ ಕೇಂದ್ರ ೨೮ ಕಿ.ಮೀ.
ಮಾರ್ಗ: ಬಿ.ಸಿ. ರೋಡ್ – ಜಕ್ರಿಬೆಟ್ಟು
ಮಂಗಳೂರು ಧರ್ಮಪ್ರಾಂತ್ಯದ ಅತೀ ಪ್ರಾಚೀನ ಚರ್ಚ್ ಎಂದು ಪರಿಗಣಿಸಲ್ಪಡುವ ದಿ ಮೋಸ್ಟ್ ಹೋಲಿ ಸೇವ್ಹಿಯರ್ ಚರ್ಚ್ ಅಗ್ರಾರ್ ಪ್ರಖ್ಯಾತ ಧಾರ್ಮಿಕ ಶ್ರದ್ಧಾಕೇಂದ್ರವಾಗಿದೆ.
ಇಲ್ಲಿನ ರೋಮನ್ ಶೈಲಿಯ ಕಲಾತ್ಮಕ ಚಿತ್ರಗಳು ಹಾಗೂ ಕಟ್ಟಡ ಶೈಲಿಯು ಆಕರ್ಷಕವಾಗಿದೆ. ಇದು ಶೈಕ್ಷಣಿಕ ಕೇಂದ್ರವೂ ಆಗಿದೆ. ಇಲ್ಲಿ ಆಚರಿಸುವ ಹಬ್ಬವು ಧಾರ್ಮಿಕವಾಗಿ ಮಹತ್ವವನ್ನು ಹೊಂದಿರುತ್ತದೆ.
26. ಶ್ರೀ ಕ್ಷೇತ್ರ ಧರ್ಮಸ್ಥಳ
ದೂರ: ಮಂಗಳೂರಿನಿಂದ ೭೩ ಕಿ.ಮೀ
ಬೆಳ್ತಂಗಡಿಯಿಂದ : ೧೪ ಕಿ.ಮೀ.
ಶೈವ, ವೈಷ್ಣವ ಮತ್ತು ಜೈನ ಧರ್ಮಗಳ ಅಪೂರ್ವ ಸಹಬಾಳ್ವೆಯ ಶ್ರೀ ಕ್ಷೇತ್ರ ಧರ್ಮಸ್ಥಳ ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳ. ನ್ಯಾಯದಾನ, ಅನ್ನದಾನ, ಅಭಯದಾನ ಇಲ್ಲಿಯ ವಿಶೇಷ. ಧರ್ಮ, ಶಿಕ್ಷಣ, ಸಾಹಿತ್ಯ, ಕಲೆಗಳಲ್ಲಿ ಮುಂಚೂಣಿಯಲ್ಲಿರುವ ಈ ಕ್ಷೇತ್ರದ ಆರಾಧ್ಯ ದೇವರು ಮಂಜುನಾಥ ಸ್ವಾಮಿ, ಅರ್ಚಕರು ವೈಷ್ಣವರು, ಉಸ್ತುವಾರಿ ಹೊತ್ತಿರುವ ಹೆಗ್ಗಡೆಯವರು ಜೈನರು.
ಇತಿಹಾಸಕ್ಕೆ ಸಂಬಂಧಿಸಿದ ಅಪರೂಪದ ದಾಖಲೆಗಳಿರುವ ಮಂಜೂಷಾ ವಸ್ತು ಸಂಗ್ರಹಾಲಯ, ಕಾರುಗಳ ಅಪೂರ್ವ ಸಂಗ್ರಹವಿರುವ ಮ್ಯೂಸಿಯಂ ಇಲ್ಲಿದೆ.
ಬಾಹುಬಲಿ ಬೆಟ್ಟದಲ್ಲಿರುವ ಸ್ನಿಗ್ಧ ಸೌಂದರ್ಯ ಬಾಹುಬಲಿ ವಿಗ್ರಹ ದಿವ್ಯಾನುಭೂತಿಯನ್ನು ನೀಡುತ್ತದೆ.
27. ವೇಣೂರು ಗೊಮಟೇಶ್ವರ
ದೂರ: ಮಂಗಳೂರಿನಿಂದ : ೬೦ ಕಿ.ಮೀ.
ಬೆಳ್ತಂಗಡಿಯಿಂದ : ೧೫ ಕಿ.ಮೀ.
ಬೆಳ್ತಂಗಡಿ ತಾಲೂಕಿನ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಜೈನ ಧರ್ಮದ ಮುಖ್ಯ ಸ್ಥಳ ವೇಣೂರು ಕೂಡ ಒಂದು. ಇಲ್ಲಿಯ ಒಂದೇ ಕಲ್ಲಿನಲ್ಲಿ ಕೆತ್ತಿರುವ ಭಗವಾನ್ ಬಾಹುಬಲಿಯ ವಿಗ್ರಹವು ನೋಡಲು ನಯನ ಮನೋಹರ.
38 ಅಡಿ ಎತ್ತರದ ಈ ಗೋಮಟ ವಿಗ್ರಹವನ್ನು ಕ್ರಿ.ಶ. 1604 ರಲ್ಲಿ ಅರಸ ವೀರ ತಿಮ್ಮಣ್ಣ ಅಜಿಲರು ಕೆತ್ತಿಸಿದರು. ಇಲ್ಲಿರುವ ಜೈನ ಬಸದಿಗಳು ಇತಿಹಾಸ ಪ್ರಸಿದ್ಧವಾಗಿವೆ.
28. ಕಾಜೂರು ದರ್ಗಾ
ದೂರ: ಮಂಗಳೂರಿನಿಂದ : ೮೪ ಕಿ.ಮೀ.
ಬೆಳ್ತಂಗಡಿಯಿಂದ : ೨೪ ಕಿ.ಮೀ
ಬೆಳ್ತಂಗಡಿಯಿಂದ ಸುಮಾರು 24 ಕಿ.ಮೀ ದೂರದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೇತ್ರಾವತಿ ನದಿಯ ಬದಿಯಲ್ಲಿ ನೆಲೆಸಿರುವ ಪುಟ್ಟ ಹಳ್ಳಿ ಕಾಜೂರು.
ಇಲ್ಲಿರುವ ದರ್ಗಾಶರೀಫ್ ಇಡೀ ದಕ್ಷಿಣ ಭಾರತದಲ್ಲಿಯೇ ಪ್ರಖ್ಯಾತಿ ಪಡೆದಿದೆ.
ಪ್ರತೀ ವರ್ಷ ಇಲ್ಲಿ ನಡೆಯುವ ಉರುಸು ಸಂದರ್ಭದಲ್ಲಿ ನಾಡಿನಾದ್ಯಂತದಿಂದ ಲಕ್ಷಾಂತರ ಮಂದಿ ಸರ್ವಧರ್ಮೀಯರು ಪಾಲ್ಗೊಳ್ಳುತ್ತಾರೆ.
ಮುಸ್ಲಿಂ ಬಾಂಧವರಿಗೆ ಇದೊಂದು ಪವಿತ್ರ ಶ್ರದ್ಧಾಕೇಂದ್ರವಾಗಿದೆ. ಹಾಗೂ ಸರ್ವ ಧರ್ಮ ಭಾವೈಕ್ಯತೆಗೆ ಹೆಸರಾದ ಪುಣ್ಯಕ್ಷೇತ್ರವಾಗಿದೆ.
29. ಶ್ರೀರಾಮ ಕ್ಷೇತ್ರ ಕನ್ಯಾಡಿ
ದೂರ: ಮಂಗಳೂರಿನಿಂದ : ೭೧ ಕಿ.ಮೀ.
ಬೆಳ್ತಂಗಡಿಯಿಂದ : ೧೩ ಕಿ.ಮೀ
ಉಜಿರೆ-ಧರ್ಮಸ್ಥಳದ ರಸ್ತೆಯಲ್ಲಿ ಬೆಳ್ತಂಗಡಿಯಿಂದ ಸುಮಾರು 13 ಕಿ.ಮೀ. ದೂರದಲ್ಲಿರುವ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರ ಮಂದಿರವು ತಾಲೂಕಿನ ಪ್ರಮುಖ ಯಾತ್ರಾಸ್ಥಳಗಳಲ್ಲೊಂದು. ಈ ದೇವಸ್ಥಾನವು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಕನಸಿನ ಕೂಸು. ಏಕ ವ್ಯಕ್ತಿಯ ಸಾಧನೆ ಈ ದೇಗುಲದ ಹಿರಿಮೆ.
ರಾಜಸ್ಥಾನ, ತಮಿಳುನಾಡು, ಆಂಧ್ರ ಪ್ರದೇಶದ ಸುಂದರ ಶಿಲೆಗಳಿಂದ, ಉತ್ತರ ಭಾರತದ ದೇವಸ್ಥಾನಗಳ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಭವ್ಯ ದೇವಾಲಯದಲ್ಲಿರುವ ಎಲ್ಲ ದೇವರ ಮೂರ್ತಿಗಳನ್ನು ಅಮೃತಶಿಲೆಯಿಂದ ಕೆತ್ತಲಾಗಿದೆ.
ಇಲ್ಲಿಯ ಪ್ರಧಾನ ದೇವರು ಶ್ರೀರಾಮ. ಜೊತೆಗೆ ಸುಮಾರು 27 ದೇವರು ವಿಗ್ರಹಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.
30. ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ
ದೂರ: ಮಂಗಳೂರಿನಿಂದ : ೯೬ ಕಿ.ಮೀ.
ಬೆಳ್ತಂಗಡಿಯಿಂದ : ೩೫ ಕಿ.ಮೀ
ಬೆಳ್ತಂಗಡಿಯಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಸೌತಡ್ಕ ಶ್ರೀ ಮಹಾಗಣಪತಿ ಗೋವಳರ ದೇವರೆಂದೇ ಪ್ರಸಿದ್ಧ. ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದಲ್ಲಿ ಹಿಂದೆ ದನ ಮೇಯಿಸುವ ಗೋವಳರು ಸೌತೆಕಾಯಿಗಳನ್ನು ಮುಂದಿಟ್ಟು ಪೂಜಿಸುತ್ತಿದ್ದರಂತೆ. ಹಾಗಾಗಿ ಸೌತೆಗಳ ಅಡ್ಕದಲ್ಲಿ ಪೂಜಿಸಲ್ಪಟ್ಟಿದ್ದರಿಂದ ಇಲ್ಲಿಗೆ ಸೌತಡ್ಕ ಶ್ರೀ ಮಹಾಗಣಪತಿ ಎಂಬ ಹೆಸರು ಪ್ರಖ್ಯಾತವಾಗಿದೆ.
ಇಲ್ಲಿನ ವಿಶೇಷವೆಂದರೆ ಇಲ್ಲಿ ಗುಡಿ ಗೋಪುರಗಳಿಲ್ಲ, ತೀರ್ಥ ಮಂಟಪಗಳಿಲ್ಲ.
ಆಕಾಶವೇ ಛಾವಣಿಯಾಗಿ, ಬಯಲೇ ಆಲಯವಾಗಿರುವ ಈ ಕ್ಷೇತ್ರ ನಾಡಿನಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ.
31. ಶಿಶಿಲೇಶ್ವರ ದೇವಸ್ಥಾನ ಶಿಶಿಲ
ದೂರ: ಮಂಗಳೂರಿನಿಂದ : ೯೫ ಕಿ.ಮೀ.
ಬೆಳ್ತಂಗಡಿಯಿಂದ : ೩೫ ಕಿ.ಮೀ
ಶಿಶಿಲದ ಶ್ರೀ ಶಿಶಿಲೇಶ್ವರ ದೇವಸ್ಥಾನವು ಒಂದು ಪುರಾತನ ದೇವಾಲಯವಾಗಿದೆ. ಈ ದೇವಾಲಯದ ಮುಂದಿರುವ ಕಪಿಲ ನದಿಯಲ್ಲಿರುವ ಪೊರುವೊಲ್ ಜಾತಿಯ ಮೀನುಗಳನ್ನು ದೇವರ ಮೀನುಗಳು ಎನ್ನುತ್ತೇವೆ.
ಇಲ್ಲಿ ಇತ್ತೀಚೆಗೆ ನಿರ್ಮಿಸಿರುವ ತೂಗು ಸೇತುವೆ ಬಹಳ ಸುಂದರವಾಗಿದ್ದು, ವಿಶೇಷ ಅನುಭವ ನೀಡುತ್ತದೆ.
32. ಹೋಲಿ ರೆಡಿಮೇರ್ ಚರ್ಚ್, ಬೆಳ್ತಂಗಡಿ
ದೂರ: ಮಂಗಳೂರಿನಿಂದ : ೮೧ ಕಿ.ಮೀ.
ಬೆಳ್ತಂಗಡಿಯಿಂದ : ೧ ಕಿ.ಮೀ
ಬೆಳ್ತಂಗಡಿಯ ಹೋಲಿ ರೆಡಿಮೇರ್ ಚರ್ಚ್ ಕ್ರಿ.ಶ. 1885 ರಲ್ಲಿ ನಿರ್ಮಾಣಗೊಂಡಿದ್ದು, ಈ ತಾಲೂಕಿನ ಹಳೆಯ ಮತ್ತು ಪ್ರಥಮ ಚರ್ಚ್ ಆಗಿದೆ.
ರೆ.ಫಾ. ಪಾಸ್ಕಲ್ ಮಸ್ಕರೇನಸ್ರವರು ಈ ಚರ್ಚನ್ನು ಸ್ಥಾಪಿಸಿದರು. ಹಿಂದೆ ಈ ಚರ್ಚ್ಗೆ 30 ಕಿ.ಮೀ ದೂರದಿಂದ ಕ್ರೈಸ್ತ ಬಾಂಧವರು ನಡೆದುಕೊಂಡು ಬರುತ್ತಿದ್ದು, ಹಿಂದಿನ ರಾತ್ರಿ ಇಲ್ಲಿ ತಂಗಿದ್ದು, ಜೊತೆಗೆ ತಂದಿದ್ದ ಅಕ್ಕಿಯನ್ನು ಬೇಯಿಸಿ ಊಟ ಮುಗಿಸಿ ಮರುದಿನ ಬೆಳಗ್ಗಿನ ಪ್ರಾರ್ಥನೆಯಲ್ಲಿ ಭಾಗಿಯಾಗುತ್ತಿದ್ದರಂತೆ. ಕ್ರೈಸ್ತರ ಚರ್ಚುಗಳಲ್ಲಿ ಇದು ವಿಶೇಷವಾದುದಾಗಿದೆ.
Leave A Comment