ಇತಿಹಾಸ:

ದಕ್ಷಿಣ ಕನ್ನಡ ಜಿಲ್ಲೆಯ ತನ್ನದೇ ಆದ ಸುಧೀರ್ಘ, ಶ್ರೀಮಂತ ಪರಂಪರೆಯನ್ನು ಹೊಂದಿದೆ. ಪರಶುರಾಮನು ತನ್ನ ಕೊಡಲಿಯನ್ನು ಎಸೆದು ಸೃಷ್ಟಿಸಿದನು ಎಂಬ ಐತಿಹ್ಯ ಇರುವುದರಿಂದ ಈ ಜಿಲ್ಲೆಯನ್ನು ಪರಶುರಾಮ ಕ್ಷೇತ್ರ ಎಂದೂ ಕರೆಯುತ್ತಾರೆ. ತುಳು ಭಾಷಿಗರು ಅಧಿಕವಿರುವುದರಿಂದ ತುಳುನಾಡು ಎಂದೂ ಕರೆಯುತ್ತಾರೆ. ಈ ಜಿಲ್ಲೆಯ ೮ನೇ ಶತಮಾನದಿಂದ ೧೪ನೇ ಶತಮಾನದವರೆಗೆ ಅಳುಪರು, ತದನಂತರ ವಿಜಯನಗರ ಮತ್ತು ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಈ ಜಿಲ್ಲೆಯು ತನ್ನ ರಮಣೀಯ ಕಡಲ ಕಿನಾರೆಗಳು, ಪುಣ್ಯಕ್ಷೇತ್ರಗಳಿಂದ ಹಾಗೂ ಶೈಕ್ಷಣಿಕ ಕೇಂದ್ರಗಳಿಂದಾಗಿ ಶಿಕ್ಷಣಾಸಕ್ತರು ಹಾಗೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಸ್ಥಳ ನಿರ್ದೇಶಕಗಳು ಮತ್ತು ಗಡಿಗಳು:

ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕ ರಾಜ್ಯದ ಪಶ್ಚಿಮ ಭಾಗದಲ್ಲಿದ್ದು, ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ಪೂರ್ವದಲ್ಲಿ ಹಾಸನ ಜಿಲ್ಲೆ, ಉತ್ತರದಲ್ಲಿ ಉಡುಪಿ ಜಿಲ್ಲೆ, ಈಶಾನ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ, ಆಗ್ನೇಯದಲ್ಲಿ ಕೊಡಗು ಜಿಲ್ಲೆ ಮತ್ತು ದಕ್ಷಿಣದಲ್ಲಿ ಕೇರಳ ರಾಜ್ಯದಿಂದ ಆವರಿಸಿದೆ. ಕರಾವಳಿ ನಗರವಾದ ಮಂಗಳೂರು ಜಿಲ್ಲಾ ಕೇಂದ್ರವಾಗಿದೆ. ಮಂಗಳೂರು, ಮೂಡಬಿದರೆ, ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿಗಳೆಂಬ ೬ ಕಂದಾಯ ತಾಲೂಕುಗಳು ಇವೆ.

ವಿಸ್ತೀರ್ಣ ಮತ್ತು ಜನಸಂಖ್ಯೆ

ದಕ್ಷಿಣ ಕನ್ನಡ ಜಿಲ್ಲೆಯ ವಿಸ್ತೀರ್ಣವು ೪೮೬೬ ಚದರ ಕಿಲೋಮೀಟರ್ ಆಗಿದೆ. ೨೦೦೧ರ ಜನಗಣಿಯಂತೆ ಜಿಲ್ಲೆಯ ಜನಸಂಖ್ಯೆಯ ೧,೮೯೭,೭೩೦ ಆಗಿದೆ. ಇದರಲ್ಲಿ ೩೮.೪%

ಸಂಸ್ಕೃತಿ

ತುಳು, ಕನ್ನಡ, ಕೊಂಕಣಿ, ಮಲಯಾಳಂ, ಹೀಗೆ ವಿಭಿನ್ನ ಭಾಷಿಗರು ಇಲ್ಲಿದ್ದಾರೆ. ಆದರೆ ಈ ಎಲ್ಲಾ ಭಾಷಿಗರ ಆಚಾರ ವಿಚಾರ ಮತ್ತು ಜೀವನ ಶೈಲಿಯಲ್ಲಿ ಸಾಮ್ಯತೆಯಿದೆ. ಹಿಂದು, ಮುಸ್ಲಿಂ‌, ಕ್ರೈಸ್ತ ಧರ್ಮೀಯರು ಸಹಬಾಳ್ವೆಯಿಂದ ಬದುಕುತ್ತಿರುವ ಇಲ್ಲಿ ಭೂತಕೋಲ, ಕಂಬಳ, ಯಕ್ಷಗಾನ ಇತ್ಯಾದಿ ಜಾನಪದ ಆಚರಣೆಗಳು ಇವೆ.

ದಕ್ಷಿಣ ಕನ್ನಡ ಜಿಲ್ಲೆಯು ಬ್ಯಾಂಕ್‌ಗಳ ತವರು ಜಿಲ್ಲೆಯಾಗಿದೆ. ಮೀನುಗಾರಿಕೆ, ಕೃಷಿ, ಹೈನುಗಾರಿಕೆ, ಹೋಟೆಲ್‌ ಇತ್ಯಾದಿ ಕಸುಬುಗಳನ್ನು ಮಾಡುತ್ತಾರೆ. ಜಿಲ್ಲಾಕೇಂದ್ರ ಮಂಗಳೂರು ರಾಜ್ಯದ ೩ನೇ ದೊಡ್ಡ ನಗರವಾಗಿ ಬೆಳೆಯುತ್ತಿದೆ. ನವ ಮಂಗಳೂರು ಬಂದರು, ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದಾಗಿ ಮಂಗಳೂರು ದೇಶದ ಪ್ರಮುಖ ವಾಣಿಜ್ಯ ಕೊಂಡಿಯಾಗಿದೆ.

ಉತ್ತಮ ಗುಣಮಟ್ಟದ ಶಿಕ್ಷಣ, ಆರೋಗ್ಯ ಮತ್ತು ಬ್ಯಾಂಕಿಂಗ್‌ ಸೇವೆಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರುವಾಸಿಯಾಗಿದೆ. ಸಾಕ್ಷರತೆಯಲ್ಲೂ ಶೇ ೯೨ ಕ್ಕಿಂತ ಹೆಚ್ಚು ಪ್ರಮಾಣ ಸಾಧನೆಯಾಗಿರುವ ಈ ಜಿಲ್ಲೆ ಮುಂದುವರಿದ ಜಿಲ್ಲೆಗಳಲ್ಲಿ ಒಂದಾಗಿದೆ.

ಶೈಕ್ಷಣಿಕ ಮಾಹಿತಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೭ ಶೈಕ್ಷಣಿಕ ವಲಯಗಳಿವೆ. ಅವುಗಳೆಂದರೆ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ನಗರ, ಮಂಗಳೂರು ತಾಲೂಕು, ಮೂಡಬಿದ್ರೆ, ಪುತ್ತೂರು ಮತ್ತು ಸುಳ್ಯ. ಶೈಕ್ಷಣಿಕವಾಗಿ ಮುಂದುವರಿದ ಜಿಲ್ಲೆಯಾಗಿರುವ ದಕ್ಷಿಣ ಕನ್ನಡ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ವೈದ್ಯಕೀಯ ಮಹಾವಿದ್ಯಾಲಯಗಳು ಹಾಗೂ ತಾಂತ್ರಿಕ ಮಹಾವಿದ್ಯಾಲಯಗಳನ್ನು ಹೊಂದಿದೆ. ಇವುಗಳಲ್ಲಿ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡುವ ಪ್ರಯತ್ನ ನಡೆಯುತ್ತಿದೆ.

 

. ಮಂಗಳಾದೇವಿ ದೇವಸ್ತಾನ

ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ: ೩ ಕಿ.ಮೀ

ಮಂಗಳೂರು ಸ್ಥಳೀಯ ದೇವತೆಯಾದ ಮಂಗಳಾದೇವಿಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.  ಮತ್ಸ್ಯೇಂದ್ರನಾಥನೆಂಬ ನಾಥ ಪಂಥದ ಮುಖ್ಯ ಪುರುಷ. ಪ್ರೇಮಲಾದೇವಿ ಎಂಬ ಕೇರಳದ ರಾಜಕುಮಾರಿ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು, ಮಂಗಳಾದೇವಿ ಎಂದು ಮರು ನಾಮಕರಣ ಮಾಡಿದನು. ಅವಳ ಹೆಸರಿನಲ್ಲಿ ಬೋಳಾರದಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿಸ್ತ ಶಕ ೯೬೮ರಲ್ಲಿ ಅಲೂಪ ದೊರೆ ಕುಂದವರ್ಮನಿಂದ ಜೀರ್ಣೋದ್ಧಾರಕ್ಕೆ ಒಳಪಟ್ಟಿತು. ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಮತ್ತು ಶ್ರೀ ಮಂಗಳಾದೇವಿ ದೇವಾಲಯಗಳು ಐತಿಹಾಸಿಕವಾಗಿ ಬಹಳ ಮಹತ್ವವನ್ನು ಪಡೆದಿದ್ದು, ಹಲವು ಸಾಮ್ಯತೆಗಳನ್ನು ಹೊಂದಿವೆ.

ಈ ದೇವಾಲಯವು ಭಾರತೀಯ ಪ್ರಾಚ್ಯ ವಸ್ತು ಇಲಾಖೆಯಿಂದ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲ್ಪಟ್ಟಿದೆ. ನವರಾತ್ರಿಯ ಸಂದರ್ಭದಲ್ಲಿ ವಿಶೇಷ ಉತ್ಸವಗಳ ಜೊತೆ ಮಹಾರಥೋತ್ಸವ ನಡೆಯುತ್ತದೆ. ವಿಶೇಷ ವಶ್ತು ಶಿಲ್ಪದಿಂದ ರಚಿತವಾಗಿರುವ ಈ ದೇವಾಲಯವನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಸಾವಿರಾರು ಭಕ್ತಾಭಿಮಾನಿಗಳು ಇಲ್ಲಿ ಆಗಮಿಸುತ್ತಾರೆ.

 

. ಸುಲ್ತಾನ್‌ ಬತ್ತೇರಿ ಕೋಟೆ

ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ: ೬  ಕಿ.ಮೀ

ಬ್ರಿಟಿಷ್‌ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಹೋರಾಟಗಾರ ಟಿಪ್ಪುಸುಲ್ತಾನನು ೧೭೮೪ ರಲ್ಲಿ ಇದನ್ನು ನಿರ್ಮಿಸಿದನು. ಐತಿಹಾಸಿಕವಾಗಿ ಮಹತ್ವವಾಗಿರುವ ಈ ರಾಷ್ಟ್ರೀಯ ಸ್ಮಾರಕವು ಇತ್ತೀಚಿಗೆ ನವೀಕರಣಗೊಂಡಿದ್ದು, ಸ್ವಾತಂತ್ರ‍್ಯ ಹೋರಾಟದ ದಿವ್ಯಕುರುಹಾಗಿ ಮೂಡಿಬಂದಿದೆ.

ಈ ಕೋಟೆಯನ್ನು ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದೆ. ಇದು ಒಂದು ಚಿಕ್ಕ ಕೋಟೆಯಾಗಿದ್ದರೂ ಕೋಟೆಯ ಸುತ್ತಮುತ್ತ ಫಿರಂಗಿಗಳನ್ನು ಸ್ಥಾಪಿಸಲಾಗಿದೆ. ಮತ್ತು ವೈರಿಗಳ ಚಲನವಲನಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ರಚಿತವಾಗಿದೆ.

ಈ ಕೋಟೆಯ ಮೇಲೆ ನಿಂತು ಪಶ್ಚಿಮ ಅರಬ್ಬಿ ಸಮುದ್ರದ ದಿಗಂತದಲ್ಲಿ ಸೂರ್ಯಾಸ್ತಮಾನದ ಸೊಬಗನ್ನು ನೋಡಬಹುದು. ಸಾವಿರಾರು ಪ್ರವಾಸಿಗರು, ಈ ಸೌಂದರ್ಯ ವೀಕ್ಷಣೆಗೆ ಇಲ್ಲಿ ಭೇಟಿ ಕೊಡುತ್ತಾರೆ.

 

. ಮಂಗಳೂರು ಕೆಮಿಕಲ್ಸ್‌ ಅಂಡ್‌ ಫರ್ಟಿಲೈಸರ್ಸ್‌ ಲಿಮಿಟೆಡ್‌

ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ: ೮ ಕಿ.ಮೀ

ರಾಷ್ಟ್ರದ ಪ್ರತಿಷ್ಠಿತ ರಾಸಾಯನಿಕ ರಸಗೊಬ್ಬರ ಕಾರ್ಖಾನೆಯಾಗಿದ್ದು, ಇಲ್ಲಿ ಯೂರಿಯಾ ಮತ್ತು ಡಿ.ಎ.ಪಿ ರಸಗೊಬ್ಬರಗಳನ್ನು ಉತ್ಪಾದಿಸುತ್ತಾರೆ. ಜಪಾನ್‌ ದೇಶದ ಅತ್ಯಾಧುನಿಕ ತಾಂತ್ರಿಕತೆಯನ್ನು ಬಳಸಿ ಉತ್ಪನ್ನಗಳನ್ನು ತಯಾರಿಸುವ ವಿವಿಧ ಘಟಕಗಳು ಇಲ್ಲಿ ಇವೆ. ಇದು ಖಾಸಗಿ ಒಡೆತನಕ್ಕೆ ಒಳಪಟ್ಟಿದ್ದು, ಭಾರತದ ಪ್ರಸಿದ್ಧ ಕೈಗಾರಿಕಾ ಉದ್ಯಮಿ ಶ್ರೀ ವಿಜಯ ಮಲ್ಯರವರ ಯು.ಬಿ. ಗುಂಪಿಗೆ ಸೇರಿದೆ. ಇಲ್ಲಿ ನ್ಯಾಪ್ತ ಎಂಬ ಪೆಟ್ರೋ ರಾಸಾಯನಿಕವನ್ನು ಬಳಸಿ, ಉಷ್ಣ ತುಂಡರಿಕೆ ವಿಧಾನದಿಂದ ಯೂರಿಯಾ ಉತ್ಪಾದನೆಗೆ ಬೇಕಾದ ಅಮೋನಿಯಾ, ಇಂಗಾಲದ ಡೈ ಆಕ್ಸೈಡ್‌ಗಳನ್ನು ಮುಖ್ಯವಾಗಿ ಮೊದಲ ಹಂತದಲ್ಲಿ ಉತ್ಪಾದಿಸುತ್ತಾರೆ.

ಸಾರಜನಕವು ಒಂದು ಉಪ ಉತ್ಪನ್ನವಾಗಿದ್ದು, ಪರಿಸರದ ಸಣ್ಣ ಕೈಗಾರಿಕೆಗಳಲ್ಲಿ ಕಚ್ಚಾ ವಸ್ತುವಾಗಿ ಮತ್ತು ಶೈಥಲೀಕರಣವಾಗಿ ಬಳಸಲ್ಪಡುತ್ತದೆ.

 

. ಮಂಗಳೂರಿನ ಇನ್ಫೋಸಿಸ್‌ ಕಾರ್ಯಾಲಯ

ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ: ೫ ಕಿ.ಮೀ

ಎನ್‌.ಆರ್. ನಾರಾಯಣಮೂರ್ತಿಯವರಿಂದ ಸ್ಥಾಪಿತವಾದ ಅಂತರ್ ರಾಷ್ಟ್ರೀಯ ಖ್ಯಾತಿಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌. ಪ್ರಪಂಚದ ಏಳು ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಇದು ಒಂದಾಗಿದೆ. ಇದರ ಮಂಗಳೂರು ಘಟಕವು ಕೊಟ್ಟಾರದಲ್ಲಿದೆ. ಇದರ ವಿಸ್ತರಿತ ಘಟಕವು ಮಂಗಳೂರಿನ ಹೊರವಲಯದ ಮುಡಿಪುವಿನಲ್ಲಿದೆ. ಈ ಘಟಕಗಳಲ್ಲಿ ಆಯ್ದ ಸಾಫ್ಟ್‌ವೇರ್‌ಗಳನ್ನು ರೂಪಿಸಲಾಗುತ್ತಿದೆ. ಈ ಸಾಫ್ಟ್‌ವೇರ‍್ಗಳನ್ನು ವಿದೇಶೀ ಕಂಪನಿಗಳ ಬೇಡಿಕೆಗಳಿಗನುಗುಣವಾಗಿ ರೂಪಿಸಲಾಗುತ್ತಿದೆ.

ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಕಟ್ಟಡವಾಗಿದ್ದರೂ, ಆಧುನಿಕ ವಾಸ್ತುಶಿಲ್ಪದ ಉತ್ತಮ ಉದಾಹರಣೆಯಾಗಿ ಆಕರ್ಷಣೀಯವಾಗಿ ನಗರದಲ್ಲಿ ಕಂಗೊಳಿಸುತ್ತಿದೆ.

 

. ಸಂತ ಅಲೋಶಿಯಸ್‌ ಚ್ಯಾಪಲ್‌ ಮತ್ತು ಕಾಲೇಜು

ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ: ೨ ಕಿ.ಮೀ

ಸಂತ ಅಲೋಸಿಯಸ್‌ ಚ್ಯಾಪಲ್‌ ಮಂಗಳೂರಿನ ಹಳೆಯ ಮತ್ತು ಸುಂದರ ಚರ್ಚಗಳಲ್ಲಿ ಒಂದು. ಚರ್ಚ್‌ನ ಒಳಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣ ಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚ್‌ನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇಟಲಿಯ ಕಲಾವಿದ ಅಂಟನಿ ಮೊಸೆನಿ ಸೃಷ್ಟಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. ಇದು ಮಂಗಳೂರಿನಲ್ಲಿ ಅತಿ ದೊಡ್ಡದಾದ ಚರ್ಚ್‌ ಆಗಿದೆ.

ಸಂಸ್ಥೆಯ ಪಾಲಕರಾದ ಸಂತ ಅಲೋಸಿಯಸ್‌ ಗೊನ್ಜಾಗರವರು ಸಮಾಜ ಸೇವೆಯಲ್ಲಿ ತನ್ನ ಜೀವನವನ್ನು ಕಳೆದು ಬಡ ಜನರ ಹಿತಕ್ಕಾಗಿ ತನ್ನ ದೇಹವನ್ನು ಅರ್ಪಿಸಿದ ಮಹತ್ವದ ಘಟನೆಗಳನ್ನು ಬಿಂಬಿಸುವ ಕಲಾ ಚಿತ್ರಗಳು ಈ ಚ್ಯಾಪಲ್‌ನಲ್ಲಿ ಇದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತವೆ.

 

. ಕದ್ರಿ ದೇವಸ್ಥಾನ

ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ: ೨ ಕಿ.ಮೀ

ಏಳು ಕೆರೆಗಳ ದೇವಾಲಯ ಎಂದು ಪ್ರಸಿದ್ಧಿ ಪಡೆದಿರುವ, ನಗರದ ಮಧ್ಯ ಭಾಗದಿಂದ ಸುಮಾರು ೨ ಕಿ.ಮೀ ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವು ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ “ಪಾಂಡವರ ಗುಹೆ” ಎಂದು ಕರೆಯಲ್ಪಡುವ ಗುಹೆಯಿದೆ. ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯು ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ.

 

. ಗೋಕರ್ಣನಾಥೇಶ್ವರ ದೇವಾಲಯ

ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ: ೨ ಕಿ.ಮೀ

ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ ದೂರದಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ಮೂಲ ದೇವಾಲಯವು ಕ್ರಾಂತಿಕಾರ, ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಪ್ರತಿಷ್ಠಾಪನೆಗೊಂಡಿದೆ.

ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನವ ನಿರ್ಮಾಣಗೊಂಡಿರುವ ಈ ದೇವಾಲಯವು ವಿಶಿಷ್ಠ ರೀತಿಯ ಆಧುನಿಕ ವಾಸ್ತುಶಿಲ್ಪದಿಂದ ಕಣ್ಮನ ಸೆಳೆಯುತ್ತದೆ. ಈ ದೇವಸ್ಥಾನದ ಸುತ್ತ ಇರುವ ಎತ್ತರದ ಕಾರಂಜಿ, ಗಾಜಿನ ಸಭಾಂಗಣ, ಬೃಹದಾಕಾರದ ಹನುಮಾನ್‌ ವಿಗ್ರಹಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಮಂಗಳೂರು ದಸರಾ ಎಂದು ವಿಶ್ವ ವಿಖ್ಯಾತಿ ಪಡೆದಿರುವ ನವರಾತ್ರಿ ಉತ್ಸವದಲ್ಲಿ ನವದುರ್ಗೆಯರನ್ನು ಆರಾಧಿಸುವ ವಿಶಿಷ್ಟ ಉತ್ಸವ ಕಾರ್ಯಕ್ರಮಗಳು, ದೇಶ ವಿದೇಶಗಳಿಂದ ಭಕ್ತಾಭಿಮಾನಿಗಳ ಕಣ್ಮನ ಪುಳಕಗೊಳ್ಳುವಂತೆ ಮಾಡುತ್ತವೆ.

 

. ಶ್ರೀಮಂತಿ ಭಾಯಿ ವಸ್ತು ಸಂಗ್ರಹಾಲಯ ಬಿಜೈ

ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ: ೩ ಕಿ.ಮೀ

ಈ ವಸ್ತು ಸಂಗ್ರಹಾಲಯವು ದಿ. ಕರ್ನಲ್‌ ವಿ.ಆರ್.ಮೀರ್ ಜಾಕರ್ ಅವರ ತಾಯಿ ಶ್ರೀಮಂತಿ ಭಾಯಿಯವರ ನೆನಪಿನಲ್ಲಿ ನೀಡಲಾಗಿದೆ. ಈ ಪ್ರಾಚ್ಯವಸ್ತು ಸಂಗ್ರಹಾಲಯವು, ಅಪರೂಪದ ವಿಭಿನ್ನವಾದ ನೋಡಲೇಬೇಕಾದ ಹಲವು ಐತಿಹಾಸಿಕ, ಪಾರಂಪರಿಕ ಮತ್ತು ಪ್ರಾಚೀನ ವಸ್ತುಗಳನ್ನು ಒಳಗೊಂಡಿದೆ.

ಇತಿಹಾಸವನ್ನು ಕಣ್ಮುಂದೆ ತೆರೆದಿಡುವ ಮಹತ್ವದ ಸಂಗ್ರಹ ಯೋಗ್ಯವಾದ ಅನೇಕ ವಸ್ತುಗಳು ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಮಾನವ ಇತಿಹಾಸವನ್ನು ಬಿಂಬಿಸುತ್ತವೆ.

ನಗರ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಹಳ ಹತ್ತಿರದಲ್ಲಿರುವ ಈ ವಸ್ತು ಸಂಗ್ರಹಾಲಯವು ಸೋಮವಾರ ಮತ್ತು ಸಾರ್ವಜನಿಕ ರಜಾ ದಿನಗಳನ್ನು ಹೊರತು ಪಡಿಸಿ, ಬೆಳಿಗ್ಗೆ ೯.೦೦ ಗಂಟೆಯಿಂದ ಸಂಜೆ ೫.೦೦ ಗಂಟೆಯವರೆಗೆ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ.

 

. ಕರಾವಳಿ ತೀರಗಳು

ತಾಲೂಕು ಕೇಂದ್ರದಿಂದ ಇರುವ ದೂರ:
ತಣ್ಣೀರು ಬಾವಿ : ೧೦ ಕಿ.ಮೀ
ಸಮರ್ ಸ್ಯಾಂಡ್ ಉಳ್ಳಾಲ : ೧೪  ಕಿ.ಮೀ
ಪಣಂಬೂರು : ೧೨  ಕಿ.ಮೀ
ಸೋಮೇಶ್ವರ ಉಳ್ಳಾಲ : ೧೮  ಕಿ.ಮೀ
ಸುರತ್ಕಲ್ : ೨೦  ಕಿ.ಮೀ
ಸಸಿಹಿತ್ಲು : ೨೫  ಕಿ.ಮೀ

ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್‌ಗಳಿವೆ. ಇವುಗಳಲ್ಲಿ ಪ್ರಮುಖವಾದವು ಸಸಿಹಿತ್ಲು, ಪಣಂಬೂರು, ತಣ್ಣೀರುಬಾವಿ, ಸುರತ್ಕಲ್‌, ಸೋಮೇಶ್ವರ ಹಾಗೂ ಸಮ್ಮರ್‌ಸ್ಯಾಂಡ್‌ ಬೀಚ್‌ಗಳು.

ಇಲ್ಲಿನ ವೃಕ್ಷ ಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿವೆ. ಭಾರತದ ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ.

 

೧೦. ಸುರತ್ಕಲ್‌ ದೀಪಸ್ಥಂಭ

ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ: ೧೮ ಕಿ.ಮೀ

ರಾಷ್ಟ್ರೀಯ ಹೆದ್ದಾರಿ ೧೭ ರಲ್ಲಿ ತಾಲೂಕು ಕೆಂದ್ರದಿಂದ ೧೮ ಕಿ.ಮೀ ದೂರದಲ್ಲಿ ಪಡುವಣ ಕಡಲ ತೀರದಲ್ಲಿ ಶ್ರೀ ಸದಾಶಿವ ದೇವಸ್ಥಾನದ ಹತ್ತಿರ ಇರುವ ಈ ದೀಪಸ್ಥಂಭದ ತಾಂತ್ರಿಕ ವಿನ್ಯಾಸವು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ದೇಶೀಯವಾಗಿ ವಿನ್ಯಾಸಗೊಂಡ ಅತ್ಯಾಧುನಿಕ ತಾಂತ್ರಿಕತೆಯ ಮಹತ್ವದ ದೀಪಸ್ತಂಭಗಳಲ್ಲಿ ಇದು ಒಂದಾಗಿದೆ. ಸಾವಿರ ನ್ಯೂಟಿಕಲ್‌ ಮೈಲುಗಳ ದೂರದಲ್ಲಿರುವ ಹಡಗುಗಳಿಗೆ ದಾರಿ ದೀಪವಾಗಿರುವ ಇದು ಒಂದು ಉತ್ತಮ ಪ್ರೇಕ್ಷಣೀಯ ಸ್ಥಳ.

 

೧೧. ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ಟೆಕ್ನೋಲಜಿ

ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ: ೨೦ ಕಿ.ಮೀ

ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿ ಮಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಮಟ್ಟದ ತಾಂತ್ರಿಕ ಶಿಕ್ಷಣ ಸಂಸ್ಥೆ ಇದಾಗಿದ್ದು ದೇಶವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಉನ್ನತ ಮಟ್ಟದ ಪ್ರಯೋಗಾಲಯಗಳಲ್ಲಿ ಸಂಶೋಧನಾತ್ಮಕವಾದ ಶಿಕ್ಷಣವನ್ನು ಪಡೆಯಸುತ್ತಿದ್ದಾರೆ.

ಬಹು ಅಮೂಲ್ಯವಾದ, ಮಹತ್ವದ ಮತ್ತು ಅಪರೂಪದ ವಿದೇಶಿ ತಂತ್ರಜ್ಞಾನದಿಂದ ತಯಾರಿಸಲ್ಪಟ್ಟ ಹಲವು ಉಪಕರಣಗಳ ಸಹಾಯದಿಂದ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನದ ಜೊತೆಗೆ ಯೋಜನಾಧಾರಿತ ಕಲಿಕೆಯನ್ನು ಹೊಂದುತ್ತಾರೆ. ದೇಶ ವಿದೇಶಗಳಲ್ಲಿ ಸಂಶೋಧನಾ ರಂಗದಲ್ಲಿ ತನ್ನದೇ ಆದ ಛಾಪನ್ನು ಹೊಂದಿರುವ ಈ ಸಂಸ್ಥೆ, ಹಲವು ವಿದ್ಯಾರ್ಥಿಗಳನ್ನು ವೈಜ್ಞಾನಿಕ ರಂಗದಲ್ಲಿ ದೇಶ ಸೇವೆಗೆ ನೀಡಿದೆ.

 

೧೨. ಉಳ್ಳಾಲ

ಶ್ರೀ ಸೋಮನಾಥ ದೇವಾಲಯ

ಪ್ರಥಮ ಸ್ವಾತಂತ್ರ‍್ಯ ಹೋರಾಟಗಾರ್ತಿ ರಾಣಿ ಅಬ್ಬಕದೇವಿಯ ಅಡಂಬೊಲ ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಸೋಮೇಶ್ವರ ಎಂದು ಇಲ್ಲಿಗೆ ಹೆಸರು ಬಂದಿರುವುದು ಇಲ್ಲಿರುವ ಸೋಮನಾಥ ದೇವಸ್ಥಾನದಿಂದ. ಈ ದೇವಸ್ಥಾನದ ಆವರಣದಲ್ಲಿ ತುಳುನಾಡಿನ/ದಕ್ಷಿಣ ಕನ್ನಡ ಪ್ರದೇಶದ ಸೃಷ್ಟಿಕರ್ಥರೆಂದು ನಂಬಲಾಗುವ ಪರಶುರಾಮ ಮುನಿಯ ಮೂರ್ತಿಯಿದೆ. ಬೃಹತ್‌ ಬಂಡೆಗಳನ್ನು ಹೊಂದಿರುವ ಈ ಸಮುದ್ರ ತೀರ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರಿಗೆ ಪ್ರಿಯವಾದ ಜಾಗವೂ ಹೌದು. ಹಲವಾರು ಕನ್ನಡ ಚಿತ್ರಗಳ ಚಿತ್ರೀಕರಣ ಈ ಕಡಲ ಕಿನಾರೆಯಲ್ಲಿ ನಡೆದಿದೆ.

 

ಸೈಯದ್‌ ಮದನಿ ದರ್ಗ ಉಳ್ಳಾಲ

ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ: ೧೫ ಕಿ.ಮೀ

ಸುಮಾರು ೫೦ ವರ್ಷಗಳ ಇತಿಹಾಸವಿರುವ, ಈ ದರ್ಗದಲ್ಲಿ ನಡೆಯುವ ಉರುಸ್‌ ಎಂಬ ಧಾರ್ಮಿಕ ಕಾರ್ಯಕ್ರಮ ದೇಶ ವಿದೇಶದಲ್ಲಿ ಬಹಳ ಪ್ರಖ್ಯಾತವಾಗಿದೆ.