ಭಾರತದ ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದಂತೆ ಅಧ್ಯಯನಕ್ಕೋ ಪರಿಶೀಲನೆಗೋ ತೊಡಗುವವರಿಗೆ ಅನೇಕ ಎಡರು ತೊಡರುಗಳು ಅಡ್ಡವಾಗುತ್ತವೆ. ಇದಕ್ಕೆ ಕಾರಣ ಈ ದೇಶದಲ್ಲಿ ಕಾಲಕಾಲಕ್ಕೆ ಉಂಟಾದ ಧಾರ್ಮಿಕ ಮತ್ತು ಸಾಮಾಜಿಕ ವೈಪರೀತ್ಯಗಳು. ಹೀಗಾಗಿ ಯಾವುದೇ ವಿಚಾರದಲ್ಲಿ ಒಂದು ಖಚಿತ ನಿಲವಿಗೆ ತಲುಪುವುದು ಕಷ್ಟವಾಗಿ ಪರಿಣಮಿಸುತ್ತದೆ. ಈ ಬಗೆಗೆ ನಡೆದಿರುವ ಬಹುತೇಕ ಅಧ್ಯಯನ ಏಕಮುಖವಾದುದು ಮತ್ತು ಅದರಿಂದಾಗಿಯೇ ಏಕದೃಷ್ಟಿಯುಳ್ಳದ್ದೂ ಆಗಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರು ಸಹ ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಹಿನ್ನಲೆಯಲ್ಲಿಯೇ ಯೋಚಿಸಿ ತಮ್ಮದನ್ನು ಉತ್ತಮವಾದುದೆಂದು ಎತ್ತಿ ತೋರಿಸುವ ಪ್ರಯತ್ನವನ್ನೇ ಮಾಡಿದಂತೆ ಕಂಡುಬರುತ್ತದೆ. ಉದ್ದಕ್ಕೂ ಈ ದೇಶದ ನಿಜವಾದ ಧರ್ಮ ಮತ್ತು ಸಾಮಾಜಿಕ ನೆಲೆಯ ಮೇಲೆ ತಮ್ಮ ತಮ್ಮ ಮೇಲ್ಮೆಯನ್ನು ಮೆರೆಯಲು ಧಾಳಿ ನಡೆಸಿರುವುದು ಮತ್ತು ಅದರ ಮೂಲಕ ತಮ್ಮ ಅಧಿಕಾರ ಮುದ್ರೆಯೊತ್ತುವಂಥ ಪ್ರಯತ್ನಗಳು ನಡೆದಿರುವುದೇ ಹೆಚ್ಚು. ಕಾಲಾನುಕ್ರಮದಲ್ಲಿ ಬೇರೆ ಬೇರೆಯ ಕಾರಣ ಮತ್ತು ಉದ್ದೇಶಗಳಿಗಾಗಿ ತಲೆ ಎತ್ತಿದ ನೂತನ ಧರ್ಮಗಳು ಮತ್ತು ಅವುಗಳ ಅನುಯಾಯಿಗಳು ಆ ಹಿಂದೆ ಇದ್ದಂಥ ಸ್ಥಿತಿಯನ್ನು ಹಿಯಾಳಿಸಿರುವುದು ಕಂಡುಬರುತ್ತದೆ. ವಾಸ್ತವವಾಗಿ ಅವುಗಳ ಅಂತಃಸ್ಥಿತಿಯನ್ನು ಅಧ್ಯಯನ ಮಾಡಿದಾಗ ಇವೆಲ್ಲಾ ಈ ಧಾರ್ಮಿಕ ಅನುಯಾಯಿಗಳು ಹೇಳುವಷ್ಟು ಪೊಳ್ಳಲ್ಲ ಎಂಬುದು ಗಮನಕ್ಕೆ ಬರುತ್ತದೆ. ಮೈಲಾರಲಿಂಗ ಸಹ ಇಂತಹ ಅನಾಧಾರಣೆಗೆ ಗುರಿಯಾದ ಒಂದು ಧಾರ್ಮಿಕ ವಿಷಯ ಎಂದೇ ನನಗನ್ನಿಸುತ್ತದೆ. ಆದುದರಿಂದ ಮೇಲೆ ಸೂಚಿಸಿರುವ ಹಿನ್ನಲೆಯಲ್ಲಿ “ದಕ್ಷಿಣ ಕರ್ನಾಟಕದಲ್ಲಿ ಮೈಲಾರಲಿಂಗ ಸಂಪ್ರದಾಯ”ವನ್ನು ನಾಲ್ಕು ಹಂತಗಳಲ್ಲಿ ಪರಿಶೀಲಿಸಲು ಯತ್ನಿಸಿದ್ದೇನೆ.

ಮೊದಲನೆಯ ಹಂತದಲ್ಲಿ ಆರ್ಯಪೂರ್ವ ಭಾರತೀಯ ಧರ್ಮ ಮತ್ತು ಸಮಾಜವನ್ನು ಕುರಿತಂತೆ ಇರುವ ಅಭಿಪ್ರಾಯಗಳನ್ನು ಪರಿಶೀಲಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತೀಯವಾದ ಯಾವುದೇ ಅಧ್ಯಯನವನ್ನು ಆರ್ಯರು ಈ ದೇಶಕ್ಕೆ ವಲಸೆ ಬಂದ ಕಾಲವನ್ನೇ ಮಿತಿಯಾಗಿಟ್ಟುಕೊಂಡು ಮಾಡಿರುವುದು. ಆರ್ಯರು ಬರುವುದಕ್ಕೆ ಸಾವಿರಾರು ವರ್ಷಗಳಷ್ಟು ಹಿಂದೆಯೇ ಇಲ್ಲಿನ ಧಾರ್ಮಿಕ ಸಾಮಾಜಿಕ ರೀತಿನೀತಿ ಏನು? ಎಂಬುದು ಅನೇಕ ವೇಳೆ ಪರಿಗಣನೆಗೆ ಬರದಲೇ ಹೋಗುವುದುಂಟು. ಆರ್ಯಧರ್ಮದ ಪ್ರಭಾವ ಮತ್ತು ಅದನ್ನು ಎತ್ತಿ ಹಿಡಿಯುವ ಭರತದಲ್ಲಿ ಈ ದೇಶದ ಮೂಲಧರ್ಮ ಮತ್ತು ಸಂಸ್ಕೃತಿಯನ್ನು ಕಡೆಗಣಿಸಲಾಗಿದೆ. ಆದುದರಿಂದ ಆರ್ಯಸಂಸ್ಕೃತಿಯೇ ಭಾರತೀಯ ಸಂಸ್ಕೃತಿ, ಆರ್ಯಧರ್ಮವೇ ಭಾರತೀಯ ಧರ್ಮವೆಂಬ ನಂಬಿಕೆ ದೇಶದ ಒಳಗೂ ಹೊರಗೂ ದಟ್ಟವಾಗಿ ಬೆಳೆದುಕೊಂಡಿದೆ. ವಾಸ್ತವವಾಗಿ ಆರ್ಯರು ತಮ್ಮೆಲ್ಲಾ ವ್ಯವಹಾರಗಳನ್ನು ಸಂಸ್ಕೃತದಲ್ಲಿ ನಡೆಸಿದ್ದರಿಂದ ಅವರ ಧರ್ಮ ಸಂಸ್ಕೃತಿಗಳು ಭಾರತದ ಮೂಲನಿವಾಸಿಗಳಿಗೆ ತಲುಪಲಿಲ್ಲ. ತಲುಪಿದ್ದು ಅಪಭ್ರಂಶವಾಗಿ ತಲುಪಿತು. ಈ ನಿಟ್ಟಿನಲ್ಲಿ ಆಳವಾದ ಮತ್ತು ವ್ಯಾಪಕವಾದ ಅಧ್ಯಯನ ಆಗಬೇಕಾಗಿದೆ.

ಎರಡನೆಯ ಹಂತದಲ್ಲಿ ಕರ್ನಾಟಕದಲ್ಲಿ ನಡೆದ ಶೈವ ಮತ್ತು ವೀರಶೈವ ಸಂಘರ್ಷವನ್ನು ಕುರಿತು ಚರ್ಚಿಸಲಾಗಿದೆ. ಶಿವ ಎಂದೊಡನೆಯೇ ಅದನ್ನು ವೀರಶೈವ ಎನ್ನುವ ಭಾವನೆ ಈ ಹೊತ್ತು ಬೆಳೆದುನಿಂತಿದೆ. “ಕರ್ಣದಲ್ಲಿ ಜನಿಸಿದವರುಂಟೆ” ಎಂದ ಬಸವಣ್ಣನ ಬಗೆಗೆ ಅನೇಕ ಕಟ್ಟುಕಥೆಗಳು ಹುಟ್ಟಿಕೊಂಡಿವೆ. ಶೈವಧರ್ಮದ ಮೂಲ ಕ್ರಿಸ್ತಪೂರ್ವ ಮತ್ತು ಆರ್ಯಪೂರ್ವಕ್ಕೆ ಹೋಗುತ್ತದೆ. ವೀರಶೈವ ಹನ್ನೆರಡನೆಯ ಶತಮಾನದಲ್ಲಿ ಶೈವದಿಂದಲೇ ಮೂಡಿದ ಟಿಸಿಲು. ಈ ಎರಡೂ ಶೈವಪಂಥಗಳು ಪರಸ್ಪರ ಘರ್ಷಣೆಗೆ ಇಳಿದ ಅನೇಕ ಸಂಗತಿಗಳಿವೆ. ಅಂಥವುಗಳ ಬಗೆಗೆ ಈ ಹಂತದಲ್ಲಿ ಚರ್ಚಿಸಲಾಗಿದೆ.

ಮೂರನೆಯ ಹಂತದಲ್ಲಿ ಮೈಲಾರಲಿಂಗನ ವ್ಯಾಪ್ತಿಯನ್ನು ಕುರಿತು ವಿವೇಚಿಸಲಾಗಿದೆ. ಈ ದೇವತೆ ಕರ್ನಾಟಕ್ಕೆ ಮಾತ್ರ ಸೀಮಿತವಾದುದೆಂಬ ಅಭಿಪ್ರಾಯ ಕೆಲವು ವಿದ್ವಾಂಸರಲ್ಲಿದೆ. ಇನ್ನು ಕೆಲವರು ಮೈಲಾರ ಚಾರಿತ್ರಿಕವ್ಯಕ್ತಿಯೆಂದು ಪರಿಗಣಿಸಿದ್ದಾರೆ. ಈ ಎರಡೂ ಅಭಿಪ್ರಾಯಗಳು ಸರಿಯಲ್ಲ. ಮೈಲಾರ ಶೈವಧರ್ಮದ ಒಂದು ಅಂಗ ಮತ್ತು ಅತ್ಯಂತ ಪ್ರಾಚೀನವಾದುದು. ಭೈರವ ಪಂಥದಿಂದ ಯಾವುದೋ ಕಾರಣಕ್ಕೆ ಸಿಡಿದುದು ಎಂಬುದಕ್ಕೆ ಆಧಾರಗಳಿವೆ.

ನಾಲ್ಕನೆಯ ಹಂತದಲ್ಲಿ ಈಗ ದಕ್ಷಿಣ ಕರ್ನಾಟಕದಲ್ಲಿ ಆಚರಣೆಯಲ್ಲಿರುವ ಮೈಲಾರ ಸಂಪ್ರದಾಯಗಳನ್ನು ಪರಿಶೀಲಿಸಲಾಗಿದೆ. ಈಗ ಮೈಲಾರ ದೇವತೆ ಕುರುಬ ಜನಾಂಗದ ದೇವರು ಮಾತ್ರ ಎಂಬ ನಂಬಿಕೆಯಿದೆ. ಆದರೆ ಅನೇಕ ಕಡೆ ಇದು ಒಕ್ಕಲಿಗರ, ಬ್ರಾಹ್ಮಣರ ದೇವತೆಯೂ ಆಗಿರುವುದು ಕಂಡು ಬರುತ್ತದೆ. ಸಾಮಾನ್ಯವಾಗಿ ಎಲ್ಲಾ ಜನಾಂಗದವರೂ ಮೈಲಾರದೇವರ ಅಂಕಿತದಲ್ಲಿ ಹೆಸರಿಸುವುದು ಕಂಡುಬರುತ್ತದೆ. ಮೈಲಾರನ ಗೊರವರು ಈಗಲೂ ಇದ್ದಾರೆ. ಕೆಂಪಚುಂಚರಿದ್ದಾರೆ. ಅವರ ಹೆಸರಿನ ಹಳ್ಳಿಗಳಿವೆ. ಈ ನಾಲ್ಕು ಹಂತದಲ್ಲಿ ನಾನು ಮೈಲಾರಲಿಂಗ ಸಂಪ್ರದಾಯವನ್ನು ಪರಿಶೀಲಿಸಿದ್ದೇನೆ.

ಜಗತ್ತಿನ ಅತ್ಯಂತ ಪ್ರಾಚೀನವಾದ ಜನಾಂಗ ಮತ್ತು ಸಂಸ್ಕೃತಿಗಳ ಇತಿಹಾಸದ ಆರಂಭವನ್ನು ಕುರಿತಂತೆ ಅನೇಕ ಮುಖವಾದ ತೀರ್ಮಾನಗಳು ದೊರೆಯುತ್ತವೆ. ಮಾನವನ ವಿಕಾಸದ ಹಾದಿಯ ಅನೇಕ ಮಜಲುಗಳು ಇಂದಿಗೂ ಕಾಲಗರ್ಭದಿಂದ ಹೊರಗೆ ಬಂದಿಲ್ಲವೆಂಬುದು ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರ ಅಭಿಪ್ರಾಯ. ಆದರೂ ಇತ್ತೀಚೆಗೆ ವಿದ್ವಾಂಸರು ನಡೆಸಿದ ಸಂಶೋಧನೆಗಳಿಂದ ಅನೇಕ ಕುತೂಹಲಕಾರಿಯೂ ಆಶ್ಚರ್ಯಕರವೂ ಆದ ಸಂಗತಿಗಳು ಹೊರಬಿದ್ದಿವೆ. ಇತ್ತೀಚಿನವರೆಗೆ ನಾವು ಸರಿಯೆಂದು ನಂಬಿದ್ದು ಅನೇಕ ವಿದ್ವಾಂಸರ ಸಂಶೋಧನೆಗಳು ಈಗ ಸರಿಯಲ್ಲವೆಂದು ಕಂಡು ಬರುತ್ತಿವೆ. ಪ್ರಪಂಚದ ಯಾವ ಭಾಗದಲ್ಲಿ ಮೊದಲು ನಾಗರೀಕತೆ ಉದಯಿಸಿತು ಎಂಬುದರ ಬಗ್ಗೆಯೂ ಅನೇಕ ಭಿನ್ನಾಭಿಪ್ರಾಯಗಳಿವೆ. ಹಾಗೆಯೇ ಈ ಭುವಿಯಲ್ಲಿ ಹುಟ್ಟಿಕೊಂಡ ಧರ್ಮ ಸಂಸ್ಕೃತಿಗಳ ಬಗೆಗೂ ಇಂಥ ಅಭಿಪ್ರಾಯಗಳಿವೆ. ಈ ಹಿನ್ನಲೆಯಲ್ಲಿ ಭಾರತ ಅತ್ಯಂತ ಪ್ರಾಚೀನ ನಾಗರೀಕತೆಯನ್ನು ಹೊಂದಿದ ಬಗೆಗೆ ಆಧಾರಗಳು ದೊರೆಯುತ್ತವೆ. “India’s recorded civilisation is one of the longest in the course of world history and its Mythology spans the whole of that lime and more. For some periods indeed since Hindu scholarship traditionaly has little interest in history as such mythology and sacred lore consititute the sole record and the changes that may be noted insuch traditional materials are thus vital clues to our knowledge of social and political changes” ಮೇಲಿನ ಹೇಳಿಕೆಯ ಹಿನ್ನಲೆಯಲ್ಲಿ ಪರಿಶೀಲಿಸಿದಾಗ ಭಾರತೀಯ ಜನಜೀವನದ ಅತ್ಯಂತ ಪ್ರಾಚೀನ ರೀತಿನೀತಿಗಳ ಬಗೆಗೆ ತಿಳಿಯಬೇಕಾದ ಸಂಗತಿಗಳಿವೆ ಎಂಬುದರ ಅರಿವಾಗುತ್ತದೆ. ಈ ಬಗೆಗೆ ಕೆಲಸ ಮಾಡಿದವರೆಲ್ಲಾ ಈ ದೇಶದ ಮೂಲಜನರ ಜೀವನ ಸಂಸ್ಕೃತಿಗಳತ್ತ ತಿರುಗಿಯೂ ನೋಡದೆ ರಾಜಾಸ್ಥಾನಗಳ ಮತ್ತು ನಗರದ ಉತ್ತಮರ ಜೀವನ ಕ್ರಮಗಳೇ ಈ ದೇಶದ ಸಂಸ್ಕೃತಿ ಎಂಬಂತೆ ಭಾವಿಸಿದುದು. ತಮ್ಮದನ್ನು ಮೇಲೆಂದು ಪ್ರತಿಪಾದಿಸುವ ನೆಪದಲ್ಲಿ ಪ್ರಧಾನವಾದುದನ್ನೆ ಮೂಲೆಗೊತ್ತುತ್ತಾ ನಡೆದರು. ತಮಗೆ ಸರಿಯಾಗಿ ಕಾಣದುದನ್ನು ತಿದ್ದಿಯೂ ಬರೆದುದನ್ನು ನಿಚ್ಚಳವಾಗಿಯೂ ಗುರುತಿಸಬಹುದು. ತಮ್ಮ ಯಾವುದೇ ಧರ್ಮ ಸಂಸ್ಕೃತಿಯ ಬಗೆಗೆ ವಿವೇಚಿಸುವಾಗ ಜನಪದ ಹಿನ್ನಲೆಯಲ್ಲಿ ಪರಿಶೀಲಿಸಬೇಕಾಗುತ್ತದೆ. ಆಗ ಮಾತ್ರ ಈ ದೇಶದ ನಿಜವಾದ ಸಂಸ್ಕೃತಿಯ, ಧರ್ಮದ, ನಾಗರಿಕತೆಯ ಮೂಲ ಮತ್ತು ಬೆಳವಣಿಗೆಯ ಬಗೆಗಿನ ಸ್ಪಷ್ಟಚಿತ್ರ ದೊರೆಯಬಹುದು.

ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಆರ್ಯರು ಭಾರತಕ್ಕೆ ವಲಸೆ ಬಂದ ನಂತರದ ಕಾಲವನ್ನು ಮಿತಿಯಾಗಿಟ್ಟುಕೊಂಡೇ ಈ ಬಗೆಗಿನ ಬಹುತೇಕ ಅಧ್ಯಯನ ನಡೆದಿರುವುದು ಕಂಡು ಬರುತ್ತದೆ. ಇದಕ್ಕೆ ಪ್ರಾಯಃ ಎರಡು ಕಾರಣಗಳು ಪ್ರಭಾವ ಬೀರಿರಬಹುದು. ಒಂದು-ಈ ಬಗ್ಗೆ ಕೆಲಸ ಮಾಡಿದ ಭಾರತೀಯ ವಿದ್ವಾಂಸರೆಲ್ಲ ಆರ್ಯ ಸಂಸ್ಕೃತಿಯನ್ನೇ ಭಾರತೀಯ ಸಂಸ್ಕೃತಿಯೆಂದು ತಪ್ಪುತಿಳಿದುದು. ಮತ್ತೊಂದು ಇವರೆಲ್ಲಾ ಆರ್ಯಸಂಸ್ಕೃತಿಯವರೇ ಆಗಿದ್ದು ಮೂಲಭಾರತೀಯ ಸಂಸ್ಕೃತಿಯನ್ನು ಅನಾದರದಿಂದ ಕಂಡದ್ದು. ಆದರೆ ಮುಂದೆ ಈ ದಿಸೆಯಲ್ಲಿ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಂಡ ಪಾಶ್ಚಾತ್ಯ ವಿದ್ವಾಂಸರುಗಳು ಮತ್ತು ಅದೇ ರೀತಿಯ ಶಿಕ್ಷಣ ಪಡೆದ ಕೆಲವುಮಂದಿ ಭಾರತೀಯ ವಿದ್ವಾಂಸರು ಈ ದಿಸೆಯಲ್ಲಿ ಮಹತ್ತರವಾದ ಕೆಲಸ ಮಾಡಿದರು. ಇದರಿಂದ ಆರ್ಯರು ಬರುವುದಕ್ಕಿಂತ ಶತಶತಮಾನಗಳಷ್ಟು ಹಿಂದೆಯೇ ಭಾರತದಲ್ಲಿ ಒಂದು ಮಹಾನ್ ಸಂಸ್ಕೃತಿ ತನ್ನ ಉತ್ತುಂಗತೆಯನ್ನು ತಲುಪಿತ್ತು. ಆ ಸಂಸ್ಕೃತಿ, ಆ ಜನಾಂಗ ಯಾವುವೆಂದರೆ “The dravidian peoples, who spread in to almost every part of India and Srilanka were a mixture of native population of India and photo Dravidian, who seem to have entered India in waves from about 4000 to 2500 Bc. They interduced a neolithic village culture based on agriculture” ಆರ್ಯರು ಭಾರತಕ್ಕೆ ಬಂದ ಕಾಲವನ್ನು ನಾಲ್ಕರಿಂದ ಐದುಸಾವಿರ ವರ್ಷಗಳೆಂದು ಪರಿಗಣಿಸಲಾಗಿದೆ. ಮೇಲಿನ ಹೇಳಿಕೆ ಅದಕ್ಕೂ ಎರಡು ಸಾವಿರ ವರ್ಷಕ್ಕೂ ಹಿಂದೆಯೇ ಭಾರತ ವ್ಯವಸಾಯ ಪ್ರಧಾನವಾದ ಗ್ರಾಮ ಸಂಸ್ಕೃತಿಯ ನಾಡಾಗಿತ್ತೆಂಬುದನ್ನು ಪ್ರತಿಪಾದಿಸುತ್ತದೆ. ಇಂದಿಗೂ ಭಾರತವನ್ನು ಕುರಿತಂತೆ ಈ ಮಾತು ಸತ್ಯವೆಂಬುದನ್ನು ಕಾಣಬಹುದು. ಇಂದಿಗೂ ವಿದ್ವಾಂಸರು ಈ ದೇಶದ ಶೇಕಡ ಎಂಬತ್ತು ಮಂದಿಯ ಸಂಸ್ಕೃತಿಯನ್ನು ಮರೆತು ಕೇವಲ ನಗರದ ಅಥವಾ ಆರ್ಯಪ್ರಭಾವದ ಸಂಸ್ಕೃತಿಯೇ ನಿಜವಾದ ಭಾರತೀಯ ಸಂಸ್ಕೃತಿ ಎಂದು ಹೇಳುವ ಮತ್ತು ಬರೆಯುವ ಬಹಿರಂಗ ತಪ್ಪು ಮಾಡುತ್ತಿದ್ದಾರೆಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಆರ್ಯರು ಬರುವ ಹೊತ್ತಿಗೆ ಭಾರತೀಯ ಸಮಾಜ ತನ್ನೆಲ್ಲಾ ಅಂಗಗಳಲ್ಲಿಯೂ ಉತ್ತುಂಗತೆಯನ್ನು ಮುಟ್ಟಿದ್ದಿತು. ಅನೇಕ ಸುಪ್ರಸಿದ್ದ ರಾಜರು ಮತ್ತು ರಾಜಧಾನಿಗಳು ನಿರ್ಮಾಣವಾಗಿದ್ದುದಲ್ಲದೆ ಆಡಳಿತ ಒಂದು ವ್ಯವಸ್ಥಿತ ರೂಪಮುಟ್ಟಿತ್ತು. ರಾಜಾಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿ, ಕಲೆ ಸಾಹಿತ್ಯಗಳು ಮರೆಯುತ್ತಿದ್ದವು. ಉದಾಹರಣೆಗೆ ‘Great cities such as Mohenjodaro, Harappa and Kalibangan in India rose during the third milcenium Bc and reached the height of their considerable material culture’ ಎಂಬ ಹೇಳಿಕೆಯನ್ನು ಗಮನಿಸಬೇಕು. ಈ ಸಂಸ್ಕೃತಿಯ ಅಂತಿಮ ಘಟ್ಟವನ್ನು ಸು.ಕ್ರಿ.ಪೂ ೨೧೫೦ ರಿಂದ ಕ್ರಿ.ಪೂ. ೧೭೫೦ ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಇದರೊಂದಿಗೆ ಕ್ರಿ.ಪೂರ್ವದಿಂದ ಭಾರತಕ್ಕೆ ಬಂದ ಪ್ರವಾಸಿಗರು ಈ ಸಮಾಜ ಮತ್ತು ಅದರ ರೀತಿನೀತಿಗಳನ್ನು ಕುರಿತಂತೆ ಹೇಳಿರುವ ಸಂಗತಿಗಳನ್ನು ಗಮನಿಸಬೇಕು. ಕ್ರಿ.ಪೂ. ೩೦೦ರಲ್ಲಿ ಭಾರತಕ್ಕೆ ಬಂದ ಮೆಗಾಸ್ತನೀಸನು ಇಲ್ಲಿನ ಸಮಾಜ ವ್ಯವಸ್ಥೆಯನ್ನು ಕುರಿತಂತೆ ಇಂಡಿಯಾದಲ್ಲಿರುವ ಜನರನ್ನು ಏಳು ಪಂಗಡಗಳಾಗಿ ವಿಂಗಡಿಸಿದ್ದಾರೆ. ತತ್ವಜ್ಞಾನಿಗಳಾದವರೆಲ್ಲ ಸೇರಿ ಒಂದು ಪಂಗಡ ಎರಡನೆಯ ಪಂಗಡ ಬೇಸಾಯಗಾರರ ಪಂಗಡ. ಇವರ ಸಂಖ್ಯೆ ಉಳಿದೆಲ್ಲರಿಗಿಂತ ಹೆಚ್ಚು. ಮೂರನೆಯ ಪಂಗಡ ಸೇರಿದವರು ಪಶುಪಾಲನೆ ಮತ್ತು ಕುರಿಸಾಗುವುದರಲ್ಲಿ ತೊಡಗಿರುವ ಜನ. ನಾಲ್ಕನೆಯ ಪಂಗಡದವರು ಕೈಗಾರಿಕೆಯಲ್ಲಿ ತೊಡಗಿರುವ ಜನ. ಸೈನಿಕವೃತ್ತಿಯಲ್ಲಿರುವವರು ಐದನೆಯ ಪಂಗಡಕ್ಕೆ ಸೇರಿದವರು. ಆರನೆಯ ಪಂಗಡಕ್ಕೆ ರಾಜರು ಸೇರುತ್ತಾರೆ. ಏಳನೆಯ ಪಂಗಡಕ್ಕೆ ಅಧಿಕಾರವರ್ಗದವರು ಸೇರುತ್ತಾರೆ. ಎಂದು ಹೇಳಿದ್ದಾನೆ. ಇದರಿಂದ ಮೆಗಾಸ್ತನೀಸನ ಕಾಲಕ್ಕೆ ಆರ್ಯರು ಮತ್ತು ಅವರ ಸಂಸ್ಕೃತಿ ಪ್ರಬಲವಾಗಿರಲಿಲ್ಲವೆಂದು ತಿಳಿಯಲವಕಾಶವಿದೆ. ಯಾವುದೇ ಮೂಲಸಂಸ್ಕೃತಿಯನ್ನು ಹೊರಗಿನಿಂದ ಬಂದಂಥ ಸಂಸ್ಕೃತಿಯೊಂದು ತುಳಿದು ಮೇಲೆ ಬರಲು ಶತಮಾನಗಳೇ ಬೇಕಾಗುತ್ತದೆ. ಇದರಿಂದ ಮೆಗಾಸ್ತನೀಸನ ಕಾಲಕ್ಕೆ ಆರ್ಯ ಸಂಸ್ಕೃತಿಯಾಗಲಿ ವರ್ಣಧರ್ಮಪದ್ಧತಿಯಾಗಲಿ ಜಾರಿಯಲ್ಲಿದ್ದಂತೆ ಕಾಣವುದಿಲ್ಲ.

ಆರ್ಯರು ಭಾರತೀಯ ರಾಜರನ್ನು ಕ್ರಮೇಣವಾಗಿ ತಮ್ಮ ಹತೋಟಿಗೆ ತೆಗೆದುಕೊಂಡರು ಇದಕ್ಕಾಗಿ ಅವರು ಅನೇಕ ಕಥೆಗಳನ್ನು ಕಟ್ಟಿದಂತೆ ಕಾಣುತ್ತದೆ. “Cast was first evolved in the tale epic or Brahmianic age, about 800 to 500 B.C. As the aryans expended over northern Indian and found it necessary to intergrate majority Indigenous population in their social frame work, and itseems from evidence in the great epics composed in that period. That at first change of cast was possible” ಇದರಿಂದ ಆರ್ಯರು ತಮ್ಮ ಉತ್ತಮಿಕೆಯನ್ನು ಶಾಶ್ವತಗೊಳಿಸಲು ರೂಪಿಸಿದ ವರ್ಣಪದ್ಧತಿ ಮತ್ತು ಮಹಾಕಾವ್ಯಗಳು ರಾಮಾಯಣ ಮಹಾಭಾರತ ಇತ್ಯಾದಿಗಳು ಹುಟ್ಟಿಕೊಂಡಂತೆ ಕಾಣುತ್ತದೆ. ಪ್ರಾಯಃ ಇದೇ ಕಾರಣದಿಂದಾಗಿ ಮೆಗಾಸ್ತನೀಸ್ ವರ್ಣವ್ಯವಸ್ಥೆಯ ಬಗ್ಗೆಯಾಗಲಿ ರಾಮಾಯಣ ಮಹಾಭಾರತಗಳ ಬಗ್ಗೆಯಾಗಲಿ ಏನನ್ನು ಹೇಳಿಲ್ಲ. ಏಕೆಂದರೆ ಕ್ರಿ.ಪೂ. ೮೦೦ರಲ್ಲಿ ರೂಪಿತವಾದ ಇವುಗಳು ಕ್ರಿ.ಪೂ. ೩೦೦ರಲ್ಲಿ ಇನ್ನೂ ಜನರನ್ನು ತಲುಪಿರಲೇ ಇಲ್ಲ. ಮುಂದೆ ಆರನೆಯ ಸ್ತಾನಗಳಲ್ಲಿದ್ದ ರಾಜರನ್ನು ಎರಡನೆಯ ಸ್ಥಾನಕ್ಕೆ ಏರಿಸಿ ಅವರಿಗೆ ಸೂರ್ಯ ಚಂದ್ರಾದಿವಂಶಗಳನ್ನು ಹುಟ್ಟಿಹಾಕಿ ಅವರನ್ನು ಆರ್ಯರು ತಮ್ಮ ವಲಯಕ್ಕೆ ಆಕರ್ಷಿಸಿ ಹಿಡಿದುಕೊಂಡರೆಂದು ತೋರುತ್ತದೆ. ವರ್ಣಧರ್ಮವನ್ನು ಹುಷ್ಟಹಾಕಿ ಈ ದೇಶದ ಬಹುಸಂಖ್ಯಾಂತರನ್ನು ಮತ್ತು ದಲಿತರನ್ನು ಜ್ಞಾನದಿಂದ ದೂರವಿಡಲಾಯಿತು. ರಾಜಮಹಾರಾಜರನ್ನು ಚಕ್ರವರ್ತಿಗಳ ಆಸ್ಥಾನಗಳಲ್ಲಿದ್ದ ಭಾರತದ ಸಾಹಿತ್ಯ ಸಂಸ್ಕೃತಿ ಮತ್ತು ಕಲೆಗಳನ್ನು ವ್ಯವಸ್ಥಿತವಾಗಿ ಹೊರದೂಡಿ ಆ ಜಾಗದಲ್ಲಿ ಸಂಸ್ಕೃತವನ್ನು ಮತ್ತು ಆರ್ಯರ ರೀತಿನೀತಿಗಳನ್ನು ಹೇರಲಾಯಿತು. ಮುಂದೆ ವರ್ಣಧರ್ಮದಿಂದಾಗಿ ಜನಾಂಗಗಳ ಮಧ್ಯೆ ಆಳವೂ ಅಗಲವೂ ಆದ ಕಂದರಗಳನ್ನೇ ನಿರ್ಮಿಸಲಾಯಿತು. ಸಂಸ್ಕೃತ ಧರ್ಮದ ಭಾಷೆಯಾಗಿ ಆರ್ಯರನ್ನು ಉಳಿದು ಬೇರೆಯವರು ಅದನ್ನು ಕಲಿಯದಂತೆ ನಿರ್ಬಂಧ ವಿಧಿಸಲಾಯಿತು. ಇದರಿಂದಾಗಿ ಭಾರತೀಯ ಮೂಲವಾದ ಎಲ್ಲವನ್ನೂ ಮತ್ತೆ ತಲೆಯೆತ್ತದಂತೆ ಮಾಡಲಾಯಿತು.

ಮೆಗಾಸ್ತನೀಸನ ಹೇಳಿಕೆಯನ್ನು ಆಡಳಿತದ ದೃಷ್ಟಿಯಿಂದ ಮಾಡಿದ ವಿಂಗಡನೆ ಎಂದು ಕೆಲವರು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಆದರೆ ಮೆಗಾಸ್ತನೀಸನೇ “ಈ ರೀತಿ ಇಂಡಿಯಾ ದೇಶದ ಸಮಾಜವನ್ನು ಏಳುಭಾಗವಾಗಿ ವಿಂಗಡಿಸಲಾಗಿದೆ. ಅಂತರ್ಪಂಗಡ ವಿವಾಹವಿಲ್ಲ. ಒಂದು ಪಂಗಡದವನು ತನ್ನ ವೃತ್ತಿಯನ್ನು ಬಿಟ್ಟು ಬೇರೊಂದು ವೃತ್ತಿಯನ್ನು ಅನುಸರಿಸುವಂತಿಲ್ಲ” ಎಂದು ಹೇಳಿರುವುದನ್ನು ಗಮನಿಸಬೇಕು. ಈ ಮೂಲಕ ಆಗಿನ ಸಮಾಜದ ಜಾತಿಪದ್ಧತಿಯನ್ನು ಆತನು ಸ್ಪಷ್ಟವಾಗಿ ಹೇಳಿದ್ದಾನೆಂಬುದನ್ನು ಕಾಣಬಹುದು. ಯಾಕೆಂದರೆ ಜಾತಿಗಳು ಅನ್ನುವುದಕ್ಕಿಂತ ಜನಾಂಗಗಳು ವೃತ್ತಿಯ ಆಧಾರದಿಂದ ರೂಪಿತವಾದವೆಂಬುದಂತು ಸ್ಪಷ್ಟ. ಆದುದರಿಂದ ಆರ್ಯರು ಜಾರಿಗೆ ಬಂದ ವರ್ಣಧರ್ಮ ಆಗಿನ ಭಾರತೀಯ ಸಮಾಜ ವ್ಯವಸ್ಥೆಯನ್ನು ಬೇಧಿಸಿ ತನ್ನ ಸ್ಥಾನಗಳಿಸಿಕೊಳ್ಳಲು ಶತಮಾನಗಳೇ ಹಿಡಿದವು. ರಾಜ ಮಹಾರಾಜರನ್ನು ತಮ್ಮ ಹತೋಟಿಗೆ ತೆಗೆದುಕೊಂಡು ನಂತರ, ಪೌರೋಹಿತ್ಯ ತನ್ನ ಹಿಡಿತವನ್ನು ಜನತೆಯ ಮೇಲೆ ಬಿಗಿಪಡಿಸಿದಂತೆಲ್ಲಾ ವರ್ಣಧರ್ಮ ಪ್ರಬಲವಾಗತೊಡಗಿರುವುದು ಕಂಡು ಬರುತ್ತದೆ. “The regidity and complex almost entirely due to Bhramin influence and through it Brahmins maintained by right of birth a position as the highest caste. Not all Brahmins at any time were priests, But never theless Brahanius imposed doctrine held that each Brahmin had to mantain the purity of the caste as a whole and contract with the lower castes”. ಮೇಲಿನ ಹೇಳಿಕೆ ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಮೇಲುಕೀಳುಗಳ ತಾರತಮ್ಯವನ್ನುಂಟು ಮಾಡಿತು. ಮತ್ತು ಅದು ಹೇಗೆ ಜಾತಿಯಾಗಿ ಪರಿಣಮಿಸಿತು ಎಂಬುದನ್ನು ತೋರಿಸುತ್ತದೆ. ವ್ಯಕ್ತಿಯ ಆಧಾರದಿಂದ ನಿರ್ಧರಿತವಾಗುತ್ತಿದ್ದ ಜನಾಂಗ ಅಥವಾ ಜಾತಿಹುಟ್ಟಿನ ಆಧಾರದಿಂದ ನಿರ್ಧರಿತವಾಯಿತು. ಇದಕ್ಕೆ ಕಾರಣ ಬ್ರಾಹ್ಮಣರಿಗೆ ಅರೆಮನೆಗಳಲ್ಲಿ ದೊರೆತ ಸಕಲಸೌಲಭ್ಯಗಳು ಮತ್ತು ಸಮಾಜದಲ್ಲಿ ಸ್ಥಾನಮಾನಗಳು. ಅನಾಯಾಸವಾಗಿ ದೊರೆತ ಇವುಗಳು ತಮ್ಮ ಮಕ್ಕಳಿಗೇ ಇರಲಿ ಎಂದು ಯಾರು ತಾನೆ ಅಪೇಕ್ಷಿಸುವುದಿಲ್ಲ. ಆದುದರಿಂದ ಮುಂದೆ ವೇದವನೋದಿದವನ ಮಗ ಅವನ್ನು ಅದನ್ನು ಓದಲಿ ಬಿಡಲಿ ಬ್ರಾಹ್ಮಣನಾದ. ಅರಮನೆಯ ಸವಲತ್ತುಗಳಿಗೆ, ಸಮಾಜದ ಸ್ಥಾನಮಾನಗಳಿಗೆ ಹಕ್ಕುದಾರನಾದ. ಹೊಲ ಉಳುವವನ ಮಗ ವೇದವನೋದಿದರೂ ಒಕ್ಕಲಿಗನೇ ಆದ. ಇದು ಪಾವಿತ್ರ್ಯತೆಗಿಂತ ಅನುಕೂಲಗಳಿಗಾಗಿ ರೂಪಿತವಾದುದು. ಇದರ ರುಚಿ ಹತ್ತಿದಂತೆಲ್ಲಾ ಜಾತಿಯ ಬೇಲಿ ಬಲವಾಗುತ್ತ ನಡೆಯಿತು.

ಕ್ರಿ.ಪೂ. ೩೦೦ ರಿಂದ ಕ್ರಿ.ಶ. ೬೦೦ ರವರೆಗೆ ಯಾವ ಪ್ರವಾಸಿಯಾ ವರ್ಣ ಧರ್ಮದ ವಿಚಾರವನ್ನಾಗಲಿ ರಾಮಾಯಣ ಮಹಾಭಾರತಗಳ ವಿಷಯವನ್ನಾಗಲಿ ಉಲ್ಲೇಖಿಸಿಲ್ಲ. ಕ್ಷತ್ರಿಯರು ಒಂದು ಜನಾಂಗವಾದ ಬಗ್ಗೆ ತಂದೆಯಿಂದ ಮಗನಿಗೆ ಅಧಿಕಾರ ಬರುವ ಪದ್ಧತಿಯನ್ನು ಕೂಡ ಉಲ್ಲೇಖಿಸಿಲ್ಲ. ಪುರೋಹಿತ ಕ್ರಮಣ ಎಂಬ ಮಾತುಗಳು ಬಂದರೂ ಅವು ವೃತ್ತಿ ಅಥವಾ ಧರ್ಮಸೂಚಕವೇ ವಿನಃ ಜಾತಿಸೂಚಕವಲ್ಲ. ಮೆಗಾಸ್ತನೀಸನ ನಂತರ ಸರಿಸುಮಾರು ಸಾವಿರ ವರ್ಷಗಳ ಮೇಲೆ ಬಂದ ಹುಯೆನ್‌ತ್ಸಾಂಗ್ ಮೊಟ್ಟಮೊದಲಿಗೆ ವರ್ಣಧರ್ಮವನ್ನು ಹೇಳಿ ತಂದೆಯಿಂದ ಮಗನಿಗೆ ಅಧಿಕಾರ ಬರುವ ಸಂಪ್ರದಾಯವನ್ನು ಉಲ್ಲೇಖಿಸುತ್ತಾನೆ. ಕ್ರಿಸ್ತಪೂರ್ವದಲ್ಲಿಯೇ ಭಾರತಕ್ಕೆ ಬಂದ ಸ್ಟ್ರಾಬೋಯೆಂಬ ಪ್ರವಾಸಿ “ರಾಜನನ್ನು ಜನಗಳು ಚುನಾಯಿಸುತ್ತಾರೆ. ರಾಜನಾದ ಮೇಲೆ ಅವನಿಗೆ ಮಕ್ಕಳಾದರೆ ಸಿಂಹಾಸನವನ್ನು ತೊರೆಯಬೇಕಾಗುತ್ತದೆ. ಸಿಂಹಾಸನ ವಂಶಪಾರಂಪರ್ಯ ವಾಗಿರಬಾರದೆಂಬುದೇ ಇದರ ಉದ್ದೇಶ” ಎಂದು ಹೇಳಿದ್ದಾನೆ. ಇದರಿಂದ ರಾಜತ್ವ ಹುಟ್ಟಿನಿಂದ ಬರುತ್ತಿರಲಿಲ್ಲವೆಂದು ಸ್ಪಷ್ಟವಾಗುತ್ತದೆ. ಹಾಗಾದರೆ ರಾಜನನ್ನು ಆರಿಸುವ ಪದ್ಧತಿ ಹೇಗಿತ್ತು? ಸ್ಟ್ರಾಬೋನ ನಂತರ ಬಂದ ಪ್ಲಿನಿ ಎಂಬ ಪ್ರವಾಸಿ “ಅತ್ಯಂತ ಸುಂದರನಾದವನು ಮಾತ್ರ ರಾಜನಾಗಲು ಅರ್ಹ. ಎರಡು ತಿಂಗಳ ಮಗುವಾಗಿದ್ದಾಗಲೇ ಮಗುವನ್ನು ಪರೀಕ್ಷಿಸಿ ಅದು ಸುಂದರವಾಗಿರುವುದೇ ಇಲ್ಲವೆ ಎಂದು ನಿರ್ಧರಿಸುತ್ತಾರೆ. ಸುಂದರವಾದ ಮಗು ರಾಜವಾಗಲು ಅರ್ಹವೆನಿಸುತ್ತದೆ” ಎಂದು ಹೇಳಿದ್ದಾನೆ. ಇದರಿಂದ ಆರ್ಯರು ವರ್ಣಧರ್ಮ ಜಾತಿಪದ್ಧತಿಗಳನ್ನು ಹುಟ್ಟು ಹಾಕುವವರೆಗೆ ಜನರೇ ರಾಜನನ್ನು ಆದರಿಸುತ್ತಿದ್ದರೆಂಬುದು ಗೊತ್ತಾಗುತ್ತದೆ. ಕ್ರಿ.ಶ. ಎರಡನೆಯ ಶತಮಾನದಲ್ಲಿ ಬಂದ ಬಡ್ಟೆಸನೆಸ್ ಎಂಬ ಪ್ರವಾಸಿ “ಇಂಡಿಯಾ ದೇಶದ ಯಾವ ಪಂಥದವರಾದರೂ ಶ್ರವಣರಾಗಬಹುದು. ಇವರಲ್ಲಿ ಎರಡು ಗುಂಪುಗಳಿವೆ, ಬಕ್ರಮನರು ಮತ್ತು ಶ್ರಮಣರೆಂದು ಹೇಳಿದ್ದಾನೆ. ಪ್ರವಾಸಿಗರ ಈ ಉಲ್ಲೇಖಗಳು ಭಾರತದಲ್ಲಿ ಜಾತಿಪದ್ಧತಿ ಇಲ್ಲದಿರುವುದನ್ನು ವೃತ್ತಿಗುಂಪುಗಳಿದ್ದುದನ್ನು ತಿಳಿಸುತ್ತವೆ.

ಕ್ರಿ.ಶ. ಆರನೆಯ ಶತಮಾನದಲ್ಲಿ ಭಾರತಕ್ಕೆ ಬಂದ ಹುಯೆನ್‌ತ್ಸಾಂಗ್ ಮೊಟ್ಟಮೊದಲಬಾರಿಗೆ “ಜನರಲ್ಲಿ ನಾಲ್ಕು ವರ್ಗಭೇದಗಳಿವೆ. ಮೊದಲನೆಯವರ್ಗಕ್ಕೆ ಸೇರಿದವರು ಬ್ರಾಹ್ಮಣರು. ಎರಡನೆಯ ವರ್ಗಕ್ಕೆ ಸೇರಿದವರು ಕ್ಷತ್ರಿಯರು ಅಥವಾ ಆಳರಸರು. ಮೂರನೆಯ ವರ್ಗಕ್ಕೆ ಸೇರಿದವರು ವೈಶ್ಯರು ಅಥವಾ ವರ್ತಕರು. ನಾಲ್ಕನೆಯ ವರ್ಗಕ್ಕೆ ಸೇರಿದವರು ಶೂದ್ರರು ಅಥವಾ ಬೇಸಾಯಗಾರರು.4 ಅತ್ಯಂತ ಯುಕ್ತವಾಗಿದ್ದ ಭಾರತೀಯ ಜನಸಮುದಾಯವನ್ನು ಜಾತಿಗಳ ಬೇಲಿಯೊಳಗೆ ಎಳೆಯುವುದೇಯಾ ಅಷ್ಟು ಸುಲಭದ ಕೆಲಸವಾಗಿರಲಿಲ್ಲ ಎಂಬುದು ಮೆಗಾಸ್ತನೀಸ್ ಮತ್ತು ಹೊಯೆನ್‌ತ್ಸಾಂಗ್‌ರ ಮಧ್ಯದ ಒಂದುಸಾವಿರ ವರ್ಷದ ಸಂಘರ್ಷ ತಿಳಿಸುತ್ತದೆ. ಆರ್ಯರು ರಾಜಾಸ್ಥಾನಗಳಲ್ಲಿ ಬೇರೂರಿ ರಾಜರನ್ನು ತಮ್ಮ ಹತೋಟಿಗೆ ತೆಗೆದುಕೊಂಡನಂತರ ಭಾರತದ ಇಂದಿಗೂ ನಮ್ಮ ಜನಪದರಲ್ಲಿ ಜಾನಪದ ಸಾಹಿತ್ಯದಲ್ಲಿ ಕಂಡುಬರುತ್ತದೆ.

ನಮ್ಮ ವಿದ್ವಾಂಸರು ಆರ್ಯರ ಆಗಮನದ ಕಾಲವನ್ನು ಮಿತಿಯಾಗಿ ಇಟ್ಟುಕೊಂಡದ್ದರಿಂದ ಅನೇಕರು ಅಲ್ಲಿಂದಾಚೆಗೆ ಯೋಚನೆಮಾಡಲು ಕೂಡ ಹೋಗಲಿಲ್ಲ. ವಾಸ್ತವವಾಗಿ ಆರ್ಯರು ಬರುವುದಕ್ಕಿಂತ ಮೊದಲೆ ಈ ದೇಶದ ಜನಾಂಗ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿತ್ತೆಂಬುದನ್ನು ಮೆಗಾಸ್ತನೀಸ್ ಉಲ್ಲೇಖಿಸುತ್ತಾನೆ. “ಇಂಡಿಯಾದೇಶದಲ್ಲಿ ನೂರಹದಿನೆಂಟು ಜನಾಂಗಗಳಿವೆ. ದಿಯೋನೀಸಸ್ಸನಿಂದ ಹಿಡಿದು ಸಾಂದ್ರಕೊಟೂಸ್ (ಚಂದ್ರಗುಪ್ತಮೌರ್ಯ) ನವರೆಗೆ ನೂರೈವತ್ಮೂರು ರಾಜರುಗಳು ಆಗಿಹೋದರೆಂದು ಲೆಕ್ಕಹಾಕಿದ್ದಾರೆ. ಈ ರಾಜರುಗಳ ಆಳ್ವಿಕೆಯ ಒಟ್ಟು ಕಾಲ ಆರುಸಾವಿರದ ನಲವತ್ತೆರಡು ವರ್ಷಗಳು. ಮೇಲಿನ ಹೇಳಿಕೆ ಆರ್ಯ ಮತ್ತು ಮೂಲ ಭಾರತೀಯ ಧರ್ಮ ಸಂಸ್ಕೃತಿಗಳ ಬಗೆಗಿನ ನಿಲವನ್ನು ಸೂಚಿಸುತ್ತದೆ. ನಮ್ಮ ದೇಶದ ಯಾವುದೇ ಧರ್ಮ, ಸಂಸ್ಕೃತಿ ಮತ್ತು ಕಲೆಯ ಬಗೆಗೆ ಅಧ್ಯಯನ ಕೈಗೊಡವರಿಗೆ ಈ ಹಿನ್ನಲೆಯ ಪರಿಚಯವಿರಬೇಕಾಗುತ್ತದೆ. ಅದಿಲ್ಲದಿದ್ದರೆ ತಾಯಿಬೇರನ್ನು ಮರೆತು ಮರದ ಬಗೆಗೆ ಮಾತನಾಡಿದಂತಾಗುತ್ತದೆ.

ಭಾರತೀಯ ಧಾರ್ಮಿಕ ಇತಿಹಾಸದಲ್ಲಿ ಶೈವಧರ್ಮ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿರುವುದು ಕಂಡುಬರುತ್ತದೆ. ಇದನ್ನು ಭಾರತದ ಮೂಲಧರ್ಮವೆಂದೂ ಕರೆಯಲವಕಾಶವಿದೆ. ಅತ್ಯಂತ ಪ್ರಾಚೀನ ಕಾಲದಿಂದಲೂ ಶೈವಧರ್ಮ ಭಾರತ ಮತ್ತು ಏಷ್ಯಾದ ಬಹುತೇಕ ಜನಾಂಗಗಳ ಏಕೈಕ ಧರ್ಮವಾಗಿತ್ತು. ಈ ಬಗೆಗೆ ಅನೇಕ ಸಂಶೋಧನೆಗಳು “The study of Saivism is very facinating field of equiry with its roots in the pre-aryan civilization of India, that developed in to a mighty tree with various branches and off shoots. From Kashmir in the north ceylon in the south, from Afganistan in the west to far off countries like Sumatra, Java, Combodia in the east Saivisim was a dominant relegion” ಎಂದು ಹೇಳುತ್ತವೆ. ಇದರಿಂದ ಆರ್ಯರು ಬರುವುದಕ್ಕಿಂತ ಬಹಳ ಹಿಂದೆಯೇ ಶೈವಧರ್ಮ ಭಾರತದಲ್ಲಿ ಪ್ರಬಲವಾಗಿತ್ತೆಂದು ಗೊತ್ತಾಗುತ್ತದೆ. ಪ್ರಾಯಃ ಮುಂದೆ ಆರ್ಯರು ವರ್ಣಧರ್ಮವನ್ನು ರೂಪಿಸಿ ಅದರಲ್ಲಿ ತಮ್ಮ ಉನ್ನತಿಯನ್ನು ಮೆರೆಯಲು ಉಪಯೋಗಿಸಿಕೊಳ್ಳದಿದ್ದಲ್ಲಿ ಇಷ್ಟೊಂದು ಧರ್ಮಗಳು ಹುಟ್ಟಿ ಗೊಂದಲವಾಗುತ್ತಿರಲಿಲ್ಲ. ಇಂದಿಗೂ ಭಾರತದ ಬಹುಸಂಖ್ಯಾತ ಧರ್ಮ ಶೈವವೇ ಆಗಿದೆ. ಅತ್ಯಂತ ಪ್ರಾಚೀನವಾದುದೆಂದು ಹೇಳುವ ಸಿದ್ಧಾಂತ ಶೈವಪಂಥವು ತಮಿಳುನಾಡಿನಲ್ಲಿ ಮೂಲನಿವಾಸಿಗಳು ಶೂದ್ರರೆನಿಸಿಕೊಂಡು ಗ್ರಾಮಾಂತರಗಳಿಗೆ ಸರಿಯಬೇಕಾಯಿತು. ಅವರ ದೇವರು ದಿಂಡರುಗಳನ್ನೆಲ್ಲಾ ಅನಾಗಾರಿಕವೆಂದು ಕರೆದು ತಮ್ಮ ಮೂಗಿನ ನೇರಕ್ಕೆ ತಾವು ರೂಪಿಸಿದವುಗಳನ್ನು ಬಹುಸಂಖ್ಯಾತರ ಮೇಲೆ ಹೇರಲಾಯಿತು. ದಂಶಪರಂಪರೆಯ ಸವಲತ್ತುಗಳನ್ನು ಅನುಭವಿಸಿದವರ ಹಿಡಿತ ಬಿಗಿಯಾಗುತ್ತಾ ನಡೆಯಿತು. “Because this happened under guidance of the hereditary class of priests and philosophers, the Brahmins. It reinforced the status of the priests stressing the value of their prerogative, the performonce of sacifice in mens relation with the gods” ವಂಶಪರಂಪರೆಯನ್ನು ಪ್ರತಿಪಾದಿಸುವ ಪುರೋಹಿತರ ಕಪಿಮುಷ್ಟಿಯಲ್ಲಿ ಭಾರತೀಯ ಸಮಾಜ ಸಿಕ್ಕಿಹಾಕಿಕೊಂಡಿತೆಂಬುದಕ್ಕೆ ಮೇಲಿನ ಮಾತುಗಳು ಸಾಕ್ಷಿ. ಆದರಿಂದಾಗಿ ಜಾತಿಯ ಸಮಸ್ಯೆಯೊಂದಿಗೆ ಧರ್ಮ ಸಮಸ್ಯೆಗಳೂ ಸಂಕುಚಿತಗೊಂಡು ಕಿಲುಬು ಹತ್ತಿದವು. ನಿಸರ್ಗವನ್ನೇ ದೇವರೆಂದು ನಂಬಿದ್ದ ಜನರಿಗೆ ನೂರಾರು ದೇವರುಗಳನ್ನು ತೋರಿಸಿ ಅವುಗಳನ್ನು ಅವರ ಮೇಲೆ ಛೂ ಬಿಡಲಾಯಿತು.

ಭಾರತೀಯ ಭಾಷೆ, ಸಂಸ್ಕೃತಿ ಮತ್ತು ಕಲೆಗಳು ರಾಜಾಶ್ರಯ ತಪ್ಪಿದ ಮೇಲೆ ಗ್ರಾಮಾಂತರ ಜನರನ್ನೇ ಆಶ್ರಯಿಸಬೇಕಾಗಿ ಬಂದಿತು. ಅದೇ ಇಂದಿಗೂ ಜನಪರ ಹೃದಯದಲ್ಲಿ ಉಳಿದುಕೊಂಡು ಬಂದಿದೆ. “ಭಾರತೀಯ ಜಾನಪದ ಧರ್ಮವಾಗಲಿ ಸಂಸ್ಕೃತಿಯಾಗಲಿ ಆ ಜನರ ಹುಟ್ಟು ಮತ್ತು ಬೆಳವಣಿಗೆಯೊಂದಿಗೆ ಬೆರೆತುಕೊಂಡೇ ಬಂದಂಥವು. ಆದುದರಿಂದಲೇ ಎಷ್ಟೆಷ್ಟೋ ವಿದೇಶಿ ಸಂಸ್ಕೃತಿಗಳ ಧಾಳಿಯನ್ನೆದುರಿಸಿಯೂ ಅವು ಉಳಿದುಕೊಂಡಿರುವುದು. ಇಲ್ಲಿನ ಜನಾಂಗಗಳ ಮೂಲವನ್ನು ಕೆಲವು ವಿದ್ವಾಂಸರು ಹೊರಗೆ ಅರಸಲು ಯತ್ನಿಸಿರುವುದುಂಟು. ಇದು ಸರಿಯಲ್ಲ. ಏಕೆಂದರೆ” ಇಂಡಿಯಾ ದೇಶವನ್ನು ಗಮನಿಸಿದರೆ ಇದು ಬಹುವಿಶಾಲವಾದ ದೇಶ ಇಲ್ಲಿರುವ ಜನರು ವಿವಿಧ ಬುಡಕಟ್ಟುಗಳಿಗೆ ಸೇರಿದವರು. ಈ ಬುಡಕಟ್ಟುಗಳು ಎಲ್ಲಾ ಸೇರಿ ನೂರಹದಿನೆಂಟು ಆಗುತ್ತವೆ. ಈ ಬುಡಕಟ್ಟುಗಳಲ್ಲಿ ಒಂದಾದರೂ ಪರದೇಶೀಯ ಮೂಲಕ್ಕೆ ಸೇರದೆ ಎಲ್ಲವೂ ಸ್ಥಳಜನ್ಯವಾದ ಬುಡಕಟ್ಟುಗಳು ಎಂಬ ಅಭಿಪ್ರಾಯ ಕ್ರಿಸ್ತಪೂರ್ವದಲ್ಲಿಯೇ ದೊರೆಯುತ್ತದೆ. ಈ ಬುಡಕಟ್ಟುಗಳಿಗೆ ತಮ್ಮದೇ ಆದ ದೇವರು ಮತ್ತು ಸಂಸ್ಕೃತಿಗಳಿದ್ದುವು. ಆ ಜನರದೇ ಆದ ನಾಗರಿಕತೆಯಿತ್ತು. “The dravidians as an agricultural people, clearly worshipped deities conected in one way or other with fertility. ಮೇಲಿನ ಪ್ರಾಕೃತಿಕ ಪೂಜಾ ಪದ್ಧತಿ ಇಂದಿಗೂ ಬದುಕಿರುವುದಾಗಿ ಅಭಿಪ್ರಾಯವಿದೆ. ಆರ್ಯಪೂರ್ವ ಭಾರತೀಯ ಸಮಾಜ ವ್ಯವಸಾಯ ನಿರತವಾದುದರಿಂದ ಅದರಲ್ಲಿ ಪಕ್ಷ ಪಂಗಡಗಳಿರಲಿಲ್ಲ. ಬೌದ್ಧ ಮತ್ತು ಜೈನಧರ್ಮಗಳ ಮೂಲವೂ ಶೈವಧರ್ಮದಲ್ಲಿರುವದಾಗಿ ಅಭಿಪ್ರಾಯಗಳಿವೆ ಮುಂದೆ ಉಂಟಾದ ವರ್ಗ ಸಂಘರ್ಷದಿಂದಾಗಿ ಶೈವದಲ್ಲಿಯೂ ಪಂಥ ಪಂಗಡಗಳಾದುದು ಕಂಡುಬರುತ್ತದೆ. ಆದರೆ ಈ ಎಲ್ಲವೂ ಶೈವ ಮತ್ತು ರುದ್ರ ಎಂಬ ಎರಡು ಶೈವ ಪ್ರಭೇದಗಳಿಗೆ ಸೇರಿದವಾಗಿವೆ. ಸಾಮ್ಯ ಪಂಥದಲ್ಲಿ ಎಂಟು ಉಪಭೇದಗಳನ್ನು ಗುರುತಿಸಲಾಗಿದೆ. ಈ ಪಂಥದ ಅನುಯಾಯಿಗಳ ಸಂಖ್ಯೆ ತೀರಾ ಕಡಿಮೆ. ಮುಂದೆ ಇದೆ ಶೈವಬ್ರಾಹ್ಮಣ ಗುಂಪಾಯಿತೆಂದು ತಿಳಿದು ಬರುತ್ತದೆ. ರುದ್ರಪಂಥ ಭಾರತದ ಬಹುಸಂಖ್ಯಾತರ ಧರ್ಮವಾಗಿದ್ದು ಇಡೀ ದೇಶವನ್ನು ಆವರಿಸಿತ್ತು. ಈ ಪಂಥದ ಅನುಯಾಯಿಗಳಿಗೆ ಆಹಾರ ನಿರ್ಬಂಧವಿರಲಿಲ್ಲ. ವಾಸ್ತವವಾಗಿ ಆಹಾರ ನಿರ್ಬಂಧವನ್ನು ವಿಧಿಸಿದ ಯಾವ ಧರ್ಮವು ಜಗತ್ತಿನಲ್ಲಿ ಬೆಳೆಯಲು ಇಲ್ಲ. ಉಳಿಯಲು ಇಲ್ಲ. ಆಹಾರಪದ್ಧತಿಗೆ ಕೈಹಾಕದ ಕ್ರೈಸ್ತ ಮತ್ತು ಮುಸುಲ್ಮಾನ್ ಧರ್ಮಗಳು ಬೆಳೆಯುತ್ತಿರುವ ರೀತಿಯನ್ನು ಗಮನಿಸಬೇಕು. ಹೀಗಾಗಿ ರುದ್ರಪಂಥ ಸಹ ಯಾವುದೇ ಆಹಾರ ನಿರ್ಬಂಧ ಹಾಕದೇ ಇದ್ದುದರಿಂದ ಬೆಳೆಯಲು ಸಾಧ್ಯವಾಯಿತು. ಈ ಹೊತ್ತಿಗೆ ಕೂಡ ಈ ಶೈವಪಂಥವೇ ಭಾರತದ ಬಹುಸಂಖ್ಯಾತರ ಧರ್ಮವಾಗಿದೆ.

ಪ್ರಾಚೀನ ಭಾರತದಲ್ಲಿ ಶಿವನನ್ನು ಇಪ್ಪತ್ತೈದು ರೂಪಗಳಲ್ಲಿ ಆರಾಧಿಸುತ್ತಿದ್ದುದು ಕಂಡುಬರುತ್ತದೆ. ಈ ಒಂದೊಂದು ರೂಪವನ್ನು ಒಂದೊಂದು ಗುಂಪಿನವರು ತಮ್ಮ ಆರಾಧ್ಯಮೂರ್ತಿಯಾಗಿ ಮಾಡಿಕೊಂಡಿದ್ದರು. ರುದ್ರಪಂಥದಲ್ಲಿ ಆರುಪ್ರಧಾನ ಪಂಥಗಳೂ ಅನೇಕ ಉಪಪಂಥಗಳು ಇದ್ದುವು. ಭೈರವ ಕಾಳಾಮುಖ, ಕಾಪಾಲಿಕ, ಪಾಶುಪಥ, ಮಹಾವ್ರತ ಮತ್ತು ವಾಮ. ಈ ಎಲ್ಲಾ ಆರು ಪಂಥ ಮತ್ತು ಉಪಪಂಥಗಳಿಗೂ ಭೈರವರೂಪವೇ ಪ್ರಧಾನವಾದುದು. ಈ ಪಂಥದವರು ಭೈರವನನ್ನೇ ಅತ್ಯುನ್ನತವೆಂದು ನಂಬುತ್ತಾರೆ. ಅವರಿಗೆ ಸ್ವಚ್ಛಂದ ಭೈರವತಂತ್ರ ಮತ್ತಿತರ ಆಗಮಗಳು ಪವಿತ್ರ. ಇವನ್ನು ತ್ರಿಕ ಅಥವಾ ದಕ್ಷಿಣ ಪಂಥ ಎಂದು ಕರೆಯುತ್ತಾರೆ. ಇದರ ಮೂಲ ಶಕ್ತಿ ಭೈರವ ಹದಿನೆಂಟು ಕೈಗಳಿಂದ ಕೂಡಿದ ಸ್ವಚ್ಛಂದ ಭೈರವ. ಮೂರ್ತಿಯನ್ನು ಈ ಗುಂಪಿನವರು ಆರಾಧಿಸುತ್ತಾರೆ. ಭೈರವಿ ಅಥವಾ ಮಹಾಕಾಳಿ ಇವರ ಹೆಣ್ಣು ದೇವತೆ. ಮೊದಲಿಗೆ ಈ ಪಂಥದ ಧರ್ಮಗುರುಗಳಿಗೆ ಲೌಕಿಕ ಭೋಗಾದಿಗಳನ್ನು ತೊರೆಯಬೇಕೆಂಬ ನಿಯಮಗಳೇನೂ ಇರಲಿಲ್ಲ. ಆಮೇಲಾಮೇಲೆ ಆರ್ಯಧರ್ಮಗಳ ಪ್ರಭಾವದಿಂದಾಗಿ ಧರ್ಮಗುರುವಾಗುವವನು ಇವುಗಳಿಂದ ದೂರವಿರಬೇಕೆಂಬ ಕಟ್ಟುಪಾಡು ಜಾರಿಗೆ ಬಂದಿತು.

ಶೈವ ಪಂಥದ ಇತಿಹಾಸದಲ್ಲಿ ಕಾಶ್ಮೀರ ಮತ್ತು ವಾರಣಾಸಿಗಳು ಪ್ರಧಾನಪಾತ್ರ ವಹಿಸಿರುವುದು ಕಂಡು ಬರುತ್ತದೆ. ಕಾಶ್ಮೀರ ಶೈವಧರ್ಮದ ಉಗಮ ಎಂಬ ನಂಬಿಕೆಯೇ ಇದೆ. ಬಹುಶಃ ಆರ್ಯರ ಒತ್ತಡದಿಂದಾಗಿ ಅದು ಮುಂದೆ ವಾರಣಾಸಿ ಕ್ರಮೇಣವಾಗಿ ಭಾರತದ ಮೂಲನಿವಾಸಿಗಳು ದಕ್ಷಿಣದತ್ತ ಬಂದಂತೆಲ್ಲಾ ಈ ಪ್ರಮುಖ ಧರ್ಮಕೇಂದ್ರಗಳೂ ಬದಲಾಗಿರುವುದು ಕಂಡು ಬರುತ್ತದೆ. ಇದರೊಂದಿಗೆ ಬೇರೆ ಬೇರೆ ಶಕ್ತಿಗಳ ಪ್ರಭಾವದಿಂದಾಗಿ ಶೈವಪಂಥದಲ್ಲಿಯೂ ಭಿನ್ನ ಭಿನ್ನ ಮಾರ್ಗಗಳು ರೂಪಿತವಾದುವು. ಭಿನ್ನಾಭಿಪ್ರಾಗಳು ತಲೆದೋರಿದವು. ಇದಕ್ಕೆ ಪ್ರಧಾನವಾಗಿ ಎರಡು ಕಾರಣಗಳನ್ನು ಗುರುತಿಸಬಹುದು. ಒಂದು ಧರ್ಮ ಮುಖಂಡರ ಸರ್ವಾಧಿಕಾರತ್ವ ಮತ್ತು ಭೋಗಜೀವನ. ಮತ್ತೊಂದು ತಾವೇ ಏಕೆ ಧರ್ಮದ ಮುಖಂಡರಾಗಬಾರದೆನ್ನುವ ಆಶೆ. ಕಾರಣ ಯಾವುದೇ ಇರಲಿ ಈ ಪಂಥದ ಒಂಬತ್ತು ಮಂದಿ ನಾಥರು ಅಥವಾ ಧರ್ಮಮುಖಂಡರು ಕಾಶಿಯಲ್ಲಿ ಅಥವಾ ಧರ್ಮಮುಖಂಡರು ಕಾಶಿಯಲ್ಲಿ ನಡೆದ ಧರ್ಮಮಹಾಧಿವೇಶನದಲ್ಲಿ ಆಗಿನ ರೀತಿನೀತಿಗಳನ್ನು ವಿರೋಧಿಸಿ ಹೊರನಡೆದರು. ಅವರೆಂದರೆ ೧. ಮತ್ಸೇಂದ್ರನಾಥ ೨. ಗೊರಖನಾಥ ೩. ಆದಿನಾಥ ೪. ವಿರೂಪಾಕ್ಷನಾಥ ೫. ನಾಗಾರ್ಜುನನಾಥ ೬. ಮೇಘನಾಥ ೭. ರೇವಣನಾಥ ೮. ಕರ್ಮನಾಥ ೯. ಜಗನ್ನಾಥ ಈ ಒಂಬತ್ತುಮಂದಿ ಗುರುಗಳು ಸ್ಥಾಪಿಸಿದ ಪಂಥವನ್ನು ನವನಾಥಪಂಥ ಎಂದು ಕರೆಯಲಾಯಿತು. ಮುಂದೆ ಅದು ನಾಥಪಂಥ ಎಂದಾಯಿತು. ಆವರೆಗೆ ಶೈವಧರ್ಮ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿತ್ತಾದರೂ ಒಂದು ರೀತಿಯಲ್ಲಿ ನಿಂತ ನೀರಿನಂತಾಗಿತ್ತು. ಇದರೊಂದಿಗೆ ಆರ್ಯಧರ್ಮದ ವೈದಿಕಪಂಥವು ಅತ್ಯಂತಪ್ರಬಲವಾಗಿ ಜನರು ಏನಾದರೊಂದು ಹೊಸದನ್ನು ಬಯಸಿದರು. ಈ ಒಂಬತ್ತು ಜನ ಯಾವಾಗ ಹಳೆಯ ಕಂದಾಚಾರಗಳನ್ನು ಪ್ರತಿಭಟಿಸಿ ಹೊರನಡೆದರೋ ಜನರೇ ಅವರ ಹಿಂದೆ ನುಗ್ಗಿತು. ದೇಶ್ಯಾದಂತ ಈ ಪಂಥದ ಅನುಯಾಯಿಗಳು ಹುಟ್ಟಿಕೊಂಡರು; ಕ್ಷೇತ್ರಗಳಾದುವು.

ಕಾಶ್ಮೀರದಲ್ಲಿ ಆರ್ಯರು ಪ್ರಬಲರಾದುದರಿಂದ ಶೈವಧರ್ಮದ ಚಟುವಟಿಕೆಗಳು ವಾರಣಾಸಿಗೆ ಸ್ಥಳಾಂತರಗೊಂಡವು. ಶೈವದ ಎಲ್ಲಾ ಪಂಥಗಳ ಮುಖ್ಯ ಕೇಂದ್ರಗಳು ಇಂದಿಗೂ ವಾರಣಾಸಿಯಲ್ಲಿವೆಯೆಂದು ಹೇಳುತ್ತಾರೆ. ವಾರಣಾಸಿಯ ಭೈರವೇಶ್ವರ ದೇವಾಲಯವೇ ಅಲ್ಲಿನ ಮುಖ್ಯ ಶೈವಕೇಂದ್ರವಾಗಿತ್ತೆಂದೂ ಮುಂದೆ ವೈದಿಕ ಸಂಪ್ರದಾಯ ಮೈಲುಗೈಯಾಗಿ ವಿಶ್ವೇಶ್ವರ ದೇವಾಲಯ ಪ್ರಾಮುಖ್ಯತೆಗೆ ಬಂದಿತೆಂದು ಅಭಿಪ್ರಾಯವಿದೆ. ಬಿಹಾರದ ಸೋನೆಪುರದಲ್ಲಿರುವ ಹರಿಹರನಾಥ, ಉತ್ತರಪ್ರದೇಶದ ಘೋರಖ್‌ಪುರದಲ್ಲಿರುವ ಘೋರಖನಾಥ, ಕೇದಾರದ ಕೇದಾರನಾಥ, ಚಿತ್ತಗಾಂಗಿನ ಪಾರ್ಶ್ವನಾಥ, ಪುರಯ ಜಗನ್ನಾಥ, ನೇಪಾಳದ ಪಶುಪತಿನಾಥ ಈ ಪ್ರಮುಖ ದೇವಾಲಯಗಳೆಲ್ಲಾ ನಾಥ ಪಂಥದ ಕೇಂದ್ರಗಳೆಂದು ತಿಳಿದುಬರುತ್ತದೆ. ಈಗಲೂ ಈ ದೇವಾಲಯಗಳೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ವಾರಣಾಸಿಯ ಸಂಬಂಧವನ್ನು ಹೊಂದಿರುವುದು ಕಂಡು ಬರುತ್ತದೆ. ಈ ಕೇಂದ್ರಗಳ ಧರ್ಮಮುಖಂಡರಾಗುವವರು ವಾರಣಾಸಿಯ ಭೈರವನಾದ ಕೇಂದ್ರದ ಮುಖ್ಯ ಗುರುವಿನಿಂದ ದೀಕ್ಷೆ ಪಡೆಯುವ ಸಂಪ್ರದಾಯವಿತ್ತು. ಈಗಲೂ ಅದು ಕೆಲವು ಕಡೆ ಉಳಿದುಕೊಂಡಿದೆ. ಕಾಲಾನುಕ್ರಮದಲ್ಲಿ ಶೈವಧರ್ಮವೂ ವೈದಿಕ ಧರ್ಮದ ಹಾದಿಯನ್ನು ತುಳಿಯಲಾರಂಭಿಸಿದುದರಿಂದ ಇವುಗಳ ಪ್ರಾಮುಖ್ಯತೆ ಕಂಠಿತವಾಯಿತು. ಮುಂದುವರಿದಂತೆಲ್ಲಾ ಇವು ಶೂದ್ರರ ದೇವರುಗಳೆನಿಸಿ ಅಮುಖ್ಯವೆನಿಸಿಕೊಂಡವು.

ನಾಥಪಂಥವು ಹಠಯೋಗ ಸಾಧನೆಗೆ ಪ್ರಾಮುಖ್ಯತೆ ಕೊಟ್ಟಿರುವುದು ಕಂಡುಬರುತ್ತದೆ. ಹಠಯೋಗ ಸಾಧನೆಯಿಂದ ಇಂದ್ರಿಯಗಳನ್ನು ಜಯಿಸಿ ಶಿವಸಾಯುಜ್ಯವನ್ನು ಪಡೆಯಬೇಕೆಂಬುದು ಈ ಪಂಥದ ಪರಮಗುರಿ. ಈ ಪಂಥವನ್ನು ಕಾಲಭೈರವ ಪಂಥ, ಮಾರ್ತಾಂಡ ಭೈರವ ಪಂಥ ಎಂದೂ ಕರೆಯುತ್ತಾರೆ. ಈ ಹೆಸರಿನ ದೇವಾಲಯಗಳು ದೇಶದ ನಾನಾ ಕಡೆ ಇವೆ. ಈ ಸಂಪ್ರದಾಯದ ಗುರುಗಳು ತಮ್ಮ ಕಿವಿಗಳಲ್ಲಿ ಅಗಲವಾದ ತೂತು ಮಾಡಿಸಿಕೊಂಡು ದರ್ಶನವೆಂಬ ತೂಕವಿರುವ ಉಂಗುರವನ್ನು ಧರಿಸುತ್ತಾರೆ. ಹೀಗೆ ಕಿವಿ ಬಳೆಯನ್ನು ಧರಿಸಿರುವವರಿಗೆ ಶಾತ್ರೋಕ್ತವಾಗಿ ವಾರಣಾಸಿಯ ಮುಖ್ಯ ಗುರುಗಳಿಂದ ದೀಕ್ಷೆಯಾಗಿದೆ ಎಂದು ತಿಳಿಯುತ್ತಿದ್ದರು. ಇಂಥವರು ಮಾತ್ರ ನಾಥಪಂಥದ ಪೀಠಗಳ ಮುಖ್ಯಸ್ಥರಾಗಲು ಯೋಗ್ಯರು ಎಂಬ ನಿಯಮವಿದೆ.

ದಕ್ಷಿಣ ಭಾರತದಲ್ಲಿ ನಾಥಪಂಥವನ್ನು ಪ್ರವರ್ಧಮಾನಕ್ಕೆ ತಂದವರು ಕರ್ಮನಾಥ, ಮಲ್ಲಿಕಾರ್ಜುನನಾಥ ಮತ್ತು ರೇವಣನಾಥರೆಂದು ತಿಳಿದು ಬರುತ್ತದೆ. ಕರ್ಮನಾಥ ಆದಿಚುಂಚನಗಿರಿಯಲ್ಲಿಯೂ, ಮಲ್ಲಿಕಾರ್ಜುನನಾಥ ಶ್ರೀಶೈಲದಲ್ಲಿಯೂ ರೇವಣನಾಥ ಕೊಲ್ಲಿ ಪಾಕಿಯಲ್ಲಯೂ ನಿಂತು ಧರ್ಮಪ್ರಚಾರ ಮಾಡಿದರೆಂದು ಪ್ರತೀತಿಯಿದೆ. ಇವಲ್ಲದೆ ದಕ್ಷಿಣ ಭಾರತದಲ್ಲಿ ಅನೇಕ ಶೈವಕ್ಷೇತ್ರಗಳಿರುವುದು ಕಂಡು ಬರುತ್ತದೆ. ನಾಥಪಂಥ ಪ್ರಚಾರಕ್ಕೆ ಜೋಗಿಗಳು, ಭೈರಾಗಿಗಳು, ಗೊರವರು ಮುಂತಾಗಿ ಅನೇಕರಿರುತ್ತಿದ್ದರು. ಇವರು ವಿಭೂತಿಧಾರಿಗಳಾಗಿ ಸೊಂಟಕ್ಕೆ ಜಿಂಕೆಯ ಚರ್ಮವನ್ನು ಸುತ್ತಿಕೊಂಡು ಕೈಯಲ್ಲಿ ಡಮರು ಮತ್ತು ಥ್ರಿಶೂಲಗಳನ್ನು ಹಿಡಿದು ದೇಶಸಂಚಾರ ಮಡುತ್ತಾ ಶೈವಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿರುತ್ತಿದ್ದರು. ಈ ರೀತಿಯ ಜನ ಜೈನರಲ್ಲಿ ಬೌದ್ಧರಲ್ಲಿ ಶ್ರವಣರು, ವೀರಶೈವರಲ್ಲಿ ಜಂಗಮರು ಇರುತ್ತಿದ್ದರು. ಇಂತಹ ಜನರನ್ನು ಸಾವಿರಾರು ಸಂಖ್ಯೆಯಲ್ಲಿ ಅನೇಕ ಪ್ರವಾಸಿಗರು ಉಲ್ಲೇಖಿಸುತ್ತಾರೆ. ಆಯಾ ಧರ್ಮದ ದೇವಾನುದೇವತೆಗಳ ವೇಷ ಹಾಕುವುದನ್ನು ಕೂಡ ಇವರು ಮಾಡುತ್ತಿದ್ದರು. ಪ್ರಧಾನವಾಗಿ ಮಠಗಳಿಗೆ ಕಾಣಿಕೆ ವಸೂಲಿ ಮತ್ತು ಭಕ್ತರ ಮನೆಯ ದೇವತಾಕಾರ್ಯಗಳಲ್ಲಿ ಪೌರೋಹಿತ್ಯ ಮಾಡುವುದು.

ಕನ್ನಡನಾಡಿನ ಧಾರ್ಮಿಕ ಚರಿತ್ರೆಯಲ್ಲಿ ಹನ್ನೆರಡನೆಯ ಶತಮಾನ ಒಂದು ಮಹತ್ವದಕಾಲ. ಯಾವುದೇ ಧರ್ಮ ಅದು ಆರಂಭಗೊಂಡಾಗ ಇರುವ ಉದಾರ ನಿಲವು ನಿಷ್ಪಕ್ಷಪಾತದೃಷ್ಟಿ ಮತ್ತು ಜನಕಲ್ಯಾಣದ ಪರಮಗುರಿ ಇವುಗಳನ್ನು ಅಂತ್ಯದವರೆಗೆ ಉಳಿಸಿಕೊಂಡು ಬರುವುದಿಲ್ಲ ಅಥವಾ ಬರಲಾಗುವುದಿಲ್ಲ. ಧಾರ್ಮಿಕ ಮುಖಂಡರ ಸ್ವಾರ್ಥ ಮತ್ತು ಲಾಲಸೆಗಳಿಂದಾಗಿ ಪ್ರತಿಯೊಂದು ಧರ್ಮದಲ್ಲಿಯೂ ಅತೃಪ್ತಿ ಬೆಳೆಯುತ್ತದೆ. ಅದು ಬೆಳೆದಂತೆಲ್ಲಾ ಜನರು ಅದರಿಂದ ವಿಮುಖರಾಗುವುದೂ ಉಂಟು. ಇದರೊಂದಿಗೆ ಜನರು ಯಾವಾಲೂ ಹೊಸ ಹೊಸದನ್ನು ಬಯಸುವ ಸ್ವಭಾವದವರಾಗಿರುತ್ತಾರೆ. ಇಂತಹ ಸಂಧಿಕಾಲದಲ್ಲಿಯೇ ಸಾಮಾನ್ಯವಾಗಿ ಧಾರ್ಮಿಕ ಸಂಘರ್ಷ ಉಂಟಾಗುತ್ತದೆ. ಸಮರ್ಥನಾದವನ್ನೊಬ್ಬ ಇದನ್ನು ಉಪಯೋಗಿಸಿಕೊಂಡು ತಾನೇ ಮುಖಂಡನಾಗುತ್ತಾನೆ. ಅಥವಾ ತಾನೇ ಹೊಸಧರ್ಮವೊಂದಕ್ಕೆ ಹುಟ್ಟು ಹಾಕುತ್ತಾನೆ. ಸಾವಿರಾರು ವರ್ಷಗಳಿಂದ ಜಿಡ್ಡು ಹಿಡಿದಿದ್ದ ಶೈವಧರ್ಮ ಜಡವಾಗಿ ಹೋಗಿತ್ತು. ಅಂತಹ ಸಮಯವನ್ನು ಉಪಯೋಗಿಸಿಕೊಂಡು ಬಸವಣ್ಣನವರು ಒಂದು ಹೊಸಚಾಲನೆಯನ್ನು ನೀಡಿದರು. ತೂಕಡಿಸುತ್ತಿದ್ದ ಧಾರ್ಮಿಕರಂಗ ಇದರಿಂದ ಒಮ್ಮೆಗೆ ಚುರುಕಾಗಿ ಹೊಸದರತ್ತ ನೋಡಲಾರಂಭಿಸಿತು. ವೈದಿಕಧರ್ಮದ ಬರ್ಬರತೆಯ ಅಡಿಯಲ್ಲಿ ಸಿಕ್ಕಿ ನಲುಗಿದ್ದ ಜನರು ಹೊಸಬೆಳಕನ್ನು ಕಂಡರು. ವಾಸ್ತವವಾಗಿ ಬಸವಣ್ಣನವರು ಕೂಡಿಸಿದ ಅನುಭವ ಮಂಟಪ ಒಂದು ಅಪೂರ್ವವಾದ ಕಾಣ್ಕೆ, ಎಲ್ಲಾ ಜಾತಿಯವರನ್ನು ಹಿಂದೆಡೆ ಸೇರಿಸಿ ತಾನು ಕಂಡ ದರ್ಶನವನ್ನು ಎಲ್ಲರೊಂದಿಗೆ ಚರ್ಚಿಸಿದ ರೀತಿ ನವೀನವಾದುದು ಮತ್ತು ಅದುವರೆಗೆ ಯಾರೂ ಮಾಡಿರದಂಥದ್ದು. ಆದರೆ ದುರಾದೃಷ್ಟದ ಸಂಗತಿಯೆಂದರೆ ವೀರಶೈವ ಕೂಡ ಹಿಂದಿನವರು ಮಾಡಿದ ತಪ್ಪುಗಳನ್ನು ಮಾಡಿದುದು. ಹೀಗಾಗಿ ವೀರಶೈವ ಕೂಡ ಜಾತಿಯ ಹಾದಿಯನ್ನೇ ಹಿಡಿಯಿತು.

ಬಸವಣ್ಣನವರು ನಿರೂಪಿಸಿದ ಧಾರ್ಮಿಕ ರೀತಿನೀತಿಗಳನ್ನು ಮರೆತು ಶೈವರ ಮಠಮಾನ್ಯಗಳನ್ನು ವೀರಶೈವರು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಆರಂಭಿಸಿದರು. ಇದರಿಂದಾಗಿ ಮತೀಯ ಘರ್ಷಣೆ ಆರಂಭವಾಗಿ ಸಮಾಜ ಅಲ್ಲೋಲ ಕಲ್ಲೋಲವಾಯಿತು. ಈ ಬಗೆಗಿನ ಒಂದೆರಡು ಪ್ರಚಲಿತ ಕಥೆಗಳನ್ನು ಹೇಳಿ ಅವುಗಳಲ್ಲಿರುವ ಈ ಘರ್ಷಣೆಯ ಅಂಶಗಳನ್ನು ಪರಿಶೀಲಿಸಬಹುದು. ನಾನು ಕೊಡುತ್ತಿರುವ ಎರಡು ಉದಾಹರಣೆಗಳಲ್ಲಿ ಒಂದು ನೇರವಾಗಿ ಬಸವಣ್ಣನವರ ಕಾಲಕ್ಕೂ ಸೇರಿದ್ದು ಮತ್ತೊಂದು ಹದಿನಾಲ್ಕನೆಯ ಶತಮಾನದ್ದು. ಸಕಲಪುರಾತನರ ಚರಿತ್ರೆಯಲ್ಲಿ ಒಕ್ಕಲು ಮುದ್ದೇಗೌಡನ ಹೆಸರೂ ಬರುತ್ತದೆ. ಇವನ ವಚನಗಳು ದೊರೆಯುತ್ತವೆ. ಬಸವಣ್ಣನವರು “ಕಾಸಿಕಮ್ಮಾರನಾದ ಬೀಸಿ ಮಡಿವಾಳನಾದ” ಎಂಬ ತಮ್ಮ ಮಾತುಗಳಲ್ಲಿ ಕಸುರಬಿನ ಆಧಾರದಿಂದ ಜಾತಿಗಳು ರೂಪಿತವಾಗಿವೆ ಎಂಬುದನ್ನು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಒಕ್ಕಲಿಗ ಮುದ್ದೇಗೌಡನ ಕಥೆ ಹೀಗಿದೆ “ಒಕ್ಕಲಿಗ ಮುದ್ದೇಗೌಡ ಕಲ್ಯಾಣದಲ್ಲಿಯೇ ಹೆಸರಾದ ಕುಳ. ಅವನ ಆರಂಭ ದನ, ಕರು, ಕುರಿ, ದವಸ ಧಾನ್ಯ ಎಣೆಯಿಲ್ಲದ್ದು. ರಾಜನಿಗೆ ಅವನ ಮೇಲೆ ಅಪಾರ ಅಭಿಮಾನ. ಮುದ್ದೇಗೌಡನಿಗೆ ಏಳುಜನ ಗಂಡು ಮಕ್ಕಳು, ಒಬ್ಬಳೇ ಮಗಳು. ಈ ಮಗಳನ್ನು ಹಜಾಮರವನಿಗೆ ಕೊಟ್ಟು ಮದುವೆ ಮಾಡಬೇಕೆಂದು ಪ್ರಧಾನಿ ಬಸವಣ್ಣ ಅಪ್ಪಣೆ ಮಾಡಿದ. ಮುದ್ದೇಗೌಡ ಮತ್ತು ಅವನ ಮಕ್ಕಳು ನಿರಾಕರಿಸಿದರು. ಆದರೆ ಪ್ರಧಾನಿ ಅದನ್ನು ನಿರ್ಬಂಧದಿಂದ ಮಾಡಿಸುವುದಾಗಿ ಬೆದರಿಕೆ ಹಾಕಿದ. ತಿರುಗಿ ಬೀಳುವುದರಿಂದ ಅಪಾಯವೆಂದರಿತ ಮುದ್ದೇಗೌಡ ಉಪಾಯದ ಹಾದಿ ಹಿಡಿದ. ಮಗಳನ್ನು ಪ್ರಧಾನಿ ಹೇಳಿದವನಿಗೆ ಮದುವೆ ಮಾಡಿ ಕೊಡುವುದಾಗಿಯೂ ಏರ್ಪಾಡಿಗೆ ಕಾಲಾವಕಾಶ ಬೇಕೆಂದು ಹೇಳಿಕಳುಹಿಸಿದ. ಪ್ರಧಾನಿ ಅದಕ್ಕೆ ಒಪ್ಪಿದ. ಇತ್ತ ಮುದ್ದೇಗೌಡ ಅಮಾವಾಸ್ಯೆಯ ಸರಿ ರಾತ್ರಿಯಲ್ಲಿ ಯಾತ್ರಿಯ ನೆಪಹೂಡಿ ಕಲ್ಯಾಣ ಬಿಟ್ಟು ದಕ್ಷಿಣಾಭಿಮುಖವಾಗಿ ಹೊರಟ. ಇಷ್ಟು ಹೊತ್ತಿಗೆ ತಾನು ಹೇಳಿದವನಿಗೆ ಮಗಳನ್ನು ಕೊಡಲು ಇಷ್ಟವಿಲ್ಲದೆ ಮುದ್ದೇಗೌಡ ತಲೆತಪ್ಪಿಸಿಕೊಂಡು ಹೋಗುತ್ತಿರುವ ವಿಷಯ ಪ್ರಧಾನಿಗೆ ತಿಳಿಯಿತು. ಅವನು ಕೂಡಲೆ ಮುದ್ದೇಗೌಡನನ್ನು ಸೆರೆಹಿಡಿದು ತರುವಂತೆ ಸೇನೆಯನ್ನು ಕಳುಹಿಸಿದ. ಮುದ್ದೇಗೌಡ ತುಂಗಭದ್ರಾನದಿಯ ತೀರಕ್ಕೆ ಬಂದ. ಹೊಳೆ ತುಂಬಿ ಹರಿಯುತ್ತಿದೆ. ದಿಕ್ಕು ತೋರದೆ ನಿಂತ. ಅಷ್ಟರಲ್ಲಿ ಪ್ರಧಾನಿಯ ಸೇನೆ ಅಟ್ಟಿಸಿಕೊಂಡು ಬರುತ್ತಿರುವ ಸಂಗತಿ ತಿಳಿಯಿತು. ಸೇನೆಗೆ ಸಿಕ್ಕುವುದಕ್ಕಿಂತ ನದಿಯಲ್ಲಿ ಮುಳುಗುವುದು ಲೇಸೆಂದು ನದಿ ದಾಟಲು ನಿರ್ಧರಿಸಿದ. ಆಗ ಅವನ ಮಗಳು ತನ್ನಿಂದ ಇಷ್ಟೆಲ್ಲಾ ತೊಂದರೆ ತಾನೇ ಇಲ್ಲವಾದರೆ ಸಮಸ್ಯೆಯೇ ಬಗೆಹರಿಯುವುದೆಂದು ತುಂಗಭದ್ರೆಗೆ ಪೂಜೆ ಸಲ್ಲಿಸಿ ನೀರಿಗಿಳಿದಳು. ನದಿದಾರಿ ಬಿಟ್ಟಿತು. ಆಕೆಯನ್ನು ಅರಸುತ್ತಾ ಬಂದ ಮುದ್ದೇಗೌಡ ಮತ್ತು ಅವನ ಪರಿವಾರ ಈಚೆ ದಡಸೇರಿದರು. ಮತ್ತೆ ನದಿಯೆಂದಿನಂತೆ ತುಂಬಿ ಹರಿಯತೊಡಗಿತು. ಹಿಂದಟ್ಟಿಬಂದ ಸೈನಿಕರು ನಿರಾಶೆಯಿಂದ ಹಿಂತಿರುಗಿದರು. ಮುದ್ದೇಗೌಡ ಇನ್ನು ದಕ್ಷಿಣಕ್ಕೆ ಹೋಗಿ ಒಕ್ಕಲುನಿಂತ  “ಕರ್ನಾಟಕದ ಬಹುಸಂಖ್ಯಾತ ಜನಾಂಗಗಳಲ್ಲೊಂದಾದ ಒಕ್ಕಲಿಗರ ಮೂಲವನ್ನು ಕುರಿತಂತೆ ಈಗಲೂ ಈ ಕಥೆ ಪ್ರಚಲಿತವಿದೆ. ಇದರ ಸತ್ಯಾಸತ್ಯತೆಯೆ ಬಗೆಗಾಗಲಿ. ಇದರಲ್ಲಿ ಬಸವಣ್ಣನವರ ಕೈವಾಡವಿತ್ತೆ ಎಂಬುದಾಗಲಿ, ಇಲ್ಲಿ ಮುಖ್ಯವಲ್ಲ. ಕಲ್ಯಾಣದ ಕ್ರಾಂತಿ ಮತ್ತು ಹರಳಯ್ಯ ಮಧುವಯ್ಯಗಳ ಮಕ್ಕಳ ಮದುವೆಯ ಹಿನ್ನಲೆಯಲ್ಲಿ ನಡೆದಿರಬಹುದಾದ ಮತೀಯ ಘರ್ಷಣೆ ಮತ್ತು ವಲಸೆಗಳನ್ನು ಕುರಿತು ಇದು ಸ್ಪಷ್ಟವಾದ ಆಧಾರ. ಇಂತಹ ಅನೇಕ ಘಟನೆಗಳ ಉಲ್ಲೇಖ ಜಾನಪದದಲ್ಲಿ ದೊರೆಯುತ್ತದೆ.

ಶೈವ ಮತ್ತು ವೀರಶೈವ ಒಂದೇ ಮೂಲದಿಂದ ಬಂದವಾದುದರಿಂದ ಅವುಗಳ ಅನುಯಾಯಿಗಳ ಮಧ್ಯೆ ಅಧಿಕಾರ ಮತ್ತು ಆಸ್ತಿಪಾಸ್ತಿಗಳಿಗಾಗಿ ಹೋರಾಟ ನಡೆದು ರಕ್ತ ಪಾತವಾದುದು ಕಂಡು ಬರುತ್ತದೆ. ಬಿಜ್ಜಳಬಸವಣ್ಣನವರ ಸಮ್ಮುಖದಲ್ಲಿಯೇ ಇಂತಹ ಘರ್ಷಣೆ ನಡೆದಿದೆ. ಮಠಮಾನ್ಯಗಳು ಮತ್ತು ಅವುಗಳ ಅಧಿಕಾರಾಸ್ತಿಪಾಸ್ತಿಯ ಬಗೆಗೆ ಶೈವದ ಜೋಗಿಗಳು ಮತ್ತು ವೀರಶೈವದ ಜಂಗಮರ ಮಧ್ಯೆ ಕದನಗಳೇ ನಡೆದ ಉಲ್ಲೇಖಗಳು ಜೈನ, ವೈದಿಕ, ವೀರಶೈವರ ಮತ್ತು ಜನಪದ ಸಾಹಿತ್ಯಗಳಲ್ಲಿ ವಿಫುಲವಾಗಿ ದೊರೆಯುತ್ತವೆ. ಶೈವರು ಪೂಜಿಸುತ್ತಿದ್ದ ಶಿವನ ರೂಪಗಳನ್ನೇ ವೀರಶೈವರು ಲೇವಡಿ ಮಾಡಿರುವುದಕ್ಕೆ ಅನೇಕ ಉದಾಹರಣೆಗಳು ದೊರೆಯುತ್ತವೆ. ಈ ಘರ್ಷಣೆಗಳು ಹನ್ನೆರಡನೆ ಶತಮಾನದಿಂದ ಹದಿನಾರನೆಯ ಶತಮಾನದವರೆಗೂ ನಡೆದಿವೆ. ಮೊದಲಿಗೆ ಶೈವನಾಥಪಂಥದ ಕೇಂದ್ರವಾಗಿದ್ದ ಶ್ರೀ ಶೈಲ ಕ್ಷೇತ್ರದ ಅಧಿಕಾರ ಪಡೆಯುವ ಬಗ್ಗೆ ಜಂಗಮರು ಮತ್ತು ಜೋಗಿಗಳ ನಡುವೆ ನಡೆದ ಕದನವೊಂದರ ಚಿತ್ರವನ್ನಿಲ್ಲಿ ನೋಡಬಹುದು.

ಒಂದು ಸಾರಂಗ ಸಿದ್ದೇಶ್ವರ ಲಿಂಗವ
ಕಂಡು ದರುಶನವನೆ ಮಾಡಿ
ಅಂದು ಮಹತ್ತು ಬಿಡಾರವ ಮಾಡಿರೆ
ಬಂದರು ಜೋಗಿಗಳೆಲ್ಲ ||

ಇತ್ತ ಶ್ರೀಗಿರಿ ತಮ್ಮದೆಂದು ಜೋಗಿಗಳೆಲ್ಲ
ಸುತ್ತ ಬಳಸಿ ಸಂಭ್ರಮದಿ
ಮುತ್ತಿಗೆ ಗಿಳಿವಂತೆ ಸಾರಂಗಮಂಟಪ
ದೊತ್ತೀಲಿ ಪಾಳೇಯವಿಳಿಯೆ    ||

ಹನ್ನೆರಡು ಸಾವಿರ ಜೋಗಿಗಳೆಲ್ಲ
ಮನ್ನೆಯವಳಿತದಿ ಬಂದು
ಇನ್ನೆಂದೂ ಸಾರಂಗ ಮಠ ತಮ್ಮದೆಂದುರೆ
ಸನ್ನದ್ದರಾಗಿ ನುಡಿದರು  ||

ಸಾರಂಗ ಮಠ ತಮ್ಮದೆನಲು
ವೀರಕುಮಾರ ಜಂಗಮರೆಲ್ಲ ಕೂಡಿ
ಸಾರಿ ವಿಚಾರಿಸಿ ಕೇಳೆ  ||

ಸಾರಂಗ ಸಿದ್ಧ ಶ್ರೀರಗಿರಿಯೊಳು ತಾನಲ್ಲಿ
ಓರಂತೆ ತಪವಿರೆ ಮೆಚ್ಚಿ
ಮಾರ ಹರನು ಮೈಲಾರಲಿಂಗವ ಕೊಡಲಾಗಿ
ಸೇರಿತುಯೆಮಗೆಂದರವರು     ||

ಮತ್ಸೇಂದ್ರನು ಗೋರಕ್ಷನುತಾವಿಲ್ಲಿ
ಯೆಚ್ಚರಿಮಿಗೆ ತಪಮಿರಲು
ನಿಶ್ಚಯದಿಂದಲೆ ಮಲ್ಲಿಕಾರ್ಜುನ ತಾನೆ
ಮೆಚ್ಚಿ ಅವರಿಗಿತ್ತ ಮಠವ ||

ಅಂದು ನಾಗಾರ್ಜುನ ತಪವ ಮಾಡಲು ಮೆಚ್ಚಿ
ಇಂದುಧರನು ಅವರ್ಗಿತ್ತಾ
ಸಂದೇಹವೇಕಿನ್ನು ಸಾರಂಗ ಮಠ ತಮ್ಮ
ದೆಂದು ನುಡಿಯೆ ಜೋಗಿಗಳು   ||

ಅಧಿಭೈರವನನಾದಿ ಸಿದ್ದನುಯೆಂದು
ಓದುತಿಹರು ಶಾಸ್ತ್ರಗಳ
ಮಾಧವ ಹರವಿಗೆ ಹುಟ್ಟಿದ ಭೈರವನ
ನಾದಿ ಭೈರವ ಹೇಗಾದ?       ||

ಟಗರುಟಗರು ತಾಗಿದಂದದಿ ಹೊಯ್ದಾಡಿ
ಜಗಳವ ಮಾಡಲು ಕೂಡಿ
ದುಗ ಬಿದ್ದ ಪಗಡೆಯೆಂದದಿ ತೆಗೆದು
ಕಡೆಗೆಸೆದರು ಕೇಳ್ತಲೆಗಳನು    ||

ಅಲ್ಲಮ ಪ್ರಭು ಗೋರಕ್ಷಣೆ ಕಥೆವೇಳ್ದು
ಅಲ್ಲಿ ಸಿದ್ಧರ ಮಠದೊಳಗೆ
ಎಲ್ಲ ತತ್ವಂಗಳ ಪೇಳಿ ಶಿಷ್ಯನ ಮಾಡಿ
ಅಲ್ಲಿ ಶ್ರೀಗಿರಿಯೊಳೊಪ್ಪಿದರು   ||

ಗುರಲಿಂಗ ಜಂಗಮ ಚಾರಿತ್ರದ ಕವಿ ವೀರಶೈವ. ಅವನು ಉಲ್ಲೇಖಿಸಿರುವ ಶ್ರೀಶೈಲದ ಘರ್ಷಣೆಯ ಕಥೆ ಜಾನಪದದಲ್ಲೂ ದೊರೆಯುತ್ತದೆ. ಅಲ್ಲಿ ಜೋಗಿಗಳು ಮಾರಿಗೆ ಕುರಿಯನ್ನು ಕಡಿವಂತೆ ಜಂಗಮರನ್ನು ಕಡಿದರು ಎಂದು ಹೇಳಿದ. ಇದರಿಂದ ಶ್ರೀಶೈಲ ನಾಥಪಂಥದ ಭೈರವ ಕೇಂದ್ರವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ನಾಗಾರ್ಜುನನನ್ನೂ ಬೌದ್ಧಗುರು ಎಂದು ಕೆಲವರು, ಶೈವಗುರು ಎಂದು ಕೆಲವರು, ಶೈವನಾಗಿದ್ದು ಬೌದ್ದನಾಗಿ ಶ್ರೀ ಶೈಲದಿಂದ ನಾಗಾರ್ಜುನ ಕೊಂಡಕ್ಕೆ ಹೋದನೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಮತ್ಸೇಂದ್ರನಾಥ ಮತ್ತು ಗೋರಕ್ಷನಾಥರು ಶ್ರೀಶೈಲದಲ್ಲಿದ್ದ ಬಗೆಗೆ ಆಧಾರ ದೊರೆಯುತ್ತದೆ. ಅಲ್ಲಮಪ್ರಭು ಮತ್ತು ಗೋರಕ್ಷನಾಥ ಶ್ರೀಶೈಲದಲ್ಲಿ ಭೇಟಿಯಾಗಿದ್ದರು. ಈ ಗೋರಖನಾಥನ ಸಮಾಧಿ ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಯಲ್ಲಿದೆ. ಆತ ಕೆಲವು ಕಾಲ ಈ ಮಠದ ಧರ್ಮಾಧಿಕಾರಿಯಾಗಿದ್ದನೆಂದೂ ತಿಳಿದು ಬರುತ್ತದೆ. ಆದಿ ಭೈರವನನಾದಿ ಸಿದ್ದನು ಎಂದು ಓದುತಿಹರು ಶಾಸ್ತ್ರಗಳ ಎಂಬ ಮಾತು ಗಮನಾರ್ಹ. “But the Pre-aryan lord of the beasts exacted sacrifice. Because of the ritual connection of sacrifice. Shive Bhairava, the destoyer, is thus by extention Shiva the bringer of fertility”. ಮೊದಲು ಭೈರವ ರುದ್ರ ಎಂದಿದ್ದ ಶಿವನ ಹೆಸರು ಆರ್ಯ ಸಂಪರ್ಕದಿಂದಾಗಿ ಶಿವ ಆದುದನ್ನು ಕಾಣಬಹುದು. ಆದುದರಿಂದ ಆದಿಭೈರವ ಎಂದು ಶಾಸ್ತ್ರಗಳು ಓದುತ್ತಿವೆ ಎಂಬುದು ಸರಿಯಾದ ಹೇಳಿಕೆ. ಆದುದರಿಂದ ಶೈವಧರ್ಮದಲ್ಲಿ ಬರುವ ಶಿವನ ವಿವಿಧ ರೂಪಗಳು ಒಂದು ಕಾಲಕ್ಕೆ ವಿಷ್ಣುವಿನ ಅವತಾರಗಳಂತೆ ಪ್ರಖ್ಯಾತವಾಗಿದ್ದುದಿವೆ. ನಮ್ಮ ಯಾವುದೇ ಧಾರ್ಮಿಕ ಸಂಪ್ರದಾಯವನ್ನು ಪುನರ್ವಿವೇಚಿಸುವಾಗ ಭಾರತ ಮತ್ತು ಕನ್ನಡನಾಡಿನ ಶೈವ ಮತ್ತಿತರ ಧರ್ಮಗಳ ಸ್ಥಿತ್ಯಂತರಗಳನ್ನು ಹಿನ್ನಲೆಯಾಗಿಟ್ಟುಕೊಂಡೇ ಅಧ್ಯಯನ ಮಾಡಬೇಕಾಗುತ್ತದೆ. ಏಕೆಂದರೆ ನಮ್ಮ ಧರ್ಮವಾಗಲಿ, ದೇವರುಗಳಾಗಲಿ ಅಥವಾ ಅವುಗಳಿಗೆ ಸಂಬಂಧಿಸಿದ ಸಂಪ್ರದಾಯಗಳಾಗಲಿ ಈಗ ಇರುವಂತಿರದೆ ಅನೇಕ ಬದಲಾವಣೆಗಳನ್ನು ಹೊಂದಿವೆ. ಹೀಗಾಗಿ ಅವುಗಳ ಪರಿಪೂರ್ಣ ಅಧ್ಯಯನ ಈ ಹಿನ್ನಲೆಯಲ್ಲಿಯೇ ನಡೆಯಬೇಕೆಂಬುದನ್ನು ಯಾರೂ ಮರೆಯಬಾರದು.

ಮೈಲಾರಲಿಂಗ ಸಂಪ್ರದಾಯವನ್ನು ವಿವೇಚಿಸುವ ಯಾರಿಗಾದರೂ ಭಾರತೀಯ ಧಾರ್ಮಿಕ ಪರಂಪರೆಯ ಉಗಮ ಮತ್ತು ವಿಕಾಸದ ಪರಿಚಯ ಬೇಕಾಗುತ್ತದೆ. ಇಲ್ಲವಾದಲ್ಲಿ ಸಾರ್ವತ್ರಿಕವಾಗಬಹುದಾದ ಇವುಗಳು ಸಂಕುಚಿತವಾಗಿ ಬಿಡುವುದುಂಟು. ಮೈಲಾರಲಿಂಗ ಮತ್ತು ಅದರ ಸಂಪ್ರದಾಯಗಳು ಶೈವಧರ್ಮದ ಒಂದು ಉಪಶಾಖೆಯೆಂಬುದಂತೂ ಸ್ಪಷ್ಟ. ಇಂದಿಗೂ ಭಾರತಾದ್ಯಂತ ಆ ದೇವತೆಯನ್ನು ಆರಾಧಿಸುವವರು, ಈ ಸಂಪ್ರದಾಯವನ್ನು ಆಚರಿಸುವವರು ಬಹುಸಂಖ್ಯೆಯಲ್ಲಿದ್ದಾರೆ. ಬ್ರಾಹ್ಮಣರ ಮೈಲಾರಿರಾಯನಿಂದ ಹರಿಜನರ ಮೈಲಾರಯ್ಯನವರೆಗೆ ಈ ದೇವತೆಯ ಅಂಕಿತದಲ್ಲಿ ಹೆಸರಿಟ್ಟುಕೊಳ್ಳುವವರಿದ್ದಾರೆ. ದೇಶಾದ್ಯಂತ ಗ್ರಾಮಾಂತರಗಳಲ್ಲಿ ಮೈಲಾರ ದೇವಾಲಯಗಳಿವೆ. ಆದುದರಿಂದ  “ಮೈಲಾರ ಕನ್ನಡನಾಡಿನ ದೇವತೆ. ಅವನ ಉಗಮ ಕನ್ನಡನಾಡು ಇಲ್ಲಿಂದ ಮಹಾರಾಷ್ಟ್ರಕ್ಕೆ ಹೋಗಿ ಖಂಡೋಚಿ ಎಂಬ ಹೆಸರಿನಿಂದ ಜನಪ್ರಿಯ ದೇವತೆಯಾಗಿ ಪರಿಣಮಿಸಿದ್ದಾನೆ.” ಎಂದು ಹೇಳುವುದು ಸರಿಯಾಗುವುದಿಲ್ಲ. ಏಕೆಂದರೆ ಶಿವನ ಇಪ್ಪತ್ತೈದು ರೂಪ ಅಥವಾ ಅವತಾರಗಳಲ್ಲಿ ಮೈಲಾರವೂ ಒಂದು ಎಂದು ಹೇಳಲವಕಾಶವಿದೆ. ಯಾವುದೇ ದೇವತೆಯನ್ನು ಕುರಿತ ಎಲ್ಲಾ ಅವತಾರ ಕಥೆಗಳೂ ಸುಪ್ರಸಿದ್ದವಾಗಿರುವುದಿಲ್ಲ. ಒಂದುಕಾಲಕ್ಕೆ ಅತ್ಯಂತ ಜನಪ್ರಿಯವಾಗಿದ್ದುದು ಮತ್ತೊಂದು ಕಾಲಕ್ಕೆ ಹಿಂದೆ ಸರಿಯಬಹುದು. ವಿಷ್ಣುವಿನ ರಾಮ ಕೃಷ್ಣ ಅವತಾರಗಳಷ್ಟು ಬೇರಾವ ಅವತಾರ ಕಥೆಗಳೂ ಜನಪ್ರಿಯವಾಗಲಿಲ್ಲ. ಇದಕ್ಕೆ ಕಾರಣ ವಾಲ್ಮೀಕಿ ಮತ್ತು ವ್ಯಾಸ. ಅವರು ಈ ಅವತಾರಗಳನ್ನು ತಮ್ಮ ಕಾವ್ಯನಾಯಕರಾಗಿ ಮಾಡಿಕೊಂಡಿದ್ದರಿಂದ ಅವೆರಡೂ ಅಷ್ಟೊಂದು ಜನಪ್ರಿಯವಾದುವು. ಹಾಗೆಯೇ ಶಿವನ ಇಪ್ಪತ್ತೈದು ಲೀಲೆಗಳಲ್ಲಿ ಕೆಲವು ವೈದಿಕರ ಕೈಗೆ ಸಿಕ್ಕಿ ಜನಪ್ರಿಯವಾದುವು. ಜನಸಾಮಾನ್ಯರ ದೇವತೆಗಳಾದಂಥವು ಪ್ರಚಾರಕ್ಕೆ ಬರಲಿಲ್ಲ. ಮೈಲಾರಲಿಂಗ ಸಹ ಅಂತಹ ಒಂದು ಶೈವಧರ್ಮದ ದೇವತೆಯೆಂಬುದರಲ್ಲಿ ಯಾವ ಅನುಮಾನವೂ ಇಲ್ಲ.

ನಮ್ಮ ದೇಶದ ಎಲ್ಲಾ ದೇವರು, ಸಂಪ್ರದಾಯಗಳ ಹುಟ್ಟು ಅಥವಾ ಅವತಾರಗಳಿಗೂ ಒಂದೊಂದು ಕಥೆ ಇರುವಂತೆ ಮೈಲಾರದೇವತೆಗೂ ಒಂದು ಪೌರಾಣಿಕ ಕಥೆಯಿದೆ. ಮಣೆಮಲ್ಲಾಸರುನೆಂಬ ರಾಕ್ಷಸಬ್ರಹ್ಮನಿಂದ ವರಪಡೆದು ಅದರ ಶಕ್ತಿಯಿಂದ ಮಾನವರಿಗೂ ದೇವತೆಗಳಿಗೂ ತೊಂದರೆ ಕೊಡುತ್ತಿದ್ದ. ಅವನ ಉಪಟಳ ಮಿತಿಮೀರಿತು. ಆಗ ದೇವತೆಗಳು ಮತ್ತು ಋಷಿಗಳು ಶಿವನಲ್ಲಿಗೆ ಹೋಗಿ ಅವನ ತೊಂದರೆಗಳಿಂದ ನಮ್ಮನ್ನು ಕಾಪಾಡುವಂತೆ ಪ್ರಾರ್ಥಿಸಿದರು. ಶಿವನಿಂದಲೂ ಅವನು ವರ ಪಡೆದಿದ್ದ. ಶಿವ ಯಾವರೂಪಿನಿಂದ ವರ ನೀಡಿದ್ದನೋ ಅದೇ ರೂಪಿನಿಂದ ರಾಕ್ಷಸನನ್ನು ಕೊಲ್ಲುವಂತಿಲ್ಲವಷ್ಟೇ. ಆದುದರಿಂದ ಮಾರ್ತಾಂಡ ಭೈರವ ರೂಪಿನಿಂದ ಮಲ್ಲಾಸುರನನ್ನು ಕೊಲ್ಲುವುದಾಗಿ ಅವರಿಗೆ ಭರವಸೆ ಕೊಟ್ಟು ಕಳುಹಿಸಿದ. ಅದರಂತೆ ರಾಕ್ಷಸವಧೆ ನಡೆಯಿತು. ಮಲ್ಲಾಸುರನನ್ನು ಕೊಂದು ಅವನ ಉಪಟಳವನ್ನು ಪರಿಹರಿಸಿದುದರಿಂದ ಶಿವನ ಆ ರೂಪಿಗೆ ಮಲ್ಲಾಸುರ ಹರ>ಮಲ್ಲಿಹರ>ಮೈಲಾರ ಆಯಿತೆಂಬುದು ಕಥೆ. ಆರ್ಯ ಸಂಸ್ಕೃತಿ ಪ್ರಬಲಗೊಂಡಂತೆಲ್ಲಾ ಭಾರತೀಯ ದೇವಾನುದೇವತೆಗಳ ಬಗೆಗೆ ಇಂತಹ ಕಥೆಗಳನ್ನು ಕಟ್ಟಿರುವುದು ಕಂಡು ಬರುತ್ತದೆ. ಇದರಿಂದ ಭೈರವನಿಂದ ಮೈಲಾರ ಯಾವುದೋ ಹಂತದಲ್ಲಿ ಆವಿರ್ಭವಿಸಿದ್ದಾನೆಂಬುದು ಖಚಿತ. ಬಹುಶಃ ಭೈರವಸಂಪ್ರದಾಯದ ಜನಾಂಗಗಳಲ್ಲಿ ಧಾರ್ಮಿಕ ಭಿನ್ನಾಭಿಪ್ರಾಯಗಳು ತಲೆದೋರಿ ಅದರಿಂದ ಹೊರಡಿಸಿದ ಗುಂಪು ಭೈರವನ ಅಂಶವನ್ನೇ ಗಮನದಲ್ಲಿಟ್ಟುಕೊಂಡು ಮೈಲಾರನನ್ನು ಸೃಷ್ಟಿಸಿಕೊಂಡಿರುವ ಸಾಧ್ಯತೆಗಳೇ ಹೆಚ್ಚು ಕಂಡು ಬರುತ್ತದೆ. ಆದುದರಿಂದ ಭೈರವನ ಮತ್ತೊಂದು ಹೆಸರು ಮೈಲಾರನೆಂಬುದರಲ್ಲಿ ಅನುಮಾನವಿಲ್ಲ.

ಮೈಲಾರ ಮತ್ತು ಭೈರವನ ಅಂಶಗಳು ಧಾರ್ಮಿಕವಾಗಿ ಒಂದೇ ಎಂಬುದಕ್ಕೆ ಅನೇಕ ಆಧಾರಗಳಿವೆ. ಈ ಎರಡೂ ದೇವತೆಗಳು ಮತ್ತು ಸಂಪ್ರದಾಯಗಳನ್ನು ಪರಸ್ಪರ ಹೋಲಿಸಿ ನೋಡಿದಾಗ ಕೂಡ ಈ ಅಂಶ ಸತ್ಯವೆಂಬುದು ಹೊರಬೀಳುತ್ತದೆ. ಭೈರವ ಮೈಲಾರರಿಬ್ಬರ ವಾಹನವು ನಾಯಿ. ತ್ರಿಶೂಲ ಡಮರು ಇತ್ಯಾದಿ ಆಯುಧ ಮತ್ತು ಶಬ್ದಸಂಕೇತಗಳೇ ಈ ಎರಡೂ ದೇವತೆಗಳ ಧಾರ್ಮಿಕ ಸಂಕೇತಗಳಾಗಿದೆ. ಭೈರವನಿಗೆ ಜೋಗಿಗಳಿದ್ದಾರೆ. ಮೈಲಾರನಿಗೆ ಗೊರವರಿದ್ದಾರೆ. ಈ ಹಿಂಬಾಲಕರ ಉಡುಪು ಒಂದೇ ರೀತಿಯದು. ಭೈರವನ ಹೆಂಡತಿ ಮೊಳಿ, ಮೈಲಾರನ ಹೆಂಡತಿ ಸಹ ಮಾಳಿಯೆ. ಈ ಇಬ್ಬರು ಮಾಳಿಯರೂ ಜಾತಿಯಲ್ಲಿ ಕುರುಬರು. ಭೈರವ ಮೈಲಾರರಿಗೆ ಚುಂಚರು, ಕಂಚರೆಂಬ ಭಕ್ತರುಂಟು. ಇದರಿಂದಾಗಿ ಒಂದೇ ದೇವರು ಮತ್ತು ಸಂಪ್ರದಾಯ ಯಾವುದೋ ಕಾರಣಕ್ಕೆ ಒಡೆದು ಒಂದೇ ದೈವವನ್ನು ಎರಡೂ ಗುಂಪುಗಳು ಹಂಚಿಕೊಂಡಿರುವುದು ಕಂಡು ಬರುತ್ತದೆ. ಈ ಬಗೆಗೆ ಪೌರಾಣಿಕ ಕಥೆಯೊಂದಿದೆ. ಈ ಭೂಮಿಯ ಆದಿಯಲ್ಲಿ ಆದಿಗೌಡ ನೆಂಬುವನಿದ್ದ. ಅವರಿಗೆ ಮೂವರು ಮಕ್ಕಳು. ಎರಡು ಗಂಡು ಒಂದು ಹೆಣ್ಣು. ಹಿರಿಯಮಗ ವ್ಯವಸಾಯ ಮಾಡುತ್ತಿದ್ದ. ಎರಡನೆಯ ಮಗ ಪಶುಪಾಲನೆ ಮಾಡುತ್ತಿದ್ದ. ಮಗಳು ಪಾರ್ವತಿ ಅನುಪಮ ಸುಂದರಿ. ಶಿವ ಅವಳನ್ನು ಮದುವೆಯಾದ. ಆದಿಗೌಡನ ಇಬ್ಬರು ಮಕ್ಕಳ ಸಂತಾನ ಬೆಳೆದು ಭೂಮಿಯ ತುಂಬಾ ಬೆಳೆಯಿತು. ಹಿರಿಯಮಗನ ಸಂತಾನ ಒಕ್ಕಲಿಗರೆಂದೂ ಎರಡನೆಯ ಮಗನ ಸಂತಾನ ಕುರುಬರೆಂದು ಶಿವನೇ ಕರೆದು ತನ್ನನ್ನು ಒಕ್ಕಲಿಗರು ಭೈರವರೂಪದಲ್ಲಿಯೂ ಕುರುಬರು ಮೈಲಾರ ರೂಪದಲ್ಲಿಯೂ ಪೂಜಿಸಬೇಕೆಂದು ನಿಗದಿ ಮಾಡಿದ. ಈ ಕಥೆ ಕೂಡ ಭೈರವ ಮೈಲಾರರು ಅಭಿನ್ನರೆಂಬುದನ್ನು ಪ್ರತಿಪಾದಿಸುತ್ತದೆ. ಈ ಕಾರಣದಿಂದಲೆ ಪಾರ್ವತಿಯನ್ನು ಒಕ್ಕಲಿಗರ ಮಗಳು ಎಂದು ಕರೆದುದು ಕಂಡುಬರುತ್ತದೆ. ಈ ಬಗೆಗೆ ಅನೇಕ ವೀರಶೈವ ಕವಿಗಳು “ಅದ್ರಿಯ ಪುತ್ರಿ ಶೂದ್ರೆಯೆಂದವರುಂಟೆ” ಎಂದು ಆಕ್ಷೇಪಿಸಿದ್ದಾರೆ. ಇಂತಹ ಇನ್ನೂ ಅನೇಕ ಕಥೆಗಳು ಈ ಇಬ್ಬರು ದೈವಗಳು ಮತ್ತು ಸಂಪ್ರದಾಯ ಒಂದೇ ಮೂಲದವೆಂಬುದನ್ನು ಪ್ರತಿಪಾದಿಸುತ್ತವೆ.

ಮೈಲಾರನ ಪ್ರಾಚೀನತೆಯನ್ನು ಕುರಿತಂತೆ ವಿದ್ವಾಂಸರು ಅನೇಕ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಬಸವಣ್ಣನವರಾದಿಯಾಗಿ ವೀರಶೈವ ವಚನಕಾರಾರು, ಕವಿಗಳು ಈ ದೈವ ಮತ್ತು ಸಂಪ್ರದಾಯಗಳ ಬಗೆಗೆ ವ್ಯಕ್ತಪಡಿಸಿರುವ ವಿರುದ್ದಾಭಿಪ್ರಾಯಗಳು. ಸ್ವತಃ ಬಸವಣ್ಣನವರೇ “ಒಳ್ಳಿಹ ಮೈಲಾರನ ಒಳಗೆಲ್ಲಾ ಸಣಬು” ಎಂದು ಹಿಯಾಳಿಸಿದ್ದಾರೆ. ತಮ್ಮ ಧರ್ಮದತ್ತ ಜನರನ್ನು ಆಕರ್ಷಿಸಲು ಪರದೈವನಿಂದೆ ಎಲ್ಲಾ ಧರ್ಮದವರು ಮಾಡಿದುದೆ. ಆದರೆ ಹೀಗೆ ಪೂರ್ವಾಗ್ರಹ ಪೀಡಿತರಾದವರ ಅಭಿಪ್ರಾಯಗಳು ಯಾವುದೇ ಸಂಶೋಧನೆಗೆ ಸದಭಿಪ್ರಾಯದ ಉದಾಹರಣೆಗಳಾಗುವಂಥವಲ್ಲ. ಹಾಗೆ ನೋಡಿದರೆ “Shiva Bhairava the destroyar is thus by extention Shiva the bringer of fertility” ಎಂಬ ಮಾತಾಗಲಿ, “Rudra’s original charcter as god of cattle” ಎಂಬ ಮಾತಾಗಲಿ, ಆರ್ಯಪೂರ್ವದ ವ್ಯವಸಾಯ ಪ್ರಧಾನ ಸಮಾಜದ ಚಿತ್ರವನ್ನು ಕೊಡುತ್ತವೆ. ಮೈಲಾರದೇವರ ಚರಿತ್ರೆ ಸಂಸ್ಕೃತದಲ್ಲಿಯೂ ಇದೆ ಅದನ್ನು ಕನ್ನಡಕ್ಕೆ ಬರೆಯುತ್ತಿದ್ದೇನೆಂದು ಕವಿಯೊಬ್ಬ ಹೇಳಿದ್ದಾನೆ.

ಚೆಲುವ ಕನ್ನಡ ನಾಡದೇವತೆ
ಯೊಲವಿನಾ ಮೈಲಾರ ದೇವನ
ಲಲಿತ ಚರಿತವ ಸಂಸ್ಕೃತದಿಯೂ ಬಾದಾರಾಯಣನು
ಲಲಿತ ಬೊಮ್ಮಾಂಡಾಭಿದಾನಂದ
ಸತಿ ಪುರಾಣದಿನೊರೆದ ಭಾಗವ
ಕುಲದ ಸ್ವಾಮಿಯವೆಂದು ಕನ್ನಡಿಸಿದೆನು ಭಕ್ತಿಯಲಿ       ||

ಕಲಿಯುಗದ ಭೂಲೋಕ ಜನತೆಗೆ
ಸುಲಭ ಭಕ್ತಿಯ ಸಿದ್ದಿ ದೊರೆಕೊಳೆ
ತಳೆದನು ಮಾರ್ತಾಂಡ ಭೈರವ ರೂಪವ ಮವಿಭುವು    ||

ಅಂದವಾಗಿಹ ಷಷ್ಠಿ ತಿಥಿಯೊಳ
ಗಂದು ಪರತರ ಶಕ್ತಿಯು ತನೈ
ತಂದು ಲಿಂಗದ ರೂಪವನು ಕೈಕೊಂಡ ಭೈರವನು       ||

ಇರಲೊಡಮೂಡಿದವುಲಿಂಗಗ
ಳೆರಡು ಕಲ್ಪ ದೃಮದ ನೆರಳೊಳು
ಸುರರು ಸಕುಂಟಂಬಕ ಮುನೀಶರು ಸಿದ್ದಿ ಸಿದ್ದಿಯರು     ||

ವರಮಯೆನಿಪಕ್ಕರವು ಹರನದು
ಹರಿ ಆಕಾರವು ಕೂಡಿ ಇಳೆಯೊಳ
ಇರದೆಯೊಡ ಮೂಡಲಿಕೆ ಯಾಯಿತು ಮೇಳಯೆಂಬ ಪದ
ಧರಣಿಯನು ಸ್ವೀಕರಿಪ ಕತೆದಿಂ
ದಿರದೆ ಕೂಡಿದರೆಂದು ಮುನಿಗಳು
ಸುರರು ಮೈಲಾರಾಭಿದಾನದಿ ಕರೆದರಾತನನು

ಮೇಲಿನ ಪದ್ಯಗಳು ಮೈಲಾರಲಿಂಗನ ಹುಟ್ಟು ಮತ್ತು ಪ್ರಾಚೀನತೆಯ ಬಗೆಗೆ ಹೇಳಿದವೇ ಆಗಿವೆ. ಬಾದರಾಯಣನಿಂದ ರಚಿತವಾದ ಸಂಸ್ಕೃತ ಬ್ರಹ್ಮಾಂಡ ಪುರಾಣದಲ್ಲಿ ಬರುವ ಮೈಲಾರದ ಕಥೆಯ ಭಾಗವನ್ನು ಕನ್ನಡಿಸಿದ್ದೇನೆ ಎಂದು ಕವಿ ಹೇಳಿದ್ದಾನೆ. ಇದರಿಂದ ಎರಡು ವಿಚಾರಗಳು ಸ್ಪಷ್ಟವಾಗುತ್ತವೆ. ಒಂದು ಮೈಲಾರಲಿಂಗ ಸಾಹಿತ್ಯ ಕರ್ನಾಟಕಕ್ಕೆ ಮಾತ್ರ ಸೀಮಿತವಾದುದಲ್ಲ. ಮತ್ತೊಂದು ಮಹಾಭಾರತದಷ್ಟು ಹಳೆಯದೆಂಬುದು. ಮೈಲಾರಲಿಂಗ ಹರಿಹರಶಕ್ತಿ ಸಂಯೋಗದಿಂದ ಹುಟ್ಟಿದವನು ಎಂಬುದನ್ನು ಮೇಲಿನ ಪದ್ಯವೊಂದು ಹೇಳಿದೆ. ಆ ಬಗೆಗೆ ಕಥೆಯೊಂದು ಹೀಗಿದೆ. ಶಿವ ಭಸ್ಮಾಸುರನಿಗೆ ಅವನು ಯಾರ ತಲೆಯ ಮೇಲೆ ಕೈಯಿಡುತ್ತಾನೋ ಅವನು ಸುಟ್ಟುಹೋಗುವ ವರ ನೀಡಿದ. ಭಸ್ಮಾಸುರ ಅದನ್ನು ಶಿವನ ಮೇಲೆ ಕೈಯಿಟ್ಟೇ ಪರೀಕ್ಷಿಸಲೆಳಸಿದ. ಆಗ ಶಿವ ಭೂಲೋಕಕ್ಕೆ ಓಡಿಬಂದು ಅವಿತುಕೊಂಡ. ವಿಷ್ಣು ಮೋಹಿನಿ ರೂಪುದಳೆದು ಭಸ್ಮಾಸುರನನ್ನು ಸಂಹರಿಸಿದ. ಆಗ ಮೋಹಿನಿಯ ರೂಪಕ್ಕೆ ಸೋತ ಶಿವ ಆಕೆಯೊಂದಿಗೆ ಕೂಡಿದ. ಅದರ ಫಲವಾಗಿ ಮೂರುಲಿಂಗಶಕ್ತಿಗಳ ಉತ್ಪನ್ನವಾಯಿತು. ಭೈರವಲಿಂಗ ಕಲ್ಲೇಲಿಂಗ ಮತ್ತು ಜನ್ನೆಲಿಂಗ. ಭೈರವಲಿಂಗವನ್ನು ಒಕ್ಕಲಿಗರಿಗೆ ಕಲ್ಲೇಲಿಂಗವನ್ನು ಕುರುಬರಿಗೆ, ಜನ್ನೆಲಿಂಗವನ್ನು, ಜೈನರಿಗೆ ಪೂಜಿಸಲು ಕೊಟ್ಟನೆಂಬುದು ಕಥೆ. ಕಥೆಕೂಡ ಶಿವನ ಒಂದೇ ರೂಪದಿಂದ ಬೇರೆ ಬೇರೆ ರೂಪುಗಳು ಹುಟ್ಟಿವೆ ಎಂಬುದನ್ನೇ ಸೂಚಿಸುತ್ತದೆ.

ಕನ್ನಡಕವಿಗಳು ಮೈಲಾರಲಿಂಗವನ್ನು ಕುರಿತು ಹೇಳಿರುವ ಅಭಿಪ್ರಾಯಗಳೆಲ್ಲ ಏಕಪಕ್ಷೀಯ ಮತ್ತು ತಮ್ಮ ಧರ್ಮ ದೇವರ, ಹೆಚ್ಚುಗಾರಿಕೆಯನ್ನು ಎತ್ತಿಹಿಡಿಯಲು ಹೇಳಿದವಾಗಿವೆ. ಈ ಬಗೆಗೆ ಹೇಳಿದ ಬ್ರಹ್ಮಶಿವನಾಗಲಿ, ಹನ್ನೆರಡನೆಯ ಶತಮಾನದ ನಂತರದ ವೀರಶೈವ ಕವಿಗಳಾಗಲಿ “ಮೈಲಾರ ಒಂದು ಕ್ಷುದ್ರದೇವತೆ” ಎಂದು ಹೇಳಿರುವುದು ಧಾರ್ಮಿಕವಾಗಿ ನಡೆಯುವಂಥದೆ. ಅವನದೇ ಆದ “ಎಕ್ಕಲದೇವಿಗೆ ಮಾಲಕ್ಕೆನಿಗಂ ಬನದ ಬಳರಿಗಂ ಮೈಲಾರಂಗಕೆಯ್ದ ಜಾತ್ರೆ ಮೊಳ್ಪಂ ಪೊಕ್ಕಲಿಗಂ ಜೈನನಲ್ಲನಾತಂ ಕಾಳು” ಎಂಬ ಮಾತುಗಳನ್ನು ಗಮನಿಸಬೇಕು. ಬ್ರಹ್ಮಶಿವನ ಹೇಳಿಕೆಯಂತೆ ಮೈಲಾರದ ಜಾತ್ರೆ ಮಾಡುವವರು ಒಕ್ಕಲಿಗರು. ಅದರಲ್ಲೂ ಕಾಳಾಮುಖ ಪಂಥದವರು. ಕಾಳಾಮುಖ ಭೈರವನಿಗೆ ಅನ್ವಯವಾಗುವಂಥದು. ಕಾಳಭೈರವ ಎಂದೂ ಕರೆಯುವ ಪದ್ಧತಿಯುಂಟು. ಹನ್ನೆರಡನೆಯ ಶತಮಾನದ ನಂತರವಂತೂ ಪರಧರ್ಮ ಮತ್ತು ಪರದೈವನಿಂದೆಗಾಗಿ ಕಾವ್ಯಗಳನ್ನೇ ಬರೆದವರುಂಟು. ಪರಸ್ಪರ ದೇವ ವಿಗ್ರಹಗಳನ್ನು ಒಡೆದುದುಂಟು. ಈ ನಿಂದೆಯಲ್ಲಿ ಯಾರೂ ಯಾರಿಗಿಂತ ಕಡಿಮೆಯಿಲ್ಲ. ಆದರೆ ವೀರಶೈವರ ಕಣ್ಣು ಬಹುಸಂಖ್ಯಾತರಾದ ರೈತರ ಮೇಲಿತ್ತು. ಅದರಲ್ಲಿ ಉತ್ತರ ಕರ್ನಾಟಕದ ಕುಡಿಯೊಕ್ಕಲಿಗರನ್ನು ಅವರು ಮತಾಂತರವನ್ನು ಮಾಡಿಸಿದರು. ಆದುದರಿಂದ ಬ್ರಹ್ಮಶಿವನಾಗಲಿ, ಶಂಕರದಾಸಿಮಯ್ಯನಾಗಲಿ ಮೈಲಾರಲಿಂಗನನ್ನು ಕ್ಷುದ್ರದೇವತೆ ಯೆಂದು ಕರೆದುದರಲ್ಲಿ ಆಶ್ಚರ್ಯವಿಲ್ಲ. ಅದನ್ನೆ ಸರಿಯೆಂದು ಒಪ್ಪಬೇಕಾಗಿಯೂ ಇಲ್ಲ.

ಕ್ರಿ.ಶ. 1112ರ ನಯಸೇನನ ‘ಧರ್ಮಮೃತ’ದಲ್ಲಿ ಮೈಲಾರನನ್ನು ಕುರಿತು ಬರುವ ಉಲ್ಲೇಖವೇ ಅತ್ಯಂತ ಪ್ರಾಚೀನವಾದುದೆಂದು ಡಾ. ಎಂ. ಚಿದಾನಂದ ಮೂರ್ತಿಯವರು ಅಭಿಪ್ರಾಯ ಪಡುತ್ತಾರೆ. ಅನೇಕ ಕಾರಣಗಳಿಂದ ಈ ಹೇಳಿಕೆಯನ್ನು ಒಪ್ಪುವುದು ಕಷ್ಟವಾಗುತ್ತದೆ. ಮಂಡ್ಯಜಿಲ್ಲೆಯಲ್ಲಿರುವ ಅನೇಕ ಮೈಲಾರೇಶ್ವರ ದೇವಾಲಯಗಳು ಗಂಗೆಕಲಾಮಾದರಿಗೆ ಸೇರುತ್ತವೆ. ಉದಾಹರಣೆಗೆ ನಾಗಮಂಗಲ ತಾಲೂಕಿನ ಮೈಲಾರಪಟ್ಟಣದ ಮೈಲಾರ ದೇವರಗುಡಿಯನ್ನು ನೋಡಬಹುದು. “ಕ್ರಿ.ಶ. 1138 ರಲ್ಲಿ ಹಳೇಬೀಡಿನಲ್ಲಿ ಕಾಳಾಮುಖರ ಪ್ರಸಿದ್ಧ ಮಠವಿತ್ತು” ಎಂಬ ಹೇಳಿಕೆಯನ್ನು ಗಮನಿಸಬೇಕು. ಹನ್ನೆರಡನೆಯ ಶತಮಾನದ ಹಿರೇಬೇವಿನೂರು ಶಾಸನವೊಂದರಲ್ಲಿ ಭೋಗನಾಥ, ರೇವಣಸಿದ್ದ, ರಾಮೇಶ್ವರ, ಬ್ರಹ್ಮೇಶ್ವರ ದೇವರುಗಳೊಂದಿಗೆ ಮೈಲಾರೇಶ್ವರನ ಉಲ್ಲೇಖವಿದೆ. ಕ್ರಿ.ಶ. 7ನೆ ಶತಮಾನಗಳಷ್ಟು ಹಿಂದೆಯೆ ಮೈಲಸೂರು ಉಲ್ಲೇಖವಿದೆ. ಇನ್ನು ಮೈಲಾರ, ಮೈಲ ಮಾಳಿ ಮುಂತಾದವು ಶಾಸನೋಕ್ತವಿರಲಿ ಇಂದಿಗೂ ಕಾಳಾಮುಖ ಶೈವ ಒಕ್ಕಲಿಗರ ಮನೆಯ ಹೆಸರುಗಳಾಗಿ ಜೀವಂತವಾಗಿವೆ.

ಭೈರವ ಮತ್ತು ಮೈಲಾರರಿಬ್ಬರ ಪತ್ನಿಯರ ಹೆಸರುಗಳೂ ಮಾಳಿ ಎಂದಿವೆ. ಮಾಳಿ ಮಹಾಕಾಳಿಯ ಸಂಕ್ಷಿಪ್ತರೂಪ. “Aspects of Kali or Chandi she is the counter part of Shiva’s aspects of Bhairava when he takes pleasure in destruction” ಅತ್ಯಂತ ಪ್ರಾಚೀನಕಾಲದಿಂದಲೂ ಭೈರವರ ಪತ್ನಿ ಭೈರವಿ ಅಥವಾ ಮಹಾಕಾಳಿ. ಕಾಳೀಮುಖ ಎಂಬುದನ್ನು, ಕಾಲಭೈರವ ಎಂಬುದನ್ನು ಗಮನಿಸಬೇಕು.

ಪ್ರಳಯ ಕಾಲಾಗ್ನಿಯ ಕುಡಿಯೊ
ಳ್ಖೆಳಗುತಿರ್ದಳು ಮೂರುಲೋಕದಿ
ಹೊಳೆವ ನಾನಾಯುಧವ ಕರದೊಳು ಚಲಿಪ ಜಿಹ್ವೆಯೊಳು
ತಳೆದ ದಂಷ್ಟ್ರ ಕರಾಳ ಮುಖದಿಂ
ದಲಿ ತ್ರಿಶೂಲದ ತಂಗಿಯಂತಿರೆ
ಸುಳಿದಳೈ ಘೃತಮಾರಿನಾಮದೆ ಶಿವನ ಸಮ್ಮುಖಕೆ

ಮೇಲಿನ ಪದ್ಯ ಶಿವನು ಮಾರ್ತಾಂಡ ಭೈರವರೂಪ ತೆಳೆದಾಗ ಶಿವೆ ಘೃತಮಾರಿಯ ರೂಪತಳೆದಳು. ಇವಳನ್ನು ತುಪ್ಪದ ಮಾಳಮ್ಮ ಎಂದೂ ಕರೆಯುತ್ತಾರೆ. ಇದಕ್ಕೆ ಕತೆಯೊಂದಿದೆ. ಪಾರ್ವತಿಯ ಶಕ್ತಿಯ ಅಂಶ ಮಹಾಕಾಳಿಯಾಗಿ ಅವತರಿಸಿದಾಗ ಋಷಿಗಳು ಅವಳನ್ನು ಶಾಂತಗೊಳಿಸಲು ಅಗ್ನಿಸ್ವರೂಪಿಯಾದ ಆಕೆಯ ಮೇಲೆ ತುಪ್ಪವನ್ನು ಸುರಿದರಂತೆ. “She has a different name (Sati parvathi, Durgi, Kali, Mahakali etc) and they may roughly be divided into mild characters and fierace. As we have seen, thir diety may also be traced back to the pre-aryan godess, who was both bringer of fertility and exacter of living sacrifice” ನಮ್ಮ ದೇಶದ ಪ್ರತಿಯೊಂದು ದೇವತೆಯೂ ಅವಕಾಶ ಮಾಡಿದಾಗಲೂ ಆ ದೇವತೆಯ ಪತ್ನಿ ಅಥವಾ ಸ್ತ್ರೀಶಕ್ತಿ ಆ ಅವತಾರಕ್ಕನುಗುಣವಾದ ಅವತಾರದಲ್ಲಿ ಬರುವುದೇ ಸಂಪ್ರದಾಯ. ಅಲ್ಲದೆ ಮಾಳಿ, ಮಾಳಮ್ಮ, ಮಾಳವ್ವ ಈಗಲೂ ಶೈವ ಸಂಪ್ರದಾಯದ ಹೆಂಗಸರಲ್ಲಿ ಪ್ರಚಲಿತವಿರುವ ಹೆಸರುಗಳು. ಮಾಳಿಯ ಹೆಸರಿನಲ್ಲಿ ಊರುಗಳು ಸಹ ಇರುವುದು ಕಂಡುಬರುತ್ತದೆ. ಆದುದರಿಂದ ಪಾರ್ವತಿಯ ಮಹಾಕಾಳಿ ರೂಪ. ಮಹಾಕಾಳಿ > ಮಹಾಂಕಾಳಿ> ಮಾಂಕಾಳಿ> ಮಾಳಿ ಆಗಿರುವಂತೆ ಕಂಡು ಬರುತ್ತದೆ. ಮಾಳಾಜಿ ಮಾಳಿಯ ಮರಾಠಿ ಪ್ರಭಾವದ ರೂಪ ಈ ಬಗೆಗಿನ ಶಬ್ದ ನಿಷ್ಟತ್ತಿಯೇನೇ ಇರಲಿ ಮಹಾಕಾಳಿ > ಮಾಳಿಯಾಗಿರುವುದಂತೂ ಸತ್ಯ.

ಮೈಲಾರಲಿಂಗ ಎಂಬ ಪದ ಜನಪದ ಮತ್ತು ಶಿಷ್ಟಸಾಹಿತ್ಯಗಳೆರಡರಲ್ಲಿಯೂ ಕಂಡುಬರುತ್ತದೆ. ಇದು ಒಂದು ಸ್ಥಳದ ಹೆಸರಿನಿಂದ ಬಂದುದಿರಬೇಕು. “ನನಗೆ ತಿಳಿದ ಮಟ್ಟಿಗೆ ಮೈಲಾರನನ್ನು ಕುರಿತು ಉಲ್ಲೇಖನಗಳಲ್ಲಿ ನಯಸೇನನ ಧರ್ಮಾಮೃತದ (ಕ್ರಿ. ಶ. 1112) ಈ ಮಾತೇ ಅತ್ಯಂತ ಪ್ರಾಚೀನವಾದುದು. ಇಲ್ಲಿ ಮೈಲಾರಗೊರವ ಎಂದಿರುವುದರಿಂದ ಮೈಲಾರ ದೇವತೆಯಿಂದ ಪ್ರಸಿದ್ಧವಾದ ಯಾವುದೋ ಕ್ಷೇತ್ರವನ್ನು ಸೂಚಿಸುತ್ತದೆ.” ಎನ್ನುವ ಮಾತು ಸಂಪೂರ್ಣ ಸತ್ಯವಲ್ಲ ಅನ್ನಿಸುತ್ತದೆ. ಕನ್ನಡದ ಉಪಲಬ್ದ ಪ್ರಾಚೀನ ಕೃತಿಗಳಲ್ಲಿ ಒಂದಾದ ಶಿವಕೋಟಾಚಾರ್ಯನ ‘ವಡ್ಡಾರಾಧನೆ’ಯ ಕಥೆಯೊಂದರಲ್ಲಿ “ಮತ್ತೆ ಕೆಲವುದಿವದಿಂ ಮೇಲೆ ಸುಮತೆಯೆಂಬ ಮಹಾದೇವಿಯೊಡನೆ ಮಂತ್ರಿ ಕಜ್ಜುಮಂ ಸಮಕಟ್ಟಿಯೊಂದು ದಿವಸನೊರ್ವ ಬೂತಿಂಗೆ ದ್ರಮ್ಮಮಂ ಕೊಟ್ಟೊಡಂಬಡಿಸಿ ತಲೆಯಂ ಕೀರಿಸಿ ಕರಿಯ ಕೋವಣವ ನುಡಿಸಿ ಕವಡಿಕೆಯಂಕಟ್ಟಿಸಿ” ರಾಣಿಯನ್ನು ನಗಿಸಿದ ಪ್ರಸಂಗದ ಉಲ್ಲೇಖವಿದೆ. ಕಾಯಕೋವಣ, ಕವಡೆ ತಲೆಯನ್ನು ಕೀರಿಸುವುದು ಇವೆಲ್ಲಾ ಮೈಲಾರನ ಗೊರವರನ್ನು ಇಲ್ಲವೆ ಭೈರವನ ಜೋಗಿಗಳನ್ನು ಕುರಿತವಾಗಿದೆ. ಕವಿ ಜೈನನಾದುದರಿಂದ ಈ ಗೊರವನನ್ನು ಭೂತ ಎಂದು ಕರೆದಿದ್ದಾನೆ. ಸೂಕ್ತ ಸುದಾರ್ಣವದ 7ನೆಯ ಸಂಧಿಯ 76 ನೆಯ ಪದ್ಯದಲ್ಲಿ

ಕವಡಿಕೆ ಬಾಳದಂಡದೊಳೊಡಂಬಡೆ ದಾಡಿಯರಿಕ್ಕೆಲುಗಳೊಳ್
ಸವಡಿಸಿ ಸಾರ್ಚಿದಟ್ಟಡಿಯೊಳೆೞ್ತರುವೆರ್ದ ನೆನಾರ ಬೊಪ್ಪನೀ
ಕವಡೆಯ ಬೊಪ್ಪನೆಂದು ನಡೆನೋಡಿದರೞ್ಕಱೊಳೊಪ್ಪುಕೆಯ್ವಿನಂ
ಕವಡೆಯ ಬೊಪ್ಪನೆಂಬ ಪೆಸರಗ್ಗಳ ಮೊಪ್ಪಿದುದಾ ಕುಮಾರನೊಳ್

ಕವಡಿಕೆಯ ಭಾಳದಂಡದೊಳ್ ಅಂದರೆ ಕತ್ತಿನಲ್ಲಿ ಧರಿಸಿ ಬರುತ್ತಿದ್ದ ಕುಮಾರ ಕವಡೆಯ ಬೊಪ್ಪನೇ ಬಂದನೆಂಬಷ್ಟು ಸಹಜವಾಗಿದ್ದಿತೆಂದು ದಾದಿಯರು ನಗೆಯಾಡಿದರು. ಇಷ್ಟೇ ಅಲ್ಲ ಪರಿಷ್ಕೃತ ಎಫಿಗ್ರಾಫಿಯಾ ಕರ್ನಾಟಕ ಸಂಪುಟ, ಪಾಂಡವಪುರ 43 ನೆಯ ಶಾಸನದಲ್ಲಿ ಗೊರವರ ಕೆರೆಯ ಉಲ್ಲೇಖ ಬರುತ್ತದೆ. ಈ ಶಾಸನ ಹತ್ತು ಹನ್ನೊಂದನೆಯ ಶತಮಾನಕ್ಕೆ ಸೇರಿದ್ದು. ಕೊಡಗಿನ ಮಡಿಕೇರಿ ೩ ಶಾಸನದಲ್ಲಿ ಗೊರವರ ಹಳ್ಳಿಯ ಉಲ್ಲೇಖವಿದೆ. ಗುಂಡ್ಲುಪೇಟೆಯ 48 ನೇ ಶಾಸನದಲ್ಲಿ ಮೈಲಾರ ಒಡೆಯ ಉಲ್ಲೇಖವಿದೆ. ಶ್ರೀರಂಗಪಟ್ಟಣ 89 ರಲ್ಲಿ ಮಯಿಲರದೇವರ ಉಲ್ಲೇಖವಿದೆ. ಚಾಮುಂಡಿಯನ್ನು ಭೈರವಿ, ಮಹಾಕಾಳಿ ಎಂದು ಕರೆದ ಶಾಸನ ಉಲ್ಲೇಖಗಳಿವೆ. ಕನ್ನಡದ ಸುಪ್ರಸಿದ್ಧ ಆಶಕೂರು ಶಾಸನದಲ್ಲಿಯೇ ಗೊರವ ಮತ್ತು ಕಾಳಿ ಉಲ್ಲೇಖಗಳಿವೆ. ಈ ಶಾಸನಗಳಲ್ಲಿ ಅನೇಕ 9-10 ನೆಯ ಶತಮಾನದವು. ಆದುದರಿಂದ ನಯಸೇನನಿಗಿಂತ ಹಿಂದೆಯೂ ಮೈಲಾರ, ಕಾಳಿ, ಗೊರವ ಉಲ್ಲೇಖಗಳು ಇದ್ದುವೆಂಬುದು ಖಚಿತವಾಗುತ್ತದೆ. ಮೈಲಾರ ಎನ್ನುವ ಮಾತು ಕ್ಷೇತ್ರವೊಂದನ್ನು ನಿರ್ದೇಶಿಸಿದಂತೆ ಸಾಹಿತ್ಯ ಮತ್ತು ಜಾನಪದ ಸಾಹಿತ್ಯಗಳೆರಡರಲ್ಲಿಯೂ ಕಂಡುಬರುತ್ತದೆ. ಕಾಳಿ, ಮೈಲಾರ ಎಂಬ ಉಲ್ಲೇಖ ಅನೇಕ ಕಡೆ ದೊರೆಯುತ್ತದೆ. ಇದರಿಂದ ಎರಡು ರೀತಿಯ ತೀರ್ಮಾನಕ್ಕೆ ಬರಲು ಸಾಧ್ಯ. ಒಂದು-ಕಾಶಿಮೈಲಾರ ಎಂದರೆ ಕಾಶಿಯೆಂಬ ಮೈಲಾರ ಎನ್ನುವ ಅರ್ಥದಲ್ಲಿ ಕಾಶಿಗೇ ಇರಬಹುದಾದ ಪರ್ಯಾಯ ಹೆಸರು. ಎರಡನೆಯದು -ಕಾಶಿಮೈಲಾರ ಎಂದರೆ ಕಾಶಿಯಷ್ಟೆ ಪವಿತ್ರವಾದ ಮತ್ತು ಹೆಸರಾದ ಮತ್ತೊಂದು ಶೈವಕ್ಷೇತ್ರ. ಮೈಲಾರ ಗೊರವರು ಎಂಬುದು ಒಂದು ಕ್ಷೇತ್ರಕ್ಕಿಂತ ದೇವರಿಗೇ ಅನ್ವಯವಾಗುವುದೇ ಹೆಚ್ಚು. ಯಾವುದೇ ಗುಡ್ಡರು, ಜೋಗಿಗಳು, ತಮ್ಮಡಿಗಳು, ಗೊರವರು ಇವರೆಲ್ಲಾ ಪ್ರಧಾನವಾಗಿ ದೇವರಿಗೆ ಅನ್ವಯವಾಗುತ್ತದೆ. ಯಾವುದೇ ಧರ್ಮದ ಕ್ಷೇತ್ರ ನಾನಾಕಾರಣಗಳಿಗಾಗಿ ಪ್ರಸಿದ್ಧ ಪಡೆಯುತ್ತವೆ. ನಯಸೇನ ಧಾರವಾಡ ಜಿಲ್ಲೆಯ ಮುಳುಗುಂದದವನು. ಆದುದರಿಂದ ಅವನು ಹೇಳಿರುವ ಮೈಲಾರಕ್ಷೇತ್ರ ಇದೇ ಜಿಲ್ಲೆಯಲ್ಲಿರುವ ಗುಡ್ಡದ ಮೈಲಾರ ಕ್ಷೇತ್ರವನ್ನು ಕುರಿತದ್ದಾಗಿದೆಯೆನಿಸುತ್ತದೆ. ಈ ಕಾರಣಗಳಿಂದಾಗಿ ಬ್ರಹ್ಮಶಿವ ಹೇಳುವ ಚಟ್ಟಪನು ಪ್ರಾಯಃ ಮೈಲಾರ ಮಾಳಿಯರ ಯಾವುದೋ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದವನಾಗಿರಬೇಕು. ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡ ಬ್ರಹ್ಮಶಿವ “ನಿನ್ನೆ ತಾನಾದ” ಎಂದು ಹೇಳಿರಬೇಕು. ಈ ಮಾತನ್ನು ಮೈಲಾರಲಿಂಗದ ಪ್ರಾಚೀನತೆಯ ಆಧಾರವನ್ನಾಗಿ ತೆಗೆದುಕೊಳ್ಳುವುದು ಸರಿಯಲ್ಲವೆನಿಸುತ್ತದೆ. ಜೀರ್ಣೋದ್ದಾರ ಮಾಡಿಸಿದವನನ್ನು ದೇವಾಲಯಮಂ ಮಾಡಿಸಿದ ಎಂದೇ ಕರೆದಿರುವ ಅನೇಕ ಉದಾಹರಣೆಗಳು ನಮ್ಮ ಶಾಸನಗಳಲ್ಲಿ ಸಾಹಿತ್ಯದಲ್ಲಿ ದೊರೆಯುತ್ತವೆ.

ಮೈಲಾರನಿಗೆ ಅವನ ಭಕ್ತರು ಕುರುಳು ಬೆರಳನ್ನು ಕೊಡುವಪದ್ಧತಿಯನ್ನು ಅನೇಕ ವೀರಶೈವಕವಿಗಳು ಗೇಲಿಮಾಡಿದ್ದಾರೆ. ಭೈರವನಿಗೆ ಮಾನವನನ್ನೆ ಬಲಿ ಕೊಡುವ ಪದ್ದತಿ ಇದ್ದ ಬಗ್ಗೆ ಆಧಾರಗಳು ದೊರೆಯುತ್ತವೆ. ಉದಾಹರಣೆಗೆ ಕೆಳಗಿನ ಹೇಳಿಕೆಯನ್ನು ಗಮನಿಸಬಹುದು. “The mother godess most plainly depicted before whom a human sacrifice is being performed. The dravidian beliefs were deeply enough enter enched in India to Survive the changes brought about by the successive waves of Aryan invansion that took place from about 1800 Bc and led to or at least coincided with the decline and disapprance of the indus valley cities. In a number of particulars the iconography of the Indus valley civilization, and therefore possibly beliefs reappears with the first Hindu cultimages of gods of the first to forth enturies A. D. Thus shiva and his consort resemble the Dravidian cult figures in many respects Shiva often being depicted in a cross legged Yogi posture with the bull Nandi as his symbol and his consort being associated with human Sacrifice” ಶಕ್ತಿ ದೇವತೆಗಳ ಆರಾಧಕರಲ್ಲಿ ಮನುಷ್ಯ ಬಲಿಯ ಪದ್ಧತಿ ಜಾರಿಯಲ್ಲಿದ್ದಿತೆಂಬುದು ಮೇಲಿನ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಕರ್ನಾಟಕದ ಮರಸು ಒಕ್ಕಲಿಗರಲ್ಲಿ ಭೈರವನಿಗೆ ಬೆರಳು ಕೊಡುವ ಪದ್ಧತಿ ಇತ್ತು. ಇದನ್ನು ಬೆಂಗಳೂರುನಗರ ನಿರ್ಮಾಪಕ ಒಂದನೆಯ ಕೆಂಪೇಗೌಡ ತಪ್ಪಿಸಿದನೆಂದು ತಿಳಿದು ಬರುತ್ತದೆ.

ವೀರಶೈವ ಜಂಗಮರು, ವಚನಕಾರರು, ಕವಿಗಳು ಈ ಮೈಲಾರ ಭೈರವ ಕಾಳಿ ಇತ್ಯಾದಿ ದೇವರುಗಳನ್ನು ಮತ್ತು ಆ ಸಂಬಂಧವಾದ ಸಂಪ್ರದಾಯಗಳ ಮೇಲೆ ಅಷ್ಟೊಂದು ಪ್ರಬಲವಾದ ದಾಳಿ ಮಾಡಿರುವುದನ್ನು ನೋಡಿದರೆ ಇವೆಲ್ಲಾ ಆ ಕಾಲಕ್ಕೆ ಅತ್ಯಂತ ಪ್ರಭವಶಾಲಿ ದೈವಗಳಾದುವೆಂದು ಹೇಳಬಹುದು. ಈಗಲೂ ಈ ದೇವತೆಗಳಿಗೆ ನಡೆದುಕೊಳ್ಳುವವರು ಬಹುಸಂಖ್ಯೆಯ ಜನರೇ ಆಗಿದ್ದಾರೆ. “ಮೈಲಾರ ದೈವವೆಂದಾರಾಧಿಸಿದವರು ಕೊರಳಲ್ಲಿ ವಡೆಯ ಕಟ್ಟಿ ಭೈರವನೇ ದೈವವೆಂದಾರಾಧಿಸಿದಾತನು ಕೊರಳಿಗೆ ಕವಡೆಯ ಕಟ್ಟಿ ಎಂಬ ಮಾತುಗಳು ಮೈಲಾರ ಭೈರವರು ಅಭಿನ್ನರೆಂಬುದನ್ನು ಸಾಬೀತು ಮಾಡುತ್ತವೆ. ಹರಿಹರನು ಬರೆದಿರುವ ಶಂಕರ ದಾಸಿಮಯ್ಯರ ರಗಳೆಯು ಸಹ ಲೋಕವೇ ಅರ್ಚಿಸುವ ಮೈಲಾರ ಕೊಡೆ ಹಿಡಿದುದನ್ನು ಕಂಡು ಜನರು ಅಚ್ಚರಿ ಪಟ್ಟಿದ್ದನ್ನು ಹೇಳುವುದರ ಮೂಲಕ ಆ ಕಾಲದಲ್ಲಿ ಮೈಲಾರನಿಗಿದ್ದ ಪ್ರಭಾವವನ್ನೆ ಸೂಚಿಸಿದಂತಾಗಿದೆ. ಈ ಬಗ್ಗೆ ವಾದವಿವಾದ ಘರ್ಷಣೆಗಳು ನಡೆದಿವೆ. “ಮೈಲಾರ ಶಿವನ ಅವತಾರವೆಂದು ಅವನ ಭಕ್ತರು ವಾದಿಸಿದರೆ ಇತರರು ಅವನಿಗೂ ಶಿವನಿಗೂ ಸಂಬಂಧವೇ ಇಲ್ಲವೆಂದು ವಾದಿಸುತ್ತಿದ್ದಂತೆ ಕಾಣುತ್ತದೆ”2 ಎಂಬ ಮಾತಿನಲ್ಲಿ ಆಶ್ಚರ್ಯವಾದುದೇನಿಲ್ಲ. ಏಕೆಂದರೆ ನಮ್ಮ ದೇಶದ ಯಾವ ಭಕ್ತರು ತಮ್ಮ ದೈವವಲ್ಲದ್ದನ್ನು ಹೊಗಳಿದ್ದಾರೆ? ಕುಮಾರವ್ಯಾಸ “ವೀರರಿದಿರಿಹ ಹೊತ್ತು ರಣ ಮೈಲಾರರಾದರು ಮರಳಿತೆಗೆವುತ ಭೈರವನ ಸಾರೂಪವಾದರು” ಎಂಬ ಮಾತು ಮೈಲಾರ ಭೈರವನ ಮತ್ತೊಂದು ರೂಪ ಎಂಬುದನ್ನು ಹೇಳುತ್ತದೆ.

ಮೈಲಾರನನ್ನು ಕುರಿತು ಇಷ್ಟೆಲ್ಲಾ ಪರಿಶೀಲಿಸಿದ ನಂತರ ಕೆಲವು ಸ್ಪಷ್ಟ ತೀರ್ಮಾನಗಳಿಗೆ ಬರುವುದು ಸಾಧ್ಯ. ಮೊದಲನೆಯದಾಗಿ ಮೈಲಾರ ಅತ್ಯಂತ ಪ್ರಾಚೀನವಾದ ಶೈವ ಸಂಪ್ರದಾಯದ ದೇವತೆ. ಅವನಿಗೆ ಸಂಬಂಧಿಸಿದ ಸಂಪ್ರದಾಯಗಳು ಅಷ್ಟೇ ಹಳೆಯವು. ಶಿವನ ಪತ್ನಿ ಪಾರ್ವತಿಯ ಮಹಾಕಾಳಿ ರೂಪವೆ ಕಾಳಿ. ಎರಡನೆಯದಾಗಿ ಮೈಲಾರ ಕರ್ನಾಟಕಕ್ಕೆ ಸೀಮಿತವಾದ ದೇವತೆಯಲ್ಲ. ಶೈವಧರ್ಮ ಎಲ್ಲೆಲ್ಲಿ ಪ್ರಬಲವಾಗಿತ್ತೋ ಅಲ್ಲೆಲ್ಲಾ ಇದ್ದವನು. ಜೈನರು ಮತ್ತು ವೀರಶೈವರು ಮೈಲಾರನ ಬಗ್ಗೆ ಮಾಡುವ ಹೇಳಿಕೆಗಳು ಪೂರ್ವಾಗ್ರಹಪೀಡಿತ ವಾದವಾದುದರಿಂದ ಅವುಗಳಲ್ಲಿ ನಿಂದೆಯನ್ನುಳಿದು ಯಾವುದೇ ಸತ್ಯಾಂಶವಿಲ್ಲ. ಶಿವನ ಇಪ್ಪತ್ತೈದು ರೂಪ ಅಥವಾ ಅವತಾರಲೀಲೆಗಳಲ್ಲಿ ಮೈಲಾರನದೂ ಒಂದು ಎಂದು ಹೇಳಬಹುದು.

ದಕ್ಷಿಣ ಕರ್ನಾಟಕ ರಾಜಕೀಯ ಮತ್ತು ಧಾರ್ಮಿಕವಾಗಿ ಅತ್ಯಂತ ಪ್ರಧಾನವಾದ ನೆಲ. ಸುಮಾರು ಎಂಟುನೂರು ವರ್ಷಗಳಕಾಲ ಆಳಿದ ಗಂಗರು ಮತ್ತು ಅವರು ಜೈನಧರ್ಮಕ್ಕೆ ನೀಡಿದ ಪ್ರೋತ್ಸಾಹ, ಕಲೆಯ ಉನ್ನತಿಯನ್ನೂ ರಾಜಕೀಯ ಉನ್ನತಿಯನ್ನೂ ಒಟ್ಟಿಗೆ ಮೆರೆದ ಹೊಯ್ಸಳರು ಮತ್ತು ಶ್ರೀ ವೈಷ್ಣವಧರ್ಮಕ್ಕೆ ನೀಡಿದ ಪ್ರೋತ್ಸಾಹ, ಅನಾದಿಕಾಲದಿಂದಲೂ ನಡೆದು ಬಂದ ಶೈವಧರ್ಮ, ವಿಜಯನಗರದ ಅರಸರು, ಯಲಹಂಕ ಪ್ರಭುಗಳು, ಮೈಸೂರು ಅರಸರ ಸರ್ವಧರ್ಮ ಸಹಿಷ್ಣತೆ ಮತ್ತು ಸಮನ್ವಯ. ಈ ಭಾಗದಲ್ಲಿ ಒಕ್ಕಲಿಗರು ಪ್ರಧಾನವಾದ ಜನಾಂಗವಾದುದರಿಂದ ಭೈರವ ಹೆಚ್ಚು ವ್ಯಾಪಕವಾದ ದೈವವಾಗಿದ್ದನು. ಈಗಲೂ ಅದು ಸತ್ಯ ಸಂಗತಿಯೇ ಆಗಿದೆ. ಮೈಲಾರನ ಭಕ್ತರು ದಕ್ಷಿಣ ಕರ್ನಾಟಕಕ್ಕೆ ಸಂಬಂಧಿಸಿದಂತೆ ಪ್ರಧಾನವಾಗಿ ಒಕ್ಕಲಿಗರು ಕುರುಬರಲ್ಲಿಯೂ ಸಾಧಾರಣವಾಗಿ ಮಿಕ್ಕ ಜನಾಂಗಗಳಲ್ಲಿಯೂ ಇದ್ದಾರೆ. ಜೋಗಿಗಳು ಒಕ್ಕಲಿಗರಾದರೆ ಗೊರವರು ಕುರುಬರು. ದಕ್ಷಿಣ ಕರ್ನಾಟಕದ ಊರುಗಳಲ್ಲಿ ಊರಿಗೊಂದು ಭೈರವನ ಗುಡಿಯಿದೆ. ಹಾಗೆಯೇ ಮೈಲಾರ ಗುಡಿಗಳೂ ಅಲ್ಲಲ್ಲಿ ಇವೆ. ಈ ಎಲ್ಲಾ ಹಿನ್ನಲೆಯಲ್ಲಿ ಪರಿಶೀಲಿಸುವಾಗ ದಕ್ಷಿಣ ಕರ್ನಾಟಕದ ರೈತಜನಾಂಗದಲ್ಲಿ ಭೈರವ ಮತ್ತು ಮೈಲಾರ ಸಂಪ್ರದಾಯಗಳು ವ್ಯಾಪಕವಾಗಿರುವುದು ಕಂಡು ಬರುತ್ತದೆ.

ಮೈಲಾರ ಗೊರವರು ಸಾಮಾನ್ಯವಾಗಿ ಕುರುಬ ಜನಾಂಗದವರೇ ಆಗಿರುತ್ತಾರೆ. ಗೊರವ ಗೊರವಯ್ಯ ಎಂದು ದಕ್ಷಿಣ ಕರ್ನಾಟಕ ಭಾಗದಲ್ಲಿ ಇವರನ್ನು ಗುರುತಿಸುತ್ತಾರೆ. ಜೋಗಿಗಳು ಒಕ್ಕಲಿಗರಾಗಿರುತ್ತಾರೆ. ಗೊರವಯ್ಯ ಪಂಜೆ ಶರಟು ತೊಟ್ಟು ಕವಡೆ ಹೊಲಿದ ಬಣ್ಣದ ಇನ್ನೊಂದು ಮೇಲು ಹೊದಿಕೆ ಧರಿಸುತ್ತಾನೆ. ಹೆಗಲ ಮೇಲೆ ಕರಿಯ ಕಂಬಳಿ, ತಲೆಯಲ್ಲಿ ಕರಡಿ ಚರ್ಮದ ಟೋಪಿ. ಕೈಯಲ್ಲಿ ಡಮರು ಮತ್ತು ಕೊಳಲು ಹಣೆಗೆ ವಿಭೂತಿ. ಇದು ಶಿವಗೊರವನಾಗಿ ಬಂದುದರ ಸಂಕೇತ. ಗೊರವ ಧಾರ್ಮಿಕ ಪೌರೋಹಿತ್ಯವನ್ನೂ ಮಾಡುತ್ತಾನೆ. ಭಕ್ತರ ಮನೆಯ ಹಬ್ಬಹಿರಿದಿನಗಳಲ್ಲಿ ಈತನನ್ನು ಕರೆದು ಎಡೆ ಮಾಡಿಸುವ ಪದ್ಧತಿಯಿದೆ. ಈತ ಆಯಾಕ್ಷೇತ್ರ, ಮಠ, ಸ್ಥಳಗಳ ಪ್ರಚಾರಕನೂ ಹೌದು. ಹಾಗೆಯೇ ಭಕ್ತರಿಂದ ದೇವರಿಗೆ ಸಲ್ಲಬೇಕಾದ ಹರಕೆಗಳನ್ನು ಸ್ವೀಕರಿಸುವ, ಅವುಗಳನ್ನು ದೇವಾಲಯ ಮಠಗಳಿಗೆ ತಲುಪಿಸುವ ಜವಾಬ್ದಾರಿಯೂ ಇವರದಾಗಿರುತ್ತದೆ. ಗೊರವರ ಕುಣಿತ ಒಂದು ಧಾರ್ಮಿಕ ಕಲೆಯಾಗಿ ವಿಕಾಸಗೊಂಡುದು. ತಮ್ಮ ಧಾರ್ಮಿಕ ಉಡುಪಿನಲ್ಲಿ ಡಮರುಗ ಬಾರಿಸುತ್ತ, ಕೊಳಲೂದುತ್ತಾ ಗುಂಪು ಕೂಡಿ ವರ್ತಿಸುವುದೊಂದು ಅತ್ಯಂತ ಆಕರ್ಷಣೀಯವಾದ ದೃಶ್ಯವಾಗಿರುತ್ತದೆ.

ಗೊರವನಾಗಬೇಕಾದವನು ದೀಕ್ಷೆ ಪಡೆಯಬೇಕಾಗುತ್ತದೆ. ತಂದೆಯ ಹಿರಿಯ ಮಗ ಸಾಮಾನ್ಯವಾಗಿ ಈ ದೀಕ್ಷೆಗೆ ಅರ್ಹನೆಂಬುದು ಪದ್ಧತಿ. ವಯಸ್ಸಿಗೆ ಬಂದ ಭಕ್ತನಿಗೆ ದೀಕ್ಷೆ ಬೇಕೆನಿಸಿದಾಗ ಮೊದಲು ಮಠದ ಅಯ್ಯನಿಗೆ ಪ್ರಾರ್ಥನೆ ಸಲ್ಲಿಸಬೇಕು. ಅವನು ದೀಕ್ಷೆಗಾಗಿ ಪ್ರತ್ಯೇಕವಾದ ಮತ್ತು ಪ್ರಶಸ್ತವಾದ ದಿನವನ್ನು ಗೊತ್ತು ಮಾಡುತ್ತಾನೆ. ಪ್ರಾಚೀನ ಕಾಲದಲ್ಲಿ ಈ ದೀಕ್ಷಾ ಸಂಪ್ರದಾಯ ಹೇಗಿತ್ತೋ ಹೇಳುವುದು ಕಷ್ಟವಾದರೂ ಅದರ ಮೇಲೆ ವೈದಿಕ ಸಂಪ್ರದಾಯದ ಪ್ರಭಾವ ಉಂಟಾಗಿರುವುದು ಕಂಡು ಬರುತ್ತದೆ. ದೀಕ್ಷೆಗೆಂದು ಗೊತ್ತಾದದಿನ ಮನೆಮಠಗಳನ್ನೆಲ್ಲಾ ಗುಡಿಸಿ ಸಾರಿಸಿ ಸ್ವಚ್ಛಗೊಳಿಸಬೇಕು. ಮನೆಮಂದಿಯೆಲ್ಲಾ ಮಿಂದು ಮಡಿಯಾಗುತ್ತಾರೆ. ಆ ದಿನದ ಆಹಾರ ಕೂಡ ವೈದಿಕ ಸಂಪ್ರದಾಯದ್ದೇ. ಪ್ರಾಚೀನಕಾಲದಲ್ಲಿ ಹೀಗಿರಲಿಲ್ಲ. ಆದರೆ ವೈದಿಕ ಸಂಪ್ರದಾಯದಿಂದ ಗೊರವರು ಮಾಂಸಹಾರಿಗಳಾದರೂ ಆ ದಿನದ ಆಹಾರ ಬೇರೆ ರೀತಿಯದಾಗಿರುತ್ತದೆ. ದೀಕ್ಷೆ ಪಡೆಯುವವನು ಮಿಂದು ಮಡಿಯುಟ್ಟು ಅಂಗಾಂಗಗಳಿಗೆ ವಿಭೂತಿ ಧರಿಸಬೇಕು. ನಿಗದಿಯಾದ ಹೊತ್ತಿಗೆ ಮಠದ ಅಯ್ಯ ಅಥವಾ ಅವನ ಪರವಾಗಿ ಕೆಲಸ ಮಾಡುವ ಪುರೋಹಿತ (ಇವರೆಲ್ಲ ಕುರುಬ ಜನಾಂಗದವರೆ) ಬರುತ್ತಾನೆ. ಕರಿಯ ಕಂಬಳಿಯ ಗದ್ದುಗೆಯ ಮೇಲೆ ದೀಕ್ಷಾಪೇಕ್ಷಿತನನ್ನು ಕೂರಿಸುತ್ತಾರೆ. ಅವನು ಕೈಗೆ ಕಂಕಣ, ಕಾಲಿಗೆ ಮಿಂಚು ಧರಿಸುತ್ತಾನೆ. ಪಂಚ ಕಲಶದ ಮೇಲೆ ಕೈಯಿಟ್ಟು ಮೈಲಾರದೇವರ ಹೆಸರಿನಲ್ಲಿ

1. ಹೊಲದಲ್ಲಿ ಮೇಯುವ ಹಸುವನ್ನು ಓಡಿಸುವುದಿಲ್ಲ

2. ಹಾಲು ಕುಡಿವ ಕರುವನ್ನು ತಡೆಯುವುದಿಲ್ಲ

3. ಸರ್ಪವನ್ನು ಕೊಲ್ಲುವುದಿಲ್ಲ

4. ತಂದೆತಾಯಿಯರನ್ನು ದೂಷಿಸುವುದಿಲ್ಲ

5. ಕಾಲಿಗೆ ಎಕ್ಕಡ ಹಾಕುವುದಿಲ್ಲ

6. ಗಾಡಿಯ ಮೇಲೆ ಕೂರುವುದಿಲ್ಲ

ಎಂದು ಪ್ರಮಾಣವಚನ ಸ್ವೀಕರಿಸುತ್ತಾರೆ. ಇವೆಲ್ಲವೂ ಏನನ್ನು ಸೂಚಿಸುತ್ತದೆ ಯೆಂಬುದನ್ನು ಖಚಿತವಾಗಿ ಹೇಳುವುದು ಕಷ್ಟ. ಮೇಯುವ ಹಸುವನ್ನು ಓಡಿಸುವುದಿಲ್ಲ. ಕುಡಿವ ಕರುವನ್ನು ತಡೆಯುವುದಿಲ್ಲ ಎಂಬುದು ಜ್ಞಾನಕ್ಕೆ ಅಡ್ಡ ಬರುವುದಿಲ್ಲ ಎಂಬುದರ ಸಂಕೇತ. ಕಾಲಿಗೆ ಎಕ್ಕಡ ಹಾಕುವುದಿಲ್ಲ ಎಂಬುದು ಪಾವಿತ್ರ್ಯದ ದ್ಯೋತಕ. ಗಾಡಿಯ ಮೇಲೆ ಕೂರುವುದಿಲ್ಲ ಎಂಬುದು ಗೊರವ ಬರಿಗಾಲಿನಲ್ಲಿ ನಡೆದು ಧರೆಯ ಮೇಲಿನ ಸಕಲರನ್ನು ಸಂಪರ್ಕಿಸಬೇಕು ಎಂಬುದನ್ನು ಸೂಚಿಸಿದರೆ, ತಂದೆ ತಾಯಿ ಸರ್ಪಹಸು ಇತ್ಯಾದಿ ದೇವರನ್ನು ನಿರ್ದೇಶಿಸುತ್ತವೆ. ಆರ್ಯರು ಬರುವ ಮೊದಲು ಇಲ್ಲಿನ ಜನ ಇವುಗಳನ್ನೆಲ್ಲ ದೇವರೆಂದು, ಪೂಜಿಸುತ್ತಿದ್ದರು. “Significantly from Aryan times onwards the majority of serpents or Nagas were considiered demows” ಎಂಬ ಅಭಿಪ್ರಾಯವಿದೆ. ಈ ಕಾರಣದಿಂದಲೇ ಆ ಸಂಸ್ಕೃತಿಯ ಮೂಲ ಸೆಲೆಗಳು ಈ ರೀತಿಯಲ್ಲಿ ಉಳಿದುಕೊಂಡು ಬಂದಿರಬಹುದೇನೊ?

ದೀಕ್ಷೆಯನ್ನು ಪಡೆದ ಗೊರವರುಗಳು ಆಗಾಗ ದೇವಾಲಯ ಅಥವಾ ಮಠಗಳಲ್ಲಿ ಸೇರುವುದುಂಟು. ದೇವರ ವಾರ್ಷಿಕ ಜಾತ್ರೆಯ ಸಮಯದಲ್ಲಿ, ಪ್ರಮುಖವಾದ ಹಬ್ಬ ಹರಿದಿನಗಳಲ್ಲಿ ಗೊರವರೆಲ್ಲಾ ಸೇರುವುದುಂಟು. ಇವರೆಲ್ಲಾ ದೇವರ ಸೇವಕರಾದುದರಿಂದ ಭಕ್ತರು ಅರ್ಪಿಸುವ ಹರಕೆಯನ್ನು ಸ್ವೀಕರಿಸುವುದು ಸಂಪ್ರದಾಯ. ಸಾಮಾನ್ಯವಾಗಿ ಶಕ್ತಿದೇವತೆಗಳ ಹಬ್ಬ ಹರಿದಿನಗಳಲ್ಲಿ ಆಯಾ ದೇವತೆಯ ಭಂಟರಿಗೂ ನಾನಾರೀತಿಯ ಹರಕೆಗಳು ಸಲ್ಲುವುದುಂಟು. ಇಲ್ಲಿ ಕೂಡ ವೈದಿಕ ಪ್ರಭಾವವನ್ನು ಕಾಣಬಹುದು. ಮೊದಲು ದೇವತೆಗೆ ಬಲಿ ಕೊಡುತ್ತಿದ್ದ ಪದ್ದತಿಯನ್ನು ದೇವರ ಭಂಟರಿಗೆ ಮಾತ್ರ ಪ್ರಾಣಿಬಲಿ ದೇವತೆಗಲ್ಲ ಎಂಬಂತೆ ಬದಲಾಯಿಸಲಾಗಿದೆ. ಹೀಗೆ ಭಕ್ತರು ಭಂಟರು ಆಚರಿಸುವ ಸಮಾರಂಭಗಳ ಕಾಲದಲ್ಲಿ ಆಯಾದೇವರಿಗೆ ಸಂಬಂಧಿಸಿದ ಅನೇಕ ರೀತಿಯ ಆಚರಣೆಗಳು ನಡೆಯುತ್ತವೆ. ಮೈಲಾರ ಸಂಪ್ರದಾಯದವರ ಇಂತಹ ಸಮಾರಂಭಗಳಲ್ಲಿ ದೋಣಿಸೇವೆ ಎಂಬ ವಿಶೇಷ ಆಚರಣೆಯೊಂದು ಇಂತಹ ಸಮಾರಂಭಗಳಲ್ಲಿ ದೋಣಿಸೇವೆ ಎಂಬ ವಿಶೇಷ ಆಚರಣೆಯೊಂದು ನಡೆಯುತ್ತದೆ. ಮೈಲಾರನ ವಾಹನ ಮತ್ತು ಮುಖ್ಯಸೇನೆ ನಾಯಿ. ಮಣಿ ಮಲ್ಲಾಸುರನನ್ನು ಕೊಲ್ಲಲು ಭೈರವನು ಮಾರ್ತಾಂಡ ಭೈರವಾತಾರ ವೆತ್ತಿದಾಗ ಅವನ ಹಿಂದೆ ಇದ್ದುದು ನಾಯಿಸೇನೆ . ಅದರ ಸಂತೃಪ್ತಿಗೆ ಭಕ್ತರು ನಡೆಸಿಕೊಡುವುದೇ ಈ ದೋಣಿಸೇವೆ. ಇದರ ಸಂಕೇತ ಏನು ಎಂದು ಹೇಳುವುದು ಕಷ್ಟ. ಗ್ರಾಮಾಂತರ ದೇವಾಲಯಗಳ ಗರ್ಭಗುಡಿಯ ಅಕ್ಕಪಕ್ಕ ಎರಡು ಭಯಂಕರ ವಿಗ್ರಹಗಳಿರುತ್ತವೆ. ಇವರನ್ನು ದೇವರ ಭಂಟರು, ದ್ವಾರಪಾಲಕರು, ದೊಣ್ಣೆರಾಯ ಎಂದೆಲ್ಲ ಕರೆಯುವ ಪದ್ಧತಿಯುಂಟು. ಈ ದೊಣ್ಣೇರಾಯನಿಗೆ ಮೊದಲು ಸೇವೆ ಮಾಡಿ ಅನಂತರ ದೇವರ ಸೇವೆ ಮಾಡುವುದುಂಟು. ಆದುದರಿಂದ ದೊಣ್ಣೆರಾಯನಸೇವೆ >ದೊಣೇಸೇವೆ ಆಗಿ ದೋಣಿಸೇವೆ ಆಗಿರಬಹುದೆ? ಹೀಗೆಯೇ ಶ್ರೀ ವೈಷ್ಣವ ಒಕ್ಕಲಿಗರಲ್ಲಿ ಮಣೀಸೇವೆ ಪದ್ಧತಿ ಇದೆ. ಅದರಲ್ಲಿ ವಾಸ್ತವಸಂಗತಿಯೆಂದರೆ ಈ ಸೇವೆ ಮೈಲಾರನ ವಾಹನ ನಾಯಿ ಆಹಾರ ಸೇವಿಸುವ ದೋಣಿಯಾಕಾರದ ಪಾತ್ರೆಯಿಂದ ಇದು ಬಂದಿದೆ ಎಂದು ಹೇಳಲವಕಾಶವಿದೆ.

ದೋಣಿಯೆಂದರೆ ಚೌಕಾಕಾರವಾಗಿರುವ ಬಟ್ಟಲುಗಳು. ಮಣೀಸೇವೆಯಲ್ಲಿ ಬನವಾಸಿಯೆಂಬ ಪಾತ್ರೆಯನ್ನುಪಯೋಗಿಸುತ್ತಾರೆ. ಜೋಗಿಗಳು ಕಾಪಾಲದಂತಹ ಪಾತ್ರೆಯನ್ನುಪಯೋಗಿಸುತ್ತಾರೆ. ಇಂತಹ ಸೇವೆಗಳು ಇರುವ ದಿನ ಅಥವಾ ಹಬ್ಬ ಹರಿದಿನಗಳಂದು ದೇವರ ಗುಡಿಯ ಮುಂದೆ ಗುಡಿಸಿ ಸಾರಿಸುತ್ತಾರೆ. ಮಧ್ಯಭಾಗದಲ್ಲಿ ಕರಿಯಕಂಬಳಿಯ ಗದ್ದುಗೆ ಹಾಕುತ್ತಾರೆ. ಗದ್ದುಗೆಯ ಸುತ್ತ ಗೊರವರು ತಮ್ಮ ದೋಣಿಗಳನ್ನು ಇಡುತ್ತಾರೆ. ಈ ಸೇವೆಯನ್ನು ನೋಡಲು ಊರಿನ ಜನರೆಲ್ಲ ಸೇರುತ್ತಾರೆ. ಡಮರುಗ ಬಾರಿಸುತ್ತ ಗೊರವರು ಗದ್ದುಗೆಯ ಸುತ್ತ ಕುಣಿಯುತ್ತಾರೆ. ಡಮರು ಸದ್ದು ಕೇಳಿದ ಮೇಲೆ ಹರಕೆ ಹೊತ್ತ ಭಕ್ತರುಗಳು ಹಾಲು, ಹಣ್ಣು, ಸಕ್ಕರೆ, ತುಪ್ಪಗಳನ್ನು ತಂದು ದೋಣಿಯಲ್ಲಿ ಹಾಕುತ್ತಿರುತ್ತಾರೆ. ಸ್ವಲ್ಪ ಕಾಲದ ನಂತರ ಗೊರವಯ್ಯಗಳು ದೇವಾಲಯದೊಳಗೆ ಹೋಗಿ ಪೂಜಾರಿಯಿಂದ ತೀರ್ಥ ಮತ್ತು ಭಂಡಾರವನ್ನು ಪಡೆಯುತ್ತಾರೆ. ಭಂಡಾರವನ್ನು ಹಚ್ಚಿಕೊಂಡ ನಂತರ ಅವರಿಗೆ ಆವೇಶವುಂಟಾಗುತ್ತದೆ. ಆಗ ಉನ್ಮತ್ತರಂತೆ ಕುಣಿಯತೊಡಗುತ್ತಾರೆ. ಆವೇಶ ಏರಿದಂತೆಲ್ಲ ಅವರು ನಾಯಿಗಳಂತೆ ವರ್ತಿಸತೊಡಗುತ್ತಾರೆ. ಕೈಗಳನ್ನು ನೆಲಕ್ಕೂರಿ ಚತುಷ್ಪಾದಿಯಾಗಿ ಬಿಡುತ್ತಾರೆ. ಆಹಾರವನ್ನು ತಿನ್ನುವಾಗ ನಾಯಿಗಳು ಮಾಡುವಂತಹ ಎಲ್ಲ ಚೇಷ್ಟಗಳನ್ನು ಮಾಡುತ್ತಾರೆ. ಪರಸ್ಪರ ಕಚ್ಚಾಡುವುದು. ಪ್ರೇಕ್ಷಕರ ಮೇಲೆ ಬೀಳುವಂತೆ ಹೋಗುವುದು ಇತ್ಯಾದಿ. ಈ ಹಂತದಲ್ಲಿ ಪ್ರೇಕ್ಷಕರಿಂದ ಕರಿಯಕಂಬಳಿಯೊಂದನ್ನು ಕಿತ್ತುತಂದು ಹಾಸುತ್ತಾರೆ. ಈ ಹೊತ್ತಿಗೆ ಅವರ ಬೊಗುಳಾಟ ತಾರಕಕ್ಕೇರಿರುತ್ತದೆ. ಆಗ ಒಬ್ಬ ಗೊರವ ಮತ್ತೊಬ್ಬನ ಮೇಲೆ ಹರಿಹಾಯುತ್ತಾನೆ. ಅವನು ಸತ್ತಂತೆ ಬೀಳುತ್ತಾನೆ. ಕೂಡಲೇ ಅವನನ್ನು ಗದ್ದುಗೆಯ ಎದುರು ಹಾಸಿದ ಕರಿಯ ಕಂಬಳಿಯ ಮೇಲೆ ಮಲಗಿಸಿ ಅದರಿಂದ ಅವನ ದೇಹವನ್ನು ಸುತ್ತತ್ತಾರೆ. ಇಲ್ಲಿಗೆ ಮೊದಲು ಹಂತದ ಸೇವೆ ಮುಗಿಯುತ್ತದೆ.

ಈಗ ಗೊರವಯ್ಯಗಳ ಮುಖಂಡ ಬರುತ್ತಾನೆ. ಸತ್ತವನನ್ನು ಬದುಕಿಸುವ ಪವಾಡ ನಡೆಯುತ್ತದೆ. ಕಂಬಳಿಯಲ್ಲಿ ಸುತ್ತಿದವನನ್ನು ದೇವಾಲಯದೊಳಕ್ಕೆ ಎತ್ತಿಕೊಂಡು ಹೋಗುತ್ತಾರೆ. ಪೂಜಾರಿ ದೇವರಿಗೆ ಪೂಜೆ ಸಲ್ಲಿಸಿ, ಸತ್ತವನನ್ನು ಬದುಕಿಸುವಂತೆ ಪ್ರಾರ್ಥಿಸಿ ಅವರಿಗೆಲ್ಲ ಮತ್ತೆ ತೀರ್ಥಭಂಡಾರ ಕೊಡುತ್ತಾನೆ. ಮುಖಂಡ ಸತ್ತವನನ್ನು ಬದುಕಿಸಲು ಊರ ಮುಖಂಡರ ಅನುಮತಿ ಕೇಳುತ್ತಾನೆ. ಎಲ್ಲರ ಪರವಾಗಿ ಊರಗೌಡ ಅನುಮತಿ ಕೊಡುತ್ತಾನೆ. ದೇವರ ತೀರ್ಥ ಪ್ರಸಾದಗಳನ್ನು ಸತ್ತವನ ಮೇಲೆ ತಳಿದು ಆವೇಸದಿಂದ ಕುಣಿಯಲಾರಂಭಿಸುತ್ತಾರೆ. ಆಗ ಸತ್ತವನು ಎದ್ದು ಕೂರುತ್ತಾನೆ. ಈ ಹೊತ್ತಿಗೆ ಭಕ್ತರ ಹರಕೆಯ ಕಾಣಿಕೆಗಳಿಂದ ದೋಣಿಗಳು ತುಂಬಿ ತುಳುಕುತ್ತವೆ. ಆಗ ಗೊರವರೆಲ್ಲ ನಾಯಿಗಳಂತೆ ದೋಣಿಗೆ ಬಾಯಿ ಹಾಕುತ್ತಾರೆ. ಸ್ವಲ್ಪ ತಿಂದ ನಂತರು ಉಳಿದುದನ್ನು ಭಕ್ತರು ಪ್ರಸಾದವೆಂದು ಮನೆಗಳಿಗೆ ಕೊಂಡೊಯ್ಯುತ್ತಾರೆ. ಇಲ್ಲಿಗೆ ದೋಣಿಸೇವೆ ಮುಗಿಯುತ್ತದೆ. ಗೊರವಯ್ಯಗಳ ಮತ್ತು ಭಕ್ತರ ಆವೇಶ ಇಳಿಯುತ್ತದೆ.

ಅತ್ಯಂತ ಪ್ರಾಚೀನವಾದ ಭಾರತೀಯ ಮೂಲ ಜನಾಂಗಗಳ ಆಚರಣೆಗಳು ಪದ್ಧತಿ ಸಂಪ್ರದಾಯಗಳು ವಿದೇಶೀಭಾಷೆ ಮತ್ತು ಸಂಸ್ಕೃತಿಗಳ ಆಕ್ರಮಣದಿಂದಾಗಿ ರೂಪಾಂತರಗಳನ್ನು ಹೊಂದಿವೆ. ಜನಾಂಗ ಮುಂದುವರಿದಂತೆಲ್ಲ ಬದಲಾವಣೆಗಳು ಆಗಿವೆ. ಮೊದಲಿಗೆ ಆರ್ಯರು, ಆಮೇಲೆ ಮುಸ್ಲಿಮರು, ಕೊನೆಯಲ್ಲಿ ಇಂಗ್ಲಿಷರು ಈ ದೇಶದ ಸಂಸ್ಕೃತಿಯ ಮೇಲೂ ದಾಳಿಮಾಡಿದರು. ಇಂಥ ಪ್ರಾಚೀನ ಕಾಲದ ಅನೇಕ ಸಂಪ್ರದಾಯಗಳು ಮೂಢನಂಬಿಕೆಯವು ಎಂದಾಗಿವೆ. ಇನ್ನೆಷ್ಟೋ ಸಂಪ್ರದಾಯಗಳಿಂದ ಸಾಮಾಜಿಕವಾಗಿ ಯಾವ ಪ್ರಯೋಜನವೂ ಇಲ್ಲ. ಆದರೆ ಇವುಗಳಿಂದ ಒಂದು ಸಂಸ್ಕೃತಿಯ ಉಗಮ, ವಿಕಾಸವನ್ನು, ಏಳು ಬೀಳನ್ನು ಗುರುತಿಸಬಹುದು. ಒಂದು ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸ ರೂಪಿಸುವಲ್ಲಿ ಈ ಸಂಪ್ರದಾಯಗಳು ಸಹಕಾರಿಯಾಗುತ್ತವೆ. ಮೈಲಾರಲಿಂಗ ಸಂಪ್ರದಾಯ ಸಹ ಜಾನಪದ ಸಂಪ್ರದಾಯಗಳಲ್ಲಿ ಒಂದು ಎಂದು ಹೇಳಬಹುದು.