ಪೆರಿಯಾಳ್ವಾರರ ತಿರುಮೊಳಿಯು ಪ್ರಮುಖತಃ ಕೃಷ್ಣಚರಿತ್ರೆ, ಗೋಪಿಕೆಯರ ದಿವ್ಯವಾದ ಅನುಭವ, ಯಶೋದೆಯ ಮಾತೃಪ್ರೇಮ, ರಾಮಕೃಷ್ಣರ ಅವತಾರಗಳಲ್ಲಿ ಗೈದ ಲೀಲಾ ವಿನೋದಗಳನ್ನು ಆಳ್ವಾರರು ಅನುಭವಿಸಿದ ಹಾಗೆಯೇ ಎಲ್ಲಾ ಅವತಾರವು ವಿಶಿಷ್ಟನಾದ “ಸರ್ವೇಶ್ವರ” ನನ್ನು ಆಳ್ವಾರರು ಹೇಗೆ ಮುದದಿಂದ ಅನುಭಾವಿಸಿದ್ದರೆಂದು ಅನುಭವಿಸಬಹುದು.

೧. ಪಲಕಾಲ ಪಲಕಾಲ ಪಲವು ಸಾವಿರ ಕಾಲ ಪಲಕೋಟಿನೂರುಕಾಲ ಮಲ್ಲನನ್ನು ಗೆಲ್ಲಿದ ನಿಡುದೋಳ ಮಣಿವಣ್ಣಾ ಇಂದ್ರ ನೀಲಮಣಿಬಣ್ಣದವ ನಿನ್ನ ಚೆಂದರದ ಪಾದಗಳಿಗು ರಕ್ಷೆ ಇರಲಯ್ಯ.

೨. ಪಕ್ಷಿವಾಹನ ನೀನು! ಪರಮಪುರುಷ ನೀ [ಎನ್ನ] ಕೈ ಹಿಡಿದು ಹುಟ್ಟು ಕಡಲಾರಿ (ಭವದ ಸಮುದ್ರ) ಹಿರಿಯಪದವಿ ಬಂದಿತೆಲೋ ನನಗೆ! ಇರವಿರುವಪಾಪ ಕಾಡೆನ್ನಾ ಸುಟ್ಟಿರಲಾಗಿ ಅರಿವ ಅಮೃತನದಿ ತಲೆಮುಟ್ಟಿ ಬಾಯ್ ಮುಚ್ಚಿಹ್ಮದಯ್ಯ,ಕಾಯನ್ನೆ ರಂಗೇಶ!

೩. ಈ ದಾಸನಿಗೆ ನಿನಗೆ ಹಲವು ಕಾಲಸಾಸಿರಾಕು ನಂಟಿಹುದು ಅದು ಹಿಂಜದಿರಲಿ, ನಿನ್ನ ಬಲ ಎದೆಯನ್ನು ಬಿಡದಿರುವ ಸಿರಿದೇವಿ ಸೊಗವಿರಲಿ ಹಲವು ಕಾಲ, ಹಲವು ಕಾಲ!

೪. ಮಿಗು ಹೊಗರ ಸೊಡರಂತೆ (ಕಾಂತಿಯ ದೀವಿಗೆಯಂತೆ) ಬಲದಲಿಹ ಸುದರ್ಶನ ಚಕ್ರ ಸವಿರಲಿ ಬಹುಕಾಲ, ಬಹುಕಾಲ, ಎನ್ನಸ್ವಾಮಿ ನಾರಣನೇ” ಎಂದು ನನ್ನೊಡೆಯಾ, ನಿನಗೆ ನಾವು ಅಡಿಯಾಳುಗಳೆಂದು ಬರೆದುಕೊಂಡೆವೋ, ಅಂದೇ ಮುಕುತಿಯನಾಂತು ಈ ಸೇವಕನ ಕುಲವೇ ಉಜ್ಜೀವಿಸಿತು, ಇದು ನಿಶ್ಚಯ [ಅಡಿಯೋ ಮೋಡುಂ ನಿನ್ನೋಡುಮ್ ಪಿರವಿನ್ರಿ ಆಯಿರಂ ಪಲ್ಲಾಂಡು ವಡಿವಾರ್ ಶೋದಿವರತ್ತುಲೈಯುಂ ಶುಡರಾಳಿಯುಂ ಪಲ್ಲಾಂಡು]

೫. ಪೆರಿಯಾಳ್ವಾರರು ವಿದ್ಯೆಯ ಪ್ರೌಢಿಮೆ, ದೈವಭಕ್ತಿ, ಮೆಚ್ಚಿ ಪಾಂಡ್ಯರಾಜ ಶ್ರೀ ವಲ್ಲಭ ದೇವನು “ಪಟ್ಟರ್ ಪಿರಾನ್” [ಹಿರಿಯ ಭಟ್ಟರು ಎಂಬುದಾಗಿ] ಎಂದು ಬಿರುದಿತ್ತು. ಗೌರವಿಸಿದ. ತಿರುಮಲೆಯ ತಿರುವೇಂಗಡದ ಒಡೆಯ ಶ್ರೀನಾಥ ಶ್ರೀನಿವಾಸನನ್ನು ಕುರಿತು ಪೆರಿಯಳ್ವಾರರು ಸ್ತುತಿಸುವ ಪರಿಹೀಗಿದೆ.

ಲೋಕವನು ಹೊರೆವ ದಾಮೋದರಾ ಚದುರನೆ ನನಗೆ ನನ್ನದಕೆ ನಿನದೆಂಬ! ಮುದ್ರೆಯನೊತ್ತಿ ಕೃಪೆಯ ಬೇಡುತಲಿಹೆನು, ನಿನ್ನ ಮನಸೆಂತೋ! “ಪಕ್ಷಿವಾಹನ ನೀನು ಪರಮ ಪುರುಷನು ನೀನು ಎನ್ನ ಕೈಹಿಡಿದು ಹುಟ್ಟು ಸಾವಿನ ಕಡಲಾರಿ ಹಿರಿ ಪದವಿ ಬಂದಿತಲ! ಎನಗೆ ಪಾಪ ಕಾಂತಾರ ಸೀಮೆ ದಹವಾಗಿರಲು! ಅರಿವ ಅಮೃತನಾಗಿ ತಲೆಯ ಮುಟ್ಟಿ ಎನ್ನಬಾಯ್ಮುಚ್ಚಿದೆಯಯ್ಯ! ಪರಾಕು, ನಿನಗೆ ಪರಾಕು, ನಿನಗೆ ಪರಾಕು ನಿನಗನಂತ ಕಾಲ, ಕಾಯಯ್ಯ, ನಿನ್ನಡಿಯಾಳೆನ್ನ ಪಳಕಾಲ ಪಳಕಾಲ!

ಪೆರಿಯಾಳ್ವಾರರ ಎರಡು ದಿವ್ಯ ಪ್ರಬಂಧಗಳನ್ನು ಹಾಡುವ ರೂಢಿಯು ಶ್ರೀ ವೈಷ್ಣವರಲ್ಲಿ ಇದ್ದೇ ಇದೆ, ಅಲ್ಲದೆ ತಮಿಳುನಾಡಿನ ಅನೇಕರು ಇದನ್ನು ತನ್ಮಯತೆಯಿಂದ ಹಾಡುವುದುಂಟು ಇಲ್ಲಿ ಭಕ್ತಿ ತನ್ಮಯತೆಗೇ ಪ್ರಾಧಾನ್ಯತೆ! ವಾತ್ಸಲ್ಯದ ಅತಿಶಯತಗೇ ಪ್ರಾಮುಖ್ಯತೆ!

ಆಂಡಾಳ್ ಪೂಂಗೋದ್ವೆ ಗೋದೆ

ಶೂಡಿಕುಡುತ್ತ ನಾಯ್‌ಚ್ಚಿಯಾರ್ “ತಾನು ಮುಡಿದು ಆಗೊವನ್ನೇ ದೇವರಿಗೆ ನೀಡಿದ ತಾಯಿ ಗೋದಾದೇವಿ, ಪರಮ ಮುಗ್ಧ ಭಕ್ತೆ ಪರಮಾತ್ಮನನ್ನೇ ಆಳಿದವಳು – ಆಂಡಾಳ್ ಎಂದೇ ಅಭಿದಾನ.

ರಾಮಾಯಣದಲ್ಲಿ ಜನಕರಾಜನಿಗೆ ಸೀತಾದೇವಿ ಭೂಶೋಧನೆಯ ಸಂದರ್ಭದಲ್ಲಿ ದೊರೆತಂತೆ, ಹೂದೋಟದ ಕೈಂಕರ್ಯ ನಡೆಸುವಾಗ್ಗೆ ಪೆರಿಯ ಆಳ್ವಾರರಿಗೆ ದೊರೆತವಳು ಗೋದೆ ಸಾಕುಮಗಳಾಗಿ ಬೆಳೆದಳು, ಶ್ರೀ ವಿಲ್ಲಿಪುತ್ತೂರಿನ ವಟಪತ್ರ ಶಾಯಿಯೊಲಿದಂತೆ ತಂದೆಯ ಮೂಲಕ ದೇವ ದೇವರ ಕಥೆಗಳನ್ನು ಆಲಿಸಿ, ಶ್ರೀ ರಾಗದ ಶ್ರೀ ರಂಗದನಾಥನೇ ತನಗೆ ಪತಿ ಎಂದು ಆತನನ್ನು ಒಲಿದು, ಭಕ್ತಿಯಿಂದ ಉಪಾಸಿಸಿ, ಕಡೆಗೆ ಆಳ್ವಾರರೇ ಮದುವೆ ಮೆರವಣಿಗೆಯಂತೆ ಸಾಲಂಕೃತ ಆಂಡಾಳ್ ದೇವಿಯನ್ನು ಶ್ರೀರಂಗದ ಸ್ವಾಮಿಗೆ ಅರ್ಪಿಸಿದರು. ಆಕೆ ಅಲ್ಲಿಯೇ ಐಕ್ಯಳಾದಳೆಂದು ಐತಿಹ್ಯ!

ಪ್ರತಿ ದಿನವೂ ಪೆರಿಯ ಆಳ್ವಾರರು ತಾನು ಬೆಳಿಸಿದ ಉದ್ಯಾನದ ಹೂಗಳನ್ನೂ ತುಲಸಿಯನ್ನೂ ವಟಪತ್ರ ಶಾಯಿದೇವರಿಗೆ ಅರ್ಪಿಸುವುದು ಜೀವನದ ಆನಂದವಾಗಿತ್ತು ಇವರ ಈ ಆನಂದಕ್ಕೆ ಅನಂದ ವಿನ್ನೊಂದು ಸೇರಿದಂತೆ, ‘ಆಂಡಾಳ್’ ಎಂಬುವ ಮುದ್ದು ಮಗಳು – ಸಾಕುಮಗಳು ಕಪಟ ಅರಿಯದ ಮುಗ್ಧೆ, ಪ್ರೇಮಪೂರಿತ ಹೃದಯ.

ಮದುವೆಯ ವಯಸ್ಸು ಬಂದ ಮೇಲೆ ಈಕೆಗೆ ಅನುರೂಪನಾದ ವರನನ್ನು ಎಲ್ಲಿ ತಂದೇನು ಎಂಬುವ ಚಿಂತೆಯು ಪೆರಿಯಾಳ್ವರಿಗೆ ಆಗಾಗ ಮೂಡುತ್ತಿತ್ತು. ಸಾಮಾನ್ಯವಾಗಿ, ಬಹು ಹಿಂದೆ ದೈವ ಭಕ್ತಿಯನ್ನುಳ್ಳ ಕರ್ಥಾಕ – ವೃತ್ತಾಂತಗಳನ್ನು ಮಕ್ಕಳಿಗೆ ಹೇಳಿ, ಅವರ ಮನ ತಿದ್ದುವ ಕಾರ್ಯವನ್ನು ಹಿರಿಯರಾದವರು ಮಾಡುವುದಿತ್ತು! ಪೆರಿಯಾಳ್ವಾರರು ಸ್ವಭಾವತಃ ದೈವ ಪ್ರೀತಿಯನ್ನುಳ ಆಂಡಾಳ್‌ದೇವಿಗೆ, ಗೋದಾದೇವಿಗೆ ಶ್ರೀ ಮನ್ನಾರಾಯಣನ ದಿವ್ಯ ಸೌಂದರ್ಯವನ್ನು ಪರಿಪರಿಯಾಗಿ ಹಾಡಿ ಬಣ್ಣಿಸುತ್ತಿದ್ದರು ಗೋದಾದೇವಿಗೆ ತನ್ನ ಊರಿನ ವಟಪತ್ರಶಾಯಿ ಶ್ರೀ ಕೃಷ್ಣನ ಮೇಲೆ ಪ್ರೇಮ, ಭಕ್ತಿ ಮೂಡುತ್ತಿರುವುದರ ಜೊತೆಗೇ ಶ್ರೀ ರಂಗ ಕ್ಷೇತ್ರದ ಶ್ರೀ ರಂಗನಾಥಸ್ವಾಮಿಯ ಸೌಂದರ್ಯದಲ್ಲಿಯೇ ಏಕಮೇವ ನಿಷ್ಠೆ – ಪ್ರೇಮ ಬೆಳೆಯಿತು, ಹೂದೋಟದ ಕಾರ್ಯದಲ್ಲಿ, ತಂದೆಯವರಿಗೆ ಸಹಕಾರವನ್ನು ನೀಡುತ್ತಿದ್ದ ಬಾಲಕಿ ಆಂಡಾಳ್, ದೇವರಿಗೆ ಹೂವಿನ ಹಾರ ಪವಣಿಸುವುದರಲ್ಲಿ ತುಂಬಾ ಒಲವು ತೋರುವಳು.

ಹೂಗಳನ್ನು ಮುಡಿಯುವುದೂ ಕೂಡ ಆ ನೀಳವೇಣಿಗೆ ಬಹು ಆಸೆ ತಾನು ಮುಡಿದ ಹೂ ಮಾಲೆಯನ್ನು ದೇವರಿಗೆ ಅರ್ಪಿಸಿದಾಗ ಆ ಮನಮೋಹಕ ಸೌಂದರ್ಯ ಇನ್ನೂ ಹೆಚ್ಚುವುದೆಂದೇ ಅವಳ ನಂಬುಗೆ ಮುಗ್ಧ ಭಕ್ತಿ, ಆಕೆಯದು! ತಂದೆಯ ಮುಂಜಾವಿಗೇ ಎದ್ದು ಉಷಸ್ಸಿನ ಕರಸ್ಪರ್ಶದಿಂದ ಎಚ್ಚೆತ್ತ ಮಲ್ಲಿಗೆ, ಜಾಜಿ, ಸಂಪಿಗೆ ಮೊದಲಾದ ಹೂಗಳು, ತುಲಸೀದಳಗಳು ಇವೆಲ್ಲವನ್ನು ಮೃದುವಾಗಿ ಕಿತ್ತು ಬಿಡಿಸಿ ಹೂ ಬುಟ್ಟಿನಲ್ಲಿ ಹಾಕಿ ಮನೆಗೆ ತರುವರು ದೇವಾಲಯಕ್ಕೆ ಒಯ್ಯುವ ಮೊದಲೇ ಹೂಗೊಂಚಲು ಗೊಂಚಲಾಗಿ ಕಟ್ಟಿ ಇಡುವ ಕೈಂಕರ್ಯ ಆಂಡಾಳಿನದು.

ಆದರೆ ಅವಳು ಇಷ್ಟು ಮಾತ್ರಕೇ ಸುಮ್ಮನಿರುವವಳಲ್ಲ ಆ ಹೂಮಾಲೆಯನ್ನು ತಾನು ಮೊದಲು ಮುಡಿದು ಕನ್ನಡಿಯಲ್ಲೋ, ಉದ್ಯಾನದ ಬಾವಿಯ ನೀರಿನ ಪ್ರತಿಬಿಂಬದಲ್ಲಿಯೋ ನೋಡಿಕೊಂಡು ಅವು ಸೊಗಯಿಸ್ಮತ್ತವೆಂದು ಭರವಸೆ ಹೊಂದಿ ಬುಟ್ಟಿಯಲ್ಲಿಡುವಳು ಹೀಗೆ ಬಹಳ ಕಾಲ ನಡೆಯಿತು. ಒಮ್ಮೆ ವಿಷ್ಣುಚಿತ್ರರು ಮಗಳ ವರ್ತನೆಯನ್ನು ಗಮನಿಸಿದರು. ಆ ದಿನ, ದೇವರ ಮೀಸಲನ್ನು ಹೀಗೆ ಮಾಡುವುದೆ ತಮ್ಮ ಮಗಳು ಎಂದುಕೊಂಡವರೇ ಹೂಗಳನ್ನು ದೇವರಿಗೆ ಸಮರ್ಪಿಸಲಿಲ್ಲ ಅಪಚಾರಗೈದೆನಲ್ಲ ಎಂದು, ಆಂಡಾಳ್ ಸೊರಗಿದಳು. ಆ ದಿನ ರಾತ್ರಿ ವಿಷ್ಣುಚಿತ್ರರಿಗೆ ಒಂದು ಕನಸು. ದೇವರೇ ಕಾಣಿಸಿಕೊಂಡು “ಆಳ್ವಾರರೆ” ಎಂದಿನಂತೆ ಏಕೆ ನನಗೆ ಹೂಗಳ ಕೈಂಕರ್ಯವನ್ನು ಅರ್ಪಿಸಲಿಲ್ಲ ನಿಮ್ಮ ಮಗಳು ಒಮ್ಮೆ ತನ್ನ ನೀಳ ಜಡೆಯಲ್ಲಿ ಅಲಂಕೃತವಾಗಿ ಆನಂತರವಾಗಿ ನಿವೇದಿತ ಆಗಿ ಬರುವ ಹೂವೇ ನನಗೆ ಪರಮ ಪ್ರಿಯವು ಹಾಗೂ ಇನ್ನು ಮುಂದೆ ಅವಳು [ಆಂಡಾಳ್] ಸೂಡಿ ಕಳಚಿದ ಹೂಮಾಲೆಯನ್ನೇ ನನಗೆ ನೀವು ಅರ್ಪಿಸಿರಿ” ಎಂದು ಅಪ್ಪಣೆಮಾಡಿದರು. ತಂದೆಯಾದ ವಿಷ್ಣು ಚಿತ್ರರಿಗೆ ಎಷ್ಟೊಂದು ನಿರ್ಮಲವಾದ ಸಂತೋಷ, ಮಗಳಿಗೂ ಮುದವಾಯ್ತು! ಭಕ್ತಿ ಎಂದರೆ, ದೇವರಲ್ಲಿ ಉಂಟಾಗುವ ಪರಮ ಪ್ರೇಮ ಸ್ವರೂಪ, ಸ್ನೇಹ ಎಂದೆಲ್ಲ ನಾರದ ಭಕ್ತಿ ಸೂತ್ರ, ಶ್ರೀ ರಾಮಾನಜನ ನಿರೂಪಣೆಯುಂಟು. ತಾನು ಮುಡಿದುಕೊಂಡು ಅದೇ ಪುಷ್ಪಮಾಲೆಯೇ ದೇವರಿಗೆ ನೈವೇದ್ಯ ಆಗುತ್ತಿತ್ತು ಅದರಿಂದಾಗಿ ಆಂಡಾಳಿಗೆ, ಶೂಡಿಕ್ಕುಡುತ್ತ ನಾಚ್ಚಿಯಾರ್ – ಎಂದರೆ, “ಮೂಡಿದ ಹೂವನ್ನು ದೇವರಿಗೆ ಅರ್ಪಿಸಿದ ದೇವಿ” ಎಂಬ ಪ್ರತೀತಿಯು ಬಂದಿತು. ಪತ್ರಂ ಪುಷ್ಪಂ ಫಲಂ ತೋಯಂ – ಎಲೆ, ಹೂ, ಹಣ್ಣು, ನೀರು – ಏನನ್ನೇ ಆಗಲಿ ನನಗೆ, ತುಂಬು ಭಕ್ತಿಯಿಂದ ಅರ್ಪಿಸಲಿ, ಅದು ನನಗೆ ಪರಮಭೋಗ್ಯ ಎಂಬುವ ಗೀತಾಚಾರ್ಯನ ಮಾತು ಇಲ್ಲಿ ಗೋದೆಯ ವಿಚಾರದಲ್ಲಿ ಸತ್ಯವಾಗಿಯೆ ಪರಿಣಮಿಸಿತು.

ಆಂಡಾಳ್/ಯಾ/ಗೋದಾದೇವಿಯು ತನ್ನ ಭಗವದಮಿಭವವನ್ನು ಎರಡು ದಿವ್ಯ ಪ್ರಬಂಧಗಳ ಮೂಲಕ ಬಣ್ಣಿಸಿದ್ದಾಳೆ ಒಂದರ ಹೆಸರು “ತಿರುಪ್ಪಾವೈ” ಇನ್ನೊಂದು ದಿವ್ಯಪ್ರಬಂಧ “ನಾಚ್ಚಿಯಾರ್ ತಿರುಮೊಳಿ”. ಶ್ರೀಮನ್ನಾರಾಯಣನೇ ತನ್ನ ಮನದನ್ನನಾಗಬೇಕೆಂದು ಮನವುಳ್ಳವಳ್ಳಾಗಿ, ಅದಕ್ಕೆಂದೇ ಮಾರ್ಗಶಿರ ಮಾಸ [ಧನುರ್ಮಾಸ – ಮಾರ್ಹಳಿ – ಎಂದೆಲ್ಲ ಶ್ರೀವೈಷ್ಣವರು ಕರೆಯುವುದಿದೆ. “ಮಾಗಿ” ಕಾಲ – ಡಿಸೆಂಬರ್ – ಜನವರಿಯ ನಡುವಣ ಅವಧಿ ಗೀತೆಯಲ್ಲಿಯೂ ಶ್ರೀ ಕೃಷ್ಣನು ಮಾಸಾನಾಲ ಮಾರ್ಗಶೀರ್ಷೋಸ್ಮಿ ಎಂದಿದ್ದಾನೆ] ತಿರುಪ್ಪಾವೈಯಲ್ಲಿ ಮೂವತ್ರು ಪಾಶುರ ಅಥವಾ ಪದ್ಯಗಳಿವೆ. ತಿರು – ಎಂದರೆ, “ಶ್ರೀ” ಪಾವೈ ಎಂದರೆ – ವ್ರತವೆಂದರ್ಥ ಗೋಕುಲದ ಗೋಪಿಯರು, ಶ್ರೀ ಕೃಷ್ಣನ ದಿವ್ಯವಾದ ಅನುಭವ ಪಡೆಯಲು ಹಿರಿಯರು ಸಲಹೆ ಮಾಡಿದ್ದರ ಮೇರೆಗೆ, ಶಿವನ ಮಡದಿಯಾದ – ಕಾತ್ಯಾಯಿನೀದೇವಿ ಕನ್ಯಾಕುಮಾರಿ ವ್ರತವನ್ನಾಚರಿಸಿ ತಮಗೆ ಭಗವಂತನ “ದಿವ್ಯ ಮೈತ್ರಿ – ಪ್ರೇಮಗಳನ್ನು ಎಡಬಿಡದೆ ಕೃಪೆಮಾಡು” ಎಂದು ಬೇಡುತ್ತ ವ್ರತವಾಚರಿಸಿದರು ಅದನ್ನೇ ಗೋದೆ “ತಿರುಪ್ಪಾವೈ” ಶ್ರೇಷ್ಠವಾದ ವ್ರತ [ನೋಂಪಿ] “ಶ್ರೀ ಕೃಷ್ಣ ಸೇವಾ ವ್ರತ” ವೆಂದು ಆಚರಿಸಿ ತನ್ನ ನಾರಾಯಣನನ್ನು ಪಡೆದಳು ತಿರುಪ್ಪಾವೈ ಭಕ್ತಿ ಕಾವ್ಯ ಮಾತ್ರವಲ್ಲ. ಅಲ್ಲಿ ಕಾಣಬರುವ ಪರಿಸರ ವರ್ಣನೆ, ಕವಿತೆಯ ಶಿಲಪ, ಪುರಾಣ ಇತಿಹಾಸ ವೇದ ಉಪನಿಷತ್ತು ಆಚಾರ್ಯವಾಣಿಗಳ ಸಾರ ಉಲ್ಲೇಖ, ಸದಾಚಾರ – ಸಂಸ್ಕೃತಿಯಾಳಗಳು ಎಲ್ಲವು ತೀವಿ “ತಿರುಪ್ಪಾವೈ”ಯನ್ನು ಸುಂದರ ಕಾವ್ಯವಾಗಿಸಿದೆ. ತಿರುಪ್ಪಾವೈ – ಸಾಮಾನ್ಯವಾಗಿ ಎಲ್ಲರೂ ಕೇಳಿರುವ ಪದ್ಯಗಳ ಗೊಂಚಲು ಮೂವತ್ತು ದಿನ, ದಿನವೂ ಒಂದು ಪಾಶುರದಂತೆ, ಹಾಡಿ ಅದರ ಅರ್ಥ, ಅಂತರಂಗ ಸ್ವಾರಸ್ಯ ಅರಿತು, ಆನಂದಿಸುವ ಕ್ಷಣಗಳು, ಮುಪ್ಪದುಂ ತಪ್ಪಾಮೈ– ಮೂವತ್ತು ಪದ್ಯಗಳನ್ನು “ತಪ್ಪದೆಯೆ ಪ್ರತಿನಿತ್ಯ ಹಾಡುವ ಈ ವ್ರತ – ಶ್ರೀ ಕೃಷ್ಣ ಸೇವಾ ವ್ರತ, ಮೂಲ ತಮಿಳಿಂದ ಕನ್ನಡಕ್ಕೆ, ಸಂಸ್ಕೃತ, ಇಂಗ್ಲಿಷಿಗೆ ಸಾಕಷ್ಟು ಅನುವಾದ ಬಂದಿವೆ, ಜನಪ್ರಿಯ ಆಗಿದೆ, ಇದಲ್ಲದೆ “ತಿರುಪ್ಪಾವೈ” ಪದ್ಯಗಳಲ್ಲಿ ಅಡಕಗೊಂಡಿರುವ ಗಹನವಾದ ಆಧ್ಯಾತ್ಮಿಕಾರ್ಥವನ್ನು ಅನೇಕ ಆಚಾರ್ಯರು, ವಿದ್ವಾಂಸರು ಜನತೆಗೆ ತಿಳಿಪಡಿಸಿದ್ದಾರೆ, ಶತಮಾನಗಳ ಹಿಂದಿನ ಗೋಕುಲ, ಅಲ್ಲಿಯ ಗೋಸಂಪತ್ತು, ಬೇಕಾದಂತೆ ಪ್ರಕೃತಿ ಸಮೃದ್ಧಿ ಗೋಪಾಲಕರ ಬದುಕು, ಗೋಪಿಕೆಯರ ದೈವಪ್ರೇಮ – ಇವೆಲ್ಲ ತಿರುಪ್ಪಾವೈಯಲ್ಲಿ ಸೊಗಸಾಗಿ ಮೂಡಿಬಂದಿದೆ.

೧.        ಮಾರ್ಗಶಿರಮಾಸದಲ್ಲಿ, ಪಾಲ್ಜೊನ್ನವೆಳಗಿನಲಿ
ಜಗುನೆಯೊಳು ಮಿವೆವಾಂ ಬನ್ನಿರೌಗೆಳತಿಯರೆ
ಶಿರಿಮೆರೆವ ಗೊಕುಲದ ನಲೊಡಗೆಯಣುಶಿಯರೆ,
ಕೂರ್ಗೋಲ ಪಿಡಿದಾಳ್ವ ನಂದಗೋಪನಕಂದ,
ಮಲರ್ಗಣ್ಣನಿನಸಸಿಗಳೆಣೆವಂದ ಮೊಗದವಂ
ಗೋವಿಂದನೆಮ್ಮಲ್ಲರಿಚ್ಚೆಯಂ ಸಲಿಸುವಂ
ಜಗಪೊಗಳಲೀ ನಮ್ಮ ನೋಂಪಿ ತಾನೊಳ್ಳಿತಕ್ಕುಂ
ತಮಿಳು ಏಲೋರೆಂಬಾವಾಯ್ ಎಂಬುದನ್ನು
ಏಲ್ ಓರ್ ಎಂ ಪಾವೈ ರೀತಿ ಬಿಡಿಸಿ ಅರ್ಥಯಿಸಬೇಕು.

ನಮ್ಮ ವ್ರತವು [ಪಾಲ್ವೆ] ಸಾರ್ಥಕವಾಗುವುದು (ಪಾವೈ ಎಂದರೆ ವ್ರತವೆಂದು ಅರ್ಥ) ಈ ರೀತಿ ಭಕ್ತಿಯಿಂದ ಆಚರಿಸಿದಾಗ ನಮ್ಮ ವ್ರತವು ಸಾರ್ಥಕವಾಗುತ್ತದೆ. ಈ ಸಾಲು, ಪ್ರತಿ ಪದ್ಯದ ಕೊನೆಯಲ್ಲಿ ಪುನರುಚ್ಚರಿತವಾಗುತ್ತದೆ. ಕೊರೆವ ಹೇಮಂತ ಮಾಗಿ ಮಾರ್ಗಶಿರ ತಿಂಗಳು ಹಾಲಿನಂಥ ಬೆಳದಿಂಗಳೂ ಮುಗಿದು ಉಷಸ್ಸು ಮೂಡುತ್ತಿದೆ ಸ್ನಾನ ಮಾಡುವ, ನದಿಯಲ್ಲಿ ಬನ್ನಿ ಸಖಿಯರೆ, ಗೋಕುಲದ ಸಿರಿಯಂತಹ ಓಳ್ಳೆ ಉಡುಗೆ ತೊಟ್ಟ ಗೆಳತಿಯರೆ, ಚೂಪಾದ ವೇಲಾಯುಧವನ್ನು ಹಿಡಿದಿರುವ ನಂದಗೋಪನ ಮಗ ಶ್ರೀ ಕೃಷ್ಣನು ತಾವರೆ ಹೂಕಣ್ಣು – ಚಂದಿರ – ಸೂರ್ಯರಂತಹ ಕಂಗಳವನು, ಗೋವಿಂದನಾತನು, ನಮ್ಮನ್ನು ಕಾಪಾಡುತ್ತಾನೆ, ನಮ್ಮ ಆಸೆ ಸಲ್ಲಿಸುವನು, ಬನ್ನಿ ಈ ವ್ರತ ಸಿದ್ದಿಸಲಿ [ವನ್ದು – ವಂದು=ಬಂದು]

ಇನ್ನೊಂದು ಪದ್ಯ ಹೀಗಿದೆ:

            ಶಿತ್ತಂ ಶಿರುಕಾಲೇವನ್ದು ಉನ್ವೈಚ್ಚೇವಿತ್ತು, ಉನ್
ಪೊತ್ತಾಮರೈ ಅಡಿಯೇ ಪೋತ್ತುಂ ಪೊರುಳ್ ಕೇಳಾಯ್
ಪೆತ್ತಂ ಮೇಯ್ತ್ತುಣ್ಣುಂ ಕುಲತ್ತಿಲ್ಪಿರನ್ದು ನೀ
ಕುಟ್ರೇವಲ್ ಎಂಗಳೈ ಕೊಳ್ಳಾಮಲ್ ಪೋಹಾದು [ಪೋಗಾದು]
ತಮಿಳು ಮೂಲ : ಎತ್ತೆಪ್ಪರೈ ಕೊಳ್ವಾನ್ ಅನ್ರು ಕಾಣ್ಗೋವಿಂದಾ,
ಇತ್ತೈಕುಂ ಏಳೇಳು [ಏಳೇಳು] ಪಿರವಿಕ್ಕುಂ ಉನ್ತನ್ನೋಡು
ಉತ್ತೋಮೇಯಾವೋಮ್ ಉನಕ್ಕೇನಾಮ್ ಆಳ್ಚೆಯ್ವೋಂ
ಮತ್ತೈನಂ ಕಾಮಂಗಳ್ ಮಾತ್ತೇಲೋರೆಂಬಾವಾಯ್

ಹೊತ್ತು ಮೂಡುವ ಮುನ್ನ ಬಂದು ನಿನಗೆ ನಮಿಸಿ ನಿನ್ನ
ಹೊಂದಾವರೆ ಪದವನ್ನು ಪೊಗಳುವ ಬಯಕೆಯೇನೆಂದು ಕೇಳು,
ದನ ಕಾಯ್ದು ಜೀವಿಸುವ ವರಕುಲದಲ್ಲಿ ಜನಿಸಿದ ನೀನು [ಗೋಕುಲ]
ಸೇವಕರಾದೆಮ್ಮನೊಪ್ಪದೆ ಹೋಗಲಾಗದಯ್ಯ
ಸುಮ್ಮನೆ ಕೂಗಾಡಿ ಹೋಗುವವರಲ್ಲ ನಾವು “ಗೋವಿಂದಾ”
ಇನ್ನೆಲ್ಲ ಕಾಲಕ್ಕೂ ಏಳೇಳೂ ಜನುಮಕ್ಕೂ
ನಿನ್ನನೇ ಒಳಪಟ್ಟವರಾಗಿಹವರು ನಾವು ನಿನಗೆ ನಾವು ಆಳುಗಳು, ಮತ್ತೇನ
ಕಾಮನೆಗಳರಿದವರೆ ಅವು [ಬೇಡ] ನಶಿಸಲಿ, [ಆಕಾಮಗಳೆಲ್ಲವೂ]

“ಏಲೋ ರೇಂಬಾವಾಯ್,” ಈ ನಮ್ಮ ಸೇವಾ ವ್ರತವು ತಾ ಸಿದ್ದಿಸಲಿ, ಗೋವಿಂದ!
ಮೊದ ಮೊದಲ ಮುಂಜಾವಿನಲ್ಲಿ ಬಂದು ಪೊಡಮಟ್ಟು
ನಿನ್ನ ಪದ ಪಂಕಜದ ನಾವ್ ಪೊಗಳೆ ಬಯಕೆಯಿದು
ತುರುಗಾಹಿಗೋವಳರ ಕುಲದೊಳುದಿಸಿದ ನೀನು
ನಮ್ಮಿಂದ ಸೇವೆಗಳ ಕೈಗೊಳ್ಳದಿರ ಬೇಡ
ಈಯೊಂದು ಫಲಕೆಂದೆ ಬರಲಿಲ್ಲ ಗೋವಿಂದ,
ಎಂದೆಂದುಮೇಳೇಳುಂ ಮೆಯ್‌ವರಂ ನಿನ್ನಡಿಯ
ಮಿಸಲಿನ ತೊಳ್ತಿರಾಂ, ನಮ್ಮ ಕೀಳ್ಬಯಕೆಗಳ
ತೊಲಗಿಸೈ ಈ ನಮ್ಮ ನೋಂಪಿತಾನೊಳ್ಳಿತಕ್ಕುಮ್

ಅಂಡಾಳ್ ಹಾಡಿರುವ ಮತ್ತೊಂದು ಪ್ರಬಂಧ – “ವಾರಣಮಾಯಿರಂ” (ಸಾವಿರ ಆನೆಗಳು)

ಸಾವಿರ ಆನೆಗಳ ದಿಬ್ಬಣದಲ್ಲಿ ಬಂದ ಗೋವಿಂದನು ಎನ್ನನೊಲಿದು ಮದುವೆಯಾದ ಎಂದು ಆಂಡಾಳ್ ತನ್ನ [ತೋಳಿ] ಸಖಿಯರೊಂದಿಗೆ ತನ್ನ ಕಂಡ ಕನಸನ್ನು ವರ್ಣಿಸುತ್ತಾ ಅದು ನನಸಾಗಲು ಪ್ರಾರ್ಥಿಸುವ ಗೀತೆಗಳು ಅಥವಾ ನಾಯ್ಚ್ಚಿಯಾರ್ ತಿರುಮೊಳಿ ಎಂಬುದು ೧೪೩ ಪದ್ಯಗಳುಳ್ಳ ದಿವ್ಯ ಪ್ರಬಂಧ [ಒರುನೂತ್ತು ನಾಲ್ವತ್ತು ಮೂನ್ರುರೈತಾಳ್] [ನೂರನಲವತ್ಮೂರು ಪದ್ಯ ಹಾಡಿದಳು ಬಾಳಲಿ] ತಾನೊಲಿದ ಶ್ರೀ ರಂಗನಾಥನಲ್ಲಿ ತನಗಿರುವ ದಿವ್ಯ ಉತ್ಕಟ ಪ್ರೇಮವನ್ನು ಹಂಬಲದಿಂದ ಆಂಡಾಳ್ ತೋಡಿಕೊಳ್ಳುವ ಪಾಶುರಗಳಿವು. “ತಾನು ತನ್ನ ಪ್ರಾಣವಲ್ಲಭನನ್ನು ಮದುವೆಯಾದಂತೆ ಕನಸು ಕಂಡೆ” ಎಂದು ಹೇಳಿಕೊಳ್ಳುತ್ತಾಳೆ. [ವಧುವರರ ಮೆರವಣಿಗೆ, ಓಕುಳಿಯಾಟ, ಮಂಗಳಸ್ನಾನ]

            ಕುಂಕುಮ ಮಪ್ಪಿಕ್ಕುಳ್ಳಿರ್ ಚಾಂದಮ್ಮಟ್ಟಿತ್ತು
ಮಂಗಲವೀದಿ ವಲಂಶೆಯ್ದು ಮಣನೀರ್
ಅಂಗವನೋಡುಮುಕನ್ ಶೆನ್ರಂಗಾನೈಮೇಲ್
ಮಂಜನಮಾಟ್ಟ – ಕ್ಕನಾಕ್ಕಂಡೇನ್ ತೋಳೀ ನಾನ್ (ಕನವು – ಕನಸು)
ಕುಂಕುಮವ ಪೂಸಿಕೊಂಡು ತಂಪು ಚಂದನವ ತೀಡಿ
ಮಂಗಲದಿ ತಿರುಗಿ ಆ ಬೀದಿ ಅಲ್ಲಲ್ಲಿ
ಅವನೊಡನೆ ಆನೆಯ ನೆರಿ ಓಕುಳಿಯಾಡಿ
ಜಳಕ ಮಾಡಿದೆನೆಂಬಾ ಕನಸ ಕಂಡೆನೇ ಕೆಳದೀ ನಾನು

ಈ ದಿವ್ಯ ಪ್ರಬಂಧ – ಗೀತೆಗಳಿಂದಾಗಿ ಆಂಡಾಳ್, ಅಂತರಂಗದ ಆಳ್ವಾರ್ ಶ್ರೇಣಿಯನ್ನೇ ಪಡೆದಳು ಶ್ರೀರಾಮಾನುಜರು ಪ್ರತಿನಿತ್ಯವೊ ತಾವು ಭಿಕ್ಷೆ ವೃತ್ತಿ ನಡೆಸುವಾಗ ತಿರುಪ್ಪಾವೈ ಪದ್ಯಗಳನ್ನು ಹಾಡುತ್ತ ಬರುತ್ತಿದ್ದರು. ಆದರಿಂದಲೇ ಅವರಿಗೆ “ತಿರುಪ್ಪಾವೈ ಜೀಯರ್” ಎಂದೇ ಹೆಸರಾಯ್ತು. ಹಾಗೂ ಆಕೆಯ ಒಂದು ಹರಕೆಯನ್ನು ರಾಮಾನುಜರು ಪೂರೈಸಿದ್ದರಿಂದ “ಗೋದಾಗ್ರಜರ್” ಎಂದು ಅವರಿಗೆ ಹೆಸರು ಬಂದಿತು – ಆಂಡಾಳ್ ವರದಿಂದ! ಕ್ರಿ.ಶ. ೧೨ನೇ ಶತಕದ ವಿಶಾಲ ಹಹಿಳಿನಲ್ಲಿದ್ದ ಅಕ್ಕಮಹಾದೇವಿಯು ಹೇಗೆ ತನ್ನ ಆರಾಧ್ಯದೈವ – ಚನ್ನರಸನಾದ – ಶ್ರೀಶೈಲ ಚೆನ್ನಮಲ್ಲಿಕಾರ್ಜುನನನ್ನು ಒಲಿದಳೋ ಆ ರೀತಿ ಆಂಡಾಳ್, ಶ್ರೀ ರಂಗನಾಥನನ್ನು ವರಿಸಲು ನಿಶ್ಚಯಿಸಿದಳು, ಒಂದು ಶುಭ ಮುಹೂರ್ತದಲ್ಲಿ ಮಗಳನ್ನು ಸಾಲಂಕೃತಳಾಗಿಸಿ, ಎಲ್ಲವೆಲ್ಲ ಮರ್ಯಾಕಾದೆ – ದಿಬ್ಬಣದ ಮಾದರಿಯಲ್ಲಿ – ಕರೆದೊಯ್ದರು ಪೆರಿಯಾಳ್ವಾರರು, ಶ್ರೀ ರಂಗಕ್ಕೆ! ಶ್ರೀ ರಂಗನ ಗರ್ಭಗುಡಿ, ಆತನ ಶೇಷ ಪರ್ಯಂಕವನ್ನೇರಿ ಆಂಡಾಳ್, ಪ್ರಕೃತಿಯನ್ನು ಸೃಷ್ಟಿಸುವ ಆಮಹಾಪುರುಷನಲ್ಲಿ ಲೀನಳಾಗಿ ಹೋದಳು.

ಅಂತರ ವಿಷ್ಣು ಚಿತ್ತರು ತಿಳಿಸುತ್ತಾರೆ
ಒರುಮಹಳ್ ತನ್ನೈಲಯುಡೈಯೇನ್
ಉಲಹಂ ನಿರೈನ್ದ ಪುಹಳಾಲ್
ತಿರುಮಹಳ್ ಪೋಲವಳರ್‌ತ್ತೇನ್
ಶೆಂಗಣ್ ಮಾಲ್ ತಾನ್ ಕೊಂಡು ಪೋನಾನ್!

ಒಬ್ಬಳೇ ಮಗಳು – ಲೋಕದೆಲ್ಲ ಅವಳ ಕೀರ್ತಿ ಹಬ್ಬುವಂತೆ, ಲಕ್ಷ್ಮೀದೇವಿಯ ಹಾಗೆ ಬೆಳೆಸಿದ ಕಮಲದ ಕಣ್ಣುಳ್ಳ ಸ್ವಾಮಿಯು, ತಾನೇ ಅವಳನ್ನು ಕೊಂಡು ಹೋದನಲ್ಲ!,

ನಮ್ಮಾಳಾರ್: ಪ್ರಪನ್ನಜನಕೂಟಸ್ಥ”ರೆಂಬುದಾಗಿ ಗೌರವಿಸಿದ್ದು, ಅದರ ಹಿರಿಯತನದಿಂದಾಗಿ, ಎಲ್ಲ ಆಳ್ವಾರರದೊಂದು ಪ್ರಬಂಧದೈಸಿರಿ ಹೇಗೋ, ಹಾಗೆ ನಮ್ಮಾಳ್ವಾರರದೇ ವಿಶಿಷ್ಟತೆ ಪಾಡ್ಯಾ ಮಂಡಲ, ತಾಮ್ರಪರ್ಣಿ ನದಿ ತೀರ, ಆಳ್ವಾರ‍್ತಿರುನಹರಿ, “ತಿರುನಹರಿ” ಅಥವಾ ತಿರುಕ್ಕುರುಹೊರ್” ಎಂಬ ಊರಿನಲ್ಲಿ ವೆಲ್ಲಾಳರೆಂಬ ಕುಲದವರಲ್ಲಿ ಜನಿಸಿದನು. ಒಂದು ವೈಲಕ್ಷಣ್ಯವೆಂದರೆ, ನಮ್ಮಾಳ್ವಾರ್, ಹುಟ್ಟಿನಿಂದಿನಿಂದ ಹದಿನಾರು ವರ್ಷ ಪರ್ಯಂತ ದೇವಾಲಯದ ಎದುರು ಒಂದು ಹುಣಸೇಮರದ ಪೊಟರೆಯಲ್ಲಿ [ಈಗಲೂ ಆಳ್ವಾರ್ ತಿರುನಹರಿಯ ದೇವಾಲಯದ ಎದುರು ಆ ಮರ ಇದೆ] ಯೋಗನಿದ್ರೆ ಯೋಗ ಸಮಾಧಿಯಲ್ಲೇ ಇದ್ದರೆಂಬುದು ಐತಿಹ್ಯ ಹೀಗಿರುವಲ್ಲಿ ಬದರೀನಾಥ ಯಾತ್ರೆಯಿಂದ ಅಯೋದ್ಯೆಗೆ ಬಂದ ಮಧುರ ಕವಿಗಳು ಹಾಗೆಯೇ ಬರುತ್ತಿರಲು, ಒಂದು ರಾತ್ರಿ ತೆಂಕಣದಿಸೆಯಲ್ಲಿ, ತೇಜ ಪುಂಜವನ್ನು ಕಂಡರು, ಅದೇನೆಂದು ಗಮನಿಸುವ ಎಂಬುವ ಕುತೂಹಲದಿಂದ ತಮ್ಮ ವಯಸ್ಸು, ಶ್ರಮ, ಲೆಕ್ಕಿಸದ ಮಧುರಕವಿ ಆಳ್ವಾರರು ತೇಜಸ್ಸನ್ನೇ ಲಕ್ಷ್ಯವಾಗಿರಿಸಿಕೊಂಡು ದಕ್ಷಿಣಾಭಿಮುಖವಾಗಿ ಪಯಣಿಸುತ್ತ ಪಯಣಿಸುತ್ತ ತಿರುನಗರಿಯನ್ನು ಸೇರಿದರು.

ಅಲ್ಲೇ ಒಬ್ಬ ದಾರಿಹೋಕನನ್ನು “ಹೊಳೆವ ಜ್ಯೋತಿಯನ್ನು ನೀವು ಈ ಊರಲ್ಲಿ ಕಂಡಿರುವಿರೇನು? ಎನ್ನಲು ಆತ ತನಗೇನೂ ತಿಳಿಯದೆಂದು ಹೊರಟುಹೋದ ದೂರದಲ್ಲೇ ಒಬ್ಬರು ವೃದ್ಧರು! ಮಧುರ ಕವಿಯಾಳ್ವಾರರು ವೃದ್ಧರನ್ನು ಕೇಳಿದರು ಅವರು ತಿಳಿಸಿದ್ದು! “ಇಲ್ಲಿ ಒಂದು ವಿಚಿತ್ರವಯ್ಯ! ದೇವಾಲಯದೆದುರಿನ ಹುಣಸೆ ಮರದಲ್ಲಿ ಕಳದೆ ಹದಿನಾರು ವರ್ಷದಿಂದ, ಆಗ ಹುಟ್ಟಿದ ಮಗುವೊಂದು, ಆ ಮರದ ಪೊಟರೆಯಲ್ಲೇ ಕುಳಿತುಬಿಟ್ಟಿದೆ [ಮೌನಿ, ಯೋಗಿಯಾಗಿ.] ಮಧುರ ಕವಿಗಳು ಧಾವಿಸುತ್ತ ಬಂದರು ಮಗುವನ್ನು ಕಂಡರು – ಪದ್ಮಾಸನ, ಧ್ಯಾನಮುದ್ರೆ! ಒಂದು ದಪ್ಪ ಕಲ್ಲನ್ನು ಧೊಪ್ಪನೆ ನೆಲಕ್ಕೆ ಬಡಿದರು! ನಮ್ಮಳ್ವಾರರು ಕಣ್ತೆರೆದರು, ತುಂಬು ಶಾಂತಕಂಗಳವು ಮಧುರ ಕವಿ: “ಇದೇನು ಹೀಗೆ ಪ್ರಕೃತಿಯ ಉದರದಲ್ಲಿ ಉದಯಿಸಿದ ಜೀವನು ಯಾವುದನ್ನು ತಿಂದು ಹೇಗಿರುವನು”? ನಮ್ಮಳ್ವಾರ್

ನಮ್ಮಳ್ವಾರ್: – “ಅದನ್ನೇ ತಿಂದು, ಅಲ್ಲಿಯೇ ಇರುವನು

ಮಧುರ ಕವಿಗಳು ಆನಂದ – ಭಕ್ತಿಗಳಿಂದ ನಮಿಸಿದರು ಮತ್ತೆ ಮಾತು ಸ್ವಲ್ಪ ನಡಿಯಿತೇನು ಮಧುರ ಕವಿಗಳ ತುಂಬುವಿನಯ, ನಮ್ಮಳ್ವಾರ್ ಮನಸ್ಸಿಗೆ ಹಿಡಿಸಿತೇನೊ ಮಧುರ ಕವಿಗಳು, ನಮ್ಮಾಳ್ವಾರರಿಂದ ನಾಲ್ಕು ಪ್ರಬಂಧಗಳ ಉಪದೇಶ ಪಡೆದರು, ಈತ ಇಹಕ್ಕೆ ಮಾರನು/ಅಂದರೆ/ಬದಲಾಗನು, ಎಂಬುದಾಗಿ ನಮ್ಮಳ್ವಾರರನ್ನು “ಮಾರನ್” ಎಂದು ಕರೆದರು.

ಶಠ – ಎಂದರೆ, ಮಗುವು ತಾಯಿಯ ಗರ್ಭದಲ್ಲಿರುವಾಗ್ಗೆ ಇರುವ ವಾಯು ಅದರ ಪ್ರಭಾವದಿಂದ ಮಗುವಿಗೆ ಅಹಂಭಾವ ಮೂಡುತ್ತದೆ. ಶಠಾರಿ, ಎಂದರೆ, ಶಠವೆಂಬ ವಾಯುವನ್ನು ಜಯಿಸಿದವರ ನಮ್ಮಾಳ್ವಾರರನ್ನು ಶಠಕೋಪ, ಶಟಗೋಪ ಎಂದೂ, ಕರೆಯುತ್ತಾರೆ. ಈಗಲೂ ಎಲ್ಲಾ ವೈಷ್ಣವ ದೇವಾಲಯಗಳಲ್ಲಿಯೂ ದೈವ ಸನ್ನಿಧಿಯಲ್ಲಿ ಒಂದು ಶಠಾರಿ ಕಿರೀಟದ ರೀತಿಯದು – ಅದರ ಮೇಲೆ ಶ್ರೀವಿಷ್ಣು ಪಾದ! ಅದನ್ನೂ ಎಲ್ಲ ಭಕ್ತರ ತಲೆ ಮೇಲೆ ಇರಿಸುವಾಗ ತಲೆಬಾಗಿ ಗೌರವಿಸುವ ಪದ್ದತಿ ಇದೆ. ಕೋಪ – ಶಠ – ಕ್ರೋಧ – ಗೆದ್ದವರು ನಮ್ಮಾಳ್ವಾರು!

ಮಧುರ ಕವಿಗಳ ಬದುಕು ನಮ್ಮಾಳ್ವಾರರ ಬದುಕು, ಪರಸ್ಪರ ಒಂದುಲ್ಲೊಂದು ಹಾರ್ದವಾಗಿ ಬೆರತ ಜೀವಗಳು – ಜೀವನಗಳು! ಇಲ್ಲಿ ಗುರು – ಶಿಷ್ಯ ಭಾವನೆ ಪ್ರಧಾನ.

ನಮ್ಮಳ್ವಾರರು ಗುರು, ಮಧುರ ಕವಿ ಅವ್ಪರ ಪರಮ ಪ್ರಿಯಶಿಷ್ಯರು. ನಮ್ಮಳ್ವಾರರನ್ನು ವೇದಮ್ತಮಿಳ್ಶೆಯ್ದ ಮಾರನ್ ಎಂಬುದಾಗಿ ಕರೆಯುತ್ತಾರೆ ವೇದವನ್ನು ಜನರ ನುಡಿಯಾದ ತಮಿಳಲ್ಲಿ ತಿಳಿಯ ಹೇಳಿದವರು ಎಂದರ್ಥ – ವಿಧಿ ವೈಚಿತ್ಯ್ರ ನಮ್ಮಳ್ವಾರರು ತಮ್ಮ ೩೫ನೆಯ ವಯಸ್ಸಿಗೇ ಪರಮ ಪಡಿಸಿದರು. ಈ ಬಗ್ಗೆ ಹೆಚ್ಚು ನಮಗೆ ಇನ್ನು ಸ್ಪಷ್ಟವಾಗಿಲ್ಲದಾಗಿದೆ.

ಗುರುವಿನ ಅಂತರಂಗ ಭಕ್ತರು ಮಧುರ ಕವಿ ಆಳ್ವಾರು! ನಮ್ಮಳ್ವಾರರ ಕುರಿತಂತೆ “ಕಣ್ಣಿನುಣ್ ಶಿರುತ್ತಾಂಬು” ಪ್ರಬಂಧ ಹಾಡಿದ ಮಧುರ ಕವಿಗಳು, ಗುರುವಿನ ಮಹಿಮೆ ಹಿರಿಮೆಗಳ ಹೊಗಳುವ ಗೀತೆ – ಪ್ರಬಂಧ ಹಾಡಿದರು, ಒಂದು ಹಗ್ಗಕ್ಕೆ ಅನೇಕ ಗಂಟುಗಳು ಸೇರಿಸಿದ್ದಾದರೆ. ಅಂಥ ಸಣ್ಣದಾದ ಹಗ್ಗದಿಂದ ಯಶೋಧೆ ಮಗ ಕೃಷ್ಣನನ್ನು ಬಂಧಿಸ ಹೊರಟಿದ್ದಾಳೆ – ದಾಮೋದರ ತಾಯಗೋಸುಗ ಪುಟ್ಟ ಉದಾರನಾದ, ಕಟ್ಟಿಸಿಕೊಂಡ ಎಂಥ ಪುಣ್ಯ ಯಶೋಧೆಗೆ,

ವನಿಗಿಂತ ನಮ್ಮ ಆಳ್ವಾರರನ್ನು ಸಮೀಪಿಸಿ “ತೆನ್‌ಕುರಹೊರುನಂಬಿ” ಎಂದರೆ, ನನ್ನ ನಾಲಗೆಯಲ್ಲಿ ಅಮೃತವೇ ಸ್ಪಂದಿಸುವುದು ಈಶಠಕೋಪರ ನಾಮವೇ – ಸ್ಮರಣೆಯೇ – ನನಗೆ ರುಚಿ, ಎನ್ನುತ್ತಾರೆ ಮಧುರಕವಿ ಆಳ್ವಾರರು.

ನಮ್ಮಳ್ವಾರರ ಪ್ರಬಂಧ ಪಾಶುರ ಸಂಖ್ಯೆ ಒಂದು ಸಾವಿರದನೂರನ್ನೂ ಮೀರುವಂಥಹ ನಿಡಿದಾದ ರಚನೆಗಳು, ನಾಲ್ಕು ದೀರ್ಘ ಪ್ರಬಂಧಗಳನ್ನು ನಮ್ಮಾಳ್ವಾರ್ ಹಾಡಿದ್ದಾರೆ.

ತಿರುವಿರುತ್ತಮ್, ತಿರುವಾಶಿರಿಯಂ ಪೆರಿಯ ತಿರುವಂದಾದಿ, ಹಾಗೂ ತಿರುವಾಯ್ಮೊಳಿ [ತಿರುವಾಯ್ ಮೊಳಿ] ತಿರುವಾಯ್ಮೊಮಿ ಹಾಗೂ ತಿರುವಿರುತ್ತಂ [೧೦೦ ಪದ್ಯಗಳು] ಕೃತಿಯಲ್ಲಿ ನಲ್ಲ – ನಲ್ಲೆಯರು ಅನುಭವಿಸುವ ಸಂಶ್ಲೇಷ – ವಿಶ್ಲೇಷಗಳ ಭಾವನೆಗಳು, ಶೃಂಗಾರ – ಶಾಂತರಸ ಮಿಳಿತವಾದ ಮಧುರ ರಸ, ಭಗತ್ಪ್ರೇಮದೇ ಹಂಬಲ, ರಸಸ್ಯಂದಿ ಪದ್ಯಗಳಲ್ಲಿ ಪ್ರವಹಿಸುತ್ತದೆ!

ತಿರುವಾಯ್ಮೊಳಿ

ತಿರುವಾಮ್ಮೊಳಿಯಲ್ಲಿ ೧೧೦೨ ಪದ್ಯಗಳಿವೆ. ತನ್ನ ಕವಿತೆಯು ದೈವಸುತ್ತಿಗಷ್ಟೇ ಮಾತ್ರ – ಸೀಮಿತ – ನರಸ್ತುತಿಗಲ್ಲ ಎಂದು ಹಾಡುವ ನಮ್ಮ ಆಳ್ವಾರ್ ಎನ್ನವಿಲಿನ್ ಕವಿಯಾ ನಿನ್ನೊರುವರ್ಕ್ಕುಮ್ ಕೊಡುಕ್ಕಿರೇನ್ ನನ್ನ ನಾಲಗೆಯ ಇನಿದಾದ ಕವಿತೆ, ಇನ್ನೊರಿಗೂ ಕೊಡಲೊಲ್ಲೆನು [ನಿನ್ನನ್ನುಳಿದು] ತಿರುವಾಯ್ಮೊಳಿಯೇ ನಾಲಾಯಿರ್ ದಿವ್ಯ ಪ್ರಬಂಧಗಳ ಸಾರಸರ್ವಸ್ವ ತಿರುವಿರುತ್ತಮ್ ಪ್ರಬಂಧವು, ಋಗ್ವೇದದ ಸಾರವೊಳಗೊಂಡಿದೆ, ಎಂಬುದಾಗಿ ಸಂಪ್ರದಾಯ! [ಸಂಸ್ಕೃತದ “ವೃತ್ತಂ” ತಮಿಳಿನಲ್ಲಿ – ವಿರುತ್ತಂ ಎಂದು ಉಚ್ಚರಿತ] “ತಿರುವಾಶಿರಿಯಮ್ – ಯಜುರ್ವೇದದ ಸಾರ, ಏಳು ಪದ್ಯಗಳಿವೆ, ಇಷ್ಟರಲ್ಲಿಯೆ ಈ ಪ್ರಬಂಧವು ತತ್ವಹಿತ – ಪುರುಷಾರ್ಥ ಸ್ವರೂಪವನ್ನು ಪ್ರತಿಪಾದಿಸುತ್ತದೆ!

ಮಧುರ ಕವಿಗಳು ಒಂದಡೆ ತಮ್ಮ ಗುರುವಾದ ನಮ್ಮಳ್ವಾರರ ಬಗ್ಗೆ ತಿಳಿಸುವ ಮಾತು ಸರ್ವಥಾ ಮನನೀಯವೆನಿಸುತ್ತದೆ. ಒಳ್ಳೆಯ ತಮಿಳಿನ ಶರಕೋಪನ ಕರುಣೆಯನ್ನು ಎಂಟು ದಿಕ್ಕು ಅರಿಯುವಂತೆ ಸಾರುತ್ತೇನೆ. ವಿಶಿಷ್ಟದ್ವೆತದ ಪ್ರಮುಖ ಗುಣ – ಅಂಶ – “ಶೇಷಿ ಶೇಷಭಾವ, ಭಗವಂತ ಸರ್ವಸ್ವ, ಸರ್ವಸೃಜಕ, ಸರ್ವಾತ್ಮಕ, ಸರ್ವವ್ಯಾಪ್ಯ, ಸರ್ವಶಕ್ತ ಸರ್ವಂತರ್ಯಾಮಿ – ಸರ್ವಸ್ಥಿತಿಪಾಲಕ – ಹಾಗೆಯೇ ದುರಿತನಾಶಕ, ಭವನಾಶಕ, ಸರ್ವೇಷ್ಟಪ್ರದ ಇಷ್ಟೆಲ್ಲ ಆಗಿ, ಆತ “ಭಕ್ತಿಸುಲಭ! ಭಗವಂತನೇ “ಶೇಷಿ” – ಜೀವಾತ್ಮ “ಶೇಷ” ಸ್ವರೂಪರು! ಇದನ್ನೇ ಮುಂದೆ ಕ್ರಿ.ಶ. ೧೩ನೆಯ ಶತಕದಿಂದ ಮೂಡಿಬಂದ “ಮಧ್ವಮತ” ಪ್ರಕಾರ “ಬಿಂಬ” – ಭಗವಂತ, “ಪ್ರತಿಬಿಂಬ” ಜೀವಾತ್ಮ. ನಮ್ಮಳ್ವಾರ್, ಭಗವಂತಶೇಷಿ – “ತಾನ” “ಶೇಷ” ಎಂಬುವ ಬಾವವನ್ನು ಪ್ರಚುರ ಪಡಿಸುತ್ತಾರೆ.

ಭಗವಂತನಲ್ಲಿಯಲ್ಲದೆ, ಅತಿಶಯವೆನಿಸುವ ಭಕ್ತಿಯನ್ನು ಇನ್ನರಲ್ಲಿ ಮಾಡಲು ಸಾಧ್ಯ? ಅದೇ ಕುಂದದ – ಐಶ್ವರ್ಯ! ಶರಣಾಗತಿ – ಪ್ರಪತ್ತಿ ಮಾಡುವಿಕೆ, ವಿಷ್ಣುಸಾಯುಜ್ಯ, ಮುಕ್ತಿಗೆ ಮಾರ್ಗ. ಹಾಗೆಂದು ಇಲ್ಲಿನ – ಈ ಇಹದ ಬದುಕು ಪರಪೀಡಕ ಆಗದೆ, ಹಸನಾಗಿ ಇರಲಿ, ದೈವದಲ್ಲಿ ಸುಸ್ಮಿತ ನಿಶ್ಚಲಭಕ್ತಿ ಎಲ್ಲ ಒಳ್ಳಿತಿಗೆ ದಾರಿ, ಅಲ್ಲಿ ಯಾವ ರೀತಿಯ ಕುಲದ ಗೋಜಲು ಇಲ್ಲ. ತಿರುವಾಯ್ಮೊಳಿತಿರುವಿರುತ್ತಂ ಕೃತಿಗಳನ್ನು ಕುರಿತಂತೆ ಮಾಸ್ತಿಯವರು [ಶ್ರೀ ಶ್ರೀನಿವಾಸರು] ತಿಳಿಸುತ್ತಾರೆ. ಇಷ್ಟಲ್ಲದೆ ಪ್ರಕೃತಿಯ ಸೌಂದರ್ಯವನ್ನು ಹೇಳುವುದರಲ್ಲಿ ಈ ಕವಿಯು ಜೀವಕ್ಕೆ ತಂಪಾಗುವ ವಿಷಯವನ್ನು ಉದ್ದಾರಿಸಿ ಹೇಳುತ್ತಾನೆ ೮ ಆನೆಗಳು ಜೊತೆಯಾಗಿ ಸಂಚರಿಸುವುದು, ತಾಯಿ ಜಿಂಕೆಯು ಮರಿಯೊಂದಿಗೆ ನಡೆಯುವುದು, ನವಿಲುಗಂಡು – ಹೆಣ್ಣು ಜೊತೆಯಾಗಿ ಸಂಚರಿಸುವುದು, ತಾಯಿ ಜಿಂಕೆಯು ಮರಿಯೊಂದಿಗೆ ನಡೆಯುವುದು, ನವಿಲುಗಂಡು – ಹೆಣ್ಣು ಜೊತೆಯಾಗಿ ನಲಿಯುವುದು, ಈ ಚಿತ್ರಗಳನ್ನು ನಾವು ಇಲ್ಲಿ ಕಾಣುತ್ತೇವೆ ಒಳ್ಳೆಯದರ ಉಪದೇಶ, ಕ್ಷೇತ್ರವನ್ನು ಕುರಿತ ಹೊಗಳಿಕೆ ಪ್ರಕೃತಿ ಸೌಂದರ್ಯದ ವರ್ಣನೆ, ಇಷ್ಟದೈವದ [ಭಕ್ತಿಯುತ] ಆರಾಧನೆ ಇವು ಸರಿಸಮನಾಗಿ ಬೆರೆತು ಕೃತಿಕಾರನ ಮುಕ್ತ ಚೇತನದ ಸ್ವರೂಪವನ್ನು ತೋರಿಸುವ ಈ ಕೃತಿಗೆ ಸಮನಾದ ಕೃತಿಯು ಧಾರ್ಮಿಕ ಸಾಹಿತ್ಯದಲ್ಲಾಗಲಿ ಧಾರ್ಮಿಕವಲ್ಲದ ಸಾಹಿತ್ಯದಲ್ಲಾಗಲಿ ದೊರೆಯುವುದು ದುರ್ಲಭ.

ತಾನೊಲಿದ ದೇವರನ್ನೇ ಪ್ರಿಯನೆಂಬುದಾಗಿ ಪರಿಭಾವಿಸಿ, ಪ್ರೇಯಸಿಯ ಭಾವವನ್ನು ಒಳಗೊಂಡ ಭಕ್ತಿ ಒಂದು ರೀತಿಯದು ಈ ರೀತಿಯ ಮಧುರ ಭಕ್ತಿ ಭಾವವು, ನಮ್ಮಳ್ವಾರರ ಕೃತಿಗಳಲ್ಲಿ ಸ್ಪಷ್ಟ ರೂಪವನ್ನು ತಾಳಿದೆ, ತಿರುವಾಯ್ಮೊಳಿ ತಿರುವಿರುತ್ತಂ – ಮಧುರಭಕ್ತಿ ಹಾಗೂ ಆಳ್ವಾರ್‌ರ ತತ್ಕಾಲದ ಸದಾಚಾರ – ಸಂಸ್ಕೃತಿಯ ವರ್ಣನೆಯನ್ನು ಒಳಗೊಂಡಿದೆ. ತಿರುವಾಯ್‌ಮೊಳಿಯ ಒಂದು ಸಾಲಲ್ಲಿ ನಮ್ಮಾಳ್ವಾರ್ ಘೋಷಿಸುತ್ತಾರೆ.

ಎನ್ನವಿಲಿನ್ ಕವಿಯಾ ನಿನ್ನ್ರೆರುವರ್ಕ್ಕಮ್ ಕೊಡುಕ್ಕಿಲೇನ್ ನನ್ನ ನಾಲಿಗೆಯ ಇನಿದಾದ ಕವಿತೆಯನ್ನು ಇನ್ನಾರಿಗೂ ನಾನು ಕೊಡಲೊಲ್ಲೆನು” ಪೆರಿಯ ತಿರುವಂದಾದಿಯು – ೮೭ ಪಾಶುರಗಳುಳ್ಳ ಪ್ರಬಂಧ! “ಅಥರ್ವವೇದ” ಸಾರವಿದು ಎಂದು ತಿಳಿಸುತ್ತಾರೆ, ಬಲ್ಲವರು!

ಪುಲಿಯುಂ ಇರುವಿಶುಂಬು ನಿನ್ನಹತ್ತ
ನೀ ಎನ್‌ಶೆಲಿಯಿನ್‌ವಳ್ ಪುಹುಂದೆನ್ನುಳ್ಳಾಯ್
ಅವಿವಿನ್ರಿಯಾನ್ ಪೆರಿಯನ್ ನೀ ಪೆರಿಯೈ ಎನ್ಪದನೈ
ಯಾರರಿವಾರ್ ಊನ್ ಪರಹು ನೇಮಿಯಾಯ್ ಉಳ್ಳು [ಪೆ.ತಿ. ೭೫]

ಲೋಕ ವಿಶಾಲವಾದ ಮೇಲಿನ ಶ್ಲೋಕವನ್ನು ಗಮನಿಸುತ್ತ

ನಿನ್ನಲ್ಲಿಯೇ ಇದೇ! ಇಂತಹ ನೀನು ನನ್ನ ಕಿವಿಯೊಳಹೊಕ್ಕು ಒಂದು ದಿನವೂ
ಸಹ ವಿಚ್ಛೇದವಿರದಂತೆ ನನ್ನಲ್ಲಿಯೇ ಇರುತ್ತಿದ್ದೀಯೆ ಆದ್ದರಿಂದ ನಾನು ದೊಡ್ಡವ |
ನೀನು ಹಿರಿಯನೆಂಬುದನ್ನು ಅರಿಯುವವರು ಯಾರಾದರೂ ಉಂಟೊ?

ನಮ್ಮಳ್ವಾರರ ಹಿರಿಮೆ ಇಲ್ಲಿ ಮನಗಾಣುತ್ತೇವೆ. ಬಹು ವಿಸ್ತಾರವಾದ ತಿರುವಾಯ್ಮೊಳಿ [ಸಿರಿಬಾಯನುಡಿ]ಯನ್ನು ಕುರಿತಂತೆ ವಿವರಿಸುವುದು ವಿವೇಚಿಸುವುದು ದುಸ್ತರವೇ | “ದ್ರಾವಿಡವೇದ ಸಾಗರ” ಎಂಬುವ ಹೆಸರು, ತಿರುವಾಯ್ಮೊಳಿಗೆ ಅನ್ವರ್ಥವಾಗಿ ಒಪ್ಪುತ್ತದೆ. ತಿರುವಾಯ್‌ಮೊಳಿಯಲ್ಲಿ ೧೧೦೨ ಪದ್ಯಗಳಿವೆ [ತಿರುವಿರುತ್ತಮ್ ೧೦೦ ಪದ್ಯಗಳು – ತಿರುವಾಯ್‌ಮೊಳಿಯ ಬಹುತೇಕ ವಿಚಾರದ ಸಂಗ್ರಹ ರೂಪವೇ ಆಳ್ವಾರರು ಪ್ರೇಯಸಿಯಾಗಿ ತನ್ನ ಪ್ರಿಯಕರನಾದ ಭಗವಂತನಿಗೊಸುಗ ಹಂಬಲಿಸುವಿಕೆ ಈ ರೀತಿಯ ಹಾಗೂ ಸಾಮಾಜಿಕ – ಸಂಸ್ಕೃತಿಕ ಎಳೆಗಳುಳ್ಳ ಅನೇಕ ಕವಿತೆಗಳು ನಮ್ಮಳ್ವಾರರ ಅನುಭವ ವೈವಿಧ್ಯ ನಿರೂಪಣೆಗೆ ಸಾಕ್ಷ್ಯವೀಯುತ್ತವೆ.