ತೊಯ್ದ ಬಟ್ಟೆ, ದೇವದೇವಿ ಬಂದಳು. ವಿಪ್ರ ಆಕೆಗೆ ಒಣಗಿದ ಬಟ್ಟೆ ನೀಡಿದ. ಮಳೆಯೂ ನಿಲ್ಲಲಿಲ್ಲ. ಗುಡಿಸಲಿನಲ್ಲಿ ಇಬ್ಬರೇ! ವೇಶ್ಯೆಯು, ಇದೇ ಸಮಯವೆಂದುಕೊಂಡಳು. ವಿಪ್ರನಾರಾಯಣನ ಪಾದಗಳಿಗೆ ನಮಿಸಿ, “ಮಳೆ ನೋಡಿ, ನಿಂತೇ ಇಲ್ಲ ! ಚಳಿಯೂ ಇದೆ, ಈ ದೇವಿ ನಿಮ್ಮವಳು. ಈ ಹೊತ್ತು ನನ್ನನ್ನು ನಿಮಗೊಪ್ಪಿಸಿಕೊಳ್ಳಬೇಕೆನಿಸಿದೆ. ನಿಮ್ಮ ಜತೆ ಮುಂದೆ ಜೊತೆಯಾಗಿಯೇ ಸಾಗೋಣವೆನ್ನಿಸುತ್ತಿದೆ…. ” ಎನ್ನುತ್ತ ಮುತ್ತಿಟ್ಟಳು! ಅಲ್ಲಿಯವರೆಗೆ ಹೆಣ್ಣಿನ ಮೈ ಸೋಕಿನ ಅನುಭವ ಅರಿಯದ ವಿಪ್ರ ಬಿಸಿತಗುಲಿದ ಬೆಣ್ಣೆಯಾದ! ದೇವಿಯ ಮೋಹದ ದಾಸನಾಗಿಬಿಟ್ಟ!

ಅಂದಿನಿಂದ ಅವರ ಹಾದಿಯೇ ಬದಲಾಯಿಸಿತು. ದೇವರಿಗೆ ಬೆಳಸಿದ ಹೂಗೊಂಚಲು ದೇವದೇವಿಯ ಮುಡಿಗೆ! ಅಪ್ಪುಗೆಯಲ್ಲಿ ಮರೆತ ತನ್ನನ್ನು ವಿಪ್ರ! ಕೆಲವು ತಿಂಗಳು ದೇವಿ, ಸುಖನೀಡಿದಳು, ಪಡೆದಳು, ತನ್ನ ಗುರಿ ಈಡೇರಿ ತಾನು ವಿಪ್ರನಾರಾಯಣನನ್ನು ತನ್ನ ಮೋಹದ ಬಲೆಗೆ ಮಿಗವಾಗಿಸಿಕೊಂಡು ಖುಷಿಪಟ್ಟಳು!

ವಿಪ್ರನನ್ನು ಅಕ್ಕಪಕ್ಕ – ಊರಿನವರೂ ನಿಂದಿಸತೊಡಗಿದರು – ಆತ ಕಾಮಭೋಗದಲ್ಲಿ ನಾದಿಹೋದ, ಸಂಯಮವನ್ನು ದೇವಿಗೆ ಮಾರಿದ, ಕಾಲವು ಸರಿದಂತೆ ಭಂಗುರದ ಮನದ ಗಣಿಕೆಗೆ ಈ ಬ್ರಾಹ್ಮಣ ಬೇಸರವೆಂದನ್ನಿಸಿತು. ಈತನೋ ತನ್ನೆಲ್ಲವನ್ನೂ ಆಕೆಗೆ ಅರ್ಪಿಸಿ, ದರಿದ್ರನಾದ.

ವಿಪ್ರನಿಗೆ ಬುದ್ಧಿ ಕಲಿಸಬೇಕಲ್ಲ ? ದೇವದೇವನೇ ಇವರಿಲ್ಲದಾಗ, ತನ್ನ ಸನ್ನಿಧಿಯಲ್ಲಿದ್ದ ಒಂದು ಬಂಗಾರದ ಬಟ್ಟಲನ್ನು ತಂದು, ವೇಷಾಂತರದಿಂದ ದೇವಿಗೆ ನೀಡಿದ, ಮಾಯವಾದ! ದೇವಾಲಯದಲ್ಲಿ ದೇವರ ತಿರುಮಜ್ಜನದ (ಆರಾಧನದ ಮಾಡಲು ಬಳಸುವ) ಬಟ್ಟಲು ನಾಪತ್ತೆ ! ವಿಪ್ರನ – ದೇವಿಯ ಸನಿಹ ಬಟ್ಟಲನ್ನು ಪತ್ತೆ ಹಚ್ಚಿದ ಗೂಢಚರರು ವಿಪ್ರನನ್ನೇ ಎಳೆದೊಯ್ದರು, ಏಟುಬಿದ್ದವು, ಸೆರೆಮನೆಗೆ ತಳ್ಳಿದರು!

ಈಗ, ವಿಪ್ರನಾರಾಯಣ ತನ್ನ ಭ್ರಮೆಯ ಗುಂಗಿನಿಂದ ತಿಳಿಯಾಗಿ ಎಚ್ಚೆತ್ತ ! ವಿಲಾಸೆ ಬದುಕನ್ನು ನೆನೆದ, ಹಲುಬಿದ, ದೇವರನ್ನು ಮನಸಾರ ಪ್ರಾರ್ಥಿಸಿದ. ಎಷ್ಟು ಸುಲಭವಾಗಿ ಕಾರಾಗಾರವನ್ನು ಸೇರಿದರೋ ದೈವಲೀಲೆಯಿಂದ, ಅಷ್ಟೇ ಸಲೀಸಾಗಿ ಬಿಡುಗಡೆಯೂ ವಿಪ್ರನಿಗೆ ದೊರೆಯಿತು! ದೇವರು ರಾಜನ ಕನಸಿನಲ್ಲಿ ಬಂದು “ವಿಪ್ರ ನಾರಾಯಣನಿಗೆ ಬುದ್ಧಿ ಕಲಿಸಲು ನಾನೇ ವೇಷ ಮರೆಸಿಕೊಂಡು ದೇವಿಗೆ ಕೊಟ್ಟೆ, ಅವನನ್ನು ಬಿಡುಗಡೆ ಮಾಡು, ಮುಂದಿನದನ್ನು ನನಗೆ ಬಿಡು” ಎಂದು ಆದೇಶವಿತ್ತ! ವಿಪ್ರನಾರಣ ಆಳ್ವಾರ್ರ‍ರಿಗೆ ಎಲ್ಲವೆಲ್ಲವೂ ಮನವರಿಕೆಯಾಯಿತು. ಮೊದಲಿದ್ದುದಕ್ಕಿಂತ ಮಿಗಿಲಾದ ದೈವಕ್ಕಾಗಿ ಹಂಬಲ, ಲೌಕಿಕದಲ್ಲಿ ನಿರಾಸಕ್ತಿ, ವೈರಾಗ್ಯ, ತಾನು ಹೇಗೆ ಹೆಣ್ಣಿನ ಬೆನ್ನುಬಿದ್ದು ತನ್ನನೇ ಕಳೆದುಕೊಂಡೆ” ಎಂದು ನೊಂದ, “ಭಕ್ತಾಂಘ್ರೀರೇಣುದಾಸನಾನು – ಭಕ್ತರ ಕಾಲಿನ ಧೂಳಿನ ಆಳು ನಾನು” ಎಂದುಕೊಂಡ ದೈವದ ಸೇವೆಗೆ ನಿಂತ!

ತೊಂಡರಡಿಪ್ಪೊಡಿ ಆಳ್ವಾರರೆಂದೇ ಜನಪ್ರಿಯರಾದ ಇವರು ಹಾಡಿರುವ ದಿವ್ಯ ಪ್ರಬಂಧಗಳು ಎರಡು : ತಿರುಮಲೈಹಾಗೂ “ತಿರುಪ್ಪಳ್ಳಿ ಎಳುಚ್ಚಿ” (ತಿರುಪ್ಪಳ್ಳಿಯೆಳುಚ್ಚಿ) “ತಿರುಮಾಲೈಪ್ರಬಂಧದಲ್ಲಿ ೪೫ ಪಾಶುರಗಳಿವೆ, ದೇವರ ದೇವ ಶ್ರೀರಂಗದ ಶ್ರೀರಂಗನಾಥನಿಗೆ ನುಡಿಮಾಲೆ – ಶ್ರೇಷ್ಠ ನುಡಿ ಮಾಲೆ – ಅರ್ಪಿಸಿದ್ದಾರೆ.

ಶ್ರೀರಂಗನಾಥ ಸ್ವಾಮಿಯ ವೈಭವವೇ ಸೊಗಸು! ತಿರುಮಾಲೈ ಪದ್ಯಗಳು ಈ ವಿಭವವನ್ನು ಬಣ್ಣಿಸುತ್ತವೆ. ಆಳ್ವಾರರಿಗೆ ಶ್ರೀ ರಂಗನಾಥನಲ್ಲಿ ಗಾಢವಾದ ಭಕ್ತಿ, ಏಕನಿಷ್ಠೆ, ಪ್ರಪತ್ತಿ!

            ಕಾವಲಿಲ್ ಪುಲನೈವೈತ್ತು ಕ್ಕಲಿದನೈಕ್ಕಡಕ್ಕ ಪಾಯ್ನ್ದು
ನಾವಲಿಟ್ಟುಳಿ ತರು ಹಿನ್ರೋಂ ನಮನ್ ತಮರ್ ತಲೈಹಳ್ಮಿದೇ
ಮೂವುಲಹುಂಡು ಮಿಳ್ ಶು ಮುದಲ್ವ ನಿನ್ನಾಮಮ್ ಕತ್ತು
ಆವಲಿಪ್ಪುಕೈಮೈ ಕಂಡಾಯ್ ಅರಂಗಮಾನ ಅರುಳಾನೈ

ಆಳ್ವಾರರು ಮರುಗಿ ಹಲುಬುತ್ತಿದ್ದಾರೆ, ಅವರ ಭಕ್ತ ಹೃದಯವನ್ನು ಶ್ರೀರಂಗ ಆವರಿಸಿದ್ದಾನೆ! “ಪ್ರಳಯ ಕಾಲದಲ್ಲಿ ಮೂರು ಲೋಕಗಳನ್ನು (ಮೂವುಲಹಂ) ನಿನ್ನೊಳಗೇ ಉಪಸಂಹಾರ ಮಾಡಿಕೊಂಡು ಮತ್ತೆ ಸೃಷ್ಟಿಕಾಲದಲ್ಲಿ ಆ ಲೋಕಗಳೆಲ್ಲವನ್ನು ಹೊರಹಾಕುವ ಅಚ್ಚರಿಯ ಪ್ರಭುವೇ! ಶ್ರೀರಂಗವೆಂಬುವ ಮಹಾ ನಗರದಲ್ಲಿರುವ ಒಡೆಯ, ಧಣಿ, ಶ್ರೀ ರಂಗನಾಥನೇ! ನಿನ್ನ ದಿವ್ಯನಾಮಗಳನ್ನು ಅನುಸಂಧಾನ ಮಾಡುವುದನ್ನು ಕಲಿತ ನಾವು ನಮ್ಮ ಇಂದ್ರಿಯಗಳನ್ನು, ಅವುಗಳಿಗೆ ಸಂಬಂಧಿಸಿದ ತುಚ್ಛ ವಿಷಯವಿಕಾರಗಳಡಗಿಸಿ ಆಕ್ರಮಿಸಿ ಮುಂದುವರಿದು, ಯಮರಾಜನ ಮತ್ತು ಅವನವರ ತಲೆಯನ್ನು ನಮ್ಮ ಕಾಲಿಂದ ಮೆಟ್ಟಿದ್ದೇವೆ!”

“ನೂರು ವರ್ಷ ಆಯುಸ್ಸೆಂದೇನೂ ಹೇಳಿದರೂ, ಅರ್ಧಭಾಗನಿದ್ರೆ, ಉಳಿದ ಐವತ್ತು ವರ್ಷ ಶಿಶುತ್ವ, ಬಾಲ್ಯ, ಯುವತ್ವ, ರೋಗ – ಹಸಿವು – ಮುಪ್ಪು – ದುಃಖ (ಪಿಣಿಪಶಿ ಮುಪ್ಪತ್ತುನ್ಟಮ್! ಆದ ಲಾಲ್ ಪಿರವಿವೇಂಡೇನ್) ಇವುಗಳಲ್ಲೇ ಸವೆಸವೆದಾಯ್ತು:

ತೊಂಡರಡಿಪ್ಪೊಡಿ ಆಳ್ವಾರರು ತಾವು ಅನುಭವಿಸಿದ ಭಗವಂತನ ದಿವ್ಯಾನುಭವವನ್ನುತಿರುಮಾಲೈಪಾಶುರಗಳಲ್ಲಿ ಹೇಗೆ ಅಭಿವ್ಯಕ್ತಗೊಳಿಸಿರುವರೋ ಹಾಗೆಯೇ ತಿರುಪ್ಪಳ್ಳಿಯೆಳುಚ್ಚಿ ಎಂಬುವ ಪ್ರಬಂಧದಲ್ಲಿಯೂ ತಮ್ಮ ದೈವ ಪ್ರೀತಿಯನ್ನು ಮನದುಂಬಿ ಹಾಡಿದ್ದಾರೆ.

ತಿರುಪ್ಪಳ್ಳಿಎಮಿಚ್ಚಿ/ತಿರುಪ್ಪಳ್ಳಿಎಳುಚ್ಚಿಪ್ರಬಂಧವು, ಯೋಗನಿದ್ರೆಯಲ್ಲಿ ಪವಡಿಸಿರುವ, ವಿಶ್ವಸಂರಕ್ಷಣೆಯಲ್ಲಿ ಜಾಗರೂಕನೂ ಆದ ಭಗವಂತನನ್ನು ಎಚ್ಚರಗೊಳಿಸುವ (ಸಾಂಕೇತಿಕ, ವೆನ್ನಬಹುದು! ಏಕೆಂದರೆ, ದೇವರೇ ನಮ್ಮಂತೆ ಮಲಗಿಬಿಟ್ಟಲ್ಲಿ !!)ಸುಂದರ ಸುಪ್ರಭಾತ ಸ್ತ್ರೋತ್ರವಿದು.

ಆಳ್ವಾರರದು ನಿಜಕ್ಕು ಕವಿಹೃದಯವೇ !

ಪ್ರಾತಃಕಾಲದ ಹಿಮ – ತುಷಾರ, ಸುಂದರವಾದ ಮುಂಬೆಳಗು, ಹಕ್ಕಿಗಳ ಕಲರವಚ, ಎಲ್ಲವೆಲ್ಲವೂ ತಿರುಪ್ಪಳ್ಳಿಯೆಳುಚ್ಚಿಯಲ್ಲಿ ಬಣ್ಣಿಸಿದಾರೆ! ಒಂದು ಉದಾಹರಣೆ, ಉಲ್ಲೇಖಿಸೋಣ:

            ಕೊರುಂಗೊಡು ಮುಲ್ಲೈಯಿನ್ ಕೊಳುಮಲರಣವಿ
ಕ್ಕುರ್ನ್ದದು ಕುಣದಿಶ್ ಮರುದಮಿದುದೋ
ಎಳುನ್ದನ ಮಲರಣೈಪ್ಪಳ್ಳಿಹೊಳ್ಳನ್ನಂ
ಈನ್ ಪನಿನಿನೈನ್ದ ತಮಿರುಂ ಶಿರಹುದರಿ (ತಿ..)

ತುಂಬುಕೊಡಿ ಮೊಲ್ಲೆಯಲಿ ತುಂಬುಮಲರನು ಅಪ್ಪಿ
ಬೀಸುತಲಿಹುದಿದೋ ನೋಡಿ ಮೂಡಣದ ಮಾರುತ
ಹೂವಿನಾಸರೆಯ ನಿದ್ರೆಯಂಚೆ ಎಚ್ಚೆತ್ತು (ಅಂಚೆ = ಹಂಸ)
ಇಬ್ಬನಿಗೆ ನೆನೆದು ಚೆಲುಗರಿಯ ಕೆದುರುತಿದೆ :

ಬಿಲಕ ಬಾಗಿಲತೆರದ ಹಿರಿದು ಮೊಸಳೆಯಬಾಯ
ಬೆಳ್ಳನೆಯ ಕೋರೆ ಹಲ್ಲಿನ ವಿಷಕೆ ಸುಗಿದು
ನೊಂದು ಆನೆಯ ಮಿಗಿಲ ಧೂಸರನು ಕಳೆದವನೆ
ಓ ಓ ರಂಗನಾಥ! ಪಟ್ಟೆದ್ದು ಬಿಜಗೈಯ್ಯ (ದಯಮಾಡಯ್ಯ)
ಕುಡರೊಳಿ ಪರಂದನ, ಶುಮ್‌ದಿ ಎಲ್ಲಾಂ

ತುನ್ನಿಯ ತಾರಕ್ಕೆ ಮಿನ್ನೊಳಿಶುರುಂಗಿ
ಪಡರೊಳಿ ಪಶುತ್ತನನ್, ಪನಿಮದಿಯಿವನೋ
ಪಾಯಿರುಳ ಹನ್ರದು ಪೈಂಪೋಳ್ಕಿರ ಮುಹಿನ್

            ಶೂಲ್ – ಸೂಳ್ – ನಿಜ –
ಸೂಳ್ನುಡಿ – ಸುಭಷಿತ
ಶುಡರ್ – ಸೋಡರು
ಹಲಗಶುಡರ್ – ಸೂರ್ಯ
ಪೋಡ್ಕರ
ಕರದಿ – ವಿಶೇಷವಾಗಿ
ಹಿಮಕರ – ತಂಪುಕಿರಣ (ಚಂದ್ರ)

ಹಗಲ ಬೆಳಕು ಮಿಗೆ ಕರದಿ ದೆಸೆಗಳಲಿ ಹರಡಿತು
ಒತ್ತಾದ ತಾರೆಗಳ ಮಿನುಮಿನುಗುಸೊರಗಿತು,
ಪಸರಿಸಿದ ಕಳೆಯ ಹಿಮಕರನು ಮಂಕಾದನಿದಕೋ
ಹರಡಿದ್ದ ಕತ್ತಲೋಡಿತು, ಹಸಿರ್ದೋಟಗಳ
ಕೌಂಗು ಹೊಂಬಾಳೆಯರಳಿಸುತ ಅದರೊಳಗು (ಅಡಿಕೆ)
ನರುಗಂಪ ಕಾರೆ, ಬೆಳಗಿನ ಗಾಳಿ ಉಯ್ಯನುಲಿದು ಬೀಸುತಿದೆ,
ಸುದರ್ಶನ ಧರ ಶ್ರೀರಂಗ, ನಿದ್ರೆಯಿಂದೇಳು ನಮ್ಮನನುಗ್ರಹಿಸು”.
(ಸುದರ್ಶನ – ಚಕ್ರವನ್ನು ಹಿಡಿದಾತ, ಶ್ರೀ ಮನ್ನಾರಾಯಣ)

ಭಗವಂತನ ದಿವ್ಯವಾದ, ಚಿರಂತನವಾದ ಕೃಪೆಗೆ ತಾನು ಎಂದೆಂದೂ ಪಾತ್ರನೆಂದು ಹಾಡಿದ್ದಾರೆ ಆಳ್ವಾರರು: ಇಂದೋ ನಾಳೆಯೋ ಇಲ್ಲ ಇನ್ನು ಮುಂದೆಯೋ/ನಿನ್ನ ಕೃಪೆಗೆ ನಾನು ಪಾತ್ರನಾಗುವುದ ದಿಟ, ಓ ನಾರಾಯಣ !

ನೀನು ನಾನಿಲ್ಲದೇ ಇಲ್ಲ, ಕಂಡೆಯಾ ರಂಗ
ನಾನು ನೀನಿಲ್ಲದೇ ಇಲ್ಲ ಕಂಡೆಯಾ !

“ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” – ಎಂದು ವಚನಕಾರರು ಹಾಡಿರುವುದು, ಶತಶತಮಾನಗಳ ಮೊದಲಲ್ಲಿದ್ದು ಬದುಕಿನ ಆಳ್ವಾರರು ಹಾಡಿರುವುದೂ ಒಂದೇ ಲಹರಿ, ಸಕಲ ಚರಾಚರ ವಸ್ತುಗಳೂ ಭಗವಂತನಿಂದಲೇ ಸೃಷ್ಟಿ, ಭಗವಂತನಲ್ಲೇ ಮುಳುಗುವುವು!

“ತನ್ನೊಳೇ ಇದ್ದು – ಎದ್ದು ಹರಹಿ
ತನ್ನೊಳೇ ಇಂಗುವ ಅಲೆಗಳು
ಬಿಳಿನೊರೆಯ ಕಡಲಂತೆ ನಿನ್ನೊಳೇ ಹುಟ್ಟಿ
ಉಳಿದ ಚರಾಚರಗಳೆಲ್ಲವೂ ನಿನ್ನೊಳೇ ಅಳಿಯುವುವು.”

ಭಗವಂತನೇ ಈ ಜಗತ್ತನ್ನು ಸೃಜಿಸಿದಾತ: ಅದರಲ್ಲೇ ಮರು ಅವತರಿಸಿದ, ಇಷ್ಟಾದರೂ ಯಾವುದೇ ತಾವಿಗೆ ಅಂಟದ ಸೂಕ್ಷ್ಮ ಭಗವಂತ! ವಿಶ್ವವೇ ಶರೀರವಾಗುಳ್ಳಾತ. ಜಗದಾತ್ಮನಾತ, ಈ ತತ್ವಸಾರವನ್ನು ಆಳ್ವಾರ್ರ‍ರ ಹಾಡಿದ್ದಾರೆ ಹೀಗೆ:

ತಿರುಮಳಿಶೈ ಅವರ ಪಾಶುರಗಳಲ್ಲಿ ಭಕ್ತಿ – ತತ್ವಚಿಂತನೆ – ಬಹಳಷ್ಟೇ ಮೂಡಿದೆ:

ನೋಟಕ್ಕೆ ಸೊಗಸಾಗಿರದ ಕ್ರೂರ ದೇವತೆಗಳನ್ನು ಏಕೆ ಪೂಜಿಸುವಿರಿ !
ಕಿವಿಯಾಲಿಸಲು ಸಹಿಸಲಾಗದ ಕಟ್ಟು ಕತೆಗಳನ್ನು ಕೇಳುವುದೇಕೆ !
ಬೇಡಿ ಬೇಡಿದರೂ ವರಮೀಯಲಾಗದ ದೇವರುಗಳಿವು.
ವರಗಳಿತ್ತರೂ ನಿಮ್ಮನು ಬದುಕಿಸಲಾರದ ವರಗಳ ನೀಯುವಂತಹವು”

ಇವುಗಳನ್ನು ತೊರೆದು ಜಗದೇಕನಾಥನಾದ
ನನ್ನ ಸ್ವಾಮಿ (ಆರಂಗತಮ್ಮಾನೇ – ಶ್ರೀರಂಗದ ಎನ್ನತಂದೆಯಮ್ಮ)

ಅವನ ಶರಣುಹೊಂದಿರಿ (ಅಮ್ಮಾನ್ – ತಮಿಳು, ಪೂರ್ವಹಳಗನ್ನಡಗಳಲ್ಲಿ ಅಪ್ಪ – ತಂದೆಯೇ ಎಂದರ್ಥ) ಸಂಸಾರ ಬಂಧನದಿಂದ ಪಾರಾಗಿರಿ! ಇದು ಸರಳ, ಉನ್ನತ ಚಿಂತನೆ ಅಲ್ಲವೆ?
ಕಿನ್ನರರು, ಗರುಡರು, ಗಂಧರ್ವರು, ತಿರುವಡಿ – ನಿನ್ನ ಪಾದಗಳನ್ನು ಕಾಣಲು ಹಾತೊರೆಯುತ್ತಿದ್ದಾರೆ – ಅರಂಗತ್ತಮ್ಮಾ ಪಳ್ಳಿಯೆಳುನ್ದರುಳಾಯೇ “ತಂದೆ ಶ್ರೀರಂಗನಾಥನೇ ನಿದ್ರೆ ತಿಳಿದೇಳು ಎನ್ನೊಡೆಯ” ಕದಿರಮೊಗ್ಗೆ ಮೊಲ್ಲೆ ನರುಗಂಪಸೂಸುತಿವೆ …..

ತೊಂಡರಡಿಪ್ಪೊಡಿಯೆನ್ನುಮ್ ಅಡಿಯನೈ – ನಿನ್ನ ಸಿರಿಚರಣ ನಂಬಿದೇನೆ – ಭಕ್ತರ ಪಾದಧೂಳಿಯಾಗಬಯಸುವ ಎನ್ನ ನೀ ಆಳು ಬಾ – ಸ್ವಾಮಿನ್! ಶ್ರೀ ರಂಗನಾಥ ಇದು ತಿರುಮಳಿಶೈಯವರ ಕವಿತೆಯ ತಿರುಳು.

ಕುಲಶೇಖರಾಳ್ವಾರ್: ಸುಪ್ರಸಿದ್ಧ ತಿರುಪತಿಯಿಂದ ಏಳು ಬೆಟ್ಟ ಸಾಲಿನ ತಿರುಮಲೆ ಮೆಟ್ಟಿಲೇರಿ ತಿರುಮಲೆಗೆ ಸಾರಿ, ದಟ್ಟಜನಸಂದಣಿಯ ನಟ್ಟನಡುನಡುವೆ ತೂರಿ, ಬಂಗಾರದ ಬಾಗಿಲನ್ನು ದಾಟುತ್ತಲೇ ಆಗುವ ದರ್ಶನ – ಶ್ರೀ ಶ್ರೀನಿವಾಸನದು! ಒಮ್ಮೆ ಕಂಡರೂ, ಆವರೆವಿಗೂ ಅನುಭವಿಸಿದ ಎಲ್ಲ ಬಳಲಿಕೆ ಇಲ್ಲವಾಗುತ್ತದೆ. ಹಾಗೆ,ನಾವು ಬಂಗಾರದ ಬಾಗಿಲು ಸಮೀಪಿಸುವಾಗಲೇ ಶ್ರೀ ಶ್ರೀನಿವಾಸ ಮೂರ್ತಿ ಕಾಣಲಾರಂಭ! ಆತನೆಡೆಗೆ ಸಾಗುವ ಹಾದಿಯಲ್ಲೇ ಒಂದು ದೊಡ್ಡ ಹೊಸ್ತಿಲು ಅದೇ ಕುಲಶೇಖರರು ಹಾಕಿಸಿದ – ಕುಲಶೇಖರಪ್ಪ (ಕುಲಶೇಖರಪಡಿ) ಮೆಟ್ಟಿಲು! “ಸದಾ ನಾನು ನಿನ್ನನ್ನು ನೋಡುತ್ತಿರಲೇಬೇಕು, ಭಗವದ್ಭಕ್ತರು ನನ್ನ ಈ ಮೆಟ್ಟಿಲನ್ನು ತುಳಿದು ನಿನ್ನೆಡೆಗೆ ನಡೆದಾರು! ಅವರ ಪಾದಧೂಳಿ ನನ್ನ ತಲೆ ಮೇಲೆ”. ಅದಕ್ಕಿಂತಲೂ ಮಿಗಿಲಾದ ಭಾಗ್ಯವು ಇನ್ನೇನಿದೆ?

ಮಲಬಾರ್ (ಈಗಿನ ಕೇರಳ) ಪ್ರಾಂತ್ಯದ “ತಿರುವಂಜಿಕ್ಕಳಂ” ಎಂಬುವ ಸ್ಥಳದ ಹಾಗೂ ಸುತ್ತಮುತ್ತಲಿನ ಪ್ರದೇಶದ ಅರಸನಾಗಿದ್ದಾತ “ದೃಢ ವ್ರತ’ ನೆಂಬ ರಾಜಕುಮಾರನೇ ಮುಂದೆ “ಕುಲಶೇಖರ ಆಳ್ವಾರ್ ತಮ್ಮ ಅಪಾರ ದೈವ ಭಕ್ತಿ ಆಧ್ಯಾತ್ಮಿಕ ಮನೋಧರ್ಮ ಅವರನ್ನು ದಿವ್ಯ ಪ್ರಬಂಧ ಗೀತೆಗಳ ಕರ್ತೃ ಆಗಿಸಿತು. ಆಳ್ವಾರ್ ಶ್ರೇಣಿಗೇರಿಸಿತು. ಮೊತ್ತ ಮೊದಲಿಗೆ, ಅವರೊಬ್ಬ ಪ್ರಪನ್ನರು, ಅಂದರೆ, ಪ್ರಪತ್ತಿ ಮಾರ್ಗದಲ್ಲಿ – ಶರಣಗತಿಯಲ್ಲಿ – ದೃಢ ನಿಷ್ಠೆಯುಳ್ಳವರು. ಕುಲಶೇಖರ ಆಳ್ವಾರ್ರ‍ ಇನ್ನೂ ಕೆಲವು ಹೆಸರುಗಳು ನಮಗೆ ತಿಳಿಯಬರುತ್ತವೆ. ಕೊಲ್ಲಿ ಕಾವಲನ್, ಕೂಡಲ್ ನಾಯಕನ್, ಕೋಲಿಕ್ಕೋನ್’= ಎಂಬುದಾಗಿ. ಇವುಗಳ ಹಿನ್ನಲೆ, ತಿಳಿಯದು.

ತಂದೆಯ ನಂತರ ಅರಸರಾದರೂ, ಕುಲಶೇಖರರು ತನ್ನ ಆಡಳಿತದ ಪ್ರಧಾನ ಭಾಗವಾಗಿ ವರಿಸಿದ್ದು “ಶ್ರೀ ಮಹಾವಿಷ್ಣುವೇ ಪರದೈವ – ಪರತತ್ವ – ನಾವು ಮನುಷ್ಯರು ಏನೇ ಕೈಗೊಳ್ಳಲಿ ಅದರ ಪೂರೈಸುವಿಕೆಗೆ ಭಗವಂತನ ಕೃಪೆ ಅಗತ್ಯ ಮಹಾರಾಜಾಯ ನಮಃ ಎಂಬುವದು, ಶ್ರೀಮನ್ನಾರಾಯಣನಿಗೇ ಅಲ್ಲದೆ ಇನ್ನಾವ ಹುಟ್ಟಿ ಸಾಯುವ ಅರಸರಿಗೆ ಅನ್ವಯಿಸದು” ಎಂಬುವ ವಿಚಾರವನ್ನೂ ಹಾಗೂ ಅದು ಕೇವಲ ವಿಚಾರವಾಗಿಯೇ ಒಣಗದೆ ಅರ್ಥಯುತವಾದ ರಸಸ್ಯಂದಿಯಾದ ಪ್ರತಿನಿತ್ಯ ಭಕ್ತಿ ಸಲಿಲದಲ್ಲಿ ನಾದಿ ಮುಳುಗಿತು! ಕುಲಶೇಖರರು ಪ್ರಜಾನುರಾಗಿ ಅರಸರೆಂದು ಹೆಸರಾದರು ಒಮ್ಮೆ ಹೀಗೂ ಹೇಳುವ ಐತಿಹ್ಯ, ಕುಲಶೇಖರ ವ್ಯಕ್ತಿತೆಗೆ ಕನ್ನಡಿ ಹಿಡಿಯುತ್ತದೆ. ಪ್ರತಿ ನಿತ್ಯ ದಾನ – ಧರ್ಮ, ದಲಿತರಿಗೆ ಊಟ, ಯಾವುದೇ ವೇಳೆಯಲ್ಲಿಯೂ ನ್ಯಾಯ ಕೇಳಬಲ್ಲ ಧ್ವನಿಯನ್ನು ಪ್ರತಿ ಪ್ರಜೆಯೂ ಹೊಂದಿದ್ದ! ಒಂದು ದಿನ ಅರ್ಧ ರಾತ್ರಿಯ ಪ್ರಹರ ಸರಿದಾಗ ಕುಲಶೇಖರರ ಅರಮನೆಯ ಹೆಬ್ಬಾಗಿಲು ಮುಚ್ಚಿದ ಸದ್ದು ತಾಯಿ ಲಕ್ಷ್ಮಿದೇವಿಗೆ ಕೇಳಿಸಿ (ರಂಗನಾಯಕಿ) ಆಕೆಯು ಶ್ರೀಮನ್ನಾರಾಯಣನನ್ನು ಕೇಳಿದಾಗ ಆತ ಮೃದುವಾಗಿ ನಗುನಗುತ್ತಾ ತಿಳಿಸಿದನಂತೆ, ಕುಲಶೇಖರರ ಇಂದಿನ ದಾನ – ಧರ್ಮ ದಿನಚರಿ ಈಗ ಮುಗಿದು ಆತ ಸ್ವಲ್ಪ ವಿಶ್ರಾಂತಿ ಪಡೆಯಬಹುದೇನೊ! ಇದು, ಆ ಮಹಾರಾಜರ ಅನುದಿನದ ಕಾರ್ಯವಾಗಿತ್ತು. ಈಗ ಅದು ಸ್ವಪ್ನದಲ್ಲೂ ಕಾಣಬಾರದು!

ಕಾಲಾನುಕ್ರಮದಲ್ಲಿ ತಿರುವಾಂಕೂರಿನ ರಾಜರೇ ಆದ ಕುಲಶೇಖರ ಆಳ್ವಾರರು ತಮ್ಮ ಈ ರಾಜ್ಯ ಕೋಶ ಆಡಳಿತ ನಿರ್ವಹಿಸಲಾಗದೆ, ಪರಮಾತ್ಮನ ಸಂಗದಲ್ಲೇ ಇರಲೆಳೆಸಿ, ತಮ್ಮ ಮಗನಿಗೆ ರಾಜ್ಯ ನಿರ್ವಹಿಸಿ, ಬುದ್ಧಿ ಮಾತು ತಿಳಿಸಿ, ಶ್ರೀ ರಂಗಕ್ಕೆ ಬಂದು ನೆಲಸಿದರು, ಆಚಾರ್ಯರ ಆಳ್ವಾರರ ಸತ್ಸಂಗದಲ್ಲಿ.

ಶ್ರೀ ರಂಗದ ಶ್ರೀ ರಂಗನಾಥ ದೇವಾಲಯದ ಕೆಲವು ಭಾಗಗಳನ್ನು ಕುಲಶೇಖರರು ನಿರ್ಮಿಸಿದರೆಂದು ಪ್ರಸಿದ್ಧ ಹಾಗೆಯೇ ತಿರುಪತಿ – ತಿರುಮಲೆಯ ಶ್ರೀ ಶ್ರೀನಿವಾಸನ ಗರ್ಭಗುಡಿ – ಸಾನ್ನಿದ್ಯ ಕಾಣುವಂತೆ ಭಕ್ತ ಸಂದೊಹ ತನ್ನ ಮೇಲೆ ಪದವಿರಿಸಿ ನಡೆದರೆ ಭಾಗವತ ಸಂಸ್ಪರ್ಶ ದೊರೆತೀತು ಅಲ್ಲದೆ ತಾನು ಅನವರತ ಸ್ವಾಮಿಯ ದಿವ್ಯ ದರ್ಶನ ಶ್ರೀಯನ್ನು ಅನುಭವಿಸಲು ಸದವಕಾಶವಾಗುದೆಂಬುವ ಆಲೋಚನೆಯಿಂದ ಅವರು ಮಾಡಿಸಿರುವ ಒಂದು ಹೊಸ್ತಿಲು, ಈಗಲೂ “ಕುಲಶೇಖರಪ್ಪಡಿ” ಎಂದೇ ಜನಜನಿತವಾಗಿದೆ.

ಆಳ್ವಾರರಿಗೆ ಶ್ರೀ ರಾಮಕೃಷ್ಣರಲ್ಲಿ ಅಪಾರ ಭಕ್ತಿ ಒಮ್ಮೆ ಹರಿ ಕಥಾ ಕಾಲಕ್ಷೇಪ ನಡೆಯುತ್ತಿದೆ ಕಥಾಕೀರ್ತನಕಾರರು ರಾವಣನು ಸೀತಾಮಾತೆಯನ್ನು ಮೋಸದಿಂದ ಅಪಹರಿಸಿದ ವಾರ್ತೆ ತಿಳಿಸುತ್ತಿದ್ದಾರೆ. ಕುಲಶೇಖರರು ನೇರ ತನ್ನ ಆಪ್ತರಿಗೆ ಆಜ್ಞೆಯಿತ್ತರು. “ನಡೆಮಂತ್ರಿ ಸೈನ್ಯವನ್ನು ಒಮ್ಮೆಲೇ ಅನುವುಗೊಳಿಸು ಎಲ್ಲಿಯೇ ಇರಲಿ ಆ ರಾವಣನನ್ನು ಕೊಂದು ಸೀತಾಮಾತೆಯನ್ನು ಕರೆತಂದು ಪ್ರಭು ಶ್ರೀ ರಾಮರಿಗೆ ಅರ್ಪಿಸೋಣ” ಅರಸರ ಭಾವಾವೇಶ – ಮಗುವಂಥ ಭಕ್ತಿಗೆ ಮನಸೋತ ಮಂತ್ರಿ ತಿಳಿಸಿದ “ಛೇ, ಛೇ ನಿಮಗೇಕೆ ಆ ತೊಂದರೆ, ಶ್ರಮ, ಕೀರ್ತನಕಾರರು ಹಾಡುತ್ತಿಲ್ಲವೇ ಕೀರ್ತನಕಾರರು ರಾವಣನನ್ನು ಸಂಹರಿಸಿದ ಶ್ರೀರಾಮಚಂದ್ರ ಪ್ರಭುವು ತನ್ನ ಸೀತಾ ಮಾತೆಯೊಡನೆ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಮರುಳುತ್ತಿದಾರೆಂದು! ಭಾವೋದ್ವೇಗದಲ್ಲಿ ತಮ್ಮನ್ನು ಸಂಪೂರ್ಣ ಶ್ರೀ ಸೀತಾರಾಮರ ಪಾದಗಳಲ್ಲಿ ಅರ್ಪಿಸಿಕೊಂಡಿದ್ದ ಭಕ್ತ ಕುಲಶೇಖರರು ಮಂತ್ರಿಯ ಮಾತು ಕೇಳಿ ಹಸನ್ಮುಖಿಯಾಗಿ ಸತ್ಸಂಗದಲ್ಲಿ ತಲ್ಲೀನರಾದರು! ಇದು ಅವರ ಅತಿಶಯವಾದ ಭಕ್ತಿ! ಕುಲಶೇಖರ ಆಳ್ವಾರರ ಮಹತ್ವದ ದಿವ್ಯ ಪ್ರಬಂಧ ಪೆರುಮಾಳ್ ತಿರುಮೊಳಿಎಂಬುವ ೧೦೫ ಪಾಶುರಗಳ ಹತ್ತು ತಿರುಮೊಳಿ (ಸಿರಿನುಡಿ) ಆದರೂ ಅವರ ಹೆಸರು ತುಂಬಾ ಜನಪ್ರಿಯ ಆಗಿರುವುದು. ಶ್ರೀಮುಕುಂದಮಾಲಾ ಸ್ತೋತ್ರದ ಭಕ್ತಿಯುತ ಶ್ಲೋಕಗಳಿಂದಾಗಿ! ಒಂದೊಂದು ಶ್ಲೋಕವೂ ಅರ್ಥ ಬಾವ – ರಸ – ಧ್ವನಿ – ಭಕ್ತಿ ಸೀಯಾಳ ಬೆರೆತ ಪಂಚಾಮೃತ ಆರಾದ ಅಮೃತ (ಆರಾವಮುದೇ ಎಂಬುವಂತೆ !)

ಸಂಸ್ಕೃತದ ಸ್ತುತಿ ರಚನೆ

“ಘಷ್ಯತೇ ಯಸ್ಯ ನಗರೇ! ರಂಗಯಾತ್ರಾ ದಿನೇ ದಿನೇ !
“ತಮಹಂ ಶಿರಸಾವಂದೇ ರಾಜಾನಾಂ ಕುಲಶೇಖರಂ
ಶ್ರೀ ವಲ್ಲಭೇತಿ ವರದೇತಿ ದಯಾ ಪರೇತಿ

ಭಕ್ತ ಪ್ರಿಯೇತಿ ಭವಲುಂಠನ ಕೋವಿದೇತಿನಾಥೇತಿ ನಾಗಶಯನೇತಿ ಜಗನ್ನಿವಾಸೇ ತ್ಯಾಲಾಪನಂ ಪ್ರತಿಪದಾಂ ಕುರುದುಏ ಮುಕಂದಃ

ಹೇ ಗೋಪಾಲಕ ಹೇ ಕೃಪಾ ಜಲನಿಧೇ ಹೇ ಸಿಂಧು ಕನ್ಯಾಪತೇ
ಹೇಕಂಸಾಂತಕ ಹೇ ಗಜೇಂದ್ರ ಕರುಣಾ ಪಾರೀಣ ಹೇ ಮಾಧವ
ಹೇ ರಾಮಾನುಜ ಹೇ ಜಗತ್ತ್ರಯ ಗುರೋ ಹೇ ಪುಂಡರೀಕ್ಷಾಮಾಂ
ಹೇಗೋಪೀ ಜನನಾಥ ಪಾಲಯ ಪರಂಜಾನಾಮಿನತ್ವಾಂವಿನಾ ||
(ನಿನ್ನ ಹೊರತು ಬೇರಾರ ಅರಿಯೆ!)

  1. ಕೇವಲ ಕೆಲವು ಗ್ರಾಮಗಳ ಒಡೆಯನನ್ನೋ (ಸೇವಿಸುವಿರಲ್ಲ) (ಕತಿಪಯ ಗ್ರಾಮೇಶಂ
    ಅಲ್ಪಾರ್ಥದ ಸೇವಾಯೈ ಮೃಗಯಾಮಹೊ ನರಮಹೋ ಮೂಕಾ ವರಾಕಾವಯಮ್
  2. ತ್ವದಭೃತ್ಯ ಪರಿಚಾರಕ ಭೃತ್ಯ ಭೃತ್ಯಸ್ಯ ಭೃತ್ಯ ಇತಿಮಾಂ ಸ್ಮರ ಲೋಕನಾಥ!

ದಾಸದಾಸರ ದಾಸನಾಗಿರಿಸೆನ್ನ – ಎಂಬುದಾಗಿ ಮುಂದೆ ಇದನ್ನೇ ಕನಕದಾಸರು ಕೂಡ ಹಾಡಿದ್ದಾರೆ (ಕ್ರಿ.ಶ ೧೫೦೯ – ೧೬೦೭)

“ಮುಕುಂದ ಮಾಲೆ” ಯನ್ನು ಹಾಡದವರೇ ಇರಲಿಲ್ಲ ಎನ್ನುವಷ್ಟು ಜನಪ್ರಿಯ ಈ ಶ್ಲೋಕಗಳು! ಜೈಮಿನಿ ಭಾರತವು ಹೇಗೆ ಹಳ್ಳಿ ಹಳ್ಳಿಗಳಲ್ಲಿಯೂ ಪ್ರೀತಿಯ ಕಾವ್ಯವಾಗಿತ್ತೋ ಅದೇ ರೀತಿಯಲ್ಲಿ ಕುಲಶೇಖರ ಆಳ್ವಾರರ ಶ್ರೀ ಮುಕುಂದ ಮಾಲಾ”ಸ್ತುತಿಯೂ ‘ತೋಂಡೀ ಸಾಹಿತ್ಯಕೊಂದು ಶಾಶ್ವತ ಕೊಡುಗೆ! ಭಕ್ತ ಕವಿ ಜಯ ದೇವನ ಗೀತಗೋವಿಂದಕ್ಕೆ ಸರಿಸಾಟಿಯಾದ ಸ್ತೋತ್ರ.

ಪೆರುಮಾಳ್ ತಿರುಮೊಳಿ ಆಳ್ವಾರರು ಹಂಬಲದಿಂದ ಹಲುಬಿ ಹಾಡಿರುವ ೩೦೦ ಪದ್ಯಗಳ ದವ್ಯ ಪ್ರಬಂಧ ಭಕ್ತಿಗೆ ತಕ್ಕ ಜ್ಞಾನ ಸಂಪದ ಉಳ್ಳದ್ದು, ಜ್ಞಾನಕ್ಕೆ ಅನುಗುಣವಾದ ವೈರಾಗ್ಯ! ಹತ್ತು ತಿರುಮೊಳಿಗಳಲ್ಲಿ ಆಳ್ವಾರರು ಹತ್ತು ವಿಧದ ಅನುಭವಗಳನ್ನು ಬಣ್ಣಿಸುತ್ತಾರೆ. ಒಂದು ಪಾಶುರದ ಭಾವಾನುವಾದ ಹೀಗಿದೆ.

೧. ಬಾನನಾಳುವ ಚಂದ್ರನಂತೆ ಬಿಳಿಯದಾಗಿರುವ ಈ ಛತ್ರಿಯ ಕೆಳಗೆ ಅಟ್ಟಹಾಸದಿಂದ ಕುಳಿತು ಅರಸರ ಅರಸನಾಗಿ ಆಳುವವನ ಸಂಪತ್ತನ್ನು ಏಶ್ವರ್ಯವಿದೆಂದು ಒಂದು ಕ್ಷಣಮಾತ್ರವಾದರೂ ಭಾವಿಸಲಾರೆ ಎಲ್ಲರೂ ಕೊಂಡಾಡುವ (ಬೆಲೆ ನೀಡುವ) ಈ ಐಸಿರಿಯು ನನಗೆ ಬೆಲೆ ಇಲ್ಲದ್ದು ಇದಕ್ಕಿಂತಲೂ ತಿರುವೇಂಗಡದ ಬೆಟ್ಟ ಸಾಲುಗಳಲ್ಲಿ ಸ್ವೇಚ್ಛೆಯಿಂದ ಹರಿಯುವ (ವೆಂಕಟಾಚಲ – ತಿರುಪತಿಬೆಟ್ಟ) ಕಾಡುಹೊಳೆ (ಬನತೊರೆ) ಯಾಗಿರುವುದೇ ಲೇಸು! ಈ ವರವನ್ನು ಭಾಗಂತನು ನನಗೆ ಪ್ರಸಾದಿಸಲಿ!

೨. ಪರಿಮಳ ತುಂಬಿ ತೀವುವ ಹೂಗಳ ನಡುವೆ ನಿಂತಿರುವ, ಎನ್ನ ಸ್ವಾಮಿಯೇ! ನೀನೇ ತರುವ ದುಃಖವನ್ನು ನೀನೇ ಹೋಗಿಸುವಿಯಾದ್ದರಿಂದ ನಿನ್ನ ಶರಣವಲ್ಲದೆ ಬೇರೆ ಶರಣವಿಲ್ಲ ನನಗೆ (ಶರಣಾಗತಿ) ಹೆತ್ತ ತಾಯಿಯು ಕೋಪದಿಂದ ತನ್ನ ಮಗುವನ್ನು ತಳ್ಳಿಬಿಟ್ಟರೂ ತನ್ನಮ್ಮನ ಮುದ್ದು – ಪ್ರೀತಿಯನ್ನೇ ನೆನೆದು ಅವಳಕಾಲನ್ನೇ ಕಟ್ಟಿಕೊಂಡು ಬಿಕ್ಕಿ ಅಳುವ ಮಗುವಿನಂತೆ ನಾನು ನಿನ್ನನ್ನು ಬಿಡಲೊಲ್ಲೆ, ತಾಯಿ ನೀನೇ ಅಲ್ಲವೇ ಶ್ರೀಹರಿ.

೩. ಕಂಡವರೆಲ್ಲರೂ ಹಳಿಯುವಂತಹ ಕಾರ್ಯಗಳನ್ನು ತನ್ನ ಗಂಡನು ಮಾಡಿದ್ದರೂ ಅವನ ಹೊರತು ಬೇರೊಬ್ಬನನ್ನು ಮನಸ್ಸಿನಲ್ಲಿಯೂ ಕೂಡ ಸ್ಮರಿಸದ ಕುಲಸ್ತ್ರೀಯಂತೆ ನಿನ್ನನ್ನುಳಿದು ಬೇರೊಂದರಲ್ಲಿ ಪ್ರೀತಿಯನಿಡುವುದಿಲ್ಲ. ಕತ್ತಿ (ಅಥವಾ ಚೂಪಾದ ಚಾಕು) ಯಿಂದ ಕುಯಿದು ಕಾದ ಸೂಜಿಯಿಂದ ಸುಟ್ಟು ನೋಯಿಸಿದರೂ ವೈದ್ಯನಲ್ಲಿ ರೋಗಿಯು ನಂಬುಗೆ ಇಡುವಂತೆ ಸರ್ವ ಸ್ವಾಮಿಯಾದ ನೀನು ನಿನ್ನ ಮಾಯೆಯಿಂದ ನನ್ನ ದುಃಖವನ್ನು ದೀರ್ಘಕಾಲ ಬೆಳಸಿದರೂ ಕೂಡ ನಿನ್ನಡಿಯಾಳಾದ ನಾನು, ನಿನ್ನ ಸೇವೆ (ಕೈಂಕರ್ಯ)ಗಾಗಿಯೇ ಕಾಯ್ದು ನಿನ್ನ ಅರುಳನ್ನೇ (ಕೃಪೆಯನ್ನೇ) ಎದುರು ನೋಡುತ್ತಲಿರುವೆನು

೪. ಮಳೆ ಹುಯದೆ ಮೋಡಗಳು ಎಷ್ಟು ಕಾಲದ ತನಕ ಮರೆತಿದ್ದರೂ ಹಚ್ಚನೆಯ ಪೈರು ಮಾತ್ರ ಕತ್ತೆತ್ತಿ ಮುಗಿಲನ್ನೇ ಎದುರು ನೋಡುವಂತೆ ಅನುಭವಿಸಿಯೇ ಕಳೆಯಬೇಕಾದ (ಅವಶ್ಯಂ ಅನುಭೋಕ್ತವ್ಯಮ್) ದುಃಖವನ್ನು ನೀನು ಹೋಗಲಾಡಿಸದಿದ್ದರೂ ಕೂಡ ನನ್ನ ಮನಸ್ಸು ಮಾತ್ರ ನಿನ್ನ ಕಡೆಗೇ ನೋಡುತ್ತಿದೆ, ಪ್ರಭೂ!

. ತೇನಾಳ್ ಪೂಂಶೋಲೈತಿರುವೇಂಗಡಚ್ಚುನ್ಯೋಯಿಲ್ ಮಿನಾಯ್ ಪಿರಕ್ಕುಂ ವಿಧಿಯುಡೈಯೇನಾ ಏನೇ (ಪತಿರುಮೊಳಿ) ಮಿಂಚಿನ ಗೊಂಚಲಂತೆ ಜ್ವಲಿಸುವ ಸುದರ್ಶನ ಚಕ್ರವನ್ನು ಕೈಲಿ ಹಿಡಿದಿರುವ ವೆಂಕಟ ನಾಯಕನು ತಾಂಬೂಲವನ್ನು ಸೇವಿಸಿದ ಮೇಲೆ ಅದನ್ನು ಉಗುಳಲು ಉಪಯೋಗಿಸುವ ಕರಂಡವನ್ನು ಹಿಡಿಯುವ ಅಂತರಂಗ ಸೇವಕ ನಾನಾಗಬಾರದೆ!

೬. ಶೆಡಿಯಾಯ ವೆಲ್ ವಿನೈಹಳ್ ತೀರ್ಕುಂ ತಿರುಮಾಲೇ ನಡಿಯಾನೇ, ವೇಗಡವಾ! ನಿನ್ ಕೊಯಿಲ್‌ವಾಶಲ್ ಅಡಿಯಾರು ವಾನವರು ಆರಂಬೈಯತುಂ ಕಿಡಂದಿಯಂಗುಂ ಪಡಿಯಾಯ್‌ಕ್ಕಿಡಂದು ಉನ್ ಪವಳವಾಯ್ ಕಾಣ್ವಿನೇ ತಿರುಮಲೈಯ ನಿನ್ನ ಆಲಯದ ಬಾಗಿಲಲ್ಲಿ ನಾನು, ನಿನ್ನ ಸೇವಕ – ಭಕ್ತ ದೇವತೆಗಳೂ ಅಪ್ಸರೆಯರೂ ಸಂಚರಿಸುವ ಮೆಟ್ಟಿಲಾಗಿದ್ದು ಹವಳದಂತಿರುವ ನಿನ್ನಾವದನ ಕಾಣುತ್ತಲೇ ಇರುವಾಸೆ! ನನ್ನದಯ್ಯ! ಅದನು ಅನುಗ್ರಹಿಸಯ್ಯ!

ಕುಲಶೇಖರಾಳ್ವಾರರು ರಾಜರಾಗಿದ್ದಂತೆಯೇ ಶ್ರೀ ಮನ್ನಾರಾಣನ ಭಕ್ತಿ ಸಾಮ್ರಾಜ್ಯವಾಳುವ ಆಳ್ವಾರರೂ, ಎಂಬುವ ಪ್ರಶಂಸೆಗೆ ಪಾತ್ರರಾದರು – ಅವರಲ್ಲಿ ಮನೆ ಮಾಡಿದ್ದ ಪ್ರಪತ್ತಿ, ಗೋಪಿಕಾಭಾವ, (ನಾಯಿಕಾ ಭಾವ) – ವಿರಹ – ಪ್ರಣಯ – ಕಲಹ, ದೇವರೊಂದಿಗೆ, ಶ್ರೀ ಕೃಷ್ಣನನ್ನು ಹೊತ್ತು ಹೆತ್ತರೂ ಆ ಮುದ್ದು ಕಣ್ಣನ ಬಾಲಲೀಲೆಗಳನ್ನು ಕಣ್ಣಾರೆ ಕಂಡು ಅನುಭವಿಸುವ ಸುಖ ಕ್ಷಣಗಳು ತನಗೊದಗಲಿಲ್ಲವಲ್ಲ ಎಂದು ನೊಂದ ದೇವಕಿಯ ಹೃದಯ ಭಾವನೆಗಳನ್ನು ಕುಲಶೇಖರರು ಮೈಯಾಂತು ಅನುಭವಿಸುತ್ತಾರೆ.

“ನನ್ನ ಮನಸ್ಸನ್ನು ಕದ್ದು ಹೃದಯದಲ್ಲಿ ಬಂದು ಸೇರಿದೀಯಲ್ಲ ನಿನ್ನ ಕೃಪೆ – ಕಳ್ಳತನ – ನವನೀತಚೋರನೇ, ಆದ ನಿನ್ನ ಮಾಯೆ ನಾನರಿಯನೇ? ಅಥವಾ ಅರಿಯಲು ಸಾಧ್ಯವೇ? “ಆಲಸ್ಯಂ ವ್ಯಪನೀಯ ಭಕ್ತಿ ಸುಲಭಂ ಧ್ಯಾಯಸ್ವ ನಾರಾಯಣಂ ಲೋಕಸ್ಯ ವ್ಯಸನಾಪನೋದನಕರೋ ದಾಸಸ್ಯನಕಿಂನು ಕ್ಷಮಃ” “ಆತ – ಶ್ರೀ ಕೃಷ್ಣ – ಯಾವುದೇ ಸಣ್ಣ ಜಾತಿ ಭೇದ ಕುಲ ಖಂಡಿತವಾಗಿಯೂ ಎಣಿಸನಯ್ಯ – ಆತ ಭಕ್ತಿ ಸುಲಭನಯ್ಯ!” ವಾಡಿ ಪೋನ್ರ ಪಯಿರ್…” ಬಾಡಿದ ಪೈರು (ಬೆಳೆ – ಹೊಲ – ಗದ್ದೆಗಳಲ್ಲಿ ನಿಂತದ್ದು) ಮೋಡಗಳು ಮಳೆಗರೆಯದಿದ್ದರೂ, ಕತ್ತೆತ್ತಿ ಮುಗಿಲನ್ನೇ ಹಾತೊರೆದು ಎದುರುನೊಳ್ವಂತೆ ಅನುಭವಿಸಿಯೇ ಕಳೆಯಬೇಕಾದ ದುಃಖವನ್ನು ನೀನು ಹೋಗಿಸದಿದ್ದರೂ, ನನ್ನ ಮನ ಮಾತು ನಿನ್ನ ಕಡೆಗೇ ನೋಡುತ್ತಲಿದೆ” (ಪೆರುಮಾಳ್ ತಿರುಮಾಳಿ – ೫ – ೭) ಇಂಥ ಅನೇಕ ನಿಸರ್ಗದ ವರ್ಣನೆಗಳಲ್ಲಿ ಕುಲಶೇಖರರ ಕವಿಹೃದಯ ಮನಗಾಣುತ್ತೇವೆ. ತಿರುಪಾಣಿ:ತಿರುಪ್ಪಾಣಾಳ್ವಾರ್ (‘ಪ್ರಾಣ’ ಎಂಬುವ ಕಿನ್ನರಿವಾದ್ಯ ಹಿಡಿದು ಹಾಡುತ್ತಿದ್ದ ಭಕ್ತ – ತಿರುಪಾಣಿ”) ಮಾಸ್ತಿಯವರು ಇದೇ ಹೆಸರಿನಲ್ಲಿ ಹೃದಯ ಕಲಕುವ ಸುಂದರನಾಟಕವನ್ನೇ ಬರೆದು ಆದು ಹತ್ತಾರು ಸಲ ರಂಗ ಪ್ರಯೋಗವು ಆಗಿದೆ.

ತಿರುಪಾಣಿ : ಪಾಣನಾದನ್ – ತೊಂಡರಡಿಪ್ಪೊಡಿಆಳ್ವಾರರಂತೆ ವಿಪ್ರನಲ್ಲ, ಸಮಾಜದಲ್ಲಿ “ಅಂತ್ಯಜನಾಗಿ ಹುಟ್ಟಿದರು (ನಂದನಾರ್ ಹೇಗೆ ಪರಶಿವನ ಅಂತರಂಗ ಭಕ್ತರೋ ಹಾಗೆ ತಿರುಪಾಣಿ ಶ್ರೀ ರಂಗನಾಥನ ಅಂತರಂಗಭಕ್ತರು) ತಿರುಪಾಣಿಯನ್ನು ಕುರಿತಂತೆ ಜಾನಪದೀಯ ಗಾಥೆಗಳೂ ಇವೆ, ರಂಗನಾಥಸ್ವಾಮಿ ಯಾವ ರೀತಿಯಲ್ಲಿ ತನ್ನ ಭಕ್ತನನ್ನು ಹೃದಯಕ್ಕೆ ಕರೆದುಕೊಂಡನೆಂಬುವ ಐತಿಹ್ಯವೈ ಇದೆ! ತಿರುಪಾಣಿ ಹುಟ್ಟಿದ ಊರು – ತಮಿಳುನಾಡು ಉರೈಯೂರ್ (ಶ್ರೀ ವಿಷ್ಣುವಿನ ಹೃದಯ ಅಲಂಕರಿಸಿರುವ ಶ್ರೀವತ್ಸದಂಶರು ಭತ್ತದಗದ್ದೆಯಲ್ಲಿ ಜನಿಸಿದ್ದು, ಪಾಣರ್ ಕುಲದೆವರೇ! ಗಾನ ಪ್ರಿಯರು “ಗುರು ಪರಂಪರಾ ಪ್ರಭಾವ” ಎಂಬುವ ಗ್ರಂಥದಲ್ಲಿ ತಿರುಪಾಣರನ್ನು “ಭಗವದ್ಗಾನ ವಿದ್ಯೆಯ ಸಾರ್ವಭೌಮ” ರೆಂದೇ ಪ್ರಶಂಸಿಸಿದ್ದಾರೆ! ಸಾತ್ವಿಕ ಸ್ವಭಾವಮೋಕ್ಷಾರ್ಥಿ – ಭಗವಂತ – ಶ್ರೀ ರಂಗದ ಕಾವೇರಿ (ದಕ್ಷಿಣ) ತೆಂಕಣ ಕಡೆಯಲ್ಲಿಯೇ ಅಲ್ಲೊಂದು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದರು. ಈ ಗುಡಿಸಲು ಶ್ರೀ ರಂಗನಾಥನ ದೇವಾಲಯದೆಡೆಗೆ ಬಾಗಿಲನ್ನು ಮಾಡಿಕೊಂಡದ್ದು ಕೀಳು ಜಾತಿಯಲ್ಲಿ ಹುಟ್ಟಿದವರಾದ ಪ್ರಯುಕ್ತ ದೈವದರ್ಶನುವು ದುರ್ಲಭವೇ! ಆದರಿಂದಾಗಿ ಪಾಣಿಯು ಧ್ಯಾನಕ್ಕೆ ಕುಳಿತಾಗಲೆಲ್ಲ ದೇವಲಾಯದ ಕಡೆಗೆ ತಿರುಗಿ ನೋಡುವುದು ರೂಢಿಯಾಗಿತ್ತು! ಭಕ್ತಿ ರಸಸ್ಯಂದಿ ಗೀತೆಗಳನ್ನು ನಿರರ್ಗಳವಾಗಿ ಪವಣಿಸಿವಾದ್ಯದನೆರವಿಂದ ಹಾಡಿಕೊಳ್ಳುವುದು! ಎಲ್ಲ ಜನರಿಗೂ ತಿಳಿದಿತ್ತು, ತಿರುಪಾಣಿ, ಭಕ್ತರಲ್ಲಿ ಭಕ್ತ ಎಂಬುವುದು! ಹೀಗಿರುವಲ್ಲಿ, ಒಮ್ಮೆ ಒಂದು ವಿಚಿತ್ರ ಘಟನೆ ಜರುಗಿತು – ಇದು ತಿರುಪಾಣರ ಬದುಕನ್ನೇ ಇನ್ನು ಉನ್ನತಿಗೆಯ್ದಿತೆನ್ನಬೇಕು! ಶ್ರೀ ರಂಗನಾಥ ದೇವಾಲಯದ ಪ್ರಧಾನ ಅರ್ಚಕರಾದ “ಲೋಕಸಾರಂಗ” ರೆಂಬುವವರು ಬಂಗಾರದ ಬಿಂದಿಗೆ ಹಿಡಿದು, ಇತರ ಸಹ ಅರ್ಚಕರ ಸಂಗಡ – ಶ್ರೀ ರಂಗನಾಥ “ತಿರುಮಜ್ಜನ” (ಅಭಿಷೇಕ) ಕೈಂಕರ್ಯ ನಡೆಸಲು ಕಾವೇರಿ (ತಮಿಳರು ಕಾವೇರಿಯನ್ನು “ಪೊನ್ನಿ” ಎನ್ನುತ್ತಾರೆ ಅಂದರೆ ಹೊನ್ನು ಆಕೆ ಎಂಬರ್ಥದಲ್ಲಿ!) ನದಿಯಿಂದ ನೀರನ್ನು ಹೊತ್ತು ತರುತ್ತಿದ್ದಾರೆ ಹಾದಿಯ ಮಗ್ಗುಲಲ್ಲೇ ತಿರುಪಾಣಿ – ದೇವಾಲಯಕ್ಕೆ ಅಭಿಮುಖರಾಗಿ ಧ್ಯಾನದಲ್ಲಿದ್ದಾರೆ! ಲೋಕ ಸರಾಂಗರ ಜತೆ ಇದ್ದ ಅರ್ಚಕನೊಬ್ಬ “ಲೇಯ್! ಬೇಗ ದಾರಿಬಿಡೊ, ಸರಿಯೋ ಎಂದು ಕೂಗು ಹಾಕಿದ! ಭಕ್ತ ಪರವಶರಾಗಿ ಮುಳುಗಿದ್ದ ತಿರುಪಾಣಿ ಗಮನಿಸಲಿಲ್ಲ ತಾನು ನಿಂತಿದ್ದೆಡೆಯಿಂದ ಸರಿಯಲೂ ಇಲ್ಲ. ಲೋಕಸಾರಂಗ ಮುನಿಗಳಿಗೆ ಸಾತ್ವಿಕ ಮನೋಧರ್ಮವೇಓ ಇತ್ತು. ಆದರೂ, ತಾನು “ಉತ್ತಮ ಜಾತಿಯವ”ನೆಂಬ ಅಹಂಕಾರ! ದಾರಿಬಿಡದ ತಿರುಪಾಣಿಗೆ ಒಂದು ಕಲ್ಲೆಸದರು ಅವನ ಗ್ರಹಚಾರವೋ ಏನೋ! ಕಲ್ಲು ನೇರ ಪಾಣರ ಹಣೇಗೇ ಬಡಿದು ನೆತ್ತರು ತೊಟ್ಟಿಕ್ಕಿತು, ಗಾಯವಾಯಿತು! ಯೋಗದ ಅವಸ್ಥೆಯಿಂದ ಬೆಚ್ಚಿ ಎಚ್ಚತ್ತ ಎದುರು ಸ್ವಲ್ಪ ದೂರದಲ್ಲಿ ನಿಂತಿದ್ದ ವಿಪ್ರರನ್ನು ಕಂಡು “ಅಯ್ಯಪ್ಪ! ನಾನೆಂಥ ತಪ್ಪು ಮಾಡಿದೆ! ಎಂದು ಖಿನ್ನನಾಗಿ ಕ್ಷಮೆ ಯಾಚಿಸುತ್ತ ಲಗುಬಗೆಯಿಂದ ದೂರಸರಿದ, ದೂರ ದೂರಸರಿದ.

ಇದೀಗ ಲೋಕಸಾರಾಗರಿಗೆ ತಿರುಪಾಣಿಗೆ ಏಟಾಗಿ ರಕ್ತ ಸೋರಿದುದು, ತಾನು ದೊಡ್ಡಕ್ಕೆ ತಪ್ಪುಮಾಡಿದೆ ನ್ನ ಕರ್ಮಠ ಮಡಿಮೈಲಿಗೆಯೇ ಕಾರಣ, ಎಂದೆಲ್ಲ ಚಿಂತೆ ಆವರಿಸಿತು! ಅದೇ ಘಟನೆ, ನೋವಿನಿಂದ ಗಾಸಿಗೊಂಡ ಅಮಾಯಕ ತಿರುಪಾಣಿಯ ಚಿತ್ರವು ಲೋಕ ಸಾರಂಗರನ್ನು ಕಾಡಿತು! ದೇವಾಲಯಕ್ಕೇನೋ ಹಿಂತಿರುಗಿದರು ತಿರುಮಜ್ಜನ ಮಾಡಿದರು “ಸಹಸ್ರಶೀರ್ಷಾ ಪುರುಷಃ” ಎಂದು ಪುರುಷ ಸೂಕ್ತವನ್ನು ಪಠಿಸುವಾಗಲೂ ತಾನು ಭಾಗವತಾಪಚಾರ ಗೈದೆನೆಂಬ ನೋವು!

ಅವರಿಗೆ ಶ್ರೀ ರಂಗನಾಥನ ಸನ್ನಿಧಿಯ ಪ್ರಸನ್ನವಾಗಿ ಕಾಣಿಸಲಿಲ್ಲ! ತಿರುಪಾಣಿಯವರ ನಿರ್ಮಲಚಿತ್ತ – ಭಕ್ತಿ – ಸಂಗೀತ – ಆದರೆ ಜಾತಿಯಕಟ್ಟು! ಅಂತ್ಯಜ ಅವನು! ಹೇಗೆ ಜೊತೆ ಇರುವುದು ದೇವಾಲಯಕ್ಕೆ ಎಲ್ಲಿದೆ ಪ್ರವೇಶ! ಭಗವತ್ಪ್ರೇಮದ ತಿರುಪಾಣೀಯ ಕಣ್ಣುಗಳು ಶ್ರೀ ರಂಗನ ದರ್ಶನ ಮಾಡಬಾರದೆ! ಹಾಗೇ ಮಲಗಿದ ಅವರಿಗೆ ರಾತ್ರಿಯೇ ಕನಸು! ರಂಗನಾಥಸ್ವಾಮಿ ಪ್ರತ್ಯಕ್ಷನಾಗಿ “ನನ್ನ ಅಂತರಾಗ ಭಕ್ತ ತಿರುಪಾಣೀ… ನೀವು ಆ ರೀತಿ ದಂಡಿಸಿದ್ದು ಸರಿಯೇ? ಅವನಿಗಾದ ನೋವು, ಗಾಯ ನನಗೂ ಆದದ್ದೇ ತಾನೆ? ತಿರುಪಾಣರು ಅಂತ್ಯಜರು ಕೇವಲ ಹುಟ್ಟಿನಿಂದ, ಬ್ರಾಹ್ಮನೋತ್ತಮರು ದೈವ ಭಕ್ತಿಯಿಂದ! ಆತನನ್ನು ಕೀಳು ಎಂಬುದಾಗಿ ನೀನು ಭಾವಿಸದೆ ನನ್ನ ಪ್ರಿಯವಾದ ಅವನನ್ನು ಪ್ರೀತಿಯಿಂದ ನಿನ್ನ ಹೆಗಲಿನ ಮೇಲೆ ಕುಳ್ಳಿರಿಸಿಕೊಂಡು ಉತ್ಸವದೊಂದಿಗೆ ನನ್ನ ಸನ್ನಿಧಿಗೆ ಕರೆದುತಾ. ಇದು ನನ್ನಾಜ್ಞೆ” “ಹಾಗೆ ನೀನು ಕರೆತರದಿದ್ದರೆ ಇಲ್ಲಿ ನಾನಿರುವುದಿಲ್ಲ ಭಾಗವತಾಪಚಾರ ಮಾಡಿದ್ದೀಯೆ ಪ್ರಾಯಶ್ಚಿತ್ತ ಮಾಡಿಕೊ, ದೇವರ ಮೂರ್ತಿಮಾಯ! ಬೆಳಗಿನ ಹಕ್ಕಿಗಳ “ಕೀಚ್ ಕೀಚ್ ಸದ್ದು…. ಲೋಕಸಾರಂಗರು ಝಗ್ಗನೆ ಎದ್ದು ಕುಳಿತರು “ಇಂದು ನನ್ನ ಜನ್ಮ ಸಫಲವಾಯಿತು. “ಎಂದು ಕಾವೇರಿ ನದಿ, ತಿರುಪಾಣಿ ಇದ್ದೆಡೆಗೇ ಓಡಿದರು!

ಪಾಣ ವಾದ್ಯ ಕೈಲಿ ಹಿಡಿದ ತಿರುಪಾಣರು ತಲ್ಲೀನರಾಗಿ ಹಾಡುತ್ತಿದ್ದಾರೆ, ಮೂಡಣ ದಿಸೆಯಲ್ಲಿ ಭಗವಾನ್ ಸೂರ್ಯನ ಬರುವಿಕೆ ಎಲ್ಲ ಒಳ್ಳೆಯ ದೃಶ್ಯವೇ! ಮೆಲ್ಲ ಮೆಲ್ಲನೆ ಬಂದು ಲೋಕ ಸಾರಂಗಮುನಿ ಪಾಣರ ಕಾಲಿಗೆರಗಿ ಕ್ಷಮೆ ಯಾಚಿಸಿದರು. ತಿರುಪಾಣಿ ಎಚ್ಚೆತ್ತು ಬೆಚ್ಚಿ, ಇದೇನು ಸ್ವಾಮಿ! ನಾನು ಕೀಳುಜಾತಿಯವನು ನನ್ನನ್ನ ನೀವು ಮುಟ್ಟಕೂಡದು! ಎನ್ನುತ್ತ ಹಿಂದೆ ಸರಿದ “ಶ್ರೀ ರಂಗನೇ ಕನಸಲ್ಲಿ ಬಂದು ನನಗೆ ಆದೇಶ ನೀಡಿದಾನೆ ನಿಮ್ಮನ್ನ ಆತನ ಸನ್ನಿಧಿಗೊಯ್ಯಲು” ಎಂದರೆ, ಮತ್ತೆ ಹಿಂದಕ್ಕೇ ಸರಿದ! ತಲೆಯಾಡಿಸಿದ ಕಣ್ಣಲ್ಲೋ ಕಂಬನಿ!

“ನನ್ನ ಹೆಗಲ ಮೇಲೆ ಕುಳಿತು ನೀವು ಬರಲೇಬೇಕು ಇದು ರಂಗನಾಣೆ” ಎಂದು ಪ್ರಮಾಣ ಮಾಡಿ ಲೋಕಸಾರಂಗರು ಉತ್ಸವದೋಪಾದಿಯಲ್ಲಿ ತಿರುಪಾಣಿಯನ್ನು ಕರೆತಂದು ಗರ್ಭಗುಡಿಯಲ್ಲೇ ಇಳಿಸಿದರು “ದೈವ ಚಿತ್ತ” ನಾನು ತಮಗೆ ಶರಣು ಎಂದ ಪಾಣಿ ಸುಮ್ಮನೆ ದಿಙ್ಮಢನಾಗಿ ಸ್ವಾಮಿಯನ್ನೇ ನೋಡುತ್ತ ನಿಂತರು! ಸುತ್ತ ರಂಗಮಂಟಪ, ಸುಖನಾಸಿ ರಂಗನಾಥ – ರಂಗನಾಯಕಿ – ಪಾದದಲ್ಲೇ ಕುಳಿತಿರುವ ಕಾವೇರಿ, ತಿರುಪಾಣಿಯ ಮುಖೇನ ಹಾಗಯೇ ಹೊರ ಹೊಮ್ಮಿದವು ಕವಿತೆ ಸಾಲು ಸಾಲು! ಅಮಲನಾದಿಪಿರಾನ್ಅಮೆಲನ್ಶುದ್ಧನಾದವನು ಆದಿಪಿರಾನ್ ಅನಾದಿ ಮೂರುತಿ ಎಲ್ಲವೂ ಆತನೆ! ಮುಂಚೆ ಕನ್ನಡ ನಾಡಿನ ವರಕವಿ ಕುಮಾರವ್ಯಾಸ ಹಾಡಿಲ್ಲವೇ? : ವೇದ ಪುರುಷನ – ಅನಾದಿ ಮೂರುತಿಸಲಹೊ ಗದುಗಿನ ವೀರ ನಾರಾಯಣ ಎಂದು” ಆದಿ – ಅನಾದಿ ಆ ಪರಿಶುದ್ಧ ಭಗವಂತ, ನಿನಗೆ ಇದೊ ಮತ್ತೆ ಮತ್ತೆ ನಮಿಸುವೆ”. ಅರಂಗತ್ತಮ್ಮನ್ ತಿರುಕ್ಕಮಲಪಾದಂ ವಂನ್ದನ್ನ ಕಣ್ಣಿನುಳ್ಳನ ಪೂಕ್ಕಿನವೆ ಶ್ರೀ ರಂಗ ರಂಗ ಧರ್ಮಶ್ರೇಷ್ಠ ಕಮಲದ ಪಾದಗಳು ಬಂದೆನ್ನ ಕಣ್ಣಿನೊಳು ಒಳಹೊಕ್ಕವೇ ” ಎಂದು ಮೈಮರೆತು ಹಾಡಿದರು! ಕಿರಿಕಿರಿ ಹಿಗ್ಗಿದರು ತಿರುಪಾಣಿ! ಆದಿಯಲ್ಲಿ ಅನಾದಿ ಮೂರುತಿ ಪರಿಶುದ್ಧನಾದ ರಂಗನಾಥ ನಿನತದೆ ಶರಣ” ಎಂದು ಹಾಡಿದರು! ಅಮಲನಾದಿ ಪಿರಾನ್ ಅಡಿ ಯಾರ್ಕೆನೈ ಆಳ್ವಡುತ್ತ ವಿಮಲರ್ ವಿಣ್ಣವರ್ ಕೋನ್ ವಿರೈಯರ್ ಪೊಳಿಲ್ ವೇಂಗಡವನ್ ನಿರ್ಮಲನ್, ನಿನ್ಮಲನ್, ನೀದಿವಾನವನ್ ನೀಣ್ಮದಿಳ್ ಅರಙ್ಗತ್ತಮ್ಮಾನ್ ತಿರುಕ್ಕಮಲ ಪಾದವುವನ್ದು ಎನ್ ಕಣ್ಣಿನುಳ್ಳನ್ ಪೊಕ್ಕಿನ್ರದೇಅಮಲನಾದಿ ಹಿರಿಯ, ತನ್ನ ಜನಕೆ, ನನ್ನನಾಳಗೆಯ್ದ ವಿಮಲನಡಿಯ ದೇವರೊಡೆಯ, ನನ್ನ ರಂಗಧಾಮನಡಿಯ ಕಮಲ, ಎನ್ನ ಕಣ್ಣುವೊಳ ಹೊಕ್ಕು, ಇವರ ಕರುಣೆಯೆನಿತು ಕಂಡೆನೇ!