ಅಂಧ್ ‘ಅಂಧ್’ ಎಂಬ ಈ ಬುಡಕಟ್ಟು ಜನ ಅದಿಲಾಬಾದ್ ಜಿಲ್ಲೆಯ ಗುಡ್ಡಗಾಡುಗಳಲ್ಲಿ ವಾಸಿಸುತ್ತಾರೆ. ಇವರ ಸಾಕ್ಷರತೆ ಶೇಕಡಾ ೨೬. ಇವರ ಮಾತೃಭಾಷೆ ಮರಾಠಿ. ಅಂಧ್ ಬುಟಕಟ್ಟಿನಲ್ಲಿ ವರ್ತಾಳಿ, ಖಲ್ತಾಳಿ ಎಂಬ ಎರಡು ಉಪಪಂಗಡಗಳಿವೆ. ವರ್ತಾಳಿ ಪಂಗಡದವರು ಖಲ್ತಾಳಿ ಪಂಗಡದವರಿಗಿಂತ ಅಧಿಕರೆಂದು ಗುರುತಿಸಲಾಗುತ್ತದೆ. ಇವರ ನಡುವೆ ವೈವಾಹಿಕ ಸಂಬಂಧಗಳಿರುವುದಿಲ್ಲ. ವಿಧವಾ ವಿವಾಹಕ್ಕೆ ಅನುಮತಿಯಿದೆ. ವಿವಾಹ ವಿಚ್ಛೇದನವೂ ಉಂಟು. ಪಿತೃಪ್ರಧಾನ ವ್ಯವಸ್ಥೆ ಈ ಸಮುದಾಯದಲ್ಲಿದೆ. ಕುಟುಂಬಕ್ಕೆ ತಂದೆಯೇ ಯಜಮಾನ.

ಅಂಧ್ ಸಮುದಾಯದಲ್ಲಿ ‘ಪೊಲಾ’ ಹಬ್ಬ ಮುಖ್ಯವಾದುದು. ಈ ಸಂದರ್ಭದಲ್ಲಿ ಎತ್ತುಗಳನ್ನು ಪೂಜಿಸುತ್ತಾರೆ. ಎತ್ತುಗಳನ್ನು ಚೆನ್ನಾಗಿ ಅಲಂಕರಿಸಿ ಹನುಮಂತ ದೇವಾಲಯದ ಹತ್ತಿರಕ್ಕೆ ಕರೆತಂದು ಪೂಜೆ ಮಾಡುತ್ತಾರೆ. ಅಂಧ್‌ರ ಆರಾಧ್ಯ ದೈವ ಆಂಜನೇಯ ಸ್ವಾಮಿ. ತಂದೆಯ ಆಸ್ತಿಗೆ ಗಂಡು ಮಕ್ಕಳು ಮಾತ್ರ ಹಕ್ಕುದಾರರು. ಮಗಳಿಗೆ ತಂದೆಯ ಸಂಪಾದನೆಯ ಮೇಲೆ, ತಾಯಿಯ ಆಭರಣಗಳ ಮೇಲೆ ಯಾವುದೇ ತೆರನಾದ ಹಕ್ಕುಗಳಿರುವುದಿಲ್ಲ. ಗಂಡು ಮಕ್ಕಳು ಮಾತ್ರ ತಾಯಿ ತೀರಿಕೊಂಡ ಮೇಲೆ ಆಕೆಯ ಆಭರಣಗಳನ್ನು ತಮ್ಮ ಆಸ್ತಿಯನ್ನಾಗಿ ಪರಿಗಣಿಸಿ ಹಂಚಿಕೊಳ್ಳುತ್ತಾರೆ. ವೈವಾಹಿಕ ಸಂಬಂಧಗಳಲ್ಲಿ ಹೆಚ್ಚಾಗಿ ಅತ್ತೆಯ ಮಗಳನ್ನು ಮಾವನ ಮಗಳನ್ನು ಮತ್ತು ಅಕ್ಕನ ಮಕ್ಕಳನ್ನು ವಿವಾಹವಾಗುತ್ತಾರೆ.

ಅಂಧ್ ಜಾತಿಯ ಮುಖಂಡನನ್ನು ‘ನಾಯಕ್’ಎಂದು ಕರೆಯುತ್ತಾರೆ. ನಾಯಕ್ ಪಟ್ಟ ವಂಶಪಾರಂಪರ್ಯವಾಗಿ ಸಂಕ್ರಮಿಸುತ್ತದೆ. ಸಮುದಾಯದವರ ಒಳ ಜಗಳಗಳನ್ನು ಈತನೇ ಪಂಚಾಯಿತಿ ಮಾಡಿ ತೀರ್ಮಾನಗಳನ್ನು ಕೊಡುತ್ತಾನೆ. ಅವರಲ್ಲಿ ಯಾರಾದರೂ ಶಿಕ್ಷೆಗೊಳಗಾದರೆ ದಂಡ ಕಟ್ಟುತ್ತಾರೆ. ಹಾಗೆ ಶಿಕ್ಷಿಗೊಳಗಾದರೆ ದಂಡ ಕಟ್ಟುತ್ತಾರೆ. ಹಾಗೆ ಶಿಕ್ಷಿಸುವುದನ್ನು ‘ದಾಂಡ್’ ಎನ್ನುತ್ತಾರೆ. ಇವನು ಹುಟ್ಟು, ಸಾವು, ವಿವಾಹ ಮತ್ತು ಪೂಜೆ, ಹಬ್ಬದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಸುದ್ಧಿ ಸಮಾಚಾರಗಳನ್ನು ಮುಟ್ಟಿಸುವವನನ್ನು ‘ದುಕ್ರಿಯಾ’ ಎಂದು ಕರೆಯುತ್ತಾರೆ. ಈತ ‘ನಾಯಕ್’ ಹೇಳಿದಂತೆ ನಡೆದುಕೊಳ್ಳುತ್ತಾನೆ.

ಇವರು ಗೊಂಡರು, ಕೋಲಾಮರು, ಪ್ರಧಾನರು ಮಾಡಿದ ಪದಾರ್ಥಗಳನ್ನು ತಿನ್ನುವುದಿಲ್ಲ. ಅಸ್ಪೃಶ್ಯತೆ ಇವರಲ್ಲಿದೆ. ಕಡಿಮೆ ಕುಲದವರೊಂದಿಗೆ ಊಟ ಮಾಡುವುದಿಲ್ಲ. ಆಕಳ ಮಾಂಸ, ಹಂದಿಯ ಮಾಂಸವನ್ನು ತಿನ್ನುವುದಿಲ್ಲ. ಮನೆ ದೋಚುವುದು ಕಳ್ಳತನ ಮುಂತಾದವು ಇವರಲ್ಲಿವೆ.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೯,೫೭,೫೩೫. ಅಂದರೆ ಶೇಕಡಾ ೦.೧೯

– ಬಿ.ಕೆ.ಆರ್. ಅನುವಾದ ಕೆ.ಎಸ್.

ಅಗನ್ನಾಳ್ ನೀಕಾನ್ ಕೇರಳದಲ್ಲಿ ಸಾವಿಗೆ ಸಂಬಂಧಿಸಿದಂತೆ ನಡೆಸುವ ಕ್ರಿಯೆ. ‘ಅಗನ್ನಾಳ್’ ಎಂಬುದು ನಿರ್ದಿಷ್ಟ ಹೊತ್ತು. ಈ ವೇಳೆಯಲ್ಲಿ ಸಾವು ಸಂಭವಿಸಿದರೆ, ದೋಷಗಳನ್ನು ನಿವಾರಿಸಿ, ಆತ್ಮಕ್ಕೆ ಮೋಕ್ಷ ಕೊಡಲು ನಡೆಸುವ ವಿಧಿವಿಧಾನಗಳೇ ಅಗನ್ನಾಳ್ ನೀಕಲ್. ನಕ್ಷತ್ರ ಹಾಗೂ ಗ್ರಹಗತಿಗಳ ಹಿನ್ನೆಲೆಯಲ್ಲಿ ಜ್ಯೋತಿಷಿಗಳು ಅಗನ್ನಾಳ್ ಮತ್ತು ಪುರನ್ನಾಳ್ ಗಳಿಗೆಗಳನ್ನು ತಿಳಿಸುವರು. ಅಗನ್ನಾಳ್ ಸಾವು ಸಂಭವಿಸಿದರೆ ಮಾಂತ್ರಿಕ ಕ್ರಿಯೆಗಳ ಮೂಲಕ ವಣ್ಣಾನ್, ಮಲಯನ್, ಕಣಿಶನ್ ಮೊದಲಾದ ಸಮುದಾಯದವರು ದೋಷ ನಿವಾರಣೆ ಮಾಡುವರು. ಸಾವಿನ ನಂತರದ ಉತ್ತರ ಕ್ರಿಯೆಯ ಸಂದರ್ಭಗಳಲ್ಲಿ ಅಗನ್ನಾಳ್ ನೀಶಲ್ ವಿಧಿಯನ್ನು ನಡೆಸಲಾಗುತ್ತದೆ.

ಮಧ್ಯರಾತ್ರಿಯ ವೇಳೆಯಲ್ಲಿ ನಿರ್ಜನ ಪ್ರದೇಶದಲ್ಲಿ ಈ ಮಾಂತ್ರಿಕ ಕ್ರಿಯೆಯ ವಿಧಿವಿಧಾನಗಳು ಆರಂಭವಾಗುತ್ತವೆ. ಗುಳಿಗನ ರೂಪವನ್ನು ‘ಕಳಂ’ ಬರೆದು ಬಲಿಕೊಡುವುದೇ ಇದರ ಮುಖ್ಯ ಆಚರಣೆ. ಭತ್ತ ಹಾಗೂ ಅಕ್ಕಿಯಿಂದ ಮನುಷ್ಯ ರೂಪವನ್ನು ಹೆಣವೆಂದು ಕಲ್ಪಿಸಿ, ಗುಳಿಗ ಮತ್ತು ಯಮನಿಗೆ ಸಂಬಂಧಿಸಿದ ಸ್ತುತಿ ಹಾಡುಗಳನ್ನು ಹಾಡುತ್ತಾರೆ.

‘ಕುರುದಿ’ ನೀರು ಚೆಲ್ಲುವುದು – ಅಗನ್ನಾಳ್ ನೀಕಲ್ ಆಚರಣೆಯ ಮುಖ್ಯ ವಿಧಿಯಾಗಿದೆ. ಕೋಳಿಯನ್ನು ಕೊಯ್ದು ಅದರ ರಕ್ತದಿಂದ ಕೆಂಪು ಕುರುದಿಯನ್ನು ತಯಾರಿಸಿ, ಮಸಿ ಹಾಗೂ ಭಸ್ಮದಿಂದ ತಯಾರಿಸಿದ ಕಪ್ಪು ಕುರುದಿಯನ್ನೂ ತಯಾರಿಸಿ, ಸ್ತುತಿ ಹಾಡುತ್ತಾ ಉತ್ತರ ಮತ್ತು ದಕ್ಷಿಣ ದಿಕ್ಕಿಗೆ ಚೆಲ್ಲುವರು. ಮನೆಮಂದಿ ಒಳಸೇರಿ ಬಾಗಿಲು ಹಾಕುವರು. ಕರ್ಮಿಯು ಕೋಳಿಯನ್ನು ಬಲಿಕೊಟ್ಟು ತೆರಳುತ್ತಾನೆ.

ಈ ವಿಧಿವಿಧಾನಗಳ ಬಳಿಕ ಗುಳಿಗನ ಸ್ತೋತ್ರ ಆರಂಭವಾಗುತ್ತದೆ. ಅರಸಿನ, ಮಸಿ, ಅಡಿಕೆ ಸೀಯಾಳವನ್ನು ಅರ್ಪಿಸುವರು. ಸಾವಿನ ಸಂದರ್ಭದಲ್ಲಿ ಬರುವ ಯಮರಾಯ ಹಗ್ಗ ಮತ್ತು ದಂಡವನ್ನು ಮರೆಯುವ ಸಾಧ್ಯತೆ ಇದೆ ಮತ್ತು ಇದರಿಂದ ಉಂಟಾಗುವ ದೋಷಗಳನ್ನು ತಪ್ಪಿಸಲು ಈ ಆಚರಣೆಯಿಂದ ಸಾಧ್ಯ ಎಂದು ಜನರು ನಂಬಿದ್ದಾರೆ.

ವರ್ತಮಾನ ಕಾಲದಲ್ಲಿ ಇಂತಹ ಆಚರಣೆಗಳು ವಿರಳವಾಗಿದೆ. ಸಾವು ಮತ್ತು ಸಾವಿನ ನಂತರದ ಉತ್ತರ ಕ್ರಿಯಾದಿ ಆಚರಣೆಗಳಲ್ಲಿ ಆಗಿರುವ ಬದಲಾವಣೆ ಇದಕ್ಕೆ ಕಾರಣ. ವಿವಿಧ ಜನಾಂಗಿಕ ಅಧ್ಯಯನ ಕೃತಿಗಳಲ್ಲಿ, ಡಾ. ವಿಷ್ಣು ನಂಬೂದಿರಿ ಅವರ ಫೋಕ್ಲೋರ್ ನಿಘಂಟುವಿನಲ್ಲಿ ಈ ಆಚರಣೆಯ ಕುರಿತು ಹೇಳಲಾಗಿದೆ.

– ವಿ.ಎಂ.ಯು. ಅನುವಾದ ಎನ್.ಎಸ್.

ಅಗ್ನಿಗುಂಡಂ ಇದು ಭಕ್ತಿ ಪ್ರಧಾನವಾದ ತೆಲುಗು ಜನಪದ ಪ್ರದರ್ಶನ ಕಲೆ (ಕೊಂಡ ಹಾಯುವುದು). ಇದು ಉಭಯ ಗೋದಾವರಿ ಜಿಲ್ಲೆಗಳಲ್ಲಿ (ಪೂರ್ವ ಮತ್ತು ಪಶ್ಚಿಮ) ಇಂದಿಗೂ ಜೀವಂತವಾಗಿ ಉಳಿದಿದೆ. ಇದು ಎಷ್ಟು ಶಕ್ತಿ ಪ್ರಧಾನವೊ ಅಷ್ಟೇ ಸಾಹಸಮಯ ಪ್ರದರ್ಶನ. ಅಗ್ನಿಕುಂಡವನ್ನು ತುಳಿಯುವುದು ಅಷ್ಟು ಸರಳವಾದ ವಿಷಯವಲ್ಲ. ಕಾಲುಗಳಿಗೆ ಯಾವುದೇ ರಕ್ಷಣಾ ವಸ್ತುಗಳನ್ನು ಧರಿಸದೆ, ಬರಿಗಾಲಿನಲ್ಲಿ ನಿಗಿನಿಗಿ ಉರಿಯುವ ಕೆಂಡಗಳ ಮಧ್ಯೆ ನಡೆಯುವಂಥದ್ದು. ಇದನ್ನು ಅಗ್ನಿಕುಂಡವನ್ನು ತುಳಿಯುವುದು, ಕುಂಡವನ್ನು ತುಳಿಯುವುದು, ಕೆಂಡಗಳ ಮೇಲೆ ನಡೆಯುವುದು(ಕೊಂಡ ಹಾಯುವುದು) ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಗ್ರಾಮದೇವತೆಗಳ ಉತ್ಸವದ ಸಮಯದಲ್ಲೂ ಅಮ್ಮನವರ ಜಾತ್ರೆಯ ಸಂದರ್ಭದಲ್ಲೂ ಮುತ್ಯಾಲಮ್ಮ, ವೀರಭದ್ರನ ಸಂಭ್ರಮಗಳಲ್ಲೂ ಈ ಪ್ರದರ್ಶನವಿರುತ್ತದೆ. ಇದು ಭಕ್ತಿಶ್ರದ್ಧೆಗಳಿಂದ ನಿಯಮ ನಿಷ್ಠೆಗಳಿಂದ ಮಾಡುವಂಥದ್ದು. ಈ ಪ್ರದರ್ಶನಕ್ಕೆ ಕಲಾವಿದರ ಸಂಖ್ಯಾ ನಿಯಮಗಳೇನಿಲ್ಲ. ಪ್ರಧಾನ ಕಲಾವಿದ ಪ್ರದರ್ಶನವನ್ನು ಮುನ್ನಡೆಸುತ್ತಾನೆ. ಇವನನ್ನು ‘ಆಸಾದಿ’ ಎನ್ನುತ್ತಾರೆ. ಅವನೊಂದಿಗೆ ಉಪವಾಸ ಇದ್ದವರು ಅವನನ್ನು ಅನುಸರಿಸಿ ಅಗ್ನಿಕುಂಡವನ್ನು ತುಳಿಯುತ್ತಾರೆ. ಆಸಾರಿಯು ಅಮ್ಮನವರ ಗುಡಿಯಲ್ಲಿ ಪೂಜಾ ಕಾರ್ಯಗಳನ್ನು ಕ್ರಮಬದ್ಧವಾಗಿ ನಿರ್ವಹಿಸುತ್ತಾನೆ. ಎರಡು ಮೂರು ದಿನ ಉಪವಾಸವಿದ್ದು ಪೂಜಾ ಕಾರ್ಯಗಳನ್ನು ಮಾಡಿ ಆಸಾದಿ ಅಗ್ನಿಕುಂಡ ಪ್ರದರ್ಶನದಲ್ಲಿ ಯಾವುದಾದರೊಂದು ಕಾರಣಿ ಇದ್ದೇ ಇರುತ್ತದೆ. ಇವರು ನಿಯಮಗಳನ್ನು ಪಾಲಿಸದೆ ಭಾಗವಹಿಸಿದರೆ ಅಮ್ಮನವರ ಆಗ್ರಹಕ್ಕೆ ಗುರಿಯಾಗುತ್ತಾರೆ ಎಂದು ಇವರಲ್ಲಿ ಬಲವಾದ ನಂಬಿಕೆ. ಸಾಮಾನ್ಯವಾಗಿ ರಾತ್ರಿ ವೇಳೆ ಇದು ನಡೆಯುತ್ತದೆ. ಪ್ರದರ್ಶನಕ್ಕೆ ೨ – ೩ ಗಂಟೆ ಮುಂಚೆ ಗುಡಿಯ ಮುಂದೆ ೧೬ ಅಡಿ ಉದ್ದ ೪ ಅಡಿ ಅಗಲದ ೧ – ೧ ೧/೨ ಅಡಿ ಆಳದ ಒಂದು ಗುಂಡಿಯನ್ನು ತೋಡುವರು. ಗುಂಡಿಯ ತುಂಬಾ ಒಣಗಿದ ತೆಂಗಿನ ಕರಟಗಳನ್ನು ತುಂಬಿ ಪಂಜಿನಿಂದ ಬೆಂಕಿ ಹೊತ್ತಿಸಿ ಕೆಂಡ ಆಗುವ ತನಕ ಇಬ್ಬರು ವ್ಯಕ್ತಿಗಳು ಎರಡೂ ಕಡೆಯಿಂದ ಗಾಳಿ ಬೀಸುವರು. ಗುಡಿಯಿಂದ ಹೊರಗೆ ಬಂದ ಆಸಾದಿಗೆ ಮನೆ – ಮನೆಯ ಮುಂದೆ ಸ್ವಾಗತ ದೊರೆಯುತ್ತದೆ. ಇವನ ತಲೆಯ ಮೇಲಿರುವ ಕರಗವನ್ನು ಅಮ್ಮನದ್ದೆಂದು ಭಾವಿಸಿ ಆಸಾದಿಯನ್ನು ದೈವಾಂಶ ಸಂಭೂತನೆಂದು ಅವನ ಪಾದವನ್ನು ಅರಿಶಿನ ನೀರಿನಿಂದ ತೊಳೆದು ಆರತಿ ಬೆಳಗುತ್ತಾನೆ. ಆಸಾದಿ ಹಣೆಗೆ ಕುಂಕುಮ ಅಥವಾ ವಿಭೂತಿ ಹಚ್ಚಿಕೊಂಡು ಅಗ್ನಿಕುಂಡದ ಬಳಿ ಧಾವಿಸಿ ತದೇಕ ದೃಷ್ಟಿಯಿಂದ ರೌದ್ರರೂಪ ಪ್ರದರ್ಶಿಸುತ್ತ ಮೈಮೇಲೆ ಬಂದು ಕುಣಿಯುತ್ತಾ ಒಮ್ಮೆಲೆ ಅಗ್ನಿಕುಂಡವನ್ನು ಪ್ರವೇಶಿಸುತ್ತಾನೆ. ಇತರ ಭಕ್ತರು ಅವನನ್ನನುಸರಿಸಿ ಕೊಂಡಹಾಯುವರು. ಇದು ಸಾಧಾರಣವಾಗಿ ಮಂಗಳವಾರ ರಾತ್ರಿ ನಡೆಯುತ್ತದೆ. ಭಕ್ತರು ಎರಡು ದಿನ ತಪ್ಪದೆ ಉಪವಾಸವಿರಬೇಕು, ದಾನ – ಧರ್ಮ ಮಾಡಬೇಕು. ಕೆರೆಯಲ್ಲೋ, ನದಿಯಲ್ಲೊ ಮಿಂದು, ಮಡಿ ಬಟ್ಟೆಗಳಿಂದಲೇ ಪಾಲ್ಗೊಳ್ಳಬೇಕೆಂಬುದು ಇದರ ನಿಯಮಗಳಲ್ಲಿರುವ ಇದು ಬಹಳ ಪ್ರಾಚೀನವಾದ ಕಲೆ. ಇದರ ಪ್ರಸ್ತಾವ ವಲ್ಲಭರಾಯನ ಕ್ರೀಡಾಭಿರಾಮದಲ್ಲಿಯೂ ತೆನಾಲಿರಾಮಕೃಷ್ಣನ ಪಾಂಡುರಂಗ ಮಾಹಾತ್ಮ್ಯದಲ್ಲಿಯೂ ನಿಕಲೊಕೊಂತಿಯ ರಚೆನಗಳಲ್ಲಿಯೂ ಕಂಡುಬರುತ್ತದೆ. ಕಾಕತೀರಯರ ಕಾಲದಲ್ಲಿ ಸ್ತ್ರೀಯರು ಸದಾ ಪಾಲ್ಗೊಳ್ಳುತ್ತಿದ್ದರೆಂಬುದು ತೆನಾಲಿ ರಾಮಕೃಷ್ಣವ ಬರೆವಣಿಗೆಗಳಿಂದ ತಿಳಿದುಬರುತ್ತದೆ. ರೆಡ್ಡಿರಾಜರ ಕಾಲದಲ್ಲಿ ವೀರಶೈವರಾದ ವೀರಭದ್ರರು, ವೀರಭದ್ರನ ಉತ್ಸವಗಳಲ್ಲಿ ಅಗ್ನಿಕುಂಡ ಪ್ರದರ್ಶನವನ್ನು ಮಾಡಿದಂತೆ ತಿಳಿದುಬರುತ್ತದೆ.

– ಟಿ.ಎಸ್.ಎನ್. ಅನುವಾದ ಎನ್.ಆರ್

ಅಡವಿ ಚೆಂಚರು ಅಡವಿಚೆಂಚರು ಒಂದು ಬುಡಕಟ್ಟು ಸಮುದಾಯ. ತಾವು ದ್ವಾಪರಯುಗದ ಕೃಷ್ಣಾವತರಾಕ್ಕೂ ಹಿಂದಿನವರು ಎಂದು ಹೇಳಿಕೊಳ್ಳುವಲ್ಲಿ ಚೆಂಚರಿಗೆ ಎಲ್ಲಿಲ್ಲದ ಖುಷಿ. ಆ ದಂತಕತೆಯ ಪ್ರಕಾರ ಚೆಂಚರು ಯರಗೊಲ್ಲ ಮತದ ಕುರುಬರಾಗಿ ಕುರಿಗಳನ್ನು ಕಾಯುವ ಕೆಲಸ ಮಾಡುತ್ತಿದ್ದರು. ಓಬಳೇಶ್ವರಸ್ವಾಮಿ ನೆಲಸಿರುವ ನಲ್ಲಮಲೈ ಬೆಟ್ಟಗಳಲ್ಲಿ ಯರಗೊಲ್ಲ ಕನ್ಯೆ ಚಂಚಿತಾಳನ್ನು ಅಪಹರಿಸಿಕೊಂಡು ಹೋಗಿಬಿಟ್ಟನಂತೆ. ಹೀಗಾಗಿ ಓಬಳೇಶ್ವರಸ್ವಾಮಿ ಮತ್ತು ಚಂಚಿತಾ ಇವರುಗಳಿಗೆ ಹುಟ್ಟಿದ ಮಕ್ಕಳು ಮುಂದೆ ಚೆಂಚರೆಂದು ಕರೆಸಿಕೊಂಡರೆಂದು ಹೇಳುವುದುಂಟು. ಇವರನ್ನು ‘ಚೆಂಚು’, ‘ಚೆಂಚುಕುಲಂ’, ‘ಚೆಂಚುವಾಡ’, ‘ಬೆಕ್ಕುಚೆಂಚು’, ‘ಅಡವಿಚೆಂಚರು’, ‘ಯಾನಾದಿಗಳು’ ಇತ್ಯಾದಿ ಹೆಸರುಗಳಿಂದಲೂ ಕರೆಯುವುದುಂಟು. ಒಂದು ಹೇಳಿಕೆ ಪ್ರಕಾರ ಚೆಂಚರು ಕೆಂಪಾಗಿದ್ದರೆಂದು ಅವರು ‘ಕೆಂಚರು’ ಎಂದು ಕರೆಯುವುದಕ್ಕೆ ಬದಲಾಗಿ ಸೌಲಾಭ್ಯಾಕಾಂಕ್ಷೆಯಿಂದ ಚೆಂಚರು ಎಂದು ಕರೆಯುತ್ತಾ ಬಂದಿದ್ದಾರೆಂತಲೂ ಊಹಿಸಿರುವುದುಂಟು. ದಂಡಕಾರಣ್ಯಗಳಲ್ಲಿಯೇ ಇದ್ದುಕೊಂಡು ಬಂದದ್ದರಿಂದ ಇವರಿಗೆ ‘ಅಡವಿ ಚೆಂಚರು’ ಎಂಬ ಹೆಸರು ಬರಲು ಕಾರಣವಿದೆ.

ಟೈಲರನ ಪುರಾತನ ಲಿಪಿ, ದಾಖಲೆಗಳ ಕುರಿತಾದ ಪಟ್ಟಿಯಲ್ಲಿ ಚೆಂಚುಗಳನ್ನು ಶ್ರೀಶೈಲದ ಪಶ್ಚಿಮ ಭಾಗದಲ್ಲಿ ಜೀಚಿಸುವವರು. ಅವರು ಕಾಡಿನಲ್ಲಿ ಮರ ಪೊದರುಗಳಲ್ಲಿ ಸದಾ ಬಿಲ್ಲು ಬಾಣಗಳನ್ನು ಹೊತ್ತು ತಿರುಗಾಡುವಂತಹವರು. ಅವರು ಎಲೆಗಳಿಂದ ತಮ್ಮ ಅಸ್ತ್ರ ಮತ್ತು ಮೈಗಳನ್ನು ಮುಚ್ಚಿಕೊಳ್ಳುತ್ತಿದ್ದರು. ಅವರು ಬಿದಿರಿನ ಸಾಗು ಅಥವಾ ಅಕ್ಕಿಯನ್ನು ತಿಂದು ಜೀವಿಸುವಂಥವರು. ಅವರು ಪ್ರಯಾಣಿಕರನ್ನು ಲೂಟಿ ಮಾಡಿತ್ತಿದ್ದರಂತೆ. ಅವರು ತಮ್ಮ ಆಹಾರಕ್ಕಾಗಿ ಯಾವುದೇ ಜೀವಂತ ಪ್ರಾಣಿಯನ್ನು ಕೊಲ್ಲುವಂಥವರಾಗಿದ್ದರು. ಇದಕ್ಕಿಂತ ಭಿನ್ನವಾದ ರೀತಿಯಲ್ಲಿ ರಸೆಲರು ದಾಖಲಿಸಿದ್ದಾರೆ. “Chenchu a main Aryan tribe dwelling in the hilly trants which run parallel to the hrishere siner and from the southern boundary of Hyderabad Dominions (p. xxii)” ೧೯೬೧ರಲ್ಲಿ ಮಾಡಿದ ಜನಗಣತಿಯ ಪ್ರಕಾರ ಯಾನಾದಿಗಳು ಚೆಂಚುಮೂಲದಿಂದ ಬಂದಂತಹ ಒಂದು ಉಪವಿಭಾಗವೇ ಆಗಿದೆ. ೧೯೮೬ರ‍ಲ್ಲಿ ಬೆಳಗಾಂ ವಿಭಾಗಾಧಿಕಾರಿಗಳಿಗೆ ಅಡವಿಚೆಂಚರ ಹಿರಿಯರು, ಪ್ರತಿನಿಧಿಗಳು ಮನವಿ ಪತ್ರವೊಂದನ್ನು ಅರ್ಪಿಸಿದ್ದಾರೆ. ಅದರಲ್ಲಿ ಹೀಗಿದೆ: “ನಮ್ಮ ಪೂರ್ವಜರು ಮಧ್ಯ ಭಾರತದಲ್ಲಿರುವ ವಿಂಧ್ಯಪರ್ವತದ ಕೊಳ್ಳಗಳಲ್ಲಿ ನೆಲಸಿ ಅಲ್ಲಿಯೇ ಕಾಡುಮೃಗಗಳ ಬೇಟೆಮಾಡಿ ತಮ್ಮ ಉಪಜೀವನವನ್ನು ಸಾಗಿಸಿಕೊಂಡು ಹೋಗುವಂಥ ಸಂಪ್ರದಾಯದವರಾಗಿದ್ದರು. ಬೇಟೆಯಾಡುವುದೇ ಅವರುಗಳ ಮುಖ್ಯ ಉದ್ಯೋಗವಾಗಿತ್ತು. ಬೇಟೆಯಾಡುವುದಕ್ಕಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುತ್ತಿದ್ದರು.”

ಇವನ್ನೆಲ್ಲ ಗಮನಿಸಿದರೆ ಅಡವಿ ಚೆಂಚರು ಅರಣ್ಯ ಪ್ರದೇಶ, ಬೆಟ್ಟ ಗುಡ್ಡಗಳಲ್ಲಿ ನೆಲೆಸುತ್ತ ಬೇಟೆಯಾಡುವುದರಲ್ಲಿ ಕಾಲಕಳೆಯುತ್ತ ಬಂದ ಜನಾಂಗವೆಂಬುದು ಮನವರಿಕೆಯಾಗುತ್ತದೆ. ಅರಣ್ಯದಲ್ಲಿದ್ದುಕೊಂಡು ಅಲ್ಲಿಯ ಗೆಡ್ಡೆ ಗೆಣಸು, ಗಿಡಮೂಲಿಕೆ ಬೇರು, ಜೇನುತುಪ್ಪ ಮೊದಲಾದವುಗಳನ್ನು ತಮ್ಮ ದಿನನಿತ್ಯದ ಆಹಾರವನ್ನಾಗಿ ಮಾಡಿಕೊಂಡರು. ಹಾಗಾಗಿ ಶಾರೀರಿಕವಾಗಿ ಗಟ್ಟಿಗೊಳ್ಳಲು ಸಾಧ್ಯವಾಯಿತು. ವಾಸಸ್ಥಾನ, ಆಹಾರ ಪದ್ಧತಿ, ಶಾರೀರಿಕ ಲಕ್ಷಣಗಳು ಇವೆಲ್ಲವನ್ನು ಗಮನಿಸಿದ ಮುಂದುವರಿದ ಜನಾಂಗಗಳ ದೃಷ್ಟಿಯಲ್ಲಿ ಅಡವಿಚೆಂಚರು ಒಂದು ರೀತಿಯ ತಿರಸ್ಕಾರಕ್ಕೆ ಗುರಿಯಾದರು. ನಿರಂತರವಾಗಿ ಅವಮಾನ ಮತ್ತು ಹಸಿವಿನಿಂದ ತತ್ತರಿಸಿ ಹೋದದ್ದಂಟು. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ತಿಳಿದು ಬಂದಂತೆ ಅಡವಿಚೆಂಚರು ಕಾಡುಗಳಲ್ಲಿ ನೆಲಸಿದಂತೆಯೇ ಊರುಗಳಲ್ಲಿಯೂ ಗುಡಿಸಲುಗಳನ್ನು ಕಟ್ಟಿಕೊಂಡು ವಾಸಮಾಡುತ್ತಿದ್ದಾರೆ. ಕೋಲಾರ ಸಮೀಪದಲ್ಲಿರುವ ವಿ.ಕೋಟದ ಹತ್ತಿರ), ನಡುಮಂತರಿ ರಾಮತೀರ್ಥಂ, ಸುಂದ್ರಪಾಳ್ಯ, – ಈ ಊರುಗಳಲ್ಲಿ ಗುಡಿಸಲು ಕಟ್ಟಿಕೊಂಡು ನೆಲೆಸಿದ್ದಾರೆ.

ಬಹುತೇಕ ಚೆಂಚರು ಉತ್ತರ ಕರ್ನಾಟಕ ಭಾಗದಲ್ಲಿ ಅಂದರೆ ಧಾರವಾಡ, ರಾಯಚೂರು, ವಿಜಾಪುರ, ಗುಲ್ಬರ್ಗ ಜಿಲ್ಲೆಗಳಲ್ಲಿ ವಾಸವಾಗಿದ್ದರೆಂತಲೂ ಮೈಸೂರು, ಕೋಲಾರ, ತುಮಕೂರು, ಬಳ್ಳಾರಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ನೆಲೆಸಿರುವವರೆಂದೂ ತಿಳಿದು ಬಂದಿದೆ. ಅಡವಿಚೆಂಚರ ಸಂಖ್ಯೆ ಸುಮಾರು ಎಂಬತ್ತು ಸಾವಿರದವರೆಗೂ ಇರಬಹುದೆಂದು ಊಹಿಸಲಾಗಿದೆ.

ಅಡವಿಚೆಂಚರ ಪೂರ್ವಿಕರು ಮಧ್ಯಭಾರತದ ವಿಂಧ್ಯ ಪರ್ವತದ ಕೊಳಗಳ ಸಮೀಪ ನೆಲೆಸಿದರು. ಬೇಟೆಯ ಸಲುವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಿದವರು. ಈ ಕಾರಣದಿಂದಲೇ ಅವರಲ್ಲಿ ಕೆಲವರು ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳತ್ತ ಸಂಚರಿಸುತ್ತ ಬಂದರು. ಅಡವಿಚೆಂಚು ವಂಶಾವಳಿಯ ಪ್ರಕಾರ ‘ರೆಪ್ಪೊಟಿಲ್ಲೊ ಚಿಯ್ಯೇ’ ಮೂಲ ಪುರುಷರು ಎಂದು ತಿಳಿದುಬಂದಿದೆ. ಅಡವಿಚೆಂಚರ ಭಾಷೆ ತೆಲಗು. ಆಂಧ್ರದ ಕರ್ನೂಲು ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ವಾಸುತ್ತಿದ್ದಾರೆ. ಸಿವಿಲ್‌ರ ಪ್ರಕಾರ ಚೆಂಚುಗಳ ಭಾಷೆ ಸಂಪೂರ್ಣವಾಗಿ ಹಿಂದಿ, ಉರ್ದು ಮತ್ತು ಸ್ವಲ್ಪಭಾಗ ಬೆಂಗಾಲಿಯಿಂದ ಕೂಡಿದೆ. ಒಟ್ಟಾರೆ ಅವರು ಎಲ್ಲೆಲ್ಲಿ ವಾಸಮಾಡುತ್ತಾರೊ ಆ ಪ್ರಾಂತದ ಭಾಷೆಯ ಉಪಭಾಷೆಯ ಪ್ರಭಾವಕ್ಕೆ ಒಳಗಾಗುವುದು ಸಹಜಕ್ರಿಯೆ.

ಅಡವಿಚೆಂಚರಲ್ಲಿ ಮದುವೆಯಾಗಬೇಕೆಂದಿರುವ ಗಂಡು ತಾನು ವರಿಸಲಿರುವ ಹೆಣ್ಣನ್ನು ತಾನೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಯಾನಾದಿ ಮತ್ತು ಚೆಂಚರಲ್ಲಿ ವೈವಾಹಿಕ ಸಂಬಂಧವಿದೆ ಎಂದು ಹೇಳುವುದುಂಟು. ಗಂಡನನ್ನು ಕಳೆದುಕೊಂಡವಳು ಗಂಡನ ತಮ್ಮನನ್ನು ಮದುವೆಯಾಗುವ ಪದ್ಧತಿ ಅಡವಿಚೆಂಚರಲ್ಲಿದೆ.

ಜನನದಿಂದ ಹಿಡಿದು ಸಾವಿನವರೆಗೆ ಅಡವಿ ಚೆಂಚರಲ್ಲಿ ತನ್ನದೇ ಆದ ನಂಬಿಕೆ ಆಚರಣೆ, ಸಂಪ್ರದಾಯಗಳಿವೆ. ಇದರಲ್ಲಿ ಪ್ರಕೃತಿ ಸಹಜವಾದ ಹೆರಿಗೆ ಕ್ರಿಯೆ ಜರುಗುತ್ತದೆ. ಚಾಕು ಅಥವಾ ಬಾಣದಿಂದ ಮಗು ಹುಟ್ಟಿದ ತಕ್ಷಣ ಅದರ ಹೊಕ್ಕುಳ ಬಳ್ಳಿಯನ್ನು ಕತ್ತರಿಸುತ್ತಾರೆ. ವಾತಾವರಣಕ್ಕನುಗುಣವಾಗಿ ಮಗುವಿಗೆ ಸ್ನಾನ ಮಾಡಿಸುತ್ತಾರೆ. ಮಗು ಹುಟ್ಟಿದ ಮೂರು ದಿನದಲ್ಲಿ ಮುತ್ತೈದೆಯರಿಗೆ ವೀಳೆಯದೆಲೆ ಕೊಡುತ್ತಾರೆ. ನಾಲ್ಕನೆಯ ದಿನ ಮಗುವಿಗೆ ಹೆಸರಿಡುತ್ತಾರೆ. ಆ ಮಗುವಿಗೆ ಜಿಂಕೆ ಚರ್ಮದ ತೊಟ್ಟಿಲನ್ನು ಬಳಸುತ್ತಾರೆ. ಹಗ್ಗವಾಗಿ ಉದ್ದನೆಯ ಬಳ್ಳಿಯನ್ನು ಬಳಸುತ್ತಾರೆ. ಆರ್ಥಿಕ ದೃಷ್ಟಿಯಿಂದ ಜಿಂಕೆಯ ಚರ್ಮವನ್ನು ಮಾರಾಟ ಮಾಡಿ ಹಣ ಸಂಪಾದಿಸಿದ ಈ ಜನಾಂಗದವರು ಹಳೆಯ ಸೀರೆಯನ್ನು ತೊಟ್ಟಿಲನ್ನಾಗಿ ಮಾಡುತ್ತಾರೆ. ನಿಸರ್ಗದತ್ತವಾದ ಹೆರಿಗೆ ಕ್ರಿಯೆಯಲ್ಲಿ ತೊಂದರೆಯಾದರೆ ಗಂಡ ಹೆಂಡಿರನ್ನು ದೂಷಿಸುವ ಪದ್ಧತಿ ಅವರಲ್ಲಿದೆ. ಗುಡಿಸಲಿನ ಹೊರಗೆ ಹೆರಿಗೆಯನ್ನು ಮಾಡಿಸುತ್ತಾರೆ. ಐದು ದಿನಗಳವರೆಗೆ ಬಾಣಂತಿ ಮತ್ತು ಮಗು ಅದರಲ್ಲೆ ಇರುತ್ತಾರೆ. ಅವರನ್ನು ಯಾರೂ ಮುಟ್ಟುವಂತಿಲ್ಲ. ಎರಡು ದಿನಗಳವರೆಗೆ ಕುರಿ ತಲೆಯ ಮಾಂಸವನ್ನು ಬಾಣಂತಿಎ ಬಡಿಸುತ್ತಾರೆ. ಜೊತೆಗೆ ಭಟ್ಟಿಸಾರಾಯಿಯನ್ನು ಕುಡಿಸುವ ವಾಡಿಕೆಯೂ ಇದೆ. ಉಳಿದ ಜನಾಂಗಗಳಲ್ಲಿರುವಂತೆ ಅಡವಿ ಚೆಂಚರಲ್ಲಿ ದೀರ್ಘಕಾಲದವರೆಗೆ ಬಾಣಂತಿಯ ಶುಶ್ರೂಷೆ ನಡೆಯುವುದಿಲ್ಲ. ಐದನೆಯ ದಿನದಿಂದಲೇ ಆಕೆ ಎಲ್ಲ ಕೆಲಸಕಾರ್ಯಗಳನ್ನು ಮಾಡತೊಡಗುತ್ತಾಳೆ. ಇವರಲ್ಲಿ ಹೆಣವನ್ನು ಸುಡುವ ಮತ್ತು ಹೂಳುವ ಎರಡು ಪದ್ಧತಿಗಳಿವೆ.

ಅಡವಿ ಚೆಂಚರು ಇಕ್ಕಟ್ಟಾದ ಎತ್ತರದ ಬೆಟ್ಟ ಪ್ರದೇಶದಲ್ಲಿ ವಸಮಾಡುವಂಥವರು. ಅರೆ ಅರಣ್ಯವಾಸಿಗಳಾದ ಇವರು ಮುಗ್ಧರು. ಇತ್ತೀಚೆಗೆ ಇವರು ಹೋದ ಕಡೆಗಳಲ್ಲೆಲ್ಲ ಊರ ಹೊರಗೆ ಬಯಲು ಪ್ರದೇಶದಲ್ಲಿ ಗುಡಿಸಲು ಹಾಕಿಕೊಳ್ಳುತ್ತಾರೆ. ಸ್ವಲ್ಪ ಆರ್ಥಿಕವಾಗಿ ಸುಧಾರಿಸಿದವರು ಮೇಲ್ ಮುದ್ದೆ ಮಣ್ಣಿನ ಮನೆಗಳನ್ನು ಕಟ್ಟಿಕೊಳ್ಳುತ್ತಾರೆ. ಅದರಲ್ಲಿಯೇ ಹುಲ್ಲು ಹಾಕಲು ದನಗಳನ್ನು ಕಟ್ಟಲು ಜಾಗವನ್ನು ಮಾಡುತ್ತಾರೆ. ಚಿಕ್ಕ ಅಡುಗೆ ಮನೆಯನ್ನು ನಿರ್ಮಿಸಿಕೊಂಡು ಅದರಲ್ಲಿ ಒಂದು ಚಿಕ್ಕ ಒಲೆ, ರುಬ್ಬಲು ಗುಂಡು, ಕಾರ ಅರೆಯುವ ಕಲ್ಲು ಇವುಗಳನ್ನು ಇಟ್ಟುಕೊಂಡಿರುತ್ತಾರೆ. ಅಡವಿ ಚೆಂಚರ ಉಡುಪುಗಳ ಬಗ್ಗೆ ಹೇಳುವುದಾದರೆ ಗಂಡಸರು ಚೆಡ್ಡಿ. ಅರ್ಧತೋಳಿನ ಅಂಗಿ ಬಳಸುತ್ತಾರೆ. ಕೆಲವರು ಹರಿದ ಬಟ್ಟೆಯನ್ನು ಹಾಕಿಕೊಂಡಿರುತ್ತಾರೆ. ಸೀರೆ, ಕುಪ್ಪಸ ಹೆಂಗಸರ ಉಡುಪು ಇವರ ಕಂಕುಳಲ್ಲಿ ಸದಾ ಹಾಲು ಕುಡಿಯುವ ಮಕ್ಕಳು ಇರುತ್ತವೆ. ಈ ಮಕ್ಕಳು ಬಹುಪಾಲು ಅರೆಬೆತ್ತಲು ಇವರ ಬಗ್ಗೆ ನಾಗರೀಕ ಜನ ಒಂದು ರೀತಿಯ ತಾತ್ಸಾರವನ್ನು ತೋರುತ್ತ ಬಂದಿದ್ದಾರೆ. ಅವರನ್ನು ಕಳ್ಳರೆಂದು ಭಾವಿಸುತ್ತಾರೆ. ಈ ಎಲ್ಲ ಅಪಮಾನಗಳಿಂದ ಅಡವಿಚೆಂಚರ ಬದುಕು ತತ್ತರಿಸಿ ಹೋಗಿದೆ.

ಅಡವಿ ಚೆಂಚರಲ್ಲಿ ಜೀವನ ಪ್ರೀತಿ ಅದಮ್ಯವಾಗಿದೆ. ಅರಣ್ಯದಲ್ಲಿ ದೊರಕುವ ಮೇಣದ ಬಟ್ಟೆ, ಜಿಂಕೆಯ ಚರ್ಮ, ಮೊಲದ ಚರ್ಮದಿಂದ ಮಾಡಿದ ಟೋಪಿಗಳನ್ನು ಬಳಸುತ್ತಾರೆ. ಅಳಿಲಿನ ಬಾಲದಲ್ಲಿರುವ ಕೂದಲನ್ನು ಕಿತ್ತು ಕುಚ್ಚಿನಂತೆ ಕಟ್ಟಿಕೊಳ್ಳುತ್ತಾರೆ. ಟೋಪಿ ಗಂಡಸರ ಪ್ರತಿಷ್ಠೆಯ ವಸ್ತುವಾಗಿತ್ತು. ಅಡವಿ ಚೆಂಚರ ಹೆಂಗಸರು ಮೊದಲು ಎಲೆಗಳಿಂದ ಮೈಯನ್ನು ಮುಚ್ಚಿಕೊಳ್ಳುತ್ತಿದ್ದರು. ಅನಂತರ ಅವರ ಶರೀರವನ್ನು ಸಿಂಹದ ಚರ್ಮದಿಂದ ಮಾಡಿದ ಬಟ್ಟೆಗಳು ಮುಚ್ಚಲ್ಪಟ್ಟವು.

ಬುಟಕಟ್ಟು ಜನಾಂಗದ ಸಾಲಿಗೆ ಸೇರುವ ಅಡವಿ ಚೆಂಚರು ಮೊದಮೊದಲು ಕಾಡಿನ ನಿವಾಸಿಗಳು. ಅನಂತರ ನಾನಾ ಕಡೆಗೆ ಚದುರಿ ಹೋದರು. ಆರಂಭದಲ್ಲಿ ಅವರು ಮಾಡುತ್ತಿದ್ದ ಕಳ್ಳತನ, ದರೋಡೆ ಮುಂತಾದ ಕೆಲಸಗಳಿಗೆ ಸಾಮಾಜಿಕವಾಗಿ ಸ್ತಾನಮಾನವನ್ನು ಕಳೆದುಕೊಂಡಿದ್ದರು. ಅದರಲ್ಲೂ ನಾಗರಿಕ ಜನ ಅವರನ್ನು ಅಸಡ್ಡೆಯಿಂದಲೇ ಕಾಣುತ್ತ ಬಂದರು. ಇದಕ್ಕೆ ಮೊದಲೇ ತಿಳಿಸಿದಂತೆ ಭಟ್ಟಿಸಾರಾಯಿ ಮಾಡುವುದು. ಅದನ್ನು ಮಾರುವ ಕೆಲಸದಲ್ಲಿ ಕೆಲವು ಅಡವಿ ಚೆಂಚರು ತೊಡಗುತ್ತ ಬಂದರು. ಉತ್ತರ ಕರ್ನಾಟಕದ ಹೊಂಬಾಳ, ಮುಳುಗುಂದ ಪ್ರದೇಶಗಳಲ್ಲಿ ಇದು ಸಾಮಾನ್ಯ ದೃಶ್ಯವಾಗಿತ್ತು. ಇದು ಅಡವಿಚೆಂಚರಿಗೆ ಆಹಾರ ಸಂಪಾದನೆಯ ಮಾರ್ಗವೂ ಆಗಿತ್ತು. ದಕ್ಷಿಣ ಕರ್ನಾಟಕಕ್ಕೆ ಬಂದರೆ ತುಮಕೂರು, ಕೋಲಾರ ಜಿಲ್ಲೆಯ ಸುತ್ತಮುತ್ತ ಇರುವ ಅಡವಿಚೆಂಚರು ಸಂಪೂರ್ಣವಾಗಿ ಅಲೆಮಾರಿಗಳಾಗಿದ್ದಾರೆ. ಬೇಟೆಯಾಡುವುದನ್ನು ಮುಖ್ಯ ವೃತ್ತಿಯಾಗತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಒಟ್ಟಾರೆ ಕರ್ನಾಟಕದಲ್ಲಿರುವ ಅಡವಿ ಚೆಂಚರ ಬದುಕು ನಾಗರಿಕರ ಎಲ್ಲ ಅಪಮಾನಗಳಿಂದ ತತ್ತರಿಸಿ ಹೋಗಿದೆ. ಇನ್ನೂ ನಾಗರಿಕತೆಯ ಮೆಟ್ಟಲನ್ನು ಏರದ ಅಡವಿ ಚೆಂಚರ ಬದುಕು ಸುಧಾರಿತ ಸ್ಥಿತಿಯನ್ನು ಪಡೆಯಬೇಕಾದ ಅವಶ್ಯಕತೆ ಇದೆ.

ಅಡಿಯಾನ್ ಕೇರಳದ ವಯನಾಡು ಜಿಲ್ಲೆಯ ಪ್ರಮುಖ ಆದಿವಾಸಿ ಅಲ್ಲಿಯ ಅಸ್ಸಿನ ತೃಶ್ಶಿಲೇರಿ, ಮಾನಂತವಾಡಿ, ತಿರುನೆಲ್ಲಿ, ಎಡಪ್ಪೋಡಿ, ಚೇಲೂರ್, ಬೇಗೂರ್, ಮುದಿರಲೆ, ವೇಮಂ, ಕುಪ್ಪತ್ತೋಡ್, ಬಾವಲಿ ಮುಂತಾದ ಜಾಗಗಳಲ್ಲಿ ಇವರು ವಾಸಿಸುತ್ತಾರೆ. ‘ಅಡಿ’ ಎಂಬ ಪದದ ಜತೆ ‘ಆನ್’ ಸೇರಿ ಅಡಿಯಾನ್ ಆಯಿತೆಂದು ಪದನಿಷ್ಪತ್ತಿ ಮಾಡಲಾಗಿದೆ. ಇವರ ಭಾಷೆಯಲ್ಲಿ ಕನ್ನಡ ಪದ ಬಾಹುಳ್ಯ ಇವರು ಕರ್ನಾಟಕದಿಂದ ಬಂದವರಿರಬೇಕೆಂಬ ವಾದಕ್ಕೆ ಪ್ರೇರಣೆಯಿತ್ತಿದೆ. ಕರ್ನಾಟಕದಲ್ಲಿ ಇವರು ‘ರಾವುಳರ್’ ಎಂಬ ಹೆಸರಲ್ಲಿ ಗುರುತಿಸಲ್ಪಡುತ್ತಾರೆ. ವಯನಾಡ್ ಪ್ರದೇಶದಲ್ಲಿ ಇವರು ದೊಡ್ಡ ಜಮೀನ್ದಾರರ ಕೈಕೆಳಗೆ ಜೀತದವರಾಗಿದ್ದರು. ಜೀತಕ್ಕೆ ಇವರು ‘ಕುರಿಗೆಟ್ಟು ಪಣಿ’ ಎಂದು ಕರೆಯುತ್ತಾರೆ. ವಯನಾಡಿನ ಪ್ರಧಾನ ದೇವಾಲಯಗಳಲ್ಲೊಂದಾದ ವಳ್ಳಿಯೂರ್‌ಕಾವಿನ ಉತ್ಸವದ ಸಮಯದಲ್ಲಿ ಹಿಂದೆ ಗುಲಾಮ ವ್ಯಾಪಾರ ನಡೆದು ಬರುತ್ತಿತ್ತು. ಅಂದಿನಿಂದ ಮುಂದಿನ ವರ್ಷದ ಅದೇ ಉತ್ಸವದ ತನಕ ಒಂದು ವರ್ಷಕ್ಕೆ ಒಂದಿಷ್ಟು ಹಣವನ್ನೂ ಬತ್ತವನ್ನೂ ಕೊಟ್ಟು ಜಮೀನ್ದಾರರು ಆದಿವಾಸಿ ಕುಟುಂಬಗಳನ್ನು ಜೀತಕ್ಕೆ ಇರಿಸಿಕೊಳ್ಳುತ್ತಿದ್ದರು. ಒಬ್ಬ ಗಂಡಾಳು ಮತ್ತು ಹೆಣ್ಣಾಳಿಗೆ ಒಟ್ಟು ಇಪ್ಪತ್ತು ರೂಪಾಯಿ ನಿಶ್ಚಿತ ಮೊತ್ತವಾಗಿತ್ತು. ‘ನಿಪ್ಪುಪಣಂ’ ಎಂದು ಇದನ್ನು ಕರೆಯುತ್ತಿದ್ದರು. ಇದರ ಜತೆ ಆರು ಮುಡಿ ಭತ್ತವನ್ನು ಕೊಡುತ್ತಿದ್ದರು ಈ ನಿಪ್ಪುಣವನ್ನು ಪಡೆದುಕೊಂಡರೆ ಅಂದಿನಿಂದ ಒಂದು ವರ್ಷಕ್ಕೆ ಭೂಮಾಲಿಕರ ಗದ್ದೆಗಳಲ್ಲೂ ಹೊಲಗಳಲ್ಲೂ ಮನೆಗಳಲ್ಲೂ ಯಾವುದೇ ಕೆಲಸ ಮಾಡಲು ಈ ಆದಿವಾಸಿ ಕುಟುಂಬ ಬದ್ಧವಾಗಿತ್ತು.

ಹಲವು ಚೆಮ್ಮ(ಬಳಿ)ಗಳಾಗಿ ಅಡಿಯಾನರ ಗೋತ್ರ ವಿಂಗಡಿತವಾಗಿದೆ. ಭಿನ್ನ ಚೆಮ್ಮದವರಾದರೆ ಮಾತ್ರ ವಿವಾಹಕ್ಕೆ ಅನುಮತಿ. ಪ್ರತಿಯೊಂದು ಚೆಮ್ಮಕ್ಕೂ ಅದರದೇ ಆದ ಕುಲದೈವಗಳು. ಚೆಮ್ಮದ ಮುಖ್ಯಸ್ಥ ‘ಚೆಮ್ಮಕ್ಕಾರ’. ಊರ ಮುಖಂಡನಿಂದ ಚೆಮ್ಮಕ್ಕಾರನ ಆಯ್ಕೆ. ಒಂದು ಚೆಮ್ಮದಿಂದ ಮದುವೆಯಾಗಿ ಹೋದ ಸ್ತ್ರೀಪುರುಷರು ಕೊಡುವ ವಾರ್ಷಿಕ ದೇಣಿಗೆ – ತಲಪ್ಪಾಟ್ಟಂ(ತಲೆಗೇಣಿ). ತಲಪ್ಪಾಟ್ಟದಿಂದಲೇ ಚೆಮ್ಮದ ಖುರ್ಚುವೆಚ್ಚಗಳನ್ನು ಚೆಮ್ಮಕ್ಕಾರ ಹೊಂದಿಸಿಕೊಳ್ಳಬೇಕು.

ಅಡಿಯಾನರು ವಾಸಕ್ಕಾಗಿ ಗುಡ್ಡಗಳನ್ನು ಆಯ್ಕೆ ಮಾಡುತ್ತಾರೆ. ಈ ಪ್ರದೇಶಕ್ಕೆ ‘ಕುಂಟ್’ ಎಂದು ಹೆಸರು. ಒಂದೇ ಗುಡ್ಡದಲ್ಲಿ ವಾಸಿಸುವವರು ‘ಕುಂಟಕ್ಕಾರ್’. ಒಂದು ಗುಡ್ಡಕ್ಕೆ ಸೇರಿದ ಯಾರೋ ಒಬ್ಬಾತ ಸತ್ತರೆ ಆ ಗುಡ್ಡದವರೆಲ್ಲ ಸೂತಕ ಆಚರಿಸುತ್ತಾರೆ. ಅದಕ್ಕೆ ‘ಕುನ್ನ್‌ಪುಲ’ (ಗುಡ್ಡಸೂತಕ) ಎಂದು ಹೆಸರು. ಒಂದು ಕುಂಟ್‌ನ ಎಲ್ಲ ಆಗು ಹೋಗುಗಳನ್ನು ನಡೆಯಿಸುವ ಜವಾಬ್ದಾರೊ ‘ಕುಂಟ್‌ಕಾರ’ನದು. ಅವನನ್ನು ನೇಮಿಸುವುದು ಆ ಪ್ರದೇಶದ ಜಮೀನ್ದಾರ. ಒಂದಷ್ಟು ಗುಡ್ಡಗಳು ಸೇರಿರುವ ಒಂದು ಪ್ರದೇಶದ ಆಡಳಿತ ‘ನಾಡಿನ ಹಿರಿಯ’ ನಂದು. ಅಡಿಯನ್ ಸಮುದಾಯದಲ್ಲಿ ಬೇರೆ ಬೇರೆ ಧಾರ್ಮಿಕ ಕೆಲಸಗಳಿಗೆ ಬೇರೆ ಬೇರೆ ವ್ಯಕ್ತಿಗಳಿರುತ್ತಾರೆ. ಉತ್ತರ ಕ್ರಿಯೆಗಳನ್ನು ನಡೆಸಲು ಕರ್ಮಿಗಳು, ‘ಗದ್ದಿಗ’ ನಡೆಸಲು ತಮ್ಮಡಿಗಳೂ, ಮುಟ್ಟಿನ ಮದುವೆ ಮತ್ತು ಕೆಟ್ಟಿಮಾಟ್ಟಲ್(ಸೀಮಂತ) ನಡೆಸಲು ಕನಲಾಡಿಗಳೂ ತಮ್ಮಡಿಗಳೂ ಇರುತ್ತಾರೆ. ನಾಡ ಹಿರಿಯನನ್ನು ‘ಪೆರುಮನ್’ ಎಂದೂ ಅವನ ಹೆಂಡತಿಯನ್ನು ‘ಪೆರುಮಾಟ್ಟಿ’ ಎಂದೂ ಗೌರವದಿಂದ ಕರೆಯುತ್ತಾರೆ.

ಹುಡುಗಿ ಋತುಮತಿಯಾದರೆ ಏಳು ದಿನದೊಳಗೆ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ನಡೆಸುತ್ತಾರೆ. ಮುಟ್ಟಿನ ಮದುವೆಯ ದಿನ ಅವಳನ್ನು ಬಾಧಿಸಿದ ದುಷ್ಟಶಕ್ತಿಗಳನ್ನು ತೊಲಗಿಸಲು ಹಿರಿಯನು ಅಕ್ಕಿ, ದೀಪ, ಕೋಳಿ ಇತ್ಯಾದಿಗಳಿಂದ ಅವಳನ್ನು ನಿವಾಳಿಸುತ್ತಾನೆ. ಬಳಿಕ ಹೆಂಗಸರು ಹುಡುಗಿಯನ್ನು ಕರೆದೊಯ್ದು ಸ್ನಾನ ಮಾಡಿಸಿ ಪುನಃ ಕರೆತರುವಾಗ ಸ್ನಾನ ಬಟ್ಟೆಗಳನ್ನು ಹಾಸುತ್ತಾರೆ. ಅವರ ಹಿಂದೆ ಮುಂದೆ ಸಮಾನ ವಯಸ್ಕ ಹುಡಿಗಿಯರನ್ನು ನಿಲ್ಲಿಸುತ್ತಾರೆ. ಮದುವೆ ನಿಶ್ಚಯವಾದ ಹುಡುಗಿಯ ಮುಟ್ಟಿನ ಮದುವೆಯನ್ನು ಮಾಡುವುದಾಗಿದ್ದರೆ ಅವಳ ಭಾವೀ ವರನನ್ನು ಜತೆಗೆ ನಿಲ್ಲಿಸುವುದಿದೆ.

ಮದುವೆಯ ಹೆಣ್ಣಿಗೆ ಅಗತ್ಯವಾದ ಆಭರಣಗಳನ್ನೆಲ್ಲ ಗಂಡನಾಗುವವನು ಕೊಂಡಕೊಡಬೇಕು. ವಧುದಕ್ಷಿಣಯಾಗಿ ನೂರ ಅರವತ್ತು ರೂಪಾಯಿಗಳನ್ನು ಕೊಡಬೇಕು. ಇದರ ಜತೆ ಆರು ಮುಡಿ ಬತ್ತವನ್ನು ಕೊಡಬೇಕು. ಗರ್ಭಿಣಿಯರಿಗೆ ಪ್ರೇತಬಾಧೆ ತಗಲದಿರುವುದಕ್ಕೂ ಸುಖಪ್ರಸವವಾಗುವುದಕ್ಕೂ, ಏಳನೇ ತಿಂಗಳಲ್ಲಿ ನಡೆಸುವ ಕಾರ್ಯಕ್ರಮವೇ ‘ಕೆಟ್ಟಿ ಮಾಟ್ಟಲ್’. ಒಬ್ಬಾತ ತೀರಿಕೊಂಡರೆ ಆ ಸುದ್ದಿಯನ್ನು ಮೊದಲು ಊರ ಹಿರಯನಿಗೆ ತಿಳಿಸಬೇಕು. ಬಳಿಕ ಕರ್ಮಿಯ ನಿರ್ದೇಶದಂತೆ ಮೃತದೇಹಕ್ಕೆ ಅರಿಸಿನ, ಎಣ್ಣೆ – ಇತ್ಯಾದಿಗಳನ್ನು ಲೇಪಿಸಿ ಸ್ನಾನ ಮಾಡಿಸುತ್ತಾರೆ. ತಲೆಯನ್ನು ತೆಂಕು ಮುಖವಾಗಿರಿಸಿ ಮಲಗಿಸುತ್ತಾರೆ. ಮೃತದೇಹದ ಸುತ್ತ ಹೆಂಗಸರು ಮಾತ್ರ ಕುಳಿತುಕೊಳ್ಳುತ್ತಾರೆ. ಅಡಿಯಾನ್‌ರಿಗಾಗಿಯೇ ಒಂದು ಶ್ಮಶಾನವಿರುತ್ತದೆ. ಮೃತದೇಹವನ್ನು ಸಂಸ್ಕರಿಸಿದ ಬಳಿಕ ಮನೆಗೆ ಬಂದು ಕರ್ಮಿಯು ಸೂತಕ ಇರುವ ಗಂಡಸರ ಕೂದಲು ಬೋಳಿಸುತ್ತಾನೆ. ಸತ್ತ ಹದಿಮೂರನೆಯ ದಿವಸ ಒಂದು ಗುಡ್ಡಕ್ಕೆ ಸೇರಿದವರು ನಡೆಸುವ ‘ಕುಂಟ್‌ಪುಲ’, (ಗುಡ್ಡಸೂತಕ), ಸತ್ತು ಹೋದವನ ಆಕೃತಿಯನ್ನು ಚೆಮ್ಮಕ್ಕಾರನ ನಿರ್ದೇಶನದಲ್ಲಿ ಬರೆದುಕೊಂಡು ನಡೆಸುವ ‘ಪದಿಮೂಂಟ್’, ಉತ್ತರಕ್ರಿಯಾ ಕಾರ್ಯಕ್ರಮಗಳ ಮುಕ್ತಾಯಕ್ಕೆ ನಡೆಸುವ ‘ಕೂಟ್ಟ’ – ಹೀಗೆ ಮೂರು ರೀತಿಯ ಸೂತಕ ಕ್ರಿಯೆಗಳನ್ನು ಅಡಿಯಾನರು ಆಚರಿಸುತ್ತಾರೆ.

ವೆಳ್ಳಾಟ್ಟ್, ತಿರ, ಗದ್ದಿಗ, ಕಂಬಳನಾಟ್ಟಿ ಮುಂತಾದ ಧಾರ್ಮಿಕ ಕಲಾರೂಪಗಳು ಅಡಿಯರಲ್ಲಿ ಪ್ರಚಲಿತವಾಗಿವೆ. ದೇವಿಯರಿಗೆ ಸಂಬಂಧಿಸಿದ ಕಾರ್ಯಕ್ರಮ – ನೆಳ್ಳಾಟ್ಟ್, ಬೆಳೆಕೊಯ್ಯುವುದಕ್ಕೆ ಸಂಬಂಧಿಸಿ ‘ಕುಳಿಯಪೂಜ’ ನಡೆಸುತ್ತಾರೆ. ಇದು ಗುಳಿಗ ಎಂಬ ದೈವವನ್ನು ತುಷ್ಟಿಗೊಳಿಸುವ ಕಾರ್ಯಕ್ರಮ. ಬೇಸಾಯಕ್ಕೆ ಸಂಬಂಧಿಸಿದ ನೃತ್ಯರೂಪ ‘ಕಂಬಳನಾಟ್ಟಿ’. ನೇಜಿ ನೆಡುವುದಕ್ಕಾಗಿ ಎಲ್ಲರನ್ನೂ ಗದ್ದೆಗೆ ಬರಮಾಡಿಕೊಂಡ ಮೇಲೆ ದುಡಿಗಳನ್ನು ಬಾರಿಸಿ ಚೀನಿಗಳನ್ನು (ಒಂದು ಊದುವಾದ್ಯ ಮೊಳಗಿಸಿ ಹಾಡುಗಳನ್ನು ಹಾಡುತ್ತಾ ನರ್ತಿಸುತ್ತಾರೆ. ಶ್ರಮ ಪರಿಹಾರ ಕೂಡ ನರ್ತನದ ಉದ್ದೇಶ. ರೋಗಶಮನಕ್ಕಾಗಿ ಇವರು ನಡೆಸುವ ಒಂದು ಕಾರ್ಯಕ್ರಮ ‘ಗದ್ದಿಗ’ ರೋಗ ಪತ್ತೆಗೆ ಸಾಧಾರಣ ಗದ್ದಿಗವೂ ರೋಗಶಮನಾಂತರದ ಕೃತಜ್ಞತಾಸಮರ್ಪಣ ರೂಪದಲ್ಲಿ ‘ಪೂಜಗದ್ದಿಗ’ವೂ ನಡೆಯುತ್ತದೆ. ಊರನ್ನಿಡೀ ಬಾಧಿಸಿದ ಮಾರಿಯನ್ನು ನೀಗುವುದಕ್ಕಾಗಿ ನಡೆಸುವ ಕಾರ್ಯಕ್ರಮ ‘ನಾಡುಗದ್ದಿಗ’. ಗದ್ದಿಗವು ಶಿವಸ್ತುತಿಯಿಂದ ಪ್ರಾರಂಭ.

ಅಡಿಯಾನರ ಮನೆಗಳನ್ನು ‘ಕುಳ್ಳ್’ ಎಂಬ ಹೆಸರಿನಿಂದ ಕರೆಯುತ್ತಾರೆ. ಕಾಡುಹುಲ್ಲು (ಮುಳಿ), ಬಿದಿರು, ಮಣ್ಣು – ಈ ಕಚ್ಚಾ ಪದಾರ್ಥಗಳಿಂದ ಮನೆಯನ್ನು ನಿರ್ಮಿಸುತ್ತಾರೆ. ಬಿದಿರುಗಳನ್ನು ಸೀಳಿ ಅವನ್ನು ಬಾಗಿಲಿಗೆ ಉಪಯೋಗಿಸುತ್ತಾರೆ. ಅವರ ಮುಖ್ಯ ಆಹಾರ ಅಕ್ಕಿ ಮತ್ತು ಸೊಪ್ಪಿನ ಪದಾರ್ಥಗಳು. ಮಳೆಗಾಲದಲ್ಲಿಲ ಕಣಿಲೆ(ಬಿದಿರ ಮೊಳಕೆ)ಯನ್ನು ಆಹಾರಕ್ಕಾಗಿ ಉಪಯೋಗಿಸುತ್ತಾರೆ. ಹೊಳೆಮೀನುಗಳನ್ನೂ ಏಡಿಗಳನ್ನೂ ವಿಶೇಷ ದಿನಗಳಲ್ಲಿ ಬಳಕೆಮಾಡುತ್ತಾರೆ. ಬೇರೆ ಬೇರೆ ಜಾತಿಯ ಕಾಡುಗೆಣಸುಗಳನ್ನು ಆಹಾರದ ಅಗತ್ಯಕ್ಕಾಗಿ ಬಳಸುತ್ತಾರೆ. ನಾನಾ ರೀತಿಯ ಏಕಮೂಲಿಕಾ ಚಿಕಿತ್ಸೆ ಅವರಲ್ಲಿ ಚಾಲ್ತಿಯಲ್ಲಿದೆ. ದುಡಿ ಮತ್ತು ಚೀನೀವಾದ್ಯಗಳು ಇವರ ಪ್ರಧಾನ ವಾದ್ಯಗಳಾಗಿವೆ. ಇವರು ಕನ್ನಡ ಮತ್ತು ತುಳು ಮಿಶ್ರಿತವಾದ ಭಾಷೆಯನ್ನಾಡುತ್ತಾರೆ.

– ಪಿ.ವಿ.ಎಂ. ಅನುವಾದ ಕೆ.ಕೆ.