ಅರವಾನ್ ವಳಿಬಾಡು ತಮಿಳುನಾಡಿನಲ್ಲಿ ಅರವಾನ್ ಅಥವಾ ಕೂತ್ತಾಂಡವರ್ ಎಂಬ ಗ್ರಾಮದೈವ ಮಹಾಭಾರತದ ಕಥೆಯೊಂದಿಗೆ ತಳುಕು ಹಾಕಿಕೊಂಡಿದೆ. ಅರವಾನ್ ಎಂಬ ಪದಕ್ಕೆ ಹಾವು ಎಂಬ ಅರ್ಥವೂ ಇದೆ. ನಾಗಕನ್ಯೆ ಉಲೂಚಿಗೆ ಅರ್ಜುನನಿಂದ ಜನಿಸಿ ಮಹಾಭಾರತ ಯುದ್ಧದಲ್ಲಿ ಪಾಂಡವರಿಗೆ ಬಲಿಯಾದ ಅರವಾನ್‌ನ ವಿಚಿತ್ರಕಥೆ ಮತ್ತು ಆಚರಣೆ ಇದು.

ತಮಿಳುನಾಡಿನಲ್ಲಿ ಉತ್ತರ ಅರ್ಕಾಟ್, ದಕ್ಷಿಣ ಆರ್ಕಾಟ್, ಸೇಲಂ ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲಿ ಮೂವತ್ತಕ್ಕೂ ಹೆಚ್ಚು ಅರವಾನ್ ದೇವಸ್ಥಾನಗಳಿವೆ. ಸಾಮಾ‌ನ್ಯವಾಗಿ ವನ್ನಿಯರ್ ಜಾತಿಯ ಜನ ಈ ದೇವರನ್ನು ಪೂಜಿಸುತ್ತಾರೆ. ದಕ್ಷಿಣ ಆರ್ಕಾಟ್ ಜಿಲ್ಲೆಯಲ್ಲಿ ನಡೆಯುವ ಕೂತ್ತಾಂಡವರ್ ಉತ್ಸವದಲ್ಲಿ ಮಂಗಳ ಮುಖಿಯರು (ಖೋಜಾಗಳು) ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಕೂವಾಗಂ ಎಂಬ ಊರಿನಲ್ಲಿ ನಡೆಯುವ ಅರವಾನ್ ಉತ್ಸವಕ್ಕೆ ನಾಡಿನ ನಾನಾ ಕಡೆಗಳಿಂದಲೂ ಮಂಗಳ ಮುಖಯರು ಆಗಮಿಸಿ ಪಾಲ್ಗೊಳ್ಳುತ್ತಾರೆ. ದ್ರೌಪದಿ ಪೂಜೆಯನ್ನು ಕುರಿತು ಸಂಶೋಧನೆ ನಡೆಸಿರುವ ಆಲ್ಫ್ ಹಿಲ್ಡಪೆಡಲ್ ಉತ್ತರ ತಮಿಳುನಾಡಿನ ಜಿಲ್ಲೆಗಳಲ್ಲಿ ನಡೆಯುವ ಅರವಾನ್ ಪೂಜೆಯನ್ನು ಕುರಿತು ಆಳವಾಗಿ ಅಧ್ಯಯನ ಮಾಡಿ ವಿವರಿಸಿದ್ದಾರೆ.

ತಮಿಳುನಾಡಿನ ದಕ್ಷಿಣ ಜಿಲ್ಲೆಗಳಾದ ತಿರುನೆಲ್ವೇಲಿ, ತೂತ್ತುಕುಡಿ, ಕನ್ಯಾಕುಮಾರಿ ಜಿಲ್ಲೆಗಳಲ್ಲೂ ಅರವಾನ್ ಆರಾಧನೆ ಕಂಡುಬರುತ್ತದೆ. ತಿರುನೆಲ್ವೇಲಿ, ಪಾಳಯಂಗೋಟೈ, ವಿಶ್ವನಾಥ ಭೇರಿ, ಶಿವಗಿರಿ, ರಾಜ ಪಾಳೈಯಂ, ಶಂಕರನ್ ಕೋವಿಲ್ ಮುಂತಾದ ಊರುಗಳಲ್ಲಿ ಇರುವ ದ್ರೌಪದಿಯಮ್ಮನ ದೇವಸ್ಥಾನಗಳಲ್ಲಿ ಅರವಾನ್ ಪೂಜೆ ನಡೆಯುತ್ತದೆ. ತೂತ್ತುಕುಡಿ ಜಿಲ್ಲೆಯ ತಟ್ಟಾರಮಡು ಹಾಗೂ ಕನ್ಯಾಕುಮಾರಿ ಜಿಲ್ಲೆಯ ಕುರುತಂಗೋಡಿನಲ್ಲಿ ಅರವಾನ್ ದೇವಸ್ಥಾನಗಳಿವೆ. ಅಲ್ಲಿ ನಾಡಾರ್ ಜನರು ಈ ದೇವಸ್ಥಾನಗಳಲ್ಲಿ ಬಹಳ ಭಯ ಭಕ್ತಿಯಿಂದ ಪೂಜೆ ಮಾಡುತ್ತಾರೆ. ನಾಡಾರ್ ಜಾತಿಯ ಜನರೇ ಈ ದೇವಸ್ಥಾನಗಳನ್ನು ನಿರ್ವಹಿಸುತ್ತಿದ್ದಾರೆ.

ತಿರುನೆಲ್ವೇಲಿ ಜಿಲ್ಲೆ ವೀರವನಲ್ಲೂರ್ ಎಂಬ ಊರಲ್ಲಿ ದ್ರೌಪದಿಒ ಅಮ್ಮನ ದೇವಸ್ಥಾನ ಇದೆ. ಈ ದೇವಸ್ಥಾನದಲ್ಲಿ ‘ಅರವಾನ್ ಬಲಿ’ ಎಂಬ ಉತ್ಸವ ಭಕ್ತಿ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಈ ಊರಲ್ಲಿ ಇರುವ ನಾಯ್ಡು, ಕೋನಾರ್, ಪಿಳ್ಳೈ, ಶೆಟ್ಟಿ, ಯಾದವ, ಅಡವಿಯಾರ್, ಚೆಟ್ಟಿಪಿಳ್ಳೈ ಮುಂತಾದವರೆಲ್ಲ ಸೇರಿ ದ್ರೌಪದಿಯಮ್ಮನ ದೇವಸ್ಥಾನದ ಎದುರು ಎಡಭಾಗದಲ್ಲಿ ಅರವಾನ್ ಪ್ರತಿಕೃತಿಯನ್ನು ಮಾಡಲು ಒಂದು ಬಂಡಿ ತುಂಬ ಜೇಡಿಮಣ್ಣು ತಂದು ಹಾಕಲಾಗುತ್ತದೆ. ಅಂದು ರಾತ್ರಿ ದ್ರೌಪದಿ, ಅರ್ಜುನರ ತೇರನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರೆವಣಿಗೆ ಮಾಡಿಸಲಾಗುತ್ತದೆ.

ಆಗ ಸಂಪ್ರದಾಯದಂತೆ ಮುರುಗೈಯ ಪಿಳ್ಳೈ ಕಾಳಿವೇಷ ಧರಿಸಿ ಕೈಯಲ್ಲಿ ಖಡ್ಗವನ್ನು ಹಿಡಿದು ತೇರಿನ ಮುಂದೆ ನಡೆಯುತ್ತಾನೆ. ಮೇಳ ವಾದ್ಯಗಳೊಂದಿಗೆ ತೇರು ಹೊರಡುತ್ತದೆ. ಉದ್ದವಾದ ಒಂದು ಕೋಲಿನ ತುದಿಗೆ ಕೆಂಬಣ್ಣದ ವಸ್ತ್ರವನ್ನು ಕಟ್ಟಿ, ಅದಕ್ಕೆ ಹಿಟ್ಟು ಮತ್ತು ನಿಂಬೆ ಹಣ್ಣನ್ನು ಬಿಗಿದು ಒಬ್ಬರು ಹಿಡುದು ಕೊಳ್ಳುತ್ತಾರೆ. ಅದನ್ನು ಕುಂತಿದೇವಿ ಎಂದು ಭಾವಿಸುತ್ತಾರೆ. ತೇರು ಮೆರೆವಣಿಗೆ ಹೊರಟ ಮೇಲೆ ವ್ರತ ಕೈಗೊಂಡಿರುವ ಮುತ್ತು ಪಾಂಡಿ ದೇವರ ಮತ್ತು ಅವರ ಸಹಾಯಕರು ಶಯನ ಭಂಗಿಯ ಅರವಾನ್ ಪ್ರಕೃತಿಯನ್ನು ನಿರ್ಮಿಸುತ್ತಾರೆ. ಬಣ್ಣ ಬಳಿದು ಸುಂದರಗೊಳಿಸುತ್ತಾರೆ. ಮರದಿಂದ ಮಾಡಿಸಿದ ಅರವಾನ್ ಮುಖವಾಡವನ್ನು ದೇವಸ್ಥಾನದಿಂದ ತಂದು ಅರವಾನ್ ಪ್ರತಿಕೃತಿಯ ತಲೆಯ ಮೇಲೆ ಇಡುತ್ತಾರೆ. ತಲೆಯ ಸಮೀಪ ಒಂದು ದೀಪವನ್ನು ತಲೆಯ ಮೇಲೆ ಇಡುತ್ತಾರೆ. ತಲೆಯ ಸಮೀಪ ಒಂದು ದೀಪವನ್ನು ನಿಲ್ಲಿಸುತ್ತಾರೆ. ಹಾರ ಹಾಕಿಸಿಕೊಂಡು ಶಯನ ಭಂಗಿಯಲ್ಲಿರುವ ಅರವಾನ್ ಪ್ರತಿಕೃತಿಯನ್ನು ನೋಡಿದಾಗ ನಿಜವಾಗಿಯೂ ಅರವಾನ್ ಮಲಗಿರುವಂತೆಯೇ ಕಾಣುತ್ತದೆ. ಜನರು ಅರವಾನನಿಗೆ ನಮಸ್ಕರಿಸುವರು.

ದೇವಸ್ಥಾನದ ಮುಂದೆ ಭಾಗವತರೊಬ್ಬರು ಮಹಾಭಾರತದ ಕಥೆಯನ್ನು ಹಾಡುವರು. ತೇರು ಊರ ಸುತ್ತಲೂ ಹೋಗಿ ಬಂದ ಮೇಲೆ, ‘ಅರವಾನ್ ಬಲಿಕಥೆ’ ಯನ್ನು ಹಾಡತೊಡಗುತ್ತಾರೆ. ‘ದ್ರೌಪದಿ ಕಾಳಿಯ ರೂಪತಾಳಿ ಅರವಾನಿಯ ತಲೆಯನ್ನು ಕತ್ತರಿಸಿದಳು’ ಎಂದು ಹಾಡುತ್ತಾರೆ. ಆಗ ಕಾಳಿ ವೇಷ ಧರಿಸಿದವರು ಆವೇಶಭರಿತರಾಗಿ ಖಡ್ಗವನ್ನು ಹಿಡಿದು ಬಂದು ಜೇಡಿಮಣ್ಣಿನಿಂದ ಮಾಡಿದ ಅರವಾನದ ಪ್ರತಿಕೃತಿಯನ್ನು ತಲೆಯನ್ನು ಕತ್ತರಿಸುತ್ತಾರೆ. ಮರದಿಂದ ಮಾಡಿಸಿದ ಮುಖವಾಡವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಲಾಪಿಸುತ್ತಾಳೆ. ಕಾಳಿ ವೇಷಧಾರಿ ದೇವಸ್ಥಾನವನ್ನು ಪ್ರವೇಶಿಸಿ, ದ್ರೌಪದಿಯ ಸನ್ನಿಧಿಯ ಎದುರು ಅರವಾನ್ ತಲೆಯನ್ನು ಇಟ್ಟು ಆವೇಶದಿಂದ ನಿಂತಿರುತ್ತಾರೆ. ಜನರು ಬಹಳ ಭಯ ಭಕ್ತಿಯಿಂದ ಅರವಾನ್‌ನನ್ನು ಪೂಜೆ ಮಾಡುವರು.

ಮಹಾಭಾರತ ಪಾತ್ರವಾದ ಅರವಾನ್ ಕಥೆ ಮತ್ತು ಅರವಾನ್ ಪೂಜೆ ಒಂದಕ್ಕೊಂದು ತಳುಕು ಹಾಕಿಕೊಂಡಿರುವುದನ್ನು ಕಾಣಬಹುದು. ಅರವಾನ್ ಕಥೆಯನ್ನು ಒಂದು ಧಾರ್ಮಿಕ ಆಚರಣೆಗಾಗಿ ನಡೆಸುವುದನ್ನು ಕಾಣುತ್ತೇವೆ. ಮಹಾಬಾರತ ಕಥೆಯ ಒಂದು ಪುಟ್ಟ ಪಾತ್ರ ಜನಪದರು ಅರವಾನನ್ನು ತಮ್ಮ ದೈವವೆಂದು ಪೂಜಿಸುತ್ತಾರೆ.

ತಮಿಳು ನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ವಿಲ್ಲಿಸೈ ಪಾಟ್ಟು, ಮಣಿಯಾಟ್ಟು ಭಾರತಂ ಮುಂತಾದ ಕಥನಗೀತೆ ರೂಪಗಳಿವೆ. ಉತ್ತರ ಜಿಲ್ಲೆಗಳಲ್ಲಿ ಮಹಾಭಾರತ ಕಥೆಯನ್ನು ಬೀದಿನಾಟಕವಾಗಿ ತೆರಕ್ಕೂತ್ತು ಆಡಿಸಲಾಗುತ್ತದೆ. ಹಗಲು ಹೊತ್ತು ಮಹಾಭಾರತ ಕಥೆಯ ಉಪನ್ಯಾಸ ನಡೆಸಿ ಕೊಡಲಾಗುತ್ತದೆ. ಆದ್ದರಿಂದ ಅರವಾನ್ ಪೂಜೆ ಎಂಬುದು ಕಥೆ, ಸಂಗೀತ, ನಾಟಕ ಮತ್ತು ಆಚರಣೆ ಇವೆಲ್ಲವುಗಳ ಒಟ್ಟು ಮೊತ್ತವಾಗಿದೆ.

– ವಿ.ಕೆ.ಕೆ. ಅನುವಾದ ಐ.ಎಸ್.

ಅರಿಯುಂಡ ಇದು ಕೇರಳದ ಒಂದು ಜನಪದ ತಿನಿಸು (ಅಕ್ಕಿಯುಂಡೆ). ಇದನ್ನು ವಿಶೇಷ ಸಂದರ್ಭಗಳಲ್ಲಿ ತಯಾರಿಸುತ್ತಾರೆ. ಇದರ ತಯಾರಿಯಲ್ಲಿ ಮುಖ್ಯ ಪಾತ್ರ ಹೆಂಗಸರದು. ಉತ್ತರ ಕೇರಳದಲ್ಲಿ ಇದು ತುಂಬ ಜನಪ್ರಿಯ ತಿನಿಸು ಕೂಡ. ಜಾತಿ ಭೇದವಿಲ್ಲದೆ ಇದನ್ನು ವಿಶೇಷ ಸಂದರ್ಭಗಳಲ್ಲಿ ಒಂದು ತಿಂಡಿಯಾಗಿ ಬಳಸುತ್ತಾರೆ. ಇದರ ತಯಾರಿಗೆ ಅಕ್ಕಿ, ಬೆಲ್ಲ, ತೆಂಗಿನಕಾಯಿ – ಇವು ಅಗತ್ಯ. ಒಂದು ಹಾನ ಅಕ್ಕಿಗೆ ಅರ್ಧ ತೆಂಗಿನ ಮತ್ತು ಹಾಲು ಸೇರು ಬೆಲ್ಲ ಇದು ಪ್ರಮಾಣ.

ಸ್ವಲ್ಪಮಟ್ಟಿಗೆ ಬಣ್ಣ ಏರುವವರೆಗೆ ಅಕ್ಕಿಯನ್ನು ಹುರಿದು ಒರಳಲ್ಲಿ ಕುಟ್ಟಿ ಇರಿಸಿಕೊಂಡು ಬೆಲ್ಲ ತೆಂಗಿನಕಾಯಿಗಳನ್ನು ಸೇರಿಸಿ, ಪುನಃ ಒರಳಲ್ಲಿ ಕುಟ್ಟಬೇಕು. ತೆಂಗಿನ ತುರಿಯನ್ನು ಪಸೆ ಏರುವವರೆಗೆ ಕುಟ್ಟಬೇಕೆಂಬುದು ಲೆಕ್ಕಾಚಾರ. ಅದರ ಬಳಿಕ ಹುರಿದು ಪುಡಿ ಮಾಡಿದ ಅಕ್ಕಿಯನ್ನು ಸೇರಿಸಿ ಪುನಃ ಕುಟ್ಟಬೇಕು. ಅಂಟು ಸೀಗದಂತೆ ಒಂದಿಷ್ಟು ಸಕ್ಕರೆಯನ್ನು ಸೇರಿಸಿ ಪುನಃ ಕುಟ್ಟಿದ ಬಳಿಕ ಕೈಯಲ್ಲೆ ಉಂಡೆ ಕಟ್ಟುತ್ತಾರೆ. ಉಂಡೆಗಳನ್ನು ಬಾಳೆ ಎಲೆಯಲ್ಲಿ ಮುಚ್ಚಿಡಲಾಗುತ್ತದೆ. ಹೊತ್ತು ಹೋದಂತೆಲ್ಲಾ ಉಂಡೆಗಳು ಬಲಿತುಕೊಳ್ಳುತ್ತವೆ.

ಕರ್ಕಟಕದಲ್ಲಿ ಬರುವ ನಂಟರಿಗೆ ವಿಶೇಷ ತಿನಿಸಾಗಿ ಇಂಥ ಅಕ್ಕಿಯುಂಡೆಗಳನ್ನು ನೀಡುತ್ತಾರೆ. ಅದನ್ನು ಒಂದು ದೊಡ್ಡ ತೆಂಗಿನ ಕಾಯಿಯ ಗಾತ್ರಕ್ಕೆ ತಯಾರಿಸುವುದೂ ಇದೆ. ಹಿಂದಿನ ಕಾಲದಲ್ಲಿ ಬಂಧುಗಳ ಮನೆಗೆ ಹೋಗುವಾಗ ಒಯ್ಯುತ್ತಿದ್ದ ಮುಖ್ಯ ತಿನಿಸು ಇದೇ ಆಗಿತ್ತು. ಕರ್ಕಟಕದಲ್ಲಿ ತವರು ಮನೆಗೆ ಬಂದ ಹೆಂಗಸರು ಮರಳಿ ಗಂಡನ ಮನೆಗೆ

ಹೋಗುವಾಗ ಒಯ್ಯಲು ತಯಾರು ಮಾಡುತ್ತಿದ್ದುದು ಅಕ್ಕಿಯುಂಡೆಗಳನ್ನು ಮನೆಯಲ್ಲಿದ್ದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಉಂಡೆಗಳನ್ನು ತಯಾರಿಸಿ ಒಯ್ಯಬೇಕು. ತಾಯಿಯೋ ಅತ್ತೆಯೋ ಉಂಡೆಗಳನ್ನು ಸ್ವತಃ ತಯಾರಿಸಲು ಮುಂದಾಗುತ್ತಿದ್ದರು.

ಹಿಂದೆ ನಂಟರ ಮನೆಗೆ ಹೋಗುವಾಗ ಅಕ್ಕಿಯುಂಡೆಗಳು ಮತ್ತು ಬಾಳೆ ಹಣ್ಣುಗಳನ್ನು ಒಯ್ಯುತ್ತಿದ್ದರು. ಇಂದು ಅದರ ಸ್ಥಾನವನ್ನು ಬೇಕರಿ ವಸ್ತುಗಳು ಆಕ್ರಮಿಸಿದೆ. ಆದರೂ ಅಪೂರ್ವವಾಗಿ ಬೇಕರಿಗಳಲ್ಲೂ ಅಕ್ಕಿಯುಂಡೆ ಲಭ್ಯವಿದೆ. ಕೆಲವು ಕುಟುಂಬಶ್ರೀ (ಸ್ತ್ರೀ ಸಂಘಗಳು) ಅಕ್ಕಿಯುಂಡೆಗಳನ್ನು ತಯಾರಿಸಿ ಮಾರುತ್ತವೆ. ಭೂಮಿ ಸಂಬಂಧಿ ಆರಾಧನೆಯ ಅಂಗವಾಗಿ ‘ಕಿರುಹುತ್ತಂ’ ಎಂಬ ಆಚರಣೆಯು ಮನೆಗಳಲ್ಲಿ ನಡೆಯುವ ಪದ್ದತಿಯಿದೆ. ಕೊಯ್ಲು ಆರಂಭಿಸುವುದಕ್ಕೆ ಸ್ವಲ್ಪವೇ ಮೊದಲು ಇದು ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಅಕ್ಕಿಯುಂಡೆಗೆ ವಿಶೇಷ ಪ್ರಾಶಸ್ತ್ಯವಿದೆ. ಈ ಉಂಡೆ ಕೈಯೊಳಗೆ ಅಡಗುವಷ್ಟೇ ದೊಡ್ಡ ಗಾತ್ರದ್ದಾಗಿರುತ್ತದೆ. ಹರಿವಾಣದಲ್ಲಿ ಅಕ್ಕಿ ಉಂಡೆಗಳನ್ನಿಟ್ಟು ಅದರ ಮೇಲೆ ಒಂದು ತುಂಡು ಬಾಳೆಹಣ್ಣನ್ನಿಟ್ಟು ಅದರ ಮೇಲೆ ಒಂದಿಷ್ಟು ಬೆಣ್ಣೆಯಿಟ್ಟು – ಇವೆಲ್ಲವುಗಳ ಮೇಲೆ ಒಂದು ಅಕ್ಕಿ ಕಾಳನ್ನಿಟ್ಟು (ಹೊಸ ಬತ್ತದ ಅಕ್ಕಿ) – ಅದನ್ನು ಆರಾಧನೆಯ ಅಂಗವಾಗಿ ಮನೆಯ ಮಂದಿಗೆಲ್ಲ ಕೊಡುತ್ತಾರೆ.

– ಟಿ.ಟಿ.ಕೆ.ಎಂ. ಅನುವಾದ ಕೆ.ಕೆ.

ಅಲಾಮಿಕಳಿ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ಜತೆಯಾಗಿ ಪ್ರದರ್ಶಿಸುತ್ತಿದ್ದ ಆಚರಣಾತ್ಮಕ ಕಲೆಯೇ ಅಲಾಮಿಕಳಿ. ಮೊಹರಂ ಒಂದನೇ ದಿನಾಂಕದಿಂದ ಹತ್ತು ದಿವಸಗಳ ಕಾಲ ಇದು ನಡೆಯುವುದು. ಈ ಆಚರಣೆಗಳಿಗೆ ಹನಫಿ ವಿಭಾಗದ ಮುಸ್ಲಿಮರು ನೇತೃತ್ವ ನೀಡುವರು. ಪ್ರಾದೇಶಿಕವಾಗಿ ಇವರನ್ನು ‘ತುರುಕರು’ ಎಂದು ಕರೆಯುತ್ತಾರೆ. ಅಮಾಮಿ ವೇಷವನ್ನು ಹಿಂದೂ ಹಾಗೂ ಮುಸ್ಲಿಂ ಪುರುಷರು ಧರಿಸುತ್ತಾರೆ. ಉದ್ದೇಶಿತ ಕಾರ್ಯ ಸಿದ್ಧಿ, ರೋಗ ನಿವಾರಣೆಗಾಗಿ ನಡೆಸುವ ಹರಕೆಯ ರೂಪದಲ್ಲಿ ಇವರು ಅಲಾಮಿ ವೇಷವನ್ನು ಧರಿಸುತ್ತಾರೆ.

ಪುರಾಣ: ಮುಸ್ಲಿಮರಿಗೆ ಮೊಹರಂ ಪುಣ್ಯದ ಮಾಸವಾಗಿದೆ. ಇಸ್ಲಾಂ ಚರಿತ್ರೆಯಲ್ಲಿ ಪ್ರಸಿದ್ಧವಾದ ಕುರ್ಬಾಲ ಯುದ್ಧದ ನೆನಪಿಗಾಗಿ ಮೊಹರಂ ಹಬ್ಬವನ್ನು ಆಚರಿಸುತ್ತಾರೆ. ಯಸೀದ್ ಎಂಬ ಸರ್ವಾಧಿಕಾರಿಯ ದುರಾಡಳಿತದ ವಿರುದ್ಧ ಇಸ್ಲಾಂ ಜನರು ಹುಸೈನ್ ಎಂಬುವನ ನೇತೃತ್ವದಲ್ಲಿ ಸೆಟೆದು ನಿಂತರು. ಶತ್ರು ಸೇನೆಯು ಹುಲಿ, ಕರಡಿ ವೇಷಗಳನ್ನು ಧರಿಸಿ ಹುಸೈನನ ಕುಟುಂಬವನ್ನು ಕುಡಿಯುವ ನೀರನ್ನು ಕೂಡಾ ಒದಗಿಸಲಿಲ್ಲ. ಹಳ್ಳಿಯ ಒಂದೇ ಒಂದು ಕುಡಿಯುವ ನೀರಿನ ಬಾವಿಯ ಸತ್ತ ಅಗ್ನಿಕುಂಡ ನಿರ್ಮಿಸಿ ಕೆಂಡಗಳನ್ನು ಎಸೆಯವು ಕ್ರಿಯೆ ಇದರ ನೆನಪಿಗಾಗಿ ಎಂದು ಹೇಳುತ್ತಾರೆ.

ಹಿಂದೂ ಹಾಗೂ ಮುಸ್ಲಿಮರು ಜತೆಯಲ್ಲಿ ಈ ಆಚರಣೆಯನ್ನು ನಡೆಸುವ ಘಟನೆಗೆ ಸಂಬಂಧಿಸಿದಂತೆಯೂ ಒಂದು ಕಥೆ ಇದೆ. ಧಾರ್ಮಿಕನಾಗಿದ್ದ ಫಕೀರನೆಂಬ ವ್ಯಕ್ತಿ ಹಡಗು ಪ್ರಯಾಣದ ಸಂದರ್ಭದಲ್ಲಿ ಸಮುದ್ರದಲ್ಲಿ ಮಹಾವಿಷ್ಣುವಿನ ಕೈಯ ಆಕೃತಿಯನ್ನು ಕಂಡನೆಂದೂ, ನೋಡುತ್ತಿದ್ದಂತೆಯೇ ಅದು ಸಮುದ್ರದಲ್ಲಿ ಮುಳುಗಿ ಹೋಯಿತೆಂದೂ, ಊರಿಗೆ ಮರಳಿದ ಅವನು ಆ ಕೈಗಳನ್ನು ಬೆಳ್ಳಿಯಲ್ಲಿ ನಿರ್ಮಿಸಿದನೆಂದೂ ಕಥೆ ಹೇಳುತ್ತದೆ. ಈ ಫಕೀರನ ಕುಟುಂಬದವರೇ ಅಲಾಮಿಕಳಿಯ ಆಚರಣೆಗಳಿಗೆ ನೇತೃತ್ವ ನೀಡುವವರು ಎಂಬುದು ನಂಬಿಕೆ.

ವೇಷ : ದೇಹಕ್ಕೆ ಸಂಪೂರ್ಣ ಕಪ್ಪು ಬಣ್ಣ ಬಳಿದು, ಅಲ್ಲಲ್ಲಿ ಬಿಳಿಯ ವೃತ್ತಾಕಾರದ ಚುಕ್ಕಿಗಳನ್ನು ಹಾಕುವರು. ನಾರಿನಿಂದ ಮಾಡಿದ ಗಡ್ಡ ಮೀಸೆಗಳನ್ನು ಧರಿಸುವರು. ತಲೆಯಲ್ಲಿ ಟೋಪಿ ಧರಿಸುವರು. ಶಿರೋಭೂಷಣವನ್ನು ಕಿಸ್ಕಾರ ಹೂಗಳಿಂದ ಅಲಂಕರಿಸುವರು. ಹೂ ಹಾಗೂ ಎಲೆಗಳಿಂದ ರಚಿಸಿದ ಮಾಲೆ ಧರಿಸುವರು.

ಆಚರಣೆ : ಮೊಹರಂ ಒಂದನೇ ದಿನಾಂಕದಂದು ಫಕೀರ್ ಸಾಹೇಬರ ಮನೆಯಿಂದ ಬೆಳ್ಳಿಯಲ್ಲಿ ನಿರ್ಮಿಸಿದ ಕೈಗಳನ್ನು ಹೊಸದುರ್ಗದ ನಿರ್ದಿಷ್ಟ ಸ್ಥಳಕ್ಕೆ ತಲುಪಿಸುವರು. ಆಗಲೇ ಅಲ್ಲಿ ಭಕ್ತರು ಸೇರಿರುತ್ತಾರೆ. ಅಲಾಮಿಗಳಾಗುವ ವ್ಯಕ್ತಿಳು ಕಾಣಿಕೆಯ ಹಣವನ್ನು ಸಾಹೇಬರಿಗೆ ನೀಡಿ ನಮಸ್ಕರಿಸುವರು. ಕಪ್ಪು ನೂಲಿನ ತುಂಡನ್ನು ನೀಡಿ ಸಾಹೇಬ್ ವೇಷ ಧರಿಸಲು ಅನುಮತಿ ನೀಡುತ್ತಾನೆ. ತಮ್ಮ ಕೈಕಾಲುಗಳಿಗೆ ಈ ನೂಲನ್ನು ಧರಿಸಿದಾಗ ಅವರು ಅಲಾಮಿಗಳಾಗುತ್ತಾರೆ. ಇವರು ಮತ್ಸ್ಯಮಾಂಸಗಳನ್ನು ತ್ಯಜಿಸಿ, ಬ್ರಹ್ಮಚರ್ಯವನ್ನು ಪಾಲಿಸಬೇಕಾಗಿದೆ.

ಸುಮಾರು ಐದು ಜನರ ತಂಡಗಳಾಗಿ ಇವರು ಊರಿನಲ್ಲಿ ಸುತ್ತಾಡುವರು. ತಮಗೆ ಬೇಕಾದ ಹಾಡುಗಳನ್ನು ಹಾಡುತ್ತಾ, ಘೋಷಗಳನ್ನು ಮೊಳಗಿಸುತ್ತಾ, ಕೈಯಲ್ಲಿ ಕೋಲು ಹಿಡಿದು ನೃತ್ಯ ಮಾಡುವರು. ಮನೆಗಳಿಂದ ನೀಡಿದ ಹಣ ಹಾಗೂ ಇತರ ವಸ್ತುಗಳನ್ನು ಸಂಗ್ರಹಿಸುವರು. ಪ್ರಯಾಣದ ಮಧ್ಯೆ ಹಿತ್ತಲಿನಿಂದ ಫಲವಸ್ತುಗಳನ್ನು ಕಿತ್ತರೂ ಯಾರೂ ವಿರೋಧಿಸುವಂತಿಲ್ಲ. ಹೀಗೆ ಊರು ಸುತ್ತುವಾಗ ಅಲಾಮಿಗಳು ತಮ್ಮ ಕಣ್ಣಿಗೆ ಕಂಡ ಹಾಲೆ, ಸಂಪಗೆ ಮರಗಳ ಗೆಲ್ಲುಗಳನ್ನು ಕಡಿಯುವರು. ಮೊಹರಂ ಹತ್ತರಂದು ಅಲಾಮಿಗಳು ಹಿಂದಿರುಗುವರು.

ಮೊಹರಂ ತಿಂಗಳ ಚಂದ್ರನನ್ನು ಕಂಡು ಅಲಾಮಿ ವೇದಿಕೆಗೆ ‘ಕುತ್ತಿ’ ಹಾಕುವರು. ಏಳನೇ ದಿವಸ ಮಸೀದಿಯಿಂದ ಮುಜಾವರ್ (ಪುರೋಹಿತ) ಪ್ರಾರ್ಥನೆಯೊಂದಿಗೆ ದೀಪವನ್ನು ತೀಯ ಸಮುದಾಯದ ಕರ್ಮಿಗೆ ಕೊಡುವನು. ಅವನು ಅಲಾಮಿ ತಳದಲ್ಲಿ ರಾಶಿ ಹಾಕಿದ ಕಟ್ಟಿಗೆಗೆ ಅದರಿಂದ ಬೆಂಕಿ ಕೊಡುತ್ತಾನೆ. ಫಕೀರ ಕುಟುಂಬದ ಬೆಳ್ಳಿ ಕೈಗಳ ಹಕ್ಕುದಾರ ಬೆಂಕಿಯ ಆವೇಶಗೊಂಡು ಕೆಂಡವನ್ನು ಬಾಚಿ ಎಸೆಯುವರು. ಕೆಲವರು ಕೆಂಡದಲ್ಲಿ ಶಯನ ಪ್ರದಕ್ಷಿಣೆ ಮಾಡುವರು. ಅನಂತರ ಎಲ್ಲರೂ ಸ್ನಾನ ಮಾಡಿ ಬೆಳ್ಳಿಯ ಕೈಗಳನ್ನು ಸಂಬಂಧಪಟ್ಟವರಿಗೆ ಒಪ್ಪಿಸುವುದರೊಂದಿಗೆ ಆಚರಣೆಗಳು ಕೊನೆಗೊಳ್ಳುತ್ತವೆ.

ಅಲಾಮಿಕಳಿ ಕೇವಲ ಧಾರ್ಮಿಕ ಕಲೆಯಾಗಿ ಉಳಿದಿಲ್ಲ. ಕಾಸರಗೋಡಿನಲ್ಲಿ ಇಂದಿಗೂ ಅಲಾಮಿಪಳ್ಳಿ ಇದೆ. ಅಲಾಮಿಕಳಿ ಹಿಂದೂ ಮುಸ್ಲಿಂ ಸೌಹಾರ್ದದ ಸಂಕೇತವಾಗಿ ಉಳಿದುಕೊಂಡು ಬಂದಿದೆ.

– ವಿ.ಎಂ.ಯು. ಅನುವಾದ ಎನ್.ಎಸ್

ಅಲ್ಲೋನೇರೇಡು ತೆಲುಗು ಜನಪದ ಗೀತೆಗಳ ಜನಪ್ರಿಯ ಪಲ್ಲವಿ (ಜಂಬೂ ನೇರಳೆ). ಸಾಧಾರಣವಾಗಿ ತೆಲುಗಿನಲ್ಲಿ ಪುನರಾವೃತ್ತ ಸಂಗತಿಗಳು (ಪಲ್ಲವಿ) ಎನ್ನುವ ಮಾತನ್ನು ಮೊದಮೊದಲು ಕಥಾ ಗೇಯಗಳಿಗೆ ಅನುಸಂಧಾನವಾಗಿ ಚರಣ ಚರಣಕ್ಕೆ ಕೊನೆಯಲ್ಲಿ ಬರುವ ಪದಗಳಿಗೆ ಮಾತ್ರವೇ ರೂಢಿಯಾಗಿ ಬಳಸಲಾಗುತ್ತಿತ್ತು. ಮುಖ್ಯ ಕಥೆಗಾರನಿಗೆ ಜೊತೆ ಹಾಡುಗಾರರು ಅಥವಾ ಪುನರಾವೃತ್ತ ಸಂಗತಿ ಹಾಡುವವರು ಇರುತ್ತಾರೆ. ಚರಣದ ಕೊನೆಗೆ ಒಂದು ಪದದ ಆವೃತ್ತಿ ಕೆಲಸದ ಹಾಡುಗಳಲ್ಲಿ ಸಹ ಹೆಚ್ಚಾಗಿ ಕಾಣಿಸುತ್ತದೆ. ಈ ಗೇಯಗಳಿಗೆ ಆವೃತ್ತಿಯ ಅವಶ್ಯಕತೆ ಹೆಚ್ಚು. ಪುನರಾವೃತ್ತ ಸಂಗತಿಗಳು ಎಂಬ ಈ ಪದವನ್ನು ಇಂಗ್ಲಿಷಿನ Refrain ಪದಕ್ಕೆ ಸಮಾನಾರ್ಥಕವಾಗಿ ಬಳಸಲಾಗಿದೆ.

ಈ ಪುನರಾವೃತ್ತ ಸಂಗತಿಗಳು ತೆಲುಗಿನಲ್ಲಿ ಅನೇಕ ಬಗೆಯಲ್ಲಿ ಕಂಡುಬರುತ್ತವೆ.

ಅ. ಪ್ರಕೃತಿಯಲ್ಲಿ ಸಹಜ ವಸ್ತುಗಳು : ೧ ಚಂದಮಾಮ, ೨) ಸೂರೀಡಾ, ೩) ಚುಕ್ಕಲ್ಲಚಂದುರೂಡಾ, ೪) ವೆನ್ನೆಲಾ ಇಲ್ಲವೇ ಎನ್ನಿಲಾ, ಎನ್ನಿಯಲಾ. ೫) ರುದ್ರಾಕ್ಷಿರುದ್ರ ಮಾವಿಳ್ಳು, ೬) ಅಲ್ಲೋನೇರೇಡು, ೭) ಗೋಂಗೂರ, ೮) ಮಲ್ಲೆಪುವ್ವಾ ಪೊನ್ನಪುವ್ವಾ, ೯)ಕೋಯಿಲಾ, ತುಮ್ಮೆದಾ, ತುಮ್ಮೆದಾಲೋ. ತುಮ್ಮೆದಿಯಲೋ, ತುಮ್ಮದಿಯಲೋ ನಾಗಾ, ೧೦) ಗುಮ್ಮಡಿ, ೧೧) ರಾಚಗುಮ್ಮಡಿ, ೧೨) ವೇಂಪಂಡು

ಆ. ಕಥೆಯಲ್ಲಿಯ ಪಾತ್ರಗಳು: ೧) ಧರ್ಮರಾಜುಲ ಜೂದಮು, ೨) ಗೊಂತಮ್ಮ ಗೊಂತಿ ಗೊಂತಿ, ೩) ರಾವಣಾಟಿಬ್ರಹ್ಮ, ೪) ನಾರಾಯಣ, ೫) ಗೊಬ್ಬಿಯಲ್ಲೋ, ೬) ಅಮ್ಮವಾರಾ, ೭) ಸಾರಂಗಾ

ಇ. ದಿಕ್ಸೂಚಕ ಪದಗಳು: ೧. ದಿಬ್ಬೆನ್ನ, ೨. ದಾರಿಲೋ

ಈ. ಅರ್ಥ ವ್ಯಕ್ತವಾಗದವು : ೧. ಸುವ್ವಿ ೨. ಕೋಲು

ಉ. ಉದ್ರೇಕ ಪ್ರೇರಕಗಳು: ೧.ಹೈಲೆಸ್ಸಾ, ೨. ಜೋರ್ಸೆಯ್ ಬಾರ್ಸೆಯ್

ಎನ್ನುವ ಈ ಪುನರುಕ್ತಿ ಸಂಗತಿಗಳಲ್ಲಿ ಅಲ್ಲೋನೇರೇಡು ಎಂಬುದು ಸ್ವಲ್ಪ ವಿಶಿಷ್ಟವಾಗಿ ಗೋಚರಿಸುತ್ತದೆ. ಇದು ತೆಲುಗು ಭಾಷೆಯಲ್ಲಿ ಮಾತ್ರ ಇದೆ.

ಅಲ್ಲೋನೇರೇಡು ಎಂಬುದಕ್ಕೆ ಸಂಸ್ಕೃತದಲ್ಲಿ ‘ರಾಜಜಂಬೂಫಲ’ ಎಂಬುದು ಸಮಾನವಾದ ಪದ, ಇದಕ್ಕೆ ಪುರಾಣದಲ್ಲಿ ಒಂದು ಪ್ರಸಿದ್ಧವಾದ ಸ್ಥಾನವಿದೆ. ದ್ವೀಪಗಳಲ್ಲಿ ಮೊದಲಿಗೆ ಹೆಸರಿಸಲ್ಪಟ್ಟುದು ಜಂಬೂದ್ವೀಪ. ಈ ಜಂಬೂ ದ್ವೀಪದಲ್ಲಿ ಕಿಂಪುರುಷ, ಹರಿ, ರಮ್ಯಕ ಹಿರಣ್ಮಯ ವರ್ಷಗಳೊಂದಿಗೆ ಭರತವರ್ಷ ಸಹಾ ಇದೆ. ಇಲ್ಲಿಯ ಜಂಬೂವೃಕ್ಷಗಳು ಸಮೃದ್ಧಿಯಾಗಿ ಇರುವ ಕಾರಣದಿಂದ ಇದಕ್ಕೆ ಆ ಹೆಸರು ಬಂದಿತು. ಪುರಾಣ ಪ್ರಸಿದ್ಧರಾದ ಈ ಪದಕ್ಕೆ ಜನಪದ ಸಾಹಿತ್ಯದೊಂದಿಗೆ ಸಂಬಂಧವಿದೆ.

ತೆಲುಗು ಜನಪದ ಸಾಹಿತ್ಯದಲ್ಲಿ ಅಲ್ಲೋನೇರೇಡು ಎಂಬ ಪುನರುಕ್ತಿ ಹೊಂದಿದ ಹಾಡುಗಳಲ್ಲಿ ನೇರೇಡು ಎನ್ನುವ ಪುನರುಕ್ತಿಯೊಂದಿಗೆ, ಆ ಮರವನ್ನು ಬೆಳೆಸುವುದು, ಮದುವೆಯ ಸಂದರ್ಭದಲ್ಲಿ ಅದರ ಚೆಕ್ಕೆಗಳನ್ನು ಮದುವೆ ಮಣೆಗಳಾಗಿ, ಕಾಯಿಗಳನ್ನು ಅಡಕೆಗಳಾಗಿ, ಎಲಗಳನ್ನು ತೋರಣಗಳಾಗಿ ಶುಭಪ್ರದವೆಂದು ಬಳಸುವುದು ಕಾಣಿಸುತ್ತದೆ. ಎರಡು ಮೂರು ಸಂದರ್ಭಗಳಲ್ಲಿ ಮಾತ್ರವೇ ಇವನ್ನು ಹಾಡುತ್ತಿದ್ದರೆಂದು ತಿಳಿದುಬರುತ್ತದೆ. ೧) ಮದುವೆ ಸಂದರ್ಭದಲ್ಲಿ ಅರಿಸಿನ ಕುಟ್ಟುವಾಗ, ೨) ಮೈನೆರೆದಾಗ ಚಿಗಳಿ ಕುಟ್ಟುವಾಗ, ೩) ವ್ಯವಸಾಯ ಸಂಬಂಧಿ ಕೆಲಸಗಳನ್ನು ಮಾಡುತ್ತಾ ಶ್ರಮ ನೀಗಿಸಿಕೊಳ್ಳಲು

ಮೇಲೆ ಹೇಳಿದ ಹಾಡು ಮದುವೆಯ ಸಂದರ್ಭದಲ್ಲಿ ಅರಿಸಿನ ಕುಟ್ಟುವಾಗ ಹಾಡುವ ಹಾಡು. ಇದು ತೆಲಂಗಾಣದಲ್ಲಿ ದೊರೆಯಿತು. ಹೈದರಾಬಾದ್‌ನಲ್ಲಿ ಸುಮಿತ್ರಾದೇವಿ ಎನ್ನುವ ಎಂ.ಎಲ್.ಎ. ಅವರು ಹೇಳಿದ ಮಾಹಿತಿ ಇದು.

೧) ಇಲ್ಲಿಯ ಚಿತ್ರವೇನೆಂದರೆ, ಹಾಡುಗಳಲ್ಲಿ ನೇರಳೆ ಚೆಕ್ಕೆಗೆ, ಎಲೆಗಳಿಗೆ, ಕಾಯಿಗಳಿಗೆ ಶುಭಪ್ರದವಾದ ಭಾವನೆಯಿಂದ ಕೂಡಿದ ಪ್ರಾಶಸ್ತ್ಯವಿದ್ದರೂ, ವ್ಯವಹಾರದಲ್ಲಿ ಮಾತ್ರ ಯಾರೂ ಆ ಗಿಡವನ್ನು ಮದುವೆಗಳಲ್ಲಿ ಉಪಯೋಗಿಸುತ್ತಿಲ್ಲ. ಆದರೆ ಗಿಡದ ಹುಟ್ಟು ಬೆಳವಣಿಗೆ ಮೊದಲಾದವನ್ನು ಹಾಡುಗಳು ಸಿಗದ ಶ್ರೀ ಕಾಕುಳ, ವಿಜಯನಗರ, ವಿಶಾಕಪಟ್ನ, ಜಿಲ್ಲೆಗಳಲ್ಲಿ ಇದನ್ನು ಮದುವೆಗಳಲ್ಲಿ ಶುಭಪ್ರದವಾದುದಾಗಿ ವಿನಿಯೋಗಿಸುವ ವ್ಯವಹಾರವಿದೆ. ಅಷ್ಟೇ ಅಲ್ಲದೆ ವಿಶಾಕ ದಡದಿಂದ ವರ್ಷಗಲ ಕೆಳಗೆ ಮಾರಿಷನ್ ದ್ವೀಪಗಳಿಗೆ ತೆಲುಗರು ಹೋಗಿ ನೆಲೆನಿಂತರು. ಅಲ್ಲಿ ಸಹ ನೇರಳೆ ಗಿಡವನ್ನು ಮದುವೆಯಲ್ಲಿ ನೆಡುವ ಆಚಾರವಿದೆ.

೨. ಹೆಣ್ಣು ಮಕ್ಕಳು ರಜಸ್ವಲೆಯಾದ ಸಂದರ್ಭದಲ್ಲಿ ಸಹಾ ಅರಿಸಿನ ಕುಟ್ಟುತ್ತಾರೆ. ಕೆಲವು ಕಡೆ ಧಾನ್ಯ ಗುಡ್ಡೆ ಹಾಕಿದರೆ, ಕೆಲವು ಕಡೆ ಬೆಲ್ಲ, ಎಳ್ಳು ಕಲೆಸಿ ಚಿಗಳಿ ಅನ್ನುವ ಪದಾರ್ಥ ಕುಟ್ಟಿ ಎಲ್ಲರಿಗೂ ಹಂಚುತ್ತಾರೆ. ಆ ಸಂದರ್ಭದಲ್ಲೂ ಸುವ್ವಿ ಎನ್ನುವ ಪುನರುಕ್ತಿನೊಂದಿಗೆ ಜಂಬು ನೇರಳೆ ಪನರುಕ್ತಿ ಸಹಾ ಕೇಳಿಸುತ್ತದೆ.

“ವೆಲದಿ ರುಕ್ಮಿಣಿ ಸಮರ್ತ ವೇಡುಕಲಾಯೆ ಅಲ್ಲೋನೇರೇಡಲ್ಲೋ…..”

ಎಂಬ ಹಾಡು – ಇದು ಪೂರ್ತಿಯಾಗಿ ನನಗೆ ಸಿಗಲಿಲ್ಲವಾದರೂ, ನಿಧಾನವಾಗಿ ಇಂತಹ ಹಾಡುಗಳನ್ನು ಸಂಗ್ರಹಿಸುವುದು ಕಷ್ಟವಾದ ಕೆಲಸವಲ್ಲ.

ಜನ ವ್ಯವಹಾರಗಳಲ್ಲಿ, ಬೇಗ ರಜಸ್ವಲೆಯಾದಾಗ ಮಕ್ಕಳಿಗೆ ಜಂಬು ನೇರಳೆ ಹಣ್ಣು ತಿನ್ನಿಸುವ ರೂಢಿ ಇದೆ. ಆ ಹಣ್ಣಿನ ಬಗ್ಗೆ ಅನುರಾಗಕ್ಕೂ, ರಜಸ್ಸಿಗೂ ಮಧ್ಯ ಜಾನಪದನು ಕಟ್ಟಿಕೊಂಡ ಸಂಬಂಧದಿಂದಲಾದರೂ, ಈ ಹಣ್ಣುಗಳಿಗೆ ಪ್ರಾಮುಖ್ಯ ಇಂಥ ಸಂದರ್ಭದಲ್ಲಿ ಬಂದಿರಬಹುದು. ಇಲ್ಲವೇ ನಿಜವಾಗಿಯೂ ನೇರಳೆ ಹಣ್ಣಿಗೆ ರಜಸ್ರಾವಕ್ಕೆ ವೈದ್ಯ ವಿಜ್ಞಾನದಲ್ಲಿ ಸಂಬಂಧ ಇರಬಹುದು. ಒಟ್ಟಿನಲ್ಲಿ ರಜಸ್ವಲೆಯಾದ ಸಂದರ್ಭದಲ್ಲಿ ಹಾಡುವ ಕುಟ್ಟುವ ಹಾಡುಗಳಿಗೆ ಈ ಪುನರುಕ್ತಿ ಬಳಸುವುದು ಸಜಂಜಸವೇ ಆಗಿದೆ.

೩. ವ್ಯವಸಾಯದ ಶ್ರಮ ನೀಗಿಸಿಕೊಳ್ಳಲು ಇದನ್ನು ಹಾಡುವರು. ಆಗ ಬಳಸುವ ಈ ಅಲ್ಲೋನೇರೇಡು ಪದ ಮೊದಲಿನಿಂದ ಕೊನೆಯವರೆಗೆ ಉತ್ತುಬಿತ್ತು ನೀರನ್ನು ಕಟ್ಟಿ, ಗಿಡನೆಟ್ಟು, ಅದು ಪಕ್ವಗೊಂಡು ಫಲಿಸಿ ಕುಪ್ಪೆಹುಯ್ದು, ಉಗ್ರಾಣ ತುಂಬಿಸುವವರೆಗೆ ಇರುವ ವ್ಯಾವಸಾಯಿಕ ಕ್ರಿಯೆಗಳನ್ನು ವಿವರಿಸುವ ಹಾಗೆ ಇರುತ್ತದೆ.

೪. ಕೆಲವು ಶ್ರಾಮಿಕ ಗೇಯಗಳಲ್ಲಿ ಈ ಪನರುಕ್ತಿ ಹೊಂದಿದ ಹಾಡುಗಳಲ್ಲಿ ನೇರಳೆ ಗಿಡದ ವಿವಿಧ ಭಾಗಗಳನ್ನು ಸ್ತ್ರೀ ಶರೀರಾಂಗಗಳಿಗೆ ಹೋಲಿಸುವುದೂ ಕಾಣಿಸುತ್ತದೆ.

ನೇರಳೆ ಗಿಡದ ಸುತ್ತಲು ಹೆಣೆದಿರುವ ಪುರಾಗಾಥೆ(Myth) ಸ್ವರೂಪ ಚಿತ್ರಗಳಲ್ಲಿ ಇದೆ. ರಕ್ತಕ್ಕೆ ಅದ್ಭುತವಾದ ಸ್ಥಾನ ನೀಡಲಾಗಿದೆ. ಹೃದಯ, ಪಿತ್ಥಕೋಶ ಹೇಗೆ ಜೀವ ವಾಹಕಗಳಾಗಿ ಪ್ರಧಾನವೋ ಹಾಗೆ ರಕ್ತವೂ ಅಷ್ಟೆ! ಆದ್ದರಿಂದ ಮಾನವಾತೀತ ಶಕ್ತಿಗಳನ್ನು ಆರಾಧಿಸುವಾಗ ಜೀವವಾಹಕವಾದ ರಕ್ತವನ್ನು ಚೆಲ್ಲುವುದನ್ನು ಪ್ರಧಾನ ಕ್ರಿಯೆಯಾಗಿ ಆದಿ ಮಾನವರು ಭಾವಿಸುತ್ತಿದ್ದರು. ಆ ವಿಧವಾಗಿ ರಕ್ತದ ಮೇಲೆ ಅಂದಿನ ಮಾನವರಿಗೆ ಭಯದೊಂದಿಗೆ ಗೌರವ ಸಹಾ ಇತ್ತು.

ನೇರಳೆ ಕಾಯಿ ರೂಪದಲ್ಲಿ ಇದ್ದಾಗ ಹಸಿರು ಬಣ್ಣದಲ್ಲಿ ಇದ್ದು, ಪಕ್ವದಶೆಯಲ್ಲಿ ರೂಪುಗೊಳ್ಳುತ್ತಿರುವಂತೆ ಬದಲಾಯಿಸುತ್ತಾ ಕೊನೆಗೆ ಕೆಂಪು ವರ್ಣದಿಂದ ಕೂಡಿದ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಸಂಕ್ರಮಿಸುವ ಗಾಢ ರಕ್ತವರ್ಣವನ್ನು ಕುರಿತು ಕಥೆಗಳು ಹೆಣೆಯಲ್ಪಟ್ಟಿವೆ. ರಕ್ತದೊಂದಿಗೆ ನೆನೆಯುವ ಕಾರಣದಿಂದ ಒಂದು ವಸ್ತು ಬಣ್ಣ ಬದಲಿಸುವುದೆನ್ನುವುದು ಜನಪದ ಕಥೆಗಳಲ್ಲಿ ಕಾಣಿಸುವ ನಮೂನೆಗಳಲ್ಲಿ ಒಂದು – ಇದಕ್ಕೆ ಒಂದೆರಡು ಕಥೆಗಳನ್ನು ವಿವರಿಸುವುದು ಅಗತ್ಯ.

೧) ಪ್ರಸ್ತುತ ಪ್ರಕಾಶಂ ಜಿಲ್ಲೆಯ ಪೊದಿಲಿ ಗ್ರಾಮದಲ್ಲಿ ಒಂದು ಕಥೆಯಿದೆ. ಅಲ್ಲಿ ಇರುವ ಒಂದು ಹುಣಸೆ ಮರಕ್ಕೆ ಕೆಂಪು ಕಾಯಿಗಳು ಬರುತ್ತವೆ. ಅದಕ್ಕೆ ಒಂದು ಕಥೆ ಹೇಳುತ್ತಾರೆ. ಪೊದಿಲಮ್ಮ ಅನ್ನವ ಸ್ತ್ರೀಯನ್ನು ಅಣ್ಣಂದಿರು ಅನುಮಾನಿಸಿ, ತಮಗೆ ಅನ್ನವನ್ನು ತಂದ ತಂಗಿಯನ್ನು ಕಡಿವಾಣ ಹಾಕಿ ಎಳೆದು, ಎತ್ತುಗಳ ಕೈಯಲ್ಲಿ ತುಳಿಸಿಬಿಡುತ್ತಾರೆ. ಆಗ ಆಕೆಯ ರಕ್ತ ಚೆಲ್ಲಿ ಅಲ್ಲಿಯೇ ಇದ್ದ ಹುಣಸೆ ಮರದ ಮೇಲೆ ಬಿದ್ದು ಬಿಡುತ್ತದೆ. ಮಾಮೂಲಾಗಿ ಇದ್ದ ಹುಣಿಸೆ ಕಾಯಿ ಅಂದಿನಿಂದ ಕೆಂಪಾಗಿ ಮಾರ್ಪಟ್ಟು ಹೋದವು.

೨) ಆ ಗ್ರಾಮದಲ್ಲೇ ನಿಮ್ಮವ್ವ ಎಂಬ ಶಿವಭಕ್ತೆ ಇದ್ದಳು. ಆಕೆ ಅಡುಗೆ ಮುಗಿಸಿ ಮಗನಿಗೆ ಅದನ್ನು ನೋಡಿಕೊಳ್ಳಲು ತಿಳಿಸಿ ನೀರಿಗೆ ಹೋದಳು. ಚಿಕ ಮಗುವಾದ ಆ ಹುಡುಗನ ಸೋಮಾರಿತನದಿಂದ ನಾಯಿ ಅಡುಗೆಯನ್ನು ಎಂಜಲು ಮಾಡಿತು. ಹೊಳೆಯಿಂದ ಬಂದು ನಡೆದ ಸಂಗತಿ ನೋಡಿದ ತಾಯಿ ಕೋಪ ತಡೆಯಲಾರದೆ ಮಗನ ತಲೆಯನ್ನು ಒರಟು ಕೋಲಿನಿಂದ ಹೊಡೆದು ಹಾಕಿದಳು. ತಲೆಯ ಮೇಲಿನಿಂದ ತೊಟ್ಟಿಟ್ಟ ರಕ್ತ ಆ ಹುಡುಗನ ಹಲ್ಲುಗಳಿಗೆ ವ್ಯಾಪಿಸಿತು. ಆದ್ದರಿಂದಲೇ ಆ ಊರಿನಲ್ಲಿ ಹುಟ್ಟಿದ ಮಾನವರ ದಂತಗಳು ಕೆಂಪಾಗಿ ಇರುವುದು ನಡೆದು ನಡೆದು ಬಂದಿದೆ.

ನೇರಳೆ ಮರಕ್ಕೆ ಸಂಬಂಧಿಸಿದ ಇಂಥ ಕಥೆಗಳು ಶ್ರೀಕಾಕುಳ, ವಿಜಯನಗರ ಪ್ರಾಂತ್ಯದಲ್ಲಿ ಇವೆ. ಅಷ್ಟೇ ಅಲ್ಲದೆ ಶ್ರೀಕಾಕುಳ ಜಿಲ್ಲೆಗೆ ಸರಹದ್ದಾರ ಒರಿಸ್ಸಾ ಪ್ರಾಂತ್ಯದಲ್ಲಿ ಸದಾ ಈ ಕಥೆ ವ್ಯಾಪಕವಾಗಿದೆ. ಶ್ರೀ ಕಾಕುಳ ಪ್ರಾಂತ್ಯದ್ಲಲಿ ಊರುಗಳಲ್ಲಿ ತಿರುಗಿದಾಗ ಒಂದು ವೃದ್ಧ ಜಾನಪದ ವ್ಯಕ್ತಿ ಕಥೆಯನ್ನು ನನಗೆ ಹೇಳಿದ. ಒಂದು ಹೆಣ್ಣು ಗಂಡು ಮದುವೆ ಮಾಡಿಕೊಳ್ಳೋಣವೆಂದುಕೊಂಡರು. ಆದರೆ ತಂದೆ ತಾಯಿ ಒಪ್ಪಲಿಲ್ಲ. ಆದ್ದರಿಂದ ಒಂದು ದಿನ ಊರಿನಲ್ಲಿರುವ ನೇರಳೆ ಮರದ ಕೆಳಗೆ ಸೇರುವುದೆಂದು ನಿರ್ಧರಿಸಿಕೊಂಡರು. ನಿರ್ಧರಿಸಿದ ಸಮಯಕ್ಕೆ ಸ್ವಲ್ಪ ಮುಂಚಿತವಾಗಿಯೇ ಹುಡುಗ ಮರದ ಬಳಿಗೆ ಬಂದು ಸೇರಿದ. ಆ ಮರದ ಹತ್ತಿರ ಒಂದು ಚಿಕ್ಕ ಹೊಳೆ ಇತ್ತು. ಹೊಳೆಯಲ್ಲಿ ನೀರು ಕುಡಿಯಲು ಬಂದ ಹುಲಿ, ಹುಡುಗನ ಮೇಲೆ ಜಿಗಿಯಿತು. ಹುಡುಗ ತಪ್ಪಿಸಿಕೊಳ್ಳುವ ದಾವಂತದಲ್ಲಿ ತನ್ನ ಮೇಲಿರುವ ಶಲ್ಯವನ್ನು ಕಳಚಿಬಿಟ್ಟ. ಹುಲಿ ಅದನ್ನು ಚಿಂದಿಗೊಳಿಸಿ ಹೊರಟು ಹೋಯಿತು. ಅನಂತರ ಸ್ವಲ್ಪ ಸಮಯಕ್ಕೆ ನಿರ್ದಿಷ್ಟ ಸ್ಥಳಕ್ಕೆ ಬಂದ ಹುಡುಗಿ ಹೆಜ್ಜೆ ಹೆಜ್ಜೆಗೂ ಹರಿದು ಹೋದ ಶಲ್ಯವನ್ನು ಕಂಡು ತನ್ನ ಪ್ರೀಯನನ್ನು ಹುಲಿ ತಿಂದಿತೆಂದು ಭಾವಿಸಿ, ಆ ಮರಕ್ಕೆ ತನ್ನ ತಲೆಯನ್ನು ಹೊಡೆದುಕೊಂಡು ಪ್ರಾಣತ್ಯಾಗ ಮಾಡಿದಳು. ಸ್ವಲ್ಪ ಸಮಯದ ಬಳಿಕ ಹುಡುಗ ಅಲ್ಲಿಗೆ ಬಂದು ಸತ್ತು ಹೋದ ಪ್ರಿಯತಮೆಯನ್ನು ಕಂಡು, ಸೊಂಟದಲ್ಲಿ ಇದ್ದ ಕತ್ತಿಯನ್ನು ತೆಗೆದು ಎದೆಯನ್ನು ಸೀಳಿಕೊಂಡು ತಾನೂ ಸತ್ತ. ಅವರಿಬ್ಬರ ರಕ್ತದಿಂದ ನೆನೆದ ಗಿಡ ಅಂದಿನಿಂದ ಕೆಂಪು ಹಣ್ಣುಗಳನ್ನು ಬಿಡುತ್ತಿದೆ.

ಮೆಸಪಟೋಮಿಯಗೆ ಸಂಬಂಧಿಸಿದ ಪುರಾಣಕಥೆಯಲ್ಲಿ ಇಂತಹ ಕಥೆಯೇ ಇದೆ. ಬ್ಯಾಬಿಲೋನಿಯಾದಲ್ಲಿ ಅಕ್ಕಪಕ್ಕದ ಯುವತೀ ಯುವಕರು ಪ್ಯಾರಾಮೆನ್(Pyramen),ಥಿಸ್ಸೆಲು ಸರಿಯಾಗಿ ಮೇಲಿನ ಕಥೆಯಂತೆ ಬಿಳಿಯ ಮಲ್ಬರಿ ಮರದ ಮೇಲೆ ಪ್ರಾಣ ಬಿಡುತ್ತಾರೆ. ಆದರೆ ಇಲ್ಲಿ ಮೊದಲು ಪ್ಯಾರಾಮೆನ್ ಸಾಯುತ್ತಾನೆ. ಆಗ ಥಿಸ್ಸೆಲು ವಿವಾಹಕ್ಕೆ ಅಂಗೀಕರಿಸಿದ ತಂದೆ ತಾಯಿಗಳು ಸತ್ತ ಅನಂತರವಾದರೂ ನಾವು ಒಂದಾಗಿ ಇರುವುದಕ್ಕೆ ಒಪ್ಪಿಕೊಳ್ಳಬೇಕು. ನಮ್ಮ ರಕ್ತವನ್ನು ಹಣ್ಣುಗಳಿಗೆ ಮುಟ್ಟಿಸಬೇಕು. ಇಂದಿನಿಂದ ಮಲ್ಬರಿ ಹಣ್ಣು ನಮ್ಮಿಬ್ಬರ ಪ್ರೇಮದ ಗುರುತಾಗಿ ಕೆಂಪಾಗಿ ಇಂದಿನಿಂದ ಮಲ್ಬರಿ ಹಣ್ಣು ನಿಮ್ಮಿಬ್ಬರ ಪ್ರೇಮದ ಗುರುತಾಗಿ ಕೆಂಪಾಗಿ ಇರಬೇಕು ಎಂದು ಕತ್ತಿಯಿಂದ ಚುಚ್ಚಿಕೊಂಡು ಸತ್ತುಹೋದಳು. ಈ ಕಥೆ ಪ್ರಪಂಚ ಸಾಹಿತ್ಯದಲ್ಲಿ ರೋಮಿಯೋ ಜೂಲಿಯಟ್, ಷಿರೀಸ್ ಫರ್ವಾದ್, ಹೀರ್‌ರಾಂಜಾ, ಲೈಲಾ ಮಜ್ನೂ, ಬೈಜುಬಾವರಾದಂತಹ ಕತೆಗಳೊಂದಿಗೆ ಸ್ಥಾನ ಸಂಪಾದಿಸಿಕೊಂಡಿದೆ.

ಇಷ್ಟಕ್ಕೂ ಇಲ್ಲಿ ಭಾರತದೇಶದ ನೇರಳೆ ಮರಕ್ಕೂ ವಿದೇಶದ ಮಲ್ಬರೀ ಮರಕ್ಕೂ ಅನುಸಂಧಾನಗೊಳಿಸಿ ಒಂದು ರೀತಿಯಲ್ಲಿ ಕಥೆಯನ್ನು ರೂಪಗೊಳಿಸಿರುವುದು ವಿಸ್ಮಯಕರವಾದ ವಿಷಯ. ಇದನ್ನು ಅನುಸರಿಸಿ ಜಿಜ್ಞಾಸೆಯುಳ್ಳವರು ಭಾರತ ದೇಶಕ್ಕೆ ಏರ್ಪಟ್ಟಿರುವ ಅನುಬಂಧ ಎಂತಹುದು ಎಂದು ತಿಳಿದುಕೊಳ್ಳಲು ಪ್ರಯತ್ನ ಮಾಡಿದರೂ ಮಾಡಬಹುದು.

– ಎನ್.ಕೆ.ಕೆ. ಅನುವಾದ ಎಸ್.ಎಲ್.ಡಿ.

ಅಳಿಗುಳಿ ಮಣೆ ಇದೊಂದು ಪ್ರಸಿದ್ಧ ಜನಪದ ಆಟ. ಇದನ್ನು ಚೆನ್ನಿಮಣೆ ಎಂದು ಹೇಳುತ್ತಾರೆ. ಇದೊಂದು ಮಣೆಯಾಗಿದ್ದು, ಈ ಮಣೆಯ ಅರ್ಧ ಅಡಿ ಅಗಲ ಇದ್ದು, ಸುಮಾರು ಒಂದೂವರೆ ಅಡಿ ಉದ್ದವಿರುತ್ತದೆ. ಮಣೆಯ ಎರಡು ಬದಿಗಳಲ್ಲೂ ಸಾಲಾಗಿ ಏಳೇಳು ಗುಳಿಗಳಿರುತ್ತವೆ. ಪ್ರತಿಯೊಂದು ಗುಳಿಯ ಮಧ್ಯದಲ್ಲಿ ಒಂದು ಇಂಚಿನ ಅಂತರವಿರುತ್ತದೆ. ಮಣೆಯ ಎಡ ಮತ್ತು ಬಲಭಾಗದಲ್ಲಿ ಗೆದ್ದ ಕಾಯಿಗಳನ್ನು ಹಾಕಿಡಲು ಅಂಗೈ ಅಗಲದ ದೋಣಿ ಅಕಾರದ ಎರಡು ಪುಟ್ಟ ಪುಟ್ಟ ಕೋಣೆಗಳಿರುತ್ತವೆ. ಆಟ ಮುಗಿದ ಮೇಲೆ ಈ ಮಣೆಯನ್ನು ಮಡಿಚಿಟ್ಟುಕೊಳ್ಳಬಹುದು. ಮಣೆ ತಯಾರಿಸುವವರ ಕಲಾಭಿರುಚಿಗೆ ತಕ್ಕಂತೆ ಇದನ್ನು ವಿವಿಧ ರೂಪದಲ್ಲಿ ಅಲಂಕರಿಸುವುದೂ ಉಂಟು. ಇದು ಮೀನಿನಾಕಾರದಲ್ಲೋ ಮೊಸಳೆಯಾಕಾರದಲ್ಲೋ ಅಥವಾ ಬೇರೆ ಇತರ ಯಾವುದೇ ಆಕಾರದಲ್ಲಾದರೂ ಇರಬಹುದು. ಪೆಟ್ಟಿಗೆಯಂತೆ ಬೀಗ – ಬಾಗಿಲುಗಳಿರುವ ಈ ಮಣೆಗಳನ್ನು ಮತ್ಸ್ಯ ಮಣೆ, ದೋಣಿ ಮಣೆ, ನವಿಲು/ಮಯೂರ ಮಣೆ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಕೆಲಮೊಮ್ಮೆ ಮಣೆಯಿಲ್ಲದಿದ್ದಲ್ಲಿ ನೆಲದಲ್ಲೇ ಎದರು ಬದುರು ಏಳೇಳು ಗುಳಿಗಳನ್ನು ಮಾಡಿಕೊಂಡು ಆಡುವುದೂ ಉಂಟು.

ಈ ಗುಳಿಗಳೊಳಗೆ ಪ್ರತಿಯೊಂದರ‍ಲ್ಲಿ ಐದೈದು ಕಾಯಿಗಳನ್ನು ಹಾಕಬೇಕು. ಹುಣಸೇಬೀಜ, ಸಣ್ಣ ಕಲ್ಲುಗಳು, ಅಂಟುವಾಳ ಕಾಯಿ, ಕವಡೆ ಮೊದಲಾದವುಗಳನ್ನು ಕಾಯಿಗಳಾಗಿ ಉಪಯೋಗಿಸುತ್ತಾರೆ. ಪ್ರತಿ ಮನೆಗೆ ಐದು ಕಾಯಿಗಳಂತೆ ಎಪ್ಪತ್ತು ಕಾಯಿಗಳಿರುತ್ತವೆ. ಇಲ್ಲದಿದ್ದಲ್ಲಿ ಆಡಲು ಸಾಧ್ಯವಿಲ್ಲ. ತುಳು ನಾಡಿನಲ್ಲಿ ಪ್ರತಿ ಮನೆಗೆ ನಾಲ್ಕು ಕಾಯಿಗಳನ್ನು ಹಾಕಿ ಆಡುವ ರೂಢಿಯೂ ಇದೆ. ಹಾಗೆಯೇ ಎಂಟು ಅಥವಾ ಹನ್ನೆರಡು ಕಾಯಿಗಳನ್ನು ಹಾಕು ಆಡುವುದುಂಟು.

ಒಂದು ಗುಳಿಯಲ್ಲಿರುವ ಕಾಯಿಗಳನ್ನು ತೆಗೆದು ಪಕ್ಕದ ಗುಳಿಯಿಂದ ಆರಂಭಿಸಿ ಪ್ರದಕ್ಷಿಣಾಕಾರದಲ್ಲಿ ಪ್ರತಿ ಮನೆಗೂ ಒಂದೊಂದು ಕಾಯಿಯನ್ನು ಹಾಕುತ್ತಾ ಬರಬೇಕು. ಈ ಚೆನ್ನಿ ಮಣೆಯಾಟದಲ್ಲಿ ಹಲವು ಪ್ರಕಾರಗಳಿವೆ. ಈ ಆಟ ಕೇವಲ ಮನರಂಜನೆ ಅಥವಾ ಸಮಯ ಕಳೆಯುವುದಕ್ಕಾಗಿ ಮಾತ್ರ ಇರದೆ, ಆಡುಗರ ಜಾಣ್ಮೆಯನ್ನು ಪರೀಕ್ಷಿಸುವಂತೆ ಇರುತ್ತದೆ. ಈ ಆಟಗಳು ಸ್ಪರ್ಧಾತ್ಮಕವಾಗಿರುವುದರಿಂದ ಆಡುಗರಲ್ಲಿ ಉತ್ಸಾಹವನ್ನು ತುಂಬುತ್ತವೆ. ಈ ಆಟದ ಕೆಲವು ವಿಧಗಳು ಹೀಗಿವೆ: ೧. ಅರಸನಾಟ, ೨.ಒತ್ತೆಯಾಟ, ೩.ಮಠದಾಟ, ೪. ಜೋಡು ಜುಗದಾಟ, ೫.ಮೂಲೆಮನೆಯಾಟ, ೬.ಚೆನ್ನೆಯಾಟ, ೭. ಕರುಬರುವ ಆಟ, ೮. ಹತ್ತಿ ಬೀಸೆ ಮುಂತಾದವು.

ಅರಸನಾಟ: ಈ ಆಟವನ್ನು ಮೂವರು ಸೇರಿ ಆಡುವರು. ಒಬ್ಬ ಅರಸ. ಇನ್ನೊಬ್ಬ ಪ್ರಧಾನಿ ಮೂರನೆಯವನು ಸೇನಾಧಿಪತಿ. ಈ ಮೂವರೊಳಗೆ ಮಣೆಯೊಳಗಿರುವ ಹದಿನಾಲ್ಕು ಗುಳಿಗಳು ಅಥವಾ ಮನೆಗಳು ಹಂಚಿಹೋಗುತ್ತವೆ. ಮಣೆಯ ನಡುವೆ ಎದುರು ಬದುರು ಇರುವ ಮೂರು ಮೂರು (ಒಟ್ಟು ಆರು) ಮನೆಗಳು ರಾಜನದು, ಅವನ ಬಲಬದಿಯ ನಾಲ್ಕು ಮನೆಗಳು ಪ್ರಧಾನಿಯವು, ಎಡ ಬದಿಯಲ್ಲಿರುವ ನಾಲ್ಕು ಮನೆಗಳು ಸೇನಾಧಿಪತಿಯವು. ಮೊದಲು ಆಟವನ್ನು ಪ್ರಾರಂಭಿಸಬೇಕಾದವನು ಅರಸ. ಅದರಂತೆ ಆತ ತನ್ನ ಒಂದು ಮನೆಯಿಂದ ಕಾಯಿಯನ್ನು ತೆಗೆದುಕೊಂಡು ಪ್ರತಿ ಮನೆಗೂ ಒಂದೊಂದು ಹಾಕುತ್ತಾ ಹೋಗುತ್ತಾನೆ. ತನ್ನ ಕೈಯಲ್ಲಿದ್ದ ಕಾಯಿ ಯಾವ ಮನೆಯಲ್ಲಿ ಖಾಲಿಯಾಗುತ್ತದೋ ಅದರ ಮುಂದಿನ ಮನೆಯಲ್ಲಿರುವ ಕಾಯಿಗಳನ್ನು ತೆಗೆದುಕೊಂಡು ಒಮ್ಮೆ ಖಾಲಿಯಾಗಿದ್ದ ಮನೆ ಮುಂದಿನ ಸುತ್ತಿನಲ್ಲಿ ಒಂದು ಕಾಯನ್ನು ಪಡೆದುಕೊಳ್ಳತ್ತದೆ. ಹೀಗೆ ಅದರೊಳಗೆ ನಾಲ್ಕು ಕಾಳುಗಳಾದಾಗ ಅದನ್ನು ‘ಕರು’ ಎನ್ನುತ್ತಾರೆ. ತುಳುವಿನಲ್ಲಿ ‘ಬುಲ್’ ಎನ್ನುವರು. ಯಾರ ಮನೆಯಲ್ಲಿ ‘ಕರು’ ಬೀಳುತ್ತದೋ ಅದು ಅವರ ಪಾಲಿಗೆ ಸೇರುತ್ತದೆ. ಅದು ಅವರು ಗೆದ್ದ ಕಾಯಿ. ತುಳು ನಾಡಿನಲ್ಲಿ ಪ್ರಧಾನಿ ಹಾಗೂ ಸೇನಾಧಿಪತಿ ರಾಜನಿಗೆ ಸುಂಕ ಕೊಡುವ ಪದ್ಧತಿಯೂ ಇದೆ. ಕೈಲಿರುವ ಕಾಯಿಗಳು ಖಾಲಿಯಾದ ಮೇಲೆ, ಪಕ್ಕದ ಮನೆಯಿಂದ ಕಾಯಿಗಳನ್ನು ತೆಗೆದುಕೊಳ್ಳಲು, ಎಂದರೆ ಅದು ಖಾಲಿಯಾಗಿದ್ದರೆ ಅಲ್ಲಿಗೆ ಅವನ ಆಟ ಆ ಸ್ತುತಿಯಲ್ಲಿ ಮುಗಿದಂತೆ ಮತ್ತೆ ಅವನು ಮುಂದಿನವನು ಆಟವನ್ನು ಮುಂದುವರಿಸುತ್ತಾನೆ.

ಹೀಗೆ ಮಣೆಯಲ್ಲಿರುವ ಎಲ್ಲ ಕಾಯಿಗಳು ಖಾಲಿಯಾದ ಮೇಲೆ ಪ್ರತಿಯೊಬ್ಬರು ತಾವು ಗೆದ್ದ ಕಾಯಿಗಳನ್ನು ತಮ್ಮ ಪಾಲಿನ ಮನೆಯಲ್ಲಿ ಐದೈದರಂತೆ ಹಾಕಿ ಪುನಃ ಆಟ ಪ್ರಾರಂಭಿಸುತ್ತಾರೆ. ತಮ್ಮ ಯಾವುದೇ ಮನೆಯೊಳಗೆ ಐದು ಕಾಯಿಗಳನ್ನು ಹಾಕಲಾಗದಿದ್ದರೆ ಆ ಮನೆಯನ್ನು ಖಾಲಿಯಾಗಿಯೇ ಉಳಿಸಿಕೊಳ್ಳಬೇಕು. ಮುಂದಿನ ಆಟ ಪ್ರಾರಂಭವಾದ ಮೇಲೆ ಹೀಗೆ ಖಾಲಿಯಾಗಿರುವ ಮನೆಯನ್ನು ಬಿಟ್ಟು ಮುಂದಿನ ಮನೆಯಿಂದ ಹಾಕಿಕೊಂಡು ಹೋಗುತ್ತಾರೆ. ಹೀಗೆ ಆಟ ಮುಂದುವರಿಯುತ್ತದೆ. ಕೈ ಬರಿದಾದರೂ ಸೋತಂತೆ. ಹೆಚ್ಚು ಕಾಯಿಗಳು ಕಡೆಯಲ್ಲಿ ಯಾರ ಕೈಯಲ್ಲಿ ಉಳಿಯುತ್ತದೋ ಅವನು ರಾಜನಾಗುತ್ತಾನೆ.

ಒತ್ತೆಯಾಟ: ಈ ಆಟವನ್ನು ಇಬ್ಬರು ಸೇರಿ ಆಡುತ್ತಾರೆ. ಒಂದೊಂದು ಸಾಲಿನ ಪ್ರತಿ ಮನೆಗಳಲ್ಲಿ ಇಬ್ಬರಿಗೂ ಹಕ್ಕಿರುತ್ತದೆ. ಈ ಆಟ ಅಳಗುಳಿಮನೆಯ ಇತರ ಆಟಗಳಿಗೆ ಹೋಲಿಸಿದಲ್ಲಿ ಅತಿ ಸುಲಭವಾದುದು ಇದರಲ್ಲಿಯೂ ಆಟದ ಮಧ್ಯೆ ‘ಕರು’ ಸಿಕ್ಕಿರುತ್ತದೆ. ಇಬ್ಬರು ಪರಸ್ಪರ ಎದುರು ಬದುರು ಕೂತು ಆಡುತ್ತಾರೆ. ತಮ್ಮ ಮುಂದಿರುವ ಸಾಲಿನ ಏಳೂ ಮನೆಗಳು ಇವರಿಗೇ ಸೇರಿದ್ದು. ಈ ಆಟ ಹೆಣ್ಣು ಮಕ್ಕಳಲ್ಲಿ ಹೆಚ್ಚು ಪ್ರಸಿದ್ಧ. ಹಳ್ಳಿಯ ಹೆಂಗಸರಷ್ಟೇ ಅಲ್ಲದೆ, ನಗರಗಳಲ್ಲಿ ವಾಸಿಸುವ ಕೆಲವರೂ ಇದನ್ನು ಆಡುವುದುಂಟು. ಈ ಆಟದ ನಿಯಮವೂ ಅರಸನಾಟನಂತೆಯೇ ಸಾಗುತ್ತದೆ. ಅದಕ್ಕೆ ಇರುವ ವ್ಯತ್ಯಾಸ ಮನೆಗಳ ಮೇಲಿರುವ ಹಕ್ಕು ಬದಲಾಗುವುದಷ್ಟೆ.

ಮಠದಾಟ: ಈ ಆಟವನ್ನು ಇಬ್ಬರು ಅಥವಾ ನಾಲ್ವರು ಸೇರಿ ಆಡಬಹುದು. ಎರಡೂ ಬದಿಗಳಲ್ಲಿರುವ ಮಧ್ಯದ ಮನೆಯನ್ನು ಮಠದ ಮನೆ ಎಂದು ಕರೆಯುವರು. ಈ ಮನೆಯಲ್ಲಿ ಕಾಯಿಗಳನ್ನು ಹಾಕಬೇಕೇ ಹೊರತು ತೆಗೆದುಕೊಳ್ಳುವಂತಿಲ್ಲ. ಪ್ರತಿ ಮನೆಗೂ ಕಾಯಿಗಳನ್ನು ಹಾಕುತ್ತಾ ಹೋಗುವಾಗ ಎಲ್ಲಿಗೆ ಕೈಯಲ್ಲಿ ಕಾಯಿಗಳು ಮುಗಿಯುತ್ತವೋ, ಅದರ ಪಕ್ಕದ ಮನೆ ಖಾಲಿಯಿದ್ದಲ್ಲಿ, ಅದರ ಮುಂದಿನ ಮನೆಯ ಕಾಯಿಗಳು ಅವನ ಪಾಲಿಗೆ ಸೇರುತ್ತವೆ. ಅಲ್ಲಿಗೆ ಆ ಸ್ತುತಿಯಲ್ಲಿ ಅವನ ಆಟ ಮುಗಿದಂತೆ. ಪುನಃ ಮುಂದಿನವರು ಆರಂಭಿಸುತ್ತಾನೆ. ಹೀಗೆ ಮಠದಲ್ಲಿರುವ ಕಾಯಿಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ಆ ಮನೆಯಿಂದ ಕಾಯಿಗಳನ್ನು ತೆಗೆದುಕೊಂಡು ಆಟವನ್ನು ಮುಂದುವರಿಸುವಂತಿಲ್ಲ. ಆದರೆ ಆ ಮನೆಯ ಕಾಯಿಗಳನ್ನು ತಮ್ಮ ವಶಪಡಿಸಿಕೊಳ್ಳಬಹುದು.

ಇದೇ ರೀತಿ ಅಳಗುಳಿಮಣೆಯನ್ನು ವಿವಿಧ ರೀತಿ ಆಡುತ್ತಾರೆ. ಇದು ಕರ್ನಾಟಕದಲ್ಲಿ, ಆಂಧ್ರದಲ್ಲಿ ಮತ್ತಿತರ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ.