ಅಡ್ಡಹೆಸರು ವ್ಯಕ್ತಿಗಳಿಗೆ ಸಂಬಂಧಿಸಿದ ವೈಶಿಷ್ಟ್ಯವನ್ನು ಗುರುತಿಸಿ, ತಮಾಷೆಗೆ, ಇಲ್ಲವೆ ಕುಚೋದ್ಯಕ್ಕೆ ಇಡುವ ಹೆಸರು. ಇಲ್ಲಿ ವ್ಯಕ್ತಿಯ ರೂಪ, ಗುಣ, ನಡವಳಿಕೆ, ಸ್ವಭಾವ, ಕ್ರಿಯೆಗಳು ಮಹತ್ತ್ವಪಾತ್ರ ವಹಿಸುತ್ತವೆ. ಸಾಂಪ್ರದಾಯಿಕವಾಗಿ ನಾಮಕರಣ ಮಾಡಿದ ಹೆಸರಿಗೆ ಬದಲಾಗಿ ಅಡ್ಡ ಹೆಸರು ಕರೆಯುವುದುಂಟು. ಸಮಾಜದಲ್ಲಿ ವ್ಯಕ್ತಿಯನ್ನು ಬಹಳ ಬೇಗ ಗುರುತಿಸಿ ಕರೆಯುವ ಮತ್ತು ಅವನನ್ನು ಜನಪ್ರಿಯಗೊಳಿಸುವ ಈ ಅಡ್ಡ ಹೆಸರು ವ್ಯಕ್ತಿಯನ್ನು ಸಮೂಹದಿಂದ ಪ್ರತ್ಯೇಕಿಸಿಕೊಡುತ್ತದೆ. ಉತ್ತರ ಕರ್ನಾಟಕದಲ್ಲಿ ಸರ್‌ನೇಮ್ (Surname) ಎಂಬುದಕ್ಕೆ ‘ಅಡ್ಡಹೆಸರು’ ಎಂಬ ಪದ ಬಳಕೆಯಾದರೆ ಅದೇ ಅಡ್ಡ ಹೆಸರು ದಕ್ಷಿಣ – ಕರ್ನಾಟಕದಲ್ಲಿ ‘ನಿಕ್‌ನೇಮ್'(Nice name) ಎಂಬಂರ್ಥದಲ್ಲಿ ಬಳಕೆಯಾಗುತ್ತದೆ. ಇದು ವ್ಯಕ್ತಿಗೆ ಮಾತ್ರ ಸೀಮಿತ. ಕನ್ನಡ ಅಡ್ಡ ಹೆಸರಿಗೆ ಇಂಗ್ಲಿಷಿನಲ್ಲಿ ‘ಸರ್‌ನೇಮ್’ ಎಂದೂ ಹಿಂದಿಯಲ್ಲಿ ‘ಉಪನಾಮ’ ಎಂದೂ ತೆಲುಗಿನಲ್ಲಿ ‘ಇಂಟಿಪೇರು’ (ಮನೆಯ ಹೆಸರು) ಎಂದೂ ಪಂಜಾಬಿನಲ್ಲಿ ‘ಪುರಕ್‌ನಾಮ’ ಎಂದು ಮಣಿಪುರಿಯಲ್ಲಿ ‘ಜುಮ್ನಾಕ್’ ಎಂದೂ ಮರಾಠಿಯಲ್ಲಿ ಆಡನಾಮ್ ಎಂದೂ ಕರೆಯುತ್ತಾರೆ.

ಕೆಲವು ವ್ಯಕ್ತಿಗಳು ಶಾರೀರಿಕವಾಗಿ ದಪ್ಪಗೆ, ಕುಳ್ಳಗೆ, ಗುಂಟಾಗಿದ್ದರೆ ಗುಂಡಣ್ಣ, ಗುಂಡ ಎಂದೂ ದೈಹಿಕ ಬಲವುಳ್ಳವನಾಗಿದ್ದರೆ ‘ಭೀಮ’ ಎಂದೂ ದೊಡ್ಡ ಹೊಟ್ಟೆಯುಳ್ಳವ ‘ಡೊಳ್ಳ’ ಎಂದೂ ಎತ್ತರವಾಗಿದ್ದು ಸ್ವಲ್ಪ ಬಾಗಿ ನಡೆದರೆ ‘ಒಂಟೆ’ ಎಂದೂ ಎತ್ತರವಾಗಿ ದಪ್ಪವಾಗಿದ್ದು ನಿಧಾನವಾಗಿ ನಡೆದರೆ, ‘ಕುಂಬಳಕಾಯಿ’, ‘ಉದ್ದಿನ ಮೂಟೆ’, ‘ಆನೆಮರಿ’ ಎಂತಲೂ ತೊದಲು ಮಾತನಾಡುವವನನ್ನು ‘ಬಿಕ್ಕು’, ‘ಬಿಕ್ಕಳ’ ಎಂದೂ ಇರುವ ದೈಹಿಕ ನ್ಯೂನತೆಯನ್ನೂ ದೊಡ್ಡದು ಮಾಡಿ ಅಡ್ಡ ಹೆಸರು ಇಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಈ ಅಡ್ಡ ಹೆಸರುಗಳೇ ನಿಜನಾಮವಾಗಿ ಶಾಶ್ವತವಾಗಿ ಉಳಿದು ಬಿಡುತ್ತದೆ. ವ್ಯಕ್ತಿಗೆ ಕಾಲು ಸೊಟ್ಟಗಿದ್ದರೆ, ಅವನು ಶಾಶ್ವತವಾಗಿ ಉಳಿದು ಬಿಡುತ್ತವೆ. ವ್ಯಕ್ತಿಗೆ ಕಾಲು ಸೊಟ್ಟಗಿದ್ದರೆ, ಅವನು ವಾಲಿ, ಬಾಗಿ ನಡೆದರೆ ಕುಂಟ, ಕುಂಟಯ್ಯ ಎಂದೂ ಊಟ ತಿಂಡಿಯನ್ನು ಮೀತಿ ಮೀರಿ ತಿನ್ನುತ್ತಿದ್ದರೆ ಅನನ್ನು ಮಹಾಭಾರತದ ಬಕಾಸುರನಿಗೆ ಹೋಲಿಸಿ, ‘ಬಕಾಸುರ’, ‘ಹೊಟ್ಟೆ ಬಾಕ’ ಎಂದೂ ವ್ಯಕ್ತಿ ದುಷ್ಟ, ಕೆಟ್ಟ ನಡವಳಿಕೆಯನ್ನು ರೂಢಿಸಿಕೊಂಡಿದ್ದರೆ, ಶಕುನಿ, ಗುಳ್ಳೆನರಿ, ರಾವಣ ಎಂದೂ ಹೆಂಗಸರ ವಿಚಾರದಲ್ಲಿ ಅಸಹ್ಯವಾಗಿ ನಡೆದುಕೊಳ್ಳುತ್ತ, ಅವರಿಗೆ ಸದಾ ದೈಹಿಕ ಹಿಂಸೆ ನೀಡುತ್ತ ಬರುವಂಥವನಿಗೆ ‘ಕೀಚಕ’ ಎಂದೂ ಕರೆಯುವುದು ವಾಡಿಕೆಯಲ್ಲಿದೆ. ಈ ಅಡ್ಡ ಹೆಸರುಗಳು ಈ ತರಹದ ಗುಣ ಸ್ವಭಾವವುಳ್ಳ ವ್ಯಕ್ತಿಗಳಿಗೆ ಮಾತ್ರ ಅನ್ವಯಿಸುತ್ತದೆ. ಎಷ್ಟೋ ಸಂದರ್ಭದಲ್ಲಿ ಇವುಗಳು ರಂಜಕವಾಗಿಯೂ ಹಾಸ್ಯಮಯವಾಗಿಯೂ, ತಮಾಷೆವಾಗಿಯೂ ಕಾಣುತ್ತದೆ. ಒಬ್ಬ ವ್ಯಕ್ತಿಗೆ ಅಡ್ಡ ಹೆಸರು ಸೇರಿತೆಂದರೇ ಅದರಿಂದ ಅವನಿಗೆ ಮುಕ್ತಿ ಇಲ್ಲ.

ಅಡ್ಡ ಹೆಸರುಗಳು ಕೇವಲ ಅಡನುಡಿಗಳಲ್ಲಿ ಮಾತ್ರ ಬಳಕೆಯಾಗದೆ ಪ್ರಾಚೀನ ಕಾವ್ಯ, ಪುರಾಣಗ್ರಂಥ, ಶಾಸನಗಳಲ್ಲಿಯೂ ಬಳಕೆಯಾಗಿವೆ. ಕುಟುಂಬಗಳ ಹೆಸರುಗಳು ಅಡ್ಡ ಹೆಸರಿನ ಪ್ರಾಚೀನತೆಯ ಕುರುಹುಗಳಾಗಿವೆ. ಪ್ರಾಚೀನ ಕರ್ನಾಟಕದಲ್ಲಿ ಗಂಗ, ಕದಂಬ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಇತ್ಯಾದಿ ಅರಸು ಮನೆತನಗಳ ಹೆಸರುಗಳುಈ ಬಗೆಯವು. ಶಾಸನಗಳಲ್ಲಿ ಬರುವ ‘ಆನೆಯ ಕೇಶಿರಾಜ’, ‘ಸೀರೆಯ ಕಾಳಿಸೆಟ್ಟಿ’ ಧನಗರಕಂಚಿಕವ್ವೆ ಇತ್ಯಾದಿ ಹೆಸರುಗಳು ಆಯಾ ಕುಟುಂಬ, ವಂಶ, ವೃತ್ತಿ, ಜಾತಿ, ಧರ್ಮಗಳ ಎಲ್ಲ ಸದಸ್ಯರನ್ನು ಮಾನಸಿಕವಾಗಿ ಬೆಸೆಯುತ್ತವೆ, ಅವರಲ್ಲಿ ಸಾಂಘಿಕ ವಾತಾವರಣ ಸೃಷ್ಟಿಸುತ್ತವೆ.

ಒಬ್ಬ ವ್ಯಕ್ತಿಯನ್ನು ನಿಖರವಾಗಿ ಗುರುತಿಸಲು ಅವನ ನಿಜನಾಮ ಅಸಮರ್ಥವಾದಾಗ ಅವನಿಗೆ ಇನ್ನೊಂದು ಹೆಸರನ್ನು ಬಳಸಲಾಗುತ್ತದೆ. ಕರ್ನಾಟಕದ್ಯಂತ ವಿಭಿನ್ನ ನೆಲೆಗಳಲ್ಲಿ ಬಳಕೆಯಾಗುತ್ತಿರುವ ಅಡ್ಡ ಹೆಸರುಗಳ ವೈವಿಧ್ಯತೆಗಳನ್ನು ಅರಿಯಲು ಗ್ರಾಮವಾಚಿ ಅಡ್ಡ ಹೆಸರುಗಳು, ವೃತ್ತಿವಾಚಿ ಅಡ್ಡ ಹೆಸರುಗಳು, ವಸ್ತುವಾಚಿ ಅಡ್ಡ ಹೆಸರುಗಳು, ವ್ಯಕ್ತಿವಾಚಿ ಅಡ್ಡ ಹೆಸರುಗಳು. ಅಣಕವಾಚಿ ಅಡ್ಡ ಹೆಸರುಗಳು, ಮತಧರ್ಮ, ಜಾತಿ, ಜನಾಂಗವಾಚಿ ಅಡ್ಡ ಹೆಸರುಗಳೆಂದು ವರ್ಗೀಕರಿಸಿ ಅವುಗಳನ್ನು ಪ್ರಾದೇಶಿಕ, ಭಾಷಿಕ, ಸಾಂಸ್ಕೃತಿಕ ಮತ್ತು ಜಾನಪದೀಯ ಹಿನ್ನೆಲೆಯಲ್ಲಿ ವಿವೇಚಿಸುವ ಅಗತ್ಯವಿದೆ.

ಇತ್ತೀಚಿನ ದಿನಗಳಲ್ಲಿ ಗ್ರಾಮನಾಮಗಳನ್ನು ಅಡ್ಡ ಹೆಸರುಗಳಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಮಾಸ್ತಿ, ಗೋಕಾಕ್, ಸುಂಕಾಪುರ, ಬೆಟಗೇರಿ, ದೇವನೂರು ಮುಂತಾದವು. ಮುಂದುವರಿದು ಧಾರವಾಡ, ಪುಣೆ, ಬೆಳಗಾಂವ ಇತ್ಯಾದಿಗಳಿಗೆ ‘ಕರ್’ ಶಬ್ದ ಬಳಸಿ ‘ಧಾರವಾಡಕರ್’, ‘ಪುಣೆಕರ’, ‘ಬೆಳಗಾಂವಕರ್’ ಎಂದು ರೂಪಾಂತರಿಸಿ ಬಳಸುತ್ತಿದ್ದಾರೆ. ನಮ್ಮಲ್ಲಿ ವೃತ್ತಿವಾಚಿಯು ಬೆಳೆದು ಜಾತಿವಾಚಿ ಅಡ್ಡ ಹೆಸರುಗಳಾಗಿರುವುದರಿಂದ ಎಷ್ಟೋ ವೃತ್ತಿವಾಚಿ ಅಡ್ಡ ಹೆಸರುಗಳು ಜಾತಿವಾಚಿ ಅಡ್ಡ ಹೆಸರುಗಳಾಗಿಯೂ ಕಾಣುತ್ತವೆ. ಉದಾಹರಣೆಗೆ ದೀಕ್ಷಿತ, ಪುರೋಹಿತ, ಸಮಗಾರ, ಮಡಿವಾಳ, ಹೂಗಾರ, ಕಂಬಾರ; ಅದೇ ರೀತಿ ವ್ಯಾಪಾರ ಸಂಬಂಧಿ ಅಡ್ಡ ಹೆಸರುಗಳಿಂದ ಅಂಗಡಿ, ಅಂಬರಶೆಟ್ಟಿ, ಪಟ್ಟಣಶೆಟ್ಟಿ, ಮಹಾಜನಶೆಟ್ಟಿ, ಬೆಣ್ಣೆಕತ್ತಿ, ಬಿದರಿ ಮುಂತಾದವುಗಳು ಬೆಳೆದ ದಿನಸಿ ಮತ್ತು ವಸ್ತುಗಳನ್ನು ವ್ಯಾಪಾರ ಮಾಡುವುದರ ಮೂಲಕವಾಗಿ ಬಂದಿರುತ್ತವೆ. ಆಡಳಿತ ಸಂಬಂಧಿ ಅಡ್ಡ ಹೆಸರುಗಳಾದ, ಪಾಟೀಲ, ದೇಸಾಯಿ, ದೇಶಮುಖ್, ಗೌಡರ, ನಾಯಕ, ಸುಬೇದಾರ, ಗುತ್ತೇದಾರ, ಹೆಗಡೆ, ಓಲೆಕಾರ, ಶಾನಭಾಗ; ಧಾರ್ಮಿಕ ವೃತ್ತಿ ಸಂಬಂಧಿ ಅಡ್ಡ ಹೆಸರುಗಳಾದ ಹಿರೇಮಠ, ಸಾಲಿಮಠ, ಗದ್ದಿಗಿಮಠ, ಪುರವಂತ, ಗಂಟಿ, ವಸ್ತ್ರದ ಖಾಜಿ, ಮುಲ್ಲಾ ಮುಂತಾದ ಹೆಸರುಗಳು ಉತ್ತರ ಕರ್ನಾಟಕದ ಕಡೆ ಹೆಚ್ಚು ಜನಪ್ರಿಯವಾಗಿವೆ.

ಅಡ್ಡ ಹೆಸರುಗಳು ಇನ್ನೊಂದು ಮುಖವನ್ನು ಗಮನಿಸಬೇಕಾಗುತ್ತದೆ. ಅವು ಕೇವಲ ಕುಚ್ಯೋದ್ಯಕ್ಕಾಗಿ ಅಥವಾ ತಮಾಷೆಗಾಗಿ ಬಳಕೆಯಾಗುವುದಿಲ್ಲ. ವ್ಯಕ್ತಿಯನ್ನು ಇನ್ನೂ ಖಚಿತಪಡಿಸುವ ಉದ್ದೇಶಕ್ಕಾಗಿಯೂ ಬರುತ್ತವೆ. ಗ್ರಾಮದಲ್ಲಿ ಒಂದೇ ಹೆಸರಿನವರು ಹಲವರಿದ್ದಾಗ ಅವರನ್ನು ಗುರುತಿಸಲು ಅವು ನೆರವಾಗುತ್ತವೆ. ನಂಜಪ್ಪ, ಮಾದಪ್ಪ ಎಂಬ ಹೆಸರನ್ನು ಚಾಮರಾಜನಗರ ಪ್ರದೇಶದಲ್ಲಿ ವಿಶೇಷವಾಗಿ ಇಟ್ಟುಕೊಳ್ಳುತ್ತಾರೆ. ಅವರನ್ನು ಗುರುತಿಸಲು, ಚಿಕ್ಕನಂಜಪ್ಪ ದೊಡ್ಡನಂಜಪ್ಪ, ಸಣ್ಣನಂಜಪ್ಪ, ಚಿಕ್ಕಮಾದಪ್ಪ, ದೊಡ್ಡಮಾದಪ್ಪ, ಸಣ್ಣಮಾದಪ್ಪ ಎಂದು ಕರೆಯುವುದುಂಟು. ದೊಡ್ಡ, ಚಿಕ್ಕ, ಸಣ್ಣ ಇವು ಅಡ್ಡ ಹೆಸರುಗಳಲ್ಲಿ ವಿಶೇಷಣಗಳು. ಈ ವಿಶೇಷಣಗಳ ಕೆಲಸವನ್ನು ಅಡ್ಡ ಹೆಸರುಗಳು ರಂಜನೀಯವಾಗಿ ಮಾಡುತ್ತವೆ. ಒಂದು ಸಮುದಾಯದ ಭಾಷೆ, ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಸಮಾಜಶಾಸ್ತ್ರಜ್ಞ ಮತ್ತು ಮಾನವಶಾಸ್ತ್ರಜ್ಞರಿಗೆ ಈ ಅಡ್ಡಹೆಸರುಗಳು ನೆರವಾಗುತ್ತವೆ.

ಮಕ್ಕಳಿಗೆ ಪ್ರೀತಿಯಿಂದ ಚಿನ್ನ, ಪಿಂಕಿ, ಪುಟ್ಟ, ಬಂಗಾರಿ, ಕಂದ, ಚಿಂಟು, ಪಿಂಟು, ಅಪ್ಪಗಳೆಂಬ ಅಡ್ಡ ಹೆಸರುಗಳಿಂದ ಕರೆಯುತ್ತಾರೆ. ಹೊಗಳಿಕೆ ಮತ್ತು ಮೆಚ್ಚುಗೆಯ ಸಂಕೇತವಾಗಿ ಅಡ್ಡ ಹೆಸರುಗಳು ಚಾಲ್ತಿಗೆ ಬರುತ್ತವೆ. ವ್ಯಕ್ತಿ ಉದಾರಿಯಾಗಿದ್ದು ಅವನು ಸದಾ ದಾನಧರ್ಮಗಳಲ್ಲಿ ತೊಡಗಿಸಿಕೊಂಡಿದ್ದರೆ, ಅವನನ್ನು ‘ದಾನಶೂರ’, ಕಲಿಯುಗದ ಕರ್ಣ ಎಂತಲೂ, ನಿಷ್ಠೆ, ಪ್ರಾಮಾಣಿಕತೆ, ಸತ್ಯ ಸಂಧತೆಗೆ ಹೆಚ್ಚು ಹೆಸರುವಾಸಿಯಾಗಿದ್ದರೆ, ಅವನನ್ನು ಸತ್ಯಹರಿಶ್ಚಂದ್ರ, ಸತ್ಯದ ತುಂಡು ಎಂಬ ಅಡ್ಡ ಹೆಸರುಗಳಿಂದ ಕರೆಯುತ್ತಾರೆ. ಒಟ್ಟಿನಲ್ಲಿ ಅಡ್ಡ ಹೆಸರುಗಳು ಮಾನವನ ಸ್ವಭಾವಗಳಿಗೆ ಹೊಂದಿಕೊಳ್ಳುತ್ತಾ ಅವರ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಮ್ಮ ಪೂರ್ವಜರನ, ವೃತ್ತಿ, ನೆಲೆ, ಜನಾಂಗ, ಭಾಷೆ, ಮನೋಧರ್ಮ ಇತ್ಯಾದಿಗಳ ಅಧ್ಯಯನಕ್ಕೆ ಇವು ಪೂರಕವಾಗಿ ಇರುತ್ತವೆ.

– ಎಂ.ಎನ್.ಎಚ್.

ಅಣ್ಣಾವಿಪ್ಪಾಟ್ಟುಗಳ್ ಯೂರೋಪಿನ ಮಧ್ಯಕಾಲದಲ್ಲಿ ಕ್ರೈಸ್ತರು ಹಾಡುತ್ತಿದ್ದ ಭಕ್ತಿರಸ ಪ್ರಧಾನವಾದ ಹಳೆಯ ಹಾಡುಗಳೇ ಕೇರಳದ ಅಣ್ಣಾವಿಪ್ಪಾಟುಗಳ್. ಇವು ಪ್ರಧಾನವಾಗಿ ಏಸುವಿನ ಮಹತ್ವವನ್ನು ಒಳಗೊಂಡಿರುವ ಹಾಡುಗಳು ಇಂತಹ ಹಾಡುಗಳಲ್ಲಿ ಮುಖ್ಯವಾದವು. ಅಣ್ಣಾವಿಪ್ಪಾಟ್, ಪಿಚ್ಚಪ್ಪಾಟ್, ಮಾತಾವಣಕ್ಕೆ ಪ್ಪಾಟ್, ಪುತ್ತನ್ ಪಾನ, ಗ್ಲಾಮಕ್ಕರೋಳ್ ಮೊದಲಾದವುಗಳು.

‘ಅಣ್ಣಾವಿ’ ಎಂಬ ಪದಕ್ಕೆ ಗುರು ಎಂದರ್ಥ. ಗುರುವಿನ ಜೊತೆಗೆ ಕೆಲವು ಜನ ಶಿಷ್ಯರು ಮನೆಗಳಿಗೆ ಬಂದು ಚರ್ಮವಾದ್ಯಗಳನ್ನು ನುಡಿಸುತ್ತಾ ಹಾಡುವ ಭಕ್ತಿರಸ ಪ್ರಧಾನವಾದ ಹಾಡುಗಳೇ ಅಣ್ಣಾ ವಿಪ್ಪಾಟ್ಟಗಳು ಏಸುವಿನ ಚರಿತ್ರೆಯೇ ಈ ಹಾಡುಗಳಲ್ಲಿರುವ ವಿಷಯ ಇದನ್ನು ಪುರುಷರೇ ಹಾಡುತ್ತಾರೆ. ಒಂದು ಗುಂಪಿನಲ್ಲಿ ೪ ರಿಂದ ೬ ಜನರಿರುತ್ತಾರೆ. ಸಾಯಂಕಾಲ ೬ ರಿಂದ ರಾತ್ರಿ ೧೦ ಘಂಟೆಯ ಮಧ್ಯೆ ಈ ಹಾಡುಗಳನ್ನು ಹಾಡುತ್ತಾರೆ. ಗುರು ಹೇಳಿಕೊಟ್ಟಂತೆ ಶಿಷ್ಯರು ಹಾಡುತ್ತಾರೆ. ಪ್ರತಿ ಮನೆಯಲ್ಲೂ ಹಾಡುಗಾರರ ಗುಂಪು ಬಂದಾಗ ಅವರನ್ನು ಮನೆಯವರು ದೀಪ ಬೆಳಗಿ ಸ್ವಾಗತಿಸುತ್ತಾರೆ.

ಪಿಚ್ಚಪ್ಪಾಟ್: ‘ಪಿಚ್ಚ’ ಎಂಬ ಪದವನ್ನು ಭಿಕ್ಷೆ ಎಂಬ ಅರ್ಥದಲ್ಲಿ ಬಳಸಲಾಗಿದೆ. ಹಿಂದಿನ ಕಾಲದಲ್ಲಿ ಬೌದ್ಧ ಸನ್ಯಾಸಿಗಳು ಶರಣತ್ರಯಗಳನ್ನು ಹೇಳುತ್ತಾ ಬರುತ್ತಿದ್ದರು. ಅದೇ ರೀತಿ ಕ್ರೈಸ್ತರು ಮನೆಗಳಿಗೆ ಹೋಗಿ ಹಾಡುಗಳನ್ನು ಹಾಡುತ್ತಾರೆ. ಏಸು ಈ ಹಾಡುಗಳ ವಸ್ತುವಾಗಿರುತ್ತಾನೆ.

ಪುತ್ತನ್ ಪಾನ: ‘ಪುತ್ತನ್ ಪಾನ’ ಎಂಬ ಹಾಡುಗಳನ್ನು ಮೊಂಡಿ (ಗುರುವಾರ) ತರ್ಸಡೇ, ಗುಡ್‌ಫ್ರೈಡೇ (ಪೆಸಹಾವ್ಯಾಳಂ, ದುಃಖವೆಳ್ಳಿ(ಮ))ಗಳಂದು ಹಾಡುತ್ತಾರೆ. ಗುಡ್‌ಫ್ರೈಡೇಯಂದು ‘ವ್ಯಾಕುಲ ಪ್ರಸಂಗಂ’ ಎಂಬ ಭಾಗವನ್ನು ಹಾಡಲಾಗುತ್ತದೆ. ಇದರಲ್ಲಿ ಏಸುವನ್ನು ಶಿಲುಬೆಯಿಂದ ಇಳಿಸಿ ಮರಿಯಮ್ಮಳ ಮಡಿಲಲ್ಲಿ ಮಲಗಿಸಿದಾಗ ಎದೆಯೊಡೆದು ಹಾಡಿದ ಹಾಡುಗಳು ಇವು ಎಂಬ ಸೂಚನೆ ಇದೆ.

ಮಾತಾವಣಕ್ಕಪ್ಪಾಟ್: ಪರಿಶುದ್ಧವಾದ ಮರಿಯಮ್ಮಳ ಕುರಿತಾದ ಹಾಡುಗಳೇ ‘ಮಾತಾವಣಕ್ಕಪ್ಪಾಟ್’. ಇವುಗಳನ್ನು ಮೇ ತಿಂಗಳ ಸಾಯಂಕಾಲದ ಸಂದರ್ಭಗಳಲ್ಲಿ ಕುಟುಂಬ ಸದಸ್ಯರ ಪ್ರಾರ್ಥನೆಗೆ ಹೊಂದಿಕೊಂಡು ಹಾಡುತ್ತಾರೆ. ಇದು ತಾಳಲಯಬದ್ಧವಾಗಿದ್ದು ಭಕ್ತಿರಸದಿಂದ ಕೂಡಿರುತ್ತದೆ. ಕುಟುಂಬದ ಎಲ್ಲ ಸದಸ್ಯರು ಒಂದು ಗೂಡಿ ಈ ಹಾಡುಗಳನ್ನು ಹಾಡುತ್ತಾರೆ. ಕುಟುಂಬದ ಒಗ್ಗಟ್ಟನ್ನು ಹೆಚ್ಚಿಸಲು ಇಂತಹ ಭಕ್ತಿ ಪ್ರಧಾನವಾದ ಹಾಡುಗಳಿಗೆ ಸಾಧ್ಯವಿದೆ ಎಂಬುದು ಅವರ ನಂಬಿಕೆ.

ಗ್ಲಾಮಕ್ಕರೋಳ್:ಗ್ಲಾಮ ಎಂಬ ಪದಕ್ಕೆ ಸಮಾಧಾನ ಎಂದು ಅರ್ಥ. ಏಸುವಿನ ಅನುಯಾಯಿಗಳು ಏಸುವಿನ ರೂಪವನ್ನು ಧರಿಸಿಕೊಂಡು ಮನೆಗಳಿಗೆ ಬಂದು ಶಿಲುಬೆಗೇರಿಸಿದ ಏಸುವಿನ ಮಹಾತ್ಮೆಯನ್ನು ಹಾಡುಗಳ ಮೂಲಕ ಹೇಳುತ್ತಾರೆ. ಮನೋಹರವಾದ ಬಣ್ಣವನ್ನು ಹೊಂದಿದ ಬಟ್ಟೆಗಳನ್ನು ಧರಿಸುವುದು ಇದರ ವಿಶೇಷತೆ. ಏಸು ಕ್ರಿಸ್ತನ ವೇಷವನ್ನು ಹಾಕುವವನು ಶು‌ಭ್ರವರ್ಣದ ಬಟ್ಟೆಯನ್ನು ಧರಿಸುತ್ತಾನೆ. ಆಭರಣಗಳೂ ಇತರ ವೇಷಭೂಷಣಗಳೂ ಶಿಷ್ಯರ ಸೌಂದರ್ಯವನ್ನು ಹೆಚ್ಚಿಸುತ್ತವೆ. ‘ಚವಿಟ್ಟ್’ ನಾಟಕದಲ್ಲಿ ಇಡುವ ಕೆಲವು ಹೆಜ್ಜೆಗಳ ರೀತಿಯಲ್ಲಿ ಹೆಜ್ಜೆಗಳನ್ನಿಡುತ್ತಾರೆ. ಈ ಗಾಯಕರ ಸಮೂಹದಲ್ಲಿ ಒಬ್ಬ ಏಸುವೂ ೧೨ ಜನ ಅವನ ಶಿಷ್ಯರು ಇರುತ್ತಾರೆ. ಮನೆಯವರು ಸಂತೋಷದಿಂದ ದೀಪ ಬೆಳಗಿ ಆರತಿ ಎತ್ತಿ ಅವರನ್ನು ಸ್ವಾಗತಿಸುತ್ತಾರೆ. ಆಗ ಏಸು ಕ್ರಿಸ್ತನ ವೇಷಧಾರಿ ಸಮಾಧಾನದ ಸಂದೇಶವನ್ನು ನೀಡುತ್ತಾನೆ. ಆ ಮೇಲೆ ಶಿಷ್ಯರು ೧೫ ನಿಮಿಷಗಳ ಕಾಲ ಹಾಡನ್ನು ಮುಂದುವರಿಸುತ್ತಾರೆ. ಕೊನೆಗೆ ಮನೆಯವರು ಗಾಯಕರಿಗೆ ಒಂದಷ್ಟು ಉಡುಗೊರೆಗಳನ್ನು ಕೊಟ್ಟ ಕಳುಹಿಸುತ್ತಾರೆ. ಈ ಸಂಗೀತದ ರೀತಿ ಹೊಸತಾದರೂ ಕ್ರೈಸ್ತ ಪರಂಪರೆಯ ಚೈತನ್ಯ ಇದರಲ್ಲಿ ನಾಲ್ಕು ನೆಲೆ ನಿಂತಿದೆ ಎನ್ನಬಹುದು. ಇದು ಆಂಗಿತ ಆಹಾರ್ಯ ವಾಚಿಕ ಎಂಬ ಮೂರು ಅಭಿನಯಗಳನ್ನು ಒಳಗೊಂಡಿದೆ. ಇದಲ್ಲದೆ ಕುರ್‌ಬಾನ, ವೆರುನ್ನಾಳ್, ಮಹಾತ್ಮರ ಜನ್ಮದಿಂದಲೇ ಮೊದಲಾದ ಸಂದರ್ಭಗಳ ಗಾಯಕರ ಸಮೂಹ ಭಕ್ತಿಗೀತೆಗಳನ್ನು ಹಾಡುವುದಿದೆ.

– ಕೆ.ವಿ.ಎಫ್. ಅನುವಾದ ಕೆ.ಎನ್.

ಅದಿರಸಂ ತಮಿಳುನಾಡಿನ ಜನರು ತಮ್ಮ ಶುಭಸಮಾರಂಭ ಮತ್ತು ಹಬ್ಬಹರಿದಿನಗಳಲ್ಲಿ ತಯಾರಿಸುವ ಒಂದು ಜನಪದ ಅಡುಗೆ ‘ಅದಿರಸಂ'(ಕಜ್ಜಾಯ). ಇದು ಸಿಹಿ ತಿಂಡಿಗಳಲ್ಲಿ ಒಂದು. ಸಿಹಿ ಪದಾರ್ಥಗಳಲ್ಲಿ ಹೆಚ್ಚು ಪ್ರಿಯವಾದ ತಿಂಡಿ ಅದಿರಸಂ. ಹಿಂದೆ ‘ತೆನೆ’ ಎಂಬ ಏಕದಳ ಧಾನ್ಯದ ಹಿಟ್ಟಿನಿಂದ ಮಾಡುತ್ತಿದ್ದ ಈ ತಿಂಡಿಯನ್ನು ಈಗ ಅಕ್ಕಿಹಿಟ್ಟಿನಿಂದಲೂ ಮಾಡುತ್ತಾರೆ.

ಹಸಿಯಕ್ಕಿಯನ್ನು ನಿರ್ದಿಷ್ಟ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ನೆನಸಬೇಕು. ಅಷ್ಟೇ ಪ್ರಮಾಣದಲ್ಲಿ ಬೆಲ್ಲವನ್ನು ತೆಗೆದುಕೊಳ್ಳಬೇಕು. ನೆಲೆಸಿದ ಅಕ್ಕಿಯನ್ನು ನೀರು ಬಸಿದು ನೆರಳಲ್ಲಿ ಒಣಗಿಸಿ ಕುಟ್ಟಿ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಬೇಕು. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಬೆಲ್ಲವನ್ನು ಸೇರಿಸಿ ಕಾಯಿಸಬೇಕು. ಬೆಲ್ಲವನ್ನು ‘ಕಂಬಿ ಹದ’ (ಕಾಯಿಸಿದ ಬೆಲ್ಲದ ಪಾಕವನ್ನು ತುಸು ತೆಗೆದು ನೀರಿನಲ್ಲಿ ಹಾಕಿದಾಗ, ಬೆಲ್ಲದ ಪಾಕ ಕರಗದೆ ಕಂಬಿಯಂತೆ ನೀರಿನಲ್ಲಿ ತೇಲುವಷ್ಟು ಹದ) ಬರುವವರೆಗೆ ಹದವಾದ ಉರಿಯಲ್ಲಿ ಕಾಯಿಸಿ ಇಳಿಸಬೇಕು.

ಈಗ ಅಕ್ಕಿಹಿಟ್ಟನ್ನು ಪಾಕದೊಂದಿಗೆ ಸ್ವಲ್ಪಸ್ವಲ್ಪವಾಗಿ ಬೆರೆಸಿ ಗಂಟುಗಳಿಲ್ಲದಂತೆ ಹದವಾಗಿ ಸೌಟಿನ ಮೂಲಕ ನಿಧಾನಕ್ಕೆ ಗೊಟಾಯಿಸಬೇಕು. ಹಿಟ್ಟು ತುಸು ಗಟ್ಟಿಯಾಗುವವರೆಗೆ ಹಾಗೇ ಗೊಟಾಯಿಸುತ್ತಿರಬೇಕು. ಹಿಟ್ಟಿನೊಂದಿಗೆ ಪರಿಮಳಕ್ಕಾಗಿ ಸ್ವಲ್ಪ ಏಲಕ್ಕಿ ಹಾಗೂ ರುಚಿಗಾಗಿ ಸ್ವಲ್ಪ ಹುರಿದ ಎಳ್ಳನ್ನು ಸೇರಿಸಿ ಕಲಸಬೇಕು.

ಹೀಗೆ ಕೈ ಹಾಕದೆ ತಯಾರಿಸಿದ ಹಿಟ್ಟಿನ ಮಿಶ್ರಣವುಳ್ಳ ಪಾತ್ರೆಯ ಬಾಯಿಯನ್ನು ಒಂದು ಬಟ್ಟೆಯಿಂದ ಮುಚ್ಚಿ ಕಟ್ಟಬೇಕು. ಗಾಳಿ ಮಾತ್ರ ಬಟ್ಟೆಯೊಳಗೆ ಪ್ರವೇಶಿಸುವಂತಿರಬೇಕು. ಈ ಮಿಶ್ರಣವನ್ನು ಮೂರು ದಿನಗಳ ಕಾಲ ಹಾಗೆಯೇ ಬಿಡಬೇಕು. ಮೂರು ದಿನಗಳಾದ ಬಳಿಕ ಬಟ್ಟೆಯನ್ನು ಬಿಚ್ಚಿ, ಹಿಟ್ಟಿನ ಮಿಶ್ರಣವನ್ನು ಅಳತೆಗೆ ಬೇಕಾದಷ್ಟು ತೆಗೆದುಕೊಂಡು ಅಂಗೈಯಲ್ಲಿ ಮೆದುವಾಗಿ ತಟ್ಟಿ, ಮಧ್ಯೆ ತುಸು ರಂಧ್ರ ಮಾಡಿ, ಚೆನ್ನಾಗಿ ಕಾದ ಎಣ್ಣೆಯಲ್ಲಿ ಹದವಾಗಿ ಬೇಯಿಸಿ ತೆಗೆಯಬೇಕು. ಬಿಳಿ ಬಣ್ಣದಲ್ಲಿರುವ ಹಿಟ್ಟಿನ ಮಿಶ್ರಣ ಕಂದು ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಬೇಯಿಸಬೇಕು. ಅನಂತರ ಅದನ್ನು ಎಣ್ಣೆಯಿಂದ ಹೊರತೆಗೆದು ಆರಿಸಿ ಚೆನ್ನಾಗಿ ಒಣಗಿಸಿದ ಸ್ವಚ್ಛವಾದ ಪಾತ್ರೆಯಲ್ಲಿ ತುಂಬಿಟ್ಟು ಬಹಳ ದಿನಗಳವರೆಗೆ ತಿನ್ನಲು ಬಳಸಬಹುದು.

ತಮಿಳುನಾಡಿನಲ್ಲಿ ಮದುವೆ, ಶೋಭನಗಳಂತಹ ಜೀವನದ ಬಹುಮುಖ್ಯ ಸಂದರ್ಭಗಳಲ್ಲಿ ಹಾಗೂ ದೀಪಾವಳಿಯಂತ ಹಬ್ಬಗಳಲ್ಲಿ ಬಡಿಸಲು ಬಳಸುವ ಮುಖ್ಯ ಆಹಾರ ಪದಾರ್ಥಗಳಲ್ಲಿ ಅದಿರಸಂ ಕೂಡ ಒಂದು.

– ಪಿ.ಎ. ಅನುವಾದ ಐ.ಎಸ್.

ಅನ್ಜಕ್ಕಳಿ ಪಶ್ಚಿಮ ಕೊಚ್ಚಿಯ ಅಮರಾವತಿಯಲ್ಲಿರುವ ‘ಆರ್ತರಭಗವತೀ’ ದೇವಾಲದಯದಲ್ಲಿ ನಡೆಯುವ ಉತ್ಸವದ ಒಂದಂಗವೇ ಅನ್ಜಕ್ಕಳಿ. ಕೊಚ್ಚಿಯ ವೈಶ್ಯಗಾಣಿಗ (ಪಾಚಾಳಿ) ಸಮಾಜದವರು. ಈ ಉತ್ಸವವನ್ನು ಪ್ರತಿ ವರ್ಷ ನಡೆಸಿಕೊಂಡು ಬರುತ್ತಾರೆ. ಇದಕ್ಕೆ ಹಲವು ಶತಮಾನಗಳ ಇತಿಹಾಸವಿದೆ. ಇದು ೧೭ನೇ ಶತಮಾನದ ಅಂತ್ಯಕಾಲದಲ್ಲಿ ಪ್ರಾರಂಭವಾದಂತೆ ತಿಳಿದು ಬರುತ್ತದೆ. ಪೋರ್ಚುಗೀಸರ ಆಕ್ರಮಣ ಕಾಲದಲ್ಲಿ ಗೋವಾದಲ್ಲಿದ್ದು ಗಾಣಿಗರು ಅಲ್ಲಿಂದ ಪಲಾಯನ ಮಾಡಿ ಕೊಚ್ಚಿಯಲ್ಲಿ ಬಂದು ನೆಲೆಸಿದರು. ಅವರು ಹಿಂದುಳಿದ ಜನರು. ಆಶ್ರಯ ಬಯಸಿ ಕೊಚ್ಚಿಗೆ ಬಂದಾಗ ಅಲ್ಲಿಯೂ ವಿದೇಶೀಯರಿಂದ ಹಲವು ಕಷ್ಟಗಳನ್ನು ಎದುರಿಸಬೇಕಾಗಿ ಬಂತು. ಕಾಲಾ ನಂತರದಲ್ಲಿ ಕೊಚ್ಚಿಯ ರಾಜನಿಗೆ ಇವನ ಮೇಲೆ ಕರುಣೆ ತೋರಿತು. ಅದರಿಂದಾಗಿ ಇವರಿಗೆ ಮೈ ಮುಚ್ಚಿಕೊಳ್ಳಲು ಬಟ್ಟೆ, ವಾಸಕ್ಕೆ ಸ್ಥಳ, ಪ್ರಾರ್ಥಿಸಲು ದೇವಾಲಯವನ್ನು ಒದಗಿಸಿಕೊಟ್ಟನು. ಅದುವೇ ಅಮರಾವತಿಯ ‘ಆರ್ತರ ಭಗವತೀ’ ದೇವಾಲಯ. ಇದು ಕೊಚ್ಚಿ ರಾಜ್ಯದ ಪ್ರಧಾನ ದೇವತೆಯಾದ ‘ಫಲಯನ್ಜೂರ್ ಭಗವತಿ’ಯ ಅಂಶದೇವತೆ.

ಈ ನಂಬಿಕೆಯನ್ನು ವ್ಯಕ್ತ ಪಡಿಸುವ ಒಂದು ಐತಿಹ್ಯವಿದೆ. ಒಂದು ದಿನ ಒಬ್ಬಳು ಮುದುಕಿ ಅಮರಾವತಿಯ ಆಲದ ಮರದ ಕೆಳಗಿನ ಕಟ್ಟೆಯಲ್ಲಿ ಕುಳಿತಿದ್ದಳು. ಆಗ ಆ ದಾರಿಯಾಗಿ ಬಂದ ಬ್ರಾಹ್ಮಣನಲ್ಲಿ ‘ನನಗೆ ಒಂದು ಮನೆ ಕಟ್ಟಿಸಿಕೊಡಬೇಕೆಂದು’ ಕೇಳಿದಳು. ಆ ಬ್ರಾಹ್ಮಣನಿಗೆ ಅವಳ ಮಾತನ್ನು ಕೇಳಿ ಸಂಶಯ ಬಂತು. ‘ನೀವು ಇಲ್ಲಿ ಕುಳಿತಿರಿ, ನಾನು ಬೇಗನೆ ಹೋಗಿ ಸಮುದ್ರದಲ್ಲಿ ಸ್ನಾನ ಮಾಡಿ ಬಂದು ಮನೆ ಕಟ್ಟಿಸಿಕೊಡುತ್ತೇನೆ’ ಎಂದನು. ಆದರೆ ಸಮುದ್ರಕ್ಕೆ ಹೋದ ಬ್ರಾಹ್ಮಣ ಹಿಂತುರುಗಿ ಬರಲಿಲ್ಲ. ಅವನ ಬರುವಿಕೆಯನ್ನು ನಿರೀಕ್ಷಿಸುತ್ತಾ ಕುಳಿತವಳೇ ಪಳೆಯನ್ಜೂರ್ ಭಗವತಿ.

ಶಿವರಾತ್ರಿಯಂದು ಪ್ರಾರಂಭವಾಗುವ ಉತ್ಸವ ಮುಂದೆ ಏಳು ದಿನಗಳ ಕಾಲ ನಡೆಯುತ್ತದೆ. ಆ ಏಳು ದಿನಗಳೂ ಅನ್ಜಕ್ಕಳಿ ಕಾರ್ಯಕ್ರಮ ನಡೆದು ಬರುತ್ತದೆ. ಲೋಕಕಲ್ಯಾಣಾರ್ಥವಾಗಿ ನಡೆಯುವ ರಥೋತ್ಸವದಲ್ಲಿ ರಥದ ಒಂದು ಕಡೆ ರಣದೇವತೆಯ ಹಲವು ರೂಪ, ಭಾವ, ವೇಷಗಳು ಕಾಣಿಸಿಕೊಂಡರೆ. ಇನ್ನೊಂದು ಭಾಗದಲ್ಲಿ ಅದಕ್ಕೆ ಸಮನವಾಗಿ ಬಿಳಿ ಹಂಸದ ರೂಪವನ್ನು ನಿರ್ಮಿಸಿ ಇಡುತ್ತಾರೆ. ಈ ರೂಪಗಳನ್ನು ರಥದಲ್ಲಿಟ್ಟು ಜನರು ಹರ್ಷೋದ್ಗಾರಗಳ ಮೂಲಕ ಊರಲ್ಲೆಲ್ಲ ಆ ರಥವನ್ನು ಎಳೆಯುವುದೇ ಅನ್ಜಕ್ಕಳಿಯ ವಿಶೇಷತೆ. ರಣದೇವತೆಯಾದ ಕಾಳಿಯ ರೂಪವನ್ನು ಉತ್ತಮ ಜಾತಿಯ ಮರದಿಂದ ಮಾಡುತ್ತಾರೆ. ಆದರೆ ಹಂಸದ ರೂಪವನ್ನು ಅಡಕೆ ಮರದಿಂದ ಪ್ರತಿವರ್ಷವು ಮಾಡಲಾಗುತ್ತದೆ. ಇವೆರಡೂ ಪ್ರಧಾನ ರೂಫಗಳಾದರೂ ಅವುಗಳ ಜೊತೆಗೆ ದಾರಿಕನ್, ತಾಟಕ, ಭೂಮನ್ ಮೊದಲಾದ ಚಿಕ್ಕ ಪುಟ್ಟ ರೂಪಗಳಿರುತ್ತವೆ. ಇವುಗಳನ್ನು ಶೃಂಗರಿಸಿದ ರಥದಲ್ಲಿರಿಸಿ ಜಯಘೋಷಮಾಡುತ್ತಾ ನಾಡಿನಲ್ಲಿ ಮೆರವಣಿಗೆ ಮಾಡಿ ಕೊನೆಗೆ ಆರ್ತರ ಭಗವತೀ ದೇವಾಲಯದ ಮುಂದೆ ವೃತ್ತಾಕಾರವಾಗಿ ಎಳೆಯಲಾಗುತ್ತದೆ. ಈ ರಥೋತ್ಸವವೇ ದೇವಾಲಯಗಳಲ್ಲಿ ಮುಖ್ಯ. ಈ ರಥವನ್ನು ವೇಲನ್, ಕುಟುಂಬ ಎಂಬ ಸಮುದಾಯದವರು ಎಳೆಯುತ್ತಾರೆ. ಅದು ಅವರ ಪರಂಪರಾಗತ ಹಕ್ಕು.

ರಣದೇವತೆಯ ಎಡಭಾಗದಲ್ಲಿ ಅದರಷ್ಟೇ ಮಹತ್ವವನ್ನು ಹೊಂದಿದ ಬಿಳಿ ಹಂಸವಿರುತ್ತದೆ. ಈ ಹಂಸ ಶಾಂತಿ, ಸಮಾಧಾನದ ಪ್ರತೀಕವಾಗಿದೆ. ನಾಡಿಗೆ ಬರುವ ಮಾರಕ ರೋಗಗಳನ್ನು, ದಾರಿದ್ಯ್ರವೇ ಮೊದಲಾದ ಕಷ್ಟಗಳನ್ನು ಎದುರಿಸಿ ಬದುಕುವುದು ಹೇಗೆ ಎಂಬುದನ್ನು ಹಂಸದ ರೂಪ ತಿಳಿಸುತ್ತದೆ. ಸ್ಥಿರರೂಪದ ರಣದೇವತೆಗಿಂತ, ಹಂಸಗಳು ಗಾಣಿಗ ಸಮುದಾಯದವರಿಗೂ ಇತರ ಜನರಿಗೂ ಹೆಚ್ಚು ಉತ್ಸಾಹವನ್ನು ತಂದು ಕೊಡುತ್ತವೆ.

ಕೇರಳದ ಇತರ ಸ್ತ್ರೀ ದೇವತೆಗಳಿಗಿಂತ ಇತರ ಪಕ್ಷಿ ರೂಪಗಳಿಗಿಂತ ಹಂಸದ ಆರಾಧನೆ ಭಿನ್ನವಾಗಿದೆ. ದೇವತೆಗಳಲ್ಲಿ ‘ರಕ್ಷಿಸಬೇಕು’ ಎಂದು ಬೇಡುವ ಬೇಡಿಕೆಯಾಗಲೀ, ರಕ್ಷಿಸುತ್ತೇನೆ ಎಂಬ ವಾಗ್ದಾನವಾಗಲೀ ಇಲ್ಲಿಲ್ಲ. ಕಾಳಿ ಮತ್ತು ಹಂಸದ ರೂಪಗಳು ಎರಡು ಮನೋಭಾವಗಳ ಪ್ರತೀಕಗಳಾಗಿ ಕಂಡು ಬರುತ್ತವೆ. ಸಮಾಜದಲ್ಲಿರುವ ಅನೀತಿ, ಅಕ್ರಮಗಳನ್ನು ಹೋಗಲಾಡಿಸಲು ಮತ್ತು ಮುಂದೆ ಶೋಷಣೆ ನಡೆಯದಂತೆ ಆಗಲು ಜನರ ಸಾಮೂಹಿಕ ಪ್ರಾರ್ಥನೆಯೇ ಅನ್ಜಕ್ಕಳಿ.

– ಕೆ.ಎಸ್.ಎಚ್. ಅನುವಾದ ಕೆ.ಕೆ.ಎಸ್.

ಅನ್ನಂ ಕೆಟ್ಟ್ ಕೊಟ್ಟಾಯಂನ ಹತ್ತು ಕಿ.ಮೀ. ಪಶ್ಚಿಮದಲ್ಲಿರುವ ವೆಂಬನಾಡು ಹಿನ್ನೀರಿನ ದಡದಲ್ಲಿರುವ ಒಂದು ಪುಟ್ಟಗ್ರಾಮ ನೀಲಂಬೇರೂರು. ಆಲಪ್ಪೂವಿ ಜಿಲ್ಲೆಯ ಕುಟ್ಟನಾಡ್ ತಾಲ್ಲೂಕಿನ ಈ ಊರಿನಲ್ಲಿ ಪುರಾತನವಾದ ಪಳ್ಳಿ ಭಗವತಿ ದೇವಾಲಯವಿದೆ. ಅನ್ನಂಕೆಟ್ಟ್ ಈ ದೇವಾಲದಯದಲ್ಲಿ ಪ್ರದರ್ಶಿತವಾಗುವ ಒಂದು ವೈಶಿಷ್ಟ್ಯಪೂರ್ಣ ಧಾರ್ಮಿಕ ಕಲೆ.

ಈ ದೇವಾಲಯಕ್ಕೆ ವಿಶೇಷವಾದ ಐತಿಹಾಸಿಕ ಪರಂಪರೆಯಿದೆ. ಕೇರಳದ ಅರಸನಾಗಿದ್ದ ಪಳ್ಳಿವಾಣ ಪೆರುಮಾಳ್ ನೀಲಂ ಬೇರೂರು ದೇವಾಲಯದಲ್ಲಿ ತೀರಿಕೊಂಡನೆಂದು ಊರವರು ನಂಬುತ್ತಾರೆ. ಹಿಂದೊಮ್ಮೆ ಇದು ಬೌದ್ಧ ದೇವಾಲಯವಾಗಿದ್ದರಬಹುದೆಂದು ಇತಿಹಾಸಜ್ಞರು ಅನುಮಾನಿಸುತ್ತಾರೆ. ಪಳ್ಳಿಪ್ಪಡಿ ಎಂಬ ಜಾಗದಲ್ಲಿ ದೇವಾಲಯ ನಿರ್ಮಿತವಾಗಿದೆ. ದೇವಾಲಯದ ಮುಖ್ಯದೇವತೆ ಕಾತ್ಯಾಯನಿದೇವಿ. ಈಕೆಯನ್ನು ಪಳ್ಳಿ ಭಗವತಿ ಎಂದೂ ಪಳ್ಳಿದೇವಿ ಎಂದೂ ಊರಜನ ಕರೆಯುತ್ತಾರೆ. ಇಲ್ಲಿಯ ಒಂದು ಪುಟ್ಟ ಗುಡಿಯ ವಿಷ್ಣು ವಿಗ್ರಹ ಶ್ರೀ ಬುದ್ಧನ ಪ್ರತಿಮೆಯೆಂದು ಜನ ಹೇಳುತ್ತಾರೆ. ಸಿಂಹ ಮಾಸದಲ್ಲಿ ಇಲ್ಲಿ ಪೂರಂ ಮಹೋತ್ಸವ ನಡೆಯುತ್ತದೆ. ಆ ಉತ್ಸವದ ಮುಖ್ಯ ಕಾರ್ಯಕ್ರಮ ಪಡಯಣಿ ಉತ್ಸವದಂದು ಜನರೆಲ್ಲ ಸೇರಿ ‘ಅನ್ನಂಕೆಟ್ಟು’ ನಡೆಸಿ ದೇವಿಗೆ ಸಮರ್ಪಿಸುತ್ತಾರೆ.

ಶಿವರಾತ್ರಿ ಕಾಲದಲ್ಲಿ ತೆಂಕುಭಾಗದಲ್ಲಿ ಜರಗುವ ಶಾಲೆಯೊಟ್ಟಂ(ಮ) ಇಂದಿಗೂ ಅನೇಕ ದೇವಾಲಯಗಳಲ್ಲಿ ಉಳಿದುಕೊಂಡಿದೆ. ತಾಲಪ್ಪೊಲಿ(ಮ) ಕುತ್ತಿಯೋಟ್ಟಂ(ಮ) ಅನ್ನಂಕೆಟ್ಟ್ ಮುಂತಾದುವು ಬೌದ್ಧಚಾರಗಳ ಪಳೆಯುಳಿಕೆಗಳಾಗಿವೆಯೆಂದೂ ಬರ್ಮಾದೇಶದಲ್ಲಿ ಇಂದಿಗೂ ಉತ್ಸವಗಳಲ್ಲಿ ಇಲ್ಲಿಯಂತೆ ಅನ್ನಂಕೆಟ್ಟ್ ಇದೆಯೆಂದೂ ಇತಿಹಾಸತಜ್ಞರು ಹೇಳುತ್ತಾರೆ.

ನೀಲಂಬೇರೂರು ದೇವಾಳಯದ ಉತ್ಸವದ ಸಾಮಾನ್ಯವಾಗಿ ‘ಪಡಯಣಿ’ ಎಂದೂ ವಿಶೇಷವಾಗಿ ಅನ್ನಂಕೆಟ್ಟ್ ಎಂದೂ ಕರೆಯುತ್ತಾರೆ. ನಾನಾಗಾತ್ರದ ಹಂಸಗಳ ರೂಪಗಳನ್ನು ನಿರ್ಮಿಸಿ ದೇವಿಗೆ ಸಮರ್ಪಿಸುವ ಕಾರ್ಯಕ್ರಮವನ್ನು ಅನ್ನಂಕೆಟ್ಟ್ ಎಂದೂ ಕರೆಯುತ್ತಾರೆ. ವಿಷ್ಣು ದೇವರಿಂದ ಅಪ್ಪಣೆ ಬೇಡಿಕೊಂಡ ಬಳಿಕವೇ ಪಡಯಣಿ ಮಹೋತ್ಸವ ಆರಂಭವಾಗುತ್ತದೆ. ವಿಷ್ಣುದೇವಾಲಯದ ಒಳಗಿನಿಂದ ಮೊದಲು ಬೆಂಕಿಯನ್ನು ಕೈಬದಲಾಯಿಸಿ ತರಲಾಗುತ್ತದೆ. ಅದರಿಂದ ಸೂಟೆ/ದೊಂದಿ/ಪಂಜನ್ನು ಉರಿಸಲಾಗುತ್ತದೆ. ಅದನ್ನು ಉರಿಸಿದ ಬಳಿಕ ಮಹಾವಿಷ್ಣು ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಮಾಡಿ ಅಪ್ಪಣೆ ಕೇಳಲಾಗುತ್ತದೆ. ಪಡಯಣಿ ನಡೆಯುವ ಎಲ್ಲ ದಿನಗಳಲ್ಲೂ ಈ ಕಾರ್ಯಕ್ರಮವಿದೆ.

ಜನಸಾಮಾನ್ಯರು ಹರಕೆಯ ರೂಪದಲ್ಲಿ ಅನ್ನಂಕೆಟ್ಟನ್ನು ನಡೆಸುತ್ತಾರೆ. ಪ್ರತಿಯೊಬ್ಬನೂ ಮನಸ್ಸಿನಲ್ಲಿ ಬಯಸುವುದು ಈಡೇರಬೇಕೆಂಬ ಆಸೆಯಿಂದ ಪಳ್ಳಿದೇವಿಗೆ ಹಂಸದ ಹರಕೆ ಹೊರುತ್ತಾರೆ. ಹರಕೆ ಹೇಲಿಕೊಂಡವರಿಗಾಗಿ ಎಲ್ಲ ಹಂಸಗಳನ್ನೂ ಸಿದ್ಧಪಡಿಸುವುದು ದೇವಾಲಯದ ಆವರಣದಲ್ಲಿಯೇ. ಹಂಸಗಳ ರೂಪವನ್ನು ಸಿದ್ಧಪಡಿಸುವುದಕ್ಕೆ ಕೆಲವು ಮಾದರಿಗಳಿವೆ. ಮೊದಲು ಹಂಸದ ಅಸ್ಥಿಪಂಜರ ಅಥವಾ ಫ್ರೇಂ ತಯಾರು ಮಾಡಿಕೊಳ್ಳುತ್ತಾರೆ. ಕಂಗು, ತೆಂಗು, ಬಿದಿರು, ಬೆತ್ತ ಮೊದಲಾದವುಗಳನ್ನು ಬಳಸಿಕೊಂಡು ಫ್ರೇಂ ತಯಾರುಮಾಡುತ್ತಾರೆ. ಬಳಿಕ ಫ್ರೇಂನ ಹೊರಭಾಗಕ್ಕೆ ಬಟ್ಟೆ ಮತ್ತು ಇತರ ಅಲಂಕಾರ ಸಾಮಗ್ರಿಗಳನ್ನು ಅಂಟಿಸಲಾಗುತ್ತದೆ.

ಅನ್ನಂಕೆಟ್ಟ್‌ನಲ್ಲಿ ಪ್ರಾವೀಣ್ಯ ಪಡೆದಿರುವ ತುಂಬ ಮಂದಿಗಳು ನೀಲಂಬೇರೂರು ಗ್ರಾಮದಲ್ಲಿದ್ದಾರೆ. ಹರಕೆ ಯೊಪ್ಪಿಸುವವರು ಇವರ ಸಹಾಯದಿಂದ ಅನ್ನಂಕೆಟ್ಟ್ ನಡೆಸುತ್ತಾರೆ. ಅವರ ಹರಕೆಗೂ ಅವರ ಸಾಂಪತ್ತಿನ ಸ್ಥಿತಿಗತಿಗೂ ಅನುಸಾರವಾಗಿ ಹಂಸದ ಗಾತ್ರ ಹೆಚ್ಚಬಹುದು ಇಲ್ಲವೇ ಕುಗ್ಗಬಹುದು.

ದೇವಾಲಯದ ವತಿಯಿಂದ ಎಲ್ಲ ವರ್ಷಗಳಲ್ಲೂ ಅನ್ನಂಕೆಟ್ಟ್ ನಡೆಸಿ ದೇವಿಗೆ ಸಮರ್ಪಿಸಲಾಗುತ್ತದೆ. ಇದರ ಹೊರತಾಗಿ ಇತರ ಹರಕೆಗಾರರ ಹರಕೆಯ ಹಂಸಗಳೂ ಇರುತ್ತವೆ, ಇರಬೇಕೆಂಬುದು ಕಡ್ಡಾಯ. ಕನ್ನಿಕ್ಕಾರರ(ಮೊದಲ ಬಾರಿ ಹರಕೆ ಹೊತ್ತವರು) ಅನ್ನಂನ ಹರಕೆ ಇಲ್ಲದ ವರ್ಷ ಪಡಯಣಿ ನಡೆಸಬಾರದೆಂಬ ಪಾರಂಪರಿಕ ಕಟ್ಟಳೆಯಲ್ಲಿ ಎಲ್ಲ ಜನರೂ ನಂಬುಗೆಯಿರಿಸಿದ್ದಾರೆ. ಹೊಸ ‘ಅನ್ನ’ಗಳು ಇಲ್ಲದ ವರ್ಷಗಳಲ್ಲಿ ನೀಲಂಬೇರೂರು ಪಡಯಣಿ ನಡೆದಿಲ್ಲ. ಪಡಯಣಿಯ ದಿನ ಮೊದಲು ಸಮರ್ಪಿಸಬೇಕಾದುದು ಹೊಚ್ಚ ಹೊಸ ‘ಅನ್ನ’ ಪಾರಂಪರಿಕ ನಂಬುಗೆಗೆ ಈಗಿನ ಜನಸಮೂಹದಿಂದಲೇ ಯಾವುದೇ ಧಕ್ಕೆ ಒದಗಿಲ್ಲ. ಅದನ್ನು ಹಿಂದಿನಂತೆಯೇ ಪಾಲಿಸಿಕೊಂಡು ಬರುತ್ತಿದ್ದಾರೆ.

ಅನ್ನಂಕೆಟ್ಟ್ ಕೇವಲ ಆಚಾರ ಅನುಷ್ಠಾನಗಳ ಬದ್ಧತೆ ಮತ್ತು ಜನರ ಸಂಪೂರ್ಣ ಸಹಭಾಗಿತ್ವಗಳಿಗೆ ಮಾತ್ರ ನಿದರ್ಶನವಾಗಿರದೆ ಜನಪದರ ಕೈಚಳಕ ಕಲಾಕೌಶಲದ ದೃಷ್ಟಾಂತ ಕೂಡ ಆಗಿದೆ.

– ಎ.ಕೆ.ಎನ್. ಅನುವಾದ ಕೆ.ಕೆ.

ಅರಬನ ಮುಟ್ಟ್ ಕೇರಳದ ಮುಸ್ಲಿಮರ ಧಾರ್ಮಿಕ ಆಚರಣಾತ್ಮಕ ಕಲೆ. ಹಿಂದೆ ಕಾಲರಾ, ವಸೂರಿ ಮೊದಲಾದ ಸಾಂಕ್ರಾಮಿಕ ರೋಗಗಳು ಹರಡುತ್ತಿರುವಾಗ ಸಾಮೂಹಿಕ ಪ್ರಾರ್ಥನೆಯಲ್ಲಿ ಈ ಕಲೆಯನ್ನು ಬಳಸುತ್ತಿದ್ದರು. ರೋಗ ನಿವಾರಣೆಯಾದ ಮನೆಗಳಲ್ಲಿ ಅರಬನ ತಂಡಗಳು ಶುದ್ಧಿಕರ್ಮಗಳನ್ನು ನಡೆಸುತ್ತವೆ.

ಉರೂಸು ನೇರ್ಚೆ, ರಾತೀಬ್, ಕೂತ್ ರಾತೀಬ್ ಮೊದಲಾದ ಧಾರ್ಮಿಕ ಆಚರಣೆಗಳಲ್ಲಿ ಅರಬನ ಮುಟ್ಟ್ ಇರುತ್ತದೆ. ಹಿಂದೆ ಅರಬಿ ಕಾವ್ಯಗಳನ್ನು (ಬೈತುಗಳು)ಹಾಡಿ ಅರಬನಮುಟ್ಟ್ ಮಾಡುತ್ತಿದ್ದರು. ದಫ್‌ಗಿಂತ ವ್ಯಾಸವಿರುವ ವಾದ್ಯೋಪಕರಣವಾಗಿದೆ ಅರಬನ. ಇದರ ಬದಿಯಲ್ಲಿ ಲೋಹದ ತುಂಡುಗಳನ್ನು ಜೋಡಿಸಿರುತ್ತಾರೆ. ಒಂದು ಬದಿಯಲ್ಲಿ ಆಡು ಅಥವಾ ಎತ್ತಿನ ಚರ್ಮವನ್ನು ಬಿಗಿದಿರುತ್ತಾರೆ.

ಎರಡು ಸಾಲುಗಳಲ್ಲಿ ಮುಖಾಮುಖಿಯಾಗಿ ನಿಂತುಕೊಂಡು ಅರಬನ ಮುಟ್ಟ್ ನಡೆಸುತ್ತಾರೆ. ನಿಂತು, ಕುಳಿತು, ಬಾಗಿ, ಬಳುಕಿ ಹೆಜ್ಜೆಗಳನ್ನು ಹಾಕುತ್ತಾ೦ ಅರಬನ ಬಡಿಯುತ್ತಾರೆ. ಈ ಪ್ರದರ್ಶನ ಸಂದರ್ಭದಲ್ಲಿ ಒಬ್ಬ ಗುರುವಿರುತ್ತಾನೆ. ಅವನು ಬೈತುಗಳನ್ನು ಹಾಡುತ್ತಾನೆ. ಉಳಿದವರು ಹಾಡಿಗೆ ದನಿಗೂಡಿಸುತ್ತಾರೆ. ಅರಬನ ಬಡಿತದಲ್ಲಿ ಅನೇಕ ವೈವಿಧ್ಯಗಳಿವೆ. ಮುಟ್ಟ್ ಅಂಜ್ ಮುಟ್ಟ್, ಕೋರುಮುಟ್ಟ್‌, ವಾರಿಮುಟ್ಟ್‌ ಎಂದು ಇವುಗಳನ್ನು ಗುರುತಿಸುತ್ತಾರೆ. ಕಳಿಮುಟ್ಟ್ ಎಂಬ ವಿಧಾನದಲ್ಲಿ ಶರೀರದ ಬೇರೆ ಅಂಗಗಳಿಗೆ ಬಡಿದು ಹಾಡುವುದಾಗಿದೆ. ಅರೇಬಿಯಾದಲ್ಲಿ ಜಾನಪದ ಹಾಡು, ಯುದ್ಧ, ಮರುಭೂಮಿಯಲ್ಲಿ ದಾರಿ ತಪ್ಪಿದವರಿಗೆ ಸೂಚನೆ ನೀಡುವುದಕ್ಕಾಗಿ ಅರಬನ ವಾದ್ಯವನ್ನು ಬಳಸುತ್ತಿದ್ದರಂತೆ.

ಕೇರಳದಲ್ಲಿ ಅರಬನ ಎಂಬ ವಾದ್ಯ ಹಾಗೂ ಪ್ರದರ್ಶನಕ್ಕೆ ಧಾರ್ಮಿಕತೆಯೇ ಕಾರಣ. ಈ ವಾದ್ಯವನ್ನು ನೆಲದಲ್ಲಿ ಇರಿಸಬಾರದೆಂಬ ನಂಬಿಕೆ ಇದೆ. ಅರಬನ ಮುಟ್ಟ್‌ನೊಂದಿಗೆ ಕೂತ್ ರಾತೀಬಿನಲ್ಲಿ ನಡೆಸುವ ದೇಹಕ್ಕೆ ಚುಚ್ಚುವ ವಿಧಿಗಳೆಲ್ಲ ಧಾರ್ಮಿಕ ಮುಖವನ್ನು ಅನಾವರಣಗೊಳಿಸುತ್ತವೆ. ಭಕ್ತಿಯಿಂದ ತಾಳಕ್ಕೆ ಅನುಗುಣವಾಗಿ ಚಲಿಸುವ ಅರಬನ ಮುಟ್ಟ್ ಧಾರ್ಮಿಕ ಕಲೆಯಾಗಿ ಉಳಿದು ಬಂದಿದೆ. ಇಂದು ಈ ಧಾರ್ಮಿಕ ಕಲೆ ನಿಧಾನವಾಗಿ ಮರೆಯಾಗುತ್ತಿದೆ. ಸ್ಪರ್ಧೆಗಳಲ್ಲಿ, ಮೆರೆವಣಿಗೆಗಳಲ್ಲಿ ಸಾಂಸ್ಕೃತಿಕ ಜಾಥಾಗಳಲ್ಲಿ ಇದನ್ನು ಬಳಸುತ್ತಿದ್ದಾರೆ.

– ಇ.ಕೆ.ಎಸ್. ಅನುವಾದ ಎನ್.ಎಸ್.

ಅರಬಿ ಕಥ ‘ಸಾವಿರದ ಒಂದು ರಾತ್ರಿಗಳು’ ಎಂದು ಪ್ರಸಿದ್ದವಾದ ಕಥಾಸಂಕಲನವು ಅರಬಿಕಥೆ ಎಂಬ ಹೆಸರಲ್ಲೂ ವಿಶ್ವಪ್ರಖ್ಯಾತವಾಗಿದೆ. ಇದು ಅರೇಬಿಯನ್ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಆಲಿಫ್ ಲೈಲಾ ವಾ ಲೈ ಲಾ ಎಂಬುದು ಇದರ ಅರೇಬಿಯನ್ ಹೆಸರು. ಸಾವಿರದ ಒಂದು ರಾತ್ರಿಗಳಲ್ಲಿ ಷೆಹರಾಸಾದ್ ಎಂಬ ಹುಡುಗಿ ಷಹರಿಯಾರ್ ರಾಜನಿಗೆ ಹೇಳಿದ ಕಥೆಗಳು ‘ಸಾವಿರದ ಒಂದು ರಾತ್ರಿಗಳು’ ಷಹರಿಯಾರ್ ರಾಜ ಸ್ವಂತ ಪತ್ನಿಯಿಂದ ವಂಚಿತನಾದಾಗ ಅವಳ ಕೊಲೆ ಮಾಡಿದ. ಮಾತ್ತೂ ಹಗೆ ತಣಿಯದೆ ಒಂದೊಂದು ರಾತ್ರಿ ಒಬ್ಬೊಬ್ಬ ಕನ್ಯೆಯನ್ನು ಮದುವೆಯಾಗಿ ಮೊದಲ ರಾತ್ರಿ ಕಳೆಯುತ್ತಲೆ ಅವರನ್ನು ಕೊಲ್ಲುತ್ತಲೂ ಇದ್ದ. ಕೊನೆಗೆ ಮಂತ್ರಿ ಪುತ್ರಿಯಾದ ಷಹರಸಾದ ಉಳಿದ ಹೆಣ್ಮಕ್ಕಳ ಜೀವವನ್ನು ಕಾಪಾಡುವುದಕ್ಕಾಗಿ ರಾಜನ ಹೆಂಡತಿಯಾದಳು. ಷಹರಸಾದಳ ಕಥೆಗಳನ್ನು ಕೇಳಿದ ಅರಸ ಜಿಜ್ಞಾಸುವಾದ. ರಾತ್ರಿಯಲ್ಲಿ ಕಥೆಗಳನ್ನು ಕೇಳುವುದಕ್ಕಾಗಿ ಷೆಹರಸಾದಳನ್ನು ಕೊಲ್ಲದೆ ಉಳಿಸಿದ. ಹೀಗೆ ಸಾವಿರದ ಒಂದು ರಾತ್ರಿಗಳಲ್ಲಿ ನಿರಂತರವಾಗಿ ಷೆಹರಸಾದ್ ಹೇಳಿದ ಕಥೆಗಳು ‘ಸಾವಿರದ ಒಂದು ರಾತ್ರಿಗಳು’ ಎಂಬ ಹೆಸರಲ್ಲಿ ಸಂಕಲಿತವಾಗಿವೆ.

ರಾಜನ ನಿರ್ದೇಶಾನುಸಾರ ಆ ದೇಶದ ಪ್ರಸಿದ್ಧ ಲೇಖಕರು ಈ ಕಥೆಗಳನ್ನು ಬರೆದಿಟ್ಟುಕೊಂಡು ಅಸಂಖ್ಯಾತ ಪ್ರತಿಗಳನ್ನು ಮಾಡಿ ಸಾಮಾನ್ಯ ಜನರ ಅರಿವನ್ನು ಹೆಚ್ಚಿಸುವುದಕ್ಕಾಗಿ ಅವುಗಳನ್ನು ಪ್ರಸಾರ ಮಾಡುವಂತೆಯೂ ಅರಸ ಆಜ್ಞೆ ಮಾಡಿದ್ದ.

‘ಸಾವಿರದ ಒಂದು ರಾತ್ರಿಗಳ’ ರಚನಾ ಕ್ರಮವೆಂದರೆ ಒಂದು ಕಥೆಯೊಳಗೆ ಅನೇಕ ಕಥೆಗಳು ಹೆಣೆದುಕೊಂಡಿರುವ ಹಾಗೆ ಇರುವುದು. ಈ ಕಥೆಗಳನ್ನು ಜತೆಯಾಗಿ ಪೋಣಿಸುವ ಕಥಾತಂತು ಪರ್ಷಿಯಾದಿಂದ ಸಾಲ ಪಡೆದಂಥದು. ಸಾವಿನಿಂದ ತನ್ನನ್ನು ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆಯೂ ಕಥೆಗಳಿಗೆ ಇರುವುದರಿಂದ ಇವುಗಳನ್ನು ಪ್ರಸ್ತುಪಡಿಸುವ ರೀತಿಯೂ ವೈಶಿಷ್ಟ್ಯ ಪೂರ್ಣವಾಗಿದೆ. ಹಳೆಯ ಕಥೆಗಳ ಶೈಲಿಯಲ್ಲಿರುವ ಅಖ್ಯಾನವೂ ಪ್ರತಿನಿಮಿಷವೂ ಕುತೂಹಲವನ್ನು ಕೆರಳಿಸುವ ಕಥನವೂ ಈ ಕಥೆಗಳಲ್ಲಿವೆ. ಈ ಸಂಕಲನದಲ್ಲಿ ಹಲವು ರೀತಿಯ ಕಥೆಗಳಿವೆ. ಬಾಗ್ದಾರನ್ನು ರಾಜಧಾನಿಯನ್ನಾಗಿ ಆಳಿದ ಹರೂನ್ ಅಲ್ ರಶೀದನ ಕುರಿತಾಗಿರುವ ಚಾರಿತ್ರಿಕ ಕಥೆಗಳು. ಹಾಸ್ಯಕಥೆಗಳು, ಮನಷ್ಯೇತರರು ಮುಖ್ಯಪಾತ್ರಗಳಾಗಿರುವ ಕಥೆಗಳು – ಇವೆಲ್ಲ ಅದರಲ್ಲಿ ಅಡಕವಾಗಿದೆ.

ಇದನ್ನು ಬರೆದವರು ಯಾರು ಎನ್ನುವುದು ಸ್ಪಷ್ಟವಿಲ್ಲ. ಅದರ ಕಾಲದ ಕುರಿತೂ ಭಿನ್ನಾಭಿಪ್ರಾಯಗಳಿವೆ. ಹದಿನಾಲ್ಕನೆಯ ಮತ್ತು ಹದಿಮೂರನೆಯ ಶತಮಾನದ ಮಧ್ಯದಲ್ಲಿ ಈಗ ಸಿಗುತ್ತಿರುವ ಅರಬಿಕಥೆಗಳು ಹುಟ್ಟಿಕೊಂಡಿರಬೇಕು ಎಂದು ತೀರ್ಮಾನಿಸಬಹುದು ಅಷ್ಟೆ. ಈ ಕಥೆಗಲ ಕುರಿತಾದ ಮೊದಲ ಉಲ್ಲೇಖವು ಹತ್ತನೆಯ ಶತಮಾನದ ಒಂದು ಕೃತಿಯಲ್ಲಿ ಇದೆಯೆಂದೂ, ಕ್ರಿ.ಶ.೯೫೭ರಲ್ಲಿ ತೀರಿಕೊಂಡ ಮಸೂದಿ ಪರ್ಶಿಯನ್ (ಷಹ್‌ಲವಿ) ಭಾಷೆಯಿಂದ ಅರೇಬಿಯನ್ ಭಾಷೆಗೆ ಅದನ್ನು ಭಾಷಾಂತರಿಸಿದನೆಂದೂ ಹೇಳುತ್ತಾರೆ. ರಾಜನ, ಮಂತ್ರಿಯ, ಮಂತ್ರಿಯ ಮಗಳ ಮತ್ತು ಅವಳ ದಾಸಿಯ ಕಥೆಗಳಾದ ಒಂದು ಸಾವಿರದ ಒಂದು ರಾತ್ರಿಗಳ ಕುರಿತು ಅದರಲ್ಲಿ ಸೂಚನೆಗಳಿವೆ. ಬಳಿಕ ಸಂಕಲಿತ ರೂಪದಲ್ಲಿ ಲಭ್ಯವಾದ ಕಥೆಗಳಲ್ಲಿ ಮಧ್ಯಕಾಲದ ಅರೇಬಿಯನ್ ಸಂಸ್ಕೃತಿಯು ಪ್ರತಿಬಿಂಬಿತವಾಗುತ್ತದೆಯೆಂದೂ ಮಲಯಾಳಂ ಭಾಷಾಂತರಕಾರನಾದ ಎಂ.ವಿ.ಸದಾಶಿವನ್ ಅಭಿಪ್ರಾಯ ಪಡುತ್ತಾರೆ.

ಕೇರಳದ ಜನಪದ ಕಥೆಗಳಲ್ಲಿ ಅತ್ಯಂತ ಪ್ರಧಾನವಾದವುಗಳಲ್ಲಿ ‘ಅರೇಬಿಯನ್ ಕಥೆ’ಗಳೂ ಒಂದು. ಅದಕ್ಕೆ ಕೇರಳದಲ್ಲಿ ಅಷ್ಟೊಂದು ಪ್ರಚಾರವಿದೆ. ಆಲಿಬಾಬ ಮತ್ತು ನಲುವತ್ತು ಕಳ್ಳರು ಮುಂತಾದವು ಕೇರಳೀಯ ಮನಸ್ಸಿನ ಭಾಗವೇ ಆಗಿಬಿಟ್ಟಿವೆ.

ಅರೇಬಿಯನ್ ಕಥೆಗಳ ಜನಪದೀಯ ಸ್ವರೂಪವೂ ಕಥನರೀತಿಯೂ ಇಲ್ಲಿಯ ಕಥನರೀತಿಗಳನ್ನು ಬಹಳಷ್ಟು ಪ್ರಭಾವಿಸಿವೆ. ಕಥೆಯೊಳಗೆ ಕಥೆ ಹೇಳೂವ ರೀತಿ ಭಾರತೀಯ ಪರಂಪರೆಯಲ್ಲೂ ತುಂಬ ಪರಿಚಿತವಾದುದೇ ಆಗಿದೆ.

– ಇ.ಕೆ.ಎಸ್. ಅನುವಾದ ಕೆ.ಕೆ