ಅಂಕಮ್ಮ ಇದೊಂದು ಗ್ರಾಮದೇವತೆ. ಆಂಧ್ರಪ್ರದೇಶದ ಕೃಷ್ಣ, ಗುಂಟೂರು, ಖಮ್ಮಂ, ಗೋದಾವರಿ ಜಿಲ್ಲೆಗಳಲ್ಲಿ ಅಂಕಮ್ಮ ಎಂಬ ಗ್ರಾಮದೇವತೆಯ ಸೇವೆಯನ್ನು ಮಾಡುತ್ತಾರೆ. ಇತರ ಜಿಲ್ಲೆಗಳಲ್ಲಿ ಅಂಕಮ್ಮನಿದ್ದರೂ ಅಷ್ಟೊಂದು ವ್ಯಾಪಕವಾಗಿಲ್ಲ. ಅಂಕಮ್ಮನ ಗುಡಿಗಳು ಊರಿಗೆ ಸಮೀಪದಲ್ಲಿಯೇ ಇರುತ್ತವೆ. ಇವು ಹುಲ್ಲಿನ ಜೋಪಡಿ ಇಲ್ಲವೆ ಹೆಂಚಿನ ಮನೆಗಳದಾಗಿರುತ್ತವೆ. ಅಂಕಮ್ಮನ ವಿಗ್ರಹಗಳು ಬಹುತೇಕ ಕಲ್ಲನ್ನು ಕೆತ್ತಿ ಮಾಡಿದ ವಿಗ್ರಹಗಳಾದರೆ, ಕೆಲವು ಕಡೆ ಮರದ ವಿಗ್ರಹಗಳೂ ಇವೆ. ಅಂಕಮ್ಮ ತುಂಬ ಶಕ್ತಿಯುತಳಾದ ದೇವತೆ ಎಂದು ಜನರ ನಂಬಿಕೆ. ಈಕೆ ಆಗ್ರಹಗೊಂಡರೆ ಪಶುಗಳಿಗೆ ನಾನಾ ಬಗೆಯ ರೋಗಗಳು ಬರುತ್ತದೆಂದೂ ಬೆಳೆಗಳು ಸರಿಯಾಗಿ ಆಗುವುದಿಲ್ಲವೆಂದೂ, ಸಕಾಲಕ್ಕೆ ಮಳೆ ಬರುವುದಿಲ್ಲವೆಂದೂ ಜನ ನಂಬುತ್ತಾರೆ. ಆದ್ದರಿಂದ ವರ್ಷಕ್ಕೆ ಒಂದು ಸಲ ಆಷಾಢಮಾಸದಲ್ಲಿ ಅಂಕಮ್ಮನ ಸೇವೆ ಮಾಡುತ್ತಾರೆ. ಈ ಸೇವೆ ಅಥವಾ ದೇವರ ಕಾರ್ಯ ಒಂದು ವಾರದವರೆಗೂ ನಡೆಯುತ್ತದೆ. ಇಲ್ಲಿ ರಜಕರು ಅರ್ಚಕರಾಗಿರುತ್ತಾರೆ. ಕಥೆಯನ್ನು ಹೇಳಲು ಮತ್ತಿತರ ಕೆಲಸಗಳಿಗೆ ಬೈಂಡ್ಲನವರು, ಆಸಾದಿಗಳು ಪಾಲ್ಗೊಳ್ಳುತ್ತಾರೆ. ಊರಿನವರೆಲ್ಲರ ಸಹಕಾರದಿಂದ ಅಂಕಮ್ಮನಿಗೆ ಸೇವೆ ಸಲ್ಲಿಸುತ್ತಾರೆ. ಭಾನುವಾರ ಅಂಕಮ್ಮನಿಗೆ ತುಂಬ ಪ್ರಿಯವಾದ ದಿನವೆಂದು ಅವರ ಭಾವನೆ. ಒಂದು ವಾರದವರೆಗೆ ನಡೆಯುವ ದೇವರ ಕಾರ್ಯದಲ್ಲಿ ಬಲಿಗಳು, ಸಿಡಿ ನಡೆಯುತ್ತವೆ. ವರ್ಷಕ್ಕೊಮ್ಮೆ ಅಂಕಮ್ಮನ ಸೇವೆ ಮಾಡಿದರೆ ಅವಳು ಕಾಪಾಡುತ್ತಾಳೆ ಎಂಬುದು ಜನಪದರ ನಂಬಿಕೆ. ಪಲ್ನಾಡಿನ ವೀರರ ರಣಕ್ಷೇತ್ರವಾದ ಕಾರೆಂಪೂಡಿಯಲ್ಲಿ ಅಂಕಮ್ಮನ ದೊಡ್ಡ ದೇವಾಲಯವಿದೆ. ಕಾರ್ತಿಕಮಾಸದಲ್ಲಿ ವಾರದವರೆಗೆ ನಡೆಯುವ ಪಲ್ನಾಡಿದ ವೀರರ ಸೇವೆಗಳಲ್ಲಿ ಅಂಕಮ್ಮನ ಸೇವೆಯೂ ಒಂದು ದಿನವಿರುತ್ತದೆ. ಅಂಕಮ್ಮ ಪಲ್ನಾಡಿನ ವೀರರಿಗೆ, ವಿಶೇಷವಾಗಿ ಬ್ರಹ್ಮನಾಯ್ಡು ಮಲಿದೇವ ಮೊದಲಾದ ವೀರರ ಪರವಾಗಿ ಅವಳು ರಕ್ಷ ದೇವತೆಯಾಗಿ ನೆಲಸಿದ್ದಾಳೆಂದು ಪಲ್ನಾಡಿನ ವೀರರ ಕತೆಯಲ್ಲಿ ಹೆಚ್ಚಾಗಿ ಪ್ರಸ್ತಾವಿಸಲಾಗಿದೆ.

ಬ್ರಹ್ಮ ನಾಯ್ಡು ತನಗೆ ಯುದ್ಧದಲ್ಲಿ ಜಯ ದೊರಕಿಸಿ ಕೊಡಬೇಕೆಂದು ಪ್ರಾರ್ಥಿಸಿ, ಅಂಕಮ್ಮನಿಗೆ ಅನೇಕ ವಿಧವಾದ ಮುಡಿಪುಗಳನ್ನು ಕಟ್ಟಿ, ಬಲಿಗಳನ್ನು ನೀಡಿದನೆಂದು ಕಥೆಯಲ್ಲಿ ಬರುತ್ತದೆ. ಅದೇ ಕಾರ್ಯವನ್ನು ಇಂದಿಗೂ ಒಂದು ಸಂಪ್ರದಾಯವಾಗಿ ಪಲ್ನಾಡಿನ ವೀರರು ಸೇವೆಗಳ ಮೂಲಕ ಆಚರಿಸುತ್ತಾರೆ. ಅಂಕಮ್ಮನ ಮಹಿಮೆ ತುಂಬಾ ವಿಸ್ತಾರವಾಗಿದೆ. ಅಂಕಮ್ಮನ ಕಥೆ ಪ್ರಾಚೀನ ತಾಳೆಗರಿ, ಗ್ರಂಥಗಳ ರೂಪದಲ್ಲಿ ದೊರೆತಿರುವ ಅಂಶ ತಂಗಿರಾಲ ವೆಂಕಟ ಸುಬ್ಬರಾವ್ ಅವರ ಸಂಶೋಧನೆಯಿಂದ ತಿಳಿದು ಬಂದಿದೆ.

– ಪಿ.ಎಸ್.ಸಿ. ಅನುವಾದ ವಿ.ಆರ್.

ಅಂಕಮ್ಮ ಕಥ ತೆಲುಗುನಾಡಿನ ಪ್ರಸಿದ್ಧ ಶಕ್ತಿದೇವತೆ. ಈಗಲೂ ಅಂಕಾಳಮ್ಮ ಎಂಬ ಹೆಸರಿನಲ್ಲಿ ಕೆಲವು ಗ್ರಾಮಗಳಲ್ಲಿ ಪೂಜೆ ಪಡೆಯುತ್ತಿದ್ದಾಳೆ. ಅಂಕಮ್ಮನ ಬಗೆಗಿನ ಕಾವ್ಯಗಳಲ್ಲಿ ಕೆಲವು ಅಸ್ಪಷ್ಟ ಐತಿಹಾಸಿಕ ಸಂಗತಿಗಳೂ ಸೇರಿಕೊಂಡಿವೆ. ಕಲ್ಯಾಣಿ ಚಾಳುಕ್ಯರಿಗೆ ಸಂಬಂಧಿಸಿದ ವಿಷಯಗಳು ಈ ಕಥೆಗಳಲ್ಲಿ ಸೇರಿಕೊಂಡಿವೆ. ಅಂಕಮ್ಮ ಏಳು ಜನ ಅಕ್ಕ ತಂಗಿಯರಲ್ಲಿ ಒಬ್ಬಳು. ಉಳಿದವರು ಪೋಲೇರಮ್ಮ, ಮಾಲಕ್ಷುಮಮ್ಮ, ಕನಕದುರ್ಗಮ್ಮ, ಬಂಗಾರಮ್ಮ, ಗಂಗಮ್ಮ, ಕೂನಲಮ್ಮ.

ಅಂಕಮ್ಮನಿಗೆ ಸಂಬಂಧಿಸಿದ ಒಂದು ಕಥೆಯಲ್ಲಿ ಕಲ್ಯಾಣದ ದೇವಗಿರಿ ಪಟ್ಟಣವನ್ನು ದೇವಾಧಿದೇವರುದ್ರ ಆಳುತ್ತಿದ್ದಾಗ ನಡೆದ ವಿಷಯಗಳನ್ನು ವಿವರಿಸಲಾಗಿದೆ. ಕಲ್ಯಾಣದ ರಾಜ ಅಂಕಾಳ ಶಕ್ತಿಯನ್ನು ಆರಾಧಿಸದೆ ಶೃಂಗಾರವನದಲ್ಲಿ ತಪಸ್ಸು ಮಾಡುತ್ತಿದ್ದ. ಆದಿ ಭಯಂಕರಿ ಅಂಕಮ್ಮ ಮಾಂತಾಳಿ ಪಟ್ಟಣದಲ್ಲಿದ್ದಳು. ಅಜ್ಜಿಯ ವೇಷದಲ್ಲಿ ಕಲ್ಯಾಣ ದೇವಗಿರಿಗೆ ಬಂದಳು. ಅಲ್ಲಿಯ ಯುವರಾಜರು ಏಳುಜನ ಆಕೆಯನ್ನು ಹೊಡೆದು ಹಿಂಸೆ ಮಾಡಿದರು.

ಅನಂತರ ಅಂಕಮ್ಮ ಕರಿನೇರಳೆ ಹಣ್ಣನ್ನು ಸೃಷ್ಟಿಸಿ, ಅವುಗಳನ್ನು ಮಾರುತ್ತಾ ಕಲ್ಯಾಣಕ್ಕೆ ಬಂದಳು. ಮತ್ತೆ ದೇವಾಧೊದೇವರುದ್ರನ ಮೊಮ್ಮಕ್ಕಳು ಅವಳನ್ನು ಹೊಡೆದು ಹಿಂಸಿಸಿದರು. ಮತ್ತೆ ಅಂಕಮ್ಮ ಬೆರಣಿಗಳನ್ನು ಮಾರುತ್ತಾ ಬಂದಳು, ಮತ್ತೊಮ್ಮೆ ಬುಡಕಟ್ಟು ಮಹಿಳೆಯಾಗಿ ಬಂದಳು. ಪ್ರತಿಸಲ ರಾಜನ ಮೊಮ್ಮಕ್ಕಳು ಆಕೆಗೆ ಅನೇಕ ರೀತಿಯ ಹಿಂಸೆ ಕೊಟ್ಟರು. ಅಂಕಮ್ಮ ಅನೇಕ ಪವಾಡಗಳನ್ನು ತೋರಿದಳು. ಭದ್ರಗಿರಿ ಚಿಂತಾಮಣಿ ಪಟ್ಟಣಕ್ಕೆ ಹೋಗಿ ಅಲ್ಲಿ ಕಲ್ಲು ಕೊಳದಲ್ಲಿ ಹೂವುಗಳನ್ನು ಸೃಷ್ಟಿಸಿದಳು. ದೇವಗಿರಿ ಪಟ್ಟಣದಲ್ಲಿ ಹೂವುಗಳೇ ಇಲ್ಲದಿರಲು ರಾಜನ ಅನುಮತಿಯಿಂದ ಅವನ ಮೊಮ್ಮಕ್ಕಳು ಬೆಳ್ಳಿ ರಥ, ಮೇಘ ರಥ, ಕಂಚಿನ ರಥ ಸಿದ್ಧ ಮಾಡಿಕೊಂಡು ಭದ್ರಗಿರಿ ಚಿಂತಾಮಣಿಗೆ ಹೋದರು. ಮತ್ತೊಮ್ಮೆ ಬಂದಾಗ ಅಂಕಾಳಮ್ಮ ಅವರನ್ನು ಹಿಡಿದು ಬಂಧಿಸಿದಳು. ಅವರಿಗೆ ಅನೇಕ ರೀತಿ ಹಿಂಸೆ ಕೊಟ್ಟಳು.

ಅಂಕಮ್ಮನನ್ನು ಕುರಿತ ಎರಡನೆಯ ಕಥೆ ರವದ್ದೇವಿರಾಜನಿಗೆ ಸಂಬಂಧಿಸಿದ್ದು. ಇದರಲ್ಲಿ ಸಾವಿರಕ್ಕಿಂತ ಹೆಚ್ಚಿನ ಸಾಲುಗಳಿವೆ. ರವದ್ದೇವಿ ರಾಜ ಧರ್ಮಸೂಡಾನಿ ರಾಜನ ಮಗ. ಆತನಿಗೆ ಒಬ್ಬ ಮುನಿ ಹನ್ನೆರಡು ಮಟ್ಟಿನ ಚಿನ್ನದ ಕಿನ್ನರಿಯನ್ನು ಕೊಟ್ಟ. ಅದನ್ನು ರವದ್ದೇವಿ ರಾಜ ಮಾಂಕಾಳಿ ಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಯ ದೇವತೆಯ ಬಳಿ ‘ಆನಂದಕೋಪುಲು’ (ಹಾಡು) ಹಾಡಿ ಸಂತೋಷ ಉಂಟುಮಾಡಿದ.

ಈ ಕಥೆಯಲ್ಲೂ ಕರ್ನಾಟಕದ ರಾಜರು ಪಾತ್ರಗಳಾಗಿದ್ದಾರೆ. ಇದರಲ್ಲಿರುವ ಬಾಲಕನ ಸೋದರಮಾವಂದಿರಾದ ಅರವತ್ತು ಮೂವರು ಗೋವಿಂದ ರಾಜರು ತುಮ್ಮೆದ (ದುಂಬಿ) ಬಲ್ಲಾಣರಾಜನಿಗೆ ಸೋತು ಓಡಿಹೋದರು. ಇದನ್ನು ತಿಳಿದ ಬಾಲಕ ದೇವತೆಯ ಅಪ್ಪಣೆಯಂತೆ ತುಮ್ಮೆದ ಬಲ್ಲಾಣನ ಮೇಲೆ ದಂಡೆತ್ತಿ ಹೋಗಿ ಅವನನ್ನು ಸೋಲಿಸಿ ಕೊಂದ.

ಬಾಲಕ ಹಿಂದಿರುಗಿ ದೇವತೆಯ ಬಳಿ ಬಂದ. ಆಗ ದೇವತೆ ಹುತ್ತದಲ್ಲಿದ್ದಳು. ಬಾಲಕ ‘ನಾಲಗೆ ಇಲ್ಲದ ನಾಗಸ್ವರ’ ಊದಿದ. ಹನ್ನೆರಡು ಶಿರಸ್ಸಿನ ನಾಗೇಂದ್ರ ಹೊರಗೆ ಬಂದ. ಬಾಲಕ ಧೈರ್ಯದಿಂದ ಹಾವನ್ನು ಹಿಡಿದ. ರವದ್ದೇವಿರಾಜ ತನ್ನ ಹೆಂಡತಿ ಉತ್ತರ ನಲಗಂಗ ಜೊತೆಗೂಡಿ ಅಂಕಾಳ ದೇವತೆಯನ್ನು ಸೇವಿಸುತ್ತಿದ್ದ.

ಅಂಕಮ್ಮನ ಕಥಾಚಕ್ರದ ಮೂರನೆಯ ಕಥೆ ಕಲ್ಯಾಣದ ಗಂಗುರಾಜನ ಕಥೆ. ಇದರಲ್ಲಿ ೧೫೦೦ ಕ್ಕಿಂತ ಹೆಚ್ಚು ಸಾಲುಗಳಿವೆ. ರವದ್ದೇವಿ ರಾಜನ ಮಗ ಗಂಗುರಾಜ. ಇವನ ಚಿಕ್ಕಪ್ಪನ ಕನಕ ರಾವೇಂದ್ರ ಕ್ರೂರಿಯಾಗಿದ್ದ. ಗಂಗುರಾಜನನ್ನು ಸಾಯಿಸಬೇಕೆಂದು ಪ್ರಯತ್ನಿಸಿದ ಚಿಕ್ಕಪ್ಪನನ್ನು ಗಂಗುರಾಜ ಕೊಂದ.

ಗಂಗುರಾಜ ಚತುರಂಗ ಬಲಗಳೊಂದಿಗೆ ಕಲ್ಯಾನದ ಮೇಲೆ ದಂಡೆತ್ತಿ ಹೋದ. ಗಂಗುರಾಜನ ಹೆಂಡತಿ ಸೂರದ್ದೇವಿ ಅಷ್ಟಪದ್ಮಗಳ ದೇವಗಿರಿಯೆಂದು ಅಂಕಾಳ ಶಕ್ತಿಯನ್ನು ಸ್ತುತಿ ಮಾಡಿ ತನ್ನ ಗಂಡನ ಜೊತೆ ಕಳುಹಿಸಿದಳು. ಗಂಗುರಾಜ ಅಂಕಮ್ಮನ ಸಹಾಯದಿಂದ ಏಳು ಸಮುದ್ರಗಳನ್ನು ದಾಟಿದ, ಬಂಡಿವೀರ ಮಹಂಕಾಳಿ ಮಠವನ್ನು ದಾಟಿದ, ಬಾಲಮಂಡಲದ ಕೋಟೆಗೆ ಮುತ್ತಿಗೆ ಹಾಕಿದ, ಪರಂಗಿ ಕೋಟೆಯ ಮೇಲೆ ದಂಡೆತ್ತಿ ಹೋಗಿ ಹದಿನಾಲ್ಕು ಜನ ಪರಂಗಿ ದೊರೆಗಳನ್ನು ಸೋಲಿಸಿದ, ಕಲ್ಯಾಣವನ್ನು ವಶಪಡಿಸಿಕೊಂಡ.

ಅಂಕಮ್ಮ ಕಾವ್ಯ ಶಕ್ತಿಕಥಾಚಕ್ರ. ಶಕ್ತಿಯ ಸ್ವರೂಪವನ್ನು ತಿಳಿಸುವ ಕಥೆ. ಮೊದಲನೆಯ ಕಥೆಯಲ್ಲಿ ಮಾರಾಸದ ರಾಜರು ವೀರಶೈವರು. ಸ್ತ್ರೀದೇವತೆಯನ್ನು ಪೂಜಿಸಲು ಒಪ್ಪುವುದಿಲ್ಲ. ಮೂರನೆಯ ಕಥೆಯಲ್ಲಿ ಗಂಗುರಾಜ ಕಲ್ಯಾಣ ನಗರವನ್ನು ವಶಪಡಿಸಿಕೊಂಡ. ಶೈವದ ಮೇಲೆ ಶಾಕ್ತೇಯ ಗೆದ್ದಂತೆ ಸೂಚಿಸುವ ಕಥೆಗಳಿವು.

ಅಂಕಮ್ಮ ಕಥೆಗಳನ್ನು ದಲಿತರು ಹಾಡುತ್ತಾರೆ. ಇವರಿಗೆ ‘ಪಂಬಗಳವರು’ ಎಂದು ಹೆಸರು. ಇವರು ಪಂಬ ವಾದ್ಯವನ್ನು ನುಡಿಸುತ್ತಾರೆ. ಪಂಬ, ತಿತ್ತಿ, ಕತ್ತಿ, ಜಮಜಾಲ ಎಂಬುವನ್ನು ಇವರು ಧರಿಸುತ್ತಾರೆ. ಕಥೆ ಹೇಳುವವನು ರಾಜಕುಮಾರನ ವೇಷದಲ್ಲಿರುತ್ತಾನೆ. ಕಾಲಿಗೆ ಗೆಜ್ಜೆ, ತಲೆಯ ಮೇಲೆ ಪೆಟ ಇರುತ್ತವೆ. ಹಣೆಯ ಮೇಲೆ ಕುಂಕುಮ ಮತ್ತು ‘ಅಡ್ಡಬೊಟ್ಟು’ ಇರುತ್ತವೆ. ಗಾಯಕ ಲಯಾತ್ಮಕವಾಗಿ ಕುಣಿಯುತ್ತಾ, ಬಲಗೈಯಲ್ಲಿರುವ ಕತ್ತಿಯನ್ನು ತಿರುಗಿಸುತ್ತಾ, ಎಡಗೈಯಲ್ಲಿರುವ ‘ಜಮಜಾಲ’ ಎಂಬುದರ ಮೇಲೆ ಕತ್ತಿಯಿಂದ ಹೊಡೆಯುತ್ತಾ ವೀರಾವೇಶದಿಂದ ಹಾಡುತ್ತಾರೆ.

– ಟಿ.ವಿ.ಎಸ್. ಅನುವಾದ ಎ.ಎಂ.ಡಿ.

ಅಂಕಿಯಾಟ ಅಂಕಿಯಾಟ ಮಕ್ಕಳಲ್ಲಿ ಅದೂ ಶಾಲೆಗೆ ಹೋಗುವ ಹಳ್ಳಿಯ ಮಕ್ಕಳಲ್ಲಿ ಜನಪ್ರಿಯತೆಯನ್ನು ಗಳಿಸಿರುವ ಒಂದು ಬಗೆಯ ಜನಪದ ಆಟ. ಈ ಆಟವನ್ನು ಸಾಮಾನ್ಯವಾಗಿ ಇಬ್ಬರೇ ಆಡುವುದು. ಕೆಲವೊಮ್ಮೆ ಮೂವರೂ ಆಡುವುದುಂಟು. ಆಟ ಪ್ರಾರಂಭವಾಗುವ ಮುನ್ನ ನೆಲದ ಮೇಲಾಗಲೀ ಹಾಳೆಯ ಮೇಲಾಗಲೀ ಸ್ಲೇಟ್‌ನಲ್ಲಾಗಲೀ ಒಂದರಿಂದ ಹತ್ತರವರೆಗೆ ಅಂಕಿಗಳನ್ನು ಎರಡು ಕಡೆ ಬರೆಯುತ್ತಾರೆ. ಮೂವರಿದ್ದಲ್ಲಿ ಮೂರು ಕಡೆ ಬರೆಯುತ್ತಾರೆ. ಮೊದಲಿಗೆ ಆಟ ಪ್ರಾರಂಭಿಸುವವನು ತಾನು ಬರೆದುಕೊಂಡಿರುವ ಅಂಕಿಗಳಲ್ಲಿ ಯಾವುದಾದರೂ ಒಂದನ್ನು ಮಧ್ಯಭಾಗದಲ್ಲಿ ಗುರುತು ಮಾಡಿ ಅದರ ಮೇಲೆ ತನ್ನ ಎರಡೂ ಕೈಗಳನ್ನು ಗುಪ್ಪೆಯಾಕಾರದಲ್ಲಿ ಮುಚ್ಚಿಕೊಳ್ಳುತ್ತಾನೆ. ಹೀಗೆ ಬರೆಯುವಾಗ ಎದುರು ಪಾರ್ಟಿಯವರು ಎದುರಿನಲ್ಲಿಯೇ ಇದ್ದರೂ ಅವನಿಗೆ ತಿಳಿಯದಂತೆ ಬರೆಯುವುದು ಜಾಣತನ. ಎದುರಿನವನು ಇವನು ಯಾವ ಅಂಕಿಯನ್ನು ಅಲ್ಲಿ ಬರೆದಿದ್ದಾನೆ ಎಂಬುದನ್ನು ಸೂಚಿಸಬೇಕು. ಅವನೇನಾದರೂ ಸರಿಯಾಗಿ ಹೇಳದಿದ್ದಲ್ಲಿ ತನ್ನ ಭಾಗದಿಂದ ಬರೆದುಕೊಂಡ ಅಂಕಿಯನ್ನು ಅಳಿಸಿಬಿಡುವನು. ಹೀಗೆ ಪರಸ್ಪರ ಒಂದು ಸಲ ಒಬ್ಬ, ಇನ್ನೊಂದು ಸಲ ಇನ್ನೊಬ್ಬ ಹೀಗೇ ಮಾಡಬೇಕು. ಹೀಗೇ ಒಂದರಿಂದ ಹತ್ತರವರೆಗಿನ ಅಂಕಿಗಳು ಯಾರದ್ದು ಬೇಗ ಮುಗಿಯುವುದೋ ಅವರು ಗೆದ್ದಂತೆ. ಆಟ ಬೇಗ ಮುಗಿಯಬಾರದು ಎಂದು ಒಂದರಿಂದ ಇಪ್ಪತ್ತು ಮೂವತ್ತು ಐವತ್ತರವರೆಗೂ ಅಂಕಿಗಳನ್ನು ಬರೆದುಕೊಂಡು ಆಡುವುದೂ ಉಂಟು.

ಇನ್ನೊಂದು ಬಗೆಯ ಅಂಕಿಯಾಟದಲ್ಲಿ ಸ್ಲೇಟ್‌ನ ಮೇಲೆ ಒಂದರಿಂದ ಹದಿನೈದರವರೆಗಿನ ಅಂಕಿಗಳನ್ನು ಬರೆದುಕೊಳ್ಳುತ್ತಾರೆ. ಅನಂತರ ಎದುರಾಳಿ ಒಂದೊಂದೇ ಅಂಕೆಗಳನ್ನು ಹೇಳಬೇಕು. ೧೫ನೇ ಸಂಖ್ಯೆಯ ಮನೆಯನ್ನು ಅಜ್ಜಿಯ ಮನೆ ಎನ್ನುತ್ತಾರೆ. ಅಜ್ಜಿಯ ಮನೆಯ ಸಂಖ್ಯೆಯಿಂದ ಆಟವನ್ನು ಪ್ರಾರಂಭಿಸಬೇಕು. ಆ ಸಂಖ್ಯೆಯ ಮೂಲಕ ಗೆರೆ ಎಳೆಯುವ ಮೂಲಕ ಮುಟ್ಟುತ್ತ ಬರಬೇಕು. ಹೀಗೆ ಗೆರೆ ಎಳೆಯುವಾಗ ಆ ಗೆರೆಯು ಅಂಕಿಯಿಂದ ಅಂಕಿಗೆ ಗೆರೆಯಿಂದ ಗೆರೆಗೆ ತಾಕಕೂಡದು. ಹೀಗೊಮ್ಮೆ ತಾಕಿದಲ್ಲಿ ಅವನ ಆಟ ಮುಗಿಯುತ್ತದೆ. ಮುಂದೆ ಎದುರಾಳಿ ಆಟ ಪ್ರಾರಂಭಿಸುವನು. ಹೀಗೆ ಎದುರಾಳಿ ಹೇಳಿದ ಮನೆಗಳನ್ನೆಲ್ಲ ಮುಟ್ಟಿ, ಗೆರೆಯನ್ನು ಎಲ್ಲೂ ತಾಕಿಸಿದಂತೆ ಪುನಃ ಅಜ್ಜಿಯ ಮನೆ ತಲುಪಿಸಿಬಿಟ್ಟರೆ ಅವನು ಗೆದ್ದಂತೆ. ಗೆದ್ದುದನ್ನು ‘ಹುಂಡಿ’ ಎಂದು ಹೇಳುವರು. ಈ ಆಟದಲ್ಲಿ ಮಕ್ಕಳ ಜಾಣ್ಮೆ ಪ್ರದರ್ಶಿತವಾಗುತ್ತದೆ.

– ಟಿ.ಎಸ್.

ಅಂಗಾಳಮ್ಮನ್ ತಮಿಳುನಾಡಿನ ಹಲವು ಭಾಗಗಳಲ್ಲಿ ಜನರಿಂದ ಭಕ್ತಿ ಭಾವದಿಂದ ಪೂಜಿಸುವ ಮುಖ್ಯ ದೇವತೆಗಳಲ್ಲಿ ಅಂಗಾಳಮ್ಮನ್ ಒಬ್ಬಳಾಗಿದ್ದಾಳೆ. ಈ ತಾಯಿಯನ್ನು ಜನರು ಅಂಗಮ್ಮನ್, ಅಂಗಾಳಪರಮೇಶ್ವರಿ, ಅಂಗಾಲಿ ಎಂದೂ ಕರೆಯುತ್ತಾರೆ. ಪ್ರಸ್ತುತ ಕಾಲದಲ್ಲಿ ಈ ತಾಯಿಯನ್ನು ಶಿವನೊಡನೆ ಇರುವ ಪಾರ್ವತಿಯಾಗಿ ಪೂಜಿಸುತ್ತಾರೆ. ಜನರು ಅಂಗಾಳಮ್ಮನನ್ನು ಶಿವಶಕ್ತಿಗಳಲ್ಲಿ ಒಂದು ಶಕ್ತಿಯಾಗಿ ಚಿತ್ರಿಸಿದ್ದಾರೆ.

ಅಂಗಾಳಮ್ಮನನ್ನು ಕುರಿತು ಪುರಾಣ ಕತೆಯೊಂದು ಜನರಲ್ಲಿ ರೂಢಿಯಲ್ಲಿದೆ. ವಲ್ಲಾಳ ಕಂಡನ್, ಮೋಗನ್‌ ಕಂಡನ್, ಇರುಳ ಕಂಡನ್, ಪೂವಾಳ ಕಂಡನ್ ಎಂಬ ನಾಲ್ಕು ದುಷ್ಟಶಕ್ತಿಗಳು ದೇವರಿಗೆ ತೊಂದರೆ ಕೊಡುತ್ತಿರುತ್ತವೆ. ಮಕ್ಕಳ ಭಾಗ್ಯವಿಲ್ಲದೆ ಪರಿತಪಿಸುತ್ತಿದ್ದ ವಲ್ಲಾಳ ಕಂಡನ್ ನಾರದನ ಹತ್ತಿರ ಕೇಳಿದಾಗ ಶಿವನನ್ನು ಕುರಿತು ತಪಸ್ಸು ಮಾಡಿದರೆ ಮಕ್ಕಳ ಭಾಗ್ಯದಕ್ಕುತ್ತದೆ ಎನ್ನುತ್ತಾರೆ. ಅದರಂತೆ ವಲ್ಲಾಳ ತಪಸ್ಸು ಮಾಡಿ ಈಶ್ವರನಿಂದ ಮಕ್ಕಳ ಭಾಗ್ಯವನ್ನು ಪಡೆದುಕೊಳ್ಳುತ್ತಾನೆ. ವಲ್ಲಾಳ ಹೆಂಡತಿ ನಿಸಾಸಿನಿಯ ಹೊಟ್ಟೆಯಲ್ಲಿ ಶಿವ ಮಗುವಾಗುತ್ತಾನೆ. ಅನಂತರ ನಾರದನಿಂದ ವಿಷಯ ತಿಳಿದ ಪಾರ್ವತಿ ವೈದ್ಯೆಯಾಗಿ ಹೋಗಿ ನಿಸಾಸಿನಿ ಹೊಟ್ಟೆಯನ್ನು ಶಿವ ಬಿಡುವಂತೆ ಮಾಡುತ್ತಾಳೆ. ಹೀಗೆ ಪಾರ್ವತಿ ದೇವರುಗಳನ್ನು ಮುಂದಿನ ಸಂಕಟದಿಂದ ಕಾಪಾಡುತ್ತಾಳೆ.

ಅಂಗಾಳಮ್ಮನ್ ದೇಗುಲಗಳಲ್ಲಿ ಪಂಚಲೋಹಗಳಿಂದ ಮಾಡಲಾದ ಅಮ್ಮನ ಪ್ರತಿಮೆಯನ್ನು ಭಕ್ತರು ಪೂಜಿಸುತ್ತಾರೆ. ಅಂಗಾಲಳಮ್ಮನ್ ವಿಗ್ರಹಕ್ಕೆ ನಾಲ್ಕು ಕೈಗಳಿರುತ್ತವೆ. ಮೇಲಿನ ಎಡಗೈನಲ್ಲಿ ತ್ರಿಶೂಲವು ಕೆಳಗಿನ ಎಡಗೈನಲ್ಲಿ ಕಪೋಲವೂ ಪ್ರಕಾಶಿಸುವುದು. ಮೇಲಿನ ಬಲಗೈಯಲ್ಲಿ ಡಮರುಗ ಹಿಡಿದುಕೊಂಡಿದ್ದು ಕೆಳ ಬಲಗೈನಲ್ಲಿ ಖಡ್ಗ ಪ್ರಕಾಶಿಸುವುದು. ಡಮರುಗದ ಮಧ್ಯಭಾಗದಲ್ಲಿ ಹಗ್ಗದ ರೀತಿಯಲ್ಲಿ ಹಾವು ಸುತ್ತುವರಿದಿದೆ. ಕೆಲವು ಭಾಗಗಳಲ್ಲಿ ಅಮ್ಮ ಹುತ್ತದ ರೂಪದಲ್ಲೂ ದರ್ಶನ ನೀಡುವಳು.

ಅಂಗಾಳಮ್ಮನ ಪರಿವಾರ ದೇವರುಗಳಾದ ಅವಲ ಮಕ್ಕಳು, ಕಾವಲುಗಾರರು ದೇಗುಲಗಳಲ್ಲಿ ಇರುತ್ತಾರೆ. ಶಕ್ತಿಯ ರೂಪವಾಗಿ ಅಮ್ಮ ಕರೆಯಲಾಗುವುದರಿಂದ ಪೀಠದ ಮುಂಭಾಗದಲ್ಲಿ ಸುಬ್ರಹ್ಮಣ್ಯ, ಗಣಪತಿ ಇರುವರು. ದೇಗುಲಗಳಲ್ಲಿ ಪಾವಡೈರಾಯನ್, ವೀರಭದ್ರ, ಇರುಳಪ್ಪನ್ ಮೊದಲಾದವರು ಪ್ರತ್ಯೇಕ ಪ್ರತ್ಯೇಕವಾದ ಪೀಠದಲ್ಲಿ ಅಥವಾ ಕಲ್ಲುಗಳಾಗಿ ಇರುವರು. ದೇಗುಗಳಲ್ಲಿ ವೀರಭದ್ರನೂ ಅಘೋರ ವೀರಭದ್ರನೂ ಕಾವಲು ದೇವರುಗಳಾಗಿ ಇರುವರು. ದೇಗುಲಗಳಲ್ಲಿ ಮಧುರೈ ವೀರನ್, ಕರುಪ್ಪಣ್ಣ ಸ್ವಾಮಿ ಅಲ್ಲದೆ, ಮಲಯಾಳ ಕರುಪ್ಪಸ್ವಾಮಿ ಮಾಸಾನಕರುಪ್ಪನ್, ಸಂಗಿಲಿಕರುಪ್ಪನ್, ಮುನೀಶ್ವರರ್, ನಾಗಸರ್ಪ ಮೊದಲಾದ ದೇವರು ಇರುವರು. ದೇಗುಲಗಳಲ್ಲಿ ಹೆಣ್ಣು ಪರಿವಾರ ದೇವತೆಗಳಾದ ರಾಕಾ, ಇರುಳಾಯಿ, ಕನ್ನಿಮಾರ್ ಮೊದಲಾದವರು ಕಾಣಿಸಿಗುತ್ತಾರೆ.

ಅಮ್ಮನಿಗೆ ‘ಮಾಯಾನ್ ಕೊಲ್ಲೈ’ ಎಂಬ ಜಾತ್ರೆ ಪ್ರತಿವರ್ಷವು ನಡೆಯುತ್ತದೆ. ಫೆಬ್ರವರಿ ತಿಂಗಳಿನ ಮಹಾಶಿವರಾತ್ರಿ ಮೊದಲ ದಿನ ಜಾತ್ರೆಯನ್ನು ನಡೆಸಲಾಗುತ್ತದೆ. ಅದು ಪುರೋಹಿತರು ‘ಕರಗ’ ಮತ್ತು ಪೂಜಾ ಸಾಮಗ್ರಿಗಳೊಡನೆ ನದಿಗೆ ಹೋಗಿ ಅಲ್ಲಿ ಕರಗಕ್ಕೆ ಪೂಜೆ ಮಾಡಿ ಅನಂತರ ಶಕ್ತಿ ಕರಗದೊಡನೆ ನದಿತೀರದಿಂದ ದೇಗುಲಕ್ಕೇ ಬರುವರು. ಅನಂತರ ತಾಯಿಯನ್ನು ಶ್ಮಶಾನಕ್ಕೆ ಹೊತ್ತುಕೊಂಡು ಹೋಗಿ ಎಡೆಯಿಟ್ಟು ಪೂಸಿಸುವರು. ಆ ಎಡೆಯನ್ನು ತಿಂದರೆ ಮಕ್ಕಳಿಲ್ಲದವರಿಗೆ ಮಕ್ಕಳಾಗುವುದೆಂದೂ ವಾಸಿಯಾಗುದ ರೋಗ ವಾಸಿಯಾಗುವುದೆಂದೂ ಜನರು ನಂಬುತ್ತಾರೆ. ಮೊದಲ ದಿನ ತಳಿರತೋರಣಕಟ್ಟಿ ಧ್ವಜಾರೋಹಣದಿಂದ ಪ್ರಾರಂಭವಾಗುವ ಈ ಜಾತ್ರೆ ಹತ್ತು ದಿನಗಳ ಕಾಲ ನಡೆಯುವುದು.

ದಿಂಡುಕಲ್ ಹತ್ತಿರವಿರುವ ಮೇಲ್ಮಲೈಯ ಊರಿನಲ್ಲಿ ‘ಅಂಗಾಳಮ್ಮ’ ಜಾತ್ರೆ ಮನಸ್ಸನ್ನು ಸೂರೆಗೊಳ್ಳುವ ಪ್ರದರ್ಶನಗಳು ನಡೆಯುತ್ತವೆ. ಜಾತ್ರೆಯ ಒಂಬತ್ತನೆಯ ದಿನ ಪುರೋಹಿತರು ಅರಿಶಿನ ಬಟ್ಟೆಯಿಂದ ಪಂಜು ಮಾಡಿ ಹೊತ್ತಿಸಿ ಶ್ಮಶಾನಕ್ಕೆ ತೆಗೆದುಕೊಂಡು ಹೋಗುವರು. ಅಲ್ಲಿ ಹೆಣ ಸುಟ್ಟ ಬೂದಿಯಿಂದ ಹೆಣ್ಣಿನ ರೂಪಮಾಡಿ ನಿಂಬೆಹಣ್ಣು, ಕೋಳಿ ಮೊದಲಾದವುಗಳನ್ನು ಇಟ್ಟು ಕೋಳಿ ಬಲಿ ಕೊಡುವರು. ಪುರೋಹಿತ ಕೋಳಿಯನ್ನು ತನ್ನ ಬಾಯಿಂದ ಕಚ್ಚಿ ಅದರ ರಕ್ತವನ್ನು ಮೈಮೇಲೆಲ್ಲ ಹಾಕಿಕೊಳ್ಳುತ್ತಾರೆ. ಅವನ ಮೈಮೇಲೆ ದೇವರು ಬಂದು ಅಲ್ಲಿರುವ ಜನರ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಂಡು ಬೀಸಾಡುವರು. ಅನಂತರ ಅಮ್ಮನ ಮೆರವಣಿಗೆ ಬರುವುದು ರೂಢಿ.

ತಮಿಳುನಾಡಿನ ದಕ್ಷಿಣ ಭಾಗಗಳಲ್ಲಿ ಅಂಗಾಳಮ್ಮನ ಪೂಜೆಯ ಸಮಯದಲ್ಲಿ ಬಲಿ ನೀಡುವರು. ಅಂಗಾಳಮ್ಮನಿಗೆ ಮಾತ್ರವಲ್ಲದೆ ಬೇರೆ ದೇವರುಗಳ ಮುಂದೆಯೂ ಬಲಿ ನಡೆಯುತ್ತದೆ. ಅಂಗಾಳ ಪರಮೇಶ್ವರಿ ಪರಮೇಶ್ವರನೊಡನೆ ಸೇರಿರುವುದರಿಂದ ‘ಸುಲೋಡು ಪೇಚ್ಚಿಗೆ’ ಬಲಿ ಕೊಡಲಾಗುತ್ತದೆ. ತಂಜಾವೂರು ಭಾಗಗಳ ಜಾತ್ರೆಗಳಲ್ಲಿ ಕೊಂಡ ಹಾಯುವುದಿದೆ.

ಪಾಂಡಿಚೇರಿಯಲ್ಲಿ ಸೆಂಬಡ್‌ವರ್‌ ವರ್ಗದವರಿಗೆ ಕುಲದೇವರು ಅಂಗಾಳಮ್ಮನೇ ಆಗಿದ್ದಾಳೆ. ಈ ತಾಯಿಯನ್ನು ಲಂಕಾ, ಬರ್ಮಾ, ರಂಗೂನ್ ಮೊದಲಾದ ಭಾಗಗಳಲ್ಲಿ ಕೂಡ ಸ್ತುತಿಸುತ್ತಾರೆ.

– ಎ.ಎಸ್.ಪಿ. ಅನುವಾದ ಆರ್.ಎಸ್

ಅಂಜುವೀಟ್ಟುಸ್ವಾಮಿ ಕೋಯಿಲ್ ತಮಿಳುನಾಡಿನ ತೂತ್ತುಕುಡಿ ಜಿಲ್ಲೆ ತಿರುಚೆಂದೂರ್ ತಾಲ್ಲೂಕು ಉಡನ್‌ಕುಡಿಗೆ ಸಮೀಪದಲ್ಲಿ ಇರುವ ಪುಟ್ಟ ಗ್ರಾಮ ಸೆಟ್ಟಿಯಾಪತ್ತು. ಈ ಊರಿನಲ್ಲಿರುವ ದೇವಸ್ಥಾನವನ್ನು ‘ಸೆಟ್ಟಿಯಾಪತ್ತು ಐದು ಮನೆಸ್ವಾಮಿ ದೇವಸ್ಥಾನ’ ಎಂದು ಕರೆಯಲಾಗುತ್ತದೆ. ಇದನ್ನು ತಿರುಮಣಿ ದೇವಸ್ಥಾನ ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ಪೂಜೆ ಮಾಡುವವರನ್ನು ‘ಎಂಟಕ್ಷರಮಾರ್ಗದವರು’ ಎಂದು ಕರೆಯಲಾಗುತ್ತದೆ. ಇವರ‍ನ್ನು ವೈಷ್ಣವರು ಎಂದು ಭಾವಿಸಲಾಗಿದೆ. ರಾಮಾನುಚಾಚಾರ್ಯರು ಮಾರ್ಗವನ್ನು ಅನುಸರಿಸುವ ಇವರಿಗೆ ‘ಹರಿ ಓಂ ರಾಮಾನುಚಾರ್ಯ’ ಎಂಬುದು ಮಂತ್ರ.

ಐದು ಮನೆಸ್ವಾಮಿ ದೇವಸ್ಥಾನದಲ್ಲಿ (ಅಂಜುವೀಟ್ಟುಸ್ವಾಮಿ ಕೋಯಿಲ್) ಪೆರಿಯಸ್ವಾಮಿ, ಆದಿ ಆತ್ತಿಸ್ವಾಮಿ, ಪೆರಿಯ ಪಿರಾಟಿ, ತಿರುಪುಳಿಯಾಳ್ವಾರ್ ಮುಂತಾದ ನಾಲ್ವರಿಗೂ ಪ್ರತ್ಯೇಕ ಸನ್ನಿಧಿ ಇದೆ. ವೈಷ್ಣವ ಪೆರುಮಾಳ್- ಅನಂತಮ್ಮಾಳ್ ಇಬ್ಬರಿಗೂ ಒಂದು ಸನ್ನಿಧಿ ಇದೆ. ಹೀಗೆ ಆರುಸ್ವಾಮಿಗಳಿಗೂ ಒಟ್ಟಿ ಐದು ಸನ್ನಿಧಿಗಳಿವೆ. ಈ ದೇವಸ್ಥಾನಗಳಲ್ಲಿ ಇತರ ದೇವಸ್ಥಾನಗಳಲ್ಲಿರುವಂತೆ ರಾಜಗೋಪುರ, ಮಂಟಪಗಳು ಇಲ್ಲ. ಜನಪದ ದೈವಾರಾಧನೆಯ ಸ್ಥಳದಂತೆ ಇರುತ್ತದೆ. ಇತ್ತೀಚೆಗೆ ಆಂಜನೇಯಸ್ವಾಮಿ ವಿಗ್ರಹ ಪ್ರತಿಷ್ಠಾಪನೆಗೊಂಡಿದೆ. ಹೊರಗೆ ಇರುವ ಕುದುರೆಯನ್ನು ಕುದುರೆಸ್ವಾಮಿ ಎನ್ನುತ್ತಾರೆ.

ಆದಿಯಲ್ಲಿ ಸೆಟ್ಟಿಯಾಪತ್ತು ಆತ್ತಿಮೂಡು ಎದುರಿಗೆ ಇದ್ದ ದೇವಸ್ಥಾನ ಆತ್ತಿಸ್ವಾಮಿ ದೇವಸ್ಥಾನ ಆಗಿದೆ. ಆತ್ತಿಸ್ವಾಮಿಯನ್ನು ಸುಡಲೈಮಾಡನ್ ಅಂಶವೆಂದು ಪೂಜಿಸಲಾಗುತ್ತದೆ. ಇವರಿಗೆ ಕಿವಿಯಲ್ಲಿ ಮಂತ್ರ ಬೋಧಿಸಲ್ಪಟ್ಟ ಹಂದಿಯನ್ನು ಬಲಿಕೊಟ್ಟು ಅಡುಗೆ ಮಾಡಲಾಗುತ್ತದೆ. ಇಲ್ಲಿಗೆ ಬರುವ ಭಕ್ತರು ಹಂದಿಮಾಂಸವನ್ನು ದೇವಸ್ಥಾನದ ಪ್ರಸಾದ ಎಂದು ಭಾವಿಸಿ ತಿನ್ನುತ್ತಾರೆ. ತಿನ್ನಲು ನಿರಾಕರಿಸಿದರೆ ದೇವದೂಷಣೆ ಮತ್ತು ದೇವರಿಗೆ ಅಪಚಾರ ಮಾಡಿದಂತಾಗುತ್ತದೆ.

ಕಳುಗುಮಲೈನಲ್ಲಿ ವಾಸವಿದ್ದ ವಡುಗನಾಥರ್- ಪೊನ್ನಮ್ಮಾಳ್ ದಂಪತಿಗಳು ಮಧುರೈಗೆ ತೆರಳಿ ಶಕ್ತಿಯನ್ನು ಪೂಜಿಸಿ ಸಂತಾನ ಭಾಗ್ಯವನ್ನು ಬೇಡಿದರು. ಶಕ್ತಿಯ ಕೃಪೆಯಿಂದ ವ್ಯೆಗ್ಯೆ ನದಿ ತೀರದಲ್ಲಿ ಒಂದು ಮಗುವನ್ನು ಕಂಡರು. ದೈವಕೃಪೆಯಿಂದ ಸಿಕ್ಕಿದ ಆ ಮಗುವೇ ದೊಡ್ಡಸ್ವಾಮಿಯಾಗಿ ಸೆಟ್ಟಿಯಾಪತ್ತಿನಲ್ಲಿ ಪೆರಿಯಸ್ವಾಮಿಯಾಗಿ ನೆಲೆಗೊಂಡಿದೆ. ಈ ಪೆರಿಯಸ್ವಾಮಿ ದೇವಸ್ಥಾನದಲ್ಲಿ ಮಾತ್ರ ಮೂಲದೇವರ ವಿಗ್ರಹವಿದೆ. ಪೆರಿಯಸ್ವಾಮಿ ಕೈಗಳಲ್ಲಿ ಶಂಕಚಕ್ರಗಳನ್ನು ಹಿಡಿದು ತಿರುಮಾಲ್ (ವಿಷ್ಣು) ಆಗಿ ಕಂಗೊಳಿಸುತ್ತಿದ್ದಾರೆ. ಇತರ ದೈವಗಳಿಗೆ ಇಂತಹ ವಿಗ್ರಹಗಳಿಲ್ಲ. ಪೆರಿಯಸ್ವಾಮಿ ಸೆಟ್ಟಿಯಾಪತ್ತಿಗೆ ಬಂದು ನೆಲಸಿದಾಗ ಶಕ್ತಿದೇವಿಗೆ ಪೆರಿಯಪಿರಾಟಿ ದೇವಸ್ಥಾನವನ್ನು ನಿರ್ಮಿಸಿದರು. ಪೆರಿಯಸ್ವಾಮಿ ಶ್ರೀ ವೈಕುಂಠಕ್ಕೆ ತೆರಳಿ ಅನೇಕ ಪವಾಡಗಳನ್ನು ಮಾಡಿ ನಮ್ಮಾಳ್ವಾರ್ ಅವರಿಗೆ ನಮಸ್ಕರಿಸಿದರು. ಮೇಲ್ಜಾತಿಯ ಜನರು ಪೆರಿಯಸ್ವಾಮಿಯನ್ನು ಅಸ್ಪೃಶ್ಯರೆಂದು ಭಾವಿಸಿದ್ದರಿಂದ ನಮ್ಮಾಳ್ವಾರ್ ಸೆಟ್ಟಿಯಾಪತ್ತಿಗೆ ಬಂದು ನೆಲೆಸಿದರು. ಹುಣಿಸೆ ಮರದಡಿಯಲ್ಲಿ ಇರುವ ನಮ್ಮಾಳ್ವಾರರೇ ಪುಳಿಯಾಡಿಯಾಳ್ವಾರ್. ಪೆರಿಯಸ್ವಾಮಿಯವರ ಜೊತೆಗಿದ್ದ ನೇಕಾರರೊಬ್ಬರು ಮಸ್ಲಿಂ ಹೆಣ್ಣನ್ನು ವರಿಸಿದರು. ಅವರಿಗೆ ಅನೇಕ ವರ್ಷಗಳ ಕಾಲ ಸಂತಾನ ಭಾಗ್ಯ ಇರಲಿಲ್ಲ. ಕಾಡಿನಲ್ಲಿ ಎರಡು ಮಕ್ಕಳು ದೊರೆತವು. ಅವರು ವೈಷ್ಣವ ಪೆರುಮಾಣ ಪೆರುಮಾಳ, ಅನಂತಮ್ಮಾಳ ಎಂಬ ಹೆಸರಿನಲ್ಲಿ ಅಣ್ಣ- ತಂಗಿಯರಾಗಿ ಬೆಳೆದರು. ಇವರದು ಪೆರಿಯಸ್ವಾಮಿಯ ತಂದೆ- ತಾಯಿಯ ಪುರ್ನಜನ್ಮ ಎಂಬುದು ಅವರನ್ನು ಭೂದೇವಿ ಅಪ್ಪಿಕೊಳ್ಳುತ್ತಾರೆ. ಅವರಿಗಾಗಿ ನಿರ್ಮಾಣಗೊಂಡ ದೇವಸ್ಥಾನವೇ ವೈಷ್ಣವಪೆರುಮಾಳ ಅನಂತಮ್ಮಾಳ್ ದೇವಸ್ಥಾನ.

ಐದುಮನೆ ಸ್ವಾಮಿ ದೇವಸ್ಥಾನ ಇಂದು ನಾಡಾರ್ ಜಾತಿಯವರ ಉಸ್ತುವಾರಿಯಲ್ಲಿದೆ. ಸರ್ಕಾರದಿಂದ ಧರ್ಮದರ್ಶಿ ಮಂಡಳಿಯನ್ನು ಸ್ಥಾಪಿಸಲಾಗಿದೆ. ಈ ದೇವಸ್ಥಾನದಲ್ಲಿ ಹಿಂದುಳಿದವರು ಮತ್ತು ಕೆಳವರ್ಗದವರು ಮಾತ್ರ ಪೂಜಿಸುತ್ತಾರೆ. ನಾಡಾರ್, ವಾದಿರಿಯಾರ್, ಜಾಡಮಾಲಿಯರು, ಅಗಸರು ಮುಂತಾದ ಜಾತಿಗೆ ಸೇರಿದ ಜನರೇ ಸಾಮಾನ್ಯವಾಗಿ ಇಲ್ಲಿ ಪೂಜೆ ಮಾಡುತ್ತಾರೆ. ಪಂಗುಣಿ ತಿಂಗಳ ೨೫ನೇ ತಾರೀಖು ನೈವೇದ್ಯ ಮಾಡಿ ನಡೆಸುವ ಪೂಜೆಯನ್ನು ‘ಅನ್ನಮುಂದಿರಿ’ ಎಂದು ಕರೆಯುತ್ತಾರೆ.

ಈ ದೇವಸ್ಥಾನದಲ್ಲಿ ಪೂಜಾಕಾಲದಲ್ಲಿ ‘ಹರಿ ಓಂ ರಾಮಾನುಜಯ’ ಎಂಬ ಮಂತ್ರ ಚಕ್ರವನ್ನು ಕೆಂಪುವರ್ಣದ ಬಣ್ಣದ ಪುಡಿಯಿಂದ ನೆಲದ ಮೇಲೆ ಬಿಡಿಸಲಾಗುತ್ತದೆ.

ಮಂತ್ರಚಕ್ರದ ಎಂಟು ಅಕ್ಷರಗಳಲ್ಲೂ ವೀಳ್ಯವನ್ನು ಇಡುತ್ತಾರೆ. ಮಧ್ಯದಲ್ಲಿ ಅಲಂಕಾರ ಮಾಡಿದ ಒಂದು ಬಾಟಲಿಯಲ್ಲಿ ಹೆಂಡವನ್ನಿಟ್ಟು ಪೂಜಿಸುವುದು ರೂಢಿ. ಅದನ್ನು ತೀರ್ಥವನ್ನಾಗಿ ನೀಡಲಾಗುತ್ತದೆ. ಒಟ್ಟಿಗೆ ನೆಲದ ಮೇಲೆ ಕುಳಿತು ಉಣ್ಣುತ್ತಾರೆ. ಕೆಳಜಾತಿಯವರು ಮಾಡಿದ ಅಡುಗೆ ಎಂದು ನಿರಾಕರಿಸುವಂತಿಲ್ಲ. ದೇವರನ್ನು ಎಲ್ಲರೂ ಮುಟ್ಟಿ ನಮಸ್ಕರಿಸಬಹುದು. ಸ್ತ್ರೀಯರಿಗೂ ದೇವರನ್ನು ಮುಟ್ಟಿ ನಮಸ್ಕರಿಸುವ ಪೂರ್ಣ ಸ್ವಾತಂತ್ರ್ಯವಿದೆ.

ಈ ದೇವಸ್ಥಾನದ ಪೂಜಾರಿಯನ್ನು ಜಾತಿಭೇದವಿಲ್ಲದೆ ಆಯ್ಕೆ ಮಾಡಲಾಗುತ್ತದೆ. ಅವರನ್ನು ಪರದೇಶಿ, ಸನ್ಯಾಸಿ ಎಂದು ಕರೆಯುತ್ತಾರೆ. ಅಣ್ಣಾವಿ ಎಂದೂ ಕರೆಯುವರು. ಪರಿಗುಣಿ ತಿಂಗಳು ೨೧ ನೇ ತಾರೀಖು(ಏಪ್ರಿಲ್ ಎರಡನೇ ವಾರ) ಗುರುಮತ್‌ಪೂಜೆ ನಡೆಯುತ್ತದೆ. ಚಿತ್ತಿರಯ ತಿಂಗಳು ೧೧ ನೇ ತಾರೀಖು ವೈಷ್ಣವ ಪೆರುಮಾಳ್ ಸನ್ನಿಧಿಯಲ್ಲಿ ಅಡುಗೆ ಮಾಡಿ ‘ತೋಕ್ಕ ತೋಕ್ಕ’ ಎಂದು ಉದ್ದಾರ ಮಾಡುವರು. ಚಿತ್ತಿರಯ ತಿಂಗಳು ೧೭ ನೇ ತಾರೀಖು ಪೆರಿಯ ಸ್ವಾಮಿಗೆ ನೆರಳಾಗಿ ಬಟ್ಟೆಯನ್ನು ಕಟ್ಟುವ ‘ಮೇಲ್ಕಟ್ಟಿ’ ಪೂಜೆ ನಡೆಯುತ್ತದೆ. ಚಿತ್ತಿರೈ ೧೭ನೇ ತಾರೀಖು ಗಂಜಿಕಾಯಿಸಿ ‘ಗಂಜಿಪೂಜೆ’ ಮಾಡಲಾಗುತ್ತದೆ. ಈ ದೇವಸ್ಥಾನದಲ್ಲಿ ಹೆಂಡವನ್ನು ತೀರ್ಥವೆಂದು, ಹಂದಿಯನ್ನು ಯಜಮಾನರೆಂದು, ಕೋಳಿಯನ್ನು ಮುಂಗುಸಿಮರಿಯೆಂದು, ಊಟವನ್ನು ಅನ್ನಮುಂದಿರಿಯೆಂದು, ಮೊಟ್ಟೆಯನ್ನು ಅಂಡವೆಂದು- ಹೀಗೆ ಬೇರೆ ಬೇರೆ ಪದಾರ್ಥಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.

ತಮಿಳುನಾಡಿನ ದಕ್ಷಿಣ ಜಿಲ್ಲೆಗಳ ಅನೇಕ ಭಾಗಗಳಲ್ಲಿ ವಾಸಿಸುತ್ತಿರುವ ವಾದಿರಿಯನ್ ಎಂಬ ಜಾತಿಯವರು ಐದುಮನೆ ಸ್ವಾಮಿಯನ್ನು ‘ಅಂಜುವಿಟ್ಟುಸ್ವಾಮಿ’ ಎಂದು ಪೂಜಿಸುತ್ತಾರೆ. ಅವರು ಬೇರೆ ಸ್ಥಳಗಳಿಗೆ ಸ್ಥಳಾಂತರಗೊಂಡು ವಾಸಮಾಡುವ ಊರುಗಳಲ್ಲೂ ದೇವಸ್ಥಾನಗಳನ್ನು ನಿರ್ಮಿಸಿ ಪೂಜಿಸುತ್ತಾರೆ. ಗುರುಮತ್ ಎಂಬುದು ಮೌತ್ ಎಂಬ ಪದದ ರೂಪಾಂತರವಾಗಿದೆ. ಸತ್ತವರನ್ನು ಮೌತ್ ಆದರು ಎಂದು ಮುಸ್ಲಿಮರು ಹೇಳುತ್ತಾರೆ. ಪೆರಿಯಸ್ವಾಮಿಗೆ ‘ಗುರುಮತ್’ ಪೂಜೆ ನಡೆಯುತ್ತದೆ. ಐದು ಮನೆ ಸ್ವಾಮಿ ಆರಾಧನೆಯಲ್ಲಿ ಶಕ್ತಿಪೂಜೆ, ವೈಷ್ಣವಪೂಜೆ, ಶೈವಪೂಜೆ, ಮುಸ್ಲಿಂ ಸಂಪ್ರದಾಯ ಹೀಗೆ ಎಲ್ಲವೂ ಬೆರೆತಿರುವುದು ವಿಶೇಷ. ನಿತ್ಯಪೂಜೆಯಲ್ಲಿ ಮೊದಲು ಪ್ರಸಾದವನ್ನು ಮಹಿಳಾ ಭಕ್ತರಿಗೆ ನೀಡಲಾಗುತ್ತದೆ. ಐದುಮನೆ ಸ್ವಾಮಿ ಪೂಜೆ ಜಾತಿ ಭೇದವಿಲ್ಲದೆ ಆಚರಣೆಗೊಳ್ಳುವುದು ಮಾತ್ರವಲ್ಲದೆ, ಸ್ತ್ರೀಯರಿಗೆ ಮೊದಲ ಆದ್ಯತೆ ನೀಡುವ ಪೂಜೆಯೂ ಆಗಿರುವುದು ಇಲ್ಲಿಯ ವಿಶೇಷ.

– ವಿ.ಕೆ.ಕೆ. ಅನುವಾದ ಐ.ಎಸ್.

ಅಂಟಿಗೆ – ಪಂಟಿಗೆ ಮಲೆನಾಡಿಗೂ ಅಂಟಿಗೆಪಂಟಿಗೆಗೂ ವಿಶಿಷ್ಟ ಬಗೆಯ ನಂಟು – ದೀಪಾವಳಿಯ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಒಂದು ಸಂಪ್ರದಾಯ. ಇದು ಪ್ರಮುಖವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಗೌಣವಾಗಿ ಚಿಕ್ಕಮಗಳೂರು ಚಿತ್ರದುರ್ಗ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಸಾಗರ, ಸೊರಬ, ಸಿರ್ಸಿ, ಸಿದ್ಧಾಪುರ ತಾಲ್ಲುಕುಗಳಲ್ಲಿ ಅಂಟಿಗೆ ಪಂಟಿಗೆಗೆ ಪರ್ಯಾಯವಾಗಿ ‘ಹಬ್ಬ ಹಾಡುವುದು’, ‘ಜ್ಯೋತಿ ಕೂಡುವುದು’ ,’ದೀಪ ನೀಡುವುದು’ ಎಂದು ಬೇರೆ ಬೇರೆ ಹೆಸರುಗಳಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಕಂಡುಬರುವ ‘ಆಣಿ ಪೀಣಿ’ ಸಂಪ್ರದಾಯಕ್ಕೂ ಕೆಲವು ಸಾಮ್ಯತೆಳಿವೆ. ಹಾಗಾಗಿ ಅಂಟಿಗೆ ಪಂಟಿಗೆಯನ್ನು ಹೋಲುವ ಸಂಪ್ರದಾಯವೊಂದು ಕರ್ನಾಟಕಾದ್ಯಂತ ರೂಢಿಯಲ್ಲಿದ್ದು ಕ್ರಮೇಣ ಕೆಲವು ಭಾಗಗಳಲ್ಲಿ ಮಾತ್ರ ಉಳಿದುಕೊಂಡಿರಬೇಕೆಂಬ ಊಹೆಯನ್ನು ಕೆಲವರು ಮಾಡಿದ್ದಾರೆ.

ಅಂಟಿಗೆ ಪಂಟಿಗೆ ಶಬ್ದದ ನಿಷ್ಪತ್ತಿ ಕುರಿತು ಜಿಜ್ಞಾಸೆ ಇದೆ. ಈ ಬಗ್ಗೆ ಚರ್ಚಿಸಿರುವ ಎಂ.ಚಿದಾನಂದಮೂರ್ತಿ ಯವರು ಅಂಟಿಸು ಎಂದರೆ ದೀಪ ಹೊತ್ತಿಸು ಎಂದು ಅರ್ಥ, ಅಂಟಿಸು ಎಂಬುದರ ನಾಮರೂಪ ಅಂಟಿಕೆ. ಇದರ ಪ್ರತಿಧ್ವನಾತ್ಮಕ ಶಬ್ದ ಪಂಟಿಗೆ ಎಂದಿದ್ದಾರೆ. ಕನ್ನಡದ ಪ್ರಾಚೀನ ಕವಿಗಳಲ್ಲೊಬ್ಬನಾದ ರನ್ನ (ಕ್ರಿ.ಶ.೯೯೦)ನ ಕಾವ್ಯದಲ್ಲಿ ‘ಅಂಟಿ – ಸುಂಟಿ’ ಎಂಬ ಪದವಿದೆ ಎಂದೂ ಇದರಿಂದ ಅಂಟಿಗೆ ಪಂಟಿಗೆ ನಿಷ್ಟನ್ನಗೊಂಡಿರಬೇಕೆಂಬ ಊಹೆಯೂ ಇದೆ.

ದೀಪಾವಳಿ ವ್ಯವಸಾಯದ ಪ್ರಧಾನವಾದ ಹಬ್ಬ. ಇದರ ಆಚರಣೆಯಲ್ಲಿ ವೈವಿಧ್ಯತೆ ಇದೆ. ಈ ಹಬ್ಬದಲ್ಲಿ ನರಕ ಚತುರ್ದಶಿ, ಅಮವಾಸ್ಯೆ, ಬಲಿಪಾಡ್ಯಮಿ ಎಂದು ಮೂರು ದಿನಗಳು ಕೆಲವು ಆಚರಣೆಗಳಿರುವುದು ಸಾಮಾನ್ಯ. ಆದರೆ ಮಲೆನಾಡಿನಲ್ಲಿ ಬಲಿಪಾಡ್ಯಮಿಯ ಅನಂತರವೂ ಕರಿ, ವರ್ಷತೊಡಕು ಎಂದು ಹಬ್ಬಗಳಿರುತ್ತವೆ. ಪಾಂಡ್ಯದಿಂದ ಈ ಮೂತು ರಾತ್ರಿಗಳಲ್ಲಿ ಊರಿನ ತರುಣರು ಗುಂಪುಕಟ್ಟಿಕೊಂಡು ದೀಪ ಹಿಡಿದು ಹಾಡುತ್ತ ಊರಾಡುತ್ತ ಮನೆ ಮನೆಗೆ ದೀಪ ಒಯ್ಯುತ್ತಾರೆ. ಈ ದೀಪವನ್ನು ಜ್ಯೋತಿ, ಜ್ಯೋತಮ್ಮ ಎಂದು ಕರೆಯಲಾಗುವುದು. ಈ ಜ್ಯೋತಿಯ ಮೂಲಕ ಮನೆಮನೆಗಳ ದೀಪಗಳನ್ನು ಬೆಳಗುವ ಸಂಪ್ರದಾಯವನ್ನೇ ಅಂಟಿಗೆ ಪಂಟಿಗೆ ಎಂದು ಹೇಳುತ್ತಾರೆ. ಇದು ಮಲೆನಾಡಿನ ದೀಪಾವಳಿಗೆ ವಿಭಿನ್ನತೆಯನ್ನು ತಂದುಕೊಟ್ಟಂತಹ ಸಂಪ್ರದಾಯ. ದೀಪವತು ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ನೀಡುವಂಥದ್ದು. ಜ್ಞಾನದ ಸಂಕೇತ. ಮನೆಮನೆಗೆ೩ ಬೆಳಕು ನೀಡಿ, ಪ್ರೀತಿ ವಿಶ್ವಾಸವನ್ನು ಬೀರುತ್ತ ಶುಭ ಹಾರೈಸುವುದೇ ಈ ಸಂಪ್ರದಾಯದ ಆಶಯ.

1

ಅಂಟಿಗೆ ಪಂಟಿಗೆ ಮೇಳದಲ್ಲಿ ಎಷ್ಟು ಜನರಾದರೂ ಇರಬಹುದು. ನಿರ್ದಿಷ್ಟ ಸಂಖ್ಯೆಯೇನೂ ಇಲ್ಲ. ಆದರೆ ಸುಮಾರು ಎಂಟು ಹತ್ತು ಜನರಿಂದ ಐವತ್ತರವರೆಗೆ ಗುಂಪು ಕಟ್ಟಿಕೊಳ್ಳುತ್ತಾರೆ. ಗುಂಪಿಗೆ ಅವರಲ್ಲಿಯೇ ಒಬ್ಬ ಯಜಮಾನ. ಇವರೆಲ್ಲ ಮೊದಲು ದೇವಸ್ಥಾನದಲ್ಲಿ ಸೇರುತ್ತಾರೆ. ಕೆಲಮೊಮ್ಮೆ ತುಳಸಿ ಕಟ್ಟೆಯ ಮುಂದೆ ಒಟ್ಟೈಸುವುದೂ ಉಂಟು. ಏಕೆಂದರೆ ಈ ಸಂಪ್ರದಾಯವಿರುವ ಮಲೆನಾಡಿನ ಭಾಗವು ವೈಷ್ಣವ ಧರ್ಮದ ಪ್ರಭಾವಕ್ಕೆ ಒಳಗಾಗಿರುವುದರಿಂದ ತುಳಸಿಯ ಬಗ್ಗೆ ವಿಶೇಷ ಭಕ್ತಿಭಾವವಿದೆ. ಮೇಳದಲ್ಲಿ ಮುಮ್ಮೇಳ ಹಿಮ್ಮೇಳ ಹಾಡುವವರು ಇರುತ್ತಾರೆ. ಕೆಲವರು ಜ್ಯೋತಿ ಹಿಡಿದುಕೊಳ್ಳುತ್ತಾರೆ. ಇನ್ನು ಕೆಲವರು ದೀವಟಿಗೆ ಹೊತ್ತುಕೊಳ್ಳುತ್ತಾರೆ. ಸಂಭಾವನೆ ರೂಪದಲ್ಲಿ ಕೊಡುವ ಹಣ ಮತ್ತು ದವಸ ಧಾನ್ಯಗಳನ್ನು ಇಟ್ಟುಕೊಳ್ಳುವ ಕೆಲಸ, ಊರಾಡಲು ದಾರಿ ತೋರಿಸುವುದಕ್ಕೆ ಕೆಲವರು – ಹೀಗೆ ಮೇಳದವರು ಹಂಚಿಕೊಂಡು ತಮ್ಮ ಪಾಲಿನ ಕರ್ತವ್ಯಗಳನ್ನು ಕಾರ್ಯಗತಗೊಳಿಸುವಲ್ಲಿ ಸಹಕಾರತ್ವ ಅಡಗಿದೆ.

ಊರಾಡಲು ಹೊರಡುವ ಮುನ್ನ ಅಂಟಿಗೆ ಪಂಟಿಗೆಯವರು ದೇವರ ಮುಂದಿರುವ ದೀಪಗಳಿಂದ ತಮ್ಮ ಹಣತೆಗಳನ್ನು ಬೆಳಗಿಸಿಕೊಳ್ಳುತ್ತಾರೆ. ಇದನ್ನು ‘ಜ್ಯೋತಿ’, ‘ಜ್ಯೋತಮ್ಮ’ ಎನ್ನುತ್ತ ಸ್ತ್ರೀ ದೇವತೆಯೆಂಬ ಭಾವನೆ ಮೂಡಿಸುತ್ತಾರೆ.

ಆರಗದಿಂದ ಬಂದಾವೆ ಆರುಸಾವಿರ ಹಣತೆ
ಬತ್ತಿಸಾಲಿನ ಕೊಂದಣಿಸಾಲು ಜಗಜ್ಯೋತಿ
ಸತ್ಯದಿಂದುರಿಯೇ ನಮಗಾಗಿ

ಎಂದು ದೀಪವು ಆರದೆ ಬೆಳಗಬೇಕೆಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾರೆ. ಹಾಗೆಯೇ ಗ್ರಾಮದೇವತೆ ಕುಲದೇವತೆಗಳನ್ನು ಪ್ರಾರ್ಥಿಸಿಕೊಳ್ಳುತ್ತಾರೆ. ಲಾಟೀನು ದೊಂದಿಗಳನ್ನು ಹೊತ್ತಿಸಿಕೊಂಡು ರಾತ್ರಿಯೇ ಹೊರಡುತ್ತಾರೆ.

ಮೇಳದವರು ಊರು ಬಿಡುವ ಮುನ್ನ ‘ದೀಪ್‌ ದೀಪೋಳ್ಗೆ’ ಎಂದು ಕೂಗುತ್ತಾರೆ. ದಾರಿ ಉದ್ದಕ್ಕೂ ಹೀಗೆ ಕೂಗುತ್ತ ಸ್ಥಳೀಯ ದೇವತೆ, ಭೂತ, ಚೌಡಿ ಮುಂತಾದವನ್ನು ನೆನೆಯುವುದುಂಟು. ಕೈಯಲ್ಲರುವ ಜ್ಯೋತಿ ಆರಿ ಹೋಗದಂತೆ ಎಚ್ಚರಿಕೆ ವಹಿಸುವರು. ಹಾಗೇನಾದರೂ ದೀಪ ಆರಿದರೆ ಅದೊಂದು ಅಪಶಕುನವೆಂದು ಭಾವಿಸಲಾಗುವುದು. ಮಾರ್ಗ ಮಧ್ಯದಲ್ಲಿ ಬೇರೆ ಊರಿನ ಅಂಟಿಗೆ ಪಂಟಿಗೆಯವರು ಎದುರಾದರೂ ಕೆಡಕಾಗುವುದೆಂದು ನಂಬುವುದರಿಂದ ಅಂಥ ಸಂದರ್ಭ ಒದಗಿದರೆ ಮರೆಯಲ್ಲಿ ನಿಲ್ಲುತ್ತಾರೆ. ಯಾವುದಾದರೂ ಊರು ಸಮೀಪಿಸುತ್ತಿದ್ದಂತೆಯೇ ” ದೀಪ ಹೊಚ್ಚಿದ್ದು ಧೂಪಾನೆ ಹಾಕಿದ್ದು ದೀವಳಿಗೆಗೆಂದು ಹೊರಬಿದ್ದು” ಎಂದು ಹಾಡುತ್ತ ಸಾಗಿ ಮುಂದೆ ನಿಂತ ಕೂಡಲೇ ‘ದೀಪ್ ದೀಪೋಳ್ಗೆ’, ‘ದೇವರ ದೀಪೋಳ್ಗೆ’ ಎಂದು ಕೂಗುತ್ತಾರೆ. ಆ ಮನೆಯ ತುಳಸಿಕಟ್ಟೆಯ ಮುಂದೆ ದೀಪವಿರಿಸಿ ಕೈಮುಗಿದು ಅಂಟಿಗೆ ಪಂಟಿಗೆ ಹಾಡುಗಳನ್ನು ಹಾಡುತ್ತಾರೆ. ಈ ಹಾಡುಗಳಲ್ಲಿ ಮನೆಯ ಬಾಗಿಲ ವರ್ಣನೆ, ದೀಪವನ್ನು ಸ್ವಾಗತಿಸಬೇಕೆಂಬ ಪ್ರಾರ್ಥನೆ ಅಡಗಿದೆ. ಮೇಳದವರು ಹಾಡುವಾಗ ಮನೆಯೊಡತಿ ಹೊರಬಂದು ಮೇಳದವರ ಜ್ಯೋತಿಗೆ ಎಣ್ಣೆ ಹಾಕಿ ತನ್ನ ಹಣತೆಯನ್ನು ಹಚ್ಚಿಕೊಂಡು ಒಳಗೆ ಕೊಂಡೊಯ್ಯುತ್ತಾಳೆ. ಅನಂತರ ಮೇಳದವರಿಗೆ ತಿನ್ನಲು ಏನಾದರೂ ಕೊಟ್ಟು ಸಂಭಾವನೆಯಾಗಿ ಹಣ ಮತ್ತು ದವಸಧಾನ್ಯಗಳನ್ನು ನೀಡಲಾಗುವುದು. ಮೇಳದವರು ಹೊರಡುವಾಗ ಆ ಮನೆಯ ದನಕರುಗಳಿಗೆ ಒಳ್ಳೆಯದಾಗಲಿ, ಮಳೆ ಬೆಳೆಗಳು ಹುಲುಸಾಗಲಿ ಎಂದು ಹಾರೈಸುವರು. ಗ್ರಾಮೀಣ ಜೀವನ ಕೃಷಿಯನ್ನು ಅವಲಂಬಿಸಿರುವುದರಿಂದ, ವ್ಯವಸಾಯ ಜಾನುವಾರುಗಳನ್ನು ಆಧರಿಸುವುದರಿಂದ ಹೀಗೆ ಹರಸುವುದು ಸಹಜವಾಗಿದೆ. ಅಂಟಿಗೆ ಪಂಟಿಗೆಯವರು ಜಾತಿ ಮತ ಭೇದವಿಲ್ಲದೆ ಎಲ್ಲ ಸಮುದಾಯದವರ ಮನೆಗಳಿಗೂ ಭೇಟಿ ಕೊಡುತ್ತಾರೆ. ಆಯಾ ಸಮುದಾಯದವರ ವೃತ್ತಿಗೆ ಅನುಗುಣವಾಗಿ ಹಾಡುತ್ತಾರೆ. ಅಷ್ಟೇ ಅಲ್ಲ ದೀಪಾವಳಿಗೆಂದು ಹೊಸದಾಗಿ ಮದುವೆಯಾದ ಮದುಮಕ್ಕಳು ಬಂದಿದ್ದರೆ ಅವರನ್ನು ಛೇಡಿಸುತ್ತ ಹಾಡಿ ವಾತಾವರಣವನ್ನು ಮುದಗೊಳಿಸುವರು.

ಮೂರು ದಿನಗಳ ಕಾಲ ಊರಾಡುತ್ತ ಮನೆ ಮನೆಗೆ ಹೋಗಿ ಜ್ಯೋತಿ ನೀಡಿದ ಅಂಟಿಗೆ ಪಂಟಿಗೆಯವರು ಕಡೆಯಲ್ಲಿ ತಾವು ಹೊರಟ ಸ್ಥಳವನ್ನೇ ಬಂದು ಸೇರುತ್ತಾರೆ. ಅಲ್ಲಿ ಜ್ಯೋತಿಯನ್ನಿಟ್ಟು ನಮಸ್ಕರಿಸುವರು. ಅನಂತರ ಸಂಗ್ರಹವಾದ ಹಣ ದವಸಧಾನ್ಯಗಳಿಂದ ಔತಣ ಏರ್ಪಡಿಸುವರು. ಇದಕ್ಕೆ ‘ಅಂಟಿಗೆ – ಪಂಟಿಗೆ ಔಂತ್ಣ’ ಎನ್ನುತ್ತಾರೆ. ಮಾಂಸದ ಅಡುಗೆ ತಯಾರಿಸಿ ಜ್ಯೋತಿಗೆ ಎಡಯಿಟ್ಟು ಅನಂತರ ಊರಿನವರೊಂದಿಗೆ ಊಟ ಮಾಡುವರು. ಹೀಗೆ ಅಂಟಿಗೆ ಪಂಟಿಗೆ ಸಂಪ್ರದಾಯ ಗ್ರಾಮೀಣ ಜನರ ಸಹಕಾರ ಮನೋಭಾವಕ್ಕೆ ಸಾಂಘಿಕ ಜೀವನಕ್ಕೆ ಸಾಕ್ಷಿಯಾಗಿದೆ. ಮಲೆನಾಡಿನ ವಿಶಿಷ್ಟ ಸಂಸ್ಕೃತಿಯ ಪ್ರತೀಕವಾಗಿದೆ. ಈ ಸಂಪ್ರದಾಯಕ್ಕೆ ಸಂಬಂಧಿಸಿದ ಹಾಡುಗಳು ವಿವಿಧ ಭಾವನೆಗಳನ್ನು ಉಕ್ಕಿಸುತ್ತದೆ. ಜೀವನದ ದುಃಖ ದುಮ್ಮಾನಗಳನ್ನು ತಗ್ಗಿಸಲು ಉತ್ತರದೇವಿಯಂಥ ಕಥನಗೀತೆಗಳನ್ನು ಹಾಡುವುದುಂಟು.

– ವೈ.ಸಿ.ಬಿ.