ಸಂಸ್ಕೃತಿಯ ಮೂಲಸತ್ತ್ವ ಜಾನಪದದಲ್ಲಿದೆ. ಜನಸಮುದಾಯ ಜಾನಪದದ ಮೂಲಕ ಸಂಸ್ಕೃತಿಯನ್ನು ಕಾಪಾಡಿಕೊಳ್ಳುತ್ತದೆ. ಪ್ರಪಂಚದಲ್ಲಿ ನಾಗರಿಕವಾಗಿ ಮುಂದುವರಿದ ಸಮಾಜಗಳಲ್ಲೂ ಸಾಂಸ್ಕೃತಿಕ ಮೂಲರೂಪಗಳು ಜಾನಪದದ ಮೂಲಕವೇ ವ್ಯಕ್ತವಾಗುತ್ತವೆ. ಗೀತೆ, ಕಥೆ, ಗಾದೆ, ಒಗಟು, ಆಚಾರ, ಸಂಪ್ರದಾಯ, ನಂಬಿಕೆ, ಆಟ, ಅಡುಗೆ, ಮನೆಮದ್ದು, ಕರಕುಶಲ ಕಲೆ, ಹಾಡುಗಾರಿಕೆ, ಕುಣಿತ, ನಾಟಕ ಸಹಜ ರೂಪದಲ್ಲಿ ಕಾಣಿಸಿಕೊಳ್ಳದಿದ್ದರೂ ರೂಪಾಂತರ ಹೊಂದಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಈ ಕಾರಣದಿಂದ ಜನಸಮುದಾಯ ಇರುವ ತನಕ ಜಾನಪದ ಇದ್ದೇ ಇರುತ್ತದೆ. ‘ಜನಾನಾಂ ಪದಂ ಜನಪದಂ’ (ಜನರಿರುವ ಜಾಗವೇ ಜನಪದ) ಎಂದಿರುವುದರಿಂದ ಜನರಿರುವ ಎಲ್ಲಜಾಗಗಳಲ್ಲಿ ಮತ್ತು ಜನರು ತಮ್ಮತನವನ್ನು ಉಳಿಸಿಕೊಳ್ಳುವ ಆಶಯವಿರುವ ತನಕ ಜಾನಪದವಿರುತ್ತದೆ.

ಭಾರತೀಯ ಜಾನಪದದ ವೈವಿಧ್ಯ ಬೆರಗುಂಟುಮಾಡುತ್ತದೆ. ಭಾರತದ ಉದ್ದಗಲಕ್ಕೂ ಇರುವ ನೂರಾರು ಭಾಷೆಗಳು, ಸಾವಿರಾರು ಮೌಖಿಕಾಭಿವ್ಯಕ್ತಿ ಪ್ರಕಾರಗಳು, ಆಚಾರವ್ಯವಹಾರಗಳು, ಆಟಗಳು, ಆಹಾರ ಪದ್ಧತಿಗಳು, ಕಲೆಗಳು ಅಚ್ಚರಿಗೊಳಿಸುತ್ತವೆ. ಈ ರೀತಿಯ ಸಾಂಸ್ಕೃತಿಕ ವೈವಿಧ್ಯವನ್ನು ಪ್ರಪಂಚದ ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಉತ್ತರ ಭಾರತದ ಜಾನಪದ ಒಂದು ರೀತಿ ವಿಶಿಷ್ಟವೆನಿಸಿದರೆ ದಕ್ಷಿಣ ಭಾರತೀಯ ಜಾನಪದ ಇನ್ನೊಂದು ರೀತಿ ವಿಶಿಷ್ಟವಾದುದು. ದ್ರಾವಿಡ ಭಾಷೆಗಳ ಬಗೆಗೆ ನಡೆದಿರುವಷ್ಟು ಸಂಶೋಧನೆ ದ್ರಾವಿಡ ಸಂಸ್ಕೃತಿಯ ಬಗೆಗೆ ನಡೆದಿಲ್ಲ. ದ್ರಾವಿಡ ಭಾಷೆಗಳ ತೌಲನಿಕ ಅಧ್ಯಯನವನ್ನು ಕೈಗೊಂಡು ಸೈದ್ಧಾಂತಿಕ ಭಾಷಾ ವಿಜ್ಞಾನಕ್ಕೆ ಗಮನಾರ್ಹವಾದ ಕೊಡುಗೆಯನ್ನು ನೀಡಿದ ಮಹನೀಯರಿದ್ದಾರೆ. ದೇಶ ವಿದೇಶಗಳಲ್ಲಿ ಇವರ ಸಂಶೋಧನೆಯ ಫಲಿತಾಂಶಗಳು ಪ್ರಚಾರವಾಗಿವೆ. ಆದರೆ ದ್ರಾವಿಡ ಭಾಷೆಗಳನ್ನಾಡುವ ಕೋಟಿಗಟ್ಟಲೆ ಜನರ ಸಾಂಸ್ಕೃತಿಕ ಮೂಲಗಳನ್ನು ಹುಡುಕುವ ಪ್ರಯತ್ನಗಳು ನಡೆದಿಲ್ಲ. ಸುಮಾರು ಮೂವತ್ತು ದ್ರಾವಿಡ ಭಾಷೆಗಳನ್ನು ಮಾತನಾಡುವ ಜನ ಕನ್ಯಾಕುಮಾರಿಯಿಂದ ಬೆಲೂಚಿಸ್ಥಾನದವರೆಗೂ ಹರಡಿಕೊಂಡಿದ್ದಾರೆ. ಇವರ ಭಾಷೆಗಳ ಜತೆಗೆ ಸಾಂಸ್ಕೃತಿಕ ವೈಶಿಷ್ಟ್ಯವನ್ನು ತೌಲನಿಕವಾಗಿ ಪರಿಶೀಲಿಸುವ ಅಗತ್ಯವಿದೆ.

ದಕ್ಷಿಣ ಭಾರತದಲ್ಲಿ ಪ್ರಾಚೀನ ಮತ್ತು ವಿಶಿಷ್ಟ ಭಾಷೆಗಳೆಂದು ಪ್ರಸಿದ್ಧವಾಗಿರುವ ತಮಿಳು, ಕನ್ನಡ, ತೆಲುಗು, ಮತ್ತು ಮಲಯಾಳಂ ಭಾಷೆಗಳಿವೆ. ಮೌಖಿಕ ಪರಂಪರೆಯಲ್ಲಿ ವಿಶಿಷ್ಟವಾದ ಕೊಡುಗೆಯನ್ನು ನೀಡಿರುವ ತುಳು ಮತ್ತು ಕೊಡವ ಭಾಷೆಗಳಿವೆ. ದಕ್ಷಿಣ ಭಾರತೀಯ ಜಾನಪದ ಪ್ರಪಂಚದ ಎಲ್ಲ ಜಾನಪದ ವಿದ್ವಾಂಸರ ಗಮನವನ್ನು ಸೆಳೆಯುವಷ್ಟು ವೈವಿಧ್ಯ ಇರುವಂಥದು. ಜಾನಪದದ ಯಾವ ವಿಭಾಗವನ್ನು ಗಮನದಲ್ಲಿಟ್ಟುಕೊಂಡು ಪರಿಶೀಲಿಸಿದರೂ ದಕ್ಷಿಣ ಭಾರತೀಯ ಜಾನಪದ ಸಂಪದ್ಭರಿತ ಸ್ವರೂಪ ಎದ್ದುಕಾಣುತ್ತದೆ. ಬಗೆಬಗೆಯ ಹಾಡುಗಳು, ಲಾವಣಿಗಳು, ಮಹಾಕಾವ್ಯಗಳು, ಆಚಾರ ಸಂಪ್ರದಾಯಗಳು, ಆಟಗಳು, ಕಲಾಪ್ರಕಾರಗಳು ನೆನಪಿಗೆ ಬರುತ್ತವೆ. ಈ ಎಲ್ಲಾ ವಿವಿಧತೆಯ ವಾಸ್ತವದ ಜತೆಯಲ್ಲೇ ನೆರೆಹೊರೆಯ ಸಾಂಸ್ಕೃತಿಕ ಸತ್ತ್ವದ ಅರಿವಿನ ಅಭಾವ ಮನದಟ್ಟಾಗುತ್ತದೆ. ಪಕ್ಕದಲ್ಲೇ ತಲೆತಲೆಮಾರುಗಳಿಂದ ಅಸ್ತಿತ್ವದಲ್ಲಿರುವ ಆಚಾರ ವ್ಯವಹಾರಗಳನ್ನು, ಕಲಾಭಿವ್ಯಕ್ತಿಯನ್ನು, ಸಮಾನ ಅಂಶಗಳಲ್ಲಿರುವ ಹೋಲಿಕೆಗಳನ್ನು ತಿಳಿದುಕೊಳ್ಳಲೇಬೇಕೆನಿಸುತ್ತದೆ. ಈ ನಿಟ್ಟಿನಲ್ಲಿ ‘ದಕ್ಷಿಣ ಭಾರತೀಯ ಜಾನಪದ ಕೋಶ’ ಒಂದು ಪ್ರಯತ್ನ.

ದಕ್ಷಿಣ ಭಾರತೀಯ ಜಾನಪದವನ್ನು ಕುರಿತಂತೆ ಬಿಡಿಬಿಡಿಯಾಗಿ ಕೆಲವು ಪುಸ್ತಕಗಳು ಪ್ರಕಟವಾಗಿವೆ. ಇಂಗ್ಲಿಷಿನಲ್ಲಿ ಪ್ರಕಟವಾಗಿರುವ ಪುಸ್ತಕಗಳನ್ನು ಅನುಸರಿಸಿ ಬೇರೆ ಭಾಷೆಗಳಲ್ಲಿ ಬರೆದ ಪುಸ್ತಕಗಳು ತಪ್ಪು ಮಾಹಿತಿಗಳನ್ನು ನೀಡಿರುವ ಸಂದರ್ಭಗಳಿವೆ. ಒಂದೊಂದು ಭಾಷೆಯ ಜಾನಪದದಲ್ಲಿ ವಿದ್ವತ್ತನ್ನು ಗಳಿಸಿರುವವರು ಅದೇ ಭಾಷೆಯಲ್ಲಿ ಬರೆದದ್ದನ್ನು ನೇರವಾಗಿ ಬೇರೆ ಭಾಷೆಗೆ ಅನುವಾದ ಮಾಡುವುದು ಒಳ್ಳೆಯದು. ಪ್ರಸ್ತುತ ಕೃತಿಯಲ್ಲಿ ಈ ರೀತಿ ಮಾಡಿರುವುದರಿಂದ ಜಾನಪದದ ಮೂಲ ಸ್ವರೂಪವನ್ನು ತಕ್ಕಮಟ್ಟಿಗೆ ತಿಳಿದುಕೊಳ್ಳಲು ಸಾಧ್ಯವಾಗಿದೆ. ಈ ಮಹತ್ತ್ವದ ಯೋಜನೆಯಲ್ಲಿ ದಕ್ಷಿಣ ಭಾರತೀಯ ಜಾನಪದ ಕ್ಷೇತ್ರಕ್ಕೆ ಸೇರಿದ ನೂರಾರು ಜನ ವಿದ್ವಾಂಸರು ಪಾಲ್ಗೊಂಡಿದ್ದಾರೆ. ಅವರೆಲ್ಲರ ಪ್ರಾಮಾಣಿಕ ಸಹಕಾರದಿಂದಲೇ ಈ ಕೃತಿ ಹೊರಬರಲು ಸಾಧ್ಯವಾಯಿತು.

ಈ ಕೋಶದಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ವಿದ್ವಾಂಸರು ಬರೆದ ಲೇಖನಗಳನ್ನು ಅಕಾರಾದಿಯಾಗಿ ಕೊಡಲಾಗಿದೆ. ಒಂದೊಂದು ಭಾಷೆಯಲ್ಲಿ ಸುಮಾರು ಇನ್ನೂರು ಲೇಖನಗಳು ಸಿದ್ಧವಾಗಿವೆ. ಈ ಲೇಖನಗಳಲ್ಲಿರುವ ವಿಷಯವನ್ನು ಅದೇ ಭಾಷೆಯ ಶೀರ್ಷಿಕೆಯಿಂದಲೇ ಸೂಚಿಸಿ ವಿವರಣೆಯನ್ನು ನೀಡಲಾಗಿದೆ. ಇದರಿಂದ ಮೂಲಭಾಷೆಯಲ್ಲಿ ಬಳಕೆಯಾಗುವ ಹೆಸರನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ಕೋಶದಲ್ಲಿ ಸೇರಿರುವ ಎಲ್ಲ ಜಾನಪದ ಅಂಶಗಳನ್ನು ಪ್ರಾರಂಭದಲ್ಲಿ ವರ್ಗೀಕೃತ ವಿಷಯಸೂಚಿಯಲ್ಲಿ ಕೊಡಲಾಗಿದೆ. ಇದರಿಂದ ಒಂದೊಂದು ಭಾಷೆಯಲ್ಲಿ ಜಾನಪದದ ಪ್ರಧಾನ ವಿಭಾಗಗಳಲ್ಲಿ ಯಾವ ಯಾವ ಅಂಶಗಳು ಸೇರಿವೆ ಎಂಬುದು ತಿಳಿಯುತ್ತದೆ. ಉದಾಹರಣೆಗೆ ತಮಿಳು ಭಾಷೆಯಲ್ಲಿ ರಚಿತವಾದ ಲೇಖನಗಳಲ್ಲಿ ಜನಪದ ಕಲೆಗಳ ವಿಭಾಗಕ್ಕೆ ಸೇರಿದ ಅಂಶಗಳು ಯಾವುವೆಂಬುದನ್ನು ವರ್ಗೀಕೃತ ಸೂಚಿಯ ಮೂಲಕ ತಿಳಿದುಕೊಳ್ಳಬಹುದು. ಈ ಅಂಶಗಳಲ್ಲಿ ಸಮಾನ ರೂಪಗಳೆಂದು ಅಥವಾ ಹೋಲಿಸತಕ್ಕ ರೂಪಗಳೆಂದು ಹೇಳಬಹುದಾದ ವಿಷಯಗಳನ್ನೂ ಪಟ್ಟಿಮಾಡಲಾಗಿದೆ. ಇದರಿಂದ ತುಲನಾತ್ಮಕ ಅಧ್ಯಯನಕ್ಕೂ ಅವಕಾಶವಾಗುತ್ತದೆ.

ಈ ಕೋಶದಲ್ಲಿ ದಕ್ಷಿಣ ಭಾರತೀಯ ಜಾನಪದದ ಅಂಶಗಳೆಲ್ಲವನ್ನೂ ಸೇರಿಸಲು ಸಾಧ್ಯವಾಗಿಲ್ಲ. ಹಾಗೆ ಮಾಡಬೇಕಾದರೆ ಬಹುಶಃ ಹತ್ತು ಸಾವಿರ ಪುಟಗಳ ಹತ್ತು ಸಂಪುಟಗಳಾದರೂ ಬೇಕಾಗಬಹುದು. ಇದು ಪ್ರಾತಿನಿಧಿಕ ಪ್ರಯತ್ನವಷ್ಟೆ. ಇದನ್ನು ಬಹುಮುಖವಾಗಿ ವಿಸ್ತರಿಸಲು ಮತ್ತು ಉತ್ತಮಪಡಿಸಲು ಸಾಧ್ಯವಿದೆ. ದಕ್ಷಿಣ ಭಾರತೀಯ ಜನಪದ ಕಲೆಗಳ ಕೋಶವನ್ನೇ ಅನೇಕ ಸಂಪುಟಗಳಲ್ಲಿ ತರಬಹುದು. ಪ್ರಸ್ತುತ ಕೋಶದ ಮೂಲಕಿತರ ಭಾಷೆಗಳಿಗೆ ಸೇರಿದ ಹಲವು ವಿಷಯಗಳನ್ನು ಮೂಲ ಸ್ವರೂಪದ ನೇರ ಅನುವಾದದಿಂದ ತಿಳಿಯುವ ಅವಕಾಶ ಸಿಕ್ಕಿದೆ. ತಮಿಳುನಾಡಿನ ಆಚಾರಗಳು, ತೆಲುಗು ಭಾಷೆಯ ಸುದೀರ್ಘ ಮಹಾಕಾವ್ಯಗಳು, ಕೇರಳದ ವೈವಿಧ್ಯಮಯ ಆಚರಣೆಗಳು, ಆಯಾಯ ಪ್ರದೇಶಗಳಲ್ಲಿ ವಾಸಮಾಡುತ್ತಿರುವ ಬುಡಕಟ್ಟುಗಳು, ಅವರ ಸಂಪ್ರದಾಯಗಳು ಈ ಕೃತಿಯ ಮೂಲಕ ಪರಿಚಯವಾಗುತ್ತವೆ. ಈ ವಿಷಯಗಳನ್ನು ಅನುವಾದ ಮಾಡುವಾಗ ಮೂಲದ ಸೊಗಸನ್ನು, ಕನ್ನಡದಲ್ಲಿ ಪ್ರಾದೇಶಿಕ ಪ್ರಭೇದಗಳನ್ನು ಉಳಿಸಿಕೊಳ್ಳುವ ಪ್ರಯತ್ನವೂ ನಡೆದಿದೆ. ಜಾನಪದಾಭಿವ್ಯಕ್ತಿಯಲ್ಲಿ ಈ ರೀತಿಯ ಶೈಲಿ ಅವಶ್ಯಕವೆನಿಸಿದೆ.

ಇಂಥ ವಿಶಿಷ್ಟ ಕೋಶ ತಯಾರಾಗಲು ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎ. ಮುರಿಗೆಪ್ಪ ಮತ್ತು ದ್ರಾವಿಡ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಿ.ರಮಣಯ್ಯ ಮುಖ್ಯ ಕಾರಣ. ಈ ಎರಡು ವಿಶ್ವವಿದ್ಯಾಲಯಗಳ ಸಹಯೋಗದಿಂದ ನಾಲ್ಕು ಭಾಷೆಗಳ ಮೂಲಕ ವಿಷಯವನ್ನು ಸಂಗ್ರಹಿಸಲು ಸಾಧ್ಯವಾಯಿತು. ಕನ್ನಡದ ಘನ ವಿದ್ವಾಂಸರೆಲ್ಲ ತಮ್ಮ ಜಾನಪದಾಸಕ್ತಿಯನ್ನು ಈ ಕೃತಿಯ ಮೂಲಕ ತೋರಿಸಿಕೊಟ್ಟಿದ್ದಾರೆ. ಡಾ. ಹಿ.ಚಿ.ಬೋರಲಿಂಗಯ್ಯ, ಡಾ. ಕೃಷ್ಣಮೂರ್ತಿ ಹನೂರು, ಡಾ. ಶ್ರೀಕೃಷ್ಣಭಟ್ ಅರ್ತಿಕಜೆ, ಡಾ. ಅಂಬಳಿಕೆ ಹಿರಿಯಣ್ಣ, ಡಾ.ಕೆ.ಶಾರದಾ, ಡಾ. ಎಂ.ಎನ್.ವೆಂಕಟೇಶ್ ಮೊದಲಾದವರ ಸಲಹೆ ಸಹಕಾರಗಳನ್ನು ಮರೆಯುವಂತಿಲ್ಲ. ಮಲಯಾಳದ ಭಾಗ ರೂಪುಗೊಳ್ಳಲು ಡಾ. ರಾಘವನ್ ಪಯ್ಯನಾಡ್, ಡಾ. ಕೆ.ಕಮಲಾಕ್ಷ ಮತ್ತು ಡಾ. ಎನ್.ಎಸ್. ಶ್ರೀಧರ್ ಅವರುಗಳ ಕೊಡುಗೆ ಅಮೂಲ್ಯವಾದುದು. ತಮಿಳಿನ ವಿಷಯದಲ್ಲಿ ಡಾ. ಎ.ಧನಂಜಯನ್, ಡಾ. ಸರಸ್ವತಿ ವೇಣುಗೋಪಾಲ್, ಡಾ. ಚೆಲ್ಲಪೆರುಮಾಳ್ ಮೊದಲಾದವರ ನೆರವನ್ನು ನೆನೆಯಲೇಬೇಕು. ತೆಲುಗು ವಿಭಾಗವನ್ನು ಸಿದ್ಧಮಾಡಲು ಡಾ. ಪಿ.ಸುಬ್ಬಾಚಾರಿ, ಡಾ. ಜಿ.ಎಸ್. ಮೋಹನ್ ಮೊದಲಾದವರು ನೆರವಾಗಿದ್ದಾರೆ.

ಈ ಯೋಜನೆಗಾಗಿ ನೇಮಕಗೊಂಡಿರುವ ಡಾ. ಪಿ. ಮಣಿ ಮತ್ತು ಡಾ. ಎಸ್. ಚಂದ್ರಪ್ಪ ಹಂತಹಂತದಲ್ಲೂ ನೆರ‍ವು ನೀಡುತ್ತಾ ಬಂದಿದ್ದಾರೆ. ಈ ಕೋಶವನ್ನು ಸಿದ್ಧಮಾಡಲು ಡಾ. ಅಕ್ಕಮಹಾದೇವಿ, ಡಾ. ಜ್ಯೋತಿ ಶಂಕರ್, ಕುಮಾರಿ ಪೂರ್ಣಿಮಾ, ಶ್ರೀ ಜಿ.ಎಸ್. ಭಟ್, ಶ್ರೀ ಕ್ಯಾತನಹಳ್ಳಿ ರಾಮಣ್ಣ ಮೊದಲಾದವರು ಸಹಕಾರ ನೀಡದಿದ್ದಲ್ಲಿ ಈ ಕೆಲಸ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಅಕ್ಷರ ಜೋಡಣೆ ಮತ್ತು ಪುಟ ವಿನ್ಯಾಸ ಮಾಡಲು ನಿರಂತರವಾಗಿ ದುಡಿದವರು ಶ್ರೀಮತಿ ಬಿ.ಎಂ. ಮಂಜುಳ.

ಕಾರ್ಯನಿರ್ವಹಣೆ ಮತ್ತು ಕಾರ್ಯಸಂಯೋಜನೆ ಎಂಬ ಎರಡು ಗುರುತರ ಕರ್ತವ್ಯಗಳನ್ನು ಹೊತ್ತ ನನಗೆ ಮತ್ತು ಡಾ. ಸ.ಚಿ. ರಮೇಶ್ ಅವರಿಗೆ ಈ ಬೃಹತ್ ಕಾರ್ಯದಲ್ಲಿ ನೆರವಾದ ಒಬ್ಬೊಬ್ಬರಿಗೂ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.

ಆರ್ವಿಯಸ್ ಸುಂದರಂ