ಆಂಧ್ರ ಗ್ರಾಮದೇವತೆಗಳು ಜನಪದದಿಂದ ಪೂಜಾದಿಗಳನ್ನು ಸ್ವೀಕರಿಸುತ್ತಾ ಶಿಷ್ಟದೇವತೆಗಳಿಗಿಂತ ಭಿನ್ನವಾದ ಲಕ್ಷಣಗಳನ್ನು ಹೊಂದಿದ ದೇವರುಗಳನ್ನು ಗ್ರಾಮದೇವತೆಗಳೆಂದು ಹೇಳಬಹುದು. ಪ್ರಪಂಚದಲ್ಲಿರುವ ಎಲ್ಲ ಜನಪದರಿಗೆ ತಪ್ಪದೇ ಅವರದೇ ಆದ ಗ್ರಾಮದೇವತೆಗಳು ಇರುತ್ತಾರೆ. ಉದಾಹರಣೆಗೆ ಬೇಸಾಯ ಪ್ರಧಾನವಾಗಿರುವ ಜಾತಿಗಳಲ್ಲಿ ಗ್ರಾಮದೇವತೆಗಳು ಸೃಜನಾತ್ಮಕ ದೇವತೆಗಳಾಗಿ ಪೂಜಿಸಲ್ಪಡುತ್ತಾರೆ. ಗ್ರಾಮದೇವತೆಗಳು ಸಾಮಾನ್ಯವಾಗಿ ಒಂದಡಿ ಇರುವ ಕಲ್ಲಿನ ರೂಪದಲ್ಲಿ, ಬಂಡೆಕಲ್ಲಿನ ರೂಪದಲ್ಲಿ, ಕೆಲವೊಂದು ಕಡೆ ಭಯಂಕರ ರೂಪವನ್ನು, ವಿಗ್ರಹರೂಪವನ್ನುಳ್ಳವರಾಗಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಜನಪದರು ಶೂಲಗಳನ್ನು, ಸಣ್ಣದಾದ ಬಂಡೆ ಕಲ್ಲಿನ ಗುಡಿಯಲ್ಲಿಟ್ಟು ಇವನ್ನೇ ಗ್ರಾಮದೇವತೆಗಳೆಂದು ಪೂಜಿಸುವುದುಂಟು. ಪ್ರಖ್ಯಾತಿ ಹೊಂದಿದ ಗ್ರಾಮದೇವತೆಗಳ ವಿಗ್ರಹಗಳು, ಉತ್ಸವ ವಿಗ್ರಹಗಳು ದೊಡ್ಡದಾದ ಗುಡಿಯಲ್ಲಿ ಶಿಷ್ಟದೇವತೆಗಳ ರೀತಿಯಲ್ಲಿ ಆರಾಧಿಸಲ್ಪಡುತ್ತಾರೆ.

2

ಗ್ರಾಮದೇವತೆಗಳು ಆಂಧ್ರ ಪ್ರದೇಶದಲ್ಲಿರುವ ಎಲ್ಲ ಹಳ್ಳಿಗಳಲ್ಲಿ, ಪಟ್ಟಣ ನಗರಗಳಲ್ಲಿ ಪೂಜಸಲ್ಪಡುತ್ತಾರೆ. ಇಲ್ಲಿ ಗ್ರಾಮದೇವತೆಗಳ ಜಾತ್ರೆ, ಉತ್ಸವ ಇತ್ಯಾದಿಗಳು ಫೆಬ್ರವರಿ ತಿಂಗಳಲ್ಲಿ ಪ್ರಾರಂಭವಾಗಿ ಮೇ ತಿಂಗಳ ತನಕ ನಡೆಯುತ್ತದೆ. ಈ ರೀತಿಯ ಗ್ರಾಮದೇವತೆಗಳ ಆರಾಧನೆಯಲ್ಲಿ ಸ್ತ್ರೀ ದೇವತೆಗಳನ್ನಲ್ಲದೆ, ಪುರುಷ ದೇವರನ್ನು ಸಹ ಪೂಜಿಸುತ್ತಾರೆ. ಆದರೆ ಜನಪದರು ಸ್ತ್ರೀ ಗ್ರಾಮದೇವತೆಗಳಿಗೆ ಹೆಚ್ಚಿನ ಪ್ರಾಮುಖ್ಯವನ್ನು ಕೊಡುತ್ತಾರೆ. ಇವರ ದೃಷ್ಟಿಯಲ್ಲಿ ಮಾತೃದೇವತೆ ಎಲ್ಲರಿಗಿಂತ ಭಿನ್ನವಾದವಳು, ಪ್ರಾಮುಖ್ಯವುಳ್ಳವಳು.

ಆಂಧ್ರ ಪ್ರದೇಶದಲ್ಲಿ ಪೆದ್ದಮ್ಮ, ನೂಕಾಲಮ್ಮ, ಸಲ್ಲಲಮ್ಮ, ದೊನಕೊಂಡ ಗಂಗಮ್ಮ, ಕಾಟಮರಾಜು, ಮುವ್ವಲಮ್ಮ, ಪೋಚಮ್ಮ, ಸುಂಕಾಲಮ್ಮ, ಮೈಸಮ್ಮ, ಗಂಗಮ್ಮ, ಮಾರಮ್ಮ, ಅಂಕಮ್ಮ, ಪೋತುರಾಜ, ವಿರೂಪಾಕ್ಷಮ್ಮ, ಚೇರಾಲಮ್ಮ, ವೇಷಾಲಮ್ಮ, ಉಜ್ಜಿನ ರಾಯ ಸ್ವಾಮಿ, ಹೊಸರಾಯಸ್ವಾಮಿ, ಸಲ್ಲಾಪುರಮ್ಮ, ಎಲ್ಲಮ್ಮ, ಪೋಲೇರಮ್ಮ, ಬೋಯಿಕೊಂಡ ಗಂಗಮ್ಮ, ದೇಶಮ್ಮ, ಮುತ್ತು ಮಾರಮ್ಮ, ದಂಡುಮಾರಮ್ಮ, ಮುತ್ಯಾಲಮ್ಮ, ಶೀತಾಲಂಬ, ಅಗ್ಗಾರ್ಲು, ಧರ್ಮರಾಜು, ದ್ರೌಪದಿ, ಪರಶುರಾಮ, ರೇಣುಕ, ನಾಗಾಲಮ್ಮ, ಸಗಟೂರು ಗಂಗಮ್ಮ ಮೊದಲಾದವರು ಪ್ರಖ್ಯಾತಿ ಹೊಂದಿದ ಗ್ರಾಮದೇವತೆಗಳು.

ಮೇಲೆ ತಿಳಿಸಿರುವ ಗ್ರಾಮದೇವತೆಗಳ ಆರಾಧನೆ ಮೇಲ್ನೋಟಕ್ಕೆ ಒಂದೇ ರೀತಿ ಕಾಣಿಸಿದರೂ ಆಳವಾಗಿ ನೋಡಿದರೆ ಭಿನ್ನತೆ ಗೋಚರಿಸುತ್ತದೆ. ಅಲ್ಲದೇ, ವಿಭಿನ್ನವಾದ, ಆಸಕ್ತಿಕರವಾದ ಪೂಜಾಪದ್ಧತಿಗಳು ವಿಧಿ ವಿಧಾನಗಳು ದರ್ಶನ ಕೊಡುತ್ತವೆ. ಉದಾಹರಣೆಗೆ ಕಾಟೇರಿ ಎಂಬ ಗ್ರಾಮ ದೇವತೆಯ ಪೂಜಾ ಪದ್ಧತಿಗಳು ಕೆಲವರಿಗೆ ಮಾತ್ರ ಗೊತ್ತಿರುತ್ತದೆ. ಹೇಗೆ ಗ್ರಾಮದೇವತೆಗಳ ಲಕ್ಷಣಗಳನ್ನು, ಪೂಜಾವಿಧಾನಗಳನ್ನು ಆಳವಾಗಿ ಪರಿಶೀಲಿಸಿದ ಅನಂತರ ಮುಂದಿನಂತೆ ವಿಭಜಿಸಬಹುದು.

೧. ವಿಸ್ತೃತವಾಗಿ ಎಲ್ಲ ಕಡೆ ಪೂಜಿಸಲ್ಪಡುತ್ತಿರುವ ಗ್ರಾಮದೇವತೆಳು, ೨. ಒಂದು ಗ್ರಾಮಕ್ಕೆ ಮಾತ್ರ ಸೀಮಿತವಾದ ಗ್ರಾಮದೇವತೆಗಳು, ೩. ಕುಲದೇವತೆಗಳು, ೪. ಗಡಿ ಗ್ರಾಮದ ದೇವತೆಗಳು,೫. ಬೆಟ್ಟದ ಮೇಲಿರುವ ಗ್ರಾಮದೇವತೆಗಳು, ೬. ಪ್ರತ್ಯೇಕವ್ಯಾಧಿಗಳಿಗೆ ಸಂಬಂಧಪಟ್ಟ ಗ್ರಾಮದೇವತೆಗಳು, ೭.ಪ್ರಕೃತಿಯ ಗ್ರಾಮ ದೇವತೆಗಳು, ೮. ಬೇಸಾಯಕ್ಕೆ ಸಂಬಂಧಪಟ್ಟ ಗ್ರಾಮದೇವತೆಗಳು, ೯.ವನಗ್ರಾಮದೇವತೆಗಳು, ೧೦.ಗ್ರಾಮದೇವತೆಗಳಾರಗಿರುವ ಪುಣ್ಯ ಸ್ತ್ರೀಯರು (ಪೇರಂಟಾಂಡ್ರು), ೧೨. ಪ್ರತ್ಯೇಕವಾದಂತಹ ಬಯಕೆಗಳನ್ನು ಈಡೇರಿಸುವ ಗ್ರಾಮದೇವತೆಗಳು. ೧೩. ಪ್ರಾಣಿಗಳ ರೂಪದಲ್ಲಿರುವ ಗ್ರಾಮದೇವತೆಗಳು, ೧೪.ವೃಕ್ಷಗಳ ರೂಪದಲ್ಲಿರುವ ಗ್ರಾಮದೇವತೆಗಳು, ೧೫. ಇತರ ರಾಜ್ಯಗಳಿಂದ ಬಂದಿರುವ (ವಲಸೆ) ಗ್ರಾಮದೇವತೆಗಳು.

ತೆಲುಗುನಾಡಿನ ಪ್ರಸಿದ್ಧನಗರ ವಿಜಯವಾಡ ಕನಕದುರ್ಗ ಹಿಂದೆ ಗ್ರಾಮದೇವತೆಯಾಗಿದ್ದಳು. ಆದರೆ ಈಗ ಈ ದೇವತೆಯನ್ನು ವೈದಿಕ ಪದ್ಧತಿಯಲ್ಲಿ ಪೂಜಿಸುತ್ತಿದ್ದಾರೆ. ಸಮ್ಮಕ್ಕ ಸಾರಕ್ಕ ಗಿರಿಜನರ ಗ್ರಾಮದೇವತೆಗಳು. ಇವರ ಜಾತ್ರೆಗೆ ಲಕ್ಷಗಟ್ಟಲೆ ಜನ ಬರುತ್ತಾರೆ. ಸಿಕಂದ್ರಬಾದ್‌ನ ಉಜ್ಜಯಿನಿ ಮಹಂಕಾಳಿ ಜಾತ್ರೆಗೆ ಜನಪದರಲ್ಲದೆ ಗಣ್ಯಾತಿಗಣ್ಯ ವ್ಯಕ್ತಿಗಳು ಸಹ ಬರುತ್ತಾರೆ. ಚಿತ್ತೂರು ಜಿಲ್ಲೆಯ ಪುಂಗನೂರು ಹತ್ತಿರ ಇರುವ ಬೋಯಿಕೊಂಡ ಗಂಗಮ್ಮನನ್ನು ಪ್ರತಿನಿತ್ಯ ಅನೇಕ ಭಕ್ತರು ದರ್ಶಿಸಿ ಬಲಿಗಳನ್ನು ಕೊಟ್ಟು, ಅಲ್ಲೇ ಬೇಯಿಸಿ ಎಲ್ಲರಿಗೂ ಹಂಚುತ್ತಾರೆ.

ಗ್ರಾಮದೇವತೆಗಳನ್ನು ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ಪೂಜಿಸುತ್ತಾರೆ. ೧) ಜಾತ್ರೆ, ೨) ಉತ್ಸವ, ೩) ಕೊಲುಪುಲು, ಒಂದು ಗ್ರಾಮ ಅಥವಾ ಅನೇಕ ಗ್ರಾಮಗಳ ಜನರು ಒಂದು ನಿರ್ದಿಷ್ಟವಾದ ಪ್ರದೇಶದಲ್ಲಿ ಗ್ರಾಮದೇವತೆಯನ್ನು ಆರಾಧಿಸುವುದು ಜಾತ್ರೆ. ಜಾತ್ರೆಯಲ್ಲಿ ಮುಖ್ಯವಾಗಿ ಪ್ರಾರ್ಥನೆ, ಬಲಿ, ಆತ್ಮ ಹಿಂಸೆ ಮುಂತಾದ ಅಂಶಗಳು ತಪ್ಪದೆ ಇರುತ್ತವೆ. ಗಂಗಜಾತ್ರೆ ಸಂಪ್ರದಾಯಕ್ಕೆ ಒಳಪಟ್ಟಿರುತ್ತವೆ. ಪುರಾಣ ಸಂಬಂಧಿ ಗ್ರಾಮ ದೇವತೆಗಳಾದ ಧರ್ಮರಾಜು, ದ್ರೌಪದಿ ಮುಂತಾದವರನ್ನು ಶಾಸ್ತ್ರೀಯ ಧ್ವಜಸ್ತಂಭದ ಪೂಜೆ, ಗರುಡ, ಗಜ, ಏಕಾಂತ ಸೇವ ರಥೋತ್ಸವಗಳಿಂದ ಮತ್ತು ಗ್ರಾಮದೇವತೆಗಳ ಪೂಜಾ ವಿಧಾನಗಳಾದ ಬಲಿ, ಆತ್ಮಹಿಂಸೆ ಮುಂತಾದವುಗಳಿಂದ ಸಹ ಪೂಜಿಸುವುದನ್ನು ಉತ್ಸವ ಎನ್ನುತ್ತಾರೆ. ಕೊಲುಪುಲು ಒಂದು ಗ್ರಾಮಕ್ಕೆ ಮಾತ್ರ ಸೀಮಿತವಾದ ಜಾತ್ರೆ, ಉತ್ಸವ ಪೂಜಾ ವಿಧಿ ವಿಧಾನಗಳೆರಡೂ ಇರುತ್ತವೆ. ಆದರೆ ಗಜ, ಗರುಡ ವಾಹನಗಳನ್ನು ರಂಗೋಲಿ ಹಾಕಿ ಅದರ ಮೇಲೆ ದೇವರುಗಳನ್ನು ಇಟ್ಟು ಪೂಜಿಸುತ್ತಾರೆ.

ಗ್ರಾಮದೇವತೆಗಳ ಜಾತ್ರೆ, ಉತ್ಸವ, ಕೊಲುಪುಲುಗಳನ್ನು ಸಂಬಂಧಪಟ್ಟ ಗ್ರಾಮ ಅಲ್ಲದೆ ಗ್ರಾಮದೇವತೆಯ ಸಂಪ್ರದಾಯದ ಪ್ರಕಾರ ಒಂದು – ಎರಡು – ಐದು – ಹತ್ತು ವರ್ಷಗಳಿಗೆ ಒಂದು ಸಲ ಮಾಡುತ್ತಾರೆ. ಆಂಧ್ರ ರಾಜ್ಯಾದ್ಯಂತ ಮೇ ತಿಂಗಳಲ್ಲಿ ಅನೇಕ ಕಡೆ ಗ್ರಾಮದೇವತೆಗಳನ್ನು ಪೂಜಿಸುತ್ತಾರೆ.

ಗ್ರಾಮದೇವತೆಯ ಜಾತ್ರೆಯ ಸಂದರ್ಭದಲ್ಲಿ ತಪ್ಪದೆ ಪ್ರಾಣಿ ಬಲಿ ಇರುತ್ತದೆ. ಭಕ್ತರು ಪ್ರತಿನಿತ್ಯ ಕೆಲವು ಗ್ರಾಮದೇವತೆಗಳಿಗೆ ಮೇಕೆ, ಕುರಿ, ಕೋಳಿ ಮುಂತಾದವುಗಳನ್ನು ಬಲಿ ಕೊಡುತ್ತಾರೆ. ಆದರೆ ಜಾತ್ರೆಯ ಸಂದರ್ಭದಲ್ಲಿ ಇದರ ಜೊತೆಗೆ ಕೋಣವನ್ನು ಬಲಿಕೊಡುವ ಪದ್ಧತಿ ಆಸಕ್ತಿಕರವಾಗಿರುತ್ತದೆ. ‘ಗಾವುಸಿಗಿತ’ (ಹಲ್ಲುಗಳಿಂದ ಕುರಿ, ಮೇಕೆ ಮರಿಗಳನ್ನು ಕಡಿದು ಬಲಿಕೊಡುವುದು)’ಪೊಲಿ ತಿರುಗುವುದು’ (ಕೋಣದ ರಕ್ತದ ಜೊತೆಗೆ ಅನ್ನವನ್ನು, ಬೇವನ್ನು ಬೆರಸಿ ಗ್ರಾಮದ ಸುತ್ತ ಚೆಲ್ಲುವುದು) ‘ಬಾನು ಕುರಿಬಲಿ’ (ಗರ್ಭಿಣಿಯಾಗಿರುವ ಕುರಿಯನ್ನು ದೇಹದ ಮಧ್ಯ ಸೀಳಿ ಬಲಿಕೊಡುವುದು) ಎಂಬ ಹಿಂಸಾತ್ಮಕ ಪದ್ಧತಿಗಳು ಈಗಲೂ ಕಾಣಸಿಗುತ್ತವೆ. ಇದರ ಜೊತೆಗೆ ಆತ್ಮ ಹಿಂಸಾತ್ಮಕ ಪ್ರಕ್ರಿಯೆಗಳಾದ ಶೂಲ, ದಪ್ಪನೆಯ ಸೂಜಿಗಳನ್ನು ಬಾಯಲ್ಲಿ ಚುಚ್ಚಿಕೊಳ್ಳುವುದು, ಸಿಡಿ, ಕಬ್ಬಿಣ ಸರಪಣಿಗಳನ್ನು ಬೆನ್ನಿಗೆ ಚುಚ್ಚಿಕೊಂಡು ರಥಗಳನ್ನು ಎಳೆಯವುದು, ನಿಂಬೆಹಣ್ಣುಗಳನ್ನು ಮೈ ಎಲ್ಲಾ ಚುಚ್ಚಿಸಿಕೊಳ್ಳುವುದು ಸಹ ಕಾಣಿಸುತ್ತದೆ. ಪವಿತ್ರೀಕರಣ ಅಂಶಗಳಾದ ಬೆಂಕಿಯ ನಡಿಗೆ, ಬೆಂಕಿಯನ್ನು ಮೇಲೆ ಸುರಿಯುವುದು ಆಂಧ್ರದಲ್ಲಿ ಮುಖ್ಯವಾಗಿ ಚಿತ್ತೂರು ಜಿಲ್ಲೆಯಲ್ಲಿ ವಿಶೇಷವಾಗಿ ಕಾಣಿಸುತ್ತವೆ.

ಗ್ರಾಮದೇವತೆಗಳ ಆರಾಧನೆಯ ಮುಖ್ಯೋದ್ಧೇಶ ಅನಕ್ಷರಸ್ಥರು ಪೂಜಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಜಾನಪದ ಕಲೆಗಳ ಪ್ರದರ್ಶನ ಸಹ ಗ್ರಾಮದೇವತೆಗಳ ಆರಾಧನೆಯಲ್ಲಿ ಪ್ರಮುಖ ಅಂಶವಾಗಿರುತ್ತವೆ. ಕೀಲುಕುದುರೆ, ಮರಗಾಲು, ಕೋಲಿಪಂದ್ಯ, ಗೊರವಯ್ಯ, ದೊಣ್ಣೆವರಸೆ, ವಿವಿಧ ರೀತಿಯ ವೇಷಗಳು ಜಾತ್ರೆಗಳಲ್ಲಿ ಜನಪದರ ಮನಸ್ಸನ್ನು ರಂಜಿಸುತ್ತದೆ.

ಗ್ರಾಮದೇವತೆಳ ಆರಾಧನೆಯಲ್ಲಿ ಆಧ್ಯಾತ್ಮಿಕತೆಯ ಜೊತೆಗೆ, ಆರೋಗ್ಯ, ಮನುಷ್ಯನ ಎರ್ರಾ‍ಬಿರ್ರಿ‍ತನವನ್ನು ಸಹ ದರ್ಶಿಸಬಹುದು. ಈ ಸಂದರ್ಭವಾಗಿ ಬಳಸುವ ನಿಂಬೆ, ಅರಿಸಿನ, ಕುಂಕುಮ, ಬೇವು, ಅನೇಕ ರೋಗಗಳಿಗೆ ತಡೆ ಉಂಟು ಮಾಡುತ್ತವೆ. ಅದರಲ್ಲಿಯು ‘ಅಮ್ಮ’ (Small – pox) ವನ್ನು ನಿವಾರಿಸುವುದರಲ್ಲಿ ಬೇವಿಗೆ ಅಗ್ರಸ್ಥಾನವಿದೆ. ಇವಲ್ಲದೆ ಗ್ರಾಮದೇವತೆಗಲ ಆರಾಧನೆಯ ಸಂದರ್ಭವಾಗಿ ಮದ್ಯಪಾನ, ವ್ಯಭಿಚಾರ, ಜೂಜು ಮುಂತಾದ ಅನೈತಿಕವಾದ ಚಟುವಟಿಕೆಗಳು ಸಹ ಜಾಸ್ತಿಯಾಗಿ ಕಾಣಿಸುತ್ತವೆ.

ಇಡೀ ವರ್ಷ ಹೊಲದ ಕೆಲಸದಲ್ಲಿ ನಿಮಗ್ನರಾದ ಹಳ್ಳಿ ಜನರಿಗೆ ಜಾತ್ರೆ, ಉತ್ಸವ, ಕೊಲುಪುಲು ಸಂತಸವನ್ನುಂಟು ಮಾಡಿ ವಿಶ್ರಾಂತಿಯನ್ನು ಕೊಡುತ್ತವೆ. ಮನೆಗೆ ಬೇಕಾದ ಅಡುಗೆ ಸಾಮಾನು, ಬೇಸಾಯಕ್ಕೆ ಬೇಕಾಗುವ ಕತ್ತಿ, ಗಡಾರಿ, ಹಾರೆ ಮುಂತಾದವುಗಳನ್ನು ಕೊಳ್ಳುವುದಕ್ಕೆ, ಮಕ್ಕಳಿಗೆ ಬೇಕಾಗುವ ಆಟದ ಸಾಮಾನು ಕೊಳ್ಳುವುದಕ್ಕೆ ಜಾತ್ರೆ ಸರಿಯಾದ ಸಮಯ. ಇಂದಿನ ಸಮಾಜ ಎಷ್ಟೇ ವೈಜ್ಞಾನಿಕವಾಗಿ ಮುಂದುವರಿದಿದ್ದರೂ ಭಾರತೀಯ ಸಮಾಜದಲ್ಲಿ ದೇಶಿ ಸಂಪ್ರದಾಯಗಳು, ಆಚರಣೆಗಳು, ಗ್ರಾಮದೇವತೆಗಳ ಜಾತ್ರೆ, ಉತ್ಸವಗಳಂತೂ ಇನ್ನೂ ಜೀವಂತವಾಗಿರುವುದು ವಿಶೇಷ ಸಂಗತಿ.

– ಟಿ.ಎನ್.

ಆಂಧ್ರಪ್ರದೇಶದ ಚಿತ್ರಕಲೆ ಆಂಧ್ರಪ್ರದೇಶದ ಚಿತ್ರಕಲೆಗೆ ಅತಿಪ್ರಾಚೀನವಾದ ಇತಿಹಾಸವಿದೆ. ಪ್ರಾಗ್ ಇತಿಹಾಸದ ಗುಹೆಗಳು ಮತ್ತು ವಸ್ತುಗಳು ಈ ರಾಜ್ಯದಲ್ಲಿ ದೊರೆತಿದ್ದು, ಅವುಗಳ ಪ್ರಾಚೀನ ಜನರ ಕಲಾತ್ಮಕ ಅಭಿವ್ಯಕ್ತಿಯನ್ನು ತಿಳಿಸುತ್ತದೆ. ಇಂದಿಗೂ ಗ್ರಾಮೀಣ ಸ್ತ್ರೀಯರು ಮದುವೆ ಸಮಾರಂಭಗಳಲ್ಲಿ ಮತ್ತು ಧಾರ್ಮಿಕಾಚರಣೆ ಸಮಯಗಳಲ್ಲಿ ಮನೆಯ ಗೋಡೆಗಳನ್ನು ವಿವಿಧ ರೇಖಾಚಿತ್ರಗಳಿಂದಲೂ ಮತ್ತು ಪ್ರತಿಮೆಯನ್ನಿಟ್ಟಿರುವ ಗೋಡೆಗೆ ಬಣ್ಣ ಹಚ್ಚಿ ಸ್ವಸ್ತಿಕ ಮತ್ತು ಇತರ ವಿನ್ಯಾಸಗಳನ್ನು, ಕಮಲ ಮುಂತಾದ ಹೂಗಳ ಚಿತ್ರಗಳನ್ನು, ನವಿಲು, ಗಿಳಿ ಮುಂತಾದ ಹಕ್ಕಿಗಳನ್ನು ಬರೆಯುತ್ತಾರೆ. ದೇವಸ್ಥಾನಗಳ ಗೋಡೆಗಳ ಮೇಲೆ ಪೌರಾಣಿಕ ಕತೆಗಳ ಚಿತ್ರಗಳನ್ನು ಬರೆಯುವುದನ್ನು ನೋಡಬಹುದು. ಆಂದ್ರ ಪ್ರದೇಶದಲ್ಲಿ ವಿವಿಧ ಕಡೆಗಳಲ್ಲಿ ದೊರೆತ ಹಲವಾರು ರೀತಿಯ ಬಣ್ಣ ಬಳಿದ ಮಣ್ಣಿನ ಪಾತ್ರೆಗಳು, ಮೆರುಗುಕೊಟ್ಟ ಮಣ್ಣಿನ ಪಾತ್ರೆಗಳು, ಮಣ್ಣಿನ ಪ್ರತಿಮೆಗಳು ಇಂದು ಅಮರಾವತಿ, ನಾಗಾರ್ಜುನ ಕೊಂಡ, ಹೈದರಾಬಾದ್ ಮುಂತಾದ ವಸ್ತು ಸಂಗ್ರಹಾಲಯಗಳಲ್ಲಿವೆ.

ಹಚ್ಚೆ: ಒಂದು ಸಂಪ್ರದಾಯ ಮತ್ತು ಕಲೆ. ಹಣೆಯ ಮೇಲೆ ಹಚ್ಚೆ ಹೊಯ್ಯುವುದು, ಹೆಣ್ಣುಮಕ್ಕಳಿಗೆ ಒಂದು ಆಚರಣೆ. ಗ್ರಾಮೀಣ ಜೀವನದಲ್ಲಿ ಹಚ್ಚೆ ಹೊಯ್ಯುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ. ಆಂಧ್ರಪ್ರದೇಶ ಮತ್ತು ಕರ್ನಾಟಕ ಪ್ರಾಂತ್ಯಗಳಲ್ಲಿ ಹಲವಾರು ಜನಾಂಗಗಳಲ್ಲಿ ಈ ಕಲೆ ಇನ್ನೂ ಉಳಿದಿದೆ. ಕರ್ನಾಟಕದಲ್ಲಿ ಬುರುಡೆ ಬೆಸ್ತರು ಅಥವಾ ಕೊರಮಶೆಟ್ಟರ ಸ್ತ್ರೀಯರು ಹಚ್ಚೆ ಹೊಯ್ಯುವ ಕಲೆಯಲ್ಲಿ. ಹೆಸರುಗಳಿಸಿದರೆ, ಆಂಧ್ರ ಪ್ರದೇಶದಲ್ಲಿ ಹಚ್ಚೆ ಚಚ್ಚುವ ಬುಡಕಟ್ಟು ಜನಾಂಗದವರು ಅನೇಕರಿದ್ದಾರೆ. ಅಲ್ಲದೇ ‘ಕುಚ್ಚಬೊಟ್ಲವಾರು’ ಎಂಬ ಹೆಸರಿನ ಜನರಿದ್ದಾರೆ. ಹಚ್ಚೆ ಚುಚ್ಚಿಸಿಕೊಳ್ಳುವುದನ್ನು ‘ಪಚ್ಚಪೊಡುಪು’ ಅಥವಾ ‘ಪಚ್ಚ ಪೊಡಿಕಿಂಚುಕೋವಡಂ’ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಕೆಲವು ಕಡೆ ‘ಹಸಿರುಹೊಯ್ಯುವುದು’, ‘ಹಚ್ಚೆ ಹೊಯ್ಯುವುದು’, ‘ಹಣಜೆ ಹೊಯ್ಯುವುದು’ ಎಂದು ಕರೆಯುತ್ತಾರೆ. ಗೇರುಬೀಜದ ಮಸಿಯನ್ನು ಸೀಮೆಎಣ್ಣೆಯ ದೀಪದ ಕಾಡಿಗೆಯಲ್ಲಿ ಕಲಸಿ (ಹಸಿರು) ಚಿತ್ತಾರ ರಚಿಸಲು ಸಿದ್ಧಮಾಡಿಕೊಳ್ಳುವುದು ಒಂದು ವಿಧವಾದರೆ, ಉರಿಯುವ ಸೀಮೆಎಣ್ಣೆ ಬುಡ್ಡಿಯಿಂದ ಬರುವ ಮಸಿಯನ್ನು ಎರೆದು ಎದೆಹಾಲಿನಲ್ಲಿ ಕಲಸಿ ಹಚ್ಚೆ ಮಸಿ ಮಾಡಿಕೊಳ್ಳುವುದು ಇನ್ನೊಂದು ರೀತಿ.

ಕರ್ನಾಟಕದಲ್ಲಿ ಹಚ್ಚೆಯಲ್ಲಿ ಮುತ್ತಿನ ಆರತಿ, ರಾಮವೇವರ ತೊಟ್ಟಿಲು, ಸೀತೆ ಸೊತ್ತು, ಅಕ್ಕ ತಂಗಿಯರ ಸಾಲು, ಜೋಗಿ ಜಡೆ, ತೇರು, ಸೇವಂತಿಗೆ ಹೂ, ತಾವರೆ ಹೂ, ಗಿಂಡಿ, ಟಗರು ಮುಂತಾದ ಆಕೃತಿಗಳ ಚಿತ್ತಾರಗಳು ವೈಶಿಷ್ಟ್ಯಪೂರ್ಣವಾಗಿದೆ. ಅಂತೆಯೇ ಹಸೆಮಣೆ, ಜೋಗಿ ಜಡೆ, ಗಿಣಿಸಾಲು, ತೋಪಿನಸಾಲು, ಹೂಬಳ್ಳಿ ಮುಂತಾದವುಗಳನ್ನು ಹಚ್ಚೆ ಹೊಯ್ಯಿಸಿಕೊಳ್ಳುವುದುಂಟು.

ಆಂಧ್ರದಲ್ಲಿ ಹೆಂಗಸರೇ ಅಲ್ಲದೆ ದೃಢಕಾಯರಾದ ಪೈಲ್ವಾನರು ಮುಂಗೈ ತೊಡೆ ಹಾಗೂ ಎದೆಯ ಮೇಲೆ ಸಿಂಹ, ಗರುಡಪಕ್ಷಿ, ಹಾವು, ಹನುಮಂತ, ಗದೆ, ಕತ್ತಿ ಮತ್ತು ಅರಳಿದ ಕಮಲಗಳನ್ನು ಹಚ್ಚೆ ಹಾಕಿಸಿಕೊಳ್ಳುತ್ತಾರೆ. ವೈಧವ್ಯ ಬರಬಾರದೆಂದು ಹಚ್ಚೆ ಹಾಕಿಸಿಕೊಳ್ಳುವರು. ತಮಗೆ ಇಷ್ಟವಾದವರ ಹೆಸರನ್ನು ಕೈ ಮೇಲೆ ಅಥವಾ ಎದೆಯ ಮೇಲೆ ಅಥವಾ ಬೆನ್ನಿನ ಮೇಲೆ ಶಾಶ್ವತವಾಗಿ ಚುಚ್ಚಿಸಿಕೊಳ್ಳುವರು ಆಂಧ್ರಪ್ರದೇಶದಲ್ಲಿದ್ದಾರೆ. ಸೂಜಿಗಳನ್ನು, ಮೂಳೆಗಳನ್ನು, ಮುಳ್ಳನ್ನೂ, ಬಣ್ಣ ಚುಚ್ಚುವುದಕ್ಕೆ ಬಳಸುತ್ತಾರೆ. ದೇಹದ ಮೇಲೆ ಹೆಚ್ಚಾಗಿ ಹಚ್ಚೆ ಚುಚ್ಚಿಸಿಕೊಂಡರೆ ಅಷ್ಟು ಶ್ರೀಮಂತಿಕೆಯನ್ನು ತಿಳಿಸುತ್ತದೆ ಎಂದು ಭಾವಿಸುವ ಜನಾಂಗದವರಿದ್ದಾರೆ.

ಹಚ್ಚೆ ಚುಚ್ಚಿಸಿಕೊಳ್ಳುವುದು ಒಂದು ಕಾಲದಲ್ಲಿ ತೀರಾ ಸಾಮಾನ್ಯವಾಗಿತ್ತು. ಇದಕ್ಕೆ ಕಾರಣ ಬಹುಶಃ ಹಚ್ಚೆ ಹೊಯ್ಯಿಸಿಕೊಳ್ಳದವರು ರಾಸಿ ಕಣಕ್ಕೆ ಹೋಗಬಾರದೆಂಬ ನಂಬಿಕೆಯೇ ಇರಬಹುದು. ಈ ನಂಬಿಕೆಯ ಜೊತೆಗೆ ಅಂದಚಂದಕ್ಕಾಗಿ ಹಚ್ಚೆ ಚುಚ್ಚಿಸಿಕೊಳ್ಳುವುದೂ ಇತ್ತು. ಹಣೆ, ಗಲ್ಲ, ಕೆನ್ನೆ, ತೋಳು, ರಟ್ಟೆ, ಮುಂಗೈ, ಕಾಲುಗಳ ಮೇಲೆ ಚಂದಕ್ಕಾಗಿ ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು. ಹಚ್ಚೆಗಳನ್ನು ಸೋದರ ಮಾವಂದಿರೋ ಅಥವಾ ಆಪ್ತರೋ ತಮ್ಮ ಪ್ರೀತಿಯ ಸಂಕೇತವಾಗಿ, ನೆನಪಿಗಾಗಿ ಹೊಯ್ಯಿಸುತ್ತಾರೆ. ಇದನ್ನು ಹಸಿರು ಹೊಯ್ಯಿಸಿಕೊಳ್ಳುವುದು ಎಂತಲೂ ಹೇಳುತ್ತಾರೆ.

ರಂಗೋಲಿ: ಮನೆಯಂಗಳದಲ್ಲಿ ರಂಗೋಲಿ ಹಾಕುವ ಮುಖಾಂತರ ಜನಪದರು ತಮ್ಮ ಚಿತ್ರಕಲಾ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ದಕ್ಷಿಣ ಭಾರತದ ಎಲ್ಲಾ ಭಾಗಗಳಲ್ಲಿ ಕಂಡುಬರುವ ಜನಪದ ಕಲೆ ರಂಗೋಲಿ. ರಂಗೋಲಿ ಹಾಕುವ ಉದ್ದೇಶ ಮುಖ್ಯವಾಗಿ ಮನೆಯ ಅಂದಚಂದಕ್ಕಾಗಿ. ರಂಗೋಲಿಯನ್ನು ದಾಟಿ ಭೂತಪ್ರೇತಗಳು, ದುಷ್ಟಶಕ್ತಿಗಳು ಬರುವುದಿಲ್ಲ ಎಂಬ ವಿಶ್ವಾಸವೂ ಕಂಡುಬರುತ್ತದೆ.

ಬಿಳಿಯ ರಂಗೋಲಿ ಪುಡಿ ಅಥವಾ ಸುಣ್ಣದ ಪುಡಿ, ಕೆಮ್ಮಣ್ಣು, ಅಕ್ಕಿಹಿಟ್ಟು ರಂಗೋಲಿಯಲ್ಲಿ ಬಳಸುತ್ತಾರೆ. ಮದುವೆ ಮಂಜಿ, ಶೋಭನ, ಜಾತ್ರೆ ಮುಂತಾದ ಸಂದರ್ಭಗಳಲ್ಲಿ ಹಲವಾರು ಚಿತ್ತಾಕರ್ಷಕವಾದ ವಿನ್ಯಾಸಗಳನ್ನು ಬಿಡಿಸುವುದುಂಟು. ವಿಶೇಷ ಸಂದರ್ಭಗಳಲ್ಲಿ ಅಕ್ಕಿಹಿಟ್ಟಿನಿಂದಲೂ ರಂಗೋಲಿ ಇಡುತ್ತಾರೆ. ಸೀಮೆಸುಣ್ಣ, ಇದ್ದಿಲುಗಳನ್ನು ರಂಗೋಲಿ ಬರೆಯಲು ಬಳಸುವುದಿಲ್ಲ. ಸುಣ್ಣಕ್ಕೆ ಶುಭ್ರತೆ, ಸ್ವಚ್ಛತೆ ಮತ್ತು ಔಷಧ ಗುಣಗಳಿರುವುದರಿಂದ ಸುಣ್ಣದ ಪುಡಿಯನ್ನು ಉಪಯೋಗಿಸುವುದುಂಟು.

ಗ್ರಾಮದೇವತೆಗಳ ಹಬ್ಬಗಳಲ್ಲಿ ಅರ್ಚಕರೇ ರಂಗೋಲಿಯನ್ನು ಬಿಡಿಸುತ್ತಾರೆ. ಆಂಧ್ರದಲ್ಲಿ ತಿರುಪತಿಯ ಸಮೀಪದಲ್ಲಿ ‘ಮಾತಮ್ಮ’ ಅಮ್ಮನವರ ಗೊಂಬೆಯನ್ನು, ಕರ್ನಾಟಕದಲ್ಲಿ ಭಗವತೀ ಆರಾಧನ ಸಮಯದಲ್ಲಿ ದೇವತೆಯ ಚಿತ್ರವನ್ನು ಭಯಂಕರವಾಗಿ ರಂಗೋಲಿಯಲ್ಲಿ ಚಿತ್ರಿಸುತ್ತಾರೆ. ತೆಲಂಗಾಣಾ ಪ್ರಾಂತ್ಯದಲ್ಲಿ ಗ್ರಾಮದೇವತೆಯ ಹಬ್ಬಗಳಲ್ಲಿ ದೇವತಾ ಕಲ್ಯಾಣೋತ್ಸವದ ನಂತರ ಹಾಕುವ ರಂಗೋಲಿಯನ್ನು ‘ರತಿ’ ಎಂದು ಕರೆಯುತ್ತಾರೆ. ಇದಕ್ಕೆ ಬಿಳಿಪು, ಕಪ್ಪು, ಕೆಂಪು, ಹಸಿರು ಬಣ್ಣಗಳ ಪುಡಿಗಳನ್ನು ಬಳಸುತ್ತಾರೆ.

ಅಶುಭಕಾರ್ಯಗಳಲ್ಲಿ ರಂಗೋಲಿಯನ್ನು ಬಿಡಿಸುವುದಿಲ್ಲ. ಮನೆಯಲ್ಲಿ ಯಾರಾದರೂ ತೀರಿ ಹೋದರೆ ಕರ್ಮಕಾಂಡ ಮುಗಿಯುವವರೆಗೆ ರಂಗೋಲಿ ಹಾಕುವುದಿಲ್ಲ. ಕರ್ಮಗಳು ಮುಗಿಯುವವರೆಗೂ ಸತ್ತವರ ಆತ್ಮ ಮನೆಯ ಪರಿಸರಗಳಲ್ಲಿಯೇ ತಿರುಗುತ್ತಿರುತ್ತದೆ ಎಂದು ಹಿಂದುಗಳ ವಿಶ್ವಾಸ. ಒಂದು ವೇಳೆ ಮನೆಯ ಮುಂದೆ ರಂಗೋಲಿ ಹಾಕಿದರೆ ಆತ್ಮಗಳು ಮನೆಯಲ್ಲಿ ನುಗ್ಗಿ ಬಲಿಯನ್ನು ಕೋರುತ್ತವೆ ಎಂಬ ವಿಶ್ವಾಸ ತೆಲುಗಿನವರಲ್ಲಿದೆ. ಆದರು ತೆಲುಗು ದೇಶದಲ್ಲಿ ಗ್ರಾಮದೇವತೆಯರನ್ನು ಆರಾಧಿಸುವ ಬೈಂಡ್ಲವಾರೆಂಬ ಜನಾಂಗದಲ್ಲಿ ಮನುಷ್ಯ ಸತ್ತ ನಂತರ ರಂಗೋಲಿ ಹಾಕುವ ಆಚಾರವಿದೆ. ಈ ರಂಗೋಲಿಯ ಮೇಲೆ ಶವವನ್ನು ಆತನ ಹೆಂಡತಿಯನ್ನು ಕೂರಿಸಿದನಂತರ ಶವವನ್ನು ಶ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಹನ್ನೊಂದು ದಿವಸಗಳವರೆಗೂ ಶವವನ್ನು ಇಟ್ಟಿದ್ದ ಪ್ರದೇಶದಲ್ಲಿ ರಂಗೋಲಿಯನ್ನು ಬಿಡುವುದು ಕಂಡುಬರುತ್ತದೆ. ಅಂತೆಯೇ ಗೊಲ್ಲ ಜನಾಂಗದವರು ಪಿತೃದೇವತೆಗಳಿಗೆ ಅಕ್ಕಿಯನ್ನು ಕೊಡುವ ಸಂದರ್ಭದಲ್ಲಿಯೂ ರಂಗೋಲಿಯನ್ನು ಹಾಕುತ್ತಾರೆ. ಆ ರಂಗೋಲಿಯಿಂದ ಪಿತೃದೇವತೆಗಳು ತೃಪ್ತಿಪಡುತ್ತಾರೆಂದು ವಿಶ್ವಾಸವಿದೆ.

ಆಂಧ್ರ ಪ್ರದೇಶದಲ್ಲಿ ಸಂಕ್ರಾಂತಿ ಹಬ್ಬದಲ್ಲಿ ರಂಗೋಲಿ ಬಿಡುವುದು ಒಂದು ಸಂಪ್ರದಾಯವೇ ಆಗಿದೆ. ‘ಸಂಕ್ರಾಂತಿ ಮುಗ್ಗುಲು’ ಎಂದೇ ಕರೆಯಲ್ಪಡುವ ಈ ರಂಗೋಲಿ ತೆಲುಗು ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ. ಸಂಕ್ರಾಂತಿಯಲ್ಲಿಯೇ ‘ನೆಲವಂಕೆ ಮುಗ್ಗು’ ಎಂಬ ರಂಗೋಲಿಯನ್ನು ಪ್ರತ್ಯೇಕವಾಗಿ ಬಿಡಿಸುತ್ತಾರೆ. ರಂಗೋಲಿಯ ಮಧ್ಯದಲ್ಲಿ ಚಂದ್ರಬಿಂಬ, ನಾಲ್ಕು ಮೂಲೆಗಳಲ್ಲಿಯು ಸೂರ್ಯಬಿಂಬಗಳನ್ನು ಚಿತ್ರಿಸುತ್ತಾರೆ. ರಥಸಪ್ತಮಿಯ ದಿನ ಸೂರ್ಯರಥವನ್ನು ಚಿತ್ರಿಸುತ್ತಾರೆ. ಕರ್ನಾಟಕದಲ್ಲಿ ವಿಶಿಷ್ಟವಾದ ಸಂದರ್ಭಗಳಲ್ಲಿ ಬಿಡಿಸುವ ರಂಗೋಲಿಗಳಿಗೆ ಅವುಗಳ ಸಂದರ್ಭಗಳ ಹೆಸರನ್ನು ಕೊಟ್ಟಿರುವುದುಂಟು. ನಾಗಮಂಡಲ, ಆರತಿ ರಂಗೋಲಿ, ಮದುವೆ ರಂಗೋಲಿ, ವ್ಯಾಧಿ ನಿವಾರಣೆ ರಂಗೋಲಿ, ಭೂತಪಿಡಿಸುವ ರಂಗೋಲಿ, ಮಣೆ ರಂಗೋಲಿ ಮುಂತಾದ ಕೆಲವು ವಿಧಗಳು ಈ ರಂಗೋಲಿಯಲ್ಲಿ ಕಾಣುತ್ತೇವೆ.

ಕಲಂಕಾರಿ: ಆಂಧ್ರಪ್ರದೇಶದಲ್ಲಿ ವೈಶಿಷ್ಟ್ಯಪೂರ್ಣವಾದ ಚಿತ್ರಕಲೆ ‘ಕಲಂಕಾರಿ’ ಸೀರೆ ಇತರ ಬಟ್ಟೆಗಳ ಮೇಲೆ ಅಚ್ಚು ಹಾಕುವುದನ್ನು ಕಲಂಕಾರಿ ಎಂದು ಕರೆಯುತ್ತಾರೆ. ‘ಕಲಂತೋ ಚೇಸೇ ಪನಿ ಕಲಂಕಾರಿ’ ಎಂದರೆ ಲೇಖನಿಯಿಂದ ಮಾಡುವ ಕೆಲಸವಾದುದರಿಂದ ಇದು ಕಲಂಕಾರಿಯಾಗಿದೆ. ಲೇಖನಿಯಿಂದ ಗೀಚಿದರೆ ಇದು ಚಿತ್ರಕಲೆಯಾಗಿಯೂ, ಅಚ್ಚು ಹಾಕುವುದರಿಂದ ಇದು ಕರಕುಶಲ ಕಲೆಯಾಗಿಯೂ ವ್ಯಾಪ್ತಿಯಲ್ಲಿದೆ. ಕಾಳಹಸ್ತಿಯಲ್ಲಿ ಇದನ್ನು ಲೇಖನಿಯಿಂದಲೇ ಬರೆಯುವುದುಂಟು. ಆದುದರಿಂದ ಈ ಕಲೆಯನ್ನು ಕಾಳಹಸ್ತಿ ಕಲಂಕಾರಿ ಎಂದು ಕರೆಯುವುದುಂಟು. ಕಲಂಕಾರಿ ಎಂಬ ಪದವು ವ್ಯವಹಾರಕ್ಕೆ ಬರುವ ಇಂತಹ ಸೀರೆಗಳನ್ನು ಪೋರ್ಚುಗೀಸನಲ್ಲಿ ‘Pintado’ ಎಂದೂ, ಡಚ್‌ ನಲ್ಲಿ ‘Sitz’ ಎಂದೂ ಇಂಗ್ಲೀಷ್‌ನಲ್ಲಿ ‘Chintz’ ಎಂದೂ ಕರೆಯುತ್ತಿದ್ದರು. ಆಧುನಿಕ ಭಾಷೆಯಲ್ಲಿ ಕಲಂಕಾರಿಗೆ ‘ಬಾಟಿಕ್ ಚಿತ್ರಕಲೆ’ ಎಂಬ ಹೆಸರಿದೆ.

ಕೃಷ್ಣಾಜಿಲ್ಲೆಯ ಮಚಿಲೀಪಟ್ನಂ ಪಟ್ಟಣವನ್ನು ಬಂದರು ಎಂದು ಕರೆಯುತ್ತಾರೆ. ಇಲ್ಲಿನ ಕಲಂಕಾರಿಗೆ ಬಂದರು ಕಲಂಕಾರಿಯೆಂದೆ ಹೆಸರು.

ರಂಗ್ರೇಜ್(ರಂಗಾರಿ) ಜಾತಿಯವರು ಈ ಕಲೆಯಲ್ಲಿ ನಿಪುಣರು. ಇವರು ಕಾಗದದ ಮೇಲೆ ಸುಂದರವಾದ ವಿನ್ಯಾಸಗಳನ್ನು ಚಿತ್ರಿಸಿ, ಅವುಗಳನ್ನು ಮರದ ಫಲಕಗಳ ಮೇಲೆ ಕೆತ್ತಿ ಅವುಗಳಿಂದ ದೇಶೀಯವಾದ ಬಣ್ಣಗಳನ್ನು ಹಚ್ಚುತ್ತಾರೆ. ಇವರು ಉಪಯೋಗಿಸುವ ಬಣ್ಣಗಳೆಂದರೆ ನೀಲಿ, ಕಪ್ಪು, ಕೆಂಪು ಮತ್ತು ಹಸಿರು ಈ ಬಣ್ಣಗಳನ್ನು ತಯಾರು ಮಾಡಲು ಪ್ರಕೃತಿ ಸಿದ್ಧವಾದ ಮೂಲಿಕೆಗಳು, ಎಲೆಗಳು ಮತ್ತು ಹೂಗಳನ್ನು ಬಳಸುತ್ತಾರೆ. ಬಣ್ಣಗಳಲ್ಲಿ ವೈದ್ಯಗುಣಗಳು ಕಂಡುಬರುತ್ತವೆ. ಉದಾಹರಣೆಗೆ ಕಪ್ಪು ಬಣ್ಣ ಕಬ್ಬಿಣದ ಚೂರುಗಳು, ಬೆಲ್ಲ, ಉಪ್ಪು, ನೀರಿನಿಂದ ತಯಾರಾಗುತ್ತದೆ. ಕೈಕಾಲುಗಳಿಗೆ ಮಳೆ ಮುಂತಾದ ವಸ್ತುಗಳು ಚುಚ್ಚಿಕೊಂಡರೆ ಈ ಕಷಾಯವನ್ನು ಹಚ್ಚಿದರೆ ಸಾಕು ಗಾಯಗಳು ಬೇಗ ಗುಣಮುಖವಾಗುತ್ತವೆ. ಹಾಗೂ ಇರುವೆ, ಸೊಳ್ಳೆ ಮುಂತಾದವುಗಳನ್ನು ಮನೆಯೊಳಗೆ ಬರಸುವುದಿಲ್ಲ. ಕೆಂಪು ಬಣ್ಣದಲ್ಲಿ ಸ್ಫಟಿಕೆಯನ್ನು ಬಳಸುವುದರಿಂದ ಇದು ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.

ಕಲಂಕಾರಿಯಲ್ಲಿ ರೇಖೆಗಳಿವೆ, ವೃತ್ತಗಳಿಗೆ ವಿಶಿಷ್ಟವಾದ ಅರ್ಥ ಕಂಡುಬರುತ್ತದೆ. ಲಂಬರೇಖೆಗಳು ಪುರುಷ ಗುಣಾತ್ಮಕಗಳು, ಅಡ್ಡ ರೇಖೆಗಳು (ಸ್ತ್ರೀಗುಣಾತ್ಮಕಗಳು, ಮೂಲ ರೇಖೆಗಳು, ಉಭಯ ಗುಣಾತ್ಮಕಗಳು ಎಂದು ಹೇಳುವುದುಂಟು. ಗತಿಗೆ, ಬಲಕ್ಕೆ ಲಂಬರೇಖೆ ಸಂಕೇತವಾದರೆ, ಶಾಂತಿಗೆ ಸಾತ್ವಿಕತೆಗೆ ಅಡ್ಡರೇಖೆ ಪ್ರತೀಕವಾಗಿವೆ. ಈ ಎರಡರನ್ನೂ ಮೂಲರೇಖೆ ಸಂಕೇತಿಸುತ್ತದೆ. ಆದುದರಿಂದಲೇ ಚಿತ್ರರಚನೆಯಲ್ಲೂ ವೈರುಧ್ಯವಾದ ಗೆರೆಗಳನ್ನು ಗೀಚುವುದರಿಂದ ಆ ಚಿತ್ರದ ಸೊಗಸು ಹೆಚ್ಚಾಗುತ್ತದೆ. ಇನ್ನು ವೃತ್ತದಲ್ಲಿ ಕಾಲಚಕ್ರ, ಕಥಾಚಕ್ರ, ಜೀವನ ಚಕ್ರ, ಭಾಗ್ಯ ಚಕ್ರ – ಹೀಗೆ ನಮ್ಮ ಜೀವನ ಗಮನವೆಲ್ಲವೂ ಅಂತರ್ಭೂತವಾಗಿರುತ್ತದೆ. ವೃತ್ತವು ಶಕ್ತಿಗೆ ಸಂಕೇತ.

ಬಾಹಿರವಾದ ರೂಪ, ಗುಣಗಳನ್ನು ವಿವೇಚಿಸಲು ಹೇಗೆ ಆಧಾರವಾಗಿರುತ್ತದೆಯೋ ಹಾಗೆಯೇ ಕಲಂಕಾರಿ ಚಿತ್ರಗಳಲ್ಲಿರುವ ರೂಪಗಳಾಗಿ ಆನೆಗಳು, ಗಿಣಿಗಳು, ನವಿಲುಗಳು, ಕಲಶಗಳು ಮತ್ತು ಭಾರತ ರಾಮಾಯಣಾಧಿ ಘಟ್ಟಗಳು ನಮ್ಮ ಸಂಸ್ಕೃತಿಯನ್ನು ವಿವರಿಸುವಂತೆ ಕಾಣುತ್ತವೆ.

ಆಂಧ್ರ ಪ್ರದೇಶದ ಆದಿಲ್‌ಬಾದ್‌ ಜಿಲ್ಲೆಯ ನಿರ್ಮಲ್‌ ಚಿತ್ರಗಳು ಗೃಹೋಪಕರಣ ಸಾಧನೆಗಾಗಿ ಖ್ಯಾತಿಗೊಂಡಿವೆ. ಈ ಕಲೆಯನ್ನು ‘ನಕಾಷ್‌’ಎಂದು ಕರೆಯುತ್ತಾರೆ.

ಜನಪದ ನೃತ್ಯಕಲೆಯೊಂದಿಗೆ ಚಿತ್ರಕಲೆಯೂ ಸೇರಿಕೊಂಡಿದೆ ಎಂದು ಹೇಳಬಹುದು. ತೆಲುಗು ಕನ್ನಡ ಬಯಲಾಟಗಳಲ್ಲಿ ಪಾತ್ರಧಾರಿಗಳು ಬಳೆದುಕೊಳ್ಳುವ ಮುಖವರ್ಣಿಕೆಯಲ್ಲಿಯೂ ಚಿತ್ರಿಕೆಗಳನ್ನು ನಾವು ಕಾಣಬಹುದಾಗಿದೆ.

ಮದುವೆಯಲ್ಲಿ ಕುಂಬಾರನ ಮನೆಯಿಂದ ಗಡಗಿಯನ್ನು ತರುತ್ತಾರೆ. ಇದರ ಮೇಲೆ ಸುಣ್ಣದಿಂದ ಚಿತ್ರ ಹಾಕುವುದನ್ನು ನಾವು ನೋಡಬಹುದು. ಆಂಧ್ರ ದೇಶದಲ್ಲಿ ಈ ಗಡಿಗೆಗಳನ್ನು ‘ಐರೇನಿಕುಂಡಲು’ ಎಂದು ಕರೆಯುತ್ತಾರೆ.

ಸೀರೆ, ಕುಪ್ಪಸಗಳ ಮೇಲೆ ಕಸೂತಿ ತೆಗೆಯುವ ಚಿತ್ರಕಲೆಯನ್ನು ನಾವು ನೋಡಬಹುದು. ಅಂತೆಯೇ ನೋಗ, ನೇಗಿಲು, ಮನೆಬಾಗಿಲು, ಹೊಸ್ತಿಲು, ಕಂಬಗಳು ಮತ್ತು ರಥಗಳನ್ನು ಕೆತ್ತುವ ಸಂದರ್ಭಗಳಲ್ಲಿಯೂ; ಬೆಳ್ಳಿ, ಬಂಗಾರದ ಆಭರಣಗಳ ಮೇಲೆ ಕೆತ್ತುವ ಚಿತ್ರಗಳಲ್ಲದೆ ಗಂಧದ ಗಟ್ಟಿಗೆಯಲ್ಲಿ ಸುಂದರವಾಗಿ ಕೆತ್ತುವ ವೈವಿಧ್ಯ ಪೂರ್ಣವಾದ ಚಿತ್ತಾರಗಳನ್ನು ಆಂಧ್ರ ಕರ್ನಾಟಕ ಪ್ರದೇಶಗಳಲ್ಲಿ ನೋಡಬಹುದು.

ಕರ್ನಾಟಕದ ವೈಶಿಷ್ಟ್ಯಪೂರ್ಣವಾದ ಬಿದ್ರಿ ಕಲೆಯು ಆಂಧ್ರದ ಹೈದರಾಬಾದ್‌ನಲ್ಲಿಯೂ ಕಂಡುಬರುತ್ತದೆ. ಕರ್ನಾಟಕದ ಹಂಪಿ, ಆಂಧ್ರದ ಲೇಪಾಕ್ಷಿಗಳಲ್ಲಿ ಕಂಡುಬರುವ ಚಿತ್ರಗಳು ಅಂದಿನ ಕಾಲದ ಚಿತ್ರಕಲಾ ನೈಪುಣ್ಯಕ್ಕೆ ನಿದರ್ಶನವಾಗಿವೆ. ಹಲವಾರು ಪ್ರಾಚೀನ ಚಿತ್ರಕಲೆಗಳು ಪರಕೀಯರ ದಬ್ಬಾಳಿಕೆಗೆ ಸಿಲುಕಿ ನಾಶವಾಗಿವೆ.

– ಜಿ.ಎಸ್.ಎಂ.