ಆಟ್ಟುಕಾಲ್ ಪೊಂಗಾಲ ತಿರುವನಂತಪುರಂ ಜಿಲ್ಲೆಯ ತಿರುವನಂತಪುರಂ ತಾಲ್ಲೂಕಿನ ಮಣಕ್ಯಾಡು ಗ್ರಾಮದಲ್ಲಿ ಆಟ್ಟುಕಾಲ್ ವಾರ್ಡಿನಲ್ಲಿ ಆಟ್ಟುಕಾಲ್ ಶ್ರೀ ಭಗವತೀ ದೇವಾಲಯವಿದೆ. ಹಿಂದಿನ ಕಾಲದಲ್ಲಿ ಇದು ಆಟ್ಟುಕಾಲ್ ಮುಟ್ಟಿಪ್ಪುರ ಎಂದು ಕರೆಯಲ್ಪಡುತ್ತಿತ್ತು. ಈ ಪ್ರದೇಶವು ಸಿಡುಂಗಾಡ್ ತೀರ್ಥಂಕರೆಯಿಂದ ಹುಟ್ಟುವ ಕಿಳ್ಳಿ ಹೊಳೆಯ ಬದಿಯಲ್ಲಿದೆ. ಮುಲ್ಲ ವೀಡಿನ (ಮಲ್ಲಿಗೆ ಮನೆ) ಹಿರಿಯರಾಗಿದ್ದ ಪರಮೇಶ್ವರ ಪಿಳ್ಳೆಯವರು ಪ್ರತಿಷ್ಠಾಪನೆ ಮಾಡಿದ ಶಿಲೆಯೂ ಅದರ ಬಳಿಯಿರುವ ಬನವೂ ಸೇರಿರುವ ಜಾಗವು ಹಿಂದಿನ ಕಾಲದಲ್ಲಿ ಆಟ್ಟುಕಾಲ್ (ತೊರೆಯ ಬಳಿಯ) ದೇವಾಲಯವಾಗಿ ಮಾರ್ಪಟ್ಟಿತು. ಈ ಪ್ರದೇಶವು ಹಿಂದೆ ‘ಕಾವುವಿಶ’ ಎಂದು ಕರೆಯಲ್ಪಡುತ್ತಿದ್ದ ಜಾಗ. ‘ಕಾವಿನ ತೆಂಕು’ ಎಂಬ ಹೆಸರೂ ಪ್ರಸಿದ್ಧವಾಗಿತ್ತು.

ಚೆರುಕರ ಮನೆ, ಚೆರುಕರ ದೊಡ್ಡಮನೆ, ಮಲ್ಲಿಗೆ ಮನೆ, ಸೀತುಪುರಂ ಮನೆ, ಕುರುಪ್ಪುವಿಶಾಕಂ ಮನೆ, ತೆಂಕುಮನೆ, ಕುರುಂಕುಡಿ ಮನೆ – ಎಂಬ ಕುಟುಂಬದವರು ಹಿಂದಿನ ಕಾಲದಲ್ಲಿ ಅಟ್ಟುಕಾಲ್ ದೇವೀ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರಾಗಿದ್ದರು.

ಆಟ್ಟುಕಾಲ್ ದೇವಾಲಯದಲ್ಲಿರುವ ಭದ್ರಕಾಳಿ ಪ್ರತಿಷ್ಠೆಯ ಮೂಲವಿಗ್ರಹವು ಬಕ್ಕೆ ಹಲಸಿನ ಹಸಿತಿರುಳಿನಲ್ಲಿ ಕಡೆದು ತಯಾರಿಸಿದುದು. ಅದರ ಬುಡದಲ್ಲಿ ಇನ್ನೆರಡು ವಿಗ್ರಹಗಳಿವೆ. ಮೂಲ ವಿಗ್ರಹಕ್ಕೆ ವನಮಾಲೆಯನ್ನು ತೊಡಿಸಿದೆ. ಮೂಲ ವಿಗ್ರಹಕ್ಕೆ ಅಭಿಷೇಕ ಇಲ್ಲ. ಒಂದು ವಿಗ್ರಹವನ್ನು ಹೊರಗಿನ ಉತ್ಸವ ಬಲಿಗಾಗಿ ಬಳಸಲಾಗುತ್ತದೆ. ಗರ್ಭಗುಡಿಯ ಹೊರಗೆ ಮಹಾಗಣಪತಿಯನ್ನೂ ಉಪದೇವತೆಗಳನ್ನೂ ಶಿವನನ್ನೂ ಪ್ರತಿಷ್ಠೆ ಮಾಡಲಾಗಿದೆ.

ಒಬ್ಬ ಬ್ರಾಹ್ಮಣ ಬಾಲಿಕೆಗಾಗಿ ವೇಷ ಬದಲಿಸಿ ಬಂದ ದೇವಿಯನ್ನು ಕಿಳ್ಳಿ ಹೊಳೆಯ ಆಚೆಬದಿಗೆ ದಾಟಿಸಿದ ಪರಮೇಶ್ವರನ್ ಪಿಳ್ಳೆಯೇ ಆಟ್ಟುಕಾಲ್ ದೇವೀ ದೇವಾಲಯದ ಸ್ಥಾಪಕರಾದುದಾಗಿ ತಿಳಿದು ಬರುತ್ತದೆ. ಹಿಂದೆ ಪ್ರಾಣಿಬಲಿ ಆಚರಣೆಯಲ್ಲಿತ್ತು. ಅಂದಿನ ಉತ್ಸವಕ್ಕೆ ‘ಪಾಟ್ಟ್’ ಎಂಬುದು ಹೆಸರು. ಈ ಹನ್ನೆರಡು ಮನೆಯವರೂ (ಪಾಟ್ಟುಕಾರರೂ) ಸೇರಿದಂತೆ ಇಪ್ಪತ್ತೆಂಟು ಜನರನ್ನು ಒಳಗೊಂಡ ಟ್ರಸ್ಟ್ ೧೯೭೦ರಲ್ಲಿ ಸ್ಥಾಪಿತವಾಗಿದೆ. ಈಗ ಏಳು ಸದಸ್ಯರಿರುವ ಪದಾಧಿಕಾರಿಗಳ ನೇತೃತ್ವದ ಟ್ರಸ್ಟ್ ದೇವಾಳಯದ ಆಡಳಿತ ನಡೆಸುತ್ತಿದ್ದ ದೇವಾಲಯದ ಆಡಳಿತವು ನಾಯರ್ ಸಮುದಾಯದವರ ಅಧೀನದಲ್ಲಿದೆ.

ಜಾತ್ರೆ: ಹಾಡುವವರು ತೋಟ್ಟಂ ಹಾಡುಗಳನ್ನು ಹಾಡಿ ಕೊಡುಂಗಲ್ಲೂರಮ್ಮನನ್ನು ಆಟ್ಟುಕ್ಕಾಲ್ ದೇವಾಲಯಕ್ಕೆ ಆವಾಹಿಸಿ ಆಟ್ಟುಕಾಲಮ್ಮನ ಖಡ್ಗಕ್ಕೆ ‘ಕಾಪು’ ಕಟ್ಟಿ ದೇವಿಯನ್ನು ಕುಳ್ಳಿರಿಸುತ್ತಾರೆ. ಅಲ್ಲಿಂದ ಹತ್ತುದಿನಗಳ ಕಾಲ ನಡೆಯುವ ಪೊಂಗಾಲ ಮಹೋತ್ಸವವು ಆರಂಭವಾಗುತ್ತದೆ. ಒಂಭತ್ತನೇ ದಿನ ಮುಂಜಾನೆ ಪೊಂಗಾಲ ಒಲೆಯಲ್ಲಿ ಅಗ್ನಸ್ಪರ್ಶವಾಗುತ್ತದೆ. ದೇವಾಲಯದ ಈ ಒಲೆಯನ್ನು ‘ಪಂಡಾರ ಅಡುಟ್ಟ್'(ಭಂಡಾರ ಒಲೆ) ಎಂದು ಕರೆಯುತ್ತಾರೆ. ಆ ಒಲೆಯ ಬೆಂಕಿಯನ್ನು ಪೊಂಗಾಲಕಾರರ ಒಲೆಗಳಿಗೆ ಸ್ಪರ್ಶಿಸಲಾಗುತ್ತದೆ. ಭಂಡಾರ ಒಲೆಯ ಪೊಂಗಾಲವನ್ನು ನೈವೇದ್ಯದಲ್ಲಿ ತೀರ್ಥಪ್ರೋಕ್ಷಣೆ ಮಾಡಲಾಗುತ್ತದೆ. ಮಣ್ಣಿನ ಹೊಸ ಮಡಕೆಗಳಲ್ಲಿ ಪೊಂಗಾಲ ಇರಿಸುವುದು ರೂಢಿ. ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ಬೆಲ್ಲ, ಕದಳಿಹಣ್ಣು, ಜೇನು, ತುಪ್ಪ, ಸಕ್ಕರೆ, ಕಲ್ಲುಸಕ್ಕರೆ, ಬಿರಾದ್ರಾಕ್ಷಿ, ಗೋಡಂಬಿ ಮುಂತಾದವುಗಳನ್ನು ಪೊಂಗಾಲ ತಯಾರಿಗೆ ಬಳಸಲಾಗುತ್ತದೆ. ಸುಡುಇಟ್ಟಿಗೆಗಳಿಂದ ನಿರ್ಮಿಸಿದ ಒಲೆಯಲ್ಲಿ ತೆಂಗಿನ ಒಣಗರಿಗಳನ್ನು ಉರಿಸಿ ಪೊಂಗಾಲ ನೈವೇದ್ಯವನ್ನು ಬೇಯಿಸಲಾಗುತ್ತದೆ. ಪೊಂಗಾಲ ನೈವೇದ್ಯದ ಜತೆ ಮಂಡುಪುಟ್ಟು, ತೆರಳಿಯಪ್ಪಂ ಮುಂತಾದ ತಿಂಡಿಗಳನ್ನೂ ತಯಾರಿಸಲಾಗುತ್ತದೆ.

ಮಂಡಪುಟ್ಟು: ಹುರಿದ ಪಟ್ಟೆ ಹೆಸರಿನ ಪುಡಿಯೊಂದಿಗೆ ಅಕ್ಕಿಯನ್ನು ನೆನೆಹಾಕಿ ಹುರಿದು ಬೆಲ್ಲ, ತೆಂಗಿನಕಾಯಿ, ಏಲಕ್ಕಿಗಳನ್ನು ಬೆರೆಸಿ ತೆಂಗಿನ ಹಾಲಲ್ಲಿ ಉಂಡೆಮಾಡಿ ಇಡ್ಲಿಪಾತ್ರೆಯಲ್ಲಿರಿಸಿ ಹಬೆಯಲ್ಲಿ ಬೇಯಿಸಿ ಮಂಟಪುಟ್ಟನ್ನು ತಯಾರಿಸಲಾಗುತ್ತದೆ.

ತೆರಳಿಯಪ್ಪ: ಅಕ್ಕಿಹಿಟ್ಟು ಬೆಲ್ಲ ತೆಂಗಿನಕಾಯಿ ಬಾಳೆಹಣ್ಣು ಏಲಕ್ಕಿ – ಇವುಗಳನ್ನು ಸೇರಿಸಿ ನೀರು ಹಾಕದೇ ಉಂಡೆಕಟ್ಟಿ, ಕಟ್ಟಿದ ತೆರಳಿ ಎಲೆಗೂಡಲ್ಲಿಟ್ಟು ಇಡ್ಲಿ ಪಾತ್ರೆಯಲ್ಲಿ ಬೇಯಿಸಿ ತಯಾರಿಸಲಾಗುತ್ತದೆ.

ಕಣ್ಣಕಿಯು ಪಾಂಡ್ಯ ಅರಸನನ್ನೂ ಅನುಯಾಯಿಗಳನ್ನೂ ಹಿರಿಯ ಅಕ್ಕಸಾಲಿಗನನ್ನು ಕೊಂದು ಮಧುರೆಯನ್ನು ಸುಟ್ಟುರುಹಿದ ಭಾಗವನ್ನು ತೋಟ್ಟಂ ಪಾಟ್ಟುಗಳಾಗಿ ಹಾಡುವ ಸಂದರ್ಭದಲ್ಲಿ ಪೊಂಗಾಲ ಆರಂಭವಾಗುತ್ತದೆ. ತಮಿಳುನಾಡಿನ ನಾಗರ್‌ಕೋಯಿಲ್, ಕೋಟ್ಟಾರ್, ಕಲ್ಲರಕುರುಟ್ಟೆ ಮುಂತಾದ ಪ್ರದೇಶಗಳಿಂದಲೂ ನೆಯ್ಯಾಟ್ಟಿಂಕರದ ತೊಯುಕ್ಕಲ್ ಪ್ರದೇಶದಿಂದಲೂ, ಪೊಂಗಾಲಕ್ಕೆ ಅಗತ್ಯವಾದ ಮಣ್ಣಿನ ಮಡಕೆಗಳು ಬರುತ್ತದೆ. ವೇಳಾರ್ ಸಮುದಾಯಕ್ಕೆ ಸೇರಿದವರು ಇವುಗಳನ್ನು ತಯಾರಿಸುತ್ತದೆ.(ಆಟ್ಟುಕ್ಕಾಲ್ ದೇವಾಲಯವು ‘ಮುಡಿಪ್ಪುರ’ ವಾಗಿದ್ದ ಕಾಲದಲ್ಲಿ ಗಂಡಸರೂ ಸ್ತ್ರೀಯರ ಜತೆಗೆ ಪೊಂಗಾಲ ಸಮರ್ಪಿಸುತ್ತಿದ್ದರೆಂದು ಹೇಳುತ್ತಾರೆ) ಕರಪ್ಪನ್ ಎಂಬ ಚರ್ಮರೋಗವು ವಾಸಿಯಾಗಲು ಚಟ್ಟಂಬಿ ಸ್ವಾಮಿಗಳು (ನಾಯರ್ ಸಮುದಾಯದ ಮುಖಂಡ) ತಾಯಿಯ ಜತೆಗೆ ಬಂದು ಪೊಂಗಾಲ ನೈವೇದ್ಯಮಾಡಿ ಅರ್ಪಿಸಿದ್ದಾಗಿ ಹೇಳಲಾಗುತ್ತದೆ. ಶ್ರೀ ನಾರಾಯಣಗುರು ಸ್ವಾಮಿಗಳು, ಶಿಷ್ಯಂದಿರ ಸಮೇತವಾಗಿ ಪೊಂಗಾಲ ಹಾಕಿದ್ದಾಗಿ ಹಳಬರು ಹೇಳುತ್ತಾರೆ. ೨೦೦೫ರಲ್ಲೂ ಒಬ್ಬ ಪುರುಷ ಪೊಂಗಾಲ ಅರ್ಪಿಸಿದ್ದಾನೆ. ಸೌಖ್ಯವಿಲ್ಲದೆ, ರುಗ್ಣಶಯ್ಯೆಯಲ್ಲಿದ್ದ ತನ್ನ ಮಡದಿಗೋಸ್ಕರ ಆತ ಪೊಂಗಾಲ ಅರ್ಪಿಸಿದ್ದ. ಇದನ್ನು ಒಂದು ವಿಶೇಷ ಘಟನೆಯೆಂದಷ್ಟೆ ತಿಳಿದರೆ ಸಾಕು.

ಹಿಂದೆ ಪೊಂಗಾಲವನ್ನು ದೇವಾಲಯದ ಪರಿಸರದಲ್ಲಿ ಮಾತ್ರ ನಡೆಸುತ್ತಿದ್ದರು. ಈಗ ರಸ್ತೆಯ ಬದಿಯಲ್ಲಿ ಪೊಂಗಾಲ ತಯಾರಿಸುತ್ತಾರೆ. ಬಾವಿಯ ನೀರಿನ ಬದಲು ಪೈಪು ನೀರನ್ನು ಒಪ್ಪಲಾಗಿದೆ. ವಿವಿಧ ಜಾತಿ ಮತಗಳಿಗೆ ಸೇರಿದವರು ಮಾತ್ರವಲ್ಲ ವಿದೇಶೀಯರೂ ಪೊಂಗಾಲದ ನೈವೇದ್ಯಕ್ಕೆ ಬರುತ್ತಾರೆ. ಪೊಂಗಾಲಕ್ಕೆ ಸಂಬಂಧಿಸಿದಂತೆಯೇ ದೊಡ್ಡೊಂದು ಸಂತೆ ಸೇರುತ್ತದೆ. ‘ಪೊಂಗಾಲ ಸೀರೆ’ ಎಂಬ ಹೆಸರಲ್ಲಿ ಬಟ್ಟೆ ವ್ಯಾಪಾರಿಗಳು ಪ್ರತ್ಯೇಕವಾಗಿ ತಯಾರಿಸಿದ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಪೊಂಗಾಲ ಸಂದರ್ಭದಲ್ಲಿ ನಡೆಯುತತದೆ. ಪೊಂಗಾಲ kit ಮಾರಾಟಕ್ಕೆ ಲಭ್ಯ. ಪೊಂಗಾಲ ಹಾಕಲು ಅಗತ್ಯವಾದ ಎಲ್ಲ ವಸ್ತುಗಳನ್ನು ಒಳಗೊಂಡ ಈ ಕಿಟ್ಟನ್ನು ಖರೀದಿಸುವವರಿಗೆ ಪೊಂಗಾಲ ಸೀರೆಯನ್ನು ಉಚಿತವಾಗಿ ಕೊಡುತ್ತಾರೆ. ಈ ಸಂದರ್ಭದಲ್ಲಿ ದೃಶ್ಯ ಶ್ರವ್ಯ ಮಾಧ್ಯಮಗಳೂ ಮುದ್ರಣ ಮಾಧ್ಯಮಗಳೂ ಪ್ರಚಾರದ ಕಾರಣವಾಗಿ ದೊಡ್ಡ ಲಾಭವನ್ನು ಪಡೆಯುತ್ತಾರೆ. ಪೊಂಗಾಲ ಒಲೆಗೆ ಉಪಯೋಗಿಸುವ ಸುಡು ಇಟ್ಟಿಗೆ ಕೂಡ ಸಂತೆಯ ಭಾಗವಾಗಿಬಿಟ್ಟಿದೆ. ಅತಿ ಹೆಚ್ಚು ಹೆಂಗಸರು ಭಾಗವಹಿಸುವ ಉತ್ಸವ ಎಂಬ ನೆಲೆಯಲ್ಲಿ ಅಟ್ಟುಕಾಲ್ ಪೊಂಗಾಲ ೨೦೦೭ರ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಆಟ್ಟುಕಾಲ್ ಪೊಂಗಾಲದ ಕುರಿತು ಡಾ. ಡಯಾನ್ ಎನ್ಕಿನ್ ಡಜನಟ್ಟ್ ಎಂಬ ಅಮೇರಿಕನ್ ಸ್ತ್ರೀ ತಯಾರಿಸಿದ ಮಹಾಪ್ರಬಂಧಕ್ಕೆ ಕ್ಯಾಲಿಫೋರ್ನಿಯಾದ ಇನ್ಸ್ಟಿಟ್ಯೂಟ್ ಆಫ್ ಇಂಟೆಗ್ರಲ್ ಸ್ಟಡೀಸ್ ಡಾಕ್ಟರೇಟ್ ಪದವಿ ನೀಡಿದೆ.

– ಬಿ.ಬಿ. ಅನುವಾದ ಕೆ.ಕೆ.

ಆನುಕಟ್ಟು ತೆಲುಗರ ಹರಕೆ ಆಚರಣೆ. ಹರಕೆ ಕಟ್ಟುವುದು ಎಂಬುದು ಜನಪದ ಆಚರಣೆಗಳಲ್ಲಿ ಒಂದು. ಇದು ಕೇವಲ ತೆಲುಗಿನಷ್ಟೇ ಅಲ್ಲದೆ ದಕ್ಷಿಣ ಭಾರತದ ಇತರ ಪ್ರಾಂತಗಳಲೆಲ್ಲಾ ಇರುವಂಥದು. ಆಚರಣೆ ಗ್ರಾಮದೇವತೆಯೆಂದು ಭಾವಿಸುವ ಬೇವಿನ ಮರ, ಅರಳೀಮರ ಅಥವಾ ಆಲದಮರ ಹತ್ತಿರ ಆನುಕಟ್ಟು ಎಂಬ ಆಚರಣೆಯನ್ನು ಪಾಲಿಸುತ್ತಾರೆ. ಗ್ರಾಮದೇವತೆ ಯಾವುದೇ ಇರಲಿ ಮಾಡಿಕೊಳ್ಳುವ ಹರಕೆ ಅಥವಾ ಪ್ರತಿಜ್ಞೆಯನ್ನೇ ಆನುಕಟ್ಟು ಎಂದು ಕರೆಯುತ್ತಾರೆ.

ಹರಸಿ ಕಟ್ಟಿಕೊಂಡವರು ತಮ್ಮ ಕೋರಿಕೆ ನೆರವೇರಿದರೆ ದೇವತೆಗೆ ಪೂಜೆ ಮಾಡುತ್ತೇವೆಂದು, ಬಲಿ ಕೊಡುತ್ತೇವೆಂದು ಆಣೆ ಮಾಡುವರು. ಹಾಗೆ ಹರಿಸಿಕೊಂಡವರು ಅದಕ್ಕೆ ಗುರುತಿಗಾಗಿ ದೇವರಿಗಾಗಲಿ, ಮಧ್ಯೆ ಮತ್ತೊಂದು ಪದ ಬಿಟ್ಟಿದೆ. ದೇವರ ರೂಪದಲ್ಲಿರುವ ತಾವು ಜೊತೆಯಲ್ಲಿ ತಂದ ದಾರದ ಉಂಡೆಯನ್ನು ಬಿಚ್ಚಿ ಗಿಡದ ಸುತ್ತಲೂ ಸುತ್ತಿ ಕಟ್ಟುತ್ತಾರೆ. ಗಿಡದ ಸುತ್ತ ದಾರವೆಲ್ಲ ಸುತ್ತಿ ಕೊನೆಯಲ್ಲಿ ಗಂಟುಹಾಕುವರು. ಹೀಗೆ ಸುತ್ತಿದರೆ ಪ್ರತಿಜ್ಞೆ ಮಾಡಿದಂತೆ. ಹೀಗೆ ದಾರವನ್ನು ಸುತ್ತುವುದನ್ನೇ ಆಣೆ ಎನ್ನುವರು ಇದೇ ಆನುಕಟ್ಟು.

– ಪಿ.ಎಸ್.ಸಿ. ಅನುವಾದ ವಿ.ಆರ್.

ಆಪ್ಪಂ ತಮಿಳುನಾಡಿನ ಮುಖ್ಯವಾದ ತಿಂಡಿಗಳಲ್ಲಿ ಒಂದು (ದಪ್ಪ ದೋಸೆ). ಮನುಷ್ಯನ ನಡೆ – ನುಡಿ, ಭಾಷೆ, ಪ್ರಾಂತ, ಉದ್ಯೋಗ, ವ್ಯವಹಾರ ಸ್ಥಳಗಳಿಂದ ಸ್ಥಳಕ್ಕೆ ಬದಲಾಗುತ್ತದೆ. ಅಂತೆಯೇ ಆತನ ಆಹಾರ ಸಾಮಗ್ರಿಗಳನ್ನೂ ಭಿನ್ನತೆ ಮತ್ತು ವೈಶಿಷ್ಟ್ಯತೆ ಇದೆ. ಅಂಥವುಗಳಲ್ಲಿ ‘ದೋಸೆ’ ಸಹ ಒಂದು. ತಮಿಳುನಾಡಿನ ಜನರು ಅತಿ ಹೆಚ್ಚು ಇಷ್ಟಪಟ್ಟು ತಿನ್ನುವ ಆಹಾರವಿದು. ಹೋಟೆಲುಗಳಲ್ಲಿ ಸಿದ್ಧಗೊಳ್ಳುವ ಪದಾರ್ಥಗಳಲ್ಲಿ ಈ ‘ದೋಸೆ’ಗೆ ಆದ್ಯ ಸ್ಥಾನ. ಮೊದಲೇ ಹೇಳಿದಂತೆ ಈ ತಿಂಡಿ ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಇಚ್ಛಿಸುವಂಥದ್ದು. ಇದಕ್ಕೆ ಮುಖ್ಯ ಕಾರಣ ಸುಲಭವಾಗಿ ಜೀರ್ಣವಾಗುತ್ತದೆ. ಇದು ಇದರ ಮುಖ್ಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.

ಇದರ ತಯಾರಿಕೆಯ ವಿಧಾನ ಹೀಗಿದೆ: ಬೆಳ್ತಿಗೆ ಅಕ್ಕಿ ಹಾಗೂ ಕುಸಲಕ್ಕಿ ಎರಡನ್ನೂ ಸಮಪ್ರಮಾಣದಲ್ಲಿ ಬೆರೆಸಿ ಜೊತೆಗೆ ತೆಂಗಿನಕಾಯಿಯ ತುರಿ ಹಾಕಿ ನೀರಿನಲ್ಲಿ ನೆನೆಹಾಕಿ, ಅದರ ಜೊತೆಗೆ ಮೆಂತ್ಯವನ್ನು ಸೇರಿಸಿ ಚೆನ್ನಾಗಿ ರುಬ್ಬಬೇಕು. ರುಬ್ಬಿದ ಹಿಟ್ಟಿನೊಂದಿಗೆ ಸ್ವಲ್ಪ ಹೆಂಡವನ್ನು(ನೀರಾ) ಬೆರೆಸಿ ಒಂದು ರಾತ್ರಿ ನೆನೆಹಾಕಿದರೆ ಅದು ಬೆಳಗಿನವರೆಗೆ ಇಟ್ಟು ತೆಗೆದರೆ ಅದು ಗಟ್ಟಿಯಾಗಿ ಹುಳಿಯಾಗಿರುವುದು ಕಾಣುತ್ತದೆ. ಅಲ್ಲಿಗೆ ದೋಸೆಗೆ ಬೇಕಾದ ಹಿಟ್ಟು ತಯಾರಾದಂತಾಯಿತು.

ಹೀಗೆ ತಯಾರಾದ ಹಿಟ್ಟಿನಿಂದ ದೋಸೆ ತಯಾರಿಸಲು ಸ್ವಲ್ಪ ತಗ್ಗಾಗಿರುವ ದೋಸೆ ಅರೆ ಹಾಗೂ ಅದಕ್ಕೆ ಸರಿ ಹೊಂದುವ ಮಣ್ಣಿನಿಂದ ಮಾಡಲಾದ ಮುಚ್ಚಳವು ಇರುತ್ತದೆ. ಇದನ್ನು ಮಣ್ಣಿನ ಸೌದೆ ಒಲೆಗೆ ಬೆಂಕಿ ಹತ್ತಿಸಿ ಆ ಬೆಂಕಿಯಿಂದ ದೋಸೆ ಅರೆ ಬಿಸಿಯಾಗುವಂತೆ ಮಾಡಬೇಕು. ಹೀಗೆ ಮಾಡುವುದರಿಂದ ಆ ಅರೆಯ ಮೇಲೆ ಮುಚ್ಚಲ ಎಲ್ಲಾ ಭಾಗಗಳಲ್ಲೂ ಬಿಸಿಯಾಗಿರುತ್ತದೆ. ಇದರಿಂದ ದೋಸೆ ಸರಿಯಾಗಿ ಬೇಯಲು ಸಾಧ್ಯವಾಗುತ್ತದೆ. ಅನಂತರ ಅಡುಗೆ ಎಣ್ಣೆಯನ್ನು ತೆಂಗಿನಕಾಯಿಯ ಜುಂಗಿನಿಂದ ಅರೆಯನ್ನು ಒರೆಸಿ ಮತ್ತು ಆಪ್ಪಂ ಮಾಡುವ ಮುಚ್ಚಳಕ್ಕೆ ಸುತ್ತಲೂ ಒರೆಸಬೇಕು. ತದನಂತರ ಒಂದು ಸೌಟನಿಂದ ಆ ಹಿಟ್ಟನ್ನು ಹಾಕಿ ಒಂದು ಬಟ್ಟೆಯ ಸಹಾಯದಿಂದ ಸಂಪಣ ಸುತ್ತ ವೃತ್ತಾಕಾರವಾಗಿ ಹರಡಿಕೊಳ್ಳುವಂತೆ ಆಡಿಸಬೇಕು. ಅನಂತರ ಅದರ ಮೇಲೆ ಒಂದು ಮುಚ್ಚಳವನ್ನು ಮುಚ್ಚಬೇಕು.

ಇದರಿಂದ ಸೌದೆ ಒಲೆಯ ಬಿಸಿಯ ಶಾಖ ಹಾಗೂ ದೋಸೆ ಕಾವಲಿ ಮಾಡುವ ಬಿಸಿ ಶಾಖ ಹೊರಗೆ ಹೋಗದಂತೆ ಮುಚ್ಚಿರುವುದರಿಂದ, ಆ ಎರಡು ಕಡೆಯ ದೋಸೆ ಹೆಚ್ಚು ಬಿಸಿಯಾಗಿ, ಮೃದುವಾಗುವುದಕ್ಕೆ ಸಹಾಯವಾಗುತ್ತದೆ. ಇಲ್ಲಿ ಆ ಅರೆಯ ಮೇಲೆ ಎಣ್ಣೆ ಸವರಿದ್ದರಿಂದ ದೋಸೆ ಎತ್ತಿ ಮಗುಚುವಾಗ ಅದು ಅಂಟಿಕೊಳ್ಳದೆ ಸರಾಗವಾಗಿ ಬರುತ್ತದೆ. ಹೀಗೆ ಸಿದ್ಧವಾದ ಅಪ್ಪಂ ತೆಳುವಾಗಿ ಅಗಲವಾದ ವೃತ್ತಾಕಾರವಾಗಿ, ಎಣ್ಣೆಯ ಜಿನುಗುವಿಕೆಯಿಂದ ಹೆಚ್ಚು ಸ್ವಾದಿಷ್ಟವಾಗಿರುತ್ತದೆ. ಇದರ ಜೊತೆಗೆ ಸಕ್ಕರೆ ಹಾಗೂ ತೆಂಗಿನ ಹಾಲಿನಿಂದ ಸಿದ್ದವಾದ ಖಾದ್ಯದೊಂದಿಗೆ ಬೆರೆಸಿ ತಿನ್ನುವುದು ತಮಿಳುನಾಡಿನ ಜನರ ಆಹಾರ ಪದಾರ್ಥದ ಒಂದು ವೈಶಿಷ್ಟ್ಯ.

ತಮಿಳುನಾಡಿನ ವಿವಿಧ ಭಾಗಗಳಲ್ಲಿ ಇರುವ ಹೋಟೆಲುಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಸಿದ್ಧವಾಗುವ ಈ ಅಪ್ಪಂಗಳಿಗೆ ವಿಶೇಷ ಬೇಡಿಕೆ ಇದೆ.

– ಪಿ.ಎ. ಅನುವಾದ ಆರ್.ಎಸ್.

ಆರ್ಯಮ್ಮಾಲ ನಾಟಕಂ ಕೇರಳದ ಕಲಾಪ್ರಕಾರ, ಆರ್ಯಮ್ಮಾಳಕ್ಕಳಿ, ಆರ್ಯಮ್ಮಾಲಯಾಟ್ಟಂ, ಆರ್ಯಮ್ಮಾಲ ನಾಟಕ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ನಾಟಕದ ಭಾಷೆ ‘ಪಾಲಕ್ಕಾಡ್‌ನ ತಮಿಳು’ ಆಗಿದೆ. ತಮಿಳುನಲ್ಲಿ ಪ್ರದರ್ಶಿಸಲ್ಪಡುತ್ತಿದ್ದ ‘ನಲ್ಲ ತಂಗಾಳ್ ಚರಿತಂ’, ‘ಹರಿಶ್ಚಂದ್ರ ನಾಟಕ’, ‘ಅಲ್ಲಿಯರ್ಜುನ ವಿಜಯ’ ಎಂಬಿವುಗಳ ಜೊತೆಯಲ್ಲಿಯೇ ‘ಆರ್ಯಮ್ಮಾಲ ನಾಟಕ’ವೂ ಪ್ರದರ್ಶಿಸಲ್ಪಡುತ್ತಿದ್ದವು. ಈ ನಾಟಕವನ್ನು ಪ್ರದರ್ಶಿಸಲು ಒಂದು ರಾತ್ರಿ ಪೂರ್ತಿ ಸಮಯಾವಕಾಶ ಬೇಕು. ಇಲ್ಲಿ ಬರುವ ಸ್ತ್ರೀವೇಷವನ್ನು ಪುರುಷರೇ ಹಾಕುವರು. ಈ ನಾಟಕವನ್ನು ಪರಂಪರಾಗತವಾಗಿ ಪ್ರದರ್ಶಿಸುವ ಎರಡೋ, ಮೂರೋ ಸಂಘಗಳು ಮಾತ್ರವೇ ಪಾಲಕ್ಕಾಡ್‌ನಲ್ಲಿ ಇಂದು ಉಳಿದಿದೆ.

ಆರ್ಯಮ್ಮಾಲ ನಾಟಕವು ಕೊಲ್ಲಂ ಜಿಲ್ಲೆಯ ಮುಳಂಗಾಡಕಂ ಎಂಬಲ್ಲಿಯೂ, ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ಕ್ಷೇತ್ರದಲ್ಲಿ ಉತ್ಸವದ ಅಂಗವಾಗಿ ಪ್ರದರ್ಶಿಸಲ್ಪಡುತ್ತವೆ. ಚೆಂಡೆ, ಮದ್ದಳೆ, ಕೈತಾಳ, ಹಾರ್ಮೋನಿಯಂ ಮೊದಲಾದ ವಾದ್ಯೋಪಕರಣಗಳನ್ನು ಇಲ್ಲಿ ಬಳಸಲಾಗುತ್ತದೆ. ಈ ನಾಟಕದಲ್ಲಿ ಸ್ವತಃ ಕಥಾಪಾತ್ರಗಳೇ ಹಾಡುವರು ಮತ್ತು ಇವರಿಗೆ ಗಾಯಕ ಸಂಘದವರು ಸಹಾಯವನ್ನು ಒದಗಿಸುವರು.

ಇಂದಿನ ಕಲಾವಿದರಿಗೆ ಇದರ ಕಾಳಗಟ್ಟದ ಕುರಿತು ಬೇಕಾದಷ್ಟು ತಿಳಿವಳಿಕೆ ಇಲ್ಲ. ತಿರುವಿದಾಂಕೂರು ರಾಜನಾಗಿದ್ದ ಮೂಲಾತಿರುನಾಳ್‌ನ ಕಾಲದಲ್ಲಿ ಪಾಲಕ್ಕಾಡಿನ ಒಬ್ಬ ಬ್ರಾಹ್ಮಣ ಶಾಸ್ತ್ರೀಯು ಈ ನಾಟಕದ ಸಾಹಿತ್ಯವನ್ನು ಬರೆದು ಅದಕ್ಕೆ ಒಂದು ಸ್ವರೂಪವನ್ನು ಕೊಟ್ಟಿದ್ದಾರೆ ಎಂಬುದು ವಿಶ್ವವಿಜ್ಞಾನಕೋಶ ಎರಡನೇ ವಾಲ್ಯೂಂ(N. B.S.)೧೧ರಲ್ಲಿ ಹೇಳಲಾಗಿದೆ. ಇದನ್ನು ಆಧಾರವಾಗಿಟ್ಟು ಪರಿಶೀಲಿಸಿದಾಗ ‘ಆರ್ಯಮ್ಮಾಲನಾಟಕ’ವು ಇಂದಿನ ರೂಪದಲ್ಲಿ ಪ್ರದರ್ಶಿಸಲಾರಂಭಿಸಿ ಸುಮಾರು ನೂರೈವತ್ತು ವರ್ಷಗಳಾಗಿರಬಹುದು. ಇಂದು ಈ ನಾಟಕವನ್ನು ಹರಿಜನರು ಪ್ರದರ್ಶಿಸುತ್ತಾರೆ.

ಆರ್ಯಮ್ಮಾಲ ನಾಟಕದ ಕಥೆ: ಶಿವ ಮತ್ತು ಪಾರ್ವತಿಯರು ಜಿಂಕೆಯ ರೂಪಧರಿಸಿ ಪರಸ್ಪರ ಸೇರಿದುದರ ಫಲವಾಗಿ ಭೂಜಾತನಾದ ಬಾಲಕನನ್ನು ಉದ್ಯಾನವನದಲ್ಲಿ ಬಿಟ್ಟು ಹೋಗುವರು. ಹೂ ಕೊಯ್ಯಲು ತಲುಪಿದ ಏಳು ದೇವಕನ್ಯೆಯರು ಆ ಮಗುವನ್ನು ಕಾಣುವರು. ಅವರು ಅವನನ್ನು ಎತ್ತಿ ಮುದ್ದಾಡಿದರು. ಅವನಿಗೆ ಕಾತ್ತವರಾಮನ್ ಎಂಬ ಹೆಸರನ್ನಿಟ್ಟರು. ಅನಂತರ ಮಗುವನ್ನು ಸಾಕುವುದಕ್ಕೋಸ್ಕರ ಮಲರ್‌ವಾಡಿಯ ಕಾವಲುಗಾರನಾದ ಚಿಕಪ್ಪುಡಯೋನ್ ಎಂಬವನಿಗೆ ನೀಡುವರು. ಮಗು ಬೆಳೆದು ದೊಡ್ಡದಾಗುತ್ತದೆ. ತಾವು ಸಾಕಲು ನೀಡಿದ ಮಗುವನ್ನು ನೋಡುವ ಹಂಬಲದಲ್ಲಿ ಏಳು ದೇವಕನ್ಯೆಯರು ಮರಳಿಬಂದರು. ಯುವಕನಾಗಿರುವ ಕಾತ್ತವರಾಯನನ್ನು ಕಂಡು ಅವರಿಗೆ ಆನಂದ ಉಂಟಾಯಿತು. ಅವರ ಪೈಕಿ ಒಬ್ಬರ ಮೇಲೆ ಕಾತ್ತವರಾಯನಿಗೆ ಆಸಕ್ತಿ ಮೂಡಿತು. ಅವನು ಅವಳ ಸೊಂಟವನ್ನು ಹಿಡಿದನು. ಅಪಮಾನಿತಳಾದ ಆಕೆಯು ಗಂಗೆಯಲ್ಲಿ ಹಾರಿ ಆತ್ಮಹತ್ಯೆ ಮಾಡಿದಳು. ಆಕೆಯ ಮರಣಕ್ಕೆ ಕಾರಣನಾದುದರಿಂದ ಉಂಟಾಗುವ ಪಾಪವು ಏಳು ಜನ್ಮವೂ ಇರುವುದೆಂದೂ, ಕೊನೆಗೆ ಗಲ್ಲಿಗೇರುವ ಮೂಲಕ ಮುಕ್ತಿ ಲಭಿಸುವುದು ಎಂದೂ ಗಾಯಕರು ಹಾಡುವ ಹಾಡಿನ ಮೂಲಕ ಪ್ರೇಕ್ಷಕರಿಗೆ ಮನದಟ್ಟಾಗುತ್ತದೆ. ಹೀಗೆ ಕತೆ ಮುಂದುವರಿಯುತ್ತದೆ.

ಈ ನಡುವೆ ಕಾತ್ತವರಾಯನು ಬಯಿಸಿದ ಹೆಣ್ಣಿನ ಆತ್ಮವು ಶಿವನ ಬಳಿಗೆ ಹೋಗಿ ತನ್ನ ದುಃಖವನ್ನು ವಿವರಿಸುತ್ತಾಳೆ. ಬಳಿಕ ಶಿವನು ಕಾತ್ತವರಾಯನನ್ನು ಕರೆಸಿ ಉಪದೇಶಿಸುವನು. ನೀನು ಬಯಸಿದ ಸ್ತ್ರೀಯನ್ನು ಅಗ್ನಿಯಲ್ಲಿ ಸೃಷ್ಟಿಸುವೆ ಎಂದು ಭರವಸೆ ನೀಡುವನು.

ಆರ್ಯಪೂರಾಜನು ‘ಮಾನಗರ’ ಎಂಬ ಪಟ್ಟಣದ ಅರಸನಾಗಿದ್ದನು. ಆತನ ಧರ್ಮಪತ್ನಿಯ ಹೆಸರು ಮಲರ್ಮಲ. ಇವರಿಗೆ ಸಂತಾನ ಭಾಗ್ಯವಿರಲಿಲ್ಲ. ಸಂತಾನಭಾಗ್ಯ ಪಡೆಯಲು ನಡೆಸಿದ ಯಾಗದ ಫಲವಾಗಿ ಆರ್ಯಮ್ಮಾಲ ಎಂಬ ಮಗು ಜನಿಸುವುದು. ಆರ್ಯಮ್ಮಾಲಳನ್ನು ಕಂಡು ಕಾತ್ತವರಾಯನಿಗೆ ಮೋಹ ಉಂಟಾಗುತ್ತದೆ. ಕೊನೆಯಲ್ಲಿ ಆಕೆಯನ್ನು ವಿವಾಹವಾಗುವುದು ಎಂಬುವುದು ಇದರಲ್ಲಿನ ಕತೆಯಾಗಿದೆ.

ನಾಟಕದ ಕುರಿತು: ಆಧುನಿಕವಾದ ಯಾವುದೇ ರಂಗ ಸಜ್ಜಿಕೆಗಳನ್ನು ಈ ನಾಟಕದಲ್ಲಿ ಅಳವಡಿಸಲಾಗಿಲ್ಲ. ಯಾಗದ ಅಗ್ನಕುಂಡ, ಬ್ರಾಹ್ಮಣರ ಪೂಜಾವಿಧಾನ, ಅರಮನೆ ಇವುಗಳಿಗೆ ಪರದೆಗಳನ್ನು ಮಾತ್ರವೇ ಉಪಯೋಗಿಸಲಾಗುತ್ತದೆ. ಒಂದು ರಾತ್ರಿಯಲ್ಲಿ ಹಾಡಿ ಕುಣಿದು ಅಭಿನಯಿಸುವ ಈ ನಾಟಕದಲ್ಲಿ ಭಾಗವತರು ಮತ್ತು ಗಾಯಕ ಸಂಘದವರು ಪ್ರಧಾನ ಪಾತ್ರವಹಿಸುತ್ತಾರೆ. ಇವರು ವೇದಿಕೆಯ ಒಳಗೆ ಅಸೀನರಾಗುವರು.

ಆರ್ಯಮ್ಮಾಲ ನಾಟಕವು ನಮಗೆ ತಿಳಿಸುವ ಮುಖ್ಯ ಸಂಗತಿಗಳು) ಅದರ ಭಾಷೆ – ನೂರೈವತ್ತು ವರ್ಷಗಳ ಹಿಂದೆ ಮಲೆಯಾಳವು ತಮಿಳಿನಿಂದ ಬೇರ್ಪಡುವಾಗ ಹೇಗಿತ್ತು ಎಂಬುದನ್ನು ತಿಳಿಯಬಹುದು.

೨) ನಮ್ಮ ನಾಟಕ ಪ್ರದರ್ಶನದ ಮೇಲೆ ತಮಿಳಿನ ಪ್ರಭಾವ.೩)ಪಾಲ್ಕಾಡು ಗ್ರಾಮದ ಜನರಿಗೆ ನಾಟಕದ ಮೇಲಿರುವ ಆಸಕ್ತಿ. ಆದುದರಿಂದ ಮಾತ್ರವೇ ಇಂದು ಕೂಡಾ ಇಂತಹ ಕಲಾ ರೂಪವು ಜೀವಂತವಾಗಿದೆ.

– ಕೆ.ವಿ.ಸಿ. ಅನುವಾದ ಎನ್.ಎಸ್.

ಆಲಿಭೂತ ಇದು ಪಾರೆಸ್ಥಾನದ ಆಲಿದೈವದ ಕಥೆ. ಪಾರೆಸ್ಥಾನ ಇರುವುದು ಕುಂಬಳೆಯ ಸಮೀಪ. ಇಂದೂ ಅಲ್ಲಿ ಆಲಿದೈವವನ್ನು ಕಟ್ಟಿಸಿ ಆಡಿಸುತ್ತಾರೆ. ಕರೆದರೆ ಓ ಎನ್ನುವ ಆಲಿದೈವವನ್ನು ಜಾತಿ ಮತ ಭೇದವಿಲ್ಲದೆ ಎಲ್ಲರೂ ತಮ್ಮದೇ ಪರದೈವವೆಂಬಂತೆ ಪರಿಗಣಿಸುತ್ತಾರೆ. ದೈನಂದಿನ ಬದುಕಲ್ಲಿ ಕೂಡ ಆಲಿದೈವದ ಪ್ರತ್ಯಕ್ಷ ಸಾನ್ನಿಧ್ಯವನ್ನು ಕುಂಬಳೆಯ ಭಕ್ತರು ತಿಳಿದು ಅನುಭವಿಸುವವರೇ ಆಗಿದ್ದಾರೆ.

ಆಲಿದೈವವು ರೂಪದಲ್ಲೂ ವರ್ತನೆಯಲ್ಲೂ ತುಂಬ ವಿಶೇಷತೆಯುಳ್ಳದಾಗಿದೆ. ಮೈಯಿಡೀ ಮಸಿಬಳಿದು ಮಾಪ್ಪಿಳೆಲುಂಗಿಯುಟ್ಟು ತಲೆಗೆ ಚಿನ್ನದ ತುರ್ಕಿಟೊಪ್ಪಿಯನ್ನಿಟ್ಟು ದೈವವು ಹೊರಗಿಳಿಯುತ್ತದೆ. ಲೆಕ್ಕವಿಲ್ಲದಷ್ಟು ಚಿನ್ನದ ಆಭರಣಗಳನ್ನು ಕಿವಿಗಳಲ್ಲೂ ಕೊರಳಲ್ಲೂ ಧರಿಸಿರುತ್ತದೆ, ಕೂಡ. ಉತ್ಸವ ಕಾಲದಲ್ಲಿ ಸಾವಿರಾರು ಜನ ಮುಂಜಾವಿನ ಹೊತ್ತಿನಲ್ಲಿ ಬಂದು ಸೇರಿರುತ್ತಾರೆ. ಇಷ್ಟ ದೈವವನ್ನು ಕಂಡು ಪುಣ್ಯ ಸಂಪಾದಿಸಲು ಕಾತರದಿಂದ ಹಾಗೆ ನಿಂತಿರುವಾಗ ಆಲಿದೈವ ಅವರ ಮಧ್ಯಕ್ಕೇ ಹೋಗಿ ಸೇರಿಬಿಡುತ್ತದೆ. ಹರಕೆಯಾಗಿ ತಂದ ಮಲ್ಲಿಗೆ ಮಾಲೆಗಳನ್ನು ಭಕ್ತರು ಆಲಿದೈವದ ಕೈಗಳಿಗೆ ಒಪ್ಪಿಸುತ್ತಾರೆ. ಉಳಿದೆಲ್ಲ ದೈವಗಳಂತೆ ಆಲಿದೈವವು ಪೀಠದ ಮೇಳೆ ಏರಿ ಕುಣಿಯುವುದಾಗಲಿ, ಪರಿಕರ್ಮಿಗಳು ಅದರ ಪಾಡ್ಡನವನ್ನು ಹಾಡಿ ಅದಕ್ಕೆ ಆವೇಶ ಬರಿಸುವುದಾಗಲಿ ಇಲ್ಲ. ದೈವದ ‘ನುಡಿ’ಗಳೆಲ್ಲ ಮಲಯಾಳ ಭಾಷೆಯಲ್ಲಿ. ದೈವವು ಕಾಣಿಸಿಕೊಳ್ಳುವಾಗ ಒಬ್ಬ ಜ್ಯೋತಿಷ್ಯನೂ ಜತೆಯಲ್ಲಿರುತ್ತಾನೆ ಭಕ್ತ ಜನರು ಆಲಿದೈವದ ಮನಸ್ಸನ್ನು ತಿಳಿದುಕೊಳ್ಳಲು ಮತ್ತು ತಾವು ಸಮರ್ಪಿಸುವ ಪ್ರಾರ್ಥನಾ ನೈವೇದ್ಯಗಳಲ್ಲಿ ದೈವವು ತೃಪ್ತಿ ಹೊಂದಿದೆಯೇ ಎಂದು ತಿಳಿದುಕೊಳ್ಳಲು ಜ್ಯೋತಿಷಿಯನ್ನು ಆಶ್ರಯಿಸುತ್ತಾರೆ. ದೈವದ ಮನಸ್ಸನ್ನು ತಿಳಿಯಬಲ್ಲ ಜ್ಯೋತಿಷಿಯು ಸಮರ್ಪಕವಾಗಿ ಮಾತುಗಳಲ್ಲಿ ಅದನ್ನು ತಿಳಿಸಿ ಹೇಳಿ ಭಕ್ತ ಜನರ ಮನಸ್ಸನ್ನು ಹರ್ಷಗೊಳಿಸುತ್ತಾನೆ. ನೈವೇದ್ಯದ ಮುಖ್ಯವಸ್ತು ಕೋಳಿ. ನೂರಾರು ಕೋಳಿಗಳು ಹರಕೆಯಾಗಿ ಅಲ್ಲಿಗೆ ಬರುತ್ತದೆ. ಆಲಿದೈವಕ್ಕೆ ಕಾಣಿಕೆಯೆಂದರೆ ನಾಣ್ಯಗಳಲ್ಲ, ಹೊರತಾಗಿ ಹೊನ್ನು ಬಳ್ಳಿಗಳು. ದೈವಕ್ಕೆ ಹರಕೆ ಸಲ್ಲಿಸಲು ತಲಪುವ ಮುಸ್ಲಿಂ ಸ್ತ್ರೀಯರ ಸಂಖ್ಯೆ ಲೆಕ್ಕವಿಲ್ಲದಷ್ಟು ಎಂಬುದು ಆಲಿದೈವದ ಇನ್ನೊಂದು ಮುಖ್ಯ ವಿಶೇಷವಾಗಿದೆ.

ಪೂರ್ವಾಶ್ರಮದಲ್ಲಿ ಯಾವುದೋ ದಕ್ಷಿಣದ ಪ್ರದೇಶದಿಂದ ಕುಂಬಳೆಗೆ ಬಂದ ಮುಸ್ಲಿಂ ಯುವಕನೊಬ್ಬನಾಗಿದ್ದವನು ಆಲಿ. ಅವನ ಜತೆ ಅಂದು ಒಬ್ಬ ಸಂಗಾತಿಯೂ ಇದ್ದ. ಮದ್ದು ಮಂತ್ರವಾದಗಳನ್ನೂ ಬಲ್ಲವನಾಗಿದ್ದ ಆಲಿ ಮಾಪ್ಳೆ ಒಬ್ಬ ಚತುರ ವ್ಯಾಪಾರಿಯೂ ಆಗಿದ್ದ. ಅಳಲೆಕಾಯಿ ಪಂಡಿತರಿಗೂ ಮಂತ್ರವಾದಿಗಳೂ ತುಂಬ ಪ್ರಚಾರವಿದ್ದ ಆ ಕಾಲದಲ್ಲಿ ಅನತಿ ಕಾಲದಲ್ಲೇ ಆಲಿ ಜನಪ್ರಿಯನಾದ. ನಿಂತಲ್ಲಿ ಕಾಲುಗಟ್ಟಿಯಾಗುತ್ತಿದ್ದಂತೆ ಆಲಿಯಲ್ಲಿ ಅಷ್ಟರವರೆಗೆ ಹುದುಗಿಕೊಂಡಿದ್ದ ಮೃಗಸ್ವಭಾವ ಮೆಲ್ಲಗೆ ಹೊರನೆಗೆಯ ತೊಡಗಿತು. ಮಾಟಮಾರಣ ಮಾಡುವುದು, ದುರ್ಮಂತ್ರವಾದದಿಂದ ಜಾನುವಾರುಗಳಿಗೆ ಪೀಡೆ ಕೊಡುವುದು, ಹೆಂಗಸರನ್ನು ವಶಮಾಡುವುದು ಬಳಿಕ ಅವರನ್ನು ಕೆಡಿಸುವುದು, ಎಳೆಯ ಭ್ರೂಣಕ್ಕಾಗಿ ಬಸುರಿಯನ್ನು ಕೊಲ್ಲುವುದು – ಇವೆಲ್ಲ ಆಲಿಯ ದಿಷ್ಕರ್ಮಗಳಾಗಿ ಊರಲ್ಲಿಡೀ ಹಬ್ಬಿತು. ಆಲಿಯನ್ನು ಕಂಡರೆ ಎಲ್ಲರೂ ಕಂಗಾಲಾಗುವಂತಾಯಿತು. ಹೆಂಗಸರೂ ಮಕ್ಕಳೂ ಒಬ್ಬರೇ ಹೊರಗಿಳಿಯುವುದಕ್ಕೂ ಭಯಪಟ್ಟರು. ಬಯಸಿದ್ದನ್ನೆಲ್ಲ ಯಾವುದೇ ವಿಧವಾಗಿ ಸಾಧಿಸಿಕೊಳ್ಳಬಲ್ಲ ಆಲಿಯ ವಿರುದ್ಧವಾಗಿ ನಿಲ್ಲಲು ಯಾರಿಗೂ ಸಾಮರ್ಥ್ಯವಿಲ್ಲವೆಂಬ ಸ್ಥಿತಿಯುಂಟಾಯಿತು. ಆ ಕಾಲದಲ್ಲಿ ಕುಂಬಳೆಯಲ್ಲಿ ಮಹಾದುರ್ಗೆ ರಕ್ತೇಶ್ವರಿಯ ಉಪಾಸಕಾರದ ತಾಯಿ – ಮಗಳು ಇದ್ದರಂತೆ. ಕರೆದಾಗಲೆಲ್ಲ ದೇವಿ ಪ್ರತ್ಯಕ್ಷಳಾಗುತ್ತಿದ್ದಳೆಂದು ಅವರ ನಂಬುಗೆ. ಯಾರನ್ನೂ ನೋಯಿಸದೆ ಎಲ್ಲರಿಗೂ ಒಳ್ಳೆಯದಾಗಲೆಂದು ಪ್ರಾರ್ಥಿಸುತ್ತಿದ್ದ ಆ ತಾಯಿಗೆ ಮಗಳಲ್ಲದೆ ಬೇರಾರೂ ಗಂಡು ಆಧಾರಕ್ಕೆ ಇರಲಿಲ್ಲ. ಮಗಳು ತುಂಬ ಚೆಲುವೆಯೂ ಆಗಿದ್ದಳು. ಒಂದು ದಿನ ಸ್ನಾನ ಮುಗಿಸಿ ಒದ್ದೆಯುಟ್ಟು ಮನೆಗೆ ಬರುತ್ತಿದ್ದ ಮಗಳನ್ನು ಆದಾರಿಯಾಗಿ ಬಂದ ಆಲಿ ಮಾಪ್ಳೆ ಕಂಡ. ತಾರುಣ್ಯ ಚಿಗುರೊಡೆಯುತ್ತಿದ್ದ ಆ ಯುವತಿ ಆಲಿಯನ್ನು ಹುಚ್ಚಾಗಿಸಿದಳು. ಮನಸ್ಸೆಲ್ಲ ಅವಳನ್ನು ಪಡೆಯುವ ಆಸೆಯಿಂದ ತುಂಬಿಕೊಂಡಿತು. ಅವಳನ್ನು ವಶಪಡಿಸಿಕೊಳ್ಳಲು ತನ್ನ ಕುಟಿಲ ಬುದ್ಧಿಯನ್ನು ಬಳಸಿಕೊಂಡ. ಮಂತ್ರವಾದ, ವಶೀಕರಣಗಳನ್ನು ಅದಕ್ಕಾಗಿ ಬಳಸಿದ. ಯಾವುದೂ ಫಲಕಾರಿಯಾಗದಾಗ ಆಲಿಯ ಮನಸ್ಸು ಪಾಷಾಣವಾಯಿತು. ಹಾಗಿರುತ್ತ ಒಂದು ದಿನ ಕಡೆಗೆ ಸೌದೆಗಾಗಿ ಹೋಗಿದ್ದ ತಾಯಿ – ಮಗಳು ಹಿಂದಿರುಗಲು ತಡವಾಯಿತು. ಹಸಿವು ಬಾಯಾರಿಕೆಗಳಿಂದ ಒಂದಿಷ್ಟೂ ನಡೆಯಲಾರದಾದರು. ಆಗ ಅವರಿಗೆ ಯಾರೋ ಹಲಸಿನಹಣ್ಣು ವ್ಯಾಪಾರಿಯ ಮುಂದೆ ಹೋದಾಗ ಅವರು ನಡುಗಿಹೋದರು. ಹಲಸಿನ ಹಣ್ಣು ಮಾರುತ್ತಿರುವುದು ಸಾಕ್ಷಾತ್ ಆಲಿ ಮಾಪ್ಳೆ. ಹಿಂದಿರುಗ ಬಯಸಿದ ಅವರಿಗೆ ಹಸಿವಿನ ಬಾಧೆ ತಡೆದುಕೊಳ್ಳಲಾಗಲಿಲ್ಲ. ಅವರು ಹಲಸಿನ ಹಣ್ಣನ್ನು ಕೇಳಿದರು. ಬೇಟೆಯನ್ನು ಕಂಡ ಸಿಂಹದಂತೆ ಆಲಿಯ ಮನಸ್ಸು ನಿಗುರಿ ನಿಂತಿತು. ಹಣ್ಣುಕುಯಿದು ಅವರಿಗೆ ಕೊಟ್ಟ. ಬೆಲೆ ಎಷ್ಟೆಂದು ಅವರು ಕೇಳಿದುದು ಆಮೇಲೆ ಹಲಸಿನ ಅವರಲ್ಲಿದ್ದದು ಒಂದಿಷ್ಟು ಹಣ ಮಾತ್ರ. ಆಲಿ ಹೇಳಿದಷ್ಟು ಕೊಡಬೇಕಾದರೆ ಅವರ ಸಂಪಾದನೆಯನ್ನೆಲ್ಲ ಕೊಡಬೇಕಾದೀತು. ಹಣ ಮತ್ತೆ ಕೊಟ್ಟರೆ ಸಾಕೆಂದು ಆತ ಹೇಳಿದ. ಆಲಿ ಸಾಲ ತೀರಿಸಲು ಸಾಧ್ಯವಾಗದೆ ಇದ್ದಾಗ ಒಂದು ದಿನ ಆಲಿ ಮನೆಗೆ ಬಂದ. ಬೇರೆ ಉಪಾಯವಿಲ್ಲದೆ ಅವರು ಒಂದಿಷ್ಟು ಕಾಲಾವಕಾಶ ಕೇಳಿದರು. ಸ್ವಲ್ಪ ದಿನ ಬಿಟ್ಟು ಬಂದ ಆಲಿ ಮರುದಿನ ತಾನು ಬರುವುದಾಗಿಯೂ ಸಾಲ ಚುಕ್ತಾ ಮಾಡಬೇಕೆಂದೂ ಹೇಳಿದ. ಇಲ್ಲವಾದರೆ ಮಗಳನ್ನು ತನ್ನ ವಶ ಒಪ್ಪಿಸಬೇಕೆಂದೂ ಕೊನೆಯ ಎಚ್ಚರಿಕೆಯನ್ನೂ ಕೊಟ್ಟ. ತಾಯಿಯ ಮನಸ್ಸು ಭಗ್ನವಾಯ್ತು. ರಕ್ತೇಶ್ವರಿಯನ್ನು ಕರೆಯುತ್ತ ಎದೆಬಡಿದು ಅಳುತ್ತಿದ್ದ ತಾಯನ್ನು ಕಂಡಾಗ ಆಲಿಯ ತುಟಿಗಳಲ್ಲಿ ಪರಿಹಾಸದ ನಗು ಅರಳಿತು. ಆ ನರಾಧಮನಿಗೆ ವಶವಾಗದೆ ಗತ್ಯಂತರವಿಲ್ಲ. ಮಗಳು ತಾಯನ್ನು ಸಮಾಧಾನಪಡಿಸಿದಳು. ಆಕೆ ಅಳಲಿಲ್ಲ. ಗೊಂಬೆಯೊಂದರಂತೆ ಆಕೆ ಆಲಿಯ ಬಳಿಗೆ ಸರಿಯುವುದನ್ನು ಕಂಡ ತಾಯಿ ಪ್ರಜ್ಞಾರಹಿತಳಾದಳು. ಕೆಳಗೆ ಬಿದ್ದಳು. ಪ್ರಜ್ಞೆ ಮರಳಿದಾಗ ಆಲಿ ಹೊರಟು ಹೋಗಿದ್ದ. ಅತ್ತು ಕೆಂಪಾದ ಕಣ್ಣುಗಳಿಂದ ತನ್ನ ಮಗಳನ್ನು ಕಂಡ ತಾಯಿ ಹೀಗೆ ಕೂಗಿ ಹೇಳಿದಳು – ನನ್ನ ರಕ್ತೇಶ್ವರೀ, ಆ ಪಿಶಾಚಿಯ ಹೆಣ ನೋಡಿಯೇ ಇನ್ನು ನಾನು ನಿನ್ನ ದೀಪ ಹಚ್ಚುವುದು. ಬೆಳದಿಂಗಳು ಚೆಲ್ಲಿದ್ದ ಒಂದು ರಾತ್ರಿ ಯಾರೋ ಒಬ್ಬರು ಬೇಗ ಬೇಗ ನಡೆದು ಹೋಗುವುದನ್ನು ಆಲಿ ಕಂಡ. ಸ್ವರ್ಣ ಲಾವಣ್ಯದ ಕಾಂತಿ ಬೀರುತ್ತ ಕಡೆದಿಟ್ಟ ಅಂಗಾಂಗಗಳ ಸುಂದರಿಯೊಬ್ಬಾಕೆ ಚಲಿಸುವ ನೀರಲ್ಲಿ ಜಲಕ್ರೀಡೆಯಾಡುತ್ತಿದ್ದಾಳೆ! ದಡದಲ್ಲಿ ನಿಂತು ಆಸೆಯಿಂದ ಕಣ್ಣು ಬಿಡುತ್ತಿದ್ದ ಆಲಿಯತ್ತ ಆಕೆ ಒಂದು ಮುಗುಳ್ನಗುವನ್ನು ಚಿಮ್ಮಿದಳು. ತನ್ನೊಂದಿಗೆ ನೀರಾಟವಾಡಲು ಅವನನ್ನು ಆಹ್ವಾನಿಸಿದಳು. ಅದಕ್ಕಿಂತ ಮೊದಲು ಒಂದು ಸ್ಪರ್ಧೆಯಲ್ಲಿ ಗೆಲ್ಲಬೇಕೆಂದು ತಾಹವನ್ನಿಟ್ಟಳು. ಕೊಳದಲ್ಲಿ ಕವುಚಿಯೂ ಅಂಗತವಾಗಿಯೂ ಈಜಿ ಪಟುತ್ವವನ್ನು ಪ್ರದರ್ಶಿಸಬೇಕು. ಬೇರೇನನ್ನೂ ಆಲೋಚಿಸದೆ ಆಲಿ ಒಪ್ಪಿದ. ಆಗ ಇನ್ನೊಂದು ನಿಬಂಧನೆ – ಸೊಂಟಕ್ಕೆ ಕಟ್ಟಿದ ತಾಯಿತವನ್ನೂ ನೂಲನ್ನೂ ಕಳಸಿಡಬೇಕು. ಆಲಿ ಅದಕ್ಕೂ ಒಪ್ಪಿದ. ಆಗ ರಕ್ತೇಶ್ವರಿಯಾಗಿ ಆಕೆ ಆಲಿಯನ್ನು ನೀರಲ್ಲಿ ಮುಳುಗಿಸಿ ಕೊಂದಳು. ಇದು ಆಲಿದೈವದ ಕುರಿತಾದ ಐತಿಹ್ಯ.

ಆಲಿದೈವದ ಆರಾಧನೆಯಿಂದ ಪ್ರಕಟವಾಗುವ ಸತ್ಯ ಇದು – ಮನುಷ್ಯನನ್ನಲ್ಲ, ಮನುಷ್ಯನಲ್ಲಿರುವ ಕೆಟ್ಟ, ಕಾಮನೆಗಳನ್ನು ಆ ತಾಯಿ ಇಷ್ಟಪಡಲಿಲ್ಲ. ಆಲಿಯ ಓಲೆಕೊಡೆ, ತಾಯಿತ, ನೂಲು – ಈಗಲೂ ಆ ಹಾಳುಬಿದ್ದ ಕೆರೆಯ ದಡದಲ್ಲಿವೆಯೆಂದು ಭಕ್ತಜನ ನಂಬುತ್ತಾರೆ. ಒಂದು ದೊಡ್ಡ ಟೊಪ್ಪಿಕಲ್ಲು ಮತ್ತು ತಾಯಿತದಂತೆ ಕಾಣುವ ಒಂದು ದೊಡ್ಡ ಹಾಸುಗಲ್ಲು ಆ ಕೊಳದ ಬದಿಯಲ್ಲಿ ಕಂಡುಬರುತ್ತಿರುವುದಂತೂ ಸತ್ಯ.

– ಕೆ.ವಿ.ಎಫ್. ಅನುವಾದ ಕೆ.ಕೆ.

ಆವಕಾಯ ತೆಲುಗರಿಗೆ ತುಂಬ ಪ್ರಿಯವಾದ ಉಪ್ಪಿನಕಾಯಿ ಊಟದ ಅನಿವಾರ್ಯ ಭಾಗ ಎಂಬಂತೆ ಇದನ್ನು ಬಳಸುತ್ತಾರೆ. ಆವಕಾಯವನ್ನು ಜಾಡಿಗಳಲ್ಲಿ ಹಾಕಿ ಕೆಟ್ಟು ಹೋಗದಂತೆ ಜೋಪಾನವಾಗಿ ಮುಚ್ಚಿಡುತ್ತಾರೆ. ಇದು ಒಂದರಿಂದ ಮೂರುವರ್ಷಗಳ ಕಾಲ ಹಾಳಾಗದೇ ಇರುತ್ತದೆ.

ಆವಕಾಯ ಮಾವಿನಕಾಯಿ ಉಪ್ಪಿನಕಾಯಿ ‘ಆವ’ ಎಂದರೆ ಸಾಸುವೆ. ಇದರಲ್ಲಿ ಸಾಸುವೆಯ ಭಾಗ ಹೆಚ್ಚಾಗಿರುವುದರಿಂದ ಈ ಹೆಸರು ಬಂದಿದೆ. ಆವಕಾಯದಲ್ಲಿ ಹಲವಾರು ಬಗೆಗಳಿದ್ದರೂ, ಮಾಡುವುದರಲ್ಲಿ ಹಲವಾರು ವಿಧಾನಗಳಿದ್ದರೂ, ಸಾಧಾರಣವಾಗಿ ಮಾಡುವ ವಿಧಾನ ಹೀಗಿರುತ್ತದೆ.

ದಪ್ಪನೆಯ ಮಾವಿನ ಕಾಯಿಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಶುದ್ದವಾದ ಬಟ್ಟೆಯಿಂದ ಚೆನ್ನಾಗಿ ತೇವ ಇಲ್ಲದ ಒರೆಸಬೇಕು. ಅನಂತರ ಹೋಳು ಮಾಡಿಕೊಳ್ಳಬೇಕು. ಸು.ಐದು ಲೀಟರ್ ನೀರು ಹಿಡಿಯುವ ಒಂದು ಜಾಡಿಯಲ್ಲಿ ಮಾವಿನಕಾಯಿ ಹೋಳುಗಳನ್ನು ಹಾಕಿ, ಉಪ್ಪು ಹಾಕಿ ಚೆನ್ನಾಗಿ ಕುಲುಕಿ ೨ – ೩ ದಿವಸ ಹಾಗೆಯೇ ಮುಚ್ಚಿಟ್ಟಿದ್ದು, ಮೂರನೇ ದಿವಸ ಮಾವಿನ ಕಾಯಿ ಪಾತ್ರೆ ಬಗ್ಗಿಸಿಕೊಂಡು, ಈ ಉಪ್ಪಿನ ನೀರಿನ ಜೊತೆಗೆ ಸಾಸುವೆಯ ಪುಡಿ, ಕಾರದಪುಡಿ, ಅರಿಸಿನದ ಪುಡಿ, ಎಣ್ಣೆ ಇವುಗಳೆಲ್ಲವನ್ನೂ ಚೆನ್ನಾಗಿ ಕಲೆಸಿ ಜಾಡಿಯಲ್ಲಿರುವ ಮಾವಿನಕಾಯಿಯ ಹೋಳುಗಳಿಗೆ ಹಾಕಿ ಚೆನ್ನಾಗಿ ಕಲೆಸಿ ಮುಚ್ಚಬೇಕು. ಜಾಡಿಯ ಮುಚ್ಚಳವನ್ನು ಒಂದು ಶುದ್ಧವಾದ ಬಟ್ಟೆಯಿಂದ ಕಟ್ಟಿ ಮುಚ್ಚಿಡಬೇಕು.

ಇಲ್ಲಿ ಬಳಸುವ ಒಣ ಮೆಣಸಿನಕಾಯಿ, ಬೀಜ ಕಡಿಮೆಯಿರುವ ಉದ್ದನೆಯ ಕೆಂಪು ಮೆಣಸಿನಕಾಯಿ. ಗುಂಟೂರು ಮೆಣಸಿನಕಾಯಿಯನ್ನು ಇದಕ್ಕೆ ಬಳಸುತ್ತಾರೆ.

ಆವಕಾಯದಲ್ಲಿ ಹಲವಾರು ಬಗೆಗಳಿವೆ.

ಉಲ್ಲಿ ಆವಕಾಯ: ಮೇಲೆ ಹೇಳಿರುವ ವಿಧಾನವನ್ನೇ ಬಳಸಿ ಮಾವಿನಕಾಯಿಯ ಜೊತೆಯಲ್ಲೆ ಬೆಳ್ಳುಳ್ಳಿಯನ್ನೂ ಸೇರಿಸುತ್ತಾರೆ.

ಅಲ್ಲಪು ಆವಕಾಯ: ಮಾವಿನ ಕಾಯಿಯ ಜೊತೆಯಲ್ಲಿ ಹಸಿಶುಂಠಿಯನ್ನು ಬೆರೆಸುತ್ತಾರೆ.

ಬೆಲ್ಲಂ (ಬೆಲ್ಲ) ಆವಕಾಯ, ಗುತ್ತಿ (ಗೊಂಚಲು) ಆವಕಾಯ, ಪುಲಿದೋರ (ಪುಳಿಯೋಗಿರೆ) ಆವಕಾಯ, ಪೆಸರ (ಹೆಸರುಬೇಳೆ) ಆವಕಾಯ, ನುವ್ವುತಿಂಡಿ, (ಎಳ್ಳು ಹಿಟ್ಟು) ಆವಕಾಯ – ಹೀಗೆ ಬಳಸುವ ಪದಾರ್ಥಗಳ ಹೆಸರಿನಿಂದ ಆವಕಾಯ ಪ್ರಸಿದ್ಧವಾಗಿದೆ.

– ಜಿ.ಎಸ್.ಎಂ.

ಆವುಲ ಪರಿಷ ‘ಆವುಲ ಪರಷ’ ಉತ್ಸವವು ಕಾಟಮರಾಯನಿಗೆ ಸಂಬಂಧಿಸಿದು. ‘ಅರವತ್ತಾರೂರು ಸುತ್ತಿ ಆಕಳ ಹಬ್ಬ ನೋಡಬೇಕು’ ಎಂದು ಹೇಳುತ್ತಾರೆ.

ಆಕಳಪರ್ವ ಅಥವ ಹಬ್ಬವನ್ನು ಕಾರ್ತಿಕ ಮಾಸದಲ್ಲಿ ಹುಣ್ಣಿಮೆಗೆ ಮುಂಚೆ ಮಂಗಳವಾರ ದಿನ ವರ್ಷಕ್ಕೊಮ್ಮೆಯಂತೆ ಆಚರಿಸುತ್ತಾರೆ. ಆಕಳ ಪರ್ವವೂ ಸಹ ಎತ್ತಿನ ಪರಿಷೆಯಂತೆಯೇ ನಡೆಯುತ್ತದೆ. ಆದರೆ ಕಾಟಮರಾಯನನ್ನು ಮೆರವಣಿಗೆ ಮಾಡುವುದು ವಿಶೇಷ. ಅನಂತಪುರಂ ಜಿಲ್ಲೆಯ ಕುಂದುರ್ತಿ ಮಂಡಲದಲ್ಲಿಯ ಶಿವಮಜ್ಜನ ಹಳ್ಳಿಯಲ್ಲಿ ನೂರಕ್ಕೆ ತೊಂಬತ್ತು ಭಾಗ ಕನ್ನಡದಲ್ಲಿಯೇ ಮಾತನಾಡುತ್ತಾರೆ. ಇಲ್ಲಿಯ ತೆಲುಗು ಸ್ವಲ್ಪ ವಿಲಕ್ಷಣವಾಗಿಯೇ ಕೇಳಿಸುತ್ತದೆ.

ಆಕಳ ಪರ್ವಕ್ಕೆ ಮೊದಲದಿನ ಸೋಮವಾರ ರಾತ್ರಿ ಹತ್ತು ಗಂಟೆಗೆ ಊರಿನ ಒಂದು ಜಾಗದಲ್ಲಿ ‘ಬೇಲಿ’ ಹಾಕಿ ‘ಅಕ್ಕಿ’ ಎಲೆ ‘ಹತ್ತಿ’ ಎಲೆ ‘ನೇರಳೆ’ ಎಲೆಗಳಿಂದ ‘ಪದಿ’ (ಪೊದೆ) ಮಾಡುತ್ತಾರೆ. ಒಂದು ದ್ವಾರವನ್ನು ನಿರ್ಮಿಸಿ ನಾಲ್ಕು ಗೂಟಗಳನ್ನು ನೆಟ್ಟು ತೆಂಗಿನ ಗರಿಗಳಿಂದ ಚಪ್ಪರ ಹಾಕುತ್ತಾರೆ. ಚಪ್ಪರದ ಕೆಳಗೆ ಚೆನ್ನಾಗಿ ಸೆಗಣಿಯಿಂದ ಸಾರಿಸಿ ರಂಗೋಲಿ ಹಾಕಿ ಕಾಟಮರಾಯನನ್ನು (ಕಾಟಮರಾಯನಿಗೆ ಪ್ರತ್ಯೇಕ ವಿಗ್ರಹವಿಲ್ಲ) ಮಧ್ಯದಲ್ಲಿ ಕೂಡಿಸುತ್ತಾರೆ. ಆ ಊರಿನ ದೇವರುಗಳಾದ ನರಸಿಂಹಸ್ವಾಮಿ, ಶ್ರೀಕೃಷ್ಣ, ಪೆದ್ದಕ್ಕ ರಾಯಮ್ಮ (ಆದಿ ಶಕ್ತಿ) ಋ ವಿಗ್ರಹಗಳನ್ನೂ ಇಡುತ್ತಾರೆ. ಚಪ್ಪರದ ಎಡಭಾಗಕ್ಕೆ ಒಂದು ಆಕಳನ್ನು ಅದರ ಕರುವನ್ನು ರಾತ್ರಿ ಇಡೀ ಕಟ್ಟಿ ಹಾಕಿರುತ್ತಾರೆ. ಮರುದಿನ ಮುಂಜಾನೆಯೇ(ಮಂಗಳವಾರ) ಅವು ಹಾಕಿದ ಆಕಳ ಸಗಣಿಯಿಂದ ಆಕಳು, ಕರು, ಹುಲಿಗಳಂತೆ ೨೦ ಆಕಳು, ೨೦ ಕರು, ೨೦ ಹುಲಿಗಳನ್ನಾಗಿ ಮಾಡುತ್ತಾರೆ. ಅನಂತರ ದೇವರಿಗೆ ಕಲ್ಲುಸಕ್ಕರೆ, ಐದು ಒಣಕೊಬ್ಬರಿ ಗಿಂಡಿ, ಐದು ಬೆಲ್ಲದಚ್ಚು, ಮೂರು ಸೇರು ಅಕ್ಕಿ ನೈವೇದ್ಯವನ್ನಿಟ್ಟು ಎಲೆಪೂಜೆ ಮಾಡುತ್ತಾರೆ.

ಸಾಯಂಕಾಲ ನಾಲ್ಕು ಗಂಟೆಗೆ ಕುರಿ, ಮೇಕೆ, ಆಕಳುಗಳೆಲ್ಲವನ್ನು ಪೊದೆಯ ಮುಂದೆ ನಿಲ್ಲಿಸಿ ‘ಸಾಸು’ (ಅಕ್ಕಿ, ಸಜ್ಜೆ ಸೇರಿದ್ದು) ಅವುಗಳ ಮೇಲೆ ಅಕ್ಷತೆಯಂತೆ ಹಾಕುತ್ತಾರೆ. ಕಾಟಮರಾಯನಿಗೆ, ಆಕಳಿಗೆ ಪೂಜೆ ಮಾಡಿದ ಅನಂತರ ‘ಪೊದೆ’ಯ ಸುತ್ತಲೂ ಮೂರು ಬಾರಿ ಸುತ್ತಿಸುತ್ತಾರೆ. ಅದರ ಅನಂತರ ‘ಅರಸೇವೆ’ (ದಾಸಂಗ) ಮಾಡುತ್ತಾರೆ. ಅಂದರೆ ಬಂದವರಿಗೂ, ಊರಿನವರಿಗೂ ಮೂರು ಪಲ್ಲ ಅಕ್ಕಿಯ (ಮೂರು ಚೀಲ) ಅನ್ನ ಮಾಡಿಸಿ ಹಾಲು ಮೊಸರಿನೊಂದಿಗೆ ಊಟ ಮಾಡಿಸುತ್ತಾರೆ. ನಂತರ ನೈವೇದ್ಯವನ್ನು ಎಲ್ಲರಿಗೂ ಹಂಚುತ್ತಾರೆ. ಅನಂತರ ಇದಕ್ಕೂ ಮುಂಚೆ ೨೦ ಹುಲಿ, ೨೦ ಆಕಳು, ೨೦ ಕರುಗಳನ್ನಾಗಿ ಮಾಡಿದ ಸೆಗಣಿಗೊಂಬೆಗಳ ಮೇಲೆ ಬೇಲಿಯನ್ನು ಹಾಕಿ ಜಲ್ಲಿಯಿಂದ ಮುಚ್ಚುತ್ತಾರೆ (ನಾಯಿ, ನರಿ ಅವುಗಳನ್ನು ಮುಟ್ಟಬಾರದೆಂದು). ಸಾಯಂಕಾಲ ಆರು ಗಂಟೆಗೆ ಈ ವಿಗ್ರಹಗಳೊಂದಿಗೆ ಆಯಾ ವಿಗ್ರಹಗಳನ್ನು ದೇವಸ್ಥಾನಗಳಿಗೆ ಒಯ್ದು ಯಥಾಸ್ಥಾನದಲ್ಲಿಡುತ್ತಾರೆ.ಮೆರವಣಿಗೆಯಲ್ಲಿ ಕೇಕೆ ಹಾಕುತ್ತಾ ಆನಂದೋತ್ಸವಗಳಿಂದ ಹಳ್ಳಿಯ ಜನರು ಇದರಲ್ಲಿ ಭಾಗವಹಿಸುತ್ತಾರೆ. ಆಕಳ ಪರ್ವಕ್ಕಾಗಿ ಊರಿನಲ್ಲಿ ಐದಾರು ದಿನಗಳ ಮುಂಚಿನಿಂದಲೂ ಹಾಲು, ಮೊಸರು, ತುಪ್ಪ ತೆಗೆದಿಡುತ್ತಾರೆ. ಆಕಳಿರುವವರು ಕಡ್ಡಾಯವಾಗಿ ಹಾಲು, ಮೊಸರು ಕಾಟಮರಾಯನಿಗೆ ಕೊಡಬೇಕೆಂಬ ನಿಬಂಧನೆಯಿದೆ.

ಬೆಳೆ ಸಮೃದ್ಧವಾಗಿ ಬೆಳೆದರೆ ವರ್ಷಕ್ಕೊಮ್ಮೆ ತಪ್ಪದೇ ಆಕಳ ಹಬ್ಬವನ್ನು ಆಚರಿಸುತ್ತಾರೆ. ಬೆಳೆ ಸರಿಯಾಗಿ ಬೆಳೆಯದೆ ಕಷ್ಟಕಾಲವಿದ್ದರೆ ಮೂರುವರ್ಷಕ್ಕೊಮ್ಮೆ ಆಕಳ ಹಬ್ಬವನ್ನು ಆಚರಿಸುತ್ತಾರೆ. ಆಕಳ ಹಬ್ಬವನ್ನು ಮಾಡುವುದರಿಂದ ಸಕಾಲಕ್ಕೆ ಮಳೆ ಚೆನ್ನಾಗಿ ಆಗುತ್ತದೆಯೆಂದು, ಫಸಲು ಸಮೃದ್ಧವಾಗಿ ಬೆಳೆಯುತ್ತದೆಂದು ಹಾಲು, ಮೊಸರು ಮೊದಲಾದವುಗಳ ಕೊರತೆಯಿರುವುದಿಲ್ಲವೆಂಬುದು ಜನಪದರ ವಿಶ್ವಾಸ.

ರಾಯಲ ಸೀಮೆಯಲ್ಲಿ ಗಂಗಮ್ಮ ಜಾತ್ರೆಯ ಸಮಯದಲ್ಲಿ ಆಕಳುಗಳಿಗೆ ‘ಪೊಂಗಲಿ’ ಇಡುವುದು, ಅಲಂಕರಿಸುವುದು, ಭಾರಯೆಳೆಯುವ ಎತ್ತುಗಳ ಸ್ಪರ್ಧೆಗಳನ್ನು ಮಾಡುವುದು ಮೊದಲಾದ ಸಮಾರಂಭಗಳು ನಡೆಯುತ್ತಿರುತ್ತವೆ. ಆದ್ದರಿಂದಲೇ ಗಂಗಮ್ಮ ಜಾತ್ರೆಗೆ ‘ಆಕಳಹಬ್ಬ’ ವೆಂಬ ಹೆಸರು ಬಂದಿದೆಯೆಂದು ಹೇಳಲಾಗುತ್ತದೆ. ಆದರೆ ಆಕಳ ಹಬ್ಬವೇ ಬೇರೆ, ಗಂಗಮ್ಮನ ಜಾತ್ರೆಯೇ ಬೇರೆಯೆಂಬುದಾಗಿ ರಾಮಲಸೀಮೆಯಲ್ಲಿಯ ಹಿರಿಯರು ಹೇಳುತ್ತಾರೆಯೆಂಬುದಾಗಿ ಡಾ. ತಂಗಿರಾಲ ವೆಂಕಟಸುಬ್ಬಾರಾವು ಅವರು ತಮ್ಮ’

ಕಾಟಮರಾಜು ಕಥಲು’ನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯವನ್ನು ಒಪ್ಪಬಹುದು. ಏಕೆಂದರೆ ಆಕಳ ಹಬ್ಬ ಯಾದವರಿಗೆ ಸಂಬಂಧಿಸಿದುದು, ಗಂಗಮ್ಮನ ಜಾತ್ರೆ ಎಲ್ಲರಿಗೂ ಸಂಬಂಧಿಸಿದುದು.

– ಜಿ.ಎಸ್.ಎಂ. ಅನುವಾದ ಕೆ.ಎಸ್.