ಆಂಧ್ರಪ್ರದೇಶದಲ್ಲಿ ಜಾನಪದ ಅಧ್ಯಯನ ಇಂದು ಜಾನಪದ ಅಧ್ಯಯನ ವಿಸ್ತಾರವಾದ ಕ್ಷೇತ್ರವಾಗಿ ಪ್ರಪಂಚಾದ್ಯಂತ ನಡೆಯುತ್ತಿದೆ. ಜಾನಪದದ ಬಗೆಗಿನ ಸಂಶೋಧನೆ ವೈಜ್ಞಾನಿಕವಾಗಿ ನಡೆಯುತ್ತಿದೆ. ಭಾರತದೇಶ ಜಾನಪದದ ಕಣಜವಾಗಿದೆ. ಈ ಸಂಪತ್ತನ್ನು ಸಂಗ್ರಹಿಸುವ, ವರ್ಗೀಕರಿಸುವ ಮತ್ತು ವಿಶ್ಲೇಷಿಸುವ ಕೆಲಸ ಆಗಬೇಕಾಗಿದೆ. ಆಂಧ್ರಪ್ರದೇಶದಲ್ಲಿ ಜಾಣಪದದ ವೈಜ್ಞಾನಿಕ ಅಧ್ಯಯನ ಸುಮಾರು ಅರ್ಧಶತಮಾನದಿಂದ ನಡೆಯುತ್ತಿದೆ. ಇದಕ್ಕೂ ಮೊದಲು ಹೆಚ್ಚಾಗಿ ಜನಪದ ಸಾಹಿತ್ಯದ ಸಂಗ್ರಹ ಕಾರ್ಯ ನಡೆಯುತ್ತಿತ್ತು. ಅದರಲ್ಲೂ ಜನಪದ ಗೀತೆಗಳ ಬಗ್ಗೆ ವಿದ್ವಾಂಸರಿಗೆ ಹೆಚ್ಚಿನ ಆಸಕ್ತಿ ಇತ್ತು. ಬಿರುದುರಾಜು ರಾಮರಾಜು ಅವರು ಈ ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ತೆಲಗು ಜಾನಪದ ಅಧ್ಯಯನದಲ್ಲಿ ಹೊಸ ತಿರುವು ಉಂಟಾಯಿತು. ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಅಧ್ಯಯನ ಗಂಭೀರವಾಗಿ ನಡೆಯಲು ರಾಮರಾಜು ಅವರು ಕಾರಣಕರ್ತರಾದರು. ೫೦ ವರ್ಷಗಳಿಂದ ಆಂಧ್ರದ ಮತ್ತು ಆಂಧ್ರೇತರ ಪ್ರಾಂತ್ಯಗಳಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಜಾನಪದ ಎಲ್ಲ ವಿಭಾಗಗಳಲ್ಲೂ ಸಂಶೋಧನೆ ನಡೆಯುತ್ತಿದೆ.

೧೯ನೆಯ ಶತಮಾನದಲ್ಲಿ ಪಾಶ್ಚಾತ್ಯರು ತೆಲುಗು ಜಾನಪದ ಬಗ್ಗೆ ತಕ್ಕಮಟ್ಟಿಗೆ ಆಸಕ್ತಿಯನ್ನು ತೋರಿದ್ದರು. ಕರ್ನಲ್ ಮೆಕೆಂಜಿ ಆಂಧ್ರದ ಅನೇಕ ಪ್ರದೇಶಗಳನ್ನು ಕುರಿತ ಮಾಹಿತಿಗಳನ್ನು ಸಂಗ್ರಹಿದ್ದರು. ಮೆಕೆಂಜಿ ಕೈಫಿಯತ್ತುಗಳು ಆಂಧ್ರದ ನೂರಾರು ಹಳ್ಳಿಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ಒದಗಿಸುತ್ತದೆ. ಹಳ್ಳಿಗಳಲ್ಲಿ ಇರುವ ಜನರು, ಅವರ ಆಚಾರ ವ್ಯವಹಾರಗಳು, ಹಬ್ಬಗಳು, ವೃತ್ತಿಗಳು, ಗ್ರಾಮದೇವತೆಗಳು, ಉತ್ಸವ ಮತ್ತು ಜಾತ್ರೆಗಳು ಮುಂತಾದ ಹಲವು ವಿಷಯಗಳನ್ನು ಕೈಫಿಯತ್ತಗಳಲ್ಲಿ ನೋಡಬಹುದು. ತೆಲುಗು ಸಾಹಿತ್ಯಕ್ಕೆ ಅಪಾರವಾದ ಸೇವೆಯನ್ನು ಮಾಡಿದ ಸಿ.ಪಿ.ಬ್ರೌನ್ ಜನಪದ ಸಾಹಿತ್ಯದ ವಿಷಯದಲ್ಲಿ ಗಮನಾರ್ಹವಾದ ಸೇವೆಯನ್ನು ಮಾಡಿದ್ದಾನೆ. ಜನಪದ ಗೀತೆಗಳನ್ನು, ಲಾವಣಿಗಳನ್ನು ಪಾಠಾಂತರಗಳೊಂದಿಗೆ ಸಂಗ್ರಹಿಸಿದ್ದಾನೆ.

೧೯ನೆಯ ಶತಮಾನದ ಚಾರ್ಲ್ಸ್ ಇ.ಗೋವರ್ ದಕ್ಷಿಣ ಭಾರತೀಯ ಜನಪದ ಗೀತೆಗಳ ಸಂಕಲವನ್ನು ಪ್ರಕಟಿಸಿದನು. ಜೆ.ಎ.ಬೋಯಲ್ ತೆಲುಗು ಲಾವಣಿಗಳನ್ನು ಸಂಗ್ರಹಿಸಿ ಅವುಗಳ ಬಗ್ಗೆ ಇಂಡಿಯನ್ ಅಂಟಕ್ವರಿಯಲ್ಲಿ ಲೇಖನಗಳನ್ನು ಬರೆದನು. ಕಾರ್ ಎಂಬ ವಿದ್ವಾಂಸನು ತೆಲುಗು ಗಾದೆಗಳನ್ನು ಸಂಗ್ರಹಿಸಿ ಪ್ರಕಟಿಸಿದನು.

೨೦ನೆಯ ಶತಮಾನದ ಪ್ರಾರಂಭ ಕಾಲದಲ್ಲಿ ಅನೇಕ ಜನ ವಿದ್ವಾಂಸರು ತೆಲುಗು ಜನಪದ ಕ್ಷೇತ್ರದಲ್ಲಿ ಕೃಷಿ ಮಾಡಿದರು. ನಂದಿರಾಜು ಚಲಪತಿರಾವ್‌ ತೆಲುಗು ಜಾನಪದ ಗೀತೆಗಳ ಎರಡು ಸಂಕಲನಗಳನ್ನು ಪ್ರಕಟಿಸಿದರು. ತೆಲುಗು ಸಾಹಿತ್ಯದ ದಿಗ್ಗಜಗಳಾದ ಟೇಕುಮಳ್ಳ ಅಚ್ಯುತರಾವ್, ಪಂಚಾಗ್ನುಲ ಆದಿನಾರಾಯಣ ಶಾಸ್ತ್ರಿ, ವೇಟೂರಿ ಪ್ರಭಾಕರ ಶಾಸ್ತ್ರಿ, ಚಿಲುಕೂರಿ, ನಾರಾಯಣರಾವ್, ಮಲ್ಲಂಪಳ್ಳಿ ಸೋಮಶೇಖರ ಶರ್ಮ, ಅಕ್ಕಿರಾಜು ಉಮಾಕಾನ್ತಮ್ ಚಿಂತಾದೀಕ್ಷಿತುಲು ಮುಂತಾದವರು ಸ್ವಾತಂತ್ರ ಪೂರ್ವಕಾಲದಲ್ಲಿ ಜನಪದ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳನ್ನು ಕುರಿತು ಅಧ್ಯಯನ ಮಾಡಿದರು. ಇವರ ಅಧ್ಯಯನಗಳು ಅನಂತರ ಕಾಲದ ವಿದ್ವಾಂಸರಿಗೆ ಮಾರ್ಗದರ್ಶನ ನೀಡಿದವು.

ಸ್ವಾತಂತ್ರ್ಯೋತ್ತರ ಕಾಲದಲ್ಲಿ ಜಾನಪದದ ಅನೇಕ ವಿಷಯಗಳನ್ನು ಕುರಿತಂತೆ ಗಂಭೀರವಾಗಿ ಅಧ್ಯಯನ ನಡೆಯಿತು. ತೆಲುಗು ಜನಪದ ಸಾಹಿತ್ಯವನ್ನು ಕುರಿತಂತೆ ವಿವರಣಾತ್ಮಕವಾಗಿ ಪರಿಚಯಿಸಿದ ಮೊತ್ತ ಮೊದಲ ಕೃತಿ ಶ್ರೀಹರಿ ಆದಿಶೇಷವು ಅವರ ‘ಜಾನಪದ ಗೇಯ ವಾಙ್ಮಯ ಪರಿಚಯಮು’. ಇದು ೧೯೫೩ ರಲ್ಲಿ ತೆಲುಗು ಭಾಷಾ ಸಮಿತಿಯಿಂದ ಪ್ರಕಟಗೊಂಡು, ಆಗಿನ ಮದ್ರಸ್ ಸರ್ಕಾರದ ಬಹುಮಾನಕ್ಕೆ ಪಾತ್ರವಾಯಿತು. ವೃತ್ತಿಯಿಂದ ರಸಾಯನ ವಿಜ್ಞಾನದ ಪ್ರಾಧ್ಯಾಪಕರಾದ ಇವರು ಜನಪದ ಗೀತೆಗಳನ್ನು ಸಂಗ್ರಹಿಸಿ ವಿಶ್ಲೇಷಿಸಿರುವುದು ಗಮನಿಸತಕ್ಕ ವಿಷಯ.

ಆಂಧ್ರದ ಅಗ್ರಮಾನ್ಯ ಜಾನಪದ ಸಂಗ್ರಹಕಾರರಲ್ಲಿ ನೇದುನೂರಿ ಗಂಗಾಧರಂ ಅವರನ್ನು ಮೊದಲು ಸ್ಮರಿಸಬೇಕು. ವೃತ್ತಿಯಿಂದ ಶಾಲಾ ಉಪಾಧ್ಯಾಯರಾಗಿದ್ದ ಗಂಗಾಧರಂ ತಮ್ಮ ಜೀವನದುದ್ದಕ್ಕೂ ಜನಪದ ಸಂಗ್ರಹವನ್ನೆ ತಮ್ಮ ಜೀವನದ ಪ್ರಧಾನ ಆಶಯವನ್ನಾಗಿ ಮಾಡಿಕೊಂಡಿದ್ದರು. ೬೦೦ಕ್ಕೂ ಹೆಚ್ಚಿನ ಗರತಿಹಾಡು, ಕಥನಗೀತೆ, ಗಾದೆಗಳು, ನುಡಿಗಟ್ಟುಗಳು, ಒಗಟುಗಳು ,ಕತೆಗಳು, ಪುರಾಣಗಳು ಮುಂತಾದವನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಸಾವಿರಾರು ಪುಟಗಳ ಸಾಹಿತ್ಯವನ್ನು ಆಟಗಳು ಮುಂತಾದವುಗಳ ರೀತಿ ನೀತಿಗಳನ್ನು ಸಂಗ್ರಹಿಸಿದ್ದಲ್ಲದೆ, ಅವುಗಳನ್ನು ಗೃಹಲಕ್ಷ್ಮೀ, ಕೃಷ್ಣಾಪತ್ರಿಕೆ, ಭಾರತಿ, ಆಂಧ್ರಭೂಮಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿಸಿದರು. ಜನಪದ ಸಾಹಿತ್ಯವನ್ನು ಕುರಿತಂತೆ ಅನೇಕ ಪ್ರಬಂಧಗಳನ್ನೂ ಬರೆದರು.

ವೃತ್ತಿಯಲ್ಲಿ ಭೌತವಿಜ್ಞಾನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತ ಪ್ರವೃತ್ತಿಯಲ್ಲಿ ಜನಪದ ಸಾಹಿತ್ಯದ ಉದ್ದಾರಕರಾಗಿ ಕೃಷಿ ಮಾಡಿದವರು ‘ಕೃಷ್ಣಶ್ರೀ’ ಎಂದು ಪ್ರಖ್ಯಾತರಾದ ಶ್ರೀಪಾದ ಗೋಪಾಲಕೃಷ್ಣಮೂರ್ತಿ. ಭಾರತಿ, ಕಿನ್ನೆರ, ಗೃಹಲಕ್ಷ್ಮಿ ಮುಂತಾದ ಪತ್ರಿಕೆಗಳಲ್ಲಿ ಹಲವು ಹಾಡುಗಳನ್ನು, ಲೇಖನಗಳನ್ನು ಪ್ರಕಟಿಸಿದ್ದಲ್ಲದೆ ಈ ವಿದ್ವಾಂಸರು ಸ್ತ್ರೀಯರ ರಾಮಾಯಣದ ಹಾಡುಗಳು, ಸ್ತ್ರೀಯರ ಪೌರಾಣಿಕ ಹಾಡುಗಳು ಎಂಬ ಎರಡು ಬೃಹತ್ ಸಂಪುಟಗಳನ್ನು ಪ್ರಕಟಿಸಿದರು. ಈ ಸಂಪುಟಗಳನ್ನು ಪ್ರಕಟಿಸಿದ ಸಂಸ್ಥೆ ‘ಆಂಧ್ರ ಸಾರಸ್ವತ ಪರಿಷತ್ತು’ (೧೯೫೫, ೧೯೬೩).

ಭಾರತಿ, ಕಿನ್ನರ, ಗೃಹಲಕ್ಷ್ಮಿ ಮೊದಲಾದ ಪತ್ರಿಕೆಗಳಲ್ಲಿ ಟೇಕುಮಳ್ಳ ಕಾಮೇಶ್ವರ ರಾವ್‌ ಅನೇಕ ಗೀತೆಗಳನ್ನು ಪ್ರಕಟಸಿದ್ದಲ್ಲದೆ ‘ಆಂಧ್ರ ಜಾನಪದ ಗೇಯ ವಾಙ್ಮಯ ಚರಿತ್ರ’ ಎಂಬ ಪುಸ್ತಕವನ್ನು ಪ್ರಕಟಿಸಿದರು. ಟಿ.ದೊಣಪ್ಪ ಅವರು ಜಾನಪದವನ್ನು ಕುರಿತಂತೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ. ಮಿಕ್ಕಿಲಿನೇಲಿ ರಾಧಾಕೃಷ್ಣಮೂರ್ತಿ ಅವರು ಜನ ರಂಗಭೂಮಿಗೆ ಸಂಬಂಧಿಸುವ ನೂರಾರು ಪ್ರಕಾರಗಳನ್ನು ಪರಿಚಯ ಮಾಡುವ ಅಮೂಲ್ಯ ಗ್ರಂಥವನ್ನು ಪ್ರಕಟಿಸಿದ್ದಾರೆ. ಎಂ. ನಾಗಭೂಷಣ ಶರ್ಮ, ಎಸ್. ಗಂಗಪ್ಪ, ಎಲ್ಲೋರಾ ಮುಂತಾದವರು ಜಾನಪದದ ಬೇರೆ ಬೇರೆ ವಿಷಯಗಳನ್ನು ಕುರಿತಂತೆ ಪ್ರಬಂಧಗಳನ್ನು, ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ವಿಶ್ವವಿದ್ಯಾಲಯಗಳಲ್ಲಿ ಜಾನಪದ ಅಧ್ಯಯನ ವಿಸ್ತಾರವಾಗಿ ನಡೆದಿದೆ. ವಿಂಜಮೂರಿ ಸೀತಾದೇವಿ ಅವರು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ‘ತೆಲುಗು ಜನಪದ ಗೀತೆಗಳಲ್ಲಿ ಸಂಗೀತ’ವನ್ನು ಕುರಿತು ಸಂಶೋಧನೆ ಮಾಡ ಎಂ.ಲಿಟ್., ಪದವಿಯನ್ನು ಪಡೆದರು. ವಿಶ್ವವಿದ್ಯಾಲಯಗಳಲ್ಲಿ ನಡೆದ ಜನಪದ ಸಂಶೋಧನೆಗೆ ಬಿ. ರಾಮರಾಜು ಅವರು ಆದ್ಯರು ಮತ್ತು ಮಾರ್ಗದರ್ಶಕರು. ಇವರ ‘ತೆಲಗು ಜಾನಪದ ಗೇಯ ಸಾಹಿತ್ಯಮು’ ಕೃತಿಗೆ ೧೯೫೬ರಲ್ಲಿ ಉಸ್ಮಾನಿಯ ವಿಶ್ವವಿದ್ಯಾಲಯದ ಪಿಎಚ್.ಡಿ., ಪದವಿ ಲಭಿಸಿವೆ. ಇದು ಆ ವಿಶ್ವವಿದ್ಯಾಲಯದಲ್ಲಿ ಮೊದಲನೆಯ ತೆಲುಗು ಪಿಎಚ್.ಡಿ.ಕೂಡ ಆಗಿದೆ. ಅನಂತರ ಕಾಲದಲ್ಲಿ ರಾಜರಾಜು ಅವರ ಸ್ಪೂರ್ತಿಯಿಂದ ನೂರಾರು ಜನ ಪಿಎಚ್.ಡಿ. ಮತ್ತು ಎಂ.ಫಿಲ್ ಪದವಿಗಳನ್ನು ಪಡೆದಿದ್ದಾರೆ. ೧೯೭೨ರಲ್ಲಿ ಉಸ್ಮಾನಿಯ ವಿಶ್ವವಿದ್ಯಾಲಯದ ತೆಲುಗು ಎಂ.ಎ.ವಿದ್ಯಾರ್ಥಿಗಳಿಗೆ ಜನಪದ ಸಾಹಿತ್ಯ ಒಂದು ಪಠ್ಯವಾಗಿ, ಅನಂತರ ಕಾಲದಲ್ಲಿ ಇದು ಬೇರೆ ವಿಶ್ವವಿದ್ಯಾಲಯಗಳಿಗೂ ಪಠ್ಯವಾಗಿರುವುದನ್ನು ಗಮನಿಸಬಹುದು. ರಾಮರಾಜು ಅವರು ತೆಲಂಗಾಣದ ಜನಪದ ಗೀತೆಗಳನ್ನು, ನ್ಯಾಷನಲ್ ಬುಕ್ ಟ್ರಸ್ಟ್‌ಗಾಗಿ ‘ಆಂಧ್ರಪ್ರದೇಶದ ಜಾನಪದ’ ವನ್ನು ಬರೆದು ಪ್ರಕಟಿಸಿದ್ದಾರೆ.

ಆಂದ್ರ ವಿಶ್ವವಿದ್ಯಾಲಯದಲ್ಲಿ, ಆಂಧ್ರದ ಯಕ್ಷಗಾನಗಳನ್ನು ಕುರಿತಂತೆ ಸಮಗ್ರ ಸಂಶೋಧನೆ ನಡೆಸಿ ೧೯೫೭ರಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದವರು ಎಸ್.ವಿ.ಜೋಗರಾವ್. ಪ್ರಾರಂಭ ಕಾಲದ ಸಂಶೋಧನೆಗಳಲ್ಲಿ ಮುಖ್ಯವಾಗಿ ಜನಪದ ಸಾಹಿತ್ಯವನ್ನೇ ಅನೇಕರು ಸಂಶೋಧನೆಯ ವಿಷಯವನ್ನಾಗಿ ಸ್ವೀಕರಿಸಿದರು. ಟಿ.ವಿ. ಸುಬ್ಬಾರಾವ್ ತೆಲುಗು ವೀರಗಾಧಾಕವಿತ್ವದ ಬಗ್ಗೆ ವಿಸ್ತಾರವಾಗಿ ವಿಷಯಗಳನ್ನು ಸಂಗ್ರಹಿಸಿ ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಪಿಎಚ್.ಡಿ.ಪದವಿಯನ್ನು ಪಡೆದರು (೧೯೬೯). ನಾಯನಿ ಕೃಷ್ಣಕುಮಾರಿ ಅವರು ತೆಲುಗು ಕಥನ ಗೀತೆಗಳನ್ನು ಮಾನವಶಾಸ್ತ್ರೀಯ ಹಿನ್ನೆಲೆಯಿಂದ ಅಭ್ಯಸಿಸಿ ೧೯೭೦ರಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಲ್ಲದೆ, ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಅನೇಕ ಜನ ಸಂಶೋಧಕರಿಗೆ ಮಾರ್ಗದರ್ಶಕರಾಗಿದ್ದರು.

ಆಂಧ್ರದ ಜಾನಪದವನ್ನು ಸಮಗ್ರ ದೃಷ್ಟಿಯಿಂದ ತೆಲುಗರಿಗೆ ಪರಿಚಯ ಮಾಡಿಸಿದವರಲ್ಲಿ ಮೊದಲಿಗರು ಆರ್ವಿಯಸ್ ಸುಂದರಂ. ಜಾನಪದದ ತೌಲನಿಕ ಅಧ್ಯಯನದಲ್ಲೂ ಅವರು ಮೊದಲಿಗರು. ದೇಸಿ ಸಾಹಿತ್ಯದ ಬಗ್ಗೆ ಅವರು ಬರೆದ ಪುಸ್ತಕಕ್ಕೆ ೧೯೬೮ – ೬೯ ಸಾಲಿಗಾಗಿ ಆಂಧ್ರಪ್ರದೇಶದ ಸಾಹಿತ್ಯ ಅಕಾಡೆಮಿ ಬಹುಮಾನ ನೀಡಿತು. ತೆಲುಗು ಮತ್ತು ಕನ್ನಡ ಜನಪದ ಗೀತೆಗಳ ಬಗ್ಗೆ ನಡೆಸಿದ ಸಂಶೋಧನೆಗಗಿ ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ೧೯೭೩ರಲ್ಲಿ ಪಿಎಚ್.ಡಿ.ಪದವಿಯನ್ನು ಪಡೆದರು. ೧೯೭೬ರಲ್ಲಿ ಇವರು ಬರೆದ ‘ಜಾನಪದ ಸಾಹಿತ್ಯ ಸ್ವರೂಪಂ'(ಕನ್ನಡದಲ್ಲಿ ‘ಜನಪದ ಸಾಹಿತ್ಯದ ಮೂಲತತ್ವಗಳು’) ಜನಪದ ಸಾಹಿತ್ಯವನ್ನು ವೈಜ್ಞಾನಿಕವಾಗಿ ವಿವರಿಸಿದ ಮೊದಲನೆಯ ಪುಸ್ತಕ. ತೆಲುಗರ ಜಾನಪದವನ್ನು ಕುರಿತ ಸಮಗ್ರ ಅಧ್ಯಯನವೂ ಜಾಣಪದದ ತತ್ತ್ವಗಳನ್ನು ವಿವರಿಸುವ ಮೊದಲನೆಯ ಪುಸ್ತಕವೂ ಆದ ‘ಆಂಧ್ರುಲ ಜಾನಪದ ವಿಜ್ಞಾನಂ’ (೧೯೮೩) ಎಂಬ ಗ್ರಂಥಕ್ಕೆ ಮೈಸೂರು ವಿಶ್ವವಿದ್ಯಾನಿಲಯ ೧೯೮೭ರಲ್ಲಿ ಡಿ.ಲೆಟ್., ಪದವಿಯನ್ನು ನೀಡಿತು.

ತೆಲುಗು ಜಾನಪದದ ಅನೇಕ ಮುಖಗಳನ್ನು ಪರಿಚಯ ಮಾಡಿದವರಲ್ಲಿ ಜಿ.ಎಸ್.ಮೋಹನ್ ಒಬ್ಬರು. ಇವರು ಅನಂತಪುರ ಜಿಲ್ಲೆಯ ಸ್ತ್ರೀಯರ ಹಾಡುಗಳ ಬಗ್ಗೆ ಪಿಎಚ್.ಡಿ.ಗಾಗಿ ಸಂಶೋಧನೆ ಮಾಡಿದ್ದಲ್ಲದೆ (೧೯೭೯) ಜನಪದ ನಂಬಿಕೆಗಳು, ಜನಪದ ಕಥೆಗಳು, ಗಾದೆಗಳು, ಜಾನಪದವನ್ನು ಕುರಿತ ಪುಸ್ತಕಗಳು ಮತ್ತು ಜಾನಪದ ತತ್ತ್ವಗಳಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಆಂಧ್ರದ ಮತ್ತು ಹೊರನಾಡಿನ ವಿಶ್ವವಿದ್ಯಾಲಯಗಳಲ್ಲಿ ಜಾನಪದವನ್ನು ಕುರಿತಂತೆ ವ್ಯಾಪಕವಾದ ಸಂಶೋಧನೆ ನಡೆದಿದೆ. ಉಸ್ಮಾನಿಯ ವಿಶ್ವವಿದ್ಯಾಲಯ ಈ ನಿಟ್ಟಿನಲ್ಲಿ ಮಹತ್ತ್ವದ ಕೊಡುಗೆಯನ್ನು ನೀಡಿದೆ. ವೈ. ರಘುಮಾರೆಡ್ಡಿ (ಜನಪದ ಗೀತೆಗಳಲ್ಲಿ ಜನಜೀವನ, ೧೯೭೪), ರಾವಿ ಪ್ರೇಮಲತ (ಜನಪದ ಪುರಾಣಗಳು, ೧೯೮೦), ಪಿ. ಸರಸ್ವತಿ (ಮಕ್ಕಳ ಹಾಡುಗಳು, ೧೯೮೦), ಕೆ.ವೆಂಕಟರೆಡ್ಡಿ (ಒಗಟುಗಳು, ೧೯೮೨) ಜಿ.ಲಿಂಗಾರೆಡ್ಡಿ (ತೆಲಂಗಾಣದ ಕೆಲಸದ ಹಾಡುಗಳು, ಎಂ.ಫಿಲ್,೧೯೭೬, ಪಿಎಚ್.ಡಿ. ೧೯೮೦) ಮೊದಲಾದ ನೂರಾರು ಜನ ಸಂಶೋಧಕರು ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಎಂ.ಫಿಲ್. ಮತ್ತು ಪಿಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಜಾನಪದದ ಅನೇಕ ವಿಭಾಗಗಳನ್ನು ಕುರಿತಂತೆ ಸಂಶೋಧನೆ ನಡಿದಿದೆ. ಜನಪದ ಸಾಹಿತ್ಯದಲ್ಲಿ ಅಲಂಕಾರ ವಿಧಾನ (ಕೆ.ರುಕ್ನುದ್ದೀನ್, ಉನ್ಮಾನಿಯ), ಜನಪದ ಸಂಗೀತ (ಆರ್.ವಸಂತಲಕ್ಷ್ಮಿ, ಉಸ್ಮಾನಿಯ), ಕೋಲಾರ ಜಿಲ್ಲೆಯ ಜನಪದ ಗೀತೆಗಳು (ಕೆ.ಸೀತಾರಾಮಯ್ಯ, ಬೆಂಗಳೂರು), ತೆಲುಗು – ತಮಿಲೂ ಜನಪದ ಸಾಹಿತ್ಯ (ಡಿ. ನಿರ್ಮಲ, ಮದ್ರಾಸ್), ತೆಲುಗು ಮತ್ತು ಕನ್ನಡ ಜನಪದ ಸಾಹಿತ್ಯ (ಡಿ.ನಿರ್ಮಲ, ಮದ್ರಾಸ್), ತೆಲುಗು ಮತ್ತು ಕನ್ನಡ ಜನಪದ ಕಾವ್ಯದಲ್ಲಿ ರಾಮಾಯಣ (ಟಿ. ಗೋಪಾಲಕೃಷ್ಣರಾವ್, ಮೈಸೂರು), ಕಾಟಮರಾಜು ಕಥೆಗಳ ಸಾಂಸ್ಕೃತಿಕ ಅಧ್ಯಯನ, (ವಿ. ಭಾನುಮೂರ್ತಿ, ಮೈಸೂರು) ತೆಲುಗು – ತಮಿಳು ಗಾದೆಗಳು (ರವಿಕುಮಾರ್, ಮದುರೈ) ತೆಲುಗು – ಕನ್ನಡ ಗಾದೆಗಳು (ಪಿ.ಎಸ್. ಗೋಪಾಲಕೃಷ್ಣ, ಮೈಸೂರು) ಗಿರಿಜನ ಕಥೆಗಳು (ಪಿ. ಸುಬ್ರಹ್ಮಣ್ಯಶಾಸ್ತ್ರಿ – ತೆಲುಗು), ಗ್ರಾಮದೇವತೆಗಳು (ಎಂ. ಅಂಡಮ್ಮ, ಉಸ್ಮಾನಿಯ), ಚಿತ್ತೂರು ಜಿಲ್ಲೆಯ ಗ್ರಾಮದೇವತೆಳು (ಟಿ. ನಾರಾಯಣ, ಬೆಂಗಳೂರು), ಜನಪದ ಕುಣಿತಗಳು (ಸಿ.ಎಚ್. ಕೃಷ್ಣಾರೆಡ್ಡಿ, ಶ್ರೀಕೃ‌ಷ್ಣದೇವರಾಯ), ನಂಬಿಕೆಗಳು (ಜೆ. ಸತ್ಯಭೂಷಣರಾಣಿ, ನಾಗಾರ್ಜುನ) ಮುಂತಾದ ವಿಷಯಗಳ ಬಗ್ಗೆ ಸಂಶೋಧನೆ ನಡೆದಿದೆ. ಆಂಧ್ರದ ಹೊರಗಿನ ಬೆಂಗಳೂರು, ಮೈಸೂರು, ಮದುರೈ, ಮದ್ರಾಸ್, ದೆಹಲಿ, ವಾರಾಣಸಿ, ವಿಸ್ಕಾನ್‌ಸಿನ್ ಮುಂತಾದ ಕಡೆಗಳಲ್ಲೂ ಈ ನಿಟ್ಟಿನಲ್ಲಿ ಮಹತ್ವದ ಸಂಶೋಧನೆ ನಡೆದಿದೆ. ತೆಲುಗು ವಿಭಾಗಗಳಲ್ಲಿ ಮಾತ್ರವಲ್ಲದೆ ಜಾನಪದ, ಭಾಷಾ ವಿಜ್ಞಾನ, ದಕ್ಷಿಣ ಭಾರತೀಯ ಅಧ್ಯಯನ, ಹಿಂದಿ ಮುಂತಾದ ವಿಭಾಗಗಳಲ್ಲೂ ಸಂಶೋಧನೆ ನಡೆದಿದೆ.

ಜನಪದ ಸಾಹಿತ್ಯ ಸಂಗ್ರಹ ಮತ್ತು ಪ್ರಕಟಣೆಯನ್ನು ಕೈಗೊಂಡ ಅನೇಕ ಸಂಸ್ಥೆಗಳು ಮತ್ತು ಪ್ರಕಾಶಕರು ಇದ್ದಾರೆ. ಆಂಧ್ರಪ್ರದೇಶ ಸಾಹಿತ್ಯ ಅಕಾಡೆಮಿ ದೇಶದಲ್ಲೇ ಮೊತ್ತಮೊದಲು ವೃತ್ತಿ ಪದಕೋಶಗಳನ್ನು ಪ್ರಕಟಿಸಿದೆ. ಆಂಧ್ರಪ್ರದೇಶದ ಸಂಗೀತ ನಾಟಕ ಅಕಾಡೆಮಿ, ಆಂಧ್ರ ಸಾರಸ್ವತ ಪರಿಷತ್ತು ಕೆಲವು ಮಹತ್ತ್ವದ ಪುಸ್ತಕಗಳನ್ನು ಪ್ರಕಟಿಸಿವೆ. ಭಾರತಿ, ಕಿನ್ನರ, ಗೃಹಲಕ್ಷ್ಮೀ, ಪ್ರತಿಭ ಮುಂತಾದ ಪತ್ರಿಕೆಗಳು ಜನಪದ ಗೀತೆಗಳನ್ನು ಜಾನಪದದ ಬಗೆಗಿನ ಲೇಖನಗಳನ್ನು ಪ್ರಕಟಿಸಿವೆ. ಜಾನಪದ ಸಾಹಿತ್ಯ ಪರಿಷತ್ತು (ಹೈದರಾಬಾದ್), ಜಾನಪದ ವಿಜ್ಞಾನ ಭಾರತಿ (ಮೈಸೂರು), ಜಾನಪದ ಸಂಸ್ಕೃತಿ ಪೀಠ (ಬೆಂಗಳೂರು) ಮೊದಲಾದ ಸಂಸ್ಥೆಗಳ ಮೂಲಕ ನಾಯನಿ ಕೃಷ್ಣಕುಮಾರಿ, ಅರ್ವಿಯಸ್ ಸುಂದರಂ, ಜಿ.ಎಸ್. ಮೋಹನ್, ಗೋಪು ಲಿಂಗಾರೆಡ್ಡಿ, ರಾವಿಪ್ರೇಮಲತ ಮುಂತಾದವರು ಈ ಕ್ಷೇತ್ರಕ್ಕೆ ಕೊಡುಗೆಯನ್ನು ಸಲ್ಲಿಸಿದ್ದಾರೆ.

ಆಂಧ್ರದ ಕೆಲವು ವಿಶ್ವವಿದ್ಯಾಲಯಗಳು ಜಾನಪದ ಅಧ್ಯಯನಕ್ಕೆ ಅವಕಾಶಗಳನ್ನು ಕಲ್ಪಿಸಿವೆ. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಜಾನಪದ ಸಂಶೋಧನೆಗಾಗಿ ಒಂದು ವಿಭಾಗವನ್ನು ತೆರೆಯಲಾಗಿದೆ. ತೆಲಗು ವಿಶ್ವವಿದ್ಯಾಲಯದಲ್ಲಿ (ಹೈದರಾಬಾದ್) ಜನಪದ ಕಲೆಗಳನ್ನು ಕುರಿತ ಎಂ.ಎ. ಮತ್ತು ಡಿಪ್ಲೊಮಾ ತರಗತಿಗಳು ನಡೆಯುತ್ತಿವೆ. ಇದೇ ವಿಶ್ವವಿದ್ಯಾಲಯದಲ್ಲಿ ಜಾನಪದ ಅಧ್ಯಯನ ಪೀಠ ಸ್ಥಾಪಿತವಾಗಿದೆ. (ವರಂಗಲ್), ಕುಪ್ಪಂದ ದ್ರಾವಿಡ ವಿಶ್ವವಿದ್ಯಾಲಯ ಜಾನಪದ ಅಧ್ಯಯನ ವಿಭಾಗವನ್ನು ಹೊಂದಿದ್ದು, ಸುಬ್ಬಾಚಾರಿ ಅವರ ನೇತೃತ್ವದಲ್ಲಿ ಸಂಶೋಧನೆಯ ಚಟುವಟಿಕೆಗಳು ನಡೆಯುತ್ತಿವೆ. ಒಂದು ವಸ್ತು ಸಂಗ್ರಹಾಲಯವನ್ನು ಬೆಳೆಸುವ ನಿಟ್ಟಿನಲ್ಲೂ ಪ್ರಯತ್ನಗಳು ನಡೆಯುತ್ತಿವೆ.

– ಜಿ.ಎಸ್.ಎಂ. ಅನುವಾದ ಎ.ಎಂ.ಡಿ.

ಆಟಿಕಳೆಂಜ ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಂಡು ಬರುವ ಈ ಕುಣಿತವನ್ನು ತುಳು ತಿಂಗಳಾದ ಆಟಿ (ಆಷಾಢ – ಜುಲೈ, ಅಗಸ್ಟ್)ಯಲ್ಲಿ ಹುಣ್ಣಿಮೆಯ ಸಂದರ್ಭದಲ್ಲಿ ನಡೆಸುತ್ತಾರೆ. ಹಗಲು ಹೊತ್ತು ಮೂರು, ಐದು ಅಥವಾ ಏಳು ದಿವಸಗಳ ಕಾಲ ಅಸ್ಪೃಶ್ಯ ಜಾತಿಗಳಾದ ನಲಿಕೆ ಹಾಗೂ ಮೇರರು ಇದನ್ನು ನಡೆಸುತ್ತಾರೆ. ಇಲ್ಲಿ ಇಬ್ಬರು ವ್ಯಕ್ತಿಗಳು ಬಹಳ ಮುಖ್ಯರಾಗುತ್ತಾರೆ. ಒಬ್ಬ ಆಟಿಕಳೆಂಜ ಹಾಗೂ ಇನ್ನೊಬ್ಬ ತೆಂಬರೆಯವ, ಈತ ತೆಂಬರೆಯನ್ನು ಬಡಿಯುತ್ತಾ ಕಳೆಂಜನ ಹಾಡನ್ನು ಹಾಡುತ್ತಾನೆ. ಆಟಿ ತಿಂಗಳು ಬರುವಾಗ ಇವರು ತಮ್ಮ ಗುರಿಕಾರನ ಮನೆಯಲ್ಲಿ ಸೇರಿ ಕಳೆಂಜ ಕಟ್ಟುವ ಬಗ್ಗೆ ನಿರ್ಧಾರವನ್ನು ಮಾಡುತ್ತಾರೆ. ಆಟಿತಿಂಗಳ ಹುಣ್ಣಿಮೆಯ ಮೊದಲ ದಿನದಂದು ಕಳೆಂಜನನ್ನು ಕಟ್ಟುತ್ತಾರೆ. ಸುಳ್ಯ ತಾಲ್ಲೂಕಿನ ಕನ್ನಿಕಳೆಂಜ ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿ ಕಂಡುಬರುವ ಬಿರ್ಮರೆಮಾಣಿಲು ಆಟಿಕಳೆಂಜನ ಭಿನ್ನರೂಪಗಳು, ಇವೆಲ್ಲದರ ಆಶಯ ಒಂದೇ.

ಕನ್ನಿ ಕಳೆಂಜದಲ್ಲಿ ಎರಡು ವೇಷಗಳಿರುತ್ತವೆ : ೧. ಕಳೆಂಜ, ೨. ಕನ್ನಿ

ಕಳೆಂಜ: ಸೊಂಟಕ್ಕೆ ತುಂಡುವಸ್ತ್ರ ಸುತ್ತಿ ಅದರ ಮೇಲೆ ಎಳೆತೆಂಗಿನ ಸೋಗೆಯನ್ನು ಇಬ್ಭಾಗವಾಗಿ ಸೀಳಿ, ಸೀಳು ಸೋಗೆಯನ್ನು ಮೈಗೆ ಸುತ್ತಿಕೊಳ್ಳಲಾಗುತ್ತದೆ. ಕಪ್ಪು ಅಥವಾ ಬಿಳಿಯ ಉದ್ದ ತೋಳಿನ ಅಂಗಿ, ಮಣಿಕಟ್ಟಿಗೆ ಮತ್ತು ತೋಳಿಗೆ ತೆಂಗಿನ ಗರಿಯಿಂದ ಮಾಡಿದ ಪುಂಡಯೆ, ಎದೆಗೆ ಮತ್ತು ಮೈಗೆ ಪೂರ್ತಿಯಾಗಿ ತೆಂಗಿನ ಎಳೆಗರಿಗಳ ಅಡ್ಡ ಸುತ್ತು ತಲೆಗೆ ಅಡಕೆ ಹಾಳೆಯ ದೊಡ್ಡ ಟೊಪ್ಪಿ (ಗೋಂಪಾರು), ಅದರ ಮೇಲೆ ಓಟೆ ಬಿದಿರಿನಿಂದ ಹೆಣೆದು ಮಾಡಿದ ಟೊಪ್ಪಿ, ಆ ಟೊಪ್ಪಿಗೆ ಅಂಬಳ ಹೂವು ಮತ್ತು ದಾಸವಾಳ ಹೂವಿನ ಅಲಂಕಾರ, ಹರಕು ಬಟ್ಟೆಯಿಂದ ಮಾಡಿದ ಮೀಸೆ ಮತ್ತು ಗಡ್ಡ. ಓಟೆ ಬಿದಿರಿನಿಂದ ಮಾಡಿದ ಕೋರೆಹಲ್ಲು. ಕೈಯಲ್ಲಿಕೋಲು ಮತ್ತು ಪನೆತತ್ರ, ಮುಖಕ್ಕೆ ಮಸಿ ಹಾಗೂ ಸುಣ್ಣದ ಬೊಟ್ಟು, ಕಣ್ಣಿಗೆ ಕನ್ನಡಕದ ರೀತಿಯಲ್ಲಿ ಹಗ್ಗದಿಂದ ಕಟ್ಟಿಕೊಳ್ಳಲಾದ ಕಪ್ಪುಬಿಳಿ ವೃತ್ತಗಳು ಕಳೆಂಜ ವೇಷಧಾರಿಯ ವೇಷಭೂಷಣಗಳು.

3

ಕನ್ನಿ: ಈಕೆ ಕಳೆಂಜನೊಂದಿಗೆ ಕುಣಿಯುವ ಹೆಣ್ಣು, ಈ ವೇಷವನ್ನು ಸಣ್ಣ ಹುಡುಗರು ಮಾಡುತ್ತಾರೆ. ಮುಖಕ್ಕೆ ಅರ್ದಾಳ, ಕಣ್ಣಿಗೆ ಕಾಡಿಗೆ ಮತ್ತು ಕೆಂಪುಬೊಟ್ಟು, ಸೀರೆರವಿಕೆ, ಕುತ್ತಿಗೆಗೆ ಹಾರ, ತುರುಬಿಗೆ ತೆಂಗಿನ ಎಳೆಗರಿಯಿಂದ ಮಾಡಿದ ರಾಕುಟಿ ಹೂವು, ಕೈಯಲ್ಲಿ ನೆಕ್ಕಿಸೊಪ್ಪು ಇವಿಷ್ಟು ಕಳೆಂಜನ ಹಾಡು ಹೇಳುವಾಗ ಆ ಲಯಕ್ಕನುಸಾರವಾಗಿ ಕಳೆಂಜ ದೊಡ್ಡ ದೊಡ್ಡ ಹೆಜ್ಜೆಯನ್ನಿಟ್ಟು ನಿಧಾನವಾಗಿ ಸುತ್ತು ತಿರುಗುತ್ತಾನೆ. ಪನೆತತ್ರ ತಿರುಗಿಸುತ್ತಾನೆ. ಕೋಲೂರಿ ಹೆಜ್ಜೆ ತೆಗೆಯುತ್ತಾನೆ. ಕನ್ನಿ ನಿಧಾನವಾಗಿ ಹುಡಿ ಹೆಜ್ಜೆ ಹಾಕುತ್ತಾ ಸಣ್ಣ ವೃತ್ತದಲ್ಲಿ ತಿರುಗುತ್ತಾಳೆ. ಈ ಕುಣಿತವನ್ನು ಆಟಿ ತಿಂಗಳಲ್ಲಿ ಮೂರು ದಿವಸದಿಂದ ಹದಿನೈದು ದಿವಸಗಳವರೆಗೆ ಹಗಲು ನಡೆಸುತ್ತಾರೆ.

ಬಿರ್ಮರ ಮಾಣಿಲು: ಇದರಲ್ಲಿ ಇಬ್ಬರು ಕಲಾವಿದರಿರುತ್ತಾರೆ. ಸೊಂಟಕ್ಕೆ ಬಿಳಿ ವಸ್ತ್ರಕ್ಕೆ ಕಚ್ಚೆ ಹಾಕಿಕೊಂಡು ಅದರ ಮೇಲೆ ತೆಂಗಿನ ಎಳೆಯ ಗರಿಯನ್ನು ಸೀಳು ಮಾಡಿ ಜಾಲರಿ ಸುತ್ತಿಕೊಳ್ಳುತ್ತಾರೆ. ಮೈಗೆ ಬಟ್ಟೆ ಧರಿಸುವುದಿಲ್ಲ. ಕೈಯ ಮಣಿಕಟ್ಟಿಗೆ ಮತ್ತು ತೋಳಿಗೆ ಹೂವಿನ ದಂಡೆಯನ್ನು ಕಟ್ಟಿಕೊಳ್ಳುತ್ತಾರೆ. ಕೇಪುಳ ಬಳ್ಳಿಯನ್ನು ಸುತ್ತಿ ವೃತ್ತಾಕಾರವಾಗಿ ಕಟ್ಟಿ ಅದರ ಮೇಲೆ ಅಲಂಕರಿಸಿ ತಲೆಗೆ ಇಟ್ಟುಕೊಳ್ಳುತ್ತಾರೆ. ಮುಖಕ್ಕೆ ಬಿಳಿ ಬಣ್ಣ, ಮಸೀಯ ಮೀಸೆ, ನಾಮ, ಗಡ್ಡ, ಕಾಲಿಗೆಗೆಜ್ಜೆ, ಕುಂಕುಳಲ್ಲಿ ದುಡಿ, ಕೈಯಲ್ಲಿ, ಪನೆತತ್ರಗಳಿರುತ್ತವೆ. ತಲೆಗೆ ಇಟ್ಟುಕೊಳ್ಳುವ ಕಿರೀಟವನ್ನು ‘ಮುಡಿ ಕಿರೀಟ’ ಎನ್ನುತ್ತಾರೆ. ತೇರೆಮರದ ತೊಗಟೆಯಿಂದ ಈ ಮುಡಿಯನ್ನು ತಯಾರಿಸಲಾಗುವುದು. ತಲೆಗೆ ಕಳೆಂಜಿ ಹೂವು, ಕೇಪುಳ ಇಲ್ಲವೆ ಕೇದಗೆಯನ್ನು ಮುಡಿದುಕೊಳ್ಳುತ್ತಾರೆ. ನಿಧಾನಗತಿಯಿಂದ ಇಬ್ಬರು ಕುಣಿತಗಾರರು ಹೆಜ್ಜೆ ಹಾಕುತ್ತಾರೆ. ಕುಣಿತದಲ್ಲಿ ಆವೇಶವಿರುವುದಿಲ್ಲ. ತಾವೇ ದುಡಿ ನುಡಿಸಿಕೊಂಡು ಹಾಡು ಹೇಳುತ್ತಾರೆ. ಒಬ್ಬ ಹೇಳಿದಂತೆ ಇನ್ನೊಬ್ಬ ಪುನರುಚ್ಚರಿಸುತ್ತಾನೆ.

ತುಳುವಿನಲ್ಲಿ ಆಟಿಕಳೆಂಜನ ಬಗೆಗೆ ಹಾಗೂ ಕಳೆಂಜನ ಇನ್ನೊಂದು ರೂಪವಾದ ಬೆರ್ಮರ ಮಾನಿಯ ಬಗೆಗೆ ಹಾಡುಗಳಿವೆ. ಈ ಹಾಡುಗಳ ಸಾರಾಂಶ ತಿಳಿಯುವುದು ಕಲೆಯ ಅರ್ಥೈಸುವಿಕೆ ದೃಷ್ಟಿಯಿಂದ ಅನುಕೂಲವಾಗುತ್ತದೆ.

ಸಾರಾಂಶ ೧: ಕಳೆಂಜ ಲೋಕಕ್ಕೆ ಬರುವಾಗ ಅರಸು ಮಗನಾಗಿ ಬರುತ್ತಾನೆ. ಆತನಲ್ಲಿ ಖಡ್ಗ, ಅಡ್ಡಣ (ಗುರಾಣಿ) ಗಳಿರುತ್ತವೆ. ಭೂಮಿ ಆಕಾಶದೆತ್ತರಕ್ಕೆ ಬೆಳೆಯುವ ಶಕ್ತಿ ಆತನಿಗಿದೆ. ಆತ ಲೋಕಕ್ಕೆ ಬಂದಾಗ ಬಡತನ ಅನುಭವಿಸುತ್ತಾನೆ. ಮಾರೊಟಿಕಾಯಿ, ಬಾಳೆಗಡ್ಡೆ, ಸುವರ್ಣಗಡ್ಡೆ, ಮುಂಡಿಗಡ್ಡೆಗಳನ್ನು ತಿನ್ನುತ್ತಾನೆ. ಆತನ ಮುಖವರ್ಣಿಕೆ ಭೀಕರವಾಗಿರುತ್ತದೆ. ಆತ ಆಟಿ ತಿಂಗಳಿನಲ್ಲಿ ಅತ್ತೆ ಮನೆಯಲ್ಲಿ ಬಿಡಾರ ಹೂಡುತ್ತಾನೆ. ಶ್ರಾವಣದಲ್ಲಿ ತನ್ನ ಮನೆಗೆ ಹೋಗುತ್ತಾನೆ. ಮನುಷ್ಯರಿಗೆ, ಪ್ರಾಣಿಗಳಿಗೆ ಬಂದಿರುವಂತಹ ರೋಗರುಜಿನಗಳನ್ನು ತನ್ನ ಮಾಂತ್ರಿಕ ಶಕ್ತಿಯಿಂದ ಪರಿಹರಿಸುತ್ತಾನೆ.

ಸಾರಾಂಶ ೨: ಕಳಂಜೆ ಬ್ರಹ್ಮ ಕಳೆದ ವರ್ಷ ಹೋದವನು, ಈ ವರ್ಷ ಬಂದನು. ಆಟಿಯಲ್ಲಿ ಕಳೆಂಜ ಭಯಂಕರ ಮಳೆಗಾಲವಾಯಿತು. ಕಳೆಂಜ ಹೊಳೆ ದಾಟಲು ಹೋಗಿ ಪ್ರವಾಹದಲ್ಲಿ ಹೋದನು. ಹೋದವನು ಕಲ್ಲಿನಲ್ಲಿ ಒರಗಿದನು, ಒರಗಿದವನು ಅಲ್ಲೇ ಮಲಗಿದನು, ಕಾರೆಕಾಯಿ, ಪದಾರ್ಥ, ಬಿಳಿ ಅನ್ನ ಊಟ ಮಾಡಿ ಕಳೆಂಜ ಅತ್ತೆಯ ಮನೆಯಲ್ಲಿ ಕಳೆದನು, ಅತ್ತೆಯ ಮಗಳನ್ನು ಸವರಿದ ಕಳೆಂಜ ಅತ್ತೆಯನ್ನು ಹಿಡಿದನು. ಅತ್ತೆಯನ್ನು ಹಿಡಿದ ಕಳೆಂಜನಿಗೆ ಪಾಪ ತಟ್ಟಿತು, ಪಾಪದ ಪರಿಹಾರಕ್ಕೆ ಕಳೆಂಜ ಹನ್ನೆರಡು ತೋಟಕ್ಕೆಹೋಗಿ ಹನ್ನೆರಡು ಹಾಳೆ ತರಬೇಕು. ಬ್ರಹ್ಮರಮುಡಿ ಕಟ್ಟಬೇಕು, ಬ್ರಹ್ಮರ ಮಾಣಿಯಾಗಬೇಕು, ಮುಡಿ ಧರಿಸಬೇಕು, ಬೀರ ಕರೆಯಬೇಕು. ಕೊಡೆ ಹಿಡಿದುಕೋ ಕಳೆಂಜ ಚವಲ ಬೀಸಿಕೋ, ಪಡುವಣಕ್ಕೆ ಹೋಗಿ ಮುಗೇರ ಗೋಲಿಯಲ್ಲಿ ನಿಂತ, ಪಡುವಣಕ್ಕೆ ಹೋದ ಕಳೆಂಜ ಪನಿಯಾರ ಹೊಗೆಯಲ್ಲಿ ನಿಂತು ಸಾಧಕ ಮಾಡಿದ, ಪಾಣೆ ಮಂಗಳೂರಲ್ಲಿ ಪನೆ ಹಿಡಿದ ಓಟ್ವಾಳದಂಗಡಿಯಲ್ಲಿ ಬತ್ತ ಅಳೆದ, ವೇಣೂರ ಅಂಗಡಿಯಲ್ಲಿ ಎಣ್ಣೆ ಅಳೆದ, ಅರ್ವಪೇಟೆಯಲ್ಲಿ ತೆಂಗಿನ ಜೂಜಾಟ ನಡೆಸಿದ, ನಂದಾವರದಲ್ಲಿ ಕೋಳಿ ಅಂಕ ನಡೆಸಿದ, ಉಪ್ಪಿನಂಗಡಿಯಲ್ಲಿ ಉಪ್ಪು ಅಳೆದ, ಬೆಳ್ತಂಗಡಿಯಲ್ಲಿ ಬೆಳಕು ಹೊತ್ತಿಸಿದ, ಅಡಕೆ ತೋಟದಲ್ಲಿ ಕೋಳಿ ಕೂಗುವಂತೆ ಮಾಡಿದ, ಕೋಡಂಡ್ಕದಲ್ಲಿ ಕುದುಂಬುಲು ಹಕ್ಕಿಯನ್ನು ಓಡಿಸಿದ, ಮೈರನಪಾದೆಯಲ್ಲಿ ನವಿಲು ಓಡಿಸಿದ, ಗುಂಡಲಕಲ್ಲಿನಲ್ಲಿ ಹುಲಿಯನನ್‌ಉ ಬೆನ್ನಟ್ಟಿದ, ದೇವರದಂಡಿಗೆಯಲ್ಲಿ ಪಾರಿವಾಳ ಓಡಿಸಿದ. ಪಡುವಣದ ಬಾಗಿಲಲ್ಲಿ ಕಂಚಿನ ದೀಪ ಉರಿಸಿದ, ಮೂಡಣ ಬಾಗಿಲಲ್ಲಿ ಮುತ್ತಿನ ದೀಪ ಉರಿಸಿದ, ಊರಿನ ಸರ್ವರಿಗೆ ರೋಗಬಂತು, ಮನುಷ್ಯರ ರೋಗ ಅನ್ನದಲ್ಲಿ ಪರಿಹಾರ, ಎಮ್ಮೆ ಕರುವಿನ ರೋಗ ನೀರಿನಲ್ಲಿ ಪರಿಹಾರ, ಕೋಳಿಯ ರೋಗ ಬತ್ತದಲ್ಲಿ ಪರಿಹಾರ, ಬೆಕ್ಕಿನ ರೋಗ ಹಾಲಿನಲ್ಲಿ ಪರಿಹಾರ, ನಾಯಿಯ ರೋಗ ಬೂದಿಯಲ್ಲಿ ಪರಿಹಾರ, ದೊಡ್ಡ ಕಾಯಿಲೆಯನ್ನು ಪಡುವಣಕ್ಕೆ ಓಡಿಸುವುದು, ಸಣ್ಣಕಾಯಿಲೆಯನ್ನು ಮೂಡಣಕ್ಕೆ ಓಡಿಸುವುದು…… ಹೀಗೆ ಮುಂದುವರಿಯುತ್ತದೆ.

ಗುರಿಕಾರನ ಮನೆಯಲ್ಲಿ ಕುಣಿತ ಆದ ಅನಂತರ ಬೇರೆ ಬೇರೆ ಮನೆಗಳಿಗೆ ಹೋಗುತ್ತಾರೆ. ಹೋದ ಮನೆಗಳಲ್ಲಿ ಕೊಟ್ಟ ಅಕ್ಕಿ ಕಾಯ ಮುಂತಾದವುಗಳನ್ನು ಹಿಡಿದುಕೊಳ್ಳಲು ಕಳೆಂಜನೊಂದಿಗೆ ಮೂರು ನಾಲ್ಕು ಜನ ಇರುತ್ತಾರೆ. ಬೇರೊಂದು ಮನೆಗೆ ಹೋಗಿ ಕಳೆಂಜ ಬಂದ ಎಂದು ಹೇಳಿ ಮನೆಯ ಯಜಮಾನನಲ್ಲಿ ಕುಣಿಯಲು ಒಪ್ಪಿಗೆಯನ್ನು ಕೇಳುತ್ತಾರೆ. ಹೀಗೆ ಕುಣಿತ ಮುಗಿಸಿದ ಅನಂತರ ಮನೆಯವರು ಕಳೆಂಜನಿಗೆ ಒಂದು ಗೆರಸೆಯಲ್ಲಿ ಅಕ್ಕಿ, ತೆಂಗಿನಕಾಯಿ, ಹಣ ಮತ್ತು ಉಪ್ಪು ಹುಳಿ ಮೆಣಸನ್ನು ಕೊಡುತ್ತಾರೆ. ಗೆರಸೆಯನ್ನು ಹಿಂದಕ್ಕೆ ಕೊಡುವಾಗ ಎಲ್ಲ ವಸ್ತುಗಳನ್ನು ಸ್ವಲ್ಪ ಸ್ವಲ್ಪ ಉಳಿಸಿಕೊಡುತ್ತಾರೆ. ಇದನ್ನು ಮನೆಯವರೆಲ್ಲ ಕಳೆಂಜನ ಪ್ರಸಾದವೆಂದು ಸ್ವೀಕರಿಸುತ್ತಾರೆ. ಹೀಗೆ ಬೆಳಗಿನಿಂದ ಸಂಜೆಯವರೆಗೂ ಮನೆ ಮನೆಗೆ ಕುಣಿದುಕೊಂಡು ಹೋಗುತ್ತಾರೆ. ಸಂಜೆ ಮನೆಗೆ ಹಿಂತಿರುಗಿ ಬಂದು ಮುಡಿ ತೆಂಗಿನತಿರಿ, ಗಡ್ಡಾಮೀಸೆಗಳನ್ನೂ ಮನೆಯ ಹೊರಗಡೆ ತೆಗೆದಿರಿಸಿ ಅನಂತರ ಸ್ನಾನ ಮಾಡಿ ಊಟಮಾಡುತ್ತಾರೆ. ವೇಷಹಾಕಿದ ಮೇಲೆ ತೆಗೆಯುವ ಅನಂತರ ಸ್ನಾನ ಮಾಡಿ ಊಟಮಾಡುತ್ತಾರೆ. ವೇಷಹಾಕಿದ ಮೇಲೆ ತೆಗೆದಿರಿಸಿ ಅನಂತರ ಸ್ನಾನ ಮಾಡಿ ಊಟಮಾಡುತ್ತಾರೆ. ವೇಷಹಾಕಿದ ಮೇಲೆ ತೆಗೆಯುವ ತನಕ ಊಟ ಮಾಡುವಂತಿಲ್ಲ. ಮರುದಿನ ಬೆಳಗ್ಗೆ ಬಣ್ಣ ಹಾಕಿ, ಅದೇ ಮುಡಿ ತಿರಿಯನ್ನು ಕಟ್ಟಿಕೊಂಡು ಹೋಗುತ್ತಾರೆ. ಕೊನೆಯ ದಿನ ಸಂಜೆ ಒಂದು ‘ಕಾಸರಕ’ ಮರದ ಬುಡಕ್ಕೆ ಹೋಗಿ ಅಲ್ಲಿ ಸೊಂಟದ ತಿರಿ ತಲೆಯಮುಡಿ, ಮೀಸೆ ಗಡ್ಡ ಇವುಗಳನ್ನೆಲ್ಲ ತೆಗೆದು ಮರದ ಬುಡದಲ್ಲಿಟ್ಟು ಹದಿನಾರು (ಕಂಡೆಜಿ) ಎಲೆಗಳನ್ನು ತೆಗೆದು ಮರದ ಸುತ್ತಲೂ ಹಾಕಿ ಅದರಲ್ಲಿ ಉಪ್ಪು ಹುಳಿಗಳನ್ನು ಬಡಿಸುತ್ತಾರೆ. ಆಮೇಲೆ ಎಲ್ಲರೂ ಸ್ವಲ್ಪ ಸ್ವಲ್ಪ ಅಕ್ಕಿಯನ್ನು ಕೈಯಲ್ಲಿ ಹಿಡಿದುಕೊಂಡು ಮರಕ್ಕೆ ಮೂರು ಸುತ್ತು ಬಂದು ತೆಂಗಿನಕಾಯಿಯನ್ನು ಮರಕ್ಕೆ ಬಡಿಯುತ್ತಾರೆ. ಅನಂತರ ತೆಂಗಿನಕಾಯಿ ಮತ್ತು ಬಡಿಸಿದ ಉಪ್ಪು, ಮೆಣಸು, ಹುಳಿ ಇವುಗಳನ್ನು ಅಲ್ಲಿಯೇ ಹಂಚಿ ತಿನ್ನುತ್ತಾರೆ. ಈ ಕ್ರಮಕ್ಕೆ ‘ಮುಳಿಪ್ಪುನ’ ಅಥವಾ ‘ಪರಿಪ್ಪುನ’ ಎಂದು ಕರೆಯುತ್ತಾರೆ.

ಕಳೆಂಜ ಪೂಜೆ: ಕಳೆಂಜ ಕುಣಿತ ಮುಗಿದ ಎರಡು ಮೂರು ದಿನಗಳಲ್ಲಿ ‘ಕಳೆಂಜ ಪೂಜೆ’ ನಡೆಸುತ್ತಾರೆ. ಅಂದು ಎಲ್ಲರಿಗೂ ಗುರ್ಕಾರನ ಮನೆಯಲ್ಲಿ ಸೇರುತ್ತಾರೆ. ನೆಲ ಶುದ್ಧೀಕರಿಸಿ ಎಡೆಗಳನ್ನು ಬಡಿಸುತ್ತಾರೆ. ಅಂದು ರೊಟ್ಟಿ, ಕೋಳಿ, ಮೀನಿನ ಪದಾರ್ಥ ವಿಶೇಷ ಅಡುಗೆ. ಹೀಗೆ ಬಡಿಸಿದ ಅನಂತರ ಕೈ ಮುಗಿದು ಎಡೆಯನ್ನು ಎಲ್ಲರೂ ಪ್ರಸಾದ ರೂಪವಾಗಿ ಸ್ವೀಕರಿಸುತ್ತಾರೆ. ಎಲ್ಲರೂ ಊಟ ಮಾಡಿ ತೆರಳುತ್ತಾರೆ.

ಗ್ರಾಮೀಣ ಪ್ರದೇಶದ ಅನಕ್ಷರಸ್ಥರು, ಹೆಂಗಸರು ಮತ್ತು ಮಕ್ಕಳು ಪ್ರೇಕ್ಷಕರು. ಸಾಮಾಜಿಕವಾಗಿ ಹಿಂದುಳಿದಿರುವ ಬ್ರಾಹ್ಮಣೇತರರು ಕುಣಿತವನ್ನು ಮೆಚ್ಚಿಕೊಳ್ಳುತ್ತಾರೆ. ಊರಿನ ಒಳಗೆ ಮಾತ್ರ ಕುಣಿತ ನಡೆಯುತ್ತದೆ. ಊರಿನಿಂದ ಹೊರಗೆ ಹೋಗುವುದಿಲ್ಲ. ಪ್ರತಿಯೊಂದು ಕುಣಿತದ ಕುಟುಂಬಕ್ಕೂ ಒಂದು ಸೀಮಿತ ಪ್ರದೇಶವಿದೆ. ಆ ಪ್ರದೇಶದಲ್ಲಿ ಮಾತ್ರ ಸಂಬಂಧಪಟ್ಟ ತಂಡದವರು ಕುಣಿಯುತ್ತಾರೆ.

– ಎಚ್.ಸಿ.ಬಿ.