ಇಡನಾಡನ್ ಪಾಟುಗಳ್ ಕೇರಳದ ಸಾಂಪ್ರದಾಯಿಕ ಇತಿಹಾಸ ತಜ್ಞರೂ, ಸಾಹಿತ್ಯ ಮತ್ತು ಸಂಸ್ಕೃತಿ ತಜ್ಞರೂ ಸಾಕಷ್ಟೂ ಗಮನ ಕೊಡದಿರುವ ಜಾನಪದ ಪ್ರಕಾರವಾಗಿದೆ ನಾಡನ್ ಪಾಟುಗಳು. ಈ ಪ್ರಕಾರವನ್ನು ಕುರಿತು ಗಮನ ಹರಿಸಿದವರು ತೆಕ್ಕನ್ ಪಾಟು ಮತ್ತು ವಡಕ್ಕನ್ ಪಾಟುಗಳೆಂಬ ಪ್ರಾದೇಶಿಕ ಭೇದಗಳನ್ನು ಗುರುತಿಸಿದರೇ ಹೊರತು ಉಳಿದ ಪಾಟುಗಳನ್ನು ಅಧ್ಯಯನ ನಡೆಸುವ ಗೋಜಿಗೆ ಹೋಗಲಿಲ್ಲ. ವಿದ್ವಾಂಸರು ಬಿಟ್ಟು ಹೋದ ಇಂತಹ ಹಾಡುಗಳನ್ನು, ಅವುಗಳು ತೆಕ್ಕನ್ ಮತ್ತು ವಡಕ್ಕನ್, ಪಾಟುಗಳ ಮಧ್ಯದಲ್ಲಿರುವ ಕಾರಣಕ್ಕಾಗಿ ‘ಇಡನಾಡನ್ ಪಾಟು’ ಎಂದು ಕರೆಯಬಹುದಾಗಿದೆ.

ಆದರೆ ಇಂದಿನ ಜಾನಪದ ಅಧ್ಯಯನದ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಒಂದು ಜನಪದ ಪ್ರಕಾರವನ್ನು ಕೇವಲ ಭೌಗೋಳಿಕ ಹಿನ್ನೆಲೆಯಲ್ಲಿ ವಿಭಜಿಸಲು ಸಾಧ್ಯವಿಲ್ಲ. ಮಧ್ಯ ತಿರುವಾಂಕೂರಿನ ಹಾಡುಗಳನ್ನು ಇಲ್ಲಿ ಇಡನಾಡನ್ ಪಾಟುಗಳೆಂದು ಗುರುತಿಸಲಾಗಿದೆ.

ಇಡನಾಡನ್ ಪಾಟುಗಳನ್ನು ಒಂದು ವರ್ಗವಾಗಿ ಅಧ್ಯಯನ ಮಾಡಿದರೆ, ಅವುಗಳನ್ನು ಕಥಾಗಾನಗಳು, ವೀರಕಥಾಗಾನಗಳು, ಆಚರಣೆಗಳು ಸೇರ್ಪಡೆಗೊಳ್ಳುತ್ತವೆ. ಅದೇ ಹೆಸರಿನಲ್ಲಿ ಒಂದು ಹಾಡು ಇದೆ. ಚೆಂಗುನ್ನೂರಾತಿ ಪಾಟು ಈ ವಿಭಾಗದ ಅತಿದೊಡ್ಡ ವೀರಗಾಥೆಯಾಗಿದೆ. ಇಡನಾಡಿನ ಕಥೆಯನ್ನು ಹೇಳುವ ಈ ಹಾಡಿನಲ್ಲಿ ಸುಮಾರು ೭೦೦೦ದಷ್ಟು ಸಾಲುಗಳಿವೆ. ೧೮ ಕಳರಿಗಳನ್ನು ಗೆದ್ದು ಬಂದ ವೀರನಾಯಕನೇ ಚೆಂಗನ್ನೂರಾತಿ.

ಕೇರಳದ ಬುಡಕಟ್ಟು ವಿಭಾಗಕ್ಕೆ ಸೇರಿದ ಪರೆಯ ಮತ್ತು ಪುಲಯರು ರೈತಾಪಿ ವರ್ಗದ ಮಣ್ಣಿನ ಮಕ್ಕಳು. ಅವರು ತಮ್ಮ ಕೃಷಿ ಬದುಕು ಹಾಗೂ ಆಚರಣೆಗಳ ಸಂದರ್ಭದಲ್ಲಿ ಹಾಡುವ ಹಾಡುಗಳೇ ಇಡನಾಡನ್ ಪಾಟುಳು. ಆದುದರಿಂದ ಪರಯರು ಮತ್ತು ಪುಲಯರೇ ಇಡನಾಡನ್ ಪಾಡುಗಳ ಮುಖ್ಯ ಪ್ರಸಾರಕರು.

ದುಡಿಮೆಯ ಶ್ರಮವನ್ನು ನೀಗಿಸಲು ಹಾಡುವ ಹಾಡುಗಳು ಕ್ಷೇತ್ರ ಗದ್ದೆ ಬಯಲುಗಳಾಗಿವೆ. ನೆಲವನ್ನು ಉಳುವಾಗ, ಬಿತ್ತುವಾಗ, ಕಳೆ ಕೀಳುವಾಗ, ಕೊಯ್ಲು ನಡೆಸುವಾಗ, ಬತ್ತವನ್ನು ಶುದ್ಧೀಕರಿಸುವಾಗ ಹಾಡುವ ಹಾಡುಗಳೇ ಇವು. ಹಾಡಿನಿಂದ ದುಡಿಮೆಯ ಆಯಾಸ ಪರಿಹಾರವಾಗುವುದಲ್ಲದೆ, ಕೆಲಸದ ವೇಗವೂ ಹೆಚ್ಚಾಗುವುದು.

ಇಡನಾಡನ್ ಪಾಟುಗಳಲ್ಲಿ ಹೆಚ್ಚಿನವು ಕೃಷಿ ಸಂಬಂಧಿ ಹಾಡುಗಳಾಗಿವೆ. ಮಣ್ಣಿನಲ್ಲಿ ಹುಟ್ಟಿ, ಬೆವರಿನ ವಾಸನೆಯನ್ನು ಬೀರುವ ಅನೇಕ ಇಂತಹ ಹಾಡುಗಳು ಕೇರಳದ ಸಂಸ್ಕೃತಿಯಲ್ಲಿ ಲೀನವಾಗಿದೆ. ಬದುಕಿನ ಸಂಕಷ್ಟಗಳಿಂದ ಹೊರ ಬರಲು, ದುಡಿಮೆಯ ಶ್ರಮವನ್ನು ನೀಗಿಸಿ, ಉತ್ಸಾಹ ಶೀಲರಾಗಲು ಕೃಷಿ ಸಂಬಂಧಿ ಹಾಡುಗಳು ಹುಟ್ಟಿಕೊಂಡವು. ಕೃಷಿ ಕಾರ್ಮಿಕರು ಅಪೂರ್ಣತ್ವ ಹಾಗೂ ನೋವುಗಳಿಗೆ ಈ ಹಾಡುಗಳ ಮೂಲಕ ರೂಪವನ್ನು ನೀಡುತ್ತಾರೆ.

ಇಡನಾಡನ್ ಪಾಟುಗಳನ್ನು ಜನಪದರು ಕೋಲಪಾಟುಗಳು, ಮುಡಿಯಾಟಂ ಪಾಟುಗಳು, ಕಾಳಕೆಟ್ಟು ಪಾಟುಗಳು, ಕೋಲ್ಕಳಿಪಾಟುಗಳು, ಪರಿಚಮುಟ್ಟು ಪಾಟು, ಚೆಂಗನ್ನೂರಾತಿ ಪಾಟು ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಕೋಲಪಾಟು, ಮುಡಿಯಾಟ ಪಾಟು, ಕಾಲಕೆಟ್ಟು ಪಾಟುಗಳು ನಿರ್ದಿಷ್ಟ ಆಚರಣೆಗಳ ಸಂದರ್ಭದಲ್ಲಿ ಹಾಡುವುದರಿಂದ ಅವುಗಳನ್ನು ಆಚರಣಾತ್ಮಕ ಹಾಡುಗಳೆಂದೂ, ಚೆಂಗನ್ನೂರಾತಿ ಇಡನಾಡನ್ ಮೊದಲಾದ ಹಾಡುಗಳನ್ನು ಕಥಾಗಾನಗಳೆಂದೂ ಹೇಳಬಹುದು. ಅನೇಕ ದಿವಸಗಳ ಕಾಲ ನಡೆಯುವ ಕೃಷಿ ಕೆಲಸಗಳ ಸಂದರ್ಭದಲ್ಲಿ ಸುರ್ದೀರ್ಘವಾದ ಹಾಡುಗಳನ್ನು ಸರಣಿಯಾಗಿ ಹಾಡುತ್ತಿದ್ದರು. ಹಿಂದಿನ ದಿವಸ ನಿಲ್ಲಿಸಿದ್ದಲ್ಲಿಂದ ಮುಂದುವರಿಸುವ ದೀರ್ಘ ಕಥಾಗಾನಗಳು ಈ ವರ್ಗದಲ್ಲಿವೆ. ಈ ಹಿನ್ನೆಲೆಯಲ್ಲಿ ಇವುಗಳನ್ನು ಕೃಷಿ ಹಾಡುಗಳೆಂದು ಕರೆಯಬಹದಾದರೂ, ಅವುಗಳ ವರ್ಗೀಕರಣ ಸುಲಭವಲ್ಲ. ಒಂದೇ ಹಾಡಿನಲ್ಲಿ ಅನೇಕ ಗುಣ ಲಕ್ಷಣಗಳಿರುತ್ತವೆ. ಕೃಷಿ ಸಂದರ್ಭದಲ್ಲಿ ಹಾಡುವ ಹಾಡುಗಳು ವಸ್ತುವಿನ ದೃಷ್ಟಿಯಿಂದ ಪ್ರೇಮಗೀತೆಗಳಾಗಬಹುದು. ಹಾಡುವ ವ್ಯಕ್ತಿಗೆ ಹೊಂದಿಕೊಂಡು ಅದು ಗಂಡಸರ ಹಾಡು ಅಥವಾ ಹೆಂಗಸರ ಹಾಡಾಗಬಹುದು.

ಫ್ಯೂಡಲ್ ಕಾಲಘಟ್ಟದಲ್ಲಿ ಕೇರಳದಲ್ಲಿ ವೀರನಾಯಕರು ಹುಟ್ಟಿಕೊಂಡಾಗ, ಚೆಂಗನ್ನೂರಾತಿಯಂತಹ ಪರಾಕ್ರಮಿಗಳು ಇಡನಾಡಿನಲ್ಲಿ ಜನಿಸಿದರು. ಇಡನಾಡು ಪ್ರದೇಶದ ಜೀವನ ಶೈಲಿ ಹಾಗೂ ಸಂಸ್ಕೃತಿಯನ್ನು ತಿಳಿಯಲು ಈ ಹಾಡುಗಳಿಂದ ಸಾಧ್ಯ. ಹಾಡುಗಳಿಂದ ಚರಿತ್ರೆಯ ತುಣುಕುಗಳನ್ನೂ, ಹಾಡಿನ ಸ್ವರೂಪದಲ್ಲಿ ಚರಿತ್ರೆಯ ಗುರುತುಗಳನ್ನು ಕಾಣಲು ಸಾಧ್ಯ.

ಹೇರಳವಾದ ಜನಪದ ಹಾಡುಗಳು ಸಂಪತ್ತಿನಿಂದ ಕೂಡಿದ ಸಮುದಾಯಗಳು ಪರಯರು ಮತ್ತು ಪುಲಯರು. ಇವರು ಬಯಲಿನಲ್ಲಿ, ಗದ್ದೆಗಳಲ್ಲಿ ಕೆಲಸ ಮಾಡುವಾಗಲೂ, ಬುಟ್ಟಿ, ಮೊರಗಳನ್ನು ನಿರ್ಮಿಸುವಾಗಲೂ, ವಿರಾಮದ ವೇಳೆಯಲ್ಲಿಯೂ ಹಾಡುತ್ತಾರೆ. ಆಚರಣಾತ್ಮಕ ಹಾಡುಗಳನ್ನು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಹಾಡುತ್ತಾರೆ. ಸಮುದಾಯದ ಎಲ್ಲರೂ ಹಾಡುವುದಿಲ್ಲ. ಹಾಗಾಗಿ ಅನೇಕ ಹಾಡುಗಳು ಪ್ರಚಾರದಿಂದ ಮರೆಯಾಗಿದೆ. ಸಾಮಾಜಿಕ ಸ್ಥಿತಿಯ ಬದಲಾವಣೆ, ಕೃಷಿ ಕೆಲಸಗಳ ಅಪಚಯ, ಕುಲಕಸುಬುಗಳ ಕುರಿತಾಗಿರುವ ನಿರಾಸಕ್ತಿ ಮೊದಲಾದ ಸಂಗತಿಗಳು ಇಂತಹ ಜನಪದ ಹಾಡುಗಳು ಮರೆಯಾಗಲು ಕಾರಣವಾಗಿವೆ.

ಇಡನಾಡಮ್ ಪಾಟುಗಳ ಕುರಿತು ಸಾಕಷ್ಟು ಸಂಶೋಧನೆಗಳು ನಡೆದಿಲ್ಲ. ಕೇರಳ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ‘ಕೇರಳ ಭಾಷಾಗಾನಂಗಳ್’ ಕೃತಿಯಲ್ಲಿ ಚೆಂಗನ್ನೂರ್ ಕುಂಞಾತಿಪಾಚ್ ಎಂಬ ಹಾಡಿದೆ. ಕೆ.ಆರ್. ಸಜಿತಾ ಸಂಪಾದಿಸಿದ ಮಾಣಿಕ್‌ಪೆಣ್, ಎ.ಕೆ. ಅಪ್ಪುಕುಟ್ಟನ್ ಬರೆದ ಸಂಶೋಧನ ನಿಬಂಧ ಕೆಲವು ಕೃತಿಗಳು. ವಿನೋದಕ್ಕಾಗಿ, ಆಚರಣೆಗಳ ಹಿನ್ನೆಲೆಯಲ್ಲಿ, ಕೃಷಿ ಸಂದರ್ಭಗಳಲ್ಲಿ ಹಾಡುವ ಇಡನಾಡನ್ ಪಾಟುಗಳು ಮಲಯಾಳ ಜನಪದ ಸಾಹಿತ್ಯದ ಪ್ರಮುಖ ಅಂಗವಾಗಿದೆ.

– ಎ.ಕೆ.ಎ. ಅನುವಾದ ಎನ್.ಎಸ್.

ಇರಪ್ಪುಚ್ಚಡಂಗುಗಳ್ ತಮಿಳುನಾಡಿನಲ್ಲಿ ಸಾವಿನ ಶಾಸ್ತ್ರ ವಿಶೇಷವಾಗಿ ಕಾಣುತ್ತದೆ. ಅಲ್ಲಿ ಯಾರಾದರೂ ಸತ್ತರೆ ಅವರ ದೇಹವನ್ನು ನೆಲದ ಮೇಲೆ ಮಲಗಿಸುತ್ತಾರೆ. ಇಲ್ಲದಿದ್ದರೆ ಕುರ್ಚಿಯಲ್ಲಿ ಕೂರಿಸಿ ಕೈಕಾಲುಗಳ ಬೆರಳುಗಳನ್ನು ಗಾಡಾಬಟ್ಟೆ(ಬಿಳಿವಸ್ತ್ರ) ಯಿಂದ ಕಟ್ಟುತ್ತಾರೆ. ಬಾಯಿಗೂ ಸಹ ಗಾಡಾಬಟ್ಟೆಯಿಂದ ಕಟ್ಟುವುದನ್ನು ‘ಬಾಯಿಗೆ ಕಟ್ಟು ಹಾಕುವಿಕೆ’ ಎಂದು ಕರೆಯುತ್ತಾರೆ. ಅನಂತರ ವೀಳ್ಯೆದೆಲೆ, ಅಡಕೆ, ಸುಣ್ಣ ಈ ಮೂರನ್ನು ಕುಟ್ಟಿ ಸತ್ತವರ ಬಾಯಲ್ಲಿ ಹಾಕಿ ಕೆಳಬಾಯಿಯನ್ನು ಮೇಲ್ಭಾಯಿಯೊಡನೆ ಹೊಂದಿಸಿ ತಲೆಯನ್ನು ಬಟ್ಟೆಯಿಂದ ಗಟ್ಟಿಯಾಗಿ ಕಟ್ಟುತ್ತಾರೆ. ಇದನ್ನು “ಕಟ್ಟಿ ಸಾತ್ತಿ ವೈತ್ತಲ್” (ಕಟ್ಟಿ ಮುಚ್ಚಿಡುವುದು) ಎಂದು ಕರೆಯುತ್ತಾರೆ. ಇದು ಒಂದು ವಿಧವಾದ ಸಾವಿನ ಶಾಸ್ತ್ರವಾಗಿದೆ. ಸತ್ತವರ ದೇಹದ ಬಳಿ ಬತ್ತ, ಎಳನೀರು, ಬಾಳೆಹಣ್ಣು, ತೆಂಗಿನಕಾಯಿ ಮೊದಲಾದವುಗಳನ್ನು ಇಟ್ಟು ಎರಡು ಕಡೆಯೂ ಕುತ್ತು ವಿಳಕ್ಕು ಅಂದರೆ ದೀಪವನ್ನು ಹಚ್ಚಿ, ಊದುಬತ್ತಿಯನ್ನು ಹೊತ್ತಿಸಿ ಇಡುತ್ತಾರೆ.

ಸಾವಿನ ಸುದ್ಧಿಯನ್ನು ಇತರರಿಗೆ ತಿಳಿಸುವ ಕ್ರಮ: ಸಾವಿನ ಸುದ್ಧಿಯನ್ನು ಅವರ ಸಂಬಂಧಿಕರಿಗೆ ತಿಳಿಸಲು ಸಕ್ಕಲಿಯರ್ (ಹೊಲೆಯ) ಇರುತ್ತಾನೆ. ಇದನ್ನು “ಸಕ್ಕಲಿಯ ಮಾದಾರಿ ಸಾವೋಲೈ ಕೊಂಡುವಂದ ವಾವೋಲೈ ಇನ್ನು ಚೊಲ್ಲಿವಾಂಗಿ ಮಡಿಯಿಲಿಟ್ಟು” (ಹೊಲೆಯರು ಮಾದಿಗರು ಸಾವಿನ ಓಲೆ ತಂದರೆ ಬಂದ ಓಲೆ ಎಂದು ಮಡಿಯಲ್ಲಿಟ್ಟು) ಎಂಬ ಒಪ್ಪಾರಿ (ಶೋಕಗೀತೆ) ಹಾಡಿನ ಸಾಲು ತೋರಿಸಿಕೊಡುತ್ತದೆ. ಕೆಲವು ಸಂದರ್ಭಗಳಲ್ಲಿ ಮಾತ್ರ ಸಾವಿನ ಸುದ್ಧಿಯನ್ನು ಹೇಳಲು ಅಗಸರು, ಇತರ ಕೆಳವರ್ಗದವರು ಇಲ್ಲವೇ ಯುವಕರನ್ನು ಕಳುಹಿಸುತ್ತಾರೆ. ಇದನ್ನು ‘ಮಾತ್ತಮ್ ಚೊಲ್ಲುದರ್’ ಎನ್ನುತ್ತಾರೆ. ಅಂದರೆ ಸಾವನ್ನು ತಿಳಿಸುವುದು ಎಂದರ್ಥ. ಸಾವಿನ ಮನೆಯವರು ಊರಿನ ಮುಂದೆ ಒಂದು ಮಡಕೆಯಲ್ಲಿ ಬೆಂಕಿ ಹಾಕಿ ಹೊಗೆ ಬರುವಂತೆ ಮಾಡಿ ಇತರರಿಗೆ ಸಾವನ್ನು ತಿಳಿಸುತ್ತಾರೆ. ಅನಂತರ ಹೆಂಗಸರು ಒಪ್ಪಾರಿ ಹಾಡನ್ನು ಹಾಡುವರು.

ಸತ್ತವರ ಬಾಯಿಗೆ ಅಕ್ಕಿ ಹಾಕಲು ಅಕ್ಕಿ ತರುವುದು : ಸತ್ತವರ ಮಾವನ, ಮೈದುನ ಮತ್ತು ಇತರ ಸಂಬಂಧಿಕರು ತಮ್ಮ ತಮ್ಮ ಮನೆಗಳಿಂದ ಬತ್ತ ಅಕ್ಕಿ, ಎಣ್ಣೆ, ಸೀಗೆಕಾಯಿ ಮೊದಲಾದವುಗಳನ್ನು ಒಂದು ಮರದ ಪೆಟ್ಟಿಗೆಯಲ್ಲಿ ಇಟ್ಟುಕೊಮಡು ಸತ್ತವರ ಮನೆಗೆ ತರುತ್ತಾರೆ. ಇದನ್ನು ಸತ್ತವರ ಬಾಯಿಗೆ ಅಕ್ಕಿ ಹಾಕಲು ಅಕ್ಕಿ ಎತ್ತುವುದು ಎಂದು ಕರೆಯುತ್ತಾರೆ. ಈ ರೀತಿ ಬಂದವರೆಲ್ಲ ಊರಿನ ಗಡಿಯ ಒಂದು ಸ್ಥಳದಲ್ಲಿ ಸೇರುತ್ತಾರೆ. ಅವರನ್ನು ತಮಟೆಯವರು, ತಮ್ಮ ವಾದ್ಯಗಳೊಡನೆ ಊರಿಗೆ ಕರೆದುಕೊಂಡು ಬರುತ್ತಾರೆ. ಈ ರೀತಿ ತಂದ ಧಾನ್ಯಗಳನ್ನು ಸತ್ತವರ ಕಾಲುಗಳನ್ನು ಮುಚ್ಚುವಂತೆ ಗುಡ್ಡೆ ಹಾಕುತ್ತಾರೆ. ಈ ರೀತಿ ಮಾಡುವುದು ಒಂದು ವಿಧದ ಶಾಸ್ತ್ರವಾಗಿದೆ.

ನೀರು ತರಲು ಹೋಗುವುದು: ಸತ್ತವರಿಗೆ ಸ್ಥಾನ ಮಾಡಿಸಲು ಸಂಜೆ ಮೂರು ಗಂಟೆಯಿಂದ ಆರು ಗಂಟೆಯವರೆಗೆ ನೀರು ತರಲು ಹೋಗುತ್ತಾರೆ. ಇದನ್ನು ‘ನೀರ್ ಮಾಲೈ’ ಶಾಸ್ತ್ರ ಎಂದು ಕರೆಯುತ್ತಾರೆ. ಕೆಲವು ಸಮಾಜಗಳಲ್ಲಿ ಗಂಡಸರು ಮಾತ್ರ ನೀರ್ ಮಾಲೈ ಶಾಸ್ತ್ರ ಮಾಡುತ್ತಾರೆ. ಕೆಲವು ಸಮಾಜಗಳಲ್ಲಿ ಗಂಡಸು ಮತ್ತು ಹೆಂಗಸು ಇಬ್ಬರು ಸೇರಿ ನೀರ್ ಮಾಲೈ ಶಾಸ್ತ್ರ ಮಾಡುತ್ತಾರೆ. ಇದು ಹೆಣಕ್ಕೆ ಸ್ನಾನ ಮಾಡಿಸಲು ನೀರು ತರುವ ಶಾಸ್ತ್ರವಾಗಿದೆ.

ಮೋಕ್ಷದ ದೀಪವನ್ನು ಆಹ್ವಾನಿಸುವ ಶಾಸ್ತ್ರ : ಈ ಶಾಸ್ತ್ರವನ್ನು ಮೊಮ್ಮಗಳು ಮತ್ತು ಇತರ ಸಂಬಂಧಿಕರು ಮಾಡುತ್ತಾರೆ. ಎಲ್ಲರು ದೀಪ ಹಚ್ಚಿ ತಂದು ಊರಿನ ಕೇಂದ್ರ ಭಾಗದಲ್ಲಿ ಸೇರುತ್ತಾರೆ. ಅನಂತರ ಇವರನ್ನು ತಮಟೆ ವಾದ್ಯದವರು ಕರೆದುಕೊಂಡು ಹೋಗುತ್ತಾರೆ. ಅವರು ತಂದ ದೀಪವನ್ನು ಹೆಣದ ಮುಂದೆ ಇಟ್ಟು ಅಳುತ್ತಾರೆ. ಇದು ಈ ಕೆಳಗೆ ಬರುವ ಒಪ್ಪಾರಿ ಹಾಡಿನಲ್ಲಿ ಹೀಗಿದೆ.

ದೀಪವು ಹಿರಿಯರು ಕೈ ಬದಲಿಸಿ ಮತ್ತೊಂದು ಬೀದಿಲಿ
ಮೊಮ್ಮಕ್ಕಳು ಹೆಗಲು ಬದಲಿಸಿ ದೀಪವು ದಾರಿಲಿ ಸಾಗಲು
ಮಕ್ಕಳ ಕೈ ಬದಲಿಸಿದರೆ ಆತ್ಮವು ಸೇರಿತು ಕಾಡಿಗೆ
ನೀವು ನಡೆದಾಡಿದ ದಾರಿ ಅದನ್ನು ನೆನೆದು ಕೊಂಡು
ಆ ದಾರಿಯಲ್ಲಿ ಹೋಗುವಾಗ ಅಳುತ್ತಾಳೆ ನಿನ್ನ ಮೊಮ್ಮಗಳು
ಮಸಣದವರೆಗೆ ದಾರಿ ಹೋಗುವಾಗ ನಿನ್ನ ಮಕ್ಕಳು ಅಳುವರು
ಸುಡುಗಾಡಿನ ವರೆಗೆ ನಿನ್ನ ಮೊಮ್ಮಗಳು ಬಿಕ್ಕಿ ಬಿಕ್ಕಿ ಅಳುವಳು.

ಹೆಣಕ್ಕೆ ಬಟ್ಟೆ ತರುವುದು: ಹೆಣಕ್ಕೆ ಬಾಯಿಗೆ ಹಾಕಲು ಅಕ್ಕಿಯನ್ನು ತರಲು ಹೋದಾಗಲೇ ಜೊತೆಗೆ ಬಟ್ಟೆಯನ್ನು ಸಹ ತವರು

ಮನೆಯಿಂದ ತರುತ್ತಾರೆ. ಸತ್ತವರು ಗಂಡಸು ಆಗಿದ್ದರೆ, ಹೆಂಡತಿ ಮನೆಯವರು ಹೊಸ ಬಟ್ಟೆ ತರುತ್ತಾರೆ. ಹೊಸ ಪಂಚೆ, ಹೊಸ ಸೀರೆ ಮೊದಲಾದವುಗಳನ್ನು ‘ಕೋಡಿ’ ಎಂದು ಕರೆಯುವರು. ಹೆಂಗಸರು ಸತ್ತರೆ ತವರು ಮನೆಯ ‘ಕೋಡಿ’, ತಂದೆ ಸತ್ತರೆ ಮಗನ ‘ಕೋಡಿ’ ಹಾಕುತ್ತಾರೆ. ಮೊದಲು ಹುಟ್ಟಿದ ಮನೆಯ ‘ಕೋಡಿ’ ಹಾಕಿದ ಮೇಲೆ ಇತರರು ‘ಕೋಡಿ’ (ಹೊಸ ವಸ್ತ್ರ) ಹಾಕುತ್ತಾರೆ. ಅನಂತರ ಕೋಡಿಯನ್ನು ಚಟ್ಟದಲ್ಲಿ ಇಡುತ್ತಾರೆ.

ತಾಳಿ ತೆಗೆಯುವ ಶಾಸ್ತ್ರ: ಎಲ್ಲರು ಕೋಡಿ ಬಟ್ಟೆಯನ್ನು ಹಾಕಿ ಮುಗಿದ ಅನಂತರ ಮೈದುನ ಸಂಬಂಧ ಇರುವವರು ಅಂದರೆ ಗಂಡನ ಅಣ್ಣ, ತಮ್ಮ ಕೊನೆಯದಾಗಿ ಸೀರೆ ಹಾಕುತ್ತಾರೆ. ಕೆಲವು ಸಮಾಜದಲ್ಲಿ ಸಹೋದರರು ಸೀರೆ ಹಾಕಿದ ಮೇಲೆ ತಾಳಿಯನ್ನು ತೆಗೆದುಬಿಡುತ್ತಾರೆ. ಹೀಗೆ ಸೀರೆ ಹಾಕಿದ ತಕ್ಷಣ ತಾಳಿ ತೆಗೆಯುವುದರಿಂದ ಇದನ್ನು ತಾಳಿ ತೆಗೆಯುವ ಶಾಸ್ತ್ರ ಎಂದು ಕರೆಯುತ್ತಾರೆ.

ಚಟ್ಟ ಕಟ್ಟುವುದು: ಚಟ್ಟ ಎಂಬುದು ಹೆಣವನ್ನು ಶ್ಮಶಾನಕ್ಕೆ ಸಾಗಿಸಲು ಬಳಸುವ ಒಂದು ಸಾಧನ. ಈ ಚಟ್ಟವನ್ನು ಅಗಸರು, ಹೊಲೆಯರು, ಮಾದಿಗರು ಮೊದಲಾದವರು ಕಟ್ಟುತ್ತಾರೆ. ಆದರೆ ಕೆಲವರು ಸ್ಥಳಗಳಲ್ಲಿ ‘ನೋಕ್ಕರ್’ ಪರಕಾರಕ್ಕರ್, ವಣ್ಣಾರ್ (ಅಗಸರು), ಮರಗಳಿಂದ ಚಟ್ಟ ಕಟ್ಟುತ್ತಾರೆ. ಚಟ್ಟದಲ್ಲಿ ಬಿದಿರು ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ಈ ಚಟ್ಟವನ್ನು ಜನರು ತಮ್ಮ ಮಾತಿನಲ್ಲಿ ‘ಪಾಂಡೈ’ ಎನ್ನುವರು. ಚಟ್ಟವು ತೇರಿನ ರೂಪದಲ್ಲಿ ಸಿದ್ದಗೊಂಡಿರುತ್ತದೆ. ಅದರ ಮುಂಭಾಗದಲ್ಲಿ ೯, ೭, ೫ ಎಂಬ ಮುಖವು ರೂಪವು ಇರುತ್ತದೆ. ಚಟ್ಟದಲ್ಲಿ ಕಳಶಗಳನ್ನು ತಲೆಕೆಳಗಾಗಿ ಇಟ್ಟಿರುತ್ತಾರೆ. ಅನಂತರ ಚಟ್ಟವನ್ನು ಶ್ಮಶಾನಕ್ಕೆ ತಮಟೆ ಇತ್ಯಾದಿ ವಾದ್ಯಗಳನ್ನು ನುಡಿಸುತ್ತಾ ಕುಣಿದುಕೊಂಡು ಹೋಗುತ್ತಾರೆ. ಚಟ್ಟವನ್ನು ‘ಕಾಲ್ ವಳಿಕ್ಕಟ್ಟಿಲ್’ (ಕಾಲು ದಾರಿಯ ಮಂಚ ಅಥವಾ ಪಲ್ಲಕ್ಕಿ) ಎಂದು ಕೂಡ ಕರೆಯಲಾಗುತ್ತದೆ.

ಲಕ್ಷ್ಮಿಯನ್ನು ಆಹ್ವಾನಿಸುವುದು: ಸತ್ತವರಿಗೆ ಸ್ನಾನ ಮಾಡಿಸಿದ ಮೇಲೆ ‘ಶ್ರೀದೇವಿ ವಾಂಗುದಲ್’ ಎಂಬ ಶಾಸ್ತ್ರವನ್ನು ಮಾಡುತ್ತಾರೆ. ಈ ಶಾಸ್ತ್ರದಲ್ಲಿ ಅಳಿಯಂದಿರ ಸ್ಥಾನ ಮುಖ್ಯವಾಗಿರುತ್ತದೆ. ಅವರು ‘ಮೂದೇವಿ ಹೋಗಿ ಶ್ರೀದೇವಿ ಬಾ’ ಎಂದು ಹೇಳುತ್ತಾರೆ.

ಬಾಯಿಗೆ ಅಕ್ಕಿ ಹಾಕುವುದು: ನೀರಿನಲ್ಲಿ ನೆನೆದ ಬೆಳತಿಗೆ ಅಕ್ಕಿ ಜೊತೆ ಅರಿಸಿನವನ್ನು ಸೇರಿಸಿ ಸತ್ತವರ ಬಾಯಿಗೆ ಹಾಕುತ್ತಾರೆ. ಇದನ್ನು ಹೆಣದ ಬಳಿಯಲ್ಲಿ ಇಟ್ಟಿರುತ್ತಾರೆ. ಬಂದವರು ತಟ್ಟೆಯಲ್ಲಿಯ ಅಕ್ಷತೆಯನ್ನು ತೆಗೆದುಕೊಂಡು ಶವದ ಮೇಲೆ ಮೂರು ಬಾರಿ ಹಾಕಿ ಅನಂತರ ನಮಸ್ಕರಿಸುವರು. ಜೊತೆಗೆ ಕಾಸನ್ನು ತಟ್ಟೆಯಲ್ಲಿ ಹಾಕುವರು.

ಮಡಕೆ ಹೊಡೆಯುವುದು: ಮಡಕೆ ಹೊಡೆಯುವ ಶಾಸ್ತ್ರವನ್ನು ಸಾಮಾನ್ಯವಾಗಿ ಶ್ಮಶಾನದಲ್ಲೇ ಮಾಡಲಾಗುತ್ತದೆ. ಹೆಣವನ್ನು ಸುಡುಗಾಡಿಗೆ ಎತ್ತಿಕೊಂಡು ಹೋಗುವಾಗ ಶ್ಮಶಾನದಲ್ಲಿ ಒಂದು ಕಡೆ ಇಡುವುದು ರೂಢಿ. ಸುಡುಗಾಡಿಗೂ ಮತ್ತು ಊರಿಗೂ ಮಧ್ಯದಲ್ಲಿ ಶ್ಮಶಾನ ನಿರ್ಮಾಣವಾಗಿರುತ್ತದೆ. ಊರನ್ನು ಸುತ್ತಿಕೊಂಡುಬಂದ ಚಟ್ಟವನ್ನು ಶ್ಮಶಾನಕ್ಕೆ ಬಂದ ಅನಂತರ ಸುಡುಗಾಡಿನ ಕಡೆ ತಿರುಗಿಸಿ ಇಡುತ್ತಾರೆ. ಇದನ್ನು ‘ನಡೈ ಮಾಟ್ರುದಲ್’ (ನಡೆಯನ್ನು ಬದಲಾಯಿಸುವುದು) ‘ಪಾಡೈ ತಿರುಪ್ಪುದಲ್’ (ಚಟ್ಟ ತಿರುಗಿಸುವುದು) ಎಂದು ಕರೆಯುತ್ತಾರೆ. ಇಲ್ಲಿ ಶವವನ್ನು ಇಳಿಸಿ ಮಡಕೆ ಹೊಡೆಯುವ ಶಾಸ್ತ್ರ ಮಾಡುತ್ತಾರೆ. ಸಾಮಾನ್ಯವಾಗಿ ಹೆಂಗಸರೇ ಮಡಕೆ ಹೊಡೆಯುತ್ತಾರೆ. ನೀರು ತುಂಬಿದ ಮಣ್ಣಿನ ಮಡಕೆಯನ್ನು ತಲೆಯಲ್ಲಿ ಇಟ್ಟುಕೊಂಡು ಮೂರು ಸುತ್ತು ಶವವನ್ನು ಸುತ್ತುತ್ತಾರೆ. ಒಂದು ಸುತ್ತು ಮುಗಿದ ಮೇಲೆ ಕ್ಷೌರಿಕ ಕುಡುಗೋಲಿನಿಂದ ಮಡಕೆಯನ್ನು ತೂತು ಮಾಡುತ್ತಾನೆ. ಈ ರೀತಿ ಮೂರು ಸುತ್ತಿಗೆ ತೂತು ಮಾಡುತ್ತಾನೆ. ಮೂರನೆಯ ಸುತ್ತಿನಲ್ಲಿ ಚಟ್ಟದ ಮುಂದೆ ಮಡಕೆಯನ್ನು ಒಡೆದು ಹಾಕಿ ಅಳುತ್ತಾರೆ. ಆಗ ಮಡಕೆ ಹೊಡೆದ ಹೆಣ್ಣನ್ನು ಬಟ್ಟೆಯಿಂದ ಮುಚ್ಚಿ ಮನೆಗೆ ಕರೆದುಕೊಂಡು ಹೋಗುತ್ತಾರೆ.

ಹೆಂಡತಿ ಗಂಡನಿಗೆ ಮಾಡುವ ಶಾಸ್ತ್ರ: ಗಂಡ ಸತ್ತರೆ ಅವನ ದೇಹವನ್ನು ಚಟ್ಟದಲ್ಲಿ ಇರಿಸುವುದಕ್ಕಿಂತ ಮುಂಚೆ ಕೆಲವು ಶಾಸ್ತ್ರಗಳನ್ನು ಮಾಡುತ್ತಾರೆ. ಆತನ ಹೆಂಡತಿಯನ್ನು ವಧುವಿನಂತೆ ಸಿಂಗರಿಸಿ ಕತ್ತಿನಲ್ಲಿ ಅರಿಸಿನ ದಾರವನ್ನು ಕಟ್ಟಿ ಅದನ್ನು ಮತ್ತೆ ತೆಗೆಯುತ್ತಾರೆ. ಈ ಶಾಸ್ತ್ರ ಪ್ರಾರಂಭದಲ್ಲಿ ಕಂಡಬರುವುದಿಲ್ಲ. ಆದರೆ ಪ್ರಸ್ತುತದಲ್ಲಿ ಜಾರಿಯಲ್ಲಿದೆ.

ಕೊಳ್ಳಿ ಇಡುವ ಮುಂಚೆ ಮಡಕೆ ಒಡೆಯುವುದು:ಶವಕ್ಕೆ ಸ್ನಾನ ಮಾಡಿಸಿದ ಮೇಲೆ ಈ ಶಾಸ್ತ್ರವನ್ನು ಮಾಡುತ್ತಾರೆ. ತಾಯಿಗೆ ಮೊದಲ ಮಗನು, ತಂದೆಗೆ ಕಿರಿಯ ಮಗನು ತಲೆ ಬೋಳಿಸಿಕೊಳ್ಳುತ್ತಾರೆ. ಅವರು ನೀರು ತುಂಬಿದ ಮಣ್ಣಿನ ಮಡಕೆಯನ್ನು ಹೆಗಲಿನಲ್ಲಿ ಹೊತ್ತುಕೊಂಡು ಶವಕ್ಕೆ ಮೂರು ಸುತ್ತು ಬಂದು ಶವದ ಕಾಲಿನ ಭಾಗದಲ್ಲಿ ಒಡೆಯುತ್ತಾರೆ. ಇದನ್ನೇ ‘ಕೊಳ್ಳಿಕ್ಕುಡಂ ಉಡೈತ್ತಲ್’ ಎಂದು ಕರೆಯುತ್ತಾರೆ.

ಕೊಳ್ಳಿ ಇಡುವುದು: ಹೆಣವನ್ನು ಚಿತೆಯಲ್ಲಿಟ್ಟು ಹಚ್ಚುವುದಕ್ಕೆ ‘ಕೊಳ್ಳಿ ವೈತ್ತಲ್’ ಎನ್ನಲಾಗುತ್ತದೆ. ಶವವನ್ನು ಹೂಳುವವರು ಗುಂಡಿಯಲ್ಲಿ ದೇಹವನ್ನು ಇಟ್ಟು ಶಾಸ್ತ್ರಕ್ಕೆ ಕೊಳ್ಳಿಯನ್ನು ತಲೆಯ ಭಾಗದಲ್ಲಿ ನೆಡುತ್ತಾರೆ. ಸತ್ತವರ ಹಿರಿಯ ಮಗ ಅಥವಾ ಕಿರಿಯ ಮಗ ಗುಂಡಿಯ ಮೇಲೆ ಹಿಂಬದಿಯಿಂದ ಮೊಣಕಾಲೂರಿ ಕುಳಿತು ಸತ್ತವರ ತಲೆ ಇರುವ ಭಾಗದಲ್ಲಿ ಉರಿವ ಕಟ್ಟಿಗೆಯನ್ನು (ಕೊಳ್ಳಿ) ನೆಡುತ್ತಾನೆ. ಅವನು ಈ ರೀತಿ ಮಾಡುವ ಮುಂಚೆ ಕೊಳ್ಳಿಯನ್ನು ಕೈಯಲ್ಲಿ ಹಿಡಿದುಕೊಂಡು ಗುಂಡಿಯ ಸುತ್ತ ಮೂತು ಸುತ್ತು ಬರುತ್ತಾನೆ.

ತಲೆ ಬೋಳಿಸುವುದು: ಸತ್ತವರಿಗಾಗಿ ಕೊಳ್ಳಿ ಇಡುವವರಿಗೆ ಕ್ಷೌರಿಕರು ತಲೆ ಬೋಳಿಸುತ್ತಾರೆ. ಸೋದರ ಮಾವ ತಲೆ ಬೋಳಿಸಿಕೊಂಡವರಿಗೆ ಬಿಳಿ ವಸ್ತ್ರವನ್ನು ತಲೆಗೆ ಕಟ್ಟುತ್ತಾರೆ. ತಲೆ ಬೋಳಿಸಿ ಕೊಂಡವರು ಈ ವಸ್ತ್ರವನ್ನು ಉತ್ತರ ಕ್ರಿಯೆ ನಡೆಯುವವರೆಗೂ ಕಟ್ಟಿಕೊಂಡಿರುತ್ತಾರೆ. ಹೀಗೆ ತಲೆಬೋಳಿಸಿಕೊಂಡವರಿಗೆ ಕ್ಷೌರಿಕರು ಶ್ಮಶಾನದಲ್ಲಿಯೇ ಸ್ನಾನ ಮಾಡಿಸುತ್ತಾರೆ.

ಸಮಾಧಿಯನ್ನು ಸಿದ್ಧಪಡಿಸುವುದು: ಸತ್ತವರನ್ನು ಗುಂಡಿಯಲ್ಲಿ ಹಾಕಿದ ಮೇಲೆ ನೀರನ್ನು ಸುರಿದು ಸಮ ಮಾಡುತ್ತಾರೆ. ಗುಂಡಿಯ ತಲೆಭಾಗದಲ್ಲಿ ಸಣ್ಣ ಹಳ್ಳ ತೋಡಿ ಆ ಹಳ್ಳದಲ್ಲಿ ಹಾಲು ತುಪ್ಪ ಸುರಿಯುತ್ತಾರೆ. ಹಾಲಿನ ಗುಂಡಿಯನ್ನು ಬತ್ತ, ಸಂದುವಳ್ಳಿ, ತುಳಸಿ ಮೊದಲಾದ ಗಿಡಗಳನ್ನು ನೆಡುತ್ತಾರೆ. ಈ ಗಿಡಗಳು ಚೆನ್ನಾಗಿ ಬೆಳೆದರೆ ಸತ್ತವರ ಕುಟುಂಬಕ್ಕೆ ಒಳ್ಳೆಯದಾಗುವುದು ಎಂಬ ನಂಬಿಕೆ ಇದೆ.

ಕಾಗೆಗೆ ಕೂಳಿಡುವುದು: ಹೆಂಗಸರು ಶ್ಮಶಾನದಲ್ಲಿ ಮಡಕೆ ಒಡೆದರೆ ಮಾತ್ರ ಆತ್ಮ ದೇವರ ಬಳಿ ಸೇರುವುದು ಎಂದು ನಂಬುವರು. ಸತ್ತವರಿಗೆ ಬೆಂಕಿ ಇಟ್ಟ ಗಂಡು ಮಗ ತನ್ನ ಕೈಯಿಂದ ಮನೆಯ ಹಂಚಿನ ಮೇಲೆ ಅನ್ನವನ್ನು ಇಡುತ್ತಾರೆ. ಈ ಅನ್ನವನ್ನು ತಿನ್ನುವುದಕ್ಕೆ ಹೆಚ್ಚಿನ ಕಾಗೆಗಳು ಬರುತ್ತವೆ. ಆದರೆ ಆ ಕಾಗೆಗಳಲ್ಲಿ ಕತ್ತಲ್ಲಿ ಬಿಳಿ ಬಣ್ಣ ಇರುವ ಕಾಗೆಗಳೇ ಪ್ರಮುಖಸ್ಥಾನ ಪಡೆಯುತ್ತದೆ. ಈ ರೀತಿ ಕಾಗೆ ಅನ್ನ ತಿಂದರೆ ಸತ್ತವರು ಬಂದ ಅನ್ನ ತಿಂದಂತೆಯೇ ಎಂದು ಜನರು ಭಾವಿಸುತ್ತಾರೆ.

ಸತ್ತ ಮೂರನೆಯ ದಿನಕ್ಕೆ ನಡೆಯುವ ಶಾಸ್ತ್ರ: ಸತ್ತವರನ್ನು ಹೂತು ಹಾಕಿದ ಮೇಲೆ ಮೂರನೆಯ ದಿನ ಸತ್ತವರಿಗೆ ಎಡೆ ಅರ್ಪಿಸುವ ಶಾಸ್ತ್ರ ನಡೆಯುತ್ತದೆ. ಅನಂತರ ಮಾವ, ಭಾವ ಮೈದುನ ಮತ್ತು ಇತರ ಸಂಬಂಧಿಕರು ಅಡುಗೆ ಮಾಡಿಬಡಿಸುತ್ತಾರೆ. ಇದು ದುಃಖದಿಂದ ನೊಂದ ಸತ್ತವರ ಮನೆಯವರನ್ನು ಊಟ ಮಾಡಿಸಲು ಸಹಾಯಕವಾಗುವಂಥದು.

ಉತ್ತರ ಕ್ರಿಯೆಯ ದಿನದಂದು ನಡೆಯುವ ಶಾಸ್ತ್ರ: ಈ ಶಾಸ್ತ್ರವನ್ನು ೧೬ ಇಲ್ಲವೆ ೩೦ ನೆಯ ದಿನದಂದು ನಡೆಸುತ್ತಾರೆ. ಈ ಶಾಸ್ತ್ರದಲ್ಲಿ ಸೋದರ ಮಾವನಿಗೆ ಪ್ರಮುಖ ಸ್ಥಾನವಿದೆ. ಈ ಶಾಸ್ತ್ರಕ್ಕೆ ‘ಶಾಸ್‌ತಿರಮ್‌ಕಳಿತ್ತಲ್‌’ (ಸೂತಕ ಕಳೆಯುವುದು), ತಲೈಮುಳುಕ್ಕು (ತಲೆ ತೊಳೆದುಕೊಳ್ಳುವುದು) ಕರುಮಾದಿ (ತಿಥಿ) ಎಂಬೆಲ್ಲ ಹೆಸರುಗಳಿಂದ ಕರೆಯಲಾಗಿದೆ. ಮನೆಯನ್ನು ಶುಚಿ ಮಾಡಿ ಅನಂತರ ಈ ಶಾಸ್ತ್ರವನ್ನು ಮಾಡುತ್ತಾರೆ. ಹೆಚ್ಚು ಬತ್ತವನ್ನು ಕುಟ್ಟಿ ಅಕ್ಕಿ ಮಾಡಿ ಆ ಅಕ್ಕಿಯನ್ನು ಅಡುಗೆ ಮಾಡುತ್ತಾರೆ.

ಸತ್ತವರನ್ನು ಪೂಜಿಸುವ ಶಾಸ್ತ್ರ: ಮನೆಯಲ್ಲಿ ಆಹಾರ ಪದಾರ್ಥಗಳನ್ನು ಎಡೆ ಇಟ್ಟು ಸತ್ತವರನ್ನು ಊಟ ಮಾಡುವುದಕ್ಕೆ ಬರುವಂತೆ ಕರೆಯುತ್ತಾರೆ. ಆಗ ಸತ್ತವರ ಬಟ್ಟೆ, ಭಾವಚಿತ್ರ, ಅವರು ಬಳಸುತ್ತಿದ್ದ ವಸ್ತುಗಳನ್ನು ಇಟ್ಟುಜೋಡಿ ದೀಪವನ್ನು ಹಚ್ಚಿ ಸತ್ತವರನ್ನು ಪೂಜಿಸುತ್ತಾರೆ. ಬತ್ತ ತುಂಬಿದ ಎರಡು ಒರಲುಗಳನ್ನು ಅದರಲ್ಲಿ ಎರಡು ಒನಕೆಗಳನ್ನು ಇಟ್ಟು ಅದಕ್ಕೆ ಬೇವಿನ ಸೊಪ್ಪನ್ನು ಕಟ್ಟಿರುತ್ತಾರೆ. ಶ್ರೀದೇವಿಯನ್ನು (ಐಶ್ವರ್ಯ) ಪಡೆದ ಮೊಮ್ಮಗಳು ಒನಕೆಯಿಂದ ಬತ್ತವನ್ನು ಕುಟ್ಟಿ ಆ ಹಿಟ್ಟಿನಿಂದ ದೀಪವನ್ನು ಮಾಡಿ ಪೂಜಿಸುತ್ತಾಳೆ. ಸತ್ತವರ ಎಡೆಗೆ ಸಸ್ಯಾಹಾರ ಇಲ್ಲವೇ ಮಾಂಸಹಾರವನ್ನು ಇಡಲಾಗಿರುತ್ತದೆ. ಈ ಶಾಸ್ತ್ರದಲ್ಲಿ ಸತ್ತವರು ಇಷ್ಟಪಡುವ ಆಹಾರವನ್ನೇ ಹೆಚ್ಚು ಇಡುವುದು ರೂಢಿಯಲ್ಲಿದೆ.

ಶಾಂತಿ ಮಾಡುವ ಶಾಸ್ತ್ರ: ಸತ್ತವರ ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಅವರಿಗೆ ವೀಳ್ಯದೆಲೆ, ಅಡಕೆ, ಸುಣ್ಣ ಮೊದಲಾದವುಗಳನ್ನು ಒಬ್ಬೊಬ್ಬರ ಹತ್ತಿರ ಒಂದೊಂದಾಗಿ ಕೊಟ್ಟು ಮೊದಲ ಕಡೆಯಿಂದ ರಭಸವಾಗಿ “ತೀಮೈ ಕಂಡೋಮ್, ತೀಮೈಕಂಡೋಮ್, ತೀಮೈಕಂಡೋಮಂ” (ಕೆಟ್ಟದನ್ನು ಕಂಡೆವು) ಎಂದು ಹೇಳಿಕೊಂಡು ಮೂರು ಸುತ್ತು ಬರುತ್ತಾರೆ. ಮೂರು ಸಲ ಪ್ರದಕ್ಷಿಣೆ ಹಾಕಿದ ಮೇಲೆ ವೀಳ್ಯೆದೆಲೆ ಇಟ್ಟುಕೊಂಡಿರುವವರು ಅಡಕೆಯನ್ನು, ಅಡಕೆಯನ್ನು ಇಟ್ಟುಕೊಂಡಿರುವವರು ಸುಣ್ಣವನ್ನು, ಸುಣ್ಣವನ್ನು ಇಟ್ಟುಕೊಂಡಿರುವವರು ವೀಳ್ಯೆದೆಲೆಯನ್ನು ಬದಲಾಯಿಸಿಕೊಂಡು ಬಲಗಡೆಯಿಂದ ಎಡಗಡೆಗೆ “ನನ್ಮೈಕಂಡೋಮ್ ನನ್ಮೈ ಕಂಡೋಮ್, ನನ್ಮೈ ಕಂಡೋಮ್” (ಒಳ್ಳೆಯದನ್ನು ಕಂಡೆವು) ಎಂದು ಹೇಳಿಕೊಂಡು ಮೂರು ಸಲ ಸುತ್ತಿಬರುತ್ತಾರೆ. ಇದುವೇ ‘ಕಾಡೇರುದಲ್’ ಎಂಬ ಶಾಸ್ತ್ರ. ಇದನ್ನೇ ಕಾಡೇಟ್ರುದಲ್ ಎಂದು ಸಹ ಹೇಳುವರು.

ತಲೆಗೆ ಬಿಳಿ ವಸ್ತ್ರ ಕಟ್ಟುವ ಶಾಸ್ತ್ರ: ಈ ಶಾಸ್ತ್ರವನ್ನು ಬಹುಪಾಲು ಗಂಡು ಮಕ್ಕಳೇ ಮಾಡಿಸಿಕೊಳ್ಳುತ್ತಾರೆ. ತಲೆ ಬೋಳಿಸಿಕೊಂಡ ಗಂಡು ಮಕ್ಕಳೊಡನೆ ಇತರ ಸಂಬಂಧಿಕರು ಕುಳಿತುಕೊಳ್ಳುತ್ತಾರೆ. ಮೊದಲು ಸೋದರ ಮಾವ ತಲೆ ಬೋಳಿಸಿಕೊಂಡವರಿಗೆ ಹೊಸ ಕೈಚೌಕವನ್ನು, ತಲೆಗೆ ಬಿಳಿ ವಸ್ತ್ರವನ್ನು ಕಟ್ಟುತ್ತಾರೆ. ಇದನ್ನು ‘ಉರುಮಾಕ್ಕಟ್ಟುದಲ್’ (ತಲೆಗೆ ರುಮಾಲು ಕಟ್ಟುವುದು) ಎನ್ನುತ್ತಾರೆ. ಇದಾದನಂತರ ಅವರವರ ಅನುಕೂಲಕ್ಕೆ ತಕ್ಕಂತೆ ಸಂಬಂಧಿಕರು, ಪಂಚೆ, ಕೈಚೌಕ, ಉಂಗುರಮ ಸೀರೆ ಇತ್ಯಾದಿಗಳನ್ನು ಸತ್ತ ಮನೆಯವರಿಗೆ ಕೊಡುತ್ತಾರೆ.

– ಎ.ಬಿ. ಅನುವಾದ ಆರ್.ಎಸ್.

ಇರವಿಕುಟ್ಟಿಪಿಳ್ಳೈಪೋರ್ ಇದು ಮಲಯಾಳಂನ ಮೌಖಿಕ ಸಂಪ್ರದಾಯದ ಒಂದು ಕಥನ ಗಾನ. ‘ಕಣಿಯಾಕುಳಂ ಪೋರ್’ ಎಂಬುದು ಇದರ ಇನ್ನೊಂದು ಹೆಸರು. ವೇನಾಡಿನ ಇತಿಹಾಸದೊಂದಿಗೆ ಸಂಬಂಧವುಳ್ಳ ಈ ಕಥನಗಾನಕ್ಕೆ ಮೂಲವಾದ ಯುದ್ಧ ನಡೆದುದು ೧೬೨೩ – ೧೬೫೯ ನಡುವೆ. ತಿರುಮಲ ನಾಯ್ಯರರ ಆಡಳಿತಾವಧಿಯಲ್ಲಿ ಮಧುರೆಯ ಸಾಮಂತ ರಾಜರಿಗೆ ತಿರುವಾಂಕೂರು ಸಂಸ್ಥಾನ ಕಪ್ಪಕೊಡುತ್ತಿದ್ದುದನ್ನು ನಿಲ್ಲಿಸಿತು. ಈ ಕಾರಣದಿಂದ ರಾಮಪ್ಪಯ್ಯನ ನೇತೃತ್ವದಲ್ಲಿ ಮಧುರೆಯ ಸಾಮಂತ ತಿರುವಾಂಕೂರನ್ನು ಆಕ್ರಮಿಸಿದ. ತಿರುವಾಂಕೂರು ಇರವಿಕುಟ್ಟಿಪಿಳ್ಳೆಯ ನೇತೃತ್ವದಲ್ಲಿ ಅದನ್ನು ಎದುರಿಸಿತು. ವೇನಾಡಿದ ರಾಜಧಾನಿಯಾಗಿದ್ದ ಕೇರಳಾಪುರ (ಕನ್ಯಾಕುಮಾರಿ ಜಿಲ್ಲೆ – ತಮಿಳುನಾಡು)ದಲ್ಲಿ ಇರವಿಕುಟ್ಟಿಯ ಕುರಿತಾದ ಈ ಕಥನಗಾನ ಹುಟ್ಟಿತು. ವಿಲ್ಲಡಿ ಪಾಟ್ಟ್ (ಬಿಲ್ಲಿನ ಹಗ್ಗವನ್ನು ಶಬ್ದಿಸುತ್ತ ಹಾಡುವ ಹಾಡು)ಗಾಗಿ ರಚಿಸಿದ ಈ ಗಾನ ೧೯೪೫ರಲ್ಲಿ ಕಾಂಞಿಕ ಕುಳಂ ಕೊಚ್ಚುಕೃಷ್ಣನ್ ನಾಡಾರದಿಂದ ಪ್ರಕಾಶನಗೊಂಡಿತು. ಇದರ ಮೂಲಕೃತಿ ತಮಿಳು ಲಿಪಿಯಲ್ಲಿ ಬರೆಯಲ್ಪಟ್ಟಿದೆ.

ಸಹ್ಯಾದ್ರಿಯ ತಪ್ಪಲಿನ ತೋವಾಳ, ಅಗಸ್ತ್ಯೇಶ್ವರ ಮುಂತಾದ ತಾಲೂಕಗಳಿಗೆ ಸೇರಿದ ಪ್ರದೇಶಗಳು ಬತ್ತದ ದೊಡ್ಡ ಬಯಲುಗಳಿಂದ ತುಂಬಿಕೊಂಡಿದ್ದುವು. ಕಣಿಯಾಕುಳಳಮ ಎಂಬುದು ಇದರ ಸಮೀಪವಿದ್ದ ಪ್ರದೇಶ. ಈ ಪ್ರದೇಶಗಳ ಬೇಸಾಯ ಹಲವಾರು ಬಾರಿ ಯುದ್ಧ ಕಾರಣವಾಗಿ ತೊಂದರೆಗೆ ಒಳಗಾಗುತ್ತಿತ್ತು. ತೆರಿಗೆ ವಿನಾಯತಿಗಾಗಿ ರೈತರು ತಿರುವಾಂಕೂರು ಮಹಾರಾಜನಲ್ಲಿ ವಿನಂತಿಸುವ ಸಂದರ್ಭ ಈ ಕಥಾಗಾನದಲ್ಲಿ ಬರುತ್ತದೆ. ಇರವಿಕುಟ್ಟಿಯ ಹೋರಾಟ ಒಟ್ಟಿನಲ್ಲಿ ಒಂದು ಸಂಕಟಮಯ ಸ್ಥಿತಿಯಲ್ಲಿ ಹುಟ್ಟಿಕೊಂಡಿತು.

ಕಥಾಗತಿ: ಕಾಲ್ಕುಳವನ್ನು ರಾಜಧಾನಿಯನ್ನಾಗಿ ವೇಣಾಟ್ಟಯಿವನ್ ಎಂಬಾತ ಆಡಳಿತ ನಡೆಸುತ್ತಿದ್ದ ಕಾಲ. ಮಧುರೆಯ ಸೇನಾನಾಯಕ ರಾಮಪ್ಪಯ್ಯನು ನಡೆಸುತ್ತಿದ್ದ ಸೇನಾಸಿದ್ಧತೆಯ ವಿವರ ಮಂತ್ರಿಗಳ ಮೂಲಕ ಅರಸನಿಗೆ ತಿಳಿಯಿತು. ವೇಣಟ್ಟಯಿವನ್ ಮಂತ್ರಿಗಳಲ್ಲಿ ಎಚ್ಚರಿಕೆಯ ಯುದ್ಧ ಸಿದ್ಧತೆ ನಡೆಸಬೇಕೆಂದು ಎಚ್ಚರಿಸಿದ. ಇರವಿಕುಟ್ಟಿಯನ್ನು ಹೊರತುಪಡಿಸಿ ಎಂಟುಜನ ಮಂತ್ರಿಗಳ ಕೂಟ ಯುದ್ಧದಲ್ಲಿ ತಮ್ಮ ತಂತ್ರದ ಕುರಿತು ಚರ್ಚಿಸಿದರು. ಇದೇ ವೇಳೆ ಪುಲಿಯೂರ್ ಕುರುಚ್ಚಿ ಎಂಬಲ್ಲಿ ಮಹಾರಾಜರ ಪರಿವಾರ ಮತ್ತು ಲೆಂಕರ ತಂಡ ಸೇರಿಕೊಂಡಿದ್ದುವು. ತಿರುಮಲ ನಾಯಕನಾಗಿದ್ದ ವೇಲಯ್ಯತನನ್ನು ಕೊಂದು ಗಳಿಸಿದ್ದ ಮೇಲುಗೈಯನ್ನು ಕಾಪಾಡಿಕೊಂಡರೆ ರಾಮಪ್ಪಯ್ಯ ಹಿಂದೆ ಸರಿದಾನೆಂದು ಅವರು ಲೆಕ್ಕ ಹಾಕಿದರು. ಅದಕ್ಕಾಗಿ ಜಾಣತನದ ಕೆಲವು ಮಾರ್ಗಗಳನ್ನೂ ಅವರು ಆಲೋಚಿಸಿದರು. ಯುದ್ಧವೀರನೂ ಸಮರ್ಥನೂ ಆದ ಇರವಿಕುಟ್ಟಿಪಿಳ್ಳೆಯ ಸಾಮರ್ಥ್ಯವನ್ನು ತಾವು ಹೇಗೆ ಬಳಸಿಕೊಳ್ಳಬೇಕೆಂದೂ ತಮ್ಮ ಬೆಂಬಲ ಸ್ಥಗಿತಗೊಂಡ ಸಂದರ್ಭದಲ್ಲೇ ಆಶ್ವಾರೋಹಿ ವೈರಿ ಸೈನಿಕರು ಇರವಿಕುಟ್ಟಿಯ ತಲೆಯನ್ನು ಕಡಿಯಲು ಹೇಗೆ ಅನುಕೂಲವಾದೀತೆಂದೂ ತನ್ಮೂಲಕ ವೈರಿ ತೃಪ್ತಿಹೊಂದಬಹುದಾದ ಸಾಧ್ಯತೆಯನ್ನು ಮಂತ್ರಿಗಳು ಲೆಕ್ಕ ಹಾಕಿದರು. ಒಂದು ವೇಳೆ ಘಟನೆಗಳು ಹೀಗೆ ಲೆಕ್ಕಾಚಾರದಂತೆ ನಡೆದರೆ ಯುದ್ಧವೇ ನಿಂತು ಶಾಂತಿ ನೆಲೆಸಲು ಸಾಧ್ಯವೆಂದೂ ಅವರು ರಹಸ್ಯವಾಗಿ ಲೆಕ್ಕ ಹಾಕಿದರು. ಅಂತೆಯೇ ತಮ್ಮ ಯೋಜನೆಗಳನ್ನು ಗುಟ್ಟಿನಲ್ಲಿ ರಾಮಪ್ಪಯ್ಯನಿಗೆ ತಿಳಿಸಿದರು ಕೂಡ. ಯಾವುದೋ ಜಾದುವಿನಲ್ಲಿ ಎಂಬಂತೆ ಅವರು ಈ ಸಂಗತಿಯನ್ನು ಬಹಳ ಗುಟ್ಟಾಗಿ ಜಾಣ್ಮೆಯಿಂದ ಈ ಕೆಲಸವನ್ನು ನಿರ್ವಹಿಸಿದರು. ಬಳಿಕ ಮಹಾರಾಜನನ್ನು ಕಂಡರು. ಸೇನೆಯ ಎಡಬಲಕ್ಕೆ ಮಂತ್ರಿಗಳೇ ನಿಂತು ಸೇನೆಯನ್ನು ಮುನ್ನಡೆಸಬೇಕೆಂದು ರಾಜ ಆಜ್ಞೆ ಮಾಡಿದ. ಆದರೆ ಮುಂಚೂಣಿಯಲ್ಲಿ ನಿಲ್ಲಬಲ್ಲವರಿಲ್ಲದ ವಿಚಾರ ರಾಜನಿಗೆ ಆತಂಕ ಹುಟ್ಟಿಸಿತು. ಆ ಹೊತ್ತಲ್ಲಿ ಮುಂಚೂಣಿಯಲ್ಲಿ ನಿಂತು ಸೇನೆಯನ್ನು ಮುನ್ನಡೆಸುತ್ತೇನೆಂದು ಇರವಿಕುಟ್ಟಿ ಮಹಾರಾಜನಲ್ಲಿ ನಿವೇದಿಸಿಕೊಂಡ.

ಇರವಿಕುಟ್ಟಿಯ ತಾಯಿಗೆ ದುಸ್ವಪ್ನವಾಯ್ತು. ಆಕೆ ಮಗನನ್ನು ಯುದ್ಧಕ್ಕೆ ಕಳುಹಿಸಲು ಒಪ್ಪಲಿಲ್ಲ. ತಾನು ಕಂಡ ಸ್ವಪ್ನವನ್ನು ಆಕೆ ವಿವರಿಸಿದಳು. ಮಹಾರಾಜನಿಗೆ ಈ ವಿಷಯ ತಿಳಿಸಿ ಯುದ್ಧದಿಂದ ದೂರವಿರುವಂತೆ ಆಕೆ ಮಗನಿಗೆ ಹೇಳಿದಳು. ಆದರೆ ಇರವಿಕುಟ್ಟಿ ತನ್ನ ನಿರ್ಧಾರದಲ್ಲಿ ಅಚಲವಾಗಿದ್ದ. ಅವನ ಪತ್ನಿಯ ಮೂಲಕ ಅವನನ್ನು ಯುದ್ಧವಿಮುಖನಾಗಿಸಲು ತಾಯಿ ಪ್ರಯತ್ನಿಸಿದರೆ ಅದೂ ವಿಫಲವಾಯಿತು. ಭದ್ರಕಾಳಿಗೆ ವಂದಿಸಿ ಇರವಿಕುಟ್ಟಿ ಯುದ್ದೋನ್ಮುಖನಾಗುತ್ತಾನೆ. ದೂತ ಮುಖೇನ ರಾಮಪ್ಪಯ್ಯನಿಗೆ ಸಂದೇಶ ರವಾನಿಸುತ್ತಾನೆ. ದೂತನೂ ಯುದ್ಧ ವಿಮುಖನಾಗುವಂತೆ ಇರವಿಕುಟ್ಟಿಯನ್ನು ವಿನಂತಿಸುತ್ತಾನೆ. ಕೆರಳಿದ ಇರವಿಕುಟ್ಟಿ ದೂತನನ್ನು ವಧಿಸಲು ಮುಂದಾಗುತ್ತಾನೆ. ಆಗ ಅರಸನೇ ಅವನನ್ನು ತಡೆಯುತ್ತಾನೆ. ದೂತನು ಮರಳಿ ಬಂದು ರಾಮಪ್ಪಯ್ಯನಿಗೆ ಇರವಿಕುಟ್ಟಿಯ ದುರಹಂಕಾರವನ್ನು ತಿಳಿಸುತ್ತಾನೆ. ಮಹಾರಾಜನ ಅಪ್ಪಣೆ ಪಡೆದು ಇರವಿಕುಟ್ಟಿ ಮುಂಚೂಣಿಯ ಸೈನ್ಯದೊಂದಿಗೆ ಮುನ್ನುಗ್ಗಿ ಘೋರವಾದ ಯುದ್ಧ ಮಾಡುತ್ತಾನೆ. ಆರಂಭದಲ್ಲಿ ವೇನಾಡುಸೇನೆ ಪರಾಕ್ರಮದಿಂದ ಹೋರಾಡಿದರೂ ಕ್ರಮೇಣ ರಾಮಪ್ಪಯ್ಯನ ಸೇನೆಯ ಕೈ ಮೇಲಾಗುತ್ತಾನೆ. ರಣಶೂರರಾದ ಆದಿಚ್ಚನ್ ಪಳ್ಳಿಚ್ಚನನ್ನು ಅರತ್ತಲ್ ಒಡೆಯನನ್ನು ರಾಮಪ್ಪಯ್ಯನ ಸೇನೆ ಕೊಂದು ಹಾಕಿತು. ಇರವಿಕುಟ್ಟಿಯ ರುಂಡವನ್ನು ರಾಮಪ್ಪಯ್ಯನ ಮುಂದೆ ತಂದಿಕ್ಕಿತು. ಮಹಾರಾಜನಿಗೆ ಈ ವಿಷಯ ತಿಳಿದು ಆತ ಬಹುವಿಧವಾಗಿ ದುಃಖಿಸಿದ. ಮಗನ ಮರಣ ವಾರ್ತೆ ತಿಳಿದ ತಾಯಿ ಎದೆ ಬಡಿದುಕೊಂಡು ಅತ್ತಳು. ಇರವಿಕುಟ್ಟಿಯ ಮುಂಡ ಮಾತ್ರವನ್ನು ದಹಿಸುವುದು ಸಾಧ್ಯವಿಲ್ಲವೆಂದು ಮಹಾರಾಜ ಹಠ ಹಿಡಿದು ರಾಮಪ್ಪಯ್ಯನ ಪಾಳಯಕ್ಕೆ ಹೋಗಿ ಇರುವಿಕುಟ್ಟಿಯ ರುಂಡವನ್ನು ತರುವ ಧೈರ್ಯಶಾಲಿ ಯಾರಾದರೂ ಇದ್ದಾರೆಯೇ ಎಂದು ಸವಾಲು ಹಾಕಿದ. ಇರವಿಕುಟ್ಟಿಪಿಳ್ಳೇ ಸಾಕಿದ್ದ ಚೆಕ್ಕಾಲ ಕಾಳಿ (ಕಾಳಿನಾಯರ್) ಸವಾಲನ್ನು ಸ್ವೀಕರಸಿದ. ಕಾಳಿನಾಯರ್ ಇನ್ನೊಂದು ಪಾಳಯಕ್ಕೆ ತೆರಳಿ ರಾಮಪ್ಪಯ್ಯನೊಡನೆ ರುಂಡಕ್ಕೆ ಬೇಡಿಕೆ ಸಲ್ಲಿಸಿದ. ಹಲವು ತರ್ಕ ವಿತರ್ಕಗಳ ಬಳಿಕ ರುಂಡವನ್ನು ರಾಮಪ್ಪಯ್ಯ ಕಾಳಿ ನಾಯರ್‌ನಿಗೆ ಹಸ್ತಾಂತರಿಸಿದ. ಅದನ್ನು ತಂದು ಇರವಿಕುಟ್ಟಿಯ ಮುಂಡಕ್ಕೆ ಜೋಡಿಸಿ ಸಂತಸಪಡಿಸಿದ. ಮಹಾರಾಜ ಇರವಿಕುಟ್ಟಿಯ ಕುಟುಂಬಕ್ಕೆ ಉಂಬಳಿ ಹಾಕಿಸಿ ರಾಜಮುದ್ರೆಯೊಂದಿಗೆ ಶಾಸನವನ್ನು ಬರೆಯಿಸಿ ಕಯ್ಯಾರೆ ಅವರಿಗೆ ಹಸ್ತಾಂತರಿಸಿದ. ಜತೆಗೆ ಕುಟುಂಬದ ಪಾಲನೆ ಪೋಷಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡ. ಇರವಿಕುಟ್ಟಿಯ ಶವನನ್ನು ವಿಧಿವತ್ತಾಗಿ ಸಂಸ್ಕರಿಸಿದ. ಅತಿಶೂರನಾದ ಕಾಳಿಯ ನಾಯರ್‌ನು ಮಾಡಿದ ಕೆಲಸಗಳ ಪ್ರತಿಫಲವಾಗಿ ಅವನಿಗೂ ಸನ್ಮಾನವನ್ನು ಮಾಡಿ ಸಾಕಷ್ಟು ದಾನಗಳನ್ನು ಕೊಡಿಸಿದ.

– ಬಿ.ಬಿ. ಅನುವಾದ ಕೆ.ಕೆ.