ಇರುಳರ್ ಪಾಲ್ಘಾಟು ಜಿಲ್ಲೆಯ ಈಶಾನ್ಯಕ್ಕಿರುವ ನೀಲಗಿರಿ ಜೈವಾರಣ್ಯದ ಮಲೆಸಾಲುಗಳನ್ನು ಅಟ್ಟಪ್ಪಾಡಿ ಎಂದು ಕರೆಯುತ್ತಾರೆ. ಇಲ್ಲಿಯ ಪ್ರಧಾನ ಬುಡಕಟ್ಟುಗಳೆಂದರೆ ಇರುಳರು, ಮುಡುಗರು ಮತ್ತು ಕುರುಬರು. ಇವರಲ್ಲಿ ಜನಸಂಖ್ಯೆಯ ಆಧಾರದಲ್ಲಿ ಮೊದಲಿಗರು ಇರುಳರು. ನೀಲಗಿರಿ ಬೆಟ್ಟಗಳಲ್ಲಿ ಮತ್ತು ಕೊಯಂಬತ್ತೂರಿನ ಗುಡ್ಡಪ್ರದೇಶಗಳಲ್ಲಿಯೂ ಇವರು ವಾಸಿಸುತ್ತಾರೆ. ‘ಇರುಳು’ ಎಂಬ ಬುಡಕಟ್ಟು ಭಾಷೆಯನ್ನು ಮಾತನಾಡುವವರಾದುದರಿಂದ ಇವರನ್ನು ಇರುಳುರೆನ್ನುತ್ತಾರೆ ಎಂದು ಎ.ಎ.ಡಿ.ಲೂಯಿಸ್ ಅಭಿಪ್ರಾಯ ಪಡುತ್ತಾರೆ. ದೇವತೆಯೊಬ್ಬನಿಗೆ ಒಮ್ಮೆ ಜೇನು ನೊಣ ಕಡಿಯದ ಜನ ಸಮೂಹವೊಂದನ್ನು ಸೃಷ್ಟಿಸಬೇಕೆಂಬ ಬಯಕೆಯಾಯಿತಂತೆ. ತನ್ನ ಬೆವರಿನಿಂದಲೇ ಆ ಜನರನ್ನು ಸೃಷ್ಟಿಸಿ ಅವರಿಗೆ ಇರುಳರೆಂಬ ಹೆಸರಿಡಲಾಯಿತೆಂದು ಇರುಳರ ಸೃಷ್ಟಿಪುರಾಣ ಹೇಳುತ್ತದೆ. ಇಂದಿಗೂ ಜೇನುನೊಣಗಳು ತಮ್ಮನ್ನು ಕಡಿಯವೆಂದು ಇರುಳರು ನಂಬುತ್ತಾರೆ.

4

ಇರುಳರ ವಾಸಸ್ಥಳಗಳನ್ನು ಊರುಗಳೆಂದು ಕರೆಯುತ್ತಾರೆ. ಇವರ ಪರಂಪರಾಗತ ಮನೆಗಳನ್ನು ಬೆತ್ತ ಮತ್ತು ಮಣ್ಣು ಉಪಯೋಗಿಸಿ ಕಟ್ಟಲಾಗುತ್ತಿತ್ತು. ಮನೆಗಳ ಮಾಡನ್ನು ವನಗಳಿಂದ ತಂದ ಒಂದು ತೆಂಗಿನ ವಿಶೇಷ ಹುಲ್ಲಿನಿಂದ ಹೊದಿಸುತ್ತಿದ್ದರು. ಪ್ರತಿಯೊಂದು ಊರಿಗೂ ಅಧಿಕಾರಿಯಾಗಿ ಒಬ್ಬ ಊರು ಮೂಪ್ಪ (ಊರ ಹಿರಿಯ) ಇರುತ್ತಿದ್ದ. ಆದಿವಾಸಿ ಬುಡಕಟ್ಟುಗಳಲ್ಲಿ ಸಾಮಾಜಿಕ ನಿಯಂತ್ರಣದ ಉದ್ದೇಶದಿಂದ ಈ ವ್ಯವಸ್ಥೆಯನ್ನು (ಊರು ಮೂಪ್ಪನದು) ಮಾಡಿದ್ದರು. ಆದಿವಾಸಿಗಳಲ್ಲದವರಿಗೂ ರಾಜಕೀಯ ವ್ಯಕ್ತಿಗಳಿಗೂ ಊರಿಗೆ ಪ್ರವೇಶವು ಮೂಪ್ಪನ ಅನುಮತಿಯ ಬಳಿಕವೇ. ಸ್ವಜಾತಿಯವರನ್ನಲ್ಲದೆ ಅನ್ಯ ಜಾತಿಯವರನ್ನು ಮದುವೆಯಾದವರಿಗೂ ಊರ ಬಹಿಷ್ಕಾರ ಹಾಕುವ ಅಧಿಕಾರ ಕೂಡ ಊರ ಮೂಪ್ಪನದು. ಅವನ ಆಜ್ಞೆಗಳನ್ನು ಜಾರಿಗೊಳಿಸುವುದಕ್ಕೂ ದೂರುಗಳಿಗೆ ತೀರ್ಮಾನ ಹೇಳುವುದಕ್ಕೂ ಊರಿನೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೂ ಮೂಪ್ಪನಿಗೆ ಸಹಾಯಕನಾಗಿ ‘ಭಂಡಾರಿ’ ಇರುತ್ತಾರೆ. ಈತ ಆರ್ಥಿಕ ಹೊಣೆಯೂ ಉಳ್ಳವನು. ಊರು ಮೂಪ್ಪನ ದೂತನಂತೆ ಕಾರ್ಯನಿರ್ವಹಿಸುವವನು ‘ಕುರುತಲ’ ತಮ್ಮ ಊರಿನ ವಿಷಯಗಳನ್ನು ಬೇರೆ ಊರುಗಳಿಗೆ ತಿಳಿಸುವುದು, ಅಲ್ಲಿಯ ಸಂದೇಶ ಸುದ್ದಿಗಳನ್ನು ತಂದು ಮೂಪ್ಪನಿಗೆ ಮನದಟ್ಟು ಮಾಡುವುದು ಇತ್ಯಾದಿ ಇವನ ಕೆಲಸಗಳು. ಬೇಸಾಯಕ್ಕೆ ಬೇಕಾದ ಕಾಡುಗಳನ್ನು ಕಂಡುಹಿಡಿಯುವುದು, ಬೀಜ ಬಿತ್ತುವುದು, ಕೊಯ್ಲು ಮಾಡುವುದು ಮುಂತಾದ ಬೇಸಾಯ ಸಂಬಂಧಿ ವಿಷಯಗಳ ಉಸ್ತುವಾರಿ ನೋಡಕೊಳ್ಳುವ ಕರ್ತವ್ಯ ‘ಮಣ್ಣುಕಾರ’ ನದು. ಊರಲ್ಲಿ ಉದ್ಭವಿಸುವ ಯಾವುದೇ ಸಮಸ್ಯೆಗಳಿಗೆ ಅಂತಿಮ ಪರಿಹಾರ ಹೇಳುವವನು ಮೂಪ್ಪನೇ. ಹೀಗೆ ಊರು ಮೂಪ್ಪ, ಭಂಡಾರಿ, ಕುರುತಲ, ಮಣ್ಣುಕಾರ ಮುಂತಾದ ಸ್ಥಾನಗಳನ್ನು ವಹಿಸುವವರು ಸೇರಿ ಇರುಳ ಸಮಾಜವನ್ನು ಮುನ್ನಡೆಸುತ್ತಾರೆ.

ಕಾಡುಗಳನ್ನು ಕಡಿದು, ಸುಟ್ಟು ಕುಮರಿ ಬೇಸಾಯ ಮಾಡುವ ಹಿಂದಿನ ಕಾಲದ ಪದ್ಧತಿಯನ್ನು ಇರುಳರೂ ಅನುಸರಿಸಿದ್ದರು. ಇಂಥ ಕೃಷಿ ಸ್ಥಳವನ್ನು ಇವರು ‘ಕೊತ್ತುಕಾಡ್'(ಕಾಡು ಕಡಿದದ್ದು) ಅಥವಾ ‘ಪಂಚಕಾಡ್’ ಎಂದು ಕರೆಯುತ್ತಿದ್ದರು. ರಾಗಿ, ಸಾಮೆ, ಅವರೆ, ತೊಗರಿ, ಹರಿಚೆ,ಸಾಸಿವೆ ಮುಂತಾದವುಗಳನ್ನು ಇವರು ಬಹಳ ಹಿಂದಿನಿಂದಲೇ ಕೃಷಿ ಮಾಡುತ್ತಿದ್ದರು. ಈಗ ಸರಕಾರದಿಂದ ಅಭಿವೃದ್ಧಿ ಯೋಜನೆಗಳ ಅಂಗವಾಗಿ ಸಿಗುವ ಕೋಳಿ, ಆಡು ಮುಂತಾದವನ್ನು ಸಾಕಲು ಆರಂಭಿಸಿದ್ದಾರೆ. ಇರುಳರು ಮಂಗಳವಾರ, ಶನಿವಾರಗಳಲ್ಲಿ ಸಾಮಾನ್ಯವಾಗಿ ಕೃಷಿ ಕೆಲಸಗಳನ್ನು ಮಾಡುವುದಿಲ್ಲ. ಇವರಿಗೆ ರಾಗಿಯಿಂದ ತಯಾರು ಮಾಡುವ ‘ರಾಗಿಪುಟ್ಟು’ ಪ್ರಧಾನ ಆಹಾರವಾಗಿದೆ.

ಅಟ್ಟಪ್ಪಾಡಿಯ ಅತ್ಯಂತ ಎತ್ತರದ ಮೇಲೆ ‘ಮಲ್ಲೀಶ್ವರ ಮುಟ್ಟಿ’ಯ್ನನು ಇರುಳರು ಆರಾಧಿಸುತ್ತಾರೆ. ಇದಲ್ಲದೆ ಮಾರಿಯಮ್ಮ, ಕಾಳಿಯಮ್ಮ, ವೈರಮ್ಮ, ಮುಂತಾದ ದೇವತೆಗಳನ್ನೂ, ಇವರು ಆರಾಧಿಸುತ್ತಾರೆ. ತಮಿಳುನಾಡಿನ ಮೆಟ್ಟುಪಾಲಯಂ ಮತ್ತು ಕೊಯಂಬತ್ತೂರುಗಳ ನಡುವೆ ಇರುವ ‘ಕಾರಮೇಡ್’ ದೇವಾಳಯ ಇರುಳರ ಇನ್ನೊಂದು ಪ್ರಧಾನ ಆರಾಧನ ಕೇಂದ್ರವಾಗಿದೆ. ಶುಕ್ರ, ಶನಿವಾರಗಳಲ್ಲಿ ಇರುಳರು ಪೂಜೆ ನಡೆಸುತ್ತಾರೆ. ಮರಗಳ ಕೆಳಗೆ ಕಲ್ಲುಗಳನ್ನು ಪೇರಿಸಿಟ್ಟು ಕುಲದೈವ, ಮಲೆದೈವ ಸಂಕಲ್ಪಗಳನ್ನು ಇರುಳರು ಬೆಳೆಸಿಕೊಂಡಿದ್ದಾರೆ. ಸಿಡುಬು ಮುಂತಾದ ದೇವತೆಯಾದ ಮಾರಿಯಮ್ಮನನ್ನು ಇವರು ಪ್ರತ್ಯೇಕವಾಗಿ ಆರಾಧಿಸುತ್ತಾರೆ.

ಹುಡುಗಿ ಋತುಮತಿಯಾಗುವುದನ್ನು ಇವರು ‘ಏಯಸ್‌ಕ್‌ವಂದಾ’ ಎಂಬ ಹೆಸರಿಂದ ಕರೆಯುತ್ತಾರೆ. ಮುಟ್ಟಾದ ಹುಡುಗಿಯನ್ನು ಪ್ರತ್ಯೇಕ ಗುಡಿಸಲು ಕಟ್ಟಿ ಏಳು ದಿನಗಳ ಪರ್ಯಂತ ಅದರೊಳಗೆ ಕೂರಿಸುತ್ತಾರೆ. ಏಳನೆಯ ದಿವಸ ಸ್ನಾನಮಾಡಿಸಿ ಶೂಚಿರ್ಭೂತಳನ್ನಾಗಿಸಿ ಮನೆಯೊಳಗೆ ಸೇರಿಸುತ್ತಾರೆ. ಮುಟ್ಟಿನ ಮುದುವೆಯ ರಾತ್ರಿ ‘ಆಟ’ ಇರುತ್ತದೆ. ಸ್ತ್ರೀ ಪುರುಷ ಭೇದವಿಲ್ಲದೆ ಎಲ್ಲರೂ ಇದರಲ್ಲಿ ಭಾಗವಹಿಸುತ್ತಾರೆ.

ಹೆಣ್ಣನ್ನು ಕೊಂಡುಕೊಳ್ಳುವುದು, ಸೇವರೂಪ ವಿವಾಹ. ಅದಲು ಬದಲು ಮಾಡುವುದು, ಬಲಾತ್ಕಾರವಾಗಿ ಎತ್ತಿಕೊಂಡುಯ್ಯುವುದು, ಓಡಿಸಿಕೊಂಡು ಹೋಗುವುದು – ಹೀಗೆ ಇರುಳರಲ್ಲಿ ಮದುವೆಯ ವಿಧಾನಗಳಿವೆ. ಬುಡಕಟ್ಟುಗಳಲ್ಲಿ ಹಣ ನೀಡಿ ಹೆಣ್ಣನ್ನು ಮದುವೆಯಾಗುವ ಕ್ರಮವಿದೆ. ಇರುಳರು ಹೀಗೆ ನೀಡುವ ಹಣವನ್ನು ‘ಪೆರಿಯ ಪಣ’ ಎನ್ನುತ್ತಾರೆ. ಹುಡುಗಿಯ ಕುರಿತು ವಿವರಗಳು ದೊರೆತಾಗ ಮದುವೆಯಾಗಲಿರುವ ಹುಡುಗ, ಅವನ ತಂದೆ ತಾಯಿಗಳು, ಊರು ಮೂಪ್ಪ, ಕರಟ್ಟಿ, ಕುಪ್ಲಯನ್, ಅರುಮೂಪ್ಪ್, ಕುರುನಾಗ ಇತ್ಯಾದಿ ‘ಬಿಳಿ’ (ಗೋತ್ರ)ಗಳಿಗೆ ಸೇರಿದ ಒಬ್ಬೊಬ್ಬ ಪ್ರತಿನಿಧಿ ಹುಡುಗಿಯ ಮನೆಗೆ ಬರುತ್ತಾರೆ. ಎರಡು ದಿನ ಅವರು ಅಲ್ಲಿದ್ದು ಹುಡುಗಿ ಒಪ್ಪಿಗೆಯಾದರೆ ಇನ್ನಷ್ಟು ಗಮನ ಹರಿಸುವುದಕ್ಕಾಗಿ ಹುಡುಗನನ್ನು ಅಲ್ಲೆ ಉಳಿಸಿ ಹಿಂದಿರುಗುತ್ತಾರೆ. ಅವನಿಗೂ ಹುಡುಗಿ ಇಷ್ಟವಾದರೆ ಬಂದು ಮನೆಯವರಿಗೆ ವಿಷಯ ತಿಳಿಸಿದ ಬಳಿಕ ಮದುವೆ ನಡೆಯುತ್ತದೆ. ಹಿಂದಿನ ಕಾಲದ ಸೇವಾರೂಪ ವಿವಾಹದಲ್ಲಿ ಮದುವೆಯಾಗಲಿರುವ ಹುಡುಗನಿಂದ ಬೇಸಾಯದ ಕೆಲಸಗಳು, ಸೌದೆ ಒಡೆಯುವುದು ಮುಂತಾದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಹುಡುಗ ಮಾಡುವ ಈ ಕೆಲಸಗಳೆಲ್ಲ ತೃಪ್ತಿಯುಂಟಾದರೆ ಮಾತ್ರ ಮದುವೆ ನಡೆಯುತ್ತಿತ್ತು. ಒಬ್ಬಳನ್ನು ಕೊಟ್ಟು ಇನ್ನೊಬ್ಬಳನ್ನು ತರುವ ಮದುವೆಗೆ ಮಾಟ್ಟ್‌ಕಲ್ಯಾಣ (ಅದಲು ಬದಲಿ ವಿವಾಹ) ಎನ್ನುತ್ತಾರೆ. ಹೀಗೆ ಸಹೋದರಿಯರನ್ನು ಪರಸ್ಪರ ಬದಲಾಯಿಸಿಕೊಂಡು ಮದುವೆಯಾಗಲು ಕ್ರಮ ಇರುಳರಲ್ಲಿ ಪ್ರಚಾರದಲ್ಲಿತ್ತು.

ಇವರಲ್ಲಿ ಮುಖ್ಯವಾದ ಏಳು ‘ಬಳಿ'(ಗೋತ್ರ)ಗಳಿವೆ. ಕುಪ್ಲಿಯನ್, ಸಂಬರ್, ಕುರುನಾಗ, ವೆಳ್ಳೇಕ, ಕರಟ್ಟಿ, ದೇವನ, ಅರುಮೂಪ್ಪ್ – ಇವು ಆ ಏಳು ಬಳಿಗಳು. ಒಂದೇ ಬಳಿಗೆ ಸೇರಿದವರಲ್ಲಿ ಪರಸ್ಪರ ವಿವಾಹ ನಿಷಿದ್ಧವಾಗಿದೆ. ಇರುಳರ ತಾಳಿಯನ್ನು ಮತ್ತು ಮುತ್ತು ನಾಣ್ಯಗಳನ್ನು ಪೋಣಿಸಿ ತಯಾರಿಸಲಾಗುತ್ತದೆ.

ಉತ್ತರ ಕ್ರಿಯಾದಿ ಕರ್ಮಗಳನ್ನು ಊರು ಮೂಪ್ಪನೇ ನಿರ್ವಹಿಸುತ್ತಾನೆ. ಬಿದಿರಿನಿಂದ ಚಟ್ಟವನ್ನು ತಯಾರಿಸಲಾಗುತ್ತದೆ. ಅದನ್ನು ಸಪ್ರ ಎಂದೂ ಪಾಡ ಎಂದೂ ಕರೆಯುತ್ತಾರೆ. ಪ್ರತಿಯೊಂದು ‘ಊರಿ’ಗೂ ಅವರದೇ ಪ್ರತ್ಯೇಕ ಶ್ಮಶಾನಗಳಿವೆ. ಮೃತದೇಹವನ್ನು ಮಲಗಿಸಿದ ಸಪ್ರದ ಸುತ್ತ ಸ್ತ್ರೀಪುರುಷರು ಬಂದು ನೆರೆಯುತ್ತಾರೆ. ಪೊರೆ, ದವಿಲು, ಜಾಲ್ರ ಎಂಬ ವಾದ್ಯಗಳ ಹಿನ್ನೆಲೆಯೊಂದಿಗೆ ಸ್ತ್ರೀಯರು ಶವದ ಸುತ್ತಲೂ ನರ್ತಿಸುತ್ತಾರೆ. ಪುರುಷರು ತಾಳ ಬಡಿಯುತ್ತಾರೆ. ಮರಣಾನಂತರದ ಕಾರ್ಯಕ್ರಮಗಳನ್ನು ‘ಕಂಜಿ ಚೀರ್’ ಎನ್ನುತ್ತಾರೆ. ಕಂಜಿಚೀರ್‌ಗೆ ನಿಶ್ಚಿತ ದಿನ ಎಂದಿಲ್ಲ. ಅವರವರ ಆರ್ಥಿ ಸಾಮರ್ಥ್ಯಕ್ಕೆ ಅನುಸಾರವಾಗಿ ಇದು ವರ್ಷಗಳ ಬಳಿಕ ನಡೆಯುವುದೂ ಇದೆ. ಮೃತನ ಅಳಿಯಂದಿರು ಆಡನ್ನು ಕೊಯ್ದು ಪದಾರ್ಥಮಾಡಿ ಬಂದವರಿಗೆಲ್ಲ ಔತಣ ನೀಡುವುದು ಇದರ ಕೊನೆಯ ಕಾರ್ಯಕ್ರಮ. ಬೇಸಗೆಯಲ್ಲಿ ಊರು ಮೂಪನ ನೇತೃತ್ವದಲ್ಲಿ ಸೋಮ ಮಂಗಳ ಬುಧವಾರಗಳಲ್ಲಿ ಕಂಜಿಚೀರ್ ನಡೆಸಲಾಗುತ್ತದೆ. ಕಂಜಿ ಚೀರ್‌ನ ದಿನವೂ ‘ಆಟ’ ನಡೆಸುವುದಿದೆ. ಕಂಜಿಚೀರೊಂದಕ್ಕೆ ಸಾಧಾರಣವಾಗಿ ಐದು ಸಾವಿರ ರೂಪಾಯಿಯಷ್ಟೂ ಖರ್ಚು ಬೇಕಾಗಬಹುದೆಂದು ಇರುಳರು ಹೇಳುತ್ತಾರೆ.

ನಿತ್ಯ ಬದುಕಿಗೆ ಸಂಬಂಧಿಸಿದ ಹುಟ್ಟು, ಸಾವು, ಮುಟ್ಟಿನ ಮದುವೆ, ಮದುವೆ, ಬೀಜ ಬಿತ್ತುವುದು, ಕೊಯ್ಲು ಉತ್ಸವಾಚರಣೆಗಳು ಮುಂತಾದ ಸಂದರ್ಭಗಳಲ್ಲಿ ವಿವಿಧ ತಾಳಮೇಳಗಳೊಂದಿಗೆ ಹಲವು ಬಗೆಯ ಕುಣಿತಗಳನ್ನು ಪ್ರದರ್ಶಿಸುತ್ತಾರೆ. ಕುಮ್ಮುಪೋರೆ, ಆಟ್ಟಪೋರೆ, ಊಟ್ಟಪೋರೆ ಎಂಬ ಮೂರು ರೀತಿಯ ಕುಣಿತಗಳು ಇರುಳರಲ್ಲಿ ಮುಖ್ಯವಾದವುಗಳು. ಮದುವೆಯ ಸಂದರ್ಭದಲ್ಲಿ ವರನನ್ನೂ ವಧುವನ್ನು ಗೇಲಿಮಾಡುವಂತಿರುವ ಹಾಡುಗಳು, ಸಾವು ಕಂಚಿಚೀರ್‌ನಂಥ ಸಂದರ್ಭಗಳಲ್ಲಿ ಮನಸ್ಸಿಗೆ ಮುದನೀಡುವ ಹಾಡುಗಳು, ಬೀಜಬಿತ್ತನೆ ಕೊಯ್ಲು ಮುಂತಾದ ಸಂದರ್ಭಗಳಲ್ಲಿ ಬೇಸಾಯದ ಬಗೆಗೆ ಧಾನ್ಯಗಳ ಬಗೆಗೆ, ಮಣ್ಣಿನ ಬಗೆಗೆ, ವರ್ಣನೆ ಮಾಡುವ ಹಾಡುಗಳು ಇದರಲ್ಲಿವೆ.

– ಪಿ.ವಿ.ಎಂ. ಅನುವಾದ ಕೆ.ಕೆ.

ಇಸಕ್ಕಿಯಮ್ಮನ್ ವಳಿಪಾಡು ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಇರುವ ತಿರುಬನೆಲ್ವೇಲಿ ತೂತ್ತುಕುಡಿ, ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಬೀದಿ ಬೀದಿಗಳಲ್ಲಿ ಒಂದು ದೇವತಾರಾಧನೆ ರೂಢಿಯಲ್ಲಿದೆ. ಅದೆಂದರೆ ಇಸಕ್ಕಿಯಮ್ಮನ ಪೂಜೆ. ಈಕೆ ಮಹಾನ್ ಶಕ್ತಿಶಾಲಿ ಹಾಗೂ ದುಷ್ಟದೇವತೆ ಎಂದು ಕರೆಯುವುದರಿಂದ ಹಲವು ಭಕ್ತರು ಈ ಪೂಜೆ ಕೈಗೊಳ್ಳಲು ಕಾರಣ. ಈಕೆಗೆ ದೇವತೆಯ ಸ್ಥಾನ ದೊರೆತಿರುವಂತೆ, ಈಕೆಯನ್ನು ದೆವ್ವ ಎಂದು ಜನರು ನಂಬುತ್ತಾರೆ. ಈ ಇಸಕ್ಕಿಯಮ್ಮನಿಗೆ ಇಸಕ್ಕಿ, ನೀಲಿ ಎಂಬ ಹೆಸರುಗಳೂ ಇವೆ. ಇಸಕ್ಕಿಯಮ್ಮನ ಕತೆಯನ್ನು ಪಳ್ಳೈಯನೂರುನೀಲಿ ಕತೆಯೊಡನೆ ಹೋಲಿಕೆ ಮಾಡುವುದಿದೆ. ಇಸಕ್ಕಿಯಮ್ಮನನ್ನು ಜನರು ಆರ್ಯಾಂಗನೈ, ದುರ್ಗೆಯ ಪ್ರತಿರೂಪದ ದೇವತೆ ಎಂದು ಸಹ ನಂಬುತ್ತಾರೆ. ಇಷ್ಟೇ ಅಲ್ಲದೆ ಕುತ್ತುಪಿರ ಇಸಕ್ಕಿ, ಮಾವಿಸಕ್ಕಿ, ಮುಪ್ಪಂದಲ್ ಇಸಕ್ಕಿ ಮೊದಲಾದ ಇಸಕ್ಕಿಗಳು ತಮಿಳುನಾಡಿನ ವಿವಿಧ ಭಾಗಗಳಲ್ಲಿ ಪೂಜೆಗೆ ಪಾತ್ರವಾಗಿರುವ ದೇವತೆಗಳಾಗಿವೆ.

ಬೀದಿ ಬೀದಿಯಲ್ಲಿ ಇರುವ ಇಸಕ್ಕಿಯಮ್ಮನ ದೇವಾಲಯಗಳು ಸಾಮಾನ್ಯವಾಗಿ ಗರಿಗಳಿಂದ ಕಟ್ಟಿದವಾಗಿರುತ್ತದೆ. ಇತ್ತೀಚೆಗೆ ಆಧುನಿಕ ಪರಿವರ್ತನೆಗೆ ಅನುಗುಣವಾಗಿ ದೇವಾಲಯಗಳು ಗುಡಿಸಲಿನಿಂದ ಕಟ್ಟಡದ ರೂಪು ಪಡೆದುಕೊಳ್ಳುತ್ತಿದೆ. ಈ ನವೀನ ದೇವಾಲಯಗಳು ಹೆಂಚು, ಸಿಮೆಂಟ್, ಆಸ್ಟೆಸ್ಟಾಸ್ ಬಳಕೆಯಿಂದ ನಿರ್ಮಾಣವಾಗಿರುವುದನ್ನು ಕಾಣಬಹುದಾಗಿದೆ. ಈ ದೇವಾಲಯಗಳ ಗಾತ್ರ ಸಹಯ ಬೃಹತ್ತಾಗುತ್ತಿರುವುದು ಮತ್ತೊಂದು ಮುಖ್ಯ ಅಂಶ. ಕೆಲವು ದೇವಾಲಯಗಳು ಗೋಪುರಗಳನ್ನು ಸಹ ಹೊಂದಿವೆ. ಈ ದೇವತೆಯ ವಿಗ್ರಹ ಹೆಂಚುಗಳಿಂದ ಆಗಿರುತ್ತದೆ. ಅಲ್ಲಲ್ಲಿ ಕಲ್ಲಿನ ವಿಗ್ರಹಗಳೂ ಇವೆ. ಆದರೆ ಈ ಕಲ್ಲಿನ ವಿಗ್ರಹದ ದೇವಾಲಯಗಳಲ್ಲೂ ಹಬ್ಬ – ಹರಿದಿನ ಮುಂತಾದ ವಿಶಿಷ್ಟ ಸಂದರ್ಭದಲ್ಲಿ ಸುಟ್ಟ ಹೆಂಚುಗಳಿಂದ ಮಾಡಿದ ಇಸಕ್ಕಿಯಮ್ಮನ ವಿಗ್ರಹವನ್ನು ತಂದು ಪೂಜಿಸುತ್ತಾರೆ.

ಈ ವಿಗ್ರಹದ ಆಕೃತಿ ಭಯಾನಕವಾಗಿ ಕಾಣುತ್ತದೆ. ಆಕೆ ಒಂದು ಕೈಯ್ಯನ್ನು ಸೊಂಟದ ಮೇಲೆ ಇಟ್ಟುಕೊಂಡು ಮತ್ತೊಂದು ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡಿರುತ್ತಾಳೆ. ಅದರ ಜೊತೆಗೆ ಬಾಯಲ್ಲಿ ಮಗುವೊಂದನ್ನು ಕಚ್ಚಿ, ಮತ್ತೊಂದು ಮಗುವನ್ನು ತನ್ನ ಕಾಲಿನಿಂದ ತುಳಿಯುತ್ತಿರುವಂತೆ ಇದ್ದು ಅತ್ಯಂತ ಭಯಾನಕವಾಗಿದೆ. ಇಸಕ್ಕಿಯಮ್ಮನ ವಿಗ್ರಹದಲ್ಲಿ ಮುಖ, ಕತ್ತು, ಕೈ, ಕಾಲು ಮೊದಲಾದ ಭಾಗಗಳಿ ಅರಿಸಿನ ಬಣ್ಣದಿಂದ ಕೂಡಿದ್ದು ಕತ್ತಿನಿಂದ ಸೊಂಟದವರೆಗೂ ಹಸಿರುಬಣ್ಣ ಹಾಗೂ ಸೊಂಟದಿಂದ ಕಾಲಿನವರೆಗೂ ಕೆಂಪುಬಣ್ಣವನ್ನು ಲೇಪಿಸಿರುತ್ತಾರೆ. ಅವಳ ಜಡೆ ಅತ್ಯಂತ ನೀಳ. ಅದಕ್ಕೆ ಹಸಿರು, ಗುಲಾಬಿ ಬಣ್ಣ, ಕಪ್ಪು, ಬಿಳಿಪು ಮೊದಲಾದ ಬಣ್ಣಗಳನ್ನು ಬಳಿದು ಅಲಂಕರಿಸುತ್ತಾರೆ. ಆಭರಣಗಳನ್ನು ಚಿನ್ನದ ಬಣ್ಣ ಮತ್ತು ಬೆಳ್ಳಿ ಬಣ್ಣದ ಪಟ್ಟಿಯಿಂದ ಅಲಂಕರಿಸುತ್ತಾರೆ.

5

ಕೊಡೈ ಹಬ್ಬದ ಸಂದರ್ಭದಲ್ಲಿ ನಿರ್ಮಾಣವಾಗುತ್ತಿದ್ದ ಇಸಕ್ಕಿಯಮ್ಮನ ವಿಗ್ರಹಗಳನ್ನು ವಿಶೇಷವಾಗಿ ಕುಂಬಾರರು ಮಾಡುತ್ತಿದ್ದರು. ಆಗ ಅವರು ವ್ರತವನ್ನು ಕೈಗೊಂಡು ಶುದ್ಧ ಮನಸ್ಸಿನಿಂದ ವಿಗ್ರರಚನೆಯಲ್ಲಿ ತೊಡಗುತ್ತಿದ್ದರು. ಇತ್ತೀಚೆಗೆ ಬೇರೆ ಬೇರೆ ಜಾತಿಯ ಜನರೂ ಇಸಕ್ಕಿಯಮ್ಮನ ವಿಗ್ರಹ ನಿರ್ಮಿಸುವುದನ್ನು ಕಾಣಬಹುದಾಗಿದೆ. ವಿಗ್ರಹ ನಿರ್ಮಾಣ ನಯಗಾರಿಕೆಯಿಂದ ಕೂಡಿರುತ್ತಿತ್ತು. ಇಸಕ್ಕಿಯಮ್ಮನ ಕಣ್ಣು ಗುಡ್ಡೆಗಳ ಮೇಲಿನ ರೆಪ್ಪೆ ಸಹ ಕಾಣುತ್ತಿದ್ದುದು ಇದಕ್ಕೆ ಸಾಕ್ಷಿ. ಈ ದೇವಾಲಯಗಳಲ್ಲಿ ‘ಪೇಚ್ಚಿಯಮ್ಮನ್’ ಮತ್ತು ಬ್ರಹ್ಮಶಕ್ತಿಗಳು ಇರುತ್ತದೆ. ಹೊರಗೆ ದ್ವಾರಪಾಲಕರಾಗಿ ‘ಸುಡಲೈಮಾಡ’ ‘ಮುಂಡನ್ ಸ್ವಾಮಿ’ಯೂ ಇರುತ್ತಾರೆ. ಇದೇ ದೇವಾಲಯದಲ್ಲಿ ೨೦ ಕ್ಕೂ ಮೇಲ್ಪಟ್ಟು ಪರಿವಾರದ ದೇವರುಗಳು ಇರುತ್ತಾರೆ.

ಸಾಮಾನ್ಯವಾಗಿ ಶುಕ್ರವಾರ ಮತ್ತು ಮಂಗಳವಾರಗಳಲ್ಲಿ ಇಸಕ್ಕಿಯಮ್ಮನಿಗೆ ವಿಶೇಷ ಪೂಜೆ ನಡೆಯುತ್ತದೆ. ಆದರೆ ಕೆಲವು ದೇವಾಲಯಗಳಲ್ಲಿ ಕಾಣಿಕೆ ದೊರೆಯುವ ದಿನಗಳು ಮಾತ್ರ ಇಸಕ್ಕಿಯಮ್ಮನ ವಿಶೇಷ ಪೂಜೆ ನಡೆಯುತ್ತದೆ. ರಸ್ತೆ ಬದಿಯ ಆಲದ ಮರ ಮತ್ತು ಬೇವಿನ ಮರದ ಕೆಳಗೆ ಇರುವ ಇಸಕ್ಕಿಯಮ್ಮನನ್ನು ದಾರಿಹೋಕರು ಪೂಜಿಸಿ ಕಾಣಿಕೆ ನೀಡುವುದು ರೂಢಿಯಲ್ಲಿದೆ.

ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಆಚರಣೆಯಲ್ಲಿರುವ ಗ್ರಾಮದೇವತೆಗಳ ಆರಾಧನೆ ಅಥವಾ ಹಬ್ಬವನ್ನು ‘ಕೊಡೈವಿಳಾ’ ಎನ್ನುತ್ತಾರೆ. ಇಸಕ್ಕಿಯಮ್ಮ ದೇವಾಲಯದಲ್ಲಿ ಒಂದು ವರ್ಷಕ್ಕೆ ಒಂದು ಸಲ ಆರಾಧನೆ ನಡೆಯುತ್ತದೆ. ಕೆಲವು ಸಂದರ್ಭಗಳಲ್ಲಿ ಹಲವು ವರ್ಷಗಳು ಕಳೆದರೂ ‘ಕೂಡೈವಿಳಾ’ ಹಬ್ಬವನ್ನು ಆಚರಿಸದೆ ಇದ್ದುದು ತಿಳಿದುಬರುತದೆ. ‘ವಿಲ್ಲಿಸೈ’, ‘ಕುಣಿಯನಾಟಂ’, ‘ನೈಯ್ಯಾಂಡಿ ಮೇಳಂ’ ಇವು ಮೂರು ಇಸಕ್ಕಿಯಮ್ಮನ ಉತ್ಸವದಲ್ಲಿ ಪ್ರಧಾನವಾದ ಜನಪದ ಪ್ರದರ್ಶನ ಕಲೆಗಳು. ಇಂತಹ ವಿಶೇಷ ಸಂದರ್ಭಗಳಲ್ಲಿ ಹೆಣ್ಣಿನ ಮೈಮೇಲೆ ದೇವರು ಬರುವುದು ಎಂಬ ನಂಬಿಕೆ ಇದೆ. ಆ ವೇಳೆ ಆಡು, ಕುರಿ, ಕೋಳಿಯನ್ನು ದೇವತೆಗೆ ಬಲಿ ನೀಡುವುದು ಆಚರಣೆಯ ಒಂದು ಭಾಗವಾಗಿದೆ. ವಿಶೇಷ ಅಂಶವೆಂದರೆ ಕೊಡೈಹಬ್ಬದಲ್ಲಿ ನಡುರಾತ್ರಿಯ ವೇಳೆ ಕಪ್ಪೆಮರಿಯನ್ನು ಖಡ್ಗದಿಂದ ತುಂಡರಿಸಿ ಎದೆ ಭಾಗದ ಶ್ವಾಸಕೋಶವನ್ನು ಹೊರ ತೆಗೆದು ಇಸಕ್ಕಿಯಮ್ಮನಿಗೆ ನೈವೇದ್ಯಮಾಡುವುದು ಮತ್ತು ಕಣಿಯಾನ (ಹಾಡಿನರ್ತಿಸುವವನು) ತನ್ನ ಕೈ ಕತ್ತರಿಸಿಕೊಳ್ಳುವ ದೃಶ್ಯ ಭಯಂಕರವಾಗಿರುತ್ತದೆ.

ಇಸಕ್ಕಿಯಮ್ಮನ ಪಿಳ್ಳೆ(ವೇಳಾವರ), ಆಚಾರಿ, ದೇವರ್, ನಾಟರ್, ಪಂಡಾರಮ್, ಯಾದವರ್, ರೆಡ್ಡಿಯಾರ್, ವಣ್ಣಾರ್, ವೇಳಾಳರ್ (ಕುಂಬಾರ), ಪಳ್ಳರ್, ಪರೈಯರ್ ಎಂಬ ಹಲವು ಸಾಮಾಜಿಕವರ್ಗದವರು ಕುಲದೇವತೆಯನ್ನಾಗಿ ಹಾಗೂ ಊರ ದೇವತೆಯಾಗಿ ಸ್ವೀಕರಿಸಿದ್ದು, ತಾವು ಊರಿನಿಂದ ಊರಿಗೆ ವಲಸೆ ಹೋದರೂ ತಮ್ಮೊಂದಿಗೆ ಇಸಕ್ಕಿಯಮ್ಮನ ವಿಗ್ರಹ ಕೊಂಡೊಯ್ದು ಅಲ್ಲಿ ಸ್ಥಾಪಿಸಿ, ಪೂಜಿಸಿರುವ ವಿಚಾರ ಕ್ಷೇತ್ರಕಾರ್ಯದ ವೇಳೆ ದೊರೆತಿದೆ.

ಇಸಕ್ಕಿಯಮ್ಮನ ಆರಾಧನೆಯಿಂದ ರೋಗ – ರುಜಿನ ನಿವಾರಣೆ ಆಗುತ್ತದೆಂದೂ ಬಂಜೆಯರಿಗೆ ಮಕ್ಕಾಳಾಗುತ್ತವೆಂಬ ನಂಬಿಕೆಯೂ ಇದೆ. ತಾಯಿತನ ಪಡೆಯುವುದಕ್ಕಾಗಿ ಜೋಳಿಗೆಯಲ್ಲಿರುವ ಮಗು, ತೆವಳುವಮಗು ಮುಂತಾದ ಬೊಂಬೆಗಳನ್ನು ಸೀರೆಯಲ್ಲಿ ಕಟ್ಟಿ ದೇವಾಲಯಕ್ಕೆ ಹರಕೆ ಹೊತ್ತುಕೊಳ್ಳುವುದರಿಂದ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ.

– ಎಂ.ಸಿ. ಅನುವಾದ ಆರ್. ಎಸ್.