ಈರೋಬಿ ಜನಪದರು ತಮ್ಮ ಜೀವನದಲ್ಲಿ ಕೌಟುಂಬಿಕ ಸಮಸ್ಯೆ, ಸಾಮಾಜಿಕ ಜಟಿಲತೆಗಳ ಕಾರಣದಿಂದ ತಮ್ಮ ಬದುಕನ್ನು ಅಂತ್ಯಗೊಳಿಸಿಕೊಂಡ ಹೇರಳ ಉದಾಹರಣೆಗಳಿವೆ. ಅವುಗಳಲ್ಲಿ ಸಹಗಮನದ ಹೆಸರಿನಲ್ಲಿ ಪ್ರಾಣತ್ಯಾಗ ಮಾಡಿಕೊಂಡವರ ಸಂಖ್ಯೆಯೂ ಅಪಾರ. ಹೀಗೆ ಪತಿಯ ಮರಣದ ಸಂದರ್ಭದಲ್ಲಿ ತಾವೂ ಬಲಿಯಾದ ಸತಿಯರ ಬಗೆಗೂ ಜಾನಪದ ಹಾಡುಗಳು ಹುಟ್ಟಿಕೊಂಡಿವೆ. ಅಂತಹ ಒಬ್ಬ ಹೆಣ್ಣು ಈರೋಬಿ. ಈಕೆ ತನ್ನ ಪತಿ ಮರಣ ಹೊಂದಿದನೆಂದು ತಿಳಿದ ಕೂಡಲೇ ಸತಿಯಾಗಲು ನಿರ್ಧರಿಸುತ್ತಾಳೆ.

ಈರೋಬಿಯ ಗಂಡ ಶೆಟ್ಟಿ ಶಂಕರಾಯ. ಇವರು ಘಟ್ಟ ಪ್ರಾಂತ್ಯದಲ್ಲಿ ವಾಸುತ್ತಿದ್ದಳು. ಘಟ್ಟದಿಂದ ಕೆಳಗಿಳಿದು ಹೋದ ಶಂಕರರಾಯ ಹುಲಿಯ ಬಾಯಿಗೆ ಆಹಾರವಾಗುತ್ತಾನೆ. ಬೆಳಗಾಗುತ್ತಿದ್ದಂತೆ ಆತ ಸತ್ತ ಸುದ್ಧಿ ಅವಳಿಗೆ ತಿಳಿಯುತ್ತದೆ. ಆದರೆ ಅದಕ್ಕೆ ಮುನ್ನವೇ ಅವಳಿಗೆ ಕಿವಿಯ ಒಲೆಯ ಮೇಲೆ ಯಮರಾಯನಿರುವಂತೆ ಕನಸು ಬೀಳುತ್ತದೆ. ಓಲೆ ಸುಮಂಗಲಿತನದ ಸಂಕೇತ. ಅದರ ಮೇಲೆ ಯಮ ಬಂದು ಕುಳಿತಿದ್ದಾನೆ. ಅಷ್ಟೇ ಅಲ್ಲ, ತನ್ನ ಗಂಡ ಮಲಗುವ ಮಂಚ ಹತ್ತಿ ಉರಿಯುವಂತೆ ಕನಸು ಬೀಳುತ್ತದೆ. ಎಚ್ಚರಗೊಂಡ ಅತ್ತೆಯ ಬಳಿ ತನ್ನ ಮನಸ್ಸಿನ ದುಗುಡವನ್ನು ಹೇಳಿಕೊಳ್ಳುತ್ತಾಳೆ. ಇವೆಲ್ಲವೂ ಮುಂದೆ ಅವಳಿಗೊದಗಲಿರುವ ದುರಂತರ ಮುನ್ಸೂಚನೆಗಳು. ಬೆಳಗಾಗುತ್ತಿದ್ದಂತೆ ಅವಳಿಗೆ ಶಂಕರರಾಯ ಸತ್ತ ಸುದ್ಧಿ ಮುಟ್ಟುತ್ತದೆ. ಆತ ಘಟ್ಟದಿಂದ ಕೆಳಗಿಳಿದು ಹೋಗಿದ್ದು ಕೂಡ ಹೆಂಡತಿಗಾಗಿಯೇ. ಬಾಣಂತಿಯಾಗಿರುವ ಅವಳಿಗೆ ಏನಾದರೂ ಉಡುಗೊರೆ ನೀಡಬೇಕೆಂದು ಯೋಚಿಸಿ, ಅವಳಿಗೆ ಚಿನ್ನದ ಹರಿವಾಣ ತರಲು ಹೋಗುತ್ತಾನೆ. ದಾರಿಯಲ್ಲಿ ಹುಲಿ ಅವನನ್ನು ಕೊಂದು ತಿಂದಿದೆ.

ಬಾಣಂತಿ ಈರೋಬಿ ಬಟ್ಟಲಲ್ಲುಣ್ಣು ತಾಳೆಂದು
ಘಟ್ಟದ ಕೆಳಗಲ ಹರಿವಾಣ ತರಲೋಗಿ
ಶೆಟ್ಟಿ ಶಂಕರರಾಯ ಮಡಿದಾನೆ

ಸತ್ತ ಸುದ್ಧಿ ಬಂತು ನೆತ್ತರದರಿವಿ ಬಂತು
ಕತ್ತಿ ಬಂತು ಅವನ ಗುರುತಿಗೆ

ಇದೆಲ್ಲವನ್ನೂ ಕಂಡ ಈರೋಬಿ ಪತಿಯೊಡನೆ ಕೊಂಡವೇರಲು ನಿರ್ಧರಿಸುತ್ತಾಳೆ. ತನ್ನ ಗಂಡ ಬಳಸುತ್ತಿದ್ದ ಒಂದೊಂದು ವಸ್ತುವನ್ನು ಕಂಡಾಗಲೂ ಅವಳ ದುಃಖ ಉಮ್ಮಳಿಸುತ್ತದೆ. ಗಂಡನಿಲ್ಲದ ಬದುಕು ಅವಳಿಗೆ ದುರ್ಭರ ಎನ್ನಿಸುತ್ತದೆ. ಅವಳ ತಂದೆ – ತಾಯಿಗಳು ಅವಳೀಗೆ ಬುದ್ಧಿ ಹೇಳುತ್ತಾರೆ. ಆದರೆ ಅವಳು ತನ್ನ ನಿರ್ಧಾರ ಬದಲಿಸುವುದಿಲ್ಲ.

ಗಂಡ ಸಾಯೋಕಿಂತ ಮುಂಡೆಯಾಗೋಕಿಂತ
ಕಂಡೋರಮನೆಯ ಕಸವಾಗಿ ಸಾಯೋಕಿಂತ
ಕೊಂಡವ ಹಾಯೋದೆ ಲೇಸು

ಎಂದು ಬಿಡುತ್ತಾಳೆ. ಸಡಗರದಿಂದ ಸಿಂಗಾರಮಾಡಿಕೊಂಡು ಗಂಡನೊಡನೆ ಚಿತೆಗೇರಿ ಪ್ರಾಣ ಬಿಡುತ್ತಾಳೆ. ಭಾರತೀಯ ನಾರಿಯರು ಹೀಗೆ ಪತಿಯ ಮರಣದ ಅನಂತರ ಪ್ರಾಣತ್ಯಾಗ ಮಾಡಿಕೊಂಡ ಅನೇಕ ಉದಾಹರಣೆಗಳು ನಮಗೆ ಸಿಗುತ್ತವೆ. ಆದರೆ ಹೆಂಡತಿಗಾಗಿ ಪ್ರಾಣ ಕಳೆದುಕೊಂಡ ಉದಾಹರಣೆ ‘ಕೆರೆಹಾರ’ ದಲ್ಲಿ ಬಿಟ್ಟರೆ ಮತ್ತೊಂದಿಲ್ಲ.

ತ್ರಿಪದಿ ರೂಪದಲ್ಲಿರುವ ‘ಈರೋಬಿ’ ಜನಪದ ಗೀತೆ ಘಟ್ಟ ಪ್ರದೇಶ ಹಾಗೂ ಮಲೆನಾಡು ಪ್ರಾಂತ್ಯದಲ್ಲಿ ಕಂಡು ಬರುತ್ತದೆ.

– ಟಿ.ಎಸ್.