ಉಪ್ಪ ಬೇಕೇನುಪ್ಪ ಆಟ ನಾಲ್ಕು ಕಂಬಗಳ ಹತ್ತಿರ ನಾಲ್ವರು ಮತ್ತು ಹೆಚ್ಚಿಗೆ ಐದನೆಯವನೊಬ್ಬ ಈ ಆಟಕ್ಕೆ ಬೇಕು. ಐದನೆಯವ(ಳು) ‘ಉಪ್ಪಬೇಕೇನುಪ್ಪ’ ಎಂದು ಒಬ್ಬರಿಂದೊಬ್ಬರಿಗೆ ಕೇಳುತ್ತ ಹೋಗುತ್ತಾನೆ. ಅವರು ಉತ್ತರವಾಗಿ ‘ಅಚ್ಚಿಮನಿ ಪಿಂಯ್’ ಎಂದು ಹೇಳಿ, ಮುಂದುಮುಂದು ಕಳಿಸುತ್ತಾರೆ. ಐದನೆಯವ ಹೀಗೆ ಮುಂದಮುಂದು ಹೋಗುತ್ತಲೇ ಅನುಕೂಲ ಸಮಯ ನೋಡಿಕೊಂಡು ಇಬ್ಬರು ಪರಸ್ಪರ ಕಂಬ ಬದಲಿಸುತ್ತಾರೆ. ಹೀಗೆ ಕಂಬ ಬದಲಿಸುವಾಗ ಐದನೆಯವ ಒಬ್ಬನನ್ನು ಮುಟ್ಟಿದರೆ, ಮುಟ್ಟಿಸಿಕೊಂಡವ ಸೋಲನ್ನು ಒಪ್ಪಿ, ತನ್ನ ಕಂಬವನ್ನು ಬಿಟ್ಟುಕೊಟ್ಟು ಐದನೆಯವನಾ(ಳಾ)ಗಿ ‘ಉಪ್ಪಬೇಕೇನುಪ್ಪ’ ಎಂದು ಕೇಳುತ್ತ ಮುಂದುಮುಂದು ಹೋಗುತ್ತಾನೆ. ಇದೇ ರೀತಿ ಆಟ ಮುಂದುವರಿಯುತ್ತದೆ.

– ಎಂ.ಎಂ.ಕೆ.

ಉಮ್ಮತ್ತಾಟ್ ಕೊಡಗಿನ ಜನಪದ ನೃತ್ಯ. ಪೌರಾಣಿಕ ಹಿನ್ನೆಲೆಯುಳ್ಳ ಸ್ತ್ರೀ ಪ್ರಧಾನ ಪಾರಂಪರಿಕ ನೃತ್ಯವಾದ ಉಮ್ಮತ್ತಾಟ್ ಅತ್ಯಂತ ಮೃದು ಹಾಗೂ ವಿಳಂಬ ಪದಗತಿಯು ಸೌಮ್ಯರೂಪದ ಕಲೆ. ಸಮುದ್ರ ಮಥನ ಕಾಲದಲ್ಲಿ ವಿಷ್ಣು ಮೋಹಿನಿ ರೂಪತಾಳಿ ತನ್ನ ನೃತ್ಯಗತಿಗಳಿಂದ ದೇವಾಸುರರನ್ನೆಲ್ಲ ರಂಜಿಸುತ್ತ, ದೇವತೆಗಳಿಗೆ ಉಪಾಯವಾಗಿ ಅಮೃತವನ್ನು ಹಂಚಿದ ವಿವರಗಳನ್ನು ಈ ಹಾಡುಗಳು ಒಳಗೊಂಡಿದೆ. ಹಾಗಾಗಿ ಉಮ್ಮತ್ತಾಟ್ ಉಮಾದೇವಿಯ ನೃತ್ಯವೆಂದು ಕೊಡಗಿನ ಜನ ನಂಬುತ್ತಾರೆ. ಮೌಖಿಕವಾಗಿ ಪ್ರಚಲಿತದಲ್ಲಿರುವ ಮತ್ತೊಂದು ಕಥೆಯೂ ಇದೆ. ಅದರ ಪ್ರಕಾರ ಕೊಡಗಿನ ಮೋಹಕ ಪ್ರಕೃತಿ ಸೌಂದರ್ಯಕ್ಕೆ ಮನಸೋತ ದೇವತೆಗಳು ಸ್ವರ್ಗದಿಂದಿಳಿದು ಬಂದು ಆಹ್ಲಾದಕರವಾಗಿ ಬೀಸುವ ತಂಗಾಳಿಯನ್ನು ಬೆಳದಿಂಗಳ ವೈಭವವನ್ನು ಹೀರುತ್ತ ಉಲ್ಲಾಸಕರವಾಗಿ ಕುಣಿಯುತ್ತಿದ್ದರೆಂದು ಅದನ್ನೇ ಈಗ ಈ ನೆಲದ ಸುಂದಿರಿಯರು ಅನುಕರಿಸುತ್ತಿರುವರೆಂದೂ ಹೇಳುತ್ತಾರೆ. ಕೊಡಗಿನ ಯುವತಿಯರು ತಮ್ಮ ಸಾಂಪ್ರದಾಯಿಕ ಅಡ್ಡ ಸೆರಗಿನ, ಹಿಂಬದಿ ನೆರಿಗೆಯ ಸೀರೆಯುಟ್ಟು, ತುಂಬುತೋಳಿನ ರವಿಕೆ ತೊಟ್ಟು, ಕೊಕ್ಕೆ ತಾತಿ, ಜೋಮಾಲರ ಮುಂತಾದ ಸಾಂಪ್ರದಾಯಿಕ ಕಂಠಾಭರಣಗಳನ್ನೂ ಕೈಕಡಗಳನ್ನೂ ತೊಟ್ಟು, ಕಾಲಿನ ಐದು ಬೆರಳಿಗೆ ಉಂಗುರಗಳನ್ನು ಜೋಡಿಸಿದ ಗೆಜ್ಜೆಗಳನ್ನು ಕಟ್ಟಿ, ತಲೆಗೆ ಕುಸುರಿಗೆಲಸ ಮಾಡಿದ ಕೆಂಬಣ್ಣದ ‘ಮಂಡೆತುಣಿ’ (ತಲೆವಸ್ತ್ರ) ವನ್ನು ಕಟ್ಟಿಕೊಂಡು ವೃತ್ತಾಕಾರವಾಗಿ ನಿಂತು ಕಂಚಿನ ಕೈತಾಳ ಕುಟ್ಟುತ್ತಾ ಕುಣಿಯುತ್ತಾರೆ. ವೃತ್ತದ ನಡುವೆ ‘ಕುತ್ತದೀಪದ ತಳಿಯ ತಕ್ಕೆಬೊಳಕು’ ಇಟ್ಟುಕೊಂಡೊ, ಕಾವೇರಮ್ಮನ ಪ್ರತಿಮೆಯನ್ನಿಟ್ಟುಕೊಂಡೂ ಕುಣಿಯುತ್ತಾರೆ. ವಿಶೇಷವಾಗಿ ಭಗವತಿ ಆರಾಧನಾ ಸಂದರ್ಭಗಳಲ್ಲಿ ಇಗ್ಗುತಪ್ಪನ ಸನ್ನಿಧಿಯಲ್ಲಿ ಅಥವಾ ಕೈಲ್‌ಪೊಳ್ದ್ ಎಂಬ ‘ಕುಯಿಲು ಹಬ್ಬದ’ ಸಂದರ್ಭದಲ್ಲಿ ಪುದಿ + ಅರಿ – ಪುತ್ತರಿ ಎಂಬ ‘ಹೊಸಅಕ್ಕಿ’ ಯನ್ನು ಮನೆಗೆ ತರುವ ಸಂದರ್ಭದಲ್ಲಿ ಊರ ನಡುವಿನ ‘ಮಂದ್’ (ಅಂಗಳ) ನಲ್ಲಿ ಎಲ್ಲ ಮನೆಯ ಸದಸ್ಯರೂ ಕೊಡಿ ಕುಣಿಯುತ್ತಾರೆ. ಒಂದೊಂದು ಗುಂಪಿನಲ್ಲೂ ಎರಡರಿಂದ ಇಪ್ಪತ್ತರವರೆಗಿನ ಸಮಸಂಖ್ಯೆಯ ಸದಸ್ಯರಿರುತ್ತಾರೆ. ಕೊಡವರ ಕುಲದೇವತೆ ಕಾವೇರಮ್ಮೆಯ ಆರಾಧನಾ ಕ್ರಮಗಳನ್ನು ವರ್ಣಿಸುವ ಅಥವಾ ಕೊಡವರ ಸಂಪ್ರದಾಯಗಳ ವರ್ಣನೆಗಳನ್ನೊಳಗೊಂಡ ಸಂಗತಿಗಳು ಈ ಹಾಡುಗಳಲ್ಲಿರುತ್ತವೆ. ತಾಳವೇ ಈ ಕುಣಿತಕ್ಕೆ ಅತಿ ಮುಖ್ಯವಾದ್ಯವಾಗಿರುತ್ತದೆ. ಪ್ರತಿ ಹಾಡಿಗೂ ವಿಶೇಷ ಗತ್ತು, ಭಂಗಿಗಳುಮ, ಪದಗತಿಗಳು ಬದಲಾಗುತ್ತ ಇರುತ್ತವೆ. ಹಾಗೆಯೇ ಸುತ್ತುವ ಕ್ರಮ, ಕಂಚಿನ ತಾಳಗಳನ್ನು ತಾವೇ ತಾಡಿಸುವ ಅಥವಾ ಪರಸ್ಪರ ತಾಡಿಸುವ ಕ್ರಮ, ಬದಲಾಗುತ್ತ ಹೋಗುತ್ತದೆ. ಕೆಲವೊಮ್ಮೆ ಬಲಕ್ಕೂ ಎಡಕ್ಕೂ ತಿರುಗುತ್ತ, ಕುಳ್ಳಿರುತ್ತ, ಸ್ಥಳಬದಲಾವಣೆ ಮಾಡಿಕೊಳ್ಳುತ್ತ ಪದಗತಿಗಳನ್ನು ಬದಲಿಸುತ್ತ ಹಾಡನ್ನು ಬದಲಿಸುತ್ತಾರೆ. ಈ ಎಲ್ಲ ಸಂದರ್ಭಗಳಲ್ಲಿಯೂ ಪದಗತಿ ವಿಳಂಬಗತಿಯದ್ದೇ ಆಗಿರುತ್ತದೆ. ತ್ವರಿತಗತಿ ಈ ಹಾಡುಗಳಿಗೆ ಹೊಂದುವುದಿಲ್ಲ. ವಿಶೇಷ ಲಯ ಹಾಗೂ ಸರಳ ಪದಪ್ರಯೋಗಗಳು ಈ ಹಾಡುಗಳಲ್ಲಿರುತ್ತವೆ. ಉದಾಹರಣೆಗೆ

ಕಾವೇರಮ್ಮೆ ದೇವಿತಾಯೆ ಕಾಪಾಡೆಂಗಳಾ
ಭಾವಬಟ್ಟೆ ಕಾಟಿತಂದ್ ಚಾಕ್
ದೇವಿ ನೀ
ದತ್ತ್ ಮೋವಳಾಯಿತ್ ನೀ ಬ್ರಹ್ಮದೇವಂಗೇ
ಗೊತ್ತಿಲ್ಲತೆ ಅಗಸ್ತ್ಯ ಋಷಿನ ಬುಟ್ಟ್ ಪೊರಟೆಯಾ’

ಹೀಗೆ ಕಾವೇರಿಯ ಹುಟ್ಟು ಹಾಗೂ ಹರಿಯುವ ಹಾದಿಯನ್ನು ನಿರ್ದೇಶಿಸುತ್ತ ಅವಳ ಪೌರಾಣಿಕ ಪ್ರಾಧಾನ್ಯವನ್ನು ಪ್ರಸ್ತಾವಿಸುತ್ತ ಈ ಹಾಡುಗಳು ದೇವಿಯನ್ನು ಆರಾಧಿಸುವುದನ್ನು ದಾಖಲಿಸುತ್ತವೆ. ವಿಶೇಷವಾಗಿ ಇದು ಪ್ರಕೃತಿಯಾರಾಧನೆಯೇ ಆಗಿದೆ. ಕೊಡಗಿನ ಸುಗ್ಗಿ ಮತ್ತು ವಸಂತಗಳ ಋತುವೈಭವಗಳನ್ನು ಈ ಕುಣಿತ ಪ್ರಸ್ತುತಪಡಿಸುತ್ತದೆ.

– ಜಿ.ಎನ್.

ಉಯ್ಯಾಲೆಯಾಟ ಕೇರಳದ ಹೆಣ್ಮಕ್ಕಳ ಮತ್ತು ಮಕ್ಕಳ ಒಂದು ವಿನೋದಕ್ರೀಡೆ ಉಯ್ಯಾಲೆಯಾಟ. ಉಯ್ಯಾಲೆಯಲ್ಲಿ ಕುಳಿತು ಆಡುವುದು ಇದರ ರೀತಿ. ಮನೆಯ ಅಂಗಳದಲ್ಲೋ ಹಿತ್ತಿಲಲ್ಲೋ ಹೆಚ್ಚು ಎತ್ತರವಿಲ್ಲದ ಮರದ ಕೊಂಬೆಗೆ ಉಯ್ಯಾಲೆ ಕಟ್ಟುತ್ತಾರೆ. ಕುಳಿತುಕೊಳ್ಳುವುದಕ್ಕಾಗಿ ಕಿರುಅಗಲದ ಮರದ ಹಲಗೆಯನ್ನೋ, ತೆಂಗಿನ ಹೆಡೆಯನ್ನೋ ಪೀಠವಾಗಿ ಉಪಯೋಗಿಸುತ್ತಾರೆ. ಮರದ ಕೊಂಬೆಯಿಂದ ಜೋತಾಡುವಂತೆ ಬಳ್ಳಿಗಳನ್ನೋ ಹಗ್ಗಗಳನ್ನೋ ಇಳಿಬಿಟ್ಟು ಕುಳಿತುಕೊಳ್ಳುವ ಹಲಗೆಯ ಎರಡು ಬದಿಗಳನ್ನು ಬಂಧಿಸಲಾಗುತ್ತದೆ. ಹೀಗೆ ಸಿದ್ಧವಾಗುವ ಉಯ್ಯಾಲೆಯಲ್ಲಿ ಏರಿಕುಳಿತು ಆಡುತ್ತಾರೆ. ಕುಳಿತು ಸ್ವತಃ ತಾವೇ ಉಯ್ಯಾಲೆಯಾಡಬಹುದು ಇಲ್ಲವೇ ಬೇರೆಯಾರಾದರೂ ಉಯ್ಯಾಲೆಯನ್ನು ಆಡಿಸಬಹುದು. ಹಾಗೆ ಆಡುವಾಗ ಬಿದ್ದುಹೋಗದಂತೆ ಎರಡು ಕೈಗಳಿಂದಲೂ ಉಯ್ಯಾಲೆಯ ಹಗ್ಗವನ್ನು ಹಿಡಿದುಕೊಳ್ಳುತ್ತಾರೆ. ಉಯ್ಯಾಲೆಯ ಪೀಠದಲ್ಲಿ ನಿಂತುಕೊಂಡೂ ರಭಸದಿಂದ ಆಡುವ ಕ್ರಮವೂ ಇದೆ.

ಓಣಂ, ತಿರುವಾದಿರ ಮುಂತಾದ ಕೇರಳೀಯ ಉತ್ಸವಾಚರಣೆಗಳ ಸಂದರ್ಭದಲ್ಲಿ ಉಯ್ಯಾಲೆಯಾಟವು ಒಂದು ಮುಖ್ಯ ವಿನೋದವಾಗಿದೆ. ತಿರುವಾದಿರ ಉತ್ಸವದ ಅವಿಭಾಜ್ಯ ಆಚರಣೆಯಾಗಿ ಇದನ್ನು ಪರಿಗಣಿಸಲಾಗುತ್ತದೆ. ಧನುರ್ಮಾಸದ ಆರ್ದ್ರಾದಿನಗಳಂದು ಸ್ನಾನಮುಗಿಸಿ ಮನೆಗೆ ಬಂದ ಹೆಂಗಸರು ಅಂಗಳದಲ್ಲಿ ಕಟ್ಟಿದ ಉಯ್ಯಾಲೆಯಲ್ಲಿ ಒಂದಷ್ಟು ಹೊತ್ತು ಆಟವಾಡುತ್ತಾರೆ. ಅಂದು ರಾತ್ರಿ ಕೂಡ ಉಯ್ಯಾಲೆಯಾಟದ ರೂಢಿ ಇದೆ. ತಿರುವಾದಿರವು ಪ್ರೇಮಿಗಳ ಒಂದು ಹಬ್ಬ ಕೂಡ ಆಗಿದೆ. ಪರಸ್ಪರ ನೋಡಲು, ಒಂದಾಗಿ ಕುಳಿತು ಉಯ್ಯಾಲೆಯಾಡಲು ಈ ಸಂದರ್ಭದಲ್ಲಿ ಅವರು ಉತ್ಸುಕರಾಗಿರುತ್ತಾರೆ.

ಉಯ್ಯಾಲೆಯಾಡುವಾಗ ಹಾಡು ಹೇಳುವುದೂ ಇದೆ. ಈ ಹಾಡುಗಳನ್ನು ಉಯ್ಯಾಲೆ ಹಾಡುಗಳನ್ನು ಎನ್ನುತ್ತಾರೆ. ಮಹಾಬಲಿ ಚಕ್ರವರ್ತಿಯ ಕುರಿತು, ಹೂಗಳ ಕುರಿತೂ ಇರುವ ಹಾಡುಗಳನ್ನೂ ಓಣಂ ಕಾಲದಲ್ಲಿ ಉಯ್ಯಾಲೆ ಆಡುವಾಗ ಹಾಡಲಾಗುತ್ತದೆ. ಸುಂದರಿ ಕಲ್ಯಾಣಂ, ಹರಿಶ್ಚದ್ರ ಚರಿತಂ, ದಮಯಂತಿ ಸ್ವಯಂವರಂ, ಸೀತಾಸ್ವಯಂವರಂ, ಕುಚೇಲವೃತ್ತಂ, ಮಹಾಬಲಿ ಚರಿತಂ, ಮತ್ಸ್ಯಗಂಧೀ ಚರತಂ, ಮುಂತಾದ ಅನೇಕ ಉಯ್ಯಾಲೆ ಹಾಡುಗಳು ಪ್ರಚಾರದಲ್ಲಿವೆ.

– ಎಸ್.ಕೆ. ಅನುವಾದ ಕೆ.ಕೆ.

ಉರುಮುಲು ಇದೊಂದು ಚರ್ಮವಾದ್ಯ. ಕರ್ನಾಟಕದಲ್ಲಿ ಇದನ್ನು ಉರುಮೆಯೆಂದು ಕರೆಯುತ್ತಾರೆ. ಗ್ರಾಮದೇವತೆಗಳ ಉತ್ಸವಗಳಲ್ಲಿ ವಿಶೇಷವಾಗಿ ಊರೂರು ಮೇಲೆ ಮಾರಮ್ಮನನ್ನು ಹೊತ್ತು ತಿರುಗುವವರು ಈ ವಾದ್ಯವನ್ನು ಬಳಸುತ್ತಾರೆ. ೧೦ – ೧೨ ಅಂಗುಲವ್ಯಾಸವಿರುವ ೨೦ ಅಂಗುಲ ಉದ್ದವಿರುವ ಹೊಳವಿಗೆ ಅದರ ಎರಡೂ ಕಡೆಗೂ ಹದಮಾಡಿದ ಆಡಿನ ಚರ್ಮವನ್ನು ಹೊದಿಸಿ ದಾರದಿಂದ ಬಿಗಿಯುತ್ತಾರೆ. ಬಡಿಯಲು ಎರಡು ಗಟ್ಟಿಯಾದ ತೆಂಗಿನ ಅಥವಾ ಈಚಲು ಮರದ ಗರಿಗಳ ಕಡ್ಡಿಗಳನ್ನು ಬಳಸುತ್ತಾರೆ. ಬಲಗೈಯಲ್ಲಿ ಬಡಿಯುವ ಕೋಲನ್ನು ಬಳಸುತ್ತಾರೆ. ಎಡಗೈಕೋಲು ಬಲಗೈ ಕೋಲಿಗಿಂತ ಗಾತ್ರದಲ್ಲಿ ಚಿಕ್ಕದಾಗಿದ್ದು, ಕಮಾನಿನಂತೆ ಬಾಗಿರುತ್ತದೆ. ಈ ಕೋಲಿನಿಂದ ಉರುಮೆ ಚರ್ಮದ ಮೇಲೆ ಉಜ್ಜುತ್ತಾರೆ. ಇದರಿಂದ ‘ಡರ್ ಡರ್’ ಎಂಬ ಶಬ್ದ ಉಂಟಾಗುತ್ತದೆ. ಇದು ಗುಡುಗಿನ (ತೆಲುಗಿನಲ್ಲಿ ಉರುಮು) ಶಬ್ದವನ್ನು ಧ್ವನಿಸುವುದರಿಂದ ಇದಕ್ಕೆ ‘ಉರುಮುಲು’ ಎಂದು ಹೆಸರು ಬಂದಿದೆ.

– ಜಿ.ಎಸ್.ಎಂ.

ಉರೂಸು ನೇರ್ಚೆ ಕೇರಳದ ಕಾಸರಗೋಡು, ಕಲ್ಲಿಕೋಟೆ, ಮಲಪ್ಪುರಂ ಜಿಲ್ಲೆಗಳಲ್ಲಿ ಮುಸ್ಲಿಂಮರು ನಡೆಸುವ ಉತ್ಸವವನ್ನು ಉರೂಸು ಅಥವಾ ನೇರ್ಚೆ ಎಂದು ಕರೆಯುತ್ತಾರೆ. ಇಸ್ಲಾಂ ಮತದಲ್ಲಿ ಪೂಜನೀಯವಾದ ವ್ಯಕ್ತಿಗಳ ಸಮಾಧಿಗಳಲ್ಲಿ ನಡೆಸುವ ವಾರ್ಷಿಕ ಉತ್ಸವವೇ ಉರೂಸು. ಮುಸ್ಲಿಮರ ಹೊರತಾಗಿ ಇತರ ಸಮುದಾಯದವರೂ ಈ ಉತ್ಸವದಲ್ಲಿ ಭಾಗವಹಿಸುತ್ತಾರೆ. ಆರಾಧನೆ ನಡೆಯುವ ಸಮಾಧಿ ಸ್ಥಳವನ್ನು ಮಖಾಂ ಅಥವಾ ಜಾರಂ ಎಂದು ಕರೆಯುತ್ತಾರೆ. ಬದುಕಿರುವಾಗ ಪವಾಡಗಳನ್ನು ಮೆರೆದು, ಸಮುದಾಯದ ನೇತೃತ್ವ ವಹಿಸಿದ್ದ ಧಾರ್ಮಿಕ ನೇತಾರ ತೀರಿ ಹೋದ ಅನಂತರ ದೇವರ ಬಳಿಗೆ ಹೋಗಿ೮ ಮಧ್ಯವರ್ತಿಯಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವನು ಎಂಬುದು ಮುಸ್ಲಿಮರ ನಂಬಿಕೆ. ಸಾವಿನ ನಿರ್ದಿಷ್ಟ ಸಮಯದ ಅನಂತರ ಅವರ ಸಮಾಧಿ ಸ್ಥಳ ಆರಾಧನ ಕೇಂದ್ರವಾಗುವುದು.

ಕಾಸರಗೋಡು, ಕಲ್ಲಿಕೋಟೆ, ಮಲ್ಲಪ್ಪುರಂ ಜಿಲ್ಲೆಗಳಲ್ಲಿ ಪ್ರಧಾನ ಆರಾಧನ ಕೇಂದ್ರಗಳಿವೆ. ಇದರಲ್ಲಿ ಮುಖ್ಯವಾದಂಥವು. ಮಂಬರ, ವಡಗರ, ಪೇರಾಂಬ್ರ, ಕಾಞಿರಪಳ್ಳಿ ಉರೂಸುಗಳಾಗಿವೆ. ಪ್ರತಿಯೊಂದು ‘ಜಾರ’ದ ಬಳಿ ಮಸೀದಿ ಹಾಗೂ ಸಮಾಧಿಯಾದ ವ್ಯಕ್ತಿಯ ಸಂಬಂಧಿಕರು ಅಥವಾ ಮತೀಯ ನೇತಾರರು ಉರೂಸಿಗೆ ನೇತೃತ್ವ ಕೊಡುತ್ತಾರೆ. ಕೆಲವು ಪ್ರದೇಶಗಳಲ್ಲಿ ನಿರ್ದಿಷ್ಟ ಮನೆತನದವರು ಉರೂಸು ನಡೆಸುವುದಿದೆ. ಸಮಾಧಿ ದಿವಸದ ದಿನಾಂಕ ಅಥವಾ ಪ್ರತ್ಯೇಕ ದಿವಸಗಳ ದಿನಾಂಕಗಳಲ್ಲಿ ಉರೂಸು ಆಯೋಜಿಸುತ್ತಾರೆ. ರಂಜಾನ್ ತಿಂಗಳ ೨೫ ರಿಂದ ರಂಜಾನ್ ಅಂತ್ಯದವರೆಗೆ ಉರೂಸು ನಡೆಯುವ ಕೇಂದ್ರಗಳೂ ಇವೆ.

ಧ್ವಜಾರೋಹಣದೊಂದಿಗೆ ಉರೂಸು ನೇರ್ಚೆಯ ಕಾರ್ಯಕ್ರಮಗಳು ಆರಂಭವಾಗುತ್ತವೆ. ಬೆಳಗ್ಗೆ ೫ ಗಂಟೆ ಅಥವಾ ಸಂಜೆ ೬ ಗಂಟೆಗೆ ಧ್ವಜಾರೋಹಣ ಮಾಡುತ್ತಾರೆ. ಆಯಾ ಮನೆತನದ ಹಿರಿಯ ವ್ಯಕ್ತಿ ಅಥವಾ ಮಸೀದಿಯ ಹಿರಿಯ ಧಾರ್ಮಿಕ ನೇತಾರ ಧ್ವಜ ಏರಿಸುವನು. ಬಿದಿರು ಅಥವಾ ಕಂಗಿನ ಮರವನ್ನು ಧ್ವಜಸ್ತಂಭವಾಗಿ ಬಳಸುವರು

ಉರೂಸು ನೇರ್ಚೆಗೆ ಬೇರೆ ಬೇರೆ ಸಮುದಾಯದವರು ಹೊರೆ ಕಾಣಿಕೆಗಳನ್ನು ಅರ್ಪಿಸುವ ಸಂಪ್ರದಾಯವಿದೆ. ಮುಸ್ಲಿಮರ ಹೊರತಾಗಿ ಬೇರೆ ಜಾತಿಯವರೂ ಹೊರೆ ಕಾಣಿಕೆಗಳನ್ನು ಅರ್ಪಿಸುವರು. ಅಲಂಕರಿಸಿದ ವಸ್ತುಗಳನ್ನು ಮೆರೆವಣಿಗೆಯೊಂದಿಗೆ ಉರೂಸು ನಡೆಯುವ ಸ್ಥಳಕ್ಕೆ ತಲುಪಿಸುವರು. ಮೊಗವೀರರು, ಆಚಾರಿಗಳು ತಮ್ಮ ಕೇಂದ್ರಗಳಿಂದ ಹೊರೆ ಕಾಣಿಕೆ ಸಮರ್ಪಿಸುವ ಸಂಪ್ರದಾಯವಿದೆ.

ಊರುಸು ನೇರ್ಚೆಯ ಇನ್ನೊಂದು ಪ್ರಧಾನ ಅಂಶ ರಾತೀಬ್. ರೋಗ ನಿವಾರಣೆಗೆ ಹಾಗೂ ಬಯಕೆಗಳ ಈಡೇರಿಕೆಗಾಗಿ ನಡೆಸುವ ಆಚರಣೆ ಇದು. ದಫ್ ಎಂಬ ವಾದ್ಯೋಪಕರಣವನ್ನು ಬಳಸುತ್ತರೆ. ಧಾರ್ಮಿಕ ನೇತಾರ ಮಧ್ಯದಲ್ಲಿ ಕುಳಿತು ಉಳಿದವರು ವೃತ್ತಾಕಾರದಲ್ಲಿ ಕುಳಿತು ಪ್ರವಾದಿ ಹಾಗೂ ಜಾರದ ಕಥೆಗಳನ್ನು ಹಾಡುವರು. ಈ ಮಧ್ಯೆ ಕತ್ತಿ ಹಿಡಿದು ದೇಹಕ್ಕೆ ಗಾಯ ಮಾಡುವ ‘ರಾತೀಬ್ ಕುತ್ತಿರಾತೀಬ್’ ಎಂಬ ಆಚರಣೆ ಕೆಲವೆಡೆ ಇದೆ. ಅನ್ನದಾನ ಉರೂಸಿನ ಪ್ರಧಾನ ಅಂಗ, ಆಹಾರ ತಯಾರಿಸುವ ಸಾಮಗ್ರಿಗಳು ಹೊರೆ ಕಾಣಿಕೆಗಳ ಮೂಲಕ ಬೀರುತ್ತವೆ. ಸಮಾಧಿ ಸ್ಥಳವನ್ನು ಗುಂಪಾಗಿ ಸಂದರ್ಶಿಸಿ ಪ್ರಾರ್ಥನೆ ನಡೆಸುವುದೇ ಮಖಾಂ ಸಿಯಾರತ್‌, ಖತಂದುಃ ಆ ಎಂಬುದು ಉರೂಸಿನ ಇನ್ನೊಂದು ಆಚರಣೆ. ಕುರಾ‌ನ್‌ಪಾರಾಯಣವೇ ಖಂತಂದಃ ಆ, ಮಖಾಂನಲ್ಲಿ ಕುರಾನ್ ಪಾರಾಯಣ ಮಾಡಿದರೆ ಆರಾಧ್ಯ ವ್ಯಕ್ತಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಮಾಡುವನು ಎಂಬುದು ನಂಬಿಕೆ.

– ಟಿ.ಟಿ.ಕೆ.ಎಂ. ಅನುವಾದ ಎನ್.ಎಸ್.

ಉಳವು ಪಾಡಲ್ ತಮಿಳುನಾಡಿನಲ್ಲಿ ಜನರು ಮುಖ್ಯವಾಗಿ ಬೇಸಾಯವನ್ನು ಅವಲಂಬಿಸಿದ್ದಾರೆ. ಬೆಳಗಿನಿಂದ ಸಂಜೆಯವರೆಗೂ ಅವರು ಹೊಲಗದ್ದೆಗಳಲ್ಲಿ ಕಾಲ ಕಳೆಯಬೇಕಾಗುತ್ತದೆ. ಬಿಡುವಿಲ್ಲದ ಅವರ ಕೆಲಸದಲ್ಲಿ ಆಯಾಸವಾಗುತ್ತದೆ. ಬೇಸರವೂ ಆಗುತ್ತದೆ. ವಿಶ್ರಾಂತಿ ಪಡೆದು ಉಣ್ಣಲು ಸಹ ಅವರಿಗೆ ಅನೇಕ ಸಂದರ್ಭಗಳಲ್ಲಿ ಸಮಯ ದೊರೆಯುವುದಿಲ್ಲ. ಕೆಲಸದಲ್ಲಿ ತೊಡಗಿರುವಾಗಲೇ ಬೇಸರವನ್ನು ದೂರ ಮಾಡಲು ತನ್ನ ಕಸುಬಿಗೆ ಹೊಂದಿಕೆಯಾಗುವಂತಹ ಏನಾದರೊಂದು ಹಾಡನ್ನು ಕಟ್ಟಿ ಹಾಡುತ್ತಾನೆ. ಅವನು ಈ ಹಿಂದೆ ತಾನು ಎಲ್ಲಿಯಾದರೂ ಕೇಳಿದ್ದ ಹಾಡಿನ ಮಟ್ಟಿನಲ್ಲಿಯೇ ತನ್ನದೇ ಆದ ಧಾಟಿಯಲ್ಲಿ ಅದನ್ನು ರೈತ ಹಾಡುತ್ತಾನೆ. ಆಗ ಅವನ ಜತೆಗೆ ಅವನ ಸಂಗಾತಿಗಳು ದನಕರುಗಳಾಗಿರಬಹುದು. ಇಲ್ಲವೆ ಜತೆಯಲ್ಲಿ ಕೆಲಸ ಮಾಡುವ ಜೊತೆಗಾರರಿಬಹುದು. ಇಂತಹ ಹಾಡುಗಳನ್ನು ಉಳವು ಪಾಡಲ್ (ಉಳುಮೆ ಹಾಡು), ನೇಗಿಲ ಹಾಡುಗಳೆಂದು, ಏರು ಹೊಡೆಯುವ ಹಾಡುಗಳೆಂದು ಕರೆಯುತ್ತಾರೆ.

ಭೂಮಿಯನ್ನು ಉಳುವ ರೈತ ಉಳುವುದಕ್ಕೆ ಒಂದು ನಿರ್ದಿಷ್ಟ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾನೆ. ಅವನ ಹಿಂದುಗಡೆ ಬರುವ ನೇಗಿಲ ಯೋಗಿ ಅದನ್ನು ತಿಳಿದುಕೊಂಡು ಅಂತಹ ವ್ಯವಸ್ಥೆಗೆ ಸಹಕಾರ ನೀಡಬೇಕು. ಇದು ಉಳುಮೆಯಲ್ಲಿ ಪಾಲಿಸಬೇಕಾದ ಧರ್ಮ. ಅದಕ್ಕಾಗಿಯೇ ‘ಅಡ್ಡ ಸಾಲನ್ನು ಹಾಕಬೇಡ’ ಎಂಬ ಒಂದು ನಾಣ್ಣುಡಿ ಪ್ರಚಾರದಲ್ಲಿದೆ. ಮುಂದಿನ ರೈತ ಯಾವ ಜಾಡಿನಲ್ಲಿ ತನ್ನ ನೇಗಿಲನ್ನು ಹಿಡಿದಿರುತ್ತಾನೆಯೇ ಅದೇ ಜಾಡಿನಲ್ಲಿ ಹಿಂದಿನವನು ಅನುಸರಿಸುತ್ತಾ ಮುಂದುವರಿಯಬೇಕು. ಇದು ನೇಗಿಲು ಹಿಡಿಯುವವರು ಪಾಲಿಸಬೇಕಾದ ನಿಯಮ. ಈ ನಿಯಮವನ್ನು ಅವರು ಮೀರಬಾರದು.

ಉಳುಮೆಗೆ ಎತ್ತುಗಳನ್ನು ಸಿದ್ಧಪಡಿಸಲು ರೈತ ಅವುಗಳನ್ನು ಪಳಗಿಸಿಕೊಳ್ಳಬೇಕು. ಜತೆಗೆ ತಾನೂ ಉಳುಮೆಯನ್ನು ಹೇಗೆ ಮಾಡಬೇಕೆಂಬ ತಯಾರಿಯನ್ನು, ತರಬೇತಿಯನ್ನು ಪಡೆಯಬೇಕು. ಆ ಎತ್ತುಗಳಿಗೆ ಇವನ ಪರಿಚಯವಾಗಬೇಕು. ಹಾಗೆ ಮಾಡದಿದ್ದರೆ ಅಂತಹ ರೈತ ಅವುಗಳಿಂದ ಕೆಸಲ ಮಾಡಿಸುವುದು ಪ್ರಯಾಸವಾಗುತ್ತದೆ. ಅದರ ಜತೆಗೆ ಉಳುವಿಗೆ ಬೇಕಾದ ಇತರ ಪರಿಕರಗಳ ಪರಿಚಯವನ್ನು ಅವನು ಮಾಡಿಕೊಳ್ಳಬೇಕು. ನೊಗಕ್ಕೆ ಎತ್ತುಗಳನ್ನು ಹಗ್ಗದಿಂದ ಬಿಗಿಯುವುದು ಹೇಗೆ, ಮೇಟಿಯನ್ನು ಯಾವ ಕೈಯಲ್ಲಿ ಹೇಗೆ ಹಿಡಿಯಬೇಕು. ಸಾಲುಹೊಡೆಯುವುದು ಹೇಗೆ, ಅವುಗಳ ಅಂತರ ಎಷ್ಟಿರಬೇಕು, ಯಾವ ಬೆಳೆಗೆ ಎಂತಹ ಸಾಲು ಇರಬೇಕು, ಎಷ್ಟು ಬಾರಿ ಉಳುಮೆ ಮಾಡಬೇಕು. ಮುಂತಾದ ಅನೇಕ ವಿವರಗಳನ್ನು ಅವನು ಮುಂಚಿತವಾಗಿಯೇ ತಿಳಿದಿರಬೇಕಾಗುತ್ತದೆ.

ಉಳುಮೆ ಮಾಡಲು ತಿಳಿಯದ ಒಬ್ಬ ಯುವಕನಿಗೆ ಹಿಂದಿನ ಕಾಲದಲ್ಲಿ ಯಾರೂ ಗೌರವ ಕೊಡುತ್ತಿರಲಿಲ್ಲ. ಏರು ಹೊಡೆಯಲು ತಿಳಿಯದ ಯುವಕನನ್ನು ಯುವತಿಯರು ಸಹ ಗೇಲಿ ಮಾಡುತ್ತಿದ್ದರು. ಇಂತಹಯ ಆಶಯವನ್ನು ಬಳಸಿಕೊಂಡಿರುವ ಅನೇಕ ಜನಪದ ಹಾಡುಗಳು ಪ್ರಚಾರದಲ್ಲಿವೆ. ಉದಾ:

ಏರು ಹೊಡೆಯಲು ತಿಳಿಯದ
ಬೆಪ್ಪ
ಏರು ಹೊಡೆಯಲು ಬರ್ತೇನೆ ನಾನು
ದೂರ ಸರಿ ನೀನು

ಎಂದು ಅತ್ತೆಯ ಮಗಳು ಯುವಕನನ್ನು ಛೇಡಿಸುತ್ತಾಳೆ. ಬೇಸಾಯದ ಪರಿಸರದಲ್ಲಿ ಅಂತಹವರಿಗೆ ಕಿಂಚಿತ್ತು ಯಾರೂ ಬೆಲೆ ನೀಡುತ್ತಿರಲಿಲ್ಲ. ಹೆತ್ತವರು ಅಂತಹವರಿಗೆ ಹೆಣ್ಣು ಕೊಡಲು ಮುಂದೆ ಬರುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಬೇಸಾಯದ ಮೌಲ್ಯ ಅದರೊಂದಿಗೆ ಕಳೆದು ಹೋಗುತ್ತಿದೆ.

ಶ್ರಮಜೀವಿಗಳು ಹಾಡುವ ಹಾಡುಗಳಲ್ಲಿ ವೈವಿಧ್ಯವಿದೆ. ನೇಗಿಲು ಹಾಡುಗಳಲ್ಲದೆ ಸುಗ್ಗಿಯ ಹಾಡುಗಳು, ದನಗಾಹಿಗಳು ದನಗಳನ್ನು ಮೇಯಿಸುವಾಗ ಹೇಳುವ ಹಾಡುಗಳು, ಕಳೆ ಕೀಳುವ ಸಮಯದಲ್ಲಿ ಸಾಮೂಹಿಕವಾಗಿ ಹೇಳುವ ವಿವಿಧ ರೀತಿಯ ಹಾಡುಗಳು ಮುಂತಾದವು ಬೇಸಾಯಕ್ಕೆ ಸಂಬಂಧಪಟ್ಟಿವೆ. ಅಲ್ಲದೆ ರಸ್ತೆ ನಿರ್ಮಾಣ, ಹಡಗು ಅಥವಾ ದೋಣಿ ನಡೆಸುವುದು, ಎತ್ತಿನ ಗಾಡಿ ಓಡಿಸುವುದು, ಬಿದಿರು ಹೆಣೆಯುವುದು, ಇರುಳರ ಹಾಡು ಮುಂತಾದ ಅನೇಕ ಶ್ರಮಿಕರ ಹಾಡುಗಳು ಪ್ರಚಾರದಲ್ಲಿವೆ.

ಈ ಹಾಡುಗಳು ಮೂಲಕ ಹಿಂದಿನವರ ಸಂಪ್ರದಾಯ, ರೂಢಿಗಳು, ನಂಬಿಕೆಗಳು, ಜೀವನ ವಿಧಾನ, ಆಹಾರ, ವಿಹಾರ ಮುಂತಾದ ವಿಷಯಗಳು ತಿಳಿದುಬರುತ್ತವೆ. ಶ್ರಮ ಜೀವಿಗಳು ಜೀವನಕ್ಕಾಗಿ ನಡೆಸುವ ಹೋರಾಟ, ಅಡ್ಡಿ ಆತಂಕಗಳು, ಇವುಳ ಮಧ್ಯೆ ಅವರು ಅನುಭವಪಿಸುವ ಮುಖ ಸಂತೋಷ, ಕಷ್ಟ ನಷ್ಟ ಇವೆಲ್ಲವೂ ಈ ಜನಪದ ಹಾಡುಗಳಲ್ಲಿ ವ್ಯಕ್ತವಾಗಿದೆ. ಎಷ್ಟೇ ಶ್ರಮವಿದ್ದರೂ ಎಲ್ಲ ಎರಡು ತೊಡರುಗಳ ಮಧ್ಯೆ ಅವರು ಸೃಷ್ಟಿಕರ್ತನಾದ ಭಗವಂತನನ್ನು ಮರೆಯದೇ ತಮ್ಮ ಭಕ್ತಿಯನ್ನು ನಿವೇದಿಸುವ ಹಾಡುಗಳು ಅಪಾರವಾಗಿವೆ.

– ಕೆ.ಎ.ಜಿ. ಅನುವಾದ ವಿ.ಜಿ.