ಉಟ್ಲಮಾನು ತೆಲುಗು ನಾಡಿನ ಒಂದು ಆಚರಣಾತ್ಮಕ ಆಟ. ಉಟ್ಲಮರ ಎನ್ನುವ ಈ ಆಟ. ಚಿತ್ತೂರು ಜಿಲ್ಲೆಯಲ್ಲಿ ಕಂಡುಬರುತ್ತದೆ. ಈ ಹಬ್ಬವನ್ನು ಬಹಳ ಮಟ್ಟಿಗೆ ಮಹಾಭಾರತ ಹಬ್ಬದ ಸಂದರ್ಭದಲ್ಲಿ ಆಚರಿಸುತ್ತಾರೆ. ಕೃಷ್ಣಾಷ್ಟಮಿ ದಿನ, ಮತ್ತಿತರ ಯಾವುದೇ ಹಬ್ಬದ ಸಂದರ್ಭಗಳಲ್ಲೂ ಇದನ್ನು ಮಾಡು‌ತ್ತಾರೆ. ಇದರಲ್ಲಿ ಮತಾಚರಣೆಗಿಂತ ಕ್ರೀಡಾಸ್ಫೂರ್ತಿಯೇ ಹೆಚ್ಚಾಗಿ ಕಂಡುಬರುತ್ತದೆ. ಇದು ಒಳ್ಳೆಯ ಜನಪದ ಕ್ರೀಡೆ ಎಂದು ಹೇಳಬಹುದು. ಆದರೂ ಇದು ಆಚರಣೆಯ ಭಾಗವಾಗಿಯೇ ಹೆಚ್ಚಾಗಿ ನಡೆಯುತ್ತದೆ. ಆದ್ದರಿಂದ ಇದನ್ನು ಮತಾಚರಣೆಯ ಭಾಗಾವಾಗಿಯೇ ಹೆಸರಿಸಬಹುದು. ಸುಮಾರು ೨೫ ರಿಂದ ೩೦ ಅಡಿ ಎತ್ತರ, ಐದಾರು ಅಂಗುಲ ದಪ್ಪ ಇರುವ ಒಂದು ತೊಲೆಯನ್ನು ತೆಗೆದುಕೊಳ್ಳುತ್ತಾರೆ. ಅದನ್ನು ಚೆನ್ನಾಗಿ ಕೈಯಿಟ್ಟರೆ ಜಾರುವಂತೆ ನುಣುಪಾಗಿ ಮಾಡುತ್ತಾರೆ. ಈ ಮೂವತ್ತು ಅಡಿಗಳ ಎತ್ತರದ ತೊಲೆಯನ್ನು ಹೂಳುತ್ತಾರೆ. ಯಾವುದೇ ತೊಲೆ ಬೀಳದಂತೆ ಅದರ ಮೇಲ್ಭಾಗದಿಂದ ನಾಲ್ಕು ಕಡೆಹಗ್ಗವನ್ನು ಕಟ್ಟಿ ಅವುಗಳನ್ನು ಭೂಮಿಯ ನಾಲ್ಕು ಕಡೆ ನೆಟ್ಟಿರುವ ಗೂಟಗಳಿಗೆ ಬಿಗಿಯಾಗಿ ಕಟ್ಟುತ್ತಾರೆ. ಮರದ ತುದಿಭಾಗದಲ್ಲಿ ಒಂದು ಮಡಕೆಯನ್ನಾಗಲಿ, ಮೂಟೆಯನ್ನಾಗಲಿ ಇಡುವರು. ಅದರಲ್ಲಿ ಹೂಗಳು, ಸ್ವಲ್ಪ ಹಣ ಇಡುವರು. ಈ ಮರ ನುಣ್ಣಗೆ ಇರುವುದರ ಜೊತೆಗೆ ಇದರ ಮೇಲೆ ಹರಳೆಣ್ಣೆಯನ್ನು, ಇತ್ತೀಚೆಗೆ ಗ್ರೀಸನ್ನು ಚೆನ್ನಾಗಿ ಉಜ್ಜಿ, ಜಾರುವಂತೆ ಮಾಡುವರು. ಈ ಜಾರುವ ಕಂಬವನ್ನು ಹಿಡಿದು ಜಾರು ಜಾರುತ್ತಲೇ ಮೇಲೆ ಹತ್ತಿ ಉಟ್ಟಿಯನ್ನು ಮುಟ್ಟಿ, ಹಣವನ್ನು ಕೆಳಕ್ಕೆ ತಂದವರು ಗೆದ್ದಂತೆ. ಇದರೊಂದಿಗೆ ಆಟ ಮುಗಿಯುತ್ತದೆ. ಇದನ್ನು ಹತ್ತುವುದು ಸಾಧ್ಯವಿಲ್ಲದ ಮಾತು, ಹಿಡುಯುತ್ತಿದ್ದಂತೆಯೇ ಜಾರಿಹೋಗುತ್ತಿರುತ್ತದೆ. ೧೭ ರಿಂದ ೨೫ ವರ್ಷ ಮಧ್ಯವಯಸ್ಕರಾದ ಯುವಕರು ಈ ಆಟದಲ್ಲಿ ಪಾಲ್ಗೊಂಡು ಮೇಲೆ ಹತ್ತುವ ಪ್ರಯತ್ನ ಮಾಡುತ್ತಾರೆ. ಈ ಮರದ ಸುತ್ತ ನಾಲ್ಕು ಜನ ಯುವಕರು ಸುತ್ತಿಕೊಂಡು ಮತ್ತೊಬ್ಬರನ್ನು ಮೇಲಕ್ಕೆ ಹತ್ತಿಸಿಕೊಳ್ಳುತ್ತಾರೆ. ಹೀಗೆ ಒಂದು ವಲಯ ಮಾಡಿ, ಅದರ ಮೇಲೆ ಮತ್ತೊಂದು ವಲಯದಂತೆ ನಿಲ್ಲುತ್ತಾರೆ. ಹೀಗೆ ಮೂರು ಹಂತಗಳಲ್ಲಿ ಒಬ್ಬರ ಮೇಲೆ ಒಬ್ಬರು ನಿಂತು ಅದನ್ನು ಮುಟ್ಟಲು ಮೇಲೆ ಹತ್ತಿ ಪ್ರಯತ್ನ ಮಾಡುತ್ತಿರುತ್ತಾರೆ. ಸುತ್ತ ನೆರೆದ ಯುವಕರು ಕೇಕೆ ಹಾಕುತ್ತಾ, ಅವರ ಮೇಲೆ ಚೆಂಬಿನಿಂದ ನೀರು ಸುರಿಯುತ್ತಾ ಅವರು ಮತ್ತಷ್ಟು ಜಾರುವಂತೆ ಮಾಡುತ್ತಿರುತ್ತಾರೆ. ಹೀಗೆ ಜಾರುತ್ತಾ ಜಾರುತ್ತಲೇ ಪಟ್ಟು ಬಿಡದೆ ಮೇಲೆ ಹತ್ತಿ ನಿಲುವನ್ನು ಹಿಡಿದುಕೊಳ್ಳುತ್ತಾರೆ. ಇದರೊಂದಿಗೆ ಕ್ರೀಡೆ ಮುಗಿಯುತ್ತದೆ. ಗೆ‌ದ್ದ ಗುಂಪಿಗೆ ಅಲ್ಲಿ ನೆರೆದ ಹಿರಿಯರು ನಿಲವಿನಲ್ಲಿದ್ದ ಹಣದ ಜೊತೆಗೆ ಮತ್ತಷ್ಟು ಹಣವನ್ನು ಸಂಗ್ರಹಿಸಿ ಬಹುಮಾನವಾಗಿ ನೀಡುತ್ತಾರೆ. ಹತ್ತುತ್ತಿದ್ದವವರಿಗೆ ಸುತ್ತ ನೀರು ಸುರಿಯುತ್ತಿರುವರಿಗೂ, ಇದನ್ನೇ ನೋಡುತ್ತಾ ನಿಂತ ಸುತ್ತಲಿನ ಜನರಿಗೂ ಇದೊಂದು ಉತ್ತಮ ಮನರಂಜನೆ.

ಹಬ್ಬದ ಸಡಗರನೆಲ್ಲ ಇಲ್ಲಿಯೇ ಇರುತ್ತದೆ. ಜೀವನ ಹೋರಾಟದಲ್ಲಿ ವಿರೋಧ ಶಕ್ತಿಗಳ ಜೊತೆ ಸೆಣವಾಡಿ ಮೇಲೆ ಬರುವುದು ಎನ್ನವುದರ ಸಂಕೇತವಾಗಿದೆ. ಚಿತ್ತೂರು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುವ ಈ ಹಬ್ಬದ ಕ್ರೀಡೆ ಸಮೀಪದ ತಮಿಳುನಾಡಿನ ಗ್ರಾಮಗಳಲ್ಲೂ ಕಂಡುಬರುತ್ತದೆ.

– ಪಿ.ಎಸ್.ಸಿ. ಅನುವಾದ ವಿ.ಆರ್.

ಉಟ್ಟಿ ಜನಪದರ ದೈನಂದಿನ ಜೀವನ ಶೈಲಿಯಲ್ಲಿ ಉಟ್ಟಿ (ನೆಲವು) ವಿಶೇಷವಾದ ವಸ್ತು. ಇದು ಕೇವಲ ಅಡುಗೆ ಮನೆಯ ವಸ್ತುವಾಗಿಯೇ ಉಳಿದಿಲ್ಲ. ಜೀವನದಲ್ಲಿ ವ್ಯಕ್ತಿಗಳ ಅಭಿವ್ಯಕ್ತಿಗಳಲ್ಲಿ ಒಂದು ಸಂಕೇತ ವಸ್ತುವಾಗಿ, ಅಲಂಕಾರಕ್ಕಾಗಿ ಉಪಯೋಗಿಸುವ ವಸ್ತುಗಳಲ್ಲಿ ಒಂದಾಗಿದೆ. ಗೋಣಿ ನಾರಿನಿಂದ ಹಗ್ಗವನ್ನು ಹೊಸೆದು ಮಾಡಿದ ವಸ್ತು ಇದು. ಎರಡು ಅಡಿಗಳಿಂದ ಮೂರು ಅಡಿಗಳವರೆಗೆ ಉದ್ದವಿದ್ದು ನಾಲ್ಕು ಕಡೆ ಹಗ್ಗದಿಂದಾದ ಕುರ್ಚಿಯಂತಿದ್ದು ಮಧ್ಯದಲ್ಲಿ ಹತ್ತು ಅಂಗುಲ ಉದ್ದವಿದ್ದು ಒಂದು ಸಣ್ಣ ಗಾತ್ರದ ಕುಡಿಕೆ. ಲೋಹದ ಪಾತ್ರೆಯನ್ನು ಇಡಲು ಉಪಯುಕ್ತವಾಗಿರುತ್ತದೆ. ಈ ಉಟ್ಟಿಯನ್ನು ಅಡುಗೆ ಮನೆಯಲ್ಲಿರುವ ಒಂದು ತುಂಡು ತೊಲೆಗೆ ನೇತುಹಾಕುತ್ತಾರೆ. ಇದರಲ್ಲಿಟ್ಟ ಹಾಲಿನ ಪಾತ್ರೆಯನ್ನಾಗಲಿ, ಮೊಸರಿನ ಮಡಕೆಯನ್ನಾಗಲಿ, ಮಕ್ಕಳು ಮುಟ್ಟದಿರುವಂತೆ ಜೋಪಾನ ಮಾಡಲು ಇದರಿಂದ ಸಾಧ್ಯ.

ಇದರಲ್ಲಿಯ ಪದಾರ್ಥಗಳಿಗೆ ಇರುವೆ ಮುತ್ತುವುದಿಲ್ಲ. ನೆಲವು ಮಾಮೂಲು ವಸ್ತುವಾಗಿ ಉಳಿಯದೆ, ತೆಲುಗು ಭಾಷೆಯಲ್ಲಿ ಬಳಕೆಯಲ್ಲಿರುವ ಗಾದೆಗಳಿಂದ ಮಹತ್ತ್ವ ಪಡೆದಿದೆ. ‘ನೆಲವಿಗೆ ಹತ್ತದವಳು ಸ್ವರ್ಗಕ್ಕೆ ಹತ್ತುವಳೇ’, ‘ಬೆಕ್ಕಿನ ಶಾಪಕ್ಕೆ ಕೆಲವು ಉದುರುತ್ತದೆಯೇ?’ ಎನ್ನುವ ಗಾದೆಗಳು ಜನಪ್ರಿಯವಾಗಿವೆ.

– ಪಿ.ಎಸ್.ಸಿ. ಅನುವಾದ ವಿ.ಆರ್.

ಉಡುಕ್ಕು ತಮಿಳುನಾಡಿನ ಒಂದು ಚರ್ಮವಾದ್ಯ (ಬುಡುಬುಡಿಕೆ). ಇದು ಪಗೈಯ ಬಗೆಗಳಲ್ಲಿ ಒಂದಾಗಿದೆ. ಇದೊಂದು ಪ್ರಾಚೀನ ಸಂಗೀತೋಪಕರಣ. ಈ ವಾದ್ಯದ ನಡುಭಾಗ ಚಿಕ್ಕದಾಗಿಯೂ ಬದಿಗಳು ದೊಡ್ಡದಾಗಿಯೂ ಇರುತ್ತವೆ. ಇದರ ಒಡಲ ಭಾಗ ಮಣ್ಣು, ಮರ, ಹಿತ್ತಾಳೆಯಿಂದ ಮಾಡಲ್ಪಟ್ಟಿರುತ್ತದೆ. ಈಗ ಮಣ್ಣಿನಿಂದ ತಯಾಡಿಸ್ಪಟ್ಟ ಬುಡುಬುಡಿಕೆ ಸಿಗುವುದು ಕಷ್ಟ. ಈಗ ಬಹುಪಾಲು ಮರದಿಂದ ಮತ್ತು ಹಿತ್ತಾಳೆಯಿಂದಲೇ ತಯಾರಿಸಲ್ಪಡುವುವು. ಚರ್ಮಗಳ ಸತ್ತು ಬದಿಗಳಲ್ಲಿ ಚಿಕ್ಕ ತೂತುಗಳಿರುವುವು. ಇವುಗಳ ಮೂಲಕ ಒಂದು ಉದ್ದವಾದ ಹಗ್ಗವನ್ನು ಎರಡೂ ಬದಿಗಳಿಂದಲೂ ಬದಲಿಸಿ ಬದಲಿಸಿ ಗಟ್ಟಿಯಾಗಿ ಕಟ್ಟಲಾಗಿರುತ್ತದೆ. ಈ ಹಗ್ಗವನ್ನು ಸುತ್ತಿ ಮಧ್ಯದಲ್ಲಿ ಒಂದು ಪಟ್ಟಿ (ಲಾಡಿ) ಇರುತ್ತದೆ. ನುಡಿಸುವವರು ಈ ಪಟ್ಟಿಯನ್ನು ಒತ್ತುವುದರಿಂದ ಸಾಧನಗಳ ಶ್ರುತಿ ಹೆಚ್ಚಾಗಿ ‘ಜಾರುಗಮಗಂ’ ಎಂಬಂತಹ ಒಂದು ನಾದ ಏಳುತ್ತದೆ. ಇದು ಕೇಳುವುದಕ್ಕೆ ತುಂಬ ಮಧುರವಾಗಿರುತ್ತದೆ. ಬುಡುಬುಡಿಕೆಯನ್ನು ಅದರ ನಡುವಿನಲ್ಲಿ ಎಡಗೈಯಿಂದ ಹಿಡಿದುಕೊಂಡು ಬಲಗೈಯಿಂದ ಅದನ್ನು ಬಾರಿಸುತ್ತಾರೆ. ಮಾರಿಯಮ್ಮನ ದೇವಸ್ಥಾನಗಳಲ್ಲೂ ಬೇರೆ ಗ್ರಾಮದೇವತೆಗಳ ದೇವಸ್ಥಾನಗಳಲ್ಲೂ ನುಡಿಸುವುದನ್ನು ಕೇಳಬಹುದು.

ಈ ಉಪಕರಣ ಡಮರುಗದಂತ ಆಕೃತಿಯನ್ನು ಹೊಂದಿರುವುದು ಇದು ಅಳತೆಯಲ್ಲಿ ದೊಡ್ಡದು. ಈ ಉಪಕರಣ ಒಂದಡಿ ಉದ್ದವಾಗಿರುತ್ತದೆ. ಬೀದಿಯಲ್ಲಿ ಹಾಡುವವರು ತಮ್ಮ ಹಾಡಿಗೆ ಹಿನ್ನೆಲೆಯಾಗಿ ಈ ವಾದ್ಯವನ್ನು ನುಡಿಸುತ್ತಾರೆ. ಶಕುನ(ಕಣಿ) ಹೇಳುವರು ಭೂತಪಿಶಾಚಿಗಳನ್ನು ಓಡಿಸುವುದಕ್ಕೆ ಹಾಗೂ ಇಷ್ಟದೇವತೆಗಳನ್ನು ಯಾಚಿಸುವುದಕ್ಕೆ ಬುಡುಬುಡಿಕೆಯನ್ನು ಬಾರಿಸುತ್ತಾರೆ. ಬುಡುಬುಡಿಕೆ ಎನ್ನುವ ಈ ಉಪಕರಣ ಮೃದುವಾದ ಒಂದು ವಾದ್ಯವಾಗಿದೆ. ಈ ವಾದ್ಯವನ್ನು ಮಧ್ಯದ ತರಗತಿಯ ಉಪಕರಣಗಳ ಬಗೆಯೊಳಗೆ ಸೇರಿಸಲಾಗಿದೆ. ಭೈರವಮ ಮುರುಗ, ದುರ್ಗಿ ಮೊದಲಾದ ಮೂರು ಮಂದಿ ದೇವರಿಗೂ ರಚಿಸಲಾಗುವ ಚರ್ಮದ ಉಪಕರಣಗಳಲ್ಲಿ ಬುಡುಬುಡಿಕೆ ಮುಖ್ಯವಾದುದಾಗಿದೆ. ಬುಡುಬುಡುಕೆ ಎನ್ನುವ ಈ ವಾದ್ಯವನ್ನು ಶಿವನ ಚಿಹ್ನೆಯಾಗಿಯೂ ಪರಿಗಣಿಸಲಾಗುತ್ತದೆ.

ಕರ್ನಾಟಕದಲ್ಲೂ ಕೇರಳರಾಜ್ಯದಲ್ಲೂ ಕಳ್ಳರನ್ನು ಹಿಡಿಯಲು ಈ ಬುಡುಬುಡಿಕೆಯನ್ನು ವಿಚಿತ್ರ ಉಪಕರಣವಾಗಿ ಉಪಯೋಗಿಸುವ ಪದ್ಧತಿ ಬಳಕೆಯಲ್ಲಿದೆ. ಹಿಂದಿನ ಕಾಲದಲ್ಲಿ ಬಂದು ಕಳ್ಳತನ ನಡೆದು ಕಳ್ಳನನ್ನು ಹಿಡಿಯಲು ಸಾಧ್ಯವಾಗದೇ ಹೋದಾಗ ಬುಡುಬುಡಿಕೆ ಬಾರಿಸುವವರನ್ನು ಕರೆಸಿ ಅದನ್ನು ಬಾರಿಸುವಂತೆ ಮಾಡುತ್ತಾರೆ. ಬುಡುಬುಡಿಕೆಯವರು ಊರಿನ ಮಧ್ಯೆ ಹೋಗಿ ನಿಂತುಕೊಂಡು ಕಳ್ಳನನ್ನು ಕುರಿತು ನಿಂದಿಸಿ ಹಾಡುತ್ತಾ ಬುಡುಬುಡಿಕೆಯನ್ನು ಬಾರಿಸುತ್ತಾನೆ. ಅವರ ನಿಂದೆಯ ಮಾತುಗಳನ್ನು ಕೇಳಲಾಗದೆ ಕಳ್ಳನು ತಾನಾಗಿಯೇ ಮುಂದೆ ಬಂದು ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ ಅಥವಾ ಬುಡುಬುಡಿಕೆ ಬಾರಿಸುವವನನ್ನು ಎದುರಿಸಿ ಮಾತನಾಡಿ ಬಿಡುತ್ತಾನೆ. ಆ ಮೂಲಕ ಊರವರು ಕಳ್ಳನನ್ನು ಕಂಡುಹಿಡಿಯುತ್ತಾರೆ.

ಕೇರಳ ರಾಜ್ಯದಲ್ಲಿ ಬಳಕೆಯಲ್ಲಿರುವ ಬುಡುಬುಡಿಕೆಗಳಲ್ಲಿ ‘ಇಕ್ಕಾ’ ಎಂಬುದು ಒಂದು. ಹಲವು ಶತಮಾನಗಳ ಹಿಂದಿನ ಕರ್ನಾಟಕದ ಶಿಲ್ಪಗಳಲ್ಲಿ ಈ ಉಪಕರಣ ಕಂಡುಬರುತ್ತದೆ. ಸುಮಾರು ಮುಕ್ಕಾಲು ಮೀಟರು ಉದ್ದವಿರುವ ಈ ವಾದ್ಯದ ಶರೀರ ಮರದಿಂದ ತಯಾರಾಗಿದೆ. ಚರ್ಮವನ್ನು ಎರಡು ಲೋಹದ ಬಳೆಗಳಿಂದ ಎಳೆದು ಬಿಗಿಯಾಗಿ ಕಟ್ಟಿ ದೇಹದ ಎರಡು ಬದಿಗಳಲ್ಲೂ ಸೇರಿಸಲಾಗುತ್ತದೆ. ಅದರ ಬಾಯಿಯ ಹತ್ತಿರ ತೆಂಗಿನಮರದ ಎರಡು ಕಡ್ಡಿಗಳನ್ನು ಸೇರಿಸುವುದರಿಂದ ವಾದ್ಯದ ಧ್ವನಿಯನ್ನು ಒಂದು ಝೀಂಕಾರ ಧ್ವನಿಸುತ್ತಲೇ ಇರುತ್ತದೆ. ಎರಡು ತಲೆಗಳು ಹತ್ತಿಯ ನೂಲಿನ ಲಾಡಿಗಳಿಂದ ಶರೀರದೊಂದಿಗೆ ಸೇರಿಸಿ ಕಟ್ಟಿದ ಚರ್ಮಗಳು ದೇಹದೊಂದಿಗೆ ಶಾಶ್ವತವಾಗಿ ಕಟ್ಟಲ್ಪಡುವುದಿಲ್ಲ. ಎರಡು ಮುಖಗಳನ್ನೂ ಸೇರಿಸಿ ಕಟ್ಟಿರುವ ಲಾಡಿಗಳ ಮೇಲೆ ಉಪಕರಣದ ಕುಗ್ಗಿದ ಭಾಗದಲ್ಲಿ ಮತ್ತೊಂದು ಲಾಡಿಯನ್ನು ಕಟ್ಟಲಾಗಿರುತ್ತದೆ. ವಾದ್ಯವನ್ನು ತೋಳಿನಲ್ಲಿ ಜೋತಾಡಿಸಿಕೊಳ್ಳುವುದಕ್ಕಾಗಿ ಕಟ್ಟಿರುವ ಚರ್ಮದ ಪಟ್ಟಿಯೊಂದಿಗೆ ಈ ಲಾಡಿಯನ್ನು ಜೋಡಿಸಲಾಗುತ್ತದೆ. ಇದನ್ನು ತೋಳಿನಲ್ಲಿ ಧರಿಸಿಕೊಂಡು ಒಂದು ಕೈಯ ಕೋಲಿನಿಂದ ಒಂದು ಬದಿಯನ್ನು ಹೊಡೆದಾಗ ಮತ್ತೊಂದು ಕೈಯನ್ನು ಲಾಡಿಗಳ ಅಡಿಯಲ್ಲಿ ನುಗ್ಗಿಸಿಬಿಡುತ್ತಾರೆ. ಮಧ್ಯದಲ್ಲಿ ಕಟ್ಟಿರುವ ಲಾಡಿಯನ್ನು ಅವರು ಗಟ್ಟಿಯಾಗಿ ಹಿಡಿದುಕೊಂಡು ಬುಡುಬುಡಿಕೆಯ ಶರೀರವನ್ನು ಹಿಡಿದು ತೋಳಿನಿಂದ ನೇತಾಡುವವರೆಗೆ ಸ್ವಲ್ಪ ಎಳೆದು ಹಿಡಿದುಕೊಳ್ಳುವರು. ಈ ರೀತಿಯ ಉಪಾಯಗಳನ್ನು ಮಾಡಿ ಬುಡುಬುಡಿಕೆಯನ್ನು ಬಾರಿಸುವವರು ಅಸಂಖ್ಯಾತ ಧ್ವನಿಜಾಲಗಳನ್ನು ಹುಟ್ಟಿಸುತ್ತಾರೆ.

ಅರ್ಚಕರು ಉಪಯೋಗಿಸುವ ದೊಡ್ಡ ಬುಡುಬುಡಿಕೆಯನ್ನು ‘ತವಂಡೈ’ ಎನ್ನುತ್ತಾರೆ. ಇದನ್ನು ಆಡಿನ ತೆಳುವಾದ ಚರ್ಮದಿಂದ ಮುಚ್ಚಲಾಗಿರುತ್ತದೆ. ಈ ಬುಡುಬುಡಿಕೆಯನ್ನು ಕುರಿತು ಉಲ್ಲೇಖ ಹಲವಾರು ಶಿಲಾಶಾಸನಗಳಲ್ಲಿ ನಮಗೆ ದೊರೆಯುತ್ತದೆ.

– ಟಿ.ಜಿ. ಅನುವಾದ ಎ.ಎಸ್.ಬಿ.

ಉಡುಕ್ಕೈಪ್ಪಾಟ್ಟು ತಮಿಳುನಾಡಿನ ಜನಪ್ರಿಯ ವಾದ್ಯ. ‘ಉಡುಕ್ಕೈ’ ಎಂದರೆ ಡಮರುಗ. ಇದರ ಎರಡು ಬದಿಗಳಲ್ಲೂ ಚಿಕ್ಕ ತಮಟೆಯಂತಹ ಆಕಾರ ಇರುತ್ತದೆ. ಇದನ್ನು ಒಂದು ಕೈಯಲ್ಲಿ ಎತ್ತಿ ಹಿಡಿದುಕೊಂಡು ಆಡಿಸಿ ಧ್ವನಿ ಎಬ್ಬಿಸುವಂತೆಯೇ, ಇನ್ನೊಂದು ಕೈಯಿಂದ ಬಡಿದೂ ಧ್ವನಿ ಹೊರಡಿಸಬಹುದಾಗಿದೆ. ಹೊಂಗೆ, ಹಲಸಿನ ಮರ ಹಾಗೂ ಹಿತ್ತಾಳೆಯನ್ನು ಡಮರುಗವನ್ನು ತಯಾರಿಸುತ್ತಾರೆ. ಎರಡೂ ಬದಿಗಳಲ್ಲಿ ಬಡಿಯಲು ಅನುಕೂಲವಾಗವಂತಿರುವ ತಮಟೆಯಂತಹ ಆಕಾರದಲ್ಲಿ ಉಡದ ಚರ್ಮವನ್ನು ಬಳಸುತ್ತಾರೆ. ಪ್ರಾಚೀನ ಸಾಹಿತ್ಯ, ಶಿಲ್ಪ – ಚಿತ್ರಕಲೆಗಳಲ್ಲಿ ಡಮರುಗದ ಬಗೆಗೆ ದಾಖಳೆಗಳಿವೆ. ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದ ನೃತ್ಯ ಶಿಲ್ಪವೆಂದು ‘ರೋತಿನ್’ ಮುಂತಾದ ಶಿಲ್ಪ ತಜ್ಞರು ತಿಳಿಸಿರುವ ನಟರಾಜ ಶಿಲ್ಪದ ಕೈಯಲ್ಲಿರುವುದು ಡಮರುಗವೇ ಆಗಿದೆ.

ಜಾನಪದ ಆರಾಧನಾ ಸಂದರ್ಭಗಳಲ್ಲೂ, ಕೆಲವು ಸಮೂಹ ಆಚರಣೆಗಳ ಸಂದರ್ಭಗಳಲ್ಲೂ ಉದಾಹರಣೆಗೆ ಗುರಿ ಹೇಳುವುದು, ದೆವ್ವ ಓಡಿಸುವುದು) ಡಮರುಗ ಬಾರಿಸುವುದನ್ನು ಕಾಣಬಹುದು. ತಮಿಳುನಾಡಿನ ಬಹುಪಾಲು ಗ್ರಾಮಗಳಲ್ಲಿ ಡಮರುಗ ನುಡಿಸುವುದು, ಕಂಡುಬಂದರೂ, ಕೊಯಂಬತ್ತೂರು, ಜಿಲ್ಲೆಯಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.

ದೇವಾಲಯದ ಪೂಜರಿಗಳೂ, ಭಂಡಾರಿಗಳೂ ಡಮರುಗ ಬಾರಿಸುತ್ತಾರೆ. ಡಮರುಗ ನುಡಿಸುವುದನ್ನೇ ತಮ್ಮ ಜೀವನಾಧಾರವನ್ನಾಗಿ ಹೊಂದಿರುವವರೂ ಇದ್ದಾರೆ. ಹಿಂದಿನ ಕಾಲದಲ್ಲಿ ಕೇವಲ ಗಂಡಸರಷ್ಟೇ ಇದನ್ನು ನುಡಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹೆಂಗಸರೂ ಡಮರುಗ ಬಾರಿಸುವುದನ್ನು ಕಾಣಬಹುದು.

ಕಥನಗೀತೆಗಳನ್ನು ಅಥವಾ ಲಾವಣಿಗಳನ್ನು ಹೇಳುವಾಗಲೂ ಡಮರುಗ ಬಾರಿಸುತ್ತಾರೆ. ಹೀಗೆ ಇವೆಲ್ಲವುಗಳ ಸಮ್ಮೇಳನದಲ್ಲಿ ಹಾಡುವ ಹಾಡು ತಾರಸ್ಥಾಯಿಯಲ್ಲಿರುತ್ತದೆ. ಪಂಬೈ ಹಾಗೂ ‘ಡಮರುಗ ಎರಡನ್ನೂ ಒಂದೇ ಮೂಲದಿಂದ ಬಂದವುಗಳೆಂದು ಸೇರಿಸಿ ಹೇಳುವುದುಂಟು. ‘ಡಮರುಗ ಹುಟ್ಟಿತಮ್ಮಾ ರುದ್ರಾಕ್ಷಿ ಭೂಮಿಯಲಿ ! ಪಂಬೈ ಹುಟ್ಟಿತಮ್ಮಾ ಸ್ಫಟಿಕದ ಭೂಮಿಯಲಿ’ ಎಂದು ಮಾರಿಯಮ್ಮನ ಮುಂದೆ ಹಾಡುವ ಜೋಗುಳದ ಹಾಡಿನ ಸಾಲುಗಳು ಮೇಲಿನ ಮಾತನ್ನು ಪುಷ್ಟೀಕರಿಸುತ್ತವೆ.

ಕಾತ್ತವರಾಯನ್, ಮದುರೈವೀರನ್, ಕರುಪ್ಪುಸ್ವಾಮಿ, ಸುಡಲೈಮಾಡನ್, ಇಡುಂಬಿನಿ, ಲಾಡಸನ್ಯಾಸಿ, ಅಂಗಾಳಮ್ಮನ್, ಪೆರಿಯಾಚ್ಚಿ, ಕಾಳಿ, ಅಣ್ಣನ್‌ಮಾರ್ ಮುಂತಾದ ಗ್ರಾಮದೇವತೆಗಳ ಆರಾಧನಾ ಸಮಯದಲ್ಲಿ ಡಮರುಗ ಬಾರಿಸುತ್ತಾರೆ. ಕೆಲವು ಕಡೆ ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ, ದೇವಾಲಯದ ಹೊರಬಾಗಿಲಿನ ಮುಂದೆ ಒಂದು ವೇದಿಕೆ ನಿರ್ಮಿಸಿಕೊಂಡು ಹಲವಾರು ದಿನಗಳವರೆಗೂ, ರಾತ್ರಿಯ ಹೊತ್ತಿನಲ್ಲಿ ಡಮರುಗ ಬಾರಿಸುತ್ತಾ ಹಾಡುತ್ತಾರೆ. ಒಬ್ಬರು ಹಾಡು ಹಾಡಿದರೆ, ಮತ್ತೊಬ್ಬರು ಅದನ್ನು ವಿವರಿಸುತ್ತಾರೆ. ಇಬ್ಬರಿಗಿಂತ ಹೆಚ್ಚಿನ ಜನರೂ ಡಮರುಗದ ಹಾಡು ಹೇಳುವುದುಂಟು. ಹಾಡನ್ನು ಆರಂಭಿಸುವ ಮುನ್ನ ಮೂಲಮಂತ್ರ, ವೃತ್ತ. ಜಪಗಳನ್ನು ಆದಿತಾಳ, ಮಲ್ಹಾರಿ ರಾಗಗಳೊಂದಿಗೆ ಹೇಳುತ್ತಾರೆ.

ಪಾದಾರವಿಂದವ ನಂಬಿ
ನಮಿಸುವೆ ತಾಯೆ ನಿನ್ನಡಿಗಳಿಗೆ !
ಕರುಣೆ ತೋರಿ ಎನ್ನನು
ನೀ ಕಾಯಿ ತಾಯೇ!

ಹೀಗೆ ಹಾಡುಗಳನ್ನು ಹಾಡತೊಡುಗುತ್ತಾರೆ. ವಾದ್ಯಸಂಗೀತ, ಕಥನಗೀತೆ, ಬಯಲಾಟ, ರಂಗಸನ್ನಿವೇಶಗಳು, ನಿರ್ದಿಷ್ಟ ಆಚರಣೆಗಳು ಇತ್ಯಾದಿ ಸಂದರ್ಭಗಳಲ್ಲಿ ಡಮರುಗ ಬಾರಿಸುತ್ತಾರೆ. ಯಾವುದಾದರೊಂದು ಕಥಾ ಸನ್ನಿವೇಶವನ್ನು ಜನರಿಗೆ ವಿವರಿಸಲೂ, ಅವರನ್ನು ಆಕರ್ಷಿಸಲೂ, ಸಂತೋಷ ಪಡಿಸಲೂ, ಅವರಲ್ಲಿ ತಿಳಿವಳಿಕೆಯನ್ನು ತುಂಬಲೂ, ಆವೇಶ, ಉದ್ವೇಗದ ಸನ್ನಿವೇಸಗಳನ್ನು ಮನಮುಟ್ಟುವಂತೆ ಮಾಡಲೂ, ದೇವರು – ದೇವ್ವ ಮೈಮೇಲೆ ಬಂದಾಗ ಅವರ ಮಾತುಗಳನ್ನು ಗಂಭೀರವಾಗಿಸಲೂ – ಹೀಗೆ ಹಲವು ಸಂದರ್ಭಗಳಲ್ಲಿ ಡಮರುಗ ಬಳಕೆಯಾಗುತ್ತದೆ. ‘ವರುಂದಿ ವರವಳೈತ್ತಲ್’ ಎಂಬ ಹಾಡಿನ ಪ್ರಕಾರದಲ್ಲೂ ಇದನ್ನು ಬಳಸಿಕೊಳ್ಳುಲಾಗುವುದು.

ಡಮರುಗ ಬಾರಿಸುತ್ತಾ ಆಡಿದರೆ, ದುಷ್ಟಶಕ್ತಿಗಳು ದೂರವಾಗಿ, ಒಳ್ಳೆಯದು ನಡೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಅಡೆತಡೆಗಳು ದೂರಾಗಿ, ತಮ್ಮ ಕಾರ್ಯದಲ್ಲಿ ಯಶಸ್ಸು ದೊರಕುತ್ತದೆ, ಮಳೆ ಸುರಿಯುತ್ತದೆ ಎಂಬ ನಂಬಿಕೆಯೂ ಇದೆ. ಈ ನಂಬಿಕೆಗಳನ್ನು ದೂರ ಮಾಡಲಾಗದಷ್ಟು ಆಳವಾಗಿ ಅವು ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದೆ.

– ಇ.ಎಲ್. ಅನುವಾದ ಟಿ.ಎಸ್.

ಉತ್ತರ ಕನ್ನಡದ ಗೊಂಡರು ಶಿವಮೊಗ್ಗ ಜಿಲ್ಲೆಯ ಜೋಗದಿಂದ ಬಚಗಾರು, ಕೋಗಾರು ಮಾರ್ಗವಾಗಿ ಭಟ್ಕಳದ ರಸ್ತೆ ಹಿಡಿದರೆ ಸುಮಾರು ೭೦ಕಿ.ಮೀ. ಉದ್ದದ ರಸ್ತೆಯಲ್ಲಿ ಮನಸ್ಸಿಗೆ ನೆಮ್ಮದಿ ಕೊಡಬಹುದಾದ ಅಚ್ಚಹಸುರಿನ ಕಾಡು ಕಣ್ಣು ತುಂಬಿಕೊಳ್ಳುತ್ತದೆ. ನಿತ್ಯಹರಿದ್ವರ್ಣ ಎಂದು ಹೇಳಬಹುದಾದ, ಸದಾ ಹಸಿರು ಚೆಲ್ಲುವ ನಾನಾ ಜಾತಿಯ ಮರಗಿಡಬಳ್ಳಿಗಳಿಂದ ಕಂಗೊಳಿಸುವ ಈ ಅರಣ್ಯ ಪ್ರದೇಶ ಗೋವರ್ಧನಗಿರಿ, ಕಾನೂರು ಕೋಟೆ, ಮೇಘಾನೆ ಮುಂತಾದ ಬೆಟ್ಟ ಸಾಲುಗಳನ್ನು ಒಳಗೊಳ್ಳುತ್ತದೆ.

ಈ ಬೆಟ್ಟ ಸಾಲುಗಳು ಮತ್ತು ಉತ್ತರ ಕನ್ನಡ ಜಿಲ್ಲೆಯ ಭಟ್ಕಳಗಳ ನಡುವಿನ ಹೆಗ್ಗಾಡಿನ ಹಲವು ತಾಣಗಳಲ್ಲಿ ತಮ್ಮ ನೆಲೆ ಕಂಡುಕೊಂಡಿರುವ ಗೊಂಡರು ಸಾಂಸ್ಕೃತಿಕವಾಗಿ ತುಂಬಾ ವೈಶಿಷ್ಟ್ಯಪೂರ್ಣ ಜನಾಂಗ. ಇವರು ಆಂಧ್ರಪ್ರದೇಶ ಮತ್ತು ಮಧ್ಯ ಪ್ರದೇಶಗಳ ಕಡೆಯಿಂದ ಯಾವುದೋ ಕಾಲದಲ್ಲಿ ವಲಸೆ ಬಂದಿರಬಹುದೆಂದು ಕೆಲವರ ವಾದ. ಆದರೆ ಅದಕ್ಕೆ ತಕ್ಕ ಪುರಾವೆಗಳಿಲ್ಲ. ಇದೊಂದು ಊಹೆ ಅಷ್ಟೇ. ಏಕೆಂದರೆ ಗೊಂಡರು ಅಚ್ಚ ಕನ್ನಡಿಗರು. ಬೇರೆ ಭಾಷೆಯ ಅಥವಾ ತೆಲುಗು ಮತ್ತಿತರ ಭಾಷೆಗಳ ಲವಲೇಶ ಗಂಧವೂ ಇವರಿಗಿಲ್ಲ. ಇವರ ಮೈಬಣ್ಣ ಮುಖಚಹರೆ ಮತ್ತು ವೇಷಭೂಷಣಗಳು ಕೂಡ ಹೊರಗಿನದಲ್ಲ. ಅಲ್ಲದೆ ಇವರು ಆಚರಿಸುವ ಹಾಗೂ ಅನುಸರಿಸುವ ಆಚರಣೆ ಹಾಗೂ ಸಂಪ್ರದಾಯಗಳು ಮಲೆನಾಡಿನ ಒಕ್ಕಲಿಗರ ಹಾಗೂ ಉತ್ತರ ಕನ್ನಡದ ಹಾಲಕ್ಕಿ ಒಕ್ಕಲಿಗರ ಸಂಪ್ರದಾಯಗಳನ್ನೇ ಹೆಚ್ಚಾಗಿ ಹೋಲುತ್ತದೆ. ಹೀಗಾಗಿ ‘ಗೌಡ’ ಪದವೇ ಗೊಂಡ ಆಗಿರುವಾಗ ಸಾಧ್ಯತೆಗಳೇ ಹೆಚ್ಚು. ಅಲ್ಲದೆ ಗೊಂಡರು ಪ್ರದಾನವಾಗಿ ಬೇಸಾಯಗಾರರು. ಬೇಟೆ ಅಥವಾ ಇತರ ಉಪಕಸುಬು ಇವರಿಗೆ ಪ್ರಮುಖ್ಯವಲ್ಲ. ಆದರೆ, ಹೆಗ್ಗಾಡಿನಲ್ಲಿ ನೆಲೆ ಕಂಡುಕೊಂಡು ಅನಾದಿ ಕಾಲದಿಂದ ವಾಸವಾಗಿರುವ ಇವರು ಹೊರ ಜಗತ್ತಿನಿಂದ ಬೇರ್ಪಟ್ಟವರು.

ನಾಗವಳ್ಳಿ, ಹಾಡುವಳ್ಳಿ, ಕುಂಟುವಾಣೀ, ಮಾರುಕೇರಿ, ಹಲ್ಯಾಣಿ, ಭಟ್ಕಳ ಮತ್ತು ಶಿರಾಲಿ ಮುಂತಾದಂತೆ ಹೆಗ್ಗಾಡಿನ ಹಲವು ತಾಣಗಳಲ್ಲಿರುವ ಗೊಂಡವರು ತಮ್ಮ ಮನೆಗಳನ್ನು ಸುಂದರ ತಾಣಗಳಲ್ಲಿ ಕಟ್ಟಿಕೊಂಡಿದ್ದಾರೆ. ಭಟ್ಕಳ ಮತ್ತು ಶಿರಾಲಿಯ ಗೊಂಡರು ನಗರ ಜೀವನದ ರುಚಿಯನ್ನು ಕಂಡವರು. ಆದರೆ ಭಟ್ಕಳದಿಂದ ಹತ್ತು ಕಿ.ಮೀ. ಹಿಂದೆ ಸರಿದರೆ ಸಿಗುವ ಮಹಾಕಾಡಿನಲ್ಲಿರುವ ಗೊಂಡದ ಸಾಂಸ್ಕೃತಿಕ ಸಿರಿತನವೇ ಬೇರೆ. ಅವರ ಪರಿಸರ ಸಂಪೂರ್ಣ ಭಿನ್ನವಾದದ್ದು.

ನೀಲ ಪರ್ವತ ಸಾಲುಗಳ ಹಿನ್ನೆಲೆಯಲ್ಲಿ ಮರಗಿಡಬಳ್ಳಿಗಳ ನಡುವೆ ವಿಶಾಲ ಹುಲ್ಲಿನ ಹಾಸು ಮನೆ.(ಅಲ್ಲಲ್ಲಿ ಮಂಗಳೂರು ಹೆಂಚುಗಳೂ ಕಾಣಿಸಿಕೊಳ್ಳುತ್ತಿವೆ) ಇತರ ಗಿರಿಜನರಿಗೆ ಹೋಲಿಸಿದರೆ ಗೊಂಡರ ಮನೆಗಳು ವಿಶಾಲವಾದವುಗಳು. ಮನೆ ಮುಂಭಾಗದಲ್ಲಿ ಕಣ. ಕಣದ ಮಧ್ಯೆ ಮೇಟಿ, ಕಣದ ಒಂದು ಪಕ್ಕದಲ್ಲಿ ತುಳಸೀ ಕಟ್ಟೆ, ಮತ್ತೊಂದು ಪಕ್ಕದಲ್ಲಿ ಬತ್ತದ ಹುಲ್ಲಿನಮುಡಿ, ಅದರಲ್ಲಿ ಬತ್ತ ತುಂಬಿ ಯಾವ ಮಳೆ ಗಾಳಿಗೂ ಜಗ್ಗದಂತೆ ಭದ್ರಗೊಳಿಸುತ್ತಾರೆ. ಇದೊಂದು ಜಾನಪದ ಕೃಷಿ ವಿಶೇಷ. ಗೊಂಡರ ಪ್ರತಿ ಮನೆ ಮುಂದೆಯೂ ಮೇಟಿ ಕಂಬ, ತುಳಸೀಕಟ್ಟೆ ಮತ್ತು ಈ ಬತ್ತದ ಮುಡಿ ಇದ್ದೇ ಇರುತ್ತದೆ. ಮನೆಯ ಒಳಗಿನ ಮೂಲೆಯಲ್ಲಿ ಗೋಡೆಗೆ ಒರಗಿಸಿದಂತೆ ಒಂದು ಮಂಚವಿರುತ್ತದೆ. ಈ ಮಂಚಕ್ಕೂ ಒಂದು ವಿಶೇಷವುಂಟು. ಮನೆಯ ಹಿರಿಯ ಈ ಮಂಚದ ಮೇಲೆ ಮಲಗುತ್ತಾನೆ. ಮನೆಯಲ್ಲಿ ಮದುವೆಯಾದಾಗ ಮದುಮಕ್ಕಳನ್ನು ಇದೇ ಮಂಚದ ಮೇಲೆ ಕೂರಿಸಿ ಧಾರೆ ಎರೆಯುತ್ತಾರೆ. ಒಳಕೋಣೆಯನ್ನು ‘ದೇವರ ಕೋಣೆ’ ಎನ್ನುತ್ತಾರೆ. ಶಾಖಾಹಾರದ ಕೋಣೆಯೂ ಇದೇ. ಈ ಕೋಣೆಯಲ್ಲಿ ಸಾಮಾನ್ಯವಾಗಿ ತಿರುಪತಿ ವೆಂಕಟರಮಣನ ಫೋಟೋ ಇರುತ್ತದೆ. ಎಲ್ಲ ಗೊಂಡರೂ ತಿರುಪತಿಯ ವಿಶೇಷ ಭಕ್ತರು. ಈ ಮನೆಗೆ ಹೊಂದಿಕೊಂಡಂತೆ ಪಕ್ಕದ ಪುಟ್ಟ ಗುಡಿಸಲಿನಲ್ಲಿ ದೊಡ್ಡ ಹಂಡೆ. ಸದಾ ನೀರು, ಇಲ್ಲಿ ಕೈಕಾಲು ತೊಳೆದೇ ಒಳ ಹೋಗಬೇಕು. ದನಕರುಗಳನ್ನು ಕಟ್ಟಲು ಪ್ರತ್ಯೇಕ ಕೊಟ್ಟಿಗೆ ಇರುತ್ತದೆ. ಗೊಂಡರು ಪ್ರಮುಖವಾಗಿ ವ್ಯವಸಾಯ ಮಾಡುವವರಾದ್ದರಿಂದ ಇವರ ಕೊಟ್ಟಿಗೆಯ ತುಂಬ ವಿಶೇಷವಾದ ಕೃಷಿ ವಸ್ತುಗಳೇ ತುಂಬಿರುತ್ತವೆ. ನೊಗ, ಜೊತೆಗೆ ಕುಕ್ಕೆ, ಉಪ್ಪಿನ ಮರಿಗೆ, ನೀರಿನ ಮರಿಗೆ, ಬೆತ್ತ ಮತ್ತು ಬಿದಿರಿನ ಕಲಾತ್ಮಕ ಬುಟ್ಟಿ, ಹೆಡಿಗೆ ಮುಂತಾದ ವಸ್ತುಗಳು ವಿಶೇಷ ವಿನ್ಯಾಸಗಳಿಂದ ಕೂಡಿರುತ್ತವೆ. ಗೊಂಡರ ನೊಗ ನಿಜಕ್ಕೂ ಸುಂದರವಾದದ್ದು. ಗೊಂಡರೂ ಈಗಲೂ ಸೇರು ಅಥವಾ ಕೆ.ಜಿ. ಲೆಕ್ಕ ಕಂಡಿಲ್ಲ. ಅವರದೇ ಆದ ಅಳತೆಯ ಸಾಮಾನುಗಳನ್ನು ಇಟ್ಟುಕೊಂಡಿದ್ದಾರೆ. ಕೊಳಗ, ಆನೆ, ಸಿದ್ದಿ, ಅಳ್ಳ, ಇವರ ಅಳತೆಯ ಸಾಧನೆಗಳು. ನಮ್ಮಲ್ಲಿ ಹಿಂದೆ ಬಳ್ಳ, ಪಡಿ, ಪಾವು ಇದ್ದ ನೆನಪು ಇವುಗಳನ್ನು ನೋಡಿದಾಗ ಬರುತ್ತದೆ. ಗೊಂಡರ ಮನೆಯ ಮಜ್ಜಿಗೆ ಕಡೆಯುವ ಕಡೆಗೋಲು ತುಂಬಾ ಕಲಾತ್ಮಕವಾಗಿರುತ್ತದೆ. ವಿಶೇಷವಾದ ಕುಸುರಿ ಅದಕ್ಕಿರುತ್ತದೆ.

ಎಣ್ಣೆಗೆಂಪು ಬಣ್ಣದ ದೃಢಕಾಯದ ಗೊಂಡರು ಪ್ರಕೃತಿ ಮಾತೆಯಂತೆಯೇ ನೋಡಲು ಸುಂದರ. ಸಂಕುಚಿತತೆ ಇಲ್ಲದ ವಿಶಾಲ ಮನಸ್ಸು, ಸರಳತೆಯೇ ಮೈವೆತ್ತ ಸ್ವಭಾವ, ಮುಗ್ಧ ನೋಟ, ಪ್ರತಿ ಗಂಡಸರ ಕಿವಿಯಲ್ಲೂ ಕೊಂಡಲು, ಕೈಗೆ ಲೋಹದ ಕಡಗ. ಸ್ವಲ್ಪ ಬೋಳಿಸಿದ ತಲೆಗೆ ಹಿಂಜುಟ್ಟಿನ ಸಿಂಗಾರ. ದೊಡ್ಡಅಂಗಿ, ಮೊಣಕಾಲಿನವರೆಗೆ ಮುಂಡಾಸು. ಎಲೆ ಅಡಿಕೆ ಜಗಿದ ರಂಗಿನ ತುಟಿಯ ತುಂಬಾ ನಸುನಗುವಿನ ಅಪ್ಯಾಯಮಾನ ಕಳೆ. ಹೆಂಗಸರು ಸಾಮಾನ್ಯವಾಗಿ ತುರುಬು ಕಟ್ಟುತ್ತಾರೆ. ಕೆಂಪು ಅಥವಾ ನೀಲಿಬಣ್ಣದ ಕಂಬಿ ಸೀರೆ ಸೆರಗನ್ನು ಹಿಂದಿನಿಂದ ತಂದು ಕೊರಳಿಗೆ ಕಟ್ಟಿದ ಸರಕ್ಕೆ ಸಿಕ್ಕಸಿ ಮುಂಭಾಗ ಮುಚ್ಚುವಂತೆ ಮಾಡುತ್ತಾರೆ. ಇದೊಂದು ವಿಶೇಷ ರೀತಿಯ ಉಡುಗೆ. ಸಾಮಾನ್ಯವಾಗಿ ಹಿರಿಯ ಹೆಂಗಸರು ಹೀಗೆ ಸೀರೆಯಲ್ಲೇ ಇಡೀ ಮೈ ಮುಚ್ಚುತ್ತಾರಾದರೆ ಈಗಿನ ಹುಡುಗಿಯರು ಮುದುಕಿಯರನ್ನು ಹಂಗಿಸಲೋ ಎಂಬಂತೆ ಬಣ್ಣ ಬಣ್ಣದ ರವಿಕೆ ತೊಡುತ್ತಾರೆ. ಮೂಗು, ಕಿವಿ ಮತ್ತು ಕುತ್ತಿಗೆಗೆ ವಿವಿಧ ಆಭರಣಗಳನ್ನು ಧರಿಸುವ ಗೊಂಡರ ಹೆಣ್ಣು ಮಕ್ಕಳು ನಿಜಕ್ಕೂ ಸಹಜ ರೂಪಸಿಯರು.

ದೀವಳಿಗೆ, ಶಿವರಾತ್ರಿ, ಹೋಳಿ ಮತ್ತು ಸುಗ್ಗಿ ಗೊಂಡರ ಸಂಭ್ರಮದ ಹಬ್ಬಗಳು. ದೇವರು, ದೈವ, ಭೂತ ಮತ್ತು ಪ್ರೇತಗಳಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿರುವ ಇವರು ತುಂಬಾ ನೇಮನಿಷ್ಠೆಯಿಂದ ಆಚರಣೆ ಸಂಪ್ರದಾಯಗಳನ್ನು ಉಳಿಸಿಕೊಂಡಿದ್ದಾರೆ. ಹೋಳಿ ಮತ್ತು ಶಿವರಾತ್ರಿಗಳಲ್ಲಿ ಇವರು ಕುಣಿಯುವ ಸುಗ್ಗಿ ಮತ್ತು ಹೋಳಿ ಹಳಬು ನೃತ್ಯ ಮಲೆನಾಡಿನ ಗಿರಿಜನರಲ್ಲಿಯೇ ವಿಶಿಷ್ಟವಾದದ್ದು. ತಲೆಗೆ ಪೇಟ, ಕೆಂಪು ಪಂಚೆ, ಕಾಲಿಗೆ ಕಡಗ, ಎದೆಗೆ ಹಳಿದ ವಸ್ತ್ರ, ಕೈಯಲ್ಲಿ ಢಕ್ಕೆ, ಢಕ್ಕೆಯ ತಾಳಕ್ಕೆ ತಕ್ಕಂತೆ ನಿಯತವಾಗಿ ಹೆಜ್ಜೆ. ಹಿಂದೆ ಮುಂದೆ ಸೆಣೆಯುತ್ತಾ ಬಿರುಸಿನಿಂದ ಮಾಡುವ ಈ ನರ್ತನ ಕೂತೂಹಲಕರವಾದದ್ದು. ಇವರ ಜೊತೆಗೆ ಪಟ್ಟೆ ಪಟ್ಟೆಯಾದ ಬಟ್ಟೆ ಹಾಕಿ ಕಾಮನ ವೇಷ ಹಾಕಿ ಹಾಕಿದ ಇಬ್ಬರು ದೊಣ್ಣೆ ಹಿಡಿದು ಕುಣಿಯುತ್ತಾ ಕಲಾವಿದರ ಹಿಂದೆಮುಂದೆ ಓಡಾಡುತ್ತಾರೆ. ಗೊಂಡರ ಮಹಿಳೆಯರು ಸೊಗಸಾದ ಹಾಡುಗಾರ್ತಿಯರು. ತ್ರಿಪದಿಗಳಲ್ಲದೆ ಅನೇಕ ಕಥನಕವನಗಳನ್ನು ಹಾಡುವ ಇವರ‍ಲ್ಲಿ ಅಪೂರ್ವ ಕಲಾವಿದೆಯರಿದ್ದಾರೆ.

ಮೊದಲಿಗೆ ಜಟ್ಟಿಗ, ಬ್ಯಾಟೆಬೀರ, ಮಾಸ್ತಿ, ಚೌಡಿ ಮತ್ತು ಕೊಗ್ತಿ ಮುಂತಾಗಿ ಅವರದೇ ಆದ ದೇವರುಗಳನ್ನು ಪೂಜಿಸುತ್ತಿದ್ದ ಗೊಂಡರು ಯಾವುದೋ ಒಂದು ವಿಶಿಷ್ಟ ಸಂದರ್ಭದಲ್ಲಿ ತಿರುಪತಿ ವೆಂಕಟರಮಣನ ಭಕ್ತರಾದಂತೆ ಕಂಡುಬರುತ್ತದೆ. ಹದಿನೈದು ಹದಿನಾರನೇ ಶತಮಾನದಲ್ಲಿ ದಾಸ ಸಂಪ್ರದಾಯದ ಪ್ರಚಾರಕರು ಮಲೆನಾಡು ಹೊಕ್ಕು, ಇವರನ್ನು ತಮ್ಮ ಅನುಯಾಯಿಗಳನ್ನಾಗಿ ಮಾಡಿಕೊಂಡಂತೆ ಕಾಣುತ್ತದೆ. ಹೀಗಾಗಿ ಗೊಂಡರಲ್ಲಿಯೂ ಪ್ರತಿ ವರ್ಷ ತಿರುಪತಿ ಯಾತ್ರೆ ಕೈಗೊಳ್ಳುವ ಸಾಹಸಿಗರೂ ಉಂಟು. ಯಾತ್ರೆ ಮುಗಿಸಿ ಬಂದ ಮೇಲೆ ಅಥವಾ ಹರಕೆ ಮಾಡಿಕೊಂಡ ಸಂದರ್ಭಕ್ಕೆ ಆಚರಿಸುವ ‘ಹರಿಸೇವೆ’ ತುಂಬಾ ಸಂಕೀರ್ಣವಾದದ್ದು. ಆ ಪ್ರದೇಶದವರಲ್ಲದೆ, ನಂಟರು ಇಷ್ಟರು ಸೇರಿದಂತೆ ನೂರಾರು ಜನರನ್ನು ಆಹ್ವಾನಿಸುವ ಈ ಆಚರಣೆಗೆ ನಲವತ್ತರಿಂದ ಐವತ್ತು ಸಾವಿರ ರೂಪಾಯಿಗಳು ಖರ್ಚು ತಗಲುತ್ತದೆಂಬುದನ್ನು ಕೇಳಿ ತುಂಬಾ ವ್ಯಸನವೂ, ಆಶ್ಚರ್ಯವೂ ಆಯಿತು. ಅನೇಕರು ಈ ಕಾರಣಕ್ಕಾಗಿ ಸಾಲಗಾರರಾಗಿ ಪರಿತಪಿಸುತ್ತಿರುವುದೂ ಉಂಟು. ಆದರೂ ಜೀಮಾನದಲ್ಲಿ ಒಮ್ಮೆಯಾದರೂ ಹರಿಸೇವೆ ಮಾಡಬೇಕೆಂಬುದು ಪ್ರತಿಯೊಬ್ಬರ ಹಂಬಲವಂತೆ. ಈ ಹರಿಸೇವೆಯ ಸಂದರ್ಭದಲ್ಲಿ ಹಾಡು, ಕುಣಿತಗಳ ಸಂಭ್ರಮವೋ ಸಂಭ್ರಮ. ‘ಹೌದೇರಣ್ಣಾ ಗೋವಿಂದಾ’ ಎನ್ನುವ ಪ್ರಾಸ ಉಚ್ಛರಿಸುತ್ತಾ ತುಳಸೀಕಟ್ಟೆಯ ಸುತ್ತ ಕುಣಿಯುವ ಹರಿಸೇವೆ ಕುಣಿತ ತುಂಬಾ ಚೆನ್ನಾಗಿರುತ್ತದೆ.

ಗೊಂಡರ ಜಟ್ಟಿಗನ ಬನ ತುಂಬಾ ವಿಶೇಷವಾದದ್ದು. ವಿವಿಧ ಗಿಡ ಮರಬಳ್ಳಿಗಳ ಸೊಂಪಾದ ವನ ಅದು. ಆ ವನದ ಮಧ್ಯೆ ಪವಿತ್ರ ಗಿಡಮರಗಳ ನೆರಳಿನಲ್ಲಿ ವಿವಿಧ ಆಕೃತಿಯ ಮರದ ಸ್ತಂಭಗಳ ಮತ್ತು ಪ್ರಾಣಿಗಳ ಚಿತ್ರಗಳಿರುತ್ತವೆ. “ಹುಲಿಗಿರ್ತಿ, ಹಂದಿಗಿರ್ತಿ, ವೀರರ ಕೊಂಬು, ಜಟ್ಟಿಗರ ಕೊಂಬು” ಎಂದು ಕರೆಯುತ್ತಾರೆ. ‘ಹುಲಿಗಿರ್ತಿ’ ಅಂದರೆ ಒಂದು ಮರದ ದಪ್ಪ ತುಂಡಿನ ಹುಲಿಯ ರೂಪ ಕೆತ್ತಿದ ಸಾಮಾನ್ಯ ಕೆತ್ತನೆಯ ಚಿತ್ರ. ಹಂದಿಗಿರ್ತಿ ಎಂದರೆ ಹಂದಿಯ ರೂಪದ ಮರದ ತುಂಡು. ಇದಕ್ಕೆ ಒಂದು ವಿಶೇಷ ಅರ್ಥವುಂಟು. ದಟ್ಟಾರಣ್ಯದಲ್ಲಿ ವಾಸಮಾಡುವ ಗೊಂಡರು ವರ್ಷವಿಡೀ ಬೆಳೆಯುವ ಬೆಳೆಯನ್ನು ಒಂದೇ ರಾತ್ರಿಗೆ ಹಂದಿಗಳು ಮುಗಿಸುತ್ತಿದ್ದವು. ದನಕರುಗಳನ್ನು ಹುಲಿ ಹಿಡಿಯುತ್ತಿದ್ದವು. ಪ್ರಧಾನವಾಗಿ ಕೃಷಿಕರೇ ಆದ ಗೊಂಡರಿಗೆ ಜಾನುವಾರುಗಳು ಇಲ್ಲದಿದ್ದರೆ ಹೇಗೆ? ಅದಕ್ಕಾಗಿ ಅವರು ದೇವರಲ್ಲಿ ಬೇಡಿಕೊಂಡರು; ನಿನಗೆ ಹಂದಿಗಿರ್ತಿ, ಹುಲಿಗಿರ್ತಿ ಮಾಡಿಸಿ ಕೊಡುತ್ತೇನೆ. ನನ್ನ ಬೆಳೆ ಮತ್ತು ಜಾನುವಾರುಗಳನ್ನು ರಕ್ಷಿಸು ಎಂದು. ಹಿಂದೆ ಗೊಂಡರ ಪ್ರಾಣ ರಕ್ಷಣೆ ಮಾಡಿದ, ಗೊಂಡರ ಮಹಿಳೆಯರ ಮಾನ ಕಾಪಾಡಿದ ಪ್ರತೀಕವಾಗಿರುವ ಅವರ ಸಾಂಸ್ಕೃತಿಕ ವೀರರಾದ ಜಟ್ಟಿಗ ಮತ್ತು ಬೀರರನ್ನು ಪೂಜಿಸುವ ಕಾರಣಕ್ಕಾಗಿ ಜಟ್ಟಿಗನ ಕೊಂಬು ಮತ್ತು ಬೀರನ ಕೊಂಬನ್ನು ಮಾಡಿಸಿಕೊಡುವುದಾಗಿ ಹರಕೆ ಹೊರುವುದುಂಟು. ಹೀಗೆ ಆ ಬನದಲ್ಲಿ ಜಟ್ಟಿಗರ ಅರ್ಥಾತ್ ಸಾಂಸ್ಕೃತಿಕ ವೀರರ ಕೊಂಬುಗಳ ಸಾಲು ಸಾಲು ಕಾಣಸಿಗುತ್ತದೆ.

ಭಟ್ಕಳ ಈಗೊಂದು ‘ಮಿನಿ ದುಬಾಯ್’ ಎಂದೇ ಹೆಸರು ಪಡೆದಿದೆ. ದಿನದಿನಕ್ಕೂ ಪಾಶ್ಚಾತ್ಯ ನಾಗರಿಕತೆಯನ್ನು ರೂಢಿಸಿಕೊಂಡು ಬೆಳೆಯುತ್ತಿರುವ ಈ ಚಿಕ್ಕಪಟ್ಟಣ ಅತ್ಯಾಧುನಿಕ ಕಟ್ಟಡಗಳನ್ನು ಹೊಂದಿದೆ. ಇಂಥ ಕಡೆಯೂ ಗೊಂಡರ ಕೋಗ್ತಿ ದೇವಸ್ಥಾನ ಉಂಟು. ಹಿಂದೆ ಭಟ್ಕಳದ ಅಂಚಿನವರೆಗೂ ದಟ್ಟವಾದ ಕಾಡಿತ್ತು ಎಂದು ಹೇಳಬಹುದಾದ ಎಲ್ಲ ಕುರುಹುಗಳೂ ಇವೆ. ಬೆಟ್ಟಗುಡ್ಡಗಳಿಂದ ಆವೃತವಾದ ಭಟ್ಕಳದ ಸಮುದ್ರ ತೀರ ಅತ್ಯಂತ ನೈಸರ್ಗಿಕ ಕಾಡಿನ ವಾಸಿಗಳಾದ ಗೊಂಡರು ಸಮುದ್ರದ ಅಂಚಿನವರೆಗೂ ವಾಸವಾಗಿದ್ದರು. ಅರಣ್ಯಕ್ಕೂ, ಸಮುದ್ರಕ್ಕೂ ಇಲ್ಲಿ ನಂಟಿತ್ತು. ಇದರ ಕುರುಹಾಗಿ ಭಟ್ಕಳದಿಂದ ಹತ್ತಾರು ಕಿ.ಮೀ. ದೂರದಲ್ಲಿ ಸಮುದ್ರದ ಮಧ್ಯೆ ಇರುವ ನೇತ್ರಾಣಿ ಗುಡ್ಡದಲ್ಲಿಯೂ ಗೊಂಡರ ಜಟ್ಟಿಗನ ಕೊಂಬುಗಳಿವೆಯಂತೆ. ಈಗಲೂ ಹಬ್ಬ, ಜಾತ್ರೆಗಳ ಸಂದರ್ಭದಲ್ಲಿ ಆ ಭೋರ್ಗರೆಯುವ ಸಮುದ್ರವನ್ನು ಹಾಯ್ದು ‘ನೇತ್ರಾಣಿ ಗುಡ್ಡ’ದಲ್ಲಿ ಪೂಜೆ ಸಲ್ಲಿಸಿ ಬರುವ ಗೊಂಡರೂ ಉಂಟು. ದೂರಕ್ಕೆ ನಿಗೂಢ ಪರ್ವತದಂತೆ ಕಂಡುಬರುವ ಆ ಸಾಗರದೊಳಗಿನ ಗುಡ್ಡ ಒಂದು ಕಾಲಕ್ಕೆ ಗೊಂಡರ ಪವಿತ್ರ ಸ್ಥಳವಾಗಿತ್ತೆಂದು ಹೇಳುತ್ತಾರೆ.

ಭಟ್ಕಳದ ಕೋಗ್ತಿ ದೇವಸ್ಥಾನ ನೋಡಲು ಚಿಕ್ಕದಾದರೂ ಅದರ ಸುತ್ತಲ ಬಯಲು ತುಂಬಾ ದೊಡ್ಡದು. ದೇವಸ್ಥಾನದ ಮುಂದೆ ಸುಂದರವಾದೊಂದು ಕೆರೆ. ಕರ್ನಾಟಕದ ಇತರೆಡೆಗಳಲ್ಲಿಯ ಗ್ರಾಮದೇವತೆಗಳ ಪರಿಸರದಂತೆಯೇ ಇರುವ ಈ ದೇವಸ್ಥಾನದ ಪರಿಸರ ಕೂಡ ಜಾತ್ರೆ ಮತ್ತು ಪರಿಷೆಗೆ ಹೇಳಿ ಮಾಡಿಸಿದ ಜಾಗ. ಸಂಕ್ರಾಂತಿಯ ಮಾರನೇ ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಆ ಸಂದರ್ಭದಲ್ಲಿ ನೂರಾರು ಗೊಂಡ ಗೊಂಡತಿಯರ ಸಡಗರದ ಓಡಾಟ ಇರುತ್ತದೆ. ಅದಾಗ ತಾನೆ ಮದುವೆಯಾದ ಹೆಣ್ಣುಮಕ್ಕಳು ಸಾಂಪ್ರದಾಯಿಕವಾದ ಉಡುಪು ಧರಿಸಿ, ತಲೆ ತುಂಬಾ ಹೂ ಮುಡಿದು, ಕೈಯಲ್ಲಿ ಅಕ್ಕಿಹಿಟ್ಟಿನ ಉಂಡೆ(ತಂಬಿಟ್ಟು) ಮಾಡಿ ಅದರ ಮೇಲೆ ದೀಪ ಹೊತ್ತಿಸಿಕೊಂಡು ಕೋಗ್ತಿಗೆ ಆರತಿ ಬೆಳಗುತ್ತಾರೆ. ದೇವಸ್ಥಾನದ ಒಳಗೆ ಕೋಗ್ತಿಗೆ ಪ್ರತೀಕದ ಜೊತೆಗೆ ಜಟ್ಟಿಗನ ಕೊಂಬುಗಳಿವೆ. ಮಹಾಸತಿಯರಾದ ಹಲವು ಮಹಿಳೆಯರ ಕುರುಹಾಗಿ ‘ಮಾಸ್ತಿ’ ಮೂರ್ತಿಗಳೂ ಇವೆ.

ಹಬ್ಬದ ರಾತ್ರಿಗೆ ದೇವಸ್ಥಾನದ ಮುಂದೆ ಸುಂದರ ಹಾಗೂ ಸಾಂಪ್ರದಾಯಿಕವಾದ ಮಂಡಲ ಬರೆದು ಅದರ ಸುತ್ತಲೂ ಮಂಡಲದ ಕುಣಿತವನ್ನು ನಡೆಸಲಾಗುತ್ತದೆ. ನಿಯತವಾದ ಢಕ್ಕೆಯ ಶಬ್ದಕ್ಕೆ ಮಂಡಲ ಕುಣಿಯುವವರ ಹೆಜ್ಜೆಗಾರಿಕೆ ಶಿಸ್ತುಬದ್ಧವಾಗಿರುತ್ತದೆ. ಸುತ್ತಲ ಬಯಲಲ್ಲಿ ಕುಳಿತ ನೂರಾರು ಜನ ತದೇಕಚಿತ್ತರಾಗಿ ಢಕ್ಕೆಯ ಶಬ್ದಕ್ಕೆ ಕಿವಿಯೊಡ್ಡುತ್ತಾರೆ. ಇಡೀ ರಾತ್ರಿ ಹಲವು ಆಚರಣೆಗಳಾದ ಬಳಿಕ ಜಾತ್ರೆ ಮುಗಿಯುತ್ತದೆ. ಗೊಂಡರ ಗಂಡಸರು, ಹೆಂಗಸರು ಕೋಗ್ತಿ ಬಯಲಿನಲ್ಲಿ ಹಾಡುವ ದೃಶ್ಯವಂತೂ ಮನಮೋಹಕ. ಆರ್ಥಿಕವಾಗಿ ಬಡವರಾದರೂ, ಸಾಂಸ್ಕೃತಿಕವಾಗಿ ಸಿರಿವಂತರಾದ ಗೊಂಡರ ಜೀವನಶೈಲಿ, ಸರಳತೆ ಎಂದಿಗೂ ಅನುಕರಣೀಯವಾದುದು.

– ಎಚ್.ಸಿ.ಬಿ.