ಊಂಜಲ್ ಪಾಟ್ಟು ಜನಪದರಲ್ಲಿ ವಿವಿಧ ಸಂದರ್ಭ ಕಾಲಗಳಿಗೆ ತಕ್ಕಂತೆ ತಮ್ಮ ಒಲವನ್ನು ಹಾಡಿನ ಮೂಲಕ ಅಭಿವ್ಯಕ್ತಗೊಳಿಸುವುದು ಅವರ ವಿಶಿಷ್ಟ ಲಕ್ಷಣ. ಹಾಗೆಯೇ ಉಯ್ಯಾಲೆಯ ಹಾಡುಗಳು ವಿಶೇಷವಾಗಿ ಹೊಸದಾಗಿ ವಿವಾಹವಾದ ವಧು – ವರರನ್ನು ಉಯ್ಯಾಲೆಯಲ್ಲಿ ಕೂರಿಸಿ ತೊಗಲು ಬಿಟ್ಟು ಸಂಭ್ರಮ, ಸಂತೋಷದಿಂದ ಹಾಡುವೆ ಹಾಡೇ ಈ ಉಯ್ಯಾಳೆ ಹಾಡು. ಈ ಸಂದರ್ಭದಲ್ಲಿ ಸರ್ವರೂ ಆದರ್ಶ ಸತಿ – ಪತಿ ಎಂದು ಸ್ವೀಕರಿಸುವ ರಾಮ – ಸೀತೆಯರಿಗೆ ಈ ವರ – ವಧವನ್ನು ಹೋಲಿಸಿ ಹಾಡುತ್ತಾರೆ.

ನವರತ್ನ ಭರತಿ ಚಪ್ಪರದಲಿ
ವಜ್ರಖಚಿತ ಎಲೆಯ ಉಯ್ಯಾಲೆ
ಇಳೆಯಲ್ಲಿ ಉದ್ಭವಿಸಿದಳು ಸೀತೆ
ಕೀರ್ತಿವೆತ್ತ ರಾಘವನೊಡನೆ, ಆಡಿದ ಉಯ್ಯಾಲೆ

ಇಂದ್ರನೂ ಚಂದ್ರನೂ ಒಂದು ಬದಿಯಲ್ಲಿ
ಈಶ್ವರ ಪಾರ್ವತಿ ಮತ್ತೊಂದು ಕಡೆ ದೂರಿಯಾಡಿಸಿ
ಸೂರ್ಯನೂ ಚಂದ್ರನು ಹೂವ ಚೆಲ್ಲಲು
ಜಾನಕಿ – ರಾಮ ಆಡಿರಿ ಉಯ್ಯಾಲೆ

ರತಿ – ಮನ್ಮಥನು ಒಂದೆಡೆ ಉರಿಯಾಡಿಸಲು
ಮತ್ತೊಂದೆಡೆ ಬ್ರಹ್ಮ – ವಿಷ್ಣು ಉರಿಯಾಡಿಸಿದರು.
ಮಳೆಯಾಗಿ ದುಮುಕಿತು ಅಪ್ಸರ ಸ್ತ್ರೀಯರ ಸಂಗೀತ
ರಘುನಾಥ – ಸೀತೆಯೂ ಆಡಿರಿ ಉಯ್ಯಾಲೆ

ಅತ್ತ ಕೌಸಲ್ಯೆ – ದಶರಥ ಸಂತಸದಿಂದ
ಇತ್ತ ಜನಕರಾಜ ಸಂಭ್ರಮದಿಂದ
ಸುತ್ತ ಕೌಶಿಕ – ವಸಿಷ್ಠರು ಹೋಗಿ ನೋಡುತಿರೆ
ದಾಶರಥಿ ಮೈಥಿಲಿಯೊಡನೆ ಆಡಿರಿ ಉಯ್ಯಾಲೆ

ಈ ರೀತಿಯಲ್ಲಿ ನೂತನ ವಧು – ವರರನ್ನು ರಾಮ – ಸೀತೆ ಎಂದು ಹೋಲಿಸಿ ಹಾಡುವ ಬಗೆ ಒಂದಾದರೆ, ಬೇರೆ ಎಡೆಗಳಲ್ಲಿ ಈ ವಧು – ವರರನ್ನು ಮೀನಾಕ್ಷಿ, ಸುಂದರೇಶ ಪೆರುಮಾಳ್ ಎಂದು ಭಾವಿಸಿ ಹಾಡುವ ಹಾಡುಗಳು ದೊರೆಯುತ್ತಿವೆ.

ಉಯ್ಯಾಲೆ ಆಡುತ್ತಿರಲು
ಕಾಂತನ ಮನವು ತಂಪಾಯ್ತು
ಸ್ವರ್ಣದ ಉಯ್ಯಾಲೆ ಅತ್ಯಾನಂದ
ಸುಪ್ಪತ್ತಿಗೆಯಲ್ಲಿ ಶಿವನ ಆಟ ಪರಮಾನಂದ – ಉಯ್ಯಾಲೆ

ಒಯ್ಯಾರದಿಂದ ಉಯ್ಯಾಲೆ ಆಡಲು
ಉನ್ನತದಿಂದ ಊರ್ವಶಿ ಹಾಡುವಳು
ಸಂಗೀತಕ್ಕೆ ತಾಳವ ಹಾಕಿ
ತ್ರಿಮೂರ್ತಿಗಳನ್ನು ಹೊಗಳಲು – ಉಯ್ಯಾಲೆ

ಉನ್ನತವನ್ನು ಪಡೆದ ಕನ್ಯೆ
ನಿತ್ಯ ಸರ್ವಾಲಂಕಾರಿ
ಭಕ್ತರ ಪಾಪ ಪರಿಹಾರಿ
ಹತ್ತು ಮುಖವ ವೈಯ್ಯಾರಿ – ಉಯ್ಯಾಲೆ

ಈ ಉಯ್ಯಾಲೆಯ ಹಾಡನ್ನು ‘ಆನಂದ ಭೈರವಿ’ ಎಂಬ ಒಂದು ಬಗೆಯ ಹಾಡು ರೂಢಿಯಲ್ಲಿದೆ. ‘ಮೀನಾಕ್ಷಿ ಕಪ್ಪಲ್’ ಎಂಬ ಹಾಡು ಹಾಡುವಾಗ ಸಹಜವಾಗಿಯೇ ವಧು – ವರರನ್ನು ಉಯ್ಯಾಲೆಯಲ್ಲಿ ಕೂರಿಸಿ ನಿಧಾನವಾಗಿ ತೂಗಲು ಬಿಟ್ಟು ಇಂಪಾಗಿ ಹಾಡುತ್ತಾರೆ. ಇದು ಆ ವಧು – ವರರಿಗೆ ದೋಣಿಯಲ್ಲಿ ತೇಲುತ್ತಿರುವ ಭಾವ ಆ ಸಂಗೀತದ ಕೇಳುವಿಕೆಯಿಂದ ಬರುತ್ತದೆ. ಕೆಲವು ಸಾಲುಗಳ ಅನಂರರ ‘ಮುಡುಕು’ ಎಂಬ ಹೆಸರಿನಿಂದ ತುಸು ಬಿರುಸಿನ ಸಂಗೀತದ ಹೊಂದಾಣಿಕೆಯಿಂದ ಹಾಡಲಾಗುತ್ತದೆ. ಅದು ಈ ಕೆಳಕಂಡತಿದೆ.

ವಧುವಾದಳು ಮೀನಾಕ್ಷಿ
ವರನೇ ಸುಂದರೇಶ
ಮೆರೆಯುತಿಹಳು ರತ್ನ ಸಿಂಹಾಸನದಿ

ಸತಿ – ಪತಿಗಳು ರಾರಾಜಿಸಲು
ರಾಜನನು ವರಿಸಿದವಳನು ಕರೆದು
ಹೂವು ಅಕ್ಷತೆಯಿಂದ ಹರಸಿ

ಭೂಮಿ ಪಡೆದರು ಚತುರ್ವೇದಿ
ಶಾಲುವಿನೊಡನೆ ಸರ್ವಾಭರಣವ ಧರಿಸಿ
ನವಿಲಿನಂತಹ ಮಗಳನ್ನೆತ್ತಿ
ಮಾರನೊಂದಿಗೆ ಕೂಡಬೇಕೆಂದು
ಮಗಳನು ಕನ್ಯಾದಾನವ ನೀಡಿ
ಒಪ್ಪಿಕೊಂಡೆ ಉತ್ತರ ನೀಡಿ
ಋಷಿಯೆಂದು ಪೂಜಿಸಿ ಗಣೇಶನ
ಕೊಂಡಾಡುತ್ತಲಿ ವಿವಾಹನ
ರೇಷ್ಮೆ ವಸ್ತ್ರವ ಪಾರ್ವತಿ ಧರಿಸಿ
ಮಡಿಲಲ್ಲಿ ಕೂರಿಸಿ ಸಂತಸಪಟ್ಟು
ಧಿಮಿ ಧಿಮಿ ವಾದ್ಯ ಸ್ವರದಲಿ
ಧರಿಸಿಹಳು ದೇವಿ ಮಾಂಗಲ್ಯ

ಕರ್ನಾಟಕ ಸಂಗೀತ ತಿಳಿದವರು ಈ ಹಾಡುಗಳನ್ನು ‘ನವರೋಜ್’ ರಾಗದಲ್ಲಿ ಹಾಡಬೇಕು. ಈ ಸಂಗೀತವನ್ನು ತಿಳಿದವರು ತಮಗೆ ತೋಚಿದ ಧಾಟಿಯಲ್ಲಿ ಹಾಡುವರು. ವಧವರರಿಗೆ ಉತ್ತಮ ಗುಣಗಳನ್ನು ಸಾರುತ ತಮ್ಮ ಹಾಡನ್ನು ಮುಗಿಸುವರು ಮದುವೆ ಚಪ್ಪರವನ್ನು ಅಲಂಕರಿಸಿ, ಬಾಳೆ, ಅಡಿಕೆಮರ ನೆಟ್ಟು ವಾದ್ಯಗಳು ಮೊಳಗುತ್ತಿರುತ್ತವೆ. ಒಳ್ಳೆಯ ಗಳಿಗೆಯಲ್ಲಿ ಹೆಣ್ಣೂಗಳು ನಾಲ್ಕು ದಿಕ್ಕುಗಳಲ್ಲೂ ಸುತ್ತುವರಿದು ಹೆಣ್ಣಿಗೆ ಸ್ನಾಣವನ್ನು ಮಾಡಿಸಿ, ಗಂಧವನ್ನು ಪೂಸಿ, ಕಣ್ಣಿಗೆ ಕಾಡಿಗೆ ಹಚ್ಚಿ ಹಸಿಯಾದ ಕೂದಲಿಗೆ ಸಾಂಬ್ರಾಣಿ ಧೂಪವನ್ನು ಹಾಕಿ ಆ ವೇಳೇ ಹಾಡುಗಳನ್ನು ಹಾಡುತ್ತಾರೆ. ವಧು – ವರರು ಸುದೀರ್ಘಕಾಲ ಬಾಳುವಂತೆ ಹರಸಿ ಹಾಡುತ್ತಾರೆ. ಪ್ರಾರಂಭದ ಸಾಲುಗಳಲ್ಲಿ ಹೆಣ್ಣಿಗೆ ಬದುಕನ್ನು ಸದೃಢವಾಗಿಸಿಕೊಳ್ಳುವ ಬುದ್ಧಿವಾದವನ್ನು ಹೇಳಲಾಗುತ್ತದೆ.

ಹೆಣ್ಣು ತನಗೆ ಗಂಡನೇ ಸಾಕ್ಷಾತ್ ದೇವರೆಂದು ಪೂಜಿಸುವಂತೆಯೂ ಅತ್ತೆ – ಮಾವನ ಇಚ್ಛೆಯಂತೆಯೇ ನಡೆದು ಅವರನ್ನು ಸಂತೋಷಗೊಳಿಸುವುದು ಕುಟುಂಬದ ಪರಿಸರವನ್ನು ಅರ್ಥೈಸಿಕೊಂಡು ಬಾಳುವಂತೆಯೂ ಹೆಣ್ಣ ಪದೇ ಪದೇ ತನ್ನ ತವರು ಮನೆಗೆ ಹೋಗುವುದು ಪರರ ಹೀಯಾಳಿಕೆಗೆ ಪಾತ್ರವಾಗುವುದು ಎಂಬ ಜನಪದರ ಎಚ್ಚರದ ನುಡಿ ಈ ಹಾಡಿನಲ್ಲಿ ಬಂದಿದೆ. ಅದು ಅಂದಿನ ಜನಮಾನಸದ ಮನೋ ವ್ಯಾಪಾರವನ್ನು ತಿಳಿಸುತ್ತದೆ. ಇವುಗಳ ಔಚಿತ್ಯ ಅಥವಾ ಅನೌಚಿತ್ಯ ಓದುಗರ ಪ್ರಜ್ಞೆಗೆ ಬಿಟ್ಟಿದ್ದು. ಒಟ್ಟಾರೆ ಹಾಡಿನಲ್ಲಿ ಮೇಲ್ಕಂಡಂತೆ ಹೆಣ್ಣೀಗೆ ತಿಳಿವಳಿಕೆ ಹೇಳಲಾಗುತ್ತದೆ.

ಮೇಲ್ಕಂಡಂತೆ ಹೆಣ್ಣಿನ ಬದುಕನ್ನು ರೂಪಿಸಿಕೊಂಡರೆ ಬದುಕಿನಲ್ಲಿ ಕೀರ್ತಿ, ಮಕ್ಕಳ ಭಾಗ್ಯ ಎಲ್ಲವೂ ದೊರೆತು ಆ ಬದುಕು ಬಂಗಾರವಾಗುತ್ತದೆ. ಎಂಬ ವಿಚಾರ ಈ ಹಾಡಿನಿಂದ ಗೋಚರವಾಗುತ್ತದೆ.

– ಎಸ್.ವಿ. ಅನುವಾದ ಆರ್.ಎಸ್.

ಊರಾಳಿಗಳು ಊರಾಳಿಗಳು ಎರ್ನಾಕುಲಂ, ಕೊಲ್ಲಂ, ಇಡುಕ್ಕಿ ಜಿಲ್ಲೆಗಳಲ್ಲಿ ವಾಸಿಸುತ್ತಾರೆ. ಪಘಯಾರಿಕಂಡಂ, ವೆಣ್ಮಣಿ, ಪೈನಾವು, ಮನಿಯುಯಾರನ್ ಪುಡಿ, ಪೂಚಪ್ರ, ಕುದುರ್ಹಿಕ್ಕಾಳಂ, ಕುಮಳಿ ಮತ್ತು ವಾಕಮಾನ್ – ಇವು ಊರಾಳಿ ವರ್ಗದವರು ವಾಸಿಸುತ್ತಿರುವ ಮುಖ್ಯ ಸ್ಥಳಗಳು. ಊರಾಳಿಗಳ ಮುಖ್ಯಸ್ಥನನ್ನು ಕನಿಮಾರನ್ ಎನ್ನುತ್ತಾರೆ. ಸು.ನಲುವತ್ಮೂರರಷ್ಟು ಜಾಗಗಳಲ್ಲಿ ಇವರು ಚೆದುರಿಕೊಂಡಿದ್ದು ಅಂದಾಜು ಜನಸಂಖ್ಯೆ ಸು.ಆರು ಸಾವಿರಕ್ಕೂ ಕೆಳಗಿದೆ. ಜನನ ಪ್ರಮಾಣವು ಇಳಿಕೆಯಲ್ಲಿದೆ. ಊರಾಳಿ ಎಂಬ ಪದದ ಅರ್ಥವು ಊರನ್ನು ಆಳುವವನೆಂದು. ಇವರಲ್ಲಿ ಅನೇಕರು ವಿದ್ಯಾವಂತರಾಗಿದ್ದು ಸರಾಸರಿ ಉದ್ಯೋಗಗಳಲ್ಲಿದ್ದಾರೆ. ಊರಾಳಿಗಳ ದೇವಾಲಯಗಳಲ್ಲಿ ಪ್ಲಾತಿ ಎಂಬ ಹೆಸರಿನ ಪೂಜಾರಿ ಪೂಜೆ ಮಾಡುತ್ತಾನೆ.

ಸಾಮಾನ್ಯವಾಗಿ ಊರಾಳಿಗಳು ಕೃಷಿಕರು. ಮದುವೆ, ಉತ್ತರ ಕ್ರಿಯಾದಿ ಸಂದರ್ಭಗಳಲ್ಲಿ ಮಾತ್ರ ಜನಿವಾರ ಧರಿಸುತ್ತಾರೆ. ತಾವು ಮದುರೈಯ ರಾಜನ ಸೇವಕರ ಪೀಳಿಗೆಯವರೆಂದು ಊರಾಳಿಗಳು ಹೇಳಿಕೊಳ್ಳುತ್ತಾರೆ. ಅರಸನ ಸವಾರಿ ಚಿತ್ರೈಸುವಾಗ ಅರಸನಿಗೆ ಅವರು ಕೊಡೆ ಹಿಡಿಯುತ್ತಿದ್ದರಂತೆ. ಅವರು ಬೆಟ್ಟಗುಡ್ಡಗಳಲ್ಲಿ ನೆಲೆಸುವಂತಾದುದರ ಕುರಿತು ವಿಭಿನ್ನ ಐತಿಹ್ಯಗಳಿವೆ. ಊರಾಳಿಗಳು ತಮ್ಮ ಗುಡಿಸಲುಗಳನ್ನು ಕೃಷಿ ಭೂಮಿಗೆ ಐತಿಹ್ಯಗಳಿವೆ. ಊರಾಳೀಗಳು ತಮ್ಮ ಗುಡಿಸಲುಗಳನ್ನು ಕೃಷಿ ಭೂಮಿಗೆ ಸಮೀಪದಲ್ಲಿಯೇ ನಿರ್ಮಿಸಿಕೊಳ್ಳುತ್ತಾರೆ. ಮನೆಯನ್ನು ಕಟ್ಟಲು ಬಿದುರು ಮತ್ತು ಮುಳಿಯನ್ನು ಉಪಯೋಗಿಸುತ್ತಾರೆ. ಮದುವೆಯ ಬಳಿಕ ಪುರುಷನು ತಂದೆ ತಾಯಿಯವರಿಂದ ಬೇರೆ ಹೋಗಿ ಹೆಂಡತಿಯ ಮನೆಯಲ್ಲಿ ವಾಸಿಸುತ್ತಾನೆ.

ರಜಸ್ವಲೆಯಾದಾಗ ಮತ್ತು ಬಾಣಂತಿಯಾದಾಗ ಹೆಣ್ಣು ಅಶೌಚಾಚರಣೆ ಮಾಡಬೇಕು. ಈ ಸಂಧರ್ಭಗಳಲ್ಲಿ ಅವಳು ಮಾಟ್ಟಂ ಎಂಬ ಪ್ರತ್ಯೇಕ ಗುಡಿಸಲುಗಳಲ್ಲಿ ಇರುತ್ತಾಳೆ. ಇದಕ್ಕೆ ಪಾತ್ತುಪಂದಲ್ ಎಂದೂ ಹೆಸರಿದೆ. ಇದು ಮನೆಯ ಅನತಿದೂರದಲ್ಲಿದ್ದು ಮುಟ್ಟಾದ ಸ್ತ್ರೀಯರು ಮೂರು ದಿನ ಇಲ್ಲಿರುತ್ತಾರೆ. ಇಂಥದೇ ಇನ್ನೊಂದು ಪಂದಲ್‌ನಲ್ಲಿ ಮತ್ತೇ ಮೂರು ದಿನ ಇರುತ್ತಾರೆ. ಏಳನೇ ದಿವಸ ಮತ್ತೆ ಮನೆಯನ್ನು ಸೇರುತ್ತಾರೆ. ಹೆಣ್ಣು ಮೊದಲ ಬಾರಿಗೆ ಬಾಣಂತಿಯಾದಾಗ ಅವಳ ಗಂಡನೂ ಮೂರುದಿನ ಅಶೌಚವನ್ನು ಆಚರಿಸುತ್ತಾನೆ. ಮುಂದಿನ ಸರತಿಗೆ ಇದು ಅನ್ವಯವಾಗುವುದಿಲ್ಲ.

ಊರಾಳಿಗಳು ಉಳ್ಳಾಡರ ಜತೆ ಮದುವೆ ಸಂಬಂಧವನ್ನು ಬೆಳೆಸುತ್ತಾರೆ. ಅಪರೂಪಕ್ಕೆ ಮುದುವನರ ಜತೆಗೂ ಪುನರ್ವಿವಾಹ ರೂಢಿಯಲ್ಲಿದೆ. ಕಾಣಿಕ್ಕಾರರ ಹಾಗೆಯೇ ಇವರೂ ಚೀಪುಗ ಮತ್ತು ಚೌಟ್ಟುಗ ಎಂಬ ಮಂತ್ರವಾದ ಚಿಕಿತ್ಸೆಗಳನ್ನು ರೋಗಶಮನಕ್ಕಾಗಿ ಮೊರೆಹೋಗುತ್ತಾರೆ. ಆಗ ಅವರು ಒಂದು ತೆರನ ದೈವಿಕ ಆವೇಶಕ್ಕೆ ಒಳಗಾಗುತ್ತಾರೆಂದೂ ಅವರ ಪಿತೃಗಳು ಆಗ ಮುಂದೆ ಕಾಣಿಸಿಕೊಂಡು ಅವರಿಗೆ ದೈವಿಕ ವಿದ್ಯೆ/ಕಲೆಗಳನ್ನು ಹೇಳಿಕೊಡುತ್ತಾರೆಂದೂ ನಂಬುತ್ತಾರೆ. ಊರಾಳಿಗಳು ತಲೆಯಲ್ಲಿ ಹೊರೆಗಳನ್ನು ಹೊತ್ತು ಸಾಗಸುವುದಿಲ್ಲ. ಬದಲಾಗಿ ಹೆಗಲಲ್ಲಿಟ್ಟು ಸಾಗಿಸುತ್ತಾರೆ. ಸತ್ತವರನ್ನು ಹೂಳುತ್ತಾರೆ. ಶವದ ಗುಂಡಿಯಲ್ಲಿ ಶವವನ್ನಿರಿಸುವ ಮೊದಲು ನಾಲ್ಕು ದಿಕ್ಕಿನಿಂದಲೂ ಒಂದಿಷ್ಟು ಮಣ್ಣನ್ನು ಬಾಚಿ ಶವಗುಂಡಿಗೆ ಹಾಕುತ್ತಾರೆ. ಸತ್ತವರ ಆಭರಣಗಳನ್ನು ಜತೆಗಿರಿಸುತ್ತಾರೆ. ಶವವನ್ನು ಹೂತ ಜಾಗದ ಬಳಿ ಹಿಡಿಯಿಲ್ಲದ ಒಂದು ಚೂರಿಯನ್ನು ಮತ್ತು ಒಂದು ಎಳನೀರನ್ನು ಇರಿಸುತ್ತಾರೆ. ಹದಿನಾರನೆಯ ದಿನ ಅಡಿಯಂದಿರಂ (ಉತ್ತರ ಕ್ರಿಯೆ) ನಡೆಸುತ್ತಾರೆ.

ಹಬ್ಬಗಳ ಸಂದರ್ಭದಲ್ಲಿ ಊರಾಳಿಗಳು ಕುರತ್ತಿನಾಟಕಂ, ಚವಿಟ್ಟುಕಳಿ, ಮಲಕ್ಕೂತ್ತು, ವಿಳಿಪ್ಪಾಟ್ಟು ಮುಂತಾದ ಕಲೆಗಳನ್ನು ಪ್ರದರ್ಶಿಸುತ್ತಾರೆ. ಇವರು ವಲಸೆ ಕೃಷಿ ಪದ್ಧತಿಯನ್ನು ಅನುಸರಿಸುವವರು. ಬೇಸಾಯದ ಸಂದರ್ಭದಲ್ಲಿ ಅವರಿಗೆ ಅನೇಕ ಆಚರಣೆಗಳಿವೆ. ಕಾನಕ್ಕೂಟ್ಟಂ, ಪೆರಿಯಿರಕೂಟ್ಟಂ, ಕೊಡಿಯೇರು ಇಲ್ಲಂ, ವೆಟ್ಟಿಚ್ಚಿಇಲ್ಲಂ, ವೈನವ ಇಲ್ಲಂ, ಎಣ್ಣೆ ಯಾರೂ ಇಲ್ಲಂ ಮುಂತಾದ ಬಳಿಗಳು (ಗೋತ್ರ ಸಮಾನ ಸಂಕಲ್ಪ) ಅವರಲ್ಲಿವೆ. ಏಳು ದಿನಗಳ ಪರ್ಯಂತ ಅವರು ಕೃಷಿ ಹಬ್ಬವನ್ನು ಆಚರಿಸುತ್ತಾರೆ.

ಅವರ ಭಾಷೆಯಲ್ಲಿ ಅನ್ಯಭಾಷಾ ಪ್ರಭಾವನ್ನು (ಮಲಯಾಳಂ) ಗುರುತಿಸಬಹುದು. ಈ ಭಾಷೆ ಅಳಿವಿನ ಅಂಚಿನಲ್ಲಿದೆ ಎನ್ನುತ್ತಾರೆ. ಈಚೆಗೆ ಅವರು ಮಲಯಾಳವನ್ನು ಹೆಚ್ಚು ಬಳಸಲಾರಂಭಿಸಿದ್ದಾಋಎ. ತಮಿಳುನಾಡಿನ ಮೆಟ್ಟೂರು ಜಲಾಶಯದ ಬಳಿ ಕೂಡ ಊರಾಳಿ ಜನರಿದ್ದಾರೆ. ಆದರೆ ಅವರು ಕೇರಳದವರಿಗಿಂತ ಭಿನ್ನರು. ರೋಗಶಮನಕ್ಕೆ ತಮ್ಮದೇ ಆದ ಔಷಧವನ್ನು ಅವರು ಬಳಸುತ್ತಾರೆ. ಮಂತ್ರವಾದ ಮತ್ತು ಗಾನ ಚಿಕಿತ್ಸೆಯಲ್ಲಿ ಇದಕ್ಕೆ ಬಳಸಿಕೊಳ್ಳುವುದಿದೆ. ಮಲಮುತ್ತನ್ ಮತ್ತು ಮಲ ಮುತ್ತಿ ಅವರ ಪ್ರಧಾನ ದೈವಗಳಾದರೂ ಇನ್ನೂ ಅನೇಕ ಅಪ್ರಧಾನ ದೈವಗಳನ್ನು ಅವರು ಪೂಜಿಸುತ್ತಾರೆ. ‘ಪ್ಲಾತಿ’ (ಪೂಜಾರಿ) ಮಂತ್ರಬಲ್ಲವನಾದುದರಿಂದ ಅವನು ಅತಿಶಕ್ತನೆಂದು ಊರಾಳಿಗಳು ಪರಿಗಣಿಸುತ್ತಾರೆ. ಊರಾಳಿಗಳು ಶಕುನಗಳನ್ನು ನಂಬುವವರಲ್ಲ. ಇತರ ಬುಡಕಟ್ಟಿನವರೊಂದಿಗೆ ಹೋಲಿಸಿದರೆ ಊರಾಳಿಗಳು ಹೆಚ್ಚು ವಿದ್ಯಾವಂತರೆನ್ನಬಹುದು.

– ಪಿ.ಎನ್. ಅನುವಾದ ಕೆ.ಕೆ.