ಎಣಿಕೆ ಪ್ರಾಸಗಳು ಶಿಶು ಪ್ರಾಸಗಳಲ್ಲಿ ಒಂದು ಬಗೆ. ಚಿಕ್ಕ ಮಕ್ಕಳನ್ನು ಆಡಿಸಲು, ಮಕ್ಕಳು ತಮಗೆ ತಾವೇ ಸ್ವಚ್ಛಂದವಾಗಿ ಆಟವಾಡಿಕೊಳ್ಳಲು ಹಾಡುಕಟ್ಟಿ ಹಾಡುವ ವಿಧಾನ ಇಲ್ಲಿವೆ. ಒಂದೊಂದು ಆಟಕ್ಕೂ ಒಂದೊಂದು ಬಗೆಯ ಹಾಡುಗಳು ಸೃಷ್ಟಿಗೊಂಡು ಮಕ್ಕಳ ಬೌದ್ಧಿಕ ಕ್ರಿಯೆಯನ್ನು ಕಂಡು ಅಚ್ಚರಿಗೊಳ್ಳುವ ಸನ್ನಿವೇಶವನ್ನು ಇವು ಹುಟ್ಟು ಹಾಕುತ್ತವೆ.

ಈ ಪ್ರಾಸಗಳಲ್ಲಿ ಕೆಲವು ಅರ್ಥಪೂರ್ಣವಾಗಿರುತ್ತವೆ. ಮತ್ತೆ ಕೆಲವು ಅರ್ಥವಿಲ್ಲದಿದ್ದರೂ ಪ್ರಾಸಕ್ಕಾಗಿ ಹೆಣೆಯಲ್ಪಟ್ಟು ಸಂಖ್ಯೆಯ ವಿಚಾರವನ್ನು ತಿಳಿಸುತ್ತಲೇ ಹಾಸ್ಯ, ಮನರಂಜನೆಯನ್ನೊದಗಿಸುತ್ತವೆ. ಮತ್ತೆ ಕೆಲವು ಆಳವಾಗಿ ಯೋಚಿಸುವಂತೆ ಮಾಡುತ್ತವೆ. ಲಯಬದ್ಧವಾದ ನಡಿಗೆಯಲ್ಲಿ ಹೇಳುತ್ತಾ ಹೋಗುವ ಕೆಲವು ಪ್ರಾಸಗಳು ಕೇಳುಗರಿಗೆ ಕುತೂಹಲ ಮೂಡಿಸುತ್ತವೆ. ಗಣಿತದ ಬಗ್ಗೆ ಮಕ್ಕಳಲ್ಲಿರುವ ಆಸಕ್ತಿಯನ್ನು ಇವು ಬಿಚ್ಚಿಡುತ್ತಾ ಹೋಗುತ್ತವೆ. ಕೂಡುವ ಲೆಕ್ಕದ ಪ್ರಾಸ.

ಆಚೆ ಕೆರೇಲ್ ಎರ್ಡೆಮ್ಮೆ ಈಚೆ ಕೆರೆಲ್ ಎರ್ಡೆಮ್ಮೆ
ಎಲ್ಲಾ ಸೇರಿ ನಾಕೆಮ್ಮೆ ಚಿಕ್ಕಿ ಗಂಡ ಏನಂದ?
ಜ್ವಾಳದ್ರೊಟ್ಟಿ ಹಾಕು ಅಂದ ರಬ್ಬರಬ್ಬನೆ ಬಡಿ ಅಂದ

ತನ್ನ ಚಿಕ್ಕಮ್ಮನನ್ನು ಕುರಿತು ಊಟಕ್ಕೆ ಬಡಿಸಲು ಹೇಳುವ ಹಾಡಿದು.

ಚಿಕ್ಕಳ್ದಕ್ಕಿ ಚಿಕ್ಕವ್ವ ಮೂರ್ಮುದ್ದೆ ಮಾಡವ್ವ
ನನ್ಗೊಂದ್ಮುದ್ದೆ ಇಕ್ಕವ್ವ ನೀನೊಂದ್ಮುದ್ದೆ ಉಣ್ಣವ್ವ
ಅಕ್ಕಗೊಂದ್ಹಾಕವ್ವ

ಹೆಣ್ಣು ಮಕ್ಕಳು ಆಣೆಕಲ್ಲು ಆಟ ಆಡುವಾಗ ಹಾಡುವಂಥವು.

ಒಂದಂ ಬೇಳೆ ಬೆಳಕಂ ಬೇಳೆ ಎರಡು ಕರಡಿಯ ಸಾಲು
ಮೂರು ಮುತ್ತಿನ ಚೆಂಡು ನಾಲ್ಕು ನಲ್ಲಿಯ ಮಾತು
ಐದು ಅತ್ತಿಯ ಹೂವು ಆರು ಬೋರಾಬಿತ್ತು
ಏಳುಕೆ ಬಂದರೆ ಕೊಟ್ಟೇನು ಎಂಟು ನಾಗರದಂಟು
ಒಂಬೊಂಬತ್ತು ದಿನ ತುಂಬಿತ್ತು ಹತ್ತು ತಗಳೆ ನಿನ್ನ ಕೂಸು

ಇಲ್ಲಿ ಒಂದೊಂದು ಸಂಖ್ಯೆಯ ಶಬ್ದಗಳನ್ನು ಹೇಳಿದಾಗಲೂ ಒಂದು ಕಲ್ಲನ್ನು ಮೇಲೆ ತೂರಿ ಕೆಳಗಿನ ಒಂದು ಕಲ್ಲನ್ನು ತೆಗೆದುಕೊಳ್ಳುತ್ತಾರೆ. ಒಟ್ಟು ಐದು ಅಥವಾ ಏಳುಕಲ್ಲುಗಳಿರುತ್ತವೆ. ಅನಂತರ ಎರಡೆರಡು ಕಲ್ಲುಗಳನ್ನು ಅನಂತರ ಮೂರು ಮತ್ತು ಇನ್ನೊಂದು ಕೈಯಲ್ಲಿ ಒಂದನ್ನು ತೆಗೆದುಕೊಳ್ಳುವುದು. ಕಡೆಗೆ ನಾಲ್ಕು ತೆಗೆದುಕೊಳ್ಳುವುದು ಇಲ್ಲಿಗೆ ಈ ಹಾಡು ಮುಗಿಯುತ್ತದೆ. ಅಲ್ಲಿಗೆ ಒಂದು ಗೀಚಿ (ಅಥವಾ ಗಿಚ್ಚಿ ಎನ್ನುವುದುಂಟು)ಯಾದಂತೆ ಇಂತಹ ಹತ್ತೋ ಇಪ್ಪತ್ತೋ ಗಿಚ್ಚಿ ಗೆದ್ದವರು ಕಲ್ಲನ್ನು ಬಚ್ಚಿಡುತ್ತಾರೆ. ಸೋತವರು ಅವುಗಳನ್ನು ಹುಡುಕಬೇಕು.

ಅಳುವ ಮಕ್ಕಳನ್ನು ಸುಮ್ಮನಿರಿಸಲು ‘ಹಿಟ್ಟು ಕುಟ್ಟಿ ಮಲ್ಲಕ್ಕ’ ಪದವನ್ನು ದೊಡ್ಡವರು ಮಕ್ಕಳನ್ನು ಆಟವಾಡಿಸುತ್ತಾ ಹೇಳುವುದುಂಟು. ರಚ್ಚೆ ಹಿಡಿದ ಮಗುವನ್ನು ಎತ್ತಿಕೊಂಡು ಎದುರಿಗೆ ಕೂರಿಸಿಕೊಂಡು, ಅನಂತರ ಅದರ ಕಿರು ಬೆರಳನ್ನು ಹಿಡಿದು ‘ಹಬ್ಬ ಬಂತು’ ಅಂತ ಶುರು ಮಾಡಿ ಹೆಬ್ಬೆರಳಿಗೆ ಬಂದಾಗ ‘ ನಾನಿದೆನಲ್ಲಾ ಮೋಟ್ರಾಯ’ ಅಂತ ಹೇಳುತ್ತಾರೆ. ಆಮೇಲೆ ಮಗುವಿನ ಅಂಗೈ ಮೇಲೆ ಬೆರಳಿನಿಂದ ಸುತ್ತುತ್ತಾ ಕಟ್ಟೆ ಹಾಕಿದಂತೆ ನಟಿಸುತ್ತಾರೆ. ತುಪ್ಪ ಹಾಲನ್ನು ಕಟ್ಟೆಗೆ ಹಾಕಿದಂತೆ ಅಭಿನಯಿಸುತ್ತಾರೆ. ‘ಕಟ್ಟ್ಯೊಡಿತಲೆ ಕಟ್ಯೆ’ ಎಂದು ಹೇಳಿ ಆ ಹಾಲು ತುಪ್ಪ ಕಂಕುಳದವರೆಗೆ ಹರಿಯಿತೆಂದು ತೋರಿಸಿ ಕಚಗುಳಿ ಇಡುತ್ತಾರೆ. ಮಗು ನಕ್ಕು ಉಲ್ಲಾಸಗೊಳ್ಳುತ್ತದೆ. ಈ ಹಾಡು ಗಮನಿಸಿ.

ಹಿಟ್ಟು ಕುಟ್ಟು ಮಲ್ಲಕ್ಕ ಅವರೆ ಕಾಯಿ ಚನ್ನಕ್ಕ
ಬಿದನೂಕೋರ್ ಬಂದಾರೆ ಎದ್ದು ಕೂರು ಮಲ್ಲಕ್ಕ

ಅಂತ ಎಬ್ಬಿಸಿ, ಬೆರಳನ್ನು ಹಿಡಿದು, ಒಂದೊಂದಾಗಿ ಎಣಿಸುತ್ತಾ ಹೀಗೆ ಹೇಳುತ್ತಾರೆ. ಕಿರುಬೆರಳಿನಿಂದ ಪ್ರಾರಂಭಿಸಿ

ಇದು ಹಬ್ಬ ಮಾಡನಾಂತಿ ಇದು ಹಬ್ಬಕ್ಕಕ್ಕಿಲ್ಲಾಂತತಿ
ಇದು ಸಾಲ ಮಾಡನಾಂತತಿ ಇದು ಸಾಲ ತೀರ್ಸೋದ್ಯಾರಂತತಿ
ಕೊನೆಗಿದು ನಾನದನಲ ಮೋಟ್ರಾಯ ಅಂತತಿ

ಹೀಗೆ ಐದು ಬೆರಳಿನ ಕಥೆ ಹೇಳುತ್ತಾ ಹೋಗಿ, ಅಂಗೈಯಲ್ಲಿ ಅಗಲಿಸಿ

ಕಟ್ಟೆ ಕಟ್ಟಿ ತುಪ್ಪ ಬಿಟ್ಟು
ನೀನುಂಡು ನಾನುಂಡು
ನಿಮ್ಮವ್ವ ಉಂಡು ನಿಮ್ಮಪ್ಪ ಉಂಡು
ಅಕ್ಕ ಉಂಡು ಮಾನ ಉಂಡು
ಎಲ್ಲಾರು ಉಂಡು ಆಮೇಲೆ ಆಮೇಲೆ
ನಿನ್ನ ಕಟ್ಟ್ಯೊಡಿತಲೇ ಕಟ್ಟೆ

ಅಂತ ಹೇಳಿ ಕಚಗುಳಿ ಇಡುತ್ತಾರೆ. ಮಗು ಅಳುವುದನ್ನು ಬಿಟ್ಟು ನಗುತ್ತಾ ಎಲ್ಲರನ್ನೂ ನಗಿಸುತ್ತದೆ.

ಮನೆಗೆ ಯಾರಾದರೂ ನೆಂಟರಿಷ್ಟರು ಬಂದಾಗ ಮಕ್ಕಳಿಗೆ ಹಾಡು ಹೇಳಮ್ಮ ಅಂದರೆ ಸಾಕು. ತಡಮಾಡದೆ ‘ಕಾಸು ಕೊಟ್ಟರೆ ಹೇಳ್ತಿನಿ’ ಅಂತ ತಕ್ಕಲು ಹಾಕುತ್ತಾರೆ. ಅವರು ಕಾಸು ಕೊಡುವುದೇ ತಡ ಪ್ರಾರಂಭಿಸುತ್ತಾರೆ.

ಹಾಲಿಗೊಂದು ಕಾಸು ಮೊಸರಿಗೊಂದು ಕಾಸು
ಬೆಣ್ಣೆಗೊಂದು ಕಾಸು ತುಪ್ಪಕ್ಕೊಂದು ಕಾಸು
ಚಿಕ್ಕಪ್ಪ ಕೊಟ್ಟ ಕಾಸು ಪುಕ್ಕಟೆ ಹೋಯಿತು
ಮಾವಯ್ಯ ಕೊಟ್ಟ ಕಾಸು ಮಾಯವಾಗಿ ಹೋಯಿತು
ಗಂಡಯ್ಯ ಕೊಟ್ಟ ಕಾಸು ಗಂಟಾಗಿ ಉಳೀತು

ಇಬ್ಬರು ಹುಡುಗರು ಚಿಣಿಪಣಿ ಆಟ ಆಡುವಾಗ ಯಾರ ಮೇಲೆ ಹೆಚ್ಚು ಡಾಂವಾ ಏರಿಸಬೇಕೆಂದು ‘ಏಕಾ ಪಾವಾ’ ಆಟ ಆಡುತ್ತಾರೆ. ಚಿಣಿಯನ್ನು ದೂರ ಹೊಡೆಯಬೇಕು. ಅದಕ್ಕೆ ಗುಟ್ಟು ಎನ್ನುತ್ತಾರೆ. ಎದುರಿನವರ ದೂರ ಹೊಡೆದ ಚಿಣಿಯನ್ನು ಪುಚ್ಚಿಯ ಹತ್ತಿರ ಎಸೆದು ಹೊಡೆಯುವವನ ಆಟ ತಪ್ಪಿಸಬೇಕು. ಆಟ ಆಡುವವ ಬಂದ ಚಿಣಿಯನ್ನು ಪುನಃ ಹೊಡಯಬಹುದು. ಚಿಣಿ ಪುಚ್ಚಿಯಿಂದ ಎಷ್ಟು ದೂರ ಬಿದ್ದಿದೆ ಎಂಬುದನ್ನು ಅಳೆಯುವಾಗ ಪ್ರತಿಯೊಂದು ಚಿಣಿಗೆ ‘ಏಕಾಪಾವಾ’ ಎಂದು ಲೆಕ್ಕ ಮಾಡುತ್ತಾರೆ. ಅದರ ಹಾಡು ಹೀಗಿದೆ:

ಏಕಾ ಪಾವಾ ದೋಕಾ ಜಟ್ಟಿ
ಮುರುಕನ ಮುಟ್ಟಿ ಚರಕನ ಗೌಡ
ಪರಕನ ಪುಚ್ಚಿ ಸೇಕನ ಡೊಳ್ಳಾ
ಜುಲ್ಲಾ

ಎಣಿಕೆ ಪ್ರಾಸಗಳಲ್ಲಿ ಕೆಲವು ಚುಟುಕು ಪ್ರಾಸಗಳಿವೆ. ಪ್ರಾಸಕ್ಕಾಗಿ ಕಟ್ಟಿಕೊಂಡಂತೆ ಕಂಡರೂ ಕ್ಷಣಕಾಲ ರಂಜನೆ ನೀಡಬಲ್ಲವು.

ಒಬ್ಬ ಇಬ್ಬ ಮೂವ ಮುದ್ಕ
ಹೇತಬಾಚ್ದ ಬಾಯ್ಗೆಸ್ಕೊಂಡ

ಕೈಗಳನ್ನು ಒಂದರ ಮೇಲೊಂದು ಇಟ್ಟುಕೊಂಡು ಎಣಿಸುತ್ತಾ ಹೋಗಿ ಕೊನೆಗೆ ಸರಪಳಿ ಪ್ರಶ್ನೆಗಳನ್ನು ಕೇಳಿ ಉತ್ತರ ಕಂಡು ಕೊಳ್ಳುವ ಪ್ರಾಸಗಳು ಸಾಕಷ್ಟಿವೆ. ಈ ಎಣಿಕೆ ಪ್ರಾಸಗಳಲ್ಲಿ ಕಂಡುಬರುವ ಕನ್ನಡ ಪದಗಳಲ್ಲದೆ, ತೆಲುಗು, ಸಂಸ್ಕೃತ, ಹಿಂದಿ, ಉರ್ದು ಭಾಷೆಯ ಪದಗಳು ಸೇರಿಕೊಂಡಿವೆ. ಆಯಾ ಪ್ರಾದೇಶಿಕ ಭಾಷಾ ಸೊಗಡಿನ ಹಿನ್ನೆಲೆಯಲ್ಲಿ ಒಂದೇ ಬಗೆಯ ಆಣೆಕಲ್ಲಿ ನಾಟದ ಎಣಿಕೆಪ್ರಾಸಗಳು ಸಾಕಷ್ಟು ಕಂಡುಬರುತ್ತವೆ. ಒಟ್ಟಿನಲ್ಲಿ ಎಣಿಕೆಪ್ರಾಸಗಳು ಮಕ್ಕಳಿಗೆ ಕಲಿಕೆಗೆ, ಆಟದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಹಾಗೂ ಮಕ್ಕಳ ಬೌದ್ಧಿಕ ಜಾಣ್ಮೆಯನ್ನು ಪ್ರದರ್ಶಿಸಲು ಬಳಕೆಯಾಗುತ್ತಿರುವುದನ್ನು ಗಮನಸಿಬಹುದು.

– ಜಿ.ಎಸ್.

ಎದ್ದುಲ ದ್ಯಾವರ ಎದ್ದುಲ ದ್ಯಾವರ ಎಂದರೆ ಎತ್ತುಗಳ ಹಬ್ಬ (ಆಂಧ್ರಪ್ರದೇಶ). ದೀಪಾವಳಿ ಹಬ್ಬದ ಅನಂತರದ (ಅಮವಾಸ್ಯೆಯ ಅನಂತರ) ಸೋಮವಾರದೆಂದು ವರ್ಷಕ್ಕೊಂದು ಬಾರಿ ಈ ಉತ್ಸವ ನಡೆಯುತ್ತದೆ. ಊರ ಹೊರಗೆ ಮೈಲು ದೂರದಲ್ಲಿ ಎತ್ತುಗಳ ದ್ಯಾವರದ ಉತ್ಸವ ನಡೆಯುತ್ತದೆ. ತಂಗಡಿ, ಸೀಮೆ ಜಾತಿ, ಹೊಂಗೆ ಮರಗಳ ಸೌದೆಗಳನ್ನು ಮಕ್ಕಳು ಒಂದರ ಮೇಲೆ ಒಂದರಂತೆ ಒಂದು ಕಡೆ ಪೇರಿಸಿಡುತ್ತಾರೆ. ಇದನ್ನು ‘ಗೂಡು’ ಎನ್ನುತ್ತಾರೆ. ಈ ಗೂಡಿಗೆ ಎದುರಾಗಿ ಇಲ್ಲವೇ, ಪಕ್ಕದಲ್ಲಿಯಾಗಲೀ ಗಿಡದ ಕೆಳಗೆ (ಸಾಧಾರಣವಾಗಿ ತಂಗಡಿ ಗಿಡ ಇಲ್ಲವೇ ತುಂಬೆಗಿಡ) ಕಾಟಮದೇವರನ್ನು ಇರಿಸುತ್ತಾರೆ. ಕಾಟಮರಾಯನಿಗೆ ವಿಗ್ರಹವಿಲ್ಲ. ಆರು ಇಲ್ಲವೇ ಮೂರು ಕಲ್ಲುಗಳನ್ನು (ಎಂಟು ಇಲ್ಲವೇ ಆರು ಅಂಗುಲಗಳ ಕಲ್ಲುಗಳನ್ನು ಗುಂಡಾಗಿ ಇರಿಸಲಾಗುತ್ತದೆ) ನಿಲ್ಲಿಸುತ್ತಾರೆ. ಇವುಗಳಿಗೆ ಸುಣ್ಣ ಬಳಿದು ಕೆಂಪು ಬಣ್ಣದಲ್ಲಿ ಮೂರು ನಾಮಗಳನ್ನು ಹಚ್ಚುತ್ತಾರೆ. ಕಾಟಮರಾಯನನ್ನು ಪೂಜಿಸಿ, ತೆಂಗಿನಕಾಯಿ ಒಡೆಯುತ್ತಾರೆ. ಗೂಡಿಗೆ ಕಿಡಿಯನ್ನು ಹಚ್ಚಿಸಿ, ಕಾಟಮದೇವರ ಸುತ್ತ ಗೂಡಿನ ಸುತ್ತ ಎತ್ತುಗಳನ್ನು ಸುತ್ತಿಸುತ್ತಾರೆ. (ಪ್ರದಕ್ಷಿಣೆ ಮಾಡಿಸುತ್ತಾರೆ) ಆಗ ಉರುಮು ವಾದ್ಯಗಳನ್ನು (ಉರುಮೆ) ಬಾರಿಸುತ್ತಾರೆ. ಎತ್ತುಗಳೆಲ್ಲವನ್ನು ಸುತ್ತಿಸಿದ ನಂತರ ಎತ್ತುಗಳೊಂದಿಗೆ ಹಿಂತಿರುಗಿ ತಮ್ಮ ತಮ್ಮ ಮನೆಗಳಿಗೆ ಹೊರಡುವಾಗ ‘ಪಟಾಕಿ’ ಗಳನ್ನು ಸಿಡಿಸಲಾಗುತ್ತದೆ. ಆ ದಿನ ರಾತ್ರಿ ಎತ್ತುಗಳ ಮೆರವಣಿಗೆ (ಉತ್ಸವ) ನಡೆಯುತ್ತದೆ. ಹಬ್ಬ ಆಚರಿಸುತ್ತಾರೆ. ಮಾರನೆಯ ದಿನ ಗೌರಮ್ಮನನ್ನು ಮಾಡಿ, ಹುಡುಗಿಯರು ದೀಪಗಳನನ್‌ಉ ಹಿಡಿದು ಮೆರವಣಿಗೆ ಹೋಗುತ್ತಾರೆ.

ಎತ್ತುಗಳ ದ್ಯಾವರದ ದಿನ ‘ಸಜ್ಜೆ ಮುದ್ದೆ’ ಕುಂಬಳಕಾಯಿ, ಹಸಿಮೆಣಸಿನಕಾಯಿಗಳೊಂದಿಗೆ ‘ಕಾರಗಾಯಿ’ (ಪಲ್ಯ), ಅರ್ಧ ಸೇರು ಅನ್ನ ಮಾಡಿದ ಪಾತ್ರೆಯನ್ನು ಹಾಗೇ ತೆಗೆದುಕೊಂಡು ಗೂಡಿನ ಬಳಿಗೆ ಹೊರಡುತ್ತಾರೆ. ಒಂದು ಕಪ್ಪು ಮೊಸರು, ಎರಡು ತೆಂಗಿನಕಾಯಿ (ಒಂದು ಕಾಟಮರಾಜನಿಗೆ ಮತ್ತೊಂದು ಗೂಡಿಗೆ) ತೆಗೆದುಕೊಂಡು ಹೊರಡುತ್ತಾರೆ. ಕಾಟಮದೇವರಿಗೆ ತೆಂಗಿನಕಾಯಿ ಒಡೆದು, ತೀರ್ಥವನ್ನು ಎತ್ತುಗಳ ಮೇಲೆ ಚೆಲ್ಲುತ್ತಾರೆ. ಉರುಮುಗಳನ್ನು ಕಾಟಮದೇವರಿಗೆ ಎದುರಾಗಿ ಇರಿಸುತ್ತಾರೆ. ಇವುಗಳಿಗೆ ಒಂದು ಎಲೆಯಲ್ಲಿ ನೈವೇದ್ಯ (ಅನ್ನ, ಮೊಸರು) ಇಡುತ್ತಾರೆ. ಹಾಗೆಯೇ ಕಾಟಮದೇವರಿಗೂ ಸಹ ಒಂದು ಎಲೆಯಲ್ಲಿ ಅನ್ನ ಮೊಸರು ನೈವೇದ್ಯವಾಗಿ ಇರಿಸುತ್ತಾರೆ. ಈ ನೈವೇದ್ಯವನ್ನು ಉಪವಾಸವಿರುವ ಪೂಜಾರಿ (ಪಶು ರಕ್ಷಕ) ಸ್ವೀಕರಿಸುತ್ತಾನೆ. ಸಜ್ಜೆ ಮುದ್ದೆಗಳನ್ನು ಕಾರಗಾಯಿ (ಪಲ್ಯ) ಯನ್ನು ಎತ್ತುಗಳು ಹಿಡಿದುಕೊಂಡು ಬಂದು ತಿರುಗಿಸಿದವರಿಗೆ ಹಂಚುತ್ತಾರೆ.

ಎತ್ತುಗಳ ಅಲಂಕಾರ ನೋಡಲು ಸುಂದರವಾಗಿರುತ್ತದೆ. ಎತ್ತುಗಳ ಕೊಂಬುಗಳಿಗೆ, ಕುಚ್ಚು, ಹೊಸ ಅಂಚಿನ ಟೇಪುಗಳನ್ನು ಹಾಕಿ ಫಣಿಕಟ್ಟು ಕಟ್ಟುತ್ತಾರೆ. ಕುತ್ತಿಗೆಗೆ ‘ಗಂಟೆಯ ಸರ’ ಕಟ್ಟುತ್ತಾರೆ. ನೆತ್ತಿಯ ಮೇಲೆ ವೀಳೆದಲೆಯ ಸರ ಕಟ್ಟುತ್ತಾರೆ. ಮುಖಕ್ಕೆ ‘ಮೊಗವಾಡ’ವನ್ನು ಚೆಂಡುಹೂಗಳಲ್ಲಿ ಕಟ್ಟುತ್ತಾರೆ. ಸೊಂಟದ ಮೇಲೆ ಬಣ್ಣದ ವಸ್ತ್ರವನ್ನು ಹೊದಿಸುತ್ತಾರೆ. ಕಣ್ಣುಗಳಿಗೆ ಚೆಂಡುಹೂ, ಕಂಬುಗಳಿಗೆ ಗುಮ್ಮಟ (ಗುಂಬಜು) ಗೆಜ್ಜೆಗಳು ಕಟ್ಟುತ್ತಾರೆ. ಕೆಲವರು ಕೊಂಬುಗಳಿಗೆ ಬಲೂನುಗಳನ್ನು ಕಟ್ಟುತ್ತಾರೆ. ‘ಬಣ್ಣದ ಹಸ್ತ’ (ಹಸ್ತದ ಗುರುತು) ಎತ್ತುಗಳ ಮೇಲೆ ಹೊಡೆಯುತ್ತಾರೆ.

ಎತ್ತುಗಳ ಹಬ್ಬ ಮಾಡಿದರೆ ದೀಪವಳಿ ಹಬ್ಬ ಮಾಡಿದಷ್ಟು ಫಲವಂತೆ. ಎತ್ತುಗಳ ದ್ಯಾವರ ಮಾಡುವುದರಿಂದ ಎತ್ತುಗಳಿಗೆ ಶಾಂತಿ ನಡೆದಂತೆ ನಂಬುತ್ತಾರೆ. ಸಂಜೆ ೫.೩೦ಗಂಟೆಗೆ ಪ್ರಾರಂಭವಾಗುವ ಎತ್ತುಗಳ ದ್ಯಾವರ ಹಬ್ಬ ಬೆಳಗಿನ ಜಾವ ಎರಡು ಗಂಟೆ ತನಕ ನಡೆಯುತ್ತದೆ.

ಎತ್ತುಗಳ ಮೆಣವಣಿಗೆಯಲ್ಲಿ ‘ಉರುಮು’ಗಳು ಬಾರಿಸುತ್ತಿದ್ದರೆ ಕೇಕೆ ಹಾಕಿ, ಕುಣಿದು ಕುಪ್ಪಳಿಸಿ ಹಾಡುತ್ತಾರೆ. ಈ ಹಾಡುಗಳೆಲ್ಲವೂ ಕನ್ನಡದಲ್ಲಿವೆ. ಉದಾಹರಣೆಗೆ

ಈಡು ತಿರುಗಿದ ರಂಗಳಿಸುತ್ತ ಬರುತೈತೆ
ಊರಾಗೆ ಇದ್ದಾಳೆ ಹಿರಿಯಕ್ಕ
ಊರಾಗೆ ಇದ್ದಾಳೆ ಹಿರಿಯಕ್ಕ ಈರಮ್ಮ
ಎತ್ತಿಗಾರತಿ ತರ್ತಾಳೆ

ಎತ್ತುಗಳ ದ್ಯಾವರ ಮೂರು ದಿನಗಳು ಇದೆ ಎನ್ನುವಾಗಲೇ ಯಾದವರ ಮನೆಯಲ್ಲಿ ಹೊರಗಾದವರು (ಮುಟ್ಟಾದವರು) ಇರಬಾರದೆಂಬ ನಿಯಮವಿದೆ. ಹಬ್ಬ ಕಳೆದ ಮಾರನೆಯ ದಿನ ಮಾತ್ರವೇ ಮನೆಯೊಳಗೆ ಪ್ರವೇಶಿಸಬೇಕು. ಮನೆಯಲ್ಲಿ ಗೋಮೂತ್ರ ಸಿಂಪಡಿಸಬೇಕು.

ಎತ್ತುಗಳ ಹಬ್ಬಕ್ಕೆ ಸಂಬಂಧಿಸಿದ ಮೇಲಿನ ವಿವರಗಳನ್ನು ಶೀಗಲಹಳ್ಳಿ, ಮಲಯನೂರು, ವಡ್ಡಪಾಳ್ಯಂ ಗ್ರಾಮಗಳಲ್ಲಿ ಸ್ವೀಕರಿಸಲಾಯಿತು. ಈ ಮೂರು ಗ್ರಾಮಗಳೂ ಈ ಜಿಲ್ಲೆಯಲ್ಲಿಯ ಕುಂದುರಿನ ಮಂಡಲದಲ್ಲಿ ಇದೆ. ಈ ಮೂರು ಪ್ರಾಂತ್ಯಗಳೂ ಕನ್ನಡ ಭಾಷಾ ಪ್ರಭಾವಕ್ಕೆ ಒಳಗಾದ ಆಂಧ್ರ ಕರ್ನಾಟಕ ಗಡಿ ಗ್ರಾಮಗಳು. ಆದ್ದರಿಂದಲೇ ಎತ್ತುಗಳ ದ್ಯಾವರದ ದಿನ ಹಾಡುವ ಈ ಪದಗಳು ಕನ್ನಡದಲ್ಳೇ ಇವೆ.

ಅನಂತಪುರ ಜಿಲ್ಲೆಯಲ್ಲಿಯ ಮಡಕಶಿರಕ್ಕೆ ಹತ್ತು ಮೈಲು ದೂರದಲ್ಲಿರುವ ಅಮರಾಪುರ ಗ್ರಾಮದಲ್ಲಿ ಎತ್ತುಗಳ ದ್ಯಾವರವನ್ನು ‘ದೀವಳಿಗೆ ಹಬ್ಬ’ (ದೀಪಾವಳಿ ಹಬ್ಬ) ಎಂದು ಕರೆಯುತ್ತಾರೆ.

– ಜಿ.ಎಸ್.ಎಂ. ಅನುವಾದ ಎಸ್.ಎಲ್.ಡಿ.

ಎರವರು ಕೊಡಗಿನ ಒಂದು ಬುಡಕಟ್ಟು ಸಮುದಾಯ. ‘ಪರವ’ ಶಬ್ದ ‘ಎರವ’ ಆಗಿರಬೇಕು. ಇರವುಳ್ಳಿ ಎಂದರೆ ಬೇಡುವವ. ಕೊಡವಭಾಷೆಯಲ್ಲಿ ಎರವೆ ಎಂದರೆ ‘ಬೇಡುವವನು’ ಎಂದರ್ಥ. ಎರವರನ್ನು ಕೊಡಗಿನ ಮೂಲ ನಿವಾಸಿಗಳೆಂತಲೂ ಗುರುತಿಸುತ್ತಾರೆ. ಕ್ರಿ.ಶ. ಪೂರ್ವದಲ್ಲಿಯೇ ಇವರು ಕೇರಳದ ವೈನಾಡಿನಿಂದ ಕೊಡಗಿಗೆ ಬಂದಿರಬೇಕೆಂಬ ವದಂತಿಯೂ ಇದೆ. ಕೊಡಗಿನಲ್ಲಿ ಇವರು ಗುಲಾಮರಾಗಿದ್ದರೆಂದು ಕೊನ್ನೂರ್( ೧೮೮೦) ಗುರುತಿಸಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ವಾಸವಾಗಿದ್ದ ‘ಚಂಡಾಳ’ರ ಒಂದು ಭಾಗವೇ ‘ಎರವರು’ ಎಂಬ ಭಾವನೆಯೂ ಇದೆ.

ಎರವರಲ್ಲಿ ಪಣಿಯ, ಪಂಜಿರಿ, ಕಾಕ ಇತ್ಯಾದಿ ಉಪಪಂಗಡಗಳಿವೆ. ಈಗ ಇದರಲ್ಲಿ ಪಣಿಯ, ಪಂಜಿರಿ, ಉಪಪಂಗಡಗಳು ಮಾತ್ರ ಕೊಡಗಿನಲ್ಲಿವೆಯಂತೆ. ಪಡಣಿಯ ಎರವಲ್ಲಿ ೨೧ ಬೆಡಗುಗಳಿದ್ದರೆ, ಪಂಜಿರಿ ಎರವರಲ್ಲಿ ೨೮ ಬೆಡಗುಗಳಿವೆ. ಆದರೆಈ ಎರಡೂ ಗುಂಪುಗಳ ನಡುವೆ ವೈವಾಹಿಕ ಸಂಬಂಧಗಳಿಲ್ಲ. ಪಣಿಯ ಎರವರಲ್ಲಿ ಬೆಡಗುಗಳಿದ್ದರೆ ಪಂಜಿರಿ ಎರವರಲ್ಲಿ ೨೮ ಬೆಡಗುಗಳಿವೆ. ಈ ಎರಡೂ ಗುಂಪುಗಳ ನಡುವೆ ವೈವಾಹಿಕ ಸಂಬಂಧಗಳಿಲ್ಲ. ಪಣಿಯವರಲ್ಲಿನ ಬೆಡಗುಗಳು ಹೀಗಿವೆ: ಪಣಿಗಂಡಿಯೆ, ಕುವ್ವಳಿಯ, ಇಳಂಗಲಡೆ, ಚುಂಡೆಪಟಿಯ ಬೊಳ್ಳಿಎಣ್ಣೆ, ಚುಳ್ಳೋಡೆ, ಕೇವಣಿಯ, ಕಲ್ಲೇರಿಯ, ಅಂಜಲಿಯ, ಕಂಡಟ, ‘ಚೆಂಬಡಿಯ’, ‘ಪಂಜಿಯೊಂಟೆ’ , ‘ಬೆಂಗೇರಿಯ’, ಕಂಬಾಳೆ, ಮಂಗಾಳಿಯೆ, ಕೊತ್ರಳಿಯೆ, ತವೆರೊಂಬೆ ಚೊಕ್ಕಂಬತ್ತಿ, ಪೊಟರೆ ಅರಿಲಿಯೆ ಇತ್ಯಾದಿ.

ಹಾಲೆಂಡನು (೧೯೦೧) ಎರವರನ್ನೂ ಕಪ್ಪುಬಣ್ಣದ ಗುಂಗುರು ಕೂದಲಿನ ದಪ್ಪನೆಯ ತುಟಿಯ ಅಷ್ಟೇನು ಎತ್ತರವಲ್ಲದ ಚೂಪು ಮೂಗು, ಉದ್ದ ಕೈಕಾಲುಗಳು ಎದು ಗುರುತಿಸಿದ. ೧೯೦೧ ರ ಜನಗಣತಿಯಂತೆ ಎರವರದು ಬುಡಕಟ್ಟು ಭಾಷೆ. ಭಾರತದ ಭಾಷಾ ಪರಿವೀಕ್ಷಣೆ ಮಾಡಿದವರು ಮಲಯಾಳಂನ ಉಬಭಾಷೆ ಎಂದರು. ಇದು ದಕ್ಷಿಣ ದ್ರಾವಿಡ ಭಾಷಾ ಗುಂಪಿಗೆ ಸೇರಿದ್ದು, ಆದರೆ ಕನ್ನಡ ಕೊಡವ ಮತ್ತು ಮಲಯಾಳಂ ಭಾಷೆಯ ಸುತ್ತಮುತ್ತಲಿನವರಿಗೆ, ಆ ಭಾಷಿಕರಿಗೆ ಎರವ ಭಾಷೆ ಅರ್ಥವಾಗುವುದೇ ಇಲ್ಲವಂತೆ. ಆದರೆ, ಎರವರ ಭಾಷೆಯಲ್ಲಿ ಹಾಡು – ಕಥೆಗಳು ಹೇರಳವಾಗಿವೆ. ಅವರ ಸಾಂಸ್ಕೃತಿಕ ವೀರರನ್ನು ಕುರಿತ ಮಹಾಕಾವ್ಯಗಳನ್ನು ಹಾಡುವ ಕಲಾವಿದರಿದ್ದಾರೆ. ಅದನ್ನ ದುಡಿಬಾರಿಸುತ್ತ ಹಾಡುವುದುಂಟು. ಈ ಹಾಡುಗಾರಿಕೆಯನ್ನು ಪಟ್ಟೋರ್, ಬಾಯನ ಎಂಬ ಹೆಸರಿನಲ್ಲಿ ಕರೆಯುತ್ತಾರೆ.

ಪಣಿಯ ಎರವರದು ಪಿತೃಪ್ರಧಾನ ಕುಟುಂಬ ವ್ಯವಸ್ಥೆ. ಇದರಲ್ಲಿ ಮೂಫ ಮತ್ತು ಚಿಮ್ಮಿ ಎಂಬ ಇಬ್ಬರು ಮುಖ್ಯಸ್ಥರು ಇರುತ್ತಾರೆ. ಪಂಜಿರಿ ಎರವರದು ಮಾತೃಪ್ರಧಾನ ಕುಟುಂಬ ವ್ಯವಸ್ಥೆ. ಇವರ ಮುಖ್ಯಸ್ಥನನ್ನು ‘ಕಜಾಲಾಟ’ ಎನ್ನುತ್ತಾರೆ. ಈ ಮುಖ್ಯಸ್ಥರು ಹಾಗೂ ಹಿರಿಯರು ಸೇರಿದ ಗುಂಪು ನ್ಯಾಯತೀರ್ಮಾನ ಮಾಡುವ ಜವಾಬ್ದಾರಿಯನ್ನು ಹೊತ್ತಿರುತ್ತದೆ. ಕೌಟುಂಬಿಕವಾದ ಏನೇ ಕಲಹಗಳಿದ್ದರೂ ಇವರ ಮುಂದೆ ಬರಬೇಕು. ಅವರು ನ್ಯಾಯ ತೀರ್ಮಾನ ಮಾಡಿ ತಪ್ಪಿತಸ್ಥರಿಗೆ ದಂಡ ವಿಧಿಸುತ್ತಾರೆ.

ಪಣಿಯರ ಗುಂಪಿನಲ್ಲಿ ಹುಡುಗಿ ವಯಸ್ಸಿಗೆ ಬರುವ ಮುನ್ನ ಮದುವೆ ಮಾಡಿದರೆ ಪಂಜಿರಿ ಎರವರಲ್ಲಿ ವಯಸ್ಸಿಗೆ ಬಂದ ನಂತರ ಮಾಡುತ್ತಾರೆ. ಎರವರಲ್ಲಿ ನಾಲ್ಕು ರೀತಿಯ ಮದುವೆಗಳಿವೆ. ಹೊಂದಾಣಿಕೆ ಮದುವೆ, ಆಯ್ಕೆಯ ಮದುವೆ, ಪಲಾಯನ ಮದುವೆ ಮತ್ತು ಬಲಾತ್ಕಾರದ ಮದುವೆ. ಇವರಲ್ಲಿ ವಿಧವಾ ವಿವಾಹವಿರುವಂತೆ ವಿವಾಹ ವಿಚ್ಛೇದನವೂ ರೂಡಿಯಲ್ಲಿದೆ. ಆದರೆ ವಿಚ್ಛೇದನಗೊಳ್ಳುವ ಮುನ್ನ ಹಿರಿಯರ ಮುಂದೆ ತಮ್ಮ ಇಂಗಿತವನ್ನು ವ್ಯಕ್ತಗೊಳಿಸಬೇಕು. ಅನಂತರ ಅದರ ತೀರ್ಮಾನವಾಗಬೇಕು.

ಎರವರು ಶ್ರಮ ನಿವಾರಣೆಗಾಗಿ ಸಾಮೂಹಿಕ ನರ್ತನಗಳಲ್ಲಿ ತೊಡಗಿಕೊಳ್ಳುವ ಪದ್ಧತಿ ಇದೆ. ನುಡಿ ಮತ್ತು ಚೀನಿವಾದ್ಯವನ್ನು ಹಿನ್ನೆಲೆಯಾಗಿ ತಮ್ಮ ಕುಣತಗಳಲ್ಲಿ ಬಳಸುತ್ತಾರೆ. ದುಡಿ ಒಂದು ಚರ್ಮವಾದ್ಯವಾದರೆ ಚೀನಿವಾದ್ಯ, ಒಂದು ಗಾಳಿವಾದ್ಯ. ದುಡಿ ಕುಣಿತದಲ್ಲಿ ಲಿಂಗಭೇದವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಆದರೆ, ಗಂಡಸರಿಗೆಂದೇ ಸೀಮಿತವಾಗಿರುವ ‘ಯರಾವಟ್’ ನೃತ್ಯವೂ, ಎರವರಲ್ಲಿ ರೂಢಿಯಲ್ಲಿದೆ. ಬಹುತೇಕ ಸಮುದಾಯಗಳಂತೆ ಎರವರ ಸಮುದಾಯವೂ ಆಧುನಿಕತೆಯ ಪ್ರಭಾವಕ್ಕೆ ಒಳಗಾಗುತ್ತಿದೆ.

– ಜಿ.ಆರ್.ಟಿ.

ಎರುಕಲ ಎರುಕಲ ಬುಡಕಟ್ಟುಗಳು ಆಂಧ್ರಪ್ರದೇಶದ ಎಲ್ಲ ಪ್ರದೇಶಗಳಲ್ಲಿ ಇದ್ದಾರೆ. ಅವರು ತಮ್ಮನ್ನು ತಾವು ‘ಕುರ್ರು‍’ ಎಂದು ಕರೆದುಕೊಳ್ಳುತ್ತಾರೆ. ಎರುಕಲ ಹೆಂಗಸರು ಮನೆಮನೆಗೂ ಸುತ್ತಿ ಭವಿಷ್ಯ ಹೇಳುವುದರಿಂದಾಗಿ (ಎರುಕ ಚೆಪ್ಪಟಂ) ಈ ಸಮುದಾಯಕ್ಕೆ ಆ ಹೆಸರು ಬಂದಿದೆ. ಎರುಕಲರಿಗೆ ತಮ್ಮದೇ ಭಾಷೆಯಿದೆ. ‘ಕುರ್ರು‍ಭಾವೆ’ ಇಲ್ಲವೆ ‘ಕುಲದಾತ’ ಎಂದು ಕರೆಯುತ್ತಾರೆ. ಇವರಲ್ಲಿ;

೧. ಡಬ್ಬಾ ಎರುಕಲ (ಬಿದಿರಿನಿಂದ ಬುಟ್ಟಿ ಹೆಣೆಯುವವರು)

೨. ಈತಪುಲ್ಲಲ ಎರುಕಲ (ಈಚಲಿನಿಂದ ಬುಟ್ಟಿ ಹೆಣೆಯುವವರು)

೩. ಕುಂಪೂರಿ ಎರುಕಲ (ನೇಯುವವರ ಬಾಬಾಣಿಗೆಗಳನ್ನು ತಯಾರಿಸುವವರು)

೪. ಪಾರಿಕ ಮುಗ್ಗುಲ ಎರುಕಲ (ಜ್ಯೋತಿಷ್ಯ ಹೇಳುವವರು)

೫. ಕರಿವೇಪಾಕು ಎರುಕಲ (ಕರಿಬೇವು ಮಾರುವವರು)

೬. ಉಪ್ಪು ಎರುಕಲ (ಉಪ್ಪು ಮಾರುವವರು) ಆ ರೀತಿ ಉಪಪಂಗಡಗಳಿವೆ. ಸತ್ತುಪಾಡಿ, ಕಾವಾಡಿ, ಮಾನುಪಾಟಿ, ಮೆಂಡ್ರಗು‌ತ್ತಿ, ಮೊದಲಾದ ಗೋತ್ರಗಳಿವೆ.

ಸತ್ತುಪಾಡಿ ಗೋತ್ರದವರು ಉಳಿದ ಗೋತ್ರದವರಿಗಿಂತಲೂ ಸಾಮಾಜಿಕವಾಗಿ ಕಡಿಮೆ ಸ್ತರದವರು. ಆದರೆ ಇವರು ಮೆಂಡ್ರಗುತ್ತಿ ಗೋತ್ರದವರಲ್ಲಿ ವೈವಾಹಿಕ ಸಂಬಂಧಗಳನ್ನು ಬೆಳೆಸುವುದಿಲ್ಲ. ಕಾರಣವೆಂದರೆ ಕೆಳಸ್ತರದವರೆಂಬುದು. ಎರುಕಲ ಅವರು ಬಿದಿರಿನ ಮೆಳೆಗಳಿಂದ ಪುಟ್ಟಿ, ತಡಿಕೆಗಳನ್ನು ತಯಾರಿಸುತ್ತಾರೆ. ಇದು ಅವರ ಸಂಪ್ರದಾಯ ವೃತ್ತಿ. ಮದುವೆ ಮೂರು ದಿನಗಳ ಕಾಲ ನಡೆಯುತ್ತದೆ. ಗಂಡಿನ ಕಡೆಯವರಿಂದ ಕರೆ ಬಂದ ನಂತರ ಹುಡುಗಿಯ ತಂದೆ ತಾಯಿಗಳು ಮಾತುಕತೆಯ ಮೂಲಕ ಒಬ್ಬರನ್ನೊಬ್ಬರು ಭೇಟಿಯಾಗುತ್ತಾರೆ. ಎರುಕಲರಲ್ಲಿ ಐದು ಮಂದಿ ಮುಖಂಡರನ್ನು ಕೂಡಿ ‘ಬೆರುಮನೋಸೋಮ್’ ಎಂದು ಕರೆಯುತ್ತಾರೆ. ಇವರು ಸಮುದಾಯದ ಗತಾರಿಗಳನ್ನು ಪರಿಷ್ಕರಿಸುತ್ತಾರೆ. ಏನಾದರೂ ಸಮಸ್ಯೆ ಬಂದರೆ ಶಿಕ್ಷೆ ಕಠಿಣವಾಗಿರುತ್ತದೆ. ಕೆಂಡದಲ್ಲಿಟ್ಟು ಕೊಡಲಿಯನ್ನು ಅಂಗೈಯಲ್ಲಿ ಹಿಡಿಯುವುದು, ಕೆಂಡದ ಮೇಲೆ ನಡೆಯುವುದು, ಬಿಸಿ ಎಣ್ಣೆಯಲ್ಲಿ ಕೈಗಳನ್ನು ಅದ್ದುವುದು, ತುಂಬಿದ ಕೊಡದ ನೀರು ತುಳುಕದ ಹಾಗೆ ತರುವುದು ಮುಂತಾದವು. ಇವರಲ್ಲಿ ಹೆಚ್ಚಿನಂಶ ಮಾಂಸಾಹಾರಿಗಳು. ಇತ್ತೀಚೆಗೆ ಇವರಲ್ಲಿ ಕೆಲವರು ಹಂದಿ ಸಾಗಾಣಿಕೆ ಮಾಡುತ್ತಿದ್ದಾರೆ. ವರದಕ್ಷಿಣೆ ಸಂಪ್ರದಾಯ ಇವರಲ್ಲಿದೆ. ಮನೆಯ ಹೆಸರಿನ ಆಧಾರದ ಮೇಲೆ ಮದುವೆಯ ಮಾತುಕತೆಗಳಿರುತ್ತವೆ. ಇವರು ಹಿಂದೂ ದೇವತೆಗಳಾದ ಶ್ರೀರಾಮ, ಶ್ರೀಕೃಷ್ಣ, ಶಿವ ಮೊದಲಾದವರನ್ನು ಪೂಜಿಸುತ್ತಾರೆ. ನೇಯುವುದು, ಮಿಚ್ಚಣಿಗೆ (ಏಣಿ, ಬುಟ್ಟಿ) ಹೆಣೆಯುವುದರಲ್ಲಿ ಕುಶಲಿಗರು. ಕುಟುಂಬದ ಸದಸ್ಯರೆಲ್ಲಾ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಹೊಗೆ ಸೇದುವುದು ಬಹಳಷ್ಟು ಜನರಲ್ಲಿ ಅಭ್ಯಾಸವಿದೆ. ಕುಡಿಯುತ್ತಾನೆ. ಹೆಂಗಸರು ಹೆಚ್ಚಾಗಿ ಎಲೆ ಅಡಿಕೆ ಹಾಕುತ್ತಾರೆ. ಕಾಡಿನ ಸಮೀಪದಲ್ಲಿ ಇವರ ಮನೆಗಳಿದ್ದು, ಇತರ ಸಮುದಾಯದೊಂದಿಗೆ ಬೆರೆತು ಜೀವನ ಸಾಗಿಸುತ್ತಾರೆ.

೨೦೧೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೪, ೩೭, ೪೫೯. ಅಂದರೆ ಶೇಕಡಾ ೮.೭.

– ಬಿ.ಕೆ.ಆರ್. ಅನುವಾದ ಕೆ.ಎಸ್.

ಎರುದು ಕಳಿ ಕಣ್ಣೂರು, ಕಾಸರಗೋಡು ಜಿಲ್ಲೆಗಳ ಮಾವಿಲ ಸಮುದಾಯದ ನೈಜ ಕಲೆಯಾಗಿದೆ. ಈ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಲ್ಲಿ ಮಾವಿಲರು ವಾಸವಾಗಿದ್ದಾರೆ. ಪರಂಪರಾಗತವಾಗಿ ಮಾವಿಲರು ಕುಮರಿ ಕೃಷಿಯನ್ನು ನಡೆಸುತ್ತಿದ್ದರು. ಕುಮರಿ ಕೃಷಿಯು ದೈವಿಕವಾದ ಕೃಷಿ ರೀತಿಯೆಂದು ಅವರು ನಂಬಿದ್ದರು. ಕುಮರಿ ಕೃಷಿಗೆ ಅಗತ್ಯವಾದ ಭೂಮಿಯನ್ನು ಪತ್ತೆಹಚ್ಚಿ ಕಾಡುಕಡಿದು ಭೂಮಿಯನ್ನು ಹಸನುಗೊಳಿಸಿ ಕೃಷಿಯನ್ನು ಮಾಡಬೇಕಾದರೆ ದೈವ – ದೇವರುಗಳ ಕೃಪೆ ಅಗತ್ಯವೆಂದು ಅವರು ನಂಬಿದ್ದರು. ದೈವ – ದೇವರುಗಳನ್ನು ತೃಪ್ತಿಪಡಿಸಿದರೆ ಮಾತ್ರ ಸಮೃದ್ದವಾದ ಬೆಳೆಯಾಗುವುದು ಎಂಬುದು ಅವರ ನಂಬಿಕೆ.

ತುಲಾ ಮಾಸದ ಹತ್ತನೇ ದಿನಾಂಕವನ್ನು ಬೇಸಾಯ ವೃತ್ತಿಯನ್ನು ರೂಢಿಸಿಕೊಂಡಿರುವ ಎಲ್ಲಾ ಜನರು ವಿಶೇಷ ದಿವಸವಾಗಿ ಪರಿಗಣಿಸಿದ್ದಾರೆ. ಕುಮರಿ ಕೃಷಿಯ ಮೊದಲ ಬೆಳೆಯ ಕಟಾವು ಕಳೆದು ಎರಡನೇ ಬೇಸಾಯವನ್ನು ಆರಂಭಿಸುವ ನಡುವೆ ಬುಟಕಟ್ಟು ಸಮುದಾಯದವರು ಕೃಷಿ ಸಮೃದ್ಧಿಗಾಗಿ ಅನೇಕ ಆಚರಣೆಗಳನ್ನು ಆಚರಿಸುತ್ತಾರೆ. ಬುಡಕಟ್ಟು ಸಮುದಾಯದವರು ಬೇಟೆಯನ್ನು ಆರಂಭಿಸುವುದು ತುಲಾಮಾಸ ಹತ್ತರ ಈ ದಿವಸವಾಗಿದೆ. ಇದೇ ದಿವಸ ಮಾವಿಲರು ತಮ್ಮ ಧಣಿಗಳ ಮನೆಗಳಿಗೆ ‘ತೆರಳಿ ಎರುದು’ ಕಳಿಯನ್ನು ಪ್ರದರ್ಶಿಸುತ್ತಿದ್ದರು. ಬೇಸಾಯ, ಕೊಯ್ಲು ಇವುಗಳ ಅಂಗವಾಗಿಯೂ ದನ – ಕರುಗಳ ಸಮೃದ್ಧಿಗಾಗಿಯೂ ಅವರು ಈ ಕಲೆಯನ್ನು ಪ್ರದರ್ಶಿಸುತ್ತಿದ್ದರು. ಕೆಲವೊಮ್ಮೆ ಭೂಮಾಲೀಕರ ಒತ್ತಾಯದ ಮೇರೆಗೆ ಅವರ ಮನೆಗಳಿಗೆ ಹೋಗಿ ಎರುದುಕಳಿ ಪ್ರದರ್ಶಿಸುವ ಪರಿಪಾಠವೂ ಇತ್ತು.

ಎರುದುಕಳಿಗೆ ಸಂಬಂಧಿಸಿದ ಹಾಗೆ ಒಂದು ಐತಿಹ್ಯವಿದೆ. ಮಾವಿಲರ ಮುಖ್ಯ ದೈವಗಳು ಪಂಜುರ್ಲಿ ಮತ್ತು ಕಲ್ಲುರ್ಟಿ. ಕುಕ್ಕೆ ಸುಬ್ರಹ್ಮಣ್ಯದಿಂದ ಚೋಮ ಎಂಬ ಹೆಸರಿನ ಎತ್ತನ್ನು ಕೊಂಸು ತರುತ್ತಿದ್ದಾಗ ಬಳಲಿದ ಈ ದೈವಗಳು ಎತ್ತನ್ನು ಒಂದು ಮರದ ಕೆಳಗೆ ಕಟ್ಟಿಹಾಕಿ ಬಾಯಾರಿಕೆ ನೀಗಿಸಲು ಹೋದರು. ಪಂಜುರ್ಲಿಗೆ ಶೇಂದಿ ಮತ್ತು ಸಾರಾಯಿ ತುಂಬಾ ಇಷ್ಟ. ಹೊಟ್ಟೆ ತುಂಬಾ ಸಾರಾಯಿ ಕುಡಿದು ಮರಳುತ್ತಿದ್ದ ಇವರು ದಾರಿ ಮಧ್ಯೆ ಹಲಸಿನ ಹಣ್ಣು ಬಿದ್ದಿರುವುದನ್ನು ಕಾಣುತ್ತಾರೆ. ಅದರಿಂದ ಕೆಲವು ತೊಳೆಗಳನ್ನು ಎತ್ತಿಗೆ ಕೊಡುತ್ತಾರೆ. ಅದ್ನ್ನು ತಿಂದ ಕೂಡಲೇ ಎತ್ತಿನ ಬಾಯಿಂದ ನೊರೆ ಬರಲು ಆರಂಭವಾಯಿತು. ಇದನ್ನು ಕಂಡ ಇಬ್ಬರು ಹರಕೆಯೊಂದನ್ನು ಹೇಳುತ್ತಾರೆ. ಎತ್ತಿನ ರೋಗ ನಿವಾರಣೆಯಾದರೆ ಮುಂದಿನ ವರ್ಷ ಭೂತಕೋಲದ ನಂತರ ಮನೆ – ಮನೆಗಳಲ್ಲಿ ಹರಕೆ ಹೇಳುತ್ತಾರೆ. ಈ ಚೋಮ ಎಂಬ ಎತ್ತಿನ ನೆನಪಿಗಾಗಿ ಅನಂತರದ ವರ್ಷಗಳಲ್ಲಿ ತುಲಾಮಾಸ ಹತ್ತರಂದು ಮಾವಿಲರ ಆರಾಧನಾಲಯಗಳಲ್ಲಿ ಭೂತಕೋಲದ ನಂತರ ಎರುದುಕಳಿಯನ್ನು ನಡೆಸಿದರು. ಎತ್ತಿನ ರೂಪವನ್ನು ರಚಿಸಿ ಅದರೊಳಗೆ ಒಬ್ಬ ವ್ಯಕ್ತಿ ನಿಂತು ಚೆಂಡೆ ಹಾಗೂ ಹಾಡಿನ ಲಯಕ್ಕೆ ಹೆಜ್ಜೆ ಹಾಕುತ್ತಾರೆ. ಈ ವೇಷವನ್ನು ಧರಿಸುವವನು ಪುರುಷನಾಗಿರುತ್ತಾನೆ. ಎತ್ತನ್ನು ನಿಯಂತ್ರಿಸುವ ‘ಕಾಲಿಯನ್’ ಎಂಬ ವೇಷವೂ ಮರಮೂಡನ್ ವೇಷವೂ ಇದರೊಂದಿಗಿರುತ್ತದೆ. ಹಲಸಿನ ಮರದ ಹಲಗೆಯಿಂದ ಎತ್ತಿನ ಮುಖವಾಡವನ್ನು ರಚಿಸಿರುತ್ತಾರೆ.

6

ಎತ್ತಿನ ಸ್ತುತಿ ಹಾಡುಗಳೊಂದಿಗೆ ಮನೆ – ಮನೆಗಳಿಗೆ ಭೇಟಿ ನೀಡುವ ಎರುದುಕಳಿ ತಂಡಕ್ಕೆ ಜನರು ಹಣ ಹಾಗೂ ಧಾನ್ಯಗಳನ್ನು ನೀಡುತ್ತಾರೆ. ಎತ್ತಿನ ವೇಷ ಮನೆಗೆ ಬರುವುದು ಸಮೃದ್ಧಿಯ ಸಂಕೇತವೆಂದು ಜನರು ನಂಬಿದ್ದಾರೆ. ಕುಮರಿ ಬೇಸಾಯ ಪದ್ಧತಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಮಾವಿಲರು ಕೃಷಿ ಮತ್ತು ಭೂಮಿಗೆ ಸಂಬಂಧಿಸಿದಂತೆ ಅನೇಕ ಫಲವಂತಿಕೆಯ ಆಚರಣೆಗಳನ್ನು ನಡೆಸುತ್ತಿದ್ದರು. ಕಾಡಿನ ದೈವಗಳನ್ನು, ಕುಲದೇವತೆಗಳನ್ನು ಹಾಡಿ ಹೊಗಳಿದ ನಂತರ ಮಾವಿಲರು ಬೇಸಾಯ ವೃತ್ತಿಯನ್ನು ಆರಂಭಿಸುತ್ತಿದ್ದರು.

ತುಲಾಮಾಸ ಹತ್ತರಂದು ತಮ್ಮ ಧಣಿಗಳಿಂದ ಬೇಸಾಯದ ಪರಿಕರಗಳನ್ನು ಸ್ವೀಕರಿಸುವ ವಿಧಿ ನಡೆಯುತ್ತದೆ. ಕುಮರಿ ಬೇಸಾಯದ ದೇವತೆಗಳನ್ನು ಸ್ಮರಿಸಿಕೊಂಡು ಅವರು ಕೃಷಿ ಕೆಲಸಗಳನ್ನು ಆರಂಭಿಸುತ್ತಿದ್ದರು. ನಮ್ಮ ನಾಡಿನಲ್ಲಿ ಜಮೀನ್ದಾರಿ ಪದ್ಧತಿಯು ಕೊನೆಗೊಂಡ ಹಿನ್ನೆಲೆಯಲ್ಲಿ ಎರುದುಕಳಿ ಎಂಬ ಕಲೆಯು ಅವನತಿಯ ಹಾದಿ ಹಿಡಿಯಿತು. ಇಂದು ಕಾಸರಗೋಡು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮತ್ರ ಈ ಕಲೆಯು ಅಸ್ತಿತ್ವದಲ್ಲಿದೆ.

– ಪಿ.ವಿ.ಎಂ. ಅನುವಾದ ಎನ್.ಎಸ್.

ಎಲುಗುಬಂಟಿ ವೇಷಂ ಇದು ಮನರಂಜನಾ ಪ್ರಧಾನವಾದ ಜನಪದ ಪ್ರದರ್ಶನ ಕಲೆ (ಕರಡಿ ವೇಷ). ಗಿರಿಜನ ಸಂಸ್ಕೃತಿಗೆ ಸೇರಿದ್ದಲ್ಲದೆ ಇದು ಅಡವಿ ಪ್ರಾಂತ್ಯಗಳಲ್ಲಿ ಕರಡಿಗಳು ಹೇಗೆ ದಾಳಿ ಮಾಡುತ್ತವೆ, ಅವುಗಳಿಂದ ಮನುಷ್ಯ ಹೇಗೆ ತಪ್ಪಿಸಿಕೊಳ್ಳುತ್ತಾನೆ ಎಂಬುದನ್ನು ತಿಳಿಸುವ ಪ್ರಧಾನಾಂಶವುಳ್ಳ ಕಲೆ. ಈ ಕಲೆ ಉಭಯ ಗೋದಾವರಿ ಜಿಲ್ಲೆಗಳಲ್ಲಿ ಹೆಚ್ಚು ಪ್ರಚಾರದಲ್ಲಿದೆ. ಮನುಷ್ಯರು ಕರಡಿಯಂತೆ ವೇಷ ಹಾಕಿಕೊಂಡು ಕರಡಿಗಳನ್ನು ಅನುಕರಿಸುತ್ತಾ ಅವುಗಳ ಹಾಗೆ ಕಿರಚುತ್ತಾ ನೆಗೆಯುತ್ತಾ ನೀಡುವ ಪ್ರದರ್ಶನವೇ ಕರಡಿ ವೇಷ. ಇದನ್ನೇ ಕರಡಿಯಾಟ ಎನ್ನುವರು. ಇದರಲ್ಲಿ ಅನುಕರಣೆ ಪ್ರಧಾನವಾದುದು. ಇದನ್ನು ಎಲ್ಲ ಸಂದರ್ಭಗಳಲ್ಲೂ ಉತ್ಸವ, ಮೆರೆವಣಿಗೆಯ ಸಂದರ್ಭಗಳಲ್ಲಿ ಪ್ರದರ್ಶಿಸುತ್ತಾರೆ. ಈ ಪ್ರದರ್ಶನ ನೀಡುವವರೂ ಪುರುಷರೇ. ೨ – ೩ ತಮಟೆಗಳನ್ನು ಬಳಸುವರು. ಇಬ್ಬರು ವ್ಯಕ್ತಿಗಳು – ರಟ್ಟಿನಿಂದಾಗಲಿ, ಮರದ ಹಲಗೆಯಿಂದಾಗಲಿ, ತಗಡಿನಿಂದಾಗಲಿ ಇಲಿಯ ತಲೆಯ ಆಕಾರದಂತೆ ಮಾಡಿದ ಆಕೃತಿಯನ್ನು ತಲೆಗೆ ಧರಿಸಿ, ಕರಡಿಯ ಶರೀರದಂತೆ ತುಪ್ಪಟವಿರುವ ಬಟ್ಟೆಗಳನ್ನು (ಜೋಳದ ನಾರಿನಿಂದ ತಯಾರಿಸಿದ ವಿಶೇಷವಾದ ಕುಸುರಿ ಕೆಲಸಲ ಮಾಡಿದ) ತೊಟ್ಟು ಕರಡಿಯ ಹಾಗೆ ಅಲಂಕರಿಸಿಕೊಂಡು ಪ್ರದರ್ಶನ ಪ್ರಾರಂಭಿಸುತ್ತಾರೆ. ಎರಡು ಕರಡಿಗಳ ನಡುವೆ ಒಬ್ಬ ಮುಖ್ಯ ಆಟಗಾರನಿರುತ್ತಾನೆ. ಅವನ ವೇಷ ವೇಷಭೂಷಣಗಳು ವಿಚಿತ್ರವಾಗಿರುತ್ತವೆ. ಕಪ್ಪಗೆ ಬಣ್ಣ ಬಳಿದು, ತಲೆಗೆ ಟೋಪಿ ಧರಿಸಿ ಗುಡಾಣದಂತಹ ಹೊಟ್ಟೆ, ಕೈಯಲ್ಲಿ ದೊಣ್ಣೆ ಕೊರಳಲ್ಲಿ ಶಿಳ್ಳೆ ನೇತು ಹಾಕಿಕೊಂಡು, ಕರಡಿ ವೇಷ ಧರಿಸಿದ ಆ ಇಬ್ಬರ ಕೊರಳಿಗೆ ಹಗ್ಗ ಕಟ್ಟಿ, ಕರಡಿಗಳಂತೆ ಎಳೆದು ತರುತ್ತಾರೆ. ತಮಟೆಗಳ ಧ್ವನಿಯೊಂದಿಗೆ ಲಯಬದ್ಧವಾಗಿ ಕಥಾನಾಯಕನು ನೃತ್ಯ ಮಾಡುತ್ತಾ ಕರಡಿಗಳನ್ನು ಹಾಗೇ ಕುಣಿಸುತ್ತಾನೆ. ಒಂದೊಂದು ಸಲ ಕರಡಿಗಳು ತಿರುಗಿ ಬೀಳುವುದು, ಕೋಲಿನಿಂದ ತಳಿಸಿದಂತೆ ನಟಿಸುತ್ತಾ ಹಾಸ್ಯವನ್ನುಂಟು ಮಾಡುತ್ತಾನೆ. ಈ ವೇಷದಲ್ಲಿರುವ ಕಲಾವಿದರ ಪ್ರದರ್ಶನ ಮೂರು ರೀತಿಯಲ್ಲಿರುತ್ತದೆ. ಒಂದು ಸಾಧಾರಣ ಪ್ರದರ್ಶನ, ಎರಡು – ಕ್ರೂರಮೃಗಗಳ ದಾಳಿಯಿಂದ ರಕ್ಷಿಸಿಕೊಳ್ಳುವ ಪ್ರದರ್ಶನ, ಮೂರನೆಯದು – ಕಾಮಕ್ರೀಡೆ ಪ್ರದರ್ಶನ.

ಕರಡಿ ವೇಷ ಧರಿಸಿದವರಲ್ಲಿ ಒಬ್ಬರು, ಪ್ರಧಾನ ಕಥೆಗಾರನ ಸುತ್ತ ತಿರುಗುತ್ತಾ, ತಲೆಯಾಡಿಸುತ್ತಾ ಕೆಳಗೆ ಬೀಳುತ್ತಾ ಏಳುತ್ತಾ ಓಡುತ್ತಾ ಪ್ರದರ್ಶನ ಕೊಡುತ್ತಾರೆ.

ಎರಡನೆಯ ಪ್ರದರ್ಶನದಲ್ಲಿ ಕರಡಿಗಳು ಪ್ರಧಾನ, ಕಥಾನಾಯಕನ ಮೇಲೆ ದಾಳಿ ಮಾಡುವುದು ಕೊನೆಗೆ ಸಾಯಿಸಿಬಿಡುವುದು, ರಕ್ತ ಹೀರುವುದು ಮುಂತಾದವುಗಳ ಮೂಲಕ ಪ್ರೇಕ್ಷಕರಿಗೆ ಆಶ್ಚರ್ಯವನ್ನುಂಟು ಮಾಡುವುದು, ಮೂರನೆಯ ಪ್ರದರ್ಶನ ಅಸಭ್ಯ ಪದ ಪ್ರಯೋಗಗಳಿಂದ ಬೈಗುಳಗಳಿಂದ ಕೂಡಿರುತ್ತದೆ. ಇದರಲ್ಲಿ ಹಾಸ್ಯ, ಶೃಂಗಾರ, ಮಿತಿಮೀರಿ ಬರುತ್ತವೆ. ಇವುಗಳೇನೇ ಇರಲಿ ಜಾನಪದರು ಇಂತಹ ಕಲೆಯ ಮೂಲಕ ಕಾಡಿನ ಜೀವನ ವಿಧಾನವನ್ನು ತಿಳಿಯಪಡಿಸುತ್ತಾರೆ.

– ಟಿ.ಎಸ್.ಎನ್. ಅನುವಾದ ಎನ್.ಆರ್.

ಎಲ್ಲಮ್ಮ ಎಲ್ಲಮ್ಮ ವಿಶೇಷವಾಗಿ ಉತ್ತರ ಕರ್ನಾಟಕದ ಜನಪ್ರಿಯ ಶಕ್ತಿದೇವತೆ. ದಕ್ಷಿಣ ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿಯೂ ಎಲ್ಲಮ್ಮನ ಭಕ್ತರಿದ್ದಾರೆ. ಕರ್ನಾಟಕ, ಗೋವೆ, ಮಹಾರಾಷ್ಟ್ರ, ಆಂಧ್ರ ಮುಂತಾದ ಕಡೆಗೆ ಈ ದೇವಿಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಾರೆ. ಎಲ್ಲಮ್ಮ, ರೇಣುಕಾ, ಹುಲಿಗೆಮ್ಮ ಮೊದಲಾದ ಹೆಸರುಗಳಿಂದ ಉತ್ತರ ಕರ್ನಾಟಕಾದ್ಯಂತ ಪೂಜೆಗೊಳ್ಳುವ ಈ ದೇವಿಯ ಗುಡಿಗಳು ಹಲವು ಕಡೆಗಳಲ್ಲಿ ದೊರಕುತ್ತವೆ. ಬೆಳಗಾವಿ ಜಿಲ್ಲೆಯ ಸವದತ್ತಿ, ಹೊಸಪೇಟೆ ಬಳಿಯಿರುವ ಹುಲಿಗಿಯ ಹುಲಿಗೆಮ್ಮ ಹಾಗೂ ಚಂದ್ರಗುತ್ತಿಯ ರೇಣುಕೆ ಅತ್ಯಂತ ಪ್ರಸಿದ್ಧವಾಗಿರುವ ದೇವಾಲಯಗಳು. ಏಳುಕೊಳಗಳ ನಡುವೆ ವಾಸವಾಗಿದ್ದರಿಂದ ‘ಏಳುಕೊಳ್ಳದ ಎಲ್ಲಮ್ಮ’ ನೆಂದು ಹೆಸರಿದೆ.

ಎಲ್ಲಮ್ಮನನ್ನು ಕುರಿತಂತೆ ಹಲವು ಐತಿಹ್ಯ, ನಂಬಿಕೆ ಮತ್ತು ಪುರಾಣಗಳಿವೆ. ಅವರು ಉತ್ತರದಿಂದ ಬಂದವಳು, ರೇಣುಕ ರಾಜನ ಮಗಳು, ಜಗದಗ್ನಿ ಋಷಿಯ ಹೆಂಡತಿ. ಪರುಶುರಾಮ ಈಕೆಯ ಮಗ ಎನ್ನಲಾಗಿದೆ. ಎಲ್ಲಮ್ಮ ಜಮದಗ್ನಿ ಋಷಿಯಿಂದ ಪರಶುರಾಮನನ್ನೊಳಗೊಂಡಂತೆ ಒಟ್ಟು ಐದು ಜನ ಮಕ್ಕಳನ್ನು ಪಡೆದಳೆಂಬ ಪೌರಾಣಿಕ ಕತೆಗಳಿವೆ. ಕಾರ್ತವೀರ್ಯನಿಂದ ಜಮದಗ್ನಿಯ ಕೊಲೆಯಾಯಿತೆಂದೂ ಅದರಿಂದ ಅವಳು ವಿಧವೆಯಾದಳೆಂದೂ ಹೇಳಿಕೆಗಳಿವೆ. ಈ ಹಿನ್ನೆಲೆಯಲ್ಲಿ ಸವದತ್ತಿ ದೇವಸ್ಥಾನದಲ್ಲಿ ಹೊಸ್ತಿಲ ಹುಣ್ಣಿಮೆಯನ್ನು ಮುತ್ತೈದೆ ಹುಣ್ಣಿಮೆಯೆಂದೂ ಆಚರಿಸುವುದು ವಾಡಿಕೆಯಾಗಿದೆ. ರಂಡೆ ಹುಣ್ಣಿಮೆಯಂದು ದೇವಿಯ ಕುಂಕುಮ, ಮಂಗಳಸೂತ್ರ ತೆಗೆದು ಹಾಕಿ ಅಂದು ಗುಡ್ಡಕ್ಕೆ ಬಂದ ಜೋಗತಿಯರು ತಮ್ಮ ಕೈಬಳೆಗಳನ್ನು ಒಡೆದುಕೊಳ್ಳುವರು. ಅಂತೆಯೇ, ಬನದ ಹುಣ್ಣಿಮೆಗೆ ದೇವಿಗೆ ಪುನಃ ಮಂಗಳ ಸೂತ್ರ ಧಾರಣೆಮಾಡಿ ಜೋಗತಿಯರು ಬಳೆಗಳನ್ನು ಧರಿಸುವರು.

ರೇಣುಕಾದೇವಿ ಜಮದಗ್ನಿ ಋಷಿಯ ಶಾಪಕ್ಕೆ ಗುರಿಯಾಗುವುದು, ಕುಷ್ಠರೋಗಿಯಾಗಿ, ಕುರೂಪಿಯಾಗಿ ಆಶ್ರಮದಿಂದ ಹೊರಕ್ಕೆ ತಳ್ಳಲ್ಪಡುವುದು, ಏಕನಾಋ (ಎಕ್ಕಯ್ಯ), ಜೋಗಿನಾಥ (ಜೋಗಯ್ಯ) ಮುನಿಗಳ ದರ್ಶನ ಹಾಗೂ ಕೃಪೆಯಿಂದ ಜೋಗುಳಬಾವಿ(ಜೋಗಿಗಳ ಬಾವಿ)ಯಲ್ಲಿ ಸ್ನಾನಮಾಡಿ ರೋಗಮುಕ್ತಳಾಗಿ ಪುನಃ ಜಮದಗ್ನಿ ಋಷಿಯ ಬಳಿಗೆ ಮೊರೆಹೋಗುವುದು, ಅನ್ಯರಿಂದ ಶಾಪ ವಿಮೋಚನೆ ಪಡೆದು ಬಂದವಳ ತಲೆಯನ್ನು ಕತ್ತರಿಸಿ ಹಾಕುವಂತೆ ಮಕ್ಕಳಿಗೆ ಆಜ್ಞಾಪಿಸುವುದು, ತಂದೆಯ ಆಜ್ಞೆಯನ್ನು ನಿರಾಕರಿಸಿದ ನಾಲ್ಕು ಜನ ಮಕ್ಕಳು ನಪುಂಸಕರಾಗಲೆಂದು ಶಾಪ ಹಾಕುವುದು, ಅದರಿಂದ ಅವರು ಜೋಗಪ್ಪಗಳಾಗಿ ತಮ್ಮ ತಾಯಿಯ ಭಕ್ತರಾದರೆಂದು, ಇವರಿಂದಲೇ ಜೋಗಪ್ಪ ಸಂಪ್ರದಾಯ ಹುಟ್ಟಿಕೊಂಡಿತೆಂದು ಹೇಳುತ್ತಾರೆ. ಕೊನೆಯ ಮಗ ಪರಶುರಾಮ ಮಾತ್ರ ತಂದೆಯ ಆಜ್ಞೆಯನ್ನು ಪರಿಪಾಲಿಸಿ ತಾಯಿ ರೇಣುಕೆಯ ತಲೆಯನ್ನು ಕತ್ತರಿಸಿ ಹಾಕುತ್ತಾನೆ. ಇದೆಲ್ಲ ಜೋಗತಿ ಸಂಪ್ರದಾಯ ಕುರತಿ ಪುರಾಣ.

7

ಎಲ್ಲಮ್ಮನ ಮೂಲದ ಬಗ್ಗೆ ನಿರ್ದಿಷ್ಟವಾಗಿ ಹೇಳಲಾಗದು. ಎಲ್ಲೆ (ಸೀಮೆ)ಯಲ್ಲಿರುವ ಅಮ್ಮ ಎಲ್ಲಮ್ಮ. ಅವಳು ಒಬ್ಬ ಗಡಿದೇವತೆ. ಒಂದು ನಿರ್ದಿಷ್ಟ ಊರಿನ ಸೀಮೆಯ ದೇವತೆಯಾಗಿದ್ದ ಏಳುಕೊಳ್ಳದ ಎಲ್ಲಮ್ಮ ಕಾಲಕ್ರಮೇಣ ಆಂಧ್ರ, ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಪ್ರದೇಶಗಳಲ್ಲಿ ಪ್ರಚಾರ ಪಡೆದು ಕೋಟ್ಯಂತರ ಭಕ್ತಾದಿಗಳನ್ನು ಹೊಂದಿದ್ದಾಳೆ. ಒಂದು ಊರು ಅಥವಾ ಗಡಿಯ (ಸೀಮೆ)ದೇವತೆಯಾಗಿ ಸ್ಥಾಪಿತಗೊಂಡ ಎಲ್ಲಮ್ಮನ ಶಕ್ತಿ, ವ್ಯಾಪ್ತಿ, ಚಮತ್ಕಾರ ಮತ್ತು ಸಾಮರ್ಥ್ಯಗಳು ಎಲ್ಲೆ ಮೀರಿ ಬೆಳೆದಿವೆ.

ಎಲ್ಲಮ್ಮನ ಆರಾಧನೆ ಒಂದು ವಿಶಿಷ್ಟ ಸಂಪ್ರದಾಯವಾಗಿ ಬೆಳೆದು ಬಂದಿದೆ. ಎಲ್ಲಮ್ಮನಿಗೆ ಹರಕೆ ಹೊತ್ತುಕೊಳ್ಳುವ ಸಂಪ್ರದಾಯ ರೂಢಿಯಲ್ಲಿದೆ. ಎಲ್ಲಮ್ಮ ಒಬ್ಬ ಸಮೃದ್ಧ ದೇವತೆ. ಎಲ್ಲಮ್ಮನ ಜೋಗಿಗಳು ಹೊರುವ ಕೊಡ ಮತ್ತು ಜಗಗಳು ಸಮೃದ್ಧಿಯ ಸಂಕೇತ. ಎಲ್ಲಮ್ಮ ಭಕ್ತರನ್ನು ಜೋಗಿ, ಜೋಗತಿಗಳೆಂದು ಕರೆಯುತ್ತಾರೆ. ಈ ಜೋಗಿಗಳಲ್ಲಿ ಜಗಹೊತ್ತ ಜೋಗಿಗಳು, ಕೊಡ ಹೊತ್ತ ಜೋಗಿಗಳೆಂದು ಎರಡು ವಿಧ. ಎಲ್ಲಮ್ಮನಿಗೆ ಎಲ್ಲ ಮತ ಜಾತಿ ಪಂಗಡಗಳಲ್ಲಿ ಭಕ್ತರಿದ್ದಾರೆ. ಅವಳು ಭಕ್ತ ಕೋಟಿಯ ಕುಲದೇವತೆ. ಆದರೂ ಕೆಳವರ್ಗದ ಶೂದ್ರರು, ಅತಿಶೂದ್ರರು, ಅಸ್ಪೃಶ್ಯರು ಹೆಚ್ಚಿನ ಸಂಖ್ಯೆಯಲ್ಲಿ ಈ ದೇವತೆಯ ಭಕ್ತರಾಗಿದ್ದಾರೆ, ಆರಾಧಕರಾಗಿದ್ದಾರೆ.

– ಪಿ.ಕೆ.ಕೆ.

ಎಚಲ್ ಪಾಡಲ್ ತಮಿಳುನಾಡಿನ ಮದುವೆ ಹಾಡುಗಳಲ್ಲಿ ಸೇರಿರುವ ಒಂದು ಪ್ರಕಾರ (ಜರಿಯುವ ಹಾಡುಗಳು). ಗೇಲಿ ಮಾಡುವ ಸಲುವಾಗಿಯೇ ಈ ಹಾಡುಗಳು ರಚನೆಯಾಗಿದೆಯೆಂದು ಹೇಳಬಹುದು. ವಿನೋದದಿಂದ ಕೂಡಿರುವ ಈ ಹಾಡುಗಳಲ್ಲಿ ವರನ ಮನೆಯ ಕೆಲವು ಮಹಿಳೆಯರು ವಧುವಿನ ಕಡೆಯ ಕೆಲವು ಮಹಿಳೆಯರು ಪಾಲ್ಗೊಳ್ಳುತ್ತಾರೆ. ವಧುವಿನ ಕಡೆಯವರು ವರನನ್ನೂ ವರನ ಕಡೆಯವರು ವಧುವನ್ನೂ ಗೇಲಿ ಮಾಡುತ್ತಾ ಹಾಡುತ್ತಾರೆ. ಈ ಹಾಡುಳಲ್ಲಿ ಹಾಸ್ಯವೇ ಪ್ರಧಾನ. ಹೆಣ್ಣಿನ ಅಕ್ಕ, ತಂಗಿ ಹುಡುಗನನ್ನು ಗೇಲಿ ಮಾಡುತ್ತಾ ನಿಂದಿಸಲು ಹಕ್ಕು ಪಡೆದಿರುತ್ತಾರೆ ಅದೇ ರೀತಿ ಗಂಡಿನ ಅಕ್ಕ, ತಂಗಿಯರು ಹೆಣ್ಣನ್ನು ಗೇಲಿ ಮಾಡುವ ಹಕ್ಕು ಪಡೆದಿರುತ್ತಾರೆ. ಕರ್ನಾಟಕದಲ್ಲೂ ಈ ರೀತಿಯ ಜರಿಯುವ ಹಾಡುಗಳಿವೆ.

ವರನು ಈ ಮದುವೆಗೆ ಮುಂಚೆ ಬಹಳ ಹೀನ ಸ್ಥಿತಿಯಲ್ಲಿ ದೀನನಾಗಿ ಜೀವನ ನಡೆಸುತ್ತಿದ್ದವನೆಂದೂ ಈಗ ದೊರೆತಿರುವ ಈ ಹೆಣ್ಣಿನ ಅದೃಷ್ಟದಿಂದಾಗಿ ಆತನು ಹೆಚ್ಚು ಉನ್ನತ ಸ್ಥಿತಿಗೆ ಏರುವಂತಾಯಿತೆಂದೂ ಹೆಣ್ಣಿನ ಮನೆತನ ಹಾಗೂ ರೂಪ ಲಾವಣ್ಯಗಳನ್ನು ವರ್ಣಿಸುತ್ತಾರೆ. ಗಂಡನ್ನು ಈ ಮೂಲಕ ಗೇಲಿ ಮಾಡುತ್ತಾರೆ.

ಉದಾ:

ವಾಡಿ ಪಟ್ಟಿ ಸಂತೇಲಿ ಬಾತು ಮಾರಿದ್ದೇನು
ಬಾವ ! ನೀವು ಬಾತು ಮಾರಿದ್ದೇನು
?
ವಸುದೇವನ ಮಗಳಿಗೆ ಹಾರ ಹಾಕಿದ್ದಾಯ್ತು!
ಕುಮರಂ ಸಂತೇಲಿ ಕೋಳಿ ಮಾರಿದ್ದೇನು?
ಗೋಪಾಲರ ಪುತ್ರಿಗೆ ಹಾರ ಹಾಕಿದ್ದಾಯ್ತು!
ಚೆಕ್ಕಾನದ ಸಂತೇಳಿ ಸೀರೆ ಮಾರಿದ್ದೇನು
ಬಾವ! ಸೀರೆ ಮಾರಿದ್ದೇನು ನೀವು?
ಸೀರಾಮರ ಪುತ್ರಿಗೆ ಹಾರಹಾಕಿದ್ದಾಯ್ತು!
ವಿಳೇದೆಲೆ ಬಣ್ಣದ ಮುಖಕ್ಕೆ ನಮ್ಮ
ಬೆಳ್ಳನೆಯ ವಂಶ ಸಿಗುವುದೆಲ್ಲಿ?
ಅಡಕತ್ತರಿ ಮುಖಕ್ಕೆ ನಮ್ಮ
ಪಾಪ್ಪಾರ್ ವಂಶ ಸಿಗುವುದೆಲ್ಲಿ?
ಜೊಂಡು ಹುಲ್ಲಿನ ಹಾಸಿಗೆ ಹೋಯ್ತು!
ರೇಷ್ಮೆ ಸುಪ್ಪತ್ತಿಗೆ ಪಡೆದದ್ದಾಯ್ತು!

ಮುಂತಾಗಿ ಹಾಸ್ಯದೊಂದಿಗೆ ಹಾಡು ಮುಂದುವರಿಯುತ್ತದೆ. ಒಳ್ಳೆಯ ರತ್ನದಂತಹ ಹುಡುಗಿ ಸಿಕ್ಕಿದಂತಾಯ್ತು ಎಂದು ವಧುವಿನ ರೂಪಲಾವಣ್ಯವನ್ನು ವರ್ಣಿಸುತ್ತಾ ವರನನ್ನು ಹಂಗಿಸುತ್ತಾರೆ.

ಇದೇ ರೀತಿಯಲ್ಲಿ ವರನ ಕಡೆಯ ಹೆಂಗಸರು ವಧುವನ್ನು ಗೇಲಿ ಮಾಡುತ್ತಾ ಹಾಡುತ್ತಾರೆ. ಹೀನ ಸ್ಥಿತಿಯಲ್ಲಿದ್ದ ಹುಡುಗಿಗೆ ಇಂತಹ ಉನ್ನತ ಮಟ್ಟದ ಗಂಡು ದೊರೆತಂತಾಯ್ತು. ತಮ್ಮ ಮನೆಯ ವರನನ್ನು ಕೈ ಹಿಡಿಯುವುದರ ಮೂಲಕ ಅವಳು ಉನ್ನತ ಸ್ಥಿತಿಗೆ ಏರುವಂತಾಯ್ತು ಎಂದು ವರನ ಗುಣಗಾನವನ್ನು ವಧುವನ್ನು ಗೇಲಿ ಮಾಡುತ್ತಾರೆ.

ಉದಾ:

ತಲೆಮೇಲಿನ ಗಡಿಗೆ ಎಲ್ಲಿ ಬಿಟ್ಟಿರಿ
ಅತ್ತಿಗೆ – ನೀವು
?
ಅದನ್ನೆಲ್ಲಿ ಬಿಟ್ಟು ಬಂದಿರಿ
ಅತ್ತಿಗೆ – ಈಗ
ತಲೆ ಮೇಲೆ ಜಡೆ ನಾಗರ ಧರಿಸಿದ್ದಾಯ್ತು
ಅತ್ತಿಗೆ – ಈಗ
ಸೊಂಟಕ್ಕೆ ಬಿಗಿದ ಚಿಂದಿ ಬಟ್ಟೆ
ಎಲ್ಲಿ ಹೋಯ್ತು – ಅತ್ತಿಗೆ
ಈಗ ಸೊಂಟದಲ್ಲಿ ರೇಷ್ಮೆ ಜರಿ
ಉಟ್ಟಿದ್ದಾಯ್ತು – ಈಗ
ಕೊರಳಲ್ಲಿದ್ದ ಕರಿಮಣಿ ಎಲ್ಲಿ
ಹಾಕಿದಿರಿ ಅತ್ತಿಗೆ – ನೀವು ಈಗ
ಕತ್ತಿನ ತುಂಬಾ ಕಾಸಿನ ಸರ
ಧರಿಸಿದ್ದಾಯ್ತು ಅತ್ತಿಗೆ – ಈಗ

ಹೀಗೆ ವರ್ಣನೆ ಮುಂದುವರಿಯುತ್ತದೆ.

ಇಂಗ್ಲಿಷಾಗಲಿ, ತಮಿಳಾಗಲಿ ಬರೆಯಲು ಬಾರದು,
ಎಂಟಕ್ಕಿಂತ ಹೆಚ್ಚು ಎಣಿಸಲೂ, ತಿಳಿಯದು,
ಹತ್ತರ ಮೇಲೆ ಓದಲು ಬಾರದು
ಪಾಠ ಹೇಳಿದರೆ ಕೇಳಲೂ ಬಾರದು
ಕಡ್ಲೆ ಬೀಜ ತಿನ್ನೋಳಿಗೆ
ರುಚಿ ರುಚಿ ತಿನಿಸು ಸಿಕ್ಕಿದಂಗಾಯ್ತು

ಎಂದು ವಧು ಅಂತಹ ಹೀನ ಸ್ಥಿತಿಯಲ್ಲಿದ್ದಳೆಂದು ವರನ ಕಡೆಯವರು ಗೇಲಿ ಮಾಡುತ್ತಾರೆ.

ಬೀಗಿತ್ತಿಯನ್ನು ಗೇಲಿ ಮಾಡುವ ಹಾಡುಗಳನ್ನು ಈ ಸಂದರ್ಭದಲ್ಲಿ ಪ್ರತ್ಯೇಕವಾಗಿ ಹಾಡಲಾಗುತ್ತದೆ. ಹೆಣ್ಣಿನ ತಾಯಿ ಮತ್ತು ಗಂಡಿನ ತಾಯಿ ಪರಸ್ಪರ ತಮಾಷೆ ಮಾಡಿಕೊಳ್ಳುತ್ತಾ ಹಾಡುವುದು ಈ ಹಾಡುಗಳ ಉದ್ದೇಶ.

ಉದಾ:

ಇದೇನಮ್ಮ ಬೀಗಿತ್ತಿ ಎಂತಹ ಸುಂದರಿ!
ಅದೇನೆಂದು ಸೃಷ್ಟಿಸಿದನೋ ಆ ದೇವರು!
ಸಿಂಹದಂತೆ ಸುಂದರ ಹಲ್ಲು
ಚಿರತೆಯಂತೆ ಸುಂದರ ಮುಖ

ಹೀಗೆ ಪರಸ್ಪರ ಗೇಲಿ ಮಾಡಿಕೊಳ್ಳುತ್ತಾ ಹಾಡುಗಳನ್ನು ಹಾಡುತ್ತಾರೆ.

– ಎಸ್.ವಿ. ಅನುವಾದ ವಿ.ಜಿ.