ಏಟ್ರಪ್ಪಾಟ್ಟು ತಮಿಳುನಾಡಿನ ಕೃಷಿಹಾಡುಗಳಲ್ಲಿ ಒಂದಾದ ಏತದ ಹಾಡು.ಹಳ್ಳ, ಬಾವಿಗಳಲ್ಲಿ ನೀರನ್ನು ಮೇಲಕ್ಕೆತ್ತಿ, ಬಯಲಿಗೆ ಹಾಯಿಸಲು ಹಳ್ಳಿಗಳಲ್ಲಿ ಬಳಸುವ ಸಾಧನವೇ ಏತ. ಏತದಿಂದ ನೀರನ್ನು ಮೇಲಕ್ಕೆತ್ತುವ ಸಂದರ್ಭದಲ್ಲಿ ರೈತರು ಹಾಡುವ ಹಾಡೇ ಏತದ ಹಾಡು. ಏತವನ್ನು ಮರದ ದಿಮ್ಮಿಯಿಂದ ಇಲ್ಲವೇ ತಾಳೆ ಮರದ ಕಾಂಡದಿಂದ ತಯಾರಿಸುತ್ತಾರೆ. ದೊಡ್ಡ ಗಾತ್ರದ ಕೊಡದಂತಿರು ಏತಕ್ಕೆ ನೀರನ್ನು ತುಂಬಲು ಅನುಕೂಲವಾಗುವಂತೆ ಮಧ್ಯದಲ್ಲಿ ಸಲಾಕೆಯನ್ನು ಸಿಲುಕಿಸಲಾಗುತ್ತದೆ.

ಏತದ ಹಾಡು:

ಪಿಳ್ಳೈಯಾರೇ ವಾರೀರ್
ಪಿಳ್ಳೈಯಾರೇ ವಾರೀರ್
ಪೆರುಮಾಳೇ ವಾರೀರ್
ಪೆರುಮಾಳೇ ವಾರೀರ್
ಸಿವನಾರೇ ವಾರೀರ್
ಸಿವನಾರೇ ವಾರೀರ್…….

ಎಂಬ ಬನ್ನಿರೋ? ಎಂಬ ಸಾಲಿನಿಂದ ಆರಂಭಗೊಳ್ಳುವುದನ್ನು ಕೆಲವು ಏತದ ಹಾಡುಗಳಲ್ಲಿ ಕಾಣಬಹುದು. ಎಲ್ಲ ಏತದ ಹಾಡುಗಳು ಈ ರೀತಿ ಇರುವುದಿಲ್ಲ.

ಏತವನ್ನು ಹಿಡಿದು ಕೆಳಕ್ಕೆ ಹಾಗೂ ಮೇಲಕ್ಕೆ ಎತ್ತಲು ಬಳಸುವ ಸಾಧನಗಳಿವು.

. ಎತ್ತು ಎರವೈ ಎತ್ತು ಎರವೈ ಮರಂ (ಎತ್ತು ಏತ ಮರ) ಏತ್ತ ಮರವೆಂದೂ ಕರೆಯುವರು. ಮರದಿಂದ ಮಾಡಲಾದ ಉದ್ದನೆಯ ಗಾತ್ರದ ಕಂಬಗಳನ್ನು ಮೇಲಿನ ಆಧಾರಕ್ಕೆ ಕಟ್ಟಿ ತೂಗು ಹಾಕುವರು. ಒಬ್ಬರು ಅಥವಾ ಇಬ್ಬರು ಅವುಗಳನ್ನು ಎಳೆದುಕೊಂಡು ಮುಂದಕ್ಕೂ ಹಿಂದಕ್ಕೂ ಉಯ್ಯಾಲೆಮಾಡಿದಂತೆ ಚಲಿಸಿದಾಗ ನೀರನ್ನು ಮೇಲಕ್ಕೆ ಸೇದಲು ಅನುಕೂಲವಾಗುವಂತೆ ಏತವು ಮುಳುಗಿ ಮೇಲೆ ಬರುತ್ತದೆ. ಈ ಎತ್ತು ಎರವೈಯನ್ನು ಮುಂದಕ್ಕೂ ಹಿಂದಕ್ಕೂ ತಳ್ಳುವಾಗ, ಹಿಂಬದಿಯಲ್ಲಿ ತಣ್ಣೀರು ಚೆಲ್ಲದಂತೆ ಹಾಕಲಾದ ತಡೆಯನ್ನು ತಾಗಿಕೊಂಡು ಕತ್ತಿಯ ಹಿಡಿಯಂತಿರುವ ಎರಡು ಮಾರು ಉದ್ದದ ಹಿಡಿಯನ್ನು ತಗಲಿಸಲಾಗುತ್ತದೆ. ಆ ಹಿಡಿಕೆಯನ್ನು ಹಿಡಿದು ಕೆರೆಯಲ್ಲಿಯ ನೀರನ್ನು ಸೇದಲು ತಕ್ಕುದಾದ ಇಕ್ಕೆಲಗಳಲ್ಲಿರುವ್ ೨ ಅಡಿ ಉದ್ದ ಮರದಿಂದ ಮಾಡಲಾದ ಪಾತ್ರೆಯನ್ನು ಎತ್ತಿ ಇಳಿಸಿ ಮಾಡುವರು. ಅನಂತರ ನೀರನ್ನು ಮೇಲಕ್ಕೆ ಸೇದುವರು. ಎತ್ತಿ ಇಳಿಸುವ ಏರು ಇಳಿಕೆ ಮರದ ಮೂಲಕ ಒಬ್ಬರು ನಾಲ್ಕು ಕೊಡ ನೀರನ್ನು ಸೇದುತ್ತಾರೆಂಬುದು ಲೆಕ್ಕಾಚಾರ. ಒಂದು ಅಂಕೆಯನ್ನು ಎಣಿಸಿ ಮರವನ್ನು ಇಳಿಸುವುದು ಏತದ ಹಾಡಿನ ಪದ್ಧತಿ. ಇಬ್ಬರು ಜೊತೆಯಾಗಿ ನಿಂತು ಏತದ ಮರವನ್ನು ಕೆಳಕ್ಕೆ ಜಗ್ಗುತ್ತಾರೆ.

ಏತದ ಹಾಡು ಈ ರೀತಿ ಇದೆ.

ಮುಖ್ಯಗಾಯನ
ಒರು ಇರವೈ ಒಣ್ಣು

ಸಹ ಗಾಯನ
            ಒರು ಇರವೈ ಒಣ್ಣು
ಒರು ಇರವೈ ಇರಂಡು
ಒರು ಇರವೈ ಮೂಣು……..
ಒರು ಇರವೈ ಪೆಣ್ಣೇ
ಒಲಪ್ಪೋಟ್ಟಿ ಸೋರು
ಕೊಂಡು ವಂದ ನೀಯುಂ
ಎರಚ್ಚೀಡುವೇನ್ ತಣ್ಣೀರ್

ಎಂಬಂತೆ ಇಡೀ ವಠಾರವೇ ಒಂದು ಬಿಟ್ಟು ಒಂದು ಅಂಕೆಯನ್ನು ಎಣಿಸಿ ೧೦೦ ಮರ ಇಳಿಸಿದರೆ ಅದು ‘ಮಾತ್’ ಆಗುತ್ತದೆ. ೧೦೦ ಎಣಿಸಿ ಮುಗಿಸುವಾಗ ಒಂದು ಬಿಟ್ಟು ಒಂದು ಎಂಬ ಲೆಕ್ಕದಲ್ಲಿ ೨೦೦ ಆಗುತ್ತದೆ. ಇಬ್ಬರು ಸೇರಿ ಇಳಿಸುವಾಗ (೨೦೦ + ೨೦೦ = ೪೦೦) ನಾನೂರು ಆಗುತ್ತದೆ. ೧೦೦ ಆದ ಮೇಲೆ ೯೯,೯೮, ೯೭ ಎಂಬಂತೆ ಅವರೋಹಣಗೊಳಿಸಿ ಒಂದು ಬಿಟ್ಟು ಒಂದು ಎಂಬ ಲೆಕ್ಕದಲ್ಲಿ ನೋಡಿದಾಗ ೨೦೦ + ೨೦೦ = ೪೦೦ ಆಗುತ್ತದೆ. ಆರಂಭಿಸುವಾಗ ೧೦ ಸಂಖ್ಯೆ ಎಣಿಸುವುದಿಲ್ಲ. ಅದೇ ರೀತಿ ಎಂಟು, ಒಂಬತ್ತು, ಹತ್ತು ಎಂಬಂತೆ ೨೦, ೩೦, ೪೦, ೫೦ ಎಂದು ಎಣಿಸುವಾಗ ೫ ಎಣಿಕೆಯನ್ನು ಬಿಡುತ್ತಾರೆ. ೧೦ + ೧ ೦ = ೧೦೦ ಆಗಿ ಒಟ್ಟು ೨೦೦ ಸೇರಿ ೮೦೦ + ೨೦೦ = ೧೦೦೦ ಎಂಬಲ್ಲಿಗೆ ತಲುಪಿದಾಗ ಅದನ್ನು ಒಂದು ‘ಪಿಳ್ಳೈಯರ್’ ಎನ್ನುವರು.

೨. ಕಮಲೈ ಇರವೈ: ಆಳದ ಕೊಳದಿಂದ ನೀರನ್ನು ಮೇಲಕ್ಕೆ ಸೇದುವುದೇ ಕಮಲೈ ಇರವೈ (ಕಮಲೈ ಏತ). ಇದರಲ್ಲಿ ಕಬ್ಬಿಣ ಹಾಗೂ ಚರ್ಮದಿಂದ ಮಾಡಲಾದ ದೊಡ್ಡ ಹಂಡೆಯನ್ನು ನೀರಿಗೆ ಇಳಿಸಿ ನೀರನ್ನು ಮೊಗೆದು ಭೂಮಿಗೆ ಹಾಯಿಸಲಾಗುತ್ತದೆ. ಕೆರೆಯ ನೀರನ್ನೇ ಆಶ್ರಯಿಸಿರುವ ಭೂಮಿಗೆ ಈ ವಿಧಾನವನ್ನು ಬಳಸಿ ನೀರು ಹಾಯಿಸಲಾಗುತ್ತದೆ. ಇದರ ಮೂಲಕ ಒಂದು ಬಾರಿಗೆ ಸುಮಾರು ಎಂಟು ಕೊಡ ನೀರು ಮೊಗೆಯಲಾಗುವುದು. ‘ಕಮಲೈ ಇರವೈ’ಯಲ್ಲಿ ಎರಡು ಎತ್ತುಗಳು. ನೊಗದ ಹಗ್ಗ, ಕಪ್ಪಿ ಎನ್ನುವ ಉರುಳು ಇಲ್ಲಿ ಮುಖ್ಯವಾಗಿ ಬಳಕೆಯಗುತ್ತವೆ. ಕೆರೆಯ ಹತ್ತಿರ ಹಾಕಲಾದ ಆಳತ್ತೆರದ ಕಂಬಕ್ಕೆ ಒಂದು ಕೊಕ್ಕೆಯನ್ನು ಸಿಕ್ಕಿಸಲಾಗುತ್ತದೆ. ಅದಕ್ಕೊಂದು ಉರುಳನ್ನು ಬಿಗಿಯಲಾಗುತ್ತದೆ. ಕಂಬಿ ಅಥವಾ ಉರುಳನ್ನು ಕಬ್ಬಿಣದಿಂದಲೂ, ಉರುಳನ್ನು ಮರದಿಂದಲೂ ಮಾಡಲಾಗುತ್ತದೆ. ಇದು ಕವಲಿನ ಆಕೃತಿಯಲ್ಲಿದ್ದು ಅದರ ಸಂಧಿಯಲ್ಲಿ ಕಂಬವನ್ನ ಜೋಡಿಸಲು ಅನುಕೂಲವಾಗುವಂತಿರುತ್ತದೆ.

ಎರವೈ ಪಾಡಲ್ (ಎರವಯ ಹಾಡು) : ಮಣ್ಣಿನ ಕಾಯಕಕ್ಕೆ ಅನುಗುಣವಾಗಿ ಹಾಡುವ ಗೀತೆಗಳು ರೂಪುಗೊಳ್ಳುತ್ತವೆ. ಏತದ ಹಾಡು ಒಂದೊಂದು ಸಾಲು ಸೇರಿಕೊಂಡು ಬೆಳೆಯುತ್ತದೆ. ಇದನ್ನು ಒಂದು ಸಾಲಿನ ತೆಮ್ಮಾಂಗು (ಜನಪದ ಗೀತೆ) ಎಂದು ಕರೆಯುತ್ತಾರೆ. ಏತ ಅಥವಾ ಇರವೈ ಎಂಬುದು ಹಳ್ಳದ ನೀರನ್ನು ಮೇಲಕ್ಕೆ ಎತ್ತುವ ಕುತ್ತಿ ಕಮಲೈ ಇರವೈ (ಕಮಲೈ ಏತ) ಕೆರೆಯಿಂದ ನೀರೆತ್ತುವುದು. ಕಡಿಮೆ ಸಮಯದಲ್ಲಿ ಮಾಡುವ ಏತದ ಕೆಲಸವೇ ಎತ್ತು ಇರವೈ.

ಓರಾನ ಕಣ್ಣನೇ
ಒಲಿಂಜಿರುಪ್ಪಾನ್ ವೇಡನ್
……………….
ಮೂಣುಂಪದಿವು ಮುಕ್ಕಾಟ್ಟುಕ್ಕಾರಿ
ಮೂಲಿಯಲಂಕಾರಿ

ಎಂಬಂತೆ ಚಿಕ್ಕ ಚಿಕ್ಕ ಅಂಶಗಳಿಂದ ಹಾಡಿನ ಸಾಲುಡ ರೂಪುಗೊಳ್ಳುತ್ತದೆ. ಹಳ್ಳದಿಂದ ನೀರನ್ನು ಮೇಲಕ್ಕೆತ್ತಲು ತೆಗೆದುಕೊಳ್ಳುವ ಕಡಿಮೆ ಅವಧಿಯ ಕೆಲಸಕ್ಕೆ ತಕ್ಕಂತೆ ಒಂದು ಅಂಶ, ಮೂರು ಅಂಶಗಳುಳ್ಳ ಹಾಡಿನ ಸಾಲುಗಳು ಇರುತ್ತವೆ.

ಉದಾ:

ಓರಾನ ಕಣ್ಣೇ
ಮುಕ್ಕಾಟ್ಟುಕ್ಕಾರೀ
ಮೂಲಿಯಲಂಗಾರೀ.

ಆದರೆ ಕಮಲೈ ಇರವೈಯಲ್ಲಿ ಕಮಲೈ (ಏತದ ಕುತ್ತಿ) ಕೆರೆಗೆ ಇಳಿಯುವ ಅವಧಿ, ದೊಡ್ಡ ಕುತ್ತಿ ನೀರನ್ನು ಮೊಗೆದು ತೆಗೆಯುವ ಅವಧಿ, ಕೆರೆಯಿಂದ ಅದು ಮೇಲಕ್ಕೆ ಬರಲು ತೆಗೆದುಕೊಳ್ಳುವ ಹೊತ್ತು, ತಣ್ಣೀರನ್ನು ಬಯಲಲ್ಲಿ ಹಾಯಿಸುವ ಹೊತ್ತು ಹೀಗೆ ಕಮಲೈ ಇರವೈ ಒಂದು ಬಾರಿ ಆಳ ಬಾವಿಯಿಂದ ನೀರನ್ನು ತುಂಬಿ ಮೇಲಕ್ಕೆ ತಂದು ಹಾಯಿಸಲು ಬಹಳ ಹೊತ್ತು ತೆಗೆದುಕೊಳ್ಳುತ್ತದೆ.

ಕಡಲೈ ನಲ್ಲ ವಲೈಯಾಗು ಚುನ್ನಾ
ಕರುಪ್ಪಾಯಿ……ಉನಕ್ಕು
ಕಾದುಕ್ಕು ಕಮ್ಮಲ್ ಪಣ್ಣಿ ಪೋಟ್ಟುರುವೇನ್

ಎಂಬಂತೆ ಹಾಡಿನ ಸಾಲು ಬೆಳೆಯುತ್ತದೆ.

ಕಡಲೈ – ನಲ್ಲ – ವೆಳೈ – ಯಾಕುಚ್ – ಚುಣ್ಣಾ
ಕರುಪ್ಪಾಯಿ…..ಉನಕ್ಕು
ಕಾದುಕ್ಕು…. ಕಮ್ಮಲ್…. ಪಣ್ಣಿ…. ಪೋಟ್ಟುರುವೇನ್

ಎಂಬುದಾಗಿ ಕಾಲಗತಿಗೆ ಅನುಗುಣವಾಗಿ ಕಮಲೈ ಎರವೈ ಕೆಲಸ ನಡೆಯುತ್ತದೆ.

ಹಾಡುಗಳ ಛಂದಸ್ಸಿನಲ್ಲಿ ಜನಪದ ಸಂಗೀತದ ಧ್ವನಿಯೊಂದಿಗೆ ಶಬ್ದವನ್ನು ಎಳೆದು ಹಾಡುವ ಕ್ರಮವಿದೆ. ಅದು ‘ಇಳುವೈ ತೆಮ್ಮಾಂಗು’ (ಶಬ್ದವನ್ನು ದೀರ್ಘಗೊಳಿಸಿ ಹಾಡುವುದು) ಎನಿಸುತ್ತದೆ. ಶ್ರಮದ ಕೆಲಸಗಳಲ್ಲಿ ಇಂತಹ ಹಾಡುಗಳಿರುತ್ತವೆ.

. ಇರವೈ ಏಟ್ರಂ (ಇರವೈ ಏತ): ಉದ್ದನೆಯ ಕಂಬವನ್ನು ಕೆರೆಯ ಹತ್ತಿರ ಹಾಕಲಾಗುತ್ತದೆ. ಆ ಕಂಬದ ಒಂದು ತುದಿಗೆ ದೊಡ್ಡ ಪಾತ್ರೆಯನ್ನು ಕಟ್ಟಲಾಗುತ್ತದೆ. ಇನ್ನೊಂದು ತುದಿಯಲ್ಲಿ ಒಬ್ಬರು ನಿಲ್ಲುವರು. ಕಂಬದ ಒಂದು ತುದಿಯಲ್ಲಿ ಒಬ್ಬರು ನಿಲ್ಲುವರು. ಕಂಬದ ಒಂದು ತುದಿಯಿಂದ ಇನ್ನೊಂದು ತುದಿಗೆ ನಡೆದುಕೊಂಡು ಹೋಗುತ್ತಾರೆ. ಹೀಗೆ ನಡೆಯುವಾಗ ಕೆಳಕ್ಕೆ ಬೀಳದಂತೆ ಕೈಯಲ್ಲಿ ಒಂದು ಕೋಲನ್ನು ಹಿಡಿದುಕೊಂಡು ಉದ್ದದ ಕಂಬ ಮೇಲಕ್ಕು ಕೆಳಕ್ಕು ಹೋಗುವಂತೆ ಅವರು ಹಿಂದೆ ಮುಂದೆ ನಡೆಯುವರು. ಹೀಗೆ ಮಾಡಿದಾಗ ಏತದ ಕುತ್ತಿ (ಪಾತ್ರೆ) ಕೆರೆಗೆ ಇಳಿದು ನೀರು ತುಂಬುತ್ತದೆ. ಕಮಲೈ ಇರವೈಯಲ್ಲಿ ಎತ್ತುಗಳಲ್ಲಿ ಕಟ್ಟಿ ಅವು ಮುಂದೆ ಹಿಂದೆ ನಡೆಯುವಂತೆ ಮಾಡಲಾಗುತ್ತದೆ. ಆಗ ಬಾವಿಯೊಳಕ್ಕೆ ಹೋಗಿ ನೀರನ್ನು ಮೊಗೆದು ಹೊರಕ್ಕೆ ಹಾಯಿಸಲು ಸಾಧ್ಯವಾಗುತ್ತದೆ. ಅದೇ ಕ್ರಮವನ್ನು ಇಲ್ಲಿಯೂ ಅನುಸರಿಸಲಾಗುತ್ತದೆ. ಎತ್ತುಗಳ ಬದಲಾಗಿ ಮನುಷ್ಯರು ಕಂಬದ ಎರಡು ತುದಿಗಳಿಗೆ ನಡೆಯುತ್ತಾರೆ. ಈ ರೀತಿಯ ಏತ ಶ್ರಮದಾಯಕವಾದುದು.

ಈ ರೀತಿ ಮೂರು ರೀತಿಯ ಇರವೈ (ಏತದ ಒಂದು ಪ್ರಕಾರ) ಗಳನ್ನು ಏತಗಳೆಂದೇ ಕರೆಯಲಾಗುತ್ತದೆ. ಬಹುತೇಕ ರೈತರು ತಮ್ಮ ಕೆರೆಗಳಿಂದ ಕಮಲೈ ಏತದಿಂದಲೇ ನೀರೆತ್ತುವುದರಿಂದ ಕವಲು ಇರುವ ಮರಗಳನ್ನು ಬಳಸುವುದು ಹೆಚ್ಚು. ಕಮಲೈಯನ್ನು ಹೆಚ್ಚಾಗಿ ತಾಮ್ರ, ಕಬ್ಬಿಣ ಮುಂತಾದ ಲೋಹಗಳಿಂದ ತಯಾರಿಸಲಾಗುವುದು. ನೀರು ಚೆಲ್ಲದಂತೆ ಕಮಲೈಯನ್ನು ಮೇಲಕ್ಕೆ ತರಲು ಅನುಕೂಲವಾಗುವಂತೆ ಕುರಿ, ದನ ಮುಂತಾದ ಪ್ರಾಣಿಗಳ ಚರ್ಮಗಳನ್ನು ಕಮಲೈ ಬಾಯಿಗೆ ಚೀಲದಂತೆ ಮಾಡಿ ಕಟ್ಟಲಾಗುತ್ತದೆ. ಬಯಲಿಗೆ ನೀರು ಹಾಯಿಸುವಾಗ ಈ ಚೀಲಕ್ಕೆ ಕಟ್ಟಿದ ದಾರವನ್ನು ಬಿಡಿಸಲಾಗುತ್ತದೆ. ಲೋಹದ ಪಾತ್ರೆಗೆ ಚರ್ಮದ ಚೀಲವನ್ನು ಕಟ್ಟಿ ಮೊಳೆಯಿಂದೆ ಗಟ್ಟಿಗೊಳಿಸಲಾಗುವುದು.

– ಕೆ.ಎ.ಜಿ. ಅನುವಾದ ಬಿ.ಎಸ್.ಎಸ್.

ಏತದ ಪದ ಬಾವಿಯಿಂದ ನೀರೆತ್ತುವಾಗ ಸಾಧನಕ್ಕೆ ಏತ ಅಥವಾ ಕಪಿಲೆ ಎಂದು ಕರೆಯುವುದರಿಂದ ಆ ಸಂದರ್ಭದಲ್ಲಿ ಹಾಡುವ ಹಾಡುಗಳು. ಏತದ ಪದಗಳು ಎನಿಸಿಕೊಳ್ಳುತ್ತವೆ. ಏತಕ್ಕೂ ಪದಗಳಿಗೂ ಯಾವುದೇ ರೀತಿಯ ಸಂಬಂಧ ಕಾಣಿಸುವುದಿಲ್ಲ. ಕೆಲವೊಮ್ಮೆ ತೀರ ಅಪರೂಪವಾಗಿ ಈ ಸಂಬಂಧ ಕಾಣಬಹುದು. ಕೆಲಸದ ಶ್ರಮವನ್ನು ಮರೆಸುವುದಕ್ಕಾಗಿಯೇ ಈ ಹಾಡುಗಳು ಹುಟ್ಟಿಕೊಂಡಿವೆ. ಹಾಗಾಗಿ ಇವುಗಳಲ್ಲಿ ಹೆಚ್ಚಿನವು ಹಾಸ್ಯ ಪ್ರಧಾನವಾಗಿವೆ.

ಹಾಸ್ಯ ಸಾಲುಗಳುಳ್ಳ ಈ ಜನಪದ ಹಾಡುಗಳು ಛಂದಸ್ಸಿನ ದೃಷ್ಟಿಯಿಂದ ‘ದ್ವಿಪದಿ’ ಜಾತಿಗೆ ಸೇರುತ್ತವೆ. ಇವು ಸಾಮಾನ್ಯವಾಗಿ ಕನ್ನಡದ ಚುಟಕಗಳನ್ನು ಹೋಲುತ್ತವೆ. ಇದರಲ್ಲಿ ಎರಡು ವಾಕ್ಯಗಳಿರುತ್ತವೆ. ಈ ಹಾಡುಗಳು ಸ್ವರೂಪಕ್ಕೂ, ಕೆಲಸದ ಶ್ರಮ ಮತ್ತು ಏಕತಾನತೆಗೂ ಸಂಬಂಧವನ್ನು ಕಲ್ಪಿಸಬಹುದು. ಇವುಗಳ ಲಯ ಮತ್ತು ಹಾಡಿನ ರೀತಿ ಏತ ಎಳೆಯುವಾಗ, ಉಳುವಾಗ, ಗಾಡಿ ಹೊಡೆಯುವಾಗ ಅನುಕೂಲಕರವಾಗಿ ಕಾಣಿಸುತ್ತದೆ. ರಾಗಬದ್ಧವಾಗಿ ಎಳದು ಹೇಳುವ ಪದ ಏತ ಅಥವಾ ಗಾಡಿ ಎಳೆಯುವ ಎತ್ತುಗಳಿಗೆ ಉತ್ತೇಜನವನ್ನು ಕೊಟ್ಟು ಅವು ಲವಲವಿಕೆಯಿಂದ ಮುಂದಕ್ಕೆ ಹೋಗಲು ಸಹಾಯಕವಾಗುತ್ತದೆ (ಈ ಪದಗಳಲ್ಲಿಯ ಲಯ ಏತ ಎಳೆಯುವ ಕೆಲಸದ ಲಯಕ್ಕೆ ಹೊಂದಿಕೆಯಾಗುತ್ತದೆ.) ಪ್ರತಿ ಸಾಲಿನ ಕೊನೆಯ ಪದವನ್ನು ಎಳೆದು ದೀರ್ಘವಾಗಿ ಉಚ್ಚರಿಸುವ ಕಾರಣ ಕೆಲಸದ ಒಂದೊಂದು ಗತಿಗೂ ಮುಂದಿನ ಗತಿಗೂ ಸಂಬಂಧದ ಕೊಂಡಿಯನ್ನು ಕೊಡುತ್ತದೆ. ಇದಕ್ಕೆ ಹೆಚ್ಚು ಪೂರಕವಾಗಿ ‘ ಓ ಓ ವ್ವಾ’ ಎಂದು ಕೊಡುವ ಹಿಮ್ಮೇಳ ಕ್ರಿಯಾತ್ಮಕವಾಗಿದೆ. ಈ ಹಾಡುಗಳು ಪ್ರತಿಸಾಲಿನಲ್ಲಿ ಹೆಚ್ಚಾಗಿ ನಾಲ್ಕು ಗಣಗಳು ಹಾಗೂ ಅಂತ್ಯಪ್ರಾಸ ಇರುವುದನ್ನು ನೋಡಬಹುದು. ಗಾಡಿಯ ಗಾಲಿಗಳು ತಿರುಗುವ ಚಲನೆಗೂ ಏತ ಎಳೆಯುವ ರೀತಿಗೂ ಗಣದ ಕೊನೆಯಲ್ಲಿ ದೀರ್ಘಾಕ್ಷರವುಳ್ಳ ನಾಲ್ಕು ಗಣಗಳ ಸಾಲಿನ ರಚನೆಗೂ ಸಾವಯವ ಸಂಬಂಧವಿದೆ.

ಏತದ ಪದವನ್ನು ಒಬ್ಬನೆ ಹಾಡಬಹುದು ಅಥವಾ ಇಬ್ಬರು ಮೂವರು ಸೇರಿ ಹಾಡಬಹುದು. ಬಾವಿ, ನದಿ, ಕೆರೆಗಳಲ್ಲಿ ನೀರು ಮೇಲ್ಬಾಗದಲ್ಲೇ ಇದ್ದಾಗ ಒಬ್ಬನೇ ವ್ಯಕ್ತಿ ಏತ ಅಥವಾ ಕಪಿಲೆಯನ್ನು ಎಳೆಯುತ್ತಾನೆ. ನೀರು ಅತ್ಯಂತ ಆಳದಲ್ಲಿದ್ದಾಗ ಒಬ್ಬ ಅಥವಾ ಇಬ್ಬರ ಸಹಾಯಂದಿಂದಲೊ (ಏತಕ್ಕೆ) ಇಲ್ಲವೇ ಎತ್ತುಗಳ (ಕಪಿಲೆ) ಸಹಾಯದಿಂದಲೊ ನೀರನ್ನು ಎತ್ತುತ್ತಾನೆ. ಏತವನ್ನು ಕಬ್ಬಿಣದಂತಹ ಲೋಹಗಳಿಂದ ಅಕ್ಕಸಾಲಿ ತಯಾರಿಸಿದ್ದರೆ ಕಪಿಲೆಯನ್ನು ಮಣೆಗಾರರು ಎಮ್ಮೆ ಅಥವಾ ಹಸುವಿನ ಚರ್ಮದಿಂದ ತಯಾರಿಸುತ್ತಾರೆ. ಏತಕ್ಕಿಂತ ಕಪಿಲೆ ಹೆಚ್ಚು ನೀರನ್ನು ಎತ್ತಬಲ್ಲರು. ಮುಂಜಾನೆ ಹಾಗೂ ಸಂಜೆಯ ವೇಲೆ ರೈತರು ಬೆಳೆಗಳಿಗೆ ನೀರನ್ನು ಹನಿಸಲು ಏತ ಎತ್ತುವುದರಿಂದ, ಏತದ ಪದಗಳೂ ಈ ಹೊತ್ತಿನಲ್ಲಿ ಸುಶ್ರಾವ್ಯವಾಗಿ ಕೇಳಿಬರುತ್ತವೆ.

ತುಳು ಭಾಷೆಯಲ್ಲಿ ಬಳಕೆಯಲ್ಲಿರುವ ಏತದ ಪದಗಳು

ಕುಮರಡ್ಕದ ಕುಡವೋ ಕಾಳಗ್
ಕಾಯರಡ್ಕದ ಬಡುವೋ ಬೊಳ್ಳಗ್, ಓ ಓ ಓ ವ್ವಾ
(ಕುಮರಿಯಲ್ಲಿ ಬೆಳೆದ ಹುರಳಿಕಾಳ (ಕಪ್ಪು) ಎತ್ತಿಗೆ
ಕಾಸರಕನ ಕಾಡಿನ ಚಿತ್ತ ಬೊಳ್ಳ (ಬಿಳಿಯು ಎತ್ತಿಗೆ)

ಎರಡು ಎತ್ತುಗಳ ಕೆಲಸದ ತಾರತಮ್ಯವನ್ನು ಗಮನಿಸಿಕೊಂಡು ಅವುಗಳಿಗೆ ಕೊಡುವ ಬಹುಮಾನ ಮತ್ತು ಶಿಕ್ಷೆಯ ವಸ್ತು. ಈ ಪದದಲ್ಲಿದೆ. ಈಗ ಏತದ ಪದಗಳು ಕೇಳಿಬರುವುದು ಅಪರೂಪ.

– ಎನ್.ಆರ್.

ಏರುವಾಕ ಪುನ್ನಮಿ ಜ್ಯೇಷ್ಠ ಶುದ್ಧ ಪೌರ್ಣಮಿಯನ್ನು ‘ಏರುವಾಕ ಪುನ್ನಮಿ’ ಎನ್ನುವ ಹೆಸರಿಂದ ತೆಲುಗು ಬೇಸಾಯಗಾರರು ಹಬ್ಬವನ್ನು ಆಚರಿಸುತ್ತಾರೆ. ಕೆಲವರು ಶ್ರಾವಣ ಶುದ್ಧ ಪೌರ್ಣಮಿಯಂದು ಕೂಡ ಏರುವಾಕ ಪುನ್ನಮಿಯನ್ನು ಹಬ್ಬದಂತೆ ಮಾಡಿಕೊಳ್ಳುತ್ತಾರೆ. ಬೇಸಾಯ ಪ್ರಧಾನವಾದ ಭಾರತದೇಶದಲ್ಲಿ ಏರುವಾಕ ಹಬ್ಬಕ್ಕೆ ಪೂರ್ವಚರಿತ್ರೆಯಿದೆ. ವಿಷ್ಣುಪುರಾಣದಲ್ಲಿ ಏರುವಾಕ ಸೀತಾಯಜ್ಞವೆಂದು ಗುರುತಿಸಲಾಗಿದೆ. ಜಾತಕ ಕಥೆಗಳು ಏರುವಾಕವನ್ನು ‘ವಿಪ್ಪಮಂಗಳ ದಿವಸ’ ಎಂದು ವ್ಯವಹರಿಸಿದವು. ಗಾಥಾಸಪ್ತಶತಿಯ ಮೂಲಕ ಎರಡು ಸಾವಿರ ವರ್ಷಗಳ ಹಿಂದೆಯೇ ಏರುವಾಕ ದಿನದಂದು ನೇಗಿಲನ್ನು ಪೂಜಿಸುವ ಆಚಾರವಿತ್ತೆಂದು ತಿಳಿಯುತ್ತದೆ.

‘ಏರು’ ಎಂದರೆ ಎತ್ತುಗಳನ್ನು ಕಟ್ಟು ಉಳುವುದಕ್ಕೆ ಸಿದ್ಧಪಡಿಸಿದ ನೇಗಿಲು ಎಂದೂ ‘ಏರುವಾಕ’ ಎಂದರೆ ‘ಉಳುವುದನ್ನು ಪ್ರಾರಂಭಿಸು’ ಎಂದೂ ಶಬ್ದ ರತ್ನಾಕರ ನಿಘಂಟಿನ ಕರ್ತ ನಿರ್ವಚಿಸಿದ್ದಾನೆ. ವರ್ಷ ಋತು ಪ್ರಾರಂಭದಲ್ಲಿ ಮಳೆ ಬಂದು ಭೂಮಿ ಹದವಾದಾಗ ‘ಏರುವಾಕ’ ನಡೆಸು ಹೊಲಗಳನ್ನು ಉಳುತ್ತಾರೆ. ಇದನ್ನೇ ತೆಲಂಗಾಣದಲ್ಲಿ ‘ಅರಕಸಾಗಿಂಚಡಂ’ (ಎತ್ತು ಹೂಡಿದನೊ) ಎಂದು ಹೇಳುತ್ತಾರೆ.

‘ಏರುವಾಕ’ ನಡೆಸಲಿಕ್ಕೆ ಮುಂಚೆ ರೈತರು ಹಬ್ಬ ಮಾಡಿಕೊಳ್ಳುತ್ತಾರೆ. ಈ ಹಬ್ಬದಂದು ಮುಂಜಾನೆ ಎದ್ದು ಎತ್ತುಗಳನ್ನು ತೊಳೆಯುತ್ತಾರೆ. ಅವುಗಳ ಕೊಂಬುಗಳಿಗೆ ಬಣ್ಣ ಹಚ್ಚಿ ಕಡೆಯಲ್ಲಿ ಕೊಂಬುಕಳಸಗಳು ಕೂಡಿಸುತ್ತಾರೆ. ನೊಸಲಿಗೆ ನಿಲುವು ಬೊಟ್ಟಿಟ್ಟು, ಕತ್ತಿಗೆ ಗಂಟೆಗಳು ಕಟ್ಟಿ ಹೂಮಾಲೆಯನ್ನು ಹಾಕುತ್ತಾರೆ. ಹುಗ್ಗಿ ಬೇಯಿಸಿ ಎತ್ತುಗಳಿಗೆ ಇಡುತ್ತಾರೆ. ದನಗಳ ಕೊಠಡಿಯನ್ನು ಶುಚಿ ಮಾಡಿ, ನೆಲವನ್ನು ಸಗಣಿಯಿಂದ ಸಾರಿಸಿ, ಗೋಡೆಗಳಿಗೆ ಸುಣ್ಣದಿಂದ ಕೆಂಪು, ಬಿಳಿ, ಪಟ್ಟೆಯನ್ನು ಹೊಡೆಯುತ್ತಾರೆ. ಅರಿಸಿನ ಕುಂಕುಮಗಳಿಂದ ಅರಳಿ ಅಥವಾ ವೀಳೆದೆಲೆಗಳ ತೋರಗಳಿಂದ ಅಲಂಕರಿಸುತ್ತಾರೆ. ಬೆಳೆಗಳಿಗೆ ಅಧಿ ದೇವತೆ, ವಿಷಾಧಿಪತಿಯಾದ ವಿನಾಯಕನನ್ನು ಪೂಜಿಸಿ, ನೈವೇದ್ಯ ಅರ್ಪಿಸುವರು. ನೊಗಕ್ಕೆ ಅರಸಿನ ಕುಂಕುಮವಿಟ್ಟು ನೇಗಿಲು, ಕುಂಟೆಗಳಂತಹ ಬೇಸಾಯದ ಪರಿಕರಗಳನ್ನು ಕೂಡ ತೊಳೆದು ಅರಸಿನ ಕುಂಕುಮಗಳನ್ನಿಟ್ಟು ಎತ್ತುಗಳ ಕೊರಳಿಗೆ ಸೇರಿಸುತ್ತಾರೆ. ನೇಗಿಲನ್ನು ಎತ್ತುಗಳಿಗೆ ಕಟ್ಟಿದನಂತರ ಮನೆಯ ಹೆಣ್ಣುಮಕ್ಕಳಾಗಲೀ ಮತ್ತೈದೆಯರಾಗಲೀ ಧೂಪದೀಪಗಳಿಂದ ಆರತಿ ಹೆಣ್ಣುಮಕ್ಕಳಾಗಲೀ ಮುತ್ತೈದೆಯರಾಗಲೀ ಧೂಪದೀಪಗಳಿಂದ ಆರತಿ ಮಾಡುತ್ತಾರೆ. ಮಂಗಳಾರತಿ ಹಾಡುಗಳನ್ನಾಡುತ್ತಾರೆ. ಸ್ತ್ರೀಯರು ಹೊಸ ಮಡಕೆಗಳಿಗೆ ಅರಿಸಿನ ಕುಂಕುಮ ಇಟ್ಟು ಬೀಜಗಳಿಗೆ (ಧಾನ್ಯಕ್ಕೆ) ಮುಗಿದು, ಅವುಗಳನ್ನು ಮಡಕೆಗಳಿಗೆ ತುಂಬಿ ನೇಗಿಲ ಹಿಂದೆ ಹೊಲಕ್ಕೆ ಹೊರಡುತ್ತಾರೆ. ಎತ್ತುಗಳೊಂದಿಗಿರುವ ನೇಗಿಲುಗಳನ್ನು ಮಂಗಳವಾದ್ಯಗಳಿಂದ ಮೆರವಣಿಗೆ ಮಾಡುತ್ತಾ ತಮ್ಮ ತಮ್ಮ ಹೊಲಗಳಿಗೆ ಹೋಗುತ್ತಾರೆ. ಏರುವಾಕ ನಡೆಸಲು ಮುಂಚೆ ಮುತ್ತೈದೆಯರು ತೆಂಗಿನ ಕಾಯಿಗಳನ್ನು ಹೊಡೆಯುವರು. ಪೈರು ಚೆನ್ನಾಗಿ ಬರಲೆಂದು ಹರಕೆ ಮಾಡಿಕೊಳ್ಳುತ್ತಾರೆ. ಮೊದಲು ಹೊಲದಲ್ಲಿ ಮೂರೂ ಸಾಲನ್ನು ಉಳುತ್ತಾನೆ. ತದನಂತರ ಉಳುವಿಕೆ ಪ್ರಾರಂಭವಾಗುತ್ತದೆ. ಬೀಜಗಳನ್ನು ಮನೆ ಹೆಣ್ಣುಮಕ್ಕಳಾಗಲಿ, ಮುತ್ತೈದೆಯಾಗಲಿ, ಸಾಲಾಗಿ ಬಿತ್ತುತ್ತಾರೆ. ಕೆಲವರು ಈ ಹಬ್ಬವನ್ನು ಮೃಗಶಿರ ತಿಂಗಳಲ್ಲಿ ಮಾಡಿಕೊಳ್ಳುತ್ತಾರೆ.

ಏರುವಾಕ ಪುನ್ನಮಿ ಹೊತ್ತಿಗೆ ರೈತರು ಹಳೆಯ ಜೀತಗಾರರನ್ನು ಬದಲಿಸಿ ಹೊಸಬರನ್ನು ಕುದುರಿಸಿಕೊಂಡು ಹೊಸ ಬಟ್ಟೆಗಳನ್ನು ಅವರಿಗೆ ಕೊಡುತ್ತಾರೆ. ಹಬ್ಬದ ದಿನ ಸಾಯಂಕಾಲ ದನಗಳನ್ನು ಮಂಗಳ ವಾದ್ಯಗಳಿಂದ ಊರ ಹೊರಗಡೆಗೆ ಅಟ್ಟಿಸಿಕೊಂಡು ಹೋಗುತ್ತಾರೆ. ಊರಬಾಗಿಲಿಕಗೆ ಪುಂಡಿನಾಲಿನಿಂದ ಹೆಣೆದ ತೋರಣವನ್ನು ಕಟ್ಟಿ, ಅದನ್ನು ಗ್ರಾಮಸ್ಥರು ಚಾಟಿಯಿಂದ ಹೊಡೆದು ತುಂಡು, ತುಂಡು ಮಾಡಿ ಯಾರಿಗೆ ಸಿಕ್ಕಿದ ತುಂಡನ್ನು ಅವರು ತೆಗೆದುಕೊಂಡು ಹೋಗಿ ಮನೆಯಲ್ಲಿಟ್ಟುಕೊಳ್ಳುತ್ತಾರೆ. ಇದರಿಂದ ದನಗಳಿಗೆ ಶುಭವಾಗುತ್ತೆಂದು ರೈತರ ನಂಬಿಕೆ. ಎಂದಾದರೂ ದನಗಳು ಅನಾರೋಗ್ಯದಿಂದ ನರಳುತ್ತಿದ್ದಾಗ ಈ ತುಂಡನ್ನು ಸಣ್ಣದಾದ ಹಗ್ಗದಂತೆ ಹೆಣೆದು, ಅವುಗಳ ಕಾಲಿಗೆ ಕಟ್ಟುತ್ತಾರೆ. ಅದರಿಂದ ದನಕರುಗಳ ರೋಗ ಗುಣವಾಗುತ್ತೆಂದು ನಂಬುತ್ತಾರೆ.

ಏರುವಾಕವನ್ನು ದೇವತೆಯನ್ನಾಗಿ ಭಾವಿಸಿ ಪೂಜಿಸಿ ಹಬ್ಬ ಮಾಡಿಕೊಳ್ಳುವುದರಿಂದ ಏರುವಾಕ ದೇವತೆಯ ಅನುಗ್ರಹದಿಂದ ಫಸಲು (ಬೆಳೆಗಳು) ಸಮೃದ್ಧವಾಗಿ ಲಭಿಸುತ್ತವೆಂದು ರೈತರು ನಂಬುತ್ತಾರೆ.

– ಆರ್.ಪಿ. ಅನುವಾದ ಎ.ಎ.

ಏಳಂಗಾಯ್ ವಿಳೈಯಾಟ್ಟುಪ್ಪಾಡಲ್ಗಳ್ ಆಟಗಳಲ್ಲಿ ದೈಹಿಕ ಆಟಗಳು ಮತ್ತು ಮೌಖಿಕ ಆಟಗಳು ಎಂಬ ಎರಡು ಪ್ರಮುಖ ಬಗೆಗಳಿವೆ. ದೈಹಿಕ ಆಟಗಳ ವಿಭಾಗಕ್ಕೆ ಸೇರಿದುದು ಏಳಂಗಾಯ್ ವಿಳ್ಯೆಯಾಟ್ಟು (ಅಣ್ಣೆಕಲ್ಲು ಆಟ). ಇದು ಮಹಿಳೆಯರು ಆಡುವ ಆಟ. ಆದರೆ ಬಹುಪಾಲು ಚಿಕ್ಕ ಹುಡುಗಿಯರೇ ಉತ್ಸಾಭರಿತರಾಗಿ ಆಡುವರು. ತಮಿಳುನಾಡಿನಲ್ಲಿ ಈ ಆಟವನ್ನು ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಚಿಕ್ಕಹುಡುಗಿಯರು ಚಿಕ್ಕ ಚಿಕ್ಕ ಕಲ್ಲುಗಳನ್ನು ತೆಗೆದುಕೊಂಡು ಇಬ್ಬರು ಎದುರುಬದುರಾಗಿ ಕುಳಿತು ಆಡುವ ಸ್ಪರ್ಧೆಯ ಆಟ ಇದಾಗಿದೆ. ಮೊದಲು ಅಂಗೈಯಿಂದ ಏಳು ಕಲ್ಲುಗಳನ್ನು ಮೇಲಕ್ಕೆಸೆದು ಕೆಳಕ್ಕೆ ಬೀಳುವ ಕಲ್ಲುಗಳಲ್ಲಿ ಯಾವುದಾದರೊಂದು ಹಿಂಗೈಯಲ್ಲಿರುವ ಆ ಕಲ್ಲನ್ನು ಮೇಲಕ್ಕೆತ್ತಿ ಮತ್ತೆ ಅಂಗೈಯಿಂದ ಹಿಡಿಯಬೇಕು. ಈ ರೀತಿ ಮೊದಲು ಎತ್ತುವ ಕಲ್ಲಿಗೆ ‘ಸಿಂಗಿಕಾಯಿ’ (ಕಲ್ಲು) ಎಂದು ಹೆಸರು. ಇದನ್ನು ಎತ್ತುವಾಗ ಬಿಟ್ಟರೆ ಆಡುವವರು ಆಟವನ್ನು ಬಿಡಬೇಕು. ಸಿಂಗಿಕಾಯಿಯನ್ನು ಮೇಲಕ್ಕೆ ಎಸೆದು ಅದು ಕೆಳಗೆ ಬೀಳುವುದರೊಳಗೆ ಈಗಾಗಲೇ ಕೆಳಗೆ ಬಿದ್ದಿರುವ ಕಲ್ಲುಗಳಲ್ಲಿ ಒಂದನ್ನು ಎತ್ತಿಕೊಳ್ಳಬೇಕು. ಕೆಳಗೆ ಬಿದ್ದಿರುವ ಕಲ್ಲನ್ನು ಎತ್ತುವಾಗ ಬೇರೆ ಕಲ್ಲುಗಳನ್ನು ಸ್ಪರ್ಶಿಸಬಾರದು. ಬೇರೆ ಕಲ್ಲುಗಳನ್ನು ಸ್ಪರ್ಶಿಸಿದರೆ ಅಂಥವರು ಆಟವನ್ನು ಬಿಡಬೇಕು. ಕೈ ಮೇಲೆ ಮೂರು ಕಲ್ಲುಗಳು ಒಟ್ಟಾಗಿ ಬಿದ್ದರೆ ಅವುಗಳನ್ನು ಒಂದೇ ಸಲ ತೆಗೆದುಕೊಳ್ಳಬೇಕು. ನೆಲದಲ್ಲಿ ಬಿದ್ದಿರುವ ಕಲ್ಲನ್ನು ಎತ್ತುವಾಗ ಹಿಡಿಯದೆ ಬಿಟ್ಟರೆ ಆಟದಿಂದ ಹೊರೆನಡೆಯಬೇಕು. ಅನಂತರ ಎದುರಾಳಿ ಆಟ ಶುರುಮಾಡುವರು. ಈ ರೀತಿ ಮೊದಲ ಕಲ್ಲಾದ ಸಿಂಗಿಕಾಯಿಯಿಂದ ಏಳು ಕಲ್ಲುಗಳನ್ನು ಬಿಡದೆ ಎತ್ತುವವರು ಆಟದಲ್ಲಿ ಗೆದ್ದಂತೆ. ಇವರೇ ಮತ್ತೆ ಇನ್ನೊಂದು ಆಟವನ್ನು ಆಡಲು ಅವಕಾಶ ಪಡೆಯುವರು.

ಈ ಆಟವನ್ನು ಬೇರೆ ರೀತಿಯಲ್ಲೂ ಆಡುವರು. ಒಂದು ಕಲ್ಲನ್ನು ಕೈಯಲ್ಲಿ ಇಟ್ಟುಕೊಂಡು ಉಳಿದ ಆರು ಕಲ್ಲುಗಳನ್ನು ಎಸೆದು ಅನಂತರ ಒಂದು ಕಲ್ಲಿನಿಂದ ಇತರ ಕಲ್ಲುಗಳನ್ನು ಎತ್ತುವರು. ಈ ಆಟದಲ್ಲಿ ಚಿಕ್ಕ ಹುಡುಗಿಯರು ಒಂದರಿಂದ ಏಳರವರೆಗೆ ಸಂಖ್ಯೆಗಳನ್ನು ಹೇಳಿ ಹಾಡನ್ನು ಹಾಡುತ್ತಾ ಕಲ್ಲುಗಳನ್ನು ಎತ್ತುವುದು ರೂಢಿ. ಈ ರೀತಿ ಆಟ ಆಟಿ ಹಾಡುವ ಹಾಡುಗಳನ್ನು ಅಣ್ಣೆಕಲ್ಲು ಆಟದ ಹಾಡುಗಳು ಎನ್ನುವರು. ಈ ಆಟದಲ್ಲಿ ಹಾಡಲಾಗುವ ಹಾಡುಗಳು ಸಂಗೀತಮಯವಾದ ಶಬ್ದಗಳಿಂದ ಕೂಡಿರುವುವು. ಪದಗಳ ಅರ್ಥ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಆಟ ಸಹಾಯಕವಾಗುತ್ತದೆ.

– ಎ.ಡಿ. ಅನುವಾದ ಆರ್.ಎಸ್.

ಏಳು ಕನ್ನಿಮಾರ್ ವಳಿಪಾಡು ತಮಿಳುನಾಡಿನ ವಿಶಾಲ ಪ್ರದೇಶಗಳಲ್ಲಿ ಬಹಳ ಹಿಂದಿನಿಂದ ಆರಾಧಿಸಿಕೊಂಡು ಬರುವ ಜನಪದ ದೇವರಲ್ಲಿ ‘ಏಳುಕನ್ನಿಗಳ್’ (ಏಳು ಕನ್ಯೆಯರು) ಪ್ರಮುಖವಾದವು. ಪೆರೈಯರ್ (ಮಾದಿಗರು), ಮೀನವರ್ (ಬೆಸ್ತರು), ವನ್ನಿಯರ್(ಒಂದು ಜಾತಿ) ಇತ್ಯಾದಿ ಜಾತಿಗಳನ್ನು ಒಳಗೊಂಡ ಸಾಂಪ್ರದಾಯಿಕ ಸಮಾಜದ ಜನರ ಮಧ್ಯೆ ಏಳು ಕನ್ನಿಮಾರ್ ದೇವರನ್ನು ಪೂಜಿಸುವ ಪದ್ಧತಿ ರೂಢಿಯಲ್ಲಿದೆ. ಏಳು ಹೆಣ್ಣು ದೇವರನ್ನು ಪೂಜಿಸುವ ರೂಢಿ ಹಲವು ಜಾತಿಗಳಲ್ಲಿ, ಆದಿದ್ರಾವಿಡರಲ್ಲಿ, ಹಿಂದುಳಿದ ಜಾತಿಯವರಲ್ಲಿ, ಮೇಲ್ಜಾತಿಯವರಲ್ಲಿ ಎಂದು ಒಂದೊಂದು ಸಮಾಜದ ಮಧ್ಯೆ ಇರುವುದನ್ನು ಕಾಣಬಹುದು. ಕನ್ನಡ, ತೆಲುಗು, ಮೊದಲಾದ ಭಾಷೆಗಳನ್ನು ಮಾತನಾಡುವ ಜನರಲ್ಲಿ ಏಳು ಹೆಣ್ಣು ದೇವರುಗಳ ಆರಾಧನೆಯನ್ನು ಕಾಣಬಹುದು.

ಮನ್ನಾವ್ ಪರಿಶಿಷ್ಟ ಪಂಗಡದವರು, ತೋಡರ್‌ಗಳು ಮೊದಲಾದವರು ಏಳು ಕನ್ನಿಮಾರ‍್ಗಳನ್ನು ಪೂಜಿಸುವುದನ್ನು ಕಾಣಬಹುದು. ಕಾಣಿಕ್ಕಾರರ ಹತ್ತಿರ ಏಳು ಕನ್ನಿಮಾರ್ ಕುರಿತ ನಂಬಿಕೆ, ಪುರಾಣಗಳಿವೆ. ಅವರು ಏಳು ಕನ್ನೆದೇವರುಗಳ ರೀತಿಯಂತೆ (ತಳಭಾಗದ ಕನ್ಯೆ, ನಡುಭಾಗದ ಕನ್ಯೆ, ತಲೆ ಭಾಗದ ಕನ್ಯೆ, ಮೇಲ್ಭಾಗದ ಕನ್ಯೆ) ಅಡಿಯುಲವು ಕನ್ನಿ, ನಡುವುಲವು ಕನ್ನಿ, ತಲೈಯುಲವು ಕನ್ನಿ, ಮೆಲೂಲವು ಕನ್ನಿ, ಅಂಗುಕುಯ್‌ಕನ್ನಿ, ಆರುವೆಟ್ಟಿ ಕನ್ನಿ, ಚೊಕ್ಕಂರಣಿ ಈ ಹೆಸರುಗಳಿಂದ ಏಳು ಜನ ಕನ್ನಿಮಾರ್‌ರನ್ನು ಗುರುತಿಸಲಾಗುತ್ತದೆ. ಇವೆಲ್ಲವು ತಮ್ಮ ತಮ್ಮ ಸ್ವಭಾವದಲ್ಲಿ ಕೆಟ್ಟಗುಣ ಇರುವಂಥವು ಎಂದೂ ಕಾಡಿನಲ್ಲಿ ನಿದ್ರೆ ಮಾಡುವಂಥವು ಎಂದೂ ಹೇಳಲಾಗುತ್ತದೆ. ಏಳು ಕನ್ಯೆ ದೇವರು ಮೈಲಿಗೆ ಕಾಲದ ನಡುರಾತ್ರಿಯ ವೇಳೆಯಲ್ಲಿ ಕಾಡನ್ನು ದಾಟಿ ಹೋಗುವ ಹೆಂಗಸರನ್ನು, ಕಾಡಿನ ದಾರಿಯಲ್ಲಿ ಹೋಗುವವರನ್ನು ಹಿಂಸಿಸುವ ಸ್ವಭಾವವನ್ನು ಹೊಂದಿದವಳೆಂದು ಕಾಣಿಕ್ಕಾರರು ನಂಬುತ್ತಾರೆ. ಇವುಗಳನ್ನು ಕುರಿತಾಗಿ ಪ್ರತ್ಯೇಕ ಕಥೆ, ಹಾಡು, ನಂಬಿಕೆ ಮೊದಲಾದವು ಜನರ ಮಧ್ಯೆ ರೂಢಿಯಲ್ಲಿದೆ. ಕನ್ಯೆಯರ ಹುಟ್ಟು ಸಾವನ್ನು ಕುರಿತ ವಿಷಯಗಳು ಅವುಗಳಲ್ಲಿ ಸ್ಥಾನ ಪಡೆದಿರುತ್ತವೆ. ‘ಅಂಗುಕುಯ್ ಕನ್ನಿ’ ಯು ತನ್ನ ಅಣ್ಣಂದಿರು ತನ್ನ ನಡೆತೆಯ ಮೇಲೆ ಸಂದೇಹಪಟ್ಟಿದ್ದರಿಂದ, ಅದನ್ನು ಸಹಿಸಿಕೊಳ್ಳಲಾರದೆ ಬೆಂಕಿಗೆ ಹಾರಿ ಸತ್ತು ಹೋಗುತ್ತಾಳೆ. ಅನಂತರ ಅವಳೇ ದೇವತೆಯಾಗಿ ಕಾಡಿನಲ್ಲಿ ನಿದ್ರಿಸುತ್ತಾಳೆ ಎಂದು ಒಂದು ಕಥನಗೀತೆ ಹೇಳುತ್ತದೆ. ಕಾಣಿಕ್ಕಾರರು ಹಾಡುವ ಇನ್ನೊಂದು ಕಥನಗೀತೆಯಲ್ಲಿ “ಏಳು ಕನ್ಯೆಯರು ಏಳು ಬಣ್ಣಗಳನ್ನು ಒಳಗೊಂಡ ರಥವನ್ನು ಏರಿ ಸ್ವರ್ಗದಿಂದ ಭೂಮಿಗೆ ಬಂದು ಸ್ನಾನ ಮಾಡುತ್ತಿರುವಾಗ ಭೂಲೋಕದ ಜನರು ಆ ಕನ್ಯೆಯರನ್ನು ನೋಡುತ್ತಾರೆ. ಇದರಿಂದ ಕನ್ಯೆಯರು ಮೈಲಿಗೆಯಾಗುತ್ತಾರೆ. ಆಗ ಸ್ವರ್ಗದ ದೇವರು ಈ ಕನ್ಯೆಯರನ್ನು ಸೇರಿಸಿಕೊಳ್ಳಲು ತಿರಸ್ಕರಿಸುತ್ತಾರೆ. ಆಗ ಕನ್ಯೆಯರು ದುಃಖಿಸಿ ಒದ್ದಾಡುವ ಸಂಗತಿಗಳನ್ನೆಲ್ಲ ವಿವರಿಸಲಾಗುತ್ತದೆ” (ಎ.ಧನಂಜಯನ್ ೨೦೦೬ – ೧೨೯).

ಸಪ್ತಮಾದಾಕ್ಕಳ್ (ಸಪ್ತ ಮಾತೃಕೆಯರು): ಒಂದೊಂದು ಜಾತಿ ವರ್ಗ ಸಮಾಜಗಳ ಮಧ್ಯೆ ಕಾಣಲಾಗುವ ಏಳು ಜನ ಕನ್ಯೆಯರಿಗೆ ಸಮಾನವಾಗಿ ಏಳು ಮಾದಾಕ್ಕಳನ್ನು ‘ಸತ್ತ ಮಾದರ್’ ಎಂಬ ಹೆಸರಿನಲ್ಲಿ ಪೂಜಿಸುವ ಪದ್ಧತಿಯನ್ನು ತಮಿಳುನಾಡಿನ ವಿಶಾಲ ಪ್ರದೇಶಗಳಲ್ಲಿ ಕಾಣಬಹುದು. ಏಳು ಜನ ಕನ್ಯೆಯರಂತೆ, ತಮಿಳುನಾಡಿನ ಪ್ರಾದೇಶಿಕ ಅಂಶಗಳನ್ನು ಒಳಗೊಳ್ಳದೆ ಈ ಸಪ್ತ ಮಾದಾಕ್ಕಾಳ್ ತಮ್ಮ ಹೆಸರುಗಳು, ಪುರಾಣಗಳು, ಗುಣ ಸ್ವಭಾವ ಇತರ ಅಂಶಗಳು ಸಂಸ್ಕೃತದ ಹಿನ್ನೆಲೆಯಲ್ಲಿ ರೂಪು ಪಡೆದಿವೆ. ಶೈವ ಧರ್ಮಕ್ಕೆ ಅನುಗುಣವಾಗಿಯೂ ಈ ಸಪ್ತ ಮಾದಾಕ್ಕಳ್ ರೂಪುಗೊಳ್ಳುತ್ತವೆ. ನದಿಯ ದಡ, ಕಾಡು ಮತ್ತು ಬಯಲು ಪ್ರದೇಶಗಳಲ್ಲಿ ಪ್ರತ್ಯೇಕ ದೇಗುಲಗಳನ್ನು ಹೊಂದಿರುವ ಈ ಸಪ್ತ ಮಾತೃಕೆಗಳು ಶಿವನ ದೇಗುಲಗಳ ಪ್ರಕಾರಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಸಪ್ತ ಮಾದಾಕ್ಕಳ್ ಒಬ್ಬೊಬರಿಗೂ ಬೇರೆ ಬೇರೆ ಹೆಸರುಗಳು, ಪ್ರಸಿದ್ಧ ಸ್ವಭಾವಗಳು, ಪುರಾಣ ಕಥೆಗಳು ಗ್ರಂಥಗಳಲ್ಲಿ ದಾಖಲಾಗಿವೆ. ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ನಾರಾಯಣಿ, ವರಾಣಿ, ಇಂದಿರಾಣಿ, ಕಾಳಿ ಇವುಗಳನ್ನು ಸಪ್ತ ಮಾದಾಕ್ಕಳ್ ಎನ್ನಲಾಗುತ್ತದೆ. ಶಿವನ ದೇವಾಲಯದ ಪ್ರಾಕಾರಗಳಲ್ಲಿ ಪ್ರತ್ಯೇಕವಾಗಿ ಸ್ಥಾನ ಪಡೆದಿರುವ ಸಪ್ತ ಮಾದಾಕ್ಕಳ್ ಶಿಲ್ಪಗಳು ತಮ್ಮ ಸ್ವಭಾವಕ್ಕೆ ತಕ್ಕಂತೆ ರೂಪುಗೊಂಡಿರುತ್ತವೆ. ಕೆಲವು ಊರುಗಳಲ್ಲಿ ಸಮುದ್ರದ ದಡ, ನದಿಯ ದಡ, ಕಾಡು, ಬಯಲು ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಸಪ್ತ ಮಾತೃಕೆಗಳು ದೇವಾಲಯಗಳನ್ನು ಪಿಡಾರಿಕ್ಕೋವಿಲ್, ಪಿಡಾರಿ ಅಮ್ಮನ್ ಕ್ಕೋವಿಲ್, ತೋಟ್ಟಾಲಮ್ಮನ್‌ಕ್ಕೋವಿಲ್ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.

ಜನಪದರಲ್ಲಿ ಸಪ್ತ ಮಾತೃಕೆಗಳು: ಸಾಮಾನ್ಯವಾಗಿ ಜನಪದರ ಧಾರ್ಮಿಕ ಬದುಕಿನಲ್ಲಿ ಏಳು ಜನ ಕನ್ಯೆಯರಿಗೆ ಪ್ರತ್ಯೇಕ ಸ್ಥಾನ ಉಂಟು. ಕನ್ನಿಕ್ಕೋವಿಲ್ ಎಂದು ಜನರು ಗುರುತಿಸುವ ಸರಳ ದೇಗುಲದಲ್ಲಿ ಕನ್ಯೆ ದೇವರು ಏಳು ಇಟ್ಟಿಗೆಯಿಂದ ರೂಪಿತವಾದ ರೂಪದಲ್ಲಿ, ಸುಟ್ಟ ಮಣ್ಣಿನ ಶಿಲ್ಪಗಳಲ್ಲಿ ಕಪ್ಪು ಕಲ್ಲಿನಲ್ಲಿ ರೂಪುಗೊಂಡಿರುವ ಆಕೃತಿಯನ್ನು ಜನರು ಪೂಜಿಸುತ್ತಾರೆ. ಈ ಏಳು ಕನ್ಯೆಯರನ್ನು ಕುರಿತ ಪುರಾಣ ಕಾತ್ತವರಾಯನ ಹುಟ್ಟಿನಕಥನ ಗೀತೆಯೊಡನೆ ಸಂಬಂಧವಿರುವುದಾಗಿ ಕಾಣಿಸುತ್ತದೆ. ಅವರು ಭೂಲೋಕದ ಹುಟ್ಟಿನ ಕಥೆಯಲ್ಲಿ ಒಬ್ಬೊಬ್ಬರನ್ನಾಗಿ ಕ್ರಮವಾಗಿ ಆರಿಯಾಮಾಲೈ, ಓಂದಾಯಿ, ಸವುದಾಯಿ, ಕರುಪ್ಪಾಯಿ, ಪೂವಾಯಿ, ನಲ್ಲತ್ತಂಗಾಳ್, ವಣ್ಣಾರನಲ್ಲಿ ಎಂಬ ಹೆಸರುಗಳಿಂದ ಗುರುತಿಸಲಾಗುತ್ತದೆ. (ನಾ.ವಾನಮಾಮಲೈ ೧೯೭೧ – ೪೪ – ೪೫). ಆದರೆ ಜನಪದರು ಸಪ್ತ ಕನ್ಯೆಯರಿಗೆ ಬೇರೆ ಬೇರೆ ಹೆಸರನ್ನು ನೀಡದೆ ‘ಕನ್ನಿ’ ಎಂಬ ಹೆಸರಿನಿಂದಲೇ ಎಲ್ಲ ದೇವರನ್ನು ಕರೆದು ಪೂಜಿಸಿಕೊಂಡು ಬರುತ್ತಿದ್ದಾರೆ.

ಕನ್ಯೆ ದೇವರು ಮುಖ್ಯ ಪೂಜೆ, ಉತ್ಸವಗಳನ್ನು ವಿವಿಧ ಕಾಲದಲ್ಲಿ ನಡೆಸಲಾಗುತ್ತದೆ. ತೈಮಾಸದ (ಜನವರಿ – ಫೆಬ್ರವರಿ) ಮೊದಲದಿನ ಆಚರಿಸಲಾಗುವ ಪೊಂಗಲ್ ಹಬ್ಬದ ಮಾರನೆಯ ದಿನದ ಮಾಟ್ಟು ಪೊಂಗಲ್. ಅದಾದ ಅನಂತರ ಮೂರನೆಯ ದಿನದಲ್ಲಿ ಕನ್ನಿಪೊಂಗಲ್ ಆಚರಿಸುವುದು ರೂಢಿಯಲ್ಲಿದೆ. ಈ ಕನ್ನಿಪೊಂಗಲ್ ದಿನದಂದು ಬೆಳಗ್ಗೆ ಏಳು ಜನ ಕನ್ಯೆಯರು ಕಡಲಿನಿಂದ ಆಚೆಗೆ ಹೋಗುವರು ಎಂದು ಒಂದು ಐತಿಹ್ಯ ಹೇಳುತ್ತದೆ. ಇದರ ಹಿನ್ನೆಲೆಯಲ್ಲಿ ಒಂದೊಂದು ಊರಿನ ಕನ್ನಿ ದೇಗುಲದಲ್ಲಿ ಏಳು ಕನ್ಯೆಯರ (ಹೆಣ್ಣುಗಳು) ಮೈಮೇಲೆ ಸಪ್ತ ಮಾತೃಕೆಯರು ಬರುವರು ಎಂದು, ಅದರ ಕಾರಣವಾಗಿ ‘ಕನ್ನಿವಂದು’ ಕುಣಿತ ನಡೆಯುತ್ತದೆ. ಮಾಸಿತಿಂಗಳ (ಫೆಬ್ರವರಿ – ಮಾರ್ಚ್)ಮಾಗಮ್ ನಕ್ಷತ್ರ ಕೂಡಿ ಬರುವ ಹೋಗುವ ಹಾಗೆ ಚಾಟಿಗಾರ ಎಂಬ ದೇವರು ಬಂದು ಒಬ್ಬೊಬ್ಬ ಹೆಂಗಸಿಗೂ ಚಾಟಿಯಿಂದ ಹೊಡೆದು ‘ಕನ್ನಿವಿಲಂಗು’ (ಕನ್ಯೆಯರು ಬಿಟ್ಟು ಹೋಗುವಂತೆ ಮಾಡುವುದು) ಮಾಡುತ್ತಾರೆ. ಈ ರೀತಿ ಬಿಟ್ಟು ಹೋದ ದೇವ ಕನ್ಯೆಯರು ದೇವಸಂಭೂತ ಆವಿ ಬೆಂಕಿ ರೂಪಕ್ಕೆ ಬದಲಾವಣೆ ಹೊಂದಿ, ಮಡಕೆಯಲ್ಲಿರುವ ಬೆಂಕಿಯನ್ನು ಮರಕ್ಕೆ ಏರಿಸಿ ಅನಂತರ ಕಡಲಿನಲ್ಲಿ ಬಿಟ್ಟು ಹಿಂದಿರುತ್ತಾರೆ. ಈ ಸನ್ನಿವೇಶ ಏಳು ಕನ್ಯೆ ದೇವರು ಎಲ್ಲಿಂದ ಬಂದರೋ ಅಲ್ಲಿಗೆ (ಆ ದ್ವೀಪಕ್ಕೆ)ದಾರಿ ತೋರಿಸುವ ಅರ್ಥ ನೀಡುತ್ತದೆ. ಇದನ್ನು ಒಂದು ಐತಿಹ್ಯವಾಗಿ ವರ್ತಮಾನದಲ್ಲಿ ಹೇಳುತ್ತಾರೆ. ಬೆಸ್ತರ ಗ್ರಾಮಗಳಲ್ಲಿ ಈ ರೀತಿಯ ಕನ್ನಿಪೂಜಾವಿಧಿ ನಡೆಸಲಾಗುತ್ತದೆ (ಎ.ಧನಂಜಯನ್ ೨೦೦೬ – ೧೦೬). ತಂಜಾವೂರು, ನಾಗಪಟ್ಟಣ, ಕಡಲೂರು ಮೊದಲಾದ ಜಿಲ್ಲೆಗಳಲ್ಲಿ ವಾಸಿಸುವ ಎಡಪಂಥೀಯರು, ವನ್ನಿಯರು ಮೊದಲಾದ ಸಮಾಜಗಳಲ್ಲಿ ಈ ರೀತಿಯ ಸಪ್ತ ಕನ್ಯೆಯರ ಪೂಜಾವಿಧಿ ಪ್ರಸ್ತುತದಲ್ಲೂ ಜಾರಿಯಲ್ಲಿದೆ.

ಸಪ್ತ ಕನ್ಯೆಯರ ಪೂಜಾವಿಧಿಯ ಅಂಶಗಳು: ಕನ್ಯೆಯರ ಪೂಜೆಯಲ್ಲಿ ದೇವರು ಮೈಮೇಲೆ ಬಂದು ಕುಣಿಯುವುದು, ಹೆಂಗಸರು ಪೊಂಗಲ್ ಸಿದ್ಧಪಡಿಸಿ ದೇವರಿಗೆ ನೈವೇದ್ಯ ಮಾಡುವುದು, ತಂಬಿಟ್ಟು ಅರ್ಪಿಸುವುದು ಸುಟ್ಟ ಮಣ್ಣಿನ ಶಿಲ್ಪಗಳನ್ನು ಮೆರೆವಣಿಗೆ ಮಾಡುವುದು, ಉರುಳು ಸೇವೆ ಮಾಡುವುದು, ಹರಕೆಗಳನ್ನು ಕಟ್ಟಿಕೊಂಡು ಅದನ್ನು ತೀರಿಸುವುದು, ದೇವರು ಮೈಮೇಲೆ ಬಂದು ಭಕ್ತರಿಗೆ ಕೈರೇಖೆ ನೋಡಿ ಭವಿಷ್ಯ ಹೇಳುವುದು ಮೊದಲಾದವು ಸ್ಥಾನ ಪಡೆದಿರುತ್ತವೆ. ಸಾಮಾನ್ಯವಾಗಿ ಕನ್ನಿದೇವರು ಜನರನ್ನು ಹಿಂಸೆ, ಕಷ್ಟಗಳಿಂದ ಪಾರುಮಾಡುತ್ತಾರೆಂದೂ ರೋಗರುಜಿನಗಳನ್ನೂ ನಿವಾರುಸುತ್ತಾರೆಂದೂ ಜನರು ನಂಬುತ್ತಾರೆ. ಜನರಲ್ಲಿ ರೋಗ ರುಜಿನಗಳನ್ನು ತಮ್ಮ ವರ್ಗದ ದೇವರೇ ನಿವಾರಿಸುತ್ತರೆಂಬ ದೃಢವಾದ ನಂಬಿಕೆ ಇದೆ.

– ಎ.ಡಿ. ಅನುವಾದ ಆರ್.ಎಸ್.