ಐವರ್ ಕಳಿ ಕೇರಳದ ಭಗವತೀ ಕ್ಷೇತ್ರಗಳಲ್ಲಿ ಉತ್ಸವದ ಸಮಯದಲ್ಲಿ ನಡೆಸುತ್ತಿದ್ದ ಒಂದು ಆಚರಣಾತ್ಮಕ ಕಲೆಯಾಗಿದೆ. ‘ಐವರ್‌ ತಳಿ’, ‘ಐವರ್ ಕಳಿ’ ಎಂಬ ಹೆಸರು ಬರಲು ಹಲವಾರು ಹಿನ್ನೆಲೆಗಳಿವೆ.

ಐದು ಜಾತಿಗೆ ಸೇರಿದವರು (ವೃತ್ತಿಯ ಆಧಾರದಲ್ಲಿ) ಭಾಗವಹಿಸುತ್ತಿದ್ದ ಕಳಿಯು ಐವರ್‌ಕಳಿ ಎಂಬುದು ಒಂದು ಅಭಿಪ್ರಾಯ. ಆಚಾರಿ (Corpenter),ಮೂಶಾರಿ (Belleter), ಕಮ್ಮಾರ (Black Smith), ಅಕ್ಕಸಾಲಿಗ (Gold Smith), ಕಲ್ಲು ಹೊಡೆಯುವ ಕೆಲಸದವ (Manson) ಮುಂತಾದ ಜಾತಿಗೆ ಸೇರಿದ ಐದೋ ಅದಕ್ಕಿಂತ ಹೆಚ್ಚಿನ ಜನರು ಈ ‘ಕಳಿ’ ಯಲ್ಲಿ ಭಾಗವಹಿಸುತ್ತಿದ್ದರು.

ಐವರ್‌ಕಳಿಗೆ ಮಹಾಭಾರತದ ಪಾಂಡವರಿಗೆ ಸಂಬಂಧಿಸಿದ ಒಂದು ಹಿನ್ನೆಲೆ ಕಥೆ ಇದೆ. ಒಮ್ಮೆ ಪಾಂಡವರು ಕರ್ಣಭಕ್ತರಾದ ಒಬ್ಬನನ್ನು ವಧಿಸುವರು. ಇದರಿಂದ ಕೋಪಿಷ್ಠೆಯಾದ ಭದ್ರಕಾಳಿಯು ಪಾಂಡವರಲ್ಲಿ ಸೇಡುತೀರಿಸಲು ಮುಂದಾಗುತ್ತಾಳೆ. ಈ ವಿಷಯವನ್ನು ಅರಿತ ಶ್ರೀಕೃಷ್ಣನು ಪಾಂಡವರ ಸಹಾಯಕ್ಕೆ ಬರುವನು. ಶ್ರೀ ಕೃಷ್ಣನು ಪಾಂಡವರಲ್ಲಿ ಭದ್ರಕಾಳಿಯನ್ನು ಸ್ತುತಿಸಲು ಹೇಳಿದನು. ಬಳಿಕ ಕೃಷ್ಣನು ಸ್ವತಃ ದೀಪವಾಗಿ ಬದಲಾದನು. ಅದರ ಸುತ್ತಲೂ ಪಾಂಡವರು ದೇವಿ ಸ್ತುತಿಯನ್ನು ಹಾಡುತ್ತಾ ನೃತ್ಯ ಮಾಡಿದರು. ಇದರಿಂದ ತೃಪ್ತಿಗೊಂಡ ದೇವಿಯು ಕೋಪ ಮರೆತು ಸಂತೋಷದಿಂದ ಹಿಂದಿರುಗುತ್ತಾಳೆ.

ಕೇರಳದಲ್ಲಿ ಹಳ್ಳಿಗರಲ್ಲಿನ ದೇವಿ ಕ್ಷೇತ್ರಗಳಲ್ಲಿ ಉತ್ಸವಕ್ಕನುಗುಣವಾಗಿ ಪ್ರತ್ಯೇಕವಾಗಿ ಸಜ್ಜುಗೊಳಿಸಿದ ರಂಗಸ್ಥಳದಲ್ಲಿ ‘ಐವರ್‌ಕಳಿ’ ಪ್ರದರ್ಶಿಸಲಾಗುತ್ತಿದ್ದರು. ಹೂಗಳಿಂದ ಅಲಂಕೃತಗೊಂಡ ಒಂದು ಚಪ್ಪರವನ್ನು ತಯಾರಿಸಿ, ಮಧ್ಯದಲ್ಲಿ ಒಂದು ದೀಪವನ್ನು ಹಚ್ಚಿಟ್ಟು ಅದರ ಸುತ್ತಲೂ ಐದೋ, ಆರೋ ಮಂದಿ ತಾಳಕ್ಕೆ ತಕ್ಕಂತೆ ಹೆಜ್ಜೆಗಳನ್ನಿಟ್ಟು ನೃತ್ಯ ಮಾಡುವರು. ಇಲ್ಲಿ ಚಕ್ರತಾಳವನ್ನು ಉಪಯೋಗಿಸುತ್ತಿದ್ದರು. ಸಾಮಾನ್ಯವಾಗಿ ರಾತ್ರಿಕಾಲದಲ್ಲಿ ಪ್ರದರ್ಶಿಸಲ್ಪಡುವ ಐವರ್‌ನಾಟಕವು ಗಣಪತಿ ಪೂಜೆಯೊಂದಿಗೆ ಆರಂಭವಾಗುತ್ತದೆ.

ಈ ಆಟದ ಮುಖ್ಯ ವ್ಯಕ್ತಿಯನ್ನು ಕಳಿಯಾಶಾನ್ (ಕಳಿಯಚ್ಚನ್) ಎಂದು ಕರೆಯುವರು. ‘ಕಳಿಯಾಕಾನ’ ನು ಹಾಡು ಹಾಡುವುದರ ಮೂಲಕ ‘ಕಳಿ’ಗೆ ನಾಂದಿ ಹಾಡುವರು. ಇತರರು ಅವನನ್ನು ಅನುಸರಿಸಿ ಹಾಡುವರು. ಕಥೆಯನ್ನು ಪುರಾಣಗಳಿಂದಲೋ ದೇವೀ ಸ್ತುತಿ ಗಾನಗಳಿಂದಲೋ ಆಯ್ಕೆ ಮಾಡಲಾಗುತ್ತದೆ. ಮುಖಕ್ಕೆ ಗಂಧ ಬಳಿದು, ಬಿಳಿ ಮುಂಡು ಧರಿಸುವುದು, ತಲೆಗೆ ಬಟ್ಟೆ ಕಟ್ಟುವುದು ಇತ್ಯಾದಿ ಆಟಗಾರರ (ಕಳಿಕ್ಕಾರ್) ವೇಷ ವಿಧಾನವಾಗಿದೆ. ಬಿಳಿ ಬಟ್ಟೆ (ಮುಂಡು)ಯ ಮೇಲೆ ರೇಷ್ಮೆ ಬಟ್ಟೆ ಸುತ್ತವ ರೀತಿಯನ್ನೂ ಕಾಣಬಹುದು.

ಐವರ್‌ಕಳಿಗೆ ‘ಪಾಂಡವರ್‌ ಕಳಿ’ ಎಂದೂ ‘ತಟ್ಟೆನ್ಮೇಲ್‌ಕಳಿ’ ಎಂದೂ ಎರಡು ಹೆಸರುಗಳಿವೆ. ಆದರೆ ಈ ಕಲೆಯು ಇಂದು ಮಧ್ಯ ಕೇರಳದಲ್‌ಇ ಮಾತ್ರ ಕಂಡುಬರುತ್ತದೆ. ತ್ರಿಶ್ಯೂರಿನ ಓಲರಿಕ್ಕನ, ಪಾಲಕ್ಕಾಡಿನ ಪಳ್ಳಿಪ್ಪುರಂ ಮುಂತಾದ ಹಲವೆಡೆಗಳಲ್ಲಿ ಕೇರಳದ ಗ್ರಾಮೋತ್ಸವವಾದ ‘ಐವರ್‌ಕಳಿ’ಯನ್ನು ಕಾಣಬಹುದು.

– ಎಂ.ಪಿ.ಎ. ಅನುವಾದ ಎನ್.ಎಸ್.

ಐವರ್ ರಾಜಾಕ್ಕಳ್ ಕದೈ ತಮಿಳಿನ ಪ್ರಸಿದ್ಧ ಕಥನ ಗೀತೆ. ಈ ಕಥನ ಗೀತೆ ಬಿಲ್ಲಿನ ವಾದ್ಯ ಕಲೆಯ ಪ್ರದರ್ಶನಕ್ಕೆ ತಕ್ಕುದಾಗಿದೆ. ಆದ್ದರಿಂದ ಈ ಕಥನ ಗೀತೆಯನ್ನು ಕೆಲವು ಭಾಗಗಳಲ್ಲಿ ಹಾಡುವುದು ರೂಢಿಯಲ್ಲಿದೆ.

ಕುಲಶೇಖರನೆಂಬ ರಾಜ ವಲ್ಲಿಯೂರನ್ನು ರಾಜಧಾನಿಯಾಗಿ ಮಾಡಿಕೊಂಡು ಪಾಂಡ್ಯರಾಜ್ಯವನ್ನು ಆಳುತ್ತಿದ್ದ. ಕನ್ನಡ ರಾಜ್ಯದ ಯುವರಾಣಿ ಕುಲಶೇಖರನಿಗೆ ಮನಸೋತು ಮದುವೆಯಾಗಲು ಇಚ್ಛಿಸುವಳು. ಆದರೆ ಪಾಂಡ್ಯರಾಜನಾದ ಕುಲಶೇಖರನು ಕನ್ನಡನಾಡಿನ ಯುವರಾಣಿಯ ಬಯಕೆಯನ್ನು ತಿರಸ್ಕರಿಸುವನು. ಇದರಿಂದ ಕೋಪಗೊಂಡ ಯುವರಾಣಿಯ ತಂದೆ ಕುಲಶೇಖರನ ನಾಲ್ಕು ಸಹೋದರರನ್ನೂ ಕೊಲ್ಲಿಸಿದನು. ಪಾಂಡ್ಯ ರಾಜನಾದ ಕುಲಶೇಖರನನ್ನು ಬಂಧಿಸಿ ಎಳೆದೊಯ್ದನು. ಇದು ಅವಮಾನಕರವಾದುದು ಎಂದು ಬಂಧಿಸಿ ಎಳೆದೊಯ್ದನು. ಇದು ಅವಮಾನಕರವಾದುದು ಎಂದು ಭಾವಿಸುವುದರ ಜೊತೆಗೆ ಇನ್ನೊಬ್ಬರಿಗೆ ಅಡಿಯಾಳಾಗಿ ಬದುಕುವುದನ್ನು ಇಚ್ಛಿಸದೆ ಆತ್ಮಹತ್ಯೆ ಮಾಡಿಕೊಂಡನು. ಈ ವಿಷಯ ತಿಳಿದ ಕನ್ನಡ ಯುವರಾಣಿ ಸಹ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳು. ಅನಂತರ ಕುಲಶೇಖರನ್ ಮತ್ತು ಕನ್ನಡ ಯುವರಾಣಿ ಜನತೆಗೆ ದೇವತೆಗಳಾದರು.

ಐತಿಹಾಸಿಕ ಕಥನ ಗೀತೆಯಾದ ಐವರು ರಾಜರುಗಳ ಕಥನ ಗೀತೆಯ ಹಲವು ರೀತಿಗಳು ದೊರೆತಿವೆ. ಈ ಗೀತೆಯ ಪೂರ್ಣ ರೂಪವನ್ನು ಮೊದಲು ನಾ.ವಾನಮಾಮಲೈ (೧೯೭೪)ಪ್ರಕಟಿಸಿದರು. ಇದರ ಕವಲು ಕತೆಗಳಾದ ವೀಣಾದಿವೀಣನ ಕತೆ (೧೯೬೭) ಕನ್ನಡಿಗನ ಯುದ್ಧಕತೆ(೧೯೮೧), ಮುತ್ತು ಪಿಳ್ಳೈಕತೆ (೧೯೯೨) ಮೊದಲಾದವು ಪ್ರಕಟಗೊಂಡಿವೆ. ಈ ಕಥನಗೀತೆ ಗೊಲ್ಲತಿ ಸೆಲ್ಲಿಯ ಕತೆ, ಮುನ್ನನ್ ಮದಿಪನ್ ಕತೆ, ವಡುಗಚ್ಚಿ ಎಸಲ್ ಕತೆ, ಉಲಗಮುಳುದೊಡ್ಕೆಯಾಲ್ ಕತೆ, ಪೊನ್ನುರುವಿದವ ನೆಲೈ, ಮೂಲೈಯಮ್ಮಾಳ್ ಕತೆ ಮೊದಲಾದವು ಎಂಟು ರೀತಿಯಲ್ಲಿವೆ. ಐದು ರಾಜರ ಕತೆಯ ಮಲೆಯಾಳ ರೂಪವೂ ಉಂಟು.

ದಕ್ಷಿಣ ತಮಿಳುನಾಡಿನಲ್ಲಿ ಐವರು ಪಾಂಡ್ಯರು ಇದ್ದರು ಎಂಬ ಸಂಗತಿ ಅನಂತರ ಕಾಲದ ಚೋಳರಾಜನಾದ ಕುಲೋತ್ತುಂಗನ ಶಾಸನದಲ್ಲಿ ಉಲ್ಲೇಖವಾಗಿದೆ. ಐದು ಜನರಲ್ಲಿ ಒಬ್ಬ ನಾಯಕ ಉಳಿದವರು ಅವರ ಅಧೀನದಲ್ಲಿ ಆಳಿದರು ಎಂದು ಕೆ.ಎ.ನೀಲಕಂಠ ಶಾಸ್ತ್ರಿಗಳು ಅಭಿಪ್ರಾಯಪಡುತ್ತಾರೆ. ಈ ವಿಷಯವನ್ನು ಐದು ಜನ ಪಾಂಡ್ಯರಾಜರ ಕತೆಗೆ ಮೂಲ ಎನ್ನಬಹುದು. ಕನ್ನಡಿಗರು ಮತ್ತು ಪಾಂಡ್ಯರು ಯುದ್ಧ ಮಾಡಿದುದಕ್ಕೆ ಐತಿಹಾಸಿಕ ದಾಖಳೆ ಉಂಟು.

ದಕ್ಷಿಣ ತಮಿಳುನಾಡಿನ್ನು ವಶಪಡಿಸಿಕೊಂಡ ಸುಲ್ತಾನರ ಆಳ್ವಿಕೆಯನ್ನು ಕೊನೆಗಾಣಿಸಲು ಕನ್ನಡಿಗರಾದ ಹೊಯ್ಸಳರು ೧೩೪೨ರಲ್ಲಿ ಯುದ್ಧ ಸಾರಿದರು. ಇದಾದ ಅನಂತರ ಕನ್ನಡಿಗರ ಪಡೆ ಎರಡು ಸಲ ತಮಿಳುನಾಡಿಗೆ ಬಂತು. ಹೊಯ್ಸಳರ ಅನಂತರ ವಿಜಯನಗರ ರಾಜರ ಪರವಾಗಿ ವಿಟ್ಟಲರು (೧೫೪೪) ತಮಿಳುನಾಡಿಗೆ ಬಂದರು. ತೆನ್‌ಪಾಂಡಿನಲ್ಲಿ ಕನ್ನಡಿಗರು ಮತ್ತು ಪಾಂಡ್ಯರು ಸಂಧಿಸಿ ಬಾಯಿ ಮಾತಿಗೆ ಕಾರಣರಾಗಿದ್ದಾರೆ. ಇವರ ಪಡೆಯ ಒಂದು ಭಾಗದ ನಾಯಕತ್ವ ವಹಿಸಿದ ಚಿನ್ನತಿರುಮಲೆಯೂ ಕುರುನಿಲ ಪಾಂಡ್ಯರನ್ನು ಎದುರಿಸಿದ್ದಾರೆ.

ಐವರು ರಾಜರುಗಳ ಕತೆಯ ಕುರಿತು ಮೊದಲಿಗೆ ಸಂಶೋಧಿಸಿದರು ಕವಿವರ್ಮ ದೇಶಿಗ ವಿನಾಯಗಂ ಪಿಳ್ಳೈ. ಇವರು ಇದರ ಬಗ್ಗೆ ಆಂಗ್ಲ ಭಾಷೆಯಲ್ಲಿ ಒಂದು ಲೇಖನವನ್ನು ಬರೆದಿ‌ದ್ದಾರೆ. ಇವರಿಗೆ ಸಿಕ್ಕ ಹಳೆಯ ಭಾಷೆಯಲ್ಲಿ ಇರವು ಒಂದು ಹಾಡಿನ ಹಿನ್ನೆಲೆಯಲ್ಲಿ ಈ ಕತೆಯ ಕಾಲ ಕ್ರಿ.ಶ.೧೨೬೭ ಎನ್ನುವರು. ಮಹಾಕವಿ ಉಳ್ಳೂರು ಪರಮೇಶ್ವರ ಅಯ್ಯರ್ ಅವರು ಈ ಕತೆಯ ಮಲೆಯಾಳಂ ರೂಪವರು ಇದೇ ಕಾಲದ್ದು ಎನ್ನುವರು.

ಕ್ರಿ.ಶ. ೧೩ನೆಯ ಶತಮಾನದಲ್ಲಿಲ ಜೀವಿಸಿದ್ದ ಕುಲಶೇಖರ ಪಾಂಡ್ಯನನ್ನು ಕ್ರಿ.ಶ.೧೬ನೆಯ ಶತಮಾನದಲ್ಲಿ ಜರುಗಿದ ಕನ್ನಡಿಗರ ಮತ್ತು ಪಾಂಡ್ಯಯುದ್ಧದಲ್ಲಿ ತಂದು ರಚಿಸಲಾದದ್ದು ಐವರು ರಾಜರುಗಳ ಕತೆಯಾಗಿದೆ. ಈ ಕತೆ ಕಯತಾಟ್ರು (೧೫೪೪ – ೧೫೪೫) ಕಾಲದಲ್ಲಿ ಸೆರೆಯಾದ ಒಬ್ಬಳ ಹಾಡುಗಬ್ಬವಾದುದು ಎಂದು ನಾ. ವಾನಮಾಮಲೈ ಹೇಳುತ್ತಾರೆ.

ಐವರು ರಾಜರುಗಳ ಕತೆಯಲ್ಲಿ ಕವಲು ಕತೆಯಾದ ರಾಜ ಮದಿಪ್ಪನ್ ಕತೆಯಲ್ಲಿ ಬರುವ ಬದಿಪ್ಪನ್ ಎಂಬ ವೀರನನ್ನು ಕುರಿತು ೧೭ನೇ ಶತಮಾನದ ಅರ್ಧಭಾಗದಲ್ಲಿ ಬರೆಯಲ್ಪಟ್ಟ ಸೆಣ್ಣಗರಾಯನ್ ಪಳ್ಳು ಎಂಬ ಗ್ರಂಥ ತಿಳಿಯುತ್ತದೆ. ಆದ್ದರಿಂದ ಐವರು ರಾಜರುಗಳ ಕತೆ ಈ ಕಾಲಕ್ಕೂ ಮುಂಚಿನದು ಎಂದು ಹೇಳಬಹುದು. ವಿಜಯನಗರ ಸೇನೆ ತೆನ್‌ಪಾಂಡಿಯಲ್ಲಿ ಯುದ್ಧ ಸಾರಿದಾಗ(೧೫೪೦ – ೧೫೫೦) ಈ ಕತೆ ಸನ್ನಿವೇಶ ನಡೆದಿರಬಹುದು. ಈ ಕಾಲದಲ್ಲಿ ವಡಗುಪಡೈಯನ್ನು ನಡೆಸಿದ ವಿಟಲರ್ ಪಾಂಡ್ಯರನ್ನು ಗೆದ್ದವರು ಎಂಬುದು ವಾದ. ಇದರಿಂದ ಐವರು ರಾಜರುಗಳ ಕತೆ ಕ್ರಿ.ಶ೧೬ನೆಯ ಶತಮಾನದ್ದು ಎಂದು ಹೇಳಬಹುದು.

ತೂತ್ತುಕುಡಿ ಜಿಲ್ಲೆ, ತಂಡಪತ್ತು ಗ್ರಾಮದಲ್ಲಿ ತೂತ್ತುವಾಲೈ ಅಯ್ಯನಾರ್ ದೇಗುದಲ್ಲಿ ಕುಲಶೇಖರ ರಾಜ ಸಹಾಯಕ ದೇವರಾಗಿದ್ದಾರೆ. ಕುದುರೈಮೊಳಿ, ಎಳ್ಳುವಿಳ್ಯೆ ಊರುಗಳಲ್ಲಿ ಕುಲಶೇಖರ ಪಾಂಡ್ಯನು ಕರುವೇಳ್ ರಾಜ ಎಂಬ ಹೆಸರಿನಲ್ಲೂ, ಕನ್ನಡ ಯುವರಾಣಿ ವಾಡಳ್‌ಪೂ ಅಮ್ಮನ್ ಎಂಬ ಹೆಸರಿನಲ್ಲಿ ಪ್ರಸಿದ್ಧರಾಗಿದ್ದಾರೆ.

ಪಾಳೈಯಂಕೋಟೈ, ಜಯಂತಿ ಮಂಗಲಂ ಗ್ರಾಮದಲ್ಲಿ ಅಯ್ಯಾರಾಜ ದೇಗುಲದಲ್ಲಿ ಐವರು ಪಾಂಡ್ಯರಾಜರನ್ನು ಪೂಜಿಸುತ್ತಾರೆ. ಕನ್ಯಾಕುಮಾರಿ ಜಿಲ್ಲೆ ಪೊತ್ತೈಯಡಿ ಗ್ರಾಮದಲ್ಲಿ ಮೂರು ರಾಜರ ಮೂರ್ತಿಗಳನ್ನು ಒಳಗೊಂಡ ದೇವಾಲಯವಿದೆ. ಸುಶೀಂದಿರಮ್, ಮುನ್ನೂರು ನಂಗೈ ದೇಗುಲದಲ್ಲೂ ಪಾಂಡಿತ್ಯನು ತೆಲುಗಿನವರ ಸಹಾಯಕ ದೇವರು ಆಗಿದ್ದಾನೆ. ಪಟ್ಟಕಾಲಿಯನ್ ವಿಳ್ಯೆ ಗ್ರಾಮದಲ್ಲಿ ಕುಲಶೇಖರ ತಂಬುರಾನ್ ಎಂದು ಮುಖ್ಯದೇವರಾಗಿ ಪೂಜಿಸಲ್ಪಡುತ್ತಾರೆ.

ಕಿನ್ನರಿ ವಾದ್ಯದ ಹಾಡುಗಳಲ್ಲಿ ದೊಡ್ಡದಾದುದು ಐವರು ರಾಜರ ಕತೆ. ನಾ ವಾನಮಾಮಲೈ ದಾಖಲೆಯಲ್ಲಿ ೫೩೭೧ ಸಾಲುಗಳಲ್ಲಿ ಐದು ರಾಜರ ಕತೆ ಇದೆ. ಮುದ್ರಣದಲ್ಲಿ ಬಂದ ಐದು ರಾಜರ ಕತೆಯ ಕವಲು ಕತೆಗಳಾಗಿ ಚಿತ್ರಬಿಡಿಸುವ ಕತೆಯಲ್ಲಿ ೧೨೪೫ ಸಾಲು, ಮುನ್ನನ್ ಮದಿಪ್ಪನ್ ಕತೆಯಲ್ಲಿ ೫೩೪ ಸಾಲುಗಳು, ಇಡೈಚ್ಚಿ ಸೆಲ್ಲಿ ಕತೆಯಲ್ಲಿ (ಗೊಲ್ಲತಿ ಸೆಲ್ಲಿ ಕತೆ) ೧೭೫೬ ಸಾಲುಗಳು ಇವೆ. ಐವರು ರಾಜರ ಕತೆ ಮತ್ತು ಇತರ ಕವಲು ಕತೆಗಳನ್ನು ಮುದ್ರಣ ಕತೆಗಳಾಗಿ ತಂದವರ ಹೆಸರು ಹೇಳಲಿಲ್ಲ.

ಕಥಾಸಾರ: ಪಾಂಡ್ಯ ಪರಂಪರೆಯಲ್ಲಿ ಬಂದ ಪೆತ್ತಪೆರುಮಾಳು ತಪಸ್ಸು ಮಾಡಿ ಐದು ಗಂಡು ಮಕ್ಕಳನ್ನು ಹೆತ್ತಳು. ಹೀಗೆ ಹುಟ್ಟಿದ ಐದು ಸುಪುತ್ರರಲ್ಲಿ ಮೊದಲನೆಯವನೇ ಕುಲಶೇಖರನು. ಅವನು ಯುವರಾಜನೆಂಬ ಪಟ್ಟಾಭಿಷೇಕವನ್ನು ಪಡೆದು ತೆನ್‌ಪಾಂಡಿಗೆ ಬಂದನು. ಅಲ್ಲಿಯ ದೊಡ್ಡ ಕಾಡಿನಲ್ಲಿ ಒಮ್ಮೆ ಬೇಟೆಗೆ ಹೋದಾಗ ದಾರಿ ಮಧ್ಯದ ವಲ್ಲಿಯೂರಿನಲ್ಲಿ ಮೊಸಳೆಯೊಂದು ನಾಯಿಯನ್ನು ಎದುರಿಸಿದುವನ್ನು ಕಂಡನು. ಈ ಅಪೂರ್ವವಾದ ಸ್ಥಳದಲ್ಲೇ ಭವ್ಯ ಅರಮನೆಯನ್ನು ನಿರ್ಮಿಸಿ ಅಲ್ಲೇ ನೆಲೆಗೊಂಡನು.

ಅಲೆಮಾರಿ ಜನರು ಮತ್ತು ಕೆಲವು ಪುರೋಹಿತರು ಕುಲಶೇಖರನ ಭಾವಚಿತ್ರವನ್ನು ಊರೂರ ಮೇಲೆ ತೆಗೆದುಕೊಂಡು ಹೋದಾಗ, ಪಾಂಡ್ಯರಾಜನ ಚಿತ್ರವನ್ನು ಕನ್ನಡ ಯುವರಾಣಿ ನೋಡಿ ಆತನ ಸೌಂದರ್ಯಕ್ಕೆ ಮನಸೋತು, ಅವನನ್ನೇ ಮದುವೆ ಮಾಡಿಕೊಳ್ಳಲು ಇಷ್ಟಪಡುವಳು. ಈ ವಿಷಯವನ್ನು ತಿಳಿದ ಯುವರಾಣಿಯ ತಂದೆ ಪಾಂಡ್ಯರಾಜನಾದ ಕುಲ ಶೇಖರನಿಗೆ ಮದುವೆ ಕುರಿತ ಪತ್ರವೊಂದನ್ನು ಕಳುಹಿಸಿದನು. ಕುಲಶೇಖರ ಪತ್ರವನ್ನು ಓದಿ ಪವಿತ್ರ ಪರಂಪರೆಯಲ್ಲಿ ಬಂದ ತಾಣು ಕನ್ನಡ ಹೆಣ್ಣನ್ನು ಮದುವೆ ಆಗುವುದಿಲ್ಲ ಎಂದು ಹೇಳಿ ಕಳಿಸುವನು.

ಇತ್ತ ಕನ್ನಡ ರಾಜ ತನ್ನ ಮಗಳನ್ನು ಪಾಂಡ್ಯರಾಜ ತಿರಸ್ಕರಿಸಿದ ಬೆನ್ನಲ್ಲೇ ವೆಲ್ಲಿಯೂರ್ ಕೋಟೆಯನ್ನು ಮುತ್ತಿಗೆ ಹಾಕಿದನು. ಆಗ ಪಾಂಡ್ಯರಾಜನ ಪರವಾಗಿ ಮನ್ನನ್ ಮತ್ತು ಮದಿಪ್ಪನ್ ಎಂಬ ಇಬ್ಬರು ವೀರರು ಯುದ್ಧ ನಡೆಸಿದರು. ಈ ಇಬ್ಬರಲ್ಲಿ ಒಬ್ಬನಾದ ಮನ್ನನ್ ಎಂಬ ವೀರನನ್ನು ಕನ್ನಡ ರಾಜ ವಂಚನೆಯಿಂದ ಕೊಲ್ಲಿಸಿದನು. ಇದನ್ನು ಅರಿತ ಮದಿಪ್ಪನು ಅವರ ಮೇಲೆ ಯುದ್ಧ ಮಾಡಿ ತನ್ನ ಸೇಡನ್ನು ತೀರಿಸಿಕೊಂಡನು.

ಹೀಗೆ ಇಬ್ಬರ ಮಧ್ಯೆ ಬಿರುಸಾಗಿ ಯುದ್ಧ ನಡೆಯುತ್ತಿತ್ತು. ಪಾಂಡ್ಯರು ತಮ್ಮ ಕೋಟೆ ಕೊತ್ತಲಗಳನ್ನು ಬಿಗಿ ಬಂದೋಬಸ್ತ್ ಮಾಡಿದರು. ಹೀಗಿರುವಾಗ ವಳ್ಳಿಯುರ್ ಕೋಟೆಯಲ್ಲಿ ಮೊಸರು ಮಾರಲು ಬಂದ ಗೊಲ್ಲತಿಯೊಬ್ಬಳ ಮೂಲಕ ಕೋಟೆಯೊಳಕ್ಕೆ ನೀರು ಹೋಗುವ ದಾರಿಯನ್ನು ಕನ್ನಡಿಗರು ಪತ್ತೆ ಹಚ್ಚಿ ಆ ದ್ವಾರವನ್ನು ಮುಚ್ಚಿದರು. ಕೋಟೆಯೊಳಗೆ ನೀರು ಬಾರದ ಕಾರಣ ಪಾಂಡ್ಯರು ನೀರಿಗಾಗಿ ಪರಿತಪಿಸಿದರು.

ಪಾಂಡ್ಯರು ಸಹಾಯ ಬೇಡಿದ ಚೇರರಾಜನ ಸೈನ್ಯ ಬರಲಿಲ್ಲ, ಆದಕಾರಣ ಕನ್ನಡಿಗರು ವಲ್ಲಿಯೂರಿನ ಕೋಟೆಯನ್ನು ವಶಪಡಿಸಿಕೊಂಡರು. ಕುಲಶೇಖರ ತನ್ನ ಸೈನ್ಯದ ಸಹಾಯದಿಂದ ಕಾಡಿನೊಳಗೆ ಹೋಗಿ ಮರೆಯಾದನು. ತನ್ನ ಸಹೋದರರು ಕನ್ನಡಿಗರೊಡನೆ ಯುದ್ಧದಲ್ಲಿ ಹೋರಾಟ ಮಾಡಿ ಸತ್ತರು. ಈ ವಿಷಯವನ್ನು ತಿಳಿದ ಕುಲಶೇಖರ ಅತಿಯಾದ ಕೋಪದಿಂದ ಕನ್ನಡಿಗರ ವಿರುದ್ಧ ಯುದ್ಧ ಸಾರಿದನು, ಆಗ ಕನ್ನಡ ರಾಜ ಕುಲಶೇಖರನನ್ನು ಸುಲಭವಾಗಿ ಸೋಲಿಸಿ ಅವನನ್ನು ಜೀವಸಹಿತ ಬಂಧಿಸಿ ಪಲ್ಲಕ್ಕಿಯಲ್ಲಿ ಕೂರಿಸಿ ಕರೆದುಕೊಂಡು ಹೋದನು. ತನ್ನನ್ನು ಯುವರಾಣಿಗೆ ಮದುವೆ ಮಾಡಿಸಲು ಕರೆದುಕೊಂಡು ಹೋಗುತ್ತಿರಬಹುದೆಂದು ಭಾವಿಸಿ ಪಾಂಡ್ಯರಾಜ ತನ್ನ ಖಡ್ಗದಿಂದಲೇ ತನ್ನನ್ನು ಆತ್ಮಹತ್ಯೆ ಮಾಡಿಕೊಂಡನು. ಈ ಸುದ್ಧಿಯನ್ನು ಅರಿತ ಯುವರಾಣಿ ಪಾಂಡ್ಯರಾಜನಾದ ಕುಲಶೇಖರನೊಂದಿಗೆ ಸಹಗಮನ ಮಾಡಿದಳು. ಹೀಗೆ ಸತ್ತವರು ಇಬ್ಬರು ಶಿವಲೋಕ ಸೇರಿದರು. ಈ ಅಪರೂಪದ ಜೋಡಿಯನ್ನು ನೋಡಿದ ಶಿವ ನೀವು ನಮ್ಮನ್ನು ಭೂಮಿಯಲ್ಲೇ ಪೂಜೆ ಮಾಡಿ ಎಂದು ಆಶೀರ್ವದಿಸಿದನು. ಅಂತೆಯೇ ಅವರಿಬ್ಬರು ಹೃದಯಪೂರ್ವಕವಾಗಿ ಭಗವಂತನ ಪೂಜೆ ಮಾಡುತ್ತ ಭೂಲೋಕದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಬದುಕಿದರು.

– ಎ.ಕೆ.ಪಿ. ಅನುವಾದ ಆರ್.ಎಸ್.