ಒಗಟುಗಳು ಜನಪದ ಸಾಹಿತ್ಯದ ಯಾವುದೇ ಪ್ರಕಾರ ಅದರ ಸಾಹಿತ್ಯಿಕ ದೃಷ್ಟಿಗಿಂತ ಮಿಗಿಲಾಗಿರುತ್ತದೆ; ಆದರೆ ಹೊರತಾಗಿರುವುದಿಲ್ಲ. ಜನಪದ ಸಾಹಿತ್ಯಕ್ಕೆ ಸಾಂಸ್ಕೃತಿಕ ಮುಖ ಮತ್ತು ಸಾಹಿತ್ಯಿಕ ಮುಖಗಳೆಂದು ಎರಡಿರುವುದು ಇದರ ಅರ್ಥ. ಒಗಟು ಜನಪದ ಸಾಹಿತ್ಯದ ಒಂದು ಪ್ರಕಾರವೇ ಆಗಿರುವುದರಿಂದ ಈ ನಿಯಮಗಳಿಂದ ಹೊರತಾಗುವುದಿಲ್ಲ. ಒಗಟು ತನ್ನಲ್ಲಿಯ ರೂಪಕ, ಉಪಮೆ, ಪ್ರತಿಮಾದಿ ಅಲಂಕಾರ ಸಾಧನಗಳಿಂದ ಸಾಹಿತ್ಯವಾಗಿ ಪರಿಗಣಿತವಾಗುತ್ತದೆ. ಒಗಟು ಅನುಭವದ ಅಭಿವ್ಯಕ್ತಿಯಾಗುವುದಕ್ಕಿಂತ, ಬುದ್ಧಿ ಚಮತ್ಕಾರದ ಸ್ವಾರಸ್ಯವನ್ನು ಕಾಣದೆ ಇರೆವು. ಒಗಟಿಗೆ ಸ್ಪಷ್ಟವಾಗಿ ಒಂದು ಪರಿಮಿತಿಯಿದೆ ಎಂಬುದು ಇದರಿಂದ ವೇದ್ಯವಾದೀತು. ಈ ಭಿನ್ನತೆ ಮತ್ತು ಪರಿಮಿತಿಯನ್ನು ಒಪ್ಪಿಕೊಂಡು ಅದರಲ್ಲಿ ಸಾಹಿತ್ಯಾಂಶಗಳನ್ನು ಅ‌ನ್ವೇಷಿಸುವುದು ತಪ್ಪಲ್ಲ. ಒಗಟು ಉತ್ತಮ ಕಾವ್ಯವಲ್ಲದಿದ್ದರೂ, ಅಧಮ ಕಾವ್ಯವಂತೂ ಖಂಡಿತ ಅಲ್ಲ. ಅದಕ್ಕೇ ಒಂದು ಪ್ರಕಾರವನ್ನು ಸೂಚಿಸಬಹುದಾದರೆ ಚಿತ್ರಕಾವ್ಯವೆಂದು ಬೇಕಾದರೆ ಕರೆಯಬಹುದು.

ಒಗಟಿನ ಸಾಹಿತ್ಯಿಕ ಮೌಲ್ಯದಲ್ಲಿ ಅಭಿವ್ಯಕ್ತಿ ತಂತ್ರದ ಪಾತ್ರವೂ ದೊಡ್ಡದೇ. ಒಗಟಿನಲ್ಲಿ ಭಾಷೆ ಅತ್ಯಂತ ಪ್ರಮುಖವಾಗಿದ್ದು, ಅದು ಯಾವ ಬಗೆಯಲ್ಲಿ ಬಳಕೆಯಾಗುತ್ತದೆ ಎಂಬುದು ಇಲ್ಲಿಯ ತಂತ್ರವಾಗುವುದು. ಒಗಟು ಒಂದು ಸಾಲಿನಲ್ಲಿದ್ದರೆ ಭಾಷೆ ಒಂದು ಪೂರ್ಣಘಟಕವಾಗಿ ಕೆಲಸಮಾಡುತ್ತದೆ. ಒಂದು ಸಾಲಿಗಿಂತ ಹೆಚ್ಚು ಸಾಲುಗಳಿದ್ದರೆ ಭಾಷೆ ಪ್ರತಿ ಸಾಲಿನಲ್ಲೂ ಒಂದೊಂದು ಘಟಕವಾಗಿಯೇ ಇದ್ದಂತೆ ಕಂಡರೂ, ಅದು ಮುಂದಿನ ಸಾಲುಗಳಿವೆ ಸಂಬಂಧ ಕಲ್ಪಿಸುತ್ತ ಇಡೀ ಒಗಟಿನ ಸಾಮರಸ್ಯಕ್ಕೆ ದುಡಿಯುತ್ತದೆ. ಒಗಟು ಗದ್ಯದಲ್ಲಿ ಇರಬಹದಾದರೂ, ಪದ್ಯವೇ ಅದರ ಜನಪ್ರಿಯ ರೂಪ. ನೆನಪಿನಲ್ಲಿ ಇರಿಸಿಕೊಳ್ಳುವುದಕ್ಕೆ ಇದು ಹೇಳಿ ಮಾಡಿಸಿದ ವಿಧಾನ.

ಸಾಮಾನ್ಯವಾಗಿ ಒಗಟುಗಳು ತಮ್ಮ ಸ್ವರೂಪದಲ್ಲಿ ಎರಡು ಬಗೆಯವು. ಹೇಳಿಕೆಯ ರೂಪದಲ್ಲಿ ಕಾಣಿಸಿಕೊಳ್ಳುವುದು. ಇವುಗಳಲ್ಲಿ ಒಂದು. ಗೋಪನಕ್ರಿಯೆ, ಹೊಲಿಕೆ ಅಥವಾ ರೂಪಕದಲ್ಲಿ ಇಲ್ಲದಿರುವುದು ಇಂಥ ಒಗಟುಗಳ ಲಕ್ಷಣ. ಹಾಗೆಂದ ಮಾತ್ರಕ್ಕೆ ಉತ್ತರವನ್ನು ಸುಲಭವಾಗಿ ಒಡೆಸಬಹುದು ಎಂದು ಅರ್ಥವಲ್ಲ. “ಸಂತ್ಯಾಗ ತರ್ತಾರೆ ಮನ್ಯಾಗ ಅಳ್ತಾರೆ” ಎಂಬ ಈರುಳ್ಳಿ ಕುರಿತ ರಚನೆಯನ್ನಾಗಲಿ, “ಹಿಡಿದರೆ ಹಿಡಿಯಾಗುವುದಿಲ್ಲ ಕಡಿದರೆ ಕಚ್ಚಾಗುವುದಿಲ್ಲ” ಎಂಬ ನೀರನ್ನು ಕುರಿತ ರಚನೆಯನ್ನಾಗಲಿ ಗಮನಿಸಬಹುದು. ಈ ಎರಡೂ ಉದಾಹರಣೆಗಳಲ್ಲಿ ವಸ್ತುವಿನ ಸ್ಥಿತಿಯನ್ನು ಮಾತುಗಳಲ್ಲಿ ಮಾತ್ರ ಹಿಡಿದಿರಿಸುವಂತೆ ತೋರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಹೋಲಿಕೆಯಲ್ಲಿಯೊ ರೂಪಕದಲ್ಲಿಯೊ ಅಭಿವ್ಯಕ್ತಿ ಪೂರ್ಣರೂಪದಲ್ಲಿರುವುದು. ಎರಡನೆಯ ಮಾದರಿಯಾಗುತ್ತದೆ. ಒಗಟಿನ ಬಹುತೇಕ ಭಾಗವೆಲ್ಲ ಈ ಬಗೆಯ ಪ್ರಕ್ರಿಯೆಯ ಉತ್ಪನ್ನವೇ ಆಗಿರುವುದು. ಸಾಹಿತ್ಯಿಕ ಸ್ವಾರಸ್ಯ ಹೆಚ್ಚುವುದು ಈ ಅಭಿವ್ಯಕ್ತಿ ತಂತ್ರದಲ್ಲಿಯೇ. ಇದಕ್ಕೆ ನಿದರ್ಶನವಾಗಿ “ತುಂಡು ಗೋಡೆಯ ಮೇಲೆ ತುಂಬು ಚಂದ್ರ ಕೂತಿದ್ದಾನೆ” ಮತ್ತು “ತುಂಡೇರಿ ಮೇಲೆ ಸಾಲುಗೊಬ್ಬಳಿ ಮರ” ಎಂಬ ಎರಡು ಚಿಕ್ ಒಗಟುಗಳನ್ನೆ ಪರಿಭಾವಿಸಬಹುದು. ಇವುಗಳಲ್ಲಿ ಮೊದಲನೆಯದಕ್ಕೆ ‘ಮೂಗುತಿ’ ಎಂದೂ, ಎರಡನೆಯದಕ್ಕೆ ‘ಕಣ್ಣಿನ ರೆಪ್ಪೆ’ಯೆಂದೂ ಉತ್ತರ. ಮೊದಲನೆಯದು ಸುಂದರವಾದ ಕಲ್ಪನೆಯಾಗಿದ್ದು, ವಾಸ್ತವವನ್ನು ಅಲ್ಲಗಳೆಯುತ್ತದೆ. ಇದರಲ್ಲಿ ‘ತುಂಡು ಗೋಡೆ’ ಮೂಗಿಗೂ, ‘ತುಂಬುಚಂದ್ರ’ ಮೂಗುತಿಗೂ ರೂಪಕವೆಂದಾಗ ವಿಸ್ಮಯ ಮೂಡುವುದು. ಎರಡನೆಯದು ವಾಸ್ತವ ಸ್ಥಿತಿಯಲ್ಲಿ ಅಸಹಜವಲ್ಲದಿದ್ದರೂ, ಅದು ನಿಲ್ಲುವ ಹೋಲಿಕೆಯ ಸೂಕ್ಷ್ಮತೆಗೆ ಬೆರಗಾಗುತ್ತೇವೆ. ‘ತುಂಡೇರಿ’ ರೆಪ್ಪೆಗೂ ‘ಸಾಲುಗೊಬ್ಬಳಿಮರ’ ರೆಪ್ಪೆಯಲ್ಲಿಯ ಸಾಲು ಕೂದಲುಗಳಿಗೂ ಹೋಲಿಕೆಗಳಾದಾಗ ಕುಸುರಿ ಕೆಲಸದ ಬೆಡಗಿಗೆ ಸೋಲದವರಾರು? ಈ ಬಗೆಯ ರೂಪಕಾಭಿವ್ಯಕ್ತಿಗಳೇ ಒಗಟುಗಳಿಗೆ ಸೌಂದರ್ಯವನ್ನು ತಂದುಕೊಟ್ಟಿವೆ. ಮೊದಲ ಗುಂಪಿನ ಒಗಟುಗಳಲ್ಲಿ ಇಲ್ಲದ ಒಂದು ಬಗೆಯ ಬಂಧುರತೆ ಇವುಗಳಲ್ಲಿ ಕಾಣುವುದೇ ಇದಕ್ಕೆ ಕಾರಣ.

ಮೇಲಿನ ವಿವೇಚನೆ ಉಪಮಾನಕ್ಕೆ ಸಂಬಂಧಿಸಿದುದು. ಆದರೆ ಉಪಮೇಯಕ್ಕೆ ಸಂಬಂಧಿಸಿದಂತೆಯೂ ಅಭಿವ್ಯಕ್ತಿ ತಂತ್ರ ಬೇರೊಂದು ರೂಪದಲ್ಲಿ ಕಾಣಿಸಿಕೊಳ್ಳುವುದು. ಇದು ಕೂಡ ಎರಡು ಮಾದರಿಯಲ್ಲಿ ಜನ್ಮ ತಳೆಯಬಲ್ಲುದು. ಉಪಮೇಯ ವಸ್ತುವಿನ ಲಕ್ಷಣಗಳನ್ನು ರಚನೆಯಲ್ಲಿ ವರ್ಣನೆಯ ಮೂಲಕ ಹೇಳುವುದು ಇವುಗಳಲ್ಲಿ ಒಂದು. ಇದನ್ನು ಸಹ ಉಪಮಾನದಿಂದಲೇ ಸಾಧಿಸಲಾಗುವುದು. ಇದರಲ್ಲಿ ವಸ್ತುವಿನ ವರ್ಣನೆ ಮಾತ್ರ ಲಭ್ಯ, ಅದರ ಕ್ರಿಯಾಭಾಗ ಇರದು. ಕೂದಲನ್ನು ಕುರಿತ ಈ ಒಗಟನ್ನು ನೋಡಿ : “ಸೂಜಿಸಣ್ಣ ಕಾಗೆ ಬಣ್ಣ ನಾನಾರೆಂದು ನೀ ಹೇಳಣ್ಣ”. ಇದರಲ್ಲಿ ಕೂದಲಿನ ಆಕಾರವನ್ನೂ ಬಣ್ಣವನ್ನೂ ಮುಷ್ಟಿಗ್ರಾಹ್ಯವಾಗುವಂತೆ ವರ್ಣಿಸಲಾಗಿದೆ. ಕೂದಲಿನ ಸ್ಥಿತಿಯನ್ನು ಹೇಳುವುದಷ್ಟೇ ಇಲ್ಲಿಯ ಉದ್ಧೇಶ, ಅದರ ಕಾರ್ಯವನ್ನಲ್ಲ. ಸೂಜಿ ಮತ್ತು ಕಾಗೆಗಳ ಉಪಮಾನದ ಮೂಲಕವೇ ಇದನ್ನು ಸಾಧಿಸಲಾಗಿದೆ. ಒಗಟಿನ ಉತ್ತರಾರ್ಧ “ನಾನಾರೆಂದು ನೀ ಹೇಳಣ್ಣ” ಒಂದು ಆತ್ಮೀಯ ಸೂಚನೆ. ಒಗಟನ್ನು ಬಿಡಿಸುವವನಿಗೆ ಪ್ರೀತಿಯ ಸವಾಲು. ಒಂದೆರಡು ಸಾಲುಗಳಿಂದ ಐದಾರು ಸಾಲುಗಳ ರ್ದಿರ್ಘ ರಚನೆಯವರೆಗೆ ವರ್ಣನಾತ್ಮಕ ಒಗಟು ಸಾಗುತ್ತದೆ. ಹಿಂದಿನ ಒಗಟಿನಂತೆಯೇ ಇರುವ “ಹರಾಯದಲ್ಲಿ ಹಸಿರು ಪರಾಯದಲ್ಲಿ ಕೆಂಪು ಮುಪ್ಪಾದ ಮೇಲ ಕಪ್ಪು” ಎಂಬ ಇನ್ನೊಂದು ರಚನೆಯಲ್ಲಿ ಗಮನಿಸಿ ಇದರ ಅರ್ಥ ‘ನೇರಿಳೆ ಹಣ್ಣು’ ಎಂದು. ಹರೆಯದಲ್ಲಿ ಹಸಿರಾಗಿ, ಪ್ರಾಯದಲ್ಲಿ ಕೆಂಪಾಗಿ, ಹಣ್ಣಾದಾಗ ಕಪ್ಪಾಗುವ ನೇರಿಳೆ ಹಣ್ಣಿನ ಬೆಳೆವಣಿಗೆಯನ್ನು ಅನುಕ್ರಮವಾಗಿ ಇದು ವರ್ಣಿಸುತ್ತದೆ. ಇದರಲ್ಲಿ ವರ್ಣನೆಯ ಜೊತೆಗೆ ಕ್ರಿಯೆಯು ಸೂಕ್ಷ್ಮ ಚಿತ್ರವು ಲಭಿಸಿದೆ. ಒಗಟಿನ ‘ಹರಾಯ’ ಕ್ಕೆ ಪೂರವಾಗಿ ‘ಪರಾಯ’ ಪ್ರಾಸರೂಪಗಳು ಲಕ್ಷಿಸುವಂಥವೇ. ಮಾನವನ ವಿಕಾಸಗತಿಯನ್ನೂ ಈ ಒಗಟು ಸಾಂಕೇತಿಕವಾಗಿ ಹೇಳಬಹುದು. ಹಲವಾರು ವಾಕ್ಯಗಳ ಸಮಗ್ರ ಒಗಟೇ ಒಂದು ವರ್ಣನಾಪ್ರಪಂಚವನ್ನು ಸೃಷ್ಟಿ ಮಾಡುವುದಕ್ಕೆ ‘ಮನುಷ್ಯ’ ನನ್ನು ವರ್ಣಿಸುವ ಈ ಒಗಟನ್ನೇ ನೋಡಿ:

ಎರಡು ಕಂಬಗಳು
ಕಂಬದ ಮೇಲೊಂದು ಗುಂಭ
ಗುಂಭದ ಮೇಲೊಂದು ಬಾಗೂರು
ಬಾಗೂರಿನ ಮೇಲೆ ಮೂಗೂರು
ಮೂಗೂರಿನ ಮೇಲೆ ಕಣಗಾಲ
ಕಣಗಾಲದ ಮೇಲೆ ಕರಿಘಟ್ಟ
ಕರಿಘಟ್ಟದ ಮೇಲೆ ಕುರಿಹಿಂಡು

ಇದರಲ್ಲಿ ‘ಕಂಬ’ ಕಾಲುಗಳನ್ನು, ‘ಗುಂಭ’ ಹೊಟ್ಟಯನ್ನು, ‘ಬಾಗೂರು’ ಬಾಯಿಯನ್ನು, ‘ಮೂಗೂರು’ ಮೂಗನ್ನು, ‘ಕಣಗಾಲ’ ಕಣ್ಣುಗಳನ್ನು, ‘ಕರಿಘಟ್ಟ’ ತಲೆಯನ್ನು, ‘ಕುರಿಹಿಂಡು’ ಹೇನುಗಳನ್ನು ಕ್ರಮವಾಗಿ ಸೂಚಿಸುತ್ತದೆ. ಇದರಲ್ಲಿಯ ‘ಕಂಬ’ ಮತ್ತು ‘ಗುಂಭ’ಗಳು ಆಯಾ ಅರ್ಥಗಳನ್ನು ಸುಲಭವಾಗಿ ಸೂಚಿಸದರೂ, ಮುಂದಿನವು ಪ್ರಾಸದಾಯಕವಾಗಬಹುದು. ಈಗ ಬಾಗೂರು, ಮೂಗೂರು, ಕಣಗಾಲದ ಪ್ರಥಮಾಕ್ಷರಗಳು ಆಯಾ ಉತ್ತರಗಳ ಪ್ರಥಮಾಕ್ಷರಗಳ ಕಡೆಗೆ ನೆನಪುಮಾಡಬಹುದು. ಮುಂದಿನ ‘ಕರಿಘಟ್ಟ’ ಆ ಪದದ ಗಟ್ಟಿತನದಿಂದಾಗಿ ‘ತಲೆ’ಯನ್ನು ಊಹಿಸಬಹುದು. ಇದೊಂದು ತಂತ್ರಪ್ರಧಾನ ಒಗಟೆಂದು ಹೇಳಬಹುದು. ಉಪಮೇಯ ವಸ್ತುವಿನ ಕ್ರಿಯಾಶೀಲಗುಣವನ್ನು ಅಭಿವ್ಯಕ್ತಿಯಲ್ಲಿಯೂ ಕ್ರಿಯಾಶೀಲವಾಗಿರುವಂತೆಯೇ ಅಭಿನಯಿಸಿ ತೋರಿಸುವುದು, ಎರಡನೆಯದು. ಇದರಲ್ಲಿಯೂ ಉಪಮಾನ ಒಂದಲ್ಲ ಒಂದು ರೀತಿಯ ಕೆಲಸ ಮಾಡಿಯೇ ತೀರುತ್ತದೆ. ಮೊತ್ತದಲ್ಲಿ ರಚನೆಯನ್ನು ನೋಡಿದ ತಕ್ಷಣವೇ ಕ್ರಿಯೆ ಸಾಗುತ್ತಿರುವಂತೆ ಭಾಸವಾದರೆ ಅದು ಈ ಗುಂಡಿನ ಲಕ್ಷಣವನ್ನು ಹೇಳುತ್ತಿದೆ ಎಂದೇ ಅರ್ಥ. ಒಂದು ಸುಂದರವಾದ ನಿದರ್ಶನವನ್ನು ಗಮನಿಸಿ:

ನಮ್ಮನ್ಯಾಗ್ ಒಂದು ಹುಡಿಗೈತೆ
ಹಿಂದ್ ಹಿಂದ್
ಕೆ ತೆವೀತೈತಿ

ಇದರ ಉತ್ತರ ‘ನೆಲ ಬಳಿಯುವುದು’ ಎಂಬುದಾಗಿ. ಪಟ್ಟಣದವರಿಗೆ ಇದರ ಕ್ರಿಯೆ ಅರ್ಥವಾಗದು. ಹಳ್ಳಿಗರು ಮನೆಯ ನೆಲವನ್ನು ಸಗಣಿಯಿಂದ ಆಗಾಗ ಶುದ್ಧಿಗಾಗಿ ಸಾರಿಸುವುದು ವಾಡಿಕೆ. ಹೀಗೆ ಸಾರಿಸುವಾಗ ಮುಂದಕ್ಕೆ ಹೋದರೆ ತುಳಿದಂತಾಗುತ್ತದೆಂದು, ಹಿಂದು ಹಿಂದಕ್ಕೆ ಸಾರಿಸಿಕೊಂಡು ಹೋಗುತ್ತಾರೆ. ಇಂಥ ಕ್ರಿಯೆಯಲ್ಲಿ ತೊಡಗಿರುವ ಹಳ್ಳಿಯ ಹೆಣ್ಣು ಮಗಳ ಚಿತ್ರವೊಂದನ್ನು ಪ್ರಸ್ತುತ ಒಗಟು ಸಶಕ್ತನಾಗಿ ಅಭಿನಯಿಸಿ ತೋರಿಸುತ್ತದೆ. ಗುಡಿಸಲಿಗೆ ವರ್ಷಕ್ಕೊಮ್ಮೆ ಹುಲ್ಲು ಹೊದಿಸುವ ಕ್ರಿಯೆಯನ್ನು “ನಮ್ಮನೆ ಆನೆಗೆ ವರ್ಷಕ್ಕೊಂದೇ ಮೇವು” ಎಂಬುದಾಗಿ ಹಿಡಿದಿರಸಲಾಗಿದೆ. ಇಲ್ಲಿಯೂ ಹುಲ್ಲು ಹೊದಿಸುವ ವರ್ಣನೆಗಿಂತ, ಅದರ ಕ್ರಿಯೆಗೆ ಹೆಚ್ಚು ಬೆಲೆ. “ಊರೆಲ್ಲ ತಿರುಗಿ ಬರ್ತದೆ ಅಗೌರವದ ಸ್ಥಳದಲ್ಲಿ ನಿಲ್ತದೆ” ಚಪ್ಪಲಿಯನ್ನು ಕುರಿತ ಒಗಟು. ಚಪ್ಪಲಿಯ ವರ್ಣನೆ ಇಲ್ಲಿರದೆ, ಅದು ಎಲ್ಲೆಲ್ಲಿಯೋ ತಿರುಗಿ ಬಂದು ನಿಲ್ಲುವ ಕ್ರಿಯೆಯನ್ನೇ ಪ್ರತಿಪಾದಿಸುತ್ತದೆ. ಒಗಟಿನಲ್ಲಿಯ ‘ಅಗೌರವದ ಸ್ಥಾನ’ ಎಂಬಂತಹ ಅಭಿವ್ಯಕ್ತಿ ಅಪರೂಪವಾದುದು, ಶಿಷ್ಟವಾದುದು. ಇದರೊಡನೆ “ಊರೆಲ್ಲ ಸುತ್ತುತ್ತೆ ಬಾಗ್ಲಲ್ಲಿ ನಿಲ್ಲುತ್ತೆ” ಎಂಬ ತರ್ಕಬದ್ಧ ರಚನೆಯನ್ನು ಸಂವಾದಿ ರೂಪವಾಗಿ ಸ್ವೀಕರಿಸಬಹುದು. ಹೀಗೆ ಇವೆಲ್ಲವೂ ಕ್ರಿಯೆ ನಡೆಯುತ್ತಿರುವುದನ್ನು ಚಿತ್ರಿಸುವ ಒಗಟುಗಳಾಗಿವೆ. ಮೊದಲ ಗುಂಪಿನವನ್ನು ‘ವರ್ಣನಾಪ್ರಧಾನ’ ಒಗಟುಗಳೆಂದೂ, ಎರಡನೆಯ ಗುಂಪಿನವನ್ನು ‘ಕ್ರಿಯಾಪ್ರಧಾನ’ ಒಗಟುಗಳೆಂದೂ ಕರೆಯಬಹುದು.

ಸಾಧಾರಣವಾಗಿ ಒಗಟುಗಳು ವ್ಯಕ್ತಿ, ವಸ್ತು ಮತ್ತು ಪ್ರಾಣಿಗಳನ್ನು ಕುರಿತಂಥವು. ಒಗಟಿನ ರಚನಾ ವಿಧವಾದ ಉಪಮೇಯ ಉಪಮಾನಗಳಲ್ಲಿ ಇವು ಯಾವ ಸ್ಥಾನದಲ್ಲಿ ಬೇಕದರೂ ಬರಬಹುದು; ಕಡ್ಡಾಯ ನಿಯಮವಿಲ್ಲ. ಉಪಮೇಯ ವಸ್ತುವೊಂದಕ್ಕೆ ಉಪಮಾನವಾಗಿ ವ್ಯಕ್ತಿಯೊ ಪ್ರಾಣಿಯೊ ಬರಬಹುದು; ಹಾಗೆಯೇ ಉಳಿದವುಗಳು ಕೂಡ. ಒಗಟುಗಳ ಅಭಿವ್ಯಕ್ತಿಯಲ್ಲಿ ನಿರ್ಜೀವ ವಸ್ತುವಿಗೆ ಸಜೀವತೆಯನ್ನು ಆರೋಪಿಸುವುದು ಒಂದು ದೊಡ್ಡ ವೈಶಿಷ್ಟ್ಯ. ಯಾವಾಗ ಮಾನವ ಮರಗಿಡಶಿಲೆಗಳಲ್ಲಿ ಜೀವವನ್ನು ಆರೋಪಿಸಿ ಪೂಜಿಸಲು ತೊಡಗಿದನೊ ಅಂದಿನಿಂದಲೇ ಈ ವ್ಯಕ್ತೀಕರಣ ಆರಂಭವಾಯಿತು. ಸಮಗ್ರ ಪ್ರಕೃತಿಯನ್ನೇ ಸಪ್ರಾಣಿಸುವ ರೀತಿ ಇದು. ವಿವಿಧ ವಸ್ತುಗಳಿಗೆ ಮಾನವನ ವಿವಿಧಾವಸ್ಥೆಗಳನ್ನು ಹೋಲಿಸಿ ನೋಡುವುದು, ಸ್ತ್ರೀ ಪುರುಷರನ್ನು ಪ್ರತಿಮಿಸಿ ಅಭಿವ್ಯಕ್ತಿಯಲ್ಲಿ ನವೀನತೆಯಲ್ಲಿ ಸಾಧಿಸುವುದು ಪ್ರಚುರಗೊಂಡಿತು. ಕಡಲೆಕಾಯಿಯನ್ನು ಚಿತ್ರಿಸುತ್ತ ” ಹುಡುಗಿ ಹೋದಾಳೆ ಮುದುಕಿ ಆದ್ಯಾಳೆ ಗಿಲಗಿ ಆಡ್ಯಾಳೆ” ಎಂದು ಒಗಟು ಕೊಡುವ ಅಭಿವ್ಯಕ್ತಿಯನ್ನು ನೋಡಿ. ಕಡಲೆಕಾಯಿಯ ಕ್ರಮಗತಿಯನ್ನು ವ್ಯಕ್ತಿಯ ವಿಕಾಸದಲ್ಲಿ ಕಾಣುವುದಕ್ಕೆ ಮೇಲಿನದು ಉದಾಹರಣೆ. ಇದ್ದಲನ್ನು ಮತ್ತೆ ಉರಿಯಲಿಕ್ಕೆ ಬಿಡುವ ರೀತಿಯನ್ನು “ಸುಟ್ಟ ಹೆಣ ಮತ್ತೆ ಸುಡ್ತಾರ” ಎಂಬ ಅಭಿವ್ಯಕ್ತಿಯಲ್ಲಿ ಕಾಣುತ್ತೇವೆ. ವ್ಯಕ್ತೀಕರಣದ ಅಭಿವ್ಯಕ್ತಿ ತಂತ್ರ ಇಲ್ಲೆಲ್ಲ ಚೆಲ್ಲವರಿದಿದೆ. ಈ ವ್ಯಕ್ತೀಕರಣದ ಕಾರಣಕ್ಕಾಗಿಯೇ ಒಗಟುಗಳೆಲ್ಲ ಪ್ರಥಮ, ಮಧ್ಯಮ ಮತ್ತು ಉತ್ತಮ ಪುರುಷಗಳಲ್ಲಿ ರಚಿತವಾಗಿರುವುದು. ಕೆಲವೊಮ್ಮೆ ಒಗಟಿನಲ್ಲಿರುವ ಜೀವಿಯೋ ವಸ್ತುವೋ ಹೇಳಿಕೊಳ್ಳೂವ ರೀತಿಯಲ್ಲಿ ಅಭಿವ್ಯಕ್ತಿ ಇರುವುದನ್ನು ಗಮನಿಸಬಹುದು. ಇದು ಉತ್ತಮ ಪುರುಷಕ್ಕೆ ಲಕ್ಷಣ. ಉದಾಹರಣೆಗೆ, “ನನ್ನ ಬಣ್ಣ ಕೆಂಪು ನಾನು ಸೋಕಿದ್ದೆಲ್ಲ ಕಪ್ಪು” ಎಂಬ ಒಗಟು. ಇದರ ಅರ್ಥ ‘ಬೆಂಕಿ’. ಬೆಂಕಿಯ ಸ್ವಭಾವವನ್ನು ಅದರ ಸಹವಾಸದಿಂದಾಗುವ ಪರಿಣಾಮವನ್ನೂ ಪ್ರಸ್ತುತ ಒಗಟು ಚೆನ್ನಾಗಿ ಬಣ್ಣಿಸುತ್ತದೆ. ಇಲ್ಲಿಯ ಪ್ರಧಾನ ಕ್ರಿಯೆಯಲ್ಲಿ ವಸ್ತುವೇ ಇದ್ದರೂ ಅದು ಹೇಳಿಕೊಳ್ಳುವ ರೀತಿಯಲ್ಲಿ ಮಾನವೀಕರಣದ ಸೂಚನೆಯಿದೆ. ಮಧ್ಯಮ ಪುರುಷರದಲ್ಲಿಯೂ ಒಗಟಿನ ಹೇಳಿಕೊಳ್ಳುವ ರೀತಿಯಲ್ಲಿ ಮಾನವೀಕರಣದ ಸೂಚನೆಯಿದೆ. ಮಧ್ಯಮ ಪುರುಷದಲ್ಲಿಯೂ ಒಗಟಿನ ತಂತ್ರವಿದ್ದು, “ನಿನ್ನನ್ನೆ ಹಿಡಕೊಂಡು ನಿನ್ನನ್ನೆ ಹೊಡೆಯುತ್ತೆ” ಎಂದು ಕಣ್ಣು ರೆಪ್ಪೆಯನ್ನು ಕುರಿತು ಹೇಳುವಾಗ ಇಂಥದು ಸಾಧಿತವಾಗುವುದು. ಇಲ್ಲಿಯ ‘ನಿನ್ನ’ ಸಂಭೋಧನೆ ಒಗಟಿಗೆ ವ್ಯಕ್ತೀಕರಣದ ಭಾವನೆ ಬರುವಂತೆ ಮಾಡುತ್ತದೆ. ಆದರೆ ಪ್ರಥಮ ಪುರುಷದಲ್ಲಿ ಅವನು, ಅವಳು ಮತ್ತು ಅದು ಎಂಬ ಭೇದಗಳಿರುವುದರಿಂದ ಒಗಟಿನ ರಚನೆ ಈ ಎಲ್ಲದರಲ್ಲೂ ಇದ್ದರೂ ಮಾನವೀಕರಣ ಎಲ್ಲ ಸಂದರ್ಭಗಳಲ್ಲೂ ಸಾಧ್ಯವಾಗುವುದಿಲ್ಲ. ಅಣಬೆ ಕುರಿತ “ಅವರನ್ನೆಣಿಸಬಹುದು ಅವರ ನಿರಿಗೆ ಎಣಿಸಾಕೊಗೋದಿಲ್ಲ ಎಂಬುದರಲ್ಲಿ ಪ್ರಥಮ ಪುರುಷದ ಅಭಿವ್ಯಕ್ತಿಯನ್ನು ಕಾಣಬಹುದು.

ಒಗಟಿನ ಅಭಿವ್ಯಕ್ತಿ ರೀತಿಯಲ್ಲಿ ಸಂಭಾಷಣಾ ತಂತ್ರವೂ ಒಂದು. ಇದರಲ್ಲಿ ಭಾಷೆ ನಾಟಕೀಯವಾಗುವುದರ ಜೊತೆಗೆ ಪರಿಚಿತ ಒಗಟಿನ ರೂಪದಿಂದ ವಿಶಿಷ್ಟಗೊಳ್ಳುತ್ತದೆ. ಎರಡು ಪಾತ್ರಗಳನ್ನು ಎದುರು – ಬದರು ನಿಲ್ಲಿಸಿ ಸಂವಾದಿಸುವುದರ ಮೂಲಕ ಕ್ರಿಯೆಯನ್ನು ವ್ಯಂಗ್ಯದ ಹಾದಿಗೆ ಒಯ್ಯುವ ತಂತ್ರ ಅಪರೂಪವಾದುದು. ವಾಸ್ತವವಾಗಿ ಈ ಒಗಟುಗಳು ಅನುಭವದ ನೆಲೆಯಲ್ಲಿ ನಿಂತು ವಿಡಂಬಿಸುವಂತೆ ತೋರುತ್ತವೆ. ಆದ್ದರಿಂದಲೇ ಇದು ಹಾಸ್ಯಕ್ಕೂ ವಸ್ತುವಾಗಿ ಬಿಡುತ್ತದೆ. ಈ ಬಗೆಯ ಒಗಟುಗಳು ವಿರಳವಾಗಿ ಮಾತ್ರ ದೊರೆಯುತ್ತದೆ; ಒಂದನ್ನು ಮಾತ್ರ ಇಲ್ಲಿ ಉದಾಹರಿಸಬಹುದು.

‘ನೀನೇನ್ ನೋಡಿ ನನ್ನ’?
‘ನಾನೇನ್ಮಾಡ್ದೆ ನಿನ್ನ?’
‘ನಿನ್ನ ನೋಡಿ ನಿಮ್ಮೋರು ತಂದವ್ರೆ ನನ್ನ!’

ಒಗಟಿನಲ್ಲಿರುವುದು ಬೆಕ್ಕು ಮತ್ತು ಇಲಿಗಳ ನಡುವಿನ ಸಂವಾದ. ಇಲಿಗಳು ಹೆಚ್ಚಿ ಮನೆಯವರು ಬೆಕ್ಕನ್ನು ತಂದಾಗ ಉಂಟಾದ ಪರಿಣಾಮಗಳನ್ನು ಗಂಭೀರವಾಗಿ ಚಿತ್ರಿಸುತ್ತದೆ ಇಲ್ಲಿಯ ಒಗಟು. ಇಲಿಗಳೇ ಪಾರುಪತ್ಯೆ ನಡೆಸಿತ್ತಿದ್ದ ಮನೆಗೆ ಬೆಕ್ಕೊಂದು ಬಂದಾಗ, ಅಪರಿಚಿತವಾದ ಅದನ್ನು ಆಶ್ಚರ್ಯದಿಂದ ನೋಡಿರಬೇಕು. ಆಗ ಬೆಕ್ಕು ‘ನೀನೇನ್ ನೋಡಿ ನನ್ನ?’ ಎಂದು ಪ್ರಶ್ನಿಸಿತು. ಈ ಮಾತಿನಲ್ಲಿ ಸಾಕಷ್ಟು ಗರ್ವವಿರುವುದು ಸ್ಪಷ್ಟ. ಪರಿಣಾಮವಾಗಿ ಸುಲಭವಾಗಿ ಊಹಿಸಿದ ಇಲಿ. ‘ನಾನೇನ್ಮಾಡ್ದೆ ನಿನ್ನ?’ ಎಂದು ಉತ್ತರಿಸಿತು. ಇದರಲ್ಲಿ ದೈನ್ಯ ಭಾವದೊಡನೆ ಯಾಚನೆಯೂ ಇರುವಂತಿದೆ. ಮುಂದಿನ ಸಾಲಿನಲ್ಲಿ ಇಲಿಯ ಕಾಟ ಹೆಚ್ಚಿ ಮನೆಯವರು ಬೆಕ್ಕನ್ನು ತಂದದ್ದರ ಕ್ರಿಯೆ ಬಿಚ್ಚಿಕೊಳ್ಳುತ್ತದೆ; ‘ನಿಮ್ಮೋರು ತಂದವ್ರೆ ನನ್ನ’ ಎಂಬ ಪದದಲ್ಲಿ ಇಲಿ ಹೆಚ್ಚಿದ್ದ ಮನೆಯವರೇ ತಂದಿರುವಾಗ ಸುಮ್ಮನಿರುವುದಾದರೂ ಹೇಗೆ ಎಂಬ ಬೆಕ್ಕಿನ ತಿರಸ್ಕಾರಪೂರ್ಣ ಧ್ವನಿಯೂ ಅಡಕವಾಗಿದೆ. ಕಡೆಗೆ ಬೆಕ್ಕಿಗೆ ಇಲಿ ಬಲಿಯಾಗುವ ಪರಿಣಾಮವನ್ನು ಸಹಜವಾಗಿಯೇ ಅರ್ಥಮಾಡಿಕೊಳ್ಳಬಹುದು. ಹೀಗೆ ಬೆಕ್ಕು ಇಲಿಗಳನ್ನು ಮುಖಾಮುಖಿಯಾಗಿಸಿ ಅವುಗಳ ಸ್ವಭಾವವನ್ನು ಅವೇ ಪರಿಚಯಮಾಡಿಕೊಳ್ಳುವಂತೆ ಅಭಿವ್ಯಕ್ತಿ ಇರುವುದು ಮಹತ್ತ್ವ ಅಂಶ. ಈ ಒಗಟು ತಾಂತ್ರಿಕ ಸೂಕ್ಷ್ಮತೆಗೂ ಕಲಾತ್ಮಕತೆಗೂ ನಿದರ್ಶನವಾಗಿದೆ. ಮಿಗಿಲಾಗಿ ಉತ್ತಮ ಮಧ್ಯಮ, ಪ್ರಥಮ ಪುರುಷಗಳೆಲ್ಲವೂ ಈ ಒಂದೇ ಒಗಟಿನಲ್ಲಿ ಕೆಲಸಮಾಡಿರುವುದು ಸಂವಾದ ರೂಪದ ಅಭಿವ್ಯಕ್ತಿ ತಂತ್ರಕ್ಕೆ ಒಂದು ಮಾದರಿಯನ್ನು ಸೃಷ್ಟಿಸಿದಂತಾಗಿದೆ. ಸಂವಾದ ತಂತ್ರದಂತೆಯೇ ಕಥಾತಂತ್ರವೂ ಒಗಟಿನ ಒಂದು ಮಾದರಿ.

ಸಾಮಾನ್ಯವಾಗಿ ಒಗಟಿನ ಅರ್ಥವನ್ನು ಮುಚ್ಚಿಹೇಳುವುದೇ ಉದ್ದೇಶ. ಬಾಹ್ಯರಚನೆಯಲ್ಲಿಯ ಸಾದೃಶ್ಯಗಳನ್ನು ಗಮನಿಸಿ ಅನುಮಾನದ ಮೂಲಕ ಉತ್ತರ ಕಂಡುಹಿಡಿಯುವಂತೆ ಕೌಶಲವಿರುತ್ತದೆ. ಅಂದರೆ ಬಾಹ್ಯರಚನೆ ಒಂದು ಗೂಢದಿಂದ ರೂಪಕ ಸದೃಶ ಹೇಳಿಕೆ ಎಂದಾಯಿತು. ಆದರೆ ಕೆಲವೊಮ್ಮೆ ವಾಚ್ಯಾರ್ಥದಲ್ಲಯೇ ಉತ್ತರವಿರುವಂತೆ ವಾಕ್ಯಗಳನ್ನು ಜೋಡಿಸಿರುವ ಅಭಿವ್ಯಕ್ತಿ ತಂತ್ರವಿರುತ್ತದೆ. ಇಂಥ ಸಂದರ್ಭಗಳಲ್ಲಿ ಉತ್ತರ ಹೇಳುವುದು ಸುಲಭವಾದರೂ, ಪರಿಚಿತ ರೀತಿಯಲ್ಲಿ ಉತ್ತರ ಹುಡುಕಲು ಹೋಗಿ ಇದನ್ನು ಗಮನಿಸದೆಯೇ ಮೋಸ ಹೋಗುವ ಸಾಧ್ಯತೆಗಳಿರುತ್ತವೆ. ಚತುರಬುದ್ಧಿಯ ಈ ರೀತಿಯ ತಂತ್ರವಿನ್ಯಾಸಕ್ಕೆ ಒಂದು ನಿದರ್ಶನ ಕೊಡಬಹುದು.

ಅಂಗರುಸುತ್ತೀಲಿ ನಿಂಗಣ್ಣ ಕೂತವ್ನೆ
ಮೊಲದೋರಪ್ಪನಿಗೆ ಮೂರೇ ಕಾಲು
ತೇವಗೆಯೋರಪ್ಪ ತೇವೇ ಹೋಗ್ತಾನೆ
ಗಂಗಳದೋರಪ್ಪ ಮುಳುಗೇ ಹೋಗುತ್ತಾನೆ

ಮೊದಲ ಸಾಲಿಗೆ ಉತ್ತರ ಎರಡನೆಯ ಸಾಲಿನಲ್ಲಿ ಬರುವ ‘ಮೊಲ’, ಎರಡನೆಯ ಸಾಲಿನ ಉತ್ತರ ಮೂರನೆಯ ಸಾಲಿನಲ್ಲಿ ಬರುವ ‘ತೇವಟಿಗೆ’, ಮೂರನೆಯ ಸಾಲಿಗೆ ಉತ್ತರ ನಾಲ್ಕನೆಯ ಸಾಲಿನ ‘ಗಂಗಳ’. ಆದರೆ ನಾಲ್ಕನೆಯ ಸಾಲಿನ ಉತ್ತರವನ್ನು ಊಹೆಯಿಂದ ಕಂಡುಹಿಡಿಯಬೇಕಾಗುತ್ತದೆ; ಇದಕ್ಕೆ ಉತ್ತರ ‘ಚೆಂಬು’ ಎಂದು. ಹೀಗೆ ರಚನೆಯ ಸಂದರ್ಭದಲ್ಲಿಯೇ ಪ್ರಶ್ನೆಯನ್ನೂ ಉತ್ತರವನ್ನೂ ಹುಡುಕಿಕೊಳ್ಳುವಂತೆ ಮಾಡಿರುವುದು ಒಗಟಿಗೆ ಮತ್ತೊಂದು ರೀತಿಯ ಸೌಂದರ್ಯವನ್ನು ಉಂಟುಮಾಡಿದೆ. ಈ ಬಗೆಯ ಅಭಿವ್ಯಕ್ತಿ ತಂತ್ರ ಒಗಟಿಗೆ ಹೊಸದೊಂದು ಆಯಾಮವೆನಿಸಿದರೂ, ನಿದರ್ಶನಗಳು ಮಾತ್ರ ಕಡಿಮೆ. ಒಂದು ಪಕ್ಷ ಇದೇ ಬಗೆಯ ರಚನೆಗಳೇ ಇದ್ದಿದ್ದರೆ ಬುದ್ಧಿ ಪ್ರಚೋದನೆಯ ಒಗಟಿನ ಮುಖ್ಯ ಉದ್ದೇಶವೇ ವಿಫಲವಾಗುತ್ತಿತ್ತು. ಒಗಟಿಗೆ ಗೂಢೋಕ್ತಿಯೇ ನಿಜವಾದ ಗುರಿ. ಅದರಿಂದಲೇ ಅದಕ್ಕೆ ಸೌಂದರ್ಯ; ಬುದ್ಧಿಗೆ ಮೀಟುಗೋಲು. ಇಂಥ ರಚನೆಗಳೂ ಒಂದು ಹಂತದಲ್ಲಿ ‘ಏಕತಾನತೆ’ ಯನ್ನು ಅನುಭವಿಸಬಹುದಾದ ಕಾರಣ ವೈವಿಧ್ಯಕ್ಕಾಗಿ ಅಲ್ಲೊಂದು ಇಲ್ಲೊಂದು ರೀತಿಯ ರಚನಾ ತಂತ್ರಗಳು ಕಾಣಿಸಿಕೊಂಡಿರಬಹುದು.

ಒಗಟುಗಳಲ್ಲಿ ಪ್ರಶ್ನೆ ಮತ್ತು ಉತ್ರಗಳೆಂಬ ಎರಡು ಭಾಗಗಳಿರುವುದು ತಿಳಿದ ವಿಷಯವೇ. ಒಗಟು ಬಿಡಿಸುವುದರ ಮೇಲೆ ಫಲಾಫಲಗಳು ನಿರ್ಧರಿತವಾಗುತ್ತಿದ್ದುದನ್ನು ಕೇಳಿದ್ದೇವೆ. ಬಿಡಿಸಿ ಗೆದ್ದವನಿಗೆ ಬಹುಮಾನವನ್ನೂ, ಬಿಡಿಸಲಾರದೆ ಸೋತವನಿಗೆ ಶಿಕ್ಷೆಯನ್ನೂ ಕೊಡಲಾಗುತ್ತಿದ್ದ ವಿಚಾರಗಳಿವೆ. ಈ ಪರಿಪಾಠದ ಉಳಿಕೆಗಳಾಗಿಯೋ ಏನೋ ಒಗಟಿನ ಅಂತ್ಯದ ವಾಕ್ಯಗಳು ಬಿಡಿಸುವವನಿಗೆ ಸವಾಲುಗಳಾಗಿದ್ದುದನ್ನು ಕೆಲವೊಮ್ಮೆ ನೋಡುತ್ತೇವೆ. ಇವು ಕೂಡ ಅಭಿವ್ಯಕ್ತಿತಂತ್ರದ ಭಾಗವಾಗಿಯೇ ಬರುತ್ತವೆ. ಪ್ರಸ್ತುತ ಅಂತಹ ಕೆಲವು ವಾಕ್ಯತಂತ್ರಗಳನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ಕೆಲವೊಮ್ಮೆ ‘ನಾನಾರು’ ‘ಹೇಳಣ್ಣ’ ಎಂಬ ಸರಳ ತಂತ್ರಗಳಲ್ಲಿಯೇ ಪರ್ಯವಸಾನವಾಗಬಹುದು. ಈ ತಂತ್ರಗಳು ಸಾಮಾನ್ಯವಾಗಿ ಮೂರು ರೀತಿಯವು. ಒಡೆಸಿದವನಿಗೆ ದೊರೆಯುವ ಫಲಗಳನ್ನು ಹೇಳುವ ತಂತ್ರಗಳು ಒಂದು ರೀತಿಯವಾದರೆ, ಒಡೆಸಲಾರದವನಿಗೆ ಸಿಗುವ ಅಪಮಾನವನ್ನು ಕುರಿತವು ಎರಡನೆಯದು; ಮೂರನೆಯದು ಸಮತೋಲನ ರೂಪದ್ದು, “ಒಡಬಿದವನಿಗೆ ಮುನ್ನೂರು ಹೋಳಿಗೆ ಮೂರು ಸೇರು ತುಪ್ಪ”, “ಆರುಬಳ್ಳ ಎಣ್ಣೆ ಅರವತ್ತು ಕಜ್ಜಾಯ”, “ಒಡೆದವರಿಗೆ ಹಾಲು ಅನ್ನ, ಹೇಳಿದವರ ಕೈಗೆ ಚಿನ್ನದ ಕಟ್ಟು” ಇತ್ಯಾದಿ ಸಾಲುಗಳು ಮೊದಲ ತಂತ್ರಕ್ಕೆ ಹೆಸರಾದವು. ಎರಡನೆಯ ರೀತಿಯ ಅಭಿವ್ಯಕ್ತಿಗೆ “ಇದನ್ನು ಹೇಳದಿದ್ದವರಗೆ ಹದಿನೈದು ದಿನದಲ್ಲಿ ಅಗ್ನಿ ಪ್ರವೇಶ”, “ಒಡೆದರೆ ಒಡೀಬಹುದು ಒಡೀದಿದ್ರೆ ರಾಜಪ್ಪನ ಹಟ್ಟಿ ಕರಕಾಯಬಹುದು” ಎಂಬಿವು ನಿದರ್ಶನವಾಗುತ್ತವೆ. ಹೀಗೆ ಯಾವ ನಿರ್ಧಾರವನ್ನೂ ಪ್ರಕಟಿಸದೆ ಹೇಳತಕ್ಕವನಿಗೆ ದೊಡ್ಡದೇನೂ ಅಲ್ಲವೆಂದು ಸಮತೋಲವನ್ನು ಕಾಪಾಡಿಕೊಳ್ಳುವುದರ ಮೂಲಕ ಕೇಳುಗನದಲ್ಲಿ ಆಸಕ್ತಿ ಹುಟ್ಟಿಸುವ ರೀತಿ ತಂತ್ರವನ್ನು ಅನುಸರಿಸಲು “ಇದ ಹೇಳಬಲ್ಲ ಜಾಣನಿಗೆ ಅರಿವಿಲ್ಲ” ಎಂಬಂತಹ ವಾಕ್ಯಗಳು ಬಂದಿವೆ. ಇಂಥವು ಎಲ್ಲ ಕಡೆಯೂ ಪುನರಾವರ್ತಿಸುವುದರಿಂದ ಇವನ್ನು ಸಾರ್ವತ್ರಿಕ ತಂತ್ರರೂಪಗಳೆಂದು ಪರಿಗಣಿಸಬಹುದು. ಹೀಗೆ ಹೇಳುವುದರಿಂದ ಕೇಳುಗನನ್ನು ಕೆರಳಿಸಿ ಅವನಿಂದ ಒಗಟು ಬಿಡಿಸಲು ಪ್ರಯತ್ನಿಸಬಹುದು, ಆ ಮೂಲಕ ಈ ಕ್ರಿಯೆಯಲ್ಲಿ ಅಭಿರುಚಿಯನ್ನು ಬೆಳೆಸಬಹುದು.

ಒಗಟುಗಳು ಜನಪ್ರಿಯವಾಗಿರಲು ಅವುಗಳ ರಹಸ್ಯಾಭಿವ್ಯಕ್ತಿ ಎಷ್ಟು ಕಾರಣವೋ ಅಷ್ಟೇ ಕಾರಣ ಅವುಗಳ ಪ್ರಾಸಾನುಪ್ರಾಸಗಳು. ಈ ‘ಆಲಂಕಾರಿಕ ಅಭಿವ್ಯಕ್ತಿ’ ಇಲ್ಲದಿದ್ದರೆ ಒಗಟು ಯಾತಕ್ಕೂ ಯಾರಿಗೂ ಬೇಡವಾದ ವಸ್ತುವಾಗುತ್ತಿತ್ತು. ಮನರಂಜನೆಯ ಮೂಲಧನವೇ ಇದು. ಮಕ್ಕಳಿಗೆ ಒಗಟು ಹೆಚ್ಚು ಜನಪ್ರಿಯವಾಗಲು ಇದೇ ಕಾರಣ. ಇದು ಉದ್ದಿಷ್ಟವಾಗಿರುವ ಬೋಧನಾತ್ಮಕತೆಯೂ ಇದರಿಂದ ಸಫಲವಾಗುವುದು. ‘ಶಿಶುಪ್ರಾಸ’ ಗಳನ್ನು ಬಿಟ್ಟರೆ ಒಗಟುಗಳಲ್ಲಿಯೇ ಈ ಆಲಂಕಾರಿಕ ಸಾಧನಗಳು ಹೆಚ್ಚು. ಸುಲಭವಾಗಿ ನೆನಪಿಡುವುದಕ್ಕೂ ಬುದ್ಧಿಚಮತ್ಕಾರಕ್ಕೂ ಈ ಬಗೆಯ ಅಭಿವ್ಯಕ್ತಿಯಿಂದ ಬಹಳವಾಗಿ ಸಹಾಯಕವಾಗಿದೆ. ಒಗಟು ಅನುಭವದ ಅಭಿವ್ಯಕ್ತಿಯಾಗಿರುವುದಕ್ಕಿಂತ ಬುದ್ಧಿಯ ಚಮತ್ಕಾರವಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ಇದಕ್ಕೆ ವ್ಯವಸ್ಥೆ ಇಲ್ಲವೆಂದಲ್ಲ. ವಸ್ತುವಿನ ಕ್ರಿಯೆ ಅಥವಾ ವರ್ಣನೆಯ ಸಾದೃಶ್ಯ ಜ್ಞಾನವನ್ನು ತಂದುಕೊಡುವುದರಲ್ಲಿ ಅದರ ಪಾತ್ರ ದೊಡ್ಡದು.

ಜಾನಪದದ ಉಳಿದ ಪ್ರಕಾರಗಳಂತೆಯೇ ಒಗಟುಗಳು ಸಾಂಸ್ಕೃತಿಕವಾಗಿ ಮುಖ್ಯವಾಗಿವೆ. ಈ ಸಾಂಸ್ಕೃತಿಕ ಪ್ರಾಮುಖ್ಯವನ್ನು ಅವು ಉಪಯೋಗವಾಗುವ ಸಂದರ್ಭಗಳಿಂದ ಮತ್ತು ಅವುಗಳಲ್ಲಿ ಅಭಿವ್ಯಕ್ತವಾಗಿರುವ ಅಂಶಗಳಿಂದ ಗುರುತಿಸಬಹುದು. ಒಗಟುಗಳು ನಾಟಿ ಹಾಕುವಾಗ, ಕಳೆ ಕೀಳುವಾಗ, ಧಾನ್ಯ ಒಕ್ಕುವಾಗ ಬಳಕೆಯಾದಾಗ ಸಂದರ್ಭದ ದೃಷ್ಟಿಯಿಂದ ಸಾಂಸ್ಕೃತಿಕ ಅಂಶಗಳನ್ನು ಹೇಳುತ್ತವೆ. ಇಂಥ ಸಂದರ್ಭಗಳಲ್ಲಿ ಒಗಟುಗಳ ಬಳಕೆಯಿಂದ ಬೆಳೆ ಚೆನ್ನಾಗಿ ಬೆಳೆಯುತ್ತದೆ ಎಂಬ ಮಾಂತ್ರಿಕ ಕಾರಣವೊಂದು ಇರುತ್ತದೆ. ಇದನ್ನು ಬಿಟ್ಟರೆ ಅವು ವ್ಯಕ್ತಪಡಿಸುವ ಸಾಂಸ್ಕೃತಿಕ ವಿವರಗಳೇ ಮುಖ್ಯವಾಗುತ್ತವೆ. ಸಾಮಾನ್ಯವಾಗಿ ಇಂಥ ವಿಚಾರಗಳು ಹೆಚ್ಚು ಕಾಣಿಸಿಕೊಳ್ಳುವುದು ಧಾರ್ಮಿಕ ಒಗಟುಗಳಲ್ಲಿಯೇ ವೈನೋದಿಕ ಒಗಟುಗಳೂ ಕ್ವಚಿತ್ವಾದರೂ ಸಾಮಾಜಿಕವಾದ ಸಾಂಸ್ಥಿಕ ಸಂಗತಿಗಳನ್ನು ಅರುಹುತ್ತದೆ. ಇವು ಬಿಡಿ ಸಂಗತಿಗಳ ರೂಪದಲ್ಲಿರುತ್ತವೆಯೇ ಹೊರತು ಸಾಂಪ್ರದಾಯಿಕ ವ್ಯವಸ್ಥೆಯೊಂದನ್ನು ಕುರಿತಿರುವುದಿಲ್ಲ. ಕೌಟುಂಬಿಕ ಸಂಬಂಧಗಳನ್ನು ಒಗಟುಗಳು ಹೇಳುತ್ತವೆಯೇ ವಿನಾ ಇಡೀ ಅದರ ವ್ಯವಸ್ಥೆಯ ಬಗ್ಗೆ ಮಾತಾಡುವುದಿಲ್ಲ. ಕಣ್ಣುಗಳನ್ನು ಅಕ್ಕತಂಗಿಯರು ಎಂದು ಕಲ್ಪಿಸಿಕೊಂಡು “ಅಕ್ಕ ಅತ್ತರೆ ತಂಗೀನೂ ಅಳ್ತಾಳೆ” ಎನ್ನುವುದು ಇದಕ್ಕೆ ಒಂದು ಉದಾಹರಣೆ. ಇದಲ್ಲದೆ ಕೆಲವು ಸಮಯದಲ್ಲಿ ಸಾಮಾಜಿಕ ಪದ್ಧತಿಗಳಿಗೆ ನಿದರ್ಶನ ಸಿಕ್ಕಬಹುದು. ಈಗ “ಅಕ್ಕನ ಕೈಗೆ ಪಚ್ಚೆ ಕಡಗ ಹಾಕುವವರುಂಟು ತೆಗೆಯುವವರಿಲ್ಲ” ಎಂಬ ಒಗಟು. ಇದರ ಅರ್ಥ ಹಚ್ಚೆ. ಹಚ್ಚೆ ಒಂದು ಸಾಮಾಜಿಕ ಸಂಪ್ರದಾಯ. ಪ್ರಾಚೀನ ಕಾಲದಿಂದಲೂ ಎಲ್ಲ ಜನರಲ್ಲಿಯೂ ಕಾಣಸಿಗುವಂಥದ್ದು. ಇದಕ್ಕೆ ‘ಹಸಿರು’ ಎಂಬ ಪದ ಮತ್ತೆ ಹೆಂಗಸರು ಹಾಕಿಕೊಳ್ಳುತ್ತಿದ್ದ ಒಡವೆಯೊಂದನ್ನು ತಿಳಿಸುವುದಲ್ಲದೆ, ಕೈಗೆ ಹುಯ್ಸಿಕೊಳ್ಳುತ್ತಿದ್ದ ಹಚ್ಚೆಯ ವಿಧವನ್ನೂ ಗುರುತಿಸುವುದು. ‘ಕಡಗ’ ಧರಿಸುವುದು ಗೌರವದ ವಿಚಾರವಾದುದರಿಂದ, ಹಚ್ಚೆ ಹಾಕಿಸಿಕೊಳ್ಳುವುದೂ ಸಾಮಾಜಿಕ ಗೌರವವನ್ನೇ ಸೂಚಿಸುವುದು. ಒಮ್ಮೆ ಹಾಕಿಸಿಕೊಂಡ ಹಚ್ಚೆಯನ್ನು ಯಾವ ಕಾಲಕ್ಕೂ ತೆಗೆಯುವುದು ಸಾಧ್ಯವಿರುವುದಿಲ್ಲ.

ಸಾಂಪ್ರದಾಯಿಕವಾಗಿ ಕುಂಕುಮ ಪ್ರಿಯನಾದ ವಸ್ತು. ಸ್ತ್ರೀಯರು ನಮ್ಮ ಸಾಮಾಜಿಕ ಸಂದರ್ಭದಲ್ಲಿ ಅದನ್ನು ಒಡವೆಯೆಂದೇ ಪರಿಗಣಿಸಿದ್ದಾರೆ. ಇದು ದೇವರಿಗೂ ಒಂದು ಭಾಗವಾಗಿಯೇ ಪರಿಣಮಿಸಿದೆ. ಇಂಥ ಕುಂಕುಮವನ್ನು ಕುರಿತು “ತೂತಿಲ್ಲದ ಒಡವೆ ದೇವರಿಗೂ ಬೇಕು ದಿಂಡರಿಗೂ ಬೇಕು” ಎಂಬ ಒಗಟು ರಚಿತವಾಗಿದೆ. ಇದೇ ರೀತಿಯ ಒಂದು ವಿಶಿಷ್ಟ ಸಾಂಸ್ಕೃತಿಕ ಲಕ್ಷಣವಾದ ‘ತಾಲಿ’ ಕೂಡ. ಸ್ತ್ರೀಯರಿಗೆ ಇದು ಒಡವೆ ಮಾತ್ರವಾಗಿರದೆ, ವಿವಾಹ ಸಂಬಂಧದ ಪ್ರವೇಶವೂ ಆಗಿದೆ. ಮದುವೆ ಪದ್ಧತಿಯ ಒಂದು ಕ್ರಮವನ್ನು ವ್ಯಕ್ತಪಡಿಸುವುದರಿಂದ ನಮ್ಮ ಸಾಮಾಜಿಕ ಸಂದರ್ಭದಲ್ಲಿ ಇದೊಂದು ಮೌಲ್ಯವಾಗಿ ಪರಿಣಮಿಸಿದೆ. ಸಹಜವಾಗಿಯೇ ಈ ಸಂಪ್ರದಾಯ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಸೂಚಿಸುತ್ತವೆ. ಕೆಳಗಿನ ಒಗಟಿನಲ್ಲಿ ಇದು ವಿರಚಿತವಾಗಿದೆ.

ತೋಟ
ತೋಟದ ಸುತ್ತ ಬೇಲಿ
ಸಾವಿರ ರೂಪಾಯಿನ ಬೀಗಸ
ಯಾರು ಬಂದ್ರೂ ಅದನ್ನ ತೆಗೆಯೋಕಾಗಲ್ಲ

ಇದರಲ್ಲಿ ‘ತೋಟ’ ಹೆಣ್ಣನ್ನೂ ‘ಬೇಲಿ’ ಹೆಣ್ಣಿನ ಕೊರಳನ್ನು ಬಳಸಿರುವ ಕರಿಮಣಿಸರವನ್ನೂ, ‘ಬೀಗ’ ಆ ಸರಕ್ಕೆ ಕಟ್ಟಿರುವ ‘ತಾಲಿ’ಯನ್ನೂ ರೂಪಕವಾಗಿ ಬಳಸಲಾಗಿದೆ. ‘ಬೀಗ’ದ ಹಿಂದಿನ ‘ಸಾವಿರ ರೂಪಾಯಿನ’ ಒತ್ತು ತಾಲಿಗಿರುವ ಮಹತ್ತ್ವವನ್ನು ಸಾಂಕೇತಿಕವಾಗಿ ತಿಳಿಸುವಂತಿದೆ. ಆ ಮೂಲಕ ತೆರಕೊಟ್ಟು ಹೆಣ್ಣನ್ನು ಪಡೆಯುತ್ತಿದ್ದ ಕಾಲವೊಂದರ ಅರ್ಥವನ್ನು ಧ್ವನಿಸುತ್ತದೆ. ಯಾರೂ ಆ ಬೀಗವನ್ನು ತೆಗೆಯುವುದಕ್ಕೆ ಆಗುವುದಿಲ್ಲ ಎಂಬುದು ತಾಲಿಕಟ್ಟಿದವನಿಗೆ ಮಾತ್ರ ಆಕೆ ಹೆಂಡತಿಯೆಂದೂ ಬೇರಾರ ವಸ್ತುವಲ್ಲವೆಂದೂ ಸಕಾರಣವಾಗಿಯೇ ಒಗಟು ಸೂಚಿಸುವುದು. ಇದರಲ್ಲಿ ‘ಏಕಪತ್ನಿತ್ವ’ ವ್ಯವಸ್ಥೆಯ ಸೂಚನೆಯೂ ಇದೆ. ಹೀಗೆ ಈ ಒಗಟು ಸಾಂಸ್ಕೃತಿಕ ವಿಚಾರವೊಂದನ್ನು ಹೇಳುತ್ತಲೇ ಅಭಿವ್ಯಕ್ತಿಯಲ್ಲಿ ಸಾಹಿತ್ಯಿಕ ಸೌಂದರ್ಯವನ್ನು ಉಳಿಸಿಕೊಂಡಿರುವುದು ಮಹತ್ತ್ವದ್ದಾಗಿದೆ.

ಸಮಾಜದಲ್ಲಿ ಕೆಲವು ಹೆಸರುಗಳ ಬಗಗೆ ಕೆಲವೊಂದು ‘ನಿಷಿದ್ಧತೆ’ (Taboo) ಬೆಳೆದುಕೊಂಡಿರುವುದು ಸಾಂಸ್ಕೃತಿಕವಾಗಿ ಗಮನಾರ್ಹ ಅಂಶ. ಹೆಸರಿನಲ್ಲಿ ಏನಿದೆ, ಅದು ಗುರುತಿಸುವುದಕ್ಕೆ ಅಂಕತಿವೆಲ್ಲಿದೆ ಎಂದು ಹೇಳಿದರೂ ಅದರ ಸುತ್ತ ಭಾವಕೋಶವೇ ಬೆಳದಿರುವುದುಂಟು. ಈ ಅಂಶವೇ ಹೆಸರುಗಳಿಗೆ ಸಂಪ್ರದಾಯ ಬೆಳೆಯಲು ದಾರಿಮಾಡಿಕೊಟ್ಟಿರಬೇಕು. ಈ ಕಾರಣಕ್ಕಾಗಿಯೇ ಗಿರಿಜನರಲ್ಲಿ ಹೆಸರೇ ಇಲ್ಲದವರು ಇದ್ದಾರಂತೆ. ಸಾಮಾನ್ಯವಾಗಿ ಹೆಂಡತಿ ಗಂಡನ ಹೆಸರನ್ನು ಹೇಳಲು ನಿರಾಕರಿಸುತ್ತಾಳೆ. ಹೆಸರಿನಲ್ಲಿ ಗಂಡನ ಪ್ರಾಣವಿದ್ದು ಹೆಸರನ್ನು ಉಚ್ಚಿಸಿದಾಗ ದುಷ್ಟಶಕ್ತಿಗಳು ಪ್ರವೇಶಿಸಿ ಗಂಡನ ಪ್ರಾಣಕ್ಕೆ ಹಾನಿಯಾಗಬಹುದೆಂಬ ನಂಬಿಕೆ ಇದರ ಹಿಂದಿದೆ. ಹಾಗೆಯೇ ಕೆಲವು ದೇವತೆಗಳ, ರಾಜರ ಮತ್ತು ರೋಗಪೀಡಿತ ಪೂರ್ವಜರ ಹೆಸರನ್ನು ಹೇಳಲು ನಿಷೇಧವಿದೆ. ಒಂದು ಒಗಟು ಹೀಗಿದೆ:

ಹನ್ನೆರಡನೇ ಮಳೆ ಹೆಸರಿನವಳ
ತಾಯಿಯ ತಮ್ಮನ
ಕತ್ತಲಲಿ ಕೊಂದ
ಅಗ್ರಜನ ಪಿತನಾರು
ನಿಮಗೆ ಗೊತ್ತೆ?

ಇದರ ಅರ್ಥ ‘ಯಮಧರ್ಮರಾಯ’ ಎಂದು ಕೊಡಲಾಗಿದೆ. ಹನ್ನೆರಡನೆಯ ಮಳೆ ‘ಉತ್ತರೆ’. ಮಹಾಭಾರತದಲ್ಲಿ ವಿರಾಟನ ಮಗಳೂ ಉತ್ತರನ ತಂಗಿಯೂ ಆದ ‘ಉತ್ತರೆ’ ಯ ತಾಯಿ ‘ಸುಧೀಷ್ಠಾದೇವಿ’. ಈಕೆಯ ತಮ್ಮ ‘ಕೀಚಕ’. ಈತನನ್ನು ಕತ್ತಲಲ್ಲಿ ಕೊಂದವನು ‘ಭೀಮ’. ಭೀಮನ ಅಗ್ರಜ ‘ಧರ್ಮರಾಯ’. ಧರ್ಮರಾಯನ ಪಿತ ‘ಯಮ’. ಈತನ ವರದಿಂದಲೇ ಧರ್ಮರಾಯ ಹುಟ್ಟಿದನೆಂಬುದು ಮಹಾಭಾರತದ ಕಥೆ. ಯಮದೇವ ಲಯಮೂರ್ತಿಯಾದುದರಿಂದ ಅವನ ಹೆಸರು ಹೇಳುವುದು ಅಶುಭವೆಂದು ಜನತೆ ಅದರ ಸುತ್ತ ‘ನಿಷಿದ್ಧತೆ’ ಯನ್ನು ಕಟ್ಟಿಕೊಂಡಿರಬೇಕು. ಇದೊಂದು ಪಾಂಡಿತ್ಯಜನ್ಯ ಒಗಟೆಂದು ತೋರುತ್ತದೆ.

ಆದಿಮಾನವ ಸ್ವೇಚ್ಛಾ ಪ್ರವೃತ್ತ ಜೀವನಕ್ಕೆ ಕಟ್ಟಲೆಗಳನ್ನು ಹಾಕಿಕೊಂಡಾಗ ವಿವಾಹ, ಕುಟುಂಬ, ಬಂಧುತ್ವ ಮೊದಲಾದ ಸಾಂಸ್ಥಿಕ ಚಟುವಟಿಕೆಗಳು ಪ್ರಾರಂಭವಾದುವು. ಇವು ಸಮಾಜದ ಕ್ಷೇಮಕಾರಿ ಸಾಧನಗಳಾಗಿ ಇವೊತ್ತಿಗೂ ಮುಂದುವರಿಯುತ್ತಿವೆ. ಮಾನವ ಹೀಗೆ ಕಟ್ಟಳೆಗಳನ್ನು ನಿಯಮಿಸಿಕೊಳ್ಳುವಾಗ ಜೊತೆಯಲ್ಲಿಯೇ ಅವುಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆಗಳನ್ನೂ ವಿಧಿಸಿಕೊಂಡನು. ವ್ಯವಸ್ಥೆಯ ಜೊತೆಯಲ್ಲಿ ಉಲ್ಲಂಘಿಸುವ ಪ್ರವೃತ್ತಿಗಳೂ ಉಳಿದವು. ಜನಪದ ಸಾಹಿತ್ಯದಲ್ಲಿ ವ್ಯವಸ್ಥೆಯ ಚಿತ್ರವಿರುವಂತೆಯೇ ಉಲ್ಲಂಘನೆಗಳ ಚಿತ್ರವೂ ಇದೆ. ಸಮಾಜಬಾಹಿರವೂ ಅನೈತಿಕವೂ ಆದ ಚಟುವಟಿಕೆಗಳನ್ನು ಗೀತೆಗಳೂ ಗಾದೆಗಳೂ ಬಹಳವಾಗಿ ದಾಖಲಿಸಿವೆ. ಜನಪದ ಕಥೆಗಳಲ್ಲಿಯೂ ಇಂಥ ಚಿತ್ರಗಳು ವಿರಳವಾಗಿ ಸಿಗುತ್ತವೆ. ಒಗಟುಗಳಲ್ಲಿ ಇಂಥ ಸಾಮಾಜಿಕವಾದ ಕ್ರಿಯೆಗಳು ವ್ಯಕ್ತಗೊಂಡಿರುವುದು ಅಪರೂಪ. ಒಂದು ಪಕ್ಷ ಇರುವ ಚಿತ್ರಗಳೂ ಕಥೆಗಳಿಂದ ಪ್ರಭಾವಿತವಾಗಿರುವಂತೆ ತೋರುತ್ತವೆ. ಒಂದು ನಿದರ್ಶನ ಇಲ್ಲಿದೆ:

ಒಂದು ವರ ಕೊಟ್ಟು ತರಿಸಿದೆ
ಎರಡು ವರ ಕೊಟ್ಟು ಮಾಡಿಸಿದೆ
ಮೂರು ವರ ಕೊಟ್ಟು ತುಂಬಿದೆ
ನಾಕು ವರ ಕೊಟ್ಟು ಕೈಗೆ ಕಟ್ಟಿಸಿಕೊಂಡೆ
ಇದನ್ನು ಹೇಳದಿದ್ದವರಿಗೆ
ಹದಿನೈದು ದಿನದಲ್ಲಿ ಅಗ್ನಿಪ್ರವೇಶ

ಇದರ ಅರ್ಥ ‘ತಾಯಿತ’ ಎಂದಿದೆ. ರಚನೆಯನ್ನು ನೋಡಿದರೆ ‘ತಾಯಿತ’ ಆಗುವ ಕ್ರಿಯೆಯನ್ನು ಹೇಳುವಂತಿದೆ. ಇದು ಒಗಟಿನ ಸಾದೃಶ್ಯಜ್ಞಾನಕ್ಕೆ ಒಳ್ಳೆಯ ಉದಾಹರಣೆ. ಆದರೆ ಇದಕ್ಕಿಂತಲೂ ಆಳವಾದ ವಿಚಾರವೊಂದು ಇದರಲ್ಲಿದೆ. ಅಕ್ರಮ ಪ್ರಣಯವೊಂದರ ಚಿತ್ರವಿದು. ರಾಜನಿಲ್ಲದಾಗ ರಾಣಿಯ ಮನೆಗೆ ಸರ್ಪದ ರೂಪದಲ್ಲಿ ಪ್ರಣಯಿನೊಬ್ಬ ಬರುತ್ತಿದ್ದ. ರಾಜನು ಇದನ್ನು ಅರಿಯ. ಹಾವು ರಾಣಿಗೆ ತೊಂದರೆ ಮಾಡಬಹುದೆಂದು ಹೊಡೆಸ ಹಾಕಿದ. ರಾಣಿ ಆಂತಕಗೊಂಡಳು. ಒಂದು ದಿವಸ ರಾಜ ತಾನು ಮಾಡಿದ ಕೆಲಸವನ್ನು ಹೇಳಿದ. ರಾಣಿ ಹಾವಿನ ಅಸ್ಥಿಪಂಜರವನ್ನು ಒಂದು ವರಹಕೊಟ್ಟು ತರಿಸಿ, ಎರಡು ವರಹಕೊಟ್ಟು ತಾಯಿತ ಮಾಡಿಸಿ, ಮೂರು ವರಹ ಕೊಟ್ಟು ತುಂಬಿಸಿ, ನಾಲ್ಕು ವರಹ ಕೊಟ್ಟು ತೋಳಿಗೆ ಕಟ್ಟಿಕೊಂಡಳು. ರಾಜರಾಣಿಯರು ಸರಸದಲ್ಲಿದ್ದಾಗ ರಾಣಿ ರಾಜನಿಗೆ ಈ ಒಗಟು ಹೇಳಿದಳು. ರಾಜ ಒಡೆಸಲಾರದೆ ಅಗ್ನಿಪ್ರವೇಶ ಮಾಡಲು ಸನ್ನಾಹದಲ್ಲಿರುವಾಗ ಗಂಡುಭೇರುಂಡ ಹೆಣ್ಣು ಭೇರುಂಡ ಪಕ್ಷಿಗಳ ಮೂಲಕ ತಿಳಿದ ಉತ್ತರವನ್ನು ರಾಜನ ತಂಗಿ ರಾಜನಿಗೆ ಹೇಳಿದ್ದರಿಂದ ದೊರೆ ಒಗಟು ಒಡೆಸುವನು. ರಾಣಿ ಅಗ್ನಿ ಪ್ರವೇಶ ಮಾಡುವಳು. ಇದರಲ್ಲಿ ವಿವಾಹ ವ್ಯವಸ್ಥೆಯನ್ನು ಉಲ್ಲಂಘಿಸಿದ ರಾಣಿಗೆ ಶಿಕ್ಷೆಯಾಗುವುದನ್ನು ಕಾಣುತ್ತೇವೆ. ಈ ಒಗಟು ಸಾಮಾಜಿಕ ಸಮಸ್ಯೆಯೊಂದನ್ನು ಹೇಳುವುದರಿಂದ ಸಾಂಸ್ಕೃತಿಕ ವಿಚಾರದಲ್ಲಿಯೇ ನಿಲ್ಲುತ್ತದೆ.

ಹೀಗೆ ಒಗಟು ಸಾಹಿತ್ಯಿಕವಾಗಿ, ತಾಂತ್ರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮಹತ್ತ್ವ ಪಡೆದಿದೆ. ಪರಿಮಿತ ವ್ಯಾಪ್ತಿಯಲ್ಲಿಯೇ ಸ್ವೋಪಜ್ಞ ತಿಳಿವಳಿಕೆಯನ್ನು ನೀಡುವುದು ಅದರ ವಿಶೇಷವೆನ್ನಬೇಕು. ಬೌದ್ಧಿಕ ವ್ಯವಹಾರಕ್ಕೆ ಜನಪದ ಸಾಹಿತ್ಯದಲ್ಲಿಯೇ ಹೆಸರಾದುದು ಒಗಟು. ಆದರೆ ಜನಪದ ಸಾಮಾಜಿಕ ಅಥವಾ ಸಾಂಸ್ಕೃತಿಕ ಚಟುವಟಿಕೆಗಳಿಂದ ಒಗಟು ದೂರವಾಗಿಲ್ಲ ಎಂಬುದೇ ಜಾನಪದದ ಒಟ್ಟು ಕಾರ್ಯವನ್ನೇ ಅದು ಸೂಚಿಸುತ್ತದೆ ಎಂದಂತಾಯಿತು.

– ಆರ್.ಜಿ.