ಒಡಿ ಕೇರಳದ ಹಬ್ಬಗಳಲ್ಲಿ ಸಾಮಾನ್ಯವಾಗಿ ಪ್ರಚಾರದಲ್ಲಿದ್ದ ಒಂದು ಅಭಿಚಾರ ಕ್ರಿಯೆ ಒಡಿವಿದ್ಯೆ. ಈ ಕ್ರಿಯೆಯನ್ನು ಮಾಡುವವರನ್ನು ಆ ಸಂದರ್ಭದಲ್ಲಿ ‘ಒಡಿಯನ್ಮಾರ್'(ಒಡಿಯನ್ನರು) ಎಂದು ಕರೆಯುತ್ತಿದ್ದರು. ಸಮಾಜದ ಕೆಳಸ್ತರದಲ್ಲಿದ್ದ ಕೊರಗ, ಕುರುಮ, ಕುರುಚ್ಯ, ಕೋಪಾಳ, ಪಣಿಯ, ಪರಮ, ಪಾಣ, ಪುಳ್ಳುವ, ಮಲಯ, ಪೇಲ ಮುಂತಾದ ವಿಭಾಗದ ಜನ ಬಿಡಿವಿದ್ಯೆಯನ್ನು ಪ್ರಯೋಗಿಸುತ್ತಿದ್ದರು. ಔತಿಶ್ರೇಣಿಯಲ್ಲಿ ಮೇಲೆ ಇದ್ದವರಿಗೆ ಎದುರಾಗಿ ಇದನ್ನು ಪ್ರಯೋಗಿಸಲಾಗುತ್ತಿತ್ತು.

ಜಮೀನ್ದಾರಿ ಪದ್ದತಿ ಮತ್ತು ಜಾತಿ ವ್ಯವಸ್ಥೆ ರೂಢಿಯಲ್ಲಿದ್ದ ಕಾಲಘಟ್ಟದಲ್ಲಿ ಶೋಷಣೆಗೆ ಒಳಗಾದ ಸಮೂಹದ ವ್ಯಕ್ತಿಗಳು ಒಡಿವಿದ್ಯೆಯನ್ನು ಮೊರೆಹೊಕ್ಕರು. ಇದು ಶತ್ರುಸಂಹಾರಕ್ಕಾಗಿ ನಡೆಸುತ್ತಿದ್ದ ಕ್ಷುದ್ರಕರ್ಮ. ವೈರಿಯನ್ನು ಹೆದರಿಸುವುದು, ದೈಹಿಕವಾಗಿಯೂ ಮಾನಸಿಕವೂ ಆಗಿ ಬಳಲಿಸುವುದು, ಪೂರ್ತಿ ನಾಶಮಾಡುವುದು ಮುಂತಾದುವು ಇದರ ಉದ್ದೇಶ. ಕೆಲವು ಪ್ರತ್ಯೇಕ ಗಿಡಗಳ ಎಲೆಗಳು, ಚಿಗುರುಗಳು, ಇತರ ವಸ್ತುಗಳು – ಇವುಗಳನ್ನು ಮಂತ್ರವಾದದ ಬಳಿಕ ಶತ್ರುವೆನಿಸಿದೆ ವ್ಯಕ್ತಿ ನಡೆದು ಹೋಗುವ ದಾರಿಯಲ್ಲಿ ಹಾಕಲಾಗುತ್ತದೆ, ಅಥವಾ ಇರಿಸಲಾಗುತ್ತದೆ. ಆ ವ್ಯಕ್ತಿ ಅದನ್ನು ದಾಟಿ ಹೋದರೆ ಆತನಿಗೆ ‘ಒಡಿ’ ಬಾಧಿಸೀತೆಂದೂ ಕಾಲುಗಳು ಬಾತುಕೊಂಡು ಒಡೆದಾವೆಂದೂ ನಂಬಲಾಗುತ್ತದೆ. ಗರ್ಭಿಣಿ ಹೆಂಗಸರ ಬಸುರ‍ನ್ನು ಸೀಳಿ ಮಗುವನ್ನು ಹೊರಹಾಕಿ ಕೊಲ್ಲುವುದೆಂಬ ನಂಬೂಗೆಯೂ ಇದೆ. ಒಡಿ ಬಾಧಿಸಿದ ವ್ಯಕ್ತಿಯನ್ನು ಅದರಿಂದ ಕಾಪಾಡಲು ಪ್ರತಿವಿಧಿ ಕೈಗೊಳ್ಳಬೇಕು. ಅದು ಕೂಡ ಈ ವಿಭಾಗಕ್ಕೆ ಸೇರಿದವರಿಗೆ ಮಾತ್ರ ತಿಳಿದಿರುವುದು.

ರೂಪವನ್ನು ಮರೆಮಾಚಿ ಪ್ರಯೋಗಿಸುವ ‘ಒಡಿ’ ಹೆಚ್ಚು ಮುಖ್ಯ ಮತ್ತು ಹೆಚ್ಚು ಪ್ರಚಾರದಲ್ಲಿದೆ. ಸಾಮಾನ್ಯವಾಗಿ ಇದನ್ನು ರಾತ್ರಿ ಹೊತ್ತಿನಲ್ಲಿ ಪ್ರಯೋಗಿಸಲಾಗುತ್ತದೆ. ಅರ್ಧರಾತ್ರೆಯ ಹೊತ್ತು ನಿರ್ಜನವಾದ ಪ್ರದೇಶದಲ್ಲಿ ಒಬ್ಬಂಟಿಯಾಗಿ ನಡೆದು ಹೋಗುವ ವ್ಯಕ್ತಿಯನ್ನು ಯಾವುದಾದರೂ ಮೃಗದ ರೂಪದಲ್ಲಿ ಕಾಣಿಸಿಕೊಂಡು ಹೆದರಿಸುವುದು – ಇದರ ವಿಧಾನ. ಎತ್ತು, ಕೋಣ, ನಾಯಿ ಮುಂತಾದ ಪ್ರಾಣಿಗಳ ಚೇಷ್ಟೆಗಳನ್ನು ಮಾಡಿ ಹೆದರಿಸಲಾಗುತ್ತದೆ. ಇದಕ್ಕೆ ಒಳಗಾದ ವ್ಯಕ್ತಿಗೆ ಭಯದಿಂದ ಸಾವು ಕೂಡ ಸಂಭವಿಸಬಹುದು.

೨೦ನೇ ಶತಮಾನದ ಮಧ್ಯಕಾಲದವರೆಗೆ ಈ ಒಡಿ ವಿದ್ಯೆ ಪ್ರಯೋಗಿಸಲ್ಪಡುತ್ತಿತ್ತು. ಕೇರಳದಲ್ಲಿ ಜಮೀನ್ದಾರಿ ಪದ್ಧತಿ ಅಂತ್ಯಗೊಂಡು ಜಾತಿ ವ್ಯವಸ್ಥೆಯಲ್ಲಿ ಶೈಥಿಲ್ಯವುಂಟಾದಾಗ ‘ಒಡಿ’ ಪ್ರಯೋಗವು ಕಡಿಮೆಯಾಯಿತು. ಇಂದು ಇದು ಪ್ರಚಾರದಲ್ಲೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಡಿಮೆಯಾಗಿದೆ.

– ಎಸ್.ಯು.ಕೆ. ಅನುವಾದ ಕೆ.ಕೆ.

ಒಪ್ಪನ ಒಪ್ಪನವು ಕೇರಳದ ಮಲಬಾರ್ ಪ್ರದೇಶದಲ್ಲಿ ಮುಸ್ಲಿಮರಲ್ಲಿ ತುಂಬ ಪ್ರಚುರವಾಗಿರುವ ಕಲಾರೂಪ. ಮುಖ್ಯವಾಗಿ ಇದು ವಿವಾಹ ಸಂದರ್ಭದಲ್ಲಿ ಪ್ರದರ್ಶಿತವಾಗುತ್ತದೆ. ಮದುವೆಯ ಹಿಂದಿನ ದಿನ ಮದರಂಗಿ ಹಚ್ಚುವಾಗಲೂ ಮದುವೆಯ ದಿನವೂ ಒಪ್ಪನ ನಡೆಯುತ್ತದೆ. ಸಾಮಾನ್ಯವಾಗಿ ಪ್ರೌಢವಯಸ್ಕ ಸ್ತ್ರೀಯರು ಇದರಲ್ಲಿ ಪಾಲ್ಗೊಳ್ಳುವರು. ಮದುವೆಗೆ ಬಂದ ಬಹುತೇಕ ಸ್ತ್ರೀಯರು ಒಪ್ಪನ ಹಾಡಿನ ತಾಳಕ್ಕೆ ಅನುಸಾರವಾಗಿ ಚಪ್ಪಾಳೆ ತಟ್ಟುತ್ತ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಮದುಮಗಳ ಮನೆಯ ಹಿರಿಯ ಹೆಂಗಸು ಇದಕ್ಕೆ ನೇತೃತ್ವಕ್ಕೆ ನೀಡುತ್ತಾಳೆ. ಹೊಸದೊಂದು ಬದುಕಿಗೆ ಪ್ರವೇಶಿಸುವ ಮದುಮಗಳನ್ನು ಗೇಲಿಮಾಡುತ್ತಲೂ ಮದುವೆಯ ಇತರ ಸಂಗತಿಗಳನ್ನು ಪ್ರಸ್ತಾಪಿಸುತ್ತಲೂ ಅವಳನ್ನು ವೈವಾವಿಕ ಜೀವನಕ್ಕೆ ಅಣಿಗೊಳಿಸುವ ಪ್ರಕ್ರಿಯೆ ಎಂದೇ ಈ ಪ್ರಕಾರವನ್ನು ಮುಸ್ಲಿಂ ಸಮಾಜವು ಆಯೋಜಿಸಿಕೊಂಡಂತಿದೆ.

ಒಪ್ಪನವು ಮುಖ್ಯವಾಗಿ ಇಬ್ಬಗೆಯಾಗಿದೆ. ಮದುಮಗನನ್ನು ನಡುವೆ ಕುಳ್ಳಿರಿಸಿ ಗಂಡಸರು ಕುಣಿಯುವುದು ಒಂದು; ಮದುಮಗಳಿಗಾಗಿ ಹೆಂಗಸರು ಕುಣಿಯುವುದು ಇನ್ನೊಂದು. ಇವಕ್ಕೆ ಬೇರೆಬೇರೆಯೇ ಹೆಸರುಗಳಿಲ್ಲ. ಎರಡನ್ನೂ ಸಾಮಾನ್ಯವಾಗಿ ಒಪ್ಪನ ಒಂದೇ ಕರೆಯುತ್ತಾರೆ. ಪ್ರದರ್ಶನದಲ್ಲಿ ಮಾತ್ರ ಒಂದಿಷ್ಟು ವ್ಯತ್ಯಾಸವಿರುತ್ತದೆ.

8

ಹೆಚ್ಚು ಪ್ರಚಾರಲ್ಲಿರುವುದು ಹೆಂಗಸರ ಒಪ್ಪನ. ಮದುಮಗಳನ್ನು ಮಧ್ಯೆ ಕುಳ್ಳಿರಿಸಿ ಹೆಂಗಸರು ಸುತ್ತಲೂ ಹೆಜ್ಜೆ ಹಾಕುತ್ತಾ ಕೈಚಪ್ಪಾಳೆ ತಟ್ಟುತ್ತ ಒಪ್ಪನವನ್ನು ಪ್ರದರ್ಶಿಸುವರು. ಕುಣಿಯುವವರಲ್ಲಿ ಹಾಡಿನ ಸಾಲುಗಳನ್ನು ಮೊದಲು ಹಾಡುವವರು ಒಂದು ತಂಡವಾಗಿ ಉಳಿದವರು ಅದನ್ನು ಪುನರಾವರ್ತಿಸುತ್ತ ಕುಣಿಯುವರು. ಮೊದಲು ಹಾಡುವವರು ಮುಖ್ಯಹಾಡುಗಾರರಾಗಿದ್ದು ಕಡಿಮೆ ಹೆಜ್ಜೆಗಳನ್ನಿಟ್ಟರೆ ಸಾಕು. ಅನಂತರದವರು ಹಾಡಿಗೆ ಅನುಸಾರವಾಗಿ ‘ನಿಂತು, ಕುಳಿತು, ಬಾಗಿ, ಬಳುಕಿ ಎಲ್ಲ ಕಡೆ ಹೆಜ್ಜೆ ಹಾಕುತ್ತಾರೆ. ಬಳಿಕ ಹಾಡುವವರು ಕೆಲವು ಸಾಲುಗಳನ್ನು ಆವರ್ತಿಸುವುದೂ ಇದೆ. ಒಪ್ಪನದಲ್ಲಿ ಪ್ರಧಾನವಾಗಿ ಕೆಲವು ಸಾಲುಗಳನ್ನು ಆವರ್ತಿಸುವುದೂ ಇದೆ. ಒಪ್ಪನದಲ್ಲಿ ಪ್ರಧಾನವಾಗಿ ಎರಡು ತಾಳಗಳಿರುತ್ತವೆ – ಚಾಯಲ್ ಮತ್ತು ಮುರುಕ್ಕಲ್. ಚಾಯಲ್ ಮಂದಗತಿಯ ಲಯವುಳ್ಳದ್ದು, ಮುರುಕ್ಕಲ್ ಚಟುಲ ಲಯ – ತಾಳದ್ದು.

ರಂಗಪ್ರದರ್ಶನ ಸಂದರ್ಭದಲ್ಲಿ ಇಂದಿಗೂ ಒಪ್ಪನ ಕಲಾವಿದರ ವೇಷವು ಮುಸ್ಲಿಂ ಸಾಂಪ್ರದಾಯಿಕ ವೇಷ – ಪಂಚೆ ಮತ್ತು ಮೊಣಕಾಲಿನವರೆಗೆ ಬರುವ ನಿಲುವಂಗಿ. ಕಿವಿಯಲ್ಲಿ ಒಂಟಿ, ಕುಮ್ಮತ್ತ್‌ಳು. ನೆಕ್ಲೇಸ್‌ಗಳು ಮತ್ತು ಸೊಂಟದ ಪಟ್ಟಿ, ಕೊರಳಿಗೆ ಮತ್ತು ಸೊಂಟಕ್ಕೆ – ಇವು ಕಡ್ಡಾಯ.

ಗಂಡಸರ ಒಪ್ಪನದಲ್ಲಿ ಚಲನೆ ಕಡಿಮೆ. ಮದುಮಗನನ್ನು ನಡುವೆ ಕುಳ್ಳಿರಿಸಿ, ಗಂಡಸರು ನಿಂತು – ಕುಳಿತು ಹಾಡಿಗನುಸಾರವಾಗಿ ಚಪ್ಪಾಳೆ ತಟ್ಟುವರು. ಅಷ್ಟೆ. ಆದುದರಿಂದಲೇ ಚಪ್ಪಾಳೆಯ ತಾಳಕ್ಕೆ ಅಲ್ಲಿ ಹೆಚ್ಚು ಪ್ರಾಧಾನ್ಯವಿರುತ್ತದೆ.

ಹಿಂದೆ ಮುಸ್ಲಿಂ ಸಮಾಜದ ಮದುವೆಗಳಲ್ಲಿ ಮಾತ್ರವಲ್ಲ, ಅವರ ಜೀವಿತಾವರ್ತನ ಕ್ರಿಯೆಗಳ ಮುಖ್ಯ ಸಂದರ್ಭಗಳಲ್ಲೆಲ್ಲ – ಅಂದರೆ ಚೌಲ, ಸುನ್ನತ್, ಕಿವಿಚುಚ್ಚುವುದು – ಇತ್ಯಾದಿ ಸಂಭ್ರಮಗಳಲ್ಲೆಲ್ಲ ಒಪ್ಪನ ಪ್ರದರ್ಶಿಸಲ್ಪಡುತ್ತಿತ್ತು. ಇಂದು ಇಂಥ ಸಂದರ್ಭಗಳು ಹೆಚ್ಚು ಗೌಜಿಗದ್ದಲವಿಲ್ಲದೆ ನಡೆಯುವುದಾದರೂ ಮದುವೆಗೆ ಸಂಬಂಧಿಸಿದಂತೆ ಒಪ್ಪನವು ಅನೇಕ ಕಡೆಗಳಲ್ಲಿ ಜೀವಂತವಿದೆ. ಮುಸ್ಲಿಂ ಸಮುದಾಯ ಹೊರತು ಅಳಿಯಕಟ್ಟು ಸಂಪ್ರದಾಯದ ಅನೇಕ ಮನೆಗಳಲ್ಲೂ ಇತರೆಡೆಯೂ ಒಂದು ಕಲಾರೂಪವೆಂಬ ನೆಲೆಯಲ್ಲಿ ಒಪ್ಪನವನ್ನು ಪ್ರದರ್ಶಿಸುವ ತಂಡಗಳು ಸಿದ್ಧವಾಗಿವೆ. ಈ ತಂಡಗಳ ಮತ್ತು ಯುವಜನೋತ್ಸವ ವೇದಿಕೆಗಳಲ್ಲಿ (ಕೇರಳ ರಾಜ್ಯದ ಶಾಲಾ ಯುವಜನೋತ್ಸವ ತುಂಬ ಪ್ರಸಿದ್ಧ) ಪ್ರದರ್ಶಿತವಾಗುವ ಒಪ್ಪನಗಳೇ ನಿಜವಾಗಿ ಹೆಚ್ಚು ಜೀವಂತವಾಗಿವೆ. ಸಹಜವಾಗಿ ಇದು ಮಾಪಿಳ್ಳೆ (ಮುಸ್ಲಿಂ) ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ಕಳಚಿಕೊಂಡಿದೆ ಮತ್ತು ಸಮುದಾಯದ ಸೀಮೆಗಳನ್ನು ಮೀರಿ ಕೇರಳದ ಜನಪ್ರಿಯ ಕಲೆಯಾಗಿ ರೂಪುಗೊಂಡಿದೆ.

ಸ್ಪರ್ಧಾ ವೇದಿಕೆಗಳಲ್ಲಿ ಪ್ರದರ್ಶಿಸುವ ಒಪ್ಪನದಲ್ಲೂ ಅದರ ಸಾಂಪ್ರದಾಯಿಕ ಅಂಶಗಳಿಗೆ ಹೆಚ್ಚು ಪ್ರಾಧಾನ್ಯ ನೀಡುತ್ತಿರುವುದು ಗಮನಾರ್ಹವಾಗಿದೆ. ಪ್ರದರ್ಶನ ನೀಡುತ್ತಿರುವುದು ವಯಸ್ಸಾದ ಹೆಂಗಸರೆಂದು ತೋರಿಸಲು, ಮಕ್ಕಳೇ ಪ್ರದರ್ಶನ ನೀಡುತ್ತಿರುವುದಾದರೂ ಸೊಂಟ/ಬೆನ್ನು ಬಾಗಿಸಿಯೇ ಎಲ್ಲ ಹೆಜ್ಜೆಗಳನ್ನು ಇಡುತ್ತಾರೆ. ಸಿನೆಮಾಗಳಲ್ಲೂ ಆಲ್ಬಂಗಳಲ್ಲೂ ಒಪ್ಪನಕ್ಕೆ ಹೆಚ್ಚಿನ ಬೇಡಿಕೆಯಿದ್ದರೂ ಅವರು ಇಂಥ ಸಾಂಪ್ರದಾಯಿಕ ವಿಷಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಗಮನಹರಿಸುತ್ತಿಲ್ಲ. ಒಪ್ಪನವನ್ನು ಪ್ರದರ್ಶಿಸುವ ತಂಡಗಳು ಕೂಡ ಕಾಲಕ್ಕನುಸಾರವಾಗಿ ಪರಿಷ್ಕಾರಗೊಳಿಸಿಕೊಂಡ ಹಾಡುಗಳನ್ನು ಹೆಜ್ಜೆಗಳನ್ನು ಅಳವಡಿಸಿಕೊಂಡಿದ್ದಾರೆ.

ವಿ.ಸೂ:ಒಪ್ಪನ ಎಂಬ ಪದಕ್ಕೆ ಹಳೆಯ ಮಲಯಾಳದಲ್ಲಿ ಅಲಂಕಾರ ಎಂದರ್ಥ. ಒಪ್ಪನದ ಹಾಡುಗಳಲ್ಲಿಯ ಒಂದು ತಾಳದ ಹೆಸರು ಕೂಡ ಇದೇ ಇದೆ. ಸಾಮಾನ್ಯವಾಗಿ ಕಂಬಿ, ಕೞತ್ತ್‌ (ಬೇರೆ ಬೇರೆ ತಾಳಗಳು) ಎಂಬವುಗಳನ್ನು ಹೊಂದಿಸಿಕೊಂಡು ಬರೆದ ಹಳೆಯ ಮಾಪ್ಪಿಳ ಪಾಟ್ಟುಗಳನ್ನು ಒಪ್ಪನಕ್ಕೆ ಹಾಡುತ್ತಿದ್ದರು. ಹೊಸದಾಗಿ ರಚಿಸಿದ ಹಾಡುಗಳೂ ಸಾಂದರ್ಭಿಕವಾಗಿ ಹೊಸೆದುಕೊಂಡ ಹಾಡುಗಳೂ ಹಾಡುಗಾರರ ಭಂಡಾರದಲ್ಲಿವೆ.

ಒಪ್ಪನದ ಬೆಳವಣಿಗೆಯಲ್ಲಿ ಮುಖ್ಯವಾಗಿ ಮೂರು ಘಟ್ಟಗಳನ್ನು ಗುರುತಿಸಬಹುದಾಗಿದೆ. ಸಾಂಪ್ರದಾಯಿಕ ರೀತಿಯಲ್ಲಿ ಮನೆಗಳಲ್ಲಿ ಪ್ರದರ್ಶನವಾಗುತ್ತಿದ್ದ ಒಂದನೆಯ ಘಟ್ಟ; ಸಿನೆಮಾ, ಟಿ.ವಿ.ಗಳ ಮೂಲಕ ಜನಪ್ರಿಯವಾಗಿ ಪ್ರದರ್ಶಿತವಾದ ಎರಡನೆಯ ಘಟ್ಟ; ಮನೆಗಳಿಗೂ ವಿಭಿನ್ನ ಉತ್ಸವಗಳಿಗೂ ವೃತ್ತಿಪರ ತಂಡಗಳ ಮೂಲಕ ಮರಳಿ ತಲುಪಿದ ಮೂರನೆಯ ಘಟ್ಟ.

– ಇ.ಕೆ.ಎಸ್. ಅನುವಾದ ಕೆ.ಕೆ.

ಒಪ್ಪಾರಿ ಪಾಡಲ್ ಸಾವಪ್ಪಿದ ಒಬ್ಬ ವ್ಯಕ್ತಿಗಾಗಿ ಅವರ ಬಂಧುವರ್ಗದವರು, ನೆರೆಯಹೊರೆಯವರು ದುಃಖದಿಂದ ಹಾಡುವ ಹಾಡುಗಳಿಗೆ ಒಪ್ಪಾರಿ (ರೋದನ) ಹಾಡು ಎನ್ನುತ್ತಾರೆ. ಇದು ಶೋಕ ಗೀತೆಗೆ ಸೇರುವಂತಹ ಒಂದು ಹಾಡು. ಜೋಗುಳದ ಹಾಡಿನಂತೆಯೇ ಇದು ಕೂಡ ಮಹಿಳೆಯರ ಹಾಡು. ಮೃತರಾದವರಿಗೆ ಹೊಂದುವಂತೆ (ಗಂಡ, ತಾಯಿ, ತಂದೆ, ಅಣ್ಣ, ಚಿಕ್ಕ ಮಗು, ಮಗ, ಮದುವೆಯಾಗಿದ್ದ/ ಆಗದಿದ್ದ ಮಗಳು) ಇವರುಗಳನ್ನು ಸಂಬೋಧಿಸುವ ಶಬ್ದಗಳು, ಅವರ ವಿಯೋಗ, ಸಂಬಂಧ ಮುಂತಾದವುಗಳನ್ನು ತಕ್ಕ ರೀತಿಯಲ್ಲಿ ಬದಲಾಯಿಸಿಕೊಂಡು ಹಾಡಲಾಗುತ್ತದೆ. ಇವುಗಳಲ್ಲಿ ವರ್ಣನೆಗಿಂತ ಮಿಗಿಲಾಗಿ ಸಂಶಯಾತೀತ ಪದಗಳನ್ನು ಹಾಗೂ ಬಾಂಧವ್ಯವನ್ನು ಸೂಚಿಸುವ ಪದಗಳನ್ನು ಹೆಚ್ಚಾಗಿ ಬಳಸುವರು. “ಕೊಳದಲ್ಲಿ ಎಸೆದ ಗೆಜ್ಜೆ, ಕಾಲ್ಕಡಗ, ತೊರೆಯಲ್ಲಿ ಎಸೆದೆ ನನ್ನ ಉಡಿದಾರ” ಎಂದು ಮುಂತಾಗಿ ಮಗುವನ್ನು ಕಳೆದುಕೊಂಡ ಒಬ್ಬ ತಾಯಿ ರೋದಿಸುತ್ತಾಳೆ.

ಗಂಡನನ್ನು ಕಳೆದುಕೊಂಡ ಒಬ್ಬ ಮಹಿಳೆ ತನ್ನ ಗಂಡನನ್ನು ಆಲದ ಮರಕ್ಕೆ ಹೋಲಿಸುತ್ತಾಳೆ.

ಆಲವೃಕ್ಷವು ಅಲೆಯಲಿ ಕೊಚ್ಚಿ ಹೋಯ್ತು
ಯಾರ್ಯಾರೋ ಬಂದು ಆಶ್ರಯ ಪಡೆಯುತ್ತಿದ್ದ
ಆಲದ ಮರ ಇನ್ನಿಲ್ಲ

ಎಂದು ಗೋಳಾಡುತ್ತಾಳೆ.

ವಿಧಿ ಬರೆಹದ ಬಗೆಗೆ ನಮ್ಮ ಜನಪದರು ಅಪಾರ ನಂಬಿಕೆಯುಳ್ಳವರು. ಎಣ್ಣೆಯನ್ನು ತಂದು ನೀನು ಮಗುವಿನ ತಲೆಯಲ್ಲಿ ಹಚ್ಚಿದೆ. ಆದರೆ ತೈಲವನ್ನು ಹಚ್ಚಿದರಷ್ಟೆ ಏನಾಯ್ತು? ನೀನು ಹೆತ್ತಮಗುವಿಗೆ ಹಣೆಯಲ್ಲಿ ಬರೆಯಲಿಲ್ಲಾ ! ಪ್ರಯೋಜನವೇನು ಎಂದು ಗೋಗರೆಯುತ್ತಾಳೆ.

ತಾಯಿಯ ಸಾವಿನಿಂದ ನೋವಿಗೀಡಾದ ಮಗಳ ಅಗಲಿಕೆಯನ್ನು ಹಾಡಿನ ಮೂಲಕ ವ್ಯಕ್ತಪಡಿಸುತ್ತಾಳೆ. ಅವಳು ತನ್ನ ಗಂಡನ ಮನೆಯಿಂದ ತವರು ಮನೆಗೆ ನಡೆದುಕೊಂಡೇ ಬಂದು ಸೇರಿದಳು. ಕಾಲ್ನಡಿಗೆಯಲ್ಲಿಯೇ ಬಂದುದರಿಂದ ತನಗೆ ಕಾಲು ನೋಯುತ್ತಿದೆಯೆಂದು ತಾಯಿಗೆ ಹೇಳಿದಳು. ಕೂಡಲೇ ನೀರನ್ನು ಕಾಯಿಸಿ ಕಾಲಿಗೆ ಕಾವು ಕೊಡುತ್ತಾಳೆ. ಮಗಳಿಗೆ ನಾನಾ ಬಗೆಯಲ್ಲಿ ಉಪಚರಿಸುತ್ತಾಳೆ. ಬಿಸಿನೀರು ಕಾಲಿನ ಮೇಲೆ ಬಿದ್ದನಂತರ ಕಾಲುನೋವು ಕಡಿಮೆಯಾಗುತ್ತದೆ. ತನ್ನ ಕಾಲಿಗೆ ಹಾಕಿದ ನೀರು ಹೊಲವೆಲ್ಲಾ ಹರಡಿತೆಂದು ತಾಯಿಯ ಉಪಚಾರವನ್ನು ಪ್ರೀತಿಯನ್ನು ಹೊಗಳುತ್ತಾಳೆ. ತೋಳಮೇಲೆ ಸುರಿದ ನೀರು ತೋಟವೆಲ್ಲಾ ಹರಡಿತೆಂದು ನೆನಪು ಮಾಡಿಕೊಳ್ಳುತ್ತಾಳೆ. ಗಂಡನ ಮನೆ ಎಷ್ಟೇ ಸಿರಿಸಂಪತ್ತಿನಿಂದ ಕೂಡಿದ್ದರೂ ತಾನು ಹುಟ್ಟಿದ ಮನೆಯ ಸಂಬಂಧ ನಿರಂತರವಾಗಿ ಮುಂದುವರೆಯಬೇಕೆಂಬುದು ಹೆಣ್ಣಿನ ಆಸೆ. ಇಂತಹ ಆಸೆ ತನ್ನ ತಾಯಿ ಬದುಕಿರುವವರೆಗೆ ಮಾತ್ರವೇ ಸಾಧ್ಯವೆಂಬುದು ಸಹ ಅವಳಿಗೆ ತಿಳಿದಿದೆ. ಇಂತಹ ಬಾಂಧವ್ಯವನ್ನು ಹೆಣೆದ ತಾಯಿಯೇ ಇಲ್ಲದೆ ಹೋದಾಗ ಮತ್ತೆ ಅದು ಹೇಗೆ ತಾನೆ ಮುಂದುವರಿಯುತ್ತದೆಂದು ಸಂದೇಹಪಡುತ್ತಾಳೆ. ತನ್ನ ತಾಯಿಯನ್ನು ‘ದೇವಿ’ ಎಂದೂ ತನ್ನನ್ನು ಸೀತೆಯ ಮಗಳು ಎಂದೂ ಸಂಬೋಧಿಸುತ್ತಾಳೆ. ತನ್ನ ಮಗ ಅಜ್ಜಿಯ ಚಟ್ಟವನ್ನು ಚೆನ್ನಾಗಿ ಸಿದ್ಧಮಾಡುತ್ತಾನೆಂದು ಆಶ್ವಾಸನೆ ನೀಡುತ್ತಾಳೆ.

ತನ್ನ ತಾಯಿ ರುಚಿ ರುಚಿಯಾದ ಅಡುಗೆಯ ಬಗೆಗೆ ನೆನಪು ಮಾಡಿಕೊಳ್ಳುತ್ತಾನೆ. ಅಂತಹ ಸವಿಯಾದ ಮೇಲೋಗರ ಬೇರೆ ಯಾರೂ ಮಾಡಲಾರರು ಎಂದು ಮೆಚ್ಚುಗೆಯ ಮಾತನಾಡಿ ಕೊಂಡಾಡುತ್ತಾಳೆ. ದೇವಾಧಿದೇವತೆಗಳು ತನ್ನ ತಾಯಿಯ ಮೇಲೆ ಇರಿಸಿಕೊಂಡಿದ್ದ ಪ್ರೀತಿಯಿಂದಾಗಿ ಮುಂಚಿತವಾಗಿಯೇ ಆಕೆಯನ್ನು ಕರೆದೊಯ್ದರೆಂದೂ ಗೋಳಾಡುತ್ತಾಳೆ. ತಾಯಿಯ ಮರಣ ಅಕಾಲಿಕವಾದದ್ದೆಂದು ಹೇಳುವಾಗ ಅದಕ್ಕೆ ಹಾವಿನ ಕಾರಣವೆಂದು ತನ್ನ ಹಾಡಿನಲ್ಲಿ ಸ್ಪಷ್ಟಪಡಿಸುತ್ತಾಳೆ.

ಕೂಡು ಕುಟುಂಬದ ಅನುಕೂಲದ ಸ್ಥಿತಿ, ಸೋದರ ಮಾವನ ಸಂಬಂಧ, ವಿಧಿಯ ಅಟ್ಟಹಾಸ ಮುಂತಾದ ಸಾಮಾಜಿಕ ವ್ಯವಸ್ಥೆಯನ್ನು ಜನಪದರು ಬಣ್ಣಿಸುತ್ತಾರೆ. ವಿಧವೆ ಎದಿರು ಕಂಡರೆ ಅಪಶಕುನವೆಂದು ಹಾರಾಡುವುದನ್ನು ನೆನೆದು ಒಬ್ಬ ವಿಧವೆ ಮುಂಬರುವ ದಿನಗಳನ್ನು ನೆನೆದು ಮನನೊಂದು ಹಾಡುತ್ತಾಳೆ. ಸುಂದರವಾದ ರೇಷ್ಮೆ ಸೀರೆ ಇನ್ನು ಮನೆಯಲ್ಲಿ ಸೆರೆಯಲ್ಲಿರುವಂತಾಯ್ತು, ತಾನು ಮಣ್ಣಿನ ಧೂಳನ್ನು ನೆತ್ತಿಯಲ್ಲಿ ಧರಿಸುವಂತಾಯ್ತು ಎಂದು ಮುಂದಿನ ದಿನಗಳನ್ನು ವಿಧವೆ ಶಪಿಸುತ್ತಾಳೆ.

ಒಪ್ಪಾರಿ ಹಾಡಿನಲ್ಲಿ ಪರಸ್ಪರ ಸಂಬಂಧವನ್ನು ಜನಪದ ಕವಿಗಳು ಬಹಳ ಅರ್ಥಪೂರ್ಣವಾಗಿ ವರ್ಣಿಸಿದ್ದಾರೆ. ತನ್ನ ಮಗು, ಗಂಡ, ಕಾಯಿ, ಮರದಂತೆ ಎಂದು ಹೋಲಿಕೆ ನೀಡುತ್ತಾಳೆ ಒಬ್ಬ ತಾಯಿ. ತಾನ ಹೆತ್ತ ಮಕ್ಕಳನ್ನು ಉತ್ತಮ ತಳಿಯ ಬತ್ತ ಮುಂತಾದ ಧಾನ್ಯಗಳಿಗೆ ಹೋಲಿಸಿ ಹೊಗಳುತ್ತಾಳೆ. ಹಾಗೆಯೇ ಹೇರಳೆಕಾಯಿ, ನಿಂದೆಕಾಯಿ. ಮುಂತಾದ ಗಿಡಮರಗಳಿಗೆ ತನ್ನ ಸಂಬಂಧವನ್ನು ಹೊಂದಿಸಿಕೊಳ್ಳುತ್ತಾಳೆ. ಗಿಳಿ, ಕೋಗಿಲೆ, ನವಿಲು, ಹಂಸ ಮುಂತಾದ ಪಕ್ಷಿಗಳು, ಮಲ್ಲಿಗೆ, ರೋಜಾ, ತುಂಬೆ, ನೈದಿಲೆ ಮುಂತಾದ ಹೂಗಳಿಗೂ ತನ್ನ ಸಂಬಂಧಗಳನ್ನು ಕಲ್ಪಿಸುತ್ತಾಳೆ.

ಇತಿಹಾಸ ಮತ್ತು ಕಾವ್ಯಗಳಲ್ಲಿ ರಾರಾಜಿಸುವ ಪಾತ್ರಗಳೊಂದಿಗೆ ತನ್ನ ಸಂಬಂಧವನ್ನು ಹೇಳಿಕೊಳ್ಳುತ್ತಾಳೆ. ತನ್ನನ್ನು ಪಾಂಚಾಲಿ, ದ್ರೌಪದಿ, ಕಣ್ಣಗಿ, ಮಾಧವಿ, ಸೀತೆ, ನಲ್ಲ ತಂಗಾಳ್, ಯಶೋದೆ ಎಂದು ಕರೆದುಕೊಳ್ಳುತ್ತಾ ತನ್ನ ಗಂಡ ಅಣ್ಣ ಇವರುಗಳು ಕರ್ಣ, ಧರ್ಮರಾಜ, ಭೀಮ, ಅರ್ಜುನ ಮುಂತಾಗಿ ಹೇಳಿಕೊಳ್ಳುವುದನ್ನು ಕಾಣಬಹುದು. ಗತಿಸಿದ ಗಂಡನಾದರೋ ಅತ್ಯಂತ ಶ್ರೇಷ್ಠವ್ಯಕ್ತಿಯಾಗಿದ್ದವನು, ವಿಧವೆಯಾದ ತಾನು ಯಾವುದಕ್ಕೂ ಕೆಲಸಕ್ಕೆ ಬಾರದವಳು ಎಂದು ತನ್ನನ್ನು ತಾನೇ ಹೀಯಾಳಿಸಿಕೊಳ್ಳುತ್ತಾಳೆ. ಮೃತನಾದ ತನ್ನ ಪತ್ನಿ ವಿಸೇಷ ಗೌರವಪಡೆದಿದ್ದ ವಜ್ರನೆಂದು ಹೊಗಳುತ್ತಾಳೆ.

ಒಪ್ಪಾರಿ ಹಾಡುಗಳಲ್ಲಿ ವೈದ್ಯಕೀಯ ವಿಚಾರಗಳನ್ನು ಕುರಿತು ಅನೇಕ ಸಂಗತಿಗಳನ್ನು ಪ್ರಸ್ತಾವಿಸಲಾಗಿದೆ. ಅವುಗಳಲ್ಲಿ ಪ್ರಕೃತಿ ಚಿಕಿತ್ಸೆ, ಮೂಲಿಕೆ ಚಿಕಿತ್ಸೆ, ಬೇರೆ ಬೇರೆ ಔಷಧಿಗಳು, ಇಂಗ್ಲಿಷ್ ಔಷಧಿಗಳು ಎಂದು ಬೇರೆಯಾಗಿ ವಿಂಗಡಿಸಬಹುದು.

ಈ ಹಾಡುಗಳಲ್ಲಿ ಆಚಾರ ವಿಚಾರಗಳು, ನಂಬಿಕೆಗಳು, ಮತಧರ್ಮ ಮುಂತಾದ ಅನೇಕ ವಿಚಾರಗಳ ಪ್ರಸ್ತಾಪ ಬಂದಿರುವುದನ್ನು ಕಾಣಬಹುದು.

– ಎಸ್.ವಿ. ಅನುವಾದ ವಿ.ಜಿ.

ಒಯಿಲ್ ಕುಮ್ಮಿ ತಮಿಳುನಾಡಿನ ಕುಣಿತದ ಪ್ರಕಾರ. ಜನಪದ ಕುಣಿತಗಳಲ್ಲಿ ಆಬಾಲ ವೃದ್ಧರಾದಿಯಾಗಿ ಎಲ್ಲರೂ ಭಾಗವಹಿಸುವುದು ಇದರ ವೈಶಿಷ್ಟ್ಯ. ತಮಿಳುನಾಡಿನ ಜನರ ಜನಪದ ನೃತ್ಯಗಳಲ್ಲಿ ಒಯಿಲ್ ಕುಮ್ಮಿ ತುಂಬ ವೈವಿಧ್ಯದಿಂದ ಕೂಡಿದೆ.

ಈ ಆಟವನ್ನು ಹೆಂಗಸರು ಗಂಡಸರು ಕೂಡಿ ಆಡುತ್ತಾರೆ. ಇಲ್ಲಿ ಹೆಂಗಸರು ವೃತ್ತಾಕಾರವಾಗಿ ನಿಂತು ಪರಸ್ಪರ ಚಪ್ಪಾಳೆ ತಟ್ಟುತ್ತ ಹಾಡು ಹಾಡುತ್ತ ಕುಣಿಯುತ್ತಾರೆ. ಕೇವಲ ಗಂಡಸರು ಮಾತ್ರವೇ ಆಡುವ ‘ಒಯಿಲ್’ ಆಟಕ್ಕೂ ಹೆಂಗಸರು – ಗಂಡಸರು ಕೂಡ ಆಡುವ ‘ಒಯಿಲ್ ಕುಮ್ಮಿ’ ಆಟಕ್ಕೂ ಸಾಕಷ್ಟು ಭಿನ್ನತೆ ಇದೆ. ‘ಒಯಿಲ್‌ನಲ್ಲಿ ಗಂಡಸರು ನೇರವಾಗಿ ನಿಂತು ಹಾಡುತ್ತ ಕುಣಿಯುತ್ತಾರೆ.

ಒಯಿಲ್ ಕುಮ್ಮಿ ಆಟ ನೋಡುಗರನ್ನು ಸೆಳೆಯುವ ಹಲವು ವಿಶಿಷ್ಟ ಅಂಶಗಳನ್ನು ಹೊಂದಿದೆ. ಈ ಆಟವಾಡುವ ಗುಂಪಿನ ಗುರು ಎಲ್ಲರನ್ನು ಒಂದೆಡೆ ಸೇರಿಸಿ ಅವರಿಗೆ ಹಾಡಲು, ಕುಣಿಯಲು ಕಲಿಸಿ ಅದರ ಬದಲಾವಣೆಗಳನ್ನು ತಿಳಿಸುತ್ತಾನೆ. ವೃತ್ತಾಕಾರದಲ್ಲಿ ನಿಂತಿದ್ದ ಕಲಾವಿದರು ತಮ್ಮ ಎರಡೂ ಕೈಗಳಿಂದ ಚಪ್ಪಾಳೆ ಹೊಡೆಯುತ್ತಾ ಹೆಜ್ಜೆ ಹಾಕುವುದು ನೋಡುಗರನ್ನು ವಿಶೇಷವಾಗಿ ಸೆಳೆಯುತ್ತದೆ. ಇಂದಿಗೂ ‘ನಾಟ್ಟಾರ್ ಕಲಾವಿದ’ ರಿಂದ ಈ ಕಲೆ ಪ್ರದರ್ಶನಗೊಳ್ಳುತ್ತಿದೆ.

‘ಚಿಂದು’ ಎಂಬ ಹಾಡಿನ ಈ ಮಟ್ಟು ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಒಂದು ಉತ್ತಮ ಮಾಧ್ಯಮ. ‘ಚಿಂದು’ ಸಂಗೀತದ ಒಂದು ಆಕರ್ಷಕ ಬಗೆ. ಇದರಲ್ಲಿ ‘ವಳಿನಡೈಚಿಂದು’ ‘ಕಾವಡಿಚಿಂದು’, ಚಿಂದಂ, ಕಳಿಯಲ್ ತಾಳಕ್ಕೆ ತಕ್ಕಂತೆ ರೂಪುಗೊಂಡಿದೆ. ಕಳಿಯಲ್ ಹಾಡಿನಲ್ಲಿ ಕಾವಡಿಚಿಂದು, ವಳಿನಡೈಚಿಂದು, ಕಪ್ಪಲ್ ಚಿಂದು ಎಂಬ ಮೂರು ಬಗೆಯ ಕುಣಿತಗಳು ಅತಿ ಹೆಚ್ಚು ಬಳಕೆಯಲ್ಲಿದೆ.

ಕಾವಡಿ ಎಂದರೆ ಕೋಲು ಎಂದರ್ಥ. ಹಿಂದಿನ ಕಾಲದಲ್ಲಿ ಜನರು ತಮ್ಮ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ಉದ್ದನೆಯ ಕೋಲಿನ ಎರಡು ಕಡೆ ಬಟ್ಟೆಗಳಲ್ಲಿ ವಸ್ತುಗಳನ್ನು ಹೇರಿಕೊಂಡು, ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿದ್ದರು. ಅಂತೆಯೇ ಈ ಕಾವಡಿ ಆಟದಲ್ಲೂ ಕೋಲಿನ ಒಂದು ತುದಿಯಿಂದ ಮತ್ತೊಂದು ತುದಿಗೆ ಕೋಲನ್ನು ಬಿಲ್ಲಿನಂತೆ ಬಾಗಿಸಿರುತ್ತಾರೆ. ಅದು ಅರ್ಧ ವೃತ್ತಾಕಾರದ ರೀತಿಯಲ್ಲಿರುತ್ತದೆ. ಅದರ ಮೇಲೆ ನವಿಲುಗರಿಗಳನ್ನು ಪೋಣಿಸಿ ಅಲಂಕರಿಸಿರುತ್ತಾರೆ. ಇದನ್ನು ಭಕ್ತರು ಭಕ್ತಿಭಾವದಿಂದ ಹೆಗಲ ಮೇಲೆ ಹೊತ್ತು ಕುಣಿಯುತ್ತಾರೆ. ಸುಬ್ರಹ್ಮಣ್ಯನನ್ನು ಕುರಿತು ಚೆನ್ನಿಕುಳಂ – ಅಣ್ಣಾಮಲೈ ಶೆಟ್ಟಿಯವರು ರಚಿಸಿರುವ ‘ಸುಬ್ರಹ್ಮಣ್ಯ ಕಾವಡಿ ಚಿಂದು’ ಪ್ರಸಿದ್ಧಿ ಪಡೆದಿದೆ. ಕಳಿಯಲ್ ಆಟದಲ್ಲೂ ಅಣ್ಣಾಮಲೈ ರೆಡ್ಡಿಯವರು ರಚಿಸಿರುವ ‘ಕಾವಡಿಚಿಂದು’ ಹಾಡುಗಳನ್ನು ಹಾಡಲಾಗುತ್ತದೆ.

ಕಾವಡಿ ಹಾಡುಗಳು ನಿರ್ದಿಷ್ಟ ಛಂದೋಬದ್ಧ ಸಾಲುಗಳಿಂದ ಕೂಡಿರುತ್ತದೆ. ಆ ಲಯಗಾರಿಕೆಯನ್ನು ಹೀಗೆ ಗುರುತಿಸಬಹುದು:

ತನ್ನ ನನ್ನ ನಾನ ನನ್ನ ನಾನೇ
ತನೈ ತಾನೈ ನನೈ ನಾನ
ನನ್ನ ನಾನಾ
ತನ್ನ ತನೈತ್ತಾ ನನೈ ತಾನೈ
ತನನೈತ್ತನ್ನೈ ತನೈ
ತಾನೇ ನನ್ನಾನೇ

ಊತುಮಲೈನ ಜಮೀನ್ದಾರ ಕಳುಗಮಲೈಯಿಂದ ತಿರುಚ್ಚೆಂದೂರಿಗೆ ಕಾವಡಿ ಹೊತ್ತು ಹೋಗುವಾಗ ಚೆನ್ನಿಕುಳಂ ಅಣ್ಣಾಮಲೈ ರೆಡ್ಡಿಯವರು ಹಾಡಿದ ‘ಕಾವಡಿ ಚಿಂದು’ವಿನ ಒಂದು ಉದಾಹರಣೆ ಹೀಗಿದೆ

ಬೆಳ್ಳಂ ಬೆಳಗಿನ ತಮಿಳಿಗೆ ನೆರವೇ ದೇವರಸ್ತುತಿ
ಅಣ್ಣಾ ಮಲೈ ದಾಸನ ಕರಡಿಗೆಯನು ನೀ ಬೆಳೆಸು
ಎಷ್ಟೆಷ್ಟು ಹೊಗಳಲಲಿ ಕೀರ್ತಿಯನು
ಕಳುಗಮಲೈ ಸಿರಿ ಸಮೃದ್ಧಿಯನು

– ಓ.ಎಂ. ಅನುವಾದ ಆರ್.ಎಸ್.

ಒಯಿಲಾಟ್ಟಂ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಬಹುತೇಕ ಕಡೆ ಪ್ರಚಲಿತವಿರುವ ಜನಪದ ಕುಣೀತ ‘ಒಯಿಲಾಟ್ಟಂ’ ಒಯಿಲ್ + ಆಟ್ಟಂ, ‘ಒಯಿಲ್’ ಎಂದರೆ ಒಯ್ಯಾರ, ಸುಂದರ, ಸೊಗಸು, ಅಲಂಕಾರ ಎಂದರ್ಥ. ಒಯ್ಯಾರವಾಗಿ, ಸುಂದರವಾಗಿ, ಸೊಗಸಾಗಿ ಪುರುಷರು ಆಡುವ ಒಯಿಲಾಟ್ಟಂ ‘ಒಯಿಲಾಟ್ಟಿ’ ಎಂದು ಕರೆಯುವ ಗುರುವಿನ ಮಾರ್ಗದರ್ಶನದಲ್ಲಿ ಗ್ರಾಮೀಣ ಉತ್ಸವಗಳಲ್ಲಿ ನಡೆಯುತ್ತದೆ.

ಒಯಿಲಾಟ್ಟಿ ಮುಂದೆ ನಿಂತು ಹಾಡನ್ನು ಹಾಡಿ ಆಟವನ್ನು ಪ್ರಾರಂಭಿಸಲು, ಸಾಲಾಗಿ ನಿಲ್ಲುವ ಇತರ ಆಟಗಾರರೂ ಹಿಮ್ಮೇಳ ಹಾಡಿ ಆಟವನ್ನು ಮುಂದುವರಿಸುತ್ತಾಳೆ. ಪ್ರತಿಯೊಂದು ಹಾಡು ಹಾಡು ಅದಕ್ಕೆ ಸಂಬಂಧಿಸಿದ ಕುಣಿತ ನಿಧಾನವಾಗಿ ಪ್ರಾರಂಭಗೊಂಡು ಅನಂತರ ವೇಗವಾಗಿ ಅತಿ ತ್ವರಿತಗತಿಯಲ್ಲಿ ಮುಕ್ತಾಯಗೊಳ್ಳುತ್ತದೆ.

ಒಯಿಲಾಟ್ಟದಲ್ಲಿ ರಾಮಾಯಣದ ಕಥೆಯನ್ನು ಹೆಚ್ಚಾಗಿ ಹಾಡುವರು. ವಳ್ಳಿ ಮದುವೆ, ಹರಿಶ್ಚಂದ್ರ, ಕಣ್ಣಗಿ, ಕಟ್ಟಬೊಮ್ಮನ್ ಕಥೆಗಳನ್ನು ಬಹುತೇಕ ಕಡೆ ಹಾಡುವುದುಂಟು. ರಾಮಾಯಣದ ಕಥೆಯನ್ನು ಪ್ರಸ್ತುತ ಪಡಿಸುವಾಗ ರಾಮ, ಸೀತೆ, ಲಕ್ಷ್ಮಣ, ಹನುಮಂತರ ಹಾಗೆ ಹಾಡಿ ಸಂಭಾಷಿಸಿ, ನಟಿಸಿ ಒಯಿಟ್ಟಾಂ ನಡೆಸುವ ಪದ್ಧತಿ ಅನೇಕ ಕಡೆ ಕಂಡು ಬರುತ್ತದೆ.

9

ಒಯಿಲಾಟ್ಟದಲ್ಲಿ ಹೆಜ್ಜೆ, ಏರಿಳಿತ, ಜಾರುವುದು, ಮಡಿಚುವುದು, ಹೊರಳುವುದು, ತಿರುಗುವುದು ಮುಂತಾದ ಕುಣಿತದ ಭಂಗಿಗಳು ನಾನಾ ರೀತಿಯಲ್ಲಿ ಮಿಳಿತಗೊಂಡು ಆಟದ ವಿಧಾನಗಳು ರೂಪುಗೊಳ್ಳುತ್ತವೆ.

ಯಾವುದೇ ಪರಿಸ್ಥಿತಿಯಲ್ಲಿ ಸೇರಿ ಕುಣಿಯುವುದಕ್ಕೆ ಸಹಜವಾದ ವಸ್ತ್ರ, ವೇಷಭೂಷಣ, ಯಾರು ಬೇಕಾದರೂ ಪಾಲ್ಗೊಂಡು ಆಡುವ ಸರಳವಾದ ಆಟದ ವಿಧಾನಗಳನ್ನು, ಧ್ವನಿಯೆತ್ತಿ ಜೋರಾಗಿ ಹಾಡುವ ಲಯ, ಹಾಡಿಗೆ ತಕ್ಕಂತೆ ಮೊಳಗುವ ವಾದ್ಯ ಪರಿಕರಗಳು (ಘಟ, ತಬಲ, ಖಂಜರಾ, ಕಂಚಿನತಾಳ) ಕೈಯಲ್ಲಿ ಸರಾಗವಾಗಿ ಹರಿದಾಡುತ್ತವೆ.

ಕರವಸ್ತ್ರ, ಗೆಜ್ಜೆ, ಶಬ್ದದೊಂದಿಗೆ ಬಲವಾಗಿ ನೆಲದ ಮೇಲೆ ಮೆಟ್ಟಿ ಏಳುವ ಪಾದಗಳು – ಇವು ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗುತ್ತದೆ.

– ಓ.ಎಂ. ಅನುವಾದ ಐ.ಎಸ್.