ಓಕುಳಿ ಬಣ್ಣದ ನೀರಿಗೆ ಓಕುಳಿ ಎಂದು ಹೇಳಲಾಗುವುದು. ವಿಶಿಷ್ಟ ಸಂದರ್ಭಗಳಲ್ಲಿ ಓಕುಳಿ ನೀರನ್ನು ಹಾಕುತ್ತಾರೆ. ಸಾಂಪ್ರದಾಯಿಕವಾಗಿ ಪರಸ್ಪರ ಓಕುಳಿ ಎರಚಿಕೊಂಡು ಆಡುವುದುಂಟು. ಇದಕ್ಕೆ ಓಕುಳಿ ಆಡುವುದು ಎನ್ನುತ್ತಾರೆ. ಮದುವೆ, ಹಬ್ಬ, ಜಾತ್ರೆ ಉತ್ಸವಗಳಲ್ಲಿ ಓಕುಳಿ ಸಂಪ್ರದಾಯವಿದೆ.

ಮಲೆನಾಡು ಭಾಗದಲ್ಲಿ ವಿವಾಹದ ದಿನ ಗಂಡುಹೆಣ್ಣುಗಳನ್ನು ವರನ ಮನೆಗೆ ಕೊಂಡೊಯ್ದು ಬಳಿಕ ಹಲವಾರು ಶಾಸ್ತ್ರಗಳನ್ನು ಮಾಡಿಸುತ್ತಾರೆ. ಅವುಗಳಲ್ಲಿ ಓಕುಳಿಯಾಡುವುದೂ ಒಂದು. ಒಂದು ಪಾತ್ರೆಗೆ ಅರಿಸಿನ ಕುಂಕುಮ ಬೆರೆಸಿ ಬಣ್ಣದ ನೀರು ತಯಾರಿಸಿ ಅದರೊಳಗೆ ಮಾವಿನಸೊಪ್ಪಿನ ಒಂದು ಚಿಕ್ಕ ಕಟ್ಟನ್ನು ಇಡುತ್ತಾರೆ. ಅದರ ಮೂಲಕ ವರನು ವಧುನಿಗೆ, ವಧು ವರನಿಗೆ ಓಕುಳಿ ನೀರು ಎರಚುತ್ತಾರೆ. ಹಿಂದೆಲ್ಲ ಬಾಲ್ಯವಿವಾಹ ರೂಢಿಯಲ್ಲಿದ್ದುದರಿಂದ ಗಂಡು ಹೆಣ್ಣಿನ ನಡುವೆ ಸಡಲುಗೆ ಉಂಟಾಗಲೆಂದು ಇಂಥ ಸಂಪ್ರದಾಯಗಳು ರೂಢಿಗೆ ಬಂದಿರಬೇಕು. ಅರಿಸಿನದ ನೀರು ಶರೀರದ ಮೇಲೆ ಬೀಳುವುದರಿಂದ ಅದು ಚರ್ಮದ ರಕ್ಷಣೆಗೆ ಪೂರಕವಾದ ಕಾರ್ಯ ನಿರ್ವಹಿಸುತ್ತದೆ ಆದುದರಿಂದ ಆರೋಗ್ಯದ ದೃಷ್ಟಿಯೂ ಇದರಲ್ಲಿ ಅಡಗಿರಬಹುದು.

ಜಾತ್ರೆ ರಥೋತ್ಸವಗಳಲ್ಲಿ ತೇರು ಹರಿದ ಮೇಲೆ ಓಕುಳಿಯನ್ನು ಮನೆ ಮನೆಗೆ ಮತ್ತು ಮಂದಿಗೆಲ್ಲ ಸಿಂಪಡಿಸುವ ಸಂಪ್ರದಾಯವಿದೆ. ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವದಲ್ಲಿ ದೊಡ್ಡ ತೇರಿನ ದಿನ ಸಂಜೆಗೆ ಅರ್ಚಕರು ಬೀದಿ ಬೀದಿಗಳಲ್ಲಿ ಎಲ್ಲರಿಗೂ ಓಕುಳಿ ಹಾಕಿಕೊಂಡು ಹೋಗುತ್ತಾರೆ. ಈ ಬಗೆಯ ರಥೋತ್ಸವಗಳಲ್ಲಿ ಇದು ಸಾಮಾನ್ಯ. ಜಾತ್ರೆಯ ಜನಸಂದಣಿಯಿಂದೆ ಸೋಂಕು ರೋಗಗಳು ಉಂಟಾಗದಿರಲೆಂಬ ಉದ್ದೇಶದಿಂದ ಓಕುಳಿ ಹಾಕುವುದು ರೂಢಿಗೆ ಬಂದಿರುಜವ ಸಾಧ್ಯತೆ ಇದೆ. ಆದರೆ ಈಗ ಮೂಲ ಆಶಯ ಹಿಂದೆ ಸರಿದು ಮೈಲಿಗೆ ತೆಗೆಯಲು ಓಕುಳಿ ಹಾಕುವರೆಂದು ಭಾವಿಸಲಾಗಿದೆ. ಬಿಳಿಗಿರಿರಂಗನ ವಲ್ಲಿನ ಮೇಲೆ ಓಕುಳಿ ಚೆಲ್ಲಿದ್ದನ್ನು ಜನಪದ ಗೀತೆಯೊಂದು ವರ್ಣಿಸುತ್ತದೆ.

ಉದಾ:

ಘಲ್ ಘಲ್ಲೆನುತಾ ಗೆಜ್ಜೆ ಘಲ್ಲು ಘಲ್ಲೆನುತಾ
ಬಲ್ಲಿದ ರಂಗನ್ ವಲ್ಲಿಯ ಮೇಲೆ ಚೆಲ್ಲಿದರೋಕುಳಿಯ

ಎಂಬುದನ್ನು ಉಲ್ಲೇಖಿಸಬಹುದು.

ಮೈಸೂರು, ಮಂಡ್ಯ ಮುಂತಾದೆಡೆಗಳಲ್ಲಿ ರಾಮನವಮಿಯ ಸಂದರ್ಭದಲ್ಲಿ ರಾಮೋತ್ಸವ ನಡೆಯುವ ಸಂದರ್ಭದಲ್ಲಿ ಗಂಡಸರು ಬೀದಿಯುದ್ದಕ್ಕೂ ಮನೆಮನೆಯ ಮುಂದೆ ಓಕುಳಿ ಆಡುವುದುಂಟು.

ಹೋಲಿ ಹುಣ್ಣಿಮೆಯೆಂದು ನಡೆಯುವ ಬಣ್ಣ ಹಾಕುವ ಸಂಪ್ರದಾಯಕ್ಕೂ ‘ಓಕುಳಿ’ ಎಂದು ಕರೆಯುತ್ತಾರೆ. ಫಾಲ್ಗುಣ ಮಾಸದ ಹುಣ್ಣಿಮೆಯಂದು ಕರ್ನಾಟಕದಲ್ಲಿ ಕಾಮದಹನವನ್ನು ಆಚರಿಸಲಾಗುವುದು. ಉತ್ತರ ಕರ್ನಾಟಕದಲ್ಲಿ ಇದಕ್ಕೆ ಹೋಳಿ ಹಬ್ಬವೆನ್ನುತ್ತಾರೆ. ಇದಕ್ಕೊಂದು ಪೌರಾಣಿಕ ಕತೆಯ ಹಿನ್ನೆಲೆಯಿದೆ. ಶಿವನ ತಪಸ್ಸನ್ನು ಭಂಗಪಡಿಸಲು ಕಾಮನು ತನ್ನ ಹೂಬಾಣವನ್ನು ಶಿವನ ಮೇಲೆ ಪ್ರಯೋಗಿಸಿದಾಗ ಶಿವ ಕುಪಿತನಾಗಿ ಕಾಮನನ್ನು ಹಣೆಗಣ್ಣಿನಿಂದ ದಹಿಸುತ್ತಾನೆ. ಇದರ ಸಂಕೇತವಾಗಿ ಹೋಳಿ ಹುಣ್ಣಿಮೆಯಂದು ರತಿ ಮತ್ತು ಕಾಮನ ಪುತ್ತಳಿಗಳನ್ನು ಮಾಡಿ ಸುಡುತ್ತಾರೆ. ಅದಕ್ಕಾಗಿ ಬೆರಣಿ ಇತ್ಯಾದಿಗಳನ್ನು ಸಂಗ್ರಹಿಸುವುದಿದೆ. ದಹನ ಕಾರ್ಯಕ್ಕೆ ಮಾದಾರರ ಮನೆಯಿಂದಲೇ ಬೆಂಕಿ ತರಬೇಕೆಂದು ನಿಯಮವಿದೆ. ಈ ಸಂದರ್ಭದಲ್ಲಿ ಮಾದಾರ ಸಮುದಾಯದ ಅಸಾದಿಗಳು ಅಶ್ಲೀಲ ಹಾಡುಗಳನ್ನು ಹಾಡುತ್ತಾರೆ. ಮನುಷ್ಯ ಕಾಮನನ್ನು ಗೆಲ್ಲಬೇಕೆಂಬ ಸಂದೇಶ ಈ ಆಚರಣೆಯಲ್ಲಿದೆ.

ಹೋಳಿ ಹುಣ್ಣಿಮೆಯಂದು ಬಣ್ಣದ ನೀರು ಮಾಡಿ ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡು ಉಲ್ಲಾಸದಿಂದ ಕಳೆಯಲು ಇಚ್ಛಿಸುತ್ತಾರೆ. ಈ ಬಣ್ಣದ ನೀರಿಗೆ ಗ್ರಾಮೀಣ ಭಾಗದಲ್ಲಿ ಓಕುಳಿ ಎನ್ನುತ್ತಾರೆ. ಹೋಳಿ ಹಬ್ಬಕ್ಕೆ ಕೆಲೆವೆಡೆ ಓಕುಳಿ ಹಬ್ಬ ಎಂದೂ ಕರೆಯುತ್ತಾರೆ. ಹೀಗೆ ಓಕುಳಿ ಸಂಪ್ರದಾಯ ನಮ್ಮ ಸಂಸ್ಕೃತಿಯಲ್ಲಿ ಬೆರೆತುಹೋಗಿದ್ದು ಹೋಳಿಹಬ್ಬ ವಸಂತೋತ್ಸವಗಳೊಂದಿಗೂ ಸಂಬಂಧ ಪಡೆಯುತ್ತದೆ.

– ವೈ.ಸಿ.ಬಿ.

ಓಚ್ಚಿರ ಪರಬ್ರಹ್ಮ ಮೂರ್ತಿ ಕೇರಳದ ದೇವಸ್ಥಾನಗಳ ಸಾಮಾನ್ಯ ಸ್ವರೂಪಗಳಿಗಿಂತ ತೀರಾ ಭಿನ್ನವಾಗಿ ಕೊಲ್ಲಂ ಜಿಲ್ಲೆಯ ಓಚ್ಚಿರ ಎಂಬಲ್ಲಿನ ಪರಬ್ರಹ್ಮಮೂರ್ತಿಯ ಸನ್ನಿಧಿಯಿದೆ. ಸಾಮಾನ್ಯ ದೇವಸ್ಥಾನಗಳಲ್ಲಿರುವ ಗರ್ಭಗುಡಿ, ಸುತ್ತುಪೌಳಿ, ಧ್ವಜಸ್ತಂಭ ಇದಾವುದೂ ಇಲ್ಲಿಲ್ಲ. ವಿಶಾಲವಾಗಿ ವ್ಯಾಪಿಸಿರುವ ಪೊದೆ, ಬಳ್ಳಿಗಳು – ಇವಿಷ್ಟೆ ಇಲ್ಲಿರುವುದು. ಮೇಲ್ಛಾವಣಿಯಗಳೇ ಇಲ್ಲದೆ, ಮಳೆ, ಮಂಜು, ಬಿಸಿಲುಗಳಿವೆ ಸದಾ ತನ್ನನ್ನು ಒಡ್ಡಿಕೊಂಡು ಇಲ್ಲಿ ನೆಲೆನಿಂತಿರುವ ಆ ಪರದೇವನು ಸದಾ ತನ್ನನ್ನು ಹುಡುಕಿ ಬರುವ ಸಾಮಾನ್ಯ ಭಕ್ತರಿಗೆ ನಿರಂತರವಾಗಿ ದರ್ಶನಭಾಗ್ಯವನ್ನು ಕರುಣಿಸುತ್ತಾನೆ. ಸರ್ವವ್ಯಾಪಿಯಾದ ಭಗವಂತನ ಸಾಕ್ಷಾತ್ಕಾರವನ್ನು ಯಾವುದೇ ಅಡೆತಡೆಗಳಿಲ್ಲದೆ ಮುಕ್ತ ಮನಸ್ಸಿನಿಂದ ಪಡೆಯಬಹುದು ಎನ್ನುವುದೇ ಓಚ್ಚಿರ ಪರಬ್ರಹ್ಮ ಮೂರ್ತಿ ನೀಡುವ ಸಂದೇಶ.

ಮಿಥುನ ಮಾಸದ ಮೊದಲ ಮತ್ತು ಎರಡನೆಯ ದಿನಗಳಂದು (ಚಾಂದ್ರಮಾನ ಪ್ರಕಾರ ಜ್ಯೇಷ್ಠ ಮಾಡ) ಇಲ್ಲಿ ನಡೆಯುವ ‘ಓಚ್ಚಿರ ಕಳಿ’ (ಓಚ್ಚಿರ ಕ್ರೀಡೆ) ಇಲ್ಲಿನ ಪ್ರಮುಖ ಉತ್ಸವ. ಓಚ್ಚಿರದ ನಾಡಹಬ್ಬವೆಂದೇ ಕರೆಯಲಾಗುವ ಈ ಉತ್ಸವಕ್ಕೆ ಜನಸಾಗರವೇ ಹರಿದು ಬರುತ್ತದೆ. ಕೈಯಲ್ಲಿ ಕತ್ತಿ, ಗುರಾಣಿಗಳನ್ನು ಹಿಡಿದು ತಲೆಗೊಂದು ಮುಂಡಾಸು ಧರಿಸಿ ಓಚ್ಚಿರ ಕ್ರೀಡೆಗೆ ಬರುವ ಜನರು ಎರಡು ಭಾಗಗಳಾಗಿ ವಿಂಗಡಣೆಗೊಂಡು ತಮ್ಮ ಯುದ್ಧ ನೈಪುಣ್ಯವನ್ನು ಪ್ರದರ್ಶಿಸುತ್ತಾರೆ. ಹಿಂದೆ ಕಾಯಂಕುಳಂ ಅರಸನಿಗೂ ಅಂಬಲಪುಳ ಅರಸನಿಗೂ ನಡೆದ ಘೋರ ಯುದ್ಧವನ್ನು ಸ್ಮರಿಸುವ ಕಲಾರೂಪದ ಹೋರಾಟ ಇದು. ಆರ್ಭಟಿಸುತ್ತಾ ಬೊಬ್ಬಿಡುತ್ತಾ ಬೀಸಿ ಹೊಡೆವ, ಹೊಡೆತಗಳಿಂದ ತಪ್ಪಿಸಿಕೊಳ್ಳುವ, ಶತ್ರುಪಾಳಯಕ್ಕೆ ಬಿರುಗಾಳಿಯಂತೆ ಮುನ್ನುಗ್ಗಿ ಹೋರಾಡುವ ಈ ಕ್ರೀಡಾ ವಿನೋದವು ಆಕರ್ಷಕವಾದುದು. ಪ್ರೇಕ್ಷಕರು ಸುತ್ತಲೂ ನಿಂತು ಆಟಗಾರರಿಗೆ ಉತ್ಸಾಹ ತುಂಬುತ್ತಾರೆ.

ಕ್ರೀಡೆ ನಡೆಯುವ ಜಾಗಕ್ಕೆ ‘ಓಚ್ಚಿರ ಕಣ’ ಎನ್ನುವರು. ಕಣ ಎಂದರೆ ಯುದ್ಧಕಣವೇ ಆಗಿದೆ. ಹಿಂದೆ ಕರುನಾಗಪಳ್ಳಿ, ಚುಕ್ಕುವಳ್ಳಿ, ನೂರನಾಡ್ ಮುಂತಾದೆಡೆಗಳಲ್ಲೆಲ್ಲಾ ಇಂತಹ ಕಣಗಳಿದ್ದುವು. ಅವೆಲ್ಲಾ ಈಗ ನಾಮಾಶೇಷಗಳಾಗಿವೆ. ಆದರೆ ಓಚ್ಚಿರದಲ್ಲಿ ಮಾತ್ರ ಅದರ ಗತಕಾಲ ಪ್ರೌಡಿಮೆಯಲ್ಲೇ ಇಂದಿಗೂ ಉಳಿದೆದೆ. ಈ ಕಣದ ಭಾಗವಾಗಿಯೇ ಆಲದ ಮರಗಳು, ಕಟ್ಟೆ, ಬನ, ತೀರ್ಥದ ಕೆರೆ ಇತ್ಯಾದಿಗಳು ಇವೆ. ದೇವಸ್ಥಾನಕ್ಕೂ ಈ ಕಣಕ್ಕೂ ವಿಭಸಿಲಾಗದ ನಂಟು.

ಓಚ್ಚಿರದ ಮತ್ತೊಂದು ವಿಶೇಷವೆಂದರೆ, ವೃಶ್ಚಿಕ ಮಾಸ (ಕಾರ್ತಿಕ ಮಾಸ) ದಲ್ಲಿ ಹನ್ನೆರಡು ದಿನಗಳ ಕಾಲ ನಡೆಯುವ ‘ಹನ್ನೆರಡು ದೀಪ’ ಎಂದೇ ಪ್ರಸದ್ಧವಾದ ದೀಪೋತ್ಸವ. ಓಚ್ಚಿರ ದೀಪೋತ್ಸವ ಎಂತಲೇ ಇದು ಪ್ರಸಿದ್ಧವಾಗಿದೆ. ಆ ದಿನಗಳ ವಿಶೇಷವೆಂದರೆ ನಾಡಿನ ನಾನಾ ಕಡೆಯ ಭಕ್ತರು ವ್ರತಧಾರಿಗಳಾಗಿ ಆಗಮಿಸಿ ಜಾತ್ರೆಯ ಅಷ್ಟೂ ದಿನಗಳಲ್ಲಿ ಅಲ್ಲೇ ವಾಸಮಾಡಿ ಪರದೇವನ ಕೃಪೆಗೆ ಪಾತ್ರರಾಗುತ್ತಾರೆ. ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತರು ಇಲ್ಲೊಮ್ಮೆ ನಿಂತು ಹೋಗುವುದು ರೂಢಿ.

ಈಗ ಓಚ್ಚಿರ ಎನ್ನುವುದು ಹಿಂದು ಪದ್ಧತಿಯ ದೇವಸ್ಥಾನವೇ ಆಗಿದ್ದರೂ ಹಿಂದೆ ಅದು ಬೌದ್ಧ ಮಂದಿರವಾಗಿದ್ದಿರಬೇಕೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಕೆಲವು ಆಚರಣೆಗಳಲ್ಲಿ ಬೌದ್ಧಮತದ ಪ್ರಭಾವವನ್ನು ಕಾಣಬಹುದಾಗಿದೆ. ಜಾತಿಭೇದಗಳು, ಬಡವ ಬಲ್ಲಿದ ವ್ಯತ್ಯಾಸಗಳು ಇವು ಯಾವುವೂ ಇಲ್ಲಿರುವುದಿಲ್ಲ. ಈ ಸಮಾನತೆಯ ಪ್ರಜ್ಞೆ ಇಲ್ಲಿಯ ವಿಶೇಷ. ಓಚ್ಚಿರ ದೀಪೋತ್ಸವದಂದು ದೇವರ ದರ್ಶನಕ್ಕೆ ಬರುವ ಅಸಂಖ್ಯಾತ ಭಕ್ತರಿಗೆ ತಾತ್ಕಾಲಿಕವಾಗಿ ಗುಡಿಸಲುಗಳಲ್ಲಿ ವಾಸಿಸುವ ಪದ್ಧತಿಯು ಬೌದ್ಧ ಪದ್ಧತಿಯ ಭಾಗವೇ ಆಗಿದ್ದಿರಬೇಕು. ಗುಡಿಸಲು ಕಟ್ಟಿ ಇಲ್ಲೇ ಹಲವು ದಿನಗಳ ಕಾಲ ವಾಸ್ತವ್ಯ ಹೂಡಿ ಭಜನೆ, ನಾಮಸ್ಮರಣೆಗಳಲ್ಲಿ ಕಾಲಕಳೆಯುವುದು, ಜಾನುವಾರುಗಳನ್ನು ದೇವರಿಗೆಂದು ಬಿಡುವುದು ಇವೆಲ್ಲವನ್ನೂ ಗಮನಿಸಿದಾಗ ಬುದ್ದನ ಕಾಲದ ಪ್ರಾಚೀನ ಚಿಕಿತ್ಸಾ ಕೇಂದ್ರವೂ ಇದಾಗಿರಬೇಕೆಂಬ ಅಭಿಪ್ರಾಯವಿದೆ. ಆಲದ ಮರದ ಕೆಳಗೆ ಬಳ್ಳಿಗಳ ಎಲೆಗಳ ಎಡೆಯಿಂದ ಹರಿದು ಬರುವ ಸೂರ್ಯ ಕಿರಣಗಳು ಆಧುನಿಕ ರೇಡಿಯೇಶನ್‌ಗೆ ಸಮಾನವಾದುದು. ಓಚ್ಚಿರ ಪರಬ್ರಹ್ಮನನ್ನು ಪ್ರಾರ್ಥಿಸಿದರೆ ರೋಗಗಳು ಗುಣವಾಗಿ ರೋಗಿಗಳಿಗೆ ನೆಮ್ಮದಿ ದೊರಕುವುದೆಂದು ನಂಬಿಕೆ.

ಓಚ್ಚಿರದ ಹರಕೆಗಳಲ್ಲೂ ವಿಶೇಷವಿದೆ. ಕೈ ಕಾಲುಗಳ ರೂಪವನ್ನು ಹರಕೆಯ ರೂಪದಲ್ಲಿ ಸಲ್ಲಿಸುವುದು, ಅನ್ನದಾನ, ಸಿಡಿಮದ್ದುಸೇವೆ ವ್ರತಾನುಷ್ಠಾನಗಳೊಂದಿಗೆ ಹಲವು ದಿನಗಳ ಕಾಲ ದೇವಸ್ಥಾನಗಳಲ್ಲೇ ಕಳೆಯುವುದು ಇತ್ಯಾದಿಗಳು ಇಲ್ಲಿನ ಪ್ರಮುಖ ಹರಕೆಗಳು. ಇವುಗಳಲ್ಲಿ ಕೆಲವು ಹರಕೆಗಳಲ್ಲಿ ಬೌದ್ಧಮತದ ಪ್ರಭಾವವಿದೆ. ಇಷ್ಟಾರ್ಥ ಸಿದ್ಧಿಗಾಗಿ, ಉಪಕಾರಸ್ಮರಣೆಗಾಗಿ ಸೊತ್ತುಗಳನ್ನು ಹರಕೆಯ ರೂಪದಲ್ಲಿ ಪರದೇವನಿಗೆ ಸಮರ್ಪಿಸುವುದು ಇದೆ.

ಇಲ್ಲಿನ ಪ್ರಸಾದದಲ್ಲೂ ಪ್ರತ್ಯೇಕತೆಯಿದೆ. ಉಳಿದೆಡೆಗಳಂತೆ ಇಲ್ಲಿ ಭಸ್ಮ ಚಂದನ ತೀರ್ಥ ಇವಾವುವೂ ಇಲ್ಲ. ಅದರ ಬದಲಾಗಿ ಕೆಸರಿರುವ ಮಣ್ಣನ್ನೇ ನೀಡಲಾಗುತ್ತದೆ. ಮಣ್ಣಿನ ಜತೆಗೇ ತಾದಾತ್ಮ್ಯವಾಗುವ ಪರದೇವನ ಪ್ರಸಾದವು ಅನುಗ್ರಹದಾಯಕವೂ ಸರ್ವರೋಗಸಂಹಾರಿಯೂ ಆಗಿದೆಯೆಂದೂ ಭಕ್ತರು ನಂಬುತ್ತಾರೆ. ಆ ಮಣ್ಣನ್ನು ದೇಹಕ್ಕೆ ಬಳಿಯುತ್ತಾರೆ ಅಥವಾ ಸೇವಿಸುತ್ತಾರೆ.

ಬುದ್ಧ ಚಿಂತನೆಗಳ ಉದಾತ್ತವಾದ ಒಳನೋಟಗಳನ್ನು ಓಚ್ಚಿರದ ಪ್ರತಿಯೊಂದು ಚಲನೆಗಳಲ್ಲೂ ಕಾಣಬಹುದು. ಹಾಗಾಗಿಯೇ ಉಳಿದೆಡೆಗಳಿಗಿಂತ ಇದು ತೀರಾ ಭಿನ್ನವಾಗಿಯೇ ಉಳಿಯುತ್ತದೆ.

– ಕೆ.ಎಸ್.ಎಚ್. ಅನುವಾದ ವಿ.ಸಿ.

ಓಣಂ ಓಣವು ಕೇರಳ ರಾಜ್ಯದ ಅಧಿಕೃತ ಹಬ್ಬ. ಜಾತಿಮತ ಭೇದವಿಲ್ಲದೆ ಎಲ್ಲರೂ ಆಚರಿಸುವ ಇನ್ನೊಂದು ಹಬ್ಬ ಕೇರಳೀಯರಿಗೆ ಇಲ್ಲವೆಂದೇ ಹೇಳಬಹುದು. ಸಂಘಂ ಕಾಲದಲ್ಲಿ ದಕ್ಷಿಣ ಭಾರತಾದ್ಯಂತ ಓಣಂ ಆಚರಿಸಲ್ಪಡುತ್ತಿತ್ತೆಂದು ದಾಖಲೆಗಳಿವೆ. ಸಂಘ ಕಾಲದ ಕೃತಿಯಾದ ಪತ್ತುಪಾಟ್ಟಿನಲ್ಲಿರುವ ಮಧುರೈ ಕಾಂಚಿಯಲ್ಲಿ ಓಣಂ ಉತ್ಸವದ ಬಗೆಗೆ ಪ್ರಸ್ತಾಪವಿದೆ. ಮಧುರೆಯಲ್ಲಿ ಒಂದು ಮಹೋತ್ಸವವಾಗಿಯೇ ಓಣಂ ಆಚರಣೆಗೊಳ್ಳುತ್ತಿತ್ತು. ಆದರೆ ಇಂದು ಓಣಂ ಕೇರಳೀಯರ ಉತ್ಸವವಾಗಿ ಆಚರಿಸಲ್ಪಡುತ್ತಿದೆ.

10

ಸಿಂಹಮಾಸದ ಹಸ್ತ ನಕ್ಷತ್ರದಿಂದ ತಿರುಓಣಂವರೆಗಿನ ಹತ್ತು ದಿನಗಳಲ್ಲಿ ಓಣವನ್ನು ಪರಂಪರೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಓಣಂನ ಹುಟ್ಟಿನ ಬಗೆಗೆ ವಿದ್ವಾಂಸರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಒಂದು ಕಾಲದಲ್ಲಿ ಕೇರಳದಲ್ಲಿ ಪ್ರಬಲವಾಗಿದ್ದ ಬೌದ್ಧ ಮತದ ಆಚಾರವೇ ಓಣಂ ಎಂದು ಹೇಳಲಾಗುತ್ತದೆ. ಓಣಂ, ತಿರುವೋಣಂ ಎಂಬ ಪದಗಳು ಶ್ರಾವಣ ಎಂಬ ಪದದ ತದ್ಬವಗಳೆಂದೂ ಶ್ರಾವಣವು ಬೌದ್ಧರೆಂದೂ ಇವರು ವಾದಿಸುತ್ತಾರೆ. ಆದರೆ ಓಣಂನ ಹುಟ್ಟಿನ ಕುರಿತು ಸಾಮಾನ್ಯ ಜನರ ಮನಸ್ಸಿನಲ್ಲಿರುವ ಐತಿಹ್ಯವು ಮಹಾಬಲಿ ಮತ್ತು ವಾಮನಿನಗೆ ಸಂಬಂಧಿಸಿದ್ದಾಗಿದೆ. ಕೇರಳವನ್ನು ಆಳುತ್ತಿದ್ದ ಅಸುರ ಚಕ್ರವರ್ತಿಯಾದ ಮಹಾಬಲಿಯ ಸಂಪತ್ತು ಸಾಮರ್ಥ್ಯಗಳ ಬಗೆಗೆ ಅಸೂಯಪರನಾದ ಮಹಾವಿಷ್ಣುವು ವಾಮನಾವತಾರವನ್ನು ತಾಳಿ ಕೇರಳಕ್ಕೆ ಬರುತ್ತಾನೆ. ದಾನವೀರ ನಾದ ಮಹಾಬಲಿಯಲ್ಲಿ ಮೂರಡಿ ನೆಲವನ್ನು ಕೇಳುತ್ತಾನೆ. ವಂಚನೆಯನ್ನು ಊಹಿಸದ ಮಹಾಬಲಿ ದಾನವನ್ನು ಕೊಡತ್ತೇನೆನ್ನುತ್ತಾನೆ. ವಾಮನನು ಆಕಾಶವನ್ನು ಮುಟ್ಟುವಂತೆ ಬೆಳೆದು ತನ್ನ ಮೊದಲ ಎರಡು ಅಡಿಗಳಿಂದ ಭೂಮ್ಯಾಕಾಶಗಳನ್ನು ಅಳೆದು ಮುಗಿಸುತ್ತಾನೆ. ಮೂರನೇ ಪದಾವನ್ನಿಡಲು ಜಾಗವಿಲ್ಲದೆ ಹೋದಾಗ ಮಹಾಬಲಿ ತಲೆತಗ್ಗಿಸಿದ. ವಾಮನನು ಅವನನ್ನು ಪಾತಾಳಕ್ಕೆ ತುಳಿದು ತಗ್ಗಿಸಿದ. ಬಳಿಕ ಇನ್ನು ಮುಂದೆ ಬರುವ ಎಲ್ಲ ಸಿಂಹಮಾಸದ ತಿರುವೋಣಂ ದಿವಸ ಬಂದು ಪ್ರಜಾ ಜನರನ್ನು ಭೇಟಿ ಮಾಡಿ ಮರಳಲು ಅನುಮತಿಯನ್ನು ನೀಡಿದ. ಇದು ಮಹಾಬಲಿ – ವಾಮನ ವೃತ್ತಾಂತ.

ಓಣದ ಹುಟ್ಟಿನ ಬಗೆಗಿನ ಕಥೆಗಳು ಈ ತೆರನಾಗಿ ಇವೆಯಾದರೂ ನಾನಾ ರೀತಿಯ ಕಾರ್ಯಕ್ರಮಗಳೂ ಆಚರಗಳೂ ಇತರ ಪ್ರದರ್ಶನಗಳೂ ಒಳಗೊಳ್ಳುವಂತೆ ಕೇರಳೀಯರು ಓಣಂ ಅನ್ನು ಸ್ವಾಗತಿಸುತ್ತಾರೆ.

‘ಹಸ್ತ’ ದಿಂದಾರಂಭಿಸಿ ಮನೆಯ ಬಾಗಿಲಲ್ಲಿ ಓಣಂ ಹೂಗಳು ಅಥವಾ ಅತ್ತಂ ಹೂಗಳಿಂದ ಕಳಂ ಬರೆಯುತ್ತಾರೆ. ಈ ಹೂವಿನಕಳಂಗಳನ್ನು ರಚಿಸುವವರು ಸಾಮಾನ್ಯವಾಗಿ ಮಕ್ಕಳೇ. ಹಿಂದಿನ ದಿನವೇ ಹೂಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಅವನ್ನು ಆಯ್ದುಕೊಂಡು ಹೂಕಳಂವನ್ನು ರಚಿಸುತ್ತಾರೆ. ಅತ್ತಪೂರಳಂನಲ್ಲಿ ತುಂಬೆಹೂ ಇದ್ದೇ ತೀರಬೇಕೆಂಬ ಕಟ್ಟುಪಾಡು ಹಿಂದಿನ ಕಾಲದಲ್ಲಿ ಇತ್ತು. ಕೊಚ್ಚಿ ಭಾಗದಲ್ಲಿ ಅತ್ತ ಹೂವಿನ ಜತೆಗೆ ತೃಕ್ಕಾಕರಪ್ಪನನ್ನು ಸಂಕೇತಿಸುವ ಸ್ತೂಪಬಿಂಬಗಳನ್ನು ಸಿದ್ಧಪಡಿಸುವ ರೂಢಿಯಿದೆ. ಓಣಂನ ಹತ್ತು ದಿನಗಳಲ್ಲೂ ಅತ್ತಪೊಕ್ಕಳವನ್ನು ರಚಿಸಲಾಗುತ್ತದೆ. ಕೆಲವೆಡೆಗಳಲ್ಲಿ ತಿರುವೋಣಂ ದಿನ, ರಾತ್ರಿ ಹೊತ್ತಿನಲ್ಲಿ ಅತ್ತಪೂಕ್ಕಳಂನ ‘ಹೂ ಬಾಚುವುದು’ ಎಂಬೊಂದು ಕಾರ್ಯಕ್ರಮವಿದೆ.

ಓಣಂನ ದಿನಗಳು ಸಂತಸದ ದಿನಗಳು ಕೂಡ ಆಗಿವೆ. ಮನೆಯನ್ನು ಪರಿಸರವನ್ನು, ಶುಚಿಗೊಳಿಸಲಾಗುತ್ತದೆ. ಮನೆ ಮತ್ತು ನಾಡಿನ ದರಿದ್ರಲಕ್ಷ್ಮಿಯನ್ನು ಹೊರಹಾಕಿ ಐಶ್ವರ್ಯಗಳನ್ನು ಸ್ಥಾಪಿಸಲಾಗುತ್ತದೆ. ಎಂಬುದು ಸಂಕಲ್ಪ. ಮಕ್ಕಳು, ಗಂಡಸರು – ಎಲ್ಲರಿಗೂ ಇದು ಸಂಭ್ರಮದ ಕಾಲ. ಅದರಲ್ಲೊಂದು ತುಂಬಿ ತುಳ್ಳಲ್. ತುಂಬೆಯ ಗಿಡವನ್ನೋ ಹಸಿರು ಎಲೆ ದಂಟಿನ ಕಟ್ಟುಗಳನ್ನೋ ಕೈಯನ್ನು ಹಿಡಿದುಕೊಂಡು ಒಬ್ಬಾಕ್ಕೆ ಮಧ್ಯದಲ್ಲಿ ಕುಳಿತುಕೊಳ್ಳುತ್ತಾಳೆ. ಉಳಿದವರು ಎಲೆದಂಟಿನ ಕಟ್ಟು ಹಿಡಿದುಕೊಂಡು ಅವಳಿಗೆ ಹೊಡೆಯುತ್ತಾರೆ. ಹಾಡಿನ ತಾಳವು ತ್ವರಿತಗೊಳ್ಳುತ್ತಿದ್ದಂತೆ ಮಧ್ಯೆ ಇದ್ದವಳು ತುಂಬಿಯಂತೆ ಆವೇಶಭರಿತಳಾಗಿ ಕುಣಿಯುತ್ತಾಳೆ. ಉಯ್ಯಾಲೆಯಾಟ ಮತ್ತು ಅದರ ಹಾಡು ಓಣಂ ಕಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಓಣಂ ರಾತ್ರಿಗಳಲ್ಲಿ ಹೆಂಗಸರು ಕೈಕೊಟ್ಟಕಳಿ (ಕೈಕಟ್ಟಿ ಕುಣಿತ) ನಡೆಸುತ್ತಾರೆ. ಇದಕ್ಕೆ ಪ್ರತ್ಯೇಕ ಹಾಡುಗಳಿವೆ. ಹಗ್ಗ ಜಗ್ಗಾಟ, ತಲಪ್ಪಂದ್ ಕಳಿ (ಒಂದು ತೆರನ ಚೆಂಡಾಟ) ಮುಂತಾದವನ್ನು ಪುರುಷರು ಓಣಂ ಕಾಲದಲ್ಲಿ ನಡೆಸುತ್ತಾರೆ.

ತ್ವಕ್ಕಾಕರೆಯಲ್ಲಿ ಇಪ್ಪತ್ತೆಂಟು ದಿನಗಳ ಓಣಂ ಆಚರಿಸಲಾಗುತ್ತಿತ್ತು. ಕೇರಳದ ಅರಸರಲೆಲ್ಲ ಅಲ್ಲಿಗೆ ತಲುಪುತ್ತಿದ್ದರು. ಕೊಚ್ಚಿ ಅರಸ ಮತ್ತು ಸಾಮೂದಿರಿ ಅರಸರು ‘ಅತ್ತಚಮಯಂ’ (ಹಸ್ತನಕ್ಷತ್ರದಂದು ಮಾಡುವ ಅಲಂಕಾರ) ಎಂಬ ಹೆಸರಲ್ಲಿ ಓಣಂನ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದರು.

ಮಹಾಬಲಿಸಂಕಲ್ಪದ ಒಂದು ಗ್ರಾಮೀಣ ದೇವತೆ ಓಣತ್ತಾರ್. ಸಿಂಹ ಮಾಸದ ಉತ್ತರಾಷಾಢ, ತಿರುಓಣಂ ದಿನಗಳಲ್ಲಿ ಮನೆ ಮನೆಗಳಲ್ಲಿ ವಣ್ಣಾನರು ತೆರಳಿ ಓಣತ್ತಾರ್ ಎಂಬ ದೈವವನ್ನು ಕಟ್ಟಿ ಹಾಡು ಹಾಡಿಸುವ ಸಂಪ್ರದಾಯವು ಉತ್ತರ ಕೇರಳದಲ್ಲಿದೆ. ಓಣತ್ತಾರ್ ಹಾಡಿನಲ್ಲಿ ಮಹಾಬಲಿಯ ಕಥೆಯೂ ಓಣಂನ ವಿಶೇಷತೆಗಳು ಒಳಗೊಂಡಿದೆ.

ಮಧ್ಯತಿರುವಾಂಕೂರಲ್ಲಿ ಓಣಂ ಕಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಓಣತಲ್ಲ್ (ಓಣಂ ಬಡಿದಾಟ) ಒಂದು ವಿನೋದ ಕ್ರೀಡೆ. ‘ಓಣಪ್ಪಡ’ (ಓಣಂಪಡೆ) ಎಂದೂ ಇದಕ್ಕೆ ಹೆಸರಿದೆ. ನಾಯರ್ ಸಮುದಾಯದವರು ಇದರಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ. ಕರ್ಕಟಕ ತಿಂಗಳಲ್ಲಿ ‘ಕಳರಿ’ ಸಾಧನೆ ಮಾಡಿದರೆ, ಸಿಂಹ ಮಾಸದಲ್ಲಿ ಅದರ ಪ್ರಾಯೋಗಿಕ ನೈಪುಣ್ಯವನ್ನು ಪ್ರದರ್ಶಿಸುವ ಅವಕಾಶ ಓಣತಲ್ಲ್ ಕಾರ್ಯಕ್ರಮದಲ್ಲಿ ಲಭ್ಯವಾಗುತ್ತಿತ್ತು.

ಓಣಂಗೆ ಎಲ್ಲ ಮನೆಗಳಲ್ಲೂ ಸುಗ್ರಾಸ ಭೋಜನ ಲಭ್ಯ. ‘ಮನೆ ಮಾರಿಯಾದರೂ ಓಣಂ ಉಣ್ಣಬೇಕು’ ಎಂಬುದು ಹಳೆಯ ಗಾದೆ. ಹೊಸಬಟ್ಟೆ ಅಥವಾ ‘ಓಣಕ್ಕೋಡಿ’ ಯನ್ನು ಉಡುಗೊರೆ ಕೊಡಬೇಕೆಂಬುದು ಓಣಂನ ಇನ್ನೊಂದು ವಿಶೇಷತೆ. ತರವಾಡಿನ ಹಿರಿಯ ಓಣಂ ಬಟ್ಟೆಯುಡುಗೊರೆಯನ್ನು ನೀಡುವುದು ರೂಢಿ. ಕರ್ಕಟಕದ ದಾರಿದ್ಯ್ರವೂ ದೈನ್ಯವೂ ಇಲ್ಲವಾಗಿ ಸಮೃದ್ಧಿಯ ಆಗಮನ ಕೂಡ ಎಂಬುದೇ ಓಣಂನ ಒಳತಿರುಳು. ಫಲಪುಷ್ಪ ಸಮೃದ್ಧವಾದ ಕಾಲವಾದುದರಿಂದ ವಸಂತೋತ್ಸವದ ಪ್ರತೀತಿಯನ್ನು ಕೂಡ ಓಣಂ ಉಂಟು ಮಾಡುತ್ತದೆ.

ಓಣಂ ಅನ್ನು ಕಾರ್ತೀಕ ಕೇರಳದ ಉಲ್ಲಾಸ ಲವಲವಿಕೆಗಳನ್ನು ಪ್ರಕಟಪಡಿಸಿದ ಹಬ್ಬವೆಂದು ಧೈರ್ಯವಾಗಿ ಹೇಳಬಹುದು. ಕೊಯ್ಲು ಮುಗಿಸಿದ ಕಾಲದ ಧನಧಾನ್ಯ ಸಂಪತ್ಸಮೃದ್ಧಿಯನ್ನು ಕೇರಳೀಯರು ಓಣಂ ಅನ್ನು ಆಚರಿಸುತ್ತಾರೆ. ಕೇರಳಕ್ಕೆ ಇಂದು ಬೇಸಾಯ ಇಲ್ಲವಾಗುತ್ತಿದೆ. ಭತ್ತದ ಬಯಲುಗಳು ಮಣ್ಣ ತುಂಬಲ್ಪಟ್ಟು ಕಟ್ಟಡಗಳ ನಿವೇಶನಗಳಾಗುತ್ತವೆ. Globalization ಉದಾರೀಕರಣ ನೀತಿಯಿಂದಾಗಿ ಹೊಸ ವ್ಯಾಪಾರ ಸಂಸ್ಕೃತಿ ಕೇರಳದಲ್ಲೂ ತಲೆಯೆತ್ತಿದೆ. ಈ ಹೊಸ ಸಾಂಸ್ಕೃತಿಕ ಸನ್ನಿವೇಶದಲ್ಲಿ ಕೇರಳದ ಪಾರಂಪರಿಕ ಓಣಂ ಆಚರಣೆಯಲ್ಲಿ ಬದಲಾವಣೆ ಬಂದಿದೆ. ‘ಓಣಸದ್ಯ’ವನ್ನು ಪಾರ್ಸೆಲಾಗಿ ತಲುಪಿಸುವ ಕ್ಯಾಟರಿಂಗ್ ಯೂನಿಟ್‌ಗಳಿವೆ. ಉಯ್ಯಾಲೆಯೂಟವನ್ನೂ ತುಂಬಿತುಳ್ಕಲನ್ನೂ ಮಿನಿಸ್ಕ್ರೀನುಗಳಲ್ಲಿ ತೋರಿಕೊಡುವ ಹೊಸ ಮಾಧ್ಯಮಗಳೂ ಹೊಸ ತೆರನ ‘ಮಾರುಕಟ್ಟೆ ನಿಯಂತ್ರಿತ ಓಣಂ’ ಅನ್ನು ಪ್ರದರ್ಶಿಸಲು ಸಿದ್ಧವಾಗಿದೆ. ಪರಂಪರಾಗತ ಓಣಂ ಆಚಾರ ವಿಚಾರಗಳು ಹಳೆಯ ಮನಸ್ಸುಗಳಲ್ಲಿ ನೆನಪುಗಳಾಗಿ ಮಾತ್ರ ನೆಲೆ ನಿಂತಿವೆಯೆಂದರ್ಥ.

– ಎ.ಕೆ.ಎನ್. ಅನುವಾದ ಕೆ.ಕೆ.

ಓಣತಲ್ಲ್ ಒಂದು ವಿನೋದವೆಂಬಂತೆ ತಮ್ಮ ತಮ್ಮೊಳಗೆ ಓಣಂ ದಿನಗಳಲ್ಲಿ ಹೊಡೆದಾಡುವುದಕ್ಕೆ ಓಣತಲ್ಲ್ ಅಥವಾ ಕೈಯ್ಯಾಂಕಳಿ ಎಂಬ ಹೆಸರಿದೆ.

ಓಣತಲ್ಲ್‌ಗೆ ತ್ರಿಶ್ಶೂರು ಜಿಲ್ಲೆಯಲ್ಲಷ್ಟೆ ಪ್ರಾಮುಖ್ಯವಿದೆ. ಅಂಗಸಾಧನೆ ಮಾಡಿದಾತನಿಗೆ ಮಾತ್ರ ಓಣತಲ್ಲಿನಲ್ಲಿ ಭಾಗವಹಿಸಲು ಸಾಧ್ಯವಿತ್ತು. ಹಲವು ಕಳರಿಗಳ ಆಶಾನರು (ಗುರುಗಳು ಓನತಲ್ಲಿನಲ್ಲಿ ಪಾಲ್ಗೊಳ್ಳುತ್ತಿದ್ದರು. ಹಿಂದಿನ ಕಾಲದಲ್ಲಿ ಅವರಿಗೆ ದಕ್ಷಿಣೆಯಾಗಿ ಹೊಸಬಟ್ಟೆ, ಒಂದಿಷ್ಟು ಹಣ ನೀಡುತ್ತಿದ್ದರು. ಬಿಡುವೇದಿಕೆಯೊಂದರಲ್ಲಿ, ಪ್ರೇಕ್ಷಕರು, ಸುತ್ತಲೂ ನೆರೆದ ‘ಕಳ’ (ಕಣ)ಕ್ಕೆ ಇಳಿದ ಸ್ಫರ್ಧಾಳುಗಳನ್ನು ಹುರಿದುಂಬಿಸುತ್ತಿದ್ದರು. ಆಟವನ್ನು ನಿಯಂತ್ರಿಸುವುದಕ್ಕೆ ಒಬ್ಬ ಆಶಾನ್ ಎದುರಾಳಿಯನ್ನು ಹೊಡೆಯಬಹುದು. ಕೊರಳ ಮೇಲ್ಭಾಗಕ್ಕೆ ಇಲ್ಲವೇ ಸೊಂಟದ ಕೆಳಗೆ ಹೊಡೆಯುವುದು ನಿಷಿದ್ಧ.

ಪುನ್ನತ್ತೂರ್ ರಾಜಕುಟುಂಬವು ಇದ್ದುದು ತಲಪ್ಪಿಳಿ ತಾಲೂಕಿನಲ್ಲಿ, ಅರಮನೆಯ ಪ್ರೋತ್ಸಾಹದಿಂದ ಅಂದು ಕಳರಿವಿದ್ಯೆಯ ಪಟ್ಟುಗಳನ್ನು ಪ್ರದರ್ಶಿಸಲಾಗುತ್ತಿತ್ತು. ಅಂದು ಅದಕ್ಕೆ ಸ್ಪರ್ಧಾರೂಪ ಇರಲಿಲ್ಲ. ಆದರೂ ಎದುರಿಸುವ ವೈರಿಗಳಲ್ಲಿ ವೀರತನವೂ ಹಠವೂ ಇದ್ದುವು. ಅಂದು ಹಾಗೆ ಪ್ರಚಾರದಲ್ಲಿದ್ದ ಹೊಡೆದಾಟವೇ ಓಣತಲ್ಲ್ ಆಗಿ ಬದಲಾಯಿತೆಂದು ಹೇಳುತ್ತಾರೆ. ಇದು ಓಣಂ ದಿನಗಳಲ್ಲಿ ನಡೆಯುತ್ತಿತ್ತು. ಕುನ್ನಂ ಕುಳಂ ಎಂಬಲ್ಲಿಗೆ ಸಮೀಪ ವಾಸಿಸುವ ಹೆಚ್ಚಿನವರು ಕ್ರಿಶ್ಚನ್ನರು. ಪುಸ್ತಕ ಮತ್ತು ಅಡಕೆ ವ್ಯಾಪಾರ ಕೇಂದ್ರವಾಗಿದ್ದ ಕುನ್ನಕುಳಂನಲ್ಲಿ ಓಣತ್ತಲ್ಲ್ ಓಣಂನ ಪ್ರಾರಂಭದ ನಾಲ್ಕು ದಿನ ಮಾತ್ರ ನಡೆಯುತ್ತಿತ್ತು. ಮೂರು ದಿನ ಕಳೆದಾಗ ತ್ರಿಶ್ಶೂರು ನಗರದಲ್ಲಿ ಹುಲಿವೇಶಕ್ಕೆ ಪ್ರಾಧಾನ್ಯ ದೊರೆಯುತ್ತಿರುವ ಕಾರಣ ಈಗ ಓಣಂನ ಆರಂಭದ ಮೂರು ದಿನ ಮಾತ್ರ ಓಣತಲ್ಲ್ ನಡೆಯುತ್ತದೆ.

ಓಣಂ ಸಂದರ್ಭದಲ್ಲಿ ‘ಕವಿಡಿಕ್ಕಳಿ’ ಮುಖ್ಯ ಕಾರ್ಯಕ್ರಮವಾಗಿತ್ತು. ಈ ಆಟದಲ್ಲಿ ತುಂಬ ಹಣ ಇಟ್ಟು ರೂಢಿ ಇತ್ತು. ಕೊನೆಗೆ ಅದು ಒಂದು ದೊಡ್ಡ ಹೊಡೆದಾಟದಲ್ಲಿ ಮುಕ್ತಾಯವಾಗುತ್ತಿತ್ತು. ಅದು ಕೆಲವೊಮ್ಮೆ ಕೇರಿಗಳ ಹೊಡೆದಾಟವಾಗಿ ಮಾರ್ಪಡುತ್ತಿತ್ತು. ಕೊನೆಗೆ ರಾಜಿಯಲ್ಲಿ ಮುಗಿಯುತ್ತಿತ್ತು. ಏನಿದ್ದರೂ ಇದರ ಪ್ರತೀಕಾರವನ್ನು ಮುಂದಿನ ಓಣಂಗೆ ತೀರಿಸಲಾಗುತ್ತಿತ್ತು. ಈ ಮಧ್ಯೆ ಹೊಡೆದಾಡಿಕೊಂಡವರು ಸ್ನೇಹಿತರಾಗುತ್ತಾರೆ. ಆದರೂ ಓಣಂ ಕಾಲಕ್ಕೆ ಅವರು ಹಗೆತೀರಿಸಿಕೊಳ್ಳದೆ ಬಿಡರು. ಇದು ಹೀಗೆಯೇ ಮುಂದುವರಿದು ಅದು ಓಣತಲ್ಲ್ ಆಗಿ ಬದಲಾಯಿತೆಂದು ಕೆಲ ಜನರು ಹೇಳುತ್ತಾರೆ.

ಹಿಂದೆ ಓಣತಲ್ಲ್‌ಗೆ ಸಿದ್ಧರಾಗುತ್ತಿದ್ದವರು ಬರಿಯ ಕೋವಣ ಮಾತ್ರ ಧರಿಸುತ್ತಿದ್ದರು. ಗಾಣದಲ್ಲಿ ತೆಗೆದ ಎಣ್ಣೆಯನ್ನು ಲೇಪಿಸಿಕೊಂಡು ‌ಪ್ರತಿಯೊಬ್ಬರೂ ಸಿದ್ಧರಾಗುತ್ತಿದ್ದರು. ಈ ಮರದ ಗಾಣವು ಕ್ರಿಶ್ಚಿಯನ್ನರ ಅಸ್ಮಿತೆಯ ಭಾಗವಾಗಿದೆ. ಕುನ್ನಂಕುಳದಲ್ಲಿಯೇ ಸಾಕಷ್ಟು ಮರದಗಾಣಗಳಿದ್ದುವು. ಎಣ್ಣೆ ಮಾರಿ ಹಣ ಪಡೆದು ಕುಟುಂಬವನ್ನು ಸಾಕುವ ಅನೇಕ ಜನ (ಕ್ರಿಶ್ಚಿಯನ್ನರು) ಇದ್ದರು. ಓಣತಲ್ಲ್‌ನಲ್ಲಿ ಈ ವಿಭಾಗದವರು (ಇಬ್ಬರು) ಕೆಲವು ಹೆಜ್ಜೆಗಳನ್ನು ಇಟ್ಟು ಓಣತಲ್ಲನ್ನು ಪ್ರಾರಂಭಿಸುತ್ತಿದ್ದರು. ಹೊಡೆದಾಟದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ‘ಅಭ್ಯಾಸಿ’ಗಳು ಓಣತಲ್ಲಿನಲ್ಲಿ ಭಾಗವಹಿಸುತ್ತಾರೆ. ಮದ್ಯ ಅಥವಾ ಇತರ ಅಮಲು ಪದಾರ್ಥಗಳನ್ನು ಓಣಂತಲ್ಲಿನಲ್ಲಿ ಭಾಗವಹಿಸುವರು ಸೇವಿಸುವಂತಿಲ್ಲ. ಆಯುಧಗಳನ್ನಾಗಲಿ, ದೊಣ್ಣೆಗಳನ್ನಾಗಲಿ ಉಪಯೋಗಿಸುವಂತಿಲ್ಲ. ಒಂದರ್ಥದಲ್ಲಿ ಓಣಂತಲ್ಲ್‌ನಲ್ಲಿ ಕಳರಿಯ ಅಭ್ಯಾಸವೇ ಪ್ರಕಟವಾಗುತ್ತದೆ. ‘ಹೊಡೆದು ಹದ ಬರಿಸಿ’ ವೈರಿಯನ್ನು ಸೋಲಿಸುವುದೇ ಇದರ ರೀತಿ.

ಓಣತಲ್ಲ್‌ಗೆ ಅದರದೇ ಆದ ಸಮೂಹದವರಾಗಲಿ, ಕಳರಿ ಸಂಘವಾಗಲಿ ನೇತೃತ್ವ ಕೊಡುತ್ತಿಲ್ಲ. ಯಾರೂ ಬೇಕಾದರೂ ಅದರಲ್ಲಿ ಭಾಗವಹಿಸಬಹುದು. ಹಿಂದೆಲ್ಲ ನೋಡುಗರೇ ಕೆಲವೊಮ್ಮೆ ಕಣಕ್ಕಿಳಿದು ಬಿಡುತ್ತಿದ್ದರು, ಇಳಿದಾತ ಸೋತರ ಇನ್ನೊಬ್ಬ ಕಣಕ್ಕಿಳಿಯುತ್ತಿದ್ದ. ಹಾಗೆ ಗೆಲ್ಲುವವನಿಗೆ ಓಣಂ ಬಟ್ಟೆಯನ್ನೂ ಹಣವನ್ನೂ ಕೊಡುತ್ತಿದ್ದರು.

ಇಂದು ಕೆಲವು ಕ್ಲಬ್ಬುಗಳು ಹೆಸರಿಗಷ್ಟೇ ಓಣಂತಲ್ಲನ್ನು ಸಂಘಟಿಸುತ್ತಿವೆ. ಅದು ಅಂದು ಒಳ್ಳೆಯ ಪ್ರದರ್ಶನವೆಂದೇ ಭಾಸವಾಗುತ್ತಿಲ್ಲ. ಯಾಕೆಂದರೆ ಅದರಲ್ಲಿ ಕಳರಿಯ ಪಟ್ಟುಗಳಿಲ್ಲ; ಬದಲಾಗಿ ಕರಾಟೆ, ಕುಂಗ್ – ಫು ಪಟ್ಟುಗಳು ಕಾಣಿಸಿಕೊಂಡಿವೆ. ಮಾತ್ರವಲ್ಲ ಸಿದ್ಧಪಡಿಸಿದ ಸ್ಟೇಜ್‌ನಲ್ಲಿ ಈ ಹೊಡೆದಾಟವನ್ನು ಪ್ರದರ್ಶಿಸುತ್ತಾರೆ.

ಈಗ ನಡೆಸಲಾಗುತ್ತಿರುವ ಓಣತ್ತಲ್ಲ್‌ಗೆ ಮುಂಚಿತವಾಗಿಯೇ ಹೆಸರು ನೋಂದಾಯಿಸಬೇಕು. ಅಲ್ಲದೆ ಅದಕ್ಕೆ ಫೀಸೂ ನಿಗದಿತವಾಗಿದೆ. ಅಂತೆಯೇ ಟ್ರೋಫಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ನೋಡುಗರು ಭಾಗವಹಿಸವುದೂ ನಿಂತು ಹೋಗಿದೆ. ಒಣತ್ತಲ್ಲ್‌ ತುಂಬ ವಿರಳವಾದ ಒಂದು ದೃಶ್ಯವಾಗಿಬಿಟ್ಟಿದೆ.

– ಕೆ.ಯು.ಎಚ್. ಅನುವಾದ ಕೆ.ಕೆ.

ಓಲ ಕುಡ ಪರಯ ಸಮುದಾಯದವರು ಓಲೆಯ ಛತ್ರಿಯನ್ನು ನಿರ್ಮಿಸುತ್ತಾರೆ. ಇದಕ್ಕೆ ‘ಓಲ ಕುಡ’ ಎಂದು ಹೆಸರು. ಭಗವತಿ ಕ್ಷೇತ್ರಗಳಿಗೆ ವೇಟುವರು ಧಾರ್ಮಿಕ ಆಚರಣೆಯ ಅಂಗವಾಗಿ ಈ ಛತ್ರಿಗಳನ್ನು ಕೊಂಡೊಯ್ಯುತ್ತಾರೆ. ಬಿದಿರು, ತಾಳೆ, ಓಲೆ, ತೆಂಗಿನ ಮಡಲಿನ ನಾರು ಓಲಕುಡ ನಿರ್ಮಾಣದ ಸಾಮಗ್ರಿಗಳು.

ಭಾರ ಕಡಿಮೆ ಇರುವ ಬಿದಿರಿನ ದಂಟನ್ನು ತಂದು, ಅದರ ಒಂದು ತುದಿಯಲ್ಲಿ ತಾಳೆ ಓಲೆಗಳನ್ನು ಹರಡಿ, ಕಡ್ಡಿಗಳಿಂದ ಚುಚ್ಚಿ ಓಲೆ ಛತ್ರಿಗಳನ್ನು ನಿರ್ಮಿಸುತ್ತಾರೆ. ತಾಳೆ ಓಲೆಗಳನ್ನು ಸಂಗ್ರಹಿಸಿ, ಒಣಗಿಸಿ, ಛತ್ರಿಗಾಗಿ ವಿಶಿಷ್ಟ ಆಕಾರದಲ್ಲಿ ಕತ್ತರಿಸುತ್ತಾರೆ. ಧಾರ್ಮಿಕ ಉದ್ದೇಶಗಳ ಹೊರತಾಗಿ ಯಾರೂ ಓಲೆಛತ್ರಿಗಳನ್ನು ಈಗ ಬಳಸುತ್ತಿಲ್ಲ.

ದೇವಸ್ಥಾನಗಳಿಗೆ ಛತ್ರಿ ನಿರ್ಮಿಸುವಾಗ ಪರಯರು ಏಳು ದಿವಸಗಳ ಕಾಲ ವ್ರತವನ್ನು ಆಚರಿಸಬೇಕು. ಈ ಸಂದರ್ಭದಲ್ಲಿ ಮದ್ಯ ಮಾಂಸಾದಿಗಳನ್ನು ವರ್ಜಿಸಬೇಕು. ಇದಕ್ಕಾಗಿ ಪ್ರತಿಫಲವನ್ನು ಕೇಳಬಾರದು. ಪೀಟುವರು ಕೊಡುವ ದಕ್ಷಿಣೆಯನ್ನು ಮಾತ್ರ ಸ್ವೀಕರಿಸಬೇಕು. ಹಿಂದಿನ ಕಾಲದಲ್ಲಿ ಓಲೆಛತ್ರಿ ನಿರ್ಮಿಸಿದರೆ ಒಂದು ಬಳ್ಳ ಅಕ್ಕಿ. ತೆಂಗಿನ ಕಾಯಿ, ತರಕಾರಿ ಸಿಗುತ್ತಿತ್ತು. ಓಲೆಛತ್ರಿ ನಿರ್ಮಾಣದ ಅಧಿಕಾರ ಪರಯರ ಕೆಲವು ಕುಟುಂಬಗಳಿಗೆ ಮಾತ್ರ ಸೀಮಿತವಾಗಿತ್ತು. ಪರಂಪರಾಗತವಾಗಿ ಮುಂದುವರಿಯುತ್ತದೆ.

– ಕೆ.ಯು.ಎಚ್. ಅನುವಾದ ಎನ್.ಎಸ್.

ಓಶಾನ ಪಾಟುಗಳ್ ಆಲಿವ್ ಮರದ ರೆಂಬೆಯನ್ನು ಕೈಯಲ್ಲಿ ಹಿಡಿದು ಡೇವಿಡ್‌ನ ಪ್ರಕಾರ ಹಾಡಿದ ಹಾಡಿನ ಕೇರಳೀಯ ರೂಪವನ್ನು ‘ಓಶಾನ ಪಾಟು’ಗಳು ಎಂದು ಕರೆಯುತ್ತಾರೆ. ‘ಜೆರುಸಲೇಮ್‌’ಗೆ ಯೇಸು ನಡೆಸಿದ ನಾಟಕಿಯ ಪ್ರವೇಶವನ್ನು, ಯೆಹೂದ್ಯರು ಎಲೆಗಳನ್ನು ಬೀಸಿ ಮತ್ತು ತಮ್ಮ ಮೇಲಂಗಿಯನ್ನು ದಾರಿಯಲ್ಲಿ ಹಾಸಿ ಆಚರಿಸಿದರು. ‘ಹೋಶಾನ’ ಎಂಬ ಹೀಬ್ರೂ ಪದಕ್ಕೆ ‘ನಮ್ಮನ್ನು ರಕ್ಷಿಸಬೇಕು’ ಎಂಬ ಅರ್ಥ. ‘ತೆನೆ ಹಬ್ಬದ’ ದಿನದಂದು ತೆನೆಯು ಬೇಗನೆ ಬಾಡಿದರೆ ಅದು ತಮ್ಮ ಆಯುಷ್ಯವನ್ನು ಬಾಧಿಸುತ್ತದೆ. ಎಂದೂ, ತೆನೆಯು ಛಿದ್ರಗೊಂಡರೆ ಅದು ತಮ್ಮ ಶರೀರಕ್ಕೂ ಬಾಧಿಸುತ್ತದೆ ಎಂದು ಭಕ್ತರು ನಂಬಿದ್ದರು.

ಕೇರಳದ ಚರ್ಚುಗಳಲ್ಲಿ ವಿಶಿಷ್ಯಾ, ಕ್ಯಾಥೋಲಿಕ್ ಕ್ರೈಸ್ತರು, (Syro Malabar, Malankara, Latin) ಅಂತ್ಯೇಕನ ಕ್ರೈಸ್ತರು (Syrian Orthodox, Syrian Jacobite) ಮೊದಲಾದವರು ‘ಹೋಕಾಣ’ ಬಹಳ ಭಕ್ತಿ, ಗೌರವದಿಂದ ಮತ್ತು ವಿಜೃಂಭಣೆಯಿಂದ ಆಚರಿಸುತ್ತಾರೆ. ಪಾದ್ರಿಯು ತೆನೆಯನ್ನು ಮಂತ್ರಿಸಿ, ಆ ಬಳಿಕ ಅದನ್ನು ಭಕ್ತರಿಗೆ ಕೊಡುವರು. ಅನಂತರ ಏಸುವಿನ ಪ್ರವೇಶವನ್ನು ಸ್ಮರಿಸುವ ಪ್ರದಕ್ಷಿಣೆಯು ನಡೆಯುತ್ತದೆ. ಈ ವೇಳೆ ಪಾದ್ರಿ ಯೇಸುವಾಗಿಯೂ ಮತ್ತು ಭಕ್ತರು ಯಹೂದ್ಯವಾಗಿ ಚಿತ್ರಿಸಲ್ಪಡುತ್ತಾರೆ. ಈ ‘ಓಶಾನ್ ಮಂತ್ರ’ವನ್ನು ಬಹಳ ಪ್ರಾಧಾನ್ಯದಿಂದ ಮತ್ತು ಗೌರವದಿಂದ ಕಾಣಲಾಗುತ್ತದೆ.

ಮಂತ್ರ ಮಾಡಿ ದೊರಕಿದ ತೆನೆಯನ್ನು ಭಕ್ತರು ತಮ್ಮ ಮನೆಯ ಹೆಬ್ಬಾಗಿಲಲ್ಲಿ ಭದ್ರವಾಗಿ ಕಟ್ಟುತ್ತಾರೆ. ಭೂತ ಪ್ರೇತಗಳ ಉಪಟಳವನ್ನು ತಡೆಯಲು ಇದು ಸಹಾಯಕವಾಗಿದೆ ಎಂಬುದು ನಂಬಿಕೆ. ವೆಸಹಾ ಗುರುವಾರದಂದು ತಯಾರಿಸುವ ‘ಕರಿಶಪ್ಪರಿ’ಗೆ ಈ ತೆನೆಯ ಒಂದು ಚಿಕ್ಕ ತುಂಡನ್ನು ಹಾಕುವರು.

೧೯೨೭ರಿಂದ ಮಲಬಾರಿನ ವಿವಿಧ ಸ್ಥಳಗಳಲ್ಲಿ ಮತ್ತು ದೇವಾಲಯಗಳಲ್ಲಿ ‘ಓಶಾನ್‌’ನ್ನು ಆಚರಿಸುತ್ತಿದ್ದರು. ೧೯೮೭ರಲ್ಲಿ ಮಲಂಗರ ಕ್ಯಾಥೋಲಿಕ್ ಕ್ರೈಸ್ತರು ತೆಂಗಿನ ಗರಿಗಳ ಅಲಭ್ಯತೆಯಿಂದಾಗಿ ಈಚಲ ಮರದ ಎಲೆಯನ್ನು ಉಪಯೋಗಿಸುತ್ತಿದ್ದರು.

ಸಿರಿಯನ್ ಕ್ರೈಸ್ತರು ತೆನೆಯನ್ನು ಡಿಸೆಂಬರ್ ತಿಂಗಳವರೆಗೂ ಜೋಪಾನವಾಗಿಟ್ಟುಕೊಳ್ಳುತ್ತಿದ್ದರು. ಬಳಿಕ ಅದನ್ನು ಯೇಸುವಿನ ಜನ್ಮ ದಿನದಂದು(ಯಾಲ್ದಂ), ಹೊತ್ತಿಸುತ್ತಿದ್ದರು. ಸೀರೋಮಲಬಾರ್, ಲ್ಯಾಟೀನ್ ಕ್ಯಾಥೋಲಿಕ್ ಚರ್ಚು ವ್ಯಾಪ್ತಿಯ ಜನರು ‘ವಿಭೂತಿ ಬುಧವಾರ’ದಂದು ತೆನೆ ಹೊತ್ತಿಸಿದಾಗ ಉಂಟಾದ ಭಸ್ಮವನ್ನು ತಮ್ಮ ಹಣೆಗೆ ಹಾಕುತ್ತಿದ್ದರು. ‘ಮನುಷ್ಯ ಮಣ್ಣಾಗುತ್ತಾನೆ, ಅವನು ಮಣ್ಣಿನೊಂದಿಗೆ ಸೇರಬೇಕಾದವನು ಮತ್ತು ಭೂಮಿಯಲ್ಲಿ ಮನುಷ್ಯ ಜೀವನವು ಶೈಕ್ಷಣಿಕ ಮಾತ್ರ’ ಎಂಬುದನ್ನು ‘ವಿಭೂತಿ ಬುಧವಾರ’ ದ ಆಚರಣೆಯು ವ್ಯಕ್ತಪಡಿಸುತ್ತದೆ. ಪ್ರಾದೇಶಿಕ ಚರ್ಚ್ ವ್ಯಾಪ್ತಿಯವರು, ಪ್ರೊಟಸ್ಟಂಟ್ ಚರ್ಚ್ ವ್ಯಾಪ್ತಿಯವರು ಈ ಆಚರಣೆಯನ್ನು ಆಚರಿಸುವುದಿಲ್ಲ. ಪ್ರಾಚೀನ ಚರ್ಚ್‌ ವ್ಯಾಪ್ತಿ ಅಥವಾ ಸಮಾಜ ಪರಂಪರೆಯ ಪ್ರತೀಕವಾಗಿ ಮತ್ತು ಸ್ಮರಣಾರ್ಥವಾಗಿ ‘ಓಶಾನ್‌’ನ್ನು ಆಚರಿಸಲಾಗುತ್ತದೆ.

– ಟಿ.ವಿ.ಎಂ. ಅನುವಾದ ಎನ್.ಎಸ್.