ಕುರವನ್ – ಕುರತ್ತಿ ಆಟ್ಟಮ್ ತಮಿಳುನಾಡಿನ ಹಲವಾರು ಪ್ರದರ್ಶಕ ಕಲೆಗಳಲ್ಲಿ ಇಂದಿಗೂ ಉಳಿದುಬಂದಿರುವ ಒಂದು ಕಲೆ. ಇಲ್ಲಿ ಪಾತ್ರಧಾರಿಗಳು ಕೊರವನಂತೆಯೂ, ಕೊರತಿಯಂತೆಯೂ ವೇಷಧರಿಸಿಕೊಂಡು ಹಾಡಿ ಕುಣಿದು ಜನರನ್ನು ರಂಜಿಸುತ್ತಾರೆ. ಈ ಕೊರವ – ಕೊರತಿ ವೇಷಗಳು ನೀಡುವ ಪ್ರದರ್ಶನವೇ ‘ಕೊರವ – ಕೊರತಿ ಆಟ’ ಎಂದು ಸುಪ್ರಸಿದ್ಧವಾಗಿದೆ. ಇದರ ಮೂಲದ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ ಇದರ ಪ್ರಾಚೀನತೆಗೆ ಸಾಕ್ಷ್ಯಗಳಿವೆ. ಐತಿಹಾಸಿಕ ರಾಜಮನೆತನವಾದ ವಿಜಯನಗರ ಅರಸರ ಕಾಲದಲ್ಲಿ ಈ ಆಟ ನಡೆದಿದ್ದರೆ ಬಗ್ಗೆ ತಾಳೆಗರಿ ಪ್ರತಿಗಳಿಂದ ತಿಳಿದುಬರುತ್ತದೆ.

ಈ ಆಟವನ್ನು ಕೊರವ – ಕೊರತಿ ಆಟ, ನರಿ ಕೊರತಿ ಆಟ ಎಂದೂ ಕರೆಯಲಾಗುತ್ತದೆ. ರಾಜ – ರಾಣಿ ಆಟ ಪ್ರಸಿದ್ಧವಾಗುವ ಮುನ್ನವೇ ಕೊರವ – ಕೊರತಿ ಆಟ ಪ್ರಸಿದ್ಧವಾಗಿತ್ತೆಂದು ಕ್ಷೇತ್ರಕಾರ್ಯದ ಮಾಹಿತಿಯಿಂದ ತಿಳಿಯುತ್ತದೆ. ಕೊರವ – ಕೊರತಿ ಆಟ, ರಾಜ – ರಾಣಿ ಆಟದ ಮುಂದುವರಿದ ಭಾಗವಾಗಿಯೂ; ಕರಗ ಕುಣಿತದ ಸನಿಹವಾದ ಆಟವಾಗಿಯೂ ಪ್ರದರ್ಶನಗೊಳ್ಳುತ್ತಿದೆ.

ಬಹುಹಿಂದಿನಿಂದಲೂ ಈ ಆಟವನ್ನು ಕೊರವ ಜನರೇ ಅಂದರೆ ಎಡಪಂಥೀಯರು, ಬಲಪಂಥೀಯರು, ಪಳ್ಳರ್ ಮೊದಲಾದವರು ಆಡುತ್ತಿದ್ದರು. ಕಾಲಾನಂತರದಲ್ಲಿ ಬೇರೆ ಬೇರೆ ಜಾತಿಯ ಜನರೂ ವಿಶೇಷವಾಗಿ ದೇವರ್, ನಾಡಾರ್‌ಗಳು ಕೂಡ ಆಡುತ್ತಿದ್ದಾರೆ.

ಪ್ರಸ್ತುತ ಮಧುರೈ ಸಮೀಪದ ಪ್ರದೇಶಗಳಲ್ಲಿ ಕರಗ ಕುಣಿತದ ಮುಂದುವರಿದ ಭಾಗದ ಆಟ ಎನಿಸುವ ಕೊರವ – ಕೊರತಿ ಆಟಕ್ಕೆ ಜನ ಹೆಚ್ಚು ಮನ್ನಣೆ ನೀಡಿದ್ದಾರೆ. ಕೊರವ ಜನಾಂಗದ ಜೀವನ ಕ್ರಮ ರೀತಿ – ನೀತಿ, ಮಾತುಕತೆ, ನಡವಳಿಕೆಯಲ್ಲದೆ ರಾಜ – ರಾಣಿಯ ಬರುವಿಕೆ ಮೊದಲಾದವನ್ನು ಕೊರವ – ಕೊರತಿ ಆಟದಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ‘ಕಳ್ಳರ್’ ಜನಾಂಗದ ಗಂಡಸರು ಹೆಂಗಸರು ಅಭಿಪ್ರಾಯ ಪಡುತ್ತಾರೆ (೨ – ೭ – ೨೦೦೯ ಮೇಟುಪಟ್ಟಿ)

‘ಕರಗ ಆಟ’ದಲ್ಲಿ ಬರುವ ಕೊರವ – ಕೊರತಿ ಆಟದಲ್ಲಿ ಇವರಿಗೆ ನಿರ್ದಿಷ್ಟ ಅಲಂಕಾರ, ವೇಷಭೂಷಣ ಇರುವುದಿಲ್ಲ ಎಂದು ನಾದಸ್ವರ ನುಡಿಸುವ ಕಲಾವಿದರು ಒಬ್ಬರು ಅಭಿಪ್ರಾಯಿಸುತ್ತಾರೆ. (೫ – ೭ – ೨೦೦೯ ರಾಮನಾಥಪುರಂ).

ಈ ಆಟ ಏಳುಮಲೈ ಪ್ರದೇಶಗಳಲ್ಲಿ ಸೊಲಪ್ಪುರಂ ಪೆರಮಾಳ್ ಕೊರತಿಯಾಗಿಯೂ, ಮಳ್ಳಪುರಂ ನಲ್ಲು ಕೊರವನಾಗಿಯೂ ವೇಷಧರಿಸಿ ಅತ್ತಿಪಟ್ಟಿ ಚಿತ್ರಮಂದಿರದ ಜಾಹೀರಾತು, ಹೊಗೆಸೊಪ್ಪು, ಕಂಪನಿಯ ಜಾಹೀರಾತಿಗೂ ಪ್ರದರ್ಶನ ನೀಡಿದ್ದರು. ಅಂತೆಯೇ ಏಳುಮಲೈ, ಉಸಿಲಮ್ ಪಟ್ಟಿ, ತೇನಿ ಮೊದಲಾದ ಭಾಗಗಲ್ಲಿ ಇದು ಪ್ರಸಿದ್ಧಿ ಪಡೆದಿದೆ.

ಈ ಆಟದ ಹಿಂದೆ ಒಂದು ಧಾರ್ಮಿಕ ನಂಬಿಕೆಯೂ ಅಡಗಿದೆ. ತಿರುನಲ್ವೇಲಿ ಜಿಲ್ಲೆ ಶಿವಗಿರಿ ಪಕ್ಕದ ದೇವಿಪಟ್ಟಣದಲ್ಲಿ ‘ಪಳ್ಳರ್’ ಜಾತಿಯವರು ಕೊರವ – ಕೊರತಿ ವೇಷಧರಿಸಿಕೊಂಡು ದ್ರೌಪದಿ ಅಮ್ಮನ ದೇವಾಲಯಕ್ಕೆ ಹರಕೆ ತೀರಿಸುತ್ತಾರೆ. ಇದರಿಂದ ರೋಗ – ರುಜಿನವಿಲ್ಲದೆ ಉತ್ತಮ ಜೀವನ ನಡೆಸಬಹುದೆಂದೂ ನಂಬುತ್ತಾರೆ. ದಾಯಾದಿಗಳು, ಸಂಬಂಧಿಕರು ಉತ್ತಮ ಜೀವನ ಪಡೆಯಲಿ ಎಂಬುದಾಗಿ ಹರಕೆ ಹೊತ್ತು ಈ ವೇಷ ಧರಿಸುತ್ತಾರೆ (ದೇವಿಪಟ್ಟಣಂ ೮ – ೯ – ೨೦೦೯)

ತೂತ್ತುಕ್ಕುಡಿ ಜಿಲ್ಲೆಯ ಕುಲಶೇಖರ ಪಟ್ಟಣದಲ್ಲೂ ಮುತ್ತಾರಮ್ಮನ್ ಜಾತ್ರೆಗೆ ಕೊರವ – ಕೊರತಿ ವೇಷಧರಿಸಿಕೊಂಡು, ಅಮ್ಮನಿಗೆ ಹರಕೆ ತೀರಿಸುವ ಪದ್ಧತಿ ಇಂದಿಗೂ ರೂಢಿಯಲ್ಲಿದೆ (ಕುರಂಬೂರ್ ೨೭ – ೯ – ೦೯).

ಕೊರವ – ಕೊರತಿ ಆಟದ ಪ್ರದರ್ಶನದಲ್ಲಿ ಒಬ್ಬ ಕೊರವ ಒಬ್ಬ. ಕೊರತಿ, ಒಬ್ಬ ಹಾಸ್ಯಗಾರ ಒಟ್ಟು ಮೂರು ಪಾತ್ರಧಾರಿಗಳಿದ್ದು ಇದರಲ್ಲಿ ಕೊರವರ ಜೀವನ ವಿಧಾನ, ಕಸುಬು, ಗಂಡಸರ ಹಾಗೂ ಹೆಂಗಸರ ಸಮಸ್ಯೆಗಳು ಇವೇ ಹಾಡಾಗಿರುತ್ತವೆ. ಈ ಹಾಡಿಗೆ ತಕ್ಕಂತೆ ವಾದ್ಯಗಳನ್ನು ನಾದಸ್ವರ, ತಬಲ, ಪಂಬೈ, ಉರುಮಿ, ಗಿಡುಮಿಟ್ಟಿ ಮೊದಲಾದವುಗಳ ಮಿಶ್ರಣದಿಂದ ಆಟದ ಪ್ರಸಿದ್ಧಿ ಹೆಚ್ಚಾಗಿದೆ. ಈ ಕುಣಿತ ರಂಜನೀಯವಾಗಿದ್ದು ಒಂದು ಪ್ರಸಿದ್ಧ ಪ್ರದರ್ಶಕ ಕಲೆಯಾಗಿದೆ.

ಇದರ ಪ್ರಸಿದ್ಧಿಗೆ ಒಂದು ಉದಾಹರಣೆ ಎಂದರೆ ಏಳುಮಲೈ, ಉಸಿಲಮ್‌ಪಟ್ಟಿ ಮೊದಲಾದವುಗಳಲ್ಲಿ ಮೇಲ್ವರ್ಗಕ್ಕೆ ಸೇರಿದ ಜನರು ನಡೆಸುವ ಮನೋರಂಜನ ಕಾರ್ಯಕ್ರಮಗಳಲ್ಲಿ ಈ ಕೊರವ – ಕೊರತಿ ಆಟವಿಲ್ಲದಿದ್ದರೆ ಅವರು ಹಣ ನೀಡುವಾಗ ಬಹಳ ಕಡಿಮೆ ಖರ್ಚು ಮಾಡುತ್ತಾರೆ. ಅಲ್ಲದೇ ಅವರು ಕೊರವ – ಕೊರತಿ ಆಟವನ್ನು ಚೆನ್ನಾಗಿ ಆನಂದಿಸುವುದಲ್ಲದೆ, ಅದರ ಆಯೋಜನೆಗೆ ಮುಂದಾಗುತ್ತಾರೆ.

ನಲ್ವತ್ತು ವರ್ಷಗಳ ಹಿಂದೆ ಈ ಕೊರವ – ಕೊರತಿ ಆಟದಲ್ಲಿ ಕೊರವ ವೇಷಧಾರಿ ಸೊಂಟದ ಕೆಳಗೆ ಕೇವಲ ಒಂದು ಲಂಗೋಟಿ ಮಾತ್ರ ಹಾಕಿಕೊಂಡು ಆಡುತ್ತಿದ್ದನು. ಕೊರತಿ ವೇಷಧಾರಿ ಕೂಡ ಎರಡು ಸೀರೆಗಳನ್ನು ಲಂಗವಾಗಿಸಿಕೊಂಡು ಮಂಡಿಯವರೆಗೆ ಮಾತ್ರವೇ ಧರಿಸಿ ಕುಣಿಯುತ್ತಿದ್ದರು. ಈ ಅರೆ – ಬರೆ ನಗ್ನಸ್ಥಿತಿ ಇಂದು ಬದಲಾಗಿದೆ. ಕೊರವ ಸೊಂಟದ ಕೆಳಗೆ ಕೆಂಪು ಟವಲ್ ಧರಿಸುತ್ತಾರೆ. ಕತ್ತಿನಲ್ಲಿ ರುಮಾಲು, ಹೆಗಲಿನ ಮೇಲೆ ತಗಡಿನ ಡಬ್ಬಿಗಳು, ಬಿಲ್ಲು – ಬಾಣ, ಹಲವು ಬಣ್ಣದ ಮಣಿಯ ಸರ ಹಾಕಿಕೊಂಡು ಇರುತ್ತಾನೆ. ಕಣ್ಣುಗಳಿಗೆ ಕಣ್ಕಪ್ಪು ಹಚ್ಚಿಕೊಂಡು ಹುಬ್ಬಿನ ಮೇಲೆ ಬಿಳಿ ಬಣ್ಣದ ಚುಕ್ಕಿ ಇಟ್ಟು ಅಲಂಕರಿಸುತ್ತಾನೆ. ಹೀಗೆ ಇವರು ಪ್ರದರ್ಶನ ನೀಡುತ್ತಾರೆ.

ಅಂತೆಯೇ ‘ಕೊರತಿ’ಯ ವೇಷಭೂಷಣ ಕೂಡ ನೋಡುಗರಿಗೆ ರಂಜನೀಯವಾದುದು. ಅಂದರೆ ಕುಪ್ಪಸ, ದಾವನಿ, ಅರ್ಧಲಂಗ, ತೋಳಿನಲ್ಲಿ ಒಂದು ಉದ್ದದ ಚೀಲ, ಕಾಲಿಗೆ ಕಾಲ್ಗೆಜ್ಜೆ, ತಲೆಯಲ್ಲಿ ಕುದುರೆ ಬಾಲ, ಕತ್ತಿನಲ್ಲಿ ಬಣ್ಣ ಬಣ್ಣದ ಮಣಿಸರ ಹಾಕಿಕೊಂಡಿರುತ್ತಾರೆ. ಕೆಲವು ಕಡೆ ಕೊರತಿ ವೇಷಧಾರಿಗಳು ಆಧುನಿಕ ಉಡುಪಾದ ಚೂಡಿದಾರ್ ಧರಿಸಿಕೊಂಡು ಬರುವುದು ಕೂಡ ರೂಢಿಯಲ್ಲಿದೆ.

ಕೊರವ – ಕೊರತಿ ಆಟದಲ್ಲಿ ಕೊರವನ ಬಳಿ ತಗಡಿನ ಡಬ್ಬಿಯಲ್ಲಿ ಮಾಂಸದ ಸಾರು, ಅನ್ನ ಇರುವಂತೆಯೂ ಅದನ್ನು ತಿನ್ನುವಂತೆಯೂ ಅದಕ್ಕಾಗಿ ಕೊರಮ – ಕೊರತಿ ಜಗಳ ಮಾಡುವಂತೆಯೂ ನಟಿಸುತ್ತಾರೆ. ಈ ಪ್ರದರ್ಶನವನ್ನು ನಿಜವೆಂಬಂತೆ ಜನರು ನೋಡಿ ನಲಿಯುತ್ತಾರೆ.

ನೆಯ್ಯಾಂಡಿ ಮೇಳದಲ್ಲಿ ಕೊರವ – ಕೊರತಿ ಆಟಕ್ಕೆ ತಕ್ಕಂತೆ

ಡೆಯಮೈನಾ ಡೆಯಮೈನಾ ಡೆಯಮೈನಾ ಡೆಯಾಳೋ
ಡೆಯಮೈನಾ ಡೆಯ ಮೈನಾ ಡೆಯಮೈನಾ ಡೆಯಾಳೋ

ಎಂದು ಸುಶ್ರಾವ್ಯವಾಗಿ ಹಾಡು ಹಾಡುತ್ತಾರೆ. ಅನಂತರ ‘ಒಳ ವಿಳಕ್ಕು’ ಚಿತ್ರದಲ್ಲಿ ‘ನಾಂಗ ಪುದುಸಾ ಕಟ್ಟಿಕ್ಕೆಟ್ಟ ಜೋಡಿ ತಾನುಂಗ’ (ನಾವು ಹೊಸದಾಗಿ ಮಾಡ್ಕೊಂಡ ಜೋಡಿಗಳ್ ತಾನೇ) ಎಂಬ ಹಾಡಿಗೂ ‘ಕುಂಭ – ಕ್ಕರೈ ತಂಗೈಯ’ ಎಂಬ ಚಿತ್ರದಲ್ಲಿ ಬರುವ ‘ಕೂಡಲೂರು ಗುಂಡುಮಲ್ಲಿ’ ಎಂಬ ಹಾಡಿಗೂ ‘ಪಾಂಡಿನಾಟ್ಟು ತಂಗಮ್’ ಎಂಬ ಚಿತ್ರದಲ್ಲಿ ಬರುವ ಮಯಿಲಾಡುಮ್ ಪಾರೈಯಿಲೇ ನಾಂಗ ಆಡಿರುಕ್ಕೋಮ್’ (ನವಿಲಾಡೋ ಬಂಡೇಲಿ ನಾವು ಆಡಿದ್ದೀವಿ) ಕುಣಿಯುತ್ತಾರೆ. ಅನಂತರ ಕೊರವ – ಕೊರತಿ ಆಟದ ದೃಶ್ಯ ಪ್ರಾರಂಭವಾಗುತ್ತದೆ.

ಕೊರವ – ಕೊರತಿಸ ಸ್ವಾಗತ ಕೋರುವ ಹಾಡು.

ಕಸುಬಿಗೆ ಸಂಬಂಧಿಸಿದ ಹಾಡು :

ಕಾಟ್ಕುರಾಜ ವೆಡುವ ಸಿಂಗಿ – ಓ ಮೈನಾ ಡಿಯಾಳೋ
ಓ ಸಿಂಗಿ ಡಿಯಾಳೋ
ಕಡಲೋರಮ್ ಕನ್ನಿವಚ್ಚಿ ಕಾತ್ತಿರುಂದೇನ್ ಆಯಾಳೋ

ಹೆಂಗಸು – ಗಂಡಸರಿಗೆ ಸಂಬಂಧಿಸಿದ ಸ್ಫರ್ಧೆಯ ಹಾಡು ಮತ್ತು ಹಚ್ಚೆ ಉಯಿಸುವಾಗ ಹಾಡುವ ಹಾಡು – ಇತ್ಯಾದಿ ಹಾಡುಗಳು ಬರುತ್ತವೆ.

ಕೊರವ – ಕೊರತಿ ಆಟ ಪ್ರತ್ಯೇಕವಾದ ಪ್ರದರ್ಶನವೇನೂ ಅಲ್ಲ. ರಾಜ – ರಾಣಿ ಆಟಕ್ಕೆ ಸಹಾಯಕ ಆಟವಾಗಿ ಇದು ಬರುತ್ತದೆ. ಮಧುರೈ, ತೇನಿ, ವಿರುದನರರ್, ತಿರುನಲ್ವೇಲಿ, ತಂಜಾವೂರು, ತಿರುಚ್ಚಿ, ದಿಂಡುಕ್ಕಲ್ ಮೊದಲಾದ ಸ್ಥಳಗಳಲ್ಲಿ ಈ ಆಟ ಪ್ರದರ್ಶನಗೊಳ್ಳುತ್ತದೆ. ಕರಗ ಕುಣಿತದಲ್ಲಿ ಹೆಂಗಸರೇ ಕೊರತಿ ವೇಷ ಧರಿಸುತ್ತಾರೆ. ಆದರೆ ‘ರಾಜ – ರಾಣಿ’ ಆಟದಲ್ಲಿ ಗಂಡಸರೇ ಕೊರತಿ ವೇಷ ಧರಿಸುವುದು ವಿಶೇಷ.

ವಿಶೇಷವಾಗಿ ಈ ಆಟ ಮದುವೆಯ ಸಮಾರಂಭ. ಕಿವಿಚುಚ್ಚುವ ಶಾಸ್ತ್ರ, ರಾಜಕೀಯ ಕಾರ್ಯಕ್ರಮಗಳು, ವಿದೇಶಿ ಪ್ರವಾಸಿಗರ ಎದುರು, ಋತುಮತಿಯಾದಾಗಿನ ಆಚರಣೆಯ ವೇಳೆ ಪ್ರದರ್ಶನಗೊಳ್ಳುತ್ತದೆ.

ಈ ಆಟದ ಒಂದು ಸಂಭಾಷಣೆ ಹೀಗಿದೆ –

ಕೊರತಿ : ನನ್ನ ಗಂಡಂಗೆ ತಿಳಿಯದಂಗೆ ಅವಿಸಿ ತವ್ನಿ

ಹಾಸ್ಯಗಾರ : ಏನು ! ವಾದ್ಯಗಾರನನ್ನೇ ಇಟ್‌ಕಂಡಿದ್ದೀಯಾ?

ಕೊರತಿ: ಅಯ್ಯೋ ಸ್ವಾಮಿ, ನನ್ ಗಂಡಂಗ ಗೊತ್ತಿಲ್ಲದಂಗೆ ಉಣ್ದೆ ನಿದ್ದೆ ಮಾಡ್ದೆ ಒಂದೊಂದು ಕಾಸ್ನೂ ಕೊಡಿಕ್ಕಿವ್ನಿ ಮಗೂನ್ ಇಸ್ಕೂಲಿಗೆ ಬೇಕಾಯ್ತದೆ ಅಂತ. ಹೊರಗೆ ಮಣಿ, ಸೂಜಿ ಮಾರಿ. ಆಗ ಈ ಮನ್ಷ ಗಲ್ಲದಾಗಿದ್ದ ದುಡ್ಡ ಕದ್ದು ಕುಡ್ದುಬಿಟ್ಟವ್ನೆ ಸಾಮಿ. ಇದ್ನ ದೊಡ್ಡವ್ರು ನೀವಾ ಕೇಳಿ ಸಾಮಿ.

ಹಾಸ್ಯಗಾರ : ಯೋ ಕೊರವ ಯಾಕ್ ಇಂಗ ಮಾಡ್ದೆ?

ಕೊರವ : ಅಯ್ಯೊ ಸಾಮಿ ದೇಹ ಭಾರವಾಗಿತ್ತು. ತುಂಬ ದೂರ ಬೇಟೆಗೆ ಹೋಗಿದ್ದೆ. ಒಂದೂ ಬೇಟೆ ಸಿಕ್ಕಿಲ್ಲ. ಅದಕ್ಕಾಗಿ ಗಲ್ಲದ ಹಣ ತಕ್ಕಂಡು ಸಾರಾಯಿ ಕುಡ್ದು ಬುಟ್ಟೆ ಸಾಮಿ, ಈಗ ಹುಡುಗನ ಇಸ್ಕೂಲಿಗೆ ದುಡ್ಡಿಲ್ಲದೆ ಒದ್ದಾಡತಿವ್ನೀ ಸಾಮಿ.

ಕೊರವ – ಕೊರತಿ ಆಟದ ಸಂಭಾಷಣೆ ‘ನೀತಿ ಪ್ರಧಾನ’ ವಾದುದು. ‘ಅನಗತ್ಯವಾಗಿ ಖರ್ಚು ಮಾಡಬಾರದು; ಹಣವನ್ನು ಉಳಿಸುವುದರಿಂದ ಅನುಕೂಲ’ ಎಂಬ ಸಂದೇಶ ಸಾರುತ್ತದೆ. ಹೀಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸುವಲ್ಲಿಯೂ ಈ ಪ್ರದರ್ಶಕ ಕಲೆ ನೆರವಾಗುತ್ತದೆ.

– ಎಸ್.ಪಿ. ಅನುವಾದ ಆರ್.ಎಸ್.

ಕುರವರ್ ತಮಿಳುನಾಡಿನ ಆದಿವಾಸಿ ಜನವರ್ಗ. ತಮಿಳುನಾಡಿನಲ್ಲಿ ಕಂಡು ಬರುವ ಸಾಂಪ್ರದಾಯಿಕ ಕರಕುಶಲ ವೃತ್ತಿ ನಿರತರಲ್ಲಿ ಪ್ರಮುಖರು. ತಮಿಳಿನಲ್ಲಿ ಇವರನ್ನು ‘ಕುರವರ್’ ಎಂದು ಕರೆಯಲಾಗುವುದು. ಪ್ರಾಚೀನ ತಮಿಳುನಾಡಿನ ಪ್ರಾದೇಶಿಕ ವಿಭಾಗಗಳಲ್ಲೊಂದಾದ ಬೆಟ್ಟ ಹಾಗೂ ಬೆಟ್ಟದ ತಪ್ಪಲು ಪ್ರಾಂತ್ಯಗಳನ್ನೊಳಗೊಂಡ ‘ಕುರಿಂಜಿ’ ಎನ್ನುವ ಪ್ರದೇಶದಲ್ಲಿ ವಾಸಿಸುತ್ತಿದ್ದ ‘ಕುರವರ್’ ಎಂಬ ಪಂಗಡಕ್ಕೆ ಸೇರಿದವರು ಎಂದು ಹೇಳಿಕೊಳ್ಳುತ್ತಾರೆ. ಬೇಟೆಯಾಡುವುದು, ಬೆಟ್ಟ – ಗುಡ್ಡ – ಕಾಡುಗಳಲ್ಲಿ ದೊರಕುವ ಆಹಾರ ಪದಾರ್ಥಗಳನ್ನು ಸಂಗ್ರಹಿಸುವುದು ಇವರ ಮೂಲ ವೃತ್ತಿ. ಕ್ರಮೇಣ ಬುಟ್ಟಿ ಹೆಣೆಯುವುದು ಮುಂತಾದ ಕಸುಬುಗಳನ್ನೂ ವ್ಯವಸಾಯವನ್ನೂ ತಮ್ಮ ಆದಾಯದ ಮೂಲವನ್ನಾಗಿಸಿಕೊಂಡರು.

ಕರಕುಶಲ ವೃತ್ತಿಗಳಾದ ಬುಟ್ಟಿ, ಮೊರೆ ಮೊದಲಾದವುಗಳನ್ನು ಹೆಣೆಯಲು ಅಗತ್ಯವಾದ ಮೂಲ ಪರಿಕರಗಳನ್ನು ಸಂಗ್ರಹಿಸಿಸುವುದಕ್ಕಾಗಿ ಬೆಟ್ಟ ಪ್ರಾಂತ್ಯಗಳಲ್ಲೂ; ತಾವು ತಯಾರಿಸಿದ ವಸ್ತುಗಳ ವಿನಿಮಯಕ್ಕಾಗಿ ಬಯಲು ಪ್ರದೇಶಗಳಲ್ಲೂ ವಾಸಿಸುತ್ತಿದ್ದುದರಿಂದ ಇವರು ಅರೆ ಸಂಚಾರಿಗಳಂತೆ ಜೀವಿಸುತ್ತಿದ್ದಾರೆ.

‘ಕುರವನ್’ ಎಂಬ ಸಾಮಾನ್ಯ ಹೆಸರಿನ, ಉತ್ತರ ಭಾರತದ ಪ್ರಾಂತ್ಯಗಳಿಂದ ಮಧ್ಯಯುಗದಲ್ಲಿ ತಮಿಳುನಾಡಿನಲ್ಲಿ ವಲಸೆ ಬಂದ ಸಂಚಾರೀ ಜನಂಗಾವಾದ ‘ವಾಗ್ರಿ’ ಗಳೊಂದಿಗೆ ಇವರನ್ನು ಸಮೀಕರಿಸಿ ಸಾಧ್ಯವಿಲ್ಲ. ಕುರವಿಕ್ಕಾರನ್, ನರಿಕುವರನ್ ಎಂದೂ ಕರೆಯಲ್ಪಡುವ ಇವರ ಸಮಾಜದ ರೀತಿ – ನೀತಿ, ಸಂಸ್ಕೃತಿ, ಆಚಾರ – ವಿಚಾರ , ಭಾಷೆ ಮೊದಲಾದವುಗಳ ಆಧಾರದಲ್ಲಿ ತಮಿಳುನಾಡಿನ ಪ್ರಾಚೀನ ಜನ ಸಮೂಹವಾದ ‘ಕೊರವರ್’ ಗಿಂತಲೂ ಭಿನ್ನವಾದವರು.

ಪ್ರಾಚೀನ ತಮಿಳುನಾಡಿನಲ್ಲಿ ‘ಕುರವರ್’ ಎಂದೂ; ಕರ್ನಾಟಕದಲ್ಲಿ ‘ಕೊರಚರು’ ಎಂದೂ; ಆಂಧ್ರದಲ್ಲಿ ‘ಎರಕುಲ’ದವರು ಎಂದೂ ಇವರನ್ನು ಕರೆಯಲಾಗುವುದು. ಆದುದರಿಂದಲೇ ತಮಿಳು, ತೆಲುಗು, ಮಲಯಾಳ, ಕನ್ನಡ, ತುಳು, ಮುಂತಾದ ದ್ರಾವಿಡ ಜನ ಸಮೂಹ ಪ್ರತ್ಯೇಕವಾಗುವ ಮುಂಚಿನಿಂದಲೂ ಇವರು ಇದ್ದರಬೇಕೆಂದು ಹೇಳಲಾಗುತ್ತದೆ. ಪ್ರಪ್ರಾಚೀನ ಜನರೆಂದು ‘ಕುರವನ್’ ಜನರನ್ನು ಗುರುತಿಸಬೇಕಾಗಿದೆ. ಸಂಗಂ ಸಾಹಿತ್ಯ ಕುರವರನ್ನು ‘ವೇಡುವರ್’ (ಬೇಡುವವರು), ‘ವೇಡವನ್’ (ಬೇಡುವವ), ವೇಟ್ಟುವರ್ (ಬೇಡ) ಹೀಗೆ ಮುಂತಾದ ಹೆಸರುಗಳಿಂದ ಗುರುತಿಸಿದೆ. ಅಷ್ಟೇ ಅಲ್ಲದೆ, ಇವರು ತಮ್ಮನ್ನು ‘ವಳ್ಳಿ ಮಕ್ಕಳ್’ (ಬಳ್ಳಿಜನ) ಎಂದೂ ಕರೆಕೊಳ್ಳುವುದುಂಟು. ಹೀಗೆ ಬಾಯಿ ಮಾತಿನ ಮೂಲಕ ತಮ್ಮ ಚರಿತ್ರೆಯನ್ನು ಕಟ್ಟಿಕೊಳ್ಳುವ ಮೂಲಕ ಪಾರಂಪರಿಕವಾಗಿ ಜನ ಸಮೂಹದಲ್ಲಿ ಒಂದೆಂದು ತಮ್ಮನ್ನು ಗುರುತಿಸಿಕೊಳ್ಳುವುದರೊಂದಿಗೆ, ತಾವು ‘ಕುರಿಂಜಿ’ ನೆಲವಾಸಿಗಳೆಂದೂ ಹೇಳಿಕೊಳ್ಳುತ್ತಾರೆ.

ಅರೆ ಸಂಚಾರಿಗಳಾದ ಈ ಜನ, ತಾವು ಕೈಗೊಂಡ ವೃತ್ತಿಗಳ ಆಧಾರದ ಮೇಲೆ ತನ್ನನ್ನು ಉಪಪಂಗಡಗಳಾಗಿ ಗುರುತಿಸಿಕೊಳ್ಳುತ್ತಾರೆ. ಉಪ್ಪು ಕುರವರು, ಕರಿಬೇವಿನ ಕುರವರು, ಹೆಜ್ಜೆ ಕುರವರು, ಕಿವಿಚುಚ್ಚುವ ಕುರವರು – ಹೀಗೆ ಹಲವು ಉಪ ಪಂಗಡಗಳನ್ನು ಇವರಲ್ಲಿ ಕಾಣಬಹುದು. ಸಾಮಾನ್ಯವಾಗಿ ಇವರು ಮಾಡವು ವೃತ್ತಿಯನ್ನೂ ವಾಸಿಸುವ ಸ್ಥಳವನ್ನೂ ಆಧರಿಸಿ ಇವರ ತಮ್ಮೊಳಗಿನ ಉಪವಿಭಾಗಗಳನ್ನು ಗುರುತಿಸಿಕೊಳ್ಳುತ್ತಾರೆ. ತಮಿಳುನಾಡು ಸರ್ಕಾರದ ಜಾಳಿ ಪಟ್ಟಿಯೊಳಗೆ ಇವರ ೨೬ ಉಪಪಂಗಡಗಳನ್ನು ಹೆಸರಿಸಲಾಗಿದೆ.

ಒಂದು ಪಂಗಡದವರು, ದಾರಿ ಹೋಕರನ್ನು ದೋಚುವುದು, ದನ – ಕರುಗಳ ಕಳ್ಳತನಗಳಲ್ಲಿ ತೊಡಗಿದುದರಿಂದ ಅವರನ್ನು ಸಾಂಪ್ರದಾಯಿಕ ಅಪರಾಧಿಗಳೆಂದು ಬ್ರಿಟಿಷ್ ಸರ್ಕಾರ ಗುರುತಿಸಿದ್ದುದುಂಟು. ಕುರವರ ಒಂದು ಪಂಗಡದವರು ಉಪ್ಪಿನ ವ್ಯಾಪಾರ ಮಾಡಿ ಜೀವಿಸುತ್ತಿದ್ದದರಿಂದ ಅವರನ್ನು ಉಪ್ಪು ಕುರಮರ್ ಎಂದು ಕರೆಯಲಾಗುತ್ತಿತ್ತು. ಆದರೆ ಬ್ರಿಟಿಷ್ ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ಇವರ ಸಾಂಪ್ರದಾಯಿಕ ವೃತ್ತಿಗಳು ಬಲಹೀನಗೊಂಡವು. ಇಂತಹ ಪರಿಸ್ಥಿತಿಯಲ್ಲಿ ಉಪ್ಪಿನ ವ್ಯಾಪಾರ ಇವರಿಂದ ದೂರಾಯಿತು. ಕಾಡು ಪ್ರಾಣಿಗಳ ಸಂರಕ್ಷಣಾ ನೀತಿ ಹಾಗೂ ಅರಣ್ಯ ಸಂರಕ್ಷಣಾ ನೀತಿ ಮುಂತಾದವುಗಳ ಮೂಲಕ ಅರಣ್ಯದಲ್ಲಿ ದೊರಕುವ ಪದಾರ್ಥಗಳನ್ನು ಸಂಗ್ರಹಿಸುವುದನ್ನು ನಿಯಂತ್ರಿಸಿದ ಕಾರಣದಿಂದಾಗಿಯೂ ವಲಸೆ ಹೋಗುವ ಪ್ರವೃತ್ತಿಯಲ್ಲಿ ನಿರಂತರ ಆದಾಯವಿಲ್ಲದ ಕಾರಣದಿಂದಲೂ ಕುರವರು ಕಳ್ಳತನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರಬೇಕು ಎಂದು ಸಂಶೋಧಕರು ಹೇಳುತ್ತಾರೆ. ಆದರೆ ಈಗಲೂ ಇವರನ್ನು ಸರ್ಕಾರ ಅಪರಾಧೀ ವರ್ಗವೆಂದೇ ಗುರುತಿಸುತ್ತಿದೆ. ಪರ್ವತ ಪ್ರಾಂತ್ಯಗಳಲ್ಲಿ ಪ್ರಾಚೀನ ಕಾಲದಲ್ಲಿ ಆಳ್ವಿಕೆ ನಡೆಸಿದವರಿರಬೇಕೆಂದೂ ಇವರನ್ನು ಗುರುತಿಸಲಾಗಿದೆ. ೧೪ನೇ ಶತಮಾನದಲ್ಲಿ ನಾಂಜಿಲ್ ನಾಡಿನಲ್ಲಿ, ನಾಂಜಿಲ್ ಕುರವರ್ ವಂಶಕ್ಕೆ ಸೇರಿದ ‘ನಾಂಜಿಲ್ ಕುರವನ್’ ಎನ್ನುವವನು, ಆಳ್ವಿಕೆ ನಡೆಸಿದುದಾಗಿ ಐತಿಹಾಸಿಕ ಆಕರಗಳು ತಿಳಿಸುತ್ತವೆ.

ಮಧುರೈ ವೀರನ್, ಕಾಳೀಶ್ವರಿ, ಚಿನ್ನಮ್ಮಾ, ವೀರನಾಗು, ಮಸಾನ ಕರುಪ್ಪು, ಪಾತಾಳಮ್ಮ, ಪಾಪ್ಪಾತ್ತಿಯಮ್ಮ (ಬ್ರಾಹ್ಮಣತಿ), ಅಂಗಾಳೇಶ್ವರಿ ಮುಂತಾ ದೇವತೆಗಳನ್ನು ಇವರು ಆರಾಧಿಸುತ್ತಾರೆ. ದೇವತೆಗಳ ಆರಾಧನೆಯಲ್ಲಿ ಜೀವಬಲಿ ಪ್ರಧಾನ ಪಾತ್ರವಹಿಸುತ್ತವೆ. ಹಂದಿ, ಆಡು, ಮೇಕೆ, ಕುರಿ, ಕೋಳಿ ಮುಂತಾದ ಪ್ರಾಣಿಗಳನ್ನು ಬಲಿ ಕೊಡುತ್ತಾರೆ. ಜೀವನದಲ್ಲಿ ಅನಿವಾರ್ಯ ಆಚರಣೆಗಳಲ್ಲೊಂದಾದ ಕಿವಿಚುಚ್ಚುವ ಕ್ರಿಯೆಯನ್ನು ಸ್ತ್ರೀಯರೇ ಮಾಡುವುದು ಇವರ ವಿಶೇಷಗಳಲ್ಲೊಂದು. ಹೀಗೆ ಸ್ತ್ರೀಯರು ಕಿವಿಚುಚ್ಚುವ ಸಂಪ್ರದಾಯವನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ.

ಕುಲಪ್ರಧಾನವಾದ ವಿವಾಹ ಸಂಪ್ರದಾಯ ಇವರದು. ಚಾತ್ತಪ್ಪಾಡಿ, ಮಾನಿಪ್ಪಾಡಿ, ಕಾವಡಿಯಾನ್, ಮೇಲುತ್ತಾನ್ – ಎಂಬ ನಾಲ್ಕು ಕುಲಗಳಿವೆ. ಇವುಗಳಲ್ಲಿ ಚಾತ್ತಪ್ಪಾಡಿಯೂ ಮಾನಿಪ್ಪಾಡಿಯೂ ಪಾರಂಪಾರಿಕವಾಗಿಯೇ ಮಾವ – ಮೈದುನರ ಸಂಬಂಧ ಹೊಂದಿದೆ. ಇವೆರಡೂ ಕುಲದವರೂ ವೈವಾಹಿಕ ಸಂಬಂಧ ಬೆಳೆಸಬಹುದು. ಇವರು ಕಾವಡಿಯಾನ್ ಕುಲದಲ್ಲಿ ಸಂಬಂಧ ಬೆಳೆಸುವಂತಿಲ್ಲ. ಏಕೆಂದರೆ ಇವರದು ಅಣ್ಣ – ತಮ್ಮಿಂದಿರ ಸಂಬಂಧ, ಮೇಲುತ್ತಾನ್ ಕುಲದವರು ಉಳಿದೆಲ್ಲ ಕುಲದವರೊಂದಿಗೂ ಸಂಬಂಧ ಬೆಳೆಸಬಹುದು.

ವಯಸ್ಸಿನಲ್ಲಿ ಹೆಣ್ಣು ಹಿರಿಯವಳಾಗಿದ್ದರೂ ಮದುವೆ ಮಾಡಿಕೊಳ್ಳುವ ಸಂಪ್ರದಾಐ ಇವರಲ್ಲಿ ಸಹಜವಾಗಿದೆ. ಬಹುಪತ್ನಿತ್ವ ಪದ್ಧತಿಯೂ ಇವರಲ್ಲಿದೆ. ಇವರ ವೈವಾಹಿಕ ಆಚರಣೆಗಳು ತುಂಬ ಸರಳವಾಗಿರುತ್ತವೆ.

ಅಪರಾಧಗಳು ಪತ್ತೆಯಾದ ಸಂದರ್ಭದಲ್ಲಿ ಅದಕ್ಕೆ ಕುರವರೇ ಕಾರಣ ಎಂಬ ಆಪಾದನೆ ಮಾಡುವುದು, ಜಾತಿಯ ತಳಹದಿಯಲ್ಲಿ ಸುಳ್ಳು ದೂರುಗಳನ್ನು ದಾಖಲಿಸುವುದು ಮುಂತಾದ ವಸಾಹತುಶಾಹಿ ಆಡಳಿತ ಕಾಲದ ಪದ್ಧತಿ ಇಂದಿಗೂ ರೂಢಿಯಲ್ಲಿರುವುದರಿಂದ ಇವರ ಜೀವನ ತ್ರಾಸದಾಯಕವಾಗಿದೆ.

ತಮಿಳುನಾಡಿನ ಹಲವೆಡೆಗಳಲ್ಲಿ ಕುರವರು ಸಾಮೂಹಿಕವಾಗಿ ವಾಸುತ್ತಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿರುವ ಜಾತಿ ಅಥವಾ ಕುಲಗಳಂತೆ ಇವರನ್ನು ಪರಿಗಣಿಸುತ್ತಿಲ್ಲ. ಅಲ್ಲದೆ, ವ್ಯವಸಾಯ ಅಥವಾ ವೃತ್ತಿಯಾಧಾರಿತ ವ್ಯಾಪಾರಗಳಲ್ಲಿ ಇವರನ್ನು ಗುರುತಿಸಲಾಗುವುದಿಲ್ಲ.

ಬೆಟ್ಟ ಪ್ರಾಂತ್ಯಗಳಲ್ಲಿ ವಾಸಿಸುತ್ತಿದ್ದ ಕುರವರು ತಮ್ಮ ಪಾರಂಪರಿಕ ವೃತ್ತಿ ನಶಿಸತೊಡಗಿದ ಸಂದರ್ಭದಲ್ಲಿ ಕೆಲವರು ಕಳ್ಳತನದಲ್ಲಿ ತೊಡಗಿರಬಹುದು. ಬದುಕಿನಲ್ಲುಂಟಾದ ಬದಲಾವಣೆಗಳು ಇಂದು ಇವರನ್ನು ಗುರುತಿಸುವ ಅಂಶವಾಗಿ ಪರಿವರ್ತಿತವಾದದ್ದು ವಿಪರ್ಯಾಸ. ನಾಗರಿಕತೆ ಬೆಳೆವಣಿಗೆ ಹೊಂದುತ್ತಿರುವ ಈ ಸಂದರ್ಭದಲ್ಲಿ ಕುರವರು ತಮ್ಮ ಮೇಲೆ ಹೊರಸಲ್ಪಟ್ಟ ಆಪಾದನೆಯನ್ನು ಹೋಗಲಾಡಿಸಿಕೊಳ್ಳುವುದಕ್ಕಾಗಿ ತಮ್ಮೊಳಗೆ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದುದರಿಂದಲೇ ತಮ್ಮ ಜನಾಂಗದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಬೇಕಾದರೆ, ತಮ್ಮನ್ನು ಪ್ರಾಚೀನ ವರ್ಗವೆಂದು ಸರ್ಕಾರ ಅಂಗೀಕರಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.

– ಎಂ.ಕೆ.ಪಿ. ಅನುವಾದ ಟಿ.ಎಸ್.

ಕುರಿಚ್ಯರು ಕುರಿಚ್ಯರು ಕೇರಳದ ವಯನಾಡು, ಕಣ್ಣೂರು, ಕೋಳಿಕ್ಕೋಡು ಜಿಲ್ಲೆಗಳಲ್ಲಿ ವಾಸಿಸುವ ಬುಡಕಟ್ಟು ಜನ. ವಯಗಾಡನ್ ಕುರುಚ್ಯರು, ಕಣ್ಣವಂ ಕುರಿಚ್ಯರು ಮುಂತಾಗಿ ಇವರಲ್ಲಿ ಪಂಗಡಗಳಿವೆ. ಸಾಮಾಜಿಕ ಸಂದರ್ಭಗಳಲ್ಲಿ ಇತರರೊಂದಿಗೆ ವ್ಯವಹರಿಸುವಾಗ ಇವರು ಕಟ್ಟುನಿಟ್ಟಾಗಿ ಅಸ್ಪೃಶ್ಯತೆಯನ್ನು ಕಾಪಾಡಿಕೊಂಡು ಬರುತ್ತಾರೆ. ಬೆಟ್ಟ ಪ್ರದೇಶ ಎಂಬ ಅರ್ಥದ ‘ಕುರಿಶ್ಶಿ’ ಎಂಬ ಪದದಿಂದ ಕುರಿಚ್ಯರು ಎಂಬ ಪದ ಹುಟ್ಟಿದೆಯೆಂದು ಹರ್ಮನ್ ಗುಂಡರ್ಟ್‌ ಸೂಚಿಸುತ್ತಾನೆ. ವಯನಾಡಿನ ಕುರಿಚ್ಯರಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆಯೂ ಕಣ್ಣವಂ ಕುರಿಚ್ಯರಲ್ಲಿ ವಿಭಕ್ತ ಕುಟುಂಬ ಕ್ರಮವೂ ರೂಢಿಯಲ್ಲಿವೆ. ಹಿಂದೆ ಇವರ ಮನೆತನಗಳು ನೂರರಷ್ಟು ಇದ್ದುವಾದರೂ ಈಗ ಅವುಗಳಲ್ಲಿ ಅನೇಕ ಇಲ್ಲವಾಗಿವೆ. ಕೊಟ್ಟಾಯಂನ ಕುರುಂಬ್ರ ನಾಡ್‌ರಾಜರು ವಯನಾಡಿನ ಮಲೆಪರಾಜರನ್ನು ಸೋಲಿಸಿ ವಯನಾಡನ್ನು ವಶಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಅವರ ಮೇಲೆ ಆಕ್ರಮಣ ಮಾಡಿದರು. ಆಗ ಕುರುಂಬ್ರರಾಜರ ನಾಯರ್ ಸೈನಿಕರ ಅನುಯಾಯಿಗಳಾಗಿದ್ದವರು ಇಂದಿನ ಕುರಿಚ್ಯರು ಎಂದು ಒಂದು ಐತಿಹ್ಯವೂ ಇದೆ. ೧೭೯೬ರ ಹೊತ್ತಿಗೆ ಈಸ್ಟ್ ಇಂಡಿಯಾ ಕಂಪೆನಿಯ ಜತೆ ಹೋರಾಟ ನಡೆಸಿದ ಪಯಶ್ಶಿರಾಜನಿಗೆ ಬಿಲ್ಲುಬಾಣಧಾರಿ ಕುರಿಚ್ಯರು ದೊಡ್ಡ ಬಲವಾಗಿದ್ದರು. ಇವರ ನಾಯಕ ಚಂದು ಪಯಶ್ಶಿರಾಜನ ಸೇನಾಪತಿಯೂ ಆಗಿದ್ದ.

ಕೃಷಿ, ಬೇಟೆ, ಮೀನುಗಾರಿಕೆ, ಜೇನುಸಂಗ್ರಹ – ಇವು ಕುರಿಚ್ಯರ ಜೀವನೋಪಾಯಗಳು. ಕಾಡುಗಳಿಂದ ದೊರೆಯುವ ಬೆತ್ತ, ಮುಂಡಗೆ (ಚಾಪೆ ಹೆಣೆಯಲು ಬಳಸುವ ಸಸ್ಯ), ಬಿದಿರು ಇವುಗಳನ್ನು ಬಳಸಿಕೊಂಡು ಬುಟ್ಟು, ಗೆರಸೆ, ಚಾಪೆ ಮುಂತಾದುವನ್ನು ಕುರಿಚ್ಯರು ತಯಾರಿಸುತ್ತಾರೆ. ಕೃಷಿ ಸಲಕರಣೆಗಳು, ಅಡುಗೆ ಮೆನಗೆ ಅಗತ್ಯವಾದ ವಸ್ತುಗಳು – ಇವನ್ನು ತಯಾರಿಸುವುದು ಇವರ ಕೈ ಕಸುಬು. ಮೀನು ಹಿಡಿಯುವ ಸಲಕರಣೆಗಳು, ಬತ್ತ – ಅಕ್ಕಿ ಸಂಗ್ರಹಿಸುವ ಮತ್ತು ಒಣಗಿಸುವ ವಸ್ತುಗಳು, ಪೀಠೋಪಕರಣಗಳು ಮುಂತಾದುವನ್ನು ತಯಾರಿಸುತ್ತಾರೆ. ಇವರದು ಸಾಂಘಿಕ ಬದುಕು. ಅದಕ್ಕೆ ಅನುಗುಣವಾದ ಸಾಂಸ್ಕೃತಿಕ ಆಚರಣೆಗಳು ಇವರಲ್ಲಿವೆ. ಗಂಡು ಮಗು ಹುಟ್ಟಿದರೆ ಹೊಕ್ಕುಳ ಬಳ್ಳಿ ಕತ್ತರಿಸುವಾಗ ಬಿಲ್ಲುಗಳನ್ನು ಪರಸ್ಪರ ಬಿಡದು ಇಲ್ಲವೇ ಬಿಲ್ಲಿನ ಹಗ್ಗವನ್ನು ಎಳೆದು ಶಬ್ದ ಹೊರಡಿಸುತ್ತಾರೆ. ಹೆಣ್ಣಾದರೆ ಗೆರಸೆ, ಕಂಗಿನ ಹಾಳೆ – ಇವನ್ನು ಬಡಿದು ಶಬ್ದ ಹೊರಡಿಸುತ್ತಾರೆ. ಹುಟ್ಟಿದ ಮಗುವಿಗೆ ಏಳನೇ ತಿಂಗಳಲ್ಲಿ ಕಿವಿಚುಚ್ಚಲಾಗುತ್ತದೆ. ಚಿಕ್ಕಂದಿನಲ್ಲೆ ತಾಳಿಕಟ್ಟುವ ಮದುವೆಯನ್ನು ಹಿಂದಿನ ಕಾಲದಲ್ಲಿ ನಡೆಸಿಬಿಡುತ್ತಿದ್ದರು. ಮಾವನ ಮಗಳನ್ನು ಮದುವೆಯಾಗುವುದು ಕ್ರಮ.

31

ಇವರು ತಮ್ಮ ಮನೆಗಳನ್ನು ಮುಟ್ಟಂ ಎಂದು ಕರೆಯುತ್ತಾರೆ. ಕುರಿಚ್ಯ ತರವಾಡೊಂದರಲ್ಲಿ ಕನಿಷ್ಠ ಹದಿನೈದು ಕುಟುಂಬಗಳಿರುತ್ತವೆ. ಒಂದು ಕುಟುಂಬಕ್ಕೆ ಒಂದು ಕೋಣೆ ಎಂಬುದು ಲೆಕ್ಕಾಚಾರ. ಮನೆಯ ಬಡಗು ಭಾಗದಲ್ಲಿ ಒಂದು ಮುಟ್ಟಿನ ಮನೆ ಇರುತ್ತದೆ. ರಜಸ್ವಲೆಯಾಗುವ ಹೆಣ್ಮಕ್ಕಳು ‘ಮುಟ್ಟಿನ ಮದುವೆ’ ಎಂಬ ಆಚರಣೆ ಆಗುವ ತನಕ ಈ ಮನೆಯಲ್ಲಿರುತ್ತಾರೆ. ಕುರಿಚ್ಯ ಮನೆಯ ಇನ್ನೊಂದು ವಿಶೇಷವೆಂದರೆ ‘ಬತ್ತ ಕುಟ್ಟುವ ಮನೆ’.ಕುರಿಚ್ಯರು ತಮ್ಮ ವೃದ್ಧ ಜನರನ್ನು ಪೀಟ್ಟನ್ ಎಂದು ಕರೆಯುತ್ತಾರೆ. ಕುರಿಚ್ಯ ಕೂಡುಕುಟುಂಬದಲ್ಲಿ ಕನಿಷ್ಠ ಹದಿನೈದಾದರೂ ಪ್ರೌಢ ಸ್ತ್ರೀಯರು ಇರುತ್ತಾರೆ. ಒಂದು ದಿನ ಒಬ್ಬರು ನೀರು ಸೇದಿದರೆ ಮರುದಿನ ಇನ್ನೊಬ್ಬರು ಆ ಕೆಲಸವನ್ನು ಮಾಡುತ್ತಾರೆ.

ಪ್ರತಿವರ್ಷವೂ ತುಲಾಮಾಸದ ಹತ್ತರಂದು ಆಯುಧ ಪೂಜೆ ಮಾಡುತ್ತಾನೆ. ಖಡ್ಗ, ಗುರಾಣಿ, ಬಿಲ್ಲು, ಬಾಣಗಳು ಕುರಿಚ್ಯರ ಪ್ರಧಾನ ಆಯುಧಗಳು. ಬಾಣಗಳಲ್ಲಿ ಪ್ರಧಾನವಾದುವು ಕತ್ತಿಯಂಬು ಮತ್ತು ಮೊಟ್ಟಂಬು. ಪ್ರಾಣಿಗಳನ್ನು ಬೇಟೆಯಾಡಲು ಕತ್ತಿಯಂಬು, ಪಕ್ಷಿಬೇಟೆಗೆ ಮೊಟ್ಟಂಬು ಬಳಕೆಯಾಗುತ್ತದೆ. ಬಿತ್ತನೆಗೂ ಕೊಯ್ಲಿಗೂ ಸಂಬಂಧಿಸಿ ಕುರಿಚ್ಯರಲ್ಲಿ ಕೆಲವು ಆಚರಣೆಗಳಿವೆ. ಈ ಸಂದರ್ಭಗಳಲ್ಲಿ ಅವರು ದೇವರ ದರ್ಶನ ಪಡೆಯುವ ಕಾರ್ಯಕ್ರಮವಿರುತ್ತದೆ. ಕೊಯ್ಲಿನ ಬಳಿಕ ಪುತ್ತರಿಕ್ಕೋಳ್ (ಹುತ್ತರಿ) ಎಂಬ ಹಬ್ಬದ ಆಚರಣೆ ಇದೆ. ಪುತ್ತರಿಕ್ಕೋಳ್ ಸಮೃದ್ಧಿ ಮತ್ತು ಸಂತಸಗಳ ಹಬ್ಬ. ಪೂಜಾದಿ ಕಾರ್ಯಗಳಿಗೆ ಬೇಕಾಗುವ ಬತ್ತ, ಅಕ್ಕಿ, ಅವಲಕ್ಕಿಗಳಿಗಾಗಿ ಪ್ರತ್ಯೇಕವಾಗಿ ಪೈರನ್ನು ಕೊಯ್ದು ತಂದು ಅವುಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಧನು, ಮಕರ, ಕುಂಭ ತಿಂಗಳುಗಳಲ್ಲಿ ಪುತ್ತರಿಕ್ಕೋಳ್ ಉತ್ಸವ ನಡೆಯುತ್ತದೆ.

32

ಮಲಕ್ಕಾರಿಯು ಕುರಿಚ್ಯರ ಪ್ರಧಾನದೈವ. ಇದಲ್ಲದೆ ಪಳ್ಳಿಯೂರ್ ಕಾವಮ್ಮ, ಕರಿಂಬಿಲ್ ಭಗವತಿ, ಮುತ್ತಪ್ಪನ್ ಮುಂತಾದ ದೈವಗಳನ್ನು ಇವರು ಆರಾಧಿಸುತ್ತಾರೆ. ಕುರಿಚ್ಯರ ಮಲಂಕಾರಿ ಎಂದರೆ ಶಿವನಿಗೂ ಶಿವ.

ಇವರಲ್ಲಿ ವಿಶೇಷವಾದ ಹಲವು ಪಾರಂಪರಿಕ ವೈದ್ಯರಿದ್ದಾರೆ. ಏಕೈಕ ಮೂಲಿಕೆಯಿಂದ ರೋಗಗಳಿಗೆ ಚಿಕಿತ್ಸೆ ನೀಡುವ ಏಕಮೂಲಿಕಾ ವಿಧಾನವನ್ನು ಬಲ್ಲವರು ಇವರು. ಕುರಿಚ್ಯರಲ್ಲಿ ಸಾಕಷ್ಟು ಜನಪದ ಹಾಡುಗಳಿವೆ. ಮಾಂಬಾಟ್ಟ್ (ಜಿಂಕೆ ಹಾಡು), ನರಿಪ್ಪಾಟ್ಟ್ (ಹುಲಿಹಾಡು), ಕೂಮನ್ ಪಾಟ್ಟ್ (ಗೂಬೆ ಹಾಡು), ಕುಂಭಪ್ಪಾಟ್ಟ್(ಕುಂಭದ ಹಾಡು) – ಇವು ಅವುಗಳಲ್ಲಿ ಕೆಲವು. ಮಾಂಪಾಟ್ಟ್ ನರಿಪ್ಪಾಟ್ಟ್ ಮುಂತಾದುವನ್ನು ಹಾಡುವಾಗ ಹಾಡುಗಾರರಲ್ಲೊಬ್ಬ ಸ್ಮೃತಿ ತಪ್ಪಿದವನಂತೆ, ಹಾಡಲ್ಲಿ ವರ್ಣಿತವಾದ ಮೃಗದಂತೆ ವರ್ತಿಸುತ್ತಾನೆ. ಹಾಡನ್ನು ಕೊನೆಯ ಸಾಲಿನಿಂದ ಪ್ರಾರಂಭಿಸಿ ಕ್ರಮ ಪ್ರಕಾರವಾಗಿ ಹಿಂದ ಹಿಂದಕ್ಕೆ ಹಾಡುತ್ತ ಮೊದಲ ಸಾಲಿಗೆ ತಲುಪಿದರೆ ಮಾತ್ರ ಸ್ಮೃತಿ ತಪ್ಪ, ಆವೇಶಕ್ಕೊಳಗಾದವನಿಗೆ ಸ್ಮೃತಿ ಮರಳಿ ಬರುತ್ತದೆ ಎಂಬುದು ಅವರ ನಂಬಿಕೆ. ಕುಂಭಪ್ಪಾಟ್ಟ್‌ನಲ್ಲಿ ಮಲಂಕಾರಿ ದೈವದ ಕಥೆಯನ್ನು ಹಾಡಲಾಗುತ್ತದೆ.

ಕುರಿಚ್ಯ ಗಂಡಸರು ಜಟ್ಟು ಕಟ್ಟಿ, ಕಿವಿಯ ಆಭರಣ ಧರಿಸುತ್ತಾರೆ. ಪ್ರೌಢವಯಸ್ಕರು ಪಂಚೆಯುಟ್ಟು ಉರುಕ್ಕೊಂದಲ್ ಎಂಬ ಬೆಳ್ಳಿಯ ಸೊಂಟಪಟ್ಟಿಯನ್ನು ಕಟ್ಟುತ್ತಿದ್ದರು. ಹಿಂದಿನ ಕಾಲದ ಸ್ತ್ರೀಯರು ಕುಪ್ಪಸ ತೊಡುತ್ತಿರಲಿಲ್ಲ. ಒಂಟಿ ವಸ್ತ್ರದಿಂದ ಎದೆಯ ಭಾಗವನ್ನು ಮುಚ್ಚಿಕೊಳ್ಳುತ್ತಿದ್ದರು. ಸೊಂಟಕ್ಕೆ ಬೆಳ್ಳಿಯ ಒಡ್ಯಾಣ. ಕಿವಿಗೆ ಚಿನ್ನದ ಆಭರಣ. ಮುಟ್ಟಿನ ಮದುವೆಯ ದಿನ ಮೊದಲ ಬಾರಿಗೆ ಹೆಣ್ಣು ಆಭರಣಾಲಂಕೃತಳಾಗುತ್ತಾಳೆ. ಇದಕ್ಕೆ ಪಟ್ಟುಂ ವಳಯುಂ ಧರಿಕ್ಕಲ್ (ಪಟ್ಟೆ ಮತ್ತು ಬಳೆಯನ್ನು ಧರಿಸುವುದು) ಎಂದು ಹೆಸರು. ಪ್ರತಿಯೊಬ್ಬ ಹುಡುಗಿಗೆ ಮುಟ್ಟಿನ ಮದುವೆಯಂದು ಈ ಆಭರಣಗಳನ್ನು ಹೊರತೆಗೆದು ತರವಾಡಿನ ಯಜಮಾನನು ಧರಿಸಿಕೊಳ್ಳಲು ಕೊಡುತ್ತಿದ್ದ. ಕಾರ್ಯಕ್ರಮದ ಬಳಿಕ ಆಭರಣಗಳನ್ನು ತರವಾಡಿನ ದೈವಸ್ಥಾನದಲ್ಲಿ ಜೋಪಾನವಿರಿಸಿಲಾಗುತ್ತಿತ್ತು.

ತುಲಾಹತ್ತು (ತುಲಾಮಾಸದ ಹತ್ತನೇ ದಿನ) ಬೇಟೆಯ ಆರಂಭ ದಿನ ಸಾಂಘಿಕವಾಗಿ ನಡೆಸುವ ಈ ಬೇಟೆಯಲ್ಲಿ ಮೃಗವು ಸಿಕ್ಕಿದರೆ ಮಾಂಸವನ್ನು ಕತ್ತರಿಸಿ ಬೇಯಿಸಿದ ಬಳಿಕ ಕಾಡನಲ್ಲಿಯೇ ಇಟ್ಟು ಬೇಟೆಯ ದೈವಕ್ಕೆ ಸಮರ್ಪಿಸಲಾಗುತ್ತದೆ. ಬೇರೆ ಬೇರೆ ರೀತಿಯ ಉರುಳುಗಳನ್ನು, ಉಪಕರಣಗಳನ್ನು ಬಳಸಿ ಪಕ್ಷಿಗಳನ್ನು ಪ್ರಾಣಿಗಳನ್ನೂ ಹಿಡಿಯುವುದರಲ್ಲಿ ಕುರಿಚ್ಯರು ಅಸಾಮಾನ್ಯರು. ಪಕ್ಷಿಗಳನ್ನು ಹಿಡಿಯುವ ಅಡಿಚ್ಚಿಲ್ (ಬಿದಿರ ಸೀಳುಗಳಿಂದ ಮಾಡಿದ ಉಪಕರಣ?), ಮಂಗನ ಉರುಳು, ಗುಂಡಿನಂತೆ ಸಿಡಿಯುವ ಬಾಣದಂತೆ ಹಾರುವ ಉಪಕರಣಗಳು – ಇವುಗಳನ್ನು ಇವರು ಉಪಯೋಗಿಸುತ್ತಾರೆ.

ಶವಸಂಸ್ಕಾರ ವಿಧಾನಗಳಲ್ಲೂ ಬುಡಕಟ್ಟು ಸಂಸ್ಕೃತಿಯ ಅಂಶಗಳು ಕಾಣಸಿಗುತ್ತವೆ. ಮೃತನು ಉಪಯೋಗಿಸುತ್ತಿದ್ದ ವಸ್ತುಗಳನ್ನು ಸಮಾಧಿಯ ಮೇಲೆ ಇರಿಸಿ ಬಾಣವೊಂದನ್ನು ನಾಟುತ್ತಾರೆ. ಮಹಿಳೆಯಾದರೆ ಅವಳು ಉಪಯೋಗಿಸುತ್ತಿದ್ದ ಕತ್ತಿಯನ್ನು (ಕತ್ತಿ ಸ್ತ್ರೀ ಪುರುಷರ ನಿತ್ಯ ಸಂಗಾತಿ – ಬುಡಕಟ್ಟುಗಳಲ್ಲಿ) ಇಡುವುದು ಕ್ರಮ. ಎರಡು ವಾರ ಕಾಲ ಸೂತಕದ ಆಚರಣೆ.

– ಪಿ.ವಿ.ಎಂ. ಅನುವಾದ ಕೆ.ಕೆ.