ಕುಳುವರ್ ತಮಿಳುನಾಡಿನಲ್ಲಿ ತೆಲುಗು ಭಾಷೆಯನ್ನು ತಾಯಿ ಭಾಷೆಯಾಗಿ ಹೊಂದಿದ್ದು ಜೀವಿಸುತ್ತಿರುವ ಒಂಬತ್ತು ಅಲೆಮಾರಿ ಜನ ಬುಡಕಟ್ಟು. ನಿತ್ತಿರವರ್, ಹಂದಿಕುಳವರ್, ಗ್ರಾಮೀಣ ಕುಳುವರ್ ಅಥವಾ ಕೋತಿಗಳನ್ನಾಡಿಸುವ ಕುಳುವರ್, ಪೊಟ್ಟಿಕ್ಕುಳುವರ್, ಹಾವಾಡಿಗ ಕುಳುವರ್, ನರಿ ಕ್ಕುಳುವರ್, ಕೊಂಡರೆಡ್ಡಿ, ಪಲ್ಲವರ್ ಮತ್ತು ಪಗಡೈ ಎಂಬ ಹೆಸರುಗಳನ್ನು ಹೊಂದಿರುವ ಇವರನ್ನು ಸಾಮಾನ್ಯವಾಗಿ ‘ಕುಳುವರ್’ ಎಂದು ಕರೆಯಲಾಗುತ್ತದೆ. ಇವರು ವಿಶೇಷವಾಗಿ ದಕ್ಷಿಣ ತಮಿಳುನಾಡಿನಲ್ಲಿ ಕಲ್ಲಿಡೈಕ್ಕುರಿಚ್ಚಿ, ಪರ್ಪತೇರಿ, ಏರ್ ವಾಡಿ, ತಿರುಕುರುಂಗುಡಿ ವಳ್ಳಿಯೂರ್, ರಾಧಾಪುರ, ಆರಲ್ ವಾಯಿಮೊಳಿ ಪ್ರಾಂತ್ಯಗಳಲ್ಲೂ ಜೀವಿಸುತ್ತಿದ್ದಾರೆ. ಕುಳುವರ ಒಳಪಂಗಡಗಳು ಪ್ರತಿಯೊಂದೂ ಪ್ರತ್ಯೇಕವಾದ ಪದ್ಧತಿಯನ್ನು ಹೊಂದಿ ಬೇರೆ ಬೇರೆ ಜಾತಿಗಳಾಗಿ ಬದಲಾವಣೆಯಾಗಿದೆ.

ತಮಿಳುನಾಡಿನ ಪ್ರಾಂತ್ಯಗಳು ತೆಲುಗು ಅರಸರ ಆಳ್ವಿಕೆ ಗೊಳಪಟ್ಟಿದ್ದ ಕಾಲದಲ್ಲಿ ಇಲ್ಲಿಗೆ ಬಂದು ಇವರು ನೆಲೆಸಿರಬಹುದೆಂಬ ಅಭಿಪ್ರಾಯವೂ ಇದೆ. ಕುಳುವರು ‘ಬೆಲ್ಲಾರಿ’ (ಬಳ್ಳಾರಿ) ಎಂಬ ತೆಲುಗು ಪ್ರಾಂತ್ಯವನ್ನು ತವರಾಗಿ ಹೊಂದಿದ್ದರು ಎಂಬುದು ಅವರ ಹೇಳಿಕೆಗಳ ಮಾಹಿತಿಯಿಂದ ತಿಳಿದುಬರುತ್ತದೆ. ಲಕ್ಷಣದಲ್ಲಿ ಕುಳ್ಳರಾಗಿಯೂ, ನಡುವಿನಲ್ಲಿ (ಸೊಂಟ) ಹಲವು ತೆರೆಯುಳ್ಳ ಕೈಚೀಲವನ್ನು ಕಟ್ಟಿರುತ್ತಾರೆ. ತಲೆಯಲ್ಲಿ ಕೆಂಪು ಬಟ್ಟೆಯ ರುಮಾಲು ಕಟ್ಟಿರುವ ಇವರು ಎದೆಯಲ್ಲಿ ಹಚ್ಚೆ ಹಾಕಿಸಿ ಕೊಂಡಿರುತ್ತಾರೆ. ಮಹಿಳೆಯರು ಕತ್ತಿನಲ್ಲಿ ಕರಿಮಣಿಯನ್ನು ಕೈಬೆರಳುಗಳಲ್ಲಿ ಬೆಳ್ಳಿ, ಅಲ್ಯುಮಿನಿಯಂ ಉಂಗುರಗಳನ್ನು ಧರಿಸುತ್ತಾರೆ. ಮೊಣಕಾಲಿನವರೆಗೆ ಸೀರೆಯನ್ನು ಉಟ್ಟಿರುತ್ತಾರೆ. ಹಣೆಯಲ್ಲೂ ಕೈಯಲ್ಲೂ ಹಚ್ಚೆ ಇರುತ್ತದೆ.

ತೆಲುಗು ಭಾಷೆಯನ್ನು ತಾಯಿ ಭಾಷೆಯನ್ನಾಗಿ ಹೊಂದಿದ ಇವರು ಹಂದಿ ಮೇಯಿಸುವುದು, ಗೂಡೆ ಹೆಣೆಯುವುದು, ಕೋತಿಗಳಿಂದ ವಿನೋದ ಮಾಡಿಸುವುದು, ನರಿ ಹಿಡಿಯುವುದು ಮತ್ತು ಹಾವು ಹಿಡಿಯುವುದು ಮುಂತಾದ ಕಸುಬುಗಳನ್ನು ಮಾಡುತ್ತಾರೆ. ನಾಲ್ಕು ಕಡೆಯೂ ಮಣ್ಣಿನ ಗೋಡೆಯನ್ನು ನಿರ್ಮಿಸಿ ಮರದ ಬೆತ್ತದಿಂದಲೂ ಹುಲ್ಲುಗಳಿಂದಲೂ ಗುಡಿಸಲನ್ನು ಕಟ್ಟಿ ನಿರ್ಮಿಸುತ್ತಿದ್ದಾರೆ. ಇಂದು ಸರ್ಕಾರದ ಹಲವಾರು ಯೋಜನೆಗಳಿಂದ ಹೆಂಚಿನ ಮನೆಗಳಲ್ಲಿ ಜೀವಿಸುತ್ತಿದ್ದಾರೆ.

ಕುಳುವರ ಒಂಬತ್ತು ಪಂಗಡಗಳಿಗೂ ಪ್ರತ್ಯೇಕ ಉದ್ಯೋಗ ಪದ್ಧತಿಯೂ ಆಧ್ಯಾತ್ಮಿಕ ಪದ್ಧತಿಯೂ ರೂಪುಗೊಂಡ ಪ್ರಾಚೀನತೆಯನ್ನು ಇವರಿಂದ ಹೇಳಲಾಗುತ್ತದೆ. ಇಪ್ಪತ್ತೊಂದು ತಲೆಮಾರಿಒನ ಹಿಂದೆ ರಾಮನೂ ಅವನ ಸಹೋದರರೂ ಕಾಡಿನಲ್ಲಿ ಬೇಟೆಗೆ ಹೋಗಿದ್ದಾಗ ಬಾಯಾರಿಕೆಯಾದ ಸಂದರ್ಭದಲ್ಲಿ ಬೇಟೆಗೆ ಹೋಗಿದ್ದಾಗ ಬಾರಾಯಿಕೆಯಿಂದ ಸಂದರ್ಭದಲ್ಲಿ ಒಂಬತ್ತು ಸಹೋದರರು ದನ ಮೇಯಿಸುವುದನ್ನು ನೋಡಿದರು. ಬಾಯಾರಿಕೆಯಿಂದ ಬಳಲುತ್ತಿದ್ದ ರಾಮನು ಆ ಸಹೋದರಲ್ಲೊಬ್ಬರಲ್ಲಿ ಕುಡಿಯಲು ನೀರು ಕೆಳಗೆ ಅವನು ಹಸುವಿನ ಹಾಲನ್ನು ನೀಡಿದನು. ಸಂತೋಷಗೊಂಡ ರಾಮನು ಹಸುಗಳಲ್ಲಿ ಮಲಗಿರುವಂಥವು ಬೇಕಾ? ನಿಂತಿರುವಂಥವು ಬೇಕಾ ಎಂದು ಕೇಳಲು, ಅವನು ಮಲಗಿರುವಂಥವು ಬೇಕು ಎಂದು ಹೇಳಲು ಮಲಗಿದ್ದ ಹಸುಗಳು ಸತ್ತು ಹೋದುವು. ಅವುಗಳ ಮಾಂಸವನ್ನು ಉಣ್ಣಲೂ ಚರ್ಮವನ್ನು ಶೇಖರಿಸಿಡಲೂ ಆರಂಭಿಸಿದರು. ಇವನನ್ನು ಪಗಡೈ ಅಥವಾ ಚಮ್ಮಾರ ಎಂದು ಕರೆದರು. ಕುಳುವರ ಜಾತಿಯ ಉಗಮಕ್ಕೆ ಕಾರಣವಾಯಿತು. ಈ ಪ್ರಾಚೀನತೆ ಕುಳುವೆ ಒಳಪಂಗಡದವರ ಉದ್ಯೋಗ ಪದ್ಧತಿಯನ್ನೂ ಸ್ವಭಾವವನ್ನೂ ವಿವರಿಸುವ ಮುಖ್ಯ ಕಥೆಯಾಗಿ ನಿರ್ಮಾಣಗೊಂಡಿವೆ.

ಕುಳುವರ ಜಾತಿಗಳು ತಮ್ಮನ್ನು ನಾಯಕ ಅರಸರೊಡನೆ ಸಮೀಕರಿಸಿ/ಅನ್ವಯಿಸಿ ಹೇಳುವ ರೂಢಿಳು ಕೆಲವು ಇವರ‍ಲ್ಲಿ ಕಂಡು ಬರುವುದನ್ನು ಗುರುತಿಸಬಹುದು. ವಿಶೇಷವಾಗಿ ವಳ್ಳಿಯೂರ್ ಪ್ರಾಂತ್ಯದಲ್ಲಿ ಜೀವಿಸುವ ಹಂದಿ ಕುಳುವರು ಅವರು ಕಟ್ಟಬೊಮ್ಮನ್ ಆಳ್ವಿಕೆಗೊಳಪಟ್ಟ ಪ್ರಾಂತ್ಯಗಳಾದ ಪಾಂಚಾಲಕುರಿಚ್ಚಿಯಲ್ಲಿ ಜೀವಿಸಿದ್ದು ಒಂದು ಹಳೆಯ ಸಾಂಪ್ರದಾಯಿಕ ಕಥೆಯನ್ನು ಹೇಳುತ್ತಿದ್ದಾರೆ. ಕಟ್ಟಬೊಮ್ಮನು ತಮಿಳುನಾಡಿನಲ್ಲಿ ಬ್ರಿಟಿಷರ ಆಳ್ವಿಕೆ ಬರುವುದಕ್ಕೆ ಮುಂಚೆ ಇದ್ದ ಪಾಳೇಗಾರ. ಪ್ರಸ್ತುತ ತೂತ್ತುಕುಡಿ ಜಿಲ್ಲೆಯಲ್ಲಿರುವ ಪಾಂಚಲಕುರಿಚ್ಚಿ ಎಂಬ ಪ್ರಾಂತ್ಯಕ್ಕೆ ಮುಖಂಡನಾಗಿದ್ದನು. ತೆರಿಗೆ ಕಟ್ಟಲು ಕುಳುವರು ನಿರಾಕರಿಸಿದ್ದುದರಿಂದ ಪಾಳೇಗಾರನು ಪೊಂಗಲ್ ದಿನದಂದು ಊರಿನ ಸಾರ್ವಜನಿಕವಾದ ಒಲೆಯ ಕಲ್ಲನ್ನು ಕುಳುವರು ಉಪಯೋಗಿಸಲು ಅನುಮತಿಯನ್ನು ನಿರಾಕರಿಸಿದರು. ಇದರಿಂದ ಕೋಪಗೊಂಡ ಕುಳುವರು ರಾತ್ರೋ ರಾತ್ರಿ ಸ್ಥಳಾಂತರಗೊಂಡು ವಳ್ಳಿಯೂರಿನಲ್ಲಿ ನೆಲಸತೊಡಗಿದರು.

ಕುಳುವರ ಕುಟುಂಬಗಳಲ್ಲಿ ರಾಮ, ಸೀತೆ, ಮೀನಾಕ್ಷಿ, ಲಕ್ಷ್ಮಣ ಮುಂತಾದವು ಸಹಜವಾದ ಹೆಸರುಗಳಾಗಿ ಕಾಣಿಸಿಕೊಳ್ಳುತ್ತವೆ. ವೈವಾಹಿಕ ಸಂಬಂಧಗಳನ್ನು ಎರಡು ಉಪ ಪದ್ಧತಿಯಿಂದ ನಿರ್ಣಯಿಸಲಾಗುತ್ತದೆ. ಕಾಳಿಯಮ್ಮನ್, ಮೀನಾಕ್ಷಿ, ಮಾರಿಯಮ್ಮನ್ ಮುಂತಾದವು ಆ ಉಪ ಹೆಸರುಗಳಾಗುತ್ತವೆ. ಒಂದು ಉಪಪಂಗಡಗಳಲ್ಲಿ ಬರುವಂಥವರು ಅಣ್ಣ, ತಮ್ಮ ಅಥವಾ ಅಕ್ಕ, ತಂಗಿ ಸಂಬಂಧಗಳಾಗಿ ಬರುತ್ತಾರೆ. ಹೀಗಾಗಿ ಒಂದು ಉಪ ಪಂಗಡದಲ್ಲಿ ಹುಟ್ಟಿದವರು ಇತರ ಪಂಗಡಗಳಿಂದ ಸಂಬಂಧವನ್ನು ಹೊಂದಬೇಕು. ಒಂದು ಕುಳುವ ಜಾತಿಯ ಹೆಣ್ಣು ತನಗೆ ನಿರ್ಣಯವಾಗಿದ್ದ ಗಂಡು ಹಿಡಿಸಲಿಲ್ಲವಾದರೆ (ಇಷ್ಟವಾಗಲಿಲ್ಲ) ಬೇರೊಬ್ಬರನ್ನು ಮದುವೆಯಾಗಲು ಅವಕಾಶವನ್ನು ಸಮಾಜ ನೀಡುತ್ತದೆ. ಆದರೆ ಅವನಿಂದ ಜನಿಸಿದ ಮಗುವನ್ನು ಆ ಗಂಡು ಬೆಳೆಸಬೇಕು. ಹೀಗಾಗಿ ಕುಳುವರಲ್ಲಿ ಹೆಣ್ಣೇ ಪ್ರಧಾನವಾಗಿರುವುದನ್ನು ಕಾಣಬಹುದಾಗಿದೆ.

ಅಲೆಮಾರಿಗಳಾಗಿದ್ದ ಕುಳುವರು ಇತ್ತೀಚಿನ ಕಾಲಘಟ್ಟಗಳಲ್ಲಿ ಒಂದೆಡೆ ಜೀವಿಸಿ ಜೀವನಾಧಾರಗಳನ್ನು ರೂಪಿಸಲು ಆರಂಭಿಸಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ರೂಪುಗೊಂಡ ಈ ಬದಲಾವಣೆ ಕುಳುವರ ಜೀವನದಲ್ಲಿ ಯಾವ ವಿಧವಾದ ಬದಲಾವಣೆಯನ್ನು ತಂದಿದೆ ಎಂಬುದನ್ನು ಅರಿಯಲು ಸಾಕಷ್ಟು ಸಂಶೋಧನೆ ನಡೆಯಬೇಕಾಗಿದೆ.

– ಎನ್.ಜೆ.ಎಸ್. ಅನುವಾದ ಎಂ.ಆರ್

ಕೂಟ್ಟಾನ್ ಸೋರು ತಮಿಳುನಾಡಿನಲ್ಲಿ ಸಮವಯಸ್ಕರಾದ ಕೆಲವು ಗೆಳೆಯರು ಒಂದೆಡೆ ಒಟ್ಟಿಗೆ ಸೇರಿ, ತಮಗಿಷ್ಟವಾದ ಅಡುಗೆಯನ್ನು ಎಲ್ಲರೂ ಸೇರಿ ತಯಾರಿಸಿಕೊಂಡು ಜೊತೆಯಲ್ಲಿ ತಿಂದು ಸಂತೋಷಪಡುತ್ತಾರೆ. ಒಟ್ಟಿಗೆ ಕೂಡಿ ತಿನ್ನುವ ಊಟವಾದುದರಿಂದ ಇದಕ್ಕೆ ‘ಕೂಟ್ಟಾನ್ ಸೋರು'(ಊಟ) ಎಂದು ಹೆಸರು.

‘ಕೂಡು ಊಟ’ವನ್ನು ತಯಾರಿಸಲು ಮುನ್ನವೇ ಯೋಜನೆ ರೂಪಿಸಿಕೊಳ್ಳುತ್ತಾರೆ. ಯಾರ್ಯಾರು ಯಾವ ಯಾವ ವಸ್ತುಗಳನ್ನು ಎಷ್ಟೆಷ್ಟು ತರಬೇಕು ಎಂಬುದನ್ನು ಮೊದಲೇ ತೀರ್ಮಾನಿಸಿಕೊಂಡು ನಿರ್ಧರಿಸಿಕೊಂಡ ಸ್ಥಳದಲ್ಲಿ ಒಟ್ಟಿಗೆ ಸೇರುತ್ತಾರೆ. ಇವರಲ್ಲೊಬ್ಬರು ತಂಡದ ಮುಖಂಡರಾಗಿರುತ್ತಾರೆ.

ಮಕ್ಕಳು ಒಂದುಗೂಡಿ ‘ಕೂಡು ಅಡುಗೆ’ ಮಾಡಿ ತಿಂದು ಹರ್ಷಿಸುವುದುಂಟು. ಇವರು ಸಾಮಾನ್ಯವಾಗಿ ಬಯಲು, ಹೊಲ ಗದ್ದೆಗಳಲ್ಲಿ ಅಥವಾ ದೇವಾಲಯಕ್ಕೆ ಸೇರಿದ ಸ್ಥಳದಲ್ಲಿ ಒಟ್ಟಿಗೆ ಸೇರುತ್ತಾರೆ. ಆದರೆ ಹಿರಿಯರು ಸಾಮಾನ್ಯವಾಗಿ ಯಾರಾದರೊಬ್ಬರು ಮನೆಯಲ್ಲೇ ಸೇರುತ್ತಾರೆ ಅಥವಾ ಕೆಲವೊಮ್ಮೆ ದೂರ ಪ್ರದೇಶಗಳಿಗೆ ವಿಹಾರ ಹೋಗುವೂದೂ ಉಂಟು.

ಪ್ರತಿಯೊಬ್ಬರು ತಂದಿರು ಪದಾರ್ಥಗಳನ್ನೂ, ಪಾತ್ರೆ, ಸರಂಜಾಮುಗಳನ್ನೂ ನೋಡಿದ ಮೇಲೆ ಅಡುಗೆ ಮಾಡಲು ಆರಂಭಿಸುತ್ತಾರೆ. ಅಡುಗೆ ಕೆಲಸವನ್ನು ಪ್ರತಿಯೊಬ್ಬರೂ ಹಂಚಿಕೊಳ್ಳುತ್ತಾರೆ.

ನೆಲದಲ್ಲಿ ಹಳ್ಳ ತೋಡಿ ಅಥವಾ ಕಲ್ಲುಗಳನ್ನು ಜೋಡಿಸಿಟ್ಟುಕೊಂಡು ಮೊದಲು ಒಲೆ ಹೂಡುತ್ತಾರೆ. ಮನೆಯಲ್ಲೇ ಸೇರಿದರೆ ಮನೆಯೊಳಗಿರುವ ಒಲೆಯನ್ನೇ ಉಪಯೋಗಿಸಿಕೊಳ್ಳುತ್ತಾರೆ. ಒಲೆ ಉರಿಸಲು ಬೇಕಾದ ಕಟ್ಟಿಗೆ, ತರಗು, ಪುರಲೆಗಳನ್ನು ಬೇಲಿ, ಪೊದರುಗಳಿಂದಲೇ ತರುತ್ತಾರೆ. ಮರದ ರೆಂಬೆಗಳನ್ನು ಶೇಖರಿಸಿ ತರುತ್ತಾರೆ. ಮನೆಯಲ್ಲೇ ಇರುವ ಸೌದೆಯನ್ನೂ ಬಳಸಿಕೊಳ್ಳುವುದುಂಟು.

ಈ ಗುಂಪಿನೊಳಗೆ ಚೆನ್ನಾಗಿ ಅಡುಗೆ ಮಾಡಲು ಬರುವವರು ಮುಂದಾಳತ್ವ ವಹಿಸಿಕೊಳ್ಳುತ್ತಾರೆ. ಉಳಿದವರು ಇತರ ಕೆಲಸಗಳನ್ನು ನೋಡಿಕೊಳ್ಳುತ್ತಾರೆ.

ಊಟದ ವಿಧಗಳು: ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಸರಳವಾದ ಅಡುಗೆಗಳನ್ನೇ ತಯಾರಿಸುತ್ತಾರೆ. ಹುಳಿಯನ್ನು, ಸಿಹಿ ಪೊಂಗಲ್, ಕರಿಗಡುಬು ಮೊದಲಾದವುಗಳನ್ನು ತಯಾರಿಸುತ್ತಾರೆ. ಹುರಿದ ಮೀನು, ತೆಂಗಿನಕಾಯಿ ಸುಡುವುದು, ಇಲಿ ಹುರಿಯುವುದು ಇತ್ಯಾದಿ ಪದಾರ್ಥಗಳನ್ನೂ ಸಿದ್ಧಪಡಿಸುವುದುಂಟು. ಇವುಗಳೊಳಗೆ ಸಿಹಿಪೊಂಗಲ್, ಕರಿಗಡುಬುಗಳ ಹೊರತು ಮಿಕ್ಕೆಲ್ಲವುಗಳ ಜೊತೆಗೆ ತೆಂಗಿನಕಾಯಿ ಸುಟ್ಟುಕೊಂಡು ತಿನ್ನುತ್ತಾರೆ. ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಇವರಲ್ಲಿ ಒಬ್ಬರು ತೆಂಗಿನಕಾಯಿ ತರುತ್ತಾರೆ. ಒಬ್ಬರು ಹುರಿಗಡಲೆ, ಮತ್ತೊಬ್ಬರು ಬೆಲ್ಲ, ಇನ್ನೊಬ್ಬರು ಕಡಲೆಬೀಜ ತರುತ್ತಾರೆ. ಕೆಲವರು ಉರಿಸಲು ಅಗತ್ಯವಾದ ಕಡ್ಡಿ, ತರಗೆಲೆಗಳನ್ನು ತರುತ್ತಾರೆ. ಒಬ್ಬರು ಬೆಂಕಿ ಪೆಟ್ಟಿಗೆ ತರುತ್ತಾರೆ. ತೆಂಗಿನಕಾಯಿಯ ಜುಟ್ಟನ್ನು ತೆಗೆದು ಅದರ ಮೂರು ಕಣ್ಣುಗಳಲ್ಲಿ ಒಂದನ್ನು ತೂತು ಮಾಡುತ್ತಾರೆ. ಆ ತೂತಿನ ಮೂಲಕ ಕಾಯೊಳಗಿನ ನೀರನ್ನು ಹೊರಗೆ ತೆಗೆಯುತ್ತಾರೆ. ಅನಂತರ ಆ ತೂತಿನ ಮೂಲಕವೇ ತಾವು ತಂದಿರುವ ಕಡಲೆ, ಬೆಲ್ಲಗಳನ್ನು ಒಳಗೆ ತುಂಬುತ್ತಾರೆ. ಸಣ್ಣ ಕಡ್ಡಿಯ ಸಹಾಯದಿಂದ ಇವನ್ನು ಚೆನ್ನಾಗಿ ಒಳಗೆ ತುಂಬುತ್ತಾರೆ. ಅನಂತರ ಆ ಕಾಯನ್ನು ಬೆಂಕಿಯೊಳಗಿಟ್ಟು ಹದವಾಗಿ ಸುಡುತ್ತಾರೆ. ಬಿಸಿ ಆರಿದ ಮೇಲೆ ಅದನ್ನು ತೆಗೆದು ತಿನ್ನುತ್ತಾರೆ. ಇದು ಒಂದು ಪ್ರತ್ಯೇಕವಾದ ರುಚಿಯನ್ನು ಹೊಂದಿದ್ದು, ಮಕ್ಕಳಿಗೆ ತುಂಬ ಪ್ರಿಯವಾದ ತಿನಿಸಾಗಿದೆ.

‘ಕೂಡು ಅಡುಗೆ’ ಮಾಡಿ ಮುಗಿದ ಕೂಡಲೇ ಅಲ್ಲಿಯೇ ಕುಳಿತು ಎಲ್ಲರೂ ಒಟ್ಟಿಗೇ ಅದರ ರುಚಿಯನ್ನು ಸವಿಯುತ್ತಾ, ಹೊಟ್ಟೆ ತುಂಬ ಉಣ್ಣುತ್ತಾರೆ. ಇದನ್ನು ನೋಡಲು ಬಂದ ಇತರರಿಗೂ ಊಟ ಬಡಿಸುತ್ತಾರೆ. ಉಳಿದ ಆಹಾರವನ್ನು ಎಲ್ಲರೂ ಹಂಚಿಕೊಂಡು ತೆಗೆದುಕೊಂಡು ಹೋಗುತ್ತಾರೆ.

ಕೆಲಸ ಹಾಗೂ ಸಮಯ: ಸಾಮಾನ್ಯವಾಗಿ ಬೇಸಗೆ ಕಾಲದಲ್ಲಿ ಹೀಗೆ ‘ಕೂಡು ಅಡುಗೆ’ ಮಾಡಿಕೊಂಡು ತಿನ್ನುತ್ತಾರೆ. ಊಟವನ್ನೇ ಸಿದ್ಧಪಡಿಸಲು ತೀರ್ಮಾನಿಸಿದರೆ ಮಧ್ಯಾಹ್ನದ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮೀನು ಹುರಿಯುವುದು, ತೆಂಗಿನಕಾಯಿ ಸುಡುವುದು ಇತ್ಯಾದಿ ತಿನಿಸುಗಳಾದರೆ ಬೆಳಗ್ಗೆ ಅಥವಾ ಸಾಯಂಕಾಲದ ಸಮಯವನ್ನು ಆಯ್ದುಕೊಳ್ಳುತ್ತಾರೆ.

– ಆರ್.ಪಿ.ಯು. ಅನುವಾದ ಟಿ.ಎಸ್.

ಕೃಷಿ ವಿಶಾಲಾರ್ಥದಲ್ಲಿ ಆಹಾರ ಉತ್ಪಾದನೆ ಮಾಡುವುದು, ಇದಕ್ಕೆ ಒಕ್ಕಲುತನ, ಆರಂಭ, ಗೆಯ್ಮೆ, ಉಳುಮೆ, ಬೇಸಾಯ, ವ್ಯವಸಾಯ ಮುಂತಾದ ಪರ್ಯಾಯ ಪದಗಳಿವೆ. ಕೃಷಿಕಾರರನ್ನು – ರೈತ, ಕೃಷಿಕ, ಒಕ್ಕಲಿಗ, ವ್ಯವಸಾಯಗಾರ, ತೋಟಗಾರ ಮುಂತಾದ ಹೆಸರಿನಿಂದ ಗುರುತಿಸಲಾಗಿದೆ. ಕೃಷಿ ಮನುಷ್ಯನ ಎಲ್ಲ ಚಟುವಟಿಕೆಗಳಿಗೂ ಮೂಲ. ಸಸ್ಯಗಳನ್ನು ಒಗ್ಗಿಸಿಕೊಂಡು ಅವುಗಳನ್ನು ಬೆಳೆಸುವ ಒಂದು ಕುಶಲ ಕಲೆಯೇ ಕೃಷಿ.

ಅಲೆಮಾರಿಯಾಗಿದ್ದ ಮನುಷ್ಯ ಕಾಡಿನಲ್ಲಿ ಸಿಗುವ ಗಡ್ಡೆಗೆಣಸುಗಳನ್ನಲ್ಲದೆ, ತಾನು ಬೇಟೆಯಾಡಲು ಸಾಧ್ಯವಾದ ಪ್ರಾಣಿಗಳ ಹಸಿ ಮಾಂಸವನ್ನು ತಿಂದು ಜೀವಿಸಿದ. ಬೆಂಕಿಯ ಆವಿಷ್ಕಾರ ಆದ ಮೇಲೆ ಅದನ್ನು ಬೇಯಿಸಿ ತಿನ್ನಲು ಶುರುಮಾಡಿದ. ಅನಂತರ ಬೇಯಿಸಿದ ಮಾಂಸಕ್ಕೆ, ಇತರೆ ಪರಿಕರಗಳನ್ನು ಸೇರಿಸಿ ಪರಿಪೂರ್ಣತೆಯ ಕಡೆಗೆ ಹೊರಟ. ನೈಸರ್ಗಿಕವಾಗಿಯೇ ಆಹಾರದ ಅಭಾವವುಂಟಾದಾಗ ಕಾಡಿನಿಂದ ಕಾಡಿಗೆ ಅಲೆಯಲಾರಂಭಿಸಿದ.

ನೇಗಿಲು, ಕುಂಟೆ, ಕೊರಡು, ನಳ್ಳಿ, ಕೂರಿಗೆ, ನೊಗ, ಎಡೆಕುಂಟೆ, ಬಳುಗುಂಟೆ, ಬುಡ್ಡಗುಂಟೆ, ತಲುಬು, ಈಚು, ದಿಂಡು, ಪಟ್ಟೆ, ಮೋಣಿ, ಬುಲಾ, ಕುಳ್ಳ, ಕುಡೆ, ಜಿಗಣಿ, ತಾಳು, ಬಳೆ, ಎಲೆಮಟ್ಟು, ಕವೆಗೋಲು, ಕೀಲು, ಪಟಗಡ್ಡೆ, ಜೊತಗ, ನೊಗಸುತ್ತು, ಮಿಣಿ, ದಂಡೆ, ಕಣ್ಣಿ, ಹಿಡಿಹಣ್ಣು, ಕೊಳ್ಳುಹಾಗಡ, ಮೂಗುತಾಣ, ಮೆರೆಕೋಲು, ಮುಳುಗಡ್ಡೆ, ಕುಕ್ಕೆ, ಬುಟ್ಟಿ, ಜಲ್ಲೆ, ಮಂಕರಿ, ಗೊಟ್ಟ, ಬಾಯಿಕುಕ್ಕೆ, ಗೂಡೆ, ಮೊರ ಮುಂತಾದವುಗಳು ಕೃಷಿಗೆ ಬಳಸುವ ಉಪಕರಣ ಹಾಗೂ ಸಾಧನ ಸಲಕರಣೆಗಳು.

ಕೃಷಿ ಪದ್ಧತಿಯನ್ನು ಬಯಲು ನಾಡಿನ ಕೃಷಿ ಪದ್ಧತಿ, ಮಲೆನಾಡಿನ ಕೃಷಿ ಪದ್ಧತಿ ಎಂದು ಹವಾಗುಣಕ್ಕೆ ತಕ್ಕಂತೆ ವರ್ಗೀಕರಿಸಲಾಗಿದೆ. ಈ ಎರಡೂ ಪದ್ಧತಿಗಳು ಮಳೆಯನ್ನು ಅವಲಂಬಿಸಿರುವ ಬೇಸಾಯಗಳೇ ಆಗಿವೆ. ಬಯಲು ನಾಡಿನ ಕೃಷಿ ಪದ್ಧತಿಯಲ್ಲಿ ‘ತರಿ ಮತ್ತು ಖುಷ್ಕಿ’ ಎಂಬ ಎರಡು ಬಗೆಯ ಬೇಸಾಯವಿದೆ. ತರಿ ಎಂದರೆ ಕೇವಲ ಮಳೆ ಆಧಾರಿತ ಬೇಸಾಯ. ಕೆರೆ, ಏತ ನೀರಾವರಿ ಸಹಾಯದಿಂದ ಮಣ್ಣಿನ ಬಣ್ಣ ಮತ್ತು ಗುಣಕ್ಕೆ ಅನುಗುಣವಾಗಿ ಬತ್ತ, ರಾಗಿ, ಜೋಳ, ನವಣೆ, ಸಾವೆ, ಹತ್ತಿ, ಹುಚ್ಚೆಳ್ಳು, ತೊಗರಿ, ಅವರೆ, ಉದ್ದು, ಹೆಸರು, ಮೆಣಸಿನ ಗಿಡ ಬೆಳೆಯುತ್ತಾರೆ. ಊರೊಟ್ಟಿಗೆ ಸೇರಿ ನೇಗಿಲ ಕುಳ, ಎತ್ತಿನ ಪಾದಪೂಜೆ ಮಾಡುವುದರ ಮೂಲಕ ಬಯಲುನಾಡಿನವರು ಮೊದಲ ಬೇಸಾಯವನ್ನು ಆರಂಭಿಸುತ್ತಾರೆ. ಈ ಪ್ರದೇಶಗಳಲ್ಲಿ ನಾಟಿಗಿಂತ ಬಿತ್ತನೆಯೇ ಹೆಚ್ಚು. ಭರಣಿ ಮಳೆಗೆ ಬತ್ತವನ್ನು, ರೋಹಿಣಿ ಮಳೆಗೆ ಜೋಳವನ್ನು, ಹತ್ತಿಯನ್ನು ಬಿತ್ತುವುದುಂಟು. ಹಲವು ಹಬ್ಬ ಆಚರಣೆಗಳ ಜೊತೆಗೆ ಇಲ್ಲಿಯವರು ಭೂಮಿಹುಣ್ಣಿಮೆಯನ್ನು ಆಚರಿಸುವುದುಂಟು. ಆದರೆ, ಮಲೆನಾಡಿನ ಜನರಂತೆ ಕೊಟ್ಟೆ ಕಡುಬು ಮಾಡುವ ಆಚರಣೆ ಇಲ್ಲಿಲ್ಲ.

ಮಲೆನಾಡಿನ ಕೃಷಿ ಪದ್ಧತಿಯಲ್ಲಿ – ವೈಶಾಖ ಮಾಸ ಬರುತ್ತಿದ್ದಂತೆಯೇ ರೇವತಿ ಮಳೆ ಶುರುವಾದಂತೆ ನೆಲ ಅಗೆದು ಬೀಜ ಹಾಕುವ ಕೆಲಸ ಆರಂಭವಾಗುತ್ತಿದೆ. ಮಳೆ ಜಾಸ್ತೀ ಆದಾಗ ‘೪ x ೧೨’ ಉದ್ದ ಪಟ್ಟಿ ಮಾಡಿ ಬೀಜ ಹಾಕುವುದನ್ನು ‘ನೀರ’ ಅಗೆಯೆಂದೂ, ಮಳೆ ಕಡಿಮೆಯಿದ್ದ ಹೊತ್ತಿನಲ್ಲಿ ನೇಗಿಲ ಸಾಲು ಹೊಡೆದು ಬೀಜ ಉಗ್ಗಿ, ಮೇಲೆ ಕರಿಯನ್ನು ಸಮನಾಗಿ ಹಾಕುವುದನ್ನು ‘ಬರ’ ಅಗೆಯೆಂದು ವಿಂಗಡಿಸುವುದುಂಟು. ಇಲ್ಲಿ ಒಕ್ಕಲು ಮಾಡುವ ರೀತಿ ಬಯಲುನಾಡಿಗಿಂತ ಸ್ವಲ್ಪ ಭಿನ್ನ ಆಗಿರುತ್ತದೆ. ಆಯಾ ಗದ್ದೆಗಳಲ್ಲಿಯೇ ಕಣ, ಹುಲ್ಲು ಹರಡುವುದನ್ನು ಮಲೆನಾಡಿನಲ್ಲಿ ‘ನೆರಗು’ ಎನ್ನುತ್ತಾರೆ.

ಕೃಷಿ ಕುರಿತು ಜನಪದ ಸಾಹಿತ್ಯದಲ್ಲಿ ಗಾದೆ, ಒಗಟು, ಕತೆ, ಹಾಡುಗಳಿವೆ, ಬಿತ್ತನೆಯ ಸಂದರ್ಭದಿಂದ ಹಿಡಿದು ಕೊಯ್ಲು ಆಗುವವರೆಗೂ ಹೇಳುವ ಜನಪದ ಸಾಹಿತ್ಯದಲ್ಲಿ ಹೇರಳ ಸಾಹಿತ್ಯವಿದೆ.

ಬಿತ್ತುವ ದಿನ ಬಂತು ಎತ್ತು ತಯ್ಯಾರ ಮಾಡೊ
ಮುತ್ತಿನ ಕೂರಿಗಿ ಹದಮಾಡೊ ಎಲೆ ರೈತಾ
ಮುತ್ತೈದಿ ಅಕ್ಕಡಿಗೆ ಬರುತಾಳೋ

ಅಚ್ಚಂಬಲಿ ಅಳಿಯಂಬಲಿ
ಹಿತ್ತಲಾಗಳ ಧಾರಿ ಹೀರಿಕಾಯಿ
ಒಪ್ಪಿಕೊಳ್ಳೆ ಭೂಮಿತಾಯಿ, ಹೂಲಿ, ಹೂಲಿ ಹೂಲಿ

ಎಂಬ ಪದ ಕೂಡ ಇದೆ. ‘ಮಾತು ಮುಂದಾತು ಹೊಲ ಅಂಗಲಾತು ‘ಉತ್ತರ ಮಳೆ ಬಂದರೆ ಬಿತ್ತಿದ್ದೆಲ ಫಲ’, ‘ರೋಣಿ ಮಳೆಯಲ್ಲಿ ಬಿತ್ತಿದರೆ ಓಣೆಲ್ಲಾ ಜ್ವಾಳ’ ಎಂಬ ಹಲವಾರು ಗಾದೆಗಳು ಕೂಡ ಇವೆ.

ಬಿತ್ತುವ ಬೀಜಗಳನ್ನು ನೆಲದ ಮೇಲಿಟ್ಟು ಅವರವರ ಮನೆದೇವರ ನೆನೆದು ಪೂಜಿಸುವ ಪದ್ಧತಿಯಿದೆ. ಇದರ ಜೊತೆಗೆ ಜಾತ್ರೆ, ರಥೋತ್ಸವಗಳ ಸಂದರ್ಭಗಳಲ್ಲಿ ಹರಕೆ ಹೊತ್ತಂಥವರು ಎರಚುವ ದವಸ ಧಾನ್ಯಗಳನ್ನೆಲ್ಲ ಗುಡಿಸಿಕೊಂಡು ತಂದು ತಮ್ಮ ಹೊಲಗಳಿಗೆ ಗದ್ದೆಗಳಿಗೆ ಹಾಕುವ, ತಾವು ಬಿತ್ತುವ ಬೀಜಗಳೊಡನೆ ಬೆರಕೆ ಮಾಡಿ ಬಿತ್ತುವ ಕ್ರಮ ಇಂದಿಗೂ ಇದೆ. ಬಿತ್ತುವ ಬೀಜಗಳನ್ನು ಬೂದಿಯಲ್ಲಿ ಬೆರೆಸಿ ಬಿತ್ತುವ ಕ್ರಮವೂ ಇದೆ.

ವೈಜ್ಞಾನಿಕ ಕೃಷಿಪದ್ಧತಿಯಲ್ಲಿ ಕೃಷಿ ಬಿತ್ತನೆ ಬೀಜದ ಪರಿಕಲ್ಪನೆ ಸ್ವಲ್ಪ ಬದಲಾಗಿದೆ. ಇಂದು ಪ್ರಚಲಿತದಲ್ಲಿರುವ ಕುಲಾಂತರಿ ಹಾಗೂ ಸುಧಾರಿತ ತಳಿಗಳೇ ಹೊಸ ತಲೆಮಾರಿನ ತಳಿಗಳು. ಸಂಕರಣ ಹೊಸತಳಿ, ಕಿರಣಗಳ ಬಳಕೆಯಿಂದ ಹೊಸತಳಿ, ವರ್ಣ ತಂತುಗಳ ವಿಭಜನೆಯಿಂದ ಹೊಸತಳಿ, ಹೀಗೆ ಹೈಬ್ರಿಡ್ ತಳಿಗಳ ಏಕಮುಖ, ದ್ವಿಮುಖ ಸಂಕರ ತಳಿಗಳನ್ನು ಸಂಕರಣಗೊಳಿಸುತ್ತರುವುದರಿಂದ ಬೇಸಾಯದ ಲಾಭದಾಯಕತೆಯೇ ಕೃಷಿಯ ಜೀವಾಳವಾಗಿದೆ. ಯಂತ್ರಗಳನ್ನು ಉಪಯೋಗಿಸಿ, ರಾಸಾಯನಿಕ ಗೊಬ್ಬರ ಬಳಸಿ ಕೃಷಿ ಮಾಡುವುದರಿಂದ ಕೃಷಿ ಸತ್ತ್ವರಹಿತವಾಗುತ್ತಿದೆ ಎಂಬ ಭಾವನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕ್ರಮೇಣ ನೈಸರ್ಗಿಕ ಕೃಷಿಯತ್ತಲೇ ಎಲ್ಲರ ಗಮನಹರಿದಿದೆ.

– ಎಂ.ಕೆ.

ಕೃಷ್ಣಾಷ್ಟಮಿ ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ತೆಲುಗರು ಆಚರಿಸುವ ಹಬ್ಬ. ಇದನ್ನು ಶ್ರೀಕೃಷ್ಣ ಜಯಂತಿ, ಗೋಕುಲಾಷ್ಟಮಿ, ಶ್ರೀಜಯಂತಿ ಎಂದೆಲ್ಲಾ ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಈ ದಿನವನ್ನು ‘ಬುದ್ಧಾಷ್ಟಮಿ’ ಎನ್ನುವರು.

ಪುರಾಣಗಳ ಪ್ರಕಾರ ಶ್ರೀಕೃಷ್ಣ ದ್ವಾಪರಯುಗ, ಕಲಿಯುಗಗಳ ಸಂಧಿ ಕಾಲದಲ್ಲಿ ಜನಿಸಿದನು. ಶುಕ್ಲನಾಮ ಸಂವತ್ಸರ, ಶ್ರಾವಣ ಮಾಸ, ಕೃಷ್ಣ ಪಕ್ಷದ ರೋಹಿಣಿ ನಕ್ಷತ್ರ ಅಷ್ಟಮಿಯಂದು ರಾತ್ರಿ ವೇಳೆ ಕಾರಾಗೃಹದಲ್ಲಿ ಜನಿಸಿದನು. ಈತನ ಜನ್ಮಕ್ಕೂ ಇವರ ಸೋದರ ಮಾವ ಕಂಸನ ವಧೆಗೂ ಸಂಬಂಧವಿದೆ. ಕಾರಾಗೃಹದಲ್ಲಿ ಜನಿಸಿದ ಶಿಶುವನ್ನು ವಸುದೇವನು ಗೋಕುಲಕ್ಕೆ ಸೇರಿಸುವುದು, ಯಶೋದೆಯ ಮಗನಾಗಿ ಶ್ರೀ ಕೃಷ್ಣ ಬೆಳೆಯುವುದು ಇತ್ಯಾದಿ ವಿವರಗಳು ಎಲ್ಲರಿಗೂ ಪರಿಚಿತವಾದಂಥವು.

ಅಂದು ಮನೆಯನ್ನು ಸುಣ್ಣ ಬಣ್ಣಗಳಿಂದ ಶುದ್ಧಗೊಳಿಸಿ ಬಾಗಿಲಿಗೆ ಹಸಿರು ತೋರಣವನ್ನು ಕಟ್ಟಿ ಹೊಸಿಲಿಗೆ ಅರಿಸಿನ ಕುಂಕುಮವನ್ನು ಇಡುತ್ತಾರೆ. ಈ ಹಬ್ಬವನ್ನು ಸಾಧಾರಣವಾಗಿ ಸಂಜೆ ವೇಳೆ ಮಾಡುತ್ತಾರೆ. ಇದೊಂದು ಸುಂದರ ಸಂಭ್ರಮ. ಮನೆಯಲ್ಲಿ ಕೃಷ್ಣ ನಡೆದಾಡಿದಂತೆ ಸಣ್ಣ ಸಣ್ಣ ಪಾದ ಮುದ್ರಿಕೆಗಳನ್ನು ಹಾಕುತ್ತಾರೆ. ಇಲ್ಲವೇ ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಅವರ ಹೆಜ್ಜೆಗಳನ್ನಾದರೂ ಹಾಕಿಸುತ್ತಾರೆ. ಪಾಲ ಕಾಯಲು (ಒಂದು ಬಗೆಯ ತಿಂಡಿ ಬೆಲ್ಲದ ಉಂಡೆಗಳು, ಬೆಣ್ಣೆ, ಖರ್ಜು ಕಾಯಿ ಮೊದಲಾದ ತಿಂಡಿಗಳನ್ನು ನೈವೇದ್ಯವಾಗಿ ಇಡುವರು. ಕೆಲವರು ಸಂಜೆ ಪೂಜೆ ಮುಗಿಯುವವರೆಗೆ ಉಪವಾಸವಿರುವುದುಂಟು. ಪೂಜೆಯಾದ ಮೇಲೆ ತೆಂಗಿನಕಾಯ ಒಡೆದು ಮಂಗಳಾರತಿ ಮಾಡುತ್ತಾರೆ.

ಕೃಷ್ಣಾಷ್ಟಮಿ ಆಚರಣೆಯಲ್ಲಿ ನೆಲವು ಒಡೆಯುವುದು ತುಂಬಾ ಪ್ರಸಿದ್ಧವಾದುದು. ಇದನ್ನು ‘ಉಟ್ಲ ಹಬ್ಬ’ ಎನ್ನುತ್ತಾರೆ. ಉಟ್ಲ ಸಂಬರಂ, ಉಟ್ಲ ತಿರುನಾಳ್ಳು ಎಂಬ ಮಾತುಗಳೂ ಬಳಕೆಯಲ್ಲಿವೆ. ನೆಲುವಿನ ಬೆಣ್ಣೆ, ಮೊಸರು, ಹಾಲು ಮುಂತಾದವನ್ನು ಕದಿಯುವುದು, ತುಂಟ ಕೃಷ್ಣನ ಬಾಲ ಚೇಷ್ಟೆಗಳು ಇದನ್ನು ನೆನಪಿಸಿಕೊಂಡು ಆ ಮೂಲಕ ಮನರಂಜನೆ ಪಡೆಯುವುದೇ ಈ ಹಬ್ಬದ ಮುಖ್ಯ ಉದ್ದೇಶ.

ಮೊದಲು ಎರಡು ಉದ್ದನೆಯ ಕಂಬಗಳನ್ನು ನೆಟ್ಟು ಅವುಗಳಿಗೆ ಅಡ್ಡಲಾಗಿ ಒಂದು ತೊಲೆ ಕಟ್ಟುವರು. ಆ ಕಂಬಗಳನ್ನು ಬಾಳೆ ಮರ ಮತ್ತು ತೆಂಗಿನ ಗರಿಗಳಿಂದ ಅಲಂಕರಿಸುತ್ತಾರೆ. ಅಡ್ಡಲಾಗಿ ಕಟ್ಟಿದ ತೊಲೆಗೆ ಒಂದು ಮಡಕೆಯನ್ನು ನೇತಾಡುವಂತೆ ಕಟ್ಟಿರುತ್ತಾರೆ. ಆ ಮಡಕೆಗೆ ಒಂದು ಹಗ್ಗವನ್ನು ಕಟ್ಟಿ ಅದನ್ನು ಕೆಳಗೆ ಮೇಲೆ ಎಳೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿರುತ್ತಾರೆ. ಆ ಮಡಕೆಯಲ್ಲಿ ಗೆದ್ದವರಿಗೆಂದೇ ‘ಕಾಣಿಕೆ'(ಹಣ) ಇರುತ್ತದೆ. ದೂರದಲ್ಲಿರುವ ಒಬ್ಬ ವ್ಯಕ್ತಿ ಮಡಕೆಗೆ ಕಟ್ಟಿದ ಹಗ್ಗದ ಮತ್ತೊಂದು ತುದಿಯನ್ನು ಹಿಡಿದಿರುತ್ತಾನೆ. ಬೇಕೆನಿಸಿದಾಗ ಹಗ್ಗವನ್ನು ಮೇಲೆ ಕೆಳಗೆ ಎಳೆದು ಜಾರಿಸುತ್ತಾನೆ. ಆ ಮಡಕೆಯನ್ನು (ಕೋಲಿನಿಂದ) ಒಡೆದವನು ಅದನ್ನು ಗೆಲ್ಲುತ್ತಾನೆ. ಮಡಕೆಯನ್ನು ಕೈಗೆ ಸಿಗುವಂತೆ ಮಾಡಿ ಆ ಕೂಡಲೇ ಮೇಲೆ ಎಳೆಯುವುದು ಒಂದು ವಿನೋದ. ಈ ಸಂಭ್ರಮವನ್ನು ವಿವಿಧ ರೀತಿಗಳಲ್ಲಿ ಆಚರಿಸುತ್ತಾರೆ. ಅನ್ನಮಾಚಾರ್ಯರ ಸಂಕೀರ್ತನೆಗಳಲ್ಲಿ ‘ಉಟ್ಲ ಹಬ್ಬ’ವನ್ನು ಕುರಿತ ವರ್ಣನೆಗಳಿವೆ.

ಕೃಷ್ಣಾಷ್ಟಮಿ ರಾತ್ರಿ ಶ್ರೀಕೃಷ್ಣನ ಜನನ, ರಾಸಕ್ರೀಡೆ, ಕಂಸವಧೆ ಮುಂತಾದ ವಿಷಯಗಳನ್ನುಳ್ಳ ನಾಟಕಗಳ ಪ್ರದರ್ಶನಗಳಿರುತ್ತವೆ. ತಿರುಮಲ ತಿರುಪತಿ ಕ್ಷೇತ್ರದಲ್ಲಿ ಈ ಹಬ್ಬವನ್ನು ತುಂಬ ವೈಭವದಿಂದ ಆಚರಿಸುತ್ತಾರೆ.

ಆ ದಿನ ಶ್ರೀಕೃಷ್ಣನ ವಿಗ್ರಹಕ್ಕೆ ಅಭಿಷೇಕ ಮಾಡಿ ಗೋವುಗಳನ್ನು ಪೂಜಿಸುತ್ತಾರೆ. ಶ್ರೀಕೃಷ್ಣ ಗೀತಾಚಾರ್ಯ, ಪರಮ ಯೋಗೀಶ್ವರ ಅಖಂಡ ರಾಜನೀತಿಜ್ಞ, ಶೃಂಗಾರ ಮೂರ್ತಿ ಎಂಬುದನ್ನೇ ನೆನಪಿಸಿಕೊಂಡು ಸಂಭ್ರಮ, ಸಡಗರಗಳಿಂದ ಹಬ್ಬವನ್ನು ಆಚರಿಸುತ್ತಾರೆ. ಇವುಗಳಲ್ಲಿ ಕೆಲವು ಪ್ರಾಂತೀಯ ಭೇದಗಳುಂಟು.

– ಪಿ.ಆರ್.ಎಚ್. ಅನುವಾದ ವಿ.ಆರ್.

ಕೆಡ್ಡಸ ಕರಾವಳಿ ಕರ್ನಾಟಕದ ಫಲವಂತಿಕೆಯ ಆಚರಣೆಗಳಲ್ಲಿ ಒಂದು. ಮಕರ ಮಾಸದ ಇಪ್ಪತ್ತೇಳನೆಯ ದಿನದಿಂದ ತೊಡಗಿ ಕುಂಭ ಸಂಕ್ರಮಣದವರೆಗಿನ ಮೂರು ದಿನಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಭೂಮಿದೇವಿ ರಜಸ್ವಲೆಯಾಗುವ ಪರ್ವಕಾಲ ಇದೆಂದು ತಿಳಿಯಲಾಗುತ್ತದೆ. ಈ ಪದದ ವ್ಯುತ್ಪತ್ತಿಯ ಬಗ್ಗೆ ಖಚಿತ ವಿವರಗಳಿಲ್ಲ. ಖೇಟ, ಖೆಡ್ಡ, ಕೆಡ್ಡ ಎಂಬ ಪದಕ್ಕೆ ಬೇಟೆ ಎಂಬ ಅರ್ಥವಿದ್ದು, ಕೆಡ್ದಸದ ದಿನಗಳಲ್ಲಿ ಬೇಟೆ ಅನಿವಾರ್ಯವಾದ ಆಚರಣೆ ಆಗಿರುವುದರಿಂದ ಬೇಟೆಗೂ ಈ ಆಚರಣೆಗೂ ಸಂಬಂಧ ಕಲ್ಪಿಸಬಹುದಾಗಿದೆ.

ಈ ಹಬ್ಬ ಋತುಮಾನಕ್ಕೆ ಸಂಬಂಧಿಸಿದ್ದಾಗಿದೆ. ಭೂಮಿತಾಯಿ ಮುಟ್ಟಾಗುವ ಈ ದಿನಗಳಲ್ಲಿ ಅಗೆಯುವುದು, ಉಳುವುದು ನಿಷಿದ್ಧ. ಆ ದಿನಗಳಲ್ಲಿ ಉತ್ತರ, ಆ ಮೂಲಕ ಭೂಮಿಗೆ ಹಿಂಸೆ ಮಾಡಿದರೆ, ಮನೆಯೊಡತಿ ಬಂಜೆಯಾಗುತ್ತಾಳೆ ಎನ್ನುವುದು ನಂಬಿಕೆ. ಹೀಗಾಗಿ ನೊಗ, ನೇಗಿಲು, ಹಾರೆ, ಗುದ್ದಲಿಗಳ ಕೆಲಸಕ್ಕೆ ಈ ದಿನಗಳಲ್ಲಿ ನಿಲುಗಡೆ. ಗಾಡಿ ಎಳೆಯುವ ಎತ್ತುಗಳಿಗೂ ವಿಶ್ರಾಂತಿ. ಮರ, ಗಿಡ, ಬಳ್ಳಿಗಳಿಗೆ ಕತ್ತಿ ಇಡುವಂತಿಲ್ಲ.

ಕೆಡ್ಡಸ ಹೆಂಗಸರು ವಿಶೇಷವಾಗಿ ಪಾಲ್ಗೊಳ್ಳುವ ಹಬ್ಬ. ಭೂಮಿತಾಯಿಯನ್ನು ಪೂಜಿಸುವುದರಲ್ಲಿ ಅವರಿಗೆ ವಿಶೇಷ ಸಂಭ್ರಮ. ಸಡಗರ. ಮನೆಯಂಗಳದಲ್ಲಿ ಸೆಗಣಿ ಸಾರಿಸಿ, ಶುದ್ಧಮಾಡಿ ಮೊಳದಷ್ಟು ಅಗಲಕ್ಕೆ ವೃತ್ತವೊಂದನ್ನು ವಿಭೂತಿಯಿಂದ ಬರೆದು ಅದರೊಳಗೆ ಬಿಳಿಯ ಮಡಿಬಟ್ಟೆ, ಕಿರುಗೆಜ್ಜೆ, ಕಿರುಗತ್ತಿ, ತೆಂಗಿನ ಸೋಗೆಯ ಕಡ್ಡಿಗಳನ್ನು ಇರಿಸಿ ಭೂಮಿದೇವಿಯನ್ನು ಸಂಕೇತಿಸುತ್ತಾರೆ. ಇದನ್ನು ‘ಕೆಡ್ಡಸದ ಭೂಮಿ ಬರೆವುದು’ ಎನ್ನುತ್ತಾರೆ.

ಕೆಡ್ಡಸದ ಮೊದಲ ದಿನ ಮನೆಯ ಒಡತಿ ನವಧಾನ್ಯಗಳನ್ನು (ವಿಶೇಷವಾಗಿ ಹುರುಳಿ ಹುರಿದು ಬೆಲ್ಲ ಅರಳು, ತೆಂಗಿನಕಾಯಿ (ಕೊಬ್ಬರಿ ಚೂರುಗಳನ್ನು ಬೆರೆಸಿ ತುದಿಬಾಳೆಯ ಮೇಲೆ ಇರಿಸಿ ‘ಭೂಮಿ’ಬರೆದುದರ ಮೇಲೆ ಇರಿಸಿ ವಂದಿಸುತ್ತಾರೆ. ಆ ಬಳಿಕ ಪ್ರಸಾದ ರೂಪದಲ್ಲಿ ಎಲ್ಲರಿಗೂ ಹಂಚಿ ತಿನ್ನುತ್ತಾರೆ. ಇದಕ್ಕೆ ಕೆಡ್ಡಸದ ‘ಕುಡುಅರಿ’ (ಕೆಡ್ಡಸದ ಹುರುಳಿ ಅಕ್ಕಿ) ಎನ್ನಲಾಗುತ್ತದೆ. ಮನೆಯಲ್ಲಿ ಚೊಚ್ಚಲ ಮಕ್ಕಳಿದ್ದರೆ ಅವರು ಇದನ್ನು ತಿನ್ನಲೇಬೇಕು. ಅವರು ಪರ ಊರಲ್ಲಿದ್ದರೆ ಕಟ್ಟಿಟ್ಟು ಅವರು ಬಂದಾಗ ಕೊಡಲಾಗುತ್ತದೆ

ಮಧ್ಯಾಹ್ನದ ಊಟಕ್ಕೆ ನುಗ್ಗೆಯ ಪಲ್ಯ ಕಡ್ಡಾಯ. ನುಗ್ಗೆಕಾಯಿಯೊಂದಿಗೆ ಬದನೆಕಾಯಿ ಸೇರಿಸಿ ಮಾಡಿದ ಪದಾರ್ಥ ಆ ದಿನದ ವಿಶೇಷ ಅಡುಗೆ. ಆ ದಿನ ರಾತ್ರಿ ಉದ್ದಿನ ದೋಸೆ, ಜೊತೆಗೆ ಯಾವುದಾದರೂ ಸಿಹಿ ಅಡುಗೆ ಆಗಬೇಕು. ಆ ದಿನದ ಇನ್ನೊಂದು ವಿಶೇಷವೆಂದರೆ ಅಡುಗೆಮನೆ ಕೆಲಸದ ನಿರ್ವಹಣೆಯ ಅದಲುಬದಲುತನ. ಭೂಮಿದೇವಿ ಬಿಹಿಷ್ಠೆ ಆದ ಹಿನ್ನಲೆಯಲ್ಲಿ ಅಡುಗೆಮನೆಯಲ್ಲಿ ಹೆಂಗಸರು ಪಾಲ್ಗೊಳ್ಳುವಂತಿಲ್ಲ. ರುಬ್ಬುವ ಕಲ್ಲಿನಲ್ಲಿ ಅಕ್ಕಿ, ಉದ್ದು ರುಬ್ಬಿ ದೋಸೆಗೆ ಬೇಕಾದ ಹಿಟ್ಟನ್ನು ಗಂಡಸರೇ ತಯಾರಿಸಬೇಕು. ಉಳಿದಂತೆ ಇ ಮೂರು ದಿನ ಕೃಷಿಕರ್ಮಗಳಿಗೆ ಬಿಡುವು. ಹೀಗಾಗಿ ಗಂಡಸರು ಬೇಟೆ, ಕೋಲಿಅಂಕಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ. ಕೆಡ್ಡಸದ ಸಂದರ್ಭಗಳಲ್ಲಿ ಬೇಟೆಗೆ ವಿಶೇಷ ಪ್ರಾಧಾನ್ಯ. ಆ ದಿನಗಳಲ್ಲಿ ಮೃಗ ಪಕ್ಷಿಗಳಿಗೆ ಜ್ವರ, ಕಾಲು ಒಡೆಯುವ ರೋಗ ಬರುತ್ತದೆ ಎಂಬ ಪ್ರತೀತಿ. ಹೀಗಾಗಿ ಬೇಟೆಗಾರರಿಗೆ ಬೇಟೆ ಸುಲಭದಲ್ಲಿ ದೊರೆಯುತ್ತದೆ ಎನ್ನುವ ನಂಬಿಕೆ. ಹೊಲ ತೋಟಗಳಿಗೆ ನುಗ್ಗಿ ಹಾನಿ ಮಾಡುವ ಹಂದಿ, ಮೊಲ ಮುಂತಾದ ಪ್ರಾಣಿಗಳನ್ನು ಬೇಟೆಯಾಡಬೇಕು. ಮಾಂಸಾಹಾರಿಗಳು ಈ ದಿನಗಳಲ್ಲಿ ಮಾಂಸದ ಊಟ ಮಾಡದಿದ್ದರೆ ಎಲುಬು ಶಿಥಿಲವಾಗುವುದಾಗಿ ಜನ ಹೇಳುತ್ತಾರೆ. ಕಾಡಬೇಟೆಯಲ್ಲದೆ ಹೊಳೆ ಕೆರೆಗಳಿಗೆ ಹೋಗಿ ಮೀನು, ಏಡಿಗಳನ್ನು ಹಿಡಿಯವುದೂ ಇದೆ. ಬೇಲಿ ಬದಿಯ ಆಮೆಗಳನ್ನು ಬೇಟೆಯಾಡಲಾಗುತ್ತದೆ. ಕೋಳಿ ಅಂಕವಂತೂ ಈ ದಿನಗಳಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ.

ನಡುಕೆಡ್ಡಸದ ದಿನ ‘ದೊಡ್ಡಬೇಟೆ’, ಬೇಟೆ ನಾಯಿಗಳ ನೆರವಿನಿಂದ ಕೋವಿ, ಕತ್ತಿ, ದೊಣ್ಣೆ ಒಲೆಗಳನ್ನು ಹಿಡಿದುಕೊಂಡು ಕಾಡಿಗೆ ಗುಂಪುಕಟ್ಟಿಕೊಂಡು ಹೋಗಿ ಬೇಟೆಯಾಡುತ್ತಾರೆ. ಪುರುಷಭೂತ ಹಾಗೂ ಮುಗ್ಲೇಲು ದೈವಗಳನ್ನು ಪ್ರಾರ್ಥಿಸಿಯೇ ಬೇಟೆಗೆ ಹೊರಡುತ್ತಾರೆ. ಬೇಟೆಯಲ್ಲಿ ಮೃಗಕ್ಕೆ ಹೊಡೆದು ರಕ್ತಚಿಮ್ಮಿಸಿದವರಿಗೆ ಮೊದಲ ದಾಯ (ಪಾಲು) ಸಿಗುತ್ತದೆ. ಹಂದಿ ಹೊಡೆದವನಿಗೆ ಮೂರು ಪಾಲು ಸಲ್ಲುತ್ತದೆ. ಬೇಟೆಯಾದ ಪ್ರಾಣಿಯ ತಲೆ ಕೈ, ಬೆನ್ನೆಲುಬಿನ ಭಾಗ. ಕರ್ಭಟ (ಪಿತ್ತಜನಕಾಂಗ) ವನ್ನು ಕಾಡಲ್ಲೇ ಬಗಿದು ಅದನ್ನು ಬೆಂಕಿಯಲ್ಲಿ ಬೇಯಿಸಿ ಬೇಟೆ ದೈವಗಳಿಗೆ ಅರ್ಪಿಸಿ ಪ್ರಸಾದ ರೂಪದಲ್ಲಿ ಬೇಟೆಯಲ್ಲಿ ಪಾಲ್ಗೊಂಡವರಿಗೆಲ್ಲ ಹಂಚಲಾಗುತ್ತದೆ. ಹೀಗೆ ಪ್ರಸಾದರೂಪದಲ್ಲಿ ದೊರೆತ ಮಾಂಸದ ದಾಯವನ್ನು ಮನೆಗೊಯ್ದು ಪಾಕಮಾಡಿ ಎಲ್ಲರೂ ಹಂಚಿ ತಿನ್ನುತ್ತಾರೆ. ಬೇಟೆಯಲ್ಲಿ ಪಾಲುಗೊಂಡವರಿಗೆಲ್ಲ ಪಾಲು ದೊರೆಯುತ್ತದೆ. ಅಷ್ಟೇ ಅಲ್ಲ ಬೇಟೆಯಲ್ಲಿ ಪಾಲ್ಗೊಳ್ಳದಿದ್ದ ಊರ ಪಟೇಲರಿಗೂ ಊರಗಣ್ಯರಿಗೂ ಪಾಲು ದೊರೆಯುತ್ತದೆ. ಪಾಲ್ಗೊಂಡ ಬೇಟೆ ನಾಯಿಗೂ ಕೂಡಾ.

ಮೂರನೆಯ ದಿನ ಮುಂಜಾನೆ ಮತ್ತೈದೆ ಮಹಿಳೆಯರು ‘ಭೂಮಿ’ ಬರೆದಲ್ಲಿ ಏಳು ಸರೊಳಸೊಪ್ಪು (ಲೋಳೆಯಾದ ರಸವುಲ್ಳ ಎಲೆ)ಗಳನ್ನು ಪಶ್ಚಿಮಕ್ಕೆ ತುದಿ ಬರುವಂತೆ ಸಾಲಾಗಿರಿಸಿ ಹಣತೆದೀಪವನ್ನು ಬೆಳಗಿಸುತ್ತಾರೆ. ಅರಸಿನ, ಕುಂಕುಮ, ಮಸಿ, ಎಣ್ಣೆ, ಸೀಗೆ, ಬಾಗೆ ತೊಗಟೆಗಳು, ಹೆಸರು ಧಾನ್ಯದ ಪುಡಿ, ವೀಳೆಯದೆಲೆ, ಗಂಧದ ಕಡ್ಡಿಗಳನ್ನು ಇರಿಸುತ್ತಾರೆ. ಮಿಂದು ಮಡಿಯಾಗಿ ಬರುವ ಭೂಮಿದೇವಿಯ ಅಲಂಕಾರಕ್ಕಾಗಿ ಕನ್ನಡಿ, ಬಾಚಣಿಗೆ, ಕರಿಮಣಿ ಇರಿಸುತ್ತಾರೆ. ಹೊಸ್ತಿಲಿಗೆ ರಂಗವಲ್ಲಿ ಬರೆದು ಮಿಂದು ಶುದ್ಧಳಾಗಿ ಬರುವ ಭೂಮಿತಾಯಿಯನ್ನು ಪುಷ್ಪವತಿಯೊಬ್ಬಳು ಫಲವತಿಯಾಗುವ ಆಶಯದಿಂದ ಮನೆಯೊಳಗೆ ಸ್ವಾಗತಿಸುವ ‘ರೂಪಕ’ವನ್ನು ಇಲ್ಲಿ ಕಾಣಬಹುದು. ಬಹಿಷ್ಠೆಯಾದ ಮಹಿಳೆಯೊಬ್ಬಳು ನಾಲ್ಕನೆಯ ದಿನ ಮಿಂದು ಬರುವ ಸಂದರ್ಭದಲ್ಲಿ ಆಕೆಯನ್ನು ಸ್ವಾಗತಿಸುವ ಪರಿಯನ್ನು ಇಲ್ಲಿ ಗುರುತಿಸಬಹುದು. ಆ ದಿನ ಅಡುಗೆಮನೆಯನ್ನು ಮತ್ತೆ ಶುದ್ಧೀಕರಿಸಿ ವಿವಿಧ ಪರಿಕರಗಳಿಂದ ಪುಷ್ಕಳವಾದ ಅಡುಗೆಯನ್ನು ತಯಾರಿಸಿ (ಮಾಂಸಾಹಾರ) ತುದಿ ಬಾಳೆಯೆಲೆಯಲ್ಲಿ ಇರಿಸಿ ಒಂದು ತಂಬಿಗೆ ನೀರಿನೊಂದಿಗೆ ಅಂಗಳದಲ್ಲಿ ಬರೆದ ‘ಭೂಮಿ’ಗೆ ಸಮರ್ಪಿಸುತ್ತಾರೆ. ಮರುದಿನ ಮುಂಜಾನೆ ಮುತ್ತೈದೆ ಮಹಿಳೆಯರು ಮಿಂದು ಮಡಿಯಾಗಿ ‘ಭೂಮಿ’ಗೆ ಎಣ್ಣೆ ಹೊಯ್ಯುತ್ತಾರೆ. ಸ್ನಾನಕ್ಕೆ ಬಳಸುವ ಸೀಗೆ, ಬಾಗೆ, ಪಚ್ಚೆಹೆಸರು ಹುಡಿ, ಸರೊಳರಸ ಇತ್ಯಾದಿ ಚೆಲ್ಲುತ್ತಾರೆ. ಓಕುಳಿಯ ನೀರಿನಿಂದ ಜಾಗವನ್ನು ಶುದ್ಧೀಕರಿಸಿ ಹೂ, ಗಂಧ, ವೀಳ್ಯ, ಧೂಪ, ದೀಪಗಳಿಂದ ಪೂಜಿಸಿ ಸಂತಾನ, ಸುಖ ಸಂಪತ್ತುಗಳನ್ನು ಬೇಡುತ್ತಾರೆ. ಕುಂಭಸಂಕ್ರಮಣದ ದಿನದಂದು ಕೆಡ್ಡಸಕ್ಕೆ ಮುಗಿತಾಯ.

ಕೆಡ್ಡಸದ ಸಂದರ್ಭದ ವಾತಾವರಣದಲ್ಲಿ ವಿಶೇಷ ಬದಲಾವಣೆ ಗೋಚರಿಸುತ್ತದೆ. ಆ ದಿನಗಳಲ್ಲಿ ಎಂದೂ ಇಲ್ಲದ ಗಾಳಿ ಬೀಸುವುದನ್ನು ಗಮನಿಸಬಹುದು. ಇದಕ್ಕೆ ‘ಕೆಡ್ಡಸದ ಗಾಳಿ’ ಎಂದು ಕರೆಯಲಾಗುತ್ತದೆ. ಮರಗಿಡ ಬಳ್ಳಿಗಳಲ್ಲಿ ನಡೆಯುವ ಫಲೀಕರಣ ಪ್ರಕ್ರಿಯೆಗೆ ಈ ಗಾಳಿ ಅನುಕೂಲಮಾಡಿಕೊಡುತ್ತದೆ ಎಂಬುದು ಜನಾಭಿಪ್ರಾಯ. ಕರ್ನಾಟಕದ ಇತರೆಡೆ ಬಳಕೆಯಲ್ಲಿರುವ ‘ಭೂಮಿ ಹುಣ್ಣಿಮೆ’ ಆಚರಣೆಯನ್ನು ಇದು ಹೋಲುತ್ತದೆ. ಅಲ್ಲೂ ಇದೇ ಬಗೆಯಲ್ಲಿ ಬೇಟೆಯಾಡುವ ಪದ್ಧತಿ ಇದೆ. ಒಟ್ಟಿನಲ್ಲಿ ಕೆಡ್ಡಸ ಪ್ರಕೃತಿಯು ಚೈತನ್ಯವನ್ನು ಉದ್ದೀಪನಗೊಳಿಸುವ ಒಂದು ಸಾಂಕೇತಿಕ ಆಚರಣೆ.

– ಎ.ವಿ.ಎನ್.