ಕೇರಳದ ಐತಿಹ್ಯಗಳು ‘ಇತಿ’ ಮತ್ತು ‘ಹ’ ಎಂಬ ಎರಡು ಪದಗಳು ಸೇರಿ ಆದದ್ದು ಐತಿಹ್ಯ. ಇದರ ಅರ್ಥವೇ ಸೂಚಿಸುವಂತೆ ಇತಿಹಾಸದ ಅಂಶಗಳನ್ನು ಹೊಂದಿರುವ ಕಥಾರೂಪವೇ ಐತಿಹ್ಯ. ಇದರಲ್ಲಿರುವ ಚರಿತ್ರೆಯ ಅಂಶಗಳು ಪೂರ್ಣ ವಸ್ತುನಿಷ್ಠವಾಗಿರಬೇಕಾಗಿಲ್ಲ. ಅವುಗಳು ಅತಿಶಯೋಕ್ತಿಯಿಂದ ಕೂಡಿರಬಹುದು. ಚರಿತ್ರೆಯ ಸತ್ಯಕ್ಕಿಂತ ಹೆಚ್ಚು ಕಥೆಗೆ ಪ್ರಾಧಾನ್ಯವನ್ನು ಕೊಡಲಾಗುತ್ತದೆ. ಚರಿತ್ರೆಯನ್ನು ಹೇಳುವುದಕ್ಕಿಂತ ಹೆಚ್ಚಾಗಿ ಐತಿಹ್ಯಗಳು ಇತಿಹಾಸಕ್ಕೆ ಸಂಬಂಧಿಸಿದ ಸಾಮೂಹಿಕ ಪ್ರಜ್ಞೆಯೊಂದನ್ನು ಹೇಳುತ್ತವೆ. ಚರಿತ್ರೆಯ ಹಾಗೆ ಐತಿಹ್ಯವೂ ಜನ ಸಮೂಹದ ಪ್ರಜ್ಞೆಯನ್ನು ತಿಳಿಯಲು ಪ್ರಧಾನವಾದ ಆಕರವಾಗಿದೆ.

ಐತಿಹ್ಯಗಳನ್ನು ಸಾಮಾನ್ಯವಾಗಿ ವ್ಯಕ್ತಿಗಳು, ಘಟನೆಗಳು, ಕಾವು (ವನದೇವಾಲಯಗಳು), ಸ್ವರೂಪಗಳು (ಭೂವಿಭಾಗ), ಕಳಗಂ (ಮ),ಅರಮನೆ ಮೊದಲಾದ ಸಂಸ್ಥೆಗಳಿಗೆ,ಆನೆ, ಕೊಳ, ಬಾವಿ ಮೊದಲಾದ ಪ್ರಕೃತಿಯ ಭಾಗಗಳಿಗೆ;ಕಲೆ, ಉದ್ಯೋಗ, ವೈಧವ್ಯ ಮೊದಲಾದವುಗಳಿಗೆ ಸಂಬಂಧಿಸಿರುತ್ತವೆ. ಎಲ್ಲಾ ಐತಿಹ್ಯಗಳೂ ಅವುಗಳಲ್ಲಿರುವ ವಿಷಯಗಳಿಗೆ ಹೆಚ್ಚು ಮಹತ್ವ ಕೊಡುವಂತೆ ಇರುತ್ತವೆ. ಕೆಲವು ಐತಿಹ್ಯಗಳು ಪ್ರಾದೇಶಿಕ ಜನರಿಗೆ ತಿಳಿದಿ‌ದ್ದು, ಮತ್ತೆ ಕೆಲವು ಸಾರ್ವತ್ರಿಕವಾಗಿರುತ್ತವೆ. ರಾಜವಂಶದ ಬಗ್ಗೆ ಇರುವ ಐತಿಹ್ಯಗಳಲ್ಲಿ ‘ಪರಿಯಿಪ್ಪೆಟ್ಟ ಪಂದಿರುಕುಲ’ದ ಐತಿಹ್ಯ ಒಂದು. ವಿಕ್ರಮಾದಿತ್ಯನ ಅರಮನೆಯಲ್ಲಿ ಬ್ರಾಹ್ಮಣ ಪಂಡಿತನಾಗಿದ್ದವನು ವರ ರುಚಿ. ಅವನು ಪರಯಿತಿಯೊಬ್ಬಳನ್ನು (ಒಂದು ಜಾತಿ) ವಿವಾಹವಾಗಿ ಅವಳಿಂದ ಹನ್ನೆರಡು ಮಕ್ಕಳನ್ನು ಪಡೆದನು. ಆ ಮಕ್ಕಳೇ ಮುಂದೆ ಬ್ರಾಹ್ಮಣನಿದ ಮೊದಲ್ಗೊಂಡು ಹನ್ನೆರಡು ಜಾತಿಗಳಾಗಿ ಬೆಳೆದರು. ಇವರಲ್ಲಿ ಪ್ರತಿಯೊಬ್ಬರ ಕುರಿತೂ ಹಲವು ಐತಿಹ್ಯಗಳು ಹುಟ್ಟಿಕೊಂಡವು. ಆಯಾ ಪ್ರದೇಶದ ಸಂಸ್ಕೃತಿಗಳು ಅವರನ್ನು ಜನರ ನೆನಪಿನಲ್ಲಿ ಜೀವಂತವಾಗಿ ಉಳಿಯುವಂತೆ ಮಾಡಿದುವು. ಈ ಐತಿಹ್ಯಗಳಲ್ಲಿರುವ ಕಥೆಗಳು ಅತಾರ್ಕಿಕವಾಗಿರುವುದರಿಂದ ಅದು ಅದಂಭವಾದದ್ದು. ಇದರಲ್ಲಿ ಉಲ್ಲೇಖಿಸಿದ ಹಲವು ಕಥಾಪಾತ್ರಗಳು ಇತಿಹಾಸ ಪುರುಷರದ್ದೆಂದು ತಿಳಿದು ಬರುತ್ತದೆ. ಐತಿಹ್ಯಗಳಲ್ಲಿ ಉಲ್ಲೇಕವಾದ ಪ್ರದೇಶಗಳಿಗೆ ಹೋದರೆ ಇಂದಿಗೂ ಇವರ ಕುರಿತು ಕಥೆಗಳು, ಸ್ಥಳನಾಮಗಳ ಕುಟುಂಬಗಳು, ಘಟನೆಗಳ ಕುರಿತು ಸೂಚನೆಗಳು ದೊರಕುತ್ತವೆ. ಈ ಐತಿಹ್ಯದ ಕಥಾ ಪಾತ್ರಗಳಿಂದಾಗಿ ಕೆಲವು ಆಚರಣೆಗಳೂ ಅನುಷ್ಠಾನಗಳೂ ಇಂದಿಗೂ ನೆಲೆ ನಿಂತಿವೆ. ಇದರಿಂದಾಗಿ ಪುರಾತನವಾದದ್ದು ಪಾವನವಾದದ್ದೆಂಬ ಕಲ್ಪನೆಯ ಜೊತೆಗೆ ಈ ಐತಿಹ್ಯವು ಜಾತಿಯ ಉತ್ಪತ್ತಿನ ಬಗೆಗೆ ಹಲವು ವಿವರಗಳನ್ನು ಕೊಡುತ್ತವೆ. ಆದುದರಿಂದ ‘ಪರಯಿಪ್ಪೆಟ್ಟ ಪಂದಿರುಕಲ’ವು ದಿವ್ಯವಾದ ಐತಿಹ್ಯ ಮಾತ್ರವಲ್ಲದೆ ಕುಲೋತ್ಪತ್ತಿಯ ಐತಿಹ್ಯ ಕೂಡ ಆಗಿದೆ.

೧೭೪೯ರಲ್ಲಿ ನಡೆದ ‘ತೃಪ್ಪಡಿದಾನ’ವು ಕೇರಳ ಚರಿತ್ರೆಯಲ್ಲಿ ಪ್ರಧಾನವಾದ ಒಂದು ಘಟನೆ. ಇದಕ್ಕೆ ಸಂಬಂಧಿಸಿದ ಒಂದು ಐತಿಹ್ಯವು ಹುಟ್ಟಿಕೊಂಡಿದೆ. ತಿರುವಾಂಕೂರಿನ ಮಾರ್ತಾಂಡವರ್ಮ ರಾಜನು ತನ್ನ ಕುಲದೇವತೆಯಾದ ಶ್ರೀ ಪದ್ಮನಾಭನಿಗೆ ತೃಪ್ಪಡಿದಾನ (ಎಲ್ಲವನ್ನೂ ಸಮರ್ಪಿಸಿ) ಮಾಡಿ ಶ್ರೀ ಪದ್ಮನಾಭನ ದಾಸನಾಗಿ ರಾಜ್ಯಭಾರ ಮಾಡಿಕೊಂಡು ಬರುತ್ತಿದ್ದನು. ಅವನ ಉತ್ತರಾಧಿಕಾರಿಗಳೂ ಅದನ್ನು ನಡೆಸಿಕೊಂಡು ಬಂದರು. ಮಾರ್ತಾಂಡ ವರ್ಮನಿಗೆ ಇಷ್ಟೊಂದು ಪ್ರೇರಣೆ ದೊರೆತದ್ದು ಚೆಂಬಕಕ್ಕೇರಿ ರಾಜ ದೇವನಾರಾಯಣನಿಂದ. ಮಾರ್ತಾಂಡವರ್ಮನು ಚೆಂಬಕಕ್ಕೇರಿ ದೇವನಾರಾಯಣನ ಮೇಲೆ ದಂಡೆತ್ತಿ ಹೋಗಿ ಅವನನ್ನು ಸೆರೆಹಿಡಿದನು. ಸೆರೆಹಿಡಿದು ‘ನಿನ್ನ ರಾಜವನ್ನು ನನಗೆ ಕೊಡಬೇಕು’ ಎಂದನು. ಆಗ ಚೆಂಬಕಕ್ಕೇರಿ ರಾಜನು ಸ್ನಾನ ಮಾಡಿ ಒದ್ದೆ ಬಟ್ಟೆಯನ್ನುಟ್ಟು ತನ್ನಲ್ಲಿರುವ ಎಲ್ಲಾ ಬೀಗದ ಕೈಗಳನ್ನು ಅಂಬಲಪ್ಪುಳ ಶ್ರೀ ಕೃಷ್ಣಸ್ವಾಮಿ ದೇವಾಲಯದ ಗರ್ಭಗುಡಿಯ ಬಾಗಿಲಲ್ಲಿಟ್ಟು (ಇದು ತೃಪ್ಪಡಿದಾನ) ಮಾರ್ತಾಂಡವರ್ಮನಲ್ಲಿ ತೆಗೆದುಕೊಳ್ಳಲು ಹೇಳಿದನು. ಆದರೆ ಅದನ್ನು ತಾನು ತೆಗೆದುಕೊಳ್ಳದೆ ತನ್ನ ಸೇವಕನ ಮೂಲಕ ತೆಗೆಸಿಕೊಂಡನು. ಇದನ್ನು ಇಷ್ಟಪಡದ ದೇವನಾರಾಯಣನು ‘ನಿಮ್ಮ ಜೀವನದಲ್ಲಿ ಇದೇ ರೀತಿ ಬೀಗದ ಕೈಗಳನ್ನು ಇಟ್ಟು ರಾಜ್ಯವನ್ನು ಬಿಡುವ ಸ್ಥಿತಿ ಬರಲಿ’ ಎಂದು ಮಾರ್ತಾಂಡವರ್ಮನನ್ನು ಶಪಿಸಿದನು. ಬ್ರಾಹ್ಮಣನಾದ ದೇವನಾರಾಯಣನನ್ನು ತಾನೇ ಸೆರೆಮನೆಗೆ ಹಾಕಲು ಮನಸಾಗದೆ ಕೊಚ್ಚಿ ರಾಜನ ಕೈಗೆ ಅವನನ್ನು ಹಸ್ತಾಂತರಿಸಿದನು. ಆಗ ‘ರಾಜ್ಯವನ್ನು ಬಿಡಬೇಕಾಗಿ ಬಂದುದಕ್ಕೆ ಪ್ರತಿಫಲವಾಗಿ ನಿನಗೆ ಏನಾದರೂ ಪ್ರತ್ಯೇಕ ಬಯಕೆಗಳುಂಟೇ?’ ಎಂಬುದಾಗಿ ದೇವನಾರಾಯಣನನ್ನು ಕೊಚ್ಚಿ ರಾಜ ಪ್ರಶ್ನಿಸಿದನು. ‘ಮರಣ ಹೊಂದುವಲ್ಲಿಯವರೆಗೆ ಉಡುವುದಕ್ಕೆ ಒಂದು ಬೈರಾಸು ಕೊಟ್ಟುಬಿಡು’ ಎಂದನು. ಅದರಂತೆ ಚೆಂಬಕಕ್ಕೇರಿ ಅರಸನು ಸಾಯುವವರೆಗೆ ಜೈಲಿನಲ್ಲಿ ಬೈರಾಸು ಮಾತ್ರ ಉಟ್ಟಿದ್ದ. ಇವನ ಶಾಪದ ಪರಿಣಾಮದಿಂದ ಮಾರ್ತಾಂಡವರ್ಮನು ‘ತೃಪ್ಪಡಿದಾನ’ ಮಾಡಬೇಕಾಗಿ ಬಂತು. ಹಲವು ವರ್ಷಗಳ ಅನಂತರ ಇಂಡಿಯನ್ ಯೂನಿಯನ್‌ನಲ್ಲಿ ಕೊಚ್ಚಿ ರಾಜ್ಯವನ್ನು ವಿಲೀನಗೊಳಿಸುವ ಒಪ್ಪಂದಕ್ಕೆ ಸರ್‌ದಾರ್‌ ವಲ್ಲಭಬಾಯಿ ಪಾಟೇಲ್ ಮತ್ತು ವಿ.ಪಿ.ಮೆನೊನ್‌ರವರು ಕೊಚ್ಚಿಯ ಪರೀಕ್ಷಿತ ರಾಜನ ಸಹಿ ಹಾಕಿಸಿದರು. ಆಗ ‘ರಾಜ್ಯವನ್ನು ಬಿಟ್ಟುದಕ್ಕೆ ಪ್ರತಿಫಲವಾಗಿ ಏನಾದರೂ ಪ್ರತ್ಯೇಕ ಬೇಡಿಕೆಯುಂಟೇ?’ ಎಂದು ಕೇಳಿದರು. ಕಾಲಕಾಲಕ್ಕೆ ಹೊಂದುವ ಕ್ಯಾಲೆಂಡರ್‌ಗಳನ್ನು ಸರಕಾರ ಹೊರತರಬೇಕೆಂದು ಪರೀಕ್ಷಿತರಾಜ ಕೇಳಿಕೊಂಡನು. (ರಾಜ್ಯವು ಹಲವು ರೀತಿಯಲ್ಲಿ ಕೈತಪ್ಪುವ ಘಟನೆಗಳು ಎಂಬ ಆಶಯ) ಚರತ್ರೆಯ ಒಂದು ಘಟನೆಯನ್ನು ಸತ್ಯವಾಗಿಯೇ ಪರಿಗಣಿಸಿದ್ದಲ್ಲದೆ ಅದಕ್ಕೆ ಹೊಂದಿದ ಕಥೆಯನ್ನೂ ಇಲ್ಲಿ ವಿವರಿಸಲಾಗಿದೆ. ಈ ಐತಿಹ್ಯದಲ್ಲಿ ಬರುವ ಕಥಾಪಾತ್ರಗಳು, ಸ್ಥಳೀಯ, ಅರಮನೆ ಮತ್ತು ಘಟನೆಗಳು ಜೀವಂತವಾಗಿದೆ. ಎಲ್ಲಾ ಅರ್ಥದಲ್ಲಿ ಒಂದೊಂದು ಚಾರಿತ್ರಿಕ ಐತಿಹ್ಯವಾಗಿದೆ. ಕೇರಳದಲ್ಲಿ ರಾಜನ ಮತ್ತು ಐತಿಹಾಸಿಕ ವ್ಯಕ್ತಿಗಳ ಕುರಿತು ಇಂತಹ ಅನೇಕ ಐತಿಹ್ಯಗಳಿವೆ.

ಪ್ರಧಾನ ಐತಿಹ್ಯಗಳಲ್ಲಿ ಉತ್ಪತ್ತಿ ಐತಿಹ್ಯವು ಒಂದು. ಇಂದಿಗೂ ಇರುವ ‘ಪಳೂರ್ ಪೆರುಂಕೋವಿಲ್’ ದೇವಾಲಯದ ಕುರಿತು ಒಂದು ಐತಿಹ್ಯವಿದೆ. ಮಲಬಾರಿನ ಒಬ್ಬ ನಂಬೂದಿರಿಗೆ ಜ್ಯೋತಿಷಿ ಬರೆದುಕೊಟ್ಟ ಜಾತಕದ ಪ್ರಕಾರ ಅವನು ೩೨ನೇ ವರ್ಷದಲ್ಲಿ ಮರಣ ಹೊಂದಬೇಕಿತ್ತು. ಆದರೆ ಕಣಿಯಾರ್‌ರ ಬಳಿಗೆ ಬಂದನು. ಸಾಯಂಕಾಲ ಹೊತ್ತಿನಲ್ಲಿ ಬಂದ ಬ್ರಾಹ್ಮಣನ ಮುಖದಲ್ಲಿ ಮರಣ ಲಕ್ಷಣವನ್ನು ಕಂಡ ಕಣಿಯಾರ್‌ರು ಇವನು ತನ್ನ ಮುಂದೆ ಸತ್ತು ಬೀಳುವುದು ಬೇಡ ಎಂದು ಯೋಚಿಸಿ ‘ಇಂದು ಹೊತ್ತಾಯಿತು ನಾಳೆ ಬನ್ನಿ’ ಎಂದು ಹೇಳಿ ಕಳುಹಿಸಿದನು. ಆ ನಂಬೂದಿರಿ ಪೆರುಂತೃಕ್ಕೋವಿಲ್ ಕ್ಷೇತ್ರಕ್ಕೆ ಹೋಗಿ ಸ್ನಾನ ಮಾಡಿದನು. ಜೀರ್ಣಾವಸ್ಥೆಯಲ್ಲಿರುವ ದೇವಾಲಯವನ್ನು ನೋಡಿ ಸಂಕಟಪಟ್ಟನು. ರಾತ್ರಿ ವೇಳೆ ಸುರಿದು ದೇವಾಲಯದ ಒಳಗೆ ನೀರು ಸೋರುವುದರಿಂದ ಅಲ್ಲಿ ನಿಲ್ಲಲಾಗದೆ ಹತ್ತಿರದ ಬ್ರಾಹ್ಮಣನ ಮನೆಗೆಹೋದನು. ಆದರೂ ದೇವಾಲಯದ ಅವಸ್ಥೆಯನ್ನು ನೆನೆದು ದುಃಖಿಸಿ ಅಲ್ಲಿಯೂ ನಿದ್ರಿಸಲಾಗಲಿಲ್ಲ. ಶ್ರೀಮಂತನಾದ ಅವನು ದೇವಾಲಯದ ಜೀರ್ಣೋದ್ಧಾರ ಮಾಡಲು ತೀರ್ಮಾನಿಸಿದನು. ಬೆಳಿಗ್ಗೆ ಬೇಗನೆ ಸ್ನಾನ ಪೂಜೆಗಳನ್ನು ಮುಗಿಸಿ ಪುನಃ ಪಾಳೂರ್ ಮಠಕ್ಕೆ ಬಂದನು. ಅವನನ್ನು ಕಂಡು ಆಶ್ಚರ್ಯಗೊಂಡ ಕಣಿಯಾರ್ ಜಾತಕ ಸರಿಯಾಗಿದೆ, ಪುಣ್ಯ ಕಾರ್ಯದ ಸಂಕಲ್ಪ ನಿನ್ನ ಜೀವವನ್ನು ರಕ್ಷಿಸಿದೆ ಎಂದನು. ಈ ನಂಬೂದಿರಿ ‘ವೈಕ್ಕಂ ಪೆರುಂತೃಕ್ಕೋವಿಲ್’ ಕ್ಷೇತ್ರದ ಮಾದರಿಯಲ್ಲಿ ಪಾಳೂರ್‌ನಲ್ಲಿ ಪೆರುಂತೃಕ್ಕೋವಿಲ್ ದೇವಾಲಯವನ್ನು ನಿರ್ಮಿಸಿದನು. ಇದೇ ರೀತಿ ದೇವಾಲಗಯಳಿ, ಅರಮನೆಗಳು, ಸಾರ್ವಜನಿಕ ಸಂಸ್ಥೆಗಳು, ಕಲಾರೂಪಗಳು, ರಾಜವಂಶಗಳು ಹುಟ್ಟಿಕೊಂಡ ಬಗೆಗೆ ಇನ್ನೂ ಹಲವು ಐತಿಹ್ಯಗಳಿವೆ.

‘ಮಿಳಾವ್’ (‘ಕೊತ್ತ್’ ಎಂಬ ಕಲಾರೂಪಕ್ಕೆ ಬಳಸುವ ಒಂದು ಚರ್ಮವಾದ್ಯ)ನ್ನು ಹೊಡೆದುಕೊಂಡಿರು ವಾಗ ನಿದ್ದೆ ಹೋದ ಕುಂಜನ್‌ನಂಬಿಯಾರನನನ್ನು ‘ಚಾಕ್ಕಿಯಾರ’ (‘ಕೂತ್ತ್‌’ ಕಲಾರೂಪವನ್ನು ನೆಡಸಿಕೊಡವ ಒಂದು ಜಾತಿ)ನು ಹಾಸ್ಯಮಾಡಿ ಅವಮಾನ ಮಾಡಿದ್ದರಿಂದ ‘ತುಳ್ಳಲ್’ ಎಂಬ ಕಲಾರೂಪ ಹುಟ್ಟಿಕೊಂಡಿತು ಎಂಬುದು ಇಂಥ ಐತಿಹ್ಯ. ಕಥಕ್ಕಳಿಯ ಉತ್ಪತ್ತಿಯ ಬಗೆಗೂ ಈ ರೀತಿಯ ಕೆಲವು ಐತಿಹ್ಯಗಳಿವೆ. ‘ಅರಕ್ಕಲ್ ರಾಜವಂಶ’ದ ಉತ್ಪತ್ತಿಯ ಬಗ್ಗೆ ಉಳ್ಳ ಐತಿಹ್ಯ ಇಂತಿದೆ. ‘ಕೋಲುತ್ತಿರಿ’ ರಾಜನಿಗೆ ಐದು ಜನ ಪ್ರಮುಖ ಮಂತ್ರಿಗಳಿದ್ದರು. ಅವರಲ್ಲಿ ತರವಾಡಿನವನು. ಒಬ್ಬ’ರಾಮಂತ್ತಳಿ ಅರಯನ್ ಕುಳಂಙರ’ ಎಂಬ ನಾಯರ ತರವಾಡಿನವನು. ಒಮ್ಮೆ ಈ ತರವಾಡಿನ ಒಬ್ಬ ಪ್ರಮುಖ ವ್ಯಕ್ತಿ ಇಸ್ಲಾಂ ಮತಕ್ಕೆ ಮತಾಂತರಗೊಂಡು ಮುಹಮ್ಮದಾಲಿ (ಮಮ್ಮಾಲಿ) ಎಂಬ ಹೆಸರನ್ನು ಸ್ವೀಕರಿಸಿದನು. ಈತ ಹಡಗು ಪಡೆಯ ನಾಕನಲ್ಲದೆ, ಕೋಲತ್ತಿರಿಯ ಮಂತ್ರಿಯೂ ಆಗಿದ್ದನು. ಅವನು ಒಂದು ದಿನ ಹೊಳೆಯಲ್ಲಿ ಸ್ನಾನ ಮಾಡುತ್ತಿರುವಾಗ ಅದೇ ಹೊಳೆಯಲ್ಲಿ ಕೋಲತ್ತಿರಿ ರಾಜವಂಶದ ಒಬ್ಬಳು ರಾಣಿ ಮುಳುಗಿ ಸಾಯುವ ಸ್ಥಿತಿಯಲ್ಲಿದ್ದವಳನ್ನು ರಕ್ಷಿಸಿದನು. ಆ ರಾಣಿ ಮುಸಲ್ಮಾನನ ಸ್ಪರ್ಶದಿಂದ ಜಾತಿಭ್ರಷ್ಠಳಾದಳು. ಕೊನೆಗೆ ಅವಳನ್ನು ಮಮ್ಮಾಲಿ ಮದುವೆಯಾದನು. ಅದರಿಂದ ಕೋಲತ್ತಿರಿವಂಶದ ರಾಜನ ಸಹಾಯವೂ ದೊರಕಿತು. ಅವಳಿಗೆ ಕೊಡಬೇಕಾದ ವರದಕ್ಷಿಣೆಯಾಗಿ ಕೋಲತ್ತಿರಿಯ ಬತ್ತದ ಗದ್ದೆಗಳು, ಕಣ್ಣೂರಿನ ಕೆಲವು ಪ್ರದೇಶಗಳು, ಒಂದು ಅರಮನೆ ಇವೆಲ್ಲವನ್ನೂ ಕೊಡಲಾಯಿತು. ಇದುವೇ ಕೊನೆಗೆ ‘ಅರಕ್ಕಲ್ ಕೇಟ್’ ಎಂಬ ರಾಜವಂಶವಾಯಿತು. ಅಲ್ಲಿಯ ರಾಣಿ ‘ಅರಕ್ಕಲ್ ಬೀವಿ’ ಎಂದೂ ಅವಳ ಗಂಡ ‘ಅರಕಲ್ ಸುಲ್ತಾನ್’ ಎಂದು ಪ್ರಸಿದ್ಧರಾದರು.

ಅಲೌಕಿಕ ಸಿದ್ಧಿಗಳನ್ನು ಹೊಂದಿದ್ದಾರೆಂಬ ನಂಬಿಕೆಗೆ ಕಾರಣರಾದ ಪುರೋಹಿತರು, ಮಂತ್ರವಾದಿಗಳು, ಜ್ಯೋತಿಷಿಗಳು, ವೈದ್ಯರು, ಯೋಧರ ಕುರಿತು ಅನೇಕ ಐತಿಹ್ಯಗಳಿವೆ. ಅವುಗಳಲ್ಲಿ ‘ಕಡಮಟ್ಟತ್ತ್ ಕತ್ತವಾರ್’, ಕಾಯಂ ಕುಳಂ ಕೊಚ್ಚುಣ್ಣಿ, ವಯಸ್‌ಕರ ಮುಸ್ಸ, ಪೆರುದಚ್ಚನ್, ಪಾಕ್ಕನಾರ್ ಮೊದಲಾದವರ ಐತಿಹ್ಯಗಳು ಪ್ರಧಾನವಾದವು. ಒಮ್ಮೆ ‘ಮಾವೇಲಿಕ್ಕರ’ ಅರಮನೆಯ ಒಬ್ಬಳು ರಾಣಿ ಅನಾರೋಗ್ಯದಿಂದ ಹಾಸಿಗೆ ಹಿಡಿದಳು. ಅಲ್ಲಿಗೆ ಬಂದ ‘ಅನಂತಪುರ’ ಅರಮನೆಯ ಕೇರಳವರ್ಮ ವಲಿಯ ಕ್ಕೋಯಿತ್ತಂಬುರಾನ್ ಎಂಬ ರಾಜನು ವೈದ್ಯನೂ ಆಗಿದ್ದನು. ಅವನು ತಕ್ಷಣವೇ ಪ್ರಸಿದ್ಧ ವೈದ್ಯ ವಯಸ್ಕರ ಮುಸ್‌ನಿಗೂ ಪತ್ರ ಬರೆದು ಕಳುಹಿಸಿದನು. ಆ ಪತ್ರದಲ್ಲಿ ವೈದ್ಯನನ್ನು ಅರಮನೆಗೆ ಬರಲು ವಿನಂತಿಸಲಾಗಿತ್ತು. ಕೇರಳವರ್ಮದಲ್ಲಿ ಹತ್ತಿರದ ಸ್ನೇಹ ಸಂಬಂಧಿವಿದ್ದರೂ ಅರಮನೆಯ ರಾಣಿ ಅಸೌಖ್ಯದಿಂದಿದ್ದರೂ ‘ಮುಸ್’ ಬರಲಿಲ್ಲ. ಅವನ ಬದಲು ತನ್ನ ಶಿಷ್ಯ ರಾಮವಾರ್ಯರ್ ಎಂಬ ವೈದ್ಯನನ್ನು ಕಳುಹಿಸಿದನು. ರಾಮವಾರ್ಯರ್ ಅವರ ಜೊತೆಗೆ ದೋಣಿಯಲ್ಲಿ ಹೋಗಿ ಹಿಂತಿರುಗಿ ಬಂದ ತಕ್ಷಣವೇ ‘ನೀವು ತಲುಪಿದ ನಂತರವೊ?ಅಲ್ಲಿ ತಲುಪುವುದಕ್ಕಿಂತ ಮೊದಲೇ ಸತ್ತಳೊ?’ ಎಂದು ಮುಸ್ಸನು ಮೊದಲು ಪ್ರಶ್ನೆ ಕೇಳಿದ. ರೋಗ ಲಕ್ಷಣಗಳನ್ನು ಕೇಳಿ ತಿಳಿದುಕೊಂಡು, ನಿಮಿತ್ತವನ್ನು ನೋಡಿಕೊಂಡು, ರೋಗದ ಸ್ಥಿತಿಯನ್ನು ನಿರ್ಣಯಿಸುವುದು ಅವನ ಸಾಮರ್ಥ್ಯವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕ ಐತಿಹ್ಯಗಳು ಪ್ರಚಾರದಲ್ಲಿವೆ. ಒಮ್ಮೆ ಜೆಜ್ಞನ್ನೂರ್‌ನ ಒಬ್ಬ ಮಾಪ್ಪಿಳೆ ಆರ್ಯ ನಾರಾಯಣ ಮುಸ್ಸಿನ ಮನೆಯ ಒಳಗೆ ಬಂದು ನಿಲ್ಲುವುದಕ್ಕಾಗಿದೆ ಕುಳಿತುಕೊಂಡನು. ತಾನು ಒಂದು ಕುಟುಂಬವನ್ನು ನಡೆಸುವವನು. ಆದರೆ ಈಗ ತನಗೆ ಅಸೌಖ್ಯವಾದುದರಿಂದ ತನ್ನ ಕುಟುಂಬ ಬೀದಿ ಪಾಲಾಗಿದೆ. ತನಗೆ ಒಳ್ಳೆ ಔಷಧಿ ವೈದ್ಯ ತನ್ನ ಸೇವಕರಲ್ಲಿ ಕೊಂದೆ ಎಂಬ ಮರದ ಚಿಗುರನ್ನು ಕೊಯ್ಯಿಸಿ ಮಾಪ್ಪಿಳ್ಳೆ ಬಂದ ದೋಣಿಯಲ್ಲಿ ಇಡಲು ಹೇಳಿದನು. ಅದನ್ನು ಚೆನ್ನಾಗಿ ಒಣಗಿಸಿ ಹುಡಿಮಾಡಿ ಬೆಳಗ್ಗೆ ಪ್ರತಿನಿತ್ಯ ಬಿಸಿನೀರಿನಲ್ಲಿ ಹಾಕಿ ಒಂದುವರೆ ಕಳಂಜ್ (ಮ.)ನಂತೆ ಕುಡಿಯಲು ಹೇಳಿದನು. ಇದಾಗಿ ಒಂದೂವರೆ ತಿಂಗಳು ಕಳೆದಾಗ ಒಬ್ಬ ದಷ್ಟಪುಷಷ್ಟನಾದ ಮಾಪ್ಪಿಳೆ ಹೊಗೆಸೊಪ್ಪು, ವೀಳ್ಯದೆಲೆ, ಅಡಕೆಗಳನ್ನು ತೆಗೆದುಕೊಂಡು ವಯಸ್ಕರ ಮುಸ್ಸನ ಮನೆಗೆ ಬಂದು ನಿಮ್ಮ ಪಾದಗಳಿಗೆ ನಮಸ್ಕರಿಸಲು ಬಂದುದಾಗಿ ಹೇಳಿದನು. ಯಾವುದಾದರೂ ರೋಗದ ವಿಚಾರವನ್ನೇನಾದರೂ ಹೇಳುವುದಕ್ಕಿದೆಯೇ ಎಂದು ಮುಸ್ಸನು ಕೇಳಿದಾಗ, ಈ ಮೊದಲು ನಾನು ಔಷಧಿಗೆ ಬಂದಿದ್ದೆ. ಈಗ ರೋಗವಾಸಿಯಾಗಿ ಉದ್ಯೋಗಕ್ಕೆ ಹೋಗುವುದನ್ನು ಹೇಳಲು ಬಂದೆ. ಹೇಳದಿದ್ದರೆ ನಿಮ್ಮ ನಂಬಿಕೆಗೆ ದ್ರೋಹ ಬಗೆದಂತಾಗುವುದೆಂದು ಯೋಚಿಸಿ ಇಲ್ಲಿಯವರೆಗೆ ಬಂದೆ ಎಂದನು. ತುಂಬ ಒತ್ತಾಯ ಮಾಡಿದಾಗ ಮುಸ್ಸನು ಒಂದು ನಾಣ್ಯವನ್ನು ಸ್ವೀಕರಿಸಿ ಮಾಪ್ಪಿಳೆಯನ್ನು ಕಳುಹಿಸಿದನು. ಇಂಥ ಐತಿಹ್ಯಗಳು ಜಾತಿ ಮತಗಳ ಆವರಣವನ್ನು ಮೀರಿ ವೈದ್ಯನೊಬ್ಬನಿಗೆ ಸಮಾಜವು ತೋರುವ ಗೌರವಾದರಗಳನ್ನೂ ಅಂಥ ವೈದ್ಯರ ಅನಿವಾರ್ಯತೆಯನ್ನೂ ತಿಳಿಸಿ ಕೊಡತಕ್ಕವಾಗಿವೆ.

ಸಂಘರ್ಷಗಳಿಗಿಂತ ಹೆಚ್ಚು ಸಹಕಾರದ ಸಾಂಘಿಕ ಶಕ್ತಿಯನ್ನು, ಸಂಸ್ಕೃತಿಗಳನ್ನು ಐತಿಹ್ಯಗಳು ಬೆಳೆಸುತ್ತವೆ ಎಂಬುದಕ್ಕೆ ಪ್ರಾದೇಶಿಕ ಐತಿಹ್ಯಗಳೇ ಸಾಕ್ಷಿ. ಸಾಂಘಿಕ ಶಕ್ತಿಯನ್ನು ಹೆಚ್ಚಿಸುವ ಕಾರಣ ಇದಕ್ಕೆ ಚಾರಿತ್ರಿಕ ಬಲವಿದೆ. ತಳಿಪ್ಪರಂಬ ತಾಲೂಕಿನ ತಿರುವಟ್ಟೂರಿನ ಮಸೀದಿ ಮತ್ತು ದೇವಾಲಯಗಳಿಗೆ ಸಂಬಂಧಿಸಿದ ಒಂದು ಐತಿಹ್ಯ ಈ ದೃಷ್ಟಿಯಿಂದ ಮುಖ್ಯವಾದದ್ದು. ತಿರುವಟ್ಟೂರು ಶಿವ ದೇವಾಲಯದ ಹತ್ತಿರ ಮುಸ್ಲಿಂ ಮಸೀದಿಯೊಂದಿದೆ. ಹಿಂದಿನ ಕಾಲದಲ್ಲಿ ತಿರುವಟ್ಟೂರಿನಲ್ಲಿ ‘ಪೊರುದಿಯೋಡನ್’ ‘ಕೈಪವನ್’ ‘ಏಳಿಲ್’ ಮತ್ತು ‘ಕೊಯಾಡನ್’ ಎಂಬ ನಾಲ್ಕು ಪ್ರಬಲ ನಾಯರ್ ಕುಟುಂಬಗಳಿದ್ದವು. ಆ ಕುಟುಂಬದ ಪ್ರಮುಖರು ಶಿವ ದೇವಾಲಯದ ಆಡಳಿತ ನಡೆಸುತ್ತಿದ್ದರು. ‘ಪೊರುದಿಯೋಡನ್’ ಎಂಬ ಕುಟುಂಬದವರಿಗೆ ತುಂಬಾ ಹಸುಗಳಿದ್ದವು. ಅವುಗಳಲ್ಲಿ ಒಂದು ಹಸು ವಿಶೇಷಗುಣವನ್ನು ಹೊಂದಿತ್ತು. ಧಾರಾಳ ಹಾಲು ಕೊಡುತ್ತಿದ್ದ ಈ ಹಸು ಕುಟುಂಬದ ಶ್ರೇಯಸ್ಸಿಗೆ ಕಾರಣವಾದುದು ಎಂದು ನಂಬಿದ್ದರು. ಆದುದರಿಂದ ಅದಕ್ಕೆ ಎಲ್ಲರೂ ವಿಶೇಷ ಗೌರವ ಕೊಡುತ್ತಿದ್ದರು. ಕೆಲವು ದಿನಗಳು ಕಳೆದಾಗ ಹಸುವಿಗೆ ಹಾಲು ಕಡಿಮೆಯಾಯಿತು. ಇದಕ್ಕೆ ಕಾರಣವೇನೆಂದು ಸಂಶಯಗೊಂಡು ಒಂದು ದಿನ ಮಧ್ಯಾಹ್ನ ಹಸುಮೇಯಿಸುವವನು ಒಂದು ಕಡೆ ಅಡಗಿ ನಿಂತು ಹಸುಗಳನ್ನು ಗಮನಿಸತೊಡಗಿದ. ಮಸೀದಿ ಇರುವ ಸ್ಥಳಕ್ಕೆ ಆ ಹಸು ತಲುಪಿದಾಗ ಅಸಾಧಾರಣವಾದ ಒಬ್ಬ ವ್ಯಕ್ತಿಯು ಒಂದು ಹಸುವಿನ ಮೊಲೆ ಹಿಂಡುವುದನ್ನು ಹಸು ಬಹಳ ಸಂತೋಷದಿಂದ ಹಾಲು ಉಣ್ಣಿಸಿದ್ದನ್ನೂ ಕಂಡ. ಆ ಅಪರಿಚಿತ ವ್ಯಕ್ತಿ ಹಸು ಕಾಯುವವನನ್ನು ಕಂಡ ಕಾರಣ ‘ನನ್ನನ್ನು ಕಂಡ ವಿಚಾರ ಯಾರಲ್ಲೂ ಹೇಳಬಾರದೆಂದು’ ಹೇಳಿದನು. ಆದರೆ ಹಸು ಕಾಯುವವ ಸಾಯಂಕಾಲ ಪೊರುದಿಯೋಡನ್ ಮನೆಯ ಹಿರಿಯನನ್ನು ಕಂಡು ನಡೆದುದನ್ನು ಹೇಳಿಕೊಂಡಾಗ ಹಿರಯನು, ಜ್ಯೋತಿಷಿಯನ್ನು ಕರೆಸಿ ಪ್ರಶ್ನೆಯ ಮೂಲಕ ಕೇಳಿದಾಗ, ಹಾಲು ಕುಡಿದ ವ್ಯಕ್ತಿ ಪುಣ್ಯಾತ್ಮನಾದ ಮುಸಲ್ಮಾನ ಎಂದೂ ಅವನ ಸಾನ್ನಿಧ್ಯ ಪವಿತ್ರವೆಂದೂ ಪ್ರಶ್ನೆಯಲ್ಲಿ ಕಂಡಿತು. ಅದರಂತೆ ಶಿವ ದೇವಾಲಯದ ಪ್ರಧಾನರನ್ನೆಲ್ಲ (ಊರಾಳ್‌ನ್ಮಾರ್) ಒಟ್ಟು ಸೇರಿಸಿ ಆಲೋಚಿಸಿ ಅಲ್ಲಿ ಮಸೀದಿ ನಿರ್ಮಾಣ ಮಾಡಿ ಅದಕ್ಕೆ ಬೇಕಾದ ಭೂಮಿಯನ್ನು ದೇವಾಲಯದ ಖರ್ಚಿನಲ್ಲಿ ಮಸೀದಿ ನಿರ್ಮಿಸಿದರು. ಅದರ ಉಸ್ತುವಾರಿಯನ್ನು ನೋಡಿಕೊಂಡು ಬರಲು ಪಾಂಬುರುತ್ತಿ ಪ್ರದೇಶದ ಕಟ್ಟಿಟ್ಟ, ಕರೆಯಿಟ್ಟ, ತಾನ್ನಿಕಲ್, ಕೋಲಾರಟ್ ಎಂಬ ನಾಲ್ಕು ಮುಸ್ಲಿಂ ಕುಟುಂಬಗಳನ್ನು ಕರೆಸಿದರು. ಅವರಿಗೂ ಭೂಮಿ ಕೊಟ್ಟು ತಿರುವಟ್ಟೂರಿನಲ್ಲಿ ವಾಸಿಸುವಂತೆ ಮಾಡಿದರು. ದೇವಾಲಯ ಮತ್ತು ಮಸೀದಿಗಳ ಸಂಬಂಧವು ವೃದ್ಧಿಸುವಂತೆ ಕೆಲವು ಆಚರಣೆಗಳ ವ್ಯವಸ್ಥೆ ಮಾಡಿದರು. ಪೂರಂ ಉತ್ಸವದ ದಿನದಂದು ಮಸೀದಿಯಿಂದ ತುರುವ ಭತ್ತ ಮತ್ತು ಸೌದೆಯನ್ನು ಉಪಯೋಗಿಸಿ ನೈವೇದ್ಯವನ್ನು ತಯಾರಿಸುವುದು. ಮಖಾಂ(ಮ)ನಲ್ಲಿ ನೇರ್ಚೆ(ಹರಕೆ ಉತ್ಸವ)ಗಳನ್ನು ಸಲ್ಲಿಸುವಾಗ ದೇವಾಲಯಕ್ಕೆ ತಿಳಿಸುವ ಪದ್ಧತಿ ಇತ್ತು. ಹಿಂದಿನ ಕಾಲದಲ್ಲಿ ಮಸೀದಿಯಲ್ಲಿ ನೇರ್ಚೆಯ ಒಂದು ಪ್ರಧಾನ ಕಾರ್ಯಕ್ರಮವಾಗಿ ಬೇಟೆಯ ಹರಕೆಯನ್ನು ಸಲ್ಲಿಸುತ್ತಿದ್ದರು. ಮಸೀದಿಯಿಂದ ಹಿಂದೂಗಳಿಗೂ ಅಕ್ಕಿ, ಮಾಂಸ ಇತ್ಯಾದಿಗಳನ್ನು ಪುಕ್ಕಟ್ಟೆಯಾಗಿ ಆ ದಿನಗಳಲ್ಲಿ ನೀಡುತ್ತಿದ್ದರು.

ಮೀನ ಮಾಸದ ಹುಣ್ಣಿಮೆಯಂದು ಉತ್ತರ ಕೇರಳದಲ್ಲಿ ಬಾಲೆಯರು ಕಾಮ ದೇವರನ್ನು (ಪೂರಾಘೋಷ, ಪೂವಿಳಿಗಳ ಸಮೇತ) ಪೂಜಿಸುತ್ತಾರೆ. ಅಂಥ ಮೀನ ಮಾಸದಲ್ಲೇ ಮಖಾಂ ಉರೂಸ್ (ಧಾರ್ಮಿಕ ಪ್ರವಚನಗಳ ಕಾರ್ಯಕ್ರಮ) ಪ್ರಾರಂಭ.

ಐತಿಹ್ಯಗಳಲ್ಲಿ ಸ್ಥಳ, ಕಾಲಗಳ ಸೂಚನೆಗಳಿವೆ. ಅದರ ಜೊತೆಗೆ ಬಲವಾಗಿ ಹೆಣೆದು ಕೊಂಡಿರುವ ಸಾಮಾಜಿಕ ಭಾವನೆಗಳಿವೆ. ಜನತೆಯ ಸಂಕಲ್ಪಗಳು, ಸಂಘರ್ಷಗಳು, ನಿರೀಕ್ಷೆಗಳಿವೆ. ಲೋಕ ವೀಕ್ಷಣೆಯ ಜೊತೆಗೆ ಮೌಲ್ಯ ಪ್ರಜ್ಞೆಯೂ ಇದೆ. ಸ್ಥಳ, ಕಾಲಗಳಿಗೆ ಸಂಬಂಧಿಸಿದಂತೆಯೇ, ಇಲ್ಲವೇ ಇತರ ಯಾವುದೇ ರೂಪದ ಭೌತಿಕ ವಿಚಾರದೊಂದಿಗೆ ಅವಕ್ಕೆ ನೇರ ಸಂಬಂಧವಿರುತ್ತದೆ. ಆದುದರಿಂದಲೇ ಒಂದು ಜನ ಕೂಟವು ಸೃಷ್ಟಿಸುವ ಆಶಯಗಳನ್ನೂ ಮೌಲ್ಯ ಪ್ರಜ್ಞೆಯನ್ನೂ ಸಾಮಾಜಿಕ ಸಂಸ್ಕೃತಿಯನ್ನೂ ಇಂದು ನಮಗೆ ಎದುರಾಗಿರುವ ಗಂಡಾಂತರಗಳಿಂದ ಪಾರಾಗಿಸಲು ಐತಿಹ್ಯಗಳಿಗೆ ಸಾಧ್ಯವಿದೆ. ಐತಿಹ್ಯಗಳ ಸಾಮಾಜಿಕ ಪ್ರಯೋಗ ಪಟುತ್ವವು ಅವುಗಳನ್ನು ಹೆಚ್ಚು ಪ್ರಸ್ತುತವಾಗಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಕೊಟ್ಟಾರತ್ತೀಲ್ ಶಂಕುಣ್ಣಿಯರವರ ಐತಿಹ್ಯಗಳ ಸಂಕಲನವಾದ ‘ಐತಿಹ್ಯ ಮಾಲ’, ‘ವಾಣಿದಾಸ್ ಉಳಯಾ ವೂರರ’ ‘ವಡಕ್ಕನ್’ ‘ಐತಿಹ್ಯ ಮೂಲ’, ನಾರಾಯಣನ್ ಚಿಟ್ಟೂರ್ ನಂಬೂದರಿಪ್ಪಾಡಿರ ‘ಐತಿಹ್ಯ ಸಂಪುಟ’, ಚೇಲಂ ಗಾಟ್ಟ್ ಗೋಪಾಲಕೃಷ್ಣರ ‘ಐತಿಹ್ಯ ಮಂಜರಿ’ಗಳು ಬಹು ಮುಖ್ಯವಾಗುತ್ತವೆ.

– ಕೆ.ಎಂ.ಬಿ. ಅನುವಾದ ಕೆ.ಕೆ.ಎಸ್.

ಕೇರಳದ ಕಥಾಗಾನಗಳು ಕೇರಳದುದ್ದಕ್ಕೂ ಪ್ರಚಾರ ದಲ್ಲಿರುವ ಮೌಖಿಕ ಪರಂಪರೆಯ ಹಾಡುಗಳು. ಇವು ಕಥೆಯನ್ನು ಹೇಳುವ ಹಾಡುಗಳು. ಈ ಲಾವಣಿಗಳಿಗೆ ಪ್ರಾದೇಶಿಕ, ಧಾರ್ಮಿಕ ಹಾಗೂ ಸಾಮುದಾಯಿಕವಾದ ವೈದೃಶ್ಯಗಳಿವೆ. ಸಾಮಾನ್ಯವಾಗಿ ಈ ಹಾಡುಗಳನ್ನು ಧಾರ್ಮಿಕ ಮತ್ತು ಇತರ ಎಂದು ವರ್ಗೀಕರಿಸಬಹುದು.

ಯಾವುದಾದರೂ ಧಾರ್ಮಿಕ ಆಚರಣೆಯ ಅಂಗವಾಗಿ ಹೇಳುವ ಹಾಡುಗಳನ್ನು ಧಾರ್ಮಿಕ ವಿಭಾಗದಲ್ಲಿ ಸೇರಿಸಬಹುದು. ಕೇರಳದಲ್ಲಿ ಪ್ರಚಲಿತದಲ್ಲಿರುವ ತೋಟ್ಟಂ ಹಾಡುಗಳು, ಕಳಮೆಳತ್ತುಪಾಟುಗಳು, ಇವೆಲ್ಲ ಆರಾಧನೆಗೊಳ್ಳುವ ದೈವದ ಪುರಾಣವನ್ನು ಹೇಳುತ್ತವೆ. ಧಾರ್ಮಿಕೇತರ ವಿಭಾಗದಲ್ಲಿ ಅನೇಕ ಹಾಡುಗಳಿವೆ. ವಡಕ್ಕನ್ ಪಾಟುಗಳು, ಏಡನಾಡನ್ ಪಾಟುಗಳು ಉದಾಹರಣೆಗಳಾಗಿವೆ. ಕ್ರಿಶ್ಚಿಯನ್ ಸಮುದಾಯದಲ್ಲಿ ಪ್ರಚಲಿತವಾಗಿರುವ ರಬಾನ್‌ಪಾಟು, ಮಾರ್ಗಂಕಳಿ ಪಾಟುಗಳೆಲ್ಲ ಕಥಾಗಾನಗಳಾಗಿವೆ.

ಈ ಕಥಾಗಾನಗಳ ಕಾಲವನ್ನು ವಿಶೇಷವಾಗಿ ನಿರ್ಣಯಿಸುವುದು ಅಸಾಧ್ಯವಾದರೂ, ಕೇರಳದಲ್ಲಿ ಮಧ್ಯಕಾಲೀನ ಯುಗದಲ್ಲಿ ಈ ಹಾಡಿನ ಪ್ರಕಾರ ಬೆಲೆದುಬಂತೆಂದು ಹೇಳಲಾಗುತ್ತದೆ. ಕಾವುಗಳಲ್ಲಿ ಆರಾಧನೆ ಹಾಗೂ ಧಾರ್ಮಿಕ ಅಂಗಗಳ ಅಂಗವಾಗಿ ಬೆಳೆದು ಬಂದ ಈ ಹಾಡುಗಳನ್ನು ಆಚರಣೆಗಳ ಸಂದರ್ಭಗಳಲ್ಲಿ ನಿರ್ದಿಷ್ಟ ಸಮುದಾಯದವರು ಹಾಡುತ್ತಾರೆ. ಕಳಮೆಳತ್ತು ಪಡೇನಿ, ಮುಡಿಯೇಚ್ ಮೊದಲಾದ ತೋಟ್ಟಂಪಾಟುಗಳನ್ನು ಹೇಳುವವರು ಆಯಾ ಕಲೆಯ ಕಲಾವಿದರಾಗಿರುತ್ತಾರೆ.

ಧಾರ್ಮಿಕೇತರ ವಿಭಾಗದಲ್ಲಿ ಸೇರುವ ಕಥಾಗಾನಗಳು ಮುಖ್ಯವಾಗಿ ದುಡಿಮೆಯ ಹಾಡುಗಳಾಗಿವೆ. ದುಡಿಮೆಯ ಶ್ರಮವನ್ನು ನೀಗಿಸಿ, ಸರಿಯಾಗಿ ಕೆಲಸವನ್ನು ನಿರ್ವಹಿಸಲು ಇಂತಹ ಹಾಡುಗಳನ್ನು ಹಾಡುತ್ತಾರೆ. ವಂಚಿಪಾಟು, ನಾಟಿಪಾಟು ಇದಕ್ಕೆ ಉದಾಹರಣೆಗಳಾಗಿವೆ. ಇವುಗಳು ಕಾರ್ಮಿಕ ಸಮಾಜದಲ್ಲಿ ಪ್ರಚಲಿತವಾಗಿವೆ. ವಡಕ್ಕನ್ ಪಾಟುಗಳನ್ನು ಹೊಲದಲ್ಲಿ ದುಡಿಯುವ ಕಾರ್ಮಿಕರು ಹಾಡುತ್ತಾರೆ. ಕಳೆ ಕೀಳುವಾಗ, ನೆಡುವಾಗ ಮಹಿಳೆಯರು ಹಾಡುಗಳನ್ನು ಹಾಡುತ್ತಾರೆ. ಏಡನಾಡನ್ ಪಾಟುಗಳು ಕಾರ್ಮಿಕ ಸಮುದಾಯದಲ್ಲಿ ಪ್ರಚಲಿತವಾಗಿದೆ.

ದಕ್ಷಿಣ ತಿರುವಾಂಕೂರಿನ ಜನಪದ ಕಲೆಯಾದ ಕಣಿಯಾನ್ ಕೂತ್ ಸಂದರ್ಭದಲ್ಲಿ ಮುಖ್ಯವಾದ ತೋಟ್ಟಂಪಾಟುಗಳನ್ನು ಹಾಡಿದ ಅನಂತರ ಕಥಾಗಾನಗಳನ್ನು ಹಾಡುವ ಸಂಪ್ರದಾಯವಿದೆ. ತೆಕ್ಕನ್‌ಪಾಟು ವಿಭಾಗಕ್ಕೆ ಸೇರಿದ ನೀಲಿಕಥೆ, ಪೊನ್ನಿರತ್ತಾಳ್, ಪೊನ್ನುರುವಿ ಕಥೆಯ ಹಾಡುಗಳನ್ನು ಹಾಡುತ್ತಾರೆ. ವಿಲ್ಲಡಿಪಾಟುಗಳ ಆಗಮನದೊಂದಿಗೆ ನಾಟಕೀಯವಾಗಿರುವ ತೆಕ್ಕನ್‌ಪಾಟುಗಳು ವಿಲ್ಲಡಿಪಾಟುಗಳಲ್ಲಿ ಸೇರಿಹೋದುದು. ಈಗ ಇವೆರಡು ಒಂದೇ ಪ್ರಕಾರದ ಹಾಡುಗಳೆಂಬಂತೆ ಪ್ರಚಲಿತವಾಗಿದೆ. ವಿಲ್ಲಡಿಪಾಟುಗಳ ಗದ್ಯಪದ್ಯಮಿಶ್ರಿತವಾಗಿವೆ. ಅವುಗಳು ಮುದ್ರಿತವಾಗತಿಲ್ಲ. ಆದರೆ ತೆಕ್ಕನ್ ಪಾಟುಗಳು ಅಂಗವೆಂಬಂತೆ ಪ್ರಚಾರದಲ್ಲಿದೆ. ನೀಲಿಕಥೆ, ಮುತ್ತಾರಮ್ಮನ ಕಥೆ, ಭೂತತಾನ್ ಪಾಟುಗಳೆಲ್ಲ ವಿಲ್ಲಡಿಪಾಟುಗಳೆಂದೇ ಪ್ರಸಿದ್ಧವಾಗಿದೆ.

ಧಾರ್ಮಿಕೇತರ ವಿಭಾಗಕ್ಕೆ ಸೇರಿದ ಕಥಾಗಾನದಲ್ಲಿ ಹೆಚ್ಚಿನವು ವೀರಗೀತೆಗಳಾಗಿವೆ. ವಡಕ್ಕನ್ ಪಾಟುಗಳು ಎಂದು ಪ್ರಸಿದ್ಧವಾಗಿರುವ ಕಥಾಗಾನಗಳಲ್ಲಿ ವೀರ ನಾಯಕ ಅಥವಾ ನಾಯಕಿ ಅವರ ಸಾಹಸಗಳಿರುತ್ತವೆ. ಹಾಡಿನ ರೂಪದಲ್ಲಿ ಕಥೆಯನ್ನು ಹೇಳುತ್ತಾರೆ. ವಡಕ್ಕನ್ ಪಾಟುಗಳಲ್ಲಿ ಕಥಾಗಾನಚಕ್ರ (ballad cycle)ಗಳಿರುತ್ತವೆ. ತೆಚ್ಚೋಳಿ ಒದೇನನ್, ಆರೋಮ ಉಣ್ಣಿ ಮೊದಲಾದ ವೀರರ ಹಾಡುಗಳು ಪ್ರಸಿದ್ಧವಾಗಿದೆ. ತಚ್ಚೋಳಿಪಾಟುಗಳು ಹಾಗೂ ಪುತ್ತೂರ ಪಾಟುಗಳು ಆಯಾ ಕುಟುಂಬಗಳ ಘಟನಾವಳಿಗಳ ನಿರೂಪಣೆಗಳಾರಿವುದರಿಂದ ಕಥಾಗಾನಚಕ್ರಗಳಾಗಿವೆ.

ತೆಕ್ಕನ್ ಪಾಟುಗಳ ತಿರುಳು ಇತಿಹಾಸ ಘಟನೆಗಳು, ಸಾಮಾಜಿಕ ಸಂಗತಿಗಳು, ಪ್ರಾದೇಶಿಕ ದೈವಗಳು ಹಾಗೂ ಪುರಾಣಗಳಾಗಿವೆ. ಮಾವರತಂಪಾಟು, ಹರಿಶ್ಚಂದ್ರ ಕಥೆ, ಕುಂಜುವೀಮನ್ ಕಥೆ, ತಕ್ಕರಾಜನ್ ಕಥೆಗಳೆಲ್ಲ ಇದಕ್ಕೆ ಉದಾಹರಣೆಗಳಾಗಿವೆ. ಇವುಗಳಲ್ಲಿ ಹೆಚ್ಚಿನವುಗಳಲ್ಲಿ ಪುರಾಣಗಳ ಪ್ರಾದೇಶಿಕ ಪಾಠಭೇದಗಳಿವೆ. ಚಾರಿತ್ರಿಕ ಕಥೆ ಹೇಳುವ ಪಾಟುಗಳಿಗೆ ಅನಂತ ಪದ್ಮನಾಭ ಪಾಟು, ಕನ್ನಡಿಯೋನ್ ಪೋರ್, ಕೇರಳವರ್ಮ ಕಥೆಗಳು ಉದಾಹರಣೆಗಳಾಗಿವೆ. ನಲ್ಲತಂಗಳ್‌ಕಥೆ, ಮೂವೋಟುಮಲ್ಲನ್ ಮೊದಲಾದವು ಸಾಮಾಜಿಕ ವಸ್ತುಗಳಿರುವ ಕಥಾಗಾನಗಳು.

ತೆಕ್ಕನ್ ಪಾಟುಗಳಲ್ಲಿ ವೀರಾರಾಧನೆ ಸಾಮಾನ್ಯವಾಗಿದೆ. ಆದರೆ ದೈವಪ್ರೀತಿ ಉದ್ದೇಶವಾಗಿರುವ ಅನೇಕ ಹಾಡುಗಳಿವೆ. ಅವುಗಳು ಮೌಖಿಕ ಪರಂಪರೆಯಾಗಿ ಮುಂದುವರಿದಿದೆ. ಕಥಾಗಾನಗಳ ವಸ್ತು, ವಿಷಯ, ಶೈಲಿಗಳೆಲ್ಲ ವೈವಿಧ್ಯಗಳಿಂದ ಕೂಡಿದ್ದರೂ, ಅವುಗಳಿಗೆ ಕೆಲವು ಸಮಾನತೆಗಳಿವೆ. ಕಥೆ ಹೇಳುವ ಮತ್ತು ಕೇಳುವ ಮನುಷ್ಯನ ನೈಜ ಆಸಕ್ತಿಯನ್ನು ತೃಪ್ತಿಪಡಿಸಲು ಕಥಾಗಾನಗಳು ಹುಟ್ಟಿಕೊಂಡಿವೆ. ಅನಕ್ಷರಸ್ಥ ಗ್ರಾಮೀಣ ರೈತರ ಸಾಮೂಹಿಕ ಸೃಷ್ಟಿಯಾದ ವಡಕ್ಕನ್ ಪಾಟುಗಳೂ, ಓಲೆಗರಿಗಳಲ್ಲಿ ಬರೆದಿರಿಸಿದ ತೆಕ್ಕನ್ ಪಾಟುಗಳೂ ವಾಚನದ ಮೂಲಕ ಜನರಿಗೆ ತಲುಪುತ್ತದೆ. ಹಾಡುವ, ಕೇಳುವ, ಕಲಿಯುವ ಸಂಪ್ರದಾಯ ಈ ಹಾಡುಗಳದ್ದು.

ಹಾಡಿನ ಮೂಲಕ ಹೇಳುವ ಕಥೆ ಕೇಳುವುದಕ್ಕೂ, ನೆನಪಿನಲ್ಲಿಡುವುದಕ್ಕೂ ಸುಲಭ. ನಿರ್ದಿಷ್ಟ ರಾಗ ಹಾಗೂ ತಾಳಗಳಿಂದ ಕೂಡಿದ ಇಂತಹ ಹಾಡುಗಳು ನೈಜವಾಗಿರುತ್ತವೆ. ಕಾವ್ಯ ರಚನಾತಂತ್ರಗಳೂ, ಭಾಷೆಯೂ ಸರಳವಾಗಿದ್ದು, ಕಥೆಗೆ ಅನುಗುಣವಾಗಿ ಛಂದಸ್ಸಿನ ಬಳಕೆಯಿದೆ. ಕಥಾಗಾನಗಳ ಭಾಷೆ ಸರಳವಾಗಿದ್ದು, ಪ್ರಾದೇಶಿಕ ಅಥವಾ ಸಾಮುದಾಯಿಕ ಶೈಲಿ ಪ್ರಕಟವಾಗುತ್ತದೆ. ಒಂದು ಜನಪದ ಸಮಾಜದ ನೈಜ ಭಾಷೆಯು ಕಥಾಗಾನಗಳಲ್ಲಿ ಪ್ರಕಟವಾಗುವ ರೀತಿ ಅನನ್ಯ. ತೆಕ್ಕನ್ ಪಾಟುಗಳಲ್ಲಿ ತಮಿಳಿನ ಪ್ರಭಾವ, ವಡಕ್ಕನ್ ಪಾಟುಗಳಲ್ಲಿ ಪ್ರಾದೇಶಿಕ ಭಾಷೆಯ ಪ್ರಭಾವ, ಕ್ರಿಶ್ಚಿಯನ್ ಕಥಾಗಾನಗಳಲ್ಲಿ ಕ್ರಿಶ್ಚಿಯನ್ ಭಾಷೆಯ ಪ್ರಭಾವಗಳನ್ನು ಗುರುತಿಸಬಹುದು.

ತೆಯ್ಯ ತೊಟ್ಟಂಪಾಟುಗಳಿಗೂ ವಡಕ್ಕನ್ ಪಾಟುಗಳಿಗೂ ಅನೇಕ ಸಾಮ್ಯಗಳಿವೆ. ಕಥೆಯ ನಿರೂಪಣೆ, ಕಥಾವಸ್ತು, ರಚನೆ, ಭಾಷೆ, ರಾಗ ತಾಳಗಳಲ್ಲಿ ಈ ಸಾಮ್ಯಗಳನ್ನು ಗುರುತಿಸಬಹುದು. ಕಥಾಗಾನಗಳಲ್ಲಿ ವೀರಗೀತೆಗಳಿಗೂ ಸಾಧ್ಯವಿದೆ. ವೀರನ ಗುಣಗಳ ಉದಾತ್ತೀಕರಣವನ್ನು ಹಾಡುಗಳಲ್ಲಿ ಕಾಣಬಹುದು. ಅಸಾಮಾನ್ಯ ಗುಣಸ್ವಭಾವ ಉಳ್ಳವರೂ, ಅತಿಮಾನುಷ ಶಕ್ತಿಯುಳ್ಳವರೂ ವೀರರಾಗಿ ಕಾಣಿಸುತ್ತಾರೆ. ಅವರ ಸಾಹಸಗಳ ಯಾವುದೇ ಪರಿಸ್ಥಿತಿಯನ್ನು ಮೀರಿ ಗೆಲುವು ಸಾಧಿಸುವ ಕಥೆಗಳಾಗಿವೆ. ವೀರಗೀತೆಗಳು. ಧಾರ್ಮಿಕ ಆಚರಣೆಯ ಅನೇಕ ಹಾಡುಗಳು ಇಂತಹ ವೀರರು ದೈವಗಳಾಗಿ ಪರಿವರ್ತಿತರಾದ ಕಥೆಯನ್ನು ಹೇಳುತ್ತದೆ. ಧಾರ್ಮಿಕ ಆಚರಣೆ ಹಾಡುಗಳಲ್ಲಿ ಇಂತಹ ವೀರನಾಯಕರೂ ವೀರಮೃತ್ಯು ಪಡೆದವರೂ ಸಾಕಷ್ಟಿದ್ದಾರೆ. ಏಡನಾಡನ್‌ಪಾಟು, ಪೂಮಾತೆಪೊನ್ನಮ್ಮಪಾಟು ಮೊದಲಾದ ಹಾಡುಗಳು ದೈವಿಕವಾಗಿ ಆರಾಧನೆಗೊಳ್ಳುವ ವೀರನಾಯಕ, ನಾಯಿಕೆಯರ ವಸ್ತುವುಳ್ಳವಂಥವು. ಸಾಮಾಜಿಕ ಅನ್ಯಾಯವನ್ನು ಎದುರಿಸುವ ಹಾಗೂ ಪರಾಕ್ರಮವುಳ್ಳ ವೀರರು ಆರಾಧನೆಗೊಳ್ಳುವ ಸ್ಥಿತಿಯನ್ನು ಇಂತಹ ಕಥಾಗಾನಗಳು ಹೇಳುತ್ತವೆ. ಇದು ಕೇರಳದ ಎಲ್ಲ ಕಥಾಗಾನಗಳ ವೈಶಿಷ್ಟ್ಯ. ದೈವಾರಾಧನೆಯೇ ಕಾಥಾಗಾನಗಳ ಇನ್ನೊಂದು ಉದ್ದೇಶ.

ಕಥಾಗಾನಗಳು ಅವುಗಳು ರಚನೆಗೊಂಡ ಸಮಾಜ ಮತ್ತು ಕಾಲದ ಕುರಿತಾದ ವಿವರಗಳನ್ನು ನೀಡುತ್ತವೆ. ಸಾಮಾಜಿಕ ವ್ಯವಸ್ಥೆ, ಉದ್ಯೋಗ, ಜೀವನ ಶೈಲಿ, ಲೋಕದೃಷ್ಟಿ, ಇತಿಹಾಸ, ಭೌತಿಕ ಸಂಸ್ಕೃತಿ, ಪ್ರಕೃತಿ ಮೊದಲಾದ ಅಂಶಗಳನ್ನು ಕಥಾಗಾನದಲ್ಲಿ ಕಾಣಬಹುದು. ಕವಿಕಲ್ಪನೆಯ ನಿಜವಾದ ಜಗತ್ತಿನ ಚಿತ್ರಗಳನ್ನು ಈ ಹಾಡುಗಳಲ್ಲಿ ಕಾಣಬಹುದು.

ಕೇರಳದ ಕಥಾಗಾನಗಳು ಕೃಷಿ ಸಂಸ್ಕೃತಿ ಹಾಗೂ ಜಮೀನ್ದಾರಿ ಪದ್ಧತಿ ರೂಡಿಯಲ್ಲಿದ್ದ ಕಾಲದ ರಚನೆಗಳಾಗಿವೆ. ಕಾವು ಹಾಗೂ ಧಾರ್ಮಿಕ ಆಚರಣೆಗಳು, ಅವಿಭಕ್ತ ಕುಂಟುಬ ವ್ಯವಸ್ಥೆ, ಗ್ರಾಮೀಣ ಬದುಕು ಈ ಜನಪದ ಸಾಹಿತ್ಯ ಪ್ರಕಾರ ಹುಟ್ಟು ಹಾಗೂ ಬೆಳವಣಿಗೆಗೆ ಪ್ರೇರಕವಾಯಿತು. ಆದರೆ ಆಧುನಿಕ ಸಮಾಜ ಅದಕ್ಕಿಂತ ಭಿನ್ನವಾಗಿಯದೆ. ಕೆಲಸದ ಹಾಡುಗಳು ಕೆಲಸದ ಅಭಾವದಲ್ಲಿ ದೂರವಾಗುತ್ತಾ ಇವೆ. ಕೃಷಿ ಕೆಲಸಗಳು ಕಡಿಮೆಯಾಗುತ್ತಿರುವ ಕೇರಳದಲ್ಲಿ ಕೃಷಿ ಸಂಬಂಧ ಹಾಡುಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ವಡಕ್ಕನ್ ಪಾಟು, ಏಡನಾಡನ್ ಪಾಟು, ತೆಕ್ಕನ್ ಪಾಟುಗಳೆಲ್ಲ ಆಧುನಿಕ ಕಾಲದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಬೇರೆ ಸಂದರ್ಭಗಳನ್ನು ಬಳಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿವೆ.

ವಡಕ್ಕನ್ ಪಾಟು ಕಥೆಗಳು ಆಧುನಿಕ ಸಮಾಜದ ಜನರಿಗೆ ಮನರಂಜನೆ ಒದಗಿಸಲು ಸಿನಿಮಾ, ಕಾದಂಬರಿ, ಕಥಾಪ್ರಸಂಗಗಳಾಗಿ ಪ್ರಚಲಿತದಲ್ಲಿವೆ. ಅನೇಕ ಹಾಡುಗಳು ಸಂಗ್ರಹವಾಗದೆ ನಷ್ಟವಾಗಿವೆ. ವೃದ್ಧರಾದ ಅನೇಕ ಮಂದಿಯ ನೆನಪಿನಲ್ಲಿ ಮಾತ್ರ ಕೆಲವು ಹಾಡುಗಳ ತುಣುಕುಗಳು ಉಳಿದುಕೊಂಡಿವೆ. ಆಚರಣಾತ್ಮಕ ಹಾಡುಗಳನ್ನು ಸಂಪೂರ್ಣವಾಗಿ ಹಾಡದೆ ಸಂಕ್ಷಿಪ್ತಗೊಳಿಸುವ ಪದ್ಧತಿ ಕಂಡು ಬರುತ್ತದೆ. ಅದನ್ನು ಕೇಳುವ, ಆಸ್ವಾದಿಸುವ ಜನರ ಕೊರೆತಯೇ ಇದಕ್ಕೆ ಕಾರಣ. ಕೇರಳದ ಅನೇಕ ಕಡೆಗಳಲ್ಲಿ ಜನಪದ ಪಾಟು ಸಂಘಗಳು ಹುಟ್ಟಿಕೊಂಡಿದ್ದರೂ, ಜನಪದ ಹಾಡುಗಳಿಗೆ ನ್ಯಾಯ ಒದಗಿಸುವಂತಹ ಕೆಲಸಗಳು ನಡೆಯುತ್ತಿಲ್ಲ ಎಂದೇ ಹೇಳಬಹುದು. ಬದಲಾಗುತ್ತಿರುವ ಕಾಲಗತಿಗೆ ಅನುಸಾರವಾಗಿ ಕೆಲವು ಕಥಾಗಾನಗಳಾದರೂ ಸಂಗ್ರಹಿತವಾಗಿರುವುದು ಸಂತಸದ ವಿಚಾರ.

– ಪಿ.ವಿ.ಕೆ. ಅನುವಾದ ಎನ್.ಎಸ್.