ಕೇರಳದ ಚೌಕಟ್ಟಿನ ಮನೆ ಒಂದು ನಡು ಅಂಗಣ, ಅದರ ಸುತ್ತಲೂ ನಾಲ್ಕು ಉದ್ದನೆ ಮನೆಗಳು ಪರಸ್ಪರ ಸೇರಿಕೊಂಡಿರುವ ವಸತಿಯನ್ನು ‘ನಾಲುಕೆಟ್ಟ್‌’ (ಚೌಕಟ್ಟಿನ ಮನೆ) ಎನ್ನುವರು. ಈ ನಾಲ್ಕು ದಿಕ್ಕುಗಳ ಮನೆಗಳನ್ನು ಕಿಳಕ್ಕೇಕೆಟ್ಟ್, ವಡಕ್ಕೇಕೆಟ್ಟ್‌, ಪಡಿಞಾರೆಕೆಟ್ಟ್, ತೆಕ್ಕೇಕೆಟ್ಟ್ ಎನ್ನುವರು. ಪೂರ್ವಶಾಲೆ, ಉತ್ತರಶಾಲೆ, ಪಶ್ಚಿಮ ಶಾಲೆ ಮತ್ತು ದಕ್ಷಿಣಶಾಲೆ ಎಂದೂ ಇವುಗಳನ್ನು ಕರೆಯುತ್ತಾರೆ. ಕಿಳಕ್ಕಿನಿ, ವಡಕ್ಕಿನಿ, ಪಡಿಞಾಟ್ಟ, ತೆಕ್ಕಿನಿ ಎಂಬ ಹೆಸರುಗಳಿಂದಲೂ ಈ ಮನೆಗಳು ಪ್ರಸಿದ್ಧವಾಗಿವೆ. ಪ್ರತಿಯೊಂದು ಮನೆಯೂ ನಡು ಅಂಗಳದೊಂದಿಗೆ ಹೊಂದಿರುವ ಸಂಬಂಧದ ಹಿನ್ನೆಲೆಯಲ್ಲಿ ಈ ಹೆಸರುಗಳು ಚಾಲ್ತಿಯಲ್ಲಿವೆ. ನಡು ಅಂಗಣದ ಪೂರ್ವದಲ್ಲಿದ್ದು ಪಶ್ಚಿಮಕ್ಕೆ ಮುಖಮಾಡಿರುವ ಮನೆಯೇ ಕಿಳಕ್ಕೇಕೆಟ್ಟ್. ಇದಕ್ಕೆ ಅಭಿಮುಖವಾಗಿರುವುದು ಪಡಿಞಾರೆಕೆಟ್ಟ್. ನಡು ಅಂಗಳದ ದಕ್ಷಿಣದಲ್ಲಿದ್ದು ಉತ್ತರಕ್ಕೆ ಮುಖ ಮಾಡಿರುವುದು ತೆಕ್ಕೇಕೆಟ್ಟ್. ಇದಕ್ಕೆ ಅಭಿಮುಖವಾಗಿರುವುದು ವಡಕ್ಕೇಕೆಟ್ಟ್. ನಡು ಅಂಗಳದ ನಾಲ್ಕು ಬದಿಗಳಲ್ಲಿರುವ ಈ ಮನೆಗಳನ್ನು ದಿಕ್‌ಶಾಲೆಗಳೆಂದೂ ಕರೆಯುತ್ತಾರೆ. ಎಟ್ಟ್‌ಕೆಟ್ಟ್‌ ಎಂಬ ವಿನ್ಯಾಸದಲ್ಲಿ ನಡು ಅಂಗಳದ ಮೂಲೆಗಳಲ್ಲಿ ಮತ್ತೆ ನಾಲ್ಕು ಕೋಣೆಗಳಿದ್ದು ಇವುಗಳನ್ನು ‘ಕೋಣ್‌ಶಾಲೆ’ಗಳೆಂದು ಕರೆಯುವರು. ಈಶಾನ್ಯಶಾಲೆ, ಆಗ್ನೇಯಶಾಲೆ, ನೈಋತ್ಯಶಾಲೆ, ವಾಯುವ್ಯಶಾಲೆಗಳೆಂದು ಇವುಗಳನ್ನು ಕರೆಯುವರು. ನಾಲ್ಕು ದಿಕ್‌ಶಾಲೆಗಳೂ, ನಾಲ್ಕು ಕೋಣೇಶಾಲೆಗಳೂ ನಡುಅಂಗಣದ ಸುತ್ತಲೂ ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಂಡಿರುವ ವಾಸ್ತುರಚನೆಗಳೇ ನಾಲ್‌ಕೆಟ್ಟ್‌ ಅಥವಾ ಚೌಕಟ್ಟಿನ ಮನೆ.

ನಾಲುಕೆಟ್ಟ್ – ಭಿನ್ನರೂಪಗಳು: ನಾಲುಕೆಟ್ಟ್ ಎಂಬ ವಸತಿ ವ್ಯವಸ್ಥೆಯಲ್ಲಿ ನಡು ಅಂಗಣ, ದಿಕ್‌ಶಾಲೆ, ಕೋಣೆಶಾಲೆ ಎಂಬ ಘಟಕಗಳನ್ನು ಹೊಂದಿಕೊಂಡು ಎರಡಾಗಿ ವಿಭಜಿಸಬಹುದು. ೧.ಭಿನ್ನಶಾಲೆ, ೨.ಸಂಶ್ಲಿಷ್ಟಶಾಲೆ. ಕೋಣ್‌ಶಾಲೆಗಳಲ್ಲದೆ ನಾಲ್ಕು ದಿಕ್‌ಶಾಲೆಗಳು ಮಾತ್ರ ನಡು ಅಂಗಳಕ್ಕೆ ತಾಗಿಕೊಂಡಿರುವುದು ಭಿನ್ನಶಾಲೆ. ನಾಲ್ಕು ದಿಕ್‌ಶಾಲೆಗಳೂ, ನಾಲ್ಕು ಕೋಣ್‌ಶಾಲೆಗಳೂ ಒಂದಾಗಿರುವ ವ್ಯವಸ್ಥೆಯೇ ಸಂಶ್ಲಿಷ್ಟಶಾಲೆ. ಕೇರಳದ ಚೌಕಟ್ಟಿನ ಮನೆಗಳು ಈ ವಿಭಾಗಕ್ಕೆ ಸೇರಿವೆ. ಪ್ರತಿಯೊಂದು ಮನೆಯೂ ತನ್ನ ನಿರ್ದಿಷ್ಟ ಪ್ರಮಾಣ ಮತ್ತು ಅಳತೆಗೆ ಹೊಂದಿಕೊಂಡು ನಿರ್ಮಾಣವಾಗುತ್ತಿದ್ದು, ಕೆಲವು ಚೌಕಟ್ಟಿನ ಮನೆಗಳ ಒಳಾಂಗಣ ಆಯತಾಕಾರದಲ್ಲಿರುತ್ತವೆ. ಇವುಗಳನ್ನು ಮಿಶ್ರಕಶಾಲೆಗಳೆಂದು ಕರೆಯುತ್ತಾರೆ. ನಾಲ್ಕು ಮನೆಗಳೂ ಸಮಾನ ಅಳತೆಯಲ್ಲದ್ದು, ಅಂಗಳ ಚೌಕಾಕಾರದಲ್ಲಿದ್ದರೆ ಅದನ್ನು ಏಕಕಶಾಲೆ ಎನ್ನುತ್ತಾರೆ. ವಾಸ್ತುವಿದ್ಯೆಯ ಪ್ರಕಾರ ಏಕಕ ಶಾಲೆಗಳು ಶ್ರೇಷ್ಠ ವಸತಿಗಳಾಗಿವೆ.

ನಾಲುಕೆಟ್ಟ್ ವಿನ್ಯಾಸ: ಕಿಳಕ್ಕಿನಿ ಹಾಗೂ ಉತ್ತರ ದಿಕ್ಕಿನ ಮನೆ ಸೇರಿಕೊಂಡ ಭಾಗವೇ ಕಿಳಕ್ಕೇಕೆಟ್ಟ್. ತೆಕ್ಕಿನಿ ಹಾಗೂ ದಕ್ಷಿಣದ ಮನೆ ಸೇರಿಕೊಂಡಿರುವುದು ತೆಕ್ಕೇಕೆಟ್ಟ್‌. ಇದರ ಹೊರಭಾಗದಲ್ಲಿ ಸಾಮಾನ್ಯವಾಗಿ ಧಾನ್ಯದ ಕಣಜವಿರುವುದು. ಪುರುಷ ಆಳುಗಳೂ, ಕುಟುಂಬದ ಪುರುಷರೂ ಈ ಭಾಗದಲ್ಲಿ ವಾಸವಾಗಿರುತ್ತಾರೆ. ಪಡಿಞಾಟ, ವಡಕ್ಕೇಮುರಿ, ವಡಕ್ಕರ ಎಂಬಿವು ಪಡಿಞಾರ್‌ಕೆಟ್ಟಿನ ಭಾಗಗಳಾಗಿವೆ. ಇದರ ಹೊರಭಾಗದಲ್ಲಿ ಸೇರ್ಪಡೆಗೊಂಡಿರುವ ಕೋಣೆಗೆ ಅಂಜಾಪುರ ಎಂದು ಹೇಳುತ್ತಾರೆ. ಅಡುಗೆಮನೆಯ ಕೆಲಸಗಳನ್ನೆಲ್ಲ ಈ ಮನೆಯಲ್ಲಿ ಮಾಡುವರು. ಬ್ರಹ್ಮಾಲಯ ಅಥವಾ ಬ್ರಾಹ್ಮಣರ ಮನೆಗಳಲ್ಲಿ ಕೆಳಜಾತಿಯವರು ಈ ಭಾಗಕ್ಕೆ ಮಾತ್ರ ಪ್ರವೇಶಿಸಬಹುದು.

ಚೌಕಟ್ಟಿನ ಮನೆಯನ್ನು ಪ್ರವೇಶಿಸುವಾಗ ಸಾಮಾನ್ಯವಾಗಿ ತೆಕ್ಕಿನಿಯ ಮೂಲಕ ಹೋಗುವರು. ಮೇಲಂತಸ್ತು ಇರುವ ಮನೆಗಳಲ್ಲಿ ತೆಕ್ಕಿನಿಯನ್ನು ಕೋಣೆಗಳಾಗಿ ವಿಂಗಡಿಸಿರುವುದಿಲ್ಲ. ಪಾಟುತ್ಸವ ಮೊದಲಾದ ಆಚರಣೆಗಳಿಗೆ ಈ ಭಾಗವನ್ನು ಬಳಸುವರು. ಸ್ವಜಾತಿ ಬಾಂಧವರ ಸತ್ಕಾರಗಳಿಗೂ ಈ ಕೋಣೆಯನ್ನು ಬಳಸುವರು. ತೆಕ್ಕೇಕಟ್ಟಿನಲ್ಲಿ ತೆಕ್ಕಿಣಿಯ ಮುಂದುವರಿದ ಭಾಗವೇ ತೆಕ್ಕೇ ಅರ. ತೆಕ್ಕಿನಿಯನ್ನು ವರಾಂಡದೊಂದಿಗೆ ಜೋಡಿಸುವ ಎತ್ತರ ಭಾಗವನ್ನು ‘ವೇದಿಕ’ ಎಂದು ಕರೆಯುತ್ತಾರೆ. ಪಡಿಞಾಟ ಹಾಗೂ ತೆಕ್ಕೇ ಅರದ ಮಧ್ಯೆ ಇರುವ ಜಾಗದಲ್ಲಿ ಇದಕ್ಕೆ ದಾರಿ ಇರುತ್ತದೆ. ಮನೆಯ ಅಜ್ಜಿಯಂದಿರು, ವಿಧವೆಯರು ಈ ಭಾಗದಲ್ಲಿ ವಾಸವಾಗುವರು. ಸಾಮಗ್ರಿಗಳನ್ನು ಜೋಪಾನವಾಗಿಡಲು ಈ ಕೋಣೆಯನ್ನು ಬಳಸುವರು.

ತೆಕ್ಕಿನಿಯಂದ ಆರಂಭವಾಗುವ ಕಿಳಕ್ಕೇಕೆಟ್ಟಿನ ಭಾಗವೇ ಕಿಳಕ್ಕಿನಿ. ನಂಬೂದಿರಿ ಮನೆಗಳಲ್ಲಿ ಈ ಭಾಗವನ್ನು ಹೋಮಾದಿ ಕ್ರಿಯೆಗಳಿಗೆ ಬಳಸುತ್ತಾರೆ. ಕಿಳಕ್ಕಿನಿಯ ಎದುರುಭಾಗದಲ್ಲಿ ತೆಕ್ಕೇ ಅರದ ಪ್ರವೇಶದಾರಿಗೆ ಹೊಂದಿಕೊಂಡು ಪಡಿಞಾವಿರುವುದು. ದೇವತಾಕಾರ್ಯಗಳಿಗೆ ಈ ಕೋಣೆಯನ್ನು ಮುಖ್ಯವಾಗಿ ಬಳಸುತ್ತಾರೆ. ಈ ಕೋಣೆಯಲ್ಲಿ ಪರಿಶುದ್ಧಿಯನ್ನು ಕಡ್ಡಾಯವಾಗಿ ಕಾಪಾಡಬೇಕು. ಸ್ನಾನ ಮಾಡಿ ಶುಚೀರ್ಭೂತರಾದವರು ಮಾತ್ರ ಪಡಿಞಾಟವನ್ನು ಪ್ರವೇಶಿಸಬಹುದು. ಹುಟ್ಟು, ಸಾವು ಮೊದಲಾದ ಸೂತಕದವರು ಈ ಕೋಣೆಯನ್ನು ಪ್ರವೇಶಿಸುವಂತಿಲ್ಲ. ರಜಸ್ವಲೆಯಾದ ಮಹಿಳೆಯರೂ ಪಡಿಞಾಟವನ್ನು ಪ್ರವೇಶಿಸುವಂತಿಲ್ಲ. ಕೆಲವು ಕಡೆಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡುವ ಕೋಣೆಯೂ ಇದಾಗಿದೆ. ಪಡಿಞಾಟದ ವರಾಂಡದಲ್ಲಿ ಕುಳಿತು ಪುರುಷರು ಊಟ ಮಾಡುವರು. ಆದರೆ ಕೆಲವು ಸಮುದಾಯಗಳಲ್ಲಿ ವಡಕ್ಕೇಕೆಟ್ಟ್‌ ಮತ್ತು ಅಂಜಾಪುರದ ಮಧ್ಯೆ ಇರುವ ಜಾಗದಲ್ಲಿ ಪುರುಷರು ಊಟ ಮಾಡುತ್ತಾರೆ.

ಮಹಿಳೆಯರು ವಡಕ್ಕೇಕೆಟ್ಟಿನ ವರಾಂಡ ಅಥವಾ ಅಡುಗೆ ಮನೆಯಲ್ಲಿ ಊಟವನ್ನು ಮಾಡುತ್ತಾರೆ. ಪಡಿಞಾಟ ಕಳೆದು ವಡಕ್ಕೇಕೆಟ್ಟಿಗೆ ಹೊಂದಿಕೊಂಡು ಮಹಿಳೆಯರು ಉಪಯೋಗಿಸುವ ವಡಕ್ಕೇಮುರಿ, ವಡಕ್ಕೆ ಅರ, ಪ್ರಸೂತಿ ಕೋಣೆಗಳಿರುತ್ತವೆ. ವಡಕ್ಕಿನಿಯಲ್ಲಿ ಸಾಮಾನ್ಯವಾಗಿ ಮಹಿಳೆಯರೇ ಇರುತ್ತಾರೆ. ವಡಕ್ಕಿನಿ ಎತ್ತರವಾದರೆ ತೆಕ್ಕಿನಿ ಕುಸಿಯುವುದು ಎಂಬ ಗಾದೆ ಮಾರು ಪುರುಷ ಮತ್ತು ಮಹಿಳೆಯರು ಅಧಿಕಾರ, ಸ್ವಾತಂತ್ರ್ಯಗಳಿಗೆ ಸಂಬಂಧಿಸಿದುದಾಗಿದೆ. ಅಡುಗೆಮನೆಯ ಬಾವಿಯೊಂದಿಗೆ ಸೇರಿದ ಪ್ರದೇಶವನ್ನು ‘ಕೊಟ್ಟತಳಂ’ ಎನ್ನುವರು. ಎಂಟು ಭಾಗಗಳಲ್ಲಿ ಅಡುಗೆ ಕೋಣೆ ಮತ್ತು ವಡಕ್ಕಿನಿಯ ಮಧ್ಯೆ ಚಿಕ್ಕ ಅಂಗಳವಿರುವುದು. ವಡಕ್ಕಿನಿ, ಕಿಳಕ್ಕಿನಿ, ತೆಕ್ಕಿನಿ, ಪಡಿಞಾಟ ಮೊದಲಾದ ಭಾಗಗಳು ಹತ್ತಿರ ಹತ್ತಿರ ಅಥವಾ ವಿರುದ್ಧ ದಿಕ್ಕಿನಲ್ಲಿದ್ದರೂ, ಪ್ರತಿಯೊಂದು ಕೋಣೆಯೂ ಒಂದರೊಳಗೊಂದು ತೆರೆದುಕೊಳ್ಳುವುದಿಲ್ಲ. ಆದರೆ ಹೊರಭಾಗದ ವರಾಂಡವು ಈ ಎಲ್ಲ ಕೋಣೆಗಳನ್ನು ಪರಸ್ಪರ ಸಂಪರ್ಕಿಸುತ್ತವೆ. ಈ ವರಾಂಡದಿಂದ ಎಲ್ಲ ಕೋಣೆಗಳಿಗೆ ಪ್ರವೇಶವನ್ನು ಕಲ್ಪಿಸಲಾಗುತ್ತದೆ. ಈ ವರಾಂಡವು ಚೌಕಾಕೃತಿಯಲ್ಲಿದ್ದು, ಅದರ ಒಳಭಾಗದಲ್ಲಿ ನಡು ಅಂಗಣವಿರುವುದು, ಕುಟುಂಬಕ್ಕೆ ಸಂಬಂಧಿಸಿದ ಪೂಜೆ ಹಾಗೂ ಇತರ ವಿಧಿಯಾಚರಣೆಗಳನ್ನು ಈ ನಡುಅಂಗಣದಲ್ಲಿ ನೆರವೇರಿಸುತ್ತಾರೆ.

ಕಿಳಿಕ್ಕನಿಯ ಹೊರಭಾಗದಲ್ಲಿ ಅದಕ್ಕೆ ತಾಗಿಕೊಂಡಂತೆ ಚಾವಡಿ ಇರುತ್ತದೆ. ಇದನ್ನು ‘ಪೂಮುಖಂ’ ಎನ್ನುತ್ತಾರೆ. ಈ ಪ್ರದೇಶದ ಬದಿಯಿಂದ ಚೌಕಟ್ಟಿನ ಮನೆಯ ಪ್ರವೇಶದ್ವಾರವಿರುವುದು. ಅಪೂರ್ವವಾಗಿ ಪಡಿಞಾರಕೆಟ್ಟಗೆ ತಾಗಿಕೊಂಡು ಪೂಮುಖಂ ಇರುವುದೂ ಇದೆ. ಅಡುಗೆಕೋಣೆಯಿಂದ ವರಾಂಡಕ್ಕೆ ಒಂದು ಬಾಗಿಲು ಹಾಗೂ ಪಶ್ಚಿಮಭಾಗಕ್ಕೆ ತೆರೆದುಕೊಳ್ಳುವ ಬಾಗಿಲು ಇರುತ್ತದೆ. ಅವಿಭಕ್ತ ಕುಟುಂಬಗಳು ವಾಸವಾಗಿದ್ದ ಇಂತಹ ಚೌಕಟ್ಟಿನ ಮನೆಗಳು ಇಂದು ಅಪೂರ್ವವಾಗಿವೆ.

– ಕೆ.ಎಂ.ಬಿ.ಅನುವಾದ ಎನ್.ಎಸ್.

ಕೇರಳದ ಬುಡಕಟ್ಟು ಚಿಕಿತ್ಸೆ ಕೇರಳದ ಬುಡಕಟ್ಟು ಜನರ ಚಿಕಿತ್ಸಾ ಕ್ರಮ, ಔಷಧಗಳ ಬಗೆಗೆ ತಿಳಿಯಬೇಕಾದರೆ ಅವರ ಆಹಾರಕ್ರಮ, ಬದುಕುವ ಪರಿಸರ ಮುಂತಾದವುಗಳ ಬಗೆಗೂ ತಿಳಿಯಬೇಕಾಗಿದೆ. ಮನುಷ್ಯ ದೇಹವು ಹವಾಮಾನಕ್ಕೆ ಅನುಸಾರವಾಗಿ ಬದಲಾಗುವ ಸ್ವಭಾವವುಳ್ಳದ್ದು. ಈ ಸಮತೋಲನವು ತಪ್ಪಿದರೆ ರೋಗಗಳು ಬಾಧಿಸುತ್ತವೆ. ಒಂದು ಪ್ರದೇಶದಲ್ಲಿ ತಲೆದೋರುವ ಅಸೌಖ್ಯಗಳನ್ನು ದೂರ ಮಾಡಲು ಆ ಪ್ರದೇಶದಲ್ಲಿಯೇ ಲಭ್ಯವಾಗುವ ಸಸ್ಯಗಳಿಗೆ ಶಕ್ತಿ ಇರುತ್ತದೆ ಎಂಬುದನ್ನು ಹಿಂದಿನ ಕಾಲದ ಸಿದ್ಧರು ತಿಳಿದುಕೊಂಡವರೇ ಆಗಿದ್ದರು. ಮೃಗಗಳು ತಮ್ಮ ಅಸೌಖ್ಯಗಳಿಗೆ ತಮ್ಮ ತಿನಿಸಾದ ಸಸ್ಯಗಳಿಂದಲೇ ವಿಮುಕ್ತಿ ಪಡೆಯುವುದನ್ನು ಕಂಡುಕೊಂಡೇ ಇರಬೇಕು ಆರಂಭಕಾಲದ ಮನುಷ್ಯರಿಗೂ ಅಂಥ ಪ್ರೇರಣೆ ಒದಗಿದುದು. ಹಾವಸೆಯಿಂದ ಪೆನ್ಸುಲಿಯನ್ನು ಆಕಸ್ಮಿಕವಾಗಿ ಕಂಡು ಹಿಡಿದಂತೆಯೇ ಇತರ ಅನೇಕ ಔಷಧಿಗಳನ್ನು ಕಂಡುಹಿಡಿದಿರಬಹುದು.

ಮನುಷ್ಯನಿಗೆ ಸಾವಿರದ ನೂರ ಇಪ್ಪತ್ತು ತೆರನ ರೋಗಗಳು ಬಾಧಿಸುತ್ತದೆ ಎಂದು ಸಿದ್ಧರು ಹೇಳಿದ್ದು ಕಂಡು ಬರುತ್ತದೆ. ಅವುಗಳಲ್ಲಿ ಕೆಲವು ಔಷಧಗಳಿಂದ ಇನ್ನು ಕೆಲವು ಶಸ್ತ್ರ ಕ್ರಿಯೆಯಿಂದ ವಾಸಿಯಾಗುತ್ತವೆ. ಹಳ್ಳಿ ಚಿಕಿತ್ಸೆಯಲ್ಲಿ ಅವು ಏಳು ತೆರನಾಗಿರುತ್ತವೆ.

೧. ಪಾರಂಪರ್ಯವಾಗಿ ಬರುವಂಥವು – ಚರ್ಮರೋಗ, ಮೂಲವ್ಯಾಧಿ, ಮುಂತಾದುವು ತಂದೆ ತಾಯಿಗಳಿಂದ ಮಕ್ಕಳಿಗೆ ಬರುತ್ತವೆ.

೨. ಗರ್ಭಕಾಲ ರೋಗಗಳು – ಅಶ್ರದ್ಧೆ ಕಾರಣವಾಗಿ ಗರ್ಭಸ್ಥ ಶಿಶುವಿಗೆ ತಗಲುವ ಕುರುಡು ಮತ್ತು ಕಿವುಡು

೩. ವಾತ,ಪಿತ್ತ, ಕಫ ಎಂಬ ತ್ರಿದೋಷಗಳಲ್ಲಿ ಏರು ಪೇರು ಉಂಟಾದಾಗ ತಗಲುವ ರೋಗಗಳು – ಮನಸ್ಸಿಗೆ ಇಷ್ಟವಿಲ್ಲದ ಆಹಾರದ ಮೂಲಕ ಉಂಟಾಗುವುವು.

೪. ಗಾಯ, ಎಲುಬು ತುಂಡಾಗುವುದು ಮುಂತಾದ ಕಾರಣದಿಂದ ಆಗುವುವು.

೫. ಹವಾಮಾನ ವೈಪರೀತ್ಯದಿಂದ ಉಂಟಾಗುವಂಥವು (Seasonal changes)

೬. ಪ್ರೇತ ಪಿಶಾಚಿಗಳಿಂದ ಉಂಟಾಗುವಂಥವು

೭. ಹಸಿವು, ಬಾಯಾರಿಕೆ, ಪ್ರಾಯ ಇತ್ಯಾದಿಗಳಿಂದ ತಗಲುವ ರೋಗಗಳು ವಿಷ ಬಾಧೆಯನ್ನು ಇದರಲ್ಲೇ ಸೇರಿಸಲಾಗುತ್ತದೆ.

ಮಾನವ ದೇಹವು ರೋಗಾಣುಗಳನ್ನು ಸಂಹರಿಸಲು ಶಕ್ತವಾದ ರಕ್ಷಣಾ ಸಾಮರ್ಥ್ಯ ಉಳ್ಳದ್ದು. ರೋಗವನ್ನು ಎದುರಿಸುವ ಸಾಮರ್ಥ್ಯವು ದೇಹಕ್ಕೆ ಕಡಿಮೆಯಾದಾಗ ರೋಗವು ಉಲ್ಬಣಿಸುತ್ತದೆ. ಹವಾಮಾನದ ಬದಲಾವಣೆಯ ಅನುಸಾರವಾಗಿ ದೇಹದಲ್ಲಿನ ವಾತ ಪಿತ್ತ ಕಫ – ಇವುಗಳಲ್ಲಿ ಬದಲಾವಣೆಯುಂಟಾಗಿ ದೇಹದ ಪ್ರತಿರೋಧ ಶಕ್ತಿ ಹೆಚ್ಚುತ್ತದೆ. ಇದು ಆಗದಿದ್ದಲ್ಲಿ ರೋಗಕ್ಕೆ ಕಾರಣವಾಗುತ್ತದೆ. ಆಹಾರ ಕ್ರಮವು ಇವುಗಳ ಸಮತೋಲನ ಸ್ಥಿತಿಯನ್ನು ಬದಲಾಯಿಸುವುದರಿಂದ ರೋಗಕ್ಕೆ ಕಾರಣವಾಗುತ್ತದೆ. ಇವೆಲ್ಲವನ್ನೂ ಹಿಂದಿನ ಕಾಲದ ಸಿದ್ಧ ಪುರುಷರು ಕಂಡುಕೊಂಡಿದ್ದರು. ಬುಡಕಟ್ಟು ಜನರೂ ಔಷಧ, ಆಹಾರ ಇವುಗಳಲ್ಲಿ ಬಿಸಿ ಉಂಟು ಮಾಡುವಂಥವು, ಶೀತ ಉಂಟು ಮಾಡುವಂಥವು ಎಂಬ ಅರಿವು ಉಳ್ಳವರು (Hot and cold concept of food) ಕೆಲವು ಔಷಧಿಗಳನ್ನು ಸೇವಿಸುವಾಗ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂಬ ಪದ್ಯವನ್ನೂ ಹೇಳುತ್ತಾರೆ. ಹಳ್ಳಿಮದ್ದು ಕೆಲವೊಮ್ಮೆ ಫಲಿಸದಿರುವುದಕ್ಕೆ ಕಾರಣ ಏಕಮೂಲಿಕೆಯ ಹೆಸರಿಂದ ಅವುಗಳನ್ನು ಗುರುತಿಸುವದರಲ್ಲಿ ಆಗುವ ತಪ್ಪು. ಈ ವಿಚಾರದಲ್ಲಿ ಬುಡಕಟ್ಟಿನವರು ತುಂಬ ಶ್ರದ್ಧಾವಂತರು. ಈಗ ಬುಡಕಟ್ಟಿನವರು ಎದುರಿಸುವ ಸಮಸ್ಯೆ ಎಂದರೆ ಏಕಮೂಲಿಕೆಗಳನ್ನೂ ಔಷಧಗಳನ್ನೂ ಶೇಖರಿಸಲು ಕಾಡಿನೊಳಗೆ ಪ್ರವೇಶಿಸದಂತೆ ಅರಣ್ಯ ಸಂರಕ್ಷಕರು ಅಡ್ಡಿಪಡಿಸುವುದು.

ಬ್ರಿಟಿಷರ ಕಾಲದಲ್ಲಿ ಕಾಡಿನೊಳಗೂ ಮಲೆಬೆಟ್ಟಗಳಲ್ಲಿಯೂ ವಾಸ ಮಾಡುತ್ತಿದ್ದ ಬುಡಕಟ್ಟಿನವರು ರಿಸರ್ವ್‌ ಫಾರೆ‌ಸ್ಟ್‌ ಆಕ್ಟ್ ಪ್ರಕಾರ (Re – serve Forest act) ಅಲ್ಲಿಂದ ಹೊರದೂಡಲ್ಪಟ್ಟು ಸೆಟ್ಲ್‌ಮೆಂಟ್‌ಗಳಲ್ಲಿ ವಾಸಮಾಡುವಂತಾಯಿತು. ಕಾಡಿನೊಳಗೆ ವಾಸ ಮಾಡುತ್ತಿದ್ದಾಗ ಇವರು ತಿನ್ನುತ್ತಿದ್ದ ಜೇನು, ಕಾಡುಗೆಣಸುಗಳು (ಕಾಂಞೆರಂ, ನೂರಾನ್, ನೂಟ್ಟಾ ಕಾಂಞಲ್ – ಎಲ್ಲ ಮಲಯಾಳಂ ಪದಗಳು), ಕಾಡುಹಂದಿ ಜಿಂಕೆ ಹಂದಿ ಮುಂತಾದ ಪ್ರಾಣಿಗಳ ಮಾಂಸ ಅಲಭ್ಯವಾದಾಗ ನ್ಯೂಟ್ರಿಷ್ಯಸ್ ಡೆಫಿಷ್ಯನ್ಸಿ ಉಂಟಾಯಿತು. ಅದರಿಂದಾಗಿ ಅವರಲ್ಲಿ ಪ್ರತ್ಯುತ್ಪಾದನಾ ಸಾಮರ್ಥ್ಯವು ದುರ್ಬಲವಾಗಿ ಜನನ ಪ್ರಮಾಣದಲ್ಲಿ ಇಳಿಕೆಯುಂಟಾಗುತ್ತೆಂದು ತ್ರಿಶ್ಶೂರ್ ಜಿಲ್ಲೆಯ ಮಲಯನ್ ಬುಡಕಟ್ಟಿನವರ ಕುರಿತಾಗಿ ನಡೆಸಿದ ಸಂಶೋದನೆಯಿಂದ ವ್ಯಕ್ತವಾಯಿತು.

ಕೇರಳದ ಮಲಯನ್ ಬುಡಕಟ್ಟಿನವರು ಕಾಂಞೆರಗಡ್ಡಯು ದೇಹಕ್ಕೆ ತಂಪು ನೀಡುವಂಥದ್ದೆಂದೂ ವಾತ ಪ್ರಕೃತಿಯುಳ್ಳವರು ಅದನ್ನು ತಿನ್ನಬಾರದೆಂದೂ ನೂರಾನ್‌ಗೆಣಸು ದೇಹಕ್ಕೆ ಉಷ್ಣಕಾರಕವೆಂದೂ ಉಷ್ಣ ರೋಗವುಳ್ಳವರು ಅದನ್ನು ಸೇವಿಸಬಾರದೆಂದೂ ಹೇಳುತ್ತಾರೆ. ಇದರಂಥ ಜನಪದೀಯ ಆಹಾರ ಪದ್ಧತಿಗಳಲ್ಲಿ ಉಂಟಾಗುವ ಬದಲಾವಣೆ ಹಲವಾರು ರೀತಿಯ ರೋಗಗಳಿಗೆ ಕಾರಣವಾಗುತ್ತದೆಂದು ಅಧ್ಯಯನಗಳು ತೋರಿಸಿಕೊಟ್ಟಿವೆ.

ಕೇರಳದ ಗಿರಿಜನರಲ್ಲಿ ಒಂದು ಪಂಗಡವಾದ ‘ವೇಲನ್‌’ರು ವೈ‌ದ್ಯರಾಗಿ ಪ್ರಸಿದ್ಧರಾಗಿದ್ದರು. ಸಂಘಂ ಕೃತಿಗಳಲ್ಲಿ ‘ವೇಲನ್ ವೆರಿಯಾಟ್ಟ್’ ಎಂಬ ಉಲ್ಲೇಖವು ಈ ವಿಚಾರವನ್ನು ಸ್ಪಷ್ಟ ಪಡಿಸುತ್ತದೆ.

ಬುಡಕಟ್ಟಿನವರು ಗುರುತಿಸುವ ಕೆಲವು ರೋಗಗಳು ಮತ್ತು ಅದರ ಚಿಕಿತ್ಸೆ ಈ ರೀತಿಯಲ್ಲಿವೆ.

ಹಳದಿ ಕಾಮಾಲೆ :

i) ವಾಳರಿಂಙ (ಮ), ಕಾಡುಹೆಸರು, ಹರಳಿನ ಚಿಗುರೆಲೆ, ಅರಸಿನ ಇತ್ಯಾದಿಗಳನ್ನು ಸಮಪಾಕದಲ್ಲಿ ತೆಗೆದು ಅರೆದು ಹಸುವಿನ ಹಾಲು ಬೆರೆಸಿ ಏಳು ದಿನಗಳ ಕಾಲ ಸೇವಿಸಬೇಕು. ಉಪ್ಪು, ಮೆಣಸು, ಹುಳಿ, ಎಣ್ಣೆ, ಮಾಂಸ, ಕುಂಬಳಕಾಯಿ ಇತ್ಯಾದಿಗಳನ್ನು ತಿನ್ನಬಾರದು.

ii) ನೆಲನೆಲ್ಲಿಯನ್ನು ಸಮೂಲ ಅರೆದು ಹಸುವಿನ ಹಾಲಲ್ಲಿ ಬೆರೆಸಿ ಕುಡಿಯಬೇಕು (ಏಳು ದಿವಸ)

iii) ನಾಚಿಕೆಮುಳನ್ನು ಸಮೂಲ ಅರೆದು ಹಸುವಿನ ಹಾಲಲ್ಲಿ ಬೆರೆಸಿ ಮೂರು ದಿವಸ ಕುಡಿಯಬೇಕು. ಏಳು ದಿವಸ ಪಥ್ಯವನ್ನು ಪಾಲಿಸಬೇಕು.

ಅಜೀರ್ಣ :

ಸರ್ಪಗಂಧಿಯ ಗಡ್ಡಯನ್ನು ಒಣಗಿಸಿ ಪುಡಿ ಮಾಡಿ ನೀರಲ್ಲಿ ಕಲಸಿಕೊಂಡು ಕುಡಿಯಬೇಕು. ಇದರಿಂದ ಎಲ್ಲ ತೆರನ ಉದರ ರೋಗಗಳು ಶಮನಗೊಳ್ಳುತ್ತವೆ.

ರಕ್ತಭೇದಿ, ಭೇದಿ: ಭೇದಿ ನಿಲ್ಲುವ ತನಕ ಕಚ್ಚೋಲದ ಗಡ್ಡಯನ್ನು ಅರದು ಕಲಸಿ ಕುಡಿಯಬೇಕು.

ತಲೆನೋವು:

೧. ಶ್ರೀರಾಮ ಪಚ್ಚೆ (ಮ)ಯನ್ನು ಅರೆದು ಹಣೆಗೆ ಹಚ್ಚುವುದು.

೨. ಮಚ್ಚಿಂಙ(ಮ) Migrane ಮತ್ತು ತುಂಬೆಯ ಎಲೆಯನ್ನು ನೆಲನೆಲ್ಲಿಯೊಂದಿಗೆ ಸೇರಿಸಿ ಅರದು ಹಣೆಗೆ ಹಚ್ಚುವುದದು.

ಹೊಟ್ಟೆನೋವು:

i) ನಿಲಂ ತೊಡಾಂಮಣ್ಣ್ (ಮ) (ಕುರುವಿಕ್ಕೂಡ್ ಮ) ಅರೆದು ಕಿಬ್ಬೊಟ್ಟಿಗೆ ಲೇಪಿಸುವುದು.

ii) ಜಾಯಿಕಾಯಿಯನ್ನು ಅರೆದು ಒಂದು ಗುಟುಕು ಕುಡಿಯುವುದು

ವಾಂತಿ:

ಓಮವನ್ನು ನೀರಲ್ಲಿ ಹಾಕಿ ಕುದಿಸಿ ಕುಡಿಯುವುದು.

ವಾತ:

ವಾತ ಕೊಡಿ (ಮ)ಯನ್ನಾಗಲಿ ಮರಮಂಞಕ್ಕೋಲ (ಮ)ನ್ನಾಗಲಿ (ಗಡ್ಡೆ)ನೀರಲ್ಲಿ ಹಾಕಿ ಕುದಿಸಿ ಆ ನೀರಲ್ಲಿ ಸ್ನಾನ ಮಾಡುವುದು.

ಚರ್ಮರೋಗ:

i) ಕೊಟ್ಟತ್ತಲ (ಮ) ಎಲೆ ಅಥವಾ ಪೂವತ್ತಿಲ್ (ಮ) ಎಲೆಯನ್ನು ಹಾಕಿ ಕುದಿಸಿದ ನೀರಲ್ಲಿ ಮೀಯುವುದು.

ii) ಅಲಪತ್ (ಮ)ನ ಬೇರನ್ನು ಅರದು ದೇಹಕ್ಕೆ ಹಚ್ಚಿ ಅರ್ಧಗಂಟೆಯ ಬಳಿಕ ಮೀಯುವುದು.

iii) ತುಳಸಿಯ ನೀರನ್ನು ತೆಗೆದು ಸುಣ್ಣ ಸೇರಿಸಿ ಹಚ್ಚುವುದು.

ಮೊಲೆಹಾಲು ಹೆಚ್ಚುವುದಕ್ಕೆ:

i) ನುಗ್ಗೆ ಎಲೆ ಬೇಯಿಸಿ ತಿನ್ನುವುದು.

ii) ವೆಳ್ಳಂಕ್ಕಿಂಡೆ(ಮ) (ಸೌತೆಯ?) ಎಲೆಗಳನ್ನು ಹರಡಿ ಅದರ ಮೇಲೆ ಚಾಪೆ ಹಾಸಿ ತಾಯಿಯನ್ನು ಅದರಲ್ಲಿ ಮಲಗಿಸುವುದು.

ರೋಗನಿರೋಧಕ ಶಕ್ತಿಗೆ:

i) ತಗತೆ ಸೊಪ್ಪನ್ನು ಬೇಯಿಸಿ ತಿನ್ನವುದು.

ii) ತಗತೆಯ ಬೀಜವನ್ನು ಗಂಜಿಯಲ್ಲಿ ಹಾಕಿ ಬೇಯಿಸಿ ಕುಡಿಯುವುದು.

ಶರೀರ ವೇದನೆ ಹೋಗಲಾಡಿಸಲು:

i) ಬೇಂಗೆ ಮರದ ತೊಗಟೆ ಅದರ ಕಪ್ಪು ಹಾಲನ್ನು ಗಂಜಿಗೆ ಸೇರಿಸಿ ಬೇಯಿಸಿ ಕುಡಿಯುವುದು. ಇದನ್ನು ಮಕ್ಕಳಿಗೆ ಕೊಡಬಾರದು.(ಕಾಮವರ್ಧಕ)

ii) ಕಂಙ(ಮ), ತೆಂಗಿನಕಾಯಿ, ಬೆಳ್ತಿಗೆ ಅಕ್ಕಿ – ಇವನ್ನು ಸೇರಿಸಿ ಗಂಜಿ ಇಟ್ಟು ಕುಡಿಯುವುದು. (ಇದನ್ನು ಮಕ್ಕಳಿಗೆ ಕೊಡಬಾರದು).

ಆಣಿರೋಗಕ್ಕೆ:

ಬೆಳ್ಳುಳ್ಳಿ ಸುಟ್ಟ ಬಿಸಿ ಬಿಸಿ ಇರುವಾಗಲೇ ಆಣೆ ಇದ್ದಲ್ಲಿ ಇಟ್ಟು ಕಟ್ಟಬೇಕು.

ತಲೆಕೂದಲು ಬೆಳೆಯುವುದಕ್ಕೆ:

ದಾಸವಾಳ, ತಾಳಿಯೆಲೆ (ಮ), ಕಂಞಣ್ಣಿ (ಕಯ್ಯಣ್ಣಿ?) ಎಲೆ(ಮ) ಇವುಗಳನ್ನು ತೆಂಗಿನ ಎಣ್ಣೆಯಲ್ಲಿ ಕಾಯಿಸಿ ಕೂದಲಿಗೆ ಹಚ್ಚಿಕೊಳ್ಳಬೇಕು.

ವಿಷ ತಗುಲಿದರೆ:

೧. ಸಾಧಾರಣ ವಿಷ ತಗುಲಿದರೆ (ನೆಲಚೇಳು, ಚೇಳು, ಕಡದುರು) ಕಠಳ ಕಂಚಿ (ಮ) ಯ ಬೇರನ್ನು ಅರಸಿನ ಸೇರಿಸಿ ಅರೆದು ಹಚ್ಚಬೇಕು. (ಸೇವಿಸಲೂ ಬಹುದು, ನಿಜವಾಗಿಯೂ ವಿಷತಾಗಿದ್ದರೆ ಸೇವಿಸುವಾಗ ಕಹಿಯಾಗದು. ತಗುಲದಿದ್ದರೆ ಕಹಿಯಾದೀತು).

೨.ಹಾವು ಕಚ್ಚಿದರೆ ಪಡಂಚೊರುಕಿ (ಮ)ಯ ಬೇರು ತೆಗೆದು ಬಾಯಿಗೆ ಹಾಕಿ ಜಗಿದು ಗಾಯವಾದಲ್ಲಿಗೆ ಉಗುಳಬೇಕು. ಮಲ್ಲಿಗೆಯ ಹಾಗೆಯೇ ಇರುವ ಪಡಂಚೊರುಕಿ ಕಾಡಿನ ಬಂಡೆಗಳಲ್ಲಿ ಕಂಡುಬರುತ್ತದೆ.

೩. ಅಣಲಿ ಭೇದಂ (ಮ) ಎಂಬ ಮರದ ಸಿಪ್ಪೆಯನ್ನು ಅರೆದು ಹಾವು ಕಚ್ಚಿದ ಜಾಗಕ್ಕೆ ಹಚ್ಚಬೇಕು. ಸ್ವಲ್ಪವನ್ನು ಕುಡಿಯಬೇಕು. ವಿಷವು ತನ್ನಷ್ಟಕ್ಕೆ ಇಳಿಯುತ್ತದೆ. ಈ ಮರದ ಸಿಪ್ಪೆ ತೆಗೆಯಲು ಹೋಗುವ ಮುನ್ನ ನಲುವತ್ತೈದು ದಿವಸ ವ್ರತ ಮಾಡಬೇಕು. ಹುಣ್ಣಿಮೆ ರಾತ್ರಿ ಈ ಮರದ ಸಿಪ್ಪೆ ತೆಗೆಯಲು ಹೋಗುವಾತ ಪೂರ್ಣ ನಗ್ನನಾಗಿ ಹತ್ತಿರ ಹೋಗಬೇಕು. ಇಲ್ಲವಾದಲ್ಲಿ ಆ ಮರ. ಹಾವಿನಂತೆ ಚೀತ್ಕರಿಸುತ್ತದೆ. ಸಿಪ್ಪೆಯನ್ನು ತರುವಾಗ ಹಿಂತಿರುಗಿ ನೋಡಬಾರದು ಎಂದು ಬುಡಕಟ್ಟಿನವರು ನಂಬುತ್ತಾರೆ.

ಕಣ್ಣುರೋಗಕ್ಕೆ ಮತ್ತು ಬೆಂಕಿ ತಾಗಿದ್ದಕ್ಕೆ:

ಶೀಳನ್ ಎಂಬ ಜೇನು ಕಣ್ಣಿಗೆ ಬಿಡಬೇಕು. ಬೆಂಕಿ ತಾಗಿದ ಜಾಗಕ್ಕೆ ಹಚ್ಚಬೇಕು.

ಗಾಯ ವಾಸಿಯಾಗುವುದಕ್ಕೆ:

೧. ಬಿದಿರಿನಲ್ಲಿ ಬೆಳೆಯುವ ಮುರಿಪಚ್ಚಿ (ಮ)ದ ಎಲೆಯನ್ನು ಸುಣ್ಣವನ್ನು ಸೇರಿಸಿ ಅರೆದು ಗಾಯಕ್ಕೆ ಲೇಪಿಸುವುದು.

೨. ಹಸಿ ಪಪ್ಪಾಯಿಯ ಸೊನೆಯನ್ನು ಗಾಯಕ್ಕೆ ಲೇಪಿಸುವುದು.

೩. ಚೆನ್ನಿಯಾಯ (ಮ) ಪಂಜಂಬಯುಕ್ಕ (ಮ) ಚದಕ್ಕಪ್ಪ (ಮ) ಕೋಳಿ ಮೊಟ್ಟೆಯ ರಸ ಇವುಗಳನ್ನು ಸೇರಿಸಿ ಅರೆದು ಲೇಪಿಸುವುದು.

ವಿಲ್ಲನ್ ಚುಮ(ನಾಯಿಕೆಮ್ಮು) ಹೋಗಲಾಡಿಸಲು:

೧. ಆಡಲೋಡುಗ (ಮ) ಆಡುಸೋಗೆಯ ಸೊಪ್ಪು, ಹುರಿದು ಹುಡುಮಾಡಿದ ಅಕ್ಕಿ, ಗರ್ಕರೆ(ಮ) ಯನ್ನು ಮಿಶ್ರ ಮಾಡಿ ತಿನ್ನಬೇಕು.

೨. ಆಡಲೋಡುಗದ ರಸವನ್ನು ಕೋಳಿ ಮೊಟ್ಟೆಯನ್ನು ಸೇರಿಸಿ ಹುರಿದು ಸೇವಿಸಬೇಕು.

ಜ್ವರಕ್ಕೆ:

ಶೀತಜ್ವರಕ್ಕೆ ಕಾಳು ಮೆಣಸು ಗಿಡದ ಚಿಗುರು, ಒಡಿಚ್ಚುತ್ತಿ(ಮ) ಎಲೆ, ವಾತಕ್ಕೊಡಿ (ಮ), ಮುಂಞ ಇಲ (ಮ) ಇವುಗಳನ್ನು ನೀರಲ್ಲಿ ಹಾಕಿ ಕುದಿಸಿ ಹಬೆ ಹಿಡಿಯಬೇಕು.

ಉಬ್ಬಸಕ್ಕೆ:

ಮಾವಿನ ಎಲೆಯ ನರ, ಹಲಸಿನ ಎಲೆಗಳನ್ನು ನೀರಲ್ಲಿ ಹಾಕಿ ಕುದಿಸಿ ಹುಲಿಯ ತುಪ್ಪ ಒಂದು ಬಿಂದು ಸೇರಿಸಿ ಕುಡಿಯಬೇಕು. (ಕರಡಿ, ಕಾಡುಹಂದಿ – ಇವುಗಳ ತುಪ್ಪ ಸೇರಿಸಿದರೂ ಸಾಕು.* ಹಳ್ಳಿಗರು ತುಪ್ಪ ಎನ್ನುವುದು ಪ್ರಾಣಿಗಳ ಕೊಬ್ಬನ್ನು (ಸಂ))

ಹಲ್ಲು ನೋವಿಗೆ:

೧. ಕರಶು (ಮ) ಮರದ ಸಿಪ್ಪೆಯನ್ನು ನೀರಲ್ಲಿ ಕುದಿಸಿ ಬಾಯಿ ಮುಕ್ಕಳಿಸಬೇಕು.

೨. ತಿಪ್ಪಲಿ ಮತ್ತು ಕರಶು ಮರದ ತೊಗಟೆಗಳನ್ನು ಸೇರಿಸಿ ಅರೆದು ನೋವು ಇರುವಲ್ಲಿಗೆ ಹಚ್ಚಬೇಕು.

ಮಕ್ಕಳ ಜ್ವರ, ಶೀತ ಇತ್ಯಾದಿಗಳಿಗೆ:

೧. ಅಡಪ್ಪೊದಿಯನ್ (ಮ)ನ ಬೇರನ್ನು ಮೊಲೆಹಾಲಲ್ಲಿ ಅರೆದು ಕುಡಿಸುವುದು.

೨. ಪನಿಕೂರ್ಕ (ಮ) ಎಲೆಯನ್ನು ಕೆಂಡದಲ್ಲಿ ಬಾಡಿಸಿ ರಸ ತೆಗೆದು ತಲೆಗೆ ಹಚ್ಚುವುದು. (ಜ್ವರ ವಾಸಿಯಾಗುತ್ತದೆ).

ಪ್ರಸವ ಶುಶ್ರೂಷೆ: ಹೇಟೆಯ ಗಂಗಳನ್ನು ಕಿತ್ತು ತೆಗೆದು ಒರಳಲ್ಲಿ ಹೇಟೆಯನ್ನು ಕುಟ್ಟಿ ರಸ ತೆಗೆದು ಅದರ ಜತೆ ಜೀರಿಗೆ ಅಥವಾ ಸಾರಾಯಿ ಸೇರಿಸಿ ಕೊಡಬಹುದು. ಇವನ್ನು ಜೀರಿಗೆ ಕೋಳಿ ಮತ್ತು ಸಾರಾಯಿ ಕೋಳಿಗಳೆನ್ನುತ್ತಾರೆ.

ಮಂತ್ರವಾದ ಮತ್ತು ಔಷಧ: ಮಂತ್ರದ ಮೂಲಕ ರೋಗಗಳನ್ನು ನಿವಾರಿಸಬಹುದು. ಎಂಬ ನಂಬಿಕೆ ಎಲ್ಲ ಬುಡಕಟ್ಟು ಜನರಲ್ಲೂ ಕಂಡುಬರುತ್ತದೆ. ಈ ನಂಬುಗೆ ಅವರ ವಿಶ್ವದೃಷ್ಟಿ (Word views)ಯ ಆಧಾರದಲ್ಲಿ ರೂಪುಗೊಂಡದ್ದು. ಮಲಯರು ‘ಮುಕಂಕುಲಕ್ಕಿ’ ಎಂಬ ಮಂತ್ರಗಾನವನ್ನು ಹಾಡಿ ಹಲವು ತೆರನ ರೋಗಗಳಿಗೆ ಚಿಕಿತ್ಸೆ ಮಾಡಬಲ್ಲರು ಎಂದು ಹೇಳುತ್ತಾರೆ. ದೈವಭಕ್ತಿ ಇರುವವರಿಗೆ ಮಾತ್ರ ಈ ತೆರನಾಗಿ ರೋಗಗಳನ್ನು ವಾಸಿ ಮಾಡಲು ಸಾಧ್ಯ. ಪನಂಬು ಮುರ (ಮ)ದಲ್ಲಿ ಕಬ್ಬಿಣದ ಸಂಲೆಯನ್ನು ಹಾಕಿ ರಭಸದಿಂದ ಮರವನ್ನು ಅಲುಗಾಡಿಸಿದಾಗ ವಿಚಿತ್ರ ಸದ್ದುಗಳಿಂದ ಕೂಡಿದ ಹಾಡುಗಳನ್ನು ಹಾಡುತ್ತಾರೆ. ರೋಗಿಯ ಮುಂದೆ ಅಗ್ನಿಪಾತ್ರೆಯಲ್ಲಿ ಕುಂದಿರಿಕ್ಕ (ಒಂದು ಸುಂಗಂಧ ದ್ಯವ್ಯ)ವನ್ನು ಹಾಕಿ ಹೊಗೆ ಎಬ್ಬಿಸುತ್ತಾರೆ. ಮಂತ್ರಗಾನ ಮುಗಿಯುವಾಗ ರೋಗವು ಶಮನ ವಾದೀತು ಎಂಬುದು ನಂಬುಕೆ. ವನದೇವತೆಗಳನ್ನು ಕರೆದು ರೋಗವನ್ನು ವಾಸಿ ಮಾಡಿಕೊಡಬೇಕು ಎಂದು ಬೇಡಿ ಕೊಳ್ಳುವುದೇ ಮುರಂಕ್ಕುಲುಕ್ಕಿ ಹಾಡಿನ ಆಶಯ. ಇದರ ಹಾಗೆಯೇ ಕಿಣ್ಣರಿ ಕುಲುಕ್ಕಿ (ಬಟ್ಟಲು ಕುಲುಕುವ) ಹಾಡೂ ಇದೆ ಎಂದು ಅವರು ಹೇಳುತ್ತಾರೆ.

ಈ ತೆರನ ಮಂತ್ರ ಚಿಕಿತ್ಸಾ ಸಂಪ್ರದಾಯಗಳು ಎಲ್ಲ ಬುಡಕಟ್ಟಿನವರಲ್ಲಿ ಇದೆ. ಇದು ಮಾನಸಿಕರೋಗ ಚಿಕಿತ್ಸಾ ಸಂಪ್ರದಾಯಕ್ಕೆ ಸೇರಿದ್ದಾಗಬಹುದು. (Musico psycho Theorapy) ಕಾಣಿಕ್ಕಾರದಲ್ಲಿ ಚಾತ್ತುಪಾಟ್ಟ್, ಪಳಿಯನ್‌ರಲ್ಲಿ ಏಙ್‌ಕನ್ಯಕಮಾರ್ ಚಡಂಙ್ ಕೆಡುದಿಚಡಂಙ್ ಮುಂತಾದವು ಬಳಕೆಯಲ್ಲಿದ್ದ ಇಂಥ ಬುಡಕಟ್ಟಿ ಜನ ಈ ತೆರನ ಚಿಕಿತ್ಸಾ ಸಂಪ್ರದಾಯಗಳನ್ನು ಬಳಸುವುದಕ್ಕೆ ಸಾಕ್ಷಿಯಾಗಿದೆ.

ದೊಡ್ಡ ರೋಗಗಳಿಗೆ ಆಲೋಪತಿ ಚಿಕಿತ್ಸೆ ಮಾಡಿಸಿಕೊಳ್ಳಲು ಬುಡಕಟ್ಟಿನವರು ಈಗ ಸಿದ್ಧವಾಗುತ್ತಿದ್ದಾರೆ.

– ಪಿ.ಎನ್. ಅನುವಾದ ಕೆ.ಕೆ.