ಕೆರೆಗೆ ಹಾರ ಇದು ಬಹಳ ವಿಶಿಷ್ಟವಾದ ಕನ್ನಡ ಕಥನಗೀತೆ. ಈ ಗೀತೆಯನ್ನು ಓದುತ್ತಾ ಹೋದಂತೆ, ಓದುಗನಿಗೆ ಒಂದು ವಿನೂತನ ಅನುಭವಾಗುತ್ತದೆ. ಈ ಗೀತೆಯಲ್ಲಿ ಸುಮಾರು ೧೨೦ ಸಾಲುಗಳಿವೆ. ಈ ಕಥನದಲ್ಲಿ ಮುಖ್ಯವಾಗಿ ಮೂರು ವಿಷಯಗಳಿವೆ.

೧. ಹೆಣ್ಣೊಬ್ಬಳ ತ್ಯಾಗ – ಬಲಿದಾನ

೨. ಹಿರಿಯರ ಸಮಾಜ ಕಲ್ಯಾಣ ಕೆಲಸಕ್ಕೆ ಒತ್ತಾಸೆಯಾದ ಮಾನಿನಿ

೩. ಊರ ಹಿತಕ್ಕಾಗಿ ಅರ್ಪಿತಗೊಂಡ ಪತ್ನಿಗಾಗಿ, ಪ್ರಾಣಾರ್ಪಣೆಗೈದ ಪತಿಯ ತ್ಯಾಗದ ಹಿರಿಮೆ

‘ಕೆರೆಗೆ ಹಾರ’ದ ಕಥೆ ಈ ರೀತಿಯಲ್ಲಿದೆ. ಕಲ್ಲನಕೇರಿಯ ಮಲ್ಲನಗೌಡ, ಜನರ ಹಿತಕ್ಕಾಗಿ, ಊರಿನ ಕ್ಷೇಮಕ್ಕಾಗಿ ಕೆರೆಯೊಂದನ್ನು ಕಟ್ಟಿಸುವನು. ಆದರೆ ಆ ಕೆರೆಯಲ್ಲಿ ಸ್ವಲ್ಪವೂ ನೀರು ಬರುವುದೇ ಇಲ್ಲ. ಇದರಿಂದ ಮನನೊಂದ, ಬೇಸರಗೊಂಡ ಗೌಡ, ಜೋಯಿಸರ ಬಳಿ ಹೋಗಿ ಶಾಸ್ತ್ರ ಕೇಳುವರು. ಜೋಯಿಸರು ಹೊತ್ತಿಗೆ ತೆಗೆದು ಲೆಕ್ಕಾಚಾರ ಮಾಡಿ – ಇದಕ್ಕೆ ದೇವರಕಾಟ. ದೆವ್ವದಕಾಟ ಯಾವುದೂ ಇಲ್ಲ. ಆದರೆ ಕೆರೆ ಒಂದು ಬಲಿಯನ್ನು ಕೇಳುತ್ತಿದೆ. ಅದಕ್ಕೆ ನಿಮ್ಮ ಮನೆತನದ ಹಿರಿಯ ಸೊಸೆ ಮಲ್ಲವ್ವನನ್ನು ಹಾರವಾಗಿ ಕೊಡಬೇಕು ಆಕೆಯನ್ನು ಕೆರೆಗೆ ಹಾರವಾಗಿ ಕೊಟ್ಟರೆ ಕೆರೆಯಲ್ಲಿ ಖಂಡಿತ ನೀರು ಬರುತ್ತದೆ ಎನ್ನುವನು. ಗೌಡನ ಮನೆಯಲ್ಲಿ ಎಲ್ಲರೂ ಆಲೋಚನೆ ಮಾಡಿ, ಹಿರಿಯ ಸೊಸೆಯನ್ನು ಹಾರವಾಗಿ ಕೊಟ್ಟರೆ, ಮನೆತನದ ಹಿರಿಯ ಸಂತತಿ ಮುಂದುವರಿಯುವುದು ಬೇಡವೆ ಎಂದುಕೊಳ್ಳುತ್ತಾರೆ. ಹೇಗಾದರೂ ಮಾಡಿ ಬಲಿಯನ್ನಂತೂ ಕೊಡಲೇಬೇಕು. ಇಲ್ಲವಾದರೆ ಮಾಡಬೇಕೆಂದಿರುವ ಧರ್ಮಕಾರ್ಯ ಅರ್ಧದಲ್ಲೇ ನಿಂತು ಹೋಗುತ್ತದೆ. ಆದುದರಿಂದ ಕಡೆ ಸೊಸೆ ಭಾಗೀರಥಿಯನ್ನು ಹಾರವಾಗಿ ಕೊಡಬೇಕೆಂದು ಮನೆಯೊಳಗೆ ಮಾತಾಗುವುದು.

ಹಿರಿಯರ ಈ ನಿರ್ಧಾರ ಭಾಗೀರಥಿಗೆ ತಿಳಿದರೂ ಎಲ್ಲಿಯೂ ಪ್ರತಿಭಟಿಸುವುದಿಲ್ಲ. ತನ್ನ ಮನದ ಬೇಗುದಿಯನ್ನು ಯಾರ ಮುಂದೆಯೂ ತೋರ್ಪಡಿಸಿಕೊಳ್ಳುವುದಿಲ್ಲ. ಆದರೆ ಕಡೆಯದಾಗಿ ತನ್ನ ಹೆತ್ತವರು, ಒಡಹುಟ್ಟು, ಬಂಧು ಬಳಗ ಮತ್ತು ಗೆಳತಿಯರನ್ನು ಕಂಡು ಬರಲು ಅತ್ತೆಯ ಅನುಮತಿ ಕೇಳುತ್ತಾಳೆ. ಆಗ ಅತ್ತೆ, ಸರ್ರ‍ನೆ ಹೋಗವ್ವ, ಭರ್ರ‍ನೆ ಬಾರವ್ವ, ಎಂದು ಕಳುಹಿಸುವಳು. ಭಾಗೀರಥಿ ತೌರಿಗೆ ಬಂದಾಗ ಮುಖ ಬಾಡಿರುತ್ತದೆ. ಕಂಗಳಲ್ಲಿ ಕಂಬನಿ ಒಸರುತ್ತಿರುತ್ತದೆ. ಹೆತ್ತವರಿಗೆ ಭಾಗೀರಥಿ ‘ನಮ್ಮತ್ತೆ ನಮ್ಮಾವ ನನ್ನ ಬ್ಯಾರೆ ಇಡ್ತಾರಂತೆ’ ಎಂದು ಸುಳ್ಳು ಹೇಳಿದಾಗ, ವಿಷಯವೇನೆಂಬುದೇ ತಿಳಿಯದ ಅಮಾಯಕ ತಂದೆ ‘ಇಟ್ಟರೆ ಇಡಲೇಳು ಹೊಲಮನಿ ಕೊಡ್ತೀನಿ’ ಎಂದಾಗ, ಭಾಗೀರಥಿ ವಿಷಾದದಿಂದ ‘ಹೊಲಮನಿ ಒಯ್ದು ಹೊಳೆದಂಡೆಗ್ಹಾಕಪ್ಪ’ ಎಂದ್ಹೇಳಿ ತಾಯಿ ಬಳಿಗೆ ಬರುವಳು. ವಿಷಯ ತಿಳಿದ ತಾಯಿ ‘ವಾಲೆ ಜೋಡು ಕೊಡ್ತೀನಿ’ ಎನ್ನುವಳು. ಭಾಗೀರಥಿ ಅಸಾಹಾಕತೆಯಿಂದ – ವಾಲೀಯ ಜೋಡೊಯ್ದು ಒಲಿಯಾಗ ಹಾಕವ್ವ’ ಎಂದು ನುಡಿದು, ಅಕ್ಕನ ಹತ್ತಿರ ಬಂದಾಗ ಅವಳಕ್ಕೆ ನಿನ್ನೊಂದಿಗಿರಲು ನನ್ನ ಮಕ್ಕಳನ್ನು ಕರೆದೊಯ್ಯಿ’ ಎನ್ನುವಳು. ಭಾಗೀರಥಿಗೆ ತೌರಿನಲ್ಲಿ ಶಾಂತಿ – ಸಮಾಧಾನ ಸಿಗದೆ ಗೆಳತಿಯ ಬಳಿ ಬಂದು ಮನಸಾರೆ ಅಳುತ್ತಾಳೆ. ಆಗ ಗೆಳತಿ – ‘ಎಂದಿಲ್ಲದ ಭಾಗೀರಥಿ ಇಂದ್ಯಾಕ ಈ ಅಳುವು’ ಎಂದು ಕೇಳುವಳು. ಅದಕ್ಕೆ ಭಾಗೀರಥಿ ಅಂಜುತ್ತಾ, ಅಳುಕುತ್ತಾ, ಆತ್ಮೀಯ ಗೆಳತಿಯ ಬಳಿ ಮನಬಿಚ್ಚಿ ನೇರವಾಗಿ ‘ನಮ್ಮತ್ತೆ ನಮ್ಮಾವ ನನ್ನ ಕರೆಗ್ಹಾರ ಕೊಡ್ತಾರಂತೆ’ ಎನ್ನುವಳು. ಆ ಗೆಳತಿಗೆ ತನ್ನ ಗೆಳತಿಯ ಜೀವಕ್ಕಿಂತ ಊರಿನ ಹಿತ, ಲೋಕಕಲ್ಯಾಣ, ಜನಸೇವೆ ಅಧಿಕವೆನಿಸಿ, ಭಾಗೀರಥಿಯನ್ನು ಪ್ರೀತಿಯಿಂದ ಸಮಾಧಾನ ಪಡಿಸುತ್ತಾ ‘ಕೊಟ್ಟರೆ ಕೊಡಲೇಳು, ಇಟ್ಹಾಂಗ ಇರಬೇಕು’ ಎನ್ನುತ್ತಾಳೆ. ಆಗ ಭಾಗೀರಥಿಗೆ ಅಧೈರ್ಯ ಹೋಗಿ ಆ ಜಾಗದಲ್ಲಿ ಆತ್ಮವಿಶ್ವಾಸ ತಾನಾಗಿಯೇ ಮೂಡುತ್ತದೆ. ಅವಳ ಮನದ ಹೊಯ್ದಾಟ ಅಲ್ಲಿಗೆ ನಿಲ್ಲುತ್ತದೆ. ತನ್ನ ಬಲಿದಾನಕ್ಕೆ ಹೃಯದವನ್ನು ಕಲ್ಲು ಮಾಡಿಕೊಂಡ ಭಾಗೀರಥಿ ಅವ್ವನ ಮನೆಗೆ ಸರ್ರ‍ನೆ ಹೋಗಿ, ಭರ್ರ‍ನೆ ಬರುತ್ತಾಳೆ’

ಮನೆಯಲ್ಲಿ ಗಂಗೆಯ ಪೂಜೆಗಾಗಿ ಸಕಲ ಸಿದ್ಧತೆಯ ಏರ್ಪಾಡುಗಳು ನಡೆಯುವಾಗ, ಜೀವನ್ಮುಖಿಯಾದ ಭಾಗೀರಥಿ ತನ್ನ ಹೃದಯವನ್ನು ಕಲ್ಲು ಮಾಡಿಕೊಂಡಿದ್ದರೂ ಸಹ ಮುಂಬಲಿರುವ ತನ್ನ ಸಾವನ್ನು ನೆನೆದು ಅಳುತ್ತಾಳೆ. ಅವಳ ಮನೋಬೇಗುದಿ ಅತ್ತೆ ಮಾವನಿಗೆ ಅರಿವಾದರೂ, ಅವಳನ್ನು ನೇರವಾಗಿ ಏನನ್ನು ಕೇಳಲಾರರು. ಸಾಯುವ ದಿನ ಕೂಡ ಭಾಗೀರಥಿ ಮನೆಯಲ್ಲಿ ನಿತ್ಯ ಕೈಂಕರ್ಯಕ್ಕೆ ನೆರವಾಗುತ್ತಾಳೆ. ಅಕ್ಕಿ ಬ್ಯಾಳಿಯನ್ನು ಮಾಡಿಡುತ್ತಾಳೆ. ಅಂದು ಮನೆಯಲ್ಲಿ ದೊಡ್ಡ ಹಬ್ಬದ ಅಡಿಗೆ ಸಿದ್ಧವಾಗುತ್ತದೆ. ಸ್ನಾನಕ್ಕಾಗಿ ಹತ್ತು ಕೊಪ್ಪರಿಗೆ ನೀರು ಉಕ್ಕಿ ಮಳ್ಳುತ್ತದೆ. ಮನೆಯ ಹಿರಿಯರು, ಮನೆಯ ಸೊಸೆಯರಿಗೆಲ್ಲ ಸ್ನಾನ ಮಾಡಲು ಹೇಳಿದಾಗ, ಅವರೆಲ್ಲ ಮಡಿಯಾದರೆ ಎಲ್ಲಿ ಗಂಗೆ ನಮ್ಮನ್ನೆಲ್ಲ ಸೆಳೆದೊಯ್ಯುವಳೊ ಎಂದು ಹೆದರಿ ಯಾರೊಬ್ಬರೂ ಸ್ನಾನ ಮಾಡುವುದಿಲ್ಲ. ಕಡೆಗೆ ಅತ್ತೆ ಭಾಗೀರಥಿಯನ್ನು ಕರೆದು ‘ಸಣ್ಣ ಸೊಸೆ ಬಾಗವ್ವ ನೀನರೆ ಜಳಕ ಮಾಡೆ ಎಂದಾಗ –

‘ಸಣ್ಣಸೊಸೆ ಭಾಗೀರಥಿ ಜಳಕ ಮಾಡ್ಯಾಳು’ ಜಳಕವಾದ ಮೇಲೆ ಬಯಲಿನಂತೆ ಬರಡಾಗಿದ್ದ ಕೆರೆಯ ಅಂಗಳದಲ್ಲಿ ಪೂಜಾವಿಧಿ ನಡೆದು ನೈವೇದ್ಯ, ಪ್ರಸಾದ ವಿನಿಮಯ ಎಲ್ಲವೂ ಆಗುತ್ತದೆ. ಊಟವಾದ ಮೇಲೆ ಬಂದಿದ್ದವರೆಲ್ಲ ಪಾತ್ರೆ ಪದಾರ್ಥಗಳನ್ನು ಕಟ್ಟಿಕೊಳ್ಳುವಾಗ, ಒಂದು ಬಂಗಾರದ ಬಟ್ಟಲನ್ನು ಉದ್ದೇಶಪೂರ್ವಕವಾಗಿ ಮರೆತು ಮರಳುವರು. ಸೊಸೆಯಂದಿರಿಗೆ ಅತ್ತೆ ‘ಗಂಗವ್ವ ನೀಹೋಗ, ಗೌರವ್ವ ನೀ ಹೋಗ’ ಎಂದು ಹೇಳಿದಾಗ, ಹಿರಿಯ ಸೊಸೆಯರೆಲ್ಲ ಒಲ್ಲೆ ಎನ್ನುವರು. ಆಗ ಅತ್ತೆ – ‘ಸಣ್ಣ ಸೊಸಿ ಭಾಗೀರಥಿ ನೀ ತರ ಹೋಗವ್ವ’ ಎಂದಾಗ, ‘ಸಣ್ಣಸೊಸಿ ಭಾಗೀರಥಿ ಬಿರಿಬಿರಿ ನಡೆದಾಳು’.

ಬಿರಿಬಿರಿ ಹೋದಾಳು ಬಂಗಾರ ಬಟ್ಲ ತಗೊಂಡಳು ! ಅದನ್ನು ಭಾಗೀರಥಿ ಕೈಲಿ ಹಿಡಿದಂತೆಯೇ ಕೆರೆಗೆ ಹಾರವಾಗುತ್ತಾಳೆ. ಗಂಗೆ ಈ ಮುಗ್ಧ, ನಿಷ್ಠೆಯ ಮಾನಿನಿಯನ್ನು ಮೃದುವಾಗಿ ತನ್ನೊಡಲಿಗೆ ಸೇರಸಿಕೊಳ್ಳುತ್ತಾಳೆ. ಭಾಗೀರಥಿಯ ಸಾವಿಗೆ ಗೀತೆ ಕೊನೆಗೊಳ್ಳುವುದಿಲ್ಲ. ಬದಲಾಗಿ ಮುಂದುವರೆಯುತ್ತದೆ. ಇಷ್ಟೆಲ್ಲ ಆಗುವಾಗ ಭಾಗೀರಥಿಯ ಗಂಡ ಮಾದೇವರಾಯ ಊರಿನಲ್ಲಿರುವುದಿಲ್ಲ. ದೂರದ ದಂಡಿನಲ್ಲಿರುತ್ತಾನೆ. ದಂಡಿನಲ್ಲಿದ್ದವನು ಮಡದಿ ವಿಷಯವಾಗಿ ದುಸ್ವಪ್ನವೊಂದನ್ನು ಕಾಣುತ್ತಾನೆ.

‘ಸೆಲ್ಯ ಸುಟ್ಹಾಂಗಾತು ಕೋಲು ಮುರಿದ್ಹಂಗಾತು’

ಕಟ್ಟಿಸಿದ ಮಹಲೆಲ್ಲ ತಟ್ಟನೆ ಬಿದ್ಹಂಗಾತು’. ಒಡೆನೆಯೇ ಮಾದೇವರಾಯ ಬತ್ತಲೆ ಕುದುರೆ ಹತ್ತಿ ಮನೆಗೆ ಧಾವಿಸಿ ಬರುತ್ತಾನೆ.

ಗ್ರಾಮೀಣ ಸಮಾಜದಲ್ಲಿ ಹೊರಗಿನಿಂದ ಮನೆಗೆ ಬಂದ ಗಂಡನಿಗೆ ಕೈಕಾಲು ತೊಳೆಯಲು ಮಡದಿಯಾದವಳು ನೀರು ತಂದು ಕೊಡುವುದು ಸಂಪ್ರದಾಯ. ಆದರಿಲ್ಲಿ ಅವನ ತಾಯಿ, ಅವನ ಅತ್ತಿಗೆಯರಿಗೆ ನೀರು ಕೊಡುವಂತೆ ಹೇಳುತ್ತಾಳೆ. ಆಗ ಮಾದೇವರಾಯನ ಆತಂಕ ಇಮ್ಮಡಿಸಿ, ಪತ್ನಿ ಎಲ್ಲೆಂದು ಕೇಳುವನು. ತಾಯಿ ತವರಿಗೆ ಹೋಗಿದ್ದಾಳೆ ಎಂದು ಹುಸಿ ನುಡಿವಳು. ಮಾದೇವರಾಯ, ಮಡದಿಯ ಕಾಣಲೇಬೇಕೆಂಬ ತವಕದಿಂದ ಆತುರಾತುರವಾಗಿ ಅತ್ತೆ ಮನೆಗೆ ಬರುವನು. ಅಲ್ಲಿ ಅತ್ತೆ ತನ್ನ ಹಿರಿಯ ಹೆಣ್ಣು ಮಕ್ಕಳಿಗೆ ನೀರು ತಂದು ಕೊಡುವಂತೆ ಹೇಳುವಳು. ಆಗ ಮಾದೇವರಾಯ ನನ್ನ ಸತಿ ಎಲ್ಲಿ ಎಂದು ಕೇಳಿದಾಗ, ಭಾಗೀರಥಿಯ ತಾಯಿ ‘ನಿನ್ನ ಮಡದಿ ಗೆಳತಿ ಮನೆಗೆ ಹೋಗ್ಯಾಳಪ್ಪ’ ಎನ್ನುವಳು. ಸರಿ ಆಗಿಂದಾಗಲೇ ಮಾದೇವರಾಯ ಬತ್ತಲೆಕುದುರಿ ಹತ್ತಿ ಗೆಳತಿ ಮನೆಗೆ ಬಂದು, ಹೆಂಡತಿ ಎಲ್ಲೆಂದು ಕೇಳಿದಾಗ, ಆ ಗೆಳತಿ ಧೈರ್ಯ ತಂದುಕೊಂಡು ಸರಳವಾಗಿ –

‘ನಿನ್ನ ಮಡದಿ ಭಾಗೀರಥಿಯ ಏನು ಹೇಳಲಿ ಸೂರಿ ನಿಮ್ಮಪ್ಪ ನಿಮ್ಮವ್ವ ಕೆರಿಗ್ಹಾರ ಕೊಟ್ಟರಂತ’ – ಎಂದು ನೇರವಾಗಿ ಹೇಳುತ್ತಾಳೆ. ಅದರಿಂದ ಹತಾಶಗೊಂಡ ಮಾದೇವರಾಯ ಅಂತರ್ಮುಖಿಯಾಗುವನು. ಅವನ ಎದೆಯಲ್ಲಿ ನೋವಿನ ದಳ್ಳುರಿ ಧಗಧಗಿಸುತ್ತದೆ. ಒಂದು ಕ್ಷಣ ಅವನಿಗೆ ಏನು ಮಾಡಲೂ ತೋಚುವುದಿಲ್ಲ. ಪತ್ನಿಯ ಸಾವಿಗೆ ಯಾರನ್ನು ದೂರುವುದು, ಏನನ್ನು ಮಾಡುವುದು ಎಂಬುದೇ ತಿಳಿಯದೇ, ವಿರಹದಿಂದ, ಪತ್ನಿಯ ಅಗಲಿಕೆಯಿಂದ ಹುಚ್ಚನಂತಾಗುತ್ತಾನೆ. ಗೀತೆಯ ಅಂತ್ಯ ಹೃದಯ ವಿದ್ರಾವಕವಾದುದು. ಮಾದೇವರಾಯ ಪತ್ನಿಸತ್ತ ಕೆರೆಯ ಬಳಿಗೆ ಧಾವಿಸಿ ಬರುತ್ತಾನೆ. ಅಷ್ಟೊತ್ತಿಗೆ ಅವನ ಮನದ್ರವಿಸಿ ಹೋಗುತ್ತದೆ.

ಸಾವಿರ ವರಹ ಕೊಟ್ಟರು ಸಿಗಲಾರದ ಸತಿ ನೀನು
ಮುನ್ನೂರು ವರಹಾ ಕೊಟ್ಟು ಮುತ್ತಿನೋಲೆ ಮಾಡಿಸಿದ್ದೆ
ಮುತ್ತಿನೊಲೆ ಇಟಗೊಳ್ಳೊ ಮುತ್ತೈದೆ ಎಲ್ಲಿಗ್ಹೋದೆ

ಎಂದು ಪ್ರಲಾಪಿಸುತ್ತಾ, ಜರ್ಝರಿತ ಮನಃಸ್ಥಿತಿಗೆ ಸಿಲುಕಿ ಅಳುತ್ತಳುತ್ತಲೇ ಕೆರೆಗೆ ಹಾರವಾಗುತ್ತಾನೆ. ಗೀತೆಯ ಪ್ರತಿ ದೃಶ್ಯವೂ ಕಣ್ಣಿಗೆ ಕಟ್ಟುವಂತೆ ಕಂಡು, ಓದುಗರ ಮೈ – ಮನವನ್ನು ಅರ್ದ್ರಗೊಳಿಸುತ್ತವೆ. ಸಾಮಾನ್ಯವಾಗಿ ಜನಪದ ಕಥನಗೀತೆಗಳಲ್ಲಿ ಗಂಡಸತ್ತಾಗ ಹೆಂಡತಿ ‘ಸಹಹಮನ’ ಮಾಡುವುದು ಸಂಪ್ರದಾಯ. ಆದರೆ ಹೆಂಡತಿಗಾಗಿ, ಅವಳ ಮೇಲಿನ ಪ್ರೀತಿಗಾಗಿ ತನ್ನನ್ನೇ ತಾನು ಕೊಂದುಕೊಳ್ಳುವ ‘ಪತಿಸಂತತಿ’ ಬಹಳ ವಿರಳವಾದುದು. ಈ ಗೀತೆಯ ಸೊಗಸು ಮಹಾಕೃತಿಯ ಸಾಲಿಗೆ ನಿಲ್ಲುವಂತಹದು. ಭಾಗೀರಥಿಯ ಮನೋಭೂಮಿಕೆ, ಮನೋದಾರ್ಢ್ಯ ದಂಗುಬಡಿಸುತ್ತದೆ. ಮಾದೇವರಾಯನ ಪತ್ನಿ ಪ್ರೇಮ ಸ್ಮರಣೀಯವಾದುದು. ಒಟ್ಟಿನಲ್ಲಿ ‘ಕೆರೆಗೆ ಹಾರ’ ಗೀತೆ ಒಂದು ವಿಶಿಷ್ಟವಾದ ಗೀತೆ ಎಂಬುದರಲ್ಲಿ ಎರಡು ಮಾತಿಲ್ಲ.

– ಕೆ.ಎಸ್.ಬಿ.

ಕೇರಳದ ಅಡುಗೆ ಮನೆಯ ಉಪಕರಣಗಳು ಕೇರಳದ ಪ್ರತಿಯೊಂದು ಜನ ಸಮುದಾಯಕ್ಕೂ ತನ್ನದೇ ಆದ ಅಡುಗೆ ಮನೆಯ ಉಪಕರಣಗಳು ಮತ್ತು ಅಡುಗೆಯ ವಿಧಾನಗಳಿವೆ. ಜನ ಸಮೂಹವು ಊಟದ ರುಚಿ ಭೇದಗಳನ್ನೂ ಉಣ್ಣುವ ಸಂಪ್ರದಾಯವನ್ನು ನಿರ್ಣಯಿಸುತ್ತದೆ. ಆದರೂ ಅಡುಗೆ ಮನೆಯಲ್ಲಿ ಉಪಯೋಗಿಸುವ ಉಪಕರಣಗಳನ್ನು ಸಾಮಾನ್ಯವಾಗಿ ನಾಲ್ಕಾಗಿ ವಿಭಜಿಸಬಹುದು. ೧. ಅಡುಗೆ ತಯಾರಿಗಾಗಿ ಬಳಸುವ ಪಾತ್ರೆಗಳು, ೨.ವಸ್ತುಗಳನ್ನು ಕೆಡದಂತೆ ಇರಿಸಿಕೊಳ್ಳಲು ಮತ್ತು ಅಡುಗೆ ಮನೆಯನ್ನು ಸ್ವಚ್ಛಚಾಗಿ ಇರಿಸಿಕೊಳ್ಳಲು, ಅರೆಯಲು, ಹುಡಿಮಾಡಲು ಮುಂತಾದವುಕ್ಕಾಗಿ ಬಳಸುವ, ಅಡುಗೆ ಮಾಡಲು ಬಳಸದ ಉಪಕರಣಗಳು, ೩.ಊಟ ಬಡಿಸುವ ಉಪಕರಣಗಳು, ೪. ಊಟ ಮಾಡಲು ಉಪಯೋಗಿಸುವ ಬಟ್ಟಲು ಇತ್ಯಾದಿಗಳು.

ಅಡುಗೆ ವಸ್ತುಗಳು: ಕೇರಳೀಯರಿಗೆ ಸಂಬಂಧಿಸಿದಂತೆ ಅಕ್ಕಿ ಮುಖ್ಯ ಆಹಾರವಸ್ತು. ಆದುದರಿಂದಲೇ ಅಡುಗೆ ಪಾತ್ರೆಗಳಲ್ಲಿ ಅಕ್ಕಿ ಬೇಯಿಸುವ ಪಾತ್ರೆಗೆ ಪ್ರಥಮ ಸ್ಥಾನ. ನಮ್ಮ ಪಾತ್ರೆಗಳಲ್ಲಿ ಅತ್ಯಂತ ಪ್ರಾಚೀನ ಎನ್ನಬಹುದಾದ ಮಡಕೆಯನ್ನು ಅಕ್ಕಿ ಬೇಯಿಸುವುದಕ್ಕಾಗಿ ಬಳಸಲಾಗುತ್ತದೆ. ಮಣ್ಣಿನ ಮಡಕೆ ಮತ್ತು ತಾಮ್ರದ ಮಡಕೆ ಎಂದು ಎರಡು ತೆರನ ಮಡಕೆಗಳಿವೆ. ಮಣ್ಣಿನ ಪಾತ್ರೆಯಲ್ಲಿ ಒಂದು ಪ್ರಕಾರದ್ದಾಗಿರುವ ‘ಪಾಂಡಿ’ ಮಡಕೆಯೇ ಇಂದು ಹೆಚ್ಚು ಪ್ರಚಾರದಲ್ಲಿರುವುದು. ಬ್ರಾಹ್ಮಣರು ಮತ್ತು ಇತರ ಜಾತಿಗಳ ಆಢ್ಯರು ಅಕ್ಕಿ ಬೇಯಿಸಲು ತಾಮ್ರದ ಪಾತ್ರೆಯನ್ನು ಬಳಸುತ್ತಾರೆ. ಉಳಿದವರು ಮಣ್ಣಿನ ಪಾತ್ರೆಯಲ್ಲಿ ಅನ್ನ ಮಾಡುತ್ತಾರೆ. ಬ್ರಾಹ್ಮಣರು ಹಾಲು ಕಾಯಿಸುವುದಕ್ಕೆ, ಕಷಾಯ ಇಡುವುದಕ್ಕೆ ಮಾತ್ರ ಮಣ್ಣಿನ ಪಾತ್ರೆಯನ್ನು ಬಳಸುತ್ತಾರೆ. ಅನ್ನ ಬೆಂದಾಗ ಅದನ್ನು ಬಸಿಯಲು ಪ್ರತ್ಯೇಕ ಆಕೃತಿಯಲ್ಲಿ ತಯಾರಿಸಿದ ಗಂಜಿ ಪಾತ್ರೆಯಿದೆ. ಅನ್ನಬೇಯಿಸಿದ ಪಾತ್ರೆಯನ್ನು ಗಂಜಿ ಪಾತ್ರೆಯಲ್ಲಿ ಕವುಚಿ ಇಡಲಾಗುತ್ತದೆ. ನಾಯಿ ಮುಟ್ಟಿದ ಮಡಕೆಯ ಹಾಗೆ, ಕಳ್ಳ ಬೆಕ್ಕು ಮಡಕೆ ಒಡೆದೀತು ಮುಂತಾದ ಮಾತುಗಳಲ್ಲಿ ಮಡಕೆಯ ಸಂಬಂಧ ಇದೆ. ಜನ ಸಮುದಾಯದ ಪ್ರಜ್ಞೆಯಲ್ಲಿ ಮಡಕೆಗಿರುವ ಪ್ರಾಧಾನ್ಯವನ್ನು ಇದು ತೋರಿಸುತ್ತದೆ.

ಪದಾರ್ಥಗಳನ್ನು/ಮೇಲೋಗರಗಳನ್ನು ತಯಾರಿಸಲು ಕಲ್ಲು ತಾಲಿ ಚೀನಾಪಾತ್ರೆ (China day) ಗಳನ್ನು ಬಳಸುತ್ತಾರೆ. ಕಚ್ಚಟ್ಟಿ, ಕಲ್‌ಚಟ್ಟಿ, ಕಲ್ಲು ಮರಿ, ಕಲ್ಲು ಮುರಿ ಮುಂತಾದ ಹಲವು ಹೆಸರುಗಳಿಂದ ಇದನ್ನು ಕರೆಯುತ್ತಾರೆ. ಅಗಲಬಾಯಿಯ ಮತ್ತು ಹೆಚ್ಚು ಆಳವಿಲ್ಲದ ಮಣ್ಣಿನ ಪಾತ್ರೆಗಳನ್ನೂ ಬಳಸುತ್ತಾರೆ. ಮೀನು ಪದಾರ್ಥವನ್ನು ಸಾಮಾನ್ಯವಾಗಿ ಮಣ್ಣಿನ ಪಾತ್ರೆಯಲ್ಲಿಯೇ ತಯಾರಿಸುತ್ತಾರೆ. ಪಾತ್ರೆಗಳನ್ನು ಮುಚ್ಚಲು ಮುಚ್ಚು ಪಾತ್ರೆಗಳು (ಅಡಪ್ಪನ್, ಅಡಪ್ಪ್, ಮೂಡಿ, ತಟ್ಟ್) ಇವೆ. ಕಂಚಿನ ಮತ್ತು ತಾಮ್ರದ ಉರುಳಿಗಳಿಗೆ ಅಡುಗೆ ಮನೆಯಲ್ಲಿ ಗೌರವದ ಸ್ಥಾನವಿದೆ. ಬಾಯಿಯು ಒಳಗೆ ಮಡಚಲ್ಪಟ್ಟದರಿಂದ ಉರುಳಿ ಎಂಬ ಹೆಸರು. ಉರುಳಿಗೆ ‘ಕಿವಿ’ಯಿಲ್ಲ. ಪಾಯಸ ಬೇಯಿಸುವುದಕ್ಕೂ ಹಲಸಿನ ಕಾಯಿ ಹುರಿಯುವುದಕ್ಕೂ ಸಕ್ಕರೆ ಪ್ಪೊರಟ್ಟಿ ಕಾಯಿಸುವುದಕ್ಕೂ ಉರುಳಿಯನ್ನು ಬಳಸುವುದಿದೆ. ಹುರಿಯುವುದಕ್ಕೂ ಮಕ್ಕಳಿಗೆ ಮಣ್ಣಿ ತಯಾರಿಸುವುದಕ್ಕೂ ಬಾಲ ಇರುವ ಉರುಳಿಯನ್ನು ಉಪಯೋಗಿಸುತ್ತಾರೆ. ಅಡಿಯಲ್ಲಿ ಮೂರೋ ನಾಲ್ಕೋ ಆಣಿಗಳು (ಮೊಲೆ, ಮೊಳೆ) ಇರುವುದರಿಂದ ಉರುಳಿ ನೆಲದಲ್ಲಿ ಗಟ್ಟಿಯಾಗಿ ಕುಳಿತು ಬಿಡುತ್ತದೆ. ಉರುಳಿ ಒಡೆಯಬಾರದೆಂಬ ನಂಬುಗೆಯಿದೆ. ಹಾಗೆ ಒಡೆದರೆ ಒಳಗಿಂದಲೇ ಒಡೆದೀತು ಎಂಬುದು ಪ್ರಮಾಣ. ಆದರೆ ಒಡೆದ ಉರುಳಿಯನ್ನು ತೊಂಬತ್ತು ಗಳಿಗೆಯ ಒಳಗೇನೇ ಹಿಂದಿನಂತೆ ದುರಸ್ತಿ ಮಾಡಿದರೆ ದೋಷ ಬಾಧಿಸದು ಎಂಬ ಪ್ರಾಯಶ್ಚಿತ್ತವೂ ಇದೆ. ಒಡೆದ ಉರುಳಿಯನ್ನು ಉಪಯೋಗಿಸಬಾರದು. ಆದುದರಿಂದಲೇ ಒಡೆದ ಉರುಳಿಯನ್ನು ಅಡವಿಟ್ಟ ಹಾಗೆ ಎಂಬ ಮಾತು ಬಂದಿರುವುದು. ಒಡೆದ ಉರುಳಿಯನ್ನು ಅಡವು ತೆಗೆದುಕೊಂಡರೆ ಹಣ ಪಡೆದಾತ ಮತ್ತೆ ಆದಾರಿಯಾಗಿ ಬರಲಾರ ಎಂಬುದು ಈ ಗಾದೆಯ ಸಾರ.

ಹಪ್ಪಳ ಕಾಯಿಸಲು ಮತ್ತು ಪಲ್ಯ/ಸಕ್ಕರೆ ಪೊರಟ್ಟಿ ಹುರಿಯಲು ಬಾಣಲೆಯನ್ನು ಬಳಸುತ್ತಾರೆ. ಸಾಧಾರಣ ಬಾಣಲೆಯನ್ನು ಕಬ್ಬಿಣದಿಂದ ತಯಾರಿಸಲಾಗುವುದಾದರೂ ಆಢ್ಯರು ಓಡಿನಿಂದ (ಕಂಚು ಹಿತ್ತಾಳೆ ತಾಮ್ರದ ಮಿಶ್ರಣ) ತಯಾರಿಸಿದ ಬಾಣಲೆಗಳನ್ನು ಉಪಯೋಗಿಸುತ್ತಾರೆ. ಸಣ್ಣ ಹಪ್ಪಳ ಕಾಯಿಸುವುದಕ್ಕೂ ಸಾಸಿವೆ ಹುರಿಯುವುದಕ್ಕೂ ಗುಳಿಸಟ್ಟುಗುವನ್ನೋ ಬಾಲಪಾತ್ರೆಯನ್ನೋ ಬಳಸುತ್ತಾರೆ.

ಇಂದಿನ ಚಮಚದ ಸ್ಥಾನದಲ್ಲಿ ಹಿಂದೆ ಮರ ಹಲಸಿನ ಎಲೆಯನ್ನು ಉಪಯೋಗಿಸುತ್ತಿದ್ದರು. ಹಲಸಿನ ಬೇರನ್ನು ಅದರ ಎಲೆಯ ಆಕಾರದಲ್ಲಿ ರೂಪಿಸಿಕೊಂಡಿದ್ದರು. ಅದೇ ಮರ ಹಲಸಿನ ಎಲೆ. ಮರದಿಂದ ಸಣ್ಣ ಸೌಟುಗಳನ್ನು ತಯಾರಿಸುತ್ತಿದ್ದರು. ಕಲ್ಲು ತಾಲಿಯ ಪದಾರ್ಥವನ್ನು ಕದಡಲು ಮರದ ಸೌಟುಗಳನ್ನು ಬಳಸುತ್ತಿದ್ದರು. ಅನ್ನ, ಪಲ್ಯ ಮುಂತಾದುವನ್ನು ಒಲೆಯಲ್ಲಿಟ್ಟು ಕದಡಲು ಮತ್ತು ಬಡಿಸಲು ಸಟ್ಟುಗವನ್ನು ಉಪಯೋಗಿಸುತ್ತಾರೆ. ಕಬ್ಬಿಣದ ಸಟ್ಟುಗ ಮತ್ತು ಕಂಚು ಸಟ್ಟುಗಗಳು ಬಳಕೆಯಲ್ಲಿದ್ದುವು. ಕರಚುವ ವಸ್ತುಗಳನ್ನು ಕದಡುವುದು ಮಗುಚುವುದು ಕಬ್ಬಿಣದ ಸಟ್ಟುಗಳಿಂದ. ಕಂಚಿನ ಸಟ್ಟುಗವನ್ನು ಬಳಸಬಹುದು. ಒಂದೊಂಸು ಕೆಲಸಕ್ಕೂ ಒಬ್ಬೊಬ್ಬರಿದ್ದಾರೆ ಎನ್ನುವ ಅರ್ಥದಲ್ಲಿ ಕರಚುವುದನ್ನು ಕದಡಲು/ಮಗುವಲು ಕಬ್ಬಿಣದ ಸಟ್ಟುಗವೇ ಬೇಕು ಎಂಬ ಗಾದೆಯನ್ನು ಹೇಳುವುದುಂಟು. ನಿತ್ಯೋಪಯೋಗಕ್ಕಾಗಿ ಬ್ರಾಹ್ಮಣರ ಮನೆಗಳಲ್ಲಿ ಗೆರಟೆಯ ಸೌಟನ್ನು ಉಪಯೋಗಿಸುತ್ತಿರಲಿಲ್ಲ.ವಿಶೇಷ ದಿನಗಳಲ್ಲಿ ಗೆರಟೆಯ ಸೌಟುಗಳನ್ನು ತಯಾರಿಸುವಂತೆ ಹೇಳುತ್ತಿದ್ದರು. ಅಂದಿನ ದಿನದ ಉಪಯೋಗದ ಬಳಿಕ ಅದನ್ನು ಮೂಲೆ ಗುಂಪಾಗಿಸುತ್ತಿದ್ದರು. ಬಡಗಿ ಕೆಲಸವನ್ನು ಅಭ್ಯಾಸ ಮಾಡುವ ಹುಡುಗರು, ಮುದುಕರಾದ ಬಡಗಿಗಳು ಗೆರಟೆ ಸೌಟನ್ನು ತಯಾರಿಸುತ್ತಿದ್ದರು. ಬಡಗಿಯು ತನ್ನ ವೃತ್ತಿಯನ್ನು ಆರಂಭಿಸುವುದು ಮತ್ತು ಮುಗಿಸುವುದು ಗೆರಟೆಯ ಸೌಟನ್ನು ತಯಾರಿಸುವ ಮೂಲಕ – ಎಂಬ ಮಾತೊಂದಿದೆ. ಸೌಟು ತಯಾರಿ ಎಂಬರ್ಥದಲ್ಲಿ ‘ಕೈಲ್ ಕುತ್ತುಗ’ ಎಂಬ ಮಾತು ಮಲಯಾಳಂನಲ್ಲಿ ಪ್ರಚಾರದಲ್ಲಿದೆ. ಬೇರೆ ಕೆಲಸ ಏನು ಮಾಡುವುದಕ್ಕೆ ಇಲ್ಲವಾಗದಷ್ಟೆ ‘ಕೈಲ್ ಕುತ್ತುವುದು’. ತಿಂಡಿ ತಯಾರಿಸುವುದಕ್ಕೆ ಬೇರೆಯೇ ತೆರನಾದ ಪಾತ್ರೆಗಳಿವೆ. ದೋಸೆ ಮಾಡಲು, ಕಾವಲಿ ಇಡ್ಡಲಿ ಮಾಡಲು ಅಟ್ಟಿನ ಪಾತ್ರೆ ರೂಢಿಯಲ್ಲಿದೆ, ‘ಪುಟ್ಟ್’ ಕೇರಳದ ವಿಶಿಷ್ಟ ತಿಂಡಿ. ಕೇರಳದ್ದೇ ಆದರೂ ಬ್ರಾಹ್ಮಣರು ಆ ತಿಂಡಿಯನ್ನು ದೂರವೇ ಇಟ್ಟಿದ್ದರು. ಪುಟ್ಟು ತಯಾರಿಸುವ ಅಂಡೆಯನ್ನು ಬಿದಿರಿನಿಂದ ತಯಾರಿಸುತ್ತಿದ್ದರು. ಆದರೆ ಈ ಲೋಹದಿಂದ ತಯಾರಾದುವನ್ನು ಉಪಯೋಗಿಸುತ್ತಾರೆ. ‘ಅಕ್ಕಿ ಪುಳ್ಳಿ ನಾಯರ್ ಮತ್ತು ತೆಂಗಿನಕಾಯಿ ಪುಳ್ಳಿ ನಾಯಕರು ಬಿದಿರುಪುಳ್ಳಿನಾಯರರ ಮನೆಗೆ ಅತಿಥಿಗಳಾಗಿ ಹೋದರು. ಕೋಲು ಪುಳ್ಳಿನಾಯರ್ ಅವರನ್ನು ದೂಡಿ ಹೊರಹಾಕಿದ ಎಂಬ ಒಂದು ಒಗಟು ಪುಟ್ಟು ಬೇಯಿಸುವುದರ ಹಿನ್ನೆಲೆಯಲ್ಲಿ ಹುಟ್ಟು ಕೊಂಡಿದೆ. ಉಣ್ಣಿಯಪ್ಪಂ (ಸಣ್ಣ ‘ಅಪ್ಪ’ ಎಂಬ ತಿನಿಸು ಮತ್ತು ನೈಯಪ್ಪಂ (ತುಪ್ಪದಲ್ಲಿ ಮಾಡಿದ ಅಪ್ಪಂ) ಮಾಡುವುದಕ್ಕೆ ಪ್ರತ್ಯೇಕ ‘ಕಾರೆ’ಗಳಿವೆ. ಮುಸ್ಲಿಂ ಮನೆಗಳಲ್ಲಿ ಪತ್ತಿರಿ (ರೊಟ್ಟಿ) ಹೆಂಚು ಇರುತ್ತದೆ. ಶ್ಯಾವಿಗೆ ಮಣೆಯಲ್ಲಿ ಶ್ಯಾವಿಗೆ ತಯಾರಿಸಿಕೊಂಡು ಹಲವು ವಿಧದ ತಿಂಡಿಗಳನ್ನು ತಯಾರಿಸುವುದು ಇಂದು ಸುಪರಿಚಿತವಾಗಿದೆ. ಪಾತ್ರೆಯ ಕೆಳಗಿನಿಂದ ಬೆಂಕಿಯ ಶಾಖ ನೀಡುವುದರ ಬದಲು ಅದರ ಮೇಲಿನಿಂದ, ಬೆಂಕಿ ಹಾಕಿ ತಯಾರಿಸುವ ಮಲಬಾರಿನ ವಿಶೇಷ ತಿಂಡಿ – ಕಲ್ತಪ್ಪಂ (ಕೆಂಡದಲ್ಲಿ ಬೇಯಿಸುವ ದೊಡ್ಡ / ದಪ್ಪದ ದೋಸೆ). ಅದಕ್ಕೆ ಉರುಳಿ ಇಲ್ಲವೆ ಹೆಂಚನ್ನು ಬಳಸಲಾಗುತ್ತದೆ. ಸಾಮಗ್ರಿಗಳು, ಅಡುಗೆಯ ರೀತಿ, ಅದಕ್ಕೆ ಬಳಸುವ ಪಾತ್ರೆಗಳು ಇನ್ನೂ ತುಂಬ ಇರಬಹುದು. ಪ್ರತೀ ಜನಸಮುದಾಯದಲ್ಲೂ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಅದನ್ನು ಕಂಡುಕೊಳ್ಳಬಹುದು.

ಅಡುಗೆಗೆ ಸಂಬಂಧಿಸಿದ ಇತರ ಉಪಕರಣಗಳು: ಅಡುಗೆ ಮನೆಯ ಶುಚೀಕರಣಕ್ಕೆ ಅಡುಗೆಗೆ ಪೂರಕವಾದ ಇತರ ಕೆಲಸಗಳಿವೆ, ವಸ್ತುಗಳನ್ನು ತೆಗೆದಿರಿಸಿಕೊಳ್ಳುವ / ಕೆಂಡದಂತೆ ಇರಿಸಿಕೊಳ್ಳಲು ಬೇಕಾಗುವ ಉಪಕರಣಗಳನ್ನು ಈ ವಿಭಾಗಕ್ಕೆ ಸೇರಿಸಬಹುದಾಗಿದೆ. ಅಡುಗೆ ಮನೆ ಮತ್ತು ಪರಿಸರವನ್ನು ಶುಚಿಯಾಗಿರಿಸಿಕೊಳ್ಳುವುದಕ್ಕಾಗಿ ಹಿಡಿಸೂಡಿಯನ್ನು ಉಪಯೋಗಿಸುತ್ತಾರೆ. ತೆಂಗು ಧಾರಳವಾಗಿ ಬೆಳೆಯುವ ಕೇರಳದಲ್ಲಿ ತೆಂಗಿನ ಗರಿಯ ಕಡ್ಡಿಯಿಂದ ಹಿಡಿಸೂಡಿಗಳನ್ನು ತಯಾರಿಸುತ್ತಾರೆ. ಹೊರಗಿನ ನೆಲವನ್ನು ಶುಚಿಗೊಳಿಸಲು ತೆಂಗಿನಗರಿಯ ಕಡ್ಡಿಯ ಹಿಡಿಸೂಡಿಗಳು ಸಾಕು. ಇನ್ನೂ ಒಂದಿಷ್ಟು ನಯವಾದ ನೆಲವಾದರೆ ಕಂಗಿನ ಸೋಗೆಯ ಪಟ್ಟಿಗಳಿಂದ ತಯಾರಿಸಿದ ಹಿಡಿಸೂಡಿಯನ್ನು ಬಳಸಬಹುದು. ಕಂಗಿನ ಹಿಡಿಸೂಡಿಯಿಂದ ಮನೆಯೊಳಗೆ ಗುಡಿಸಬಾರದೆಂಬ ನಂಬಿಕೆಯವರಿದ್ದಾರೆ. ಮನೆಯೊಳಗಿನ ಶುಚೀಕರಣವನ್ನು ಮಾಡುವವರು ಸಾಮಾನ್ಯವಾಗಿ ಸ್ತ್ರೀಯರು ವಯಸ್ಸಾದ ಹೆಂಗಸರಿದ್ದರೆ ಆ ಕೆಲಸವನ್ನು ಅವರು ವಹಿಸಿಕೊಳ್ಳುತ್ತಾರೆ. ಆಚೆಗಿನ ಮುದುಕಿಯೂ ಈಚೆಗಿನ ಮೂಲೆಯಲ್ಲಿ ಕುಳಿತಿದ್ದಾರೆ.

‘ಒಬ್ಬಾಕೆ ಅಮ್ಮ ಬೆಳಗಾದರೆ ಸಾಕು ಮನೆಯ ಸುತ್ತ ಸುತ್ತುತ್ತ ನಡೆಯುತ್ತಾಳೆ. ಬಳಿಕ ಹೋಗಿ ಮೂಲೆಯಲ್ಲಿ ಕುಳಿತುಕೊಳ್ಳುತ್ತಾಳೆ’ ಎಂಬ ಒಗಟುಗಳು ಮನೆಯ ಸುತ್ತಲೂ ನಡೆದು ಅಂಗಳ ಗುಡಿಸುವ ಮುದುಕಿಯ ಚಿತ್ರವನ್ನು ಕೊಡುತ್ತದೆ. ಮುದುಕಿ ಕುಳಿತುಕೊಳ್ಳುವುದೂ ಹಿಡಿಸೂಡಿ ಇಡುವುದೂ ಮೂಲೆಯಲ್ಲಿ. ಹಿಡಿಸೂಡಿಯ ಉಪಯೋಗ ಮಾತ್ರವಲ್ಲ ಅದರ ಸ್ಥಾನ ಕೂಡ ಈ ಜನ ಸಮುದಾಯದಿಂದ ನಿಶ್ಚೈಸಲ್ಪಟ್ಟಿದೆ. ಅನೇಕ ಹಿಡಿಕಡ್ಡಿಗಳನ್ನು ಒಂದು ಕಟ್ಟಿನ ಮೂಲಕ ಬಿಗಿಯುವ ವಿದ್ಯೆ ಮಕ್ಕಳನ್ನು ಕುತೂಹಲವನ್ನು ಕೆರಳಿಸದೆ ಬಿಡದು.

‘ಸಾವಿರ ಪೋಲೀಸರಿಗೆ ಒಂದೇ ಬೆಲ್ಟ್’

‘ಸಾವಿರ ಮಕ್ಕಳಿಗೆ ಒಂದೇ ಉಡಿದಾರ’ ಮುಂತಾದ ಒಗಟುಗಳು ಹಿಡಿಸೂಡಿಯನ್ನು ನಿರ್ದೇಶಿಸುವಂಥವು. ಹೆಂಗಸರ ಆಯುಧವಾಗಿ ಹಾಸ್ಯಕಥೆಗಳು ಮಲಯಾಳದಲ್ಲಿ ಇವೆ. ‘ಥತ್ ಹಿಡಿಸೂಡಿ’ ಎಂದು ತುಚ್ಛೀಕರಿಸುವ ಒಂದು ಮಾತು ಕೂಡ ಮಲಯಾಳದಲ್ಲಿದೆ.

ಬೂದಿ ಬಾಚಿ ಒಲೆಯನ್ನು ಶುಚಿಗೊಳಿಸಿದ ಬಳಿಕವೇ ಸ್ತ್ರೀಯರು ಅಡುಗೆ ಇತರ ಕೆಲಸಗಳನ್ನು ಮಾಡುತ್ತಾರೆ. ಹಿಂದಿನ ದಿನದ ಬೂದಿ ಬಾಚದೆ ಇತರ ಕೆಲಸಗಳನ್ನು ಮಾಡುವುದು ಭಾಗ್ಯದಾಯಕವಲ್ಲ ಎಂದು ಕ್ರಿಶ್ಚಯನ್ನರೂ ನಂಬುತ್ತಾರೆ. ಒಲೆಗೆ ಪ್ರತಿದಿನ ಸೆಗಣಿ ನೀರು ಚಿಮುಕಿಸಿ ಶುಚಿ ಮಾಡುವ ಕ್ರಮ ಹಿಂದೂಗಳಲ್ಲಿ ಮಾತ್ರ ಇದೆ. ಮುಸ್ಲಿಂಮರು ಸೆಗಣಿಯನ್ನು ಅಶುದ್ಧವೆಂದು ತಿಳಿಯುತ್ತಾರೆ. ಹಿಂದೂ ಕ್ರೈಸ್ತ ಸಮುದಾಯಗಳು ಒಲೆಯು ಬೆಸಸಂಖ್ಯೆಯಲ್ಲಿರಬೇಕೆಂದು ನಂಬುತ್ತಾರೆ. ಆದರೆ ಮುಸ್ಲಿಮರಲ್ಲಿ ಇದು ಸಮಸಂಖ್ಯೆಯಲ್ಲಿರಬೇಕೆಂದು ನಂಬುತ್ತಾರೆ. ಅಡುಗೆ ಮನೆಯ ಮೂಡು ಅಥವಾ ಬಡಗು ಭಾಗದಲ್ಲಿ ಒಲೆಗಳನ್ನು ಮಾಡುತ್ತಾರೆ. ಮನೆಯ ಒಲೆಯ ಮೇಲೆ ಕುಳಿತರೆ ಸಾಲ ಹೆಚ್ಚುತ್ತದೆ ಎಂದು ನಂಬುಗೆಯಿದೆ. ಒಳೆ ಆಹಾರಗಳನ್ನು ತಯಾರಿಸಲು ಇರುವ ಒಂದು ಅಂಗ ಮಾತ್ರವಲ್ಲ, ಅದರ ಸುತ್ತ ಮೇಲೆ ಸೂಚಿಸಿದಂತೆ ಅನೇಕ ವಿಶ್ವಾಸಗಳೂ ಅನೇಕ ಜನಪದ ಮಾತುಗಳೂ ಇವೆ. ಉದಾ:

ಒಬ್ಬಾಕೆ ಅಮ್ಮ ಎಂದೂ ಬೇಯುತ್ತ ಸುಡುತ್ತ (ಇರುತ್ತಾಳೆ).

ಒಬ್ಬ ಅಮ್ಮನಿಗೆ ಮೊಲೆಗಳು ಮೂರು

ಒಬ್ಬ ಮುದುಕಿ ಕೂದಲನ್ನು ಮೂರು ಗಂಟಾಗಿ ಕಟ್ಟಿಕೊಂಡಿದ್ದಾಳೆ

ಒಬ್ಬಾತನನ್ನು ಆಧರಿಸಲು ಮೂರು ಮಂದಿ – ಈ ಮುಂತಾದ ಒಗಟುಗಳಿಗೆ ಉತ್ತರ ‘ಒಲೆ’ ಒಲೆಯನ್ನು ಹಾಕುವಾಗ ಮೂರು ಕಲ್ಲುಗಳನ್ನು ಉಪಯೋಗಿಸಬೇಕೆಂದು ನಿರ್ದೇಶಿಸುವ ಒಂದು ಜನಪದ ರೂಪ ಇದು.

ಒಲೆಯ ಬೂದಿಯನ್ನು ಒಂದು ಶುದ್ಧವಾದ ವಸ್ತುವೆಂದೇ ಸಾಮಾನ್ಯವಾಗಿ ಕೇರಳೀಯರು ನಂಬುತ್ತಾರೆ. ಪಾತ್ರೆಗಳನ್ನು ಬೆಳಗುವುದಕ್ಕೆ ಬೂದಿಯನ್ನು ಉಪಯೋಗಿಸುತ್ತಾರೆ. ಹಿಂದೆ ಬಟ್ಟೆ ಒಗೆಯುವ ಕ್ಷಾರದ ಸ್ಥಾನದಲ್ಲಿ ಕಾರಬೂದಿಯನ್ನು ಬಳಸುತ್ತಿದ್ದರು. ಪಾತ್ರೆಗಳನ್ನು ಬೆಳಗುವುದಕ್ಕೆ ಉಮಿಯನ್ನು ಉಪಯೋಗಿಸುತ್ತಿದ್ದರು. ಬಾವಿಗೆ ಸೇರಿದಂತಿರುವ ಸಪಾಟುನೆಲದಲ್ಲಿ ಪಾತ್ರೆಗಳನ್ನು ತೊಳೆಯುವುದು ರೂಢಿ. ಕ್ರಿಶ್ಚಿಯನ್ ಸಮೂಹಗಳಲ್ಲಿ ಇದು ರೂಢಿಯಿಲ್ಲ. ಚೆಂಬಿಟ್ಟ (ಚೆಂಬು ಪೆಟ್ಟಿಗೆ) ಎಂಬ ದೊಡ್ಡ ಪಾತ್ರೆಯಲ್ಲಿ ಸಣ್ಣ ಪಾತ್ರೆಗಳನ್ನು ತೊಳೆಯುತ್ತಿದ್ದರು. ಅಡುಗೆಗೆ ಹೊರತು ಉಳಿದ ಅಗತ್ಯಗಳಿಗೆ ಬೇಕಾದ ನೀರನ್ನೂ ಚೆಂಬಿಟ್ಟಿಯಲ್ಲೇ ಸಂಗ್ರಹಿಸುತ್ತಿದ್ದರು. ಕೂಟ್ಟಗಂ ಎಂಬ ದೊಡ್ಡ ತಾಮ್ರದ ದೊಡ್ಡ ಆಳವಾಗಿದ್ದು ಆ ಪಾತ್ರೆಯಲ್ಲಿ ಕೆಲವೆಡೆ ನೀರನ್ನು ಸಂಗ್ರಹಿಸುತ್ತಿದ್ದರು. ಕಲ್ಲಿನ ಮರಿಗೆಗಳೂ ಅಪೂರ್ವವಾಗಿ ಇದ್ದುವು. ಅಡುಗೆಗೆ ಅಗತ್ಯವಾದ ನೀರನ್ನು ತಾಮ್ರದ ಮಡಕೆಯಲ್ಲಿ ಸಂಗ್ರಹಿಸಿಡುತ್ತಿದ್ದರು.

ಹಲವು ವ್ಯಂಜನಗಳನ್ನು ಶೇಖರಿಸಿ ಇಡುವ ಪಾತ್ರೆಗಳು ಅಡುಗೆಗೆ ಸಂಬಂಧಿಸಿದ ವಿಭಾಗದಲ್ಲಿ ಬರುವ ಇತರ ಪಾತ್ರೆಗಳು. ಸಣ್ಣ ಕಲ್ಲು ಕುಡುಕೆಗಳು, ಭರಣಿಗಳು ಈ ಅಗತ್ಯಕ್ಕೆ ಬಳಕೆಯಾಗುತ್ತಿದ್ದವು. ಆಹಾರ ಪದಾರ್ಥಗಳು ಹಾಳಾಗದಂತೆ ತೆಗೆದಿರಿಸಲು ಭರಣಿಗಳನ್ನು ಬಳಸುತ್ತಿದ್ದರು. ಉಪ್ಪಿನಲ್ಲಿ ಹಾಕಿದ ವಸ್ತುಗಳು, ಎಣ್ಣೆ, ಸಕ್ಕರೆ, ಬೆಲ್ಲ ಮುಂತಾದ ಆಹಾರ ಪದಾರ್ಥಗಳನ್ನು ಭರಣಿಗಳಲ್ಲಿ ತೆಗೆದಿರಿಸುತ್ತಿದ್ದರು. ಕೋಣನ ಕೊಂಬಿನಲ್ಲಿ ಎಣ್ಣೆಯನ್ನು ಹಾಕಿ ಇರಿಸಿಕೊಳ್ಳುವ ರೂಢಿ ಕೆಲವು ಸಮುದಾಯಗಳಲ್ಲಿವೆ. ಬುಟ್ಟಿ, ಹೆಡಿಗೆ ಮುಂತಾದುವನ್ನೂ ಅಡುಗೆ ಸಾಮಗ್ರಿಗಳನ್ನು ತೆಗೆದಿರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದರು. ಡಬ್ಬಿಯ ಪಾಟೆ (Mug)ಗಳು, ಬಾಟ್ಲಿಗಳು, ಮರದ ಕುಡಿಕೆಗಳು, ಮಡಕೆಗಳು ಮುಂತಾದವೂ ಈ ವಿಭಾಗದಲ್ಲಿ ಸೇರುವಂಥವು. ತೆಂಗಿನ ಗೆರಟೆಯ ಕುಡಿಕೆಗಳು, ಸೋರೆಬುರುಡೆಗಳು, ಬಿದಿರಿನ ಅಂಡೆಗಳು ಮುಂತಾದುವು ವಸ್ತುಗಳನ್ನು ತೂಗಾಡಿಸಿ ಕೊಳ್ಳಲು ಉಪಯೋಗವಾಗುತ್ತಿದ್ದುವು. ಕಂಗಿನ ಸೋಗೆಯ ಹಾಳೆಯನ್ನು ಕುಡಿಕೆಯಾಕಾರಕ್ಕೆ/ ಪಾತ್ರೆಯಾಕಾರಕ್ಕೆ ಸುತ್ತಿ ಗೆರಟೆಯನ್ನು ಮುಚ್ಚಳವಾಗಿರಿಸಿ ಕೊಳ್ಳುವುದೂ ರೂಢಿಯಿತ್ತು. ತೂಗಾಡಿಸಿದ ಇಂತಹ ಹಾಳೆಗಳಲ್ಲಿ ಮೊಸರನ್ನು ಹಾಕಿಡುತ್ತಿದ್ದರು. ಪತ್ತಾಯ (ಮರದ ಕಣಜ), ಕೈಪೆಟ್ಟಿಗೆ, ಮಂಜ ಇತ್ಯಾದಿಗಳಲ್ಲಿ ಧಾನ್ಯಗಳನ್ನು ತೆಗೆದಿರಿಸಲಾಗುತ್ತಿತ್ತು. ಕ್ರಿಶ್ಚಿಯನ್ನರಲ್ಲಿ ಅಕ್ಕಿಯ ಪೆಟ್ಟಿಗೆಗೆ ತುಂಬ ಪ್ರಾಧಾನ್ಯವಿದೆ. ಹೆರಿಗೆಯಾಗಿ ಗಂಡನ ಮನೆಗೆ ಹೋಗುವಾಗ ಅವಳಿಗೆ ಅಕ್ಕಿಯ ಪೆಟ್ಟಿಗೆಯನ್ನು ಕೊಟ್ಟು ಕಳುಹಿಸುವ ಕ್ರಮ ಕ್ರಿಶ್ಚಿಯನ್ ಸಮುದಾಯದಲ್ಲಿದೆ. ವಸ್ತುಗಳನ್ನು ಭದ್ರವಾಗಿ ಜೋಪಾನ ಮಾಡುವುದಕ್ಕೆ ಎಲ್ಲ ಸಮುದಾಯಗಳಲ್ಲೂ ಸಿಕ್ಕಗಳನ್ನು ಬಳಸಿಕೊಳ್ಳುವ ಕ್ರಮವಿದೆ. ಹಲವು ಅಂತಸ್ತುಗಳುಳ್ಳ ಸಿಕ್ಕಗಳೂ ಇವೆ. ‘ಒರೆರೇಲ್ ಅರುಲ್ ಉರಿಲ್ ಉರುಳೀಲ್ ಉರಿ ನೆಯ್ಯ’ (ಮ) ಎಂಬ ಪ್ರಯೋಗವು ತುಂಬ ಜೋಪಾನವಾಗಿ ತೆಗೆದಿರಿಸಿದ ವಸ್ತುವನ್ನು ಸೂಚಿಸುತ್ತಿದೆ. ‘ಕಂಡದ್ದನ್ನು ಹೇಳಿದರೆ ಸಿಕ್ಕವೂ ನಕ್ಕೀತು’ ಎಂಬ ಮಾತು ಮಲಯಾಳದಲ್ಲಿ ತುಂಬ ಪ್ರಚಾರದಲ್ಲಿದೆ. ಯಾವುದೇ ಕೆಲಸವನ್ನು ಮಾಡದೆ ಸುಮ್ಮನೆ ಕುಳಿತು ಬಿಡುವವನನ್ನು ತಮಾಷೆ ಮಾಡಲು ‘ಅರಸಿನವನ್ನು ಸಿಕ್ಕದಲ್ಲಿಟ್ಟ ಹಾಗೆ’ ಎಂಬ ಮಾತೂ ರೂಢಿಯಲ್ಲಿದೆ. ಸಿಕ್ಕವು ತನ್ನಷ್ಟಕ್ಕೆ ಆಡತೊಡಗಿದರೆ ಅಥವಾ ಅದರಲ್ಲಿ ಯಾರಾದರೂ ನೇತಾಡಿದರು ಹಸುವು ಸತ್ತು ಹೋಗುತ್ತದೆ ಎಂದು ಹಳಬರು ನಂಬುತ್ತಾರೆ.

ಅರೆಯುವುದು, ಹುಡಿ ಮಾಡುವುದು, ಗೇರುವುದು, ತುರಿಯುವುದು ಮುಂತಾದ ಕೆಲಸಗಳು ಅಡುಗೆಗೆ ಪೂರಕವಾಗಿದೆ. ಇವಕ್ಕೆಲ್ಲ ಅನುಯೋಜ್ಯವಾದ ಉಪಕರಣಗಳನ್ನು ನಮ್ಮ ಅಡುಗೆಮನೆಯಲ್ಲಿ ಕಾಣಬಹುದು. ತೆಂಗಿನ ಕಾಯಿ ತುರಿಯುವುದಕ್ಕೆ ತುರಿಮಣೆ (ಚಿರವನು) ಇದೆ. ಇದು ಎರಡು ವಿಧ. ಕೈ ತುರುಮಣೆ, ನೆಲದಲ್ಲಿಟ್ಟು ತುರಿಯುವ ಮಣೆ. ತುರಿಮಣೆಯಲ್ಲಿ ತೆಂಗಿನ ಕಾಯಿ ತುರಿಯುವ ಕಬ್ಬಿಣದ ಭಾಗವನ್ನು ನಾಲಗೆ ಎಂದು ಕರೆಯುತ್ತಾರೆ. ಐದೋ ಆರೋ ನಾಲಗೆಯಿರುವ ತಿರುಗುವ ತುರಿಮಣೆ ಅನಂತರ ಬಂದುದು. ‘ಎಲೆಗಳೇ ಇಲ್ಲದ ಮರದಿಂದ ಹೂ ಉದುರುತ್ತದೆ’ ಎಂಬ ಒಗಟು ತೆಂಗಿನಕಾಯಿ ತುರಿಯುವ ಕ್ರಿಯೆಯನ್ನು ಬಾಲಭಾವನೆಯಿಂದ ಚಿತ್ರಿಸುತ್ತದೆ. ‘ಆಚೆಗಿನ ನಾಯಿಗೆ ಬಾಲ ಮುಂದೆ’ಯನ್ನು ಒಗಟುಕೂಡ ತುರಿಮಣೆಯನ್ನು ಸೂಚಿಸುವಂಥದು. ತುರಿಮಣೆಯನ್ನು ಮೂಡುದಿಕ್ಕಿಗೆ ಮುಖವಾಗಿಸಿಟ್ಟರೆ ದೈವಕೋಪ ಉಂಟಾಗುತ್ತದೆ ಎಂಬುದು ನಂಬುಗೆ.

ತೆಂಗಿನಕಾಯಿ, ಅರಿಸಿನ, ಮೆಣಸು, ಅಕ್ಕಿ – ಮುಂತಾದವನ್ನು ಅರೆಯುವುದಕ್ಕೆ ‘ಅಮ್ಮಿ’ ಎಂಬ ಅರೆಗಲ್ಲನ್ನು ಬಳಸುತ್ತಾರೆ. ಅವುಗಳಲ್ಲಿ ಆಟ್ಟಂಕಲ್ಲ್(ಮ), ತಿರಿಕಲ್ಲ್(ಮ) ಎಂಬಿವು ನಾನಾ ರೀತಿಯವು. ಅಕ್ಕಿ ಅರೆಯುವುದು, ಆಟ್ಟುಕಲ್ಲು, ಹುಡಿಮಾಡುವುದು ತಿರಿಕಲ್ಲ್ (ಬೀಸುವ ಕಲ್ಲು). ಅಮ್ಮಿಕಲ್ಲನ್ನು ತುಳಿಯಬಾರದು. ಅದರ‍ಲ್ಲಿ ಕುಳಿತುಕೊಳ್ಳಬಾರದು ಮುಂತಾದ ನಂಬುಗೆಗಳಿದ್ದರೂ ಮದುವೆಯ ಸಂದರ್ಭದಲ್ಲಿ ವಧುವು ಅಮ್ಮಿಯ ಗುಂಡುಕಲ್ಲನ್ನು ತುಳಿಯಲು ಹೇಳುವುದು ಬ್ರಾಹ್ಮಣರಲ್ಲಿ ಕಂಡು ಬರುತ್ತದೆ. ವಧುವನ್ನು ಗಂಡನ ಮನೆಗೆ ಕಳಿಸಿಕೊಟ್ಟಾಗ (ವರನ ಮನೆಯಲ್ಲಿ) ಅಮ್ಮಿಯ ಗುಂಡುಕಲ್ಲನ್ನು ಅಲಂಕರಿಸುವ ಸಂಪ್ರದಾಯವೂ ಈ ಸಮುದಾಯಲ್ಲಿದೆ. ನಂಬೂದಿರಿಗಳ ಮಧ್ಯೆ ಪ್ರಚಾರದಲ್ಲಿದ್ದ ‘ತಂಡಾಯಿಕ್ಕಿಡಂಗ’ ಎಂಬ ಕಾರ್ಯಕ್ರಮದ ಬಗೆಗೆ ಪಿ.ಡಿ. ಭಟ್ಟತ್ತಿರಿಪಾಡರು ಸೂಚಿಸುತ್ತಾರೆ. ಇದು ಮುಟ್ಟಿನ ಬಳಿಕ ನಾಲ್ಕನೇ ದಿವಸ ‘ಅಂತರ್ಜನ (ಮನೆಯ ಸ್ತ್ರೀಯರು) ಅಮ್ಮಿಯ ಗುಂಡನ್ನು ಅಭಿಷೇಕ ಮಾಡಿ ಬೊಟ್ಟು ಹಾಕಿ ಗಂಧಲೇಪಿಸಿ ಪೂಜಿಸುವ ಕಾರ್ಯಕ್ರಮ ‘ತಾಯಿ ಮಲಗಿರುತ್ತಾಳೆ. ಮಗಳು ಓಡುತ್ತಿರುತ್ತಾಳೆ’ ಎಂಬ ಒಗಟು ಅಮ್ಮಿ ಮತ್ತು ಅದರ ಗುಂಡನ್ನು ಸೂಚಿಸುತ್ತದೆ. ‘ನಾಲ್ಕು ಮೂಲೆಯ ಪೆಟ್ಟಿಗೆ, ಮಧ್ಯೆ ಅರಿಸಿನ ಪೆಟ್ಟಿಗೆ, ತೆಗೆದುಕೊಂಡು ಓಡುತ್ತದೆ ಕುದುರೆ ಮರಿ’ ಎಂಬ ಒಗಟು ಅಮ್ಮಿಕಲ್ಲಲ್ಲಿ ಅರಸಿನ ಅರೆಯುವುದರ ಕುರಿತಾಗಿದೆ.

ಧಾನ್ಯಗಳನ್ನು ಒರಳಲ್ಲಿ ಕುಟ್ಟಿ ಪುಡಿಮಾಡಲಾಗುತ್ತದೆ. ಒರಳನ್ನು ಕಲ್ಲು ಅಥವಾ ಮರದಿಂದ ತಯಾರಿಸುತ್ತಾರೆ. ಗುಳಿ ಒರಳು ಮತ್ತು ನೆಲ ಒಲರು ಎಂಬ ಎರಡು ರೀತಿಗಳಿವೆ. ವಯನಾಡಲ್ಲಿ ಅಪೂರ್ವವಾಗಿ ಮಣ್ಣಿನೊರಳುಗಳು ಕಂಡುಬರುತ್ತವೆ. ಕರಿಹನೆಮರ(ತಾರಿ.ತು), ತೆಂಗು ಇವುಗಳಿಂದ ತಯಾರಿಸಿದ ಎರಡು ತುದಿಯೂ ಕಬ್ಬಿಣದ ಪಟ್ಟೆಯಿಂದ ಸುತ್ತಿದ ಒನಕೆಗಳು ಇವೆ. ಬೀಟೆ ಮರದಿಂದ ತಯಾರಿಸಿದ ಒನಕೆಯೂ ಮನೆಗೊಬ್ಬ ಹೆಂಗಸೂ (ವೀಟ್ಟಿತ್ತಡಿಕೊಂಡ್ ಉಲಕ್ಕಯುಂ ವೀಟ್ಟಿಲೇಕ್ಕೊರುತ್ತಿಯುಂ) ಎಂಬ ಗಾದೆ ಗಟ್ಟಿ ಒನಕೆಯನ್ನು ದೃಢಕಾಯದ ಸ್ತ್ರೀಯನ್ನೂ ಸಮನಾಗಿ ಕಲ್ಪಿಸಿವೆ. ‘ನಿಂತವನ ಹೊಟ್ಟೆಯಲ್ಲಿ ಬಂದವನ ಕುಣಿದಾಟ’ ಎಂಬ ಒಗಟು ಒರಳಲ್ಲಿ ಒನಕೆಯಿಂದ ಕುಟ್ಟುವ ಕ್ರಿಯೆಯನ್ನು ಸೂಚಿಸುತ್ತದೆ. ಮೂರೋ ನಾಲ್ಕೋ ಹೆಂಗಸರು ಒಟ್ಟಾಗಿ ಒನಕೆಯಿಂದ ಭತ್ತ ಕುಟ್ಟುತ್ತಿದ್ದುದನ್ನು ಸೂಚಿಸುವ ಒಗಟು ‘ಹೊಂಡದಲ್ಲಿ ನಾಲ್ಕು ಹಾವುಗಳು ಕುಣಿಯುತ್ತವೆ’ಎಂಬುದು. ‘ಒಂದೇ ಮನಸ್ಸಿದ್ದರೆ ಒನಕೆಯ ಮೇಲೂ ಮಲಗಬಹುದು’ ಎಂಬ ಗಾದೆ ಒಗ್ಗಟ್ಟಿದ್ದರೆ ಯಾವುದೇ ಕೆಲಸವನ್ನು ಮಾಡಬಹುದು ಎಂದು ಉಪದೇಶನೀಡುತ್ತದೆ.

ಗೆರಸೆ ಗೇರುವುದಕ್ಕೆ ಉಪಯೋಗಿಸುವ ಉಪಕರಣ. ಬಿದಿರಿನಿಂದ ಇದನ್ನು ತಯಾರಿಸುತ್ತಾರೆ. ಕೊಂಬು ಗೆರಸೆ, ಉರುಟುಗೆರಸೆಗಳು ಸಾಮಾನ್ಯವಾಗಿ ಬಳಕೆಯಲ್ಲಿವೆ. ಇವು ವಿಭಿನ್ನ ಆಕೃತಿಗಳಲ್ಲಿವೆ. ಉತ್ತರ ಮಲಬಾರಲ್ಲಿ ಪ್ರಸಿದ್ಧವಾದ ಮುಚ್ಚಿ ಲೋಟ್ಟ್ ಭಗವತಿಯ (ವಾಣಿಯ ಸಮುದಾಯದ ಆರಾಧ್ಯದೈವ) ಕೈಯಲ್ಲಿ ಚಿಕ್ಕದೊಂದು ಗೆರಸೆ ಇದೆ. ಈ ಪ್ರದೇಶದಲ್ಲಿ ಸಾಧಾರಣವಾಗಿ ಮನೆಯ ಅಗತ್ಯಕ್ಕಾಗಿ ಉಪಯೋಗಿಸುವ ‘ಮುಟ್ಟಿ’ ಎಂದು ಕರೆಯಲ್ಪಡುವ ಗೆರಸೆಯೇ ಇದು. ಮಡಕೆಯ ಕೆಳಗೆ ಇಟ್ಟುಕೊಳ್ಳುವ ಸಿಂಬಿಯೂ ಅಡುಗೆ ಮನೆಯಲ್ಲಿನ ಅಡುಗೆಗೆ ಬಳಸುವ ಒಂದು ಸಾಮಗ್ರಿ. ಮಡಕೆಯನ್ನು ನೆಲದಲ್ಲಿ ಇಡುವಾಗ ಉರುಳಾಡದಂತೆ, ಮಗುಚಿಕೊಳ್ಳದಂತೆ ಭದ್ರವಾಗಿಟ್ಟುಕೊಳ್ಳುವುದಕ್ಕಾಗಿ ಸಿಂಬಿ ಉಪಯೋಗದಲ್ಲಿದೆ. ಇದನ್ನು ತಿರಿಗ, ತೆರಿಯ, ತಿರುವ (ಮ), ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಒಣಗಿದ ಬಾಳೆಯಕೈ, ಪರಾದ (ತೆಂಗಿನ ಹೆಡೆಯ ಒಳಭಾಗದ ನಾರು), ಹಗ್ಗ, ಬಟ್ಟೆ, ಪನೆಮರದ ಹಗ್ಗ ಮುಂತಾದವುಗಳಿಂದ ತಯಾರಿಸುತ್ತಾರೆ.

ಅಳೆಯುವ ಪಾತ್ರೆಗಳನ್ನು ಕೂಡ ಇಲ್ಲಿ ಪರಿಗಣಿಸಬೇಕಾಗುತ್ತದೆ. ಧಾನ್ಯಗಳನ್ನು ಅಳೆಯಲು ಹಾನೆ, ಕುತ್ತಿ, ಬಳ್ಳ – ಇವುಗಳನ್ನು ಸಾಮಾನ್ಯವಾಗಿ ಮನೆಗಳಲ್ಲಿ ಉಪಯೋಗಿಸುತ್ತಾರೆ. ವಯನಾಡಿನಲ್ಲಿ ಕೊಳಗ ಬಳಕೆಯಲ್ಲಿದೆ. ದ್ರವಗಳನ್ನು ಅಳೆಯಲು ಕುಳಿಯಿಲ್, ತುಡಂ ಕುಳಿತವಿ ಕುಮಿದಲ್ (ಮ) ಇವುಗಳಿವೆ. ಅನ್ನಬಸಿಯಲು ಉಪಯೋಗಿಸುತ್ತಿದ್ದ (ಗಂಜಿಯ)ಬಿಸಿ ಮುಚ್ಚಳಗಳು ಅಥವಾ ಬಸಿತಾಲಿ ಒಂದು ಕಾಲದಲ್ಲಿ ತುಂಬ ಪ್ರಾಧಾನ್ಯಗಳಿಸಿದ್ದುವು. ಕ್ರಿಶ್ಚಿಯನ್ನರು ಇದನ್ನು ‘ಅಡಚ್ಚುವಾರ’ ಎಂದೂ ಕರೆಯುತ್ತಾರೆ. ಮುಸ್ಲಿಮರು ಅನ್ನಬಸಿಯುವ ಕ್ರಮ ಸಾಮಾನ್ಯವಾಗಿ ರೂಢಿಯಲ್ಲಿಲ್ಲ. ಬಸಿದು ಇಕ್ಕುವುದು ಕ್ರಮ. ‘ಭಟ್ಟರ ಹೆಂಡತಿ ಮಿಂದು ಬರುವಾಗ ಬೆಳ್ಳಿಬಟ್ಟಲು ಕುಣಿಕುಣಿಯಿತು’ ‘ಅವರು ಸೌಟಲ್ಲೇ ಗಂಜಿಯನ್ನು’ ಎಂಬ ಒಗಟಿನಲ್ಲಿ ಭಟ್ಟರ ಹೆಂಡತಿ ಎಂದರೆ ಬಸಿಹಲಗೆ. ಹಲಸಿನ ಮರದಿಂದ ಮಾಡಿರುವುದರಿಂದ ಅದರ ಬಣ್ಣವನ್ನು ಗಮನಿಸಿಯೇ ಭಟ್ಟರ ಹೆಂಡತಿ ಎಂದಿರುವುದು. ಮೊಸರು ಕಡೆಯಲು ಉಪಯೋಗಿಸುವ ಕಡೆಗೋಲು ಅಡುಗೆಗೆ ಬಳಸುವ ಉಪಕರಣಗಳಲ್ಲಿ ಒಂದು. ಮಣ್ಣಿನ ಪಾತ್ರೆಯಲ್ಲಿ ಮೊಸರು ಕಡೆಯುವುದನ್ನು ಗಮನದಲ್ಲಿಟ್ಟೇ ಇರಬೇಕು ‘ಕುಂಬಾರನ ಹೊಟ್ಟೆಯಲ್ಲಿ ಬಡಗಿ ಹುಡಗನ ಬೆಳ್ಚಪ್ಪಾಡು’ (=ದೈವಾವೇಶದ ನೆಗೆತ ಕುಣಿತ) ಎಂಬ ಒಗಟು ಸೃಷ್ಟಿಯಾದುದು. ಮೇಲು ಜಾತಿಯವರ ಮನೆಯಲ್ಲಿ ವೃದ್ಧ ಮಹಿಳೆಯರು ಶುದ್ಧವಾಗಿ ಕೈಗೊಳ್ಳುವ ಕೆಲಸ ಮೊಸರು ಕಡೆಯುವುದು. ಮೊಸರು ಕಡೆಯುವಾಗ ದೇವರ ನಾಮವನ್ನು ಹೇಳುವ ರೂಢಿ ಇವರಲ್ಲಿದೆ. ಮುಸ್ಲಿಮರಲ್ಲಿ ಮೊಸರು ತಯಾರಿ ರೂಢಿಯಲ್ಲಿಲ್ಲ. ಆದರೆ ಕ್ರಿಶ್ಚಿಯನ್ನರಿಗೆ ಕತ್ತಿ, ಚೂರಿ, ವೆಟ್ಟ್‌ಕತ್ತಿ, ಕರಿಕತ್ತಿ, ಪಲಗಕತ್ತಿ (ಮ), ಕುಡುಗೋಲು ಇವು ಸರ್ವಸಾಧಾರಣ ತೆಂಗಿನಕಾಯಿ ಸುಲಿಯಲು ವೆಟ್ಟ್ ಕತ್ತಿ ಉಪಯೋಗಿಸುತ್ತಾರೆ ತೆಂಗಿನಕಾಯಿ ಸುಲಿಯಲು ವೆಟ್ಟ್‌ ಕತ್ತಿ ಉಪಯೋಗಿಸುತ್ತಾರೆ. ತರಕಾರಿ ಕತ್ತರಿಸುವುದು ಕರಿಕತ್ತಿಯಲ್ಲಿ. ತುರಿವುಣಿಯಂಥದು ಪಲಗಕ್ಕತ್ತಿ (= ಮೆಟ್ಟು ಕತ್ತಿ). ಇದರ ಕೆಲಸವೂ ತರಕಾರಿ ಹೆಚ್ಚುವುದು. ಮೀನು ಕುಯ್ಯುವುದು ಅರಿವಾಳ್ (ಕುಡುಗೋಲು) ನಿಂದ.

ಬಡಿಸುವ ಮತ್ತು ಉಣ್ಣುವ ಉಪಕರಣಗಳು: ಉಣಿಸು ಸಿದ್ಧವಾದರೆ ಅವನ್ನು ಬಡಿಸಲು ಮತ್ತು ಉಣ್ಣಲು ಒಂದೊಂದು ಸಮುದಾಯಕ್ಕೂ ಅದರದೇ ಆದ ರೀತಿಗಳಿವೆ. ಅದಕ್ಕಾಗಿ ಪ್ರತ್ಯೇಕ ಅಡುಗೆ ಮನೆ ಉಪಕರಣಗಳಿದ್ದಾವೆ. ಒಲೆಯಲ್ಲಿ ಬೇಯುವ ಸಾಧನಗಳು ತಳ ಹಿಡಿಯದಿರಲು ಮತ್ತು ಸಮಮಿಶ್ರಣವಾಗುವುದಕ್ಕೂ ಬಳಸುವ ಉಪಕರಣಗಳನ್ನೇ ಬಡಿಸುವುದಕ್ಕೂ ಸಾಮಾನ್ಯವಾಗಿ ಬಳಸುತ್ತಾರೆ. ಕಂಚು/ಹಿತ್ತಾಳೆ/ಕಬ್ಬಿಣದ ಸಟ್ಟುಗಗಳನ್ನು ಅನ್ನ ಬಡಿಸಲು ಉಪಯೋಗಿಸುತ್ತಾರೆ. ಹಲವು ರೀತಿಯ ಸೌಟುಗಳಿಂದ ಇತರ ಸಾಧನಗಳನ್ನು ಬಡಿಸುತ್ತಾರೆ. ಒಲೆಯಿಂದ ಪದಾರ್ಥಗಳನ್ನು ಬಡಿಸಿಕೊಳ್ಳಲು ಚಿಕ್ಕ ಮರಿಗೆಗಳು, ಪಾತ್ತಿ (ಮ)ಗಳು ಬಳಕೆಯಲ್ಲಿವೆ. ಸಾರು, ಮೊಸರು ಇತ್ಯಾದಿಗಳನ್ನು ಬಡಿಸಲು ಹಿತ್ತಾಳೆಯಿಂದ ತಯಾರಿಸಿದ ‘ಗೋಮುಖಿ’ಯನ್ನು ಉಪಯೋಗಿಸುತ್ತಾರೆ. ಕುಡಿಯುವ ನೀರು ಕೊಡುವುದು ಗಿಂಡಿಗಳಲ್ಲಿ, ಬಾಲವಿಲ್ಲದ/ಕೊಂಬಿಲ್ಲದ ಗಿಂಡಿಯೂ ಬಳಕೆಯಲ್ಲಿತ್ತು. ‘ಹೊಟ್ಟೆಯಲ್ಲಿ ಕೊಂಬು ಇರುವ ಎತ್ತು – ಗಿಂಡಿ’ ಎಂದು ಮಕ್ಕಳು ಒಗಟು ಹೇಳುತ್ತಿದ್ದರು. ಗಿಂಡಿಯ ಕೊಂಬು ತೆಂಕುದಿಕ್ಕಿನತ್ತ ಮಾಡಿ ಇಡಬಾರದು ಎಂಬುದೊಂದು ನಂಬಿಕೆ. ಹಾಗೆ ಇಟ್ಟರೆ ಸಾವಿನ ಕೆಲಸದಲ್ಲಿ ಭಾಗವಹಿಸಬೇಕಾದೀತು ಎಂಬುದು ವಿಧಿ.

ಉಣಿಸನ್ನು ಬಡಿಸಿ ಉಣ್ಣುವ ಏರ್ಪಾಡನ್ನು ಪ್ರತಿಯೊಂದು ಸಮುದಾಯವೂ ಮಾಡಿಕೊಂಡಿದೆ. ಮೇಲ್ಜಾತಿಯವರು ಬಾಳೆ ಎಲೆಯಲ್ಲಿ ಊಟ ಮಾಡುತ್ತಿದ್ದರು. ಕೆಳಜಾತಿಯವರಿಗೆ ಅಂಗಳದಲ್ಲಿ ತೋಡಿರುವ ಗುಳಿಗಳಲ್ಲಿ ಎಲೆಯಿಟ್ಟು೮ ಗಂಜಿ ಸುರಿಯುತ್ತಿದ್ದರು ಬಾಳೆಯ ರೆಂಬೆಯ ಸಣ್ಣ ಸೀಳಿನಿಂದ ‘ತಡ’ ಕಟ್ಟಿ ಅದರ ಮೇಲೆ ಎಲೆ ಇಟ್ಟು ಗಂಜಿಸುರಿದು ಕುಡಿಯುವ ರೂಢಿ ಇದೆ. ಉಳಿದ ಜಾತಿಯವರು ಗಂಜಿ ಕುಡಿಯಲು ಮಣ್ಣನ ಥಾಲಿ ಅಥವಾ ಬಟ್ಟಲು ಉಪಯೋಗಿಸುತ್ತಿದ್ದರು. ‘ಕವಿಡಿ ಪಿಂಞಣ’ (ಮ)ವೂ ಪ್ರಚಾರದಲ್ಲಿತ್ತು. ಗಂಜಿ ಬಾಚಿ ತೆಗೆಯಲು ಹಲಸಿನೆಲೆಯಿಂದ ಮಾಡಿದ ದೊನ್ನೆಯನ್ನು ಸಾಮಾನ್ಯವಾಗಿ ಎಲ್ಲ ಎಡೆಗಳಲ್ಲಿಯೂ ಬಳಸಲಾಗುತ್ತಿತ್ತು. ‘ಒಂದು ಹಲಸಿನೆಲೆ ಗಂಜಿ ಕುಡಿದ’ ಎಂದರೆ ಒಂದು ಹಲಸಿನ ಎಳೆ ಶಿಥಿಲವಾಗುವಷ್ಟು ಗಂಜಿ ಕುಡಿದ ಎಂದು ಅರ್ಥ. ದೊಡ್ಡ ಸಂಗತಿಯೊಂದನ್ನು ಸಣ್ಣದಾಗಿ ಮಾಡಿ ಹೇಳುವ ರೀತಿ ಇದು. ಊಟ ಮಾಡಲು ಬಟ್ಟಲು ಮತ್ತು ಪಿಂಗಾಣಿ (ಸ್ವಲ್ಪ ಎತ್ತರದ ಕಿರುಬಟ್ಟಲು) ಉಪಯೋಗದಲ್ಲಿತ್ತು. ಗಾತ್ರಕ್ಕನುಸಾರವಾಗಿ ಕಿರುಬಟ್ಟಲು, ಹದಬಟ್ಟಲು, ದೊಡ್ಡ ಬಟ್ಟಲು – ಹೀಗೆ ಹೆಸರಿದೆ. ಇದರಲ್ಲಿ ಆಳಹೆಚ್ಚು ಇರುವುದಕ್ಕೆ ಕುಡುವನ್ ಕಿಣ್ಣಂ (ಮ) ಎಂದು ಹೆಸರು. ಬಾಣಂತಿಯರಿಗೆ ಅನ್ನಕೊಡುವುದು ಕುಡುವನ್ ಕಿಣ್ಣದಲ್ಲಿ. ‘ಹೆರಿಗೆಯಾದ ಹೊಟ್ಟೆಯನ್ನು ಗುಡ್ಡ ಇಟ್ಟು ತುಂಬಬೇಕು’ (ಕನ್ನಿಟ್ಟ ಪಳ್ಳೇಲ್ ಕುನ್ನಿಟ್ಟ್‌ ನಿಗತ್ತಣಂ) ಎಂಬ ಮಾತು ಬಾಣಂತಿ ಹೆಂಗಸು ಉಣ್ಣುವುದನ್ನು ಇತರರು ನೋಡಬಾರದು, ಅಥವಾ ಒಂದು ವೇಳೆ ಯಾರಾದರೂ ನೋಡಿದರೂ ಅದರ ಪ್ರಮಾಣವನ್ನು ತಿಳಿಯಬಾರದು ಎಂಬುದಕ್ಕಾಗಿ ಬಳಕೆಯಲ್ಲಿದೆ.

ಕೆಲವು ಹಳೆಯ ತರವಾಡುಗಳಲ್ಲಿ ಆಳೊಬ್ಬನಿಗೆ ಒಂದು ಬಟ್ಟಲಿನಂತೆ ಇರಿಸಿಕೊಳ್ಳುವ ವ್ಯವಸ್ಥೆ ಇತ್ತು. ಬಟ್ಟಲನ್ನು ಅಡವು ಇಡುವ ಪದ್ಧತಿಯೂ ಜಾರಿಯಲ್ಲಿತ್ತು. ‘ನನ್ನನ್ನು ನೋಡಿದರೆ ಬಟ್ಟಲು ಕದ್ದವನಂತೆ ಕಾಣಿಸುತ್ತೇನೆಯೇ?.’ ಎಂಬ ಮಾತು ಬಳಕೆಯಲ್ಲಿದೆ. ನಮ್ಮ ಕೆಲವು ಜನಪದ ಕಲೆಗಳಲ್ಲಿಯೂ ಬಟ್ಟಲು ಬಡಿದು ಹಾಡುವ ರೀತಿಯನ್ನು ಕಾಣಬಹುದು. ಚೈನಾಕ್ಷೇಯಿಂದ ತಯಾರಿಸಿದ ಪಾತ್ರೆಗಳನ್ನು ಮುಸ್ಲಿಮರು ತಮ್ಮ ಊಟದ ವೇಳೆ ಹೆಚ್ಚಾಗಿ ಬಳಸುತ್ತಾರೆ. ಸಾಮಾನ್ಯವಾಗಿ ಮರದ ಮಣೆಯ ಮೇಲೆ ಕುಳಿತು ಮುಸ್ಲಿಮರು ಆಹಾರ ಸೇವಿಸುತ್ತಾರೆ. ಅತಿಥಿಗಳು ಬಂದಾಗ ಚಾಪೆ, ಸುಪ್ರ (ಬಟ್ಟೆ) ಹಾಸಿ ಅದರ ಮೇಲೆ ಉಣಬಡಿಸುವರು. ಸುಪ್ರದ ಮೇಲೆ ‘ಅರಸನ’ ಇಡುತ್ತಾರೆ. ಅರಸನವೆಂದರೆ ದೊಡ್ಡ ಪಿಂಗಾಣಿ ಪಾತ್ರೆ. ಅದರಲ್ಲಿ ಅನ್ನ ಬಡಿಸಿ, ಎಲ್ಲರೂ ಅದರಿಂದಲೇ ಬಾಚಿ ಉಣ್ಣುತ್ತಾರೆ. ಊಟದ ಬಳಿಕ ಸುಪ್ರವನ್ನು ತೆಗೆದು ಝಾಡಿಸಿದರೆ ಶುಚ ಆಯಿತು. ಈ ಕ್ರಮ ಈಗ ಹೆಚ್ಚು ಕಡಿಮೆ ಇಲ್ಲವಾಗಿ ಬಿಟ್ಟಿದೆ. ಬ್ರಾಹ್ಮಣರ ಮನೆಗಳಲ್ಲಿ ಆವಣ (ಮ) ಎಂಬ ಹಿಡಿ ಮಣೆಯ ಮೇಲೆ ಕುಳಿತು ಎಲೆಯಲ್ಲಿ ಉಣ್ಣುತ್ತಾರೆ. ಎಲೆ ಸರಿದರೆ ಇನ್ನೊಂದು ಊಟ ಬೇರೆ ಎಲ್ಲಿಯೋ ಇದೆ ಎಂಬ ನಂಬಿಕೆ. ನೀರುಕುಡಿಯಲು ಕಂಚು/ಹಿತ್ತಾಳೆಯ ಗ್ಲಾಸು ಬಳಕೆಯಲ್ಲಿದೆ ಊಟ ಮಾಡಲು ಇಂದಿನ ರೀತಿಯ ಪ್ಲೇಟುಗಳು ಬರುವ ಮೊದಲು ಸೈಡ್‌ಪ್ಲೇಟ್ ಎಂಬ ಕ್ರಮವೇ ಇರಲಿಲ್ಲ. ಊಟದ ಎಲ್ಲ ಸಾಮಗ್ರಿಗಳನ್ನು ಬಟ್ಟಲಿನಲ್ಲಿ ಅಥವಾ ಎಲೆಯಲ್ಲಿಯೇ ಬಡಿಸಿಕೊಂಡು ಉಣ್ಣುತ್ತಿದ್ದರು. ಎಲೆಯಲ್ಲಿ ಉಣ್ಣುವಾಗ ಪ್ರತಿಯೊಂದನ್ನು ಬಡಿಸುವುದರಲ್ಲಿ ಒಂದು ಕ್ರಮವಿತ್ತು. ಎಂಬುದು ಗಮನಾರ್ಹ.

ಬದಲಾವಣೆಯ ನೆರಳು: ಊರಿಗೂ ಸಮುದಾಯಕ್ಕೂ ಅನುಸಾರವಾಗಿ ಬದಲಾವಣೆಗಳು ಉಣಿಸು – ತಿನಿಸಿನ ವಿಚಾರದಲ್ಲೂ ಅವುಗಳನ್ನು ತಯಾರಿಸುವ ರೀತಿಯಲೂ ಸಹಜವಾಗಿಯೇ ಉಂಟಾಗುತ್ತದೆ. ಪ್ರತಿಯೊಂದನ್ನು ಹೇಳುವುದು ಆಗದ ಮಾತು. ಸೌಕರ್ಯ, ಲಭ್ಯತೆ, ಬೆಲೆ, ಭಂಗಿ, ಪ್ರೌಢಿಮೆ ಮುಂತಾದ ಘಟಕಗಳು ಉಪಕರಣಗಳ ಪ್ರಸಾರಕ್ಕೆ ಕಾರಣವಾಗುತ್ತದೆ. ಇಂದು ಅಡುಗೆ ಮನೆಯ ಉಪಕರಣಗಳ ನಿರ್ಮಾಣವು ಒಂದು ದೊಡ್ಡ ಉದ್ಯಮವಾಗಿ ಬದಲಾಗಿದೆ. ಅಡುಗೆ ಸಾಮಗ್ರಿಗಳನ್ನು ಜೋಪಾನವಾಗಿ ಕೆಡದಂತೆ ಇಡುವ ಫ್ರಿಜ್, ಹುಡಿಮಾಡಲು/ ಅರೆಯಲು ಬಳಕೆಯಾಗುವ ಯಂತ್ರಗಳು ಇಂದು ಸಾಕಷ್ಟು ಪ್ರಚಾರದಲ್ಲಿವೆ. ಹೊಸ ಇಂಧನಗಳನ್ನು ಬಳಸಿಕೊಳ್ಳುವ ಸಾಮಗ್ರಿಗಳು/ಉಪಕರಣಗಳು ಮತ್ತು ಅದಕ್ಕೆ ಅನುಸಾರವಾಗಿ ಬಳಸಿಕೊಳ್ಳುವ ಸಾಮಗ್ರಿಗಳು/ಉಪಕರಣಗಳು ಮತ್ತು ಅದಕ್ಕೆ ಅನುಸಾರವಾದ ಅಡುಗೆ ಮನೆಯ ವಿನ್ಯಾಸವೂ ಇಂದು ಸುಲಭ ಲಭ್ಯವಾಗಿದೆ. ಪಾತ್ರೆಗಳನ್ನು ತಯಾರಿಸಲು ಸ್ಟೀಲು, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಮುಂತಾದುವುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಂತೆಯೇ ಹಳೆಯ ವಸ್ತುಗಳು ಕೌತುಕವಸ್ತುಗಳಾಗಿ ಬದಲಾಗಿದೆ. ಕಾಲಾನುಸಾರವಾಗಿ ಭೌತಿಕ ಜಗತ್ತಿನಲ್ಲಿ ಉಂಟಾಗುವ ಈ ತೆರನ ಬದಲಾವಣೆಗಳು ಜನರ ಆಚಾರ,ದ ನಂಬುಗೆಗಳಲ್ಲೂ ಮೌಖಿಕ ಸಂಪ್ರದಾಯದ ಭಾಷಾ ಬಳಕೆಯಲ್ಲೂ ಪ್ರತಿಫಲಿಸುತ್ತವೆ. ಒಂದು ಜನತೆಯ ಜನಸಮೂಹದ ನಡೆದು ಹೋಗುವ ಬದಲಾವಣೆಯ ಕುರಿತು ನಡೆಸುವ ಅಧ್ಯಯನಕ್ಕೆ ಅಡುಗೆ ಮನೆಯ ಉಪಕರಣಗಳು ಯೋಗ್ಯವಾಗಿವೆ ಎನ್ನಬಹುದು.

– ಕೆ.ಎಂ.ಪಿ. ಅನುವಾದ ಕೆ.ಕೆ.